Saturday, May 16, 2015

ಸರಿ-ತಪ್ಪು

ಜೀವನದ ಪ್ರತಿ ಕ್ಷಣದ ಆಗುಹಕೂ
ಇರುವುದು ವಿಶ್ಲೇಷಣೆ ವಿಭಿನ್ನ
ಏಕ ಪಾರ್ಶ್ವದ ದೃಷ್ಟಿಕೋನದಿ
ಕೊಳ್ಳಬೇಡ ಯಾವುದೇ ತೀರ್ಮಾನ

ಒಂದು ನೋಟದಿ ಸರಿಯೆಂದಾದರೂ
ಮಹದಾದ ತಪ್ಪು ಅದಾಗಿರಬಹುದು
ಅನ್ಯಾಯದ ಪರಮಾವಧಿ ಎನಿಸಿದರೂ
ಲೋಕವೇ ಸರಿಯೆಂದೊಪ್ಪಬಹುದು

ಸರಿ- ತಪ್ಪುಗಳ ವೀಕ್ಷಣೆಯಲಿ
ವ್ಯತ್ಯಾಸಗಳನೇಕ ಈ ಜಗದಲಿ
ನಿನ್ನ ನಿರ್ಣಯದ ವಿಚಕ್ಷಣೆಯಲಿ
ಹೃದಯದ ಅನಿಸಿಕೆಯೇ  ಇರಲಿ

ಮಾಡು ನೀ ಹೃದಯ ಬಯಸಿದ್ದುದನು
ಚಿಂತಿಸು ಹೃತ್ಪೂರ್ವಕ ಮನದಲೇ 
ಸರಿ-ತಪ್ಪುಗಳ ಸರಿಯಾದ ತೀರ್ಪನು
ಪಡೆಯುವಿ ನೀ ನಿನ್ನ ಹೃದಯದಲೇ

Friday, May 15, 2015

ಪ್ರೀತಿ

ಎರಡಕ್ಷರದ ಭಾವನೆಯಿದು
ಕಥಾನಕಗೊಳಿಸಿರುವುದು ಜೀವನವನು ...
"ಪ್ರೀತಿ" ಎನ್ನುವ ದೈವವಿದು
ಹರಡಿಸಿರುವುದು ಸಂತಸದ ಗಾಳಿಯನು...

ಮಧುರ ಜೇನಿನಂಥ ಭಾವವಿದು
 ಪುಳಕಿತಗೊಳಿಸುವುದು ಮನವನು
ಈ ಭಾವ ಭಾವನೆಯ ಶಿಖರವೇರಲು
ತಂಪಾಗಿಸುವುದು ಈ ನಿನ್ನ ತನುವನು ...

ಚಿಗುರುಮನಸಿನ ಆಸೆಯಿದು
ಅನುಭವಿಸಲು ಪ್ರೀತಿಯ ಧಾರೆಯನು...
ಚಂಚಲಮನಸುಗಳ ತ್ರಾಸವಿದು
ಪಡೆಯಲು ಪ್ರೇಮದ ಆಸರೆಯನು...

ಪ್ರೇಮದ ಹಿರಿಮೆಯೇ  ಅಂದವಾದುದು
ಸಕ್ರಿಯಗೊಳಿಸುವುದು ಜಾಣ್ಮೆಯನು
ಎದೆಬಡಿತವು ವರ್ಧಿಸಿ ಸುಖ ದೊರೆವುದು
ಹೇಳಲಾರದು ಪ್ರೀತಿಯ ಮಹಿಮೆಯನು...

ವಿರಹ

ವಿರಹ ಸಮಾಧಿಯಾಗಿಸಿ ಮನವ
ಬಂಧಿಸಿತು ವಿಚಾರಧಾರೆಯ ...
ಉದುಗಿಸಿತು ರಕ್ತ ಕಣಕಣವ
ಹೊರೆಯಾಗಿಸಿತು ದಿನದಿನದ ಚಹರೆಯ...

ವಿರಹದ ಇರಿತವು ಪ್ರಾಣಘಾತಕ
ಅದರನುಭವ ಮಾರಣಾಂತಿಕ ...
ಮನದಭಿವೃದ್ಧಿಗದು ಹಾನಿಕಾರಕ
ವೈರಾಗ್ಯದುಃಖ ಭಾವನಾತ್ಮಕ ...

ವಿರಹದಲಿರುವುದೇನೋ ಪುಳಕ
ವಿರಹದ ಬೇಗೆಯದು ಕಷ್ಟ ...
ವಿರಹದಿ ವೈರಾಗ್ಯ ಸೇರದಿರೆ
ಆಗದು ಮನಶಾಂತಿಗೆ ನಷ್ಟ...

ತಡೆಯಲಾರದ ವಿರಹದ ನಾಟ್ಯ
ಉರುಳಿಸಿತು ಸಂಭ್ರಮದ ಪರಿಯ...
ಎಂದು ಬರುವುದೋ ಈ ವಿರಹಕೆ ಅಂತ್ಯ
ನೀ ಬಂದರೆ ನನ್ನ ಮನದ ಸನಿಹ ...

ಆಶಯ

ಯಾಕಾಗಿ ಈ ನೋವು ಕಾಡುತಿದೆ ಮನವನು?
ಹಿಂಡಿ  ಕಾವೇರಿಸುತಿದೆ ನನ್ನ ರಕ್ತ ಕಣಕಣವನು
ಮರೆತರೂ ಮರೆಯಲಾಗದೆ ಸುರಿಸುತಿದೆ ಕಣ್ಣೀರನು
ದುಃಖದ ಕೊಳಲನಾದವು ತಲುಪುತಿದೆ ಮನದಾಳವನು.

ಕ್ರೋಧದ ಅಗ್ನಿಜ್ವಾಲೆಯು ಜಲಿಸುತಿದೆ ಈ ಎದೆಯನು
ಕಣ್ಣೀರ ನೆನಪುಗಳು ತಿವಿದು ಬರಡಾಗಿಸಿದೆ ಕನಸ ಕಂಗಳನು
ನಿರಾಸೆಯ ಅಟ್ಟಹಾಸಗಳು ಮೌನಗೊಳಿಸಿದೆ ಮನದಾಸೆಯನು
ನೋವ ಛಡಿಯೇಟುಗಳು ತುಳಿದು ಕೊಂದಿದೆ ಬಯಕೆಯನು


ಹೆಣಗುತಿದೆ ಹೃದಯವಿದು ಕಾಣಲು ನಂಬಿಕೆಯ ಜ್ಯೋತಿಯನು
ಉತ್ಸಾಹದ ಛಾಯೆ ಹರಡುತಿದೆ ನೋಡಲು ಸುದಿನಗಳನು
ಸತ್ಯವ ಅರಗಿಸಲಾರದೆ ಚಡಪಡಿಸುತಿದೆ ಸಹಿಸುತ ಅನ್ಯಾಯವನು
ಎದುರಿಸಲಾರದೆ ಸೋತಿದೆ ಈ ಮನ ದುರ್ಜನರಟ್ಟಹಾಸವನು

ಬರಲಿ ಹುರುಪ ಪನ್ನೀರು ಆವಿಗೊಳಿಸಲಿ ದುಃಖಗಳೆಲ್ಲವನು
ಹರಡಲಿ ನೆಮ್ಮದಿಯ ಸುಗಂಧ ಕೊಳ್ಳಲಿ ನಿರಾಸೆಗಳ ಗಾಳಿಯನು
ಜಯದ ಮಳೆಯದು ಬೀರಲಿ ಆರಿಸಲಿ ಭಯದ ಬೆಂಕಿಯನು
ಖುಷಿಯ ಜೇನದು ದೊರೆತು ಸವಿಗೊಳಿಸಲಿ ನೋವ ಉರಿಯನು...

Sunday, May 10, 2015

ಮಹಾನ್ "ಮಾತೆ"

ತನ್ನೊಳಗೆ ಜನಿಸಿರುವ ಆ ಜೀವಕೆ
ಅರ್ಪಿಸಿದಳವಳು ತನ್ನ ಜೀವನವನೇ
ತನ್ನದೇ ಈ ಕುಡಿಯೆಂಬ  ಭಾವಕೆ
ಆದರ್ಶವೆನಿಸಿ ಒಪ್ಪಿಸುವಳು ತನ್ನ ಮನವನೇ...

ಜಗವೇ ಎದುರಾದರೂ ತೊರೆಯಳಿವಳು
ಜಗವನೆದುರಿಸಿ ಆಸರೆಯೆನಿಸುವಳು
ತನ್ನ ಗುರುತಿಗೆ ಪ್ರತಿಯಾಗಿ ನಡೆಯಳಿವಳು
"ಮಾತೆ"ಯ  ಗೌರವಕೆ ತಕ್ಕಂತೆ ನೆಲೆಸುವಳು...


ತ್ಯಾಗದ ಹಿರಿಮೆಯನುದ್ಘೋಷಿಸುವಳಿವಳು
ಕಂದನಿಗಾಗಿ ತನ್ನ ಅಸ್ತಿತ್ವವನೇ ಅರ್ಪಿಸುವಳು
ಅತ್ಯುತ್ತಮವಾಗಿ ಮಗುವ ಪೋಷಿಸುವಳಿವಳು
ಸಂತತಿಗೆ ಉತ್ತಮತೆಯ ಶಿಖರವನೇ ಕಲ್ಪಿಸುವಳು...

ಸಹನೆ ಸಾಮರ್ಥ್ಯದ ಪ್ರತಿರೂಪವೇ ಇವಳು
ಎಲ್ಲರೂ ಇವಳನು "ಅಮ್ಮಾ" ಎಂದು ನಮಿಸುವರು
ಜಗದ ಸಕಲ ಜೀವರಾಶಿಗಳಿಗೂ ಮೂಲವೇ ಇವಳು
"ಅಮ್ಮಾ" ಎನ್ನುತಲೆಲ್ಲರೂ ಸಂತಸದಿಂ ನೆಲೆಸುವರು...

ಮನದಾಳದ ಚಿಂತನ

ಈ ಜಗದಿ ನೀ ನೆಲೆ ಹೂಡಲು
ಇರುವುದು ಸಾವಿರ ಹಾದಿ
ನಿಷ್ಠೆಯಿಂ ನೈಪುಣ್ಯತೆ ಕೂಡಲು
ಗೆಲುವಿಗೆ ಅದೊಂದೇ ಬುನಾದಿ

ಜೀವನಕೆ ಆಧಾರ ನೀಡಲು
ಲಭ್ಯವು ಅಪರಿಮಿತ ನೌಕರಿ
ಪೆರ್ಬಯಕೆಯ ಛಾಯೆ ಕಾಡಲು
ಬಲಿಯಾದೇ ಜೋಕೆ ಶಿಕಾರಿ

ಉಳ್ಳದರಲ್ಲಿ ತೃಪ್ತಿಯಿರಲಿ
ಇಲ್ಲದುದರ ಬೆನ್ನಟ್ಟದಿರು
ಸಂತೃಪ್ತಿಯ ದೀಪ್ತಿಯಿರಲಿ
ನಮ್ರತೆಯ ಹಿಮ್ಮೆಟ್ಟದಿರು

ಮುಂದೆ ನಡೆದಂತೆ ನೀನಾದೀಯ 
ಹಲವರ ಮನದಿ ಬರಿದೆ ನೆನಪು
ತೋರು ಇಂದೇ ನಿನ್ನ ಉತ್ತಮತೆಯ
ಬೀರುವುದದೇ ನಿನ್ನ ವ್ಯಕ್ತಿತ್ವದ ಹೊಳಪು 

Saturday, May 9, 2015

ನನ್ನ ಪಾಲಿನ ಅರುಣ

ನನ್ನ ಬಾಳ ಕತ್ತಲೆಗೆ
ಅರುಣನಾಗಿ ನೀ ಬಂದೆ
ಈ ಜೀವದ ನೋವಿಗೆ
ಬೆಳಕಾಗಿ ನೀ ಬಂದೆ.

ಬಯಸಲಾರೆ ನಾನೆಂದಿಗೂ
ವಿರಹವನು ನಿನ್ನಿಂದೆ
ಪ್ರಮಾಣಿಸುವೆ ಎಂದೆಂದಿಗೂ
ಪ್ರೀತಿಯೆರೆವೆ ನಿನಗೆಂದೇ.

ಬಾಳ ಸಕಲ ಹಾದಿಯಲೂ
ಕೈ ಹಿಡಿದು ಮುನ್ನಡೆಸು ನನ್ನ
ಜೀವನದ ಯಾವ ಬೇಗೆಯಲೂ
ಥಳಿಸಬೇಡ ಹಿಡಿದ ಕೈಯನ್ನ.

ನಮ್ಮ ಬಾಳ ದೋಣಿಯಿದು
ಮುಳುಗದಿರಲಿ ಯಾವತ್ತಿಗೂ
ನಮ್ಮ ಜಂಟಿ ದೀಪವಿದು
ನಂದಾದೀಪವಾಗಲಿ ಪ್ರತಿ ಹೊತ್ತಿಗೂ...

ನವನವೀನ ಜೀವನ

ಇದು ಹೇಗಾಯಿತೆಂಬುದ ನಾನರಿಯೆ ...
ನಾನೆಣಿಸಿದ್ದೆ ಗತಕಾಲವ ನಾನೆಂದೂ ಮರೆಯೆ...
ಆದರೆ ನಿನ್ನ ಶುಚಿಭಾವ ನನ್ನ ಸೆಳೆಯೆ...
ಸೋತೆ ನಾ ನಿನ್ನ ಮನಸಾರೆ ಪಡೆಯೆ...

ಸೆಳೆದೆ ನೀ ನನ್ನ ಮನವ ಮೃದುಭಾವದಲೇ...
ಎಳೆದೆ ನನ್ನ ಚಿಂತನೆಗಳ ನಿನ್ನೆಡೆಗೇ ಭಲೇ...
ಧನ್ಯಳು ನಾ ನಿನ್ನ ಹೃದಯದಿ ಸ್ಥಾನ ಪಡೆಯಲೇ...
ಚಿಗುರಿವೆ ಹೊಸದಾಗಿ ಈ ಮನದಲಿ ಭಾವನೆಗಳ ಅಲೆ...

ನಿನ್ನ ಹೆಸರೇ ಗುನುಗುನಿಸುತಿದೆ ಎದೆಯ ಬಡಿತದಲಿ...
ನಿನ್ನ ಸ್ಮರಣೆಯೇ ಬರುತಲಿದೆ ಪ್ರತಿ ಉಸಿರಿನಲಿ...
ನನ್ನ ಅದೃಷ್ಟವೇ ಆರಾಧಿಸಲು ನಿನ್ನನು ಮನದಲಿ...
ಸ್ಥಾನವ ಕಸಿದಿರುವೆ ನೀ ನನ್ನ ಈ ಹೃದಯದಲಿ...

ಸೋತಿರುವೆ ನಾ ನಿನಗೆ ನನಗರಿವಿಲ್ಲದ ಹಾಗೆಯೇ...
ನಿನ್ನ ಶುಭ್ರಮನದಲಿ ಸ್ಥಾನ ಪಡೆಯಲರ್ಹಳೋ ನಾನರಿಯೆ...
ಜನುಮಜನುಮದಲೂ ನೀನಿರಬೇಕು ಬರಿ ನನಗಾಗಿಯೇ...
ಎಂದೆಂದಿಗೂ ನಾವಿಬ್ಬರಿರಬೇಕು ಜೊತೆ ಜೊತೆಯಲೇ...

ನನಗಾಗಿ...


ಕಣ್ಣಲ್ಲಿ ಮಿಂಚುವ ಹೊಳಪಾಗಿ
ತುಟಿಯಲ್ಲಿ ಹಂಚುವ ಸ್ಮಿತವಾಗಿ
ಮನದಲ್ಲಿ ಅರಳುವ ಹುರುಪಾಗಿ
ಬಾ ನೀನು ನನ್ನ ನೆನಪಲಿ ಹಿತವಾಗಿ...

ತಂಪು ಗಾಳಿಯಲಿ ಪರಿಮಳವಾಗಿ
ಇಂಪು ನೀಡುವ ಮಧುರ ಸ್ವರವಾಗಿ
ಜೀವಕೆ ಕಳೆ  ನೀಡೋ ಜಲವಾಗಿ
ಬಾ ನೀನು ಈ ಹೃದಯಕೆ ವರವಾಗಿ...

ಮುಂಜಾನೆಯ ಮಧುರ ಕಲರವವಾಗಿ
ಕಾಮನಬಿಲ್ಲಲಿರುವ ರವಿಕಿರಣವಾಗಿ
ಉತ್ತೇಜಿಸುವ ಆತ್ಮ ಗೌರವವಾಗಿ
ಬಾ ನೀನು ನನ್ನ ಬಾಳ ಪಲ್ಲವಿಗೆ ಚರಣವಾಗಿ...

ಇಂಪಾದ ಕಾಲ್ಗೆಜ್ಜೆಯ ನಾದವಾಗಿ
ಹರ್ಷ ತರುವ ಮಧುರ ಶ್ರುತಿಯಾಗಿ
ಮನದ ಚೈತನ್ಯವನೇರಿಸುವ ಅಂದವಾಗಿ
ಬಾ ನೀನು ನನ್ನೆಡೆಗೆ ಅಮಿತ ಪ್ರೀತಿಯಾಗಿ...

Thursday, May 7, 2015

ಇದು ಮಾಯೆಯೋ???

ಮುಸ್ಸಂಜೆಯ ಮಬ್ಬಿನಲೂ
ಸೂರ್ಯನಿಗೆ ಸುವರ್ಣದ ಹೊಳಪು ...
ದುಃಖಗಳ ಛಾಯೆಯೆಲ್ಲವೂ
ಮಂದವಾಗುತಿರುವ ಬೆಳಕಿನಲಿ
ಕರಗಿ ಹೋಗುತಿರುವಂತಿದೆ ...
ಪಾಪದ ಕೂಪಗಳೆಲ್ಲವೂ
ಇರುಳಿನ ಬೆಳಕಿನಲಿ
ಮರೆಯಾಗಿ ನಶಿಸುವಂತಿದೆ...
ಕೊರಗಿಸುವ ನೋವುಗಳೆಲ್ಲವೂ
ನಿಶೆಯ ತಂಪುಗಾಳಿಯಲಿ
ಬೆರೆತು ಸಾಂತ್ವನಿಸುವಂತಿದೆ...
ಬದುಕ ಕೆಟ್ಟ ಕ್ಷಣಗಳೆಲ್ಲವೂ
ಶಾಂತವಾಗಿ ನಿದ್ರೆಗೆ ಜಾರುತಲಿ
ಸುದಿನಗಳಾಗಿ ಪರಿವರ್ತಿಸುವಂತಿದೆ...
ಬದುಕಲಿ ಖುಷಿಯ ಕ್ಷಣಗಳು
ಸೂರ್ಯೋದಯದ ಸ್ವರ್ಣರಂಗಿನಂತೆ
ಹೊನ್ನ ಕಿರಣಗಳನ್ನು ಹರಡಿ
ಬದುಕ ಸಾರ್ಥಕಗೊಳಿಸುವಂತಿದೆ...

ಏಕೆ ಹೀಗೆ???

ಮಾಗಿದ ಹಣ್ಣಿನ ಬೀಜದಿಂದ
ಹೊರಬರುವ ಮೊಳಕೆಯಂತೆ
ತವಕಿಸುತಿರುವೆನು ನಾನು
ಹೊಸ ಹುರುಪನ್ನು ಬೇಡುವಂತೆ...

ಮುದಿದ ಈ ನನ್ನ ಮನವು
ಸಿಡಿಸುವುದು ರೋಷದ ಮಾತನು
ಮನದೊಳಗಣ ಈ ದುಃಖವನು
ಯಾವೊಬ್ಬನೂ ಅರಿಯಲಾರನು...

ಒಂಟಿತನವೇ ಸಾಕೆಂದು ನಾ
ಬೇಡಿಕಾಡಿದರೂ ತಿಳಿಯಲಾರರು...
ಸಮಯವನೇ  ನೀಡದಿರುವ
ಶಿಕ್ಷೆಯ ಅನುಭವಿಸಬೇಕೆನ್ನುವರು...

ಮನಕೆ ಶಾಂತಿಯ ನೀಡಲು
ಸಮಯ ಯಾರಿಗೂ ಇಲ್ಲವೇ ???
ಸ್ವಾರ್ಥವೇ ಮನೆಮಾಡಿರುವಂತೆ
ಮಾನವೀಯತೆಯ ಅರಿವೂ ಇಲ್ಲವೇ???
ನಾನಿಂದು ಬಲಿಯಾಗಿರುವೆ....

ಪ್ರೇಮದ ಬಲಿ

ಮಾರಿಗುಡಿಯೊಳಗೆ
ಕುರಿಯ ಬಲಿಕೊಡುವಂತೆ
ಬಲಿಯಾಗಿಸಿದೆಯಾ ನೀ ಎನ್ನ
ನಾನಾರಾಧಿಸಿದ ಪ್ರಿಯತಮನೇ???

ಮನಸಾರೆ ಪ್ರೀತಿಸಿದ ನನ್ನ
ತಿರಸ್ಕಾರ ಮಾಡುವಂತೆ
ಧನಕನಕವ ಬೆಂಬಿಡಿದು
ನೀನು ಓಡಿದೆಯಾ ಪ್ರಿಯಕರನೇ???

ಪ್ರೀತಿಯಲಿ ನೀಡಿದ್ದ ಆ
ಮಾತುಗಳೆಲ್ಲಿ ಕಳೆದ್ಹೋಯ್ತು???
ಪ್ರೇಮದಲಿ ಕಳೆದಿದ್ದ ಆ
ಕ್ಷಣಗಳೆಲ್ಲಿ ಮರೆಯಾಯ್ತು???

ನಾ ನಿನಗೆ ಧಾರೆಯೆರೆದ ಆ
ನಿಸ್ವಾರ್ಥ ಪ್ರೇಮಕೆ ಬೆಲೆಯಿಲ್ಲದೆ ಹೋಯ್ತೇ???
ನಿನಗೆಂದು ಪರಿತಪಿಸಿದ ಆ
ಕ್ಷಣಕ್ಷಣದ ತುಡಿತಕ್ಕೂ ಗೌರವ ಸಿಗದೆ ಹೋಯ್ತೇ???

ಯಾಕೆ ಮುಳುಗುತಿರುವೆ???

ಮುಳುಗುತಿರುವೆಯಾ ಭಾಸ್ಕರನೇ???
ಯಾಕೆ ನೀ ಕೆಂಪಗಾಗಿರುವೆ???
ಅನ್ಯಾಯದ ವಿಜಯಕೆ ಬೇಸರವೇ???
ಜೀವರಾಶಿಗಳ ನಡುವಣ ಮಾತ್ಸರ್ಯದ
ಜಗಳ ವೈಷಮ್ಯಗಳಿಗೆ ಕೋಪವೇ???

ಮನುಜ-ಮನುಜರ ನಡುವೆ ಭುಗಿಲೆದ್ದಿರುವ
ಶತ್ರುತ್ವಗಳ ಕದನಗಳಿಗೆ ದುಃಖವೇ???
ಸ್ವಾರ್ಥ - ಕ್ರೋಧ - ಲೋಭ - ದರ್ಪಗಳಂತಹ
ಕಾರ್ಮೋಡಗಳ ಆರ್ಭಟಕೆ ಭಯವೇ???

ಏಕೆ ನೀ ಮುಳುಗುತಿರುವೆ???
ಬಾಳಿಗೆ ಮುಸ್ಸಂಜೆಯ ಛಾಯೆಯನಿರಿಸಿ...
ಇರುಳಿನ ಕತ್ತಲೆಯನು ಒದಗಿಸಿ...
ಇನ್ನೆಂದೂ ಬೆಳಕ ಮೂಡಿಸದಂತೆ???

ಮರಳಿ ಬಾ ಭಾಸ್ಕರನೇ...
ನಿನ್ನ ಬರುವಿಕೆಗಾಗಿ ಕಾಯುತಿರುವೆ...
ಈ ಬಾಳಿಗೆ ಸೌಂದರ್ಯವ ಪಾಲಿಸಲು...
ಜೀವರಾಶಿಗಳಿಗೆ ಹೊಸ ಹರುಷ ಕರುಣಿಸಲು...

Wednesday, May 6, 2015

ನನ್ನ ಪ್ರಾರ್ಥನೆ

ಜಗದ ಜೀವರಾಶಿಗಳಿಗೆ
ಜಗಳವಾಗದ ಹಾಗೆ
ಜಗದೊಡೆಯನ ಮೊರೆಹೊಕ್ಕು
ಜಗಜಗಿಸುವ ಬೆಳಕ ಕರುಣಿಸಿ
ಜಗದೋದ್ಧಾರವ  ಬಯಸಿ
ಜಾಗರೂಕತೆಯ ಪಾಠ ತಿಳಿಸಿ
ಜಗದಿ ನ್ಯಾಯವ ಸ್ಥಾಪನೆ ಮಾಡಿ
ಜಗದಿಂದ ಜಗವನು ಬೆಳಗಿಸು
ಹೇ ಜಗನ್ನಾಥಾ...

ಮುಗಿದು ಹೋದ ಕಥೆ

ನನಗಸ್ಥಿತ್ವವೇ ಇಲ್ಲದಂತಾಗಿದೆ
ಯಾರಲ್ಲಿ ಹೇಳಿಕೊಳ್ಳಲಿ?
ನನ್ನವರೆಂದಾರೂ ಇಲ್ಲ ಇಲ್ಲಿ ...
ನನಗೆಂದು ಯಾರೂ ಇಲ್ಲ...
ನನ್ನ ಮನದ ಅಳಲನ್ನು ಅರಿವವರಾರೂ ಇಲ್ಲ...

ನಾ ಹೇಗೆ ಬಾಳುವೆನೋ?
ನಾನರಿಯದಂತಾಗಿದೆ...
ನನ್ನ ಬಾಳ  ನೌಕೆಯು
ಅರ್ಧ ಮುಳುಗಿದಂತಿದೆ...
ಇನ್ನರ್ಧ ಎಂದು ಆಹುತಿಯಾಗುವುದೋ ನಾನರಿಯೆ...

ಕೊನೆಗೊಂಡಿತಿಂದು ನನ್ನ ಜೀವನಗಾಥೆ
ನಾನಂದುಕೊಂಡ ಬಾಳು  ಇನ್ನಿಲ್ಲದಂತೆ ...
ವಿಲವಿಲನೆ ನರಳಿ ನಿರ್ಜೀವವಾದ ಜೀವಿಯಂತೆ...
 ನಾ ರಚಿಸಿದ್ದ ಸ್ಥಾವರ ಚಿದ್ರ ಚಿದ್ರವಾದಂತೆ...
 ಒಡೆದು ಚೂರಾಯ್ತು ನನ್ನ ಬಾಳ ಆಸೆ ಅಳಬೆ ಗಾಜಿನಂತೆ...

ಆಗಸದ ಚಂದಿರ

ಸಾಗುತ್ತಲಿದೆ ಈ ನನ್ನ ಬಾಳು
ಕತ್ತಲೆಯ ಇರುಳ ಸಮಯದಲಿ
ಅವಿತಿದೆ ನನ್ನ ಬಾಳ ನಕ್ಷತ್ರಗಳು
ಕಾಣಿಸದಂತೆ ಮೋಡಗಳ ಮರೆಯಲಿ...

ಹೃದಯದಿ ಬೆಸೆದಿದ್ದ ನನ್ನ ಬಾಳಚಂದಿರ
ಮನಕೆ ತಂಪೆರಚಿ ಶಾಂತಿಯ ರಂಗೋಲಿಯಲಿ...
ಬಂಧಿಸಿ ಅಡಗಿಸಿವೆ ಕಾರ್ಮೋಡಗಳ ಕಂದರ
ಚಂದಿರ ಮರೆಯಾಗಿಹ ದುಃಖದ ಆ ಸೆರೆಯಲಿ...

ತವಕಿಸುತಿದೆ ಈ ಹೃದಯವಿಂದು
ಚಂದಿರನ ಆ ಒಂದು ನೋಟಕೆ
ಕಣ್ಣೀರ ಸಾಗರದಲಿ ಈ ಜೀವ ಬೆಂದು
ಭಸ್ಮವಾಗಿದೆ ಸಮಾಜದ ದ್ವೇಷದ ಮಾಟಕೆ

ಈ ಮನವೆಂದಿಗೂ ಆರಾಧಿಸುವುದಾ ಚಂದಿರನನ್ನೇ
ಆಗಸದಿ ಕಾರ್ಮೋಡದ ಸೆರೆಯಲ್ಲಿದ್ದರೂ ಅವನು
ಸೃಷ್ಟಿಸಿದೆ ಹೃದಯದಿ ಸುವರ್ಣಮಂದಿರವನ್ನೇ
ಚಂದಿರನಿಗಾಗಿ ಜೀವನವನೇ  ಧಾರೆಯೇರೆದಿಹೆ ನಾನು...

ವಿಪರ್ಯಾಸ

ಈ ದೀಪವ ನಿನಗೆಂದು ಉರಿಸಿದ್ದು
ಈಗ ಆರಿ ಹೋಗುವಂತಿದೆ...
ನನ್ನೀ ಮನವು ನಿನ್ನನೇ ವರಿಸಿದ್ದು
ಈಗ ಜಾರಿ ಬೀಳುವಂತಿದೆ...

ಯಾರ ಕೆಟ್ಟ ದೃಷ್ಟಿ ಬಿತ್ತೋ ನಾನರಿಯೆ
ಯಾರ ಕೃತ್ರಿಮದ ಫಲವೋ???
ಕಳಚುವಂತಿದೆ ನನ್ನೀ ಪ್ರೇಮದ ಆಸರೆಯೆ
ಯಾವ ಕುಕರ್ಮದ ಬಲವೋ???

ಆಹುತಿಯಾದೆ ನಾನಿಲ್ಲಿ ಸಮಾಜದ ಆಕ್ರಮಣಕೆ
ಎದುರಿಸಲು ಸಾಲದಾಯ್ತು ನಮ್ಮ ಪ್ರೇಮದ ಬಲ...
ವಿಷವಾಯ್ತು ನಮ್ಮಯ ಪ್ರೇಮದ ಅಂಕುರಕೆ
ಸಮಾಜದ ಕಟ್ಟುಪಾಡುಗಳೆಂಬ ಹಾಲಾಹಲ...

ನಿನಗಾಗಿಯೆ ಬೇಡಿಕೊಳ್ಳುತಿದೆ ನನ್ನ ಮನ
ಇಲ್ಲಿದೆ ಬರಿದು ನಿನ್ನಯ ಕ್ಷೇಮಚಿಂತನ...
ಪ್ರಾರ್ಥಿಸುವೆ ಭಗವಂತನಲಿ ನಾ ಅನುದಿನ
"ಸುರಕ್ಷಿತವಾಗಿಡು ಎಂದೆಂದಿಗೂ ನೀ ನನ್ನವನ"...

ರಕ್ಷಣೆಗೆ ಕರೆ

ನಾನು ಆಟದ ಕೈಗೊಂಬೆಯಲ್ಲ...
ಪರರ ಮನದ
ಭುಗಿಲೇಳುವ ಅಗ್ನಿಗೆ
ಆಹುತಿಯಾಗಬಯಸುವ
ಮೃದು ಹೂವಲ್ಲ ನಾನು...
ಪರರು ಸಿಡಿಸುವ
ಸ್ಫೋಟಕ ವಿಚಾರಗಳಿಗೆ
ಚ್ಯುತಿಯಾಗಬಯಸುವ
ಶಕ್ತಿಹೀನ ಜೀವಿಯಲ್ಲ ನಾನು ...
ಪರರು ಹರಿಸುವ
ಅನ್ಯಾಯ ಅನಾಚಾರಗಳಿಗೆ
ಬಲಿಯಾಗಬಯಸುವ
ಅಬಲೆ ನಾರಿಯಲ್ಲ ನಾನು...
ಪರರು ಸುರಿಸುವ
ಅಪವಾದಗಳ ಪಾತಕೆ
ಮಣ್ಣಾಗಬಯಸುವ
ಮನುಜನಲ್ಲ ನಾನು...
ನನ್ನನು ರಕ್ಷಿಸು ಹೇ ದೀನಬಂಧು...

ಸಮಯ - ಕರ್ತವ್ಯ

ಮೈದಣಿಸಿ  ದುಡಿವನಿಗೆ
ತಿಳಿದಿಹುದು ಪ್ರತಿನಿಮಿಷದ ಬೆಲೆ
ಮೈದಣಿಸಲಾರದವನಿಗೆ
ಇರುವುದು ಬರೆ ಆಮಿಷದ ಸೆಲೆ...

ಕರ್ತವ್ಯವೇ ಕೈಲಾಸವೆಂದಿಗೂ
ಪ್ರತಿ ಘಳಿಗೆಗೂ ಕರ್ತವ್ಯದಾಸರೆ
ಕರ್ತವ್ಯದಿಂ ಆಲಸ್ಯವೆಂದಿಗೂ
ಬಾಳ ದಾರಿಗದು ಬರಿ ಕೆಸರೇ...

ಕರ್ತವ್ಯವೇ ಭಗವಂತನಾಗಿರಲು
ಪ್ರತಿಯೊಂದು ಕ್ಷಣವೂ ಸ್ವರ್ಗದಂತೆ
ಕರ್ತವ್ಯಕೆ ಭಂಗವಾಗಿರಲು
ಬಾಳೇ ಬಂಧನದ ದುರ್ಯೋಗದಂತೆ ...

ಪ್ರತಿದಿನದ ಸಮಯ ಕಳೆಯಲು
ಸಾಕು ಕರ್ತವ್ಯನಿರತ ಕ್ಷಣಗಳು
ನಿಷ್ಠೆಗೆ ಭಂಗ ಸೆಳೆಯಲು
ಮನದಿ ಸಂಕಷ್ಟದ ಸುರಿಮಳೆಗಳು...

ಕೆಟ್ಟು ಹೋಗಿದೆ ಮನ

ಈ ಹೃದಯದ ನೋವ ಜ್ವಾಲೆಯನು
ಅರ್ಥೈಸದೆ ಊದುತಿಹರು ಬರಿದೆ ನೋವ ಕಹಳೆಯ
ಹರಿಸಿ ಅಪವಾದಗಳ ಸರಮಾಲೆಯನು
ಕೆಡಿಸಿಹರು ಮನದ ಸಂತೋಷದ ಕಳೆಯ...

ಕಲ್ಲೆರಚುತಿಹರು ನಿಜವಾದ ಪ್ರೀತಿಗೆ
ಅದ ತಿಳಿದಿದ್ದರೂ ಬಸವಲಿದೆ ಏನೂ ಮಾಡಲಾಗದೆ
ಆಪ್ತರ ಕ್ರೌರತಾಂಡವದ ಭೀತಿಗೆ
ಸೋತೆ, ನನ್ನ ಮನವನೇ ತಿವಿದು ನೋವ ಹೇರಿದೆ...

ಅನ್ಯಾಯ ಅಪವಾದಗಳ ರೌದ್ರತಾಂಡವಕೆ
ಭೀತಗೊಂಡು ಚಿವುಟಿ ಚಿತ್ರಾನ್ನವಾಗಿದೆ ಈ ಹೃದಯ
ಮನದ ಸಮತೋಲನ  ಕಳೆವುದಕೆ
ನಾಂದಿ ಹಾಕಿದೆ ಈ ಕೆಟ್ಟ ಘಳಿಗೆಯ ಉದಯ...

ಕಣ್ಣಂಚಿಗೆ ಬಂದಿದ್ದರೂ ಈ ಕಣ್ಣೀರು
ಕೆಳಗಿಳಿಯದೆ ಕರಗಿ ಹೋಗುವಂತಿದೆ ಹೃದಯದಲೆ
ಮನದಲಿ ನೋವಿನ ಕಹಳೆಯ ತೇರು
ಕಾಣದಂತಾಗಿದೆ ಎಲ್ಲಿಯೂ ಅಭಿಲಾಷೆಯ ಸ್ವಾತಂತ್ರ್ಯದ ನೆಲೆ...

ಭೀತಿಯ ಅಲೆ

ಜೀವನದ ಮರಳ ದಾರಿಯಲಿ
ಕಾಣುತಿದೆ ಬರಿ ಕತ್ತಲು...
ಕಲ್ಲು ಮುಳ್ಳುಗಳ ಮಾರಿ ಸುರಿದಿದೆ
ನಡೆವ ಕಾಲ್ಗಳ ಸುತ್ತಲೂ ...

ತತ್ತರಿಸುತ ಈ ಹೃದಯ ಅಳುತಿದೆ
ನೋವಿನಲಿ ರಕ್ತ ಕಣ್ಣೀರು ...
ನಿನ್ನ ಕಾಣದೆ ನನ್ನ ಮನ ನರಳುತಿದೆ
ಸಿಗಲಾರದೆ ಖುಷಿಯ ಪನ್ನೀರು ???

 ನಿರ್ಜೀವ ಒಣಗಿದೆಲೆಗಳ ರಾಶಿಯಲಿ
ಕಾಣದಾಗಿದೆ ಎಲ್ಲಿಯೂ ಹಸಿರು ...
ನಿನ್ನ ಪ್ರೀತಿಯ ಪಡೆವ ತವಕದಿ
ಕಟ್ಟಿದಂತಾಗಿದೆ ಈ ನನ್ನ ಉಸಿರು...

ಮೋಸದಿ ಗೃಹಬಂಧನ ಕೊಡಿಸಿ
ಅಟ್ಟಹಾಸದಿ ನಗುತಿಹರಿಲ್ಲಿ ...
ಹೃದಯ ಸುಡುವ ಪ್ರಶ್ನೆಗೆಲ್ಲಕೂ
ಮೌನವೇ ನನ್ನುತ್ತರವಿಲ್ಲಿ...

Saturday, May 2, 2015

ನನ್ನ ಮನದ ನೋವು

ಕ್ಷಣವು  ನಿನ್ನ ನೆನೆದು ನೆನೆದು
ಬಾಡಿ ಹೋಗಿದೆ ಮನ...
ನೀ ಹೇಗಿರುವೆಯೋ ಏನೋ ಎಂಬುದ
ತಿಳಿಯುವ ತವಕ ದಿನಾ...

ಒಂದು ಕ್ಷಣವೂ ನಿನ್ನ ಮರೆತು
ಇರಲಸಾಧ್ಯ  ನನಗೆ...
ನಿನ್ನ ಚಿಂತೆಯೇ ಕಾಡಿ ನನ್ನನು
ಮಾಸಿ ಹೋಗಿದೆ ನಗೆ...

ಮನಸಾರೆ ನಿನ್ನ ಪ್ರೀತಿಸಿದಕೆ
ಪರರ ಧೂಷಣೆ ನನಗೆ...
ಶಿಕ್ಷೆ ನೀಡಿ ಮನಸ ಹಿಂಸಿಸಿ
ತೀರಿಸಿದರು ತಮ್ಮ ಹಗೆ...

ನೀ ಚೆನ್ನಾಗಿ ಬಾಳಿದರೆ ಸಾಕು
ಎಂಬುದೇ ನನ್ನ ಬಯಕೆ
ನಿನಗಾವ ಕೇಡೂ ಬರದಿರಲಿ
ಎಂಬುದೊಂದೇ ನನ್ನ ಹಾರೈಕೆ...

ಎಲ್ಲವೂ ಶೂನ್ಯ

ದಿನದಿನ ಕಂಗೊಳಿಸುತ್ತಿದ್ದ ಆಗಸ
ಇಂದೇಕೋ ನೀರಸವಾಗಿದೆ
ತಂಪಾಗಿ ಬೀಸುತ್ತಿದ್ದ ಪವನ
ಇಂದೇಕೋ ಅಚಲಿತವಾಗಿದೆ...

ಮೊಗದಿ ಅರಳಿದಂತಿದ್ದ ಮಂದಹಾಸವು
ದುಃಖದಿ ಮರೆಮಾಚಿ ಅಡಗಿದೆ...
ತಾವರೆಯಂತೆ ಅರಳಿದ್ದ ಹಣೆಯು
ಮುದುಡಿದ ಹೂವಂತೆ ಬಾಡಿದೆ...

ಖುಷಿಯಲಿ ಉಬ್ಬಿದ್ದ ಹೃದಯವ
ಯಾರೋ ಚಿವುಟಿದಂತೆ ನೋವಾಗಿದೆ
ಸವಿಯಾದ ಚಿಂತನೆಗಳು ತುಂಬಿದ ಮನಸ್ಸನ್ನು
ಗಾಯಗೊಳಿಸಿ ರಕ್ತವನು ಸುರಿಯುತಿದೆ...

ಜೀವನದಿ ಇದ್ದ ಒಂದೇ ಕನಸನು
ಪರರು ಒಂದೇ ಕ್ಷಣಕೆ ಒಡೆದಿಹರು
ಕನಸ್ಸಿಲ್ಲದ ಮನಸ್ಸಿನ ಭಾವನೆಗಳನು
ಹಿಡಿದಿಡಲು ಸಾಧ್ಯವಾಗದಂತೆ ಕೆಡಿಸಿಹರು...

ನೋವಿನ ಬಡಿತ

ನನ್ನಿನಿಯನೇ... ನೀ ಹೇಗಿರುವೆ?
ತಿಳಿಯಲು ತವಕದಿ ಕಾದಿರುವೆ...
ನಿನಗಾವ ತೊಂದರೆಯೂ ಕಾಡದಿರಲಿ
ಎಂದು ಹೃದಯದಿ ಬಯಸಿರುವೆ...

ಜೀವನದಿ ನಮ್ಮ ಜಂಟಿಪಯಣ
ಪರರಿಂದ ಕೊನೆಯಾಗುವುದೇನೋ ನಾನರಿಯೆ...
ನಮ್ಮಿಬ್ಬರ ನಡುವಣ ಪ್ರೀತಿಯ ಸಾಗರ
ಬತ್ತಿ ಹೋಗಲಾರದು ಎಂಬುದ ನಾ ಬಲ್ಲೆ...

ಮುಂದೊಂದು ದಿನ ಖಂಡಿತ ದೊರೆವುದು
ನಮ್ಮಿಬ್ಬರ ಪ್ರೇಮಕೆ ಜಯ...
ಕುಂಠಿತ ಮನಸಿನ ಎದೆಬಡಿತದಲಿ
ಇರುವುದೊಂದೇ ಇದು ಆಶಯ...

ಈ ಮನದ ಇಂಗಿತಗಳನು
ಅರಿಯಲು ನನಗಾರೂ ಇಲ್ಲ...
ನನ್ನ ನೋವಿಗೆ ಸಾಂತ್ವನ ನೀಡಲು
ನನ್ನವರು ನನಗಾರೂ ಇಲ್ಲ...

Friday, May 1, 2015

ಬರಡು ದಿನಗಳು

ಮುಳುಗುತ್ತಿರುವ ಸೂರ್ಯ...
ನಿಶ್ಚಲವಾದ ಕಡಲು...
ಬಾಡಿ ಸ್ಥಿರವಾಗಿ ನಿಂತಿರುವ ಮರಗಳು...
ಹೆಪ್ಪು ಮೊರೆ ಹಾಕಿ ಸಪ್ಪೆಯಾಗಿ ನಿಂತಿರುವ ಹೂಗಳು...

ಮನಸ್ಸಿರದೆ ಮೋಡದ ಮರೆಯಲ್ಲಿ ಅವಿತಿರುವ ಚಂದಿರ...
ಕಾಣುವಂತಿದ್ದರೂ ಕಾಣದೆ ಮಿಚುತಿರುವ ನಕ್ಷತ್ರಗಳು...
ಕಣ್ಣೀರ ಧಾರೆಯಂತೆ ಇಳಿಯುತ್ತಿವೆ ಮಳೆಹನಿಗಳು...
ಅಳುವ ಮಾರ್ದನಿಯಂತೆ ಕೇಳುವ ಹಕ್ಕಿಗಳಿಂಚರಗಳು....

ಮನದಲಿ ಹೊಗೆಯಾಡುತಿವೆ ಉರಿಯುವ ಬೆಂಕಿಯುಂಡೆಗಳು...
ಒಡೆದು ಚೂರಾಗಿವೆ ಮನದ ನೂರೆಂಟು ಕನಸುಗಳು...
ಕಣ್ಣೀರ ಹೊಳೆಯಲಿ ಮುಳುಗಿ ಹೋಗಿವೆ ಈ ನಯನಗಳು...
ದುಃಖದ ಸಾಗರದಲಿ ಕರಗಿ ಹೋಗಿವೆ ಮಾತುಗಳು...

ಮುಂದೋಡದೆ ಸ್ಥಿರವಾಗಿ ನಿಂತಿದೆ ಮನದ ಚಿಂತನೆಗಳು...
ಮೂಡಿದೆ ಹೊಸದಾಗಿ ಈ ಮನದಲಿ ಕಾಡುವ ಚಿಂತೆಗಳು...
ಹೀಗೇ ಕೊನೆಯಾಗಬಾರದೇಕೆ ಒಮ್ಮೆ ಈ ಜೀವನ ಕ್ಷಣಗಳು...
ತವಕಿಸುತಿದೆ ಮನವು ನಿಶ್ಚಿಂತೆಯ ಕಡಲಲಿ ಚಿರವಾಗಿ ಮಲಗಲು...

(೧೧--೦೩-೨೦೧೪)