ಶನಿವಾರ, ಆಗಸ್ಟ್ 8, 2026

ಬದುಕು ಹೊಲಿದ ಬೆಳ್ಳಿನೂಲು

✍🏻ದೀಪಲಕ್ಷ್ಮಿ ಭಟ್, ಮಂಗಳೂರು   

 

ಬೆಟ್ಟದ ತಪ್ಪಲಿನಲ್ಲಿದ್ದ ಚಂದನಹಳ್ಳಿ ಹೆಸರಿನಂತೆಯೇ ಚಂದನದ ಪರಿಮಳ ಹೊತ್ತಿದ್ದ ಊರು. ಮಳೆಗಾಲದಲ್ಲಿ ಹಸಿರು ಹೊದ್ದು ನಿಂತ ಗದ್ದೆಗಳು, ಬೇಸಿಗೆಯಲ್ಲಿ ಬಿರುಕು ಬಿಟ್ಟ ಕೆರೆ, ಮಧ್ಯದಲ್ಲಿ ನೂರಾರು ವರ್ಷಗಳ ಹಳೆಯ ಬಸವೇಶ್ವರನ ಗುಡಿ — ಇವೇ ಆ ಊರಿನ ಗುರುತುಗಳು. ಊರಿನ ಪೂರ್ವದ ತುದಿಯಲ್ಲಿ, ಮಣ್ಣಿನ ಗೋಡೆ ಮತ್ತು ಹೆಂಚಿನ ಸೂರಿನ ಪುಟ್ಟ ಗುಡಿಸಲಿನಂತಹ ಮನೆಯಲ್ಲಿ ಪಾಂಡುರಂಗ, ಅವನ ಹೆಂಡತಿ ಸುಜಾತ, ಮಗಳು ಪಲ್ಲವಿ ಮತ್ತು ಮಗ ಸುಮಂತ ವಾಸವಾಗಿದ್ದರು.

ಪಾಂಡುರಂಗನಿಗೆ ಸ್ವಂತ ಜಮೀನಿರಲಿಲ್ಲ. ಯಾರ ಗದ್ದೆಯಲ್ಲಿ ಕೆಲಸ ಸಿಕ್ಕಿದರೂ ಅಲ್ಲಿ ಕೂಲಿ ಮಾಡುತ್ತಿದ್ದ. ಮಳೆ ಹೆಚ್ಚಾದರೂ ಕೆಲಸವಿರಲಿಲ್ಲ; ಮಳೆ ಬರದಿದ್ದರೂ ಕೆಲಸವಿರಲಿಲ್ಲ. ಬಡವನ ಬದುಕಿನಲ್ಲಿ ಮಳೆಯೂ ಒಂದು ಸಮಸ್ಯೆ, ಬಿಸಿಲೂ ಇನ್ನೊಂದು ಸಮಸ್ಯೆ. ಸುಜಾತ ನಾಲ್ಕು ಮನೆಗಳಲ್ಲಿ ಪಾತ್ರೆ ತೊಳೆದು, ಹಬ್ಬದ ದಿನಗಳಲ್ಲಿ ಹಪ್ಪಳ–ಸಂಡಿಗೆ ಮಾಡಿ ಕೊಟ್ಟು, ಸಿಕ್ಕಷ್ಟು ಹಣವನ್ನು ಮನೆಗೆ ತರುತ್ತಿದ್ದಳು. ಆ ಮನೆಯ ಒಲೆ ಹೊತ್ತಿಕೊಳ್ಳುವುದು ಪ್ರತಿದಿನದ ಹೋರಾಟವಾಗಿದ್ದರೂ, ಮಕ್ಕಳ ಓದು ನಿಲ್ಲಬಾರದು ಎಂಬುದು ಗಂಡ–ಹೆಂಡತಿಯ ಒಂದೇ ಹಠವಾಗಿತ್ತು. 

ಪಲ್ಲವಿ ಆ ಮನೆಯ ಹಿರಿಯ ಮಗಳು. ವಯಸ್ಸು ಹದಿನೇಳು. ಬಡತನ ಅವಳ ಮುಖದ ಹೊಳಪನ್ನು ಕಸಿದುಕೊಳ್ಳಲಿಲ್ಲ; ಬದಲಾಗಿ ಕಣ್ಣಿಗೆ ವಯಸ್ಸಿಗಿಂತ ಹೆಚ್ಚಿನ ಗಾಂಭೀರ್ಯ ಕೊಟ್ಟಿತ್ತು. ಶಾಲೆಯಲ್ಲಿ ಯಾವಾಗಲೂ ಮೊದಲ ಸ್ಥಾನ. ಶಿಕ್ಷಕರು ಕೇಳುವ ಪ್ರಶ್ನೆಗೆ ಉತ್ತರ ಗೊತ್ತಿದ್ದರೂ, ಪಕ್ಕದಲ್ಲಿದ್ದ ಗೆಳತಿಗೆ ಅವಕಾಶ ಸಿಗಲಿ ಎಂದು ಕೆಲವೊಮ್ಮೆ ಕೈ ಎತ್ತದೆ ಕುಳಿತುಕೊಳ್ಳುವಷ್ಟು ಮೃದು ಮನಸ್ಸು. ಅವಳ ತಮ್ಮ ಸುಮಂತ ಎಂಟನೇ ತರಗತಿಯಲ್ಲಿ ಓದುತ್ತಿದ್ದ. ಓದಿಗಿಂತ ಗಾಳಿಪಟ, ಗಿಲ್ಲಿದಾಂಡು ಮತ್ತು ಊರ ಕೆರೆಯ ಮೀನುಗಳ ಮೇಲೆಯೇ ಅವನಿಗೆ ಹೆಚ್ಚು ಪ್ರೀತಿ. ಆದರೂ ಅಕ್ಕ ಹೇಳಿದರೆ ಪುಸ್ತಕ ಹಿಡಿದುಕೊಳ್ಳುತ್ತಿದ್ದ.

 


ಒಂದು ವರ್ಷ ಮಳೆ ಕೈಕೊಟ್ಟಾಗ ಪಾಂಡುರಂಗನಿಗೆ ತಿಂಗಳುಗಟ್ಟಲೆ ಸರಿಯಾದ ಕೆಲಸ ಸಿಗಲಿಲ್ಲ. ಮನೆಯಲ್ಲಿದ್ದ ಅಕ್ಕಿಯ ಡಬ್ಬಿಯ ತಳ ಕಾಣಿಸತೊಡಗಿತು. ಅದೇ ಸಮಯದಲ್ಲಿ ಸುಜಾತಳಿಗೆ ಜ್ವರ ಬಂದು ಕೆಲಸಕ್ಕೆ ಹೋಗಲಾಗಲಿಲ್ಲ. ಆ ರಾತ್ರಿ ಪಲ್ಲವಿ ಅಮ್ಮನ ಹಳೆಯ ಸೀರೆಯನ್ನು ಕೈಯಲ್ಲಿ ಹಿಡಿದು ಬಹಳ ಹೊತ್ತು ನೋಡಿದಳು. ಸೀರೆಯ ಅಂಚು ಹರಿದಿತ್ತು. ಮೂಲೆಯಲ್ಲಿ ಅವಳ ಅಜ್ಜಿ ಬಳಸುತ್ತಿದ್ದ ಕಪ್ಪುಬಣ್ಣದ ಹೊಲಿಗೆ ಯಂತ್ರ ಧೂಳು ಹಿಡಿದು ಕುಳಿತಿತ್ತು. 
“ಅಮ್ಮಾ, ಈ ಯಂತ್ರ ಕೆಲಸ ಮಾಡುತ್ತದಾ?” ಎಂದು ಕೇಳಿದಳು.
“ಮಾಡಬಹುದು. ಆದರೆ ಅದನ್ನು ಉಪಯೋಗಿಸಲು ಯಾರಿಗೆ ಬರುತ್ತದೆ? ನಿನ್ನ ಅಜ್ಜಿ ಇದ್ದಾಗ ಎಂಥೆಂಥ ರವಿಕೆ ಹೊಲಿಯುತ್ತಿದ್ದರು ಗೊತ್ತಾ?!” ಎಂದು ಸುಜಾತ ನಿಟ್ಟುಸಿರು ಬಿಟ್ಟಳು.

*** 

ಮರುದಿನ ಪಲ್ಲವಿ ಶಾಲೆ ಮುಗಿಸಿ ಊರಿನ ದರ್ಜಿಯಾದ ಹಮೀದ್ ಚಾಚಾ ಅವರ ಅಂಗಡಿಗೆ ಹೋದಳು. “ಚಾಚಾ, ನನಗೆ ಹೊಲಿಗೆ ಕಲಿಸುತ್ತೀರಾ? ಹಣ ಈಗ ಕೊಡಲಾಗುವುದಿಲ್ಲ. ಅಂಗಡಿ ಗುಡಿಸುತ್ತೇನೆ, ಗುಂಡಿ ಹೊಲಿಯುತ್ತೇನೆ, ದಾರ ಸುತ್ತಿಡುತ್ತೇನೆ,” ಎಂದಳು. 
ಹಮೀದ್ ಚಾಚಾ ಅವಳ ಕಣ್ಣಿನಲ್ಲಿದ್ದ ಸಂಕಲ್ಪವನ್ನು ನೋಡಿ ನಕ್ಕರು. “ಕಲಿಯುವವನಿಂದ ಗುರು ಮೊದಲು ಹಣ ಕೇಳಿದರೆ ವಿದ್ಯೆ ಮುನಿಯುತ್ತದೆ, ಮಗಳೇ. ಬಾ, ಕಲಿಸುತ್ತೇನೆ.”
ಪಲ್ಲವಿಯ ಬೆರಳುಗಳು ಅಕ್ಷರ ಬರೆಯುವುದರಲ್ಲಿ ಎಷ್ಟು ಚುರುಕಾಗಿದ್ದವೋ, ಬಟ್ಟೆಯ ಮೇಲೆ ಗೆರೆ ಎಳೆಯುವುದಲ್ಲಿಯೂ ಅಷ್ಟೇ ಚುರುಕಾದವು. ಮೂರು ತಿಂಗಳಲ್ಲಿ ಸರಳ ರವಿಕೆ, ಮಕ್ಕಳ ಲಂಗ, ದಾವಣಿ, ಚೂಡಿದಾರದ ಮೇಲಂಗಿ ಹೊಲಿಯುವುದನ್ನು ಕಲಿತುಬಿಟ್ಟಳು. ರಾತ್ರಿ ಸೀಮೆಎಣ್ಣೆಯ ದೀಪದ ಬೆಳಕಿನಲ್ಲಿ ಓದುತ್ತಿದ್ದಳು; ಎಲ್ಲರೂ ಮಲಗಿದ ಮೇಲೆ ಯಂತ್ರ ಓಡಿಸುತ್ತಿದ್ದಳು. ಯಂತ್ರದ ಟಕಟಕ ಸದ್ದು ಆ ಮನೆಯ ಬಡತನದ ಎದೆಯ ಮೇಲೆ ಬಡಿಯುವ ಪುಟ್ಟ ಆಶೆಯ ಹೃದಯಬಡಿತದಂತಿತ್ತು. 

ಮೊದಲ ಬಾರಿ ನೆರೆಮನೆಯ ಲಕ್ಷ್ಮಕ್ಕ ಕೊಟ್ಟ ರವಿಕೆ ಹೊಲಿದು ಪಲ್ಲವಿಗೆ ಮೂವತ್ತು ರೂಪಾಯಿ ಸಿಕ್ಕಿತು. ಆ ನೋಟನ್ನು ಅವಳು ತನ್ನ ಕಣ್ಣಿಗೊತ್ತಿಕೊಂಡು ಅಮ್ಮನ ಕೈಯಲ್ಲಿಟ್ಟಾಗ ಸುಜಾತಳ ಕಣ್ಣು ತುಂಬಿ ಬಂತು
“ಇದು ನಿನ್ನ ದುಡ್ಡು. ಪುಸ್ತಕ ತೆಗೆದುಕೋ,” ಎಂದಳು.
“ನನ್ನ ಪುಸ್ತಕ ಇನ್ನೂ ಎರಡು ತಿಂಗಳು ಬರುತ್ತದೆ. ಮೊದಲು ಸುಮಂತನ ಶಾಲೆಯ ಶುಲ್ಕ ಕಟ್ಟೋಣ,” ಎಂದ ಪಲ್ಲವಿಯನ್ನು ಪಾಂಡುರಂಗ ಮೌನವಾಗಿ ನೋಡಿದ. ಆ ಕ್ಷಣದಲ್ಲಿ ಮಗಳು ತನಗಿಂತ ಎತ್ತರವಾಗಿ ಬೆಳೆದಿದ್ದಾಳೆ ಎಂದು ಅವನಿಗೆ ಅನಿಸಿತು. 

ಹೀಗೆ ದಿನಗಳು ಕಳೆದವು. “ಪಲ್ಲವಿಯ ಕೈಯಲ್ಲಿ ಹೊಲಿಸಿದರೆ ಬಟ್ಟೆ ಮೈಮೇಲೆ ಚೆನ್ನಾಗಿ ಕೂರುತ್ತದೆ,” ಎಂಬ ಮಾತು ಊರಲ್ಲಿ ಹರಡಿತು. ಅವಳು ಅಳತೆ ತೆಗೆದುಕೊಳ್ಳುವಾಗ ಯಾರ ಬಡತನವನ್ನೂ, ಯಾರ ಸಿರಿತನವನ್ನೂ ಅಳೆಯುತ್ತಿರಲಿಲ್ಲ. ಸಮಯಕ್ಕೆ ಕೆಲಸ ಕೊಡುವುದು, ಉಳಿದ ಬಟ್ಟೆಯನ್ನು ಮರಳಿ ಕೊಡುವುದು, ಹಣವಿಲ್ಲದವರಿಗೆ ಕಾಯುವುದು— ಇವುಗಳಿಂದ ಪಲ್ಲವಿಯ ಹೆಸರು ಊರಿನ ನಾಲ್ಕು ಬೀದಿಗಳಿಗೂ ತಲುಪಿತು. ದಿನದಿಂದ ದಿನಕ್ಕೆ, ಅವಳಿಗೆ ಬರುವ ಹೋಳಿಗೆಯ ಸಂಖ್ಯೆ ಕೂಡ ಹೆಚ್ಚಾಯಿತು. ಸಂಪಾದನೆಯೂ ಮನೆಯ ಖರ್ಚು ಕಳೆಯುವಷ್ಟು ಬರತೊಡಗಿತು. 

ಒಂದು ಕಾರ್ತಿಕದ ಸಂಜೆ ಹಳೆಯ ಯಂತ್ರದ ಕೆಳಗಿನ ಪೆಟ್ಟಿಗೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಅವಳಿಗೆ ಚಂದನದ ಮರದಿಂದ ಮಾಡಿದ ಪುಟ್ಟ ಪೆಟ್ಟಿಗೆಯೊಂದು ಸಿಕ್ಕಿತು. ಅದರ ಮುಚ್ಚಳದ ಮೇಲೆ ಅರ್ಧಚಂದ್ರ ಮತ್ತು ನಂದಿಯ ಚಿತ್ರ ಕೆತ್ತಲಾಗಿತ್ತು. ಒಳಗೆ ಬೆಳ್ಳಿಯಂತೆ ಹೊಳೆಯುವ ಒಂದು ದಾರದ ಉಂಡೆ, ತಾಮ್ರದ ಸೂಜಿ ಮತ್ತು ಮಸುಕಾದ ಕಾಗದ ಇತ್ತು. ಕಾಗದದಲ್ಲಿ ಅವಳ ಅಜ್ಜಿಯ ಕೈಬರಹ:
“ಈ ದಾರ ಬಟ್ಟೆಯನ್ನು ಮಾತ್ರ ಹೊಲಿಯುವುದಿಲ್ಲ. ಕರುಣೆ ತುಂಬಿದ ಕೈಗೆ ಸಿಕ್ಕರೆ ಮುರಿದ ಮನಸ್ಸನ್ನೂ ಜೋಡಿಸುತ್ತದೆ. ಆದರೆ ಸ್ವಾರ್ಥಕ್ಕಾಗಿ ಬಳಸಿದರೆ ಬಂಧವನ್ನೇ ಹರಿದುಬಿಡುತ್ತದೆ. ಹುಣ್ಣಿಮೆಯ ಬೆಳಕಿನಲ್ಲಿ ಇದರ ನಿಜಬಣ್ಣ ಕಾಣುತ್ತದೆ.”
ಪಲ್ಲವಿ ಅದನ್ನು ಓದಿ ನಕ್ಕಳು. “ಅಜ್ಜಿಯ ಕಥೆಗಳೂ ಅಜ್ಜಿಯ ಜೊತೆಗೆ ಹೋಗಲಿಲ್ಲವಲ್ಲ!” ಎಂದು ದಾರವನ್ನು ಮತ್ತೆ ಪೆಟ್ಟಿಗೆಯಲ್ಲಿ ಇಟ್ಟಳು. ಆದರೆ ಆ ರಾತ್ರಿ ಕಿಟಕಿಯಿಂದ ಬಿದ್ದ ಚಂದ್ರನ ಬೆಳಕು ಪೆಟ್ಟಿಗೆಯ ಸಣ್ಣ ಸಂದಿಯಿಂದ ಒಳನುಗ್ಗಿದಾಗ, ದಾರ ನೀಲಿಬಣ್ಣದ ಮಿಂಚಿನಂತೆ ಹೊಳೆಯುವುದನ್ನು ಅವಳು ಗಮನಿಸಲಿಲ್ಲ. 

***

ಚಂದನಹಳ್ಳಿಯ ಪಶ್ಚಿಮ ತುದಿಯಲ್ಲಿ ಶಂಕರೇಗೌಡರ ದೊಡ್ಡ ಮನೆ ಇತ್ತು. ವಿಶಾಲವಾದ ಅಂಗಳ, ತೆಂಗು–ಅಡಿಕೆ ತೋಟ, ಕೊಟ್ಟಿಗೆಯಲ್ಲಿ ಹಸುಗಳು, ಬಾಗಿಲ ಮುಂದೆ ಯಾವಾಗಲೂ ಜನ. ಹಣ, ಜಮೀನು, ಹೆಸರು — ಯಾವುದಕ್ಕೂ ಕೊರತೆಯಿರಲಿಲ್ಲ. ಆದರೆ ಆ ಮನೆಯೊಳಗೆ ಯಾರೂ ಜೋರಾಗಿ ಮಾತನಾಡದ ಒಂದು ದುಃಖವಿತ್ತು. ಅದು ಶಂಕರೇಗೌಡರ ಮೊಮ್ಮಗ ಬಸವ. 

ಬಸವ ಹುಟ್ಟಿದಾಗಲೇ ಬೇರೆ ಮಕ್ಕಳಿಗಿಂತ ನಿಧಾನವಾಗಿದ್ದ. ಮಾತು ತಡವಾಗಿ ಬಂತು. ಅಕ್ಷರಗಳು ನೆನಪಿನಲ್ಲಿ ಉಳಿಯಲಿಲ್ಲ. ಮುಖಗಳನ್ನು ಗುರುತಿಸುತ್ತಿದ್ದರೂ, ಜನರ ಮಾತಿನ ಒಳಾರ್ಥ ಅವನಿಗೆ ಅರ್ಥವಾಗುತ್ತಿರಲಿಲ್ಲ. ಜೊತೆಗೆ ಆಗಾಗ ಮೂರ್ಛೆ ಬಂದು ಕೈಕಾಲು ಸೆಳೆತವಾಗುತ್ತಿತ್ತು. ಊರವರು ಅವನನ್ನು “ಪೆದ್ದ ಬಸವ” ಎಂದು ಕರೆಯುತ್ತಿದ್ದರು. ಮಕ್ಕಳು ಹಿಂದೆ ಬಿದ್ದು ಕಿಚಾಯಿಸಿದರೆ ಅವನು ಸಿಟ್ಟಾಗದೆ, ಅವರೊಂದಿಗೆ ನಗುತ್ತಿದ್ದ. ಏಕೆಂದರೆ ಅವರು ತನ್ನನ್ನು ನೋಡಿ ನಗುತ್ತಿದ್ದಾರೆ ಎನ್ನುವುದು ಅವನಿಗೆ ತಿಳಿಯುತ್ತಿರಲಿಲ್ಲ. 

ಬಸವನ ತಂದೆ–ತಾಯಿ ಅವನು ಚಿಕ್ಕವನಿದ್ದಾಗಲೇ ಅಪಘಾತದಲ್ಲಿ ಸತ್ತಿದ್ದರು. ಶಂಕರೇಗೌಡ ಮತ್ತು ಅವರ ಹೆಂಡತಿ ಗೌರಮ್ಮನೇ ಅವನನ್ನು ಸಾಕಿದ್ದರು. ನಗರದ ದೊಡ್ಡ ಆಸ್ಪತ್ರೆಗಳು, ದೂರದ ವೈದ್ಯರು, ಔಷಧಿ, ಪೂಜೆ, ಹರಕೆ — ಯಾವುದನ್ನೂ ಬಿಟ್ಟಿರಲಿಲ್ಲ. ಔಷಧಿಯಿಂದ ಮೂರ್ಛೆಯ ತೀವ್ರತೆ ಸ್ವಲ್ಪ ಕಡಿಮೆಯಾಗುತ್ತಿತ್ತು. ಆದರೆ ನಿಯಮಿತವಾಗಿ ಮಾತ್ರೆ ಕೊಡಲು ಮನೆಯವರು ಮರೆತರೆ ಮತ್ತೆ ಹೆಚ್ಚುತ್ತಿತ್ತು. ಕೆಲವು ಮಂದಿ ಜ್ಯೋತಿಷಿಗಳು, “ಮದುವೆಯಾದೊಡನೆ ರೋಗ ಕಡಿಮೆಯಾಗುತ್ತದೆ. ಹೆಂಡತಿಯ ಭಾಗ್ಯದಿಂದ ಹೊಸ ಜೀವನ ಸಿಗುತ್ತದೆ,” ಎಂದಿದ್ದರು. 
ಶಂಕರೇಗೌಡರಿಗೆ ಆ ಮಾತು ಕಲ್ಲಿನ ಮೇಲೆ ಬರೆದ ಅಕ್ಷರದಂತಾಯಿತು. ವೈದ್ಯರ ಎಚ್ಚರಿಕೆಗಿಂತ ಜಾತಕದ ಭರವಸೆಯೇ ಅವರ ಮನಸ್ಸಿಗೆ ಸುಲಭವಾಗಿ ಹಿಡಿಸಿತು. ಮೊಮ್ಮಗನ ಮದುವೆಗೆ ಹುಡುಗಿಯರನ್ನು ನೋಡತೊಡಗಿದರು. ಆದರೆ ಬಸವನ ಸ್ಥಿತಿ ತಿಳಿದ ಕೂಡಲೇ ಎಲ್ಲರೂ ಹಿಂದೆ ಸರಿಯುತ್ತಿದ್ದರು.

ಒಂದು ದಿನ ಗೌರಮ್ಮನ ರವಿಕೆ ಹೊಲಿಸಲು ಪಲ್ಲವಿ ದೊಡ್ಡ ಮನೆಗೆ ಹೋದಳು. ಅಂಗಳದಲ್ಲಿ ಬಸವ ನೆಲದ ಮೇಲೆ ಕುಳಿತು ಒಣ ಎಲೆಗಳಿಂದ ನಂದಿಯ ಆಕಾರ ಮಾಡುತ್ತಿದ್ದ. ಗಾಳಿಗೆ ಎಲೆಗಳು ಹಾರಿ ಹೋದಾಗ ಅವನ ಕಣ್ಣು ತುಂಬಿತು. ಕೆಲಸದವರು ನಕ್ಕರು.
“ಮತ್ತೆ ಮಾಡಬಹುದು ಅಲ್ವಾ?” ಎಂದು ಪಲ್ಲವಿ ಅವನ ಬಳಿಯಲ್ಲಿ ಕುಳಿತು ಕೇಳಿದಳು.
“ಗಾಳಿ ಅದನ್ನು ತೆಗೆದುಕೊಂಡು ಹೋಯಿತು. ಗಾಳಿಗೆ ನಂದಿ ಬೇಕಿತ್ತಾ?” ಎಂದು ಅವನು ಮಗುವಿನಂತೆ ಕೇಳಿದ.
“ಬಹುಶಃ ಬೇಕಿರಬಹುದು. ನಾವು ಇನ್ನೊಂದು ಮಾಡೋಣ. ಇದು ಗಾಳಿಗೆ, ಮುಂದಿನದು ನಿನಗೆ,” ಎಂದಳು.
ಅವಳು ಎರಡು ನಿಮಿಷಗಳಲ್ಲಿ ಎಲೆಗಳನ್ನು ಜೋಡಿಸಿ ನಂದಿಯ ರೂಪ ಮಾಡಿಕೊಟ್ಟಳು. ಬಸವ ಅವಳನ್ನು ಅಚ್ಚರಿಯಿಂದ ನೋಡಿದ. “ನಿನ್ನ ಬೆರಳಿಗೆ ಮಾತು ಬರುತ್ತದಾ?” ಎಂದನು.
ಆ ಪ್ರಶ್ನೆ ಪಲ್ಲವಿಗೆ ನಗು ತಂದರೂ, ಮನಸ್ಸಿನ ಆಳದಲ್ಲಿ ಎಲ್ಲೋ ತಾಕಿತು. ಇತರರು ಅವನನ್ನು ದಡ್ಡನೆಂದು ನೋಡಿದರೆ, ಅವನು ಅವಳ ಕೈಯಲ್ಲಿದ್ದ ಸೃಜನಶೀಲತೆ, ಸೃಷ್ಟಿಸುವ ಶಕ್ತಿಯನ್ನು ಕಂಡಿದ್ದ. 

ದೂರದಿಂದ ಇದನ್ನೆಲ್ಲ ನೋಡುತ್ತಿದ್ದ ಶಂಕರೇಗೌಡರ ಮನಸ್ಸಿನಲ್ಲಿ ಒಂದು ಯೋಚನೆ ಮೂಡಿತು. "ಪಲ್ಲವಿ ಬಡವಳು, ಆದರೆ ಜಾಣೆ; ಕೆಲಸಗಾರ್ತಿ, ಸಹನೆಯುಳ್ಳವಳು. ಅವಳು ಬಸವನನ್ನು ಮದುವೆಯಾಗಿ ಈ ಮನೆಗೆ ಬಂದರೆ ಬಸವನನ್ನು ಚೆನ್ನಾಗಿ ನೋಡಿಕೊಳ್ಳಬಲ್ಲಳು. ಆದರೆ ಬಸವನ ಆರೋಗ್ಯದ ಬಗ್ಗೆ ತಿಳಿದ ಅವರು ಒಪ್ಪಬಹುದೇ? ಆದರೂ, ಅವಳ ಕುಟುಂಬದ ಬಡತನ — ನಮ್ಮ ಅಂತಸ್ತು, ಹೆಸರು, ಹಣದ ಮುಂದೆ ಅವಳ ಮನೆಯವರು ಒಪ್ಪಬಹುದು" ಎಂದುಕೊಂಡರು. 

*** 

ಮರುದಿನವೇ ಪಾಂಡುರಂಗನ ಮನೆಗೆ ಬಂದರು. ಅವರೊಂದಿಗೆ ಹಣ್ಣು, ಸಿಹಿತಿಂಡಿ, ಹೊಸ ಬಟ್ಟೆ ಮತ್ತು ಮಾತಿನೊಳಗೆ ಮರೆಮಾಡಿದ ಅಧಿಕಾರವೂ ಬಂದಿತ್ತು. 
“ನಿನ್ನ ಮಗಳು ನಮ್ಮ ಬಸವನಿಗೆ ಇಷ್ಟವಾಗಿದ್ದಾಳೆ. ಮದುವೆ ಮಾಡಿದರೆ ನಿಮ್ಮ ಸಾಲ ತೀರಿಸುತ್ತೇನೆ. ಮನೆ ಕಟ್ಟಿಸಿಕೊಡುತ್ತೇನೆ. ಸುಮಂತನ ಓದಿನ ಹೊಣೆ ನಮ್ಮದು,” ಎಂದರು.
ಪಾಂಡುರಂಗ ಬೆಚ್ಚಿಬಿದ್ದ. “ಆದರೆ ಗೌಡರೇ... ಬಸವನ ಆರೋಗ್ಯ...”
“ದೇವರ ದಯೆ ಇದ್ದಾರೆ ಸರಿಯಾಗುತ್ತದೆ. ಜಾತಕದಲ್ಲಿ ಸ್ಪಷ್ಟವಾಗಿ ಹೇಳಿದೆ - ಬಸವನಿಗೆ ಮದುವೆಯಾದ ಕೂಡಲೇ ಅವನ ಆರೋಗ್ಯ ಸುಧಾರಿಸಿ, ಹೆಂಡತಿಯ ಭಾಗ್ಯದಿಂದ ಅವನಿಗೆ ಹೊಸ ಹೇವನ ಸಿಗುತ್ತದೆ ಅಂತ. ನಿಮ್ಮ ಮಗಳು ನಮ್ಮ ಮನೆಗೆ ರಾಣಿಯಾಗಿ ಬರುತ್ತಾಳೆ.”
ಪಾಂಡುರಂಗನ ಮನಸ್ಸು ಎರಡು ಭಾಗವಾಯಿತು. ಒಂದು ಭಾಗ, “ಮಗಳನ್ನು ಬಲಿಕೊಡಬೇಡ,” ಎಂದಿತು. ಇನ್ನೊಂದು ಭಾಗ, “ಮಗನ ಓದು, ಹೆಂಡತಿಯ ಔಷಧಿ, ಸಾಲ, ಹಸಿವು—ಎಲ್ಲವೂ ಮುಗಿಯುತ್ತದೆ,” ಎಂದಿತು. ಆ ರಾತ್ರಿ ಅವನು ಸರಿಯಾಗಿ ನಿದ್ರೆ ಮಾಡಲಿಲ್ಲ. ಬೆಳಗ್ಗೆ ಪಲ್ಲವಿಯ ಅಭಿಪ್ರಾಯ ಕೇಳದೇ ಒಪ್ಪಿಗೆ ನೀಡಿಬಿಟ್ಟ.

ವಿಷಯ ತಿಳಿದಾಗ ಪಲ್ಲವಿ ಕಲ್ಲಿನಂತೆ ನಿಂತಳು. “ಅಪ್ಪಾ, ನನ್ನ ಬದುಕಿನ ಬಗ್ಗೆ ನನ್ನನ್ನೇ ಕೇಳಬೇಕೆಂದು ನಿಮಗೆ ಅನಿಸಲಿಲ್ಲವೇ?” ಎಂದು ಕೇಳಿದಳು.
ಪಾಂಡುರಂಗ ತಲೆತಗ್ಗಿಸಿದ. “ನಾನು ತಪ್ಪು ಮಾಡಿದ್ದೇನೆ ಮಗಳೇ. ಆದರೆ ಈ ಬಡತನ... ಸುಮಂತನ ಭವಿಷ್ಯ...”
“ನಮ್ಮ ಬಡತನವನ್ನು ನಾನು ಹೊಲಿಗೆ ಮಾಡಿ ನಿಧಾನವಾಗಿ ಸರಿಪಡಿಸುತ್ತೇನೆ. ಅದಕ್ಕಾಗಿ ನನ್ನ ಜೀವನವನ್ನು ಯಾರಿಗಾದರೂ ಮಾರಬೇಕಾ?” ಅವಳ ಧ್ವನಿ ಗಟ್ಟಿಯಾಗಿದ್ದರೂ ಕಣ್ಣಲ್ಲಿ ನೀರಿತ್ತು.
ಸುಜಾತ ಮಗಳನ್ನು ಅಪ್ಪಿಕೊಂಡಳು. “ನಿನಗೆ ಇಷ್ಟವಿಲ್ಲದಿದ್ದರೆ ಈ ಮದುವೆ ಬೇಡ. ಹಸಿದುಕೊಂಡಾದರೂ ಬದುಕೋಣ.”
ಅದೇ ಸಂಜೆ ಬಸವ ಅವರ ಮನೆಗೆ ಒಬ್ಬನೇ ಬಂದ. ಕೈಯಲ್ಲಿ ಪಲ್ಲವಿ ಮಾಡಿಕೊಟ್ಟ ಒಣ ಎಲೆಯ ನಂದಿ ಇತ್ತು.
“ತಾತ ಹೇಳಿದ, ನೀನು ನಮ್ಮ ಮನೆಗೆ ಬರ್ತೀಯಂತೆ. ಆದರೆ ನೀನು ಅತ್ತಿದ್ದೀಯಂತೆ. ನಾನು ಬೇಡ ಎಂದರೆ ನೀನು ಅಳುವುದಿಲ್ಲವಾ?” ಎಂದು ಕೇಳಿದ.
ಪಲ್ಲವಿ ಅವನ ಮುಖ ನೋಡಿದಳು. ಆ ಮುಖದಲ್ಲಿ ಆಸೆಗಿಂತ ಭಯ ಹೆಚ್ಚಿತ್ತು.
“ನಿನಗೆ ಮದುವೆ ಅಂದ್ರೆ ಏನು ಗೊತ್ತಾ, ಬಸವ?”
“ಗೊತ್ತಿಲ್ಲ. ಗೌರಮ್ಮಜ್ಜಿ  ಹೇಳಿದಳು, ನನ್ನ ಮಾತ್ರೆ ಸಮಯಕ್ಕೆ ಕೊಡುವವಳು ಬರುತ್ತಾಳೆ ಅಂತ. ಆದರೆ ನೀನು ನನ್ನ ಅಮ್ಮ ಅಲ್ಲ ಆಲ್ವಾ. ನಿನಗೆ ಇಷ್ಟವಿಲ್ಲದಿದ್ದರೆ ನೀನು ಬರಬೇಡ. ತಾತನಿಗೆ ನಾನು ಹೇಳುತ್ತೇನೆ.”
ಅವನ ಮಾತು ಪಲ್ಲವಿಯ ಮನಸ್ಸಿನೊಳಗೆ ಅಸ್ಪಷ್ಟವಾದ ಬಾಗಿಲೊಂದನ್ನು ತೆರೆದಿತು. ತನ್ನ ಸಮ್ಮತಿಯಿಲ್ಲದೆ ನಡೆಯುತ್ತಿರುವ ಮದುವೆಯಲ್ಲಿ ಬಸವನ ಸಮ್ಮತಿಯೂ ಇಲ್ಲವೆಂಬುದು ಅವಳಿಗೆ ಅರ್ಥವಾಯಿತು. ಸಮಸ್ಯೆ ಬಸವನದಲ್ಲ; ಅವನ ಹೆಸರಿನಲ್ಲಿ ನಿರ್ಧಾರ ಮಾಡುತ್ತಿರುವ ಜನರಲ್ಲಿ ಇದೆ.
ಆ ಕೂಡಲೇ ಅವಳು ಶಂಕರೇಗೌಡರ ಮನೆಗೆ ಹೋದಳು. “ನಾನು ಮದುವೆಗೆ ಒಪ್ಪುತ್ತೇನೆ. ಆದರೆ ಮೂರು ಷರತ್ತುಗಳಿವೆ,” ಎಂದಳು.
ಮನೆಯವರೆಲ್ಲ ಆಶ್ಚರ್ಯದಿಂದ ನೋಡಿದರು.
“ಮೊದಲನೆಯದು, ನನ್ನ ಓದು ನಿಲ್ಲಬಾರದು. ಎರಡನೆಯದು, ನನ್ನ ಅಪ್ಪನ ಸಾಲ ತೀರಿಸುವುದು ಮದುವೆಯ ಬೆಲೆಯಾಗಬಾರದು; ನಾನು ಸಂಪಾದಿಸಿ ಮರಳಿಸುತ್ತೇನೆ. ಮೂರನೆಯದು, ಬಸವನ ಚಿಕಿತ್ಸೆಯನ್ನು ವೈದ್ಯರು ಹೇಳಿದಂತೆ ಮುಂದುವರಿಸಬೇಕು. ಜಾತಕದ ಹೆಸರಿನಲ್ಲಿ ಮಾತ್ರೆ ನಿಲ್ಲಿಸುವಂತಿಲ್ಲ.”
ಶಂಕರೇಗೌಡರಿಗೆ ಅವಳ ಗಟ್ಟಿತನ ಇಷ್ಟವಾಗಲಿಲ್ಲ. ಆದರೂ ಬೇರೆ ದಾರಿ ಇರಲಿಲ್ಲ. “ಆಯಿತು,” ಎಂದರು.

*** 

ಮದುವೆ ಬಹಳ ಅದ್ದೂರಿಯಾಗಿ ನಡೆಯಿತು. ಊರವರು ಪಲ್ಲವಿಗೆ ದೊರೆತ  ಹೊಸ ಸೀರೆ, ಚಿನ್ನದ ಒಡವೆ ನೋಡಿ, “ಪಲ್ಲವಿಯ ಅದೃಷ್ಟ ಚೆನ್ನಾಗಿದೆ. ಒಳ್ಳೆ ಭವಿಷ್ಯ ದೊರೆಯಿತು,” ಎಂದರು. ಕೆಲವರು ಹಿಂದೆ ನಿಂತು, “ಹಣಕ್ಕಾಗಿ ಪೆದ್ದನನ್ನು ಕಟ್ಟಿಕೊಂಡಳು, ಎಂಥಾ ದುರಾಸೆ?” ಎಂದು ಗುಸುಗುಸು ಮಾಡಿದರು. ಮಂಟಪದಲ್ಲಿ ಕುಳಿತ ಪಲ್ಲವಿಗೆ ಎಲ್ಲವೂ ಕೇಳಿಸಿತು. ಬಸವ ಮಾತ್ರ ಮಂಗಳವಾದ್ಯದ ಸದ್ದಿಗೆ ಹೆದರಿ ಕಿವಿ ಮುಚ್ಚಿಕೊಂಡಿದ್ದ. 
ತಾಳಿ ಕಟ್ಟುವ ಹೊತ್ತಿಗೆ ದೇವಾಲಯದ ಗಂಟೆ ಯಾರೂ ಮುಟ್ಟದೆ ಮೂರು ಬಾರಿ ಮೊಳಗಿತು. ಅದೇ ಕ್ಷಣದಲ್ಲಿ ಪಲ್ಲವಿಯ ಮನೆಯಲ್ಲಿ ಬಿಟ್ಟಿದ್ದ ಚಂದನದ ಪೆಟ್ಟಿಗೆಯ ಮುಚ್ಚಳ ತಾನೇ ತೆರೆದು, ಬೆಳ್ಳಿನೂಲಿನ ಉಂಡೆಯಿಂದ ಒಂದು ತುದಿ ಹೊರಬಂತು. ಮಂಟಪದಲ್ಲಿ ಬಸವ ಹಠಾತ್ತನೆ ಪಲ್ಲವಿಯ ಕೈ ಹಿಡಿದ.
“ಆ ಗಂಟೆ ನನ್ನನ್ನು ಕರೆಯುತ್ತಿದೆ,” ಎಂದು ನಡುಗಿದ.
“ಯಾವ ಗಂಟೆ?”
“ನೆಲದ ಕೆಳಗಿರುವ ಗಂಟೆ.”
ಅವನ ಮಾತನ್ನು ಯಾರೂ ಗಮನಿಸಲಿಲ್ಲ. ಆದರೆ ಪಲ್ಲವಿಯ ಎದೆಯೊಳಗೆ ಕಾರಣವಿಲ್ಲದ ಚಳಿ ಹರಿಯಿತು.

ಮದುವೆಯ ಮೊದಲ ರಾತ್ರಿ ಬಸವನನ್ನು ಅಲಂಕರಿಸಿದ ಕೋಣೆಗೆ ಕಳುಹಿಸಿ ಹೊರಗೆ ಹೆಂಗಸರು ನಗುತ್ತಿದ್ದರು. ಬಸವ ಬಾಗಿಲ ಬಳಿ ನಿಂತೇ ಇದ್ದ. “ಇಲ್ಲಿ ತುಂಬಾ ಹೂವಿದೆ. ನನಗೆ ವಾಸನೆ ಬೇಡ,” ಎಂದನು. ಪಲ್ಲವಿ ಒಂದೊಂದೇ ಹಾರವನ್ನು ತೆಗೆದು ಹೊರಗಿಟ್ಟಳು. ಹಾಸಿಗೆಯ ಬದಲು ನೆಲದಲ್ಲಿ ಚಾಪೆ ಹಾಸಿ, ಅವನಿಗೆ ನೀರು ಕೊಟ್ಟಳು.
“ಎಲ್ಲರೂ ನೀನು ನನ್ನ ಹೆಂಡತಿ ಅಂದರು. ಹೆಂಡತಿ ಅಂದರೆ ಹೆದರಿಸದವಳಾ?” ಎಂದು ಕೇಳಿದ.
“ಹೆಂಡತಿ ಅಂದರೆ ಜೊತೆಯಾಗಿ ನಡೆಯುವವಳು. ಆದರೆ ನಾವು ಮೊದಲು ಸ್ನೇಹಿತರಾಗೋಣ,” ಎಂದಳು.
“ಆದರೆ ನನಗೆ ವೇಗವಾಗಿ ನಡೆಯಲು ಆಗುವುದಿಲ್ಲ. ನೀನು ಓಡಿದರೆ ನಾನು ಬೀಳುತ್ತೇನೆ. ನಿಧಾನವಾಗಿ ನಡೆ,” ಎಂದನು. 
ಪಲ್ಲವಿಯ ತುಟಿಯಲ್ಲಿ ನಗು ಮೂಡಿತು. “ಸರಿ ಆಯ್ತು. ನಿಧಾನವಾಗಿಯೇ ನಡೆಯೋಣ.”

*** 

ಮದುವೆಯ ಮರುದಿನ ಬೆಳಿಗ್ಗೆ ಬಸವನಿಗೆ ತೀವ್ರ ಮೂರ್ಛೆ ಬಂತು. “ಮದುವೆಯಾದ ತಕ್ಷಣ ಎಲ್ಲ ಸರಿಯಾಗುತ್ತದೆ ಎಂದರಲ್ಲ!” ಎಂದು ಶಂಕರೇಗೌಡ ಕೋಪಗೊಂಡರು. ಮನೆಯವರು ಅವನ ಬಾಯಿಗೆ ಚಮಚ ಹಾಕಲು ಓಡಿದರು. ಪಲ್ಲವಿ ಅವರನ್ನು ತಡೆದು, ವೈದ್ಯರು ಹೇಳಿದ್ದನ್ನು ನೆನಪಿಸಿಕೊಂಡು ಬಸವನ ಸುತ್ತಲಿದ್ದ ಅಪಾಯಕಾರಿ ವಸ್ತುಗಳನ್ನು ದೂರ ಮಾಡಿದಳು, ತಲೆಯ ಕೆಳಗೆ ಮಡಿಸಿದ ಬಟ್ಟೆ ಇಟ್ಟು, ಅವನನ್ನು ಒಂದು ಬದಿಗೆ ಮಲಗಿಸಿ ಸಮಯ ಗಮನಿಸಿದಳು. ಸೆಳೆತ ನಿಂತ ನಂತರ ವೈದ್ಯರಿಗೆ ಕರೆ ಮಾಡಿಸಿದಳು.

ನಗರದ ನರರೋಗ ತಜ್ಞರಾದ ಡಾ. ಅನಿರುದ್ಧ ಬಂದರು. ಹಳೆಯ ಔಷಧಿ ಚೀಟಿಗಳನ್ನು ನೋಡಿ, ಮಾತ್ರೆಗಳು ಸಮಯಕ್ಕೆ ನೀಡಲಾಗದಿರುವುದನ್ನು ತಿಳಿದು ಬೇಸರಪಟ್ಟರು. “ಮದುವೆ ಔಷಧಿಯಲ್ಲ, ಗೌಡರೇ. ಅವನಿಗೆ ನಿಯಮಿತ ಚಿಕಿತ್ಸೆ, ನಿದ್ರೆ, ಸರಿಯಾದ ಆಹಾರ ಮತ್ತು ಒತ್ತಡವಿಲ್ಲದ ವಾತಾವರಣ ಬೇಕು,” ಎಂದರು. 
ಪಲ್ಲವಿ ಒಂದು ಪುಸ್ತಕ ಮಾಡಿಕೊಂಡಳು. ಮಾತ್ರೆಯ ಸಮಯ, ನಿದ್ರೆ, ಊಟ, ಮೂರ್ಛೆ ಬಂದ ದಿನ, ಅವಧಿ — ಎಲ್ಲವನ್ನೂ ಬರೆದಳು. ಬಸವನಿಗೆ ದೊಡ್ಡ ಗಡಿಯಾರ ಓದಲು ಆಗದ ಕಾರಣ ಸೂರ್ಯ, ತಟ್ಟೆ, ಚಂದ್ರ ಎಂಬ ಚಿತ್ರಗಳನ್ನು ಬರೆದು ಬೆಳಗಿನ, ಮಧ್ಯಾಹ್ನದ, ರಾತ್ರಿಯ ಮಾತ್ರೆಗಳನ್ನು ಬೇರೆಬೇರೆ ಡಬ್ಬಿಗಳಲ್ಲಿ ಇಟ್ಟಳು. ಪಲ್ಲವಿ ಹೇಳಿದಂತೆ, ಮಾತ್ರೆ ತೆಗೆದುಕೊಂಡಾಗ ಬಸವ ಒಂದು ನಕ್ಷತ್ರಕ್ಕೆ ಬಣ್ಣ ತುಂಬುತ್ತಿದ್ದ.
“ಮೂವತ್ತು ನಕ್ಷತ್ರ ತುಂಬಿದರೆ ಏನು ಕೊಡುತ್ತೀಯ?”
“ಏನು ಬೇಕು?”
“ನಿನ್ನ ಬೆರಳಿಗೆ ಬರುವ ಮಾತುಗಳನ್ನು ನನಗೂ ಕಲಿಸು.”

ಪಲ್ಲವಿ ಅವನಿಗೆ ಹೊಲಿಗೆ ಕಲಿಸಲು ಆರಂಭಿಸಿದಳು. ಮೊದಲು ಬಟ್ಟೆಯ ತುಂಡಿನಲ್ಲಿ ನೇರಗೆರೆ. ಬಸವನ ಕೈ ನಡುಗುತ್ತಿತ್ತು. ದಾರ ಮತ್ತೆ ಮತ್ತೆ ಗಂಟಾಗುತ್ತಿತ್ತು. ಕೆಲಸದವರು ನಕ್ಕಾಗ ಪಲ್ಲವಿ ಯಂತ್ರ ನಿಲ್ಲಿಸಿ, “ಕಲಿಯುವವನನ್ನು ನೋಡಿ ನಗುವವರು ತಮ್ಮ ಅಜ್ಞಾನವನ್ನು ತಾವೇ ತೋರಿಸುತ್ತಾರೆ,” ಎಂದಳು. ಆ ದಿನದಿಂದ ಅವನ ಎದುರು ಯಾರೂ ನಗಲಿಲ್ಲ. 

*** 

ಮದುವೆಯಾದ ಒಂದು ತಿಂಗಳ ನಂತರ ಮೊದಲ ಹುಣ್ಣಿಮೆ ಬಂತು. ಆ ದಿನ ರಾತ್ರಿ ಬಸವ ನಿದ್ರೆಯಲ್ಲಿ ಎದ್ದು ಹಳೆಯ ದೇವಾಲಯದ ಕಡೆ ನಡೆಯತೊಡಗಿದ. ಪಲ್ಲವಿ ಅದನ್ನು ಗಮನಿಸಿ ಅವನ ಹಿಂದೆ ಹೋದಳು. ಕೈಯಲ್ಲಿ ದೀಪವಿಲ್ಲದಿದ್ದರೂ ಅವನು ಕತ್ತಲಲ್ಲಿ ದಾರಿ ತಪ್ಪಲಿಲ್ಲ. ಗುಡಿಯ ಹಿಂಭಾಗದಲ್ಲಿದ್ದ  ಬೀಗ ಹಾಕಿದ ಕಲ್ಲಿನ ಬಾಗಿಲ ಬಳಿ ನಿಂತು, “ಅವಳು ಅಳುತ್ತಿದ್ದಾಳೆ,” ಎಂದನು.
“ಯಾರು?”
“ನೂಲು ಹಿಡಿದ ಹುಡುಗಿ. ಅವಳ ಕೈಯಲ್ಲಿ ರಕ್ತ ಇದೆ.”

ಅಷ್ಟರಲ್ಲಿ ನೆಲದ ಕೆಳಗಿಂದ ಗಂಟೆಯ ಸದ್ದು ಕೇಳಿತು. ಪಲ್ಲವಿ ಹೆದರಿ ಬಸವನ ಕೈ ಹಿಡಿದಳು. ಅವನ ಅಂಗೈಯಲ್ಲಿ ಅರ್ಧಚಂದ್ರದ ಆಕಾರದ ನೀಲಿ ಗುರುತು ಕಾಣಿಸಿತು. ಮದುವೆಗೆ ಮೊದಲು ಆ ಗುರುತು ಇರಲಿಲ್ಲ. ಕೂಡಲೇ ಅವಳು ಅಮ್ಮನ ಮನೆಯಿಂದ ತಾನು ತಂದಿದ್ದ  ಅಜ್ಜಿಯ ಚಂದನದ ಪೆಟ್ಟಿಗೆಯನ್ನು ತಂದಳು. ಹುಣ್ಣಿಮೆಯ ಬೆಳಕಿನಲ್ಲಿ ಆ ಬೆಳ್ಳಿನೂಲು ನೀಲಿಯಾಗಿ ಹೊಳೆಯಿತು. ದಾರದ ಒಂದು ತುದಿ ಗಾಳಿಯಲ್ಲಿ ತೇಲಿ ಬಸವನ ಅಂಗೈಯಲ್ಲಿದ್ದ ಗುರುತಿನ ಕಡೆಗೆ ಚಾಚಿತು. ಬಸವ ಅದನ್ನು ಮುಟ್ಟಿದ ಕ್ಷಣ ಅವನ ಕಣ್ಣು ಮುಚ್ಚಿತು.
“ನಂದಿನಿ... ಬಾಗಿಲು ತೆಗೆಯಬೇಡ...” ಎಂದು ಅವನು ಅಪರಿಚಿತ ಧ್ವನಿಯಲ್ಲಿ ಹೇಳಿದ.
ಪಲ್ಲವಿ ಬೆಚ್ಚಿ ದಾರವನ್ನು ಹಿಂದಕ್ಕೆ ಎಳೆದಳು. ಬಸವ ಎಚ್ಚರಗೊಂಡು, “ನನಗೆ ನಿದ್ದೆ ಬಂದಿತ್ತಾ?” ಎಂದು ಸಹಜವಾಗಿ ಕೇಳಿದ.

ಅಜ್ಜಿ ಬರೆದಿದ್ದ ಆ ಕಾಗದದ ಹಿಂಭಾಗದಲ್ಲಿ ಇನ್ನೂ ಕೆಲವು ಅಕ್ಷರಗಳಿದ್ದವು. ದೀಪದ ಶಾಖಕ್ಕೆ ಹಿಡಿದಾಗ ಅವು ಸ್ಪಷ್ಟವಾದವು: “ಏಳು ತಲೆಮಾರುಗಳ ಹಿಂದೆ ದೊಡ್ಡ ಮನೆಯ ಉತ್ತರಾಧಿಕಾರಿಯೊಬ್ಬನು ದೇವಾಲಯದ ಹೊಲಿಗೆಗಾರ್ತಿ ನಂದಿನಿಗೆ ಮದುವೆಯ ಮಾತು ಕೊಟ್ಟು ಮೋಸ ಮಾಡಿದ. ಅವಳು ದೇವರ ಉತ್ಸವದ ಧ್ವಜ ಹೊಲಿಯುವಾಗಲೇ ಪ್ರಾಣಬಿಟ್ಟಳು. ಅವಳ ಕೊನೆಯ ಉಸಿರು ಬೆಳ್ಳಿನೂಲಿನಲ್ಲಿ ಸೇರಿತು. ಕ್ಷಮೆ ಇಲ್ಲದ ಬಂಧ ಪ್ರತಿ ತಲೆಮಾರಿನ ಒಬ್ಬ ನಿರಪರಾಧಿಯ ಮನಸ್ಸನ್ನು ಮಂಜಾಗಿಸಿ, ದೇಹವನ್ನು ನಡುಗಿಸುತ್ತದೆ. ಅದನ್ನು ಬಿಡಿಸುವುದು ಮದುವೆಯಲ್ಲ; ಯಾರನ್ನೂ ಬದಲಾಯಿಸುವ ಆಸೆಯಿಲ್ಲದೆ ಒಪ್ಪಿಕೊಳ್ಳುವ ಪ್ರೀತಿ. ಅಪೂರ್ಣ ಧ್ವಜ ಪೂರ್ಣಗೊಂಡು ನೆಲದ ಗಂಟೆ ಮೊಳಗಿದಾಗ ಬಂಧ ಸಡಿಲವಾಗುತ್ತದೆ.”

ಪಲ್ಲವಿ ಬಹಳ ಹೊತ್ತು ಮೌನವಾಗಿ ಕುಳಿತಳು. ಇದು ಅಜ್ಜಿ ಹೆಣೆದ ಕಥೆಯೋ, ನಿಜವಾದ ಶಾಪವೋ ಗೊತ್ತಿರಲಿಲ್ಲ. ಆದರೆ ದೇವಾಲಯದ ನೆಲದೊಳಗಿನ ಗಂಟೆ ಮತ್ತು ಬಸವನ ಬಾಯಿಂದ ಬಂದ “ನಂದಿನಿ” ಎಂಬ ಹೆಸರು ಅವಳನ್ನು ಕಾಡಿತು.

*** 

ಮರುದಿನ, ಅವಳು ಗೌರಮ್ಮನನ್ನು ಕೇಳಿದಳು. ಗೌರಮ್ಮ ಮೊದಲು ತಪ್ಪಿಸಿಕೊಂಡರೂ, ಕೊನೆಗೆ ಮನೆಯ ಹಳೆಯ ದಾಖಲೆ ಕೋಣೆಯಿಂದ ಒಂದು ಚಿತ್ರ ತಂದುಕೊಟ್ಟರು. ಚಿತ್ರದಲ್ಲಿ ಅರ್ಧ ಹೊಲಿದ ಕೆಂಪು ಧ್ವಜ ಹಿಡಿದ ಯುವತಿ ಇದ್ದಳು. ಕೆಳಗೆ “ನಂದಿನಿ—ದೇವರ ಸೇವಕಿ” ಎಂದು ಬರೆದಿತ್ತು. ಅವಳ ಕಣ್ಣುಗಳು ಪಲ್ಲವಿಯ ಕಣ್ಣುಗಳನ್ನು ಹೋಲುತ್ತಿದ್ದವು. 
“ನಿನ್ನ ಅಜ್ಜಿ ಸಾಯುವ ಮೊದಲು ಈ ಮನೆಗೆ ಬಂದಿದ್ದಳು,” ಎಂದರು ಗೌರಮ್ಮ. “ನಂದಿನಿಯ ಕಥೆ ಮುಗಿಯಬೇಕಾದರೆ ಅವಳ ಮೊಮ್ಮಗಳ ವಂಶದ ಹುಡುಗಿ ಬರಬೇಕು ಎಂದಿದ್ದಳು. ಅದಕ್ಕೇ ನಿನ್ನನ್ನು ನೋಡಿದಾಗ ನನಗೆ ಏನೋ ಅನಿಸಿತು. ಆದರೆ ಗೌಡರಿಗೆ ಹೇಳಲು ಧೈರ್ಯವಾಗಲಿಲ್ಲ.”
ಪಲ್ಲವಿಗೆ ಕೋಪ ಬಂತು. “ಹಾಗಾದರೆ ನನ್ನನ್ನು ಸೊಸೆಯಾಗಿ ಅಲ್ಲ, ಶಾಪ ಬಿಡಿಸುವ ಸಾಧನವಾಗಿ ತಂದಿರಾ?”
ಗೌರಮ್ಮ ತಲೆತಗ್ಗಿಸಿದರು. “ನಾವು ತಪ್ಪು ಮಾಡಿದ್ದೇವೆ. ನಮ್ಮನ್ನು ಕ್ಷಮಿಸಿಬಿಡು ತಾಯಿ.”

ಆ ರಾತ್ರಿ ಪಲ್ಲವಿ ಅಮ್ಮನ ಮನೆಗೆ ಹೊರಡಲು ಬಟ್ಟೆ ಜೋಡಿಸಿದಳು. ಬಸವ ಬಾಗಿಲಲ್ಲಿ ನಿಂತು ನೋಡುತ್ತಿದ್ದ.
“ನೀನು ಹೋಗುತ್ತೀಯಾ?”
“ಹೌದು. ಇಲ್ಲಿ ಎಲ್ಲರೂ ನನಗೆ ಸತ್ಯ ಮುಚ್ಚಿಟ್ಟಿದ್ದಾರೆ.”
“ನಾನು ಮುಚ್ಚಿಟ್ಟಿಲ್ಲ. ನನಗೆ ಸತ್ಯವೇ ಗೊತ್ತಿಲ್ಲ,” ಎಂದನು.
ಆ ಒಂದೇ ಮಾತು ಅವಳ ಹೆಜ್ಜೆ ನಿಲ್ಲಿಸಿತು. ದೊಡ್ಡವರ ಸ್ವಾರ್ಥದ ಶಿಕ್ಷೆಯನ್ನು ಬಸವನಿಗೆ ಕೊಡುವುದು ಸರಿಯಲ್ಲ. ಆದರೆ ತನ್ನ ಆತ್ಮಗೌರವವನ್ನೂ ಬಿಡಲಾಗದು. ಮರುದಿನ ಎಲ್ಲರ ಎದುರು ನಿಂತು ಹೇಳಿದಳು: “ನಾನು ಈ ಮನೆಯಲ್ಲಿ ಉಳಿಯುವುದು ಬಸವನಿಗಾಗಿ, ನನ್ನ ನಿರ್ಧಾರದಿಂದ. ನನ್ನನ್ನು ಶಾಪ ಪರಿಹರಿಸುವ ವಸ್ತುವೆಂದು ನೋಡುವವರಿಗಾಗಿ ಅಲ್ಲ. ಇನ್ನು ಮುಂದೆ ಈ ಮನೆಯ ಪ್ರತಿಯೊಂದು ನಿರ್ಧಾರದಲ್ಲೂ ನನಗೆ ಮಾತಿರಬೇಕು. ಇಲ್ಲದಿದ್ದರೆ ಬಸವನನ್ನೂ ಕರೆದುಕೊಂಡು ಹೋಗುತ್ತೇನೆ.” 

ಶಂಕರೇಗೌಡ ಮೊದಲ ಬಾರಿಗೆ ಬಡಮನೆಯ ಹುಡುಗಿಯ ಎದುರು ಉತ್ತರಿಸಲಾಗದೆ ನಿಂತರು. ಬಸವ ಪಲ್ಲವಿಯ ಪಕ್ಕ ಬಂದು ನಿಂತ. “ನಾನು ನಿಧಾನವಾಗಿ ನಡೆಯುತ್ತೇನೆ. ಅವಳು ನನ್ನ ಜೊತೆ ಬರುತ್ತಾಳೆ,” ಎಂದನು. 

ದಿನಗಳು ಸಾಗಿದವು. ಔಷಧಿ ಮತ್ತು ಕ್ರಮಬದ್ಧ ಜೀವನದಿಂದ ಮೂರ್ಛೆಯ ಪ್ರಮಾಣ ಕಡಿಮೆಯಾಗತೊಡಗಿತು. ಮೊದಲು ವಾರಕ್ಕೊಮ್ಮೆ ಬರುತ್ತಿದ್ದದ್ದು ತಿಂಗಳಿಗೆ ಒಮ್ಮೆ ಆಯಿತು. ಪಲ್ಲವಿ ಬಸವನಿಗೆ ಅಕ್ಷರಗಳ ಬದಲು ಬಣ್ಣ ಮತ್ತು ಚಿತ್ರಗಳಿಂದ ಕೆಲಸ ಕಲಿಸಿದಳು. ಅವನಿಗೆ ವಿನ್ಯಾಸಗಳನ್ನು ನೆನಪಿಡುವ ಅಪೂರ್ವ ಸಾಮರ್ಥ್ಯವಿದೆ ಎಂಬುದು ಅವಳಿಗೆ ಗೊತ್ತಾಯಿತು. ಒಮ್ಮೆ ಕಂಡ ಹೂವಿನ ವಿನ್ಯಾಸವನ್ನು ಅವನು ತಿಂಗಳ ನಂತರವೂ ಸರಿಯಾಗಿ ಬಿಡಿಸುತ್ತಿದ್ದ. ಬಣ್ಣಗಳ ಹೊಂದಾಣಿಕೆಯಲ್ಲಿ ಅವನ ಕಣ್ಣು ಯಾರಿಗೂ ಇರಲಿಲ್ಲ. 
“ಬಸವ ದಡ್ಡನಲ್ಲ. ಅವನ ಬುದ್ಧಿ ಹೋಗುವ ದಾರಿ ನಮ್ಮದಕ್ಕಿಂತ ಬೇರೆ,” ಎಂದು ಪಲ್ಲವಿ ಎಲ್ಲರಿಗೂ ಹೇಳುತ್ತಿದ್ದಳು.

ಇಬ್ಬರೂ ಸೇರಿ ಬಟ್ಟೆ ಚೀಲ, ಮಕ್ಕಳ ಅಂಗಿ ಮತ್ತು ದಾವಣಿಗಳ ಮೇಲೆ ಹೊಸ ವಿನ್ಯಾಸಗಳನ್ನು ಮಾಡತೊಡಗಿದರು. ಪಲ್ಲವಿ ಅಳತೆ ಮತ್ತು ಹೊಲಿಗೆ ನೋಡಿಕೊಂಡರೆ, ಬಸವ ಬಣ್ಣ ಮತ್ತು ಅಲಂಕಾರ ಆಯ್ಕೆ ಮಾಡುತ್ತಿದ್ದ. “ಪಲ್ಲವಿ–ಬಸವ ನೂಲಿನ ಮನೆ” ಎಂಬ ಅವರ ಪುಟ್ಟ ಕೆಲಸದ ಕೋಣೆ ಊರಿನ ಹೆಂಗಸರಿಗೆ ಉದ್ಯೋಗ ನೀಡಿತು. ಪಾಂಡುರಂಗನ ಸಾಲವನ್ನು ಪಲ್ಲವಿ ಶಂಕರೇಗೌಡರ ಹಣದಿಂದಲ್ಲ, ತನ್ನ ಸಂಪಾದನೆಯಿಂದ ತೀರಿಸಿದಳು. ಸುಮಂತನ ಓದಿನ ಖರ್ಚನ್ನೂ ತಾನೇ ನೋಡಿಕೊಂಡಳು.

***

 ಆದರೂ ಪ್ರತಿ ಹುಣ್ಣಿಮೆಯ ರಾತ್ರಿ ಬಸವನ ಕೈಯಲ್ಲಿದ್ದ ಗುರುತು ನೀಲಿಬಣ್ಣದಲ್ಲಿ ಹೊಳೆಯುತ್ತಿತ್ತು. ನೆಲದ ಗಂಟೆ ಅವನನ್ನು ಕರೆಯುತ್ತಿತ್ತು. ಅಪೂರ್ಣ ಧ್ವಜ ಇನ್ನೂ ಎಲ್ಲಿದೆ ಎಂಬುದು ಗೊತ್ತಿರಲಿಲ್ಲ.

ಒಂದು ದಿನ ಸುಮಂತ ಹಳೆಯ ದೇವಾಲಯದ ಕೆರೆಯಲ್ಲಿ ಆಟವಾಡುವಾಗ ಕಲ್ಲಿನ ಮೆಟ್ಟಿಲ ಕೆಳಗೆ ತಾಮ್ರದ ಕೊಳವೆಯೊಂದು ಕಂಡ. ಅದರೊಳಗೆ ಮಡಚಿಟ್ಟ ಹಳೆಯ ಬಟ್ಟೆಯ ನಕ್ಷೆ ಇತ್ತು. ನಕ್ಷೆಯಲ್ಲಿ ದೇವಾಲಯದ ಗರ್ಭಗುಡಿಯ ಕೆಳಗೆ ಒಂದು ಕೋಣೆ ಗುರುತಿಸಲಾಗಿತ್ತು. ಅದರ ಮೇಲೆ ಬೆಳ್ಳಿನೂಲಿನಿಂದ ಅರ್ಧಚಂದ್ರ ಹೊಲಿಯಲಾಗಿತ್ತು. 
ಆ ಕೂಡಲೇ ಅದನ್ನು ಹಿಡಿದುಕೊಂಡು, ಸುಮಂತ ಪಲ್ಲವಿಗೆ ಅದನ್ನು ಕೊಟ್ಟು  “ಅಕ್ಕಾ, ಇದು ನಿನ್ನ ಪೆಟ್ಟಿಗೆಯ ಗುರುತಿನ ಹಾಗೆಯೇ ಇದೆ!” ಎಂದ.

ದೇವಾಲಯದ ಹಿರಿಯ ಅರ್ಚಕರ ಅನುಮತಿಯಿಂದ ಶಂಕರೇಗೌಡ, ಪಲ್ಲವಿ, ಬಸವ ಮತ್ತು ಸುಮಂತ ಹಿಂಬಾಗದ ಕಲ್ಲಿನ ಬಾಗಿಲು ತೆರೆದರು. ಕೆಳಗೆ ಇಳಿಯುವ ಮೆಟ್ಟಿಲುಗಳು ಇದ್ದವು. ಗಾಳಿ ತಣ್ಣಗಿತ್ತು. ಗೋಡೆಯ ಮೇಲೆ ದೀಪ ಹಿಡಿದ ಮಹಿಳೆಯರ ಚಿತ್ರಗಳು. ಕೊನೆಯ ಕೋಣೆಯಲ್ಲಿ ದೊಡ್ಡ ಕಂಚಿನ ಗಂಟೆ ನೆಲದೊಳಗೆ ಅರ್ಧ ಮುಳುಗಿತ್ತು. ಅದರ ಪಕ್ಕದ ಕಲ್ಲಿನ ಪೆಟ್ಟಿಗೆಯಲ್ಲಿ ಕಾಲದಿಂದ ಬಣ್ಣ ಮಾಸಿದ ಅರ್ಧ ಹೊಲಿದ ಕೆಂಪು ಧ್ವಜವಿತ್ತು. 

ಪಲ್ಲವಿ ಅದನ್ನು ಮುಟ್ಟಿದಾಗ ಕೋಣೆಯೊಳಗೆ ಹೆಣ್ಣಿನ ಅಳುವಿನ ಧ್ವನಿ ಹರಡಿತು. ಬಸವ ನೆಲಕ್ಕುರುಳಿದ. ಅವನಿಗೆ ಹಿಂದೆಂದಿಗಿಂತ ತೀವ್ರವಾದ ಮೂರ್ಛೆ ಆರಂಭವಾಯಿತು. ಪಲ್ಲವಿ ಅವನನ್ನು ಸುರಕ್ಷಿತವಾಗಿ ಬದಿಗೆ ಮಲಗಿಸಿ, ಸುಮಂತನಿಗೆ ವೈದ್ಯರನ್ನು ಕರೆಸಲು ಹೇಳಿದಳು. ಕೈಯಲ್ಲಿದ್ದ ಬೆಳ್ಳಿನೂಲು ತಾನೇ ಬಿಚ್ಚಿಕೊಂಡು ಧ್ವಜದ ಕಡೆ ಸರಿಯತೊಡಗಿತು. ಪಲ್ಲವಿಗೆ “ಧ್ವಜ ಪೂರ್ಣಮಾಡು...” ಎಂಬ ಪಿಸುಮಾತು ಕೇಳಿಸಿತು.

ಪಲ್ಲವಿ ಸೂಜಿ ಹಿಡಿದಳು. ಆದರೆ ಅಜ್ಜಿಯ ಎಚ್ಚರಿಕೆ ನೆನಪಾಯಿತು — ಸ್ವಾರ್ಥಕ್ಕಾಗಿ ಬಳಸಿದರೆ ಬಂಧವನ್ನೇ ಹರಿದುಬಿಡುತ್ತದೆ. ಬಸವ ಗುಣವಾಗಲಿ ಎಂಬುದು ಅವಳ ಆಸೆ. ಆದರೆ ಅವನು ಬದಲಾದಾಗ ಮಾತ್ರ ತನ್ನ ಬದುಕು ಸುಂದರವಾಗುತ್ತದೆ ಎಂಬ ಸ್ವಾರ್ಥವೂ ಅದರೊಳಗೆ ಸೇರಿದೆಯೇ? 
ಅವಳು ಸೂಜಿಯನ್ನು ಕೆಳಗಿಟ್ಟಳು.

“ನಂದಿನಿ, ನೀನು ಯಾರೇ ಆಗಿದ್ದರೂ ಕೇಳು. ಬಸವ ಗುಣವಾಗಲೆಂದು ಮಾತ್ರ ನಾನು ಇದನ್ನು ಮಾಡುವುದಿಲ್ಲ. ಅವನು ಈಗಿರುವಂತೆಯೇ ನನಗೆ ಅಪೂರ್ಣನಲ್ಲ. ಅವನ ದೇಹದ ನೋವು ಕಡಿಮೆಯಾಗಲಿ; ಆದರೆ ಅವನ ಮುಗ್ಧತೆಯನ್ನು ಕಿತ್ತುಕೊಂಡು ಬೇರೆ ಮನುಷ್ಯನನ್ನಾಗಿ ಮಾಡುವ ವರ ನನಗೆ ಬೇಡ. ನಿನಗೆ ನ್ಯಾಯ ಸಿಗಬೇಕಾದರೆ, ಮೊದಲು ನಿನಗೆ ಮಾಡಿದ ಅನ್ಯಾಯವನ್ನು ಈ ಮನೆಯವರು ಒಪ್ಪಿಕೊಳ್ಳಬೇಕು,” ಎಂದಳು.
ಶಂಕರೇಗೌಡರ ಕಡೆ ತಿರುಗಿ, “ನಿಮ್ಮ ಪೂರ್ವಜರ ತಪ್ಪಿಗೆ ಬಸವ ಶಿಕ್ಷೆ ಅನುಭವಿಸಬೇಕಿಲ್ಲ. ಆದರೆ ಆ ತಪ್ಪನ್ನು ಮರೆಮಾಡಿ ನಮ್ಮಿಬ್ಬರ ಬದುಕನ್ನು ಬಳಸಿಕೊಳ್ಳಲು ನಿಮಗೂ ಹಕ್ಕಿಲ್ಲ,” ಎಂದಳು.

ಶಂಕರೇಗೌಡರ ಅಹಂಕಾರ ಮೊದಲ ಬಾರಿಗೆ ಸಂಪೂರ್ಣ ಕುಸಿಯಿತು. ಗಂಟೆಯ ಮುಂದೆ ಮಂಡಿಯೂರಿ, “ನಮ್ಮ ಮನೆಯ ಹೆಸರನ್ನು ಉಳಿಸಲು ಒಬ್ಬ ಹೆಣ್ಣಿನ ಹೆಸರನ್ನು ಅಳಿಸಿದ್ದೇವೆ. ಅವಳ ಶ್ರಮವನ್ನು ನಮ್ಮ ಗೌರವವೆಂದು ಮಾಡಿಕೊಂಡಿದ್ದೇವೆ. ಅವಳಿಗೆ ನಡೆದ ಅನ್ಯಾಯಕ್ಕಾಗಿ ಕ್ಷಮೆ ಕೇಳುತ್ತೇನೆ. ಇನ್ನು ಮುಂದೆ ಈ ದೇವಾಲಯದ ಉತ್ಸವದ ಧ್ವಜವನ್ನು ನಂದಿನಿಯ ಹೆಸರಿನಲ್ಲಿ ಏರಿಸುತ್ತೇವೆ. ನಮ್ಮ ಜಮೀನಿನ ಒಂದು ಭಾಗವನ್ನು ವಿಶೇಷ ಅಗತ್ಯವಿರುವ ಮಕ್ಕಳ ಕಲಿಕೆ ಮತ್ತು ಆರೈಕೆಗೆ ಕೊಡುತ್ತೇನೆ,” ಎಂದರು. 

ಅಷ್ಟರಲ್ಲಿ ಬಸವನ ಸೆಳೆತ ನಿಧಾನವಾಗಿ ನಿಂತಿತು. ಪಲ್ಲವಿ ಅವನ ಉಸಿರಾಟ ಸರಿಯಾಗಿದೆಯೇ ಎಂದು ನೋಡಿದಳು. ಅವನು ಕಣ್ಣು ತೆರೆದು, “ನಾನು ಬೀಳಲಿಲ್ಲ. ನೆಲವೇ ನನ್ನನ್ನು ಹಿಡಿಯಿತು,” ಎಂದನು.

ಪಲ್ಲವಿ ಕಣ್ಣೀರು ಒರೆಸಿಕೊಂಡು ನಕ್ಕಳು. ನಂತರ ಅಪೂರ್ಣ ಧ್ವಜವನ್ನು ಮಡಿಲಲ್ಲಿ ಇಟ್ಟುಕೊಂಡಳು. ಬೆಳ್ಳಿನೂಲನ್ನು ಸೂಜಿಗೆ ಪೋಣಿಸುವಾಗ ಅವಳ ಬೆರಳಿಗೆ ಸಣ್ಣ ಚುಚ್ಚು ಬಿತ್ತು. ಒಂದು ಹನಿ ರಕ್ತ ನೂಲಿಗೆ ತಾಗಿತು. ನೀಲಿ ಬೆಳಕು ಕೋಣೆಯೆಲ್ಲ ತುಂಬಿತು. ಗೋಡೆಯ ಚಿತ್ರಗಳಲ್ಲಿದ್ದ ದೀಪಗಳು ಒಂದೊಂದಾಗಿ ಹೊತ್ತಿಕೊಂಡವು. ಪಲ್ಲವಿ ಹೊಲಿಯುತ್ತಿದ್ದ ಪ್ರತಿಯೊಂದು ಹೊಲಿಗೆಯೊಂದಿಗೆ ದೂರದ ಕಾಲದಿಂದ ಬಂದ ಹೆಣ್ಣಿನ ಹಾಡೊಂದು ಕೇಳಿಸಿತು. ಬಸವ ಅವಳ ಪಕ್ಕದಲ್ಲಿ ಕುಳಿತು ಬಣ್ಣದ ತುಂಡುಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿದ. ಕೊನೆಯ ಹೊಲಿಗೆ ಮುಗಿದ ಕ್ಷಣದಲ್ಲಿ ನೆಲದಲ್ಲಿ ಮುಳುಗಿದ್ದ ಗಂಟೆ ತಾನೇ ಎದ್ದು ಒಂದೇ ಬಾರಿ ಮೊಳಗಿತು. 

ಆ ಸದ್ದು ಚಂದನಹಳ್ಳಿಯ ಪ್ರತಿಯೊಂದು ಮನೆಯಲ್ಲೂ ಕೇಳಿಸಿತು. ಹೊರಗೆ ಅಮಾವಾಸ್ಯೆಯ ರಾತ್ರಿ ಇದ್ದರೂ, ದೇವಾಲಯದ ಮೇಲೆ ಪೂರ್ಣಚಂದ್ರ ಕಾಣಿಸಿಕೊಂಡನೆಂದು ಊರವರು ನಂತರ ಹೇಳಿಕೊಂಡರು. ಕೆಲವರು ಅದನ್ನು ದೇವರ ಪವಾಡ ಎಂದರು. ಕೆಲವರು ಕಣ್ಣಿನ ಭ್ರಮೆ ಎಂದರು. ಡಾ. ಅನಿರುದ್ಧ ಮಾತ್ರ, “ಅವನ ಚಿಕಿತ್ಸೆಗೆ ಈಗ ಚೆನ್ನಾಗಿ ಸ್ಪಂದನೆ ಸಿಗುತ್ತಿದೆ. ಔಷಧಿ ಮುಂದುವರಿಸಿ,” ಎಂದರು.

*** 

ಅದಾದ ಮೇಲೆ ಬಸವನಿಗೆ ಮೂರ್ಛೆ ತಪ್ಪಲೆ ಇಲ್ಲ ಎಂದಲ್ಲ. ಆರಂಭದ ಕೆಲವು ತಿಂಗಳುಗಳಲ್ಲಿ ಎರಡು ಬಾರಿ ಸಣ್ಣ ಸೆಳೆತ ಬಂತು. ಪಲ್ಲವಿ ಹೆದರಲಿಲ್ಲ. ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಬದಲಾಯಿಸಿದಳು. ಸುಮಾರು ಒಂದು ವರ್ಷದೊಳಗೆ ಅವನ ಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂತು. ಪರೀಕ್ಷೆಗಳ ಫಲಿತಾಂಶವೂ ಉತ್ತಮವಾಗಿತ್ತು. ವೈದ್ಯರ ಸಲಹೆಯಂತೆ ಔಷಧಿ ಮುಂದುವರಿಯಿತು. ಊರವರು ಅದನ್ನು ಪಲ್ಲವಿಯ ಭಾಗ್ಯ ಎಂದರು; ಶಂಕರೇಗೌಡರು ದೇವಾಲಯದ ಗಂಟೆಯ ಪವಾಡ ಎಂದರು. ಪಲ್ಲವಿಗೆ ಮಾತ್ರ ಸತ್ಯ ಎರಡರ ನಡುವೆ ಇದೆ ಅನಿಸಿತು—ವೈದ್ಯರ ಜ್ಞಾನ, ನಿಯಮಿತ ಆರೈಕೆ, ಬಸವನ ಪ್ರಯತ್ನ ಮತ್ತು ಯಾವುದೋ ಕಾಣದ ಕರುಣೆ ಸೇರಿ ಅವನ ಬದುಕನ್ನು ಹಿಡಿದಿದ್ದವು.

ಬಸವನ ಪೆದ್ದುತನ ಎಂದು ಊರು ಕರೆಯುತ್ತಿದ್ದ ಸ್ವಭಾವ ಮಾತ್ರ ಹಾಗೆಯೇ ಉಳಿಯಿತು. ಅವನಿಗೆ ಲೆಕ್ಕದಲ್ಲಿ ತಪ್ಪಾಗುತ್ತಿತ್ತು. ಗಾದೆಮಾತುಗಳ ಒಳಾರ್ಥ ತಿಳಿಯುತ್ತಿರಲಿಲ್ಲ. ಯಾರಾದರೂ “ನಾಳೆ ಸೂರ್ಯ ಪಶ್ಚಿಮದಲ್ಲಿ ಹುಟ್ಟುತ್ತಾನೆ” ಎಂದರೆ, ಬೆಳಗ್ಗೆ ನಿಜವಾಗಿಯೂ ಪಶ್ಚಿಮದ ಕಿಟಕಿಯ ಬಳಿ ಕಾಯುತ್ತಿದ್ದ. ಆದರೆ ಪಲ್ಲವಿ ಅವನನ್ನು ಬದಲಾಯಿಸಲು ಯತ್ನಿಸಲಿಲ್ಲ. ಹಣದ ಲೆಕ್ಕಕ್ಕೆ ನಂಬಿಗಸ್ತರನ್ನು ನೇಮಿಸಿದಳು; ಅವನಿಗೆ ಚೆನ್ನಾಗಿ ಬರುವ ವಿನ್ಯಾಸದ ಕೆಲಸವನ್ನು ಕೊಟ್ಟಳು. 
ಒಮ್ಮೆ ಒಬ್ಬ ಸಂಬಂಧಿ, “ಏನು ಪಲ್ಲವಿ, ನಿನ್ನ ಗಂಡ ಇನ್ನೂ ದಡ್ಡನೇ?” ಎಂದು ಹಾಸ್ಯ ಮಾಡಿದ.
ತಕ್ಷಣ ಬಸವ, “ನಾನು ದಡ್ಡನಾದರೆ ಪಲ್ಲವಿ ಜಾಣೆ. ಮನೆಯಲ್ಲಿ ಒಬ್ಬ ಜಾಣ ಇದ್ದರೆ ಸಾಕಲ್ಲವಾ? ನಿಮ್ಮ ಮನೆಯಲ್ಲಿ ಎಷ್ಟು ಜನ ಜಾಣರಿದ್ದಾರೆ?” ಎಂದು ಕೇಳಿದ. ಸುತ್ತಲಿದ್ದವರು ಜೋರಾಗಿ ನಕ್ಕರು. ಆ ವ್ಯಕ್ತಿ ಮಾತ್ರ ಮುಖ ತಗ್ಗಿಸಿಕೊಂಡು ಹೊರಟ.

ಪಲ್ಲವಿ ಓದನ್ನು ಮುಂದುವರಿಸಿ ಮನೋವಿಜ್ಞಾನ ಮತ್ತು ವಿಶೇಷ ಶಿಕ್ಷಣದಲ್ಲಿ ಪದವಿ ಪಡೆದಳು. ಶಂಕರೇಗೌಡರು ಮಾತು ಕೊಟ್ಟಂತೆ ವಿಶೇಷ ಮಕ್ಕಳ ಕಲಿಕೆ ಹಾಗೂ ಆರೈಕೆಗೆ ಜಮೀನು ನೀಡಿದರು. ಅಲ್ಲಿ “ನಂದಿನಿ ಬದುಕಿನ ಬೆಳ್ಳಿ ದಾರ” ಎಂಬ ಕೇಂದ್ರ ಆರಂಭವಾಯಿತು. ಕಲಿಕೆಯಲ್ಲಿ ನಿಧಾನವಾಗಿರುವ ಮಕ್ಕಳು, ಮೂರ್ಛೆರೋಗದಿಂದ ಶಾಲೆ ಬಿಟ್ಟವರು, ಬೌದ್ಧಿಕ ವಿಶೇಷತೆ ಹೊಂದಿದ ಯುವಕರು ಅಲ್ಲಿ ಓದು, ಚಿತ್ರ, ಹೊಲಿಗೆ, ತೋಟಗಾರಿಕೆ ಮತ್ತು ಜೀವನಕೌಶಲ್ಯ ಕಲಿಯತೊಡಗಿದರು. ಯಾರನ್ನೂ “ಪೆದ್ದ” ಎಂದು ಕರೆಯಲು ಅಲ್ಲಿ ಅವಕಾಶವಿರಲಿಲ್ಲ. ಪ್ರತಿಯೊಬ್ಬರ ಹೆಸರಿನ ಮುಂದೆ ಅವರ ಸಾಮರ್ಥ್ಯವನ್ನು ಬರೆಯಲಾಗುತ್ತಿತ್ತು.

ಸುಮಂತ ಚೆನ್ನಾಗಿ ಓದಿ ವೈದ್ಯನಾದ. ನರರೋಗದಲ್ಲಿ ಪರಿಣತಿ ಪಡೆದು ಊರಿಗೆ ಮರಳಿದ. “ನನ್ನ ಶಾಲಾ ಶುಲ್ಕ ಕಟ್ಟಿದ ಅಕ್ಕನ ಸಾಲ ತೀರಿಸಲು ಬಂದಿದ್ದೇನೆ,” ಎಂದು ಕೇಂದ್ರದಲ್ಲೇ ಉಚಿತ ಆರೋಗ್ಯ ಶಿಬಿರ ನಡೆಸುತ್ತಿದ್ದ. ಪಾಂಡುರಂಗ ಮತ್ತು ಸುಜಾತ ಹೊಸ ಮನೆಯಲ್ಲಿ ವಾಸಿಸಿದರೂ ಹಳೆಯ ಹೊಲಿಗೆ ಯಂತ್ರವನ್ನು ಎಸೆಯಲಿಲ್ಲ. “ಈ ಯಂತ್ರವೇ ನಮ್ಮ ಮನೆಯ ಮೊದಲ ಸಂಪಾದಕ,” ಎಂದು ಅದನ್ನು ಜೋಪಾನವಾಗಿಟ್ಟರು.

*** 

ವರ್ಷಗಳು ಕಳೆದವು. 

“ನಂದಿನಿ ಬದುಕಿನ ಬೆಳ್ಳಿದಾರ” ಕೇಂದ್ರ ಈಗ ಚಂದನಹಳ್ಳಿಯ ಹೆಮ್ಮೆಯಾಗಿತ್ತು. ಒಮ್ಮೆ ಕಲಿಯಲು ಅಸಮರ್ಥರೆಂದು ಶಾಲೆಯಿಂದ ಹೊರಗಿಡಲ್ಪಟ್ಟ ಮಕ್ಕಳು ಅಲ್ಲಿ ಚಿತ್ರ ಬಿಡಿಸುತ್ತಿದ್ದರು, ಬಟ್ಟೆ ಹೊಲಿಯುತ್ತಿದ್ದರು, ಕೈತೋಟ ಮಾಡುತ್ತಿದ್ದರು. ಮಾತನಾಡಲು ಕಷ್ಟಪಡುವ ಮಕ್ಕಳು ಬಣ್ಣಗಳ ಮೂಲಕ ತಮ್ಮ ಮನಸ್ಸನ್ನು ಹೇಳಿಕೊಳ್ಳುತ್ತಿದ್ದರು. ಲೆಕ್ಕದಲ್ಲಿ ಹಿಂದೆ ಉಳಿದವರು ಕೈಮಗ್ಗದಲ್ಲಿ ಅದ್ಭುತ ವಿನ್ಯಾಸಗಳನ್ನು ಮೂಡಿಸುತ್ತಿದ್ದರು. ಪ್ರತಿಯೊಂದು ಮಗುವಿನ ಹೆಸರಿನ ಮುಂದೆ ಅದರ ದೌರ್ಬಲ್ಯವನ್ನಲ್ಲ, ಸಾಮರ್ಥ್ಯವನ್ನು ಬರೆಯಲಾಗುತ್ತಿತ್ತು.
“ಗೌರಿ—ಹಾಡಿನ ಮೂಲಕ ಬೇಗ ಕಲಿಯುತ್ತಾಳೆ.”
“ಮಧು—ಚಿತ್ರಗಳನ್ನು ಒಮ್ಮೆ ನೋಡಿದರೆ ಮರೆಯುವುದಿಲ್ಲ.”
“ಚೇತನ—ಗಿಡಗಳ ಆರೈಕೆಯಲ್ಲಿ ನಿಪುಣ.”
“ರಾಘವ—ಮಾತು ಕಡಿಮೆ; ಆದರೆ ಕರುಣೆ ತುಂಬಿದವನು.”
ಆ ಹೆಸರುಗಳನ್ನು ಓದಿದಾಗಲೆಲ್ಲ ಪಲ್ಲವಿಗೆ ಬಸವ ನೆನಪಾಗುತ್ತಿದ್ದ. ಜನರು ಅವನ ಕೊರತೆಯನ್ನೇ ನೋಡುತ್ತಿದ್ದಾಗ, ಅವನೊಳಗಿನ ಬಣ್ಣಗಳ ಲೋಕವನ್ನು ಗುರುತಿಸಲು ತಾನು ಕೂಡ ಎಷ್ಟು ಸಮಯ ತೆಗೆದುಕೊಂಡಿದ್ದೆ ಎಂಬುದು ನೆನಪಾಗುತ್ತಿತ್ತು.

ಬಸವ ಈಗ ಕೇಂದ್ರದ ಮಕ್ಕಳಿಗೆ ಬಣ್ಣ ಮತ್ತು ವಿನ್ಯಾಸ ಕಲಿಸುತ್ತಿದ್ದ. ಅವನು ಇನ್ನೂ ದೊಡ್ಡ ಲೆಕ್ಕಗಳನ್ನು ತಪ್ಪಿಸುತ್ತಿದ್ದ. ಗಾದೆಮಾತುಗಳನ್ನು ನೇರಾರ್ಥದಲ್ಲಿ ಅರ್ಥಮಾಡಿಕೊಳ್ಳುತ್ತಿದ್ದ. ಕೆಲವೊಮ್ಮೆ ಹೇಳಿದ ಮಾತನ್ನು ಮರೆತು ಮತ್ತೊಮ್ಮೆ ಕೇಳುತ್ತಿದ್ದ. ಆದರೆ ಯಾವ ಮಗು ಯಾವ ಬಣ್ಣವನ್ನು ಇಷ್ಟಪಡುತ್ತದೆ, ಯಾರಿಗೆ ಯಾವ ಸದ್ದಿನಿಂದ ಹೆದರಿಕೆಯಾಗುತ್ತದೆ, ಯಾರಿಗೆ ಯಾವಾಗ ಸ್ವಲ್ಪ ಏಕಾಂತ ಬೇಕಾಗುತ್ತದೆ—ಇವೆಲ್ಲವನ್ನು ಅವನು ಯಾರಿಗಿಂತಲೂ ಬೇಗ ಗುರುತಿಸುತ್ತಿದ್ದ.

ಒಂದು ದಿನ ಕೇಂದ್ರಕ್ಕೆ ಹೊಸದಾಗಿ ಬಂದ ಬಾಲಕನೊಬ್ಬ ಮೂಲೆಯಲ್ಲಿ ಕುಳಿತು ಜೋರಾಗಿ ಅಳುತ್ತಿದ್ದ. ಯಾರೇ ಹತ್ತಿರ ಹೋದರೂ ಕೈಯಲ್ಲಿದ್ದ ವಸ್ತುಗಳನ್ನು ಎಸೆಯುತ್ತಿದ್ದ. ಶಿಕ್ಷಕಿಯರು ಅವನನ್ನು ಸಮಾಧಾನಪಡಿಸಲು ಸಾಧ್ಯವಾಗದೆ ಪಲ್ಲವಿಯನ್ನು ಕರೆದರು. 
ಬಸವ ಮಾತ್ರ ದೂರದಲ್ಲಿ ನಿಂತು ಸ್ವಲ್ಪ ಹೊತ್ತು ಅವನನ್ನು ನೋಡಿದ. ನಂತರ ಕೋಣೆಯಲ್ಲಿದ್ದ ಗಂಟೆಯನ್ನು ತೆಗೆದು ಹೊರಗಿಟ್ಟ. ಕಿಟಕಿಯ ಪರದೆಯನ್ನು ಎಳೆದು ಬೆಳಕನ್ನು ಕಡಿಮೆ ಮಾಡಿದ. ಬಾಲಕನ ಹತ್ತಿರ ಹೋಗದೆ, ಸ್ವಲ್ಪ ದೂರದಲ್ಲಿ ಕುಳಿತು ಎರಡು ನೀಲಿ ಬಟ್ಟೆಯ ತುಂಡುಗಳನ್ನು ನೆಲದ ಮೇಲೆ ಇಟ್ಟ.
ಬಾಲಕನ ಅಳು ನಿಧಾನವಾಗಿ ಕಡಿಮೆಯಾಯಿತು. ಸ್ವಲ್ಪ ಹೊತ್ತಿನ ನಂತರ ಅವನು ಬಸವನ ಬಳಿಗೆ ಬಂದು ಒಂದು ನೀಲಿ ಬಟ್ಟೆಯನ್ನು ಕೈಗೆತ್ತಿಕೊಂಡ.
“ಅವನಿಗೆ ಜನರ ಮೇಲಲ್ಲ, ಸದ್ದಿನ ಮೇಲೆ ಕೋಪ ಬಂದಿತ್ತು,” ಎಂದ ಬಸವ.

ಅದನ್ನು ನೋಡುತ್ತಿದ್ದ ಶಂಕರೇಗೌಡರ ಕಣ್ಣು ತೇವಗೊಂಡಿತು. ಹಿಂದೆ ಇದೇ ಮೊಮ್ಮಗನನ್ನು “ಏನೂ ತಿಳಿಯದವನು” ಎಂದುಕೊಂಡಿದ್ದ ನೆನಪು ಅವರನ್ನು ಒಳಗಿನಿಂದ ಚುಚ್ಚಿತು.
“ನಾವು ಬಸವನಿಗೆ ಬದುಕು ಕೊಡಲು ಪಲ್ಲವಿಯನ್ನು ಮನೆಗೆ ತಂದೆವು ಎಂದುಕೊಂಡಿದ್ದೆವು. ಆದರೆ ಅವನೊಳಗೆ ಇಷ್ಟೊಂದು ದೊಡ್ಡ ಬದುಕು ಮೊದಲೇ ಇತ್ತು. ಅದನ್ನು ನೋಡುವ ಕಣ್ಣು ನಮ್ಮಲ್ಲಿರಲಿಲ್ಲ,” ಎಂದರು.
ಪಲ್ಲವಿ ಮೃದುವಾಗಿ ನಕ್ಕಳು. “ಯಾರೂ ಯಾರಿಗೂ ಬದುಕನ್ನು ಕೊಡುವುದಿಲ್ಲ, ತಾತಯ್ಯ. ಕೆಲವೊಮ್ಮೆ ಒಬ್ಬರು ಮತ್ತೊಬ್ಬರ ಬದುಕಿನ ಮೇಲೆ ಬಿದ್ದಿರುವ ಪರದೆಯನ್ನು ಸರಿಸುತ್ತಾರೆ, ಅಷ್ಟೇ.”

***

ಅದೇ ವರ್ಷ ದೇವಾಲಯದ ಜಾತ್ರೆಯಲ್ಲಿ ನಂದಿನಿಯ ಹೆಸರಿನ ಧ್ವಜವನ್ನು ಏರಿಸುವ ದಿನ ಬಂತು. ಪಲ್ಲವಿ ಪೂರ್ಣಗೊಳಿಸಿದ್ದ ಹಳೆಯ ಧ್ವಜವನ್ನು ಸುರಕ್ಷಿತವಾಗಿ ಗಾಜಿನ ಪೆಟ್ಟಿಗೆಯಲ್ಲಿ ಇರಿಸಲಾಗಿತ್ತು. ಅದರ ಮಾದರಿಯ ಹೊಸ ಧ್ವಜವನ್ನು ಕೇಂದ್ರದ ಮಕ್ಕಳು ಮತ್ತು ಊರಿನ ಹೆಂಗಸರು ಒಟ್ಟಾಗಿ ಹೊಲಿದಿದ್ದರು. ಅದರ ಮಧ್ಯದಲ್ಲಿ ನಂದಿ ಅಥವಾ ಅರ್ಧಚಂದ್ರ ಮಾತ್ರ ಇರಲಿಲ್ಲ. ಒಂದಕ್ಕೊಂದು ಬೆಸೆದುಕೊಂಡ ಅನೇಕ ಕೈಗಳ ಚಿತ್ರವಿತ್ತು. 

ಧ್ವಜವನ್ನು ಏರಿಸುವ ಮೊದಲು ಶಂಕರೇಗೌಡರು ಊರಿನವರ ಎದುರು ನಿಂತರು. “ಒಂದು ಕಾಲದಲ್ಲಿ ನಮ್ಮ ಮನೆಯ ಗೌರವ ಉಳಿಸಿಕೊಳ್ಳಲು ನಂದಿನಿ ಎಂಬ ಹೆಣ್ಣಿನ ಹೆಸರನ್ನೇ ಅಳಿಸಲಾಗಿತ್ತು. ನಂತರ ನಮ್ಮ ಮನೆಯ ನೋವು ಹೋಗಬೇಕೆಂದು ಮತ್ತೊಬ್ಬ ಹೆಣ್ಣಿನ ಬದುಕನ್ನು ಪರಿಹಾರವಾಗಿ ಬಳಸಲು ಯತ್ನಿಸಿದೆವು. ಹೆಣ್ಣಿನ ತ್ಯಾಗವನ್ನು ಹೊಗಳುತ್ತಾ, ಅವಳ ಸಮ್ಮತಿಯನ್ನು ಮರೆತದ್ದು ನಮ್ಮ ದೊಡ್ಡ ತಪ್ಪು. ಇಂದಿನಿಂದ ಈ ಊರಿನಲ್ಲಿ ಯಾವುದೇ ಹೆಣ್ಣಿನ ಬದುಕನ್ನು ಕುಟುಂಬದ ಸಾಲಕ್ಕಾಗಲಿ, ಜಾತಕದ ದೋಷಕ್ಕಾಗಲಿ, ಮತ್ತೊಬ್ಬರ ರೋಗಕ್ಕಾಗಲಿ ಬಲಿಕೊಡಬಾರದು,” ಎಂದರು.

ಜನರ ನಡುವೆ ನಿಂತಿದ್ದ ಪಾಂಡುರಂಗನ ತಲೆ ತಾನಾಗಿಯೇ ತಗ್ಗಿತು. ಪಲ್ಲವಿಯ ಅಭಿಪ್ರಾಯ ಕೇಳದೆ ಮದುವೆಗೆ ಒಪ್ಪಿದ್ದ ದಿನ ನೆನಪಾಯಿತು. ಕಾರ್ಯಕ್ರಮ ಮುಗಿದ ನಂತರ ಅವನು ಮಗಳ ಬಳಿ ಬಂದು ಅವಳ ಕೈ ಹಿಡಿದ.
“ನನ್ನ ಬಡತನಕ್ಕೆ ನಿನ್ನ ಬದುಕನ್ನೇ ಬೆಲೆ ಕಟ್ಟಲು ಹೊರಟಿದ್ದೆ, ಮಗಳೇ. ನೀನು ನನ್ನನ್ನು ಕ್ಷಮಿಸಿದ್ದೀಯ. ಆದರೆ ನಾನು ನನ್ನನ್ನು ಇನ್ನೂ ಸಂಪೂರ್ಣವಾಗಿ ಕ್ಷಮಿಸಿಕೊಳ್ಳಲಾಗಿಲ್ಲ.”
ಪಲ್ಲವಿ ಅಪ್ಪನ ಕೈಯನ್ನು ತನ್ನ ಎರಡೂ ಕೈಗಳಲ್ಲಿ ಹಿಡಿದಳು.
“ತಪ್ಪನ್ನು ನೆನೆದು ಜೀವಮಾನವೆಲ್ಲ ಶಿಕ್ಷೆ ಅನುಭವಿಸುವುದಕ್ಕಿಂತ, ಮತ್ತೆ ಯಾರ ಬದುಕಿನಲ್ಲೂ ಅಂತಹ ತಪ್ಪಾಗದಂತೆ ನೋಡಿಕೊಳ್ಳುವುದೇ ನಿಜವಾದ ಪ್ರಾಯಶ್ಚಿತ್ತ, ಅಪ್ಪಾ.”
ಆ ಮಾತು ಕೇಳಿದ ಪಾಂಡುರಂಗನ ಕಣ್ಣಿನಿಂದ ಎರಡು ಹನಿ ನೀರು ಜಾರಿತು. ಅದರಲ್ಲಿ ಪಶ್ಚಾತ್ತಾಪವಿತ್ತು; ಜೊತೆಗೆ ಮಗಳ ಬಗ್ಗೆ ಹೆಮ್ಮೆಯೂ ಇತ್ತು.

ಧ್ವಜ ನಿಧಾನವಾಗಿ ಮೇಲೇರಿತು. ಗಾಳಿ ಅದನ್ನು ಅಗಲವಾಗಿ ಬಿಚ್ಚಿತು. ಅದೇ ಕ್ಷಣದಲ್ಲಿ ಹಳೆಯ ದೇವಾಲಯದ ಗಂಟೆ ಯಾರೂ ಮುಟ್ಟದೆ ಒಮ್ಮೆ ಮೃದುವಾಗಿ ಮೊಳಗಿತು. ಈ ಬಾರಿ ಬಸವನ ಅಂಗೈಯಲ್ಲಿ ನೀಲಿ ಗುರುತು ಮೂಡಲಿಲ್ಲ. ಚಂದನದ ಪೆಟ್ಟಿಗೆಯೊಳಗಿನ ಬೆಳ್ಳಿನೂಲು ಹೊಳೆಯಲಿಲ್ಲ. ನೆಲದ ಕೆಳಗಿಂದ ಯಾರ ಅಳುವೂ ಕೇಳಿಸಲಿಲ್ಲ.
ಬಸವ ಪಲ್ಲವಿಯ ಕಿವಿಯ ಬಳಿ ಬಂದು, “ಗಂಟೆ ನಂದಿನಿಗೆ ದಾರಿ ಸಿಕ್ಕಿತು ಅಂತ ಹೇಳಿತಾ?” ಎಂದು ಕೇಳಿದ.
ಪಲ್ಲವಿ ಧ್ವಜದತ್ತ ನೋಡಿದಳು. ಅದರ ಮೇಲೆ ಹೊಲಿದಿದ್ದ ಕೈಗಳು ಗಾಳಿಯಲ್ಲಿ ಒಂದನ್ನೊಂದು ಹಿಡಿದುಕೊಂಡಂತೆ ಕಾಣುತ್ತಿದ್ದವು.
“ಬಹುಶಃ ನಂದಿನಿಗೆ ಮಾತ್ರವಲ್ಲ, ನಮ್ಮೆಲ್ಲರಿಗೂ ದಾರಿ ಸಿಕ್ಕಿತು ಎಂದು ಹೇಳಿರಬಹುದು,” ಎಂದಳು.
“ನನಗೂ?”
“ನಿನಗೆ ಮೊದಲೇ ದಾರಿ ಇತ್ತು ಬಸವ. ನಾವು ಅದನ್ನು ತಡವಾಗಿ ಕಂಡೆವು.”
ಬಸವ ಸ್ವಲ್ಪ ಯೋಚಿಸಿ, “ಹಾಗಾದರೆ ನಾನು ದಾರಿ ತಪ್ಪಿರಲಿಲ್ಲ; ಉಳಿದವರು ನನ್ನ ದಾರಿಯನ್ನು ಗುರುತಿಸಿರಲಿಲ್ಲ ಅಷ್ಟೇನಾ?” ಎಂದು ಕೇಳಿದ.
ಪಲ್ಲವಿಯ ಕಣ್ಣು ತುಂಬಿಬಂತು. ಅವಳು ಅವನ ಕೈಯನ್ನು ಇನ್ನಷ್ಟು ಗಟ್ಟಿಯಾಗಿ ಹಿಡಿದಳು.
“ಹೌದು ಬಸವ. ಅದೇ ಸತ್ಯ.”

***

ಆ ರಾತ್ರಿ ಕೇಂದ್ರದ ಅಂಗಳದಲ್ಲಿ ಮಕ್ಕಳು ತಾವು ಹೊಲಿದ ಬಟ್ಟೆಯ ನಕ್ಷತ್ರಗಳನ್ನು ಮರಗಳಿಗೆ ಕಟ್ಟುತ್ತಿದ್ದರು. ಗಾಳಿ ಬೀಸಿದಾಗ ಅವು ಒಂದಕ್ಕೊಂದು ತಾಗಿ ಮೃದುವಾದ ಸದ್ದು ಮಾಡುತ್ತಿದ್ದವು. ಪಲ್ಲವಿ ಹಳೆಯ ಚಂದನದ ಪೆಟ್ಟಿಗೆಯನ್ನು ತೆರೆದಳು. ಅದರೊಳಗಿನ ಬೆಳ್ಳಿನೂಲು ಈಗ ಸಾಮಾನ್ಯ ಬಿಳಿದಾರದಂತಿತ್ತು.
“ಇದಕ್ಕೆ ಈಗ ಬೆಳಕು ಯಾಕಿಲ್ಲ?” ಎಂದು ಬಸವ ಕೇಳಿದ.
“ಮುರಿದದ್ದನ್ನು ಜೋಡಿಸಲು ಮಾತ್ರ ಅದಕ್ಕೆ ಬೆಳಕು ಬೇಕಿತ್ತು.”
“ಹಾಗಾದರೆ ಅದರ ಬೆಳಕು ಮುಗಿದುಹೋಯಿತಾ?”

ಪಲ್ಲವಿ ಅಂಗಳದಲ್ಲಿದ್ದ ಮಕ್ಕಳತ್ತ ತೋರಿಸಿದಳು. ಓದಲು ಬಾರದ ಬಾಲಕನೊಬ್ಬ ಸುಂದರವಾದ ನವಿಲನ್ನು ಬಿಡಿಸುತ್ತಿದ್ದ. ಮಾತು ಬಾರದ ಹುಡುಗಿಯೊಬ್ಬಳು ಬಣ್ಣದ ಹಾಸಿಗೆಯನ್ನು ನೇಯುತ್ತಿದ್ದಳು. ಮೂರ್ಛೆಯ ಕಾರಣ ಶಾಲೆ ಬಿಟ್ಟಿದ್ದ ಮಗುವೊಂದು ಮತ್ತೆ ಪುಸ್ತಕ ಹಿಡಿದು ಕುಳಿತಿತ್ತು. ದೂರದಲ್ಲಿ ಪಾಂಡುರಂಗ ಒಬ್ಬ ಬಡ ತಂದೆಗೆ, “ಮಗಳ ಓದನ್ನು ಯಾವ ಕಾರಣಕ್ಕೂ ನಿಲ್ಲಿಸಬೇಡಿ,” ಎಂದು ಹೇಳುತ್ತಿದ್ದ.
“ಬೆಳಕು ಮುಗಿದಿಲ್ಲ ಬಸವ. ಅದು ದಾರವನ್ನು ಬಿಟ್ಟು ಮನುಷ್ಯರೊಳಗೆ ಸೇರಿದೆ,” ಎಂದಳು.
“ನಿನ್ನ ಬೆರಳಿಗೆ ಇನ್ನೂ ಮಾತು ಬರುತ್ತದಾ?”
ಪಲ್ಲವಿ ಅವನ ಕೈಯನ್ನು ತನ್ನ ಕೈಯೊಳಗೆ ಸೇರಿಸಿಕೊಂಡಳು. “ನನ್ನ ಬೆರಳಿಗಲ್ಲ ಬಸವ… ಈಗ ನಮ್ಮ ಬದುಕಿಗೇ ಮಾತು ಬಂದಿದೆ.”

ಅವರಿಬ್ಬರ ಮುಂದೆ ಅನೇಕ ಮಕ್ಕಳು ನಗುತ್ತಿದ್ದರು. ಆ ನಗುವಿನಲ್ಲಿ ನಂದಿನಿಯ ಮುಕ್ತಿಯಿತ್ತು; ಪಾಂಡುರಂಗನ ಪ್ರಾಯಶ್ಚಿತ್ತವಿತ್ತು; ಶಂಕರೇಗೌಡರ ಅಹಂಕಾರ ಕರಗಿದ ಸದ್ದಿತ್ತು; ಸಮಾಜ ಅಪೂರ್ಣರೆಂದು ತಳ್ಳಿಹಾಕಿದ ಬದುಕುಗಳ ಹೊಸ ಭರವಸೆಯಿತ್ತು.

ಬಡತನದಿಂದ ಪಾರಾಗಲು ಪಲ್ಲವಿ ಮೊದಲು ಬಟ್ಟೆ ಹೊಲಿಯುವುದನ್ನು ಕಲಿತಿದ್ದಳು. ಆದರೆ ಬದುಕು ಅವಳಿಗೆ ಅದಕ್ಕಿಂತ ದೊಡ್ಡ ಹೊಲಿಗೆಯನ್ನು ಕಲಿಸಿತ್ತು — ತಿರಸ್ಕಾರದಿಂದ ಹರಿದ ಮನಸ್ಸುಗಳನ್ನು ಜೋಡಿಸುವುದು, ಅಜ್ಞಾನದಿಂದ ತುಂಡಾದ ಸಂಬಂಧಗಳನ್ನು ಬೆಸೆಯುವುದು ಮತ್ತು ಅಪೂರ್ಣರೆಂದು ಕರೆಯಲ್ಪಟ್ಟ ಬದುಕುಗಳ ಮೇಲೆ ಹೊಸ ಕನಸುಗಳ ಚಿತ್ತಾರ ಬಿಡಿಸುವುದು.

ಮದುವೆ ಯಾವ ರೋಗಕ್ಕೂ ಔಷಧಿಯಲ್ಲ. ಹೆಣ್ಣಿನ ಬದುಕು ಯಾರ ಜಾತಕದ ದೋಷಕ್ಕೆ ಪರಿಹಾರವೂ ಅಲ್ಲ. ಪ್ರೀತಿ ಎಂದರೆ ಒಬ್ಬರನ್ನು ನಮ್ಮ ಇಷ್ಟದಂತೆ ಬದಲಾಯಿಸುವುದಲ್ಲ; ಅವರು ಇರುವಂತೆಯೇ ಗೌರವಿಸಿ, ಅವರೊಳಗಿನ ಸಾಮರ್ಥ್ಯಕ್ಕೆ ಬೆಳಕು ತೋರಿಸುವುದು. ಮನುಷ್ಯನ ನಿಜವಾದ ಕೊರತೆ ಅವನ ದೇಹದಲ್ಲಾಗಲಿ, ಬುದ್ಧಿಯಲ್ಲಾಗಲಿ ಇರುವುದಿಲ್ಲ; ಮತ್ತೊಬ್ಬನ ವಿಭಿನ್ನತೆಯನ್ನು ಒಪ್ಪಿಕೊಳ್ಳಲಾಗದ ಮನಸ್ಸಿನಲ್ಲಿರುತ್ತದೆ.

ಕೆಲವು ಬಂಧಗಳು ಜಾತಕದಲ್ಲಿ ಬರೆಯಲ್ಪಡುವುದಿಲ್ಲ. ಅವು ಸಮ್ಮತಿಯಿಂದ ಹುಟ್ಟುತ್ತವೆ, ಕರುಣೆಯಿಂದ ಬೆಸೆಯುತ್ತವೆ, ಗೌರವದಿಂದ ಗಟ್ಟಿಯಾಗುತ್ತವೆ ಮತ್ತು ಒಪ್ಪಿಕೊಳ್ಳುವಿಕೆಯಿಂದ ಪೂರ್ಣವಾಗುತ್ತವೆ. ಅಂತಹ ಬಂಧಕ್ಕೆ ಚಿನ್ನದ ಸರ ಬೇಕಿಲ್ಲ. ಕಾಣದ ಒಂದು ಬೆಳ್ಳಿನೂಲೇ ಸಾಕು.

***

  

  

ಭಾನುವಾರ, ಜುಲೈ 26, 2026

ಮಮತೆಯ ಮೂರು ಸ್ವರಗಳು

✍🏻ದೀಪಲಕ್ಷ್ಮಿ ಭಟ್, ಮಂಗಳೂರು   

ಚಿನ್ನೂರು ಎಂಬ ಪುಟ್ಟ ಊರು. ಹೆಸರಿಗೆ ಪುಟ್ಟದಾದರೂ, ಅಲ್ಲಿನ ಜನರ ಹೃದಯಗಳು ಮಾತ್ರ ಆಕಾಶದಷ್ಟು ವಿಶಾಲವಾಗಿದ್ದವು. ಊರಿನ ಮಧ್ಯೆ ಪುರಾತನ ಮಾರಮ್ಮನ ದೇವಸ್ಥಾನವಿತ್ತು. ಆ ದೇವಿಯ ಮಹಿಮೆ ಅದೆಷ್ಟಿತ್ತೆಂದರೆ, ದೂರದೂರದ ಊರುಗಳಿಂದಲೂ ಭಕ್ತರು ಹರಕೆ ಹೊತ್ತು ಬರುತ್ತಿದ್ದರು. ಅಲ್ಲಿ ಪ್ರತಿ ವರ್ಷ ಅದ್ಧೂರಿಯಾಗಿ ಮಾರಮ್ಮನ ಜಾತ್ರೆ ನಡೆಯುತ್ತಿತ್ತು. ವರ್ಷಕ್ಕೊಮ್ಮೆ ನಡೆಯುವ ಮಾರಮ್ಮನ ಆ ಜಾತ್ರೆ ಎಂದರೆ ಇಡೀ ಊರಿನ ಪಾಲಿಗೆ ಹಬ್ಬಗಳ ಹಬ್ಬ. ಜಾತ್ರೆಗೆ ತಿಂಗಳ ಮೊದಲೇ ಸಿದ್ಧತೆ ಆರಂಭವಾಗುತ್ತಿತ್ತು. ಮನೆಮನೆಗಳ ಮುಂದೆ ರಂಗೋಲಿ, ಬಾಗಿಲಿಗೆ ಮಾವಿನ ತೋರಣ, ಬೀದಿಗಳೆಲ್ಲ ಬಣ್ಣ ಬಣ್ಣದ ಧ್ವಜಗಳಿಂದ ಕಂಗೊಳಿಸುತ್ತಿದ್ದವು. ರಾತ್ರಿ ಹೊತ್ತಿಗೆ ವಿದ್ಯುತ್ ದೀಪಗಳ ಅಲಂಕಾರದಿಂದ ಚಿನ್ನೂರೇ ನಕ್ಷತ್ರಗಳ ಹೊದಿಕೆ ಹೊದ್ದಂತೆ ಕಾಣಿಸುತ್ತಿತ್ತು.  

ಜಾತ್ರೆಯ ದಿನ ಬೆಳಗ್ಗಿನಿಂದಲೇ ದೇವಾಲಯದ ಗಂಟೆಗಳು ಮೊಳಗುತ್ತಿದ್ದವು. ನಾದಸ್ವರದ ಮಂಗಳಧ್ವನಿ ಗಾಳಿಯಲ್ಲಿ ತೇಲುತ್ತಿತ್ತು. ತಮಟೆ, ಡೊಳ್ಳು, ಚಂಡೆಯ ಸದ್ದಿಗೆ ಇಡೀ ಊರು ಎಚ್ಚರಗೊಳ್ಳುತ್ತಿತ್ತು. ಸಕ್ಕರೆ ಗೊಂಬೆಗಳು, ಬಣ್ಣ ಬಣ್ಣದ ಬಲೂನುಗಳು, ಮಣ್ಣಿನ ಆಟಿಕೆಗಳು, ಗಾಜಿನ ಬಳೆಗಳು, ಬೆಲ್ಲದ ಜಿಲೇಬಿ, ಮೈಸೂರು ಪಾಕ್, ಬಿಸಿ ಬಿಸಿ ಬಜ್ಜಿ... ಎಲ್ಲೆಡೆ ಹಬ್ಬದ ಸಂಭ್ರಮವೇ ಮನೆ ಮಾಡಿತ್ತು. ಮಕ್ಕಳು ಜಾಯಿಂಟ್ ವೀಲ್ ಏರಲು ಸಾಲಿನಲ್ಲಿ ನಿಂತಿದ್ದರೆ, ಹೆಂಗಸರು ದೇವಿಗೆ ಅರ್ಪಿಸಲು ಹೂಮಾಲೆಗಳನ್ನು ಕೊಂಡುಕೊಳ್ಳುತ್ತಿದ್ದರು. ವೃದ್ಧರು ಹಳೆಯ ಗೆಳೆಯರನ್ನು ಕಂಡು ಮಾತನಾಡುತ್ತಿದ್ದರು. "ಜಾತ್ರೆ ಅಂದರೆ ಚಿನ್ನೂರು... ಚಿನ್ನೂರು ಅಂದರೆ ಜಾತ್ರೆ..." ಎನ್ನುವಷ್ಟು ಹೆಸರು ಪಡೆದಿತ್ತು ಆ ಊರು. ಆ ದಿನ ಯಾರ ಮುಖದಲ್ಲೂ ದುಃಖ ಇರಲಿಲ್ಲ. ಎಲ್ಲರ ಮನೆಯಲ್ಲಿ ಹಬ್ಬದ ಸಂಭ್ರಮ. ದೇವಿಯ ಕೃಪೆಯಿಂದ ಈ ವರ್ಷವೂ ಸುಖ-ಸಮೃದ್ಧಿ ದೊರೆಯಲಿ ಎನ್ನುವ ಪ್ರಾರ್ಥನೆ. ಆದರೆ ವಿಧಿ ಮಾತ್ರ ಆ ಸಾವಿರಾರು ಜನರ ಮಧ್ಯೆ ಒಂದು ಪುಟ್ಟ ಕುಟುಂಬಕ್ಕಾಗಿ ಬೇರೆಯದೇ ಕಥೆಯನ್ನು ಬರೆಯುತ್ತಿತ್ತು. ಒಂದು ಕುಟುಂಬದ ಬದುಕನ್ನೇ ಶಾಶ್ವತವಾಗಿ ಬದಲಿಸಿಬಿಟ್ಟಿತ್ತು.

*** 

 

ಸುಮಾರು ಹನ್ನೆರಡು ವರ್ಷಗಳ ಹಿಂದೆ...
ಆ ವರ್ಷವೂ ಮಾರಮ್ಮನ ಜಾತ್ರೆ ಎಂದಿನಂತೆ ಅದ್ಧೂರಿಯಾಗಿ ನಡೆಯುತ್ತಿತ್ತು. ಖ್ಯಾತ ಗಾಯಕ ಮಧುರ್ ಹಾಗೂ ಅವರ ಪತ್ನಿ ಮೀರಾ ತಮ್ಮ ಆರು ತಿಂಗಳ ಮುದ್ದು ಹೆಣ್ಣು ಮಗುವಿನೊಂದಿಗೆ ದೇವಿಯ ದರ್ಶನಕ್ಕೆ ಬಂದಿದ್ದರು. ದೇವಿಯ ಹರಕೆಯಿಂದಲೇ ಆ ಮಗು ಹುಟ್ಟಿದ್ದು, ದೇವಿಯ ಒಂದು ಅಂಶದಂತೆಯೇ ತೇಜಸ್ಸು ಆ ಮಗುವಿನಲ್ಲಿತ್ತು.  
"ಮೀರಾ... ಮಗುವನ್ನು ಗಟ್ಟಿಯಾಗಿ ಹಿಡಿದುಕೋ. ಜನ ತುಂಬಾ ಇದ್ದಾರೆ," ಎಂದು ಮಧುರ್ ಎಚ್ಚರಿಸಿದ. "ಚಿಂತೆ ಬೇಡ ಮಧು. ನಮ್ಮ ಮಗಳಿಗೆ ಮಾರಮ್ಮನ ಆಶೀರ್ವಾದ ಸಿಗಲಿ ಅಂತ ಬಂದಿದ್ದೀವಲ್ಲ...ಆಕೆ ಖಂಡಿತ ಕಾಪಾಡಿಕೊಳ್ತಾಳೆ." ಎಂದು ಮೀರಾ ಮಗುವಿನ ಕೆನ್ನೆಗೆ ಮುತ್ತಿಟ್ಟಳು. ಮಗುವಿನ ಕುತ್ತಿಗೆಯಲ್ಲಿ ಚಿಕ್ಕ ಬೆಳ್ಳಿಯ ಸರ. ಅದಕ್ಕೆ ಕಟ್ಟಿದ್ದ ಮಾರಮ್ಮನ ತಾಯಿತ. ಬಲ ಭುಜದ ಮೇಲೆ ಅರ್ಧಚಂದ್ರದ ಆಕಾರದ ಜನ್ಮಮಚ್ಚೆ. ರಥೋತ್ಸವ ಆರಂಭವಾಗುತ್ತಿದ್ದಂತೆ ಸಾವಿರಾರು ಜನರು ದೇವಿಯ ರಥದ ಹಿಂದೆ ಸಾಗತೊಡಗಿದರು. "ಜೈ ಮಾರಮ್ಮ... ಜೈ ಮಾರಮ್ಮ..." ಎಂಬ ಜಯಘೋಷದಿಂದ ಇಡೀ ಊರು ಮೊಳಗುತ್ತಿತ್ತು. ಅಷ್ಟರಲ್ಲಿ...ಹಠಾತ್ತನೆ ಜನರ ನಡುವೆ ನೂಕುನುಗ್ಗಲು ಹೆಚ್ಚಾಯಿತು. ತಳ್ಳಾಟ, ಓಡಾಟ ಹೆಚ್ಚಾಯಿತು. ಯಾರೋ ಕೆಲವರನ್ನು ತಳ್ಳಿದರು. ಕೆಲವರು ರಥದ ಕಡೆ ಓಡಿದರು. ಕೆಲವರು ನೂಕು ನುಗ್ಗಲಿನಲ್ಲಿ ಬಿದ್ದರು. ನೂಕುನುಗ್ಗಲಿನಲ್ಲಿ ಮೀರಾಳ ಸಮತೋಲನ ತಪ್ಪಿತು. ಯಾರೋ ಅವಳ ಕೈಗೆ ಬಲವಾಗಿ ತಾಗಿದಾಗ, ಮಗುವನ್ನು ಹಿಡಿದಿದ್ದ ಕೈ ಸಡಿಲವಾಯಿತು. ಕ್ಷಣಮಾತ್ರದಲ್ಲಿ ಪುಟ್ಟ ಕಂದಮ್ಮ ಜನರ ಕಾಲುಗಳ ನಡುವಿನಿಂದ ಬದಿಗೆ ಸರಿದು, ಯಾರದೋ ಬಟ್ಟೆಯ ರಾಶಿಯ ಮೇಲೆ ಬಿದ್ದಿತು.  "ನನ್ನ ಮಗು...!" ಎಂದು ಮೀರಾ ಹೃದಯ ಕಿತ್ತುಕೊಂಡಂತೆ ಕಿರುಚಿದಳು. ಆದರೆ ಅವಳ ಧ್ವನಿ ಡೋಲಿನ ಸದ್ದು, ಪಟಾಕಿಗಳ ಗದ್ದಲ ಮತ್ತು ಜನರ ಕೂಗಾಟದಲ್ಲಿ ಕಳೆದುಹೋಯಿತು. ಮಧುರ್ ಜನರನ್ನು ತಳ್ಳಿ ಹುಡುಕತೊಡಗಿದ. ಮೀರಾ ನೆಲದ ಮೇಲೆ ಕುಳಿತು ಅಳತೊಡಗಿದಳು. ಘೋಷಣೆಗಳನ್ನು ಮಾಡಿಸಲಾಯಿತು. ಪೊಲೀಸರು ಕೂಡ ಹುಡುಕಿದರು. ಸ್ವಯಂಸೇವಕರು ಎಲ್ಲೆಡೆ ಓಡಾಡಿ ಮಗುವಿನ ಸುಳಿವಿಗಾಗಿ ಹುಡುಕಾಡಿದರು. ಎಷ್ಟು ಹುಡುಕಿದರೂ ಆ ಪುಟ್ಟ ಕಂದಮ್ಮ ಮಾತ್ರ ಎಲ್ಲಿಯೂ ಕಾಣಸಿಗಲಿಲ್ಲ. ಆ ರಾತ್ರಿ ಮಧುರ್ ಮತ್ತು ಮೀರಾ ಜಾತ್ರೆ ಮೈದಾನದಲ್ಲೇ ಕಂಬನಿ ಸುರಿಸುತ್ತಾ ಬೆಳಗಾಗಿಸಿದರು. ಅವರಿಗೆ ಗೊತ್ತಿರಲಿಲ್ಲ...ಅದೇ ಸಮಯದಲ್ಲಿ ದೇವಿಯ ದೇವಸ್ಥಾನದ ಹಿಂಬದಿಯಲ್ಲಿ ಮತ್ತೊಂದು ಕಥೆ ಆರಂಭವಾಗಿತ್ತು.

ಆ ದಿನ ಮಂಕಾದ ಮೀರಾ, ಇಂದಿಗೂ ಮೊದಲಿನಂತಾಗಲಿಲ್ಲ. ಹಿಂದೆ ಸುಂದರವಾಗಿ ನೃತ್ಯ ಮಾಡುತ್ತಿದ್ದ ಮೀರಾ, ಆ ಆಘಾತದಿಂದ ತೀವ್ರ ಖಿನ್ನತೆಗೆ ಒಳಗಾದಳು. ಊಟ–ನಿದ್ರೆ ಕಳೆದುಕೊಂಡು, ದಿನದ ಬಹುಭಾಗವನ್ನು ಹಾಸಿಗೆಯಲ್ಲೇ ಕಳೆಯತೊಡಗಿದಳು. ಹಿಂದೆ ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದ ಅವಳ ಕಾಲುಗಳು, ಈಗ ಮಗಳ ನೆನಪಿನ ಭಾರದಿಂದ ಕೋಣೆಯಾಚೆಗೂ ಸಾಗಲಾರದೆ ನಿಂತವು. ಮಧುರ್ ಮನಸ್ಸಿಗೂ ಆ ನೋವನ್ನು ತಡೆಯಲಾಗಲಿಲ್ಲ. ಭಾವಗೀತೆಗಳಿಗೆ ಹೆಸರುವಾಸಿಯಾಗಿದ್ದ ಅವನ ಹಾಡುಗಳೆಲ್ಲದರಲ್ಲೂ ನೋವಿನ ರಾಗವೇ ಹೆಚ್ಚಾಗಿ ಕೇಳಿಸತೊಡಗಿತು. ಅಂದಿನಿಂದ, ಅವನ ಪ್ರತಿಯೊಂದು ಸಂಗೀತ ಕಾರ್ಯಕ್ರಮವೂ ತನ್ನ ಮಗಳನ್ನು ಹುಡುಕುವ ಪ್ರಾರ್ಥನೆಯಾಗಿತ್ತು. 

*** 

ದೇವಾಲಯದ ಹಿಂಭಾಗದಲ್ಲಿ ಕಸದ ಮಧ್ಯೆ ಬಿದ್ದಿದ್ದ ಬಾಟಲಿಗಳು, ಪ್ಲಾಸ್ಟಿಕ್, ಹೂವುಗಳು, ತೆಂಗಿನ ಚಿಪ್ಪುಗಳನ್ನು ಹೆಕ್ಕುತ್ತಿದ್ದ ಒಬ್ಬ ವೃದ್ಧ ತಾತನಿದ್ದ. ಊರಿನವರು ಅವನನ್ನು "ತಾತಯ್ಯ" ಎಂದೇ ಕರೆಯುತ್ತಿದ್ದರು.ಅವನ ನಿಜವಾದ ಹೆಸರನ್ನು ಕೇಳುವವರೇ ಇರಲಿಲ್ಲ. ಒಂದು ಕಾಲದಲ್ಲಿ ಅವನಿಗೂ ಒಂದು ಸುಂದರ ಕುಟುಂಬವಿತ್ತು. ಹೆಂಡತಿ, ಒಬ್ಬ ಮಗ ಹಾಗೂ ಸೊಸೆ. ಆದರೆ ವಿಧಿ ಒಂದೊಂದಾಗಿ ಎಲ್ಲರನ್ನೂ ಕಿತ್ತುಕೊಂಡಿತ್ತು. ಮೊದಲು ಹೆಂಡತಿ ಅನಾರೋಗ್ಯದಿಂದ ತೀರಿಕೊಂಡಳು. ಕೆಲ ವರ್ಷಗಳ ಬಳಿಕ ಮಗ ಅಪಘಾತದಲ್ಲಿ ಮೃತಪಟ್ಟ. ಆ ದುಃಖ ತಡೆಯಲಾಗದೆ ಸೊಸೆಯೂ ಹೆಚ್ಚು ದಿನ ಬದುಕಲಿಲ್ಲ. ಅಂದಿನಿಂದ ತಾತಯ್ಯನ ಬದುಕು ಒಂಟಿತನದ ಬಾಳಾಗಿತ್ತು.  ದೇವಾಲಯದ ಸುತ್ತಮುತ್ತ ಬಿದ್ದ ವಸ್ತುಗಳನ್ನು ಸಂಗ್ರಹಿಸಿ ಮಾರುವುದು, ಜನ ಕೊಟ್ಟ ಹಳೆಯ ಬಟ್ಟೆ ಧರಿಸುವುದು, ದೇವರ ಪ್ರಸಾದವೇ ಊಟ - ಇದೇ ಅವನ ಬದುಕು. 
ಆ ರಾತ್ರಿ ದೇವಸ್ಥಾನದ ಹಿಂಭಾಗಕ್ಕೆ ಬಂದಾಗ, ಪುಟ್ಟ ಮಗುವಿನ ಅಳುವ ಧ್ವನಿ ತಾತನಿಗೆ ಕೇಳಿಸಿತು. "ಏನಪ್ಪಾ ಇದು?" ಎಂದುಕೊಂಡು ತಾತ  ಧ್ವನಿ ಕೇಳಿದ ಕಡೆ ಓಡಿ  ಹೋದ. ಮಣ್ಣಿನ ಮೇಲೆ ಪುಟ್ಟ ಕಂದಮ್ಮ.ಹೊರಳಾಡುತ್ತಿತ್ತು. ಹಸಿವಿನಿಂದ ಅತ್ತು ಅತ್ತು ಅದರ ಮುಖ ಕೆಂಪಾಗಿತ್ತು. ಕಣ್ಣೀರು ಒಣಗಿ ಮತ್ತೆ ಹರಿಯುತ್ತಿತ್ತು. ತಾತಯ್ಯನ ಎದೆ ಒಡೆದುಹೋಯಿತು. "ಅಯ್ಯೋ... ಯಾರಪ್ಪಾ ನಿನ್ನನ್ನು ಹೀಗೆ ಬಿಟ್ಟು ಹೋಗಿದ್ದಾರೆ?" ಎಂದು ಮಗುವನ್ನು ಎತ್ತಿಕೊಂಡ. ತನ್ನ ಜೋಳಿಗೆಯಲ್ಲಿದ್ದ ಹಾಲನ್ನು ಸ್ವಲ್ಪಸ್ವಲ್ಪವಾಗಿ ಕುಡಿಸಿದ. ಮಗು ಅಳುವುದನ್ನು ನಿಲ್ಲಿಸಿತು. ಅವನ ಎದೆಯ ಮೇಲೆ ತಲೆ ಇಟ್ಟು ಮಲಗಿತು. ಆ ಕ್ಷಣ...ತಾತಯ್ಯನಿಗೆ ವರ್ಷಗಳಿಂದ ಖಾಲಿಯಾಗಿದ್ದ ಅವನ ಹೃದಯದಲ್ಲಿ ಮತ್ತೆ ಜೀವ ಮೊಳಕೆಯೊಡೆದಂತಾಯಿತು.

ಮರುದಿನ ಬೆಳಗ್ಗೆಯವರೆಗೂ ತಾತಯ್ಯ ಮಗುವಿನ ಹೆತ್ತವರಿಗಾಗಿ ಅಲ್ಲೇ ಕಾದ. ಅದರ ಹೆತ್ತವರ ಜೊತೆ ಅದನ್ನು ಸೇರಿಸಲೆಂದು, ಜಾತ್ರೆ ನಡೆದ ಸ್ಥಳದ ಸುತ್ತಮುತ್ತಲೂ ಮಗು ಕಳೆದುಕೊಂಡ ಹೆತ್ತವರನ್ನು ಹುಡುಕಿದ. ಮಗುವನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ದಿದ್ದ. ಆದರೆ ಜಾತ್ರೆಯ ಗೊಂದಲದಲ್ಲಿ ದಾಖಲೆ ಮಾಡಿಸಿಕೊಳ್ಳಲು ಯಾರೂ ಸರಿಯಾಗಿ ಸ್ಪಂದಿಸಿರಲಿಲ್ಲ. "ಮಗುವನ್ನು ಅನಾಥಾಶ್ರಮಕ್ಕೆ ಕಳುಹಿಸಿ ಬಿಡಿ. ಯಾರಾದರೂ ಬಂದರೆ ನೋಡೋಣ..." ಎಂಬ ನಿರ್ಲಕ್ಷ್ಯದ ಉತ್ತರ ಸಿಕ್ಕಿತು. ತಾತಯ್ಯನ ಮನಸ್ಸು ಒಪ್ಪಲಿಲ್ಲ. "ಇಷ್ಟು ಪುಟ್ಟ ಮಗುವನ್ನು ಅಪರಿಚಿತರ ಕೈಗೆ ಹೇಗೆ ಕೊಡಲಿ?" ಎಂದು ಆತಂಕಗೊಂಡ.  ಆದರೂ ಹಲವು ವಾರಗಳ ಕಾಲ ಜಾತ್ರೆಯ ಸುತ್ತಮುತ್ತಲಿನ ಊರುಗಳಲ್ಲಿ ಮಗುವಿನ ಹೆತ್ತವರಿಗಾಗಿ ಹುಡುಕಾಡಿದ್ದ. ದೇವಾಲಯದ ಅರ್ಚಕರನ್ನು ಕೇಳಿದ. ಹಳ್ಳಿಗಳಲ್ಲಿ ವಿಚಾರಿಸಿದ. ಜಾತ್ರೆಯಲ್ಲಿ ಮಗು ಕಳೆದುಕೊಂಡವರ ಬಗ್ಗೆ ಹುಡುಕಿದ. ಯಾವ ಸುಳಿವೂ ಸಿಗದಾಗ ಮಾತ್ರ ಅವಳನ್ನು ತನ್ನ ಮೊಮ್ಮಗಳಂತೆ ಸಾಕಲು ನಿರ್ಧರಿಸಿದ್ದ. ಅದೇ ದೇವಸ್ಥಾನಕ್ಕೆ ಬಂದು ದೇವಿಯ ಮುಂದೆ ಕೈಮುಗಿದು ಹೇಳಿದ - "ಅಮ್ಮಾ... ಇದು ನಿನ್ನ ಇಚ್ಛೆಯಾದರೆ, ಇವಳನ್ನು ನನ್ನ ಮೊಮ್ಮಗಳಂತೆ ಸಾಕುತ್ತೇನೆ."  ಆ ಮಗುವಿಗೆ ಮೈಥಿಲಿ ಎಂದು ಹೆಸರಿಟ್ಟು ಕರೆದ.  ಆ ದಿನದಿಂದ ಆ ಪುಟ್ಟ ಮಗು ಅವನ ಬದುಕಿನ ಬೆಳಕಾಯಿತು. ಅವನ ಬದುಕಿಗೆ ಹೊಸದಾದ ಒಂದು ಹುರುಪಾಯಿತು. 

 ***

"ತಾ...ತಾ..." ಎಂಬುದು ಮೈಥಿಲಿ ಕಲಿತ ಮೊದಲ ಮಾತು. ಆ ಒಂದು ಪದ ಕೇಳಿದ ಕ್ಷಣ ತಾತಯ್ಯ ಅತ್ತಿದ್ದ. "ನನಗೆ ಮತ್ತೆ ಬದುಕೋ ಕಾರಣ ಸಿಕ್ಕಿತು ಕಂದಾ..." ಎಂದು ಅವಳನ್ನು ಎದೆಯೊತ್ತಿಕೊಂಡಿದ್ದ. ಮೈಥಿಲಿ ಬೆಳೆದಂತೆ ತಾತಯ್ಯನ ಗುಡಿಸಲು ನಗುವಿನಿಂದ ತುಂಬಿತು. ಬೆಳಿಗ್ಗೆ ಇಬ್ಬರೂ ದೇವಾಲಯಕ್ಕೆ ಹೋಗುತ್ತಿದ್ದರು. ದೇವರಿಗೆ ನಮಸ್ಕರಿಸಿ ಪ್ರಸಾದ ತಂದು ತಿನ್ನುತ್ತಿದ್ದರು. ಸಂಜೆ ತಾತಯ್ಯ ಅವಳಿಗೆ ಕಥೆ ಹೇಳುತ್ತಿದ್ದ. ರಾಮಾಯಣ, ಮಹಾಭಾರತ, ಸತ್ಯ ಹರಿಶ್ಚಂದ್ರ, ದಾನಶೂರ ಕರ್ಣ, ಭಕ್ತ ಪ್ರಹ್ಲಾದ - ಹೀಗೆ ಬೇರೆ ಬೇರೆ ಕಥೆಗಳನ್ನು ಕೇಳುತ್ತ ಮೈಥಿಲಿ ನಿದ್ದೆಗೆ ಜಾರುತ್ತಿದ್ದಳು.  

ಎರಡು ವರ್ಷ ತುಂಬಿದಾಗ ಒಂದು ದಿನ ದೇವಾಲಯದ ಮೆಟ್ಟಿಲಲ್ಲಿ ಕುಳಿತಿದ್ದ ಮೈಥಿಲಿ ಹಠಾತ್ತನೆ ಒಂದು ಭಕ್ತಿಗೀತೆ ಗುನುಗತೊಡಗಿದಳು. ಸ್ವರ ಇನ್ನೂ ಸ್ಪಷ್ಟವಾಗಿರಲಿಲ್ಲ. ಆದರೆ ಅದರಲ್ಲಿ ಏನೋ ವಿಚಿತ್ರವಾದ ಮಧುರತೆ ಅವಳ ಹಾಡಿನಲ್ಲಿತ್ತು. ಅಲ್ಲಿ ನೆರೆದಿದ್ದ ಜನರೆಲ್ಲರೂ ಬೆರಗಾಗಿ ಆ ಮಗುವನ್ನೇ ನೋಡಿದರು. ಅಲ್ಲಿದ್ದ ಅರ್ಚಕರು ತಾತಯ್ಯನ ಜೊತೆ, "ಈ ಮಗಳಿಗೆ ದೇವರು ಅಪರೂಪದ ಕಂಠ ಕೊಟ್ಟಿದ್ದಾನೆ." ಅಂದರು. ತಾತಯ್ಯ ನಕ್ಕು,  "ನಮ್ಮ ದೇವಿಯ ಪ್ರಸಾದ ಅದು." ಅಂದ. ಅಂದಿನಿಂದ ಮೈಥಿಲಿ ಕೇಳಿದ ಪ್ರತಿಯೊಂದು ಹಾಡನ್ನೂ ನೆನಪಿಟ್ಟುಕೊಳ್ಳತೊಡಗಿದಳು. ರೇಡಿಯೋದಲ್ಲಿ ಕೇಳಿದ ಹಾಡು, ದೇವಾಲಯದಲ್ಲಿ ಕೇಳಿದ ಭಜನೆ, ಶಾಲೆಯ ಪ್ರಾರ್ಥನೆ - ಎಲ್ಲವನ್ನೂ ಒಮ್ಮೆ ಕೇಳಿದರೆ ಸಾಕು, ಅವಳ ಕಂಠದಲ್ಲಿ ಅದು ಮತ್ತೆ ಜೀವ ಪಡೆಯುತ್ತಿತ್ತು - ಮೂಲ ಗಾಯನಕ್ಕಿಂತಲೂ ಸುಮಧುರವಾಗಿ ಹೇಳುತ್ತಿದ್ದಳು ಮೈಥಿಲಿ. ಅವಳ ಹಾಡು ಎಷ್ಟು ಮಧುರವಾಗಿತ್ತೆಂದರೆ, ನೆರೆಹೊರೆಯ ಜನರು ಅವಳ ಹಾಡು ಕೇಳಲೆಂದೇ ಬರುತ್ತಿದ್ದರು.  ಆ ಪುಟ್ಟ ಹುಡುಗಿಯ ಹಾಡಿಗೆ ಮನಸೋತು, ಜನರು ತಮ್ಮ ಕೈಲಾದಷ್ಟು ಹಣವನ್ನು ನೀಡುತ್ತಿದ್ದರು. ಕೆಲವೊಮ್ಮೆ ನೂರು ಇನ್ನೂರು, ಇನ್ನೂ ಕೆಲವೊಮ್ಮೆ ಸಾವಿರದಷ್ಟು ರೂಪಾಯಿಯವರೆಗೂ ಹಣ ಹೊಂದಿಕೆ ಆಗುತ್ತಿತ್ತು. ಮೈಥಿಲಿಯ ಹಾಡಿನಿಂದ ಸಿಗುತ್ತಿದ್ದ ಅಲ್ಪ ಆದಾಯ ಅವರಿಬ್ಬರ ಹಸಿವನ್ನು ನೀಗಿಸುತ್ತಿತ್ತು. ಆದರೂ ಬಂದ ಹಣದಲ್ಲಿ ಮೊದಲು ಅವಳ ಶಾಲಾ ಪುಸ್ತಕ, ಬಟ್ಟೆ ಮತ್ತು ಅಗತ್ಯಗಳನ್ನು ಪೂರೈಸುವುದೇ ತಾತನ ನಿಯಮವಾಗಿತ್ತು. ಮುಂದೆ ಅವಳ ಈ ಸುಮಧುರ ಕಂಠವೇ ಅವಳ ಜೀವನವನ್ನು ಬದಲಾಯಿಸಲಿದೆ ಎಂಬುದು ಆಗ ಯಾರಿಗೂ ಗೊತ್ತಿರಲಿಲ್ಲ...

*** 

ಕಾಲ ಎಂಬುದು ಯಾರಿಗಾಗಿಯೂ ನಿಲ್ಲುವುದಿಲ್ಲ. ಸಂತೋಷಕ್ಕೂ, ದುಃಖಕ್ಕೂ ಕಾಲ ಒಂದೇ ವೇಗದಲ್ಲಿ ಮುಂದೆ ಸಾಗುತ್ತದೆ. ಹನ್ನೆರಡು ವರ್ಷಗಳು ಕಳೆದುಹೋಗಿದ್ದವು. ಮೈಥಿಲಿ ಈಗ ಹನ್ನೆರಡು ವರ್ಷದ ಚುರುಕು ಹುಡುಗಿ. ತನ್ನನ್ನು ತಾನು ಅನಾಥೆ ಅಂದುಕೊಂಡಿದ್ದಳು. ಅವಳನ್ನು ಸಾಕಿದ್ದ ತಾತನೇ ತನ್ನ ಸರ್ವಸ್ವ ಅನ್ನುವಷ್ಟು ಮಟ್ಟಕ್ಕೆ ಪ್ರೀತಿ ಬೆಳೆಸಿ ಕೊಂಡಿದ್ದಳು. ತಾತನೂ ಹಾಗೆ, ಮೈಥಿಲಿಗೆ ಓದಿನ ಬರವಾಗಬಾರದೆಂದು ಶಾಲೆಗೆ ಸೇರಿಸಿದ್ದ. ಓದಿನಲ್ಲಿ ಮುಂದಿದ್ದಳು. ಹಾಡಿನಲ್ಲಿ ಇನ್ನೂ ಮುಂದೆ ಇದ್ದಳು. ಮನೆಯ ಬಡತನದ ನಡುವೆಯೂ ಮೈಥಿಲಿಯ ಪ್ರತಿಭೆಯನ್ನು ಪ್ರೋತ್ಸಾಹಿಸಿದ ತಾತ, ಅವಳನ್ನು ಬೀದಿ ಬದಿಯಲ್ಲಿ ಹಾಡಿಸುತ್ತಿದ್ದ. ಜನರು ಪ್ರೀತಿಯಿಂದ ನೀಡುತ್ತಿದ್ದ ಹಣದಿಂದ ಮೈಥಿಲಿಯ ಓದು, ಅವರಿಬ್ಬರ ದಿನದ ಬದುಕು ಸಾಗುತ್ತಿತ್ತು. ಬೆಳಿಗ್ಗೆ ಶಾಲೆ, ಸಂಜೆ ತಾತನ ಜೊತೆ ಬೀದಿ ಬದಿಯಲ್ಲಿ ಹಾಡು, ರಾತ್ರಿ ಓದು. ಇದೇ ಮೈಥಿಲಿಯ ದಿನಚರಿಯಾಗಿತ್ತು. ಆದರೆ ಆ ಪುಟ್ಟ ಹುಡುಗಿಯ ಮುಖದಲ್ಲಿ ಯಾವತ್ತೂ ಬೇಸರ ಕಾಣಿಸುತ್ತಿರಲಿಲ್ಲ. ಬಡತನವನ್ನು ಅವಳು ಎಂದೂ ಶಾಪವೆಂದು ಭಾವಿಸಿರಲಿಲ್ಲ. ತಾತನ ಪ್ರೀತಿಯೇ ಅವಳ ಪಾಲಿಗೆ ದೊಡ್ಡ ಸಂಪತ್ತು. ಪ್ರತಿ ಬೆಳಿಗ್ಗೆಯೂ ಅವಳು ಎದ್ದ ಕೂಡಲೇ ತಾತನ ಕಾಲಿಗೆ ನಮಸ್ಕರಿಸುತ್ತಿದ್ದಳು. "ದೇವರು ನಿನ್ನನ್ನು ಯಾವಾಗಲೂ ಹೀಗೆ ನಗಿಸುತ್ತಿರಲಿ ಕಂದಾ..." ಎಂದು ತಾತ ಆಶೀರ್ವದಿಸುತ್ತಿದ್ದ.

ಒಂದು ದಿನ ಮೈಥಿಲಿ ಕಲಿಯುತ್ತಿದ್ದ ಶಾಲೆಯಲ್ಲಿ ವಾರ್ಷಿಕೋತ್ಸವ ನಡೆಯುತ್ತಿತ್ತು. ಮುಖ್ಯ ಅತಿಥಿಯಾಗಿ ಜಿಲ್ಲೆಯ ಖ್ಯಾತ ಸಂಗೀತ ಶಿಕ್ಷಕರೊಬ್ಬರು ಬಂದಿದ್ದರು. ಹಾಡಿನ ಸ್ಪರ್ಧೆಯಲ್ಲಿ ಮೈಥಿಲಿ ವೇದಿಕೆಯ ಮೇಲೆ ನಿಂತಳು. ಅವಳು ಹಾಡು ಪ್ರಾರಂಭಿಸಿದ ಕ್ಷಣವೇ ಸಭಾಂಗಣದಲ್ಲಿ ಮೌನ ಆವರಿಸಿತು. ಅವಳ ಕಂಠದಲ್ಲಿ ವಿಚಿತ್ರವಾದ ಮಧುರತೆ ಇತ್ತು. ಹಾಡು ಮುಗಿದ ತಕ್ಷಣ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಮುಖ್ಯ ಅತಿಥಿ ಅವಳನ್ನು ಕರೆದು ಕೇಳಿದರು, "ನಿನಗೆ ಸಂಗೀತ ಯಾರು ಕಲಿಸಿದ್ದಾರೆ?". ಮೈಥಿಲಿ ನಗುತ್ತಾ ತಾತನತ್ತ ಬೆರಳು ತೋರಿಸಿದಳು - "ನನ್ನ ತಾತ." ತಾತಯ್ಯ ಗಾಬರಿಯಿಂದ ಕೈ ಬೀಸಿದ. "ನನಗೆ ಹಾಡು ಗೊತ್ತಿಲ್ಲ ಸಾರ್... ಅವಳು ಕೇಳಿದ ಹಾಡನ್ನೇ ಮತ್ತೆ ಹಾಡ್ತಾಳೆ. ಒಮ್ಮೆ ಕೇಳಿದರೆ ಸಾಕು, ಹಾಡನ್ನು ಹೇಗಿದೆಯೋ ಹಾಗೆ ಹಾಡುತ್ತಾಳೆ." ಅಂದ.  ಅತಿಥಿ ಆಶ್ಚರ್ಯದಿಂದ ಮೈಥಿಲಿಯನ್ನು ನೋಡಿದರು. "ಇಂತಹ ಕಂಠ ಅಪರೂಪ. ಸರಿಯಾದ ಗುರು ಸಿಕ್ಕರೆ ಈ ಹುಡುಗಿ ದೇಶವೇ ಗುರುತಿಸುವ ಗಾಯಕಿಯಾಗುತ್ತಾಳೆ." ಆ ಮಾತು ಕೇಳಿ ತಾತನ ಕಣ್ಣುಗಳು ಹೊಳೆಯತೊಡಗಿದವು. ಆ ದಿನದಿಂದ ಅವನ ಮನಸ್ಸಿನಲ್ಲಿ ಹೊಸದಾದ ಒಂದು ಕನಸು ಹುಟ್ಟಿತು - "ನನ್ನ ಮೊಮ್ಮಗಳು ಒಂದು ದಿನ ದೊಡ್ಡ ಗಾಯಕಿಯಾಗಬೇಕು."

ಕನಸು ಕಾಣುವುದೇನೋ ಸುಲಭ. ಆದರೆ, ಆ ಕನಸನ್ನು ನನಸಾಗಿಸುವುದು ತುಂಬಾ ಕಷ್ಟ. ಸಂಗೀತ ಕಲಿಸಲು ಹಣ ಬೇಕು. ತಾತನ ಬಳಿ ಅಷ್ಟು ಹಣ ಇರಲಿಲ್ಲ. ಆದರೂ ಅವನು ಕೈಚೆಲ್ಲಲಿಲ್ಲ. ದೇವಾಲಯದ ಎದುರು, ಬಸ್ ನಿಲ್ದಾಣದಲ್ಲಿ, ವಾರದ ಸಂತೆಗಳಲ್ಲಿ ಮೈಥಿಲಿಯನ್ನು ಹಾಡಿಸುತ್ತಿದ್ದ. ಯಾರಾದರೂ ಐವತ್ತು ರೂಪಾಯಿ ಕೊಟ್ಟರೆ ತಾತನ ಮುಖ ಅರಳುತ್ತಿತ್ತು. 
"ಇದು ನಿನ್ನ ವಿದ್ಯೆಗೆ." ಎಂದು ಅವನು ಹಳೆಯ ಕಬ್ಬಿಣದ ಡಬ್ಬಿಯಲ್ಲಿ ಹಣ ಹಾಕುತ್ತಿದ್ದ. ಆ ಡಬ್ಬಿಯ ಮೇಲೆ ದೊಡ್ಡ ಅಕ್ಷರಗಳಲ್ಲಿ ಬರೆದಿದ್ದ - “ಮೈಥಿಲಿಯ ಸಂಗೀತ ಶಿಕ್ಷಣಕ್ಕಾಗಿ”. 
ಮೈಥಿಲಿ ಒಂದು ದಿನ ಅದನ್ನು ನೋಡಿ ಕೇಳಿದಳು. "ತಾತಾ... ಇದು ಏನು?" 
"ನಿನ್ನ ಕನಸಿನ ಡಬ್ಬಿ."
"ನನ್ನ ಕನಸಾ?"
"ಹೌದು...ಒಂದು ದಿನ ನೀನು ದೊಡ್ಡ ವೇದಿಕೆಯಲ್ಲಿ ಹಾಡಬೇಕು. ಅಲ್ಲಿ ಸಾವಿರಾರು ಜನ ನಿನ್ನ ಹಾಡು ಕೇಳಬೇಕು."
ಮೈಥಿಲಿ ನಗುತ್ತಾ ಹೇಳಿದಳು - "ನಾನು ದೊಡ್ಡವಳಾದ ಮೇಲೆ ಮೊದಲು ನಿನಗೆ ಒಂದು ಹೊಸ ಮನೆ ಕಟ್ಟಿಸ್ತೀನಿ."
ತಾತ ನಕ್ಕ. "ನನಗೆ ಮನೆ ಬೇಡ ಕಂದಾ...ನಿನ್ನ ಯಶಸ್ಸೇ ನನ್ನ ಅರಮನೆ."

*** 

ಅದೇ ಸಮಯದಲ್ಲಿ... 
ಬೆಂಗಳೂರು. ಖ್ಯಾತ ಗಾಯಕ ಮಧುರ್ ಅವರ ಮನೆಯಲ್ಲಿ ಮೌನವೇ ಮೌನ. ಹಾಡುಗಳಲ್ಲಿ ಸಾವಿರಾರು ಜನರನ್ನು ಕಣ್ಣೀರಿಡಿಸುತ್ತಿದ್ದ ಮಧುರ್, ತನ್ನ ಮನೆಯಲ್ಲಿ ಮಾತ್ರ ನಗುವುದನ್ನೇ ಮರೆತಿದ್ದ.  ಪ್ರತಿ ವರ್ಷದಂತೆ ಆ ವರ್ಷವೂ ಮಗಳ ಹುಟ್ಟುಹಬ್ಬದ ದಿನ ಬಂತು. ಮೀರಾ ಹಳೆಯ ಕಪಾಟು ತೆರೆದಳು. ಅದರೊಳಗೆ ಹನ್ನೆರಡು ವರ್ಷಗಳಿಂದ ಜೋಪಾನವಾಗಿ ಇಟ್ಟಿದ್ದ ಚಿಕ್ಕ ಫ್ರಾಕ್. ಪುಟ್ಟ ಬೂಟು. ಆಟದ ಗೊಂಬೆ. ಬೆಳ್ಳಿಯ ಬಳೆ. ಹಾಲು ಕುಡಿಸುವ ಬಾಟಲಿ. ಅವಳು ಅವನ್ನೆಲ್ಲ ಎದೆಗೆ ಹಚ್ಚಿಕೊಂಡು ಬಿಕ್ಕಿ ಬಿಕ್ಕಿ ಅತ್ತಳು. 
ಮಧುರ್ ಅವಳ ಬಳಿ ಬಂದ. "ಮೀರಾ..." 
ಅವಳು ಕಣ್ಣೀರಿನ ನಡುವೆಯೇ ಕೇಳಿದಳು - "ಇವತ್ತು ನಮ್ಮ ಮಗಳಿಗೆ ಹನ್ನೆರಡು ವರ್ಷ ಆಗುತ್ತಿತ್ತು ಅಲ್ವಾ?"
ಮಧುರ್ ಉತ್ತರ ಕೊಡಲಿಲ್ಲ. ಅವನ ಗಂಟಲು ಕಟ್ಟಿಕೊಂಡಿತ್ತು. ಪ್ರತಿ ವರ್ಷ ಇದೇ ದಿನ ಅವರು ಅನಾಥಾಶ್ರಮಗಳಿಗೆ ಹೋಗಿ ಮಕ್ಕಳಿಗೆ ಊಟ ಹಾಕಿಸುತ್ತಿದ್ದರು. "ಎಲ್ಲೋ ಒಂದು ಕಡೆ ನಮ್ಮ ಮಗಳೂ ಊಟ ಮಾಡ್ತಿರಬಹುದು..." ಎಂಬ ಭರವಸೆ ಅವರಿಬ್ಬರ ಬದುಕನ್ನು ಇನ್ನೂ ಹಿಡಿದು ನಿಲ್ಲಿಸಿತ್ತು.

ಆ ವರ್ಷ ಮತ್ತೊಂದು ವಿಶೇಷ ಸುದ್ದಿ ಇತ್ತು. ಚಿನ್ನೂರಿನ ಮಾರಮ್ಮನ ಜಾತ್ರೆಯ ಶತಮಾನೋತ್ಸವ. ದೊಡ್ಡ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯ ಗಾಯಕರಾಗಿ ಆಹ್ವಾನಿತರಾಗಿದ್ದವರು ಬೇರೆ ಯಾರೂ ಅಲ್ಲ - "ಮಧುರ್". ಆಮಂತ್ರಣ ಪತ್ರಿಕೆ ಕೈಗೆ ಬಂದಾಗ ಮಧುರ್ ಬಹಳ ಹೊತ್ತು ಅದನ್ನೇ ನೋಡುತ್ತಿದ್ದ. 
ಮೀರಾ ನಿಧಾನವಾಗಿ ಕೇಳಿದಳು, "ಹೋಗೋಣವಾ?" 
ಮಧುರ್ ಕಿಟಕಿಯಾಚೆ ನೋಡಿದ. "ಹೋಗೋಣ...ಒಂದು ವೇಳೆ...ಈ ಸಲ ದೇವಿ ನಮ್ಮ ಪ್ರಾರ್ಥನೆ ಕೇಳಿದರೆ?"
ಮೀರಾ ಏನೂ ಮಾತನಾಡಲಿಲ್ಲ. ಅವಳ ಕಣ್ಣುಗಳು ಮಾತ್ರ ಮತ್ತೆ ನೆನೆಯತೊಡಗಿದವು.

*** 

ಜಾತ್ರೆಯ ದಿನ. ಹನ್ನೆರಡು ವರ್ಷಗಳ ಹಿಂದಿನಂತೆಯೇ ಊರು ಸಂಭ್ರಮದಲ್ಲಿ ತೇಲುತ್ತಿತ್ತು. ಆದರೆ ಈ ಬಾರಿ ಜಾತ್ರೆಯ ಒಂದು ಮೂಲೆಯಲ್ಲಿ ಇಂಪಾದ ಸಂಗೀತ ಕೇಳಿಸುತ್ತಿತ್ತು. ಮೈಥಿಲಿ ತನ್ನ ತಾತನ ಜೊತೆ ಬೀದಿ ಬದಿಯಲ್ಲಿ ಕುಳಿತು ಹಾಡುತ್ತಿದ್ದಳು. ಅವಳ ಎದುರು ಒಂದು ಚಿಕ್ಕ ಹಿತ್ತಾಳೆ ತಟ್ಟೆ. ಅದರಲ್ಲಿ ಜನರು ಹಾಕುತ್ತಿದ್ದ ನೋಟುಗಳು. ಮಧುರ್ ಅವರ ಹಾಡು ಎಂದರೆ ಮೈಥಿಲಿಗೂ ಅಚ್ಚು ಮೆಚ್ಚು. ಆ ದಿನ ಅವಳು ಹಾಡುತ್ತಿದ್ದ ಹಾಡು ಮಧುರ್ ಅವರದ್ದೇ ಪ್ರಸಿದ್ಧ ಭಾವಗೀತೆ.
“ದೂರವಾದ ಹೆಜ್ಜೆಯು ಮರಳಿ ಬರದಿದ್ದರೂ,
ಹೃದಯದ ನೆನಪಿನ ರಾಗ ಮೌನವಾಗದು...”"
ಹಾಡಿನ ಪ್ರತಿಯೊಂದು ಪದದಲ್ಲೂ ಭಾವನೆಯ ಜೀವವಿತ್ತು. ಅಲ್ಲೇ ಕಾರಿನಿಂದ ಇಳಿದ ಮಧುರ್ ಹೆಜ್ಜೆ ನಿಲ್ಲಿಸಿದ. ಆ ಕಂಠ...ಅವನ ಹೃದಯವನ್ನು ನೇರವಾಗಿ ತಾಕಿತು. ಆ ಹಾಡು ಮುಗಿಯುವವರೆಗೂ ಮಧುರ್ ಅಲ್ಲೇ ನಿಂತ. ಜನರೆಲ್ಲ ಚಪ್ಪಾಳೆ ತಟ್ಟಿದರು. ಮಧುರ್ ಮಾತ್ರ ಮೈಥಿಲಿಯನ್ನೇ ನೋಡುತ್ತಿದ್ದ. ಏನೋ ವಿಚಿತ್ರವಾದ ಆಕರ್ಷಣೆ. ಏನೋ ಪರಿಚಿತ ಭಾವನೆ.
"ಏಕೆ ಈ ಹುಡುಗಿಯನ್ನು ನೋಡುತ್ತಿದ್ದಂತೆ ನನ್ನ ಮನಸ್ಸು ಹೀಗೆ ತಡಕಾಡುತ್ತಿದೆ?" ಎಂದು ಅವನು ತನ್ನೊಳಗೇ ಪ್ರಶ್ನಿಸಿಕೊಂಡ.
ಮಧುರ್ ಗೆ ಹನ್ನೆರಡು ವರ್ಷಗಳ ಹಿಂದೆ ತಾನು ಜಾತ್ರೆಯಲ್ಲಿ ಕಳೆದುಕೊಂಡ ತನ್ನ ಮಗುವಿನ ನೆನಪಾಗುತ್ತದೆ. ಅಷ್ಟರಲ್ಲಿ ಅವನ ಕಣ್ಣು ಅವಳ ಕುತ್ತಿಗೆಯತ್ತ ಹೋಯಿತು. ಒಂದು ಚಿಕ್ಕ ಬೆಳ್ಳಿಯ ಸರ. ಅದಕ್ಕೆ ಕಟ್ಟಿದ್ದ...ಮಾರಮ್ಮನ ತಾಯಿತ. ಅದೇ ವಿನ್ಯಾಸ. ಅದೇ ಆಕಾರ. ಅದೇ ತಾಯಿತ...ಹನ್ನೆರಡು ವರ್ಷಗಳ ಹಿಂದೆ ತನ್ನ ಮಗಳಿಗೆ ಹಾಕಿಸಿದ್ದದ್ದು. ಮಧುರ್‌ನ ಉಸಿರು ಬಿಗಿಯಿತು.
"ಇಲ್ಲ...ಇದು ಕಾಕತಾಳೀಯವೂ ಆಗಿರಬಹುದು..." ಎಂದು ತನ್ನನ್ನು ತಾನೇ ಸಮಾಧಾನಪಡಿಸಿಕೊಂಡ.
ಆದರೂ ಅವನ ಮನಸ್ಸು ಒಪ್ಪಲಿಲ್ಲ. ಅವನು ನಿಧಾನವಾಗಿ ಮೈಥಿಲಿಯ ಹತ್ತಿರ ಬಂದ. "ಮಗೂ... ನಿನ್ನ ಹೆಸರೇನು?"
"ಮೈಥಿಲಿ."
"ಈ ತಾಯಿತ ನಿನಗೆ ಯಾರು ಹಾಕಿದ್ದು?"
"ನನ್ನ ತಾತ."
"ತಾತ ಎಲ್ಲಿ ಇದ್ದಾರೆ?"
ಅಷ್ಟರಲ್ಲಿ ಪಕ್ಕದಲ್ಲೇ ಕುಳಿತಿದ್ದ ತಾತಯ್ಯ ಎದ್ದು ನಿಂತ. ಮಧುರ್ ಅವರಿಬ್ಬರನ್ನೂ ನೋಡುತ್ತಿದ್ದ. ಅವನ ದೃಷ್ಟಿ ಮತ್ತೆ ಮೈಥಿಲಿಯ ಭುಜದ ಮೇಲೆ ಬಿತ್ತು. ಅಲ್ಲೇ...ಅರ್ಧಚಂದ್ರದ ಆಕಾರದ ಚಿಕ್ಕ ಜನ್ಮಮಚ್ಚೆ. ಅವನ ಕೈಗಳು ನಡುಗಿದವು. ಹೃದಯ ಬಡಿತ ಹೆಚ್ಚಾಯಿತು. ಅವನು ಜೇಬಿನಿಂದ ಹಳೆಯದಾದ ಒಂದು ಪುಟ್ಟ ಫೋಟೋ ತೆಗೆದ. ಫೋಟೋದಲ್ಲಿದ್ದ ಮಗುವಿನ ಭುಜದ ಮೇಲೂ ಅದೇ ಜನ್ಮಮಚ್ಚೆ. ಮಧುರ್ ಕಂಬನಿ ತಡೆಯಲಾಗಲಿಲ್ಲ.
"ಇಲ್ಲ ಮಗೂ...ನಿನ್ನ ಹೆಸರು ಮೈಥಿಲಿ ಅಲ್ಲ..."
ಮೈಥಿಲಿಯ ಕೈಯಲ್ಲಿದ್ದ ತಾಳ ನೆಲಕ್ಕೆ ಬಿತ್ತು. ಸುತ್ತಲಿದ್ದ ಜನರು ಬೆರಗಾಗಿ ನೋಡತೊಡಗಿದರು. ತಾತನ ಮುಖ ಬಿಳಿಚಿತು.
"ನೀನು..." ಎಂದು ಮಧುರ್ ಮಾತು ಆರಂಭಿಸಿದ. "ನೀನು...ನನ್ನ ಮಗಳು."
ಅಷ್ಟರಲ್ಲಿ ಮೀರಾ ಕೂಡ ಅಲ್ಲಿಗೆ ಬಂದಳು. ಆ ಮಾತು ಕೇಳಿದ ಕ್ಷಣ...ಮೈಥಿಲಿಯ ಬದುಕು ಮಾತ್ರವಲ್ಲ...ಆ ನಾಲ್ಕೂ ಜನರ ಬದುಕೂ ಮತ್ತೊಮ್ಮೆ ಬದಲಾಗತೊಡಗಿತ್ತು...

*** 

ಆ ಒಂದು ಮಾತು..."ನೀನು ನನ್ನ ಮಗಳು..." ಮೈಥಿಲಿಯ ಕಿವಿಯಲ್ಲಿ ಮತ್ತೆ ಮತ್ತೆ ಪ್ರತಿಧ್ವನಿಸುತ್ತಿತ್ತು. ಅವಳು ಯಾರ ಮುಖವನ್ನೂ ನೋಡಲಾಗಲಿಲ್ಲ. ಮಧುರ್ ಮೀರಾ ಇಬ್ಬರೂ ಅಳುತ್ತಿದ್ದರು. ಮೀರಾ ಮಾತೇ ಬರದೆ ಮೈಥಿಲಿಯನ್ನೇ ನೋಡುತ್ತಿದ್ದಳು. ತಾತ ಮಾತ್ರ ತಲೆ ತಗ್ಗಿಸಿ ನಿಂತಿದ್ದರು. ಜನರು ಕುಸುಮುಸು ಮಾತನಾಡತೊಡಗಿದರು.
"ಅಯ್ಯೋ... ಇಷ್ಟು ವರ್ಷಗಳ ನಂತರ ಮಗಳು ಸಿಕ್ಕಿದ್ದಾಳಂತೆ..."
"ಹಾಗಾದ್ರೆ ಈ ತಾತ ಮಗುವನ್ನು ಯಾಕೆ ಇಟ್ಟುಕೊಂಡ?"
"ಪೊಲೀಸರಿಗೆ ಕೊಡಬೇಕಿತ್ತಲ್ಲ..."
ಆ ಮಾತುಗಳು ತಾತನ ಕಿವಿಗೂ ಬಿದ್ದವು. 
ಗಾಬರಿಯಲ್ಲಿದ್ದ ಮೈಥಿಲಿ "ತಾತಾ... ಇವರು ಏನು ಹೇಳ್ತಿದ್ದಾರೆ?"ಎಂದು ಅವಳು ತನ್ನನ್ನು ಸಾಕಿದ ತಾತನತ್ತ ತಿರುಗಿ ನೋಡಿದಳು." ನಿನ್ನ ಭುಜದ ಮೇಲೆ ಇದೇ ಮಚ್ಚೆ ಇದೆಯಾ?"
ತಾತಯ್ಯ ಒಂದು ಮಾತನ್ನೂ ಆಡದೆ ಮೈಥಿಲಿಯ ಕೈ ಹಿಡಿದು ಅಲ್ಲಿಂದ ಹೊರಟರು.

ಆ ರಾತ್ರಿ ಗುಡಿಸಲಿನಲ್ಲಿ ಎಂದಿನಂತೆ ದೀಪ ಉರಿಯುತ್ತಿತ್ತು. ಆದರೆ ಆ ಮನೆಯೊಳಗೆ ಮಾತ್ರ ಕತ್ತಲು ತುಂಬಿತ್ತು. ಮೈಥಿಲಿಗೆ ಊಟ ಸೇರಲಿಲ್ಲ. ತಾತ ಕೂಡ ಅನ್ನದ ತಟ್ಟೆಯನ್ನು ಮುಟ್ಟಲಿಲ್ಲ. ಬಹಳ ಹೊತ್ತು ಇಬ್ಬರೂ ಮೌನವಾಗಿಯೇ ಕುಳಿತಿದ್ದರು. 
ಕೊನೆಗೆ ಮೈಥಿಲಿಯೇ ಮೌನ ಮುರಿದಳು - 
"ತಾತ..."
"ಹೂಂ..."
"ನಾನು ನಿಜವಾಗಿಯೂ ಅವರ ಮಗಳಾ?"
ತಾತನ ಎದೆ ನಡುಗಿತು. ಸ್ವಲ್ಪ ಹೊತ್ತು ಕಣ್ಣು ಮುಚ್ಚಿಕೊಂಡರು. ನಂತರ ನಿಧಾನವಾಗಿ ತಲೆಯಾಡಿಸಿದರು. "ಹೌದು ಕಂದಾ..."
ಆ ಒಂದು ಉತ್ತರ ಕೇಳಿದ ಕ್ಷಣ ಮೈಥಿಲಿಯ ಕಣ್ಣೀರು ಧಾರೆಯಾಗಿ ಹರಿಯತೊಡಗಿತು.  "ಅಂದ್ರೆ ಇಷ್ಟು ವರ್ಷ ನೀನು ನನಗೆ ಸುಳ್ಳು ಹೇಳಿದ್ದೀಯಾ?"
ತಾತನ ತುಟಿಗಳು ನಡುಗಿದವು. "ನಾನು ಸುಳ್ಳು ಹೇಳಿಲ್ಲ ಕಂದಾ ಸತ್ಯ ಹೇಳೋ ಧೈರ್ಯ ಮಾಡಲಿಲ್ಲ."
"ಯಾಕೆ?"
"ಯಾಕಂದ್ರೆ, ಒಂದು ದಿನ ನೀನು ನನ್ನನ್ನು ಬಿಟ್ಟು ಹೋಗ್ತೀಯಾ ಅನ್ನೋ ಭಯ."
ಮೈಥಿಲಿ ಎದ್ದು ತಾತನ ಹತ್ತಿರ ಕುಳಿತಳು - "ನನಗೆ ಎಲ್ಲ ಸತ್ಯ ಹೇಳು."

ತಾತ ದೀರ್ಘ ನಿಟ್ಟುಸಿರು ಬಿಟ್ಟರು. "ಆ ದಿನ ದೇವಸ್ಥಾನದ ಹಿಂದೆ ನಿನ್ನನ್ನು ಎತ್ತಿಕೊಂಡಾಗ, ನಿನ್ನ ಅಳುವಿಗಿಂತ ನನ್ನ ಒಂಟಿತನ ಜಾಸ್ತಿ ಅಳುತ್ತಿತ್ತು."
"ನಾನು ಪೊಲೀಸ್ ಠಾಣೆಗೆ ಹೋದೆ. ಆದರೆ ಅವರು ಜಾತ್ರೆಯ ಗಡಿಬಿಡಿಯಲ್ಲಿ ಸರಿಯಾಗಿ ಸ್ಪಂದಿಸದೆ, ನಿನ್ನನ್ನು ಅನಾಥಾಶ್ರಮಕ್ಕೆ ಕಳುಹಿಸ್ತೀವಿ ಅಂದ್ರು. ಅಲ್ಲಿ ನಿನ್ನನ್ನು ಬಿಡಲು ಮನಸ್ಸಾಗದೆ ನಾನು ಹಿಂದಿರುಗಿದೆ. ಮುಂದಿನ ಮೂರು ವಾರ...ಪ್ರತಿದಿನ ನಿನ್ನನ್ನು ಕರೆದುಕೊಂಡು ಬೇರೆ ಬೇರೆ ಊರುಗಳಿಗೆ ಹೋದೆ. 'ಯಾರಾದ್ರೂ ಮಗು ಕಳೆದುಕೊಂಡಿದ್ದೀರಾ?' ಅಂತ ಕೇಳುತ್ತಾ ತಿರುಗಿದೆ. ದೇವಾಲಯಗಳಲ್ಲಿ ಪ್ರಕಟಣೆ ಮಾಡಿಸಿದೆ. ಬಸ್ ನಿಲ್ದಾಣಗಳಲ್ಲಿ ವಿಚಾರಿಸಿದೆ. ಯಾರೂ ಸಿಗಲಿಲ್ಲ."
ತಾತನ ಧ್ವನಿ ಭಾರವಾಯಿತು. "ಆಮೇಲೆ... ಒಂದು ದಿನ ನೀನು ಜ್ವರದಿಂದ ಬಳಲುತ್ತಿದ್ದೆ. ರಾತ್ರಿ ಪೂರ್ತಿ ನಿನ್ನನ್ನು ಎದೆಗೆ ಹಚ್ಚಿಕೊಂಡು ಕುಳಿತಿದ್ದೆ. ಬೆಳಗ್ಗೆ ಜ್ವರ ಇಳಿದಾಗ ನೀನು ಮೊದಲ ಸಲ ನನ್ನ ಮುಖ ನೋಡಿ ನಕ್ಕೆ. ಆ ನಗು ನನ್ನ ಸತ್ತ ಬದುಕಿಗೆ ಮತ್ತೆ ಉಸಿರು ಕೊಟ್ಟಿತು."
ಮೈಥಿಲಿಯ ಕಣ್ಣೀರು ನಿಲ್ಲಲಿಲ್ಲ.
"ನಾನು ನಿನ್ನನ್ನು ಕದಿಯಲಿಲ್ಲ ಕಂದಾ. ಆದರೆ ನಿನ್ನನ್ನು ಕಳೆದುಕೊಳ್ಳುವ ಧೈರ್ಯ ನನಗಿರಲಿಲ್ಲ." ಅಷ್ಟೇ ಹೇಳಿ ತಾತ ಮುಖ ಮುಚ್ಚಿಕೊಂಡು ಅತ್ತರು.
ಮೊದಲ ಬಾರಿಗೆ ಮೈಥಿಲಿ ತನ್ನ ತಾತ ಮಗುವಿನಂತೆ ಅಳುವುದನ್ನು ನೋಡಿದಳು. ಅವಳು ಓಡಿ ಹೋಗಿ ಅವರನ್ನು ತಬ್ಬಿಕೊಂಡಳು. "ನೀನು ನನ್ನ ತಾತನೇ...ಯಾರೇ ಏನು ಹೇಳಲಿ." 
ತಾತ ಅವಳನ್ನು ಬಿಗಿಯಾಗಿ ಅಪ್ಪಿಕೊಂಡು ಇನ್ನಷ್ಟು ಅತ್ತರು.


ಅದೇ ಹೊತ್ತಿಗೆ ಮಧುರ್ ಮತ್ತು ಮೀರಾ ತಾತಯ್ಯನ ಗುಡಿಸಲಿಗೆ ಬಂದರು. ಇಬ್ಬರಿಗೂ ತಾತಯ್ಯನ ಮೇಲೆ ಕೋಪ ಇರಲಿಲ್ಲ. 
ಮಧುರ್ ತಾತನ ಎದುರು ಕೈಮುಗಿದು ನಿಂತ. "ನಿಮ್ಮ ಮೇಲೆ ನಮಗೆ ಯಾವ ದ್ವೇಷವೂ ಇಲ್ಲ."
ತಾತ ಆಶ್ಚರ್ಯದಿಂದ ನೋಡಿದರು.
“ನೀವು ನನ್ನ ಮಗಳನ್ನು ನಮ್ಮಿಂದ ಕಸಿದುಕೊಳ್ಳಲಿಲ್ಲ. ಅವಳು ಅನಾಥಳಾಗದಂತೆ ಕಾಪಾಡಿ, ಬದುಕು ಕೊಟ್ಟಿದ್ದೀರಿ.”
ಮೀರಾ ಕಣ್ಣೀರನ್ನು ಒರೆಸಿಕೊಂಡಳು. "ಆದರೆ, ಒಬ್ಬ ತಾಯಿಯಾಗಿ ನನಗೂ ನನ್ನ ಮಗಳು ಬೇಕು."
ಆ ಮಾತು ಕೇಳಿ ತಾತ ಮೌನವಾದರು. ಮೈಥಿಲಿ ಮಾತ್ರ ಮೂವರನ್ನೂ ನೋಡುತ್ತಾ ನಿಂತಳು. ಅವಳ ಮನಸ್ಸು ಎರಡು ದಿಕ್ಕಿನಲ್ಲಿ ಎಳೆಯಲ್ಪಡುತ್ತಿತ್ತು.
ಒಂದೆಡೆ ಜನ್ಮ ನೀಡಿದ ತಂದೆ-ತಾಯಿ. ಮತ್ತೊಂದೆಡೆ ಬದುಕನ್ನೇ ಕೊಟ್ಟ ತಾತ.

ಮೈಥಿಲಿಯ ಪಾಲಕತ್ವದ ವಿಚಾರದಲ್ಲಿ ಕಾನೂನುಬದ್ಧ ತೀರ್ಮಾನ ಅಗತ್ಯವಾಗಿದ್ದರಿಂದ, ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ಕೆಲ ದಿನಗಳ ನಂತರ ಕಾನೂನು ಪ್ರಕ್ರಿಯೆ ಆರಂಭವಾಯಿತು. ಜನ್ಮಮಚ್ಚೆ, ಬೆಳ್ಳಿಯ ಸರ, ದೇವಿಯ ತಾಯಿತ - ಎಲ್ಲವೂ ಮೈಥಿಲಿ ಮಧುರ್ ಮತ್ತು ಮೀರಾಳ ಮಗಳೇ ಅಂತ ದೃಢಪಡಿಸುತ್ತಿದ್ದವು. ಆದರೂ ನ್ಯಾಯಾಲಯ ಖಚಿತ ಸಾಕ್ಷಿ ಬಯಸಿತು. DNA ಪರೀಕ್ಷೆಗೆ ಆದೇಶ ನೀಡಲಾಯಿತು. ಮೈಥಿಲಿ ಮೊದಲ ಬಾರಿಗೆ ದೊಡ್ಡ ಆಸ್ಪತ್ರೆಗೆ ಹೋದಳು. ರಕ್ತದ ಮಾದರಿ ತೆಗೆದುಕೊಳ್ಳುವಾಗ ಅವಳು ಹೆದರಿದಳು. ತಾತ ಅವಳ ಕೈ ಹಿಡಿದು ಹೇಳಿದರು. "ಭಯ ಬೇಡ ಕಂದಾ, ಸತ್ಯ ಯಾವಾಗಲೂ ಗೆಲ್ಲುತ್ತೆ."
ಕೆಲ ದಿನಗಳ ನಿರೀಕ್ಷೆ. ಆ ದಿನ ವರದಿ ಬಂತು. ವರದಿ ಕೈಗೆತ್ತಿಕೊಂಡ ವೈದ್ಯರು ನಗುತ್ತಾ ಹೇಳಿದರು. "ಯಾವ ಅನುಮಾನವೂ ಇಲ್ಲ, ಮೈಥಿಲಿಯೇ ಮಧುರ್ ಮತ್ತು ಮೀರಾ ಅವರ ಜೈವಿಕ ಮಗಳು."
ಆಸ್ಪತ್ರೆಯ ಆ ಕೊಠಡಿಯಲ್ಲಿ ಕೆಲ ಕ್ಷಣ ಮೌನ. ಮಧುರ್ ಕಣ್ಣಲ್ಲಿ ಕಣ್ಣೇರು ತುಂಬಿ ಬಂತು. ಮೀರಾ ಕಣ್ಣುಮುಚ್ಚಿ ದೇವರಿಗೆ ಕೈ ಮುಗಿದಳು. ತಾತ ಮಾತ್ರ ಹೊರಗಿನ ಆಕಾಶವನ್ನು ನೋಡುತ್ತಾ ನಿಂತರು. "ದೇವರೇ...ನಾನು ಹೆದರುತ್ತಿದ್ದ ದಿನ ಬಂದೇ ಬಿಟ್ಟಿತು..." ಎಂದು ಮನಸ್ಸಿನಲ್ಲೇ ಹೇಳಿದರು.

ಕೊನೆಗೂ ವಿಚಾರಣೆ ದಿನ ಬಂತು. ನ್ಯಾಯಾಲಯ ಜನರಿಂದ ತುಂಬಿತ್ತು.ಈ ಪ್ರಕರಣ ರಾಜ್ಯದಾದ್ಯಂತ ಸುದ್ದಿಯಾಗಿತ್ತು. 
ಒಬ್ಬ ವಕೀಲ ಎದ್ದು ನಿಂತ. "ಮಾನ್ಯ ನ್ಯಾಯಾಧೀಶರೇ, ಮೈಥಿಲಿಯ ಜೈವಿಕ ತಂದೆ–ತಾಯಿ ಯಾರೆಂಬುದು DNA ಪರೀಕ್ಷೆಯಿಂದ ದೃಢಪಟ್ಟಿದೆ. ಆಕೆಯ ಪಾಲನೆ, ಶಿಕ್ಷಣ ಮತ್ತು ಭವಿಷ್ಯದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಅವರು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಆದ್ದರಿಂದ, ಮಗುವಿನ ಹಿತದೃಷ್ಟಿಯಿಂದ ಆಕೆಯ ಕಾನೂನುಬದ್ಧ ಪಾಲಕತ್ವವನ್ನು ಅವರಿಗೇ ನೀಡಬೇಕೆಂದು ವಿನಂತಿಸುತ್ತೇನೆ"
ಇನ್ನೊಬ್ಬ ವಕೀಲ ಎದ್ದ. "ಆದರೆ...ಈ ಮಗುವಿನ ಬದುಕನ್ನು ಇಷ್ಟರವರೆಗೆ ಯಾವುದೇ ಕೊರತೆ ಇಲ್ಲದಂತೆ ಕಟ್ಟಿಕೊಟ್ಟವರು ಈ ವೃದ್ಧರು.ಅವರ ಪ್ರೀತಿಯನ್ನೂ ನ್ಯಾಯಾಲಯ ಮರೆಯಬಾರದು."
ಎರಡೂ ಕಡೆಯ ವಾದ ಮುಗಿಯಿತು. 
ನ್ಯಾಯಾಧೀಶರು ತಾತನನ್ನು ಕೇಳಿದರು. "ನಿಮಗೆ ಏನಾದರೂ ಹೇಳಬೇಕೆ?"
ತಾತ ನಿಧಾನವಾಗಿ ಎದ್ದರು. ಕೈಗಳು ನಡುಗುತ್ತಿದ್ದವು. "ನನಗೆ ಒಂದೇ ಒಂದು ಮಾತು ಹೇಳಬೇಕಿದೆ." ಇಡೀ ನ್ಯಾಯಾಲಯ ಮೌನವಾಯಿತು."ಮೈಥಿಲಿ - ನನ್ನ ಬದುಕಿನ ಬೆಳಕು. ಆದರೆ, ಅವಳ ಸಂತೋಷಕ್ಕಿಂತ ನನ್ನ ಸಂತೋಷ ದೊಡ್ಡದಲ್ಲ. ಅವಳು ತನ್ನ ಅಪ್ಪ-ಅಮ್ಮ ಜೊತೆ ಹೋದರೆ, ನಾನು ಅಳಬಹುದು. ಆದರೆ, ಅವಳ ಭವಿಷ್ಯಕ್ಕಾಗಿ ಆ ಕಣ್ಣೀರನ್ನೂ ಸಂತೋಷದಿಂದ ಒರೆಸಿಕೊಳ್ಳುತ್ತೇನೆ."
ಅಲ್ಲಿ ನೆರೆದಿದ್ದವರ ಕಣ್ಣುಗಳು ತೇವಗೊಂಡವು. ಮಧುರ್ ತಲೆ ತಗ್ಗಿಸಿದ. ಮೀರಾ ಕಂಬನಿ ಒರೆಸಿಕೊಂಡಳು.
ಕೊನೆಯದಾಗಿ ನ್ಯಾಯಾಧೀಶರು ಮೈಥಿಲಿಯತ್ತ ನೋಡಿದರು. "ಮಗೂ, ನಿನ್ನ ಅಭಿಪ್ರಾಯ ಏನು?" ಇಡೀ ನ್ಯಾಯಾಲಯ ಮೌನವಾಗಿತ್ತು. 

ಮೈಥಿಲಿ ನಿಧಾನವಾಗಿ ಎದ್ದಳು. ಮೊದಲು ಮಧುರ್ ಮತ್ತು ಮೀರಾ ಬಳಿ ಹೋದಳು. ಅವರ ಕೈ ಹಿಡಿದಳು. ತಾತನ ಎದೆ ಝಲ್ ಎಂದಿತು. ನಂತರ ಮೈಥಿಲಿ ತಾತನ ಬಳಿ ಹೋಗಿ ಅವರ ಕೈಯನ್ನೂ ಹಿಡಿದಳು. ಮೂರು ಕೈಗಳು ಒಂದಾದವು. ಅವಳು ಕಣ್ಣೀರಿನ ಧ್ವನಿಯಲ್ಲಿ ಹೇಳಿದಳು - "ನಾನು ಯಾರನ್ನೂ ಬಿಡೋದಿಲ್ಲ. ಇವರು ನನಗೆ ಜನ್ಮ ಕೊಟ್ಟವರು. ಇವರು ನನಗೆ ಬದುಕು ಕೊಟ್ಟವರು. ಜನ್ಮವಿಲ್ಲದಿದ್ದರೆ ನಾನು ಈ ಜಗತ್ತಿನಲ್ಲಿ ಇರ್ತಿರಲಿಲ್ಲ. ಆದರೆ, ತಾತ ಇಲ್ಲದಿದ್ದರೆ ನಾನು ಇವತ್ತು ಈ ಜಗತ್ತಿನಲ್ಲಿ ಬದುಕೇ ಇರ್ತಿರಲಿಲ್ಲ.  ಒಬ್ಬರನ್ನು ಆಯ್ಕೆ ಮಾಡು ಅಂದ್ರೆ, ನನ್ನ ಹೃದಯವನ್ನೇ ಎರಡು ಭಾಗ ಮಾಡು ಅಂತ ಹೇಳಿದ ಹಾಗೆ."
ಮೈಥಿಲಿಯ ಉತ್ತರ ಕೇಳಿದ ನ್ಯಾಯಾಲಯದಲ್ಲಿ ಕೆಲವು ಕ್ಷಣ ಗಾಢ ಮೌನ ಆವರಿಸಿತು. ನ್ಯಾಯಾಧೀಶರ ಕಣ್ಣುಗಳಲ್ಲೂ ಮೃದುತ್ವ ಮೂಡಿತು. ಹಿಂಬದಿ ಕುಳಿತಿದ್ದ ಕೆಲವರು ತಮ್ಮ ಕಂಬನಿ ಒರೆಸಿಕೊಂಡರು. ನ್ಯಾಯಾಲಯದೊಳಗೆ ಯಾರೂ ಮಾತನಾಡಲಿಲ್ಲ. ತೇವಗೊಂಡ ಕಣ್ಣುಗಳೇ ಅವರ ಮನದ ಭಾವನೆಗೆ ಸಾಕ್ಷಿಯಾಗಿದ್ದವು. ನ್ಯಾಯಾಧೀಶರ ಗಂಭೀರ ಮುಖದಲ್ಲೂ ಮೃದು ಭಾವವೊಂದು ಮೂಡಿತು. ನಂತರ ಮೈಥಿಲಿಯ ಜೈವಿಕ ತಂದೆ–ತಾಯಿಗೆ ಕಾನೂನುಬದ್ಧ ಪಾಲಕತ್ವ ನೀಡಿ, ಅವಳ ಭಾವನಾತ್ಮಕ ಹಿತದೃಷ್ಟಿಯಿಂದ ತಾತನೊಂದಿಗೆ ನಿರ್ಬಂಧರಹಿತ ಸಂಪರ್ಕ ಮತ್ತು ಸಹವಾಸ ಮುಂದುವರಿಯುವಂತೆ ನ್ಯಾಯಾಲಯ ಆದೇಶಿಸಿತು.

ನ್ಯಾಯಾಲಯದಿಂದ ಹೊರಗೆ ಬಂದೊಡನೆ ಮಧುರ್ ತಾತನ ಕಾಲಿಗೆ ಶರಣಾಗಿ ಬಿದ್ದ. "ತಾತಾ, ಯಾವ ಜನ್ಮದಲ್ಲಿ ನೀವು ನನ್ನ ತಂದೆಯಾಗಿದ್ರೋ ನನಗೆ  ತಿಳಿಯದು. ನನ್ನ ಮಗಳನ್ನು ನೀವು ಉಳಿಸಿದ್ದೀರಿ. ನಾನು ಕಳೆದುಕೊಂಡಿದ್ದ ನನ್ನ ಜೀವನವನ್ನೇ ನೀವು ನನಗೆ ಮರಳಿ ಕೊಟ್ಟಿದ್ದೀರಿ." ಅಂತ ಕಣ್ಣೀರಿಟ್ಟ. 
ತಾತ  ಅವನನ್ನು ಎಬ್ಬಿಸಿ, " ನಾನು ಏನೂ ಮಾಡಲಿಲ್ಲ. ನಾನು ನಿಮಿತ್ತ ಮಾತ್ರ. ದೇವರು ಕೊಟ್ಟ ಜವಾಬ್ದಾರಿಯನ್ನು ಕೆಲವು ವರ್ಷಗಳ  ಮಟ್ಟಿಗೆ ನಾನು ಹೊತ್ತಿದ್ದೆ ಅಷ್ಟೇ" ಅಂತ ಮಂದಹಾಸ ಬೀರುತ್ತಾ ಹೇಳಿದ. 
ಆ ಕೂಡಲೇ ಮಧುರ್ ಬಹುದೊಡ್ಡ ನಿರ್ಧಾರ ಒಂದನ್ನು ಮಾಡಿದ. ಮೈಥಿಲಿಯನ್ನು ತನ್ನ ಜೊತೆ ಕರೆದುಕೊಂಡು ಹೋಗುವ ಬದಲಿಗೆ, ತಾತನನ್ನೇ ತನ್ನ ಜೊತೆ ತನ್ನ ಮನೆಗೆ ಕರೆದುಕೊಂಡು ಹೋದ. "ಇನ್ನು ಮುಂದೆ, ಮೈಥಿಲಿ ನಿಮ್ಮ ಮೊಮ್ಮಗಳಲ್ಲ, ನಮ್ಮ ಮಗಳು. ಮತ್ತೆ ನೀವು.... ನನ್ನ ಅಪ್ಪ." ಅಂದ ಮಧುರ್. 
ಇದನ್ನು ಕೇಳಿದ ತಾತನಿಗೆ ಕಣ್ಣು ತುಂಬಿ ಬಂದು ಬೆರಗಾಗಿ ಅವರನ್ನು ನೋಡಿದರು. ಮೀರಾ ಮುಂದೆ ಬಂದು ತಾತನ ಕಾಲಿಗೆ ನಮಸ್ಕರಿಸಿದಳು. "ನಮ್ಮ ಮಗಳನ್ನು ಉಳಿಸಿದ ನಿಮ್ಮ ಋಣ ನಾವು ಎಂದಿಗೂ ತೀರಿಸಲಾರೆವು."
ತಾತನ ತುಟಿಗಳ ಮೇಲೆ ನಗು ಮೂಡಿತು. ಅದು ಗೆಲುವಿನ ನಗುವಲ್ಲ, ಒಬ್ಬ ತಾತ ತನ್ನ ಮೊಮ್ಮಗಳನ್ನು ಮತ್ತೆ ಕಳೆದುಕೊಳ್ಳದ ನಿಟ್ಟುಸಿರಿನ ನಗು. ಮಧುರ್ ಮಾತನ್ನು ಒಪ್ಪಿಕೊಂಡು ಅವರ ಜೊತೆ ಮೈಥಿಲಿ ಮತ್ತು ತಾತ ಇಬ್ಬರೂ ಮಧುರ್ ನ ಮನೆಗೆ ಹೋದರು.

***

ನ್ಯಾಯಾಲಯದ ತೀರ್ಪಿನ ನಂತರ ಮೈಥಿಲಿಯ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಯಿತು. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ.
ಇದುವರೆಗೆ ಗುಡಿಸಲಿನ ನಾಲ್ಕು ಗೋಡೆಗಳ ನಡುವೆ ಬದುಕಿದ್ದ ಹುಡುಗಿಗೆ, ಬೆಂಗಳೂರಿನ ವಿಶಾಲ ಬಂಗಲೆ ಹೊಸ ಪ್ರಪಂಚದಂತಿತ್ತು. ಮನೆಯ ಮುಂದೆ ಸುಂದರ ತೋಟ, ಒಳಗೆ ಹೊಳೆಯುವ ನೆಲ, ದೊಡ್ಡ ದೊಡ್ಡ ಕೊಠಡಿಗಳು, ಪುಸ್ತಕಗಳಿಂದ ತುಂಬಿದ ಗ್ರಂಥಾಲಯ, ಸಂಗೀತ ಸಾಧನಗಳಿಂದ ಕಂಗೊಳಿಸುತ್ತಿದ್ದ ವಿಶೇಷ ಕೊಠಡಿ... ಎಲ್ಲವೂ ಮೈಥಿಲಿಗೆ ಹೊಸ ಅನುಭವ.
ಆದರೆ ಆ ಐಷಾರಾಮಿನ ಮಧ್ಯೆಯೂ ಅವಳ ಕಣ್ಣುಗಳು ಹುಡುಕುತ್ತಿದ್ದದ್ದು ಒಂದೇ ಮುಖ...ತಾತ.
ಮೊದಲ ದಿನ ರಾತ್ರಿ ಮೃದುವಾದ ಹಾಸಿಗೆಯ ಮೇಲೆ ಮಲಗಿದರೂ ಅವಳಿಗೆ ನಿದ್ದೆ ಬರಲಿಲ್ಲ. "ತಾತಾ..." ಎಂದು ಕೂಗುತ್ತಲೇ ಎದ್ದು ಕುಳಿತಳು. 
ಅಷ್ಟರಲ್ಲಿ ಪಕ್ಕದ ಕೊಠಡಿಯಿಂದ ತಾತ ಓಡಿಬಂದರು. "ಏನಾಯ್ತು ಕಂದಾ?"
ಮೈಥಿಲಿ ಓಡಿ ಬಂದು ತಾತನನ್ನು ಅಪ್ಪಿಕೊಂಡಳು. "ನೀನು ಇಲ್ಲದಿದ್ದರೆ ನನಗೆ ನಿದ್ರೆ ಬರಲ್ಲ..."
ತಾತನ ಕಣ್ಣು ಮತ್ತೆ ನೆನೆಯಿತು.
ಮಧುರ್ ಮತ್ತು ಮೀರಾ ದೂರದಿಂದ ಆ ದೃಶ್ಯ ನೋಡುತ್ತಿದ್ದರು. ಮಧುರ್ ನಿಧಾನವಾಗಿ ಮೀರಾಳ ಕಡೆ ತಿರುಗಿ ಹೇಳಿದರು - "ನಾವು ಇವಳಿಗೆ ಜನ್ಮ ಕೊಟ್ಟಿದ್ದೇವೆ...ಆದರೆ ಅಪ್ಪನೆಂದರೆ ಯಾರು ಅನ್ನೋದನ್ನು ಈ ತಾತ ಕಲಿಸಿದ್ದಾರೆ."

ಕೆಲವೇ ದಿನಗಳಲ್ಲಿ ಮಧುರ್ ಒಂದು ವಿಶೇಷ ಕೆಲಸ ಮಾಡಿದ. ಮನೆಯ ಹಾಲ್‌ನಲ್ಲಿ ಮೂರು ದೊಡ್ಡ ಫೋಟೋಗಳನ್ನು ಹಾಕಿಸಿದ. ಒಂದರಲ್ಲಿ ಮಾರಮ್ಮ ದೇವಿಯ ಚಿತ್ರ. ಎರಡನೆಯದರಲ್ಲಿ ಮೈಥಿಲಿಯ ಬಾಲ್ಯದ ಚಿತ್ರ. ಮೂರನೆಯದು, ತಾತ ಮೈಥಿಲಿಯನ್ನು ಹೆಗಲ ಮೇಲೆ ಕೂರಿಸಿಕೊಂಡಿದ್ದ ಹಳೆಯ ಫೋಟೋ.
ಅದನ್ನು ನೋಡಿ ತಾತ ಕೇಳಿದರು "ಇದೇಕೆ?" 
ಮಧುರ್ ನಕ್ಕು, "ಈ ಮನೆ ಕಟ್ಟಿದ್ದು ನಾನು. ಆದರೆ ಈ ಮನೆಯ ನಿಜವಾದ ಆಧಾರ ನೀವು."

ಮೀರಾಳ ಜೀವನವೂ ನಿಧಾನವಾಗಿ ಬದಲಾಗತೊಡಗಿತು. ಹನ್ನೆರಡು ವರ್ಷಗಳಿಂದ ಮುಚ್ಚಿಟ್ಟಿದ್ದ ಮಗುವಿನ ಬಟ್ಟೆಗಳನ್ನು ಒಂದು ದಿನ ಹೊರತೆಗೆದಳು. ಅವುಗಳನ್ನು ಮೈಥಿಲಿಗೆ ತೋರಿಸಿದಳು. "ನೋಡು ಮಗಳೇ...ಇವೆಲ್ಲ ನಿನ್ನದು."
ಮೈಥಿಲಿ ಒಂದೊಂದನ್ನೂ ಕೈಯಲ್ಲಿ ಹಿಡಿದು ನೋಡುತ್ತಿದ್ದಳು. ಚಿಕ್ಕ ಫ್ರಾಕ್, ಚಿಕ್ಕ ಆಟಿಕೆ, ಚಿಕ್ಕ ಕಾಲುಚೀಲ, ಚಿಕ್ಕ ಹಾಲಿನ ಬಾಟಲಿ. 
ಹಠಾತ್ತನೆ ಅವಳು ಮೀರಾಳ ಕೈ ಹಿಡಿದಳು.  "ಅಮ್ಮ..." 
ಆ ಒಂದು ಮಾತಿಗಾಗಿ ಹನ್ನೆರಡು ವರ್ಷಗಳಿಂದ ಕಾಯುತ್ತಿದ್ದ ಮೀರಾ ಜೋರಾಗಿ ಅತ್ತುಬಿಟ್ಟಳು. ಮೈಥಿಲಿಯನ್ನು ಎದೆಗೆ ಹಚ್ಚಿಕೊಂಡಳು.
ತಾತ ದೂರದಲ್ಲಿ ನಿಂತು ಕಂಬನಿ ಒರೆಸಿಕೊಂಡರು. "ಮಾರಮ್ಮ...ನನ್ನ ಮೊಮ್ಮಗಳಿಗೆ ನೀನಲ್ಲದೆ ಮತ್ತೊಂದು ಅಮ್ಮ ಸಿಕ್ಕಳು..." ಎಂದು ದೇವರಿಗೆ ಮನಸ್ಸಿನಲ್ಲೇ ಧನ್ಯವಾದ ಹೇಳಿದರು.

ದಿನಗಳು ಸಾಗಿದವು. ಮಧುರ್ ಸ್ವತಃ ಮೈಥಿಲಿಗೆ ಸಂಗೀತ ಕಲಿಸಲು ಆರಂಭಿಸಿದರು. ಮೊದಲ ದಿನ ತಂಬೂರಿಯನ್ನು  ಅವಳ ಕೈಗೆ ಕೊಟ್ಟು ಹೇಳಿದರು "ಹಾಡುವುದು ಕಂಠದಿಂದ ಅಲ್ಲ ಕಂದಾ...ಹೃದಯದಿಂದ." ಮೈಥಿಲಿ ಗಮನದಿಂದ ಕೇಳುತ್ತಿದ್ದಳು. ಬೆಳಿಗ್ಗೆ ಮೂರು ಗಂಟೆಗಳ ಅಭ್ಯಾಸ. ಸಂಜೆ ಎರಡು ಗಂಟೆಗಳ ಅಭ್ಯಾಸ. ಸ್ವರ, ಲಯ, ಭಾವ - ಪ್ರತಿ ದಿನ ಅವಳು ಹೊಸದನ್ನು ಕಲಿಯುತ್ತಿದ್ದಳು. 
ಕೆಲವೊಮ್ಮೆ ತಪ್ಪು ಮಾಡಿದರೆ ಮಧುರ್ ನಗುತ್ತಿದ್ದರು. "ತಪ್ಪು ಮಾಡದ ಗಾಯಕ ಯಾರೂ ಇಲ್ಲ. ಆದರೆ ಅದೇ ತಪ್ಪನ್ನು ಮತ್ತೆ ಮಾಡದವನೇ ಕಲಾವಿದ." ಮೈಥಿಲಿ ತಲೆಬಾಗುತ್ತಾ ಮತ್ತೆ ಅಭ್ಯಾಸ ಮಾಡುತ್ತಿದ್ದಳು. 
ತಾತ ಪ್ರತಿದಿನ ಬಾಗಿಲಿನ ಹಿಂದೆ ಕುಳಿತು ಅವಳ ಹಾಡು ಕೇಳುತ್ತಿದ್ದರು. ಅವರಿಗೆ ಸಂಗೀತದ ವ್ಯಾಕರಣ ಗೊತ್ತಿರಲಿಲ್ಲ. ಆದರೆ ಮೈಥಿಲಿಯ ಪ್ರತಿಯೊಂದು ಸ್ವರವೂ ಅವರ ಹೃದಯವನ್ನು ತಲುಪುತ್ತಿತ್ತು.

ಮೈಥಿಲಿ ಬೆಂಗಳೂರಿನ ಹೆಸರುವಾಸಿಯಾದ ಶಾಲೆಯೊಂದರಲ್ಲಿ ಶಿಕ್ಷಣ ಪಡೆಯುತ್ತಿದ್ದಳು. ಒಂದು ದಿನ ಬೆಂಗಳೂರಿನಲ್ಲೇ ಒಂದು ದೊಡ್ಡ ಸಂಗೀತ ಸ್ಪರ್ಧೆ ನಡೆಯುತ್ತಿತ್ತು. ದೇಶದ ಮೂಲೆ ಮೂಲೆಗಳಿಂದ ಬಂದ ಪ್ರತಿಭಾವಂತ ಮಕ್ಕಳು ಭಾಗವಹಿಸಿದ್ದರು. ಮೈಥಿಲಿಗೂ ಅವಳ ಶಾಲೆಯಿಂದ  ಅವಕಾಶ ಸಿಕ್ಕಿತ್ತು. ವೇದಿಕೆಯ ಮೇಲೆ ನಿಂತಾಗ ಸಾವಿರಾರು ಜನ ಎದುರಿಗಿದ್ದರು. ಮೊದಲ ಬಾರಿಗೆ ಅಷ್ಟು ದೊಡ್ಡ ವೇದಿಕೆಯಲ್ಲಿ ಭಾಗವಹಿಸುತ್ತಿದ್ದರಿಂದ ಅವಳ ಕೈಗಳು ನಡುಗಿದವು. 
ಪ್ರೇಕ್ಷಕರ ಮಧ್ಯೆ ತಾತ ಕುಳಿತಿದ್ದರು. ಅವರು ದೂರದಿಂದ ಕೈ ಎತ್ತಿ ತೋರಿಸಿದರು. "ಭಯ ಬೇಡ..." ಅನ್ನೋ ರೀತಿಯಲ್ಲಿ ಸನ್ನೆ ಮಾಡಿದರು. ಅಷ್ಟೇ ಸಾಕಾಯಿತು. 
ಮೈಥಿಲಿ ಕಣ್ಣು ಮುಚ್ಚಿ ಹಾಡಲು ಆರಂಭಿಸಿದಳು. ಮೊದಲ ಸ್ವರ ಕೇಳುತ್ತಿದ್ದಂತೆ ಸಭಾಂಗಣ ಭ್ರಮಾಲೋಕಕ್ಕೆ ಹೋದಂತಾಯಿತು. ಹಾಡು ಮುಗಿದಾಗ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಅವಳು ಮೊದಲ ಬಹುಮಾನ ಗೆದ್ದಳು. 
ಬಹುಮಾನ ಸ್ವೀಕರಿಸಿದ ತಕ್ಷಣ ಓಡಿ ಹೋಗಿ ತಾತನ ಕೈಗೆ ಟ್ರೋಫಿ ಕೊಟ್ಟಳು. "ಇದು ನನ್ನದಲ್ಲ ತಾತ...ನಿನ್ನದು." 
ತಾತ ನಗುತ್ತಾ ಹೇಳಿದರು - 
"ಇದು ನಮ್ಮದು ಕಂದಾ..."

ವರ್ಷಗಳು ಕಳೆದುಹೋದವು. ಮಧುರ್ ಮಾರ್ಗದರ್ಶನದೊಂದಿಗೆ ಮೈಥಿಲಿ ದೇಶದಲ್ಲೇ ಅತ್ಯುತ್ತಮ ಗಾಯಕಿಯಾಗಿ ಗುರುತಿಸಲ್ಪಟ್ಟಳು. ಅವಳ ಪ್ರತಿಯೊಂದು ಹಾಡಿನಲ್ಲೂ ಭಾವನೆ ಇತ್ತು. ಜನರು ಹೇಳುತ್ತಿದ್ದರು - "ಅವಳ ಧ್ವನಿ ನೇರವಾಗಿ ಹೃದಯ ಮುಟ್ಟುತ್ತದೆ."  ಅವರಿಗೆ ಗೊತ್ತಿರಲಿಲ್ಲ - ಆ ಧ್ವನಿಯಲ್ಲಿ ಒಬ್ಬ ತಾಯಿಯ ನೋವಿತ್ತು, ಒಬ್ಬ ತಂದೆಯ ನಿರೀಕ್ಷೆಯಿತ್ತು, ಒಬ್ಬ ತಾತನ ಮಮತೆಯಿತ್ತು.

ಕೊನೆಗೂ ಆ ದಿನ ಬಂತು. ದೇಶದ ಅತ್ಯುನ್ನತ ಯುವ ಗಾಯಕಿ ಪ್ರಶಸ್ತಿ. ಸಾವಿರಾರು ಜನರು ಸೇರಿದ್ದ ಭವ್ಯ ಸಭಾಂಗಣ. ಕಾರ್ಯಕ್ರಮ ನಿರೂಪಕರು ಘೋಷಿಸಿದರು - "ಈ ವರ್ಷದ ಅತ್ಯುತ್ತಮ ಯುವ ಗಾಯಕಿ...ಕುಮಾರಿ ಮೈಥಿಲಿ ಮಧುರ್!" 
ಇಡೀ ಸಭಾಂಗಣ ಕರತಾಡನದಿಂದ ಮೊಳಗಿತು. ಮೈಥಿಲಿ ವೇದಿಕೆಯ ಮೇಲೆ ಬಂದಳು. ಬೆಳಕುಗಳಿಂದ ಕಂಗೊಳಿಸುತ್ತಿದ್ದ ವೇದಿಕೆ. ಅದೇ ವೇದಿಕೆಯಲ್ಲಿ ಅವಳ ಮೊದಲ ಸಂಗೀತ ಕಛೇರಿ. ವೇದಿಕೆಯ ಮೇಲೆ ಮೂರು ಕುರ್ಚಿಗಳಿದ್ದವು. ಒಂದರಲ್ಲಿ ಮಧುರ್. ಇನ್ನೊಂದರಲ್ಲಿ ಮೀರಾ. ಮೂರನೆಯದರಲ್ಲಿ...ಅವಳಿಗೆ ಪುಟ್ಟ ಮಗುವಾಗಿದ್ದಾಗಲೇ ಹಾಡಲು ಕಲಿಸಿ, ಹಾಡಿನ ಮೇಲೆ ಇದ್ದ ಅವಳ ಆಸಕ್ತಿಗೆ ಸುಂದರವಾದ ರೂಪ ಕೊಟ್ಟ  ಆ ವೃದ್ಧ ತಾತ.  ಮೈಥಿಲಿ ಪ್ರಶಸ್ತಿ ಸ್ವೀಕರಿಸಿ ತನ್ನ ಕಚೇರಿ ನಡೆಸಿದಳು. ಕಚೇರಿ ಮುಗಿದ ಮೇಲೆ ಕೆಲ ಕ್ಷಣ ಮಾತನಾಡಲಿಲ್ಲ. ನಂತರ ಕಣ್ಣೀರನ್ನು ಒರೆಸಿಕೊಂಡು ಸಾವಿರಾರು ಜನರಿದ್ದ ಆ ವೇದಿಕೆಯಲ್ಲಿ ಮೈಥಿಲಿ ಮಾತನಾಡಿದಳು:
"ಇಂದು ಈ ಪ್ರಶಸ್ತಿ ನನ್ನ ಕೈಯಲ್ಲಿರಬಹುದು, ಆದರೆ ಇದನ್ನು ಗೆದ್ದವಳು ನಾನಲ್ಲ." ಸಭಾಂಗಣ ಮೌನವಾಯಿತು. ಅವಳು ಮುಂದುವರಿಸಿದಳು - "ನನಗೆ ಜನ್ಮ ಕೊಟ್ಟವರು ನನ್ನ ಅಪ್ಪ–ಅಮ್ಮ. ನನ್ನನ್ನು ಎದೆಗಪ್ಪಿಕೊಂಡು ಬದುಕು ಕೊಟ್ಟವರು ನನ್ನ ತಾತ. ಅಮ್ಮ ನನ್ನನ್ನು ತನ್ನ ಗರ್ಭದಲ್ಲಿ ಹೊತ್ತಳು; ತಾತ ಅಮ್ಮನ ಮಮತೆಯನ್ನೂ ಅಪ್ಪನ ಆಸರೆಯನ್ನೂ ನೀಡಿ ಬೆಳೆಸಿದರು; ಅಪ್ಪ ನನ್ನ ಕಂಠಕ್ಕೆ ಸಂಗೀತದ ಶಿಸ್ತು ಮತ್ತು ದಿಕ್ಕು ನೀಡಿದರು. ಇಂದು ನಾನು ಹಾಡುತ್ತಿರುವುದು ನನ್ನೊಬ್ಬಳ ಧ್ವನಿಯಿಂದಲ್ಲ - ಈ ಮೂರು ಅಪರಂಜಿಗಳ ಪ್ರೀತಿಯಿಂದ."
ಇಡೀ ಸಭಾಂಗಣವೇ ಎದ್ದು ನಿಂತು ಚಪ್ಪಾಳೆ ತಟ್ಟಿತು. ಕರತಾಡನ ನಿಲ್ಲಲೇ ಇಲ್ಲ.
ತಾತನ ಕಣ್ಣುಗಳು ಸಂತೋಷಗೊಂಡು ತುಂಬಿದವು. ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಬಂದು, ತುಟಿಗಳಲ್ಲಿ ಮಂದಹಾಸ ಮೂಡಿತು. ಅವನ ಜೀವನದ ಕೊನೆಯ ಆಸೆ ಈಡೇರಿತ್ತು. ಅವನು ಸಾಕಿದ ಆ ಪುಟ್ಟ ಹುಡುಗಿ...ಇಂದು ಲಕ್ಷಾಂತರ ಹೃದಯಗಳ ಮುದ್ದು ಮಗಳು ಆಗಿದ್ದಳು.

ಆ ರಾತ್ರಿ ಮನೆಗೆ ಹಿಂದಿರುಗಿದ ನಂತರ ತಾತ ಬಹಳ ಹೊತ್ತು ಮೌನವಾಗಿ ಕುಳಿತಿದ್ದರು. ಮೈಥಿಲಿ ಅವರ ಬಳಿಗೆ ಬಂದು ತಲೆ ಅವರ ಮಡಿಲಲ್ಲಿ ಇಟ್ಟಳು. "ತಾತಾ..."
"ಹೂಂ..."
"ಸಂತೋಷ ಆಯ್ತಾ?"
ತಾತ ಅವಳ ತಲೆಯ ಮೇಲೆ ಕೈ ಇಟ್ಟರು. "ನನಗೆ ಇನ್ನೇನು ಬೇಕಮ್ಮ, ನಾನು ಸಾಯುವ ಮುಂಚೆ ದೇವರು ಸ್ವರ್ಗವನ್ನೇ ತೋರಿಸಿದ."
ಮೈಥಿಲಿ ತಕ್ಷಣ ಅವರ ಬಾಯಿಗೆ ಕೈ ಇಟ್ಟಳು."ಹಾಗೆ ಮಾತಾಡಬೇಡ."
ತಾತ ನಗುತ್ತಾ ಹೇಳಿದರು - "ನಾನು ಹೋದರೂ, ನಿನ್ನ ಪ್ರತಿಯೊಂದು ಹಾಡಿನಲ್ಲೂ ಬದುಕಿರುತ್ತೇನೆ."

*** 

ಇತ್ತೀಚೆಗೆ ತಾತನ ಉಸಿರಾಟ ಸ್ವಲ್ಪ ಕಷ್ಟವಾಗುತ್ತಿದ್ದರೂ, ಮೈಥಿಲಿಯ ಸಂತೋಷಕ್ಕೆ ನೆರಳು ಬೀಳಬಾರದೆಂದು ಅವರು ಯಾರಿಗೂ ಹೇಳಿರಲಿಲ್ಲ. ಕೆಲ ತಿಂಗಳ ನಂತರ, ಒಂದು ಬೆಳಿಗ್ಗೆ ತಾತ ಎಂದಿನಂತೆ ಎಚ್ಚರವಾಗಲಿಲ್ಲ. ಮುಖದಲ್ಲಿ ಅದೇ ಮಂದಹಾಸ. ತಲೆಯ ಹತ್ತಿರ ಮೈಥಿಲಿಯ ಮೊದಲ ಬಹುಮಾನ. ಎದೆಯ ಮೇಲೆ ಮಾರಮ್ಮನ ಪ್ರಸಾದ. ಶಾಂತವಾಗಿ, ಯಾರಿಗೂ ತೊಂದರೆ ಕೊಡದೆ ಅವರು ಶಾಶ್ವತ ನಿದ್ರೆಗೆ ಜಾರಿದ್ದರು. ಮೈಥಿಲಿ ಮಗುವಿನಂತೆ ಅತ್ತುಬಿಟ್ಟಳು.
ಮಧುರ್ ಅವಳ ಭುಜದ ಮೇಲೆ ಕೈ ಇಟ್ಟು ಹೇಳಿದ - "ಅವರು ಎಲ್ಲಿಗೂ ಹೋಗಿಲ್ಲ ಕಂದಾ, ನೀನು ಹಾಡುವ ಪ್ರತಿಯೊಂದು ಸ್ವರದಲ್ಲೂ ಅವರು ಬದುಕುತ್ತಾರೆ."
ಮಧುರ್ ಸ್ವತಃ ತನ್ನ ತಂದೆಗೆ ಮಾಡುವಂತೆಯೇ ತಾತಯ್ಯನ ಅಂತ್ಯಕ್ರಿಯೆಯನ್ನು ಚಿನ್ನೂರಿನಲ್ಲೇ ನಡೆಸಿದ. 

ಪ್ರತಿವರ್ಷ ಮಾರಮ್ಮನ ಜಾತ್ರೆಯ ಮೊದಲ ದಿನ, ಮೈಥಿಲಿ ಚಿನ್ನೂರಿಗೆ ಬರುತ್ತಾಳೆ. ಮೊದಲು ದೇವಿಗೆ ನಮಸ್ಕರಿಸುತ್ತಾಳೆ. ನಂತರ ತಾತನ ಸಮಾಧಿಗೆ ಒಂದು ಮಲ್ಲಿಗೆ ಹಾರ ಅರ್ಪಿಸುತ್ತಾಳೆ. ಆಮೇಲೆ ಅದೇ ದೇವಸ್ಥಾನದ ಎದುರು ಒಮ್ಮೆ ತಾನು ಬೀದಿ ಬದಿಯಲ್ಲಿ ಹಾಡುತ್ತಿದ್ದ ಸ್ಥಳದಲ್ಲೇ ಕುಳಿತು ಒಂದು ಹಾಡು ಹಾಡುತ್ತಾಳೆ. ಆ ದಿನ ತಟ್ಟೆಯಲ್ಲಿ ಸೇರುವ ಹಣವನ್ನು ಮೈಥಿಲಿ ಎಂದಿಗೂ ತನ್ನದಾಗಿಸಿಕೊಳ್ಳುತ್ತಿರಲಿಲ್ಲ. ತಾತನ ಸ್ಮರಣಾರ್ಥ ಸ್ಥಾಪಿಸಿದ “ಮಮತೆಯ ನಿಧಿ”ಗೆ ಅದನ್ನು ಸಮರ್ಪಿಸುತ್ತಿದ್ದಳು. ಆ ನಿಧಿಯಿಂದ ಅನಾಥ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸಂಗೀತ ಶಿಕ್ಷಣ, ವಾದ್ಯೋಪಕರಣ ಮತ್ತು ವಿದ್ಯಾರ್ಥಿವೇತನಗಳನ್ನು  ನೀಡಲಾಗುತ್ತಿತ್ತು.ಕಾರಣ, ಒಂದು ಕಾಲದಲ್ಲಿ ಅವಳ ಬದುಕನ್ನೂ ಒಬ್ಬ ಅಪರಿಚಿತನ ಮಮತೆಯೇ ಬೆಳಗಿಸಿತ್ತು.

ಮೈಥಿಲಿಯ ಬದುಕಿಗೆ ಜನ್ಮದ ಸ್ವರವೊಂದು, ಮಮತೆಯ ಸ್ವರವೊಂದು ಸೇರಿತ್ತು. ಆ ಎರಡು ಸ್ವರಗಳಿಗೆ ಪ್ರೀತಿಯ ಲಯ ಬೆರೆತಾಗಲೇ ಅವಳ ಬದುಕು ಸಂಪೂರ್ಣ ರಾಗವಾಯಿತು.
ಜನ್ಮ ನೀಡುವುದು ಪ್ರಕೃತಿಯ ವರ; ಬದುಕನ್ನು ರೂಪಿಸುವುದು ಮನುಷ್ಯತ್ವದ ಮಹತ್ತರ ಸಾಧನೆ. ರಕ್ತಸಂಬಂಧಗಳು ನಮ್ಮ ಅಸ್ತಿತ್ವಕ್ಕೆ ಪರಿಚಯ ನೀಡುತ್ತವೆ; ಹೃದಯದ ಸಂಬಂಧಗಳು ನಮ್ಮ ಬದುಕಿಗೆ ಅರ್ಥ ನೀಡುತ್ತವೆ.
ಕೆಲವರು ನಮ್ಮ ಬದುಕಿಗೆ ರಕ್ತದ ಮೂಲಕ ಬರುವುದಿಲ್ಲ - ಪ್ರೀತಿಯ ಮೂಲಕ ಬರುತ್ತಾರೆ. ಅಂತಹ ಸಂಬಂಧಗಳ ಸ್ವರ ಎಂದಿಗೂ ಮೌನವಾಗುವುದಿಲ್ಲ; ಕಾಲವನ್ನು ಮೀರಿ ತಲೆಮಾರುಗಳ ಹೃದಯಗಳಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತದೆ. 

ಗುರುವಾರ, ಜೂನ್ 25, 2026

ಅಜ್ಜನ ಪೆಟ್ಟಿಗೆ

(ಒಂದು ದಿನ ನನ್ನ ಕಥೆಗಳನ್ನು ಓದಲು ಯಾರಾದರೂ ಇರುತ್ತಾರಾ?)
 
✍🏻ದೀಪಲಕ್ಷ್ಮಿ ಭಟ್, ಮಂಗಳೂರು   

  

ಅಮಿತ ಮತ್ತು ಪ್ರತಾಪ ದಂಪತಿಗಳ ಮನೆಯ ಏಕೈಕ ಸಂತಾನ ಅಪ್ರಮೇಯ. ಮನೆಯ ಎಲ್ಲರ ಪ್ರೀತಿಯ "ಅಪ್ಪು". ಒಂದು ಸುಂದರವಾದ ಸಂಜೆ. ಸಮಯ ಐದು ಗಂಟೆ. ಅಪ್ರಮೇಯ ಆಗ ತಾನೇ ಶಾಲೆಯಿಂದ ಬಂದವನೇ ತನ್ನ ರೈನ್ ಕೋಟ್ ತೆಗೆದು ಬಾಗಿಲ ಬಳಿ ಬಿಸಾಡಿ, ಕೈ ಕಾಲೂ ತೊಳೆಯದೆ, ಒಳಗೆ ಬಂದು ಶಾಲೆಯ ಬ್ಯಾಗ್ ಅನ್ನು ಅಲ್ಲೇ ಸೋಫಾದ ಮೇಲೆ ಬಿಸಾಡಿ ಧೊಪ್ಪನೆ ಕುಳಿತು, ಟಿವಿ ಆನ್ ಮಾಡಿ ತನ್ನ ಇಷ್ಟವಾದ ನಿಕ್ ಚಾನೆಲ್ ಅನ್ನು ಇಟ್ಟು  ಕುಳಿತ. 

ಅವನ ಅಮ್ಮ ಅಮಿತಾ ಅವನನ್ನು ನೋಡಿದ ಕೂಡಲೇ, "ಅಪ್ಪೂ, ನಿನ್ನ ಅಜ್ಜ ಇವತ್ತು ಯಾವ ಕಥೆ ಹೇಳ್ತಿದ್ರು ಗೊತ್ತಾ? " ಎಂದು ಕೇಳಿದಳು. ಟಿವಿ ಪರದೆಯಲ್ಲೇ ಕಣ್ಣು ನೆಟ್ಟಿದ್ದ ಅಪ್ರಮೇಯ ಕಣ್ಣೆತ್ತಿಯೂ ನೋಡದೆ, "ಮಾಮ್ ಪ್ಲೀಸ್,  ನಾನು ಬಂದಿದ್ದಷ್ಟೇ, ಇನ್ನು ಸ್ವಲ್ಪ ಹೊತ್ತಲ್ಲಿ ಆನ್ಲೈನ್ ಕ್ಲಾಸ್ ಇದೆ. ನಿನ್ನ ಪುರಾಣ ಶುರು ಮಾಡ್ಬೇಡ." ಅಂದ. ಅಮಿತಾ ಸುಮ್ಮನಾದಳು. ಮಗನಿಗೆ ಕುಡಿಯಲು ಹಾರ್ಲಿಕ್ಸ್ ಕೊಟ್ಟು, "ಕೈಕಾಲಾದ್ರೂ ತೊಳೆದು ಬಾ ಕಂದ" ಅಂದಳು. ಅಪ್ಪು ಮಾತ್ರ ಟಿವಿಯಿಂದ ಕಣ್ಣು ಕದಲಿಸದೆ, ಹಾರ್ಲಿಕ್ಸ್ ಕುಡಿದ. 

ಸಂಜೆ ಎಂಟು ಗಂಟೆ ಸಮಯಕ್ಕೆ ಅಪ್ರಮೇಯನ ತಂದೆ ಪ್ರತಾಪ ಆಫೀಸಿನಿಂದ ಮನೆಗೆ ಬಂದ. ಅಡಿಗೆ ಮನೆಯಲ್ಲಿದ್ದ ಅಮಿತ ಊಟಕ್ಕೆ ತಯಾರಿ ಮಾಡುತ್ತಿದ್ದಳು. ಅಜ್ಜಿ ದೇವರ ಕೋಣೆಯಲ್ಲಿ ಶ್ಲೋಕ ಹೇಳುತ್ತಿದ್ದರು.ಅಜ್ಜ ಕಿಟಕಿಯ ಹತ್ತಿರ ಕುಳಿತು ಹೊರಗಿನ ಮರಗಳನ್ನು ನೋಡುತ್ತಿದ್ದರು. ಆಗ ಅಪ್ರಮೇಯ ತನ್ನ ಕೊಠಡಿಯಲ್ಲಿ ಮೊಬೈಲ್ ಹಿಡಿದು ರೀಲ್ಸ್ ನೋಡುತ್ತಿದ್ದ. ಈ ಟಿವಿ ಮತ್ತು ಮೊಬೈಲ್ ಅವನ ಬದುಕಿನ ಒಂದು ಭಾಗವಾಗಿರಲಿಲ್ಲ; ಅದುವೇ ಅವನ ಪ್ರಪಂಚವಾಗಿಬಿಟ್ಟಿದ್ದವು. 

ಅಮಿತ ಜೋರಾಗಿ ಕೂಗಿದಳು - "ಅಪ್ಪೂ ಊಟಕ್ಕೆ ಬಾ. ಎಲ್ಲರಿಗೂ ಬರೋದಿಕ್ಕೆ ಹೇಳು" ಅಂತ. "ಬರ್ತೀನಿ ಮಾಮ್" ಎಂದವನು ಹತ್ತು ನಿಮಿಷ ಕಳೆದರೂ ಬರಲಿಲ್ಲ. ಎಲ್ಲರೂ ಬಂದಿದ್ದರೂ ಅವನನ್ನು ಮತ್ತೆ ಜೋರಾಗಿ ಕೂಗಿ ಕರೆಯಬೇಕಾಯಿತು. ಅಷ್ಟರಲ್ಲಿ ಮೊಬೈಲ್ ಕೈಯಲ್ಲಿ ಹಿಡಿದುಕೊಂಡೇ ಬಂದು ಮೇಜಿನ ಬಳಿ ಕುಳಿತ. ಊಟ ಮಾಡುವಾಗಲೂ ಕಣ್ಣು ಮೊಬೈಲ್‌ನಲ್ಲೇ.

ಅಜ್ಜ ಅವನನ್ನು ನೋಡಿ ನಗುತ್ತ ಕೇಳಿದರು - "ಅಪ್ಪು, ಇವತ್ತು ಶಾಲೆಯಲ್ಲಿ ಏನು ಕಲಿಸಿದ್ರು?". ಕಣ್ಣೆತ್ತಿಯೂ ನೋಡದೆ "ಏನಿಲ್ಲ" ಅಂತ ಉತ್ತರಿಸಿದ. "ಸ್ನೇಹಿತರ ಜೊತೆ ಆಟ ಆಡಿದಿಯಾ?" ಎಂದು ಕೇಳಿದರೆ ಮತ್ತೆ "ಹೂಂ" ಅಂತ ಅಷ್ಟೇ ಹೇಳಿದ. 

ಹೀಗೆ ಒಂದೇ ಮನೆಯ ನಾಲ್ಕು ಗೋಡೆಗಳ ಒಳಗೆ ನಾಲ್ಕು ಪ್ರಪಂಚಗಳಿದ್ದವು. ಅಜ್ಜನ ಪ್ರಪಂಚ ಪುಸ್ತಕಗಳು. ಅಜ್ಜಿಯ ಪ್ರಪಂಚ ದೇವರ ಕೋಣೆ. ಅಪ್ಪ-ಅಮ್ಮನ ಪ್ರಪಂಚ ಕೆಲಸದ ಒತ್ತಡ. ಅಪ್ಪುವಿನ ಪ್ರಪಂಚ ಮೊಬೈಲ್, ಟಿವಿ, ಗೇಮ್ ಮತ್ತು ರೀಲ್ಸ್. ಊಟದ ಸಮಯದಲ್ಲಿ ಮಾತಿಲ್ಲ. ಸಂಜೆಯ ಸಮಯದಲ್ಲಿ ನಗುವಿಲ್ಲ. ರಾತ್ರಿ ಸಮಯದಲ್ಲಿ ಕಥೆಗಳಿಲ್ಲ.  ಇಡೀ ಮನೆಯಲ್ಲಿ ವೈ-ಫೈ ಸಿಗ್ನಲ್ ಮಾತ್ರ  ತುಂಬಾ ಬಲವಾಗಿತ್ತು.  ಆದರೆ ಮನಸ್ಸುಗಳ ನಡುವಿನ ಸಂಪರ್ಕ ಸಂಪೂರ್ಣವಾಗಿ  ಕಡಿತವಾಗಿತ್ತು.

ಅಜ್ಜ ಪ್ರತಿದಿನ ಸಂಜೆ ಮನೆಯ ಮುಂದಿನ ಜಗಲಿಯಲ್ಲಿ ಕುಳಿತುಕೊಂಡು "ಮೊಮ್ಮಗ ಬರುವನೇ ತನ್ನ ಜೊತೆ ಮಾತಾಡಲು" ಎಂದು  ಕಾಯುತ್ತಿದ್ದ. "ಅಪ್ಪು, ಬಾ,  ಒಂದು ಕಥೆ ಹೇಳ್ತೀನಿ." ಅಂತ ಕರೆದಾಗ, ಅಪ್ಪು ಮಾತ್ರ "ನಂತರ ಅಜ್ಜ. ನಂಗೆ ಬೇರೆ ಕೆಲಸ ಇದೆ" ಅಂತ ತಪ್ಪಿಸಿಕೊಳ್ಳುತ್ತಿದ್ದ. "ಒಂದು ಗಾದೆ ಹೇಳ್ತೀನಿ. ಬಾ ಪುಟ್ಟ" ಅಂದರೆ, "ಟೈಮ್ ಇಲ್ಲ ಅಜ್ಜ." ಅನ್ನುತ್ತಿದ್ದ.  "ನಮ್ಮ ಊರಿನ ಬಗ್ಗೆ ಹೇಳ್ತೀನಿ. ಬಾ ಕಂದ" ಅಂದರೆ, "ನಂತರ ನೋಡೋಣ."ಅನ್ನುತ್ತಿದ್ದ. ಆ "ನಂತರ" ಎಂದಿಗೂ ಬರುತ್ತಿರಲಿಲ್ಲ.  

ಅಜ್ಜನಿಗೆ ಕಥೆ ಹೇಳುವುದು ತುಂಬ ಇಷ್ಟ. ಅವರ ಬಾಲ್ಯದಲ್ಲಿ ವಿದ್ಯುತ್ ಇರಲಿಲ್ಲ. ಟಿವಿ ಇರಲಿಲ್ಲ. ಮೊಬೈಲ್ ಎಂಬ ಪದವೇ ಇರಲಿಲ್ಲ. ಸಂಜೆ ಆದಾಕ್ಷಣ ಮನೆಯ ಹಿರಿಯರು ಮಕ್ಕಳನ್ನು ಸುತ್ತ ಕುಳ್ಳಿರಿಸಿಕೊಂಡು ಕಥೆ ಹೇಳುತ್ತಿದ್ದರು. ಆ ಕಥೆಗಳಲ್ಲಿ ರಾಜರು ಇರುತ್ತಿದ್ದರು. ರಾಣಿಯರು ಇರುತ್ತಿದ್ದರು. ವೀರರು ಇರುತ್ತಿದ್ದರು. ದೇವರು ಇರುತ್ತಿದ್ದರು. ಕೆಲವೊಮ್ಮೆ ಬದುಕನ್ನು ಬದಲಿಸುವ ಪಾಠಗಳೂ ಇರುತ್ತಿದ್ದವು. ಅದೇ ಸಂಪ್ರದಾಯವನ್ನು ಅಜ್ಜ ತಮ್ಮ ಮೊಮ್ಮಗನಿಗೂ ನೀಡಲು ಬಯಸಿದ್ದರು. ಆದರೆ ಅಪ್ರಮೇಯನಿಗೆ ಕಥೆಗಳಿಗಿಂತ ರೀಲ್ಸ್ ಹೆಚ್ಚು ಆಸಕ್ತಿದಾಯಕವಾಗಿದ್ದವು.

ಒಂದು ದಿನ ಅಪ್ಪು ಶಾಲೆಯಿಂದ ಬಂದಾಗ ಅಜ್ಜನ ಬಳಿಯಲ್ಲಿ ಕುಳಿತಿದ್ದ ಅಜ್ಜಿ ಮಾತನಾಡುತ್ತಿದ್ದರು - "ನಮ್ಮ ಕಾಲದಲ್ಲಿ ಕನ್ನಡ ಹಾಡುಗಳು ಎಷ್ಟು ಚೆನ್ನಾಗಿದ್ದವು ಅಲ್ವಾ?". ಅದನ್ನ ಕೇಳಿದೊಡನೆ ಅಪ್ರಮೇಯ ಜೋರಾಗಿ ನಕ್ಕು "ಈಗಿನ ಕಾಲದಲ್ಲಿ ಕನ್ನಡ ಸಾಂಗ್ಸ್ ಯಾರೂ ಕೇಳೋದಿಲ್ಲ ಅಜ್ಜಿ." ಆಶ್ಚರ್ಯದಿಂದ ಅಜ್ಜಿ "ಯಾಕೆ?" ಅಂತ ಕೇಳಿದರು. "ಅದು ಓಲ್ಡ್ ಫ್ಯಾಷನ್." ಅಂತ ಹೇಳಿದ. ಅಜ್ಜನ ಮುಖ ಸ್ವಲ್ಪ ಮಂಕಾಯಿತು. "ಮಗಾ, ಭಾಷೆ ಹಳೆಯದು ಅಂತ ಆಗೋದಿಲ್ಲ. ನಾವು ನಮ್ಮ ಸಂಸ್ಕೃತಿ ಮತ್ತು ಭಾಷೆಯನ್ನೂ ಮರೆತಾಗ ಮಾತ್ರ ಅದು ಹಳೆಯದಾಗುತ್ತದೆ." ಆದರೆ ಅಜ್ಜನ ಮಾತು ಅವನಿಗೆ ಕೇಳಲೇ ಇಲ್ಲ. ಯಾಕಂದರೆ, ಅವನ ಕಿವಿಯಲ್ಲಿ ಇಯರ್ ಫೋನ್ ಇತ್ತು. 
 
ಕಾಲ ಹೀಗೆ ಸಾಗುತ್ತಿತ್ತು. ಮನೆಯಲ್ಲೇ ಎಲ್ಲರೂ ಜೊತೆಯಾಗಿ ವಾಸಿಸುತ್ತಿದ್ದರು. ಆದರೆ ಮಾತುಕತೆ ಮಾತ್ರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿತ್ತು. ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ಅವನ ಕೈಯಲ್ಲಿ ಮೊಬೈಲ್ ಇತ್ತು. ಮನೆಯವರಿಗಿಂತ ಪರದೆಗಳ ಜೊತೆಗಿನ ಅವನ ಸಂಭಾಷಣೆಯೇ ಹೆಚ್ಚು. ಅಜ್ಜನ ಕಥೆಗಳಿಗೆ ಸಮಯ ಇರಲಿಲ್ಲ. ಅಜ್ಜಿಯ ನೆನಪುಗಳ ಬಗ್ಗೆ ಕೇಳಲು  ಆಸಕ್ತಿ ಇರಲಿಲ್ಲ.  

ಕಾಲ ಅನ್ನೋದು ನಮಗಾಗಿ ನಿಲ್ಲೋದು ಅಂತ ಇದೆಯೇ? ಅಂತೆಯೇ, ಆ ದಿನ ಬೆಳಗಿನ ಜಾವ ಯಾವಾಗಲೂ ಎದ್ದು ಸಣ್ಣದಾಗಿ ವ್ಯಾಯಾಮ ಮಾಡುತ್ತಿದ್ದ ಅಜ್ಜ ಏಳಲೇ ಇಲ್ಲ. ಅವರ ಉಸಿರು ನಿಂತು ಹೋಗಿತ್ತು. ಮನೆ ತುಂಬ ಜನ. ಅಜ್ಜಿಯ ಆಕ್ರಂದನ. ಮನೆ ಮಂದಿ ಎಲ್ಲರ ಕಣ್ಣೀರು. ಬಂದವರ ಸಾಂತ್ವನದ ಮಾತುಗಳು. ಮೂರು ದಿನ, ಹತ್ತು ದಿನ, ಹದಿಮೂರು ದಿನ. ಹೀಗೆ ದಿನಗಳು ಕಳೆದವು. ಆಮೇಲೆ ಎಲ್ಲರ ಜೀವನ ಮತ್ತೆ ಹಳೆಯ ಹಾದಿಗೆ ಮರಳಿತು.  

***

ಆ ದಿನ ಮಳೆಗಾಲದ ರಜೆ. ಮನೆಯವರಲ್ಲರೂ ಸೇರಿ ಕೋಣೆಯೊಂದನ್ನು ಸ್ವಚ್ಛಗೊಳಿಸುವ ನಿರ್ಧಾರ ಮಾಡಿದರು. ಅದು ತಾತನ ಹಳೆಕಾಲದ ವಸ್ತುಗಳಿರುವ ಕೋಣೆಯಾಗಿತ್ತು.  ಅಲ್ಲಿ ಸ್ವಚ್ಛಗೊಳಿಸುತ್ತಿರುವಾಗ ಅಪ್ರಮೇಯನ ಕೈಗೆ ಒಂದು ಹಳೆಯ ಮರದ ಪೆಟ್ಟಿಗೆ ಸಿಕ್ಕಿತು. ದಪ್ಪ ಧೂಳು ತುಂಬಿಕೊಂಡಿತ್ತು. ಹಳೆಯ ಕಬ್ಬಿಣದ ಬೀಗ ಇತ್ತು. ಪೆಟ್ಟಿಗೆಯ ಮುಚ್ಚಳದ ಮೇಲೆ ತಾತನ ಕೈಯಿಂದ ಕೆತ್ತಿದ ಎರಡು ಅಕ್ಷರಗಳು ಕಾಣಿಸಿದವು. 
"ರಾ.ಭ." 
ಅದನ್ನು ಸ್ಪರ್ಶಿಸಿದಾಗ ಅಪ್ಪುವಿಗೆ ಗೊತ್ತಿಲ್ಲದ ನಡುಕವೊಂದು ಮನಸ್ಸಿನೊಳಗೆ ಓಡಿತು. ಕಷ್ಟಪಟ್ಟು ಬೀಗವನ್ನು ತೆರೆದ. ಅದರಲ್ಲಿ ಹಳೆಯ ಪುಸ್ತಕಗಳು. ಹಳದಿ ಬಣ್ಣಕ್ಕೆ ತಿರುಗಿದ ಹಾಳೆಗಳು. ದುಂಡು ದುಂಡಗಿನ ಸುಂದರವಾದ ಕೈಬರಹದ ಡೈರಿಗಳು. ಹಳೆಯ ಛಾಯಾಚಿತ್ರಗಳು. ತಾತನೇ ಕೈಯಾರೆ ಬರೆದ ಪತ್ರಗಳು, ಕವನಗಳು, ಗಾದೆಗಳ ಸಂಗ್ರಹ, ಕಥೆಗಳ ಹಾಳೆಗಳು. ಎಲ್ಲದರ ಮೇಲೂ ಒಂದೇ ಹೆಸರಿನ ಹಸ್ತಾಕ್ಷರ. ಅದು "ರಾಮ ಭಟ್" - ಅಂದರೆ ಅಪ್ಪುವಿನ ಅಜ್ಜ. 

ಕುತೂಹಲ ತಡೆಯಲಾರದೆ ಅಪ್ರಮೇಯ ಒಂದು ಹಾಳೆ ತೆಗೆದು ಓದಿದ. ಅದು ಅವನ ಅಜ್ಜ ಬರೆದಂಥ ಮೊದಲ ಕಥೆ. ಒಬ್ಬ ಬಡ ಕುಟುಂಬದ ಹುಡುಗ ತನ್ನ ವಿದ್ಯೆಯ ಬಲದಿಂದ ತನ್ನ ಊರಿನ ಮಕ್ಕಳ ಬದುಕು ಬದಲಿಸಿದ ಕಥೆ. ತುಂಬಾ ಆಕರ್ಷಕವಾಗಿ ನೀತಿಬೋಧೆಯಂತೆ ಬರೆದಿದ್ದಂತಹ, ಜೀವನದ ಪಾಠ ತಿಳಿಸುವಂತ ಕಥೆ. ಅಪ್ರಮೇಯ ಓದುತ್ತ ಹೋದ. ಮೊದಲ ಬಾರಿಗೆ ಅಪ್ರಮೇಯನಿಗೆ ಮೊಬೈಲ್ ಮರೆತು ಹೋಯಿತು. 

ಕಥೆ ಮುಗಿದಾಗ ಒಂದು ಸಾಲು ಬರೆದಿತ್ತು - "ಜ್ಞಾನವನ್ನು ಸಂಪಾದಿಸಿದವನು ಶ್ರೀಮಂತನಾಗಬಹುದು. ಆದರೆ ಜ್ಞಾನವನ್ನು ಹಂಚಿದವನು ಅಮರನಾಗುತ್ತಾನೆ." ಅಪ್ರಮೇಯ ಓದಿ ಮುಗಿಸಿದಾಗ " ಈ ಕಥೆಯನ್ನು ಅಜ್ಜ ಇರುವಾಗಲೇ ಅವರ ಬಾಯಿಂದ ಕೇಳುವಂತಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು" ಅಂತ ಮರುಗಿದ. 

ಮತ್ತೆ ಎರಡನೇ ಕಥೆ - "ಸ್ನೇಹದ ಮಹತ್ವ". ಓದಿ ಮುಗಿಸುತ್ತಿದ್ದಂತೆ, "ಜೀವನದ ಪಾಠವನ್ನೇ ಹೇಳಿಕೊಡುವಂಥ ಕಥೆ. ಅಜ್ಜ ಈ ಕಥೆ ಹೇಳೋಕೆ ಎಷ್ಟೋ ಸಲ ಕರೆದಿದ್ದರು, 
ನಾನು ಮಾತ್ರ 'ಟೈಮ್ ಇಲ್ಲ' ಅಂತ ಹೇಳಿ ಎದ್ದೇ ಹೋಗಿದ್ದೆ.." ಎಂದು ದುಃಖಗೊಂಡ. ಆಮೇಲೆ ಮೂರನೇ ಕಥೆ - "ಸತ್ಯದ ಬೆಲೆ",  ನಾಲ್ಕನೇ ಕಥೆ "ತಾಯಿಯ ತ್ಯಾಗ", ಐದನೆಯದಾಗಿ ಒಬ್ಬ ರೈತನ ಕಥೆ - ಹೀಗೆ ಒಂದೊಂದೇ ಕಥೆಗಳನ್ನು ಓದಿದಾಗಲೂ ಒಂದೊಂದು ರೀತಿಯ ಜೀವನದ ಪಾಠ ಹೇಳಿಕೊಟ್ಟಂತೆ ಭಾಸವಾಯಿತು ಅಪ್ರಮೇಯನಿಗೆ. ಪ್ರತಿಯೊಂದು ಕಥೆಯೂ ಬದುಕಿನ ಇನ್ನೊಂದು ಮುಖವನ್ನು ಅವನ ಮುಂದೆ ತೆರೆದಿಡುತ್ತಿತ್ತು.

ಮುಂದೆ ಕವನಗಳ ಪುಟಗಳು. ಪ್ರಕೃತಿಯ ಬಗ್ಗೆ, ತಾಯಿಯ ಬಗ್ಗೆ, ನಾಡಿನ ಬಗ್ಗೆ, ದೇಶದ ಬಗ್ಗೆ, ನಮ್ಮ ಭಾಷೆಯ ಬಗ್ಗೆ, ಗೆಳೆತನದ ಬಗ್ಗೆ, ಮಾನವೀಯತೆ ಬಗ್ಗೆ - ಹೀಗೆ ಹಲವಾರು ರೀತಿಯ ಕವನಗಳನ್ನು ಓದಿದ ಅಪ್ರಮೇಯನ ಮನಸ್ಸಲ್ಲಿ ಏನೋ ಬದಲಾವಣೆ ಆದಂತಿತ್ತು. ಒಂದೊಂದು ಕವನ ಓದುತ್ತಿದ್ದಾಗಲೂ ಅವನಿಗೆ ಆಶ್ಚರ್ಯವಾಯಿತು. ಅಜ್ಜ ಎಷ್ಟು ಸುಂದರವಾಗಿ ಬರೆಯುತ್ತಿದ್ದರು! ತನ್ನ ಮನೆಯಲ್ಲೇ ಇಷ್ಟೊಂದು ದೊಡ್ಡ ಲೇಖಕ ಬದುಕಿದ್ದನೆಂಬ ಸತ್ಯ ಅವನಿಗೆ ಮೊದಲ ಬಾರಿಗೆ ಅರಿವಾಯಿತು. 

ಮುಂದೆ ಗಾದೆಗಳ ಸಂಗ್ರಹ. ಪ್ರತಿಯೊಂದು ಗಾದೆ ಮಾತಿನ ಕೆಳಗೆ ಅದರ ಅರ್ಥವನ್ನು ಅತ್ಯಂತ ಸುದಾರವಾಗಿ ವಿಶ್ಲೇಷಣೆ ಮಾಡಿದ್ದರು ಅಪ್ರಮೇಯನ ಅಜ್ಜ. "ಮಾತು ಬೆಳ್ಳಿ, ಮೌನ ಬಂಗಾರ.", "ಅನುಭವವೇ ಗುರು.", "ಬಿತ್ತಿದಂತೆ ಬೆಳೆಯುತ್ತದೆ.", "ಅರಿತವನಿಗೆ ಅರ್ಧ ಮಾತು ಸಾಕು." - ಇಂಥ ಅನೇಕ ಗಾದೆಗಳನ್ನು ಬರೆದು ಪ್ರತಿ ಗಾದೆಯ ಅರ್ಥವನ್ನು ಅಜ್ಜ ತಮ್ಮ ಕೈಯಾರೆ ವಿಶ್ಲೇಷಿಸಿ ಬರೆದಿದ್ದರು. ಮೊದಲ ಬಾರಿಗೆ ಅಪ್ರಮೇಯನಿಗೆ "ಕನ್ನಡ" ಎಷ್ಟು ಸುಂದರ ಭಾಷೆ ಎಂಬುದು ಅರ್ಥವಾಗತೊಡಗಿತು. ಅವನೊಳಗೆ ಕನ್ನಡದ ಮೇಲೆ ಹೊಸ ಪ್ರೀತಿ ಹುಟ್ಟಿತ್ತು. ತನ್ನ ಅಜ್ಜ ಬರೆದಂಥ ಗಾದೆಗಳ ವಿಶ್ಲೇಷಣೆ ವಿಶೇಷವಾದ ರೀತಿಯಲ್ಲಿ ಮನ ಮುಟ್ಟುವಂತಿತ್ತು. ಜೀವನಕ್ಕೆ ಪಾಠದಂತಿತ್ತು.

ಕೊನೆಗೆ ಪತ್ರಗಳ ಕಟ್ಟು. ಸ್ವಲ್ಪ ಹೊಸದಾದ ಹಾಳೆಯಂತೆ ಭಾಸವಾಯಿತು. ಆ ಪತ್ರಗಳ ಕಟ್ಟನ್ನು ಒಂದು ಕೆಂಪಗಿನ ದಾರ ಸುತ್ತಿ ಕಟ್ಟಿದ್ದರು. ಆ ದಾರದ ಕೊನೆಯಲ್ಲಿ ಒಂದು ಚಿಕ್ಕ ಕವರನ್ನು ಅಂಟಿಸಿದ್ದರು. ಆ ಕವರಿನಲ್ಲಿ - "ನನ್ನ ಮುದ್ದಾದ ಮೊಮ್ಮಗ ಅಪ್ಪುವಿಗೆ" ಎಂದು ಬರೆದಿತ್ತು. 

ಕವರ್ ತೆರೆದಾಗ ಅದರಲ್ಲಿ ಒಂದು ಚಿಕ್ಕ ಪತ್ರ ಇತ್ತು. 
"ನನ್ನ ಪ್ರೀತಿಯ ಮೊಮ್ಮಗ ಅಪ್ಪು, ನೀನು ದೊಡ್ಡವನಾದಾಗ ಈ ಪತ್ರ ಓದುತ್ತೀಯೋ ಇಲ್ಲವೋ ಗೊತ್ತಿಲ್ಲ. ನೀನು ಓದುವಾಗ ನಾನು ಇರುತ್ತೇನೋ ಇಲ್ಲವೋ ತಿಳಿದಿಲ್ಲ. ಆದರೆ ಒಂದು ಮಾತು ನೆನಪಿಡು. ಇಂಗ್ಲಿಷ್ ಕಲಿತು ಜಗತ್ತನ್ನು ಗೆಲ್ಲು. ಆದರೆ ಕನ್ನಡವನ್ನು ಮರೆತು ನಿನ್ನನ್ನೇ ಕಳೆದುಕೊಳ್ಳಬೇಡ. ನಿನ್ನ ತಾಯಿ ಭಾಷೆಯನ್ನು ಕಳೆದುಕೊಂಡರೆ ನಿನ್ನ ಬೇರುಗಳನ್ನು ಕಳೆದುಕೊಳ್ಳುತ್ತೀಯ. ಜೊತೆಗೆ ನಮ್ಮ ಮನೆತನದ ಸಂಸ್ಕೃತಿಯನ್ನು ಬೆಳೆಸುವ ಯುವಕನಾಗು." ಎಂದು ಬರೆದಿತ್ತು. ಅಜ್ಜನ ಸುಂದರವಾದ ಕೈಬರಹದಲ್ಲಿ ಬರೆದಿದ್ದ ಈ ಪತ್ರ  ಓದಿ ಅಪ್ರಮೇಯನ ಕಣ್ಣು ತುಂಬಿ ಬಂತು. 

ಒಂದೊಂದಾಗಿ ಪತ್ರಗಳನ್ನು ಓದುತ್ತಾ ಹೋದ ಅಪ್ರಮೇಯನಿಗೆ ತನ್ನ ಅಜ್ಜ ತನ್ನೊಡನೆ ಮಾತಾಡಬೇಕು ಅಂತಿದ್ದ ಎಲ್ಲ ವಿಷಯಗಳನ್ನೂ ಪತ್ರದ ಮೂಲಕ ನೀಡಿ ಹೋಗಿದ್ದಾರೆಂದು ಗೊತ್ತಾಯಿತು. ಎರಡನೇ ಪತ್ರದಲ್ಲಿ ನಮ್ಮ ದೇಶ, ದೇಶದ ಸಂಸ್ಕೃತಿ ಇದರ ಬಗ್ಗೆ ಉಲ್ಲೇಖಿಸಿ, "ನಮ್ಮ ದೇಶವನ್ನು ಪ್ರೀತಿಸು. ಯಾಕೆಂದರೆ ನಮ್ಮ ಬೇರುಗಳು ಇಲ್ಲಿ ಇವೆ." ಎಂದು ಬರೆದಿದ್ದರು. ಮೂರನೇ ಪತ್ರದಲ್ಲಿ ಮನುಷ್ಯತ್ವ ಹಾಗೂ ಒಳ್ಳೆ ಗುಣಗಳು ಯಾಕೆ ಇರಬೇಕು ಅನ್ನುವುದನ್ನು ಉಲ್ಲೇಖಿಸಿ "ಹಣ ಸಂಪಾದಿಸುವುದು, ಸಿರಿತನ ಅನ್ನುವುದು ಯಶಸ್ಸಲ್ಲ. ಒಳ್ಳೆಯ ಗುಣವನ್ನು ಹೊಂದಿ ಒಳ್ಳೆಯ ಮನುಷ್ಯನಾಗುವುದು ನಿಜವಾದ ಯಶಸ್ಷು" ಅಂತ ಬರೆದಿದ್ದರು. 

ಹೀಗೆ ಒಂದು ರಾತ್ರಿ, ಎರಡು ರಾತ್ರಿ, ಹತ್ತು ರಾತ್ರಿಗಳು ಕಳೆಯಿತು. ಅಜ್ಜ ಬರೆದ ಪತ್ರಗಳನ್ನು ಓದಿ ಮುಗಿಸಿದ ಅಪ್ರಮೇಯನ ತನ್ನ ಅಜ್ಜ ಎಷ್ಟೊಂದು ವಿಚಾರಗಳನ್ನು ಮಾತನಾಡಬೇಕೆಂದಿದ್ದರು. ಪ್ರತಿ ಪತ್ರದಲ್ಲೂ ಪ್ರೀತಿ ಮಾತ್ರ ಇತ್ತು. ಯಾವುದೇ ದೂರು ಇರಲಿಲ್ಲ. ಯಾವುದೇ ಬೇಸರ ಇರಲಿಲ್ಲ. ಮೊಮ್ಮಗನ ಮೇಲಿನ ಪ್ರೀತಿಯೇ ತುಂಬಿಕೊಂಡಿತ್ತು. "ನಾನು ಅಜ್ಜನಿಗೆ ಸಮಯವನ್ನೇ ನೀಡಲಿಲ್ಲ" ಅಂತ ಮರುಗಿದ.

ಕೊನೆಯದಾಗಿ ಒಂದು ಡೈರಿ ಕೈಗೆ ಸಿಕ್ಕಿತು. ಅದರ ಕೊನೆಯ ಪುಟದಲ್ಲಿ ಕೇವಲ ಒಂದು ಸಾಲು. ಅಜ್ಜನ ನಡುಗುವ ಕೈಬರಹ. 
"ಒಂದು ದಿನ ನನ್ನ ಕಥೆಗಳು ಓದಲು ಯಾರಾದರೂ ಇರುತ್ತಾರಾ?". 
ಇದನ್ನು ಓದುತ್ತಿದ್ದಂತೆಯೇ ಅಪ್ರಮೇಯನ ಕಣ್ಣೀರಿನ ಹನಿ ಆ ಪದಗಳ ಮೇಲೆ ಬಿತ್ತು. ಕೈಯಿಂದ ಡೈರಿ ಜಾರಿ ಬಿತ್ತು. ಆ ಕ್ಷಣದಲ್ಲಿ ಅವನು ಒಡೆದು ಹೋದ. "ಅಜ್ಜಾ,  ನನ್ನ ಮುಂದೆ ಹಿರಿದಾದ ಒಂದು ನಿಧಿಯೇ ಇತ್ತು,  ನಾನು ಅದನ್ನು ನೋಡಲಿಲ್ಲ,  ಕೇಳಲಿಲ್ಲ,  ಅರ್ಥ ಮಾಡಿಕೊಳ್ಳಲಿಲ್ಲ, " ಎಂದು ಜೋರಾಗಿ ಅತ್ತ. ಆದರೆ ಆ ಅಳುವನ್ನು ಕೇಳಲು ಅಜ್ಜ ಮಾತ್ರ ಅಲ್ಲಿ ಇರಲಿಲ್ಲ. 

ಆ ಕ್ಷಣದಲ್ಲಿ ಅವನಿಗೆ ಅರ್ಥವಾಯಿತು. "ತಾನು ಕಳೆದುಕೊಂಡದ್ದು ಒಬ್ಬ ವ್ಯಕ್ತಿಯಲ್ಲ,  ಒಂದು ಜೀವಂತ ಗ್ರಂಥಾಲಯವನ್ನು. ಒಂದು ವಿಶ್ವವಿದ್ಯಾಲಯವನ್ನು. ಅನುಭವದ ಮಹಾಸಾಗರವನ್ನು. ಬದುಕಿನ ಪ್ರತಿಯೊಂದು ತಿರುವಿಗೂ ಬೆಳಕು ತೋರಿಸಬಹುದಾದ ದಾರಿದೀಪವನ್ನು. ಆ ಅಮೂಲ್ಯ ನಿಧಿ ತನ್ನ ಮನೆಯಲ್ಲೇ ಇತ್ತು,  ಆದರೆ ಅದನ್ನು ಅರಿತುಕೊಳ್ಳುವಷ್ಟರಲ್ಲಿ, ಆ ನಿಧಿಯ ಬಾಗಿಲು ಶಾಶ್ವತವಾಗಿ ಮುಚ್ಚಿಹೋಗಿತ್ತು.."

ಆ ದಿನದಿಂದ ಅಪ್ರಮೇಯ ಬದಲಾಗಲು ಆರಂಭಿಸಿದ. ದೊಡ್ಡವನಾಗಿ ಅವನು ಕನ್ನಡ ಸಾಹಿತ್ಯ ಓದಿದ. ಹಳೆಯ ಗ್ರಂಥಗಳನ್ನು ಹುಡುಕಿದ. ಕನ್ನಡ ಲೇಖಕರನ್ನು ಅಧ್ಯಯನ ಮಾಡಿದ. ಸಂಶೋಧನೆ ನಡೆಸಿದ. ಭಾಷೆಯ ಬಗ್ಗೆ ಲೇಖನಗಳನ್ನು ಬರೆದ. 

***

ವರ್ಷಗಳು ಕಳೆದವು. ಇಂದು ಡಾ. ಅಪ್ರಮೇಯ ರಾಮ ಭಟ್ ರಾಜ್ಯದ ಪ್ರಸಿದ್ಧ ಕನ್ನಡ ಪ್ರಾಧ್ಯಾಪಕರಲ್ಲಿ ಒಬ್ಬ. ಅವನ ಮೇಜಿನ ಮೇಲೆ ಯಾವಾಗಲೂ ಅಜ್ಜನ ಹಳೆಯ ಮರದ ಪೆಟ್ಟಿಗೆ ಇರುತ್ತಿತ್ತು. ಪೆಟ್ಟಿಗೆ ನೋಡಿ ಕುತೂಹಲದಿಂದ ಯಾವ ವಿದ್ಯಾರ್ಥಿ ಕೇಳಿದರೂ ಅವನು ಹೇಳುತ್ತಿದ್ದ: 
"ನನ್ನ ಜೀವನದ ದೊಡ್ಡ ಗುರು ನನ್ನ ಅಜ್ಜ. ನಾನು ಅವರನ್ನು ಬದುಕಿರುವಾಗ ಕೇಳಲಿಲ್ಲ. ಆದರೆ ಅವರು ಬರೆದ ಪತ್ರಗಳು ನನ್ನ ಬದುಕಿನುದ್ದಕ್ಕೂ ಮಾರ್ಗದರ್ಶಿಯಾಗಿವೆ. ಜೀವನದ  ಪಾಠವನ್ನು ಕಲಿಸುತ್ತಿವೆ."

ಇಂದು ಮನೆಗಳಲ್ಲಿ ವೈ-ಫೈ ಇದೆ. ಸ್ಮಾರ್ಟ್‌ಫೋನ್ ಇದೆ. ಆನ್‌ಲೈನ್ ಕ್ಲಾಸ್ ಇದೆ. ಕೃತಕ ಬುದ್ಧಿಮತ್ತೆ ಇದೆ. ಜಗತ್ತಿನ ಯಾವುದೇ ಮಾಹಿತಿಯೂ ಕ್ಷಣಾರ್ಧದಲ್ಲಿ ಸಿಗುತ್ತದೆ. ಆದರೆ ಅಜ್ಜ-ಅಜ್ಜಿಯರ ಕಥೆ ಕೇಳುವ ಸಮಯ ಇದೆಯೇ? ಅವರ ಅನುಭವ ಕೇಳುವ ತಾಳ್ಮೆ ಇದೆಯೇ? ಅವರ ಜೊತೆ ಕುಳಿತು ಮಾತನಾಡುವ ಮನಸ್ಸಿದೆಯೇ?  

ಅಜ್ಜ-ಅಜ್ಜಿಯರ ಅನುಭವವನ್ನು ಗೂಗಲ್‌ನಲ್ಲಿ ಹುಡುಕಲು ಸಾಧ್ಯವಿಲ್ಲ. ಅವರ ಪ್ರೀತಿಯನ್ನು ಯೂಟ್ಯೂಬ್‌ನಲ್ಲಿ ನೋಡಲು ಸಾಧ್ಯವಿಲ್ಲ. ಅವರ ಮಮತೆಯನ್ನು ಯಾವುದೇ ಆ್ಯಪ್ ಡೌನ್‌ಲೋಡ್ ಮಾಡಿ ಪಡೆಯಲು ಸಾಧ್ಯವಿಲ್ಲ. ಅವರು ಬದುಕಿರುವಾಗ ಅವರ ಜೊತೆ ಕಳೆದ ಹತ್ತು ನಿಮಿಷ, ಅವರು ಹೋದ ನಂತರ ಜೀವನಪೂರ್ತಿ ನಮ್ಮನ್ನು ಬೆಳಗಿಸುವ ನೆನಪಾಗುತ್ತದೆ. 

ನಾವು ನಮ್ಮ ಮಕ್ಕಳಿಗೆ ಆಸ್ತಿ ಕೊಡಬಹುದು. ವಿದ್ಯೆ ಕೊಡಬಹುದು. ಸೌಲಭ್ಯಗಳನ್ನು ಕೊಡಬಹುದು. ಆದರೆ ಅಜ್ಜ-ಅಜ್ಜಿಯರ ಕಥೆಗಳನ್ನು ಇಂದು ಕಳೆದುಕೊಳ್ಳಲು ಬಿಡುತ್ತಿದ್ದರೆ, ಅವರು ಕಳೆದುಕೊಳ್ಳುವುದು ಒಂದು ಭಾಷೆಯನ್ನಲ್ಲ, ಒಂದು ಪೀಳಿಗೆಯ ಜ್ಞಾನ. ಒಂದು ಸಂಸ್ಕೃತಿ, ಒಂದು ಬದುಕಿನ ದಾರಿದೀಪ. ಒಂದು ಜೀವನದ ಅನುಭವ. ಒಂದು ಅಮೂಲ್ಯವಾದ ನಿಧಿ.

ಆದ್ದರಿಂದ,  ಇಂದು ಮನೆಗೆ ಹೋದ ಕೂಡಲೇ ಒಂದು ಕೆಲಸ ಮಾಡಿ. ನಿಮ್ಮ ಅಜ್ಜ ಅಥವಾ ಅಜ್ಜಿಯ ಬಳಿ ಕುಳಿತು ಕೇವಲ ಹತ್ತು ನಿಮಿಷ ಮಾತಾಡಿ. ಏಕೆಂದರೆ, ಇಂದು ನಮ್ಮ ಮನೆಯಲ್ಲಿರುವ ಅಜ್ಜ-ಅಜ್ಜಿ - ನಾಳೆ ನೆನಪುಗಳಾಗಬಹುದು. ಅವರ ಕಥೆಗಳು - ಒಂದು ದಿನ ಸಿಗದ ನಿಧಿಯಾಗಬಹುದು. ನಾಳೆ ಅವರ ಪೆಟ್ಟಿಗೆ ಸಿಗಬಹುದು,  ಆದರೆ ಅವರ ಧ್ವನಿ ಮತ್ತೆ ಎಂದಿಗೂ ಸಿಗುವುದಿಲ್ಲ. 

✍🏻 Deepalaxmi Bhat
Mangaluru  

ಮಂಗಳವಾರ, ಜೂನ್ 2, 2026

ಅನನ್ಯ – ಮರಣವನ್ನೂ ಮೀರಿದ ಪ್ರೀತಿ

 ✍🏻ದೀಪಲಕ್ಷ್ಮಿ ಭಟ್, ಮಂಗಳೂರು  

ಒಂದು ಸುಂದರವಾದ ಜೋಡಿ ಅಮಿತ್ - ಅನನ್ಯ. ಮದುವೆಯಾಗಿ 12 ವರ್ಷಗಳಾಗಿದ್ದವು. ಮುದ್ದಾದ ಎರಡು ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಅಮಿತ್ ಅನನ್ಯ ಇಬ್ಬರೂ ಸಾಫ್ಟ್ ವೇರ್ ಕೆಲಸ ಮಾಡುತ್ತಿದ್ದರು. ವಾರದಲ್ಲಿ ಮೂರು ದಿನ ಮನೆಯಲ್ಲಿಯೇ ವರ್ಕ್ ಫ್ರಮ್ ಹೋಂ ಮಾಡಿಕೊಂಡು, ಮನೆ, ಆಫೀಸ್ ಎರಡೂ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸುತ್ತಿದ್ದರು. ಈಗಿನ ಕಾಲದ ನ್ಯೂಕ್ಲಿಯರ್ ಫ್ಯಾಮಿಲಿ ಅವರದ್ದು. ಇಬ್ಬರ ತಂದೆ ತಾಯಂದಿರು, ಊರಿನಲ್ಲಿ ಮನೆ ಮಾಡಿಕೊಂಡಿದ್ದರು. ಇವರಿಬ್ಬರೂ ಬೆಂಗಳೂರಿನಲ್ಲಿದ್ದರು.  ಸ್ವಂತವಾಗಿ 4 ಬೆಡ್ ರೂಮಿನ ಫ್ಲಾಟ್ ಒಂದನ್ನು ಖರೀದಿಸಿ, ಆರಾಮ ಜೀವನ ಸಾಗಿಸುತ್ತಿದ್ದರು. ಕುಟುಂಬದಲ್ಲಿ ಪ್ರೀತಿ ಹೇಗಿರಬೇಕು ಎಂಬುದನ್ನು ಇವರನ್ನು ನೋಡಿ ಕಲಿಯಬೇಕಾದದ್ದು ಅನ್ನುವಂತೆ ಪರಸ್ಪರ ಪ್ರೀತಿಯಿಂದ ಜೀವನ ನಡೆಸುತ್ತಿದ್ದರು. ಯಾವುದಕ್ಕೂ ಕೊರತೆಯಿಲ್ಲದ ಜೀವನವಾದ್ದರಿಂದ, ಅನೇಕ ಬಡ ಜನರಿಗೆ ತಮ್ಮಿಂದಾಗುವ ರೀತಿಯಲ್ಲಿ ಸಹಾಯ ಮಾಡುತ್ತಿದ್ದರು. 



"ಅನನ್ಯಾ... ನನ್ನ ಪರ್ಸು ಕಾಣಿಸುತ್ತಿಲ್ಲ..." ಎಂದು ಅಮಿತ್ ಹೇಳುತ್ತಿದ್ದಂತೆ, " ಅಮ್ಮಾ.. ನನ್ನ ಸೋಶಿಯಲ್ ನೋಟ್ಸ್ ಸಿಗುತ್ತಿಲ್ಲ" ಅಂತ ಅಮೂಲ್ಯ ಕೂಗಿದಳು. "ಅಮ್ಮಾ... ಆಟೋ ಬಂದಿದೆ. ನನ್ನ ಟಿಫಿನ್ ಕೊಡು" ಅಂತ ಅಮರ್ಥ್ಯ ಕೂಗಿದ. ಎಲ್ಲರಿಗೂ ಅನನ್ಯ ಇಲ್ಲದಿದ್ದರೆ, ದಿನವೇ ಹೋಗುವುದಿಲ್ಲ ಅನ್ನುವ ರೀತಿಯಲ್ಲಿ ಅವರ ಸಂಸಾರ. ಒಂದೇ ಉಸಿರಿನಲ್ಲಿ ಅನನ್ಯ ಒಂದು ಕೈಯಲ್ಲಿ ಮಕ್ಕಳ ಟಿಫಿನ್ ಬ್ಯಾಗ್ಸ್ ಹಿಡಿದುಕೊಂಡು ಬಂದು, ಮೊದಲು ಅಮೂಲ್ಯಳ ಟೇಬಲ್ ಇಂದ ಸೋಶಿಯಲ್ ನೋಟ್ಸ್ ತೆಗೆದುಕೊಟ್ಟು - "ನೋಡು ಅಮ್ಮು, ನೀಟ್ ಆಗಿ ಟೇಬಲ್ನಲ್ಲಿ ಇಟ್ಟುಕೊಂಡ್ರೆ, ಎಲ್ಲ ಕೈಗೆ ಬೇಕಿದ್ದ ಹಾಗೆ ಸಿಗುತ್ತೆ. ನೀನು ಇನ್ನು ಯಾವಾಗ ಒರ್ಗನೈಸ್ಡ್ ಆಗಿ ಇರೋದನ್ನು ಕಲೀತಿ" ಅಂತ ಹೇಳಿ ಮಕ್ಕಳನ್ನು ಕಳುಹಿಸಿಕೊಟ್ಟಳು. ಆಮೇಲೆ ಅಮಿತ್ ನ ಪರ್ಸು ಅವನ ಕೈಗೆ ಕೊಟ್ಟು, ತಾನೂ ಹೊರಟಳು. ಅಮಿತ್ ಅನನ್ಯ ಇಬ್ಬರ ಆಫೀಸ್ ಒಂದೇ ಕಡೆ ಆದ ಕಾರಣ ಒಟ್ಟಿಗ ಮನೆಯಿಂದ ಹೊರಟರು. ಬೇಸ್ಮೆಂಟ್ ರೀಚ್ ಆದ ಹಾಗೆ, ಅನನ್ಯಳಿಗೆ ತಲೆ ಸುತ್ತು ಬಂದಂತಾಗಿ ಕುಸಿದಳು. "ಅನನ್ಯಾ, ಏನಾಯ್ತು? ಎದ್ದೇಳು" ಅಂತ ಹೇಳಿ ಅಮಿತ್ ಅನನ್ಯಾಳಿಗೆ ನೀರು ಚುಮುಕಿಸಿದ. ಎಚ್ಚರವಾದರೂ ಅನನ್ಯಾಳಿಗೆ ನಡೆಯಲು ಕಷ್ಟವಾಯಿತು. ಭೀತಗೊಂಡ ಅಮಿತ್, ಅನನ್ಯಳನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದ. 

ಪ್ರಿಲಿಮಿನರಿ ಟೆಸ್ಟ್ ಎಲ್ಲ ಆದ ಮೇಲೆ ಡಾಕ್ಟರ್ ಅಮಿತ್ ನ ಕರೆದು, "ಅಮಿತ್ ಅವರೇ, ಐ ಆಮ್ ಸಾರೀ ಟು ಸೇ, ಅನನ್ಯ ಅವರಿಗೆ ಗ್ರೇಡ್ 4  ಬ್ರೈನ್ ಟ್ಯೂಮರ್ ಆಗಿದೆ. ಫೈನಲ್ ಸ್ಟೇಜ್ ಬೇರೆ. ಹೆಚ್ಚೆಂದರೆ, 4 ತಿಂಗಳು ಲೈಫ್ ಇದೆ ಅಂತ ಹೇಳಬಹುದು." ಅಮಿತ್ ಗೆ ಜಗತ್ತೇ ಕುಸಿದಂತಾಯಿತು.  ನಡುಗುವ ಧ್ವನಿಯಲ್ಲಿ, "ಡಾಕ್ಟರ್... ನೀವು ಏನೋ ತಪ್ಪು ಹೇಳ್ತಿದ್ದೀರಾ... ನನ್ನ ಹೆಂಡತಿ ಆರೋಗ್ಯವಾಗಿದ್ದಾಳೆ... ನಿನ್ನೆವರೆಗೂ ಚೆನ್ನಾಗೇ ಇದ್ದಳು..." ಎಂದು ತಡವರಿಸುತ್ತಾ ಕೇಳಿದ. ಡಾಕ್ಟರ್ ಮೌನವಾಗಿ ಸ್ಕ್ಯಾನ್ ವರದಿಯನ್ನು ಅವನ ಮುಂದೆ ಇಟ್ಟರು. "ನಮಗೂ ಇದೇ ಆಶ್ಚರ್ಯವಾಗಿದೆ. ಕೆಲವೊಮ್ಮೆ ಬ್ರೈನ್ ಟ್ಯೂಮರ್ ಯಾವುದೇ ಲಕ್ಷಣಗಳಿಲ್ಲದೇ ಬೆಳೆಯುತ್ತದೆ. ಈಗಾಗಲೇ ಅದು ಮೆದುಳಿನ ಬಹುತೇಕ ಭಾಗವನ್ನು ಆವರಿಸಿದೆ." ಅಮಿತ್ ಕುರ್ಚಿಯ ಮೇಲೆಯೇ ಕುಸಿದು ಕುಳಿತ. ಅವನ ಕಣ್ಣುಗಳ ಮುಂದೆ ಅನನ್ಯಳ ಮುಖ ತೇಲತೊಡಗಿತು.

"ಬೆಳಿಗ್ಗೆ ಎದ್ದು ಮಕ್ಕಳಿಗೆ ಊಟ ಮಾಡಿಸುವುದು... ಅವನಿಗೆ ಟೈ ಕಟ್ಟಿಕೊಡುವುದು... ತಾಯಿಯಂತೆ ಎಲ್ಲರನ್ನು ನೋಡಿಕೊಳ್ಳುವುದು... ಇನ್ನೇನು ನಾಲ್ಕು ತಿಂಗಳು ಮಾತ್ರವೇ?" - ಅವನ ಮನಸ್ಸು ಅದನ್ನು ಒಪ್ಪಿಕೊಳ್ಳಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಅನನ್ಯ ಚೇತರಿಸಿಕೊಂಡಳು. ಅಲ್ಲಿಂದ ಮನೆಗೆ ವಾಪಾಸ್ ಹೋಗುವ ಕ್ಷಣಗಳೆಲ್ಲ ಅಮಿತ್ ತಲೆಗೆ ಕಲ್ಲುಬಂಡೆ ಬಿದ್ದಿರುವಂಥ ಅನುಭವ. ಮನೆಗೆ ಹಿಂದಿರುಗುವ ದಾರಿಯೆಲ್ಲಾ ಅಮಿತ್ ಮೌನವಾಗಿದ್ದ. ಅನನ್ಯ ಮಾತ್ರ ಅವನನ್ನು ನೋಡಿ ನಗುತ್ತಿದ್ದಳು. "ಅಮಿತ್, ಏನಾಯ್ತು? ಯಾಕೆ ಇಷ್ಟು ಸೀರಿಯಸ್ ಆಗಿದ್ದೀಯಾ? ಡಾಕ್ಟರ್ ಏನಂದ್ರು?" ಅಮಿತ್ ಕ್ಷಣಕಾಲ ಕಣ್ಣು ಮುಚ್ಚಿದ. ನಂತರ ಸುಳ್ಳು ಹೇಳಿದ. "ವಿಟಮಿನ್ ಡಿಫಿಶಿಯನ್ಸಿ ಅಂತೆ. ಸ್ವಲ್ಪ ರೆಸ್ಟ್ ತೆಗೆದುಕೊಳ್ಳಬೇಕಂತೆ." ಅನನ್ಯ ಮತ್ತೆ ನಕ್ಕಳು. "ಅಷ್ಟೇನಾ? ನಿನ್ನ ಮುಖ ನೋಡಿ ನಾನು ಅಂದುಕೊಂಡೆ ಏನೋ ದೊಡ್ಡ ವಿಷಯ ಇದೆ ಅಂತ." ಆ ನಗುವನ್ನು ನೋಡಿದ ಅಮಿತ್ ನ ಹೃದಯ ಸಾವಿರ ತುಂಡಾಯಿತು.

 ಆ ರಾತ್ರಿ ಅವನಿಗೆ ನಿದ್ರೆ ಬರಲಿಲ್ಲ. ಅನನ್ಯ ಅವನ ಪಕ್ಕದಲ್ಲಿ ಮಗುವಿನಂತೆ ಮಲಗಿದ್ದಳು. ಅವಳ ಕೂದಲನ್ನು ಸವರುತ್ತಾ ಅಮಿತ್ ಕಣ್ಣೀರು ಸುರಿಸಿದ. "ದೇವರೇ... ನನ್ನ ಆಯಸ್ಸು ಬೇಕಾದ್ರೆ ಅವಳಿಗೆ ಕೊಡು... ಆದರೆ ಅವಳನ್ನು ನನ್ನಿಂದ ಕಿತ್ತುಕೊಳ್ಳಬೇಡ..." - ಎಂದು ಮೊದಲ ಬಾರಿಗೆ ಅಮಿತ್ ದೇವರ ಮುಂದೆ ಸೋತವನಂತೆ ಪ್ರಾರ್ಥಿಸುತ್ತಿದ್ದ. 

ಮುಂದಿನ ದಿನಗಳಿಂದ ಅಮಿತ್ ಒಂದು ನಿರ್ಧಾರಕ್ಕೆ ಬಂದಿದ್ದ. "ಅನನ್ಯಳಿಗೆ ಅವಳ ಈ ಖಾಯಿಲೆ ಬಗ್ಗೆ  ಹೇಳಲೇಬಾರದು. ಅವಳ ಉಳಿದ ದಿನಗಳನ್ನು ದುಃಖದಲ್ಲಿ ಕಳೆಯಲು ಬಿಡಬಾರದು. ಅವಳ ಜೀವನದ ಕೊನೆಯ ಕ್ಷಣದವರೆಗೂ ಸಂತೋಷವಾಗಿರಿಸಬೇಕು." ಎಂದು. ಆ ದಿನದಿಂದ ಪ್ರತಿದಿನವನ್ನು ಒಂದು ಹಬ್ಬದಂತೆ ಆಚರಿಸಲು ಆರಂಭಿಸಿದ. "ಮನೆ ಜವಾಬ್ದಾರಿ ನಾನೇ ನೋಡಿಕೊಳ್ಳುತ್ತೇನೆ. ನೀನು ಕೆಲಸ ಬಿಡು. ಒಂದು ನಾಲ್ಕು ತಿಂಗಳು ನಾವು ಫ್ರೀ ಮಾಡಿಕೊಳ್ಳೋಣ" ಅಂದ. ಅವನೂ ಕೆಲಸಕ್ಕೆ ನಾಲ್ಕು ತಿಂಗಳುಗಳ ಕಾಲ ರಜೆ ಮಾಡಿ, ಅನನ್ಯಾ ಹಾಗೂ ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಲು ಆರಂಭಿಸಿದ. ಅನನ್ಯ ಕೂಡ ಅಮಿತ್ ಹೇಳಿದಂತೆ ಕೆಲಸದಿಂದ ರಿಸೈನ್ ಮಾಡಿದಳು. 

ಆ ತಿಂಗಳು ಪೂರ್ತಿ ಅಮಿತ್ - ಕುಟುಂಬ ಸಮೇತ ಪ್ರವಾಸಗಳು...ಹಳೆಯ ನೆನಪುಗಳನ್ನು ಮರುಕಳಿಸುವುದು...ಅವಳ ನೆಚ್ಚಿನ ಹಾಡುಗಳನ್ನು ಕೇಳಿಸುವುದು...ಪ್ರತಿ ಕ್ಷಣವನ್ನು ನೆನಪಾಗುವಂತೆ ಉಳಿಸಿಕೊಳ್ಳುತ್ತಿದ್ದ. ಆದರೆ ವಿಧಿ ಮಾತ್ರ ತನ್ನ ಕೆಲಸವನ್ನು ನಿಧಾನವಾಗಿ ಮಾಡುತ್ತಿತ್ತು... ಅನನ್ಯಳಿಗೆ ಆಗಾಗ ತಲೆನೋವು ಶುರುವಾಯಿತು. ಕೆಲವೊಮ್ಮೆ ಮಾತನಾಡುತ್ತಾ ಪದಗಳನ್ನು ಮರೆತು ಬಿಡುತ್ತಿದ್ದಳು. ಒಮ್ಮೆ ಅಡಿಗೆ ಮಾಡುತ್ತಿದ್ದಾಗ ಗ್ಯಾಸ್ ಆಫ್ ಮಾಡುವುದನ್ನೇ ಮರೆತಳು. ಹಲವಾರು ಬಾರಿ ಮಕ್ಕಳ ಹೆಸರನ್ನು ಕೂಡಾ ಮರೆತಳು. ಇದೆಲ್ಲ ನೋಡುತ್ತಾ ಅಮಿತ್ ಹೃದಯ ಪ್ರತಿದಿನ ಸಾಯುತ್ತಿತ್ತು...ಆದರೆ ಮುಖದಲ್ಲಿ ಮಾತ್ರ ನಗುವನ್ನು ಇಟ್ಟುಕೊಂಡಿದ್ದ. 

ಅನನ್ಯಳ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿತ್ತು. ಒಂದು ದಿನ ಅಮಿತ್ ದಿನಸಿ ಸಾಮಾನು ಖರೀದಿಸಲೆಂದು ಹೊರಗೆ ಹೋಗಿದ್ದ. ಶಾಪಿಂಗ್ ನಿಂದ ಮನೆಗೆ ಬಂದಾಗ, ಅವನಿಗೆ ಬಿಸಿ ಬಿಸಿ ಕಾಪಿ ಮಾಡಿ ಕೊಟ್ಟ ಅನನ್ಯ ಸೋಫಾದಲ್ಲಿ ಕುಳಿತು  "ಅಮಿತ್... ನಾನು ನಿಂಗೆ ಒಂದು ವಿಷಯ ಹೇಳಬೇಕಿದೆ." ಎಂದಳು. ಅಮಿತ್ ಬೆಚ್ಚಿಬಿದ್ದ. "ಏನಾಯ್ತು ಅನನ್ಯಾ?" ಎಂದು ಕೇಳಿದ. ಅನನ್ಯ "ನನಗೆ ಎಲ್ಲ ಗೊತ್ತು." ಅಂತ ಹೇಳಿದಳು. ಅಮಿತ್ ಮುಖ ಬಿಳಿಚಿತು. "ಏನು ಗೊತ್ತು?" ಅಂತ ಕೇಳಿದ. "ನನಗೆ ಬ್ರೈನ್ ಟ್ಯೂಮರ್ ಇದೆ. ನಾಲ್ಕು ತಿಂಗಳು ಮಾತ್ರ ಅಂತ ಡಾಕ್ಟರ್ ಹೇಳಿದ್ದು ನನಗೆ ಗೊತ್ತು." ಅಂದಳು.  ಅಮಿತ್ ಕೈಯಲ್ಲಿದ್ದ ಕಾಫಿ ಕಪ್ ನೆಲಕ್ಕೆ ಬಿತ್ತು.

" ನಿಂಗೆ.....ಹೇಗೆ???" ಅಂತ ಅಮಿತ್ ತಡವರಿಸಿದ. "ಆ ದಿನ ಆಸ್ಪತ್ರೆಯಿಂದ ಬಂದ ಮೇಲೆ, ನೀನು ತುಂಬ ಅಪ್ಸೆಟ್ ಆಗಿದ್ದು ನೋಡಿ, ನಿನ್ನ ಬ್ಯಾಗ್ ನಲ್ಲಿ ಇದ್ದ ನನ್ನ ಮೆಡಿಕಲ್ ರಿಪೋರ್ಟ್ ನೋಡಿದ್ದೆ." ಅಮಿತ್ ಕಣ್ಣೀರು ಹಾಕುತ್ತಾ ಅವಳ ಕಾಲ ಬಳಿ ಕುಸಿದು ಕುಳಿತ. "ಕ್ಷಮಿಸು ಅನನ್ಯಾ...ನಿಂಗೆ ವಿಷಯ ತಿಳಿಸಲು ನಂಗೆ ಧೈರ್ಯ ಇರ್ಲಿಲ್ಲ. ನಂಗೆ - ನಿನ್ನನ್ನು ಉಳಿಸಿಕೊಳ್ಳಲಾಗಲಿಲ್ಲ..." ಅಂತ ಬಿಕ್ಕಿ ಬಿಕ್ಕಿ ಅತ್ತ. ಅನನ್ಯ ಅವನ ತಲೆಯನ್ನು ಸವರುತ್ತಾ "ನಾನು ನಿನ್ನನ್ನು ಕ್ಷಮಿಸುವಂತದ್ದು ಏನೂ ಇಲ್ಲ. ಆದರೆ ನೀನು ನನಗೆ ಒಂದು ಮಾತು ಕೊಡಬೇಕು." - ಅಂದಳು. "ಏನು?" ಅಂತ ಅಮಿತ್ ಕೇಳಿದ. ಅನನ್ಯ "ನಾನು ಹೋದ ಮೇಲೆ ನೀನು ಮತ್ತೊಮ್ಮೆ ಮದುವೆಯಾಗಬೇಕು." ಅಂದಳು. ಶಾಕ್ ಆದ ಅಮಿತ್  "ಅಸಾಧ್ಯ!" - ಅಂತ ಕೂಗಿದ. ಆಗ ನಗುಮುಖದಲ್ಲೇ ಇದ್ದ ಅನನ್ಯ, "ನಾನು ನಿನ್ನ ಪರ್ಮಿಷನ್ ಕೇಳುತ್ತಿಲ್ಲ ಅಮಿತ್... ನಿನ್ನಿಂದ ಮಾತು ತೆಗೆದುಕೊಳ್ಳುತ್ತಿದ್ದೇನೆ." ಅಂದಳು.

ಕೆಲವೇ ವಾರಗಳಲ್ಲಿ ಅನನ್ಯ ಸಾವನ್ನಪ್ಪಿದಳು. ಮನೆ ಮೌನವಾಗಿತ್ತು. ಮಕ್ಕಳು ತಾಯಿಯನ್ನು ಹುಡುಕುತ್ತಿದ್ದರು. ಅಮಿತ್ ಬದುಕಿದ್ದರೂ ಜೀವಂತ ಶವದಂತಾಗಿದ್ದ. 

ಅನನ್ಯ ಸತ್ತ ಮೂರು ತಿಂಗಳ ನಂತರ, ಒಂದು ದಿನ ಒಬ್ಬ ವಕೀಲರಿಂದ ಕರೆ ಬಂತು. "ಅಮಿತ್ ಸರ್, ಅನನ್ಯ ಮ್ಯಾಡಮ್ ನಿಮಗಾಗಿ ಒಂದು ಲೆಟರ್ ಮತ್ತು ಒಂದು ಫೈಲ್ ಬಿಟ್ಟು ಹೋಗಿದ್ದಾರೆ." ಅಮಿತ್ ಆಶ್ಚರ್ಯದಿಂದ ಲಾಯರ್ ಆಫೀಸ್ ಗೆ ಹೋದ. ಅಲ್ಲಿ ಒಂದು ಸೀಲ್ಡ್ ಕವರ್ ಇತ್ತು. ಅದರ ಮೇಲೆ ಬರೆಯಲಾಗಿತ್ತು: "ನನ್ನ ನಾಲ್ಕನೇ ಮಗುವಿಗೆ..."

ಅಮಿತ್ ಗಾಬರಿಯಾದ. "ನಾಲ್ಕನೇ ಮಗು?" ಅವರಿಗೆ ಇಬ್ಬರು ಮಕ್ಕಳು ಮಾತ್ರ ಇದ್ದರು. ಕವರ್ ತೆರೆದ. ಒಳಗೆ ಒಂದು ಪತ್ರ.

--- 

"ಪ್ರಿಯ ಅಮಿತ್,

ನೀನು ಈ ಪತ್ರ ಓದುತ್ತಿದ್ದರೆ, ನಾನು ನಿನ್ನ ಜೊತೆಗೆ ಇಲ್ಲ ಎನ್ನುವುದು ಖಚಿತ. ಆದರೆ ನಾನು ನಿನ್ನನ್ನು ಬಿಟ್ಟು ಹೋಗಿಲ್ಲ.

ನಿಂಗೆ ನೆನಪಿದೆಯಾ? ಮೂರು ವರ್ಷಗಳ ಹಿಂದೆ ನಾವು ಒಂದು ವಿಶೇಷ ವೈದ್ಯಕೀಯ ಪ್ರೋಗ್ರಾಂಗೆ ಹೋಗಿದ್ದೆವು. ಅಲ್ಲಿ ನಮ್ಮ ಜೀನ್ಸ್ ಮತ್ತು ಸ್ಟೆಮ್ ಸೆಲ್ಸ್ ಸಂಗ್ರಹಿಸಿದ್ದರು. ನನ್ನ ಕಾಯಿಲೆ ಗೊತ್ತಾದ ದಿನ, ನಾನು ಗುಪ್ತವಾಗಿ ಒಂದು ನಿರ್ಧಾರ ಮಾಡಿದೆ. ನನ್ನ ಅಂಡಾಣುಗಳನ್ನು ಸಂರಕ್ಷಿಸಿ, ನಮ್ಮ ಭವಿಷ್ಯವನ್ನು ಉಳಿಸಿದ್ದೇನೆ. ಈ ಫೈಲ್ ನಲ್ಲಿ ಎಲ್ಲಾ ಕಾನೂನು ಅನುಮತಿಗಳು, ವೈದ್ಯಕೀಯ ದಾಖಲೆಗಳು ಮತ್ತು ನನ್ನ ಒಪ್ಪಿಗೆ ಇದೆ. ನೀನು ಒಪ್ಪಿದರೆ, ನಾನು ಸತ್ತ ನಂತರವೂ ನಮ್ಮ ಮಗುವಿಗೆ ಜನ್ಮ ನೀಡಬಹುದು. ಅದು ನನ್ನ ಕೊನೆಯ ಆಸೆ ಮತ್ತು ಉಡುಗೊರೆ.

ನಾನು ಬದುಕಿರದಿದ್ದರೂ, ನಮ್ಮ ಪ್ರೀತಿ ಬದುಕಿರಲಿ.

– ನಿನ್ನ ಅನನ್ಯ"

---

ಲೆಟರ್ ಓದಿದ ಅಮಿತ್ ಸ್ತಬ್ಧನಾಗಿ ಕುಳಿತ. ಅವನ ಕೈಗಳು ನಡುಗುತ್ತಿದ್ದವು. ಅನನ್ಯಾ ತನ್ನ ಮರಣದ ನಂತರವೂ ಅವನ ಏಕಾಂತದ ಬಗ್ಗೆ, ಅವನ ಏಕಾಂತ ನಿವಾರಿಸುವ ಬಗ್ಗೆ ಯೋಚಿಸಿದ್ದಳು. ಅವನ ಭವಿಷ್ಯವನ್ನು ಯೋಚಿಸಿದ್ದಳು. ಆದರೆ ನಿಜವಾದ ತಿರುವು ಇನ್ನೂ ಬಾಕಿಯಿತ್ತು.

ಅಮಿತ್ ನೆನಪಿಸಿಕೊಂಡ. ಅಮೂಲ್ಯ ಮತ್ತು ಅಮರ್ಥ್ಯ... ಅವನ ಸ್ವಂತ ಮಕ್ಕಳು ಅಲ್ಲ. ಅವರು ಅನನ್ಯಳ ತಂಗಿಯ ಮಕ್ಕಳಾಗಿದ್ದರು. ಬಸುರಿಯಾಗಿದ್ದ ಅನನ್ಯ, ಹೆರಿಗೆಗೆಂದು ತವರು ಮನೆಗೆ ಹೋಗಿದ್ದಳು. ಅದೇ ಸಮಯದಲ್ಲಿ ಅನನ್ಯಳ ತಂಗಿ ಕೂಡ ಹೆರಿಗೆಗೆಂದು ತವರಿಗೆ ಬಂದಿದ್ದಳು. ಒಂದು ದಿನ ಹಿಂದೆ, ಅನನ್ಯಳ ತಂಗಿಗೆ ಹೆರಿಗೆ  ಆಗಿ ಎರಡು ಮುದ್ದಾದ ಅವಳಿ ಜವಳಿ ಮಕ್ಕಳಿಗೆ ತಾಯಿಯಾಗಿದ್ದಳು.  ಆ ದಿನ, ಅನನ್ಯಳ ತಂಗಿ ಮತ್ತು ಭಾವ ಆಸ್ಪತ್ರೆಯಿಂದ ಮನೆಗೆ ಹೋಗಬೇಕಾದರೆ ದೊಡ್ಡದಾದ ರಸ್ತೆ ಅಪಘಾತದಲ್ಲಿ ಮೃತರಾದರು. ಅನನ್ಯ ಅಪಘಾತದ ವಿಷಯ ತಿಳಿದು ದುಃಖದಲ್ಲಿ, ಅವಳಿಗೆ ಹೆರಿಗೆ ನೋವು ಬಂತು. ಬೇಗವಾದ ಕಾರಣ, ಅವಳ ಮಗು ಹುಟ್ಟಿದಾಗಲೇ ಸತ್ತು ಹೋಗಿತ್ತು. ತನ್ನ ತಂಗಿ ಮಕ್ಕಳು ಅನಾಥರಾಗಬಾರದೆಂದು, ಅನನ್ಯಳೇ ಆ ಮಕ್ಕಳನ್ನು ತನ್ನ ಮಕ್ಕಳೆಂದು ಭಾವಿಸಿದಳು. ಮಕ್ಕಳ ಮನಸ್ಸಿಗೆ ನೋವಾಗಬಾರದೆಂದು ಅನನ್ಯ ಸತ್ಯವನ್ನು ಮಕ್ಕಳಿಗೆ ತಿಳಿಸಿರಲಿಲ್ಲ. ಹಾಗೆ ತಮ್ಮ ಸ್ವಂತ ಮಗುವಿಗಾಗಿ ಪ್ರಯತ್ನಿಸಲಿಲ್ಲ.  ಹನ್ನೆರಡು ವರ್ಷಗಳಿಂದ ಅವಳು ಆ ಮಕ್ಕಳನ್ನೇ ತನ್ನ ಸ್ವಂತ ಮಕ್ಕಳಂತೆ ಬೆಳೆಸಿದ್ದಳು. ಅಮಿತ್ ಗಾಗಿ ಮಾತ್ರವಲ್ಲ...ಆ ಮಕ್ಕಳಿಗಾಗಿಯೂ ಅವಳು ತನ್ನ ಜೀವನವನ್ನು ಅರ್ಪಿಸಿದ್ದಳು.

ಆ ರಾತ್ರಿ ಅಮಿತ್ ತನ್ನ ಕೋಣೆಯಲ್ಲಿ ಒಬ್ಬನೇ ಕುಳಿತಿದ್ದ. ಅನನ್ಯ ಬರೆದ ಪತ್ರವನ್ನು ಎದೆಯ ಮೇಲೆ ಇಟ್ಟುಕೊಂಡೇ ಕಿಟಕಿಯಾಚೆ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಿದ್ದ. ಅಮೂಲ್ಯ ಮತ್ತು ಅಮರ್ಥ್ಯ ಪಕ್ಕದ ಕೋಣೆಯಲ್ಲಿ ಮಲಗಿದ್ದರು. ಅವರನ್ನು ನೋಡುತ್ತಿದ್ದಂತೆ ಅವನಿಗೆ ಅನನ್ಯ ನೆನಪಾಗುತ್ತಿದ್ದಳು. ತನ್ನ ಗರ್ಭದಲ್ಲಿ ಹುಟ್ಟದ ಮಕ್ಕಳನ್ನೂ ಸಹ ತನ್ನ ಹೃದಯದಲ್ಲಿ ಹೊತ್ತು ಬೆಳೆಸಿದ ತಾಯಿ...ತನ್ನ ಮರಣದ ನಂತರವೂ ಗಂಡನ ಏಕಾಂತದ ಬಗ್ಗೆ ಯೋಚಿಸಿದ ಹೆಂಡತಿ...ತನ್ನ ದುಃಖವನ್ನು ಮರೆತು ಎಲ್ಲರ ಬದುಕನ್ನು ಬೆಳಗಿಸಿದ ಹೆಣ್ಣು... "ಅನನ್ಯಾ... ನೀನು ನನಗೆ ಸಿಕ್ಕ ಹೆಂಡತಿ ಅಲ್ಲ... ದೇವರು ಕೊಟ್ಟ ಆಶೀರ್ವಾದ..." ಎಂದು ಅಮಿತ್ ಕಣ್ಣೀರಿಟ್ಟ.

ಅಷ್ಟರಲ್ಲಿ ಮೇಜಿನ ಮೇಲಿದ್ದ ಅನನ್ಯಳ ಫೋಟೋ ಪಕ್ಕದ ದೀಪದ ಜ್ಯೋತಿ ಗಾಳಿಯಿಲ್ಲದಿದ್ದರೂ ಮೆಲ್ಲನೆ ಅಲುಗಾಡಿತು. ಅಮಿತ್ ಎದ್ದು ಫೋಟೋ ಹತ್ತಿರ ಹೋದ. ಫೋಟೋದಲ್ಲಿದ್ದ ಅನನ್ಯ ಎಂದಿನಂತೆ ನಗುತ್ತಿದ್ದಳು. ಆ ನಗುವಿನಲ್ಲೇ ಅವನಿಗೆ ಒಂದು ಉತ್ತರ ಸಿಕ್ಕಿತು. "ಪ್ರೀತಿ ಎಂದರೆ ಜೊತೆಯಲ್ಲಿ ಬದುಕುವುದು ಮಾತ್ರವಲ್ಲ... ಯಾರಾದರೂ ಇಲ್ಲದ ನಂತರವೂ ಅವರ ಒಳ್ಳೆಯತನದ ನೆರಳಿನಲ್ಲಿ ಬದುಕುವುದು."

ಅವನು ನಿಧಾನವಾಗಿ ಎದ್ದು ಮಕ್ಕಳ ಕೋಣೆಗೆ ಹೋದ. ಮಲಗಿದ್ದ ಅಮೂಲ್ಯ ಮತ್ತು ಅಮರ್ಥ್ಯರನ್ನು ತಬ್ಬಿಕೊಂಡ.  "ನಿಮ್ಮ ಅಮ್ಮ ಹೋಗಿಲ್ಲ ಮಕ್ಕಳೇ.. ಅವಳು ನಿಮ್ಮ ನಗುವಿನಲ್ಲಿ ಇದ್ದಾಳೆ...ನಿಮ್ಮ ಕನಸುಗಳಲ್ಲಿ ಇದ್ದಾಳೆ... ನಿಮ್ಮ ಒಳ್ಳೆಯತನದಲ್ಲಿ ಇದ್ದಾಳೆ...ನಿಮ್ಮ ಪ್ರತಿಯೊಂದು ಉಸಿರಿನಲ್ಲೂ ಇದ್ದಾಳೆ...". ಅವನ ಕಣ್ಣೀರಿನ ಹನಿ ಮಕ್ಕಳ ಹಣೆಯ ಮೇಲೆ ಬಿತ್ತು. 

ಹೊರಗೆ ಮಳೆ ನಿಂತಿತ್ತು. ಮೋಡಗಳ ಹಿಂದೆ ಅಡಗಿದ್ದ ಚಂದ್ರ ನಿಧಾನವಾಗಿ ಹೊರಬಂದ.ಅನನ್ಯ ಹೋಗಿರಲಿಲ್ಲ...ಅವಳು ಹೆಂಡತಿಯಾಗಿ ಬಂದಿದ್ದಳು...ತಾಯಿಯಾಗಿ ಉಳಿದಿದ್ದಳು...ಪ್ರೀತಿಯಾಗಿ ಶಾಶ್ವತವಾಗಿದ್ದಳು...

ಅಮಿತ್ ಕಣ್ಣು ಮುಚ್ಚಿ ನಿಧಾನವಾಗಿ ನುಡಿದ: "ಅನನ್ಯಾ...ನಿನ್ನ ಜೀವನ ಕೇವಲ ಹನ್ನೆರಡು ವರ್ಷಗಳ ದಾಂಪತ್ಯವಲ್ಲ...ಒಂದು ಜೀವಮಾನಕ್ಕೆ ಸಾಕಾಗುವಷ್ಟು ಪ್ರೀತಿಯ ಪಾಠ..."

ಆ ಕ್ಷಣ ಗಾಳಿಯಲ್ಲಿ ಮಲ್ಲಿಗೆಯ ಸುವಾಸನೆ ಹರಡಿತು. ಅದು ಬಹುಶಃ ಅನನ್ಯಳ ಕೊನೆಯ ಸ್ಪರ್ಶವಾಗಿರಬಹುದು...ಯಾಕೆಂದರೆ ಕೆಲವು ಪ್ರೇಮಗಳು ಕೈ ಹಿಡಿದು ನಡೆಯುವುದಕ್ಕಾಗಿ ಹುಟ್ಟುವುದಿಲ್ಲ...ಒಬ್ಬರ ಬದುಕನ್ನು ಬೆಳಗಿಸಿ, ಅವರ ಆತ್ಮದೊಳಗೆ ಶಾಶ್ವತವಾಗಿ ನೆಲೆಸುವುದಕ್ಕಾಗಿ ಹುಟ್ಟುತ್ತವೆ.

ಪ್ರೀತಿಗೆ ಅಂತ್ಯವಿಲ್ಲ. ದೇಹಗಳು ದೂರವಾಗಬಹುದು...ಸಮಯ ಕಳೆಯಬಹುದು...ಜನ್ಮಗಳು ಬದಲಾಗಬಹುದು...ಆದರೆ ನಿಜವಾದ ಪ್ರೀತಿ —ಒಮ್ಮೆ ಹೃದಯದಲ್ಲಿ ನೆಲೆಸಿದರೆ, ಅದು ನೆನಪಾಗಿ ಅಲ್ಲ...ಉಸಿರಾಗಿ ಬದುಕುತ್ತದೆ.

❤️

✍🏻 Deepalaxmi Bhat
Mangaluru  

ಶನಿವಾರ, ಮೇ 16, 2026

ಅಪೂರ್ವ ಪ್ರೇಮ - ಜನ್ಮಾಂತರದ ಪ್ರೀತಿ

✍🏻ದೀಪಲಕ್ಷ್ಮಿ ಭಟ್, ಮಂಗಳೂರು  

ಅಂದು ಜಡ ಹಿಡಿಸುವಂತೆ ಬೀಳುತ್ತಿದ್ದ ಮಳೆ. ಮಳೆ ಹನಿಗಳು ಕಿಟಕಿಯ ಗಾಜಿನ ಮೇಲೆ ಮುತ್ತಿನ ಹಾರ ಪೋಣಿಸಿದಂತೆ ಒಂದೊಂದಾಗಿ ಜಾರುತ್ತಿದ್ದವು. ಆ ಹೊತ್ತಿಗೆ, ಮೋಡ ಕವಿದ ಆ ಆಕಾಶವೇ ಯಾರೋ ಒಬ್ಬರ ಮನಸ್ಸಿನಲ್ಲಿದ್ದ ನೋವನ್ನು ಹೊತ್ತು ಅಳುತ್ತಿರುವಂತೆ ಕಾಣುತ್ತಿತ್ತು… ಆ ದಿನ, ಆದಿತ್ಯ ತನ್ನ ಮಗಳಾದ ಆರಾಧ್ಯಾಳ ಕೂದಲನ್ನು ಸವರಿಸುತ್ತಾ ಕಿಟಕಿಯ ಬಳಿ ನಿಂತಿದ್ದ. ಆರಾಧ್ಯಾಳ ಕಣ್ಣುಗಳಲ್ಲಿ ತನ್ನ ಹೆಂಡತಿ ಅಪೂರ್ವಳ ನಗು ಅವನಿಗೆ ಕಾಣಿಸುತ್ತಿತ್ತು…ಆ ನಗುವೇ ಅವನ ಹೃದಯವನ್ನು ಪ್ರತಿದಿನ ಚೂರು ಚೂರು ಮಾಡುತ್ತಿತ್ತು…

ಅಪೂರ್ವಳ ಮರಣದ ನಂತರ ಆ ಮನೆ, ಆದಿತ್ಯನ ಮನ ಎಲ್ಲವೂ ಬದಲಾಗಿತ್ತು. ಹಿಂದೆ ಒಮ್ಮೆ ನಗುವಿನಿಂದ ತುಂಬಿದ್ದ ಮನೆ, ಈಗ ಮೌನದ ದೇಗುಲದಂತಾಗಿತ್ತು. ಆದಿತ್ಯನ ಅಮ್ಮ ಅನುರಾಧ ದೇವರ ಕೋಣೆಯಲ್ಲಿ ಗಂಟೆಗಳ ಕಾಲ ದೀಪ ಹಚ್ಚಿ ಕಣ್ಣೇರಿಡುತ್ತಾ ಕುಳಿತುಕೊಳ್ಳುತ್ತಿದ್ದಳು. ಆದಿತ್ಯನ ಅಪ್ಪ ಚಂದ್ರಮೋಹನ ಪುಸ್ತಕ ಹಿಡಿದುಕೊಂಡಿದ್ದರೂ, ಓದುತ್ತಿರಲಿಲ್ಲ…ಪ್ರತಿ ಪುಟದಲ್ಲೂ ಅವನಿಗೆ ಸೊಸೆಯ ಮುಖವೇ ಕಾಣಿಸುತ್ತಿತ್ತು. ಆದಿತ್ಯ ಮಾತ್ರ ಜೀವಂತ ಶವದಂತೆ ಬದುಕುತ್ತಿದ್ದ.

ಪ್ರತಿ ರಾತ್ರಿ, ಅಪೂರ್ವಳ ಫೋಟೋ ಎದುರು ಕುಳಿತು ಮಾತನಾಡುತ್ತಿದ್ದ…“ಅಪೂರ್ವ… ನೀನು ಹೀಗೆ ಹೋಗ್ಬಾರ್ದಿತ್ತು…ನಮ್ಮ ಆರಾಧ್ಯಾ ಇನ್ನೂ ನಿನ್ನ ಮಡಿಲಿನ ಆಸರೆ  ಹುಡುಕುತ್ತಾಳೆ…ನಾನು ಅವಳಿಗೆ ಅಪ್ಪ ಆಗಲೋ, ಅಮ್ಮ ಆಗಲೋ? ನನ್ನನ್ಯಾಕೆ ಹೀಗೆ ಒಬ್ಬಂಟಿಯಾಗಿ ಬಿಟ್ಟು ಹೋದೆ?”. ಅವನ ಮಾತುಗಳಿಗೆ ಉತ್ತರವಾಗಿ ಕಿಟಕಿಯ ಪರದೆ ಮಾತ್ರ ನಿಧಾನವಾಗಿ ಅಲುಗಾಡುತ್ತಿತ್ತು - ಬಹುಶಃ ಅಪೂರ್ವಳೇ ಅಲ್ಲಿ ನಿಂತು "ನಾನಿಲ್ಲೇ ಇದ್ದೇನೆ, ನಿನ್ನ ಸನಿಹ. ನಿನ್ನ ಆಸರೆಯಾಗಿ" ಎಂಬಂತೆ. 

 

*** 

ಆ ಅಪಘಾತದ ದಿನ ಇನ್ನೂ ಆದಿತ್ಯನ ಮನಸ್ಸಿನಲ್ಲಿ ಜೀವಂತವಾಗಿತ್ತು…ಅದು ಅವರ  ವಿವಾಹದ  ಎರಡನೇ ವರ್ಷ ವಾರ್ಷಿಕೋತ್ಸವದ ಪ್ರವಾಸ. ಮಂಜಿನಿಂದ ಆವರಿಸಿದ್ದ ಬೆಟ್ಟಗಳು…ಕೈ ಕೈ ಹಿಡಿದು ನಡೆದ ದಾರಿಗಳು…ಮಳೆಯ ಹನಿಗಳ ಮಧ್ಯೆ ಅಪೂರ್ವಳ ನಗು…ಆಗತಾನೆ ೬ ತಿಂಗಳು ಹಿಡಿದ ಮಗು ಆರಾಧ್ಯಳ ಜೊತೆಗಿನ ಮೊದಲ ಪ್ರವಾಸ. ಪ್ರವಾಸದ ಎಲ್ಲ ಖುಷಿಯ ಕ್ಷಣಗಳು ಕಳೆದು ಮನೆಗೆ ಹಿಂದಿರುಗುವ ಪ್ರಯಾಣ. “ಆದಿ… ಜೀವನ ಹೀಗೆನೇ ನಿಂತುಬಿಟ್ಟರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ?” ಎಂದು ಅವಳು ಕಾರಿನ ಕಿಟಕಿಯಿಂದ ಹೊರಗೆ ನೋಡುತ್ತಾ ಕೇಳಿದ್ದಳು. ಆ ಮಾತಿಗೆ ಆದಿತ್ಯ ನಗುತ್ತಾ—“ನಿನ್ನ ಜೊತೆ ಇದ್ದರೆ ಯಾವ ಜನ್ಮವೂ ಚಿಕ್ಕದಾಗಿಬಿಡುತ್ತೆ ಅಪೂರ್ವ…” ಎಂದಿದ್ದ.

ಆದರೆ ವಿಧಿ ಅವರ ಮಾತುಗಳನ್ನು ಕೇಳಿ ಕ್ರೂರವಾಗಿ ನಕ್ಕಿತೇನೋ…ಹಿಂತಿರುಗುವಾಗ ರಾತ್ರಿ ಕತ್ತಲೆ ಗಾಢವಾಗಿತ್ತು. ಮಳೆ ಹೆಚ್ಚಾಗಿತ್ತು. ರಸ್ತೆಯ ಮೇಲೆ ಮಂಜು ಇಳಿದಿತ್ತು. ಆರಾಧ್ಯಾ ಹಿಂದಿನ ಸೀಟಿನಲ್ಲಿ ಮಲಗಿದ್ದಳು. ಅಪೂರ್ವ ಆದಿತ್ಯನ ಭುಜದ ಮೇಲೆ ತಲೆ ಇಟ್ಟುಕೊಂಡಿದ್ದಳು. ಅಷ್ಟರಲ್ಲಿ…ಎದುರಿನಿಂದ ನಿಯಂತ್ರಣ ತಪ್ಪಿದ ಒಂದು ಲಾರಿ ಅವರ ಕಾರಿನ ಕಡೆ ಅಬ್ಬರಿಸಿ ಬಂದಿತು. “ಆದಿ…!” ಎಂದು ಅಪೂರ್ವ ಕಿರುಚಿದ ಧ್ವನಿ…ಅದರ ನಂತರ ಒಂದು ಭೀಕರ ಶಬ್ದ…ಕಾರು ಗಾಳಿಯಲ್ಲಿ ತಿರುಗಿದಂತೆ ಅನುಭವ…ಗಾಜಿನ ಚೂರುಗಳು…ರಕ್ತ…ಮಳೆಯ ನೀರಿನಲ್ಲಿ ಬೆರೆತ ಜೀವಗಳ ಹೋರಾಟ…

ಆದಿತ್ಯನಿಗೆ ಎಚ್ಚರವಾದಾಗ ಆಸ್ಪತ್ರೆಯ ಬಿಳಿ ಗೋಡೆಗಳು ಕಾಣಿಸಿದ್ದವು. ತಲೆಗೆ ಬ್ಯಾಂಡೇಜ್. ಕೈಗಳಿಗೆ ಗಾಯ. ಆದರೆ ಅವನ ಮೊದಲ ಪ್ರಶ್ನೆ ಒಂದೇ— “ಅಪೂರ್ವ…? ನನ್ನ ಹೆಂಡತಿ ಎಲ್ಲಿದ್ದಾಳೆ …?” ಡಾಕ್ಟರ್ ಮುಖ ತಗ್ಗಿಸಿದ್ದರು.“ ಅವರಿಗೆ ತುಂಬಾ ಗಂಭೀರ ಗಾಯಗಳಾಗಿವೆ…ಕೋಮಾ ಪರಿಸ್ಥಿತಿಯಲ್ಲಿದ್ದಾರೆ. ಅಪಘಾತ ನಡೆದು ಮೂರು ದಿನಗಳೇ ಆಗಿವೆ. ನೀವು ಈಗ ತಾನೇ ಚೇತರಿಸಿಕೊಂಡಿದ್ದೀರಾ. ಸ್ವಲ್ಪ ರೆಸ್ಟ್  ಮಾಡಿ.” ಆದರೆ, ಡಾಕ್ಟರ್ ನ ಮಾತುಗಳು ಅವನಿಗೆ ಕೇಳಿಸಲೇ ಇಲ್ಲ. ಕೋಮಾ ಎಂಬ ಶಬ್ದ ಕೇಳುತ್ತಲೇ, ಆದಿತ್ಯ ಹಾಸಿಗೆಯಿಂದ ಎದ್ದು ಓಡಿದ್ದ. ಐಸಿಯುವಿನ ಗಾಜಿನ ಆಚೆ ಅಪೂರ್ವ ಮಲಗಿದ್ದಳು. ದೇಹದ ತುಂಬ ಯಂತ್ರಗಳು… ಉಸಿರಾಟಕ್ಕೆ ವೆಂಟಿಲೇಟರ್… ಮುಖದ ಮೇಲೆ ಗಾಯಗಳ ಗುರುತು… ಆ ದೃಶ್ಯ ನೋಡಿ ಆದಿತ್ಯ ಕುಸಿದುಬಿದ್ದ.

“ಇದು ನನ್ನ ಅಪೂರ್ವ ಅಲ್ಲ…ನನ್ನ ಜೊತೆ ನಗ್ತಿದ್ದ ಅಪೂರ್ವ ಹೀಗೆ ಮಲಗಿರೋಕೆ ಸಾಧ್ಯವಿಲ್ಲ…” ಎಂದು ಅತ್ತ. ಮಗು ಅಪೂರ್ವ ಮಾತ್ರ ವಿಚಿತ್ರವಾಗಿ ಪಾರಾಗಿದ್ದಳು. ಆ ದಿನದಿಂದ ಆದಿತ್ಯನ ಜೀವನವೇ ಆಸ್ಪತ್ರೆಯ ಗೋಡೆಗಳೊಳಗೆ ಸಿಕ್ಕಿಹಾಕಿಕೊಂಡಿತು. ಬೆಳಿಗ್ಗೆ ಎದ್ದು ಮೊದಲ ಕೆಲಸ — ಅಪೂರ್ವಳ ಕೈ ಹಿಡಿದು ಮಾತನಾಡುವುದು. “ಅಪೂರ್ವ… ನೋಡು ನಾನು ಬಂದಿದ್ದೀನಿ…ನೀನು ಕಣ್ಣು ತೆರೆಯಬೇಕು…ನಿನ್ನ ಆದಿ ಕರೀತಿದ್ದಾನೆ…” . ಆದರೆ ಅವಳು ಮಾತ್ರ ಮೌನ.

ಆದಿತ್ಯ ದೇಶದ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಕರೆದೊಯ್ದ. ಬೆಂಗಳೂರು… ಚೆನ್ನೈ… ಮುಂಬೈ…ವಿದೇಶದ ಚಿಕಿತ್ಸೆಯ ವಿಚಾರವನ್ನೂ ನೋಡಿದ. ತನ್ನ ಸಂಗ್ರಹಿಸಿದ ಹಣವನ್ನೆಲ್ಲ ಖರ್ಚು ಮಾಡಿದ. ಅನುರಾಧ ತನ್ನ ಆಭರಣಗಳನ್ನೇ ಮಾರಿದಳು. ಚಂದ್ರಮೋಹನ ನಿವೃತ್ತಿ ಹಣವನ್ನೂ ಬಳಸಿದರು. ಆದರೆ ಅಪೂರ್ವಳ ಕಣ್ಣು ಮಾತ್ರ ತೆರೆಯಲಿಲ್ಲ…

ಒಂದು ರಾತ್ರಿ ಆಸ್ಪತ್ರೆಯಲ್ಲಿ ಎಲ್ಲರೂ ಮಲಗಿದ್ದಾಗ, ಆದಿತ್ಯ ಅವಳ ಕೈ ಹಿಡಿದು ಅತ್ತಿದ್ದ. “ನೀನು ಹೀಗೆ ಮೌನದಲ್ಲಿರಬೇಡ ಅಪೂರ್ವ…ಒಮ್ಮೆ ನನಗೆ ಬೈದುಬಿಡು… ಒಮ್ಮೆ ನಗು… ಆದ್ರೆ ಹೀಗೆ ನನ್ನ ಒಂಟಿಯಾಗಿ ಬಿಡಬೇಡ …” ಅಷ್ಟರಲ್ಲಿ…ಅಪೂರ್ವಳ ಬೆರಳುಗಳು ನಿಧಾನವಾಗಿ ಕದಲಿದವು. ಆದಿತ್ಯನ ಮಾತುಗಳಿಗೆ ನಿಧಾನವಾಗಿ  ಸ್ಪಂದಿಸಲು ಪ್ರಯತ್ನಿಸಿದಂತೆ ಭಾಸವಾಯಿತು. ಆದಿತ್ಯನ ಕಣ್ಣುಗಳಲ್ಲಿ ಆಶೆಯದ  ಬೆಳಕು ಹೊಮ್ಮಿತು.“ಡಾಕ್ಟರ್! ಡಾಕ್ಟರ್!” ಎಂದು ಓಡಿದ್ದ. ಆದರೆ ಡಾಕ್ಟರ್ ಹೇಳಿದ್ದು— “ಇದು ಸಾಮಾನ್ಯವಾದ  ನರ ಪ್ರತಿಕ್ರಿಯೆ…” ಆ ಕ್ಷಣ ಆದಿತ್ಯನ ಆಶೆಯೇ ಚೂರುಚೂರಾಯಿತು.ಆ ವಿಧಿಗೆ ಅವರ ಮೇಲೆ ಏನು ದ್ವೇಷವೋ? ತಿಂಗಳುಗಳು ಕಳೆಯುತ್ತಾ ಹೋದವು. ಆರಾಧ್ಯಾ ದಿನವೂ ಆಸ್ಪತ್ರೆ ಬಂದು— “ಅಮ್ಮಾ… ಎದ್ದು ಬಾ…” ಎಂದು ಗಲ್ಲಕ್ಕೆ ಮುತ್ತಿಡುತ್ತಿದ್ದಳು.

ಒಂದು ದಿನ ಪುಟ್ಟ ಕೈಯಿಂದ ಅಪೂರ್ವಳ ಕೂದಲು ಸವರಿಸುತ್ತಾ— “ಅಮ್ಮಾ… ನಾನು ಒಳ್ಳೆ ಹುಡುಗಿಯಾಗ್ತೀನಿ… ನೀನು ಮನೆಗೆ ಬಾ…” ಎಂದಳು. ಆಗ ಅಲ್ಲಿದ್ದ ನರ್ಸ್‌ಗಳಿಗೂ ಕಣ್ಣೀರು ಬಂದಿತ್ತು.

ಕೊನೆಗೆ…ಒಂದು ಮಳೆಯ ರಾತ್ರಿ…ಆಸ್ಪತ್ರೆಯ ಮಾನಿಟರ್ ಶಬ್ದ ಏಕಾಏಕಿ ಬದಲಾಗಿತ್ತು.  ಡಾಕ್ಟರ್‌ಗಳು ಓಡಿದರು. ಆದಿತ್ಯ ಬೆಚ್ಚಿಬಿದ್ದು ಅವಳ ಕೈ ಹಿಡಿದ. “ಅಪೂರ್ವ! ಕಣ್ಣು ತೆರೆ… ನನ್ನ ನೋಡ್ಬಿಡು ಒಮ್ಮೆ…ನಾನು ಇಲ್ಲೇ ಇದ್ದೀನಿ…” ಆ ಕ್ಷಣ…ತುಂಬಾ ತಿಂಗಳುಗಳ ನಂತರ… ಅಪೂರ್ವಳ ಕಣ್ಣಂಚಿನಲ್ಲಿ ಒಂದು ಸಣ್ಣ ಕಣ್ಣೀರು ಜಾರಿತು. ಅವಳ ತುಟಿಗಳು ಅಲುಗಾಡಿದವು. “ಆ…ದಿ…” - ಅದೇ ಅವಳ ಕೊನೆಯ ಶಬ್ದ. ಮಾನಿಟರ್‌ನಲ್ಲಿ ನೇರ ರೇಖೆ ಮೂಡಿತು. ಆದಿತ್ಯನ ಪ್ರಪಂಚವೇ ಅಲ್ಲೇ ನಿಂತುಹೋಯಿತು… ಮಳೆ ಮಾತ್ರ ಆಸ್ಪತ್ರೆಯ ಕಿಟಕಿಯ ಮೇಲೆ ಇನ್ನೂ ಅಳುತ್ತಲೇ ಇತ್ತು… 

*** 

ಒಂದು ದಿನ, ಅನುರಾಧ ಮನೆ ಸ್ವಚ್ಛಗೊಳಿಸುತ್ತಿದ್ದಾಗ, ಹಳೆಯ ಮರದ ಪೆಟ್ಟಿಗೆಯೊಂದು ಸಿಕ್ಕಿತು. ಅದು ಚಂದ್ರಮೋಹನನ ತಾತನ ಕಾಲದ ಪೆಟ್ಟಿಗೆ. ಅದರೊಳಗೆ ಹಳೆಯ ಜಾತಕಗಳು, ಕೆಲವು ಮಂತ್ರಪತ್ರಗಳು, ಮತ್ತು ಒಂದು ವಿಚಿತ್ರ ದಿನಚರಿ ಇತ್ತು. ಆ ದಿನಚರಿಯಲ್ಲಿ ಒಂದು ಸಾಲು ಕೆಂಪು ಮಸಿಯಲ್ಲಿ ಬರೆಯಲಾಗಿತ್ತು— “ಈ ವಂಶದಲ್ಲಿ ಜನಿಸುವ ಒಬ್ಬ ದಂಪತಿಗಳು, ಹಿಂದಿನ ಜನ್ಮದ ಅಪೂರ್ಣ ಪ್ರೇಮದ ಶಾಪವನ್ನು ಅನುಭವಿಸುವರು…” ಆ ಮಾತು ಓದಿದ ಕ್ಷಣ ಅನುರಾಧಳ ಕೈ ನಡುಗಿತು. ಕೂಡಲೇ, ಚಂದ್ರಮೋಹನನನ್ನು ಕರೆದು, "ರೀ, ನಮ್ಮಮಗನ ಸಂಸಾರ ಹೀಗೆ ಆಗಲು, ಇದೇ  ಕಾರಣ ಇರಬಹುದೇ?" ಎಂದು ದುಃಖದಿಂದ ಪ್ರಶ್ನಿಸಿದಳು. ಚಂದ್ರಮೋಹನ ಅದನ್ನು ಓದಿದವನೇ, ಕ್ಷಣಕಾಲ ಭೀತನಾದನು. ಅವನಿಗೆ ಇದರ ವಿಚಾರವಾಗಿ ಎಳ್ಳಷ್ಟೂ ಗೊತ್ತಿರಲಿಲ್ಲ. ಅವನ ಪೂರ್ವಜರು ಇದರ ಬಗ್ಗೆ ಏನೂ ಹೇಳಿರಲಿಲ್ಲ. ಆ ಕೂಡಲೇ, ಅವರು ಆದಿತ್ಯನನ್ನೂ ಕರೆದುಕೊಂಡು ಊರಿನ ಹೊರಗಿದ್ದ ವಯಸ್ಸಾದ ಜ್ಯೋತಿಷಿ “ವೇದಬ್ರಹ್ಮ ಶಿವಾನಂದ ಶಾಸ್ತ್ರಿ” ಅವರನ್ನು ಭೇಟಿ ಮಾಡಿದರು.

ಶಾಸ್ತ್ರಿಗಳು ತುಂಬಾ ಹಿರಿಯರು ಹಾಗೂ ಜ್ಯೋತಿಷ್ಯದಲ್ಲಿ ತುಂಬಾ ಪರಿಣಿತರು. ಊರಿಗೆ ಊರೇ ಅವರನ್ನು ಗೌರವಿಸುತ್ತಿತ್ತು. ಅನುರಾಧ ನೀಡಿದ ಆದಿತ್ಯ ಹಾಗೂ ಅಪೂರ್ವಳ ಜಾತಕಗಳನ್ನು ನೋಡಿ ಶಾಸ್ತ್ರಿಗಳು ಕ್ಷಣಕಾಲ ಕಣ್ಣು ಮುಚ್ಚಿದರು… “ಅಪೂರ್ವ ಮತ್ತು ಆದಿತ್ಯ… ಸಾಮಾನ್ಯ ದಂಪತಿಗಳಲ್ಲ…“ಹಿಂದಿನ ಜನ್ಮದಲ್ಲಿ ಅವರು ಪ್ರೇಮಿಗಳು…
ಆದರೆ ಅವರ ಪ್ರೇಮದ ಕಾರಣದಿಂದ ಅನೇಕ ಜೀವಗಳು ನಾಶವಾದವು…ಒಬ್ಬ ತಾಯಿಯ ಶಾಪ ಅವರಿಗೆ ಬಿದ್ದಿತ್ತು…”

ಆದಿತ್ಯ ಬೆಚ್ಚಿಬಿದ್ದ. “ಯಾವ ಶಾಪ…?”

ಶಾಸ್ತ್ರಿಗಳು ನಿಧಾನವಾಗಿ ಹೇಳಿದರು —  “ನೀವು ಹಿಂದಿನ ಜನ್ಮದಲ್ಲಿ ಒಬ್ಬ ರಾಜಕುಮಾರ…ಅಪೂರ್ವ ಒಬ್ಬ ನೃತ್ಯಾಂಗಿ…ನಿಮ್ಮಿಬ್ಬರ ಪ್ರೇಮಕ್ಕಾಗಿ ನಡೆದ ಯುದ್ಧದಲ್ಲಿ ನೂರಾರು ಜನ ಸತ್ತರು…ಒಬ್ಬ ತಾಯಿ ತನ್ನ ಮಗನ ಶವ ಹಿಡಿದು ಶಪಿಸಿದ್ದಳು — ‘ನಿಮ್ಮ ಪ್ರೇಮ ಯಾವ ಜನ್ಮದಲ್ಲೂ ಪೂರ್ಣವಾಗಬಾರದು'…”

ಈ ವಿಚಾರ ಕೇಳಿದಂತೆ, ಆದಿತ್ಯನ ಮನ ನೊಂದಿತು. ಮನೆ ತುಂಬ ಮೌನ ಆವರಿಸಿತು…ಆ ದಿನದಿಂದ ವಿಚಿತ್ರ ಘಟನೆಗಳು ಆರಂಭವಾದವು. ಆರಾಧ್ಯಾ ಕೆಲವೊಮ್ಮೆ ಖಾಲಿ ಕೋಣೆಯ ಕಡೆ ನೋಡಿ ನಗುತ್ತಿದ್ದಳು… “ಅಮ್ಮ ಬಂದಿದ್ದಾರೆ…” ಎಂದು ಹೇಳುತ್ತಿದ್ದಳು.

ಒಂದು ರಾತ್ರಿ, ಆದಿತ್ಯಗೆ ಕನಸು ಬಂತು: ಬಿಳಿ ವಸ್ತ್ರದಲ್ಲಿ ಅಪೂರ್ವ ನಿಂತಿದ್ದಳು…ಅವಳ ಕಣ್ಣುಗಳಲ್ಲಿ ನೋವಿತ್ತು… ಆದರೆ ಮುಖದಲ್ಲಿ ದಿವ್ಯ ಶಾಂತಿ. “ಆದಿ… ನಾನು ಹೋಗಿಲ್ಲ…ನಿನ್ನ ಪ್ರೀತಿಯೊಳಗೆ ನಾನು ಇನ್ನೂ ಜೀವಂತ…ಆದರೆ ನಮ್ಮ ಶಾಪ ಈ ಜನ್ಮಕ್ಕೆ ಕೊನೆಯಾಗಬೇಕು…”

“ಹೇಗೆ…?” ಎಂದು ಅತ್ತ ಆದಿತ್ಯ. ಉತ್ತರವಾಗಿ ಅಪೂರ್ವ - “ಒಬ್ಬರನ್ನೊಬ್ಬರು ಹಿಡಿದುಕೊಳ್ಳುವ ಪ್ರೇಮಕ್ಕಿಂತ, ಬಿಡುವ ಪ್ರೇಮ ದೊಡ್ಡದು…” ಎಂದು ನಿಧಾನವಾಗಿ ಗಾಳಿಯಲ್ಲಿ ಸೇರಿಕೊಂಡಳು. ಆ ಕೂಡಲೇ ಎಚ್ಚರವಾದ ಆದಿತ್ಯ, ಬೆವತು ಹೋಗಿದ್ದ. ಅಪೂರ್ವ ಹೇಳಿದ ಮಾತನ್ನು ನೆನೆದು ಕಣ್ಣೀರಿಟ್ಟ. ಅಲ್ಲೇ ಶಾಂತವಾಗಿ ಮಲಗಿದ್ದ ಮಗಳು ಆರಾಧ್ಯಳನ್ನು ಗಟ್ಟಿಯಾಗಿ ತಬ್ಬಿಕೊಂಡು ಮನಸೋ ಇಚ್ಛೆ ಅತ್ತು ತನ್ನ ದುಃಖವನ್ನು ಇಳಿಸಿದ. 

*** 

 

ಮರುದಿನ ಮತ್ತೆ ಶಾಸ್ತ್ರಿಗಳತ್ತ ಹೋಗಿ ಆದಿತ್ಯ ತನ್ನ ಕನಸಿನ ಬಗ್ಗೆ ಹೇಳಿಕೊಂಡ. ಶಾಸ್ತ್ರಿಗಳು ಒಂದು ದೇವಾಲಯದ ಬಗ್ಗೆ ಹೇಳಿದರು. ಅದು ಕಾಡಿನ ಮಧ್ಯೆ ಇದ್ದ ಪುರಾತನ ದೇವಿಯ ದೇವಸ್ಥಾನ. ಅಲ್ಲಿ ಅಪಮೃತ್ಯು ಪಡೆದ ಆತ್ಮಗಳಿಗೆ, ಅವರು ಸತ್ತ ತಿಥಿಯ ತಿಂಗಳಿನ ಪಿತೃ ಪಕ್ಷದ ಅಮಾವಾಸ್ಯೆ ದಿನ “ಅಪೂರ್ಣ ಆತ್ಮಗಳ ದೀಪ” ಹಚ್ಚಿದರೆ ಮಾತ್ರ ಶಾಪ ಮುಕ್ತವಾಗುತ್ತದೆ ಎಂದು ನಂಬಿಕೆ. ಹಲವಾರು ವಿಷಯಗಳನ್ನು ಕೇಳಿ ತಿಳಿದುಕೊಂಡ ಆದಿತ್ಯ ಮನೆಗೆ ಬಂದು ಶಾಸ್ತ್ರಿಗಳು ಹೇಳಿದಂತ ಎಲ್ಲ ವಿಚಾರಗಳನ್ನೂ ಹೇಳಿದ. 

ಅದೇ ತಿಂಗಳು ಅಪೂರ್ವ ಸತ್ತು ಒಂದು ವರ್ಷ ಪೂರ್ಣವಾಗುತ್ತಿತ್ತು. ಅಂದು ಪಿತೃ ಪಕ್ಷದ ಅಮಾವಾಸ್ಯೆ ದಿನ. ಆದಿತ್ಯ, ಅನುರಾಧ, ಚಂದ್ರಮೋಹನ ಮತ್ತು ಪುಟ್ಟ ಆರಾಧ್ಯಾ ಎಲ್ಲರೂ ಅಲ್ಲಿ ಹೋದರು. 

ಆ ದೇವಾಲಯವೇ ಒಂದು ಥರಾ ವಿಚಿತ್ರವಾಗಿತ್ತು… ಗಂಟೆ ಶಬ್ದಗಳೇ ಗಾಳಿಯಲ್ಲಿ ತೇಲುತ್ತಿದ್ದಂತ ಭಾಸವಾಗುತ್ತಿತ್ತು. 

ಆ ದೇವಸ್ಥಾನದ ಒಳಗೆ ಕಾಲಿಡುತ್ತಿದ್ದಂತೆ, ಏನೋ ಒಂದು ವಿಚಿತ್ರವಾದ ಅನುಭವ. ಶಾಸ್ತ್ರಿಗಳು ತಿಳಿಸಿದಂತೆ, "ಅಪೂರ್ಣ ಆತ್ಮಗಳ ದೀಪ" ಹಚ್ಚುವಾಗ, ಆರಾಧ್ಯಾ ಏಕಾಏಕಿ ಹೇಳಿದಳು— “ಅಪ್ಪಾ, ಅಲ್ಲಿ ನೋಡು... ಅಮ್ಮ ಈಗ ನನ್ನ ಕಡೆ ನೋಡುತ್ತಾ ಖುಷಿಯಿಂದ ನಗ್ತಿದ್ದಾರೆ…”

ಆ ಕ್ಷಣ, ದೇವಾಲಯದೊಳಗಿನ ದೀಪಗಳು ಗಾಳಿಯಿಲ್ಲದೇ ತೇಲಿದಂತೆ ಕಂಪಿಸಿದವು…ಆದಿತ್ಯ ಕಣ್ಣುಮುಚ್ಚಿ ಅತ್ತ…“ಅಪೂರ್ವ… ನಿನ್ನನ್ನು ಬಂಧಿಸಿಕೊಳ್ಳಲು ನಾನು ಇನ್ನು ಬಯಸಲ್ಲ… ನೀನು ಶಾಂತಿಯಿಂದ ಹೋಗು…” ಆ ಮಾತಿನ ನಂತರ, ಅವನ ಹೃದಯದೊಳಗಿನ ಭಾರ ಏಕಾಏಕಿ ಕಡಿಮೆಯಾಯಿತು. ಅವನ ಕಣ್ಣಿಂದ ಕಣ್ಣೀರು ಜಲಪಾತದಂತೆ ಹರಿಯುತ್ತಿತ್ತು. ಅವನು ಅಳುವುದನ್ನು ನೋಡಿ ಆರಾಧ್ಯ ಗಲಿಬಿಲಿಯಾದರೂ ಅವನನ್ನು ಗಟ್ಟಿಯಾಗಿ ಅಪ್ಪಿಕೊಂಡಳು. ಮಗಳ ಅಪ್ಪುಗೆಯಲ್ಲಿ ತನ್ನ ನೋವನ್ನು ಮರೆತು ಆದಿತ್ಯ ಚೇತರಿಸಿಕೊಂಡ. ಅದಾದಮೇಲೆ, ಎಲ್ಲರೂ ಮನೆಗೆ ಹಿಂದಿರುಗಿದರು. 

ಅದರ ನಂತರ ಅವರ ಜೀವನ ನಿಧಾನವಾಗಿ ಬದಲಾಗತೊಡಗಿತು. ಆರಾಧ್ಯಾ ದೊಡ್ಡವಳಾಗುತ್ತಾ ಅಪೂರ್ವಳಂತೆಯೇ ಸಂಗೀತ ಮತ್ತು ಚಿತ್ರಕಲೆಯಲ್ಲಿ ಅದ್ಭುತ ಪ್ರತಿಭೆ ತೋರಿಸಿದಳು. ಆದಿತ್ಯ ತನ್ನ ಹೆಂಡತಿಯ ನೆನಪಿಗಾಗಿ ಒಂದು ಟ್ರಸ್ಟ್ ಆರಂಭಿಸಿದ— “ಅಪೂರ್ವ ಫೌಂಡೇಶನ್”

ಅದು ಅಪಘಾತದಲ್ಲಿ ಕುಟುಂಬವನ್ನು  ಕಳೆದುಕೊಂಡ ಮಕ್ಕಳಿಗೆ ಸಹಾಯ ಮಾಡುವ ಸಂಸ್ಥೆಯಾಯಿತು. ಅನುರಾಧ ಮತ್ತೆ ತನ್ನ ಉದ್ಯಮ ಆರಂಭಿಸಿದಳು. ಚಂದ್ರಮೋಹನ ಜೀವನದ ಕುರಿತು ಪುಸ್ತಕ ಬರೆಯಲು ಶುರುಮಾಡಿದರು.

***

ವರ್ಷಗಳ ನಂತರ…ಒಂದು ಸಂಜೆ, ಜಡಿಯಾಗಿ ಮಳೆ ಬೀಳುತ್ತಿತ್ತು…ಆರಾಧ್ಯಾ ವೀಣೆ ನುಡಿಸುತ್ತಿದ್ದಳು… ಆದಿತ್ಯನಿಗೆ ಆ ವೀಣೆಯ ನಾದ, ಸ್ವರದಲ್ಲಿ ಅಪೂರ್ವಳ ಆತ್ಮವೇ ಹರಿಯುತ್ತಿದ್ದಂತೆ ಅನಿಸಿತು… ಅಪೂರ್ವಳನ್ನು ನೆನೆಯುತ್ತಾ ಆದಿತ್ಯ ಕಣ್ಣು ಮುಚ್ಚಿ ಮಂದಹಾಸ ಬೀರಿದ.

ಅವನಿಗೆ ಗಾಳಿಯೊಳಗೆ ಒಂದು ಧ್ವನಿ ಕೇಳಿಸಿತು— “ಆದಿ…ಈ ಜನ್ಮದಲ್ಲಿ ಅಲ್ಲದಿದ್ದರೂ…ಪ್ರತಿ ಜನ್ಮದಲ್ಲೂ ನಾನು ನಿನ್ನನ್ನು ಹುಡುಕುತ್ತೇನೆ…”

ಕಿಟಕಿಯ ಬಳಿಯ ದೀಪ ನಿಧಾನವಾಗಿ ತೇಲಿತು…ಆಕಾಶದಲ್ಲಿ ಮಿಂಚು ಹೊಳೆಯಿತು…

ಆದರೆ ಆ ಮನೆಯಲ್ಲಿ ಮೊದಲ ಬಾರಿಗೆ, ನೋವಿನ ಮಧ್ಯೆ ಶಾಂತಿ ಹುಟ್ಟಿತ್ತು…

ಯಾಕೆಂದರೆ ಕೆಲವು ಪ್ರೇಮಗಳು…ಒಟ್ಟಿಗೆ ಬದುಕುವುದಕ್ಕಲ್ಲ…ಆತ್ಮವಾಗಿ ಶಾಶ್ವತವಾಗುವುದಕ್ಕೇ ಹುಟ್ಟುತ್ತವೆ… 

❤️ 

 ✍🏻 Deepalaxmi Bhat
Mangaluru 

ಶುಕ್ರವಾರ, ಮೇ 1, 2026

ನಾಗಶಾಪದ ಮುಕ್ತಿ

✍🏻ದೀಪಲಕ್ಷ್ಮಿ ಭಟ್, ಮಂಗಳೂರು 

ಬೇಸಿಗೆಯ ಬಿಸಿಲು ತೀವ್ರವಾಗಿದ್ದರೂ, ಹಳ್ಳಿಯ ಸೊಗಸು ಎಂದಿಗೂ ಕಡಿಮೆಯಾಗುವುದಿಲ್ಲ. ಹಸಿರು ಹೊಲಗಳು, ಮಳೆಯ ವಾಸನೆ ಉಳಿಸಿಕೊಂಡ ಮಣ್ಣು,  ಮಂಗಳವಾದ ಮುಸ್ಸಂಜೆಯ ಗಾಳಿ—ಇವುಗಳ ನಡುವೆ ತನ್ನ ರಜೆಯನ್ನು ಕಳೆಯಲು ವಿಕ್ರಮ ತನ್ನ ಅತ್ತೆ ವಿಮಲಾಳ ಮನೆಗೆ ಬಂದಿದ್ದ. 

ವಿಕ್ರಮ ಇಂಜಿನಿಯರಿಂಗ್ ಮೂರನೇ ವರ್ಷದ ವಿದ್ಯಾರ್ಥಿ. ಚತುರ, ಧೈರ್ಯಶಾಲಿ ಮತ್ತು ಮನಸಾರೆ ಪ್ರೀತಿಸುವ ಸ್ವಭಾವದವನು. ಅವನಿಗೆ ತನ್ನ ಅತ್ತೆ ಮಗಳು ವಿನುತಾಳ ಮೇಲೆ ವಿಶೇಷವಾದ ಮಮತೆ. ಆ ಮಮತೆ, ಪ್ರೀತಿಯಾಗಿ ಅರಳಿತ್ತು. ವಿನುತಾಳಿಗೂ ಅವನೆಂದರೆ ಪ್ರಾಣವೇ.

ವಿನುತಾ, ಹತ್ತನೇ ತರಗತಿಯ ಪರೀಕ್ಷೆ ಮುಗಿಸಿ, ರಜೆಯಲ್ಲಿದ್ದಳು. ಅವಳ ಸುಂದರವಾದ ಮಂದಹಾಸ, ಅವಳ ಕಣ್ಣುಗಳಲ್ಲಿನ ಹೊಳಪು — ಎಲ್ಲವೂ ವಿಕ್ರಮನ ಮನಸ್ಸನ್ನು ಸೆಳೆದಿದ್ದವು.

ವಿಮಲಾ, ವಿನೋದ ದಂಪತಿಗಳಿಗೂ, ವಿಕ್ರಮನೆಂದರೆ ತುಂಬಾ ಪ್ರೀತಿ. ವಿಕ್ರಮನ ಹೆತ್ತವರಾದ ವಿಜಯ ಹಾಗೂ ಅನುರಾಧ ಕೂಡ ಈ ಸಂಬಂಧಕ್ಕೆ ಮೊದಲೇ ಸೈ ಅಂದಿದ್ದರು. ಇವರಿಬ್ಬರ ಸಂಬಂಧವನ್ನು ಎರಡೂ ಕುಟುಂಬದವರು ಕೂಡ ಮನಸಾರೆ ಒಪ್ಪಿಕೊಂಡಿದ್ದರು. ಹೀಗಾಗಿ ಅವರು ಒಟ್ಟಿಗೆ ಹೊಲಗಳಲ್ಲಿ ತಿರುಗಾಡುವುದು, ಸಂಜೆಯ ಹೊತ್ತಿನಲ್ಲಿ ಮಾತುಕತೆ ನಡೆಸುವುದು ಎಲ್ಲವೂ ಸಾಮಾನ್ಯವಾಗಿತ್ತು.  "ವಿಕ್ಕಿ... ನನ್ ಜೊತೆ ಟ್ರೀ ಹೌಸ್ ಗೆ ಬಾ.." ಅಂತ ಹೇಳಿ, ವಿನುತಾ ವಿಕ್ರಮನ  ಜೊತೆ, ಚಿಕ್ಕಂದಿನಿಂದಲೂ, ಅವಳಿಗೆ ಆಟವಾಡಲೆಂದೇ ವಿನೋದ ಕೈಯಾರೆ ತಯಾರಿಸಿದ್ದ ಮರದ ಮೇಲಿನ ಟ್ರೀ ಹೌಸ್  ಒಳಗೆ ಕೂತು ಆಟ ಆಡುತ್ತಿದ್ದರು. ಹಾಗೆ, ಆಟವಾಡಿ ಸುಸ್ತಾದರೆ, ಅದರಲ್ಲೇ ಮಲಗುತ್ತಿದ್ದರು.  ದೊಡ್ಡವರಾದ ಮೇಲೂ ಈ ರೀತಿ ಟ್ರೀ ಹೌಸ್ ನಲ್ಲಿ ಕೂತು ಹರಟೆ ಹೊಡೆಯುತ್ತಾ ಕಾಲ ಕಳೆಯೋದು ಅವರಿಬ್ಬರಿಗೂ ಇಷ್ಟವಾದ ವಿಷಯವಾಗಿತ್ತು. 

*** 

 

ಅಂದು ಪಂಚಮಿಯ ದಿನ. ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮುಗಿಸಿದ ವಿನುತಾ, ಮನೆಯೆದುರು ರಂಗೋಲಿ ಬಿಡಿಸಿ, ದೇವರ ಪೂಜೆಗೆಂದು ಹೂ ಕೊಯ್ದು,  ಅಮ್ಮ ಮಾಡಿ ಕೊಟ್ಟ ಕಾಫಿ ಕುಡಿಯುತ್ತಿದ್ದಳು. ಆಗ ತಾನೇ ಎದ್ದ ವಿಕ್ರಮ, ವಿನುತಾಳನ್ನು ಎದ್ದ ಕೂಡಲೇ ನೋಡಿ ಮನದಲ್ಲೇ ಸಂತೋಷಗೊಂಡು, ತನ್ನ ಬೆಳಗಿನ ದಿನಚರಿ ಮುಗಿಸಿದ. ತಿಂಡಿ ತಿಂದಾದಮೇಲೆ. ವಿನುತಾ ವಿಕ್ರಮ್  ಇಬ್ಬರೂ ಟ್ರೀ ಹೌಸ್ ಕಡೆ ಹೋದರು. ಹೊಲದಲ್ಲೆಲ್ಲಾ ಸುತ್ತಾಡಿ, ತಮ್ಮ ಶಾಲೆ ಕಾಲೇಜಿನ ಕಥೆಗಳನ್ನು ಮಾತನಾಡುತ್ತಾ, ಸುಸ್ತಾದ ಹಾಗೆ ಟ್ರೀ ಹೌಸ್ ಒಳಗೆ ಹೋಗಿ ತಾವು ತಂದಿದ್ದ ಜ್ಯೂಸು ಕುಡಿದು ಹರಟೆಗೆ ಕೂತರು.  ವಿಕ್ರಮ ಕಾಲೇಜಿನಲ್ಲಿ ಪ್ರೀತಿಸುತ್ತಿದ್ದ ಒಂದೆರಡು ಜೋಡಿಗಳ ಕಥೆ ಹೇಳಿದರೆ, ವಿನುತಾ ಶಾಲೆಯಲ್ಲಿ ಪಾಠ ಕಲಿಸುತ್ತಿದ್ದ ಮೇಷ್ಟ್ರುಗಳ ಮೇಲೆ ಕೆಲವೊಂದು ಹುಡುಗಿಯರಿಗಿದ್ದ ಕ್ರಶ್ ಬಗ್ಗೆ ಹೇಳುತ್ತಿದ್ದಳು. ಮಾತು ಮಾತಿಗೂ ಅವಳ ನಗು ವಿಕ್ರಮನ ಮನಸ್ಸಿಗೆ ತಂಪೆರೆಯುತ್ತಿತ್ತು. ಹಾಗೆ ಅವಳನ್ನು ನೋಡಿ ಅವಳನ್ನು ಬರಸೆಳೆದು ಅವಳ ಹಣೆಗೆ ಹಾಗೂ ಕೆನ್ನೆಗೆ ಒಂದು ಸುಂದರವಾದ ಮುತ್ತಿಟ್ಟು ಮನೆಗೆ ಹೋಗುತ್ತೇನೆಂದು ಹೊರಟ. ಅಚಾನಕ್ಕಾಗಿ ಸಿಕ್ಕ ಮುತ್ತಿನಿಂದ ಪುಳಕಿತಳಾದ ವಿನುತಾ ಕೆನ್ನೆಯೆಲ್ಲ ನಾಚಿಕೆಯಿಂದ ಕೆಂಪಗಾಗಿತ್ತು.  ಆ ಮುತ್ತಿನ ಗುಂಗಿನಲ್ಲೇ ಕೆಲಕಾಲ ಮುಗುಳ್ನಗೆಯಲ್ಲಿ ಕಳೆದಳು. ಆಮೇಲೆ ನಿಧಾನಕ್ಕೆ ಟ್ರೀ ಹೌಸ್ ನಿಂದ ಕೆಳಗಿಳಿದು ಮನೆಗೆ ಹೋದಳು.

ಆ ರಾತ್ರಿ - ಪಂಚಮಿಯ ರಾತ್ರಿ. ವಿಚಿತ್ರವಾದ ನಿಶಬ್ದದಿಂದ ಕೂಡಿತ್ತು.  ಎಲ್ಲರೂ ರಾತ್ರಿ ಊಟ ಮುಗಿಸಿ ಮಲಗಲು ತಯಾರಾಗುತ್ತಿದ್ದರು. "ವಿಕ್ರಮ, ನಾಳೆ ಷಷ್ಠಿ ಆದ ಕಾರಣ, ನಮ್ಮೂರಿನ ದೇವಸ್ಥಾನಕ್ಕೆ ಹೋಗಿ ನಾಗನ ಕಲ್ಲಿಗೆ ಹಾಲೆರೆಯಲು ಹೋಗಲಿಕ್ಕಿದೆ. ಬೆಳಿಗ್ಗೆ ಬೇಗನೆ ತಯಾರಾಗು." ಅಂತ ವಿಮಲಾ ನೆನಪಿಸಿದಳು. "ಸರಿ ಅತ್ತೆ. ಬೆಳಿಗ್ಗೆ ಬೇಗನೆ ತಯಾರಾಗ್ತೇನೆ" ಅಂದು ವಿಕ್ರಮ ತನ್ನ ಕೋಣೆಗೆ ಹೋದ. ಎಲ್ಲ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಟ್ಟು ವಿಮಲಾ ಕೂಡ ತನ್ನ ಕೊನೆಗೆ ಹೋಗಿ ಮಲಗಿದಳು. ಸುಮಾರು ಅರ್ಧರಾತ್ರಿಯ ಸಮಯ. ವಿಕ್ರಮ ಗಾಢವಾದ ನಿದ್ರೆಯಲ್ಲಿದ್ದ. ಏಕಾಏಕಿಯಾಗಿ ಒಂದು ವಿಚಿತ್ರವಾದ ಸದ್ದು ಕೇಳಿಸಿ ವಿಕ್ರಮ ಎಚ್ಚರಗೊಂಡ. 

ಆ ಸದ್ದು ವಿನುತಾಳ ಕೋಣೆ ಕಡೆಯಿಂದ ಕೇಳಿಸಿದಂತೆ ಭಾಸವಾಯಿತು. ಭೀತಗೊಂಡ ವಿಕ್ರಮ ಎದೆ ತಡಕಾಡುತ್ತಾ ತನ್ನ ಕೋಣೆಯಿಂದ ಹೊರಬಂದ. ಆ ಸಮಯಕ್ಕೆ ವಿನುತಾಳ ಕೋಣೆಯ ಕಡೆಯಿಂದ ಹೊರಬಂದ ದೊಡ್ಡ ನಗರಹಾವೊಂದು ಹೊರಗೆ ಹೋಗುತ್ತಿತ್ತು. ಮತ್ತಷ್ಟು ಭಯಗೊಂಡ ವಿಕ್ರಮ ವಿನುತಾಳ ಕೋಣೆ  ಕಡೆ ಓಡಿದ. ಮೃದುವಾದ ದನಿಯಲ್ಲಿ "ವಿನುತಾ" ಎಂದು ಕರೆದ. ಮೆಲ್ಲನೆ ಅವಳ ಕೋಣೆಯ  ಬಾಗಿಲು ದೂಡಿ ನೋಡಿದ. ಅವಳು ಅಲ್ಲಿ ಕಾಣಿಸಲಿಲ್ಲ.  ಭಯದಿಂದ ಹೊರಗೆ ಓಡಿ  ಸುತ್ತಲೂ ಹುಡುಕಾಡಿದ. ಆದರೆ ಅವಳ ಸುಳಿವು ಸಿಗಲಿಲ್ಲ. ಅಷ್ಟರಲ್ಲಿ ಅದೇ ನಾಗರಹಾವು ಅವನತ್ತ ಹೆಡೆಯೆತ್ತಿ ತಿರುಗಿ ನೋಡಿತು. ವಿಕ್ರಮನಿಗೆ ಅದೊಂದು ಸಂದೇಶದಂತೆ ಭಾಸವಾಯಿತು.  ನನ್ನ ಹಿಂದೆ ಬಾ ಅಂತ ಸನ್ನೆ ಮಾಡಿದಂತೆ ವಿಕ್ರಮನಿಗೆ  ಅನಿಸಿತು. ಹಾವು ನಿಧಾನವಾಗಿ ಮುಂದೆ ಸರಿಯಿತು. ವಿಕ್ರಮನಿಗೆ ಏನೋ ಆಕರ್ಷಣೆಯಾದಂತಾಗಿ, ಆ ಹಾವನ್ನು ಹಿಂಬಾಲಿಸಿದ. 

***

ಆ ಹಾವು ಮನೆಯ ಪಕ್ಕದಲ್ಲಿದ್ದ  ನದಿ ಮಾರ್ಗವಾಗಿ  ಚಲಿಸಿ, ಒಂದು ಬೆಟ್ಟದ ಬುಡದಲ್ಲಿದ್ದ ಗುಹೆಯೊಳಗೆ ಪ್ರವೇಶಿಸಿತು. ಹಾವನ್ನು ಹಿಂಬಾಲಿಸಿದ ವಿಕ್ರಮನೂ ಆ ಗುಹೆ ಪ್ರವೇಶಿಸಿದ. ತಂಪಾಗಿದ್ದ ಆ ಗುಹೆಯೊಳಗೆ ಸ್ವಲ್ಪ ಮುಂದೆ ಸಾಗಿದಾಗ, ಒಂದು ದೊಡ್ಡ ಹಳೆಯ ಪೆಟ್ಟಿಗೆ ಕಂಡಿತು. ಅದು ಸಾಮಾನ್ಯವಾದ  ಪೆಟ್ಟಿಗೆಯಾಗಿರಲಿಲ್ಲ. ರಾಜಮಹಾರಾಜರ ಕಾಲದ ಪೆಟ್ಟಿಗೆಯಂತೆ ಭಾಸವಾಯಿತು. ವಿಕ್ರಮನಿಗೆ ಕುತೂಹಲವಿದ್ದರೂ, ಮನೆಯಲ್ಲಿ ಹೇಳದೆ ಅದನ್ನು ತೆರೆಯಲು ಯತ್ನಿಸಲಿಲ್ಲ. ಮನೆಯಲ್ಲಿ ಮಾತನಾಡಿ ಆಮೇಲೆ ಇದರ ಬಗ್ಗೆ ನೋಡೋಣ ಅಂದುಕೊಂಡು, ಮನೆಗೆ ಹಿಂದಿರುಗಿದ. ಯಾರನ್ನೂ ಗಾಬರಿಗೊಳಿಸುವುದು ಬೇಡ ಅಂದುಕೊಂಡು, ತನ್ನ ಕೊನೆಗೆ ಬಂದು ಮಲಗಿದ. 

ಬೆಳಿಗ್ಗೆ ಎದ್ದ ಕೂಡಲೇ ವಿನುತಾಳ ಕೋಣೆ ಕಡೆ ನೋಡಿದ ವಿಕ್ರಮನಿಗೆ, ವಿನುತಾ ಅಲ್ಲಿರುವುದನ್ನು ಕಂಡು ನಿರಾಳವಾಯಿತು. ಆದರೆ, ಅವಳ ಮೈಯಲ್ಲೆಲ್ಲಾ ಹಳದಿ ಬಣ್ಣದ ಗುಳ್ಳೆಗಳಿದ್ದವು. ಮೆಲ್ಲನೆ ವಿನುತಾಳ ಪಕ್ಕ ಹೋಗಿ, "ನಿನ್ನೆ ರಾತ್ರಿ ನಿನಗೇನಾಗಿತ್ತು?" ಅಂತ ಪ್ರಶ್ನಿಸಿದ. "ಗೊತ್ತಿಲ್ಲ. ನಂಗೆ ತುಂಬಾನೇ ಸುಸ್ತಾಗುತ್ತಿದೆ" ಅಂತ ನಿಧಾನವಾಗಿ ಹೇಳಿ ವಿನುತಾ  ನಿದ್ದೆಗೆ ಜಾರಿದಳು.  ವಿಕ್ರಮನ ಅನುಮಾನ  ಗಟ್ಟಿಯಾಗತೊಡಗಿತು. ಮನೆಯಲ್ಲಿ ಈ ವಿಚಾರವಾಗಿ ಮಾತನಾಡಲೇಬೇಕು ಅಂದುಕೊಂಡು, ಸರಿಯಾದ ಸಮಯಕ್ಕಾಗಿ ಲೆಕ್ಕ ಹಾಕಿದ.

ಆ ದಿನ ಸಾಯಂಕಾಲದ ಹೊತ್ತಿಗೆ, ವಿಮಲಾ ಹಾಗೂ ವಿನೋದ ಇಬ್ಬರೂ ಚಹಾ ಕುಡಿಯುತ್ತಿದ್ದರು. ಅದೇ ಸರಿಯಾದ ಸಮಯ ಎಂದು ವಿಕ್ರಮ ನಿಧಾನವಾಗಿ ವಿಷಯವನ್ನು ಪ್ರಸ್ತಾಪಿಸಿ, ತನ್ನ ಅನುಮಾನವನ್ನು ಸ್ಪಷ್ಟೀಕರಿಸಿದ ವಿಕ್ರಮ. ವಿಮಲಾ ಕಣ್ಣೀರಿಡುತ್ತಾ "ವಿಕ್ರಮ, ನಮ್ಮ ಮನೆತನಕ್ಕೆ ಒಂದು ದೊಡ್ಡ ಹಳೆಕಾಲದ ಶಾಪ ಇದೆ. ಹಳೆಯ ಕಾಲದಲ್ಲಿ, ಇಲ್ಲಿ ಒಂದು ಮಹಾಶಿವನ ದೇವಸ್ಥಾನ ಇತ್ತು. ಸುಮಾರು 5000 ವರ್ಷಗಳಷ್ಟು ಹಳೆಯದು. ಅದನ್ನು ಕಾಪಾಡುತ್ತಿದ್ದ ನಾಗದೇವತೆಯನ್ನು ನಮ್ಮ ಪೂರ್ವಜರು ಅವಮಾನಿಸಿದ್ದರು… ಆಗಿನಿಂದ, ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಈ ಶಾಪ. ಬೇಸರದ ವಿಷಯವೆಂದರೆ, ವಿನುತಾಳೇ ಆ ಶಾಪದ ಬಲಿಯಾಗಿದ್ದಳು. ಪ್ರತಿ ಪಂಚಮಿಯ ರಾತ್ರಿ, ಅವಳು ನಾಗರೂಪಕ್ಕೆ ಬದಲಾಗುತ್ತಾಳೆ… ನಾವು ಏನೂ ಮಾಡಲು ಸಾಧ್ಯವಾಗುತ್ತಿಲ್ಲ." ಅಂತ ಗದ್ಗದಿತ ಕಂಠದಲ್ಲಿ ಹೇಳಿಕೊಂಡಳು. "ಇದಕ್ಕೇನೂ ಪರಿಹಾರವಿಲ್ಲವೇ?" ಎಂದು ವಿಕ್ರಮ ಪ್ರಶ್ನಿಸಿದ. "ತುಂಬ ಪ್ರಯತ್ನ ಪಟ್ಟೆವು ವಿಕ್ರಮ. ಆದರೆ ಪರಿಹಾರ ಏನು ಎಂಬುದು ನಮಗೆ ತಿಳಿಯಲಿಲ್ಲ" ಅಂತ ವಿನೋದ ಹೇಳಿದನು.

"ಈ ಶಾಪವನ್ನು ಮುರಿಯಲೇಬೇಕು." ಎಂದು ತೀರ್ಮಾನಿಸಿಕೊಂಡು ವಿಕ್ರಮ ಮೊತ್ತ ಮೊದಲಿಗೆ ಆ ಹಳ್ಳಿಯ ಜನರೆಲ್ಲರನ್ನೂ ಒಟ್ಟು ಸೇರಿಸಿದ. ಗುಹೆಯ ವಿಚಾರ, ಗುಹೆಯಲ್ಲಿದ್ದ ಪೆಟ್ಟಿಗೆಯ ವಿಚಾರ ತಿಳಿಸಿ, ಊರ ಹಿರಿಯ ಸಮಸ್ತರ ಅನುಮತಿಯಂತೆ, ಆ ಪೆಟ್ಟಿಗೆಯನ್ನು ತೆರೆದ. ಅದರೊಳಗೆ ಪವಿತ್ರವಾದ ಶಿವಲಿಂಗ, ನಾಗನ ಕಲ್ಲುಗಳು ಹಾಗೂ ದೇವಸ್ಥಾನದ ಒಡವೆ ಶಾಸನಗಳು ಸಿಕ್ಕವು. ಅದು ಪುರಾತನ ದೇವಾಲಯದ ಮೂಲ ವಸ್ತುಗಳಾಗಿದ್ದವು. 

ಪ್ರಶ್ನೆ ಇಟ್ಟಾಗ, ಮುಂದಿನ ಪಂಚಮಿಯೊಳಗೆ,ದೇವಸ್ಥಾನದ ಪುನರ್ ನಿರ್ಮಾಣ ಆಗಬೇಕು ಎಂದು ಉತ್ತರ ದೊರಕಿತು.  ಹಳ್ಳಿಯ ಜನರೆಲ್ಲರೂ ಒಟ್ಟು ಸೇರಿ, ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡರು. ಪ್ರತಿ ದಿನ ಹೋಮ, ಪೂಜೆ, ನಾಗಪೂಜೆ ಇತ್ಯಾದಿಗಳು ನಡೆದು, ದೇವಸ್ಥಾನ ನಿರ್ಮಾಣವಾಗಿ, ಅದ್ಧೂರಿಯಾಗಿ ಎಲ್ಲ ಕಾರ್ಯಗಳು ಪಂಚಮಿ ಆಗುತ್ತಲೇ ನಡೆಯಿತು. 

***

ಅಂದು ಮತ್ತೆ ಪಂಚಮಿ. ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಮಂಗಳವಾದ ವಾತಾವರಣ. ಬೆಳ್ಳಗಿನ ಬೆಳಕಿನಲ್ಲಿ ಶಿವಲಿಂಗ ಹೊಳೆಯುತ್ತಿತ್ತು. ಹೋಮದ ಧೂಪದ ವಾಸನೆ ಗಾಳಿಯಲ್ಲಿ ಹರಡಿಕೊಂಡಿತ್ತು. ಹಳ್ಳಿಯ ಪ್ರತಿಯೊಬ್ಬರ ಕಣ್ಣುಗಳಲ್ಲಿ ಒಂದೇ ಆಶೆ— “ಇಂದು ಈ ಶಾಪ ಕೊನೆಯಾಗಬೇಕು."
ಬೆಳಗ್ಗಿನ ಸಮಯದಲ್ಲಿ, ದೇವರ ಪೂಜಾಕಾರ್ಯಗಳು ನೆರವೇರಿತು. ವಿಕ್ರಮ ಹಾಗೂ ವಿನುತಾ ಇಬ್ಬರೂ ಒಟ್ಟಿಗೆ ದೇವರಲ್ಲಿ ಪ್ರಾರ್ಥಿಸಿದರು. ವಿನುತಾಳ ಕಣ್ಣುಗಳಲ್ಲಿ ಭಯವೂ ಇತ್ತು… ಆದರೆ ವಿಕ್ರಮನ ಕೈ ಹಿಡಿದಿದ್ದ ವಿಶ್ವಾಸವೂ ಇತ್ತು. “ನಿನ್ನ ಜೊತೆಗೆ ನಾನು ಇದ್ದೇನೆ…” ಎಂದು ಅವನು ನಿಧಾನವಾಗಿ ಹೇಳಿದ.

ಆ ರಾತ್ರಿ, ವಿನುತಾ ಹಾಗೂ ಮನೆಯವರೆಲ್ಲ ದೇವಸ್ಥಾನದಲ್ಲೇ ಇದ್ದರು. ಹನ್ನೆರಡು ಗಂಟೆ ಆಗುತ್ತಿದ್ದಂತೆ, ಗಾಳಿಯ ಸದ್ದು ಬದಲಾಯಿತು. ದೀಪಗಳ ಜ್ವಾಲೆ ತೂಗತೊಡಗಿತು. ವಿನುತಾಳ ದೇಹ ನಿಧಾನವಾಗಿ ಕಂಪಿಸತೊಡಗಿತು…ಅವಳ ಕಣ್ಣುಗಳು ಬದಲಾಗತೊಡಗಿದವು…ವಿನುತಾ ಮತ್ತೆ ನಾಗರೂಪಕ್ಕೆ ಬದಲಾಗುತ್ತಿದ್ದಾಗ, ದೇವಸ್ಥಾನದ ಗಂಟೆ ತಾನಾಗಿಯೇ "ಢಣ್ ಢಣ್ " ಎಂದು ಮೊಳಗಿತು. ತೂಗುತ್ತಿದ್ದ ದೀಪಗಳ ಆ ಕಿರಣದಲ್ಲಿ—ಒಂದು ಮಹಾ ನಾಗದೇವತೆ ಪ್ರತ್ಯಕ್ಷವಾಯಿತು! ಅದು ಭಯಾನಕವಾಗಿರಲಿಲ್ಲ…ಅದು ದಿವ್ಯವಾಗಿತ್ತು… ಕರುಣೆಯಿಂದ ಕೂಡಿತ್ತು…

ನಾಗದೇವತೆ ಗಂಭೀರ ಧ್ವನಿಯಲ್ಲಿ ಹೇಳಿತು: "ನಿಮ್ಮ ಭಕ್ತಿ, ಶ್ರಮ ಹಾಗೂ ಸ್ಥಿರವಾದ ಬದ್ಧತೆಗೆ ನಾನು ಮೆಚ್ಚಿದೆ. “ಮಾನವನ ಅಹಂಕಾರದಿಂದ ಹುಟ್ಟಿದ ಶಾಪ…
ಇಂದು ಮಾನವನ ಭಕ್ತಿ ಮತ್ತು ಪ್ರೀತಿಯಿಂದ ಮುಕ್ತವಾಗುತ್ತಿದೆ…ವಿಕ್ರಮ…ನಿನ್ನ ಧೈರ್ಯ, ನಿನ್ನ ನಿಷ್ಠೆ…ಮತ್ತು ಈ ಹಳ್ಳಿಯ ಜನರ ಒಗ್ಗಟ್ಟಿನ ಶ್ರಮ— ಇವೆಲ್ಲವು ಈ 5000 ವರ್ಷದ ಶಾಪವನ್ನು ಕೊನೆಗೊಳಿಸಿದೆ…ಇಂದಿಗೆ ನಿಮ್ಮ ಮನೆತನಕ್ಕೆ ಅಂತಿದ್ದ ಶಾಪ ಮುಕ್ತಿಯಾಯಿತು. ನಿಮ್ಮ ಬದುಕು ಬಂಗಾರವಾಗಲಿ" ಎಂದು ಹೇಳಿತು. ವಿನುತಾಳ ನಾಗರೂಪ ನಿಧಾನವಾಗಿ ಕರಗತೊಡಗಿತು. ವಿನುತಾ ತನ್ನ ಸ್ವರೂಪಕ್ಕೆ ಮರಳಿದಳು. ಅವಳು ಅಚಾನಕ್ ನೆಲಕ್ಕೆ ಕುಸಿದು ಬಿದ್ದಳು. “ವಿನುತಾ…!” ಎಂದು ಕರೆದ ವಿಕ್ರಮ ಅವಳತ್ತ ಓಡಿದ. ಮಹಾಶಿವನ ಲಿಂಗಪ್ರಸಾದವನ್ನು ಅರ್ಚಕರು ವಿನುತಾಳ ಹಣೆಗೆ ಹಚ್ಚಿದರು. 

ಕೆಲ ಕ್ಷಣಗಳ ಮೌನ…ವಿನುತಾಳ ಕಣ್ಣಲ್ಲಿ ಮತ್ತೆ ಜೀವ ಬಂದಂತಾಗಿತ್ತು. ಅವಳ ಕಣ್ಣುಗಳು ನಿಧಾನವಾಗಿ ತೆರೆದವು…ಅವಳ ಮುಖದಲ್ಲಿ ಮತ್ತೆ ಆ ಹಳೆಯ ಮಂದಹಾಸ ಅರಳಿತು…ವಿಕ್ರಮನನ್ನು ಅಪ್ಪಿಕೊಂಡು, ಧನ್ಯವಾದ ಸೂಚಿಸಿದಳು. ಗಟ್ಟಿಯಾಗಿ ವಿಕ್ರಮನ ಕೈ ಹಿಡಿದುಕೊಂಡು ಮಂದಹಾಸ ಬೀರುತ್ತಿದ್ದಳು. ಈ ಎರಡು ಜನರ ಜೋಡಿ ಸುಂದರವಾಗಿ ಕಾಣುತ್ತಿತ್ತು. ಹಳ್ಳಿಯ ಜನರೆಲ್ಲ “ಹರ ಹರ ಮಹಾದೇವ!” ಎಂದು ಕೂಗಿ ಸಂತೋಷಪಟ್ಟರು. ಆ ಪುರಾತನ ದೇವಾಲಯ ಮತ್ತೆ ಜೀವಂತವಾಯಿತು. 

ದೇವಾಲಯದ ಗಂಟೆಗಳು ನಿರಂತರವಾಗಿ ಮೊಳಗುತ್ತಾ…ಆಕಾಶದಲ್ಲೇನೋ ಒಂದು ಶಾಂತಿ ಹರಡಿದಂತೆ ಅನಿಸಿತು. ಪ್ರತಿ ವರ್ಷ ಪಂಚಮಿಯಂದು ಮಹೋತ್ಸವ ನಡೆಯತೊಡಗಿತು. 

ವಿಕ್ರಮ ಮತ್ತು ವಿನುತಾ— ಕೇವಲ ಪ್ರೇಮಿಗಳಲ್ಲ…ಒಂದು ಶಾಪವನ್ನು ಮುರಿದ ಜೋಡಿ. ಅವರ ಪ್ರೀತಿ—ಒಂದು ಮನೆತನವನ್ನು ಉಳಿಸಿತು…ಒಂದು ಹಳ್ಳಿಯನ್ನು ಪುನರ್ಜೀವಗೊಳಿಸಿತು… ಕೆಲವು ಶಾಪಗಳು ಭಯದಿಂದ ಅಲ್ಲ, ಭಕ್ತಿಯಿಂದ ಮುರಿಯುತ್ತದೆ. ಕೆಲವು ಪ್ರೇಮಗಳು ಭಾವನೆಗಳನ್ನಲ್ಲ, ಜೀವನವನ್ನು ರೂಪಿಸುತ್ತವೆ. ನಿಜವಾದ ಪ್ರೀತಿ ಇದ್ದಲ್ಲಿ… ದೈವವೂ ತಲೆಬಾಗುತ್ತದೆ…

*** 

  ✍🏻 Deepalaxmi Bhat
Mangaluru