Thursday, January 30, 2014

ಮುಗ್ಧ ಮಗು

ಹಾಲುಗಲ್ಲದ ಕಂದ
ನಿನ್ನಯ ಮುಗ್ಧತೆಯನ್ನು
ನಾನೇನು ಬಣ್ಣಿಸಲಿ?

ಇದ್ದರೂ ಚಿಂದಿಬಟ್ಟೆಯಲಿ
ನೀ ಮೆರೆಯುವೆ ಅರಸನಂತೆ
ನಕ್ಕು ನಲಿದಾಡುತಲಿ ಕುಣಿಯುತಲಿ
ಇತರರನೂ ನಗಿಸುವೆ.

ನಿನ್ನಯ ಆಟಗಳಿಂದ
ಸೆಳೆಯುವೆ ಹಲವರ ದೃಷ್ಟಿಯ
ನಿನ್ನ ಸುಕೋಮಲ ಮಾತುಗಳಿಂ
ಗಳಿಸುವೆ ಹಲವರ ಹೃದಯವ.

ಮಾತುಮಾತಿಗೆ ನಗುವೆ
ಹಲವರ ಮಾತಿಗೆ ಅಳುವೆ
ನಿದಿರೆಯಲ್ಲೂ ನಗುವೆ
ತೊದಲು ಮಾತುಗಳನ್ನಾಡಿ ಆಳುವೆ.

ನಗುನಗುತಲಿ ಸ್ವೀಕರಿಸಿದೆ
ಅಮ್ಮ ನೀಡಿದ ಮುತ್ತನು
ನಿನ್ನಿಂದ ಕಲಿತರೆಲ್ಲರೂ
ಮರೆಯಲು ತಮ್ಮ ಸಿಟ್ಟನು.

ನಿನ್ನಯ ಮುಗ್ಧ ನೋಟವು
ಸೆಳೆಯಿತು ಎಲ್ಲರ ಮನವ
ನಿನ್ನ ಆ ಮುಗ್ಧ ನಡೆಯು
ಕೆರಳಿಸಿತು ಕವಿ ಹೃದಯವ.

ನೀನಾದೆ ಎಲ್ಲರಿಗೂ ಮಾದರಿ
ಸುಂದರವಾದ ಈ ಪ್ರಪಂಚದಿ
ನಗುನಗುತಿರುವ ದಿನಚರಿ
ನೀಡುವುದು ಶಾಂತಿ ಮನದಿ.

ನಿನ್ನಿಂದಾಗಿ ಆಗಲಿ ಈ ಜಗವು
ಸುಖ ಸಂತೋಷ ಸಾಗರ
ಅರಿಯಲಿ ಎಲ್ಲರೂ 'ನಗವು
ನೀಡದು ಕ್ಷಣ ಸುಮಧುರ'.

ನಿನ್ನಿಂದಾಗಿ ತುಂಬಲಿ ಇಲ್ಲಿ
ಸಮಾನತೆಯ ಉಸಿರು
ಇದರಿಂದಾಗಿ ಹರಡಲಿ ಜಗದಿ
ಸುಖಶಾಂತಿಯ ಹಸಿರು.

Wednesday, January 29, 2014

ದುಂಬಿಯ ಹಾಡು ಕೇಳಿ..


Composed on 21.07.2001

ಆಹಾ!! ಎಂತಹ ಸುಂದರ ಲೋಕ
ಶ್ರೀಗಂಧದ ನಾಡು ಕರ್ನಾಟಕ.

ಕೆಂದರಿಳ ಹಸಿರು ಬೀಡು
ಎಲ್ಲೆಲ್ಲೂ ಹಕ್ಕಿಗಳ ಹಾಡು
ಶುಭ್ರ ಜಲಪಾತಗಳ ನೋಡು
ಹೇ ಮಾನವಾ..ಮಾಡಬೇಡ ಅದಕೆ ಕೇಡು.

ಸುಗ್ಗಿಕಾಲದ ಹಚ್ಚ ಹಸಿರು
ತಂದಿತು ಈ ನಾಡಿಗೆ ಬಸಿರು
ಎಲ್ಲೆಡೆ ಪಸರಿತು ಶ್ರೀಗಂಧದ ಪನ್ನೀರು
ಹೇ ಮಾನವಾ..  ಎರಚಬೇಡ ಇಲ್ಲಿ ಕೆಸರು.

ಇಲ್ಲಿದೆ ಧಾರ್ಮಿಕ ವೈವಿಧ್ಯತೆ
ಆದರೂ ಈ ವೈವಿಧ್ಯತೆಯಲ್ಲಿದೆ ಐಕ್ಯತೆ
ಕನ್ನಡಿಗರಲ್ಲಿದೆ ಮಾನವೀಯತೆ
ಹೇ ಮಾನವಾ..ಕನ್ನಡದ ಬಗ್ಗೆ ಇರಲಿ ತಾತ್ಪರ್ಯತೆ.

ಬಂತು ವೈಜ್ಞಾನಿಕ ಯುಗ
ತಂದಿತು ನಾಡಿಗೆ ಐಶ್ವರ್ಯದ ಭೋಗ
ಅದನ್ನು ಪಡೆಯಲಿದೆ ನಮಗೆ ಯೋಗ
ಹೇ ಮಾನವಾ.. ಪಸರಿಸಬೇಡ ಇಲ್ಲಿ ವಿವಿಧ ರೋಗ.

ಕನಸಿನ ಲೋಕ

ನಿಶ್ಚಲವಾದ ಪರಿಸರ
ಮುಳುಗಿದ್ದಾನೆ ನೇಸರ...
ಮೌನದ ಮಹದಾವತಾರ
ಕಣ್ಣನೋಟ ನೋಡುತಿದೆ ನೇರ...

ಆ ನೇರ ನೋಟದಲಿ
ನಿನ್ನ ನೆನಪುಗಳ ಚಿಲಿಪಿಲಿ...
ಮಂದಸ್ಮಿತ ಈ ನನ್ನ ತುಟಿಗಳಲಿ
ನಿನ್ನ ಪ್ರೀತಿಯ ಮಧುರ ಸ್ವಾದದಲಿ...

ಕಣ್ಣಂಚಿನಲಿ ಮಿಂಚುತಿದೆ ಪ್ರೀತಿ
ಆ ಪ್ರೀತಿಗೆಂದೂ ಇರದು ಮಿತಿ...
ದೊರೆಯಲು ಮನಸುಗಳ ಸಮ್ಮತಿ
ಪ್ರೀತಿಗೆಂದೂ ಬೀಸದು ತುಸುಭೀತಿ...

ನೋಡುನೋಡುತ್ತಲೇ ಕವಿದಾಯ್ತು ರಾತ್ರಿ
ನನ್ನ ಕನಸುಗಳ ಲೋಕಕೆ ಬಿತ್ತು ಕತ್ರಿ...
ಕನಸುಗಳೊಂದಿಗಿನ ಈ ನನ್ನ ಮೈತ್ರಿ
ಇಂದಿನ ದಿನದಿ ಕೊನೆಯಾಯ್ತು ಖಾತ್ರಿ...

Tuesday, January 28, 2014

ದುಃಖಿತ ಮನಸಿನ ದಯನೀಯ ಬೇಡಿಕೆ

ನಾನೇನು ಮಾಡಿದೆನೆಂದು
ಒರಟಾಗಿ ವರ್ತಿಸುವರು?
ಪ್ರೀತಿಗೆ ಶರಣಾದೆನೆಂದು
ಛೀಕಾರ ಹಾಕುವರು...

ಜೀವನವೇ ಸಾಕೆಂದು
ಮನವಿಂದು ಕದಡಿಹುದು
ಭಾವನೆಗೆ ಬೆಲೆಯೆಂದೂ
ಸಿಗದೆಂದು ಅನಿಸಿಹುದು...

ಹೆತ್ತವರ ಪ್ರೀತಿಗೆಂದೂ
ಚೂರಿಯ ಇರಿಯಲಿಲ್ಲ
ನನ್ನ ಮನದ ಪ್ರೀತಿಗೂ
ನಕಾರ ಹಾಕಲಿಲ್ಲ...

ಗೊಂದಲದ ಸಮಯದಿಂದ
ಚೂರಾಗಿರುವೆನು ನಾನು
ನನ್ನ ಮನವ ಅರ್ಥೈಸಿ
ಸಂತಸದ ದಿನವ ನೀಡಿರಿನ್ನು...

Monday, January 27, 2014

ಎಂತಹ ನಿಸ್ವಾರ್ಥ.... ಬರೆದ ದಿನಾಂಕ:26.01.2000

ಭಾರತಾಂಬೆ ನಿಸ್ವಾರ್ಥಿ..
ನಮ್ಮ ತಾಯಿ ನಿಸ್ವಾರ್ಥಿ...

ಶತ್ರುದೇಶದ ಪ್ರಜೆಗಳಿಗೂ
ಆಶ್ರಯವ ನೀಡಿದೆ
ಅವರ ಹಿತದ ರಕ್ಷೆಗಾಗಿ
ನೀ ದೇವರ ಬೇಡಿದೆ.

ಪ್ರಜೆಗಳ ಸುರಕ್ಷೆಗೆ
ನೀನು ಬಲು ಹೋರಾಡಿದೆ
ಬ್ರಿಟಿಷರ ಬಿಡುಗಡೆಯಿಂದ
ಸ್ವತಂತ್ರಳಾಗಿ ಹಾರಾಡಿದೆ

ಸರಕಾರವ ಸೃಷ್ಟಿಸಿ ನೀ
ಜನರ ಸಮಾನತೆಯ ಸಾರಿಹೆ
ಅವರ ಭ್ರಷ್ಟಾಚಾರದಿಂದ ನೀ
ಅತೀವ ನೋವ ತಿಂದಿಹೆ

ನಿನ್ನ ನೋವ ಮತ್ತೂ ಹೆಚ್ಚಿಸಿ
ಕರುಣೆಯಿಲ್ಲದೆ ಮೆರೆವ ಜನರ
ಸ್ವಾರ್ಥ ಅಭಿಮಾನಗಳನು
ಕ್ಷಮಿಸಿ ಬಿಡುವ ಮಹಾತಾಯಿ...

|| ಜೈ ಭಾರತ ಮಾತೆ ||

Sunday, January 26, 2014

ಸಮಾಧಾನ.....

ಎಲ್ಲಿದೆ ಸಮಾಧಾನದ ಮಾತುಗಳು?
ಬೇಸತ್ತಿದೆ ಹುಡುಕುತ ಈ ಕಂಗಳು.
ನಿಲ್ಲದೆ ಓಡುತ್ತಿದೆ ಎಲ್ಲರ ದಿನಗಳು
ತಾಳ್ಮೆಗೆ ಅವಕಾಶವಿಲ್ಲದ ಪರಿಗಳು.

ಎಲ್ಲೆಲ್ಲಿಯೂ ಅಹಂಕಾರಗಳ ಕಟ್ಟಿರುಳು
ಸ್ವಾಭಿಮಾನಕೆ ಇಲ್ಲ ಎಲ್ಲಿಯೂ ನೆರಳು.
ರೋಷ ತಾಪಗಳ ನಿರಂತರವಾದ ಕದನಗಳು
ತುಂಡರಿಸಿತು ಶಾಂತಿ ಸಮಾಧಾನಗಳ ಬೆರಳು.

ನ್ಯಾಯ-ಅನ್ಯಾಯಗಳ ಕಾದಾಟ ಹಗಲಿರುಳು
ಸದ್ಚಿಂತನೆಗಳಿಗೆ ನೆಲೆಯಾಯಿತು ಮರಳು.
ಪ್ರಾಮಾಣಿಕತೆಗಳಿಗೆ ಆಧಾರ ಸಿಗದಿರಲು
ಮುಗಿಲೇರುತಿಹುದು ಮೋಸ ವಂಚನೆಗಳು.

ವಿನಯ ವಿಧೇಯತೆಗಳಿಗೆ ಕಾರ್ಮೋಡ ಕವಿದಿರಲು
ಮಾನವೀಯತೆ ಗುಣಗಳಿಗೆ ಬೆಲೆಯೊಂದು ಸಿಗದಿರಲು
ಕೊನೆಯಾಗದೆಂದೂ ಸತ್ಯಾಸತ್ಯದ ಹುಡುಕಾಟಗಳು
ಕಾಣದೆಲ್ಲಿಯೂ ನಮಗೆ ಸಮಾಧಾನದ ಮಾತುಗಳು.

Thursday, January 23, 2014

ಜೀವದ ಗೆಳತಿ

ಅಂದು ನಾನು ಅಳುತ್ತಿದ್ದೆ
ಬೇಸರದಿಂದ
ಆಗ ಬಂದಳು ಗೆಳತಿ
'ನಾನಿರುವೆ' ಎಂಬ ಸಾಂತ್ವನದಿಂದ

ಅಂದು ನಾನು ಮಂಕಾಗಿದ್ದೆ
ದುಗುಡದಿಂದ
ಆಗ ಬಂದಳು ಗೆಳತಿ
ದೂರ ಮಾಡಲು ಅದ ಮನದಿಂದ

ಅಂದು ನಾನು ಸೋತಿದ್ದೆ
ಬಳಲಿಕೆಯಿಂದ
ಆಗ ಬಂದಳು ಗೆಳತಿ
ಅರಳಿಸಲು ನನ್ನ ಮುಖಾರವಿಂದ

ಅಂದು ನಾ ನಗುತ್ತಲಿದ್ದೆ
ಸಂತೋಷದಿಂದ
ಆಗ ಬಂದಳು ಗೆಳತಿ
ಹಂಚಿಕೊಳ್ಳಲು ಅದ ಮುದದಿಂದ

ಅಂದು ನಾ ತೊಳಲುತ್ತಲಿದ್ದೆ
ಮಾನಸಿಕ ಉದ್ವೇಗದಿಂದ
ಆಗ ಬಂದಳು ಗೆಳತಿ
ಅಳಿಸಲು ಅದನು ನನ್ನಿಂದ

ಅಂದು ನಾನು ಬೀಗುತ್ತಿದ್ದೆ
ಅಹಂಕಾರದಿಂದ
ಆಗ ಬಂದಳು ಗೆಳತಿ
ದೂರ ಮಾಡಲು ಅದ ನನ್ನಾಳದಿಂದ

ಅಂದು ನಾ ಮಲಗಿದ್ದೆ
ಸಾವು ಬದುಕಿನ ಹೋರಾಟದಿಂದ
ಆಗ ಬರಲು ನನ್ನ ಗೆಳತಿ
ಧನ್ಯನಾದೆ ಅವಳ ಸ್ನೇಹದಿಂದ.....

Tuesday, January 21, 2014

ಆಸೆ...ನೂರು ಆಸೆ...

ಆಸೆ...ನೂರು ಆಸೆ...
ಕಮಲದಂತೆ ಅರಳಿರುವ ಆಸೆ...
ಜೇನಂತೆ ಸವಿಯುಣಿಸುವ ಆಸೆ...
ಚಂದಿರನಂತೆ ತಂಪೆರಚುವ ಆಸೆ...

ನಿಶ್ಚಲವಾಗಿ ಮಲಗಿದ್ದ ಮನದಿ
ಚಂಚಲವಾಗಿ ಉಧ್ಭವಿಸುವ ಆಸೆ...
ನೈದಿಲೆಯ ಆ ಸೊಬಗಿನಲಿ
ಮದ್ದಳೆಯ ನಾದದಂಥ ಆಸೆ...

ಬೆಳದಿಂಗಳ ತಂಪಿನಲಿ
ಕೆಳಗುಂದದ ಮಹದಾಸೆ...
ನಿಶೆಯ ಹವಾಗೀತೆಯಲಿ
ನಶೆಯೇರಿಸುವ ಮಂದ ಆಸೆ...

ಬಾನಂಗಳದ ರಂಗೋಲಿಯಲಿ
ತಿಂಗಳ ಬೆಳಕಿನಂಥ ಆಸೆ...
ಜೀವನದ ಕಥಾನಕದಲಿ
ಕೊನೆಗಾಣದ ಅಮರ ಆಸೆ...

Sunday, January 19, 2014

ಬರಲಾರೆಯಾ???!!!

ನೀ ಬರುವೆಯೆಂದು ನಾ
ಕಾಯುತ್ತಾ ಕಾಯುತ್ತಾ
ಬಳಲಿ ಹೋದೆನೋ ಇನಿಯ
ಬರಲಾರೆಯಾ?

ಬರಡಾಗಿದೆ ಮನವು ಇಂದು
ನಿನ ಕಳಕೊಂಡ ದುಃಖದಿ
ಹೊಸ ಚೈತನ್ಯವ ನೀಡಲು
ಬರಲಾರೆಯಾ?

ಸಿಂಗಾರದ ಹೊರೆಯು
ಕೆಣಕುತ್ತಿದೆ ನನ್ನನು
ನಿನಗಾಗಿ ಕಾಯುತಿಹೆ
ಬರಲಾರೆಯಾ?

ಕಂಬನಿಯು ಧರೆಗಿಳಿದು
ಬತ್ತಿಹೋಗಿದೆ ನಯನ
ಕಣ್ಣೀರ ಕರೆಗಾದರೂ
ಬರಲಾರೆಯಾ?

ಪಕ್ಷಿ ದಂಪತಿಗಳು ಅಲ್ಲಿ
ಜೊತೆಗಿರುವುದ ನೋಡಿ
ಮನವು ತಳಮಳಿಸುತಿದೆ
ಬರಲಾರೆಯಾ?

ನಿನ್ನ ವಿರಹದಿಂದ ನನ್ನ
ಜೀವ ತಹತಹಿಸುತಿದೆ
ಹೊಸ ಹುರುಪು ನೀಡಲಿಂದು
ಬರಲಾರೆಯಾ?

ಬರಲಾರೆಯಾ?

ಬರಲಾರೆಯಾ???

Saturday, January 18, 2014

ಸ್ನೇಹದ ಒಡೆದ ಕನ್ನಡಿ

ವೈರಾಗ್ಯದಿ ಇರುವಾಗ ನೀ ಬಂದೆ
ನನ್ನ ಬದುಕ ನಿನ್ನಲ್ಲಿ ಕಂಡೆ
ನೀನೇ ನನ್ನ "ಸರ್ವಸ್ವ" ಎಂದೆ...
ಒಡೆದು ಚೂರಾದೆ ನೀನೆಂದಾಗ-
"ನೀ ದೂರ ಹೋಗು ನನ್ನಿಂದೆ..."

"ನೀನಲ್ಲ ನನ್ನ ಸ್ನೇಹಿತೆ"ಎಂದೆ..
ನನ್ನೆದುರಿಗೇ ಇನ್ನೊಬ್ಬಳ ಜೊತೆ ನಿಂದೆ..
ನನ್ನ ಮನವು ಒಡೆದು ಚೂರಾಯ್ತು ಅಂದೇ
ನನಗಾರೂ ಇಲ್ಲವೆಂದೆ ಮತ್ತೆ ವೈರಾಗ್ಯದಿಂದೆ...

ನನ್ನ ಬಾಳಿನಲಿ ನೀ ಬಂದ ದಿನ - ಅತಿ ಮಧುರ
ಆದರೆ ನೀ ನನ್ನ ಬಿಟ್ಟ ಕ್ಷಣ ನನ್ನ ಅಂತರಾತ್ಮದ ಅಂತ್ಯ
ನನ್ನ ಸೃಜನಶೀಲತೆಯ ಕೊನೆ
ನನ್ನ ಅಸ್ತಿತ್ವದ ಕೊನೆ...

ನನಗೆ ಬೇಕಿತ್ತು ನಿನ್ನ ಸ್ನೇಹ...
ನೀ ತೊರೆದೆ ನನ್ನ...
ಕೊನೆಯಾದೆ "ನಾನು"..
ಇನ್ನು ನಾನಿದ್ದರೂ ಇರದಂತೆ!!!
ಉತ್ತರಿಸುವ ತನಕ ನೀನು...

Friday, January 17, 2014

ಸದ್ಚಿಂತನೆ

ಹೇ ಮುಗ್ಧ ಮನಸೇ..
ನೀನೆಂದೂ ಬಾಡದಿರು.
ನಿನ್ನ ಭಾವನೆಗಳ ಗುಡಿಯನು
ಕೆಡಹಲು ನೀ ಬಿಡದಿರು...

ನೀ ತಾಳಿದ ತಾಳ್ಮೆಯನು
ಯಾರೂ ಅರಿಯಲಾರರು.
ನಿಂದನೆಯ ಕಹಿನುಡಿಗಳನು
ಪಸರಿಸಲು ನೀ ಬಿಡದಿರು...

ಪ್ರೀತಿಯ ಬೆಳದಿಂಗಳನು
ವಿಷದಂತೆ ಕಾಣದಿರು.
ನೋವಿರದ ಭಾವವನು
ಸಾವಿಗೆಡಹಲು ನೀ ಬಿಡದಿರು...

ಜೀವನದ ಸೌಂದರ್ಯವನು
ಆನಂದದಿ ಸವಿಯುತಿರು.
ಸಿಹಿಕ್ಷಣಗಳು ಮೆರೆವುದನು
ಮನಸಾರೆ ನೀ ಬೇಡುತಿರು...

Thursday, January 16, 2014

ಕಂಪನ ಕ್ಷಣಗಳು

ಪ್ರೇಮದ ಸೆರಗಿನ ಅಂಚಿನಲಿ
ಘನತೆಯ ಗಂಟು ಕಳಚಲಾರದೆ
ಪ್ರೀತಿಯ ಆಸರೆ ಬೇಡುತಲಿ
ಈ ಹೃದಯ ತೊಳಲಾಡುತಿದೆ....

ಸಾವಿರಾರು ಪ್ರಶ್ನೆಗಳ ಸುಳಿಯಲಿ
ವಿಶ್ವಾಸದ ಬೇರು ಕೀಳಲಾರದೆ
ವಿಜಯದಶಮಿ ಹಾದಿ ಕಾಯುತಲಿ
ಈ ಮನವು ತಳಮಳಿಸುತಿದೆ...

ಭಯವೆಂಬ ಕಾರ್ಮೋಡದಲಿ
ನಿಜದಾರಿ ಕಾಣಲಾರದೆ
ಅಭಯಹಸ್ತದ ನಿರೀಕ್ಷೆಯಲಿ
ಈ ಜೀವ ಬರಡಾಗುತಿದೆ...

ಪ್ರೀತಿಯ ಅಂಕುಷದಾಸರೆಯಲಿ
ಮನದಾಶಯವ ತೊರೆಯಲಾರದೆ
ಸುಂದರ ಕ್ಷಣಗಳ ಪ್ರತೀಕ್ಷೆಯಲಿ
ಈ ಭಾವ ಬಾನೇರುತಿದೆ...

Wednesday, January 15, 2014

ಪ್ರತಿಬಿಂಬ

ನನ್ನಂತೆಯೇ ನೀನು...
ನನ್ನ ಮನದಿ ಸಂತಸವಿರೆ
ನಿನ್ನ ಮೊಗದಿ ಕಾಣುವೆ ಮಂದಸ್ಮಿತವ...
ನನ್ನ ಮನದಿ ದುಗುಡವಿರೆ
ನಿನ್ನ ನೋಟದಿ ಕಾಣುವೆ ಖಿನ್ನಭಾವ...
ನನ್ನ ಮನದಿ ಉಲ್ಲಾಸವಿರೆ
ನಿನ್ನಲಿ ಕಾಣುವೆ ಲವಲವಿಕೆಯ ಹೂವ...
ನನ್ನ ಮನದಿ ಏಕಾಂತವಿರೆ
ನಿನ್ನ ಕಣ್ಣಲಿ ತೋರುವೆ ವೈರಾಗ್ಯವ...
ನನ್ನ ಮನದಿ ಸಂಭ್ರಮವಿರೆ
ನಿನ್ನ ಅಸ್ತಿತ್ವದಲಿ ಕಾಣುವೆ ಸೌಂದರ್ಯವ...
ನನ್ನ ಮನದಿ ಸಂತಾಪವಿರೆ
ನಿನ್ನ ಕಾಣುವ ಹಂಬಲ ನಾ ತೋರಲಾರೆ..
ಏಕೆಂದರೆ, ಆ ಸಂದರ್ಭದಿ
ನಿನ್ನ ಮೊಗದಲಿ ಕಾಣುವೆ ನಾ ಕಣ್ಣೀರಧಾರೆ...

ಸ್ನೇಹ

ನೀನಿಲ್ಲದೆ...
ನಾನು ನಾನಲ್ಲ...
ನನಗೇನೂ ಬೇಕಿಲ್ಲ...
ಸ್ನೇಹಿತೆಯಾಗಿರು ನೀ ನನಗೆ...
ಎಂದೆಂದಿಗೂ ಈ ಬದುಕಿಗೆ...
ನಿನ್ನ ಬಿಟ್ಟು ನಾನು
ನನ್ನ ಬಿಟ್ಟು ನೀನು
ಅರ್ಥವೇ ಇಲ್ಲದ ಸಾಹಿತ್ಯದಂತೆ...

Friday, January 3, 2014

ಒಲವಿನ ಆಸೆ...

ನನ್ನೊಲವೇ....

ನಿನ್ನ ಚೆಂದುಟಿಯ ಚುಂಬಿಸುವಾಸೆ...
ನಿನ್ನ ಕಂಗಳಲಿ ನೋಟ ಬೆರೆಸುವಾಸೆ...
ನಿನ್ನ ಎದೆಬಡಿತಕೆ ಧ್ವನಿ ಸೇರಿಸುವಾಸೆ...
ನಿನ್ನುಸಿರಿಗೆ ಮೈ ಸೋಕಿಸುವಾಸೆ...

ಕ್ಷಣ ಕ್ಷಣ ಎಣಿಸದೆ ಮೈಮರೆಯುವ ಆಸೆ...
ಪ್ರಶಾಂತವಾದ ಸಾಗರದಿ ತೇಲಾಡುವ ಆಸೆ...
ತಂಪಾದ ಇಬ್ಬನಿಯಲಿ ನಲಿದಾಡುವ ಆಸೆ...
ಇಂಪಾದ ನಿಶೆಯ ಆ ನಾದದಿ ತಲ್ಲಣಿಸುವ ಆಸೆ...

ಚಂದಿರನ ಆ ಮಂದ ಬೆಳಕಲಿ ನಿನ್ನ ನೋಡುವಾಸೆ...
ನಿನ್ನ ಪ್ರೀತಿಯ ಮಂದಹಾಸದಿ ಸಂಭ್ರಮಿಸುವಾಸೆ...
ನಿನ್ನ ನೆನಪಿನ ತಂಪಿನಲಿ ನವಿರೇಳುವ ಆಸೆ...
ನನ್ನ ಮನದ ಸ್ವಪ್ನಲೋಕದಿ ನಲಿದಾಡುವಾಸೆ...

ನಿನ್ನ ಮನದ ತಾಳಕ್ಕೆ ಹೆಜ್ಜೆಯಾಗುವ ಆಸೆ...
ನಿನ್ನ ಆತ್ಮದ ಸೌಂದರ್ಯಕೆ ಪ್ರಭೆಯಾಗುವ ಆಸೆ...
ನಿನ್ನ ಹೃದಯದ ಸಂಭ್ರಮಕೆ ಬೇರಾಗುವ ಆಸೆ...
ನಿನ್ನ ಇರುವಿಕೆಗೆ ಮೂಲವಾದ ಒಲವಾಗುವ ಆಸೆ....

ದುಃಖಿತ ಮನಸ್ಸಿನ ಹಾದಿ

ಬೆಣ್ಣೆಯಂಥ ಮೃದುವಾದ ಮನಸು
ಸಿಡಿದು ಕಲ್ಲಾಗಿ ಹೋಯಿತೇ?
ಮನದಲ್ಲಿ ಅರಳಿದ ಕನಸು
ಒಡೆದು ಚೂರಾಗಿ ಹೋಯಿತೇ?

ಛೀಕಾರ ನಕಾರಗಳಿಗೆ ಕದಡಿ
ಬಾಡಿ ಬರಡಾಗಿ ಹೋಯಿತೇ?
ದುಃಖದ ತಾಪದಲಿ ಬೆಂದು
ವೈರಾಗ್ಯದತ್ತ ತೆರಳಿತೇ?

ಸ್ವಾರ್ಥದ ಅಟ್ಟಹಾಸಗಳಿಗೆ ಸೋತು
ಖಿನ್ನತೆಯ ಅಪ್ಪಿಕೊಂಡಿತೇ?
ಸಂಶಯಗಳ ಕೊಂಡಿ ಬಿಡಿಸಲಾರದೆ
ಸಾವೇ ದಾರಿಯೇನೋ ಎಂದಿತೇ?

ಸ್ಪಂದಿಸುವ ಆಧಾರಸ್ಥಂಭವಿಲ್ಲದೆ
ಮುನ್ನಡೆಯಲಸಾಧ್ಯವಾಯಿತೇ?
ಸ್ವಾಭಿಮಾನಕೆ ಜ್ವಾಲೆಯ ಉರಿ ತಾಗಿ
ಸಾವಿಗೆ ಶರಣಾಗಿ ಹೋಯಿತೇ?