Tuesday, August 7, 2018

ಸಮಯಕೊಂದು ಪ್ರಶ್ನೆ

ಓ ಸಮಯವೇ, ನೀನೇನು ಕ್ರೂರಿಯೇ?
ನನ್ನ ಸಂಯಮವ ಪರೀಕ್ಷಿಸುತ್ತಿರುವೆಯೇ?
ತಿಳಿ ನೀನಿಂದು, ಅಸಾಧ್ಯವು  ನಿನ್ನಿಂದ
ಸಹನೆಯ ಕೀಳಲು ನನ್ನಾತ್ಮಬಲದಿಂದ...

ಮಿತಿಯಿಹುದು ಒಂದು ಆತ್ಮದ ತಾಳಿಕೆಗೂ
ಮರ್ಯಾದೆಯಿಹುದು ಎಲ್ಲರ ಬಾಳ್ವಿಕೆಗೂ
ಅಗೌರವ ನೀಡದಿರು ನೀ ಒಂದು ಜೀವಕೆ
ಆ ಜೀವವೇ ಮುಂದೊಮ್ಮೆ ಆಸರೆ ಕೊಡಬಹುದು...

ಜೊತೆಗಿರುವವನ ಕೀಳಾಗಿ ತ್ಯಜಿಸಿದರೆ
ದೂರವಾದವನ ನಿರಂತರ ನೆನೆದತ್ತರೆ
ಬೆಲೆಕೊಡುವ ಆ ನಿನ್ನ ಜೊತೆಗಿರುವವನು
ನಿನಗಿತ್ತ ಗೌರವಕೆ ಬೆಲೆಯಿರದಂತಾಯ್ತೇ!

ಓ ಸಮಯವೇ, ನೀಡು ನೀ ಉತ್ತರವ
ನಿನಗೆ ಬಲಿಯಾಗಿ ದುಡುಕಿ ಪ್ರತಿಕ್ರಿಯಿಸಲೇ?
ನಿನ್ನ ಜೊತೆಗೋಡಿ ನಾ ನನ್ನ ಮೌಲ್ಯ ಕಡಿಯಲೇ?
ಮೂಕನಾಗಿದ್ದು ನಾ ಸ್ವತಃ ಅಗೌರವ ಪಡೆಯಲೇ?

ನೀನೇ  ಹೇಳು. ನಾನೇನು ಮಾಡಲಿ?

ಪ್ರೀತಿಯ ಪ್ರೀತಿ

ಪ್ರೀತಿಯ ಈ ಪ್ರೀತಿಯ ಪ್ರತಿಕ್ಷಣದಲೂ
ನಿನ್ನ ಆ ಮೃದು ಸ್ಪರ್ಶದ ಭಾವವು
ನನ್ನ ಈ ಸ್ವಪ್ನಸೀಮೆಯ ಮೀರುತ
ತುಂಬಿತು ಮನದಲಿ ಹಿತಕಂಪಿನಂತೆ.

ಮೋಹಮಾಯೆಯ ಮ್ರೃದುಭಾವಗಳು
ಲೀನವಾಯಿತು ಈ ನನ್ನ ಕಂಗಳಲಿ
ಕಂಗಳಾನಂದ ಕೊಡಗಳು ತುಂಬುತ
ಉಕ್ಕಿ ಹರಿಯಿತು ತಂಪು ನದಿಯಂತೆ.

ಈ ಜೀವದ ರಕ್ತ ಕಣಕಣಗಳು ಜಿನುಗಿ
ಕುಣಿದಾಡಿತು ಖುಷಿಯ ತೋರಣದಲಿ
ನಿನ್ನಪ್ಪುಗೆಯ ಬೆಸುಗೆ ತಾಗಿ ಬೆಸೆಯುತ
ತಲ್ಲಣಿಸಿ ಕುಣಿದವು ಮಳೆಗೆ ಗಿಡಗಳಂತೆ.

ಪ್ರೀತಿಯಾನಂದವೇ ಹೀಗೆ..ಪ್ರತಿಘಳಿಗೆಗೂ
ನೀಡುವುದು ಕನಸಿಗೆ ಮರುಜೀವವ..
ಪ್ರೀತಿಯನು ಪ್ರೀತಿಯಿಂದ ಪಡೆದರೆ
ಭೂಮಿ-ಆಗಸಕೆ ದೊರೆವ ಸೇತುವಂತೆ...

"ಪ್ರೀತಿಯೇ ಅಮರ...ಪ್ರೀತಿಯೇ ಮಧುರ.."

Saturday, April 28, 2018

ನನ್ನ ಬೆಲೆಯಿಷ್ಟೇ ಏನು!??

ಮಬ್ಬುಗತ್ತಲಲಿ ನಿನ್ನ ಮೊಗವ ಕಂಡು
ಖುಷಿಯಾಗಿ ಸಮೀಪಿಸಿದೆ ನಾನು
ನನ್ನ ಶತ್ರುವಿಗೂ ಕೀಳಾಗಿ ನೆನೆದು
ಝಾಡಿಸಿದೆಯಲ್ಲವೋ ನೀನು...

ಮನದಲ್ಲೆದ್ದ ನೂರೆಂಟು ಪ್ರಶ್ನೆಗಳು 
ಸಮಾಧಾನ ಸಿಗದೇ ಸೋತು 
ಕಂಗಳಲಿ ನದಿಯಂತೆ ಹರಿದು 
ನಿದ್ರೆಯಲಿ ಕರಗಿತಲ್ಲವೇ ನೋಡು... 

ಆ ನಿದಿರೆಯ ಮಡಿಲಲೂ ನಿನ್ನ
ಅಸಮಾಧಾನದ ಚರ್ಯೆಯು
ಬೆಂಬಿಡದಂತೆ ಕಾಡಿತಲ್ಲವೇ ನೋಡು
ಆ ನೋವಿಗೊಮ್ಮೆ ನೀ ಸ್ಪಂದಿಸಿ ನೋಡು...

ಮನದಾಳದಲಿ ಬರಿದೆ ನಿನ್ನ
ಮನಸಾರೆ ಬಯಸುತಿರೆ
ನಿನ್ನೆದೆಯಂಗಳದಿ ನನಗೆ
ಬೆಲೆಯೆಷ್ಟಿರುವುದ ತಿಳಿಸು....
"ಸಮಯ ಮೀರುವ ಮೊದಲು"....

Monday, March 26, 2018

ಯಾಕೆ ದೂರಾದೆ "ನೀನು"

ಬೆಳಕ ಮರೆಯಲಿ ನೋಡುನೋಡುತ
ಮರೆಯಾಗಿ ಹೋದೆ ನೀನೆಲ್ಲಿ
ಇಂದೆಲ್ಲ ಮನಕೆ ತಂಪೆರಚುತ
ತಂದೆಯಾ ದುಃಖವ ಈ ನನ್ನ ಕಂಗಳಲಿ...

ಇಂದಿಗೂ ನಾ ನೋಡುತಿಹೆ ತವಕದಿ
ನೀ ಮರೆಯಾದ ಬೆಳಕಿನ ಹಾದಿಯೆಡೆಗೆ
ಮತ್ತೊಮ್ಮೆ ನಿನ್ನ ನೋಡುವ ಹಂಬಲದಿ
ಬೆಳಕು ಬರುವ ಮೂಲದೆಡೆಗೆ...

ಸಂದರ್ಭದ ಸುಳಿಯೊಳಗೆ ಸಿಲುಕಿ
ಹಿಂತೆಗೆದೆ ಮುಂದಿಟ್ಟ ದಿಟ್ಟನಡೆಯ
ಸ್ವಾತಂತ್ರ್ಯದ ಅರ್ಥವನೇ ಮರೆಯುತ
ಚೂರಾದೆ ಹಗೆಯ ಚುಚ್ಚಿರಿತಕೆ...

ನಿನ್ನ ನೋಡಿದರೆ ಸಾಕು ಈ ಮನಕೆ
ಉರಿಬಿಸಿಲಲಿ ತಂಗಾಳಿ ಬೀಸಿದಂತೆ
ಮರಳಿ ಬಾ ನೀನು ನಾನಿರುವ ಕಡೆಗೆ
ನನ್ನ ಹೃದಯದಂಗಳಕೆ ಸ್ಮಿತವಾಗಿ ಬಾ...

ಕಾಯುತಿರುವೆ ನಿನ್ನುತ್ತರಕೆ...


ಸೊಗಸಾದ ಆ ನನ್ನ ಕನಸೊಡೆದು ಚೂರಾದಾಗ
ಹೊಸದೊಂದು ಕನಸ ಕಲ್ಪಿಸಿದೆ ನಾನು
ಕನಸಿನ ಆ ಕಲ್ಪವೃಕ್ಷವನು ಕಡಿದು
ಆಹುತಿಗೊಳಿಸುವ ಪ್ರಯತ್ನವೇಕೆ ನಿನಗೆ?

ಭಾವನೆಗಳ ಹೂದೋಟದಲಿ ಬೆಳೆದ
ಬಾಡಬಯಸದ ಕುಸುಮವೇ ಆ ಕನಸು
ಕಂಬನಿಯ ತಾಪಕೆ ಧಗಧಗನೆ ಸುಟ್ಟು
ಭಸ್ಮವಾಗಿಸುವ ತೀವ್ರತೆಯದೇಕೆ ನಿನಗೆ?

ಹೃದಯದಿ ಕಾರಂಜಿಯಂತೆ ಚಿಮುಕಿದ
ಪವಿತ್ರ ಅನುರಾಗದ ಬಂಧವೇ ಆ ಕನಸು
ಆ ಕಾರಂಜಿಯ ಬುಡವನ್ನೇ ಅಹಂಭಾವದಿ
ಕಿತ್ತೊಗೆಯುವ ಸೊಕ್ಕಿನ ಭರವೇಕೆ ನಿನಗೆ?

ಚಿಗುರಿದ ಆ ಕಣ್ಮರೆಯಾದ ಕನಸಿಗೆ
ಅವಶ್ಯಕವು  ಪವಿತ್ರ ಪ್ರೀತಿಯ ಪೋಷಣೆ
ಬೆಳೆಯದದು ದುಃಖದ ಕಂಬನಿ ಎರೆದಾಗ
ತಿಳಿಯಲಾರದಂಥ ಅವಿವೇಕಿಯೇ ನೀನು???

ಕಾಯುತಿರುವೆ ನಿನ್ನುತ್ತರಕೆ...