Tuesday, August 7, 2018

ಸಮಯಕೊಂದು ಪ್ರಶ್ನೆ

ಓ ಸಮಯವೇ, ನೀನೇನು ಕ್ರೂರಿಯೇ?
ನನ್ನ ಸಂಯಮವ ಪರೀಕ್ಷಿಸುತ್ತಿರುವೆಯೇ?
ತಿಳಿ ನೀನಿಂದು, ಅಸಾಧ್ಯವು  ನಿನ್ನಿಂದ
ಸಹನೆಯ ಕೀಳಲು ನನ್ನಾತ್ಮಬಲದಿಂದ...

ಮಿತಿಯಿಹುದು ಒಂದು ಆತ್ಮದ ತಾಳಿಕೆಗೂ
ಮರ್ಯಾದೆಯಿಹುದು ಎಲ್ಲರ ಬಾಳ್ವಿಕೆಗೂ
ಅಗೌರವ ನೀಡದಿರು ನೀ ಒಂದು ಜೀವಕೆ
ಆ ಜೀವವೇ ಮುಂದೊಮ್ಮೆ ಆಸರೆ ಕೊಡಬಹುದು...

ಜೊತೆಗಿರುವವನ ಕೀಳಾಗಿ ತ್ಯಜಿಸಿದರೆ
ದೂರವಾದವನ ನಿರಂತರ ನೆನೆದತ್ತರೆ
ಬೆಲೆಕೊಡುವ ಆ ನಿನ್ನ ಜೊತೆಗಿರುವವನು
ನಿನಗಿತ್ತ ಗೌರವಕೆ ಬೆಲೆಯಿರದಂತಾಯ್ತೇ!

ಓ ಸಮಯವೇ, ನೀಡು ನೀ ಉತ್ತರವ
ನಿನಗೆ ಬಲಿಯಾಗಿ ದುಡುಕಿ ಪ್ರತಿಕ್ರಿಯಿಸಲೇ?
ನಿನ್ನ ಜೊತೆಗೋಡಿ ನಾ ನನ್ನ ಮೌಲ್ಯ ಕಡಿಯಲೇ?
ಮೂಕನಾಗಿದ್ದು ನಾ ಸ್ವತಃ ಅಗೌರವ ಪಡೆಯಲೇ?

ನೀನೇ  ಹೇಳು. ನಾನೇನು ಮಾಡಲಿ?

ಪ್ರೀತಿಯ ಪ್ರೀತಿ

ಪ್ರೀತಿಯ ಈ ಪ್ರೀತಿಯ ಪ್ರತಿಕ್ಷಣದಲೂ
ನಿನ್ನ ಆ ಮೃದು ಸ್ಪರ್ಶದ ಭಾವವು
ನನ್ನ ಈ ಸ್ವಪ್ನಸೀಮೆಯ ಮೀರುತ
ತುಂಬಿತು ಮನದಲಿ ಹಿತಕಂಪಿನಂತೆ.

ಮೋಹಮಾಯೆಯ ಮ್ರೃದುಭಾವಗಳು
ಲೀನವಾಯಿತು ಈ ನನ್ನ ಕಂಗಳಲಿ
ಕಂಗಳಾನಂದ ಕೊಡಗಳು ತುಂಬುತ
ಉಕ್ಕಿ ಹರಿಯಿತು ತಂಪು ನದಿಯಂತೆ.

ಈ ಜೀವದ ರಕ್ತ ಕಣಕಣಗಳು ಜಿನುಗಿ
ಕುಣಿದಾಡಿತು ಖುಷಿಯ ತೋರಣದಲಿ
ನಿನ್ನಪ್ಪುಗೆಯ ಬೆಸುಗೆ ತಾಗಿ ಬೆಸೆಯುತ
ತಲ್ಲಣಿಸಿ ಕುಣಿದವು ಮಳೆಗೆ ಗಿಡಗಳಂತೆ.

ಪ್ರೀತಿಯಾನಂದವೇ ಹೀಗೆ..ಪ್ರತಿಘಳಿಗೆಗೂ
ನೀಡುವುದು ಕನಸಿಗೆ ಮರುಜೀವವ..
ಪ್ರೀತಿಯನು ಪ್ರೀತಿಯಿಂದ ಪಡೆದರೆ
ಭೂಮಿ-ಆಗಸಕೆ ದೊರೆವ ಸೇತುವಂತೆ...

"ಪ್ರೀತಿಯೇ ಅಮರ...ಪ್ರೀತಿಯೇ ಮಧುರ.."