Monday, March 26, 2018

ಯಾಕೆ ದೂರಾದೆ "ನೀನು"

ಬೆಳಕ ಮರೆಯಲಿ ನೋಡುನೋಡುತ
ಮರೆಯಾಗಿ ಹೋದೆ ನೀನೆಲ್ಲಿ
ಇಂದೆಲ್ಲ ಮನಕೆ ತಂಪೆರಚುತ
ತಂದೆಯಾ ದುಃಖವ ಈ ನನ್ನ ಕಂಗಳಲಿ...

ಇಂದಿಗೂ ನಾ ನೋಡುತಿಹೆ ತವಕದಿ
ನೀ ಮರೆಯಾದ ಬೆಳಕಿನ ಹಾದಿಯೆಡೆಗೆ
ಮತ್ತೊಮ್ಮೆ ನಿನ್ನ ನೋಡುವ ಹಂಬಲದಿ
ಬೆಳಕು ಬರುವ ಮೂಲದೆಡೆಗೆ...

ಸಂದರ್ಭದ ಸುಳಿಯೊಳಗೆ ಸಿಲುಕಿ
ಹಿಂತೆಗೆದೆ ಮುಂದಿಟ್ಟ ದಿಟ್ಟನಡೆಯ
ಸ್ವಾತಂತ್ರ್ಯದ ಅರ್ಥವನೇ ಮರೆಯುತ
ಚೂರಾದೆ ಹಗೆಯ ಚುಚ್ಚಿರಿತಕೆ...

ನಿನ್ನ ನೋಡಿದರೆ ಸಾಕು ಈ ಮನಕೆ
ಉರಿಬಿಸಿಲಲಿ ತಂಗಾಳಿ ಬೀಸಿದಂತೆ
ಮರಳಿ ಬಾ ನೀನು ನಾನಿರುವ ಕಡೆಗೆ
ನನ್ನ ಹೃದಯದಂಗಳಕೆ ಸ್ಮಿತವಾಗಿ ಬಾ...

ಕಾಯುತಿರುವೆ ನಿನ್ನುತ್ತರಕೆ...


ಸೊಗಸಾದ ಆ ನನ್ನ ಕನಸೊಡೆದು ಚೂರಾದಾಗ
ಹೊಸದೊಂದು ಕನಸ ಕಲ್ಪಿಸಿದೆ ನಾನು
ಕನಸಿನ ಆ ಕಲ್ಪವೃಕ್ಷವನು ಕಡಿದು
ಆಹುತಿಗೊಳಿಸುವ ಪ್ರಯತ್ನವೇಕೆ ನಿನಗೆ?

ಭಾವನೆಗಳ ಹೂದೋಟದಲಿ ಬೆಳೆದ
ಬಾಡಬಯಸದ ಕುಸುಮವೇ ಆ ಕನಸು
ಕಂಬನಿಯ ತಾಪಕೆ ಧಗಧಗನೆ ಸುಟ್ಟು
ಭಸ್ಮವಾಗಿಸುವ ತೀವ್ರತೆಯದೇಕೆ ನಿನಗೆ?

ಹೃದಯದಿ ಕಾರಂಜಿಯಂತೆ ಚಿಮುಕಿದ
ಪವಿತ್ರ ಅನುರಾಗದ ಬಂಧವೇ ಆ ಕನಸು
ಆ ಕಾರಂಜಿಯ ಬುಡವನ್ನೇ ಅಹಂಭಾವದಿ
ಕಿತ್ತೊಗೆಯುವ ಸೊಕ್ಕಿನ ಭರವೇಕೆ ನಿನಗೆ?

ಚಿಗುರಿದ ಆ ಕಣ್ಮರೆಯಾದ ಕನಸಿಗೆ
ಅವಶ್ಯಕವು  ಪವಿತ್ರ ಪ್ರೀತಿಯ ಪೋಷಣೆ
ಬೆಳೆಯದದು ದುಃಖದ ಕಂಬನಿ ಎರೆದಾಗ
ತಿಳಿಯಲಾರದಂಥ ಅವಿವೇಕಿಯೇ ನೀನು???

ಕಾಯುತಿರುವೆ ನಿನ್ನುತ್ತರಕೆ...