Tuesday, April 28, 2015

ಚಿನ್ನದ ಬಣ್ಣದ ಹೂವು

ಹೂವೊಂದಿತ್ತು ಸುವರ್ಣ ರಂಗಿನದು...
ಹೆಮ್ಮೆಯಿಂದ ತಾ ಮೆರೆಯುತ್ತಿತ್ತು...
ತನಗೆ ಕೊನೆಯೇ ಇಲ್ಲವೆಂಬಂತೆ...
ತಾನು ಚಿರವಾಗಿ ಜೀವಿಸುವಂತೆ...

ನಗುನಗುತ ನಗು ಹಂಚುತ
ಖುಷಿಯಿಂದ ಎಲ್ಲರಲೂ ಬೆರೆಯುತ್ತಿತ್ತು...
ರವಿಯ ಬೆಳಕಿನ ಪ್ರಕಾಶಕೆ
ಹೊಳೆಯುತ ನಳನಳಿಸುತ್ತಿತ್ತು...

ತಂಪಾದ ಗಾಳಿಯ ಸ್ವಾದಿಸುತ...
ತನ್ನ ಸುಗಂಧವ ತಾ ಹಂಚುತ್ತಿತ್ತು...
ತನ್ನ ಸ್ವಾತಂತ್ರ್ಯದಲಿ ತಾನು ನಲಿಯುತ...
ಎಲ್ಲರಿಗೂ ಖುಷಿಯ ನೀಡುತ್ತಿತ್ತು...

ಈ ದಿನ ತಾನು ಬಾಡುತ, ಬೇಯುತ
ತನ್ನ ಅಸ್ತಿತ್ವವ ತಾ ಕಳೆಯುತಿದೆ
ಬಾಡಿದ ಹೂವಾದ ತಾನು ಏಕಾಂಗಿ
ದುಃಖಿತವಾಗಿ ಕಣ್ನೀರೆರಚಿ ಮುದುಡುತಿದೆ...

(೧೦-೦೩-೨೦೧೪)

ದಾರಿ ಕಾಣದಾಗಿದೆ...

ಕರಾಳ ರಾತ್ರಿಯ ಇರುಳು
ಕದಡಿ ಹೋಗಿದೆ ಮನದ ಕಡಲು
ಬೆಳಕಿರದ ನಾಡಿನ ಮಡಿಲು
ಭಯದಿಂದ ಕುಸಿದಿದೆ ನನ್ನೊಡಲು...

ಸ್ವತಂತ್ರವಾಗಿ ಹಾರಾಡುತ್ತಿದ್ದ ಹಕ್ಕಿಯು
ಗರಿಯ ತುಂಡರಿಸಿದಂತೆ ಒದ್ದಾಡುತಿದೆ
ಖುಷಿಯಿಂದ ಈಜುತ್ತಿದ್ದ ಮತ್ಸ್ಯವು
ನೀರಿಲ್ಲದ ದಡದಿ ವಿಲವಿಲನೆ ನರಳುತ್ತಿದೆ...

ಈ ಮನದ ನೋವನು ಇಂದು
ಅರಿತುಕೊಳ್ಳುವರಾರೂ ಇಲ್ಲ...
ಈ ಮನಕೆ ಮುದ ನೀಡುವ
ಜನರ ಸಂಪರ್ಕವೇ ಇಲ್ಲ...

ದಟ್ಟ ಕಾನನದ ನಡುವೆ ಬೆಳಕಿರದೆ
ದಾರಿ ಕಾಣದಂತೆ ಹುತಿಯಾಗಿದೆ
ಈ ಮನಸಿಗೆ ಸಾಂತ್ವನ ಬೇಕಿಂದು
ಸಿಗಲಾರದೆ ಮುದುಡಿದ ತಾವರೆಯಂತಾಗಿದೆ...

 (೧೦-೦೩-೨೦೧೪)