ಮುಕ್ತಿಯನರಸುತ ಹೊರಟಿದೆ ಜೀವ
ಈ ಲೋಕವು ತುಳುಕುವ ಪಾಪದ ಕೂಪ...
ಅಜ್ಞಾನ ಅಂಧಕಾರಗಳ ದುರ್ಭಾವ
ಅಂಟಿದಂತಿದೆ ಪ್ರತಿ ಜೀವಿಗಳಿಗಿದು ಶಾಪ...
ಅಹಂಕಾರ ದರ್ಪಗಳು ಶಿಖರದಿ ಮೆರೆದಿದೆ
ಪರೋಪಕಾರಿಗಳಿಗೆ ಬೆಲೆಯಿರದು ಇಲ್ಲಿ...
ಸದ್ವಿಚಾರಗಳ ತುಳಿದು ತುಂಡರಿಸಿ
ಮೆರೆಸುವರು ದುರ್ಭಾವದ ಜಾಲಗಳನಿಲ್ಲಿ...
ಸದ್ಚಿಂತನೆಯ ಮನವನು ಹೊಸೆದು
ನಿರ್ಜೀವ ಮಾಡಿ ಕುಣಿದಾಡುವರಿವರು
ಪರರಿಗೆ ಕೇಡ ಬಯಸದ ಹೃದಯವ
ಒಡೆದು ತುಳಿದು, ಉಗಿದು ಆಹುತಿಗೈವರಿವರು...
ಯಾಕೆ ಮಾನವೀಯತೆಯ ಮರೆತಿಹರು?
ಯಾಕೆ ಹೃದಯಹೀನರಂತಾಗಿಹರು???
ಇದಕೆಲ್ಲ ಕೊನೆ ಎನಿತೋ ನಾ ಕಾಣೆ..
ಜಗವ ಕಾಯುವಂತೆ ಶಿವನ ಆಟವೇನೋ ಅರಿಯಲಾರೆ...
No comments:
Post a Comment