Thursday, February 27, 2014

ಜೀವನ ಜಟಕಾಬಂಡಿ

ಸಾಗುತ್ತಲಿದೆ ಜಟಕಾಬಂಡಿ, ಮುದಿತನವೆಂಬ ಏಕಾಂತ ಮಾರ್ಗದಿ
ಬೆನ್ನೆಲುಬಾಗಿ ಯಾರೂ ಇಲ್ಲ ನೋಡಿ, ಶಕ್ತಿಯಿಲ್ಲದ ಇಂಥಾ ಸಮಯದಿ
ಬಂಡಿಗಾದರೂ ಮುಂದೋಡಲು ಬೇಕು, ಇತರ ಜೀವಿಗಳ ಸಹಾಯ
ಎನ್ನ ಈ ಮುದಿಜೀವಕೆ ಸಾಕು, ಒಬ್ಬ ಮನುಜನ ಆಧಾರ.

ಬಂಡಿ ಸಾಗಲು ಮುಂದೆ ಮುಂದೆ, ಸೇರುವುದೊಂದು ದೂರ ತೀರ
ಜೀವ ಸಾಗಲು ಮುಂದೆ ಮುಂದೆ, ಸೇರುವುದು ಸಾವಿನ ತೀರ
ತೀರ ಸೇರುವ ಮುನ್ನ ಬಂಡಿಯು, ಮುರಿಯುವುದು ಹಲವಾರು ಸಲ
ಮುಕ್ತಿ ಪಡೆಯುವ ಮುನ್ನ ಜೀವವು, ಅನುಭವಿಸುವುದು ಕೆಟ್ಟ ಕಾಲ

ಬಂಡಿಯನೋಡಿಸಲು ಸರಿದಾರಿಯಲಿ, ಬೇಕು ಚಾಲಕನ ಸಹಾಯ
ಅಂತೆಯೇ ನಮ್ಮ ಜೀವನವ ಸಾಗಿಸಲು, ಬೇಕು ಭಗವಂತನ ಅಭಯ
ಭಗವಂತನೊಬ್ಬನೇ ಆಗಿರುವನು, ನಮ್ಮೀ ಜೀವನದ ನಾವಿಕ
ದೇವನ ಅಭಯ ಹಸ್ತದಿಂದಲೇ, ಕಳೆಯುವುದು ನಮ್ಮ ಎಲ್ಲಾ ಭಯ

ಜೀವನವೊಂದು ದೊಡ್ಡ ಪಯಣ, ಜನನ ಮರಣದ ನಡುವಣ
ಸಾಗುವುಡದು ದೃಶ್ಯ ನೋಡುತ, ಕಷ್ಟ ಸುಖಗಳ ಮಿಶ್ರಣ
ಜೀವನದ ಬಂಡಿಯು ಸಾಗಲು ಮಾರ್ಗದಿ, ಮುದಿತನದನುಭವ ಪಡೆದು
ಸಹಾಯ ಬಯಸುತ ತಮ್ಮ ಮಕ್ಕಳಲಿ, ಕೊನೆಗೊಮ್ಮೆ ಆಗುವುದು ನಿರಾಧಾರ

ಜೀವನ ಬಂಡಿಗೆ ಬಂದಾಗ ಕೊನೆಗಾಲ, ಸಹಕರಿಸುವರೆಲ್ಲರೂ ಆ ಜೀವಕೆ
ಹೊಗಳುತ ಹೊಗಳುತ ದುಃಖಿತರಾಗುವರು, ಕೊನೆಗೊಂಡಾಗ ಆ ಜೀವದ ಕಾಲ.
ಜೀವನವೆಂಬ ಮಹಾಮಾರ್ಗದಿ ಸಿಗುವುದು, ಜನನ - ಜೀವನ - ಮರಣದ ಅನುಭವ
ನಡುವೆ ಎಲ್ಲರಿಗೂ ದೊರೆವುದು, ಸುಖ ದುಃಖಗಳ ಮಿಶ್ರಿತ ಕಾಲ

ಆದ್ದರಿಂದ ನಾವಿಂದು ಮಾಡಬೇಕು, ಸತ್ಕರ್ಮ - ಪರೋಪಕಾರ
ಮುದಿಜೀವಕೆ ನಾವು ಎಂದೆಂದಿಗೂ, ಆಗಿರಬೇಕೊಂದು ಆಧಾರ
ಇದರಿಂದ ಮಾತ್ರವೇ ದೊರೆಯುವುದು, ನಮಗೂ ಪರರ ಸಹಕಾರ
ನಮ್ಮ ಜೀವನದ ಬಂಡಿ ಸೇರಿದಾಗ, ಮುದಿತನವೆಂಬ ತೀರವ.

No comments:

Post a Comment