Sunday, March 2, 2014

"ಗುರು"ವಿನ ನಿಜವಾದ ಅರ್ಥ ಇಂದೆಲ್ಲಿ?

ಯಾಂತ್ರಿಕ ಜಗದಿ ಈಗ
ಅರಿತಿಹರು ಯಾರು
"ಗುರು"ವೆಂಬ ಪದದ ನಿಜಾರ್ಥ!
ನಂದುತಿರಲು ಇದೀಗ
ಸಂಸ್ಕೃತಿಯೆಂಬ ಸೊಡರು
ಮೆರೆಯುತಿರಲು ಮನದಿ ಸ್ವಾರ್ಥ!!

ಜೀವನವೇ ಆಗಿರಲು ಇಂದು
ವ್ಯಾವಹಾರಿಕ ರೀತಿಯದು
ನಶಿಸುತಿರಲಂದಿನ ಜೀವನ ವೈಖರಿ!
ಕಾಣಲಾರದು ಇನ್ನೆಂದಿಗೂ
ಶ್ರೇಷ್ಠವಾದ ಗುರುಕುಲವದು
ನಾಶವಾಗಿಹುದೆಂಬುದೊಂದು ಖಾತರಿ!!

ವಿದ್ಯಾ ಬುದ್ಧಿಯ ದಾನ ನೀಡಿದ
ಶ್ರೇಷ್ಠ ಪರಂಪರೆಯ ತಿಳಿಸಿದ
ಗುರುವೇ ನಿಮಗೆ ಕೋಟಿ ನಮನ!
ಅತ್ಯುತ್ತಮ ಸಂಸ್ಕಾರ ಹೊಂದಿದ
ಅಂದಿನ ಗುರುಕುಲ ಕಾಲದ
ಶ್ರೇಷ್ಠತೆಗೆ ಇಂದೆಲ್ಲಿದೆ  ಗಮನ??

ಬ್ರಹ್ಮ ವಿಷ್ಣು ಮಹೇಶ್ವರರ
ಶ್ರೇಷ್ಠತೆಗಿಂತಲೂ ಮಿಗಿಲಾದ
ಸ್ಥಾನವದು ಸೇರಿತ್ತಂದು ಗುರುವಿಗೆ!
ಸಂಬಂಧವದು ಗುರುಶಿಷ್ಯರ
ಸಕಲ ಲೋಕಕೂ ಪ್ರಿಯವಾದ
ಗೌರವವು ಸೇರಿತ್ತು ಪ್ರತಿಯೊಬ್ಬ ಗುರುವಿಗೆ!!

ಸ್ವಾರ್ಥವನ್ನು ತೊರೆದಿದ್ದು
ಷಡ್ವೈರಿಗಳ ನಶಿಸಿದ್ದು
ಸ್ಥಿರಚಿತ್ತರಾಗಿದ್ದರು ಗುರುಗಳಂದು!
ಸಂಪಾದನೆಯೊಂದೇ ಗುರಿಯಾಗಿದ್ದು
ವಿದ್ಯಾದಾನವ ಮರೆತಿದ್ದು
ಹೆಚ್ಚುತ್ತಿರುವರು ಸ್ವಾರ್ಥ ಚಿತ್ತರಿಂದು!!

ಹೀಗಿರಲು ಶ್ರೇಷ್ಠರಾರೆಂದು
ಹುಡುಕುವುದೆಂತು ನಾನರಿಯೆ
ಉತ್ತಮ ಗುರುವೇ ಕಡಿಮೆ ಏಕಿಂದು??
ಗುರುಗಳಲಿ ಗೌರವವೆಂದು
ಯಾವ ಶಿಷ್ಯರಲೂ ಕಾಣದಿರೆ
ಶಿಷ್ಯರಿಗೇಕೆ ಬೇಕು ಗುರುಗಳಿಂದು???

ನೀಡಬೇಕು ಪ್ರತಿಯೊಬ್ಬರೂ
ಗುರುವಿಗೊಂದು ಗೌರವ
ಆಗ ತಾನೇ ಫಲಿಸುವುದು ಕಲಿತ ವಿದ್ಯೆ!
ಶಿಷ್ಯರೇಕಿಂದು ಮರೆತಿರುವರು
ಶಿಷ್ಯರಿಗಿರಬೇಕಾದ ಗುಣವ
ಅಗತ್ಯವಾಗಿರುವ ವಿನಯ ವಿಧೇಯತೆ!!

ಗುರುಗಳೆಂತಹವರಾದರೂ
ಶಿಷ್ಯರಿಗಿರಬೇಕು ಅವರಲಿ
ಗೌರವ, ವಿನಯ, ವಿಧೇಯತೆ, ಭಕ್ತಿ!
ನೀಡುತಿರುವ ವಿದ್ಯೆಗಳನು
ಗುರುವಿನ ಆಶೀರ್ವಾದದಿಂದಲಿ
ಆರ್ಜಿಸಿ ನಾವಾಗಬೇಕು ಜಗ ಬೆಳಗುವ ಶಕ್ತಿ!!

ಆಗ ನೀಡಬೇಕಿಲ್ಲ ನಾವು
ಹಿಂದಿನವರು ನೀಡುತ್ತಿದ್ದಂತೆ
ಗುರುಗಳಿಗೆಂದು ಇಂದು "ಗುರುದಕ್ಷಿಣೆ"!
ಗುರುಗಳ ಶಿಕ್ಷಣದಿಂದಲಿ ನಾವು
ಜಗವ ಬೆಳಗುತ್ತಿದ್ದಂತೆ
ಪಡೆದಂತಾಗುವುದು ಗುರುವಿಗೆ ಆ "ದಕ್ಷಿಣೆ"!!

ಹಾಗಾಗಿ ಇಂದು ಶಿಷ್ಯರೆಲ್ಲರೂ
ನೀಡಬೇಕು ಗುರುವಿಗೆ ಗೌರವ
ಶ್ರದ್ಧೆ,  ಭಕ್ತಿ,  ವಿನಯ ಭಾವದಲ್ಲಿ!
ಆಗ ಮಾತ್ರ ನೀಡಿದಂತಾಗುವುದು
"ಗುರು"ವೆಂಬ ಪದಕ್ಕೆ ಅರ್ಥವ
ಇಂದಿನ ವ್ಯಾವಹಾರಿಕ ಜೀವನದಲ್ಲಿ!!

1 comment: