✍🏻 ದೀಪಲಕ್ಷ್ಮಿ ಭಟ್, ಮಂಗಳೂರು
“ಕ್ಷಮಿಸಿ ವೈದೇಹಿಯವರೇ… ಈ ಬಾರಿಯೂ ಮಗುವಿನ ಬೆಳವಣಿಗೆ ಹಿಂದಿನಂತೆಯೇ ನಿಂತಿದೆ.”
ವೈದ್ಯರ ತುಟಿಗಳು ಇನ್ನೂ ಏನನ್ನೋ ಹೇಳುತ್ತಿದ್ದವು. ಆದರೆ ಆ ಮಾತಿನ ನಂತರದ ಯಾವ ಶಬ್ದವೂ ವೈದೇಹಿಯ ಕಿವಿಗೆ ತಲುಪಲಿಲ್ಲ. ಎದುರಿನ ಪರದೆಯ ಮೇಲೆ ಕಾಣುತ್ತಿದ್ದ ಪುಟ್ಟ ಕಪ್ಪು ವೃತ್ತವನ್ನು ಅವಳು ಕಣ್ಣು ಮಿಟುಕಿಸದೆ ನೋಡುತ್ತಿದ್ದಳು. ಹದಿನೈದು ದಿನಗಳ ಹಿಂದೆ ಅದೇ ಪರದೆಯ ಮುಂದೆ ಕುಳಿತು, “ಇದು ನಿಮ್ಮ ಮಗುವಿನ ಚೀಲ… ಮುಂದಿನ ಸಲ ಹೃದಯಬಡಿತ ಕಾಣಬಹುದು,” ಎಂದು ವೈದ್ಯರು ಹೇಳಿದಾಗ ಅವಳೊಳಗೆ ಸಾವಿರ ದೀಪಗಳು ಹೊತ್ತಿಕೊಂಡಿದ್ದವು. ಈಗ ಅದೇ ಪರದೆ ಬೆಳಕಿದ್ದರೂ ಕತ್ತಲಾಗಿ ಕಾಣುತ್ತಿತ್ತು.
“ಮತ್ತೊಮ್ಮೆ ಪರೀಕ್ಷಿಸಿ ಡಾಕ್ಟರ್… ಬಹುಶಃ ದಿನದ ಲೆಕ್ಕ ತಪ್ಪಿರಬಹುದು,” ಎಂದು ಪಕ್ಕದಲ್ಲಿದ್ದ ಆದಿತ್ಯ ಕೇಳಿದ. ಅವನ ಧ್ವನಿಯಲ್ಲಿ ಭರವಸೆ ಇರಲಿಲ್ಲ; ಭರವಸೆಯನ್ನು ಬಲವಂತವಾಗಿ ಹಿಡಿದುಕೊಂಡವನ ಆಯಾಸವಿತ್ತು.
ವೈದ್ಯರು ಮೌನವಾಗಿ ತಲೆ ಆಡಿಸಿದರು. “ಎರಡು ಬಾರಿ ನೋಡಿದ್ದೇವೆ. ಬೆಳವಣಿಗೆ ಆರು ವಾರ ಎರಡು ದಿನಗಳಲ್ಲೇ ನಿಂತಿದೆ. ಹೃದಯಬಡಿತ ಕಾಣುತ್ತಿಲ್ಲ.”
ವೈದೇಹಿ ತನ್ನ ಹೊಟ್ಟೆಯ ಮೇಲೆ ಕೈ ಇಟ್ಟುಕೊಂಡಳು. ಅಲ್ಲಿ ನೋವಿರಲಿಲ್ಲ. ರಕ್ತಸ್ರಾವವೂ ಇರಲಿಲ್ಲ. ಬೆಳಿಗ್ಗೆ ತನಕ ವಾಂತಿಯ ಅನುಭವವೂ ಇತ್ತು. ಇಷ್ಟೆಲ್ಲ ಲಕ್ಷಣಗಳ ನಡುವೆ ತನ್ನೊಳಗಿನ ಜೀವ ಮೌನವಾಗಿ ಹೊರಟುಹೋಗಿದೆ ಎನ್ನುವುದನ್ನು ಅವಳ ಮನಸ್ಸು ಒಪ್ಪಿಕೊಳ್ಳಲಿಲ್ಲ.
“ಅಂದರೆ… ನನಗೆ ಬೆಳಿಗ್ಗೆ ಬಿದ್ದ ಕನಸಿನಂತೆ, ಈ ಸಲ ಕೂಡ ಹಿಂದಿನ ಬಾರಿಯಂತೆಯೇ ಆಯಿತೇ??” ಅವಳು ಕೇಳಿದ ಪ್ರಶ್ನೆಗೆ ವೈದ್ಯರ ಕಣ್ಣೇ ಉತ್ತರಿಸಿತು. ಅಂದು ಬೆಳಿಗ್ಗೆ ತಾನೇ ಬಿದ್ದ ಕನಸಿನಿಂದ ವಿಚಲಿತಳಾಗಿದ್ದ ವೈದೇಹಿ, ಭಯದಿಂದಲೇ ವೈದ್ಯರ ಕೊಠಡಿಯಲ್ಲಿ ಪರೀಕ್ಷೆಗೆ ಕುಳಿತಿದ್ದಳು. ಆ ಕನಸಿನಂತೆಯೇ ಇಲ್ಲಿ ನಡೆದಾಗೆ, ಅವಳ ಜೀವವೇ ಕೈ ಬಿಟ್ಟಂತಾಗಿತ್ತು.
ಆಸ್ಪತ್ರೆಯಿಂದ ಹೊರಬಂದಾಗ ಜೋರಾಗಿ ಮಳೆ ಸುರಿಯುತ್ತಿತ್ತು. ಜನರು ಛತ್ರಿ ಹಿಡಿದು ಓಡುತ್ತಿದ್ದರು. ವಾಹನಗಳ ಬೆಳಕು ನೀರಿನ ಮೇಲೆ ಮುರಿದು ಬಣ್ಣಬಣ್ಣವಾಗಿ ಹರಡುತ್ತಿತ್ತು. ಆದಿತ್ಯ ಕಾರನ್ನು ತರಲು ಹೋದ. ವೈದೇಹಿ ಆಸ್ಪತ್ರೆಯ ಮೆಟ್ಟಿಲ ಮೇಲೆ ಒಬ್ಬಳೇ ನಿಂತಳು. ಅವಳ ಕಣ್ಣೀರು ಮಳೆಯೊಂದಿಗೆ ಬೆರೆತದ್ದರಿಂದ ಯಾರಿಗೂ ಕಾಣಿಸಲಿಲ್ಲ.
ಅಷ್ಟರಲ್ಲಿ ಎಲ್ಲಿಂದಲೋ ಪರಿಚಿತವಾದ ಒಂದು ಧ್ವನಿ ಅವಳಿಗೆ ಕೇಳಿಸಿತು.
“ವೈದೇಹಿ… ಇದು ನಿನ್ನ ಕಥೆಯ ಕೊನೆಯ ಪುಟವಲ್ಲ. ಈ ಸಮಯವೂ ಕಳೆದುಹೋಗುತ್ತದೆ. ನಾನು ಇಲ್ಲೇ ಇದ್ದೇನೆ.”
ಅವಳು ಬೆಚ್ಚಿ ಹಿಂದೆ ತಿರುಗಿದಳು. ಯಾರೂ ಇರಲಿಲ್ಲ. ಹಳದಿ ಬೀದಿದೀಪದ ಕೆಳಗೆ ಮಳೆ ಮಾತ್ರ ನಿಂತಿತ್ತು. ಆ ಧ್ವನಿ ಅವಳಿಗೆ ಹೊಸದಲ್ಲ. ಜೀವನದಲ್ಲಿ ತುಂಬಾ ಒಂಟಿಯಾಗಿದ್ದ ಕೆಲವು ಕ್ಷಣಗಳಲ್ಲಿ, ಎಲ್ಲರ ಮುಂದೆ ನಗುತ್ತಾ ಒಳಗಿನಿಂದ ಕುಸಿದ ಕೆಲವು ದಿನಗಳಲ್ಲಿ, ಅದೇ ಧ್ವನಿ ಅವಳನ್ನು ಹೆಸರಿಟ್ಟು ಕರೆಯುತ್ತಿತ್ತು. ಅದು ಯಾರ ಧ್ವನಿ ಎಂಬುದನ್ನು ಅವಳು ಎಂದಿಗೂ ಹುಡುಕಿರಲಿಲ್ಲ. ಹುಡುಕಿದರೆ ಅದರ ಸಾಂತ್ವನವೇ ಕಳೆದುಹೋಗಬಹುದೆಂಬ ಭಯವಿತ್ತು.
ಕಾರಿನಲ್ಲಿ ಮನೆಗೆ ಮರಳುವಾಗ ಆದಿತ್ಯ ಎರಡು ಬಾರಿ ಮಾತು ಆರಂಭಿಸಿ ನಿಲ್ಲಿಸಿದ. ಕೊನೆಗೆ, “ಮುಂದೇನು ಮಾಡಬೇಕು ಎಂದು ವೈದ್ಯರು ಹೇಳಿದ್ದನ್ನು ಕೇಳಿಸಿಕೊಂಡಿದ್ದೀಯಾ?” ಎಂದ.
“ಕೇಳಿಸಿಕೊಂಡಿದ್ದೇನೆ.”
“ನಾಳೆ ಔಷಧಿ ತೆಗೆದುಕೊಳ್ಳಬೇಕಂತೆ.”
“ಗೊತ್ತು.”
“ನೀನು ಅಳಬೇಕಿದ್ದರೆ ಅಳು ವೈದೇಹಿ. ಹೀಗೆ ಕಿಟಕಿಯಿಂದ ಹೊರಗೆ ನೋಡುತ್ತಾ ಕುಳಿತುಕೊಳ್ಳಬೇಡ.”
ಅವಳು ನಿಧಾನವಾಗಿ ಅವನತ್ತ ತಿರುಗಿದಳು. “ಅಳುವುದಕ್ಕೂ ಶಕ್ತಿ ಬೇಕು ಆದಿತ್ಯ. ಈಗ ನನ್ನಲ್ಲಿ ಅಷ್ಟು ಶಕ್ತಿಯೂ ಇಲ್ಲ.”
ಆದಿತ್ಯ ಸ್ಟೀರಿಂಗ್ ಮೇಲೆ ಬೆರಳು ಬಿಗಿಗೊಳಿಸಿದ. ಅವನು ಕೆಟ್ಟವನಲ್ಲ. ಆದರೆ ದುಃಖದ ಎದುರು ಯಾವ ಮಾತು ಬಳಸಬೇಕು ಎಂದು ತಿಳಿಯದವನು. ಮುರಿದ ಕುರ್ಚಿಯನ್ನು ಸರಿಪಡಿಸಬಲ್ಲ, ವ್ಯವಹಾರದ ನಷ್ಟಕ್ಕೆ ಲೆಕ್ಕ ಹಾಕಬಲ್ಲ, ಕಚೇರಿಯ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಬಲ್ಲ. ಆದರೆ ಹೆಂಡತಿಯ ಮನಸ್ಸು ಮುರಿದಾಗ ಯಾವ ಸಾಧನ ಬಳಸಬೇಕು ಎನ್ನುವುದನ್ನು ಯಾವ ಪುಸ್ತಕವೂ ಅವನಿಗೆ ಕಲಿಸಿರಲಿಲ್ಲ.
ಆ ರಾತ್ರಿ ವೈದೇಹಿಗೆ ನಿದ್ರೆ ಬರಲಿಲ್ಲ. ಕಿಟಕಿಯ ಮೇಲೆ ಮಳೆ ಬೆರಳುಗಳಿಂದ ತಟ್ಟಿದಂತೆ ಸದ್ದು ಮಾಡುತ್ತಿತ್ತು. ಆ ಸದ್ದಿನೊಳಗೆ ಅವಳ ಬಾಲ್ಯ ನಿಧಾನವಾಗಿ ಬಾಗಿಲು ತೆರೆದಿತು.
***
ಮಲೆನಾಡಿನ ಅಂಚಿನಲ್ಲಿದ್ದ ಪುಟ್ಟ ಊರು ಮಲ್ಲಿಗೆಪುರ. ಹೆಸರಿನಲ್ಲಿ ಮಲ್ಲಿಗೆಯಿದ್ದರೂ ಅವರ ಮನೆಯ ಹಿತ್ತಲಲ್ಲಿ ಬೆಳೆದದ್ದು ಎರಡು ಮೆಣಸಿನ ಗಿಡ ಮತ್ತು ಸದಾ ಒಣಗಲು ಹೊರಟ ತುಳಸಿ ಮಾತ್ರ. ವೈದೇಹಿಯ ತಂದೆ ಶ್ರೀಧರ ಸಹಕಾರಿ ಬ್ಯಾಂಕಿನಲ್ಲಿ ತಾತ್ಕಾಲಿಕ ನೌಕರ. ತಿಂಗಳ ಕೊನೆಯಲ್ಲಿ ಸಂಬಳ ಸಿಗುತ್ತದೆಯೋ ಇಲ್ಲವೋ ಎಂಬುದಕ್ಕಿಂತ, ಸಿಕ್ಕ ಸಂಬಳ ತಿಂಗಳ ಮಧ್ಯದವರೆಗೆ ಬರುತ್ತದೆಯೋ ಇಲ್ಲವೋ ಎಂಬುದೇ ಮನೆಯ ದೊಡ್ಡ ಚಿಂತೆ. ತಾಯಿ ಕಮಲಾ ಸೀರೆಗಳಿಗೆ ಫಾಲ್ ಹೊಲಿದು, ನೆರೆಮನೆಯ ಮಕ್ಕಳಿಗೆ ಪಾಠ ಹೇಳಿ ಮನೆಯ ಖರ್ಚಿಗೆ ಕೈಜೋಡಿಸುತ್ತಿದ್ದಳು.
ವೈದೇಹಿ ಮನೆಯ ಹಿರಿಯ ಮಗಳು. ಅವಳ ನಂತರ ತಮ್ಮ ವಿನಯ. ಬಾಲ್ಯದಿಂದಲೇ ಅವಳಿಗೆ ಎರಡು ವಿಚಿತ್ರ ಅಭ್ಯಾಸಗಳಿದ್ದವು. ಒಂದನೆಯದು—ಏನೇ ನೋವಾದರೂ ಮೊದಲು ನಗುವುದು. ಎರಡನೆಯದು—ಹಳೆಯ ಪುಸ್ತಕಗಳ ಖಾಲಿ ಪುಟಗಳಲ್ಲಿ ತನ್ನದೇ ಶಾಲೆಗಳನ್ನು ಚಿತ್ರಿಸುವುದು. ಅವಳ ಚಿತ್ರದಲ್ಲಿದ್ದ ಶಾಲೆಗೆ ದೊಡ್ಡ ಗೇಟು ಇರಲಿಲ್ಲ. ಶುಲ್ಕ ಕಟ್ಟದ ಮಕ್ಕಳನ್ನು ಹೊರಗೆ ನಿಲ್ಲಿಸುವ ಶಿಕ್ಷಕರಿರಲಿಲ್ಲ. ಒಂದು ಕೊಠಡಿಯಲ್ಲಿ ಗಣಿತ, ಇನ್ನೊಂದರಲ್ಲಿ ಸಂಗೀತ, ಮೂರನೆಯದರಲ್ಲಿ ಚಿತ್ರಕಲೆ. ಮಧ್ಯದಲ್ಲಿ ದೊಡ್ಡ ಮರವೊಂದು; ಅದರ ಕೆಳಗೆ ದುಃಖವಾದಾಗ ಕುಳಿತುಕೊಳ್ಳಲು ಜಾಗ.
“ಇದು ಯಾವ ಶಾಲೆ?” ಎಂದು ವಿನಯ ಕೇಳುತ್ತಿದ್ದ.
“ನನ್ನ ಶಾಲೆ.”
“ನೀನೇ ಟೀಚರಾ?”
“ನಾನೇ ಟೀಚರ್, ನಾನೇ ಪ್ರಿನ್ಸಿಪಾಲ್, ನಾನೇ ಶುಲ್ಕ ಕೇಳದ ಕ್ಯಾಶಿಯರ್.”
“ಹಾಗಾದರೆ ನಾನೇನು?”
“ನೀನು ಪ್ರತಿದಿನ ತಡವಾಗಿ ಬರುವ ವಿದ್ಯಾರ್ಥಿ.” ಎಂದು ಅವನ ಕಾಲೆಳೆಯುತ್ತಿದ್ದಳು.
ವಿನಯ ಮುಖ ಉಬ್ಬಿಸಿಕೊಂಡರೆ ಅವಳು ತನ್ನ ಪೆನ್ಸಿಲ್ ಅವನಿಗೆ ಕೊಟ್ಟು ಸಮಾಧಾನ ಮಾಡುತ್ತಿದ್ದಳು.
ಓದಿನಲ್ಲಿ ವೈದೇಹಿ ಸದಾ ಮುಂದು. ಆದರೆ ಅವಳ ಬುದ್ಧಿವಂತಿಕೆಗೆ ಮನೆಯಲ್ಲಿ ವಿಶೇಷ ಮೇಜು ಸಿಗಲಿಲ್ಲ. ಅಡುಗೆಮನೆಯ ಹೊಗೆ ಕಡಿಮೆಯಾದ ನಂತರದ ನೆಲವೇ ಅವಳ ಓದುವ ಜಾಗ. ವಿದ್ಯುತ್ ಹೋದ ರಾತ್ರಿಗಳಲ್ಲಿ ಸೀಮೆಎಣ್ಣೆಯ ದೀಪದ ಬಳಿ ಕುಳಿತು ಓದುತ್ತಿದ್ದಳು. ಕಮಲಾ ಕೆಲವೊಮ್ಮೆ, “ಕಣ್ಣು ಹಾಳಾಗುತ್ತದೆ ಮಗಳೇ, ಮಲಗು,” ಎಂದರೆ, “ಕಣ್ಣು ಮುಚ್ಚಿದರೆ ಕನಸು ಕಾಣುತ್ತದೆ ಅಮ್ಮಾ. ತೆರೆದಿಟ್ಟರೆ ಅದನ್ನು ನನಸು ಮಾಡಬಹುದು,” ಎಂದು ನಗುತ್ತಿದ್ದಳು.
***
ಪದವಿಪೂರ್ವ ಶಿಕ್ಷಣಕ್ಕೆ ಪಕ್ಕದ ಪಟ್ಟಣಕ್ಕೆ ಹೋಗಬೇಕಾಯಿತು. ಪ್ರತಿದಿನ ಎರಡು ಬಸ್ಸು ಬದಲಾಯಿಸಬೇಕಿತ್ತು. ಮೊದಲ ಬಸ್ಸಿನಲ್ಲಿ ಕಿಟಕಿಯ ಬಳಿ ಕುಳಿತು ಬೆಟ್ಟಗಳ ಮೇಲೆ ಇಳಿಯುತ್ತಿದ್ದ ಮಂಜನ್ನು ನೋಡುವುದು ಅವಳಿಗೆ ಇಷ್ಟ. ಆ ದಿನಗಳಲ್ಲಿ ಅವಳ ಮನಸ್ಸಿನಲ್ಲಿ ಮೊದಲ ಬಾರಿಗೆ ಅಸ್ಪಷ್ಟವಾದ ಒಂದು ಸ್ನೇಹದ ನೆರಳು ಮೂಡಿತ್ತು. ಅದಕ್ಕೆ ಹೆಸರು ಕೊಡುವಷ್ಟು ಧೈರ್ಯವೂ ಇರಲಿಲ್ಲ; ಮರೆತುಬಿಡುವಷ್ಟು ಸಾಮಾನ್ಯವೂ ಇರಲಿಲ್ಲ. ಗ್ರಂಥಾಲಯದ ಕಿಟಕಿಯ ಬಳಿ ಬಿದ್ದ ಮಳೆಯ ಹನಿಗಳು, ಹಳೆಯ ಹಾಡಿನ ಎರಡು ಸಾಲುಗಳು, ಪುಸ್ತಕದ ನಡುವೆ ಸಿಕ್ಕ ನೀಲಿ ಹೂವು—ಇಷ್ಟೇ ಅದರ ಗುರುತುಗಳು.
ಆ ನೆರಳು ಅವಳ ಬದುಕಿನಲ್ಲಿ ಎಂದೂ ಕೈ ಹಿಡಿದು ನಡೆದಿಲ್ಲ. ಸಮಯವು ಅವರಿಬ್ಬರ ದಾರಿಗಳನ್ನು ಬೇರೆಬೇರೆ ಕಡೆಗೆ ಕರೆದೊಯ್ದಿತು. ಆದರೆ ವೈದೇಹಿ ತುಂಬಾ ದುಃಖದಲ್ಲಿದ್ದಾಗ, ಆ ದಿನಗಳ ನಿರಪರಾಧ ಭರವಸೆಯೇ ಒಂದು ಧ್ವನಿಯಾಗಿ ಮರಳುತ್ತಿತ್ತು—“ಚಿಂತೆ ಮಾಡಬೇಡ… ಈ ಸಮಯವೂ ಕಳೆದುಹೋಗುತ್ತದೆ.” ವರ್ಷಗಳು ಕಳೆದಂತೆ ಅದು ಯಾರೊಬ್ಬರ ಧ್ವನಿಯೂ ಅಲ್ಲದೆ, ಅವಳೊಳಗೆ ಉಳಿದ ಸುರಕ್ಷಿತ ಜಾಗದ ಧ್ವನಿಯಾಯಿತು.
ಪದವಿ ಮುಗಿದ ನಂತರ ವೈದೇಹಿ ನಗರಕ್ಕೆ ಬಂದು ಬ್ಯಾಂಕೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಳು. ಮೊದಲ ಸಂಬಳ ಬಂದ ದಿನ ತಂದೆಗೆ ಹೊಸ ಚಪ್ಪಲಿ, ತಾಯಿಗೆ ಹಸಿರು ಸೀರೆ ಮತ್ತು ವಿನಯನಿಗೆ ಕೈಗಡಿಯಾರ ತಂದಳು. ತನಗಾಗಿ ಕೊಂಡದ್ದು ಇಪ್ಪತ್ತು ರೂಪಾಯಿಯ ಕಪ್ಪು ಪೆನ್ ಮಾತ್ರ.
“ನಿನಗೆ ಏನೂ ತೆಗೆದುಕೊಳ್ಳಲಿಲ್ಲವೇ?” ಎಂದು ಕಮಲಾ ಕೇಳಿದಳು.
“ತೆಗೆದುಕೊಂಡಿದ್ದೇನೆ ಅಮ್ಮಾ. ಇನ್ನು ಮುಂದೆ ತಿಂಗಳ ಕೊನೆಯಲ್ಲಿ ಅಪ್ಪನ ಮುಖದಲ್ಲಿ ಕಾಣುವ ಭಯ ಸ್ವಲ್ಪ ಕಡಿಮೆಯಾಗುತ್ತದೆ. ಅದಕ್ಕಿಂತ ದೊಡ್ಡ ವಸ್ತು ಯಾವ ಅಂಗಡಿಯಲ್ಲಿ ಸಿಗುತ್ತದೆ?”
ಆಫೀಸು ಕೆಲಸದಲ್ಲಿ ಅವಳು ಬೇಗ ಹೆಸರು ಗಳಿಸಿದಳು. ಲೆಕ್ಕದಲ್ಲಿ ತಪ್ಪಿಲ್ಲ, ಗ್ರಾಹಕರೊಂದಿಗೆ ಮಾತಿನಲ್ಲಿ ಅಹಂಕಾರವಿಲ್ಲ. ಆದರೆ ಅವಳೊಳಗಿನ ಶಾಲೆಯ ಕನಸು ಮೌನವಾಗಲಿಲ್ಲ. ಕಚೇರಿಯಿಂದ ಬಂದ ನಂತರ ಬಡಾವಣೆಯ ಮಕ್ಕಳಿಗೆ ಉಚಿತವಾಗಿ ಪಾಠ ಹೇಳುತ್ತಿದ್ದಳು. ಭಾನುವಾರಗಳಲ್ಲಿ ಮಹಿಳೆಯರಿಗೆ ಬ್ಯಾಂಕ್ ಖಾತೆ, ಉಳಿತಾಯ ಮತ್ತು ಸಾಲದ ಬಗ್ಗೆ ತಿಳಿಸುತ್ತಿದ್ದಳು.
***
ಆದಿತ್ಯನನ್ನು ಅವಳು ನೋಡಿದ್ದು ಒಂದು ಉದ್ಯಮ ತರಬೇತಿ ಕಾರ್ಯಕ್ರಮದಲ್ಲಿ. ಎತ್ತರದ ಧ್ವನಿಯಲ್ಲಿ ಮಾತನಾಡದ, ಆದರೆ ಹೇಳಬೇಕಾದದ್ದನ್ನು ನೇರವಾಗಿ ಹೇಳುವ ಸ್ವಭಾವ. ಅವನಿಗೆ ಯಂತ್ರಗಳು, ಕ್ಯಾಮೆರಾಗಳು, ತಂತಿಗಳು ಮತ್ತು ವ್ಯಾಪಾರದ ಯೋಜನೆಗಳ ಮೇಲೆ ಪ್ರೀತಿ. ವೈದೇಹಿಗೆ ಪುಸ್ತಕಗಳು, ಮಕ್ಕಳು, ಬಣ್ಣಗಳು ಮತ್ತು ಪದಗಳ ಮೇಲೆ ಪ್ರೀತಿ. ಇಬ್ಬರ ಪ್ರಪಂಚ ಬೇರೆ ಇದ್ದರೂ, ಬದುಕನ್ನು ಸ್ವಂತ ಕೈಯಿಂದ ಕಟ್ಟಿಕೊಳ್ಳಬೇಕು ಎಂಬ ಹಠ ಒಂದೇ ಆಗಿತ್ತು.
ಮದುವೆಯ ಮಾತು ಬಂದಾಗ ಆದಿತ್ಯ ಮೊದಲ ಭೇಟಿಯಲ್ಲೇ, “ನಾನು ಕವಿತೆ ಹೇಳುವ ಗಂಡನಾಗಲಾರೆ. ಆದರೆ ಸಂಕಷ್ಟ ಬಂದರೆ ಓಡಿ ಹೋಗುವುದಿಲ್ಲ,” ಎಂದಿದ್ದ.
ವೈದೇಹಿ ನಕ್ಕು, “ನನಗೆ ಪ್ರತಿದಿನ ಕವಿತೆ ಬೇಡ. ಆದರೆ ನಾನು ಮೌನವಾಗಿದ್ದಾಗಲೂ ಏನೋ ಹೇಳುತ್ತಿದ್ದೇನೆ ಎಂಬುದು ಅರ್ಥವಾದರೆ ಸಾಕು,” ಎಂದಳು.
“ಮೌನವನ್ನು ಅರ್ಥಮಾಡಿಕೊಳ್ಳಲು ತರಬೇತಿ ಇದೆಯಾ?”
“ಇಲ್ಲ. ಅದಕ್ಕೇ ಮದುವೆ ಬಹುಶಃ ಜೀವಮಾನಪೂರ್ತಿ ನಡೆಯುವ ತರಬೇತಿ.”
ಇಬ್ಬರೂ ನಕ್ಕಿದ್ದರು. ಆ ನಗುವಿನೊಳಗೆ ಭವಿಷ್ಯದ ಎಷ್ಟು ಕಠಿಣ ಪಾಠಗಳಿವೆ ಎಂಬುದು ಆಗ ಯಾರಿಗೂ ಗೊತ್ತಿರಲಿಲ್ಲ.
ಮದುವೆಯ ಮೊದಲ ವರ್ಷಗಳು ಓಡುತ್ತಿರುವ ರೈಲಿನಂತೆ ಕಳೆದವು. ಆದಿತ್ಯ ತನ್ನ ಭದ್ರತಾ ಉಪಕರಣಗಳ ವ್ಯವಹಾರವನ್ನು ಬೆಳೆಸುತ್ತಿದ್ದ. ವೈದೇಹಿ ಕೆಲಸ ಮತ್ತು ಮನೆಯನ್ನು ಸಮತೋಲನಗೊಳಿಸುತ್ತಿದ್ದಳು. ಹಣ ಹೆಚ್ಚಾಗಿರಲಿಲ್ಲ; ಕನಸುಗಳು ಮಾತ್ರ ದೊಡ್ಡವು. ಕೆಲ ತಿಂಗಳು ಕಚೇರಿಯ ಬಾಡಿಗೆ ಕಟ್ಟಿದರೆ ಮನೆಯ ಖರ್ಚು ಕಡಿಮೆಯಾಗುತ್ತಿತ್ತು. ಕೆಲ ತಿಂಗಳು ಗ್ರಾಹಕರ ಹಣ ತಡವಾದರೆ ವೈದೇಹಿಯ ಆಭರಣ ಅಡವಿಟ್ಟು ನೌಕರರ ಸಂಬಳ ಕೊಡಬೇಕಾಗುತ್ತಿತ್ತು.
ಒಮ್ಮೆ ವ್ಯಾಪಾರದಲ್ಲಿ ದೊಡ್ಡ ನಷ್ಟವಾಯಿತು. ರಾತ್ರಿ ಎರಡು ಗಂಟೆಯವರೆಗೆ ಲೆಕ್ಕಪತ್ರ ನೋಡಿ ಕುಳಿತಿದ್ದ ಆದಿತ್ಯ, “ಇದನ್ನು ಮುಚ್ಚಿಬಿಡೋಣ. ಸಾಕಾಯಿತು,” ಎಂದ.
ವೈದೇಹಿ ಅಡುಗೆಮನೆಯಿಂದ ಎರಡು ಗ್ಲಾಸ್ ಚಹಾ ತಂದು ಅವನ ಮುಂದೆ ಇಟ್ಟಳು. “ಮುಚ್ಚಬೇಕಾದರೆ ಮುಚ್ಚೋಣ. ಆದರೆ ಸೋತಿದ್ದೇವೆ ಎಂಬ ಕಾರಣಕ್ಕೆ ಅಲ್ಲ; ಬೇರೆ ದಾರಿ ಉತ್ತಮವೆಂದು ಕಂಡರೆ ಮಾತ್ರ.”
“ನಿನಗೆ ಭಯವಾಗುವುದಿಲ್ಲವಾ?”
“ತುಂಬಾ ಆಗುತ್ತದೆ.”
“ಹಾಗಿದ್ದರೂ ಇಷ್ಟು ಸಮಾಧಾನವಾಗಿ ಹೇಗೆ ಮಾತನಾಡುತ್ತೀಯ?”
“ಮನೆಯಲ್ಲಿ ಇಬ್ಬರೂ ಒಂದೇ ಸಮಯದಲ್ಲಿ ಹೆದರಿದರೆ ಬಾಗಿಲು ಯಾರು ಮುಚ್ಚುತ್ತಾರೆ?”
ಆದಿತ್ಯ ಮೊದಲ ಬಾರಿ ಅವಳ ಕೈ ಹಿಡಿದು, “ನೀನು ವಿಚಿತ್ರ ಹೆಂಗಸು,” ಎಂದ.
“ಅದನ್ನು ಮದುವೆಗೂ ಮುಂಚೆ ಗಮನಿಸಬೇಕಿತ್ತು.”
ನಷ್ಟದಿಂದ ಅವರು ನಿಧಾನವಾಗಿ ಹೊರಬಂದರು. ಆದರೆ ಜೀವನದ ಪ್ರತಿಯೊಂದು ಪರೀಕ್ಷೆಯೂ ಲೆಕ್ಕಪತ್ರದಂತೆ ಪರಿಹಾರವಾಗಲಿಲ್ಲ. ಮದುವೆಯಾಗಿ ವರ್ಷಗಳು ಕಳೆದರೂ ಮಗು ಆಗಲಿಲ್ಲ. ಮೊದಲಿಗೆ ಸಂಬಂಧಿಕರು ಮೃದುವಾಗಿ ಕೇಳಿದರು. ನಂತರ ಸಲಹೆ ನೀಡಿದರು. ಕೊನೆಗೆ ತೀರ್ಪು ಹೇಳತೊಡಗಿದರು.
“ತುಂಬಾ ಕೆಲಸ ಮಾಡಬೇಡ.”
“ಆ ಶಾಲೆ, ಸಂಸ್ಥೆ ಎಲ್ಲ ನಂತರವೂ ಮಾಡಬಹುದು.”
“ಮೊದಲು ನಿಮ್ಮದೇ ಮಗು ಮುಖ್ಯ.”
ಪ್ರತಿಯೊಂದು ಮಾತಿನಲ್ಲೂ ‘ನಿಮ್ಮದೇ’ ಎಂಬ ಪದ ವೈದೇಹಿಗೆ ಚುಚ್ಚುತ್ತಿತ್ತು. ತಾಯಿಯಾಗುವ ಆಸೆ ಅವಳಿಗಿರಲಿಲ್ಲವೆಂದಲ್ಲ. ತಿಂಗಳು ತಡವಾದಾಗ ಮೌನವಾಗಿ ದಿನ ಎಣಿಸುತ್ತಿದ್ದಳು. ಪರೀಕ್ಷೆಯಲ್ಲಿ ಒಂದೇ ಗೆರೆ ಬಂದಾಗ ಯಾರಿಗೂ ತಿಳಿಯದಂತೆ ಕಸದ ಬುಟ್ಟಿಯ ತಳದಲ್ಲಿ ಅದನ್ನು ಮುಚ್ಚಿಡುತ್ತಿದ್ದಳು. ಆದರೆ ತನ್ನ ಗರ್ಭ ಖಾಲಿಯಿರುವುದರಿಂದ ತನ್ನ ಸಂಪೂರ್ಣ ಬದುಕೂ ಖಾಲಿ ಎನ್ನುವಂತೆ ಜನರು ಮಾತನಾಡುವುದನ್ನು ಅವಳು ಸಹಿಸಲಾರದೆ ಹೋಗುತ್ತಿದ್ದಳು. ತುಂಬಾ ಸಲ ದುಃಖವನ್ನು ಮನಸ್ಸಿನಲ್ಲೇ ಮುಚ್ಚಿಟ್ಟು, ಹೊರಗಿನ ಪ್ರಪಂಚಕ್ಕೆ ನಗುಮುಖವನ್ನೇ ತೋರಿಸುತ್ತಿದ್ದಳು.
ಅವಳ ನಗುಮುಖವನ್ನು ಕಂಡು ಅಸೂಯೆ ಪಟ್ಟವರೇ ಹೆಚ್ಚು.
***
ಅದೇ ಸಮಯದಲ್ಲಿ ಬ್ಯಾಂಕಿನ ಕೆಲಸ ಬಿಟ್ಟು ಶಿಕ್ಷಣ ಕ್ಷೇತ್ರಕ್ಕೆ ಬರಲು ಅವಳು ನಿರ್ಧರಿಸಿದಳು. ಎಲ್ಲರೂ ವಿರೋಧಿಸಿದರು.
“ಸ್ಥಿರವಾದ ಕೆಲಸ ಬಿಟ್ಟು ಮಕ್ಕಳಿಗೆ ಪಾಠ ಹೇಳುವ ಕೇಂದ್ರವೇ?” ಎಂದು ಶ್ರೀಧರ ಕೇಳಿದರು.
“ಅಪ್ಪಾ, ಸ್ಥಿರತೆ ಸಂಬಳದಲ್ಲಿ ಮಾತ್ರ ಇರುವುದಿಲ್ಲ. ಬೆಳಿಗ್ಗೆ ಎದ್ದಾಗ ಇಂದು ಮಾಡಬೇಕಾದ ಕೆಲಸಕ್ಕೆ ಅರ್ಥವಿದೆ ಎನ್ನಿಸುವುದೂ ಒಂದು ಸ್ಥಿರತೆ.”
ಆದಿತ್ಯ ಲೆಕ್ಕ ಹಾಕಿ ನೋಡಿದ. “ಮೊದಲ ಆರು ತಿಂಗಳು ಆದಾಯ ಇರದಿರಬಹುದು.”
“ನಾನು ಸಿದ್ಧ.”
“ನಷ್ಟವಾದರೆ?”
“ಮತ್ತೆ ಆರಂಭಿಸುತ್ತೇನೆ.”
“ಜನ ಬರದಿದ್ದರೆ?”
“ಮೊದಲಿಗೆ ಒಬ್ಬ ಮಗು ಬಂದರೂ ಸಾಕು.”
“ನೀನು ಯಾವ ಪ್ರಶ್ನೆಗೂ ಹೆದರುವುದಿಲ್ಲವೇ?”
“ಹೆದರುತ್ತೇನೆ. ಆದರೆ ಭಯಕ್ಕೆ ಉತ್ತರ ಕೊಡುತ್ತಾ ಕುಳಿತರೆ ಕನಸಿಗೆ ಸಮಯ ಸಿಗುವುದಿಲ್ಲ.”
ನಗರದ ಹೊರವಲಯದ ನೀಲಗಿರಿ ಬಡಾವಣೆಯಲ್ಲಿ ಎರಡು ಕೊಠಡಿಯ ಹಳೆಯ ಕಟ್ಟಡವನ್ನು ಬಾಡಿಗೆಗೆ ತೆಗೆದುಕೊಂಡಳು. ಗೋಡೆಯ ಬಣ್ಣ ಕಿತ್ತುಹೋಗಿತ್ತು. ಮಳೆ ಬಂದರೆ ಒಂದು ಮೂಲೆಯಲ್ಲಿ ನೀರು ಸುರಿಯುತ್ತಿತ್ತು. ಮೂರು ಮೇಜು, ಹನ್ನೆರಡು ಕುರ್ಚಿ, ಒಂದು ಬಿಳಿಹಲಗೆ—ಅಷ್ಟೇ ಆಸ್ತಿಯೊಂದಿಗೆ “ಸಹಜ ಶಿಕ್ಷಣ ಕೇಂದ್ರ” ಆರಂಭವಾಯಿತು.
ಮೊದಲ ದಿನ ಬಂದದ್ದು ಒಬ್ಬನೇ ವಿದ್ಯಾರ್ಥಿ—ಮೂರನೇ ತರಗತಿಯ ರೋಹನ್. ಅವನ ತಾಯಿ, “ಇವನಿಗೆ ಓದುವುದೇ ಇಷ್ಟವಿಲ್ಲ. ಎರಡು ಟ್ಯೂಷನ್ನಿಂದ ಹೊರಹಾಕಿದ್ದಾರೆ,” ಎಂದಳು.
ವೈದೇಹಿ ಅವನಿಗೆ ಪುಸ್ತಕ ತೆಗೆಯಲು ಹೇಳಲಿಲ್ಲ. ಬಣ್ಣದ ಕಾಗದ ಕೊಟ್ಟು, “ನಿನಗೆ ಇಷ್ಟವಾದ ಮನೆ ಬಿಡಿಸು,” ಎಂದಳು. ಅವನು ಮನೆ ಬಿಡಿಸಲಿಲ್ಲ; ಬಾಗಿಲೇ ಇಲ್ಲದ ದೊಡ್ಡ ಬಸ್ ಬಿಡಿಸಿದ.
“ಇದಕ್ಕೆ ಬಾಗಿಲಿಲ್ಲವಲ್ಲ?”
“ಬಾಗಿಲಿದ್ದರೆ ಶಾಲೆಯವರು ಒಳಗೆ ಹತ್ತುತ್ತಾರೆ,” ಎಂದ.
ಆ ಒಂದೇ ವಾಕ್ಯದಿಂದ ಮಗುವಿಗೆ ಓದಿನ ಮೇಲೆ ದ್ವೇಷವಿಲ್ಲ, ಶಾಲೆಯಲ್ಲಿ ಅವನಿಗಾಗುತ್ತಿದ್ದ ಅವಮಾನದ ವಿಷಯವಾಗಿ ಭಯವಿದೆ ಎಂಬುದು ಅವಳಿಗೆ ಅರ್ಥವಾಯಿತು. ಮೂರು ತಿಂಗಳಲ್ಲಿ ರೋಹನ್ ಸರಾಗವಾಗಿ ಓದಲು ಆರಂಭಿಸಿದ. ಅವನ ತಾಯಿ ಇನ್ನಿಬ್ಬರನ್ನು ಕಳುಹಿಸಿದಳು. ಹನ್ನೆರಡು ಕುರ್ಚಿಗಳು ತುಂಬಿದವು. ನಂತರ ಪಕ್ಕದ ಕೊಠಡಿಯನ್ನೂ ತೆಗೆದುಕೊಳ್ಳಬೇಕಾಯಿತು.
ವೈದೇಹಿ ಪ್ರತಿಯೊಂದು ಮಗುವನ್ನೂ ಒಂದೇ ವಿಧಾನದಲ್ಲಿ ಓದಿಸಲಿಲ್ಲ. ಯಾರಿಗಾದರೂ ಚಿತ್ರದಿಂದ, ಯಾರಿಗಾದರೂ ಹಾಡಿನಿಂದ, ಇನ್ನೊಬ್ಬರಿಗೆ ಆಟದಿಂದ ಪಾಠ ಹೇಳುತ್ತಿದ್ದಳು. “ಮಗು ನಿಧಾನವಾಗಿರಬಹುದು; ಅದರ ಮನಸ್ಸು ನಿಂತಿರುವುದಿಲ್ಲ,” ಎಂಬುದು ಅವಳ ನಂಬಿಕೆ. ವಾರಾಂತ್ಯದಲ್ಲಿ ಸಂಗೀತ, ನೃತ್ಯ, ಚಿತ್ರಕಲೆ ಮತ್ತು ಕಂಪ್ಯೂಟರ್ ತರಗತಿಗಳನ್ನು ಆರಂಭಿಸಿದಳು. ಹಲವು ವರ್ಷಗಳ ಹಿಂದೆ ಹಳೆಯ ಪುಸ್ತಕದಲ್ಲಿ ಬಿಡಿಸಿದ್ದ ಶಾಲೆಯ ಚಿತ್ರ ನಿಧಾನವಾಗಿ ಗೋಡೆ, ಬಾಗಿಲು ಮತ್ತು ಮಕ್ಕಳ ನಗುವುಗಳನ್ನು ಪಡೆದುಕೊಳ್ಳುತ್ತಿತ್ತು.
ಕೇಂದ್ರ ಬೆಳೆಯುತ್ತಿದ್ದಂತೆ ವೈದೇಹಿಯ ಹೊಣೆಗಾರಿಕೆ ಹೆಚ್ಚಿತು. ಬೆಳಿಗ್ಗೆ ಪ್ರವೇಶ ವಿಚಾರಣೆ, ಮಧ್ಯಾಹ್ನ ಸಿಬ್ಬಂದಿ, ಸಂಜೆ ಮಕ್ಕಳು, ರಾತ್ರಿ ಲೆಕ್ಕ ಮತ್ತು ಮುಂದಿನ ದಿನದ ಯೋಜನೆ. ಅವಳು ಆಯಾಸಗೊಂಡಿದ್ದರೂ ಮುಖದ ನಗು ಕಡಿಮೆಯಾಗಲಿಲ್ಲ.
ಒಂದು ದಿನ ಶಿಕ್ಷಕಿ ನಂದಿತಾ ಕೇಳಿದಳು, “ಮೇಡಂ, ನಿಮಗೆ ಯಾವಾಗಲೂ ಇಷ್ಟು ಶಕ್ತಿ ಹೇಗೆ ಬರುತ್ತದೆ?”
ವೈದೇಹಿ ನಗುತ್ತ, “ಮನೆಯಿಂದ ಎರಡು ಡಬ್ಬಿಯಲ್ಲಿ ತರುತ್ತೇನೆ. ಒಂದು ಊಟದ ಡಬ್ಬಿ, ಇನ್ನೊಂದು ನಟನೆಯ ಡಬ್ಬಿ,” ಎಂದಳು.
ಎಲ್ಲರೂ ನಕ್ಕರು. ಆದರೆ ಆ ರಾತ್ರಿ ಮನೆಗೆ ಹೋದ ಮೇಲೆ ಅವಳು ಸ್ನಾನಗೃಹದ ಬಾಗಿಲು ಹಾಕಿಕೊಂಡು ಅತ್ತಳು. ವೈದ್ಯರಿಂದ ಬಂದ ವರದಿ ಮೇಜಿನ ಮೇಲಿತ್ತು. ತಾಯ್ತನಕ್ಕಾಗಿ ಸಹಜವಾಗಿ ಕಾಯುವ ಸಮಯ ಮುಗಿದಿದೆ; ಚಿಕಿತ್ಸೆ ಬೇಕು ಎಂದು ಅದರಲ್ಲಿ ಬರೆದಿತ್ತು.
ಚಿಕಿತ್ಸೆಯ ಪಯಣ ಹೊರಗಿನಿಂದ ನೋಡಿದವರಿಗೆ ಆಸ್ಪತ್ರೆ ಭೇಟಿಗಳ ಸರಣಿ ಮಾತ್ರ. ವೈದೇಹಿಗೆ ಅದು ದೇಹ, ಹಣ, ಸಮಯ ಮತ್ತು ಭರವಸೆಯನ್ನು ಪ್ರತಿದಿನ ಪರೀಕ್ಷೆಗೆ ಇಡುವ ಯುದ್ಧ. ಬೆಳಿಗ್ಗೆ ಚುಚ್ಚುಮದ್ದು ತೆಗೆದುಕೊಂಡು ಸಂಜೆ ಮಕ್ಕಳ ಮುಂದೆ ನಗಬೇಕು. ಹೊಟ್ಟೆ ನೋವಿದ್ದರೂ ವಾರ್ಷಿಕ ಕಾರ್ಯಕ್ರಮದ ಅಭ್ಯಾಸ ನೋಡಬೇಕು. ರಕ್ತಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಾ ಪೋಷಕರಿಗೆ ಅವರ ಮಗುವಿನ ಪರೀಕ್ಷೆಯ ಬಗ್ಗೆ ಧೈರ್ಯ ಹೇಳಬೇಕು.
ಮೊದಲ ಪ್ರಯತ್ನದಲ್ಲಿ ಭರವಸೆ ಮೂಡಿತು. ಎರಡು ಗೆರೆ ಕಂಡ ಬೆಳಿಗ್ಗೆ ವೈದೇಹಿ ಪರೀಕ್ಷಾ ಪಟ್ಟಿಯನ್ನು ಎದೆಗೆ ಒತ್ತಿಕೊಂಡು ನಿಂತಳು. ಆದಿತ್ಯ ಅದನ್ನು ಮೂರು ಬಾರಿ ನೋಡಿ, “ಇದು ನಿಜವಾ?” ಎಂದು ಕೇಳಿದ.
“ಎರಡನೇ ಗೆರೆ ಸ್ವಲ್ಪ ಮಸುಕಾಗಿದೆ.”
“ಮಸುಕಾದರೂ ಗೆರೆ ಗೆರೆಯೇ.”
ಆ ದಿನ ಅವರು ದೊಡ್ಡ ಸಂಭ್ರಮ ಮಾಡಲಿಲ್ಲ. ಭಯ ಸಂತೋಷದ ಪಕ್ಕದಲ್ಲೇ ಕುಳಿತಿತ್ತು. ಆದರೂ ವೈದೇಹಿ ತನ್ನೊಳಗಿನ ಮಗುವಿಗೆ ಹೆಸರಿಲ್ಲದ ಪತ್ರಗಳನ್ನು ಬರೆಯತೊಡಗಿದಳು. - ‘ನೀನು ಬಂದರೆ ನಿನಗಾಗಿ ಪ್ರತ್ಯೇಕ ಆಕಾಶ ಕೊಡಲಾಗುವುದಿಲ್ಲ. ಆದರೆ ಮೋಡ ಬಂದಾಗ ಹೆದರದಂತೆ ಕಲಿಸುತ್ತೇನೆ. ನೀನು ಮೊದಲ ಸ್ಥಾನ ಪಡೆಯಲೇಬೇಕಿಲ್ಲ. ಸೋತಾಗಲೂ ಮನೆಗೆ ಬರಲು ಭಯವಾಗದಂತೆ ನೋಡಿಕೊಳ್ಳುತ್ತೇನೆ.’
ಮೊದಲ ಸ್ಕ್ಯಾನಿನಲ್ಲಿ ಪುಟ್ಟ ಹೃದಯಬಡಿತ ಕೇಳಿಸಿತು. ಆ ಶಬ್ದ ಅವಳಿಗೆ ದೇವಾಲಯದ ಗಂಟೆಗಿಂತ ಪವಿತ್ರವಾಗಿತ್ತು. ಆದರೆ ಕೆಲವು ವಾರಗಳ ನಂತರ ಅದೇ ಹೃದಯ ಮೌನವಾಯಿತು. ಬೆಳವಣಿಗೆ ನಿಂತಿತ್ತು.
ಆಸ್ಪತ್ರೆಯಿಂದ ಹಿಂದಿರುಗಿದ ನಂತರ ಮನೆಯವರು, ಸ್ನೇಹಿತರು, ಸಂಬಂಧಿಕರು ಸಾಂತ್ವನ ಹೇಳಿದರು. “ಮತ್ತೆ ಪ್ರಯತ್ನಿಸಬಹುದು,” ಎಂಬ ಮಾತು ಎಲ್ಲರಲ್ಲೂ ಇತ್ತು. ಆದರೆ ಕಳೆದುಹೋದ ಜೀವವನ್ನು ಮುಂದಿನ ಪ್ರಯತ್ನದ ಭರವಸೆಯಿಂದ ಬದಲಾಯಿಸಲಾಗುವುದಿಲ್ಲ ಎಂಬುದು ವೈದೇಹಿಗೆ ಮಾತ್ರ ಗೊತ್ತಿತ್ತು.
ಕೆಲ ದಿನಗಳ ನಂತರ ಅವಳು ಮತ್ತೆ ಕೇಂದ್ರಕ್ಕೆ ಹೋದಳು. ಮಕ್ಕಳು ಓಡಿ ಬಂದು ಅಪ್ಪಿಕೊಂಡರು. ರೋಹನ್ ಮಾಡಿದ್ದ ಕಾಗದದ ಹೂವನ್ನು ಕೊಟ್ಟು, “ಮೇಡಂ, ನೀವು ಆಸ್ಪತ್ರೆಯಿಂದ ಬಂದಿದ್ದೀರಂತೆ. ಈಗ ಚೆನ್ನಾಗಿದ್ದೀರಾ?” ಎಂದು ಕೇಳಿದ.
“ಚೆನ್ನಾಗಿದ್ದೇನೆ,” ಎಂದು ಅವಳು ನಕ್ಕಳು.
ಮಗು ಹೋದ ಮೇಲೆ ನಂದಿತಾ ಮೃದುವಾಗಿ ಕೇಳಿದಳು, “ನಿಜವಾಗಿಯೂ ಚೆನ್ನಾಗಿದ್ದೀರಾ?”
“ಇಲ್ಲ. ಆದರೆ ಮಕ್ಕಳಿಗೆ ಹೇಳಿದ ಸುಳ್ಳು ಕೆಲವೊಮ್ಮೆ ನಾಳೆಯ ಸತ್ಯವಾಗಬಹುದು. ಅದಕ್ಕಾಗಿ ಹೇಳಿದೆ.”
ಕಾಲ ಕಳೆದಿತು. ನೋವು ಮಾಯವಾಗಲಿಲ್ಲ; ಅದರ ಸುತ್ತ ಬದುಕು ಬೆಳೆಯಿತು. ವೈದೇಹಿ ಮತ್ತೆ ಕೆಲಸದಲ್ಲಿ ಮುಳುಗಿದಳು. ಕೇಂದ್ರಕ್ಕೆ ಕಲಿಕೆಯಲ್ಲಿ ವಿಶೇಷ ನೆರವು ಬೇಕಾದ ಮಕ್ಕಳು ಹೆಚ್ಚಾಗಿ ಬರತೊಡಗಿದರು. ಅವರಿಗಾಗಿ ಮನೋವಿಜ್ಞಾನ ಮತ್ತು ವಿಶೇಷ ಶಿಕ್ಷಣದ ಅಧ್ಯಯನ ಆರಂಭಿಸಿದಳು. ಮಗು ಯಾಕೆ ಮೌನವಾಗುತ್ತದೆ, ಯಾಕೆ ಕೋಪಗೊಳ್ಳುತ್ತದೆ, ಯಾಕೆ ಒಂದೇ ವಿಷಯವನ್ನು ಮರುಮರು ಮಾಡುತ್ತದೆ—ಇವುಗಳ ಹಿಂದೆ ಇರುವ ಕಾರಣಗಳನ್ನು ತಿಳಿಯಲು ಪ್ರಯತ್ನಿಸಿದಳು.
***
ಎರಡನೇ ಚಿಕಿತ್ಸೆಗೆ ಹಣ ದೊಡ್ಡ ಸಮಸ್ಯೆಯಾಯಿತು. ಮೊದಲ ಪ್ರಯತ್ನದ ಸಾಲ ಇನ್ನೂ ಮುಗಿದಿರಲಿಲ್ಲ. ಆದಿತ್ಯ ವ್ಯವಹಾರದ ಒಂದು ಯೋಜನೆಯನ್ನು ಮುಂದೂಡಿದ. ವೈದೇಹಿ ತನ್ನ ಉಳಿತಾಯ ತೆರೆದಳು. ಇಬ್ಬರೂ ಲೆಕ್ಕ ಹಾಕುತ್ತಾ ಕುಳಿತಾಗ ಅಂಕಿಗಳ ನಡುವೆ ಅವರ ಆಸೆಯ ಬೆಲೆ ಕಾಣುತ್ತಿತ್ತು.
“ಇಷ್ಟೆಲ್ಲ ಖರ್ಚು ಮಾಡಿ ಮತ್ತೆ…” ಆದಿತ್ಯ ಮಾತು ನಿಲ್ಲಿಸಿದ.
“ಮತ್ತೆ ಸೋತರೆ ಎಂದು ಕೇಳಬೇಕಾ?”
“ಹೌದು.”
“ಆಗ ನೋವು ಇರುತ್ತದೆ. ಸಾಲವೂ ಇರುತ್ತದೆ. ಆದರೆ ಪ್ರಯತ್ನಿಸಲೇ ಇಲ್ಲ ಎಂಬ ಪ್ರಶ್ನೆ ಇರದು.”
“ನಿನಗೆ ಬೇಕಾದ್ದು ಮಗುನಾ ಅಥವಾ ಗರ್ಭಧಾರಣೆಯ ಅನುಭವನಾ?”
ವೈದೇಹಿ ಅವನತ್ತ ದೀರ್ಘವಾಗಿ ನೋಡಿದಳು. “ಈ ಪ್ರಶ್ನೆಯನ್ನು ನಾನೇ ನನಗೆ ಕೇಳಿಕೊಳ್ಳಲು ಹೆದರುತ್ತಿದ್ದೆ.”
ಆದಿತ್ಯ ಮೌನವಾದ. ಆ ಪ್ರಶ್ನೆಯ ಉತ್ತರ ಆಗ ಅವರಿಬ್ಬರಲ್ಲೂ ಇರಲಿಲ್ಲ.
ಎರಡನೇ ಪ್ರಯತ್ನ ಆರಂಭವಾಯಿತು. ಈ ಬಾರಿ ವೈದೇಹಿ ಭರವಸೆಯನ್ನು ಜೋರಾಗಿ ಮಾತನಾಡಲು ಬಿಡಲಿಲ್ಲ. ಔಷಧಿಯ ಸಮಯ, ಪರೀಕ್ಷೆ, ಆಹಾರ—ಎಲ್ಲವನ್ನೂ ಕಟ್ಟುನಿಟ್ಟಾಗಿ ಪಾಲಿಸಿದಳು. ಮತ್ತೆ ಎರಡು ಗೆರೆ ಮೂಡಿದವು. ಮತ್ತೆ ರಕ್ತಪರೀಕ್ಷೆಯ ಸಂಖ್ಯೆಗಳು ಏರಿದವು. ಮತ್ತೆ ಸ್ಕ್ಯಾನಿನಲ್ಲಿ ಪುಟ್ಟ ಚೀಲ ಕಾಣಿಸಿತು.
ಆದರೆ ಅವಳು ಮಗುವಿಗೆ ಪತ್ರ ಬರೆಯಲಿಲ್ಲ. ಬಟ್ಟೆ ಖರೀದಿಸಲಿಲ್ಲ. ದಿನ ಎಣಿಸಲಿಲ್ಲ. ಸಂತೋಷಪಟ್ಟರೆ ವಿಧಿಗೆ ತಿಳಿದುಹೋಗಬಹುದು ಎಂಬಂತೆ ಅದನ್ನು ಮನಸ್ಸಿನ ಒಳಕೋಣೆಯಲ್ಲಿ ಬೀಗ ಹಾಕಿಟ್ಟಳು.
ಒಂದು ರಾತ್ರಿ ಕಿಟಕಿಯ ಹೊರಗೆ ಮಳೆ ಬರುತ್ತಿತ್ತು. ವೈದೇಹಿ ಹೊಟ್ಟೆಯ ಮೇಲೆ ಕೈ ಇಟ್ಟು ಮೌನವಾಗಿ ಕುಳಿತಿದ್ದಳು. ಅದೇ ಪರಿಚಿತ ಧ್ವನಿ ಕೇಳಿಸಿತು.
“ಭಯದಿಂದ ಪ್ರೀತಿಯನ್ನು ತಡೆಬೇಡ ವೈದೇಹಿ. ಉಳಿಯುವುದಕ್ಕೆ ಮಾತ್ರ ಪ್ರೀತಿಸಬೇಕೆಂದಿಲ್ಲ.”
ಅವಳ ಕಣ್ಣು ತುಂಬಿತು. “ಹಾಗಾದರೆ ಹೋಗುವುದನ್ನು ಹೇಗೆ ಸಹಿಸಲಿ?” ಎಂದು ಅವಳು ಕತ್ತಲಿಗೆ ಕೇಳಿದಳು.
“ಪ್ರೀತಿ ಹೋದರೆ ಖಾಲಿತನ ಉಳಿಯುವುದಿಲ್ಲ. ಅದು ನಿನ್ನೊಳಗೆ ಇನ್ನೊಂದು ರೂಪ ಪಡೆಯುತ್ತದೆ.”
ಮರುದಿನ ಅವಳು ತನ್ನ ಹುಟ್ಟದ ಮಗುವಿಗೆ ಮೊದಲ ಪತ್ರ ಬರೆದಳು. - ‘ನೀನು ಎಷ್ಟು ದಿನ ನನ್ನೊಳಗೆ ಇರುವೆಯೋ ನನಗೆ ಗೊತ್ತಿಲ್ಲ. ಆದರೆ ನೀನು ಇರುವ ಪ್ರತಿದಿನವೂ ನಾನು ನಿನ್ನ ತಾಯಿ. ಭಯದಿಂದ ನಿನ್ನನ್ನು ಕಡಿಮೆ ಪ್ರೀತಿಸುವುದಿಲ್ಲ.’
ಕೆಲವೇ ದಿನಗಳಲ್ಲಿ ವೈದ್ಯರು ಎರಡನೇ ಬಾರಿಯೂ ಅದೇ ಸುದ್ದಿ ಹೇಳಿದರು.
ಆಸ್ಪತ್ರೆಯ ಮೆಟ್ಟಿಲ ಮೇಲೆ ಮಳೆಯಲ್ಲಿ ನಿಂತಿದ್ದ ಕ್ಷಣದಿಂದ ಕಥೆ ಮತ್ತೆ ವರ್ತಮಾನಕ್ಕೆ ಮರಳಿತು.
ಔಷಧಿಯ ನಂತರದ ದಿನಗಳು ದೇಹಕ್ಕೂ ಮನಸ್ಸಿಗೂ ಕಠಿಣವಾಗಿದ್ದವು. ವೈದೇಹಿ ಹಾಸಿಗೆಯಲ್ಲಿ ಮಲಗಿದ್ದಾಗ ಆದಿತ್ಯ ಅಡುಗೆಮನೆಯಲ್ಲಿ ಸಾರು ಮಾಡಲು ಹೋಗಿ ಉಪ್ಪಿನ ಬದಲು ಸಕ್ಕರೆ ಹಾಕಿದ. ಒಂದು ತುತ್ತು ಬಾಯಿಗೆ ಹಾಕಿದ ವೈದೇಹಿ ಅವನತ್ತ ನೋಡಿದಳು.
“ಹೇಗಿದೆ?” ಎಂದು ಅವನು ಆತಂಕದಿಂದ ಕೇಳಿದ.
“ನಮ್ಮ ಜೀವನದಂತೆ ಇದೆ.”
“ಅಂದರೆ?”
“ಸಾರು ಎಂದುಕೊಂಡರೆ ಸಿಹಿ. ಸಿಹಿ ಎಂದುಕೊಂಡರೆ ಖಾರ.”
ಬಹಳ ದಿನಗಳ ನಂತರ ಇಬ್ಬರೂ ನಕ್ಕರು. ನಗುತ್ತಲೇ ವೈದೇಹಿಯ ಕಣ್ಣೀರು ಬಂತು. ಆದಿತ್ಯ ಈ ಬಾರಿ ಅವಳಿಗೆ ‘ಅಳಬೇಡ’ ಎನ್ನಲಿಲ್ಲ. ಪಾತ್ರೆಯನ್ನು ಪಕ್ಕಕ್ಕೆ ಇಟ್ಟು ಅವಳ ಬಳಿ ಕುಳಿತ. ಅವಳು ಅವನ ಭುಜದ ಮೇಲೆ ತಲೆ ಇಟ್ಟಳು.
“ನಾನು ಮತ್ತೆ ಇದಕ್ಕೆ ಸಿದ್ಧಳಿಲ್ಲ ಆದಿತ್ಯ,” ಎಂದಳು.
“ನಾನೂ ಇಲ್ಲ.”
“ನಮ್ಮ ಬಳಿ ಇನ್ನೊಂದು ಪ್ರಯತ್ನಕ್ಕೆ ಬೇಕಾದಷ್ಟು ಹಣವೂ ಇಲ್ಲ.”
“ಹಣ ಬಂದರೂ?”
ವೈದೇಹಿ ಬಹಳ ಹೊತ್ತು ಉತ್ತರಿಸಲಿಲ್ಲ. “ನನ್ನ ದೇಹವನ್ನು ಮತ್ತೆ ಭರವಸೆಯ ಪರೀಕ್ಷಾ ಕೊಠಡಿಗೆ ಕಳುಹಿಸಲು ಮನಸ್ಸಿಲ್ಲ.”
“ಹಾಗಾದರೆ ಕಳುಹಿಸಬೇಡ.”
“ನಿನಗೆ ಮಗು ಬೇಕಲ್ಲವಾ?”
ಆದಿತ್ಯ ಕಿಟಕಿಯ ಹೊರಗೆ ನೋಡಿದ. “ನನಗೆ ನಿನ್ನೊಂದಿಗೆ ಬದುಕು ಬೇಕು. ಅದರಲ್ಲಿ ಮಗು ಬಂದರೆ ಸಂತೋಷ. ಆದರೆ ಮಗು ಪಡೆಯಲು ಹೋಗಿ ನಿನ್ನನ್ನೇ ಕಳೆದುಕೊಳ್ಳುವುದು ಬೇಡ.”
ಆ ಮಾತು ವೈದೇಹಿಯೊಳಗೆ ಬಹುಕಾಲ ಮುಚ್ಚಿದ್ದ ಬಾಗಿಲೊಂದನ್ನು ತೆರೆದಿತು. ಆದರೂ ದತ್ತು ಎಂಬ ಪದವನ್ನು ಉಚ್ಚರಿಸಲು ಅವಳಿಗೆ ಇನ್ನೂ ಕೆಲವು ವಾರ ಬೇಕಾಯಿತು.
***
ಒಂದು ಸಂಜೆ ಕೇಂದ್ರದ ಮಕ್ಕಳು ತೆರಳಿದ ನಂತರ, ಆರು ವರ್ಷದ ಅನನ್ಯಾ ತನ್ನ ತಾಯಿ ಬರದೇ ಇರುವುದರಿಂದ ಕುರ್ಚಿಯಲ್ಲಿ ಮಲಗಿಬಿಟ್ಟಿದ್ದಳು. ವೈದೇಹಿ ಅವಳ ತಲೆಯ ಕೆಳಗೆ ಚೀಲ ಇಟ್ಟು, ಕೂದಲು ಸರಿಪಡಿಸಿದಳು. ನಿದ್ರೆಯಲ್ಲಿದ್ದ ಮಗು ಅವಳ ಬೆರಳನ್ನು ಹಿಡಿದು “ಅಮ್ಮಾ…” ಎಂದಿತು. ಕ್ಷಣಕಾಲ ವೈದೇಹಿಯ ಉಸಿರು ನಿಂತಿತು. ತಕ್ಷಣ ಮಗು ಎಚ್ಚರಗೊಂಡು ಕೈ ಬಿಟ್ಟು, “ಸಾರಿ ಮೇಡಂ, ಅಮ್ಮ ಅಂತ ಅಂದುಕೊಂಡೆ,” ಎಂದಿತು.
“ಸಾರಿ ಯಾಕೆ? ಅಮ್ಮ ಎಂದು ಕರೆದರೆ ಶುಲ್ಕ ಹೆಚ್ಚಾಗುವುದಿಲ್ಲ,” ಎಂದು ವೈದೇಹಿ ನಕ್ಕಳು.
ಆದರೆ ಆ ರಾತ್ರಿ ಮನೆಗೆ ಬಂದು ಆದಿತ್ಯನ ಮುಂದೆ ಕುಳಿತು, “ನಾವು ಒಂದು ಮಗುವನ್ನು ದತ್ತು ತೆಗೆದುಕೊಳ್ಳೋಣವಾ?” ಎಂದು ಕೇಳಿದಳು.
ಆದಿತ್ಯ ತಕ್ಷಣ ಉತ್ತರಿಸಲಿಲ್ಲ. “ಇದು ಇಂದಿನ ನೋವಿನಿಂದ ಬಂದ ನಿರ್ಧಾರವಾ?”
“ಇಲ್ಲ. ನನ್ನೊಳಗೆ ಬಹಳ ವರ್ಷಗಳಿಂದ ಕುಳಿತಿದ್ದ ಪ್ರಶ್ನೆಗೆ ಇಂದು ಧ್ವನಿ ಬಂದಿದೆ.”
“ನಿನಗೆ ಮತ್ತೊಬ್ಬರ ಮಗುವನ್ನು…”
ವೈದೇಹಿ ಅವನ ಮಾತನ್ನು ತಡೆದಳು. “ದತ್ತು ಪಡೆದ ಕ್ಷಣದಿಂದ ಅದು ಮತ್ತೊಬ್ಬರ ಮಗು ಆಗಿರುವುದಿಲ್ಲ. ಆದರೆ ನಾವು ನಮ್ಮ ಖಾಲಿತನ ತುಂಬಿಕೊಳ್ಳಲು ಮಗುವನ್ನು ತರಬಾರದು. ಮಗುವಿನ ಖಾಲಿತನದ ಜೊತೆಗೆ ಬದುಕಲು ಸಿದ್ಧರಾಗಿದ್ದರೆ ಮಾತ್ರ ತರಬೇಕು.”
ಆದಿತ್ಯ ನಿಧಾನವಾಗಿ ತಲೆ ಆಡಿಸಿದ. “ನನಗೆ ಯೋಚಿಸಲು ಸ್ವಲ್ಪ ಸಮಯ ಕೊಡು.”
ವೈದೇಹಿ ಒಪ್ಪಿಕೊಂಡಳು. ಅವಳು ಅವನ ಮೇಲೆ ಒತ್ತಡ ಹಾಕಲಿಲ್ಲ. ತಾಯ್ತನ ತನ್ನ ಹಕ್ಕು ಎಂದುಕೊಂಡಂತೆ, ತಂದೆಯಾಗುವ ನಿರ್ಧಾರವೂ ಅವನ ಸಮ್ಮತಿಯಿಂದ ಬರಬೇಕು ಎಂದು ತಿಳಿದಿದ್ದಳು.
ಕೆಲ ದಿನಗಳ ನಂತರ ಆದಿತ್ಯ ಅವಳನ್ನು ನಗರದ ಹೊರವಲಯಕ್ಕೆ ಕರೆದುಕೊಂಡು ಹೋದ. ಅಲ್ಲಿ ಹಳೆಯ ಮಾವಿನ ಮರದ ಕೆಳಗೆ ಒಂದು ಖಾಲಿ ಜಾಗವಿತ್ತು.
“ಇಲ್ಲಿಗೆ ಯಾಕೆ?”
ಅವನು ಜೇಬಿನಿಂದ ಮಡಚಿದ ಕಾಗದ ತೆಗೆದ. ಅದರಲ್ಲಿ ಮಕ್ಕಳ ಕೊಠಡಿಯ ಸರಳ ನಕ್ಷೆ ಇತ್ತು. “ನಮ್ಮ ಮನೆಗೆ ಇನ್ನೊಂದು ಕೊಠಡಿ ಸೇರಿಸಲು ಎಂಜಿನಿಯರ್ ಜೊತೆ ಮಾತನಾಡಿದ್ದೇನೆ. ಮಗು ಬಂದರೆ ಅದಕ್ಕೆ ಜಾಗ ಬೇಕಲ್ಲ.”
ವೈದೇಹಿ ಕಾಗದ ನೋಡುತ್ತ ನಿಂತಳು.
“ಆದರೆ ಗೋಡೆಗೆ ಗುಲಾಬಿ ಅಥವಾ ನೀಲಿ ಬಣ್ಣವನ್ನು ಈಗಲೇ ಆರಿಸಬೇಡ,” ಎಂದ ಆದಿತ್ಯ. “ಮಗುವಿಗೇ ಕೇಳೋಣ.”
ಅವಳು ನಗುತ್ತ ಅವನ ಕೈ ಹಿಡಿದಳು. ಜೀವನಪೂರ್ತಿ ನಡೆಯುವ ತರಬೇತಿಯಲ್ಲಿ ಆದಿತ್ಯ ಆ ದಿನ ಮೌನದ ಒಂದು ಪಾಠವನ್ನು ಸರಿಯಾಗಿ ಕಲಿತಿದ್ದ.
ದತ್ತು ಪ್ರಕ್ರಿಯೆ ಅವರು ಊಹಿಸಿದಷ್ಟು ಸರಳವಾಗಿರಲಿಲ್ಲ. ದಾಖಲೆಗಳು, ಪರಿಶೀಲನೆಗಳು, ಸಲಹಾ ಸಭೆಗಳು, ಕಾಯುವಿಕೆ. ಕೆಲವರು ಬೆಂಬಲಿಸಿದರು. ಕೆಲವರು ಪ್ರಶ್ನಿಸಿದರು.
“ಯಾವ ಕುಟುಂಬದ ಮಗು ಗೊತ್ತಿಲ್ಲ.”
“ಮುಂದೆ ಸ್ವಭಾವ ಹೇಗಿರುತ್ತದೆ?”
“ಸ್ವಂತ ಮಗು ಆಗುವ ಸಾಧ್ಯತೆ ಇನ್ನೂ ಇದೆ, ಸ್ವಲ್ಪ ಕಾಯಿರಿ.”
ವೈದೇಹಿ ಒಂದು ದಿನ ಬೇಸರದಿಂದ, “ಸ್ವಂತ ಮಗು ಎಂದರೆ ಏನು? ಅದರ ಕಣ್ಣಿನ ಬಣ್ಣ ನಮ್ಮಂತಿರಬೇಕಾ? ಅಥವಾ ಅದು ಅತ್ತಾಗ ನಮ್ಮ ನಿದ್ರೆ ಹಾಳಾಗಬೇಕಾ?” ಎಂದು ಕೇಳಿದಳು. ಆಮೇಲೆ ಸಂಬಂಧಿಕರು ಅವಳ ಮುಂದೆ ಸಲಹೆ ನೀಡುವುದನ್ನು ಕಡಿಮೆ ಮಾಡಿದರು.
ಒಂಬತ್ತು ತಿಂಗಳಷ್ಟು ಕಾಯುವಿಕೆಯ ನಂತರ ಅವರಿಗೆ “ಅರುಣೋದಯ ಬಾಲನಿಲಯ”ದಿಂದ ಕರೆ ಬಂತು. ಏಳು ವರ್ಷದ ಹುಡುಗಿಯೊಬ್ಬಳ ವಿವರ ಹೊಂದಿಕೆಯಾಗಬಹುದು ಎಂದರು. ವಯಸ್ಸು ಹೆಚ್ಚು ಇರುವ ಮಕ್ಕಳನ್ನು ದತ್ತು ಪಡೆಯಲು ಹಲವರು ಹಿಂಜರಿಯುತ್ತಾರೆ. ಆ ಮಗುವಿನ ತಾಯಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದಳು; ತಂದೆಯ ವಿವರ ಇರಲಿಲ್ಲ. ಮಗು ಹೆಚ್ಚು ಮಾತನಾಡುವುದಿಲ್ಲ, ಮಳೆ ಬಂದಾಗ ಹೆದರುತ್ತದೆ, ಪದೇಪದೇ ಒಂದೇ ಚಿತ್ರ ಬಿಡಿಸುತ್ತದೆ ಎಂದು ಸಮಾಜಕಾರ್ಯಕರ್ತೆ ತಿಳಿಸಿದಳು.
ಬಾಲನಿಲಯಕ್ಕೆ ಹೋದ ದಿನ ಆಕಾಶ ಮೋಡದಿಂದ ತುಂಬಿತ್ತು. ವೈದೇಹಿಯ ಕೈ ಬೆವರುತ್ತಿತ್ತು. ಆದಿತ್ಯ ಹೊರಗೆ ಸಮಾಧಾನವಾಗಿ ಕಂಡರೂ ಕಾರಿನ ಕೀಲಿಯನ್ನು ಮೂರನೇ ಬಾರಿ ಕೆಳಗೆ ಬಿಟ್ಟ.
“ನೀನು ಹೆದರಿದ್ದೀಯಾ?” ಎಂದು ವೈದೇಹಿ ಕೇಳಿದಳು.
“ಇಲ್ಲ.”
“ಕೀಲಿಗೂ ಹಾಗೇ ಅನಿಸಿರಬೇಕು.”
ಒಳಗೆ ಹತ್ತು ಮಕ್ಕಳು ಆಟವಾಡುತ್ತಿದ್ದರು. ಒಂದು ಮೂಲೆಯಲ್ಲಿ ಕಿಟಕಿಗೆ ಬೆನ್ನು ಮಾಡಿ ಕುಳಿತಿದ್ದ ಪುಟ್ಟ ಹುಡುಗಿ ಬಿಳಿ ಕಾಗದದ ಮೇಲೆ ನೀಲಿ ಬಣ್ಣದಿಂದ ಏನನ್ನೋ ಬಿಡಿಸುತ್ತಿದ್ದಳು. ಅವಳ ಕೂದಲು ಭುಜದವರೆಗೆ ಅಸಮವಾಗಿ ಕತ್ತರಿಸಲಾಗಿತ್ತು. ಉಳಿದ ಮಕ್ಕಳು ಹೊಸ ಜನರನ್ನು ಕುತೂಹಲದಿಂದ ನೋಡಿದರೂ, ಅವಳು ತಿರುಗಲಿಲ್ಲ.
“ಮಿಹಿಕಾ,” ಎಂದು ಸಮಾಜಕಾರ್ಯಕರ್ತೆ ಕರೆದಳು. “ನಿನ್ನನ್ನು ನೋಡಲು ಅತಿಥಿಗಳು ಬಂದಿದ್ದಾರೆ.”
ಹುಡುಗಿ ನಿಧಾನವಾಗಿ ತಿರುಗಿದಳು. ಅವಳ ಕಣ್ಣುಗಳಲ್ಲಿ ಮಕ್ಕಳಿಗಿಂತ ದೊಡ್ಡ ಮೌನವಿತ್ತು. ಮೊದಲು ಆದಿತ್ಯನನ್ನು ನೋಡಿ, ನಂತರ ವೈದೇಹಿಯ ಮುಖದ ಮೇಲೆ ದೃಷ್ಟಿ ನಿಲ್ಲಿಸಿದಳು. ಅವಳ ಕೈಯಲ್ಲಿದ್ದ ನೀಲಿ ಪೆನ್ಸಿಲ್ ನೆಲಕ್ಕೆ ಬಿತ್ತು.
“ನೀವು ಬಂದಿರಾ?” ಎಂದು ಕೇಳಿದಳು.
ವೈದೇಹಿ ಗಾಬರಿಯಾದಳು. “ನಿನಗೆ ನಾನು ಗೊತ್ತಾ?”
ಮಿಹಿಕಾ ಎದ್ದು ಅವಳ ಹತ್ತಿರ ಬಂತು. ಅವಳ ಮುಖವನ್ನು ಬಹಳ ಹೊತ್ತು ನೋಡಿ, ನಿಧಾನವಾಗಿ ಹೇಳಿದಳು—“ದೇಹೀ… ಈ ಸಮಯವೂ ಕಳೆದುಹೋಗುತ್ತದೆ ಅಂತ ಅಮ್ಮ ಹೇಳಿದ್ದಳು.”
ವೈದೇಹಿಯ ದೇಹದೊಳಗೆ ಮಿಂಚು ಹರಿದಂತಾಯಿತು. ‘ದೇಹೀ’ ಎಂಬ ಹೆಸರು ಅವಳ ಬಾಲ್ಯದಲ್ಲಿ ಕೆಲವೇ ಅತ್ಯಂತ ಆತ್ಮೀಯ ಕ್ಷಣಗಳಿಗೆ ಸೇರಿದ ಹೆಸರು. ಹಲವು ವರ್ಷಗಳಿಂದ ಯಾರೂ ಅವಳನ್ನು ಹಾಗೆ ಕರೆಯುತ್ತಿರಲಿಲ್ಲ. ಮಳೆಯ ಧ್ವನಿ ಮಾತ್ರ ಕೆಲವೊಮ್ಮೆ ಅದೇ ಹೆಸರನ್ನು ಪಿಸುಗುಟ್ಟುತ್ತಿತ್ತು.
“ನಿನ್ನ ಅಮ್ಮ ನನ್ನ ಬಗ್ಗೆ ಹೇಳಿದ್ದಳಾ?” ಅವಳ ಧ್ವನಿ ನಡುಗಿತು.
ಮಿಹಿಕಾ ಭುಜ ಎತ್ತಿದಳು. “ಗೊತ್ತಿಲ್ಲ. ಅಮ್ಮ ಮಳೆ ಬಂದಾಗ ಹಾಗೆ ಹೇಳುತ್ತಿದ್ದಳು.”
ಅವಳು ಬಿಡಿಸುತ್ತಿದ್ದ ಚಿತ್ರವನ್ನು ವೈದೇಹಿ ಕೈಗೆತ್ತಿಕೊಂಡಳು. ಅದರಲ್ಲಿ ದೊಡ್ಡ ಮರ, ಅದರ ಕೆಳಗೆ ಮುಖವಿಲ್ಲದ ಮಹಿಳೆ, ದೂರದಲ್ಲಿ ಮೂರು ಕೊಠಡಿಯ ಶಾಲೆ. ಮಧ್ಯದ ಕೊಠಡಿಯ ಮೇಲ್ಭಾಗದಲ್ಲಿ ಸೂರ್ಯ, ಒಂದು ಕಡೆ ವೀಣೆ, ಇನ್ನೊಂದು ಕಡೆ ಕಂಪ್ಯೂಟರ್. ಅದು ವೈದೇಹಿ ಬಾಲ್ಯದಲ್ಲಿ ಹಳೆಯ ಪುಸ್ತಕಗಳಲ್ಲಿ ಬಿಡಿಸುತ್ತಿದ್ದ ಶಾಲೆಯಂತೆಯೇ ಇತ್ತು.
“ಈ ಚಿತ್ರವನ್ನು ಎಲ್ಲಿ ನೋಡಿದೆ?”
“ಕನಸಿನಲ್ಲಿ.”
ಆದಿತ್ಯ ವೈದೇಹಿಯತ್ತ ನೋಡಿದ. ಅವಳ ಮುಖ ಬಿಳಿಚಿಕೊಂಡಿತ್ತು.
ಮೊದಲ ಭೇಟಿ ಹೆಚ್ಚು ಹೊತ್ತು ನಡೆಯಲಿಲ್ಲ. ಮಿಹಿಕಾ ಪ್ರಶ್ನೆಗಳಿಗೆ ಒಂದೆರಡು ಪದಗಳಲ್ಲಿ ಉತ್ತರಿಸಿದಳು. ಆದರೆ ವೈದೇಹಿ ಹೊರಡುವಾಗ ಅವಳ ಸೀರೆಯ ಅಂಚನ್ನು ಹಿಡಿದು, “ಮತ್ತೆ ಬರುತ್ತೀರಾ?” ಎಂದು ಕೇಳಿದಳು.
ವೈದೇಹಿ ಮಂಡಿಯೂರಿ ಅವಳ ಕಣ್ಣಿನ ಮಟ್ಟಕ್ಕೆ ಬಂದಳು. “ನಾವು ಮತ್ತೆ ಬರಬೇಕೆಂದು ನಿನಗೆ ಇಷ್ಟವಾ?”
ಮಿಹಿಕಾ ತಲೆ ಆಡಿಸಿದಳು. “ಆದರೆ ಮಳೆ ಬಂದಾಗ ಹೋಗಬೇಡಿ.”
“ಹೋಗುವುದಿಲ್ಲ,” ಎಂದ ವೈದೇಹಿ. ಆ ಮಾತು ಮಗುವಿಗೆ ಕೊಟ್ಟ ಭರವಸೆಯೋ, ತನ್ನೊಳಗಿನ ಕಳೆದುಹೋದ ಜೀವಗಳಿಗೆ ಕೊಟ್ಟ ವಾಗ್ದಾನವೋ ಅವಳಿಗೇ ತಿಳಿಯಲಿಲ್ಲ.
ಮುಂದಿನ ಕೆಲವು ವಾರಗಳಲ್ಲಿ ಭೇಟಿಗಳು ಹೆಚ್ಚಿದವು. ಆದಿತ್ಯ ಮೊದಲ ದಿನ ಏನು ಮಾತನಾಡಬೇಕು ಎಂದು ತಿಳಿಯದೆ ಮಿಹಿಕಾಗೆ ದೊಡ್ಡ ಗೊಂಬೆ ತಂದಿದ್ದ. ಅವಳು ಅದನ್ನು ಪಕ್ಕಕ್ಕೆ ಇಟ್ಟು ಅವನ ಕೈಯಲ್ಲಿದ್ದ ಚಿಕ್ಕ ಸ್ಕ್ರೂಡ್ರೈವರ್ ನೋಡಿದಳು.
“ಅದು ಬೇಕಾ?” ಎಂದು ಅವನು ಕೇಳಿದ.
ಅವಳು ತಲೆ ಆಡಿಸಿದಳು. ಇಬ್ಬರೂ ಸೇರಿ ಹಾಳಾದ ಆಟದ ಕಾರನ್ನು ಬಿಚ್ಚಿದರು. ಅರ್ಧ ಗಂಟೆಯಲ್ಲಿ ಮಿಹಿಕಾ ಮೊದಲ ಬಾರಿ ಮನಸಾರೆ ನಕ್ಕಳು.
“ಮಕ್ಕಳ ಜೊತೆ ಮಾತಾಡಲು ನನಗೆ ಬರುವುದಿಲ್ಲ ಎಂದುಕೊಂಡಿದ್ದೆ,” ಎಂದು ವಾಪಸ್ಸಾಗುವಾಗ ಆದಿತ್ಯ ಹೇಳಿದ.
“ನೀವು ಇಬ್ಬರೂ ಮಾತಾಡಲೇ ಇಲ್ಲ.”
“ಆದ್ದರಿಂದಲೇ ಚೆನ್ನಾಗಿ ಆಯಿತು.”
ವೈದೇಹಿ ನಕ್ಕಳು. ಆದಿತ್ಯ ಮತ್ತು ಮಿಹಿಕಾಳ ನಡುವಿನ ಸ್ನೇಹ ಪದಗಳಿಗಿಂತ ಕೆಲಸದ ಮೂಲಕ ಬೆಳೆಯುತ್ತಿತ್ತು.
ಆದರೆ ಮಿಹಿಕಾ ಹೇಳಿದ ಹೆಸರು ಮತ್ತು ಚಿತ್ರ ವೈದೇಹಿಯನ್ನು ಕಾಡುತ್ತಲೇ ಇತ್ತು. ಸಮಾಜಕಾರ್ಯಕರ್ತೆ ಮೂಲಕ ಮಗುವಿನ ತಾಯಿ ಕುರಿತು ಲಭ್ಯವಿದ್ದ ದಾಖಲೆಗಳನ್ನು ಕೇಳಿದಳು. ಹೆಸರು—ಸಾನ್ವಿ. ವೃತ್ತಿ—ತಾತ್ಕಾಲಿಕ ಶಿಕ್ಷಕಿ. ಮರಣದ ಕಾರಣ—ತೀವ್ರ ಅನಾರೋಗ್ಯ. ಉಳಿದ ವಿವರಗಳು ಕಡಿಮೆ. ಮಿಹಿಕಾಳ ವಸ್ತುಗಳೊಂದಿಗೆ ಒಂದು ಬೀಗ ಹಾಕಿದ ಟಿನ್ ಪೆಟ್ಟಿಗೆ ಇತ್ತು. ಕಾನೂನು ಪ್ರಕ್ರಿಯೆ ಪೂರ್ಣವಾದ ನಂತರ ಅದನ್ನು ಮಗುವಿಗೆ ನೀಡಬಹುದೆಂದರು.
ತಿಂಗಳುಗಳ ನಂತರ ಮಿಹಿಕಾ ಅವರ ಮನೆಗೆ ಬಂದಳು. ಅವಳಿಗಾಗಿ ಸಿದ್ಧಪಡಿಸಿದ್ದ ಕೊಠಡಿಯ ಗೋಡೆಯ ಬಣ್ಣ ಕೇಳಿದಾಗ, “ಮಳೆಯ ನಂತರದ ಆಕಾಶದ ಬಣ್ಣ,” ಎಂದಳು. ಆದಿತ್ಯ ಮೂರು ಬಣ್ಣದ ಡಬ್ಬಿ ತಂದು ಕೊನೆಗೆ ಯಾವುದು ಸರಿಯೆಂದು ಅವಳಿಂದಲೇ ಆರಿಸಿಕೊಂಡ.
ಮೊದಲ ರಾತ್ರಿ ಮಿಹಿಕಾ ಹಾಸಿಗೆಯಲ್ಲಿ ಮಲಗಲಿಲ್ಲ. ಬಾಗಿಲ ಬಳಿ ಚಾಪೆ ಹಾಸಿಕೊಂಡಳು.
“ಇಲ್ಲಿ ಯಾಕೆ?” ಎಂದು ವೈದೇಹಿ ಕೇಳಿದಳು.
“ಬಾಗಿಲು ಮುಚ್ಚಿದರೆ ಬೆಳಿಗ್ಗೆ ನೀವು ಇರದಿದ್ದರೆ?”
ವೈದೇಹಿಯ ಎದೆ ಬಿಗಿಯಿತು. ಅವಳು ಕೂಡ ಚಾಪೆಯ ಮೇಲೆ ಪಕ್ಕದಲ್ಲಿ ಮಲಗಿದಳು. “ನೀನು ಎದ್ದಾಗ ನಾನು ಇಲ್ಲದಿದ್ದರೆ ಅಡುಗೆಮನೆಯಲ್ಲಿ ಇರಬಹುದು, ಕೇಂದ್ರಕ್ಕೆ ಹೋಗಿರಬಹುದು ಅಥವಾ ಸ್ನಾನಗೃಹದಲ್ಲಿ ಇರಬಹುದು. ಆದರೆ ನಿನ್ನನ್ನು ಬಿಟ್ಟು ಹೋಗಿರುವುದಿಲ್ಲ.”
“ಎಲ್ಲ ಅಮ್ಮಂದಿರೂ ಹೋಗುವುದಿಲ್ಲವಾ?”
ವೈದೇಹಿ ಉತ್ತರ ಹುಡುಕಲಿಲ್ಲ. “ಕೆಲವರು ಹೋಗಬೇಕಾಗುತ್ತದೆ. ಆದರೆ ಅವರ ಪ್ರೀತಿ ಹೋಗುವುದಿಲ್ಲ.”
“ನನ್ನ ಅಮ್ಮನ ಪ್ರೀತಿ ಎಲ್ಲಿದೆ?”
“ಬಹುಶಃ ನಿನ್ನೊಳಗೆ. ಸ್ವಲ್ಪ ನಿನ್ನ ಚಿತ್ರಗಳಲ್ಲಿ. ಸ್ವಲ್ಪ ನೀನು ಹೇಳುವ ಮಾತುಗಳಲ್ಲಿ. ಉಳಿದದ್ದು ನಿನ್ನನ್ನು ಪ್ರೀತಿಸುವವರೊಳಗೆ ಜಾಗ ಮಾಡಿಕೊಳ್ಳುತ್ತದೆ.”
ಮಿಹಿಕಾ ಅವಳ ಕೈ ಹಿಡಿದು ಮಲಗಿದಳು. ‘ಅಮ್ಮ’ ಎಂದು ಕರೆಯಲು ಅವಳಿಗೆ ಇನ್ನೂ ಎರಡು ತಿಂಗಳು ಬೇಕಾಯಿತು. ವೈದೇಹಿ ಅದಕ್ಕಾಗಿ ಕಾಯಲಿಲ್ಲ. ಸಂಬಂಧಕ್ಕೆ ಹೆಸರು ಬರುವ ಮುನ್ನವೇ ಅದರ ಹೊಣೆಗಾರಿಕೆ ಆರಂಭವಾಗುತ್ತದೆ ಎಂಬುದು ಅವಳಿಗೆ ತಿಳಿದಿತ್ತು.
ಮಿಹಿಕಾ ಕೇಂದ್ರಕ್ಕೆ ಬರತೊಡಗಿದಳು. ಮೊದಲಿಗೆ ಇತರ ಮಕ್ಕಳೊಂದಿಗೆ ಬೆರೆಯಲಿಲ್ಲ. ಮಳೆ ಬಂದಾಗ ಮೇಜಿನ ಕೆಳಗೆ ಅಡಗುತ್ತಿದ್ದಳು. ವೈದೇಹಿ ಅವಳನ್ನು ಎಳೆದು ಹೊರಗೆ ತರಲಿಲ್ಲ. ತಾನೂ ಪಕ್ಕದಲ್ಲಿ ಕುಳಿತು ಮಳೆಯ ಸದ್ದು ಎಣಿಸುತ್ತಿದ್ದಳು.
“ಒಂದು… ಎರಡು… ಮೂರು…”
“ಮಳೆ ಎಷ್ಟು ಹೊತ್ತು ಇರುತ್ತದೆ?”
“ಅದು ಹೋಗುವವರೆಗೆ.”
“ನೋವು?”
ವೈದೇಹಿ ಕ್ಷಣಕಾಲ ಮೌನವಾದಳು. “ಅದೂ ಹೋಗುವುದಿಲ್ಲ. ಆದರೆ ಒಂದು ದಿನ ಅದರ ಸದ್ದು ಕಡಿಮೆಯಾಗುತ್ತದೆ.”
ಮಿಹಿಕಾ ನಿಧಾನವಾಗಿ ಅವಳ ಭುಜಕ್ಕೆ ಒರಗಿದಳು.
ಒಂದು ವರ್ಷದೊಳಗೆ ಮಿಹಿಕಾ ಮನೆಯಲ್ಲಿ ಬೆರೆತಳು. ಕಮಲಾಳನ್ನು “ದೊಡ್ಡಮ್ಮ”, ಶ್ರೀಧರರನ್ನು “ಕಥೆತಾತ” ಎಂದು ಕರೆಯುತ್ತಿದ್ದಳು. ವಿನಯನಿಗೆ ಪ್ರತಿದಿನ ವಿಚಿತ್ರ ಪ್ರಶ್ನೆ ಕೇಳಿ ಕಾಡುತ್ತಿದ್ದಳು. ಆದಿತ್ಯನ ಕಚೇರಿಯಲ್ಲಿ ಹಾಳಾದ ಉಪಕರಣಗಳನ್ನು ತೆರೆದು ನೋಡುವುದು ಅವಳ ಹವ್ಯಾಸ. ವೈದೇಹಿಯ ಕೇಂದ್ರದಲ್ಲಿ ಚಿತ್ರಕಲೆಯ ತರಗತಿ ಅವಳ ಪ್ರಿಯ ಜಾಗ.
ಒಂದು ದಿನ ಕಾನೂನು ಪ್ರಕ್ರಿಯೆಯ ಉಳಿದ ದಾಖಲೆಗಳೊಂದಿಗೆ ಟಿನ್ ಪೆಟ್ಟಿಗೆಯೂ ಬಂತು. ಮಿಹಿಕಾ ಅದನ್ನು ತಕ್ಷಣ ತೆರೆಯಲಿಲ್ಲ. “ಇದು ಅಮ್ಮನ ವಾಸನೆ ಇರಬಹುದು. ತೆರೆದರೆ ಹೊರಗೆ ಹೋಗಿಬಿಡುತ್ತದಾ?” ಎಂದು ಕೇಳಿದಳು.
“ವಾಸನೆ ಹೊರಗೆ ಬಂದರೂ ನೆನಪು ಒಳಗೇ ಇರುತ್ತದೆ,” ಎಂದು ವೈದೇಹಿ ಹೇಳಿದಳು.
ಪೆಟ್ಟಿಗೆಯಲ್ಲಿ ಎರಡು ಸೀರೆಗಳು, ಕೆಲವು ಚಿತ್ರಗಳು, ಹಳೆಯ ಮೊಬೈಲ್, ಒಂದು ಡೈರಿ ಮತ್ತು ಬಟ್ಟೆಯಲ್ಲಿ ಸುತ್ತಿದ ನೀಲಿ ಹೂವಿತ್ತು. ಆ ಹೂವು ಒಣಗಿ ಬಣ್ಣ ಕಳೆದುಕೊಂಡಿದ್ದರೂ, ವೈದೇಹಿಯ ಹೃದಯ ಜೋರಾಗಿ ಬಡಿತವಾಯಿತು. ತನ್ನ ಕಾಲೇಜಿನ ದಿನಗಳಲ್ಲಿ ಪುಸ್ತಕದ ನಡುವೆ ಇಟ್ಟುಕೊಂಡಿದ್ದ ಹೂವಿನಂತೆಯೇ ಅದು ಕಾಣುತ್ತಿತ್ತು.
ಹಳೆಯ ಮೊಬೈಲ್ ಕೆಲಸ ಮಾಡಲಿಲ್ಲ. ಆದಿತ್ಯ ಜಾಗ್ರತೆಯಿಂದ ಅದರ ಸಂಗ್ರಹದಲ್ಲಿದ್ದ ಧ್ವನಿಮುದ್ರಣಗಳನ್ನು ಹೊರತೆಗೆದ. ಬಹುತೇಕ ಮಿಹಿಕಾಳ ಬಾಲ್ಯದ ನಗು, ಹಾಡು, ಸಾನ್ವಿಯ ಕಥೆಗಳು. ಕೊನೆಯ ಕಡತದ ಹೆಸರು—“ದೇಹೀಗೆ”.
ವೈದೇಹಿಯ ಬೆರಳು ನಡುಗಿತು. ಮಿಹಿಕಾ ಅವಳ ಪಕ್ಕದಲ್ಲಿ ಕುಳಿತಳು. ಆದಿತ್ಯ ಧ್ವನಿಯನ್ನು ಚಾಲನೆ ಮಾಡಿದ.
“ದೇಹೀ… ಈ ಧ್ವನಿ ಯಾವಾಗಲಾದರೂ ನಿನ್ನವರೆಗೆ ತಲುಪುತ್ತದೆಯೋ ಗೊತ್ತಿಲ್ಲ. ಬಹುಶಃ ನೀನು ನನ್ನನ್ನು ನೆನಪಿಸಿಕೊಳ್ಳಲೂ ಸಾಧ್ಯವಿಲ್ಲ. ಹನ್ನೊಂದು ವರ್ಷಗಳ ಹಿಂದೆ ಮಳೆ ಬರುತ್ತಿದ್ದ ಒಂದು ಸಂಜೆ, ನಗರದ ಬಸ್ ನಿಲ್ದಾಣದಲ್ಲಿ ನಾನು ಅಳುತ್ತಾ ಕುಳಿತಿದ್ದೆ. ಶಿಕ್ಷಕ ತರಬೇತಿಯ ಶುಲ್ಕ ಕಟ್ಟಲಾಗದೆ ಊರಿಗೆ ಹಿಂದಿರುಗಲು ಹೊರಟಿದ್ದೆ. ಬದುಕಿನಲ್ಲಿ ನನಗಾಗಿ ಯಾವ ದಾರಿಯೂ ಇಲ್ಲ ಎಂದುಕೊಂಡಿದ್ದೆ.
“ನೀನು ನನ್ನ ಪಕ್ಕದಲ್ಲಿ ಕುಳಿತು ಕಾರಣ ಕೇಳಿದ್ದೆ. ನಾವು ಅಪರಿಚಿತರು. ಆದರೂ ನನ್ನ ಕಥೆಯನ್ನು ಸಂಪೂರ್ಣ ಕೇಳಿದ್ದೆ. ನಿನ್ನ ಬ್ಯಾಗಿನಲ್ಲಿದ್ದ ಹಣವನ್ನು ಕೊಡಲು ಬಂದಾಗ ನಾನು ನಿರಾಕರಿಸಿದ್ದೆ. ಆಗ ನೀನು ನಿನ್ನ ಶಿಕ್ಷಣ ಕೇಂದ್ರಕ್ಕೆ ಸಹಾಯಕಿಯಾಗಿ ಬರಲು ಹೇಳಿದ್ದೆ. ‘ಸಹಾಯ ಬೇಡ, ಕೆಲಸ ಮಾಡು; ನಿನ್ನ ಕಾಲಿನ ಮೇಲೆ ನಿಂತಾಗ ಮತ್ತೊಬ್ಬರಿಗೆ ಜಾಗ ಮಾಡು,’ ಎಂದಿದ್ದೆ.
“ನಾನು ಅಲ್ಲಿ ಆರು ತಿಂಗಳು ಕೆಲಸ ಮಾಡಿದೆ. ನಂತರ ದೂರದ ಊರಿನಲ್ಲಿ ಶಿಕ್ಷಕಿಯ ಕೆಲಸ ಸಿಕ್ಕಿತು. ಹೊರಡುವ ದಿನ ನಿನಗೆ ಧನ್ಯವಾದ ಹೇಳಲಿಲ್ಲ. ನನಗೆ ನಾಚಿಕೆಯಾಗಿತ್ತು. ಜೀವನ ಸರಿಯಾದ ಮೇಲೆ ಬರುತ್ತೇನೆಂದುಕೊಂಡೆ. ಆದರೆ ಜೀವನ ಯಾವಾಗಲೂ ನಾವು ಬರೆದ ವೇಳಾಪಟ್ಟಿಯನ್ನು ಪಾಲಿಸುವುದಿಲ್ಲ.
“ಮಿಹಿಕಾ ಹುಟ್ಟಿದ ನಂತರ ಅವಳ ತಂದೆ ನಮ್ಮನ್ನು ಬಿಟ್ಟುಹೋದ. ಅನಾರೋಗ್ಯ ಬಂದಾಗ ನಾನು ಮತ್ತೆ ನಿನ್ನನ್ನು ಹುಡುಕಿದೆ. ನಿನ್ನ ಕೇಂದ್ರ ದೊಡ್ಡದಾಗಿತ್ತು. ನಿನ್ನ ಚಿತ್ರ ಪತ್ರಿಕೆಯಲ್ಲಿ ಬಂದಿತ್ತು. ನೀನು ಮಕ್ಕಳ ನಡುವೆ ನಗುತ್ತಾ ನಿಂತಿದ್ದೆ. ನಿನ್ನ ಬದುಕಿಗೆ ನನ್ನ ಸಮಸ್ಯೆಯನ್ನು ಮತ್ತೆ ತೆಗೆದುಕೊಂಡು ಹೋಗಬಾರದೆಂದು ಹಿಂದಿರುಗಿದೆ. ಅದು ಸರಿಯಾದ ನಿರ್ಧಾರವೋ ಗೊತ್ತಿಲ್ಲ.
“ಮಿಹಿಕಾ ಮಳೆ ಬಂದಾಗ ಹೆದರುತ್ತಾಳೆ. ಆಗ ನಾನು ಅವಳಿಗೆ ನೀನು ನನಗೆ ಹೇಳಿದ್ದ ಮಾತನ್ನೇ ಹೇಳುತ್ತೇನೆ—‘ಈ ಸಮಯವೂ ಕಳೆದುಹೋಗುತ್ತದೆ. ನೀನು ಒಬ್ಬಳೇ ಅಲ್ಲ.’ ಅವಳಿಗೆ ಶಾಲೆ ಬಿಡಿಸಲು ಹೇಳಿದಾಗ, ನೀನು ಬಾಲ್ಯದಲ್ಲಿ ಬಿಡಿಸಿದ್ದ ಶಾಲೆಯ ಚಿತ್ರವನ್ನು ನೆನಪಿನಿಂದ ಬಿಡಿಸಿ ತೋರಿಸಿದೆ. ಆ ಚಿತ್ರವನ್ನು ನೀನು ಒಮ್ಮೆ ಸಹಾಯಕಿಯರ ಸಭೆಯಲ್ಲಿ ತೋರಿಸಿ, ‘ಯಾವ ಮಗುವಿಗೂ ಹೆದರಿಕೆ ಇಲ್ಲದ ಶಾಲೆ ಕಟ್ಟಬೇಕು’ ಎಂದಿದ್ದೆ. ಮಿಹಿಕಾ ಅದನ್ನೇ ಮತ್ತೆ ಮತ್ತೆ ಬಿಡಿಸುತ್ತಾಳೆ.
“ನನಗೆ ಏನಾದರೂ ಆದರೆ ಅವಳು ನಿನ್ನ ಬಳಿಗೇ ಬರಲಿ ಎಂದು ಬರೆಯುವ ಹಕ್ಕು ನನಗಿದೆಯೋ ಗೊತ್ತಿಲ್ಲ. ತಾಯ್ತನವನ್ನು ಯಾರ ಮೇಲೆ ಹೇರಲಾಗುವುದಿಲ್ಲ. ಆದರೆ ಒಂದು ಸತ್ಯ ಹೇಳಬಹುದು—ನನ್ನನ್ನು ಜನ್ಮಕೊಟ್ಟವರಿಗಿಂತ, ಬದುಕಲು ಒಂದು ಕಾರಣ ಕೊಟ್ಟವಳು ನೀನು. ನನ್ನ ಮಗಳಿಗೆ ನೀನು ಸಿಕ್ಕರೆ, ಅದು ಅವಳ ಅದೃಷ್ಟ ಮಾತ್ರವಲ್ಲ; ನಾನು ಬದುಕಿನಲ್ಲಿ ಮಾಡಿದ ಒಂದೇ ಒಳ್ಳೆಯ ಪ್ರಾರ್ಥನೆಗೆ ಬಂದ ಉತ್ತರ.
“ದೇಹೀ, ನೀನು ಎಲ್ಲರಿಗೂ ಧೈರ್ಯ ಹೇಳುತ್ತೀಯ. ಆದರೆ ನಿನ್ನ ನಗುವಿನ ಹಿಂದೆ ಎಷ್ಟು ಆಯಾಸವಿದೆ ಎಂದು ಆರು ತಿಂಗಳಲ್ಲಿ ನಾನು ನೋಡಿದ್ದೆ. ಒಂದು ದಿನ ನಿನಗೂ ‘ನೀನು ಒಬ್ಬಳೇ ಅಲ್ಲ’ ಎಂದು ಯಾರಾದರೂ ಹೇಳಬೇಕಾಗಬಹುದು. ಆ ದಿನ ಈ ಮಾತು ನಿನ್ನ ಬಳಿಗೆ ಮರಳಲಿ…”
ಧ್ವನಿ ನಿಂತಿತು.
ಕೋಣೆಯಲ್ಲಿ ಮಳೆಯ ಸದ್ದು ಮಾತ್ರ ಉಳಿಯಿತು. ವೈದೇಹಿ ಅಳಲಿಲ್ಲ. ಬಹಳ ಹೊತ್ತು ಉಸಿರಾಡುವುದನ್ನೇ ಮರೆತವಳಂತೆ ಕುಳಿತಳು. ನಂತರ ಅವಳೊಳಗೆ ವರ್ಷಗಳಿಂದ ಕೇಳಿಸುತ್ತಿದ್ದ ಧ್ವನಿಯ ರಹಸ್ಯ ನಿಧಾನವಾಗಿ ತೆರೆದುಕೊಂಡಿತು.
ಅದು ಮರೆಯಲಾಗದ ಮೊದಲ ಪ್ರೀತಿಯ ವ್ಯಕ್ತಿಯ ಧ್ವನಿಯೆಂದು ಅವಳು ಕೆಲವೊಮ್ಮೆ ಭಾವಿಸಿದ್ದಳು. ಕೆಲವೊಮ್ಮೆ ದೇವರ ಸಾಂತ್ವನವೆಂದುಕೊಂಡಿದ್ದಳು. ಆದರೆ ಈಗ ಅರ್ಥವಾಯಿತು—ಆ ಮಾತು ಮೊದಲಿಗೆ ಅವಳದೇ ಆಗಿತ್ತು. ಒಮ್ಮೆ ಅಪರಿಚಿತಳಿಗೆ ತಾನು ನೀಡಿದ್ದ ಧೈರ್ಯ, ಸಾನ್ವಿಯ ಹೃದಯದಲ್ಲಿ ಆಶ್ರಯ ಪಡೆದು, ಮಿಹಿಕಾಳ ಬಾಲ್ಯದಲ್ಲಿ ಬೆಳೆದು, ಕಾಲವನ್ನು ಸುತ್ತಿಕೊಂಡು ಮತ್ತೆ ತನ್ನ ಬಳಿಗೆ ಮರಳಿತ್ತು.
“ನೀವು ಯಾಕೆ ಅಳುತ್ತಿಲ್ಲ?” ಎಂದು ಮಿಹಿಕಾ ಕೇಳಿದಳು.
ವೈದೇಹಿ ಅವಳನ್ನು ಬಿಗಿಯಾಗಿ ಅಪ್ಪಿಕೊಂಡಳು. ಆಗ ಕಣ್ಣೀರು ಒಡೆದುಬಂತು. “ನಾನು ಇಷ್ಟು ವರ್ಷ ನನ್ನನ್ನು ಯಾರೋ ಉಳಿಸುತ್ತಿದ್ದಾರೆಂದುಕೊಂಡಿದ್ದೆ ಮಿಹಿಕಾ. ಆದರೆ ನಿನ್ನ ಅಮ್ಮ ನನ್ನದೇ ಮಾತನ್ನು ಜೋಪಾನವಾಗಿ ಇಟ್ಟು ಮತ್ತೆ ನನಗೆ ಕಳುಹಿಸಿದ್ದಾಳೆ.”
“ಅಮ್ಮಗೆ ನೀವು ಗೊತ್ತಿತ್ತಾ?”
“ಹೌದು. ಆದರೆ ಅವಳಿಗಿಂತ ಹೆಚ್ಚು ಅವಳ ಧೈರ್ಯ ನನಗೆ ಈಗ ಗೊತ್ತಾಯಿತು.”
“ಹಾಗಾದರೆ ನನಗೆ ಇಬ್ಬರು ಅಮ್ಮಂದಿರಾ?”
ವೈದೇಹಿ ಅವಳ ಮುಖವನ್ನು ಕೈಗಳಲ್ಲಿ ಹಿಡಿದಳು. “ಪ್ರೀತಿಯನ್ನು ಭಾಗಿಸಿದರೆ ಕಡಿಮೆಯಾಗುವುದಿಲ್ಲ ಮಿಹಿಕಾ. ನಿನ್ನನ್ನು ಜನ್ಮಕೊಟ್ಟ ಅಮ್ಮ ನಿನ್ನೊಳಗಿದ್ದಾಳೆ. ನಿನ್ನ ಜೊತೆ ಬದುಕುವ ಅಮ್ಮ ನಿನ್ನ ಮುಂದೆ ಇದ್ದಾಳೆ. ಯಾರನ್ನೂ ಕಳೆದುಕೊಳ್ಳದೆ ಇಬ್ಬರನ್ನೂ ಪ್ರೀತಿಸಬಹುದು.”
ಮಿಹಿಕಾ ವೈದೇಹಿಯ ಕಣ್ಣೀರು ಒರೆಸಿದಳು. “ಆಗ ನೀವು ಮತ್ತೆ ದುಃಖವಾದರೆ ನಾನು ಅಮ್ಮ ಹೇಳಿದ ಮಾತು ಹೇಳುತ್ತೇನೆ.”
“ಏನು ಹೇಳುತ್ತೀಯ?”
ಮಗು ಅವಳ ಕಿವಿಯ ಬಳಿ ಬಂದು ಪಿಸುಗುಟ್ಟಿತು. “ದೇಹೀ… ಈ ಸಮಯವೂ ಕಳೆದುಹೋಗುತ್ತದೆ. ನಾನು ಇಲ್ಲೇ ಇದ್ದೇನೆ.”
ಆದಿತ್ಯ ಮುಖ ತಿರುಗಿಸಿ ಕಣ್ಣೀರು ಮರೆಮಾಡಲು ಪ್ರಯತ್ನಿಸಿದ. ಮಿಹಿಕಾ ಅವನನ್ನು ನೋಡಿ, “ಅಪ್ಪಾ, ನಿಮ್ಮ ಕಣ್ಣಿಗೆ ಮಳೆ ಬಂತಾ?” ಎಂದು ಕೇಳಿದಳು.
“ಹೌದು. ನಮ್ಮ ಮನೆಯೊಳಗೂ ಮಳೆ ಬರುತ್ತದೆ ಅನ್ನಿಸುತ್ತದೆ,” ಎಂದ.
“ಛತ್ರಿ ತರಲಾ?”
ಮೂರೂ ಜನ ನಗುತ್ತಲೇ ಅತ್ತರು.
ಮುಂದಿನ ವರ್ಷ ಸಹಜ ಶಿಕ್ಷಣ ಕೇಂದ್ರದ ಹೊಸ ಕಟ್ಟಡ ಉದ್ಘಾಟನೆಯಾಯಿತು. ವೈದೇಹಿ ಬಾಲ್ಯದಲ್ಲಿ ಬಿಡಿಸಿದ್ದ ಚಿತ್ರದಂತೆಯೇ ಮಧ್ಯದಲ್ಲಿ ದೊಡ್ಡ ಮರವಿತ್ತು. ಒಂದು ಕಡೆ ಪಾಠದ ಕೊಠಡಿಗಳು, ಇನ್ನೊಂದು ಕಡೆ ಸಂಗೀತ ಮತ್ತು ಕಲಾ ವಿಭಾಗ, ಮೂರನೆಯ ಕಡೆ ಡಿಜಿಟಲ್ ಕಲಿಕಾ ಕೇಂದ್ರ. ಮರದ ಕೆಳಗೆ ಕಲ್ಲಿನ ವೃತ್ತಾಕಾರದ ಆಸನ ಮಾಡಿಸಲಾಗಿತ್ತು. ಅದರ ಮೇಲೆ ಒಂದು ಸಾಲು ಕೆತ್ತಲಾಗಿತ್ತು:
‘ಇಲ್ಲಿ ಯಾರೂ ಅಪೂರ್ಣರಲ್ಲ; ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಅರಳುತ್ತಿರುವವರು.’
ವೈದೇಹಿ ಕೇಂದ್ರದ ಒಂದು ವಿಭಾಗಕ್ಕೆ “ಸಾನ್ವಿ ಆಶ್ರಯ” ಎಂದು ಹೆಸರಿಟ್ಟಳು. ಆರ್ಥಿಕ ಸಮಸ್ಯೆಯಿಂದ ಓದು ನಿಲ್ಲಿಸುವ ಹೆಣ್ಣುಮಕ್ಕಳಿಗೆ ತರಬೇತಿ ಮತ್ತು ಕೆಲಸದ ಅವಕಾಶ ನೀಡಲಾಯಿತು. ಸಹಾಯ ಪಡೆಯುವವರು ನಾಚಿಕೆಪಡಬಾರದು ಎಂಬ ಕಾರಣಕ್ಕೆ ಅದನ್ನು ದಾನವೆಂದು ಕರೆಯಲಿಲ್ಲ; ‘ಮುಂದಿನ ಕೈ’ ಯೋಜನೆ ಎಂದು ಹೆಸರಿಟ್ಟಳು. ನೆರವು ಪಡೆದವರು ಸಾಮರ್ಥ್ಯ ಬಂದಾಗ ಮತ್ತೊಬ್ಬರ ಕೈ ಹಿಡಿಯಬೇಕು—ಅಷ್ಟೇ ನಿಯಮ.
ಉದ್ಘಾಟನೆಯ ದಿನ ಮಳೆ ಬಂತು. ಅತಿಥಿಗಳು ಮರದ ಕೆಳಗಿಂದ ಸಭಾಂಗಣಕ್ಕೆ ಓಡಿದರು. ಮಿಹಿಕಾ ಮಾತ್ರ ಮಳೆಯಲ್ಲಿ ನಿಂತು ಕೈ ಚಾಚಿದಳು.
“ಹೆದರಿಕೆಯಾಗುವುದಿಲ್ಲವಾ?” ಎಂದು ಆದಿತ್ಯ ಕೇಳಿದ.
“ಈಗ ಮಳೆ ಬಂದರೆ ಅಮ್ಮ ಹೋಗುವುದಿಲ್ಲ. ಇಬ್ಬರೂ ಬರುತ್ತಾರೆ,” ಎಂದು ಅವಳು ಆಕಾಶದತ್ತ ಮತ್ತು ವೈದೇಹಿಯತ್ತ ತೋರಿಸಿದಳು.
ವೈದೇಹಿ ಅವಳ ಬಳಿ ಹೋಗಿ ನಿಂತಳು. ಮಳೆ ಅವರಿಬ್ಬರನ್ನೂ ನೆನೆಸಿತು. ಹಲವು ವರ್ಷಗಳ ಹಿಂದೆ ಆಸ್ಪತ್ರೆಯ ಮೆಟ್ಟಿಲ ಮೇಲೆ ತನ್ನ ಕಣ್ಣೀರನ್ನು ಮರೆಮಾಡಿದ್ದ ಅದೇ ಮಳೆ, ಇಂದು ಅವಳ ಮುಖದ ನಗುವನ್ನು ಇನ್ನಷ್ಟು ಸ್ಪಷ್ಟಗೊಳಿಸುತ್ತಿತ್ತು.
ಆ ರಾತ್ರಿ ಕಾರ್ಯಕ್ರಮ ಮುಗಿದ ನಂತರ ವೈದೇಹಿ ಒಬ್ಬಳೇ ಮರದ ಕೆಳಗೆ ಕುಳಿತಳು. ಅವಳ ಕೈಯಲ್ಲಿ ಹುಟ್ಟದ ಮಕ್ಕಳಿಗೆ ಬರೆದಿದ್ದ ಎರಡು ಪತ್ರಗಳಿದ್ದವು. ಅವುಗಳನ್ನು ಸುಡಬೇಕೆಂದು ಒಮ್ಮೆ ಯೋಚಿಸಿದ್ದಳು. ನಂತರ ಹರಿಯುವ ನೀರಿಗೆ ಬಿಡಬೇಕೆಂದಿದ್ದಳು. ಈಗ ಅವನ್ನು ಮಿಹಿಕಾಳ ತಾಯಿಯ ಡೈರಿಯ ಪಕ್ಕದಲ್ಲಿ ಜೋಪಾನವಾಗಿ ಇಡಲು ನಿರ್ಧರಿಸಿದಳು.
ಆದಿತ್ಯ ಬಂದು ಪಕ್ಕದಲ್ಲಿ ಕುಳಿತ. “ಇನ್ನೂ ಅವರ ಬಗ್ಗೆ ಯೋಚಿಸುತ್ತೀಯಾ?”
“ಪ್ರತಿದಿನ ಅಲ್ಲ. ಆದರೆ ಕೆಲವು ದಿನ.”
“ಮಿಹಿಕಾ ಬಂದ ಮೇಲೆ ನೋವು ಹೋಗಿದೆಯಾ?”
ವೈದೇಹಿ ತಲೆ ಆಡಿಸಿದಳು. “ಒಂದು ಮಗು ಮತ್ತೊಂದು ಮಗುವಿನ ಸ್ಥಾನ ತುಂಬುವುದಿಲ್ಲ ಆದಿತ್ಯ. ಮಿಹಿಕಾ ನನ್ನ ನಷ್ಟಕ್ಕೆ ಪರಿಹಾರವಲ್ಲ. ಅವಳು ತನ್ನದೇ ಸಂಪೂರ್ಣ ಕಥೆಯೊಂದಿಗೆ ಬಂದವಳು. ನನ್ನೊಳಗೆ ಬಂದಿದ್ದ ಆ ಎರಡು ಜೀವಗಳು ಉಳಿಯಲಿಲ್ಲ; ಅವುಗಳ ನೆನಪು ಬೇರೆ. ಮಿಹಿಕಾಳ ಮೇಲಿನ ಪ್ರೀತಿ ಬೇರೆ. ಎಲ್ಲವೂ ಒಂದೇ ಹೃದಯದಲ್ಲಿ ಇರಬಹುದು.”
“ಹೃದಯಕ್ಕೆ ಅಷ್ಟು ಜಾಗ ಹೇಗೆ ಸಿಗುತ್ತದೆ?”
“ನೋವು ಬಂದಾಗ ಅದು ಒಡೆಯುತ್ತದೆ ಅಲ್ವಾ? ಒಡೆದ ಬಿರುಕುಗಳ ನಡುವೆ ಹೊಸ ಜಾಗ ಸಿಗಬಹುದು.”
ಆದಿತ್ಯ ಅವಳ ಕೈ ಹಿಡಿದ. “ನಾನು ನಿನ್ನ ಮೌನ ಅರ್ಥಮಾಡಿಕೊಳ್ಳುವ ತರಬೇತಿಯಲ್ಲಿ ಈಗ ಎಷ್ಟು ಅಂಕ ಪಡೆದಿದ್ದೇನೆ?”
“ಪಾಸ್ ಆಗಿದ್ದೀಯ. ಆದರೆ ಜೀವಮಾನಪೂರ್ತಿ ಮರುಪರೀಕ್ಷೆ ಇದೆ.”
“ಅದು ಅನ್ಯಾಯ.”
“ಮದುವೆಯ ನಿಯಮಾವಳಿಯನ್ನು ಓದದೆ ಸಹಿ ಮಾಡಿದ್ದು ನಿಮ್ಮ ತಪ್ಪು.”
ಇಬ್ಬರೂ ನಕ್ಕರು.
ದೂರದಲ್ಲಿ ಮಿಹಿಕಾ ಕಿಟಕಿಯ ಬಳಿ ನಿಂತು ಅವರನ್ನು ನೋಡುತ್ತಿದ್ದಳು. ಅವಳು ಹೊಸ ಚಿತ್ರವೊಂದನ್ನು ಬಿಡಿಸಿದ್ದಳು. ದೊಡ್ಡ ಮರದ ಕೆಳಗೆ ಈ ಬಾರಿ ಮುಖವಿಲ್ಲದ ಒಬ್ಬಳೇ ಮಹಿಳೆ ಇರಲಿಲ್ಲ. ಮೂವರು ಕೈ ಹಿಡಿದು ನಿಂತಿದ್ದರು. ಮೇಲಿನ ಮೋಡದ ಅಂಚಿನಲ್ಲಿ ಇನ್ನೊಬ್ಬ ಮಹಿಳೆಯ ಮುಖ ಮೃದುವಾಗಿ ಮೂಡಿತ್ತು. ಚಿತ್ರದ ಕೆಳಗೆ ಮಿಹಿಕಾ ತನ್ನ ಅಕ್ಷರಗಳಲ್ಲಿ ಬರೆದಿದ್ದಳು:
‘ಹೋದವರು ಆಕಾಶವಾಗುತ್ತಾರೆ. ಉಳಿದವರು ಒಬ್ಬರಿಗೊಬ್ಬರು ಛತ್ರಿಯಾಗುತ್ತಾರೆ.’
ವೈದೇಹಿ ಆ ಚಿತ್ರವನ್ನು ನೋಡಿದಾಗ ವರ್ಷಗಳಿಂದ ಕೇಳುತ್ತಿದ್ದ ಧ್ವನಿ ಮತ್ತೊಮ್ಮೆ ಕೇಳಿಸಿತು. ಆದರೆ ಈ ಬಾರಿ ಅದು ಹೊರಗಿನಿಂದಲೂ ಅಲ್ಲ, ನೆನಪಿನಿಂದಲೂ ಅಲ್ಲ. ಅದು ಅವಳ ಎದೆಯೊಳಗಿಂದ ಸ್ಪಷ್ಟವಾಗಿ ಬಂತು.
“ನೀನು ಒಬ್ಬಳೇ ಅಲ್ಲ.”
ಅವಳು ಕಣ್ಣು ಮುಚ್ಚಿ ತನ್ನೊಳಗಿನ ಎಲ್ಲ ರೂಪಗಳನ್ನು ನೆನೆದಳು—ಸೀಮೆಎಣ್ಣೆಯ ದೀಪದಲ್ಲಿ ಓದಿದ ಹುಡುಗಿ; ಕುಟುಂಬದ ಹೊಣೆ ಹೊತ್ತ ಮಗಳು; ಮೌನದಲ್ಲಿ ಉಳಿದ ಮೊದಲ ಭಾವನೆಯ ನೆರಳು; ನಷ್ಟದಲ್ಲಿ ಗಂಡನ ಕೈ ಹಿಡಿದ ಹೆಂಡತಿ; ಸೋತು ಮತ್ತೆ ಎದ್ದ ಉದ್ಯಮಿ; ಮಕ್ಕಳಿಗೆ ದಾರಿ ತೋರಿದ ಶಿಕ್ಷಕಿ; ಎರಡು ಬಾರಿ ತಾಯಿಯಾಗಿ ಎರಡು ಬಾರಿ ಖಾಲಿಯಾದ ದೇಹ; ಕೊನೆಗೆ ಮತ್ತೊಂದು ಮಗುವಿನ ನೋವಿಗೆ ಜಾಗಕೊಟ್ಟು ತಾಯ್ತನ ಕಂಡ ಮಹಿಳೆ.
ಅವುಗಳಲ್ಲಿ ಯಾವುದೂ ಸುಳ್ಳಾಗಿರಲಿಲ್ಲ. ಯಾವುದೂ ವ್ಯರ್ಥವಾಗಿರಲಿಲ್ಲ. ಪ್ರತಿಯೊಂದು ವೈದೇಹಿಯೂ ಮುಂದಿನ ವೈದೇಹಿಯನ್ನು ಬದುಕಿಸಿತ್ತು
ಜನರು ಅವಳನ್ನು ಸದಾ ನಗುವ ಮಹಿಳೆ ಎಂದು ಗುರುತಿಸುತ್ತಿದ್ದರು. ಹಿಂದೆ ಆ ನಗು ನೋವನ್ನು ಮರೆಮಾಡುವ ಪರದೆಯಾಗಿತ್ತು. ಈಗ ಅದು ನೋವನ್ನು ಗೆದ್ದ ಗುರುತಾಗಿರಲಿಲ್ಲ; ನೋವಿನೊಂದಿಗೆ ಬದುಕುವುದನ್ನು ಕಲಿತ ಬೆಳಕಾಗಿತ್ತು. ಗೆಲುವು ಎಂದರೆ ನೋವು ಇಲ್ಲದ ಸ್ಥಿತಿ ಅಲ್ಲ. ನೋವು ನಮ್ಮ ಬದುಕಿನ ಅರ್ಥವನ್ನು ನಿರ್ಧರಿಸದಂತೆ ನೋಡಿಕೊಳ್ಳುವ ಧೈರ್ಯವೇ ಗೆಲುವು ಎಂಬುದು ಅವಳಿಗೆ ತಿಳಿದಿತ್ತು.
ತಾಯ್ತನವೆಂದರೆ ಜೀವವೊಂದನ್ನು ಗರ್ಭದಲ್ಲಿ ಹೊರುವುದಷ್ಟೇ ಅಲ್ಲ. ಯಾರದೋ ಭಯವನ್ನು ನಮ್ಮ ಮಡಿಲಲ್ಲಿ ಮಲಗಲು ಬಿಡುವುದು; ಅವರ ಹಿಂದಿನ ಕಥೆಯನ್ನು ಅಳಿಸದೆ, ಮುಂದಿನ ಪುಟ ಬರೆಯಲು ಜೊತೆಯಾಗುವುದು; ‘ನೀನು ನನ್ನವಳು’ ಎನ್ನುವುದಕ್ಕಿಂತ ಮೊದಲು ‘ನೀನು ನೀನಾಗಿಯೇ ಸುರಕ್ಷಿತ’ ಎಂದು ಭರವಸೆ ನೀಡುವುದು.
ಪ್ರೀತಿಯೂ ಹಾಗೆಯೇ. ಅದು ಯಾವಾಗಲೂ ನಮ್ಮ ಬಳಿ ಉಳಿದ ವ್ಯಕ್ತಿಯ ರೂಪದಲ್ಲೇ ಇರಬೇಕಿಲ್ಲ. ಕೆಲವೊಮ್ಮೆ ಅದು ಹಳೆಯ ಹಾಡಿನೊಳಗೆ ಅಡಗುತ್ತದೆ. ಕೆಲವೊಮ್ಮೆ ಮಳೆಯ ಧ್ವನಿಯಾಗಿ ಬರುತ್ತದೆ. ನಾವು ಒಮ್ಮೆ ಅಪರಿಚಿತರಿಗೆ ನೀಡಿದ ಒಂದು ಮಾತಿನಲ್ಲಿ ಬೀಜವಾಗಿ ಉಳಿದು, ಹಲವು ವರ್ಷಗಳ ನಂತರ ಮಗುವಿನ ಕೈ ಹಿಡಿದು ನಮ್ಮ ಮನೆಬಾಗಿಲಿಗೆ ಮರಳುತ್ತದೆ.
ನಾವು ಯಾರಿಗಾದರೂ ನೀಡಿದ ಸಣ್ಣ ಧೈರ್ಯ ಆ ಕ್ಷಣದಲ್ಲೇ ಮುಗಿಯುವುದಿಲ್ಲ. ಅದು ಅವರ ಬದುಕಿನಲ್ಲಿ ಬೇರು ಬಿಡಬಹುದು; ಮತ್ತೊಬ್ಬರ ಬಾಲ್ಯಕ್ಕೆ ನೆರಳಾಗಬಹುದು; ಕಾಲದ ದೊಡ್ಡ ವೃತ್ತವನ್ನು ಸುತ್ತಿ, ಒಂದು ದಿನ ನಾವು ಕುಸಿದಾಗ ನಮ್ಮನ್ನೇ ಎತ್ತಬಹುದು. ಕರುಣೆಗೆ ನೆನಪು ಇರುತ್ತದೆ. ನಾವು ಮರೆತ ದಾರಿಯನ್ನೂ ಅದು ಮರೆಯುವುದಿಲ್ಲ.
ವೈದೇಹಿ ತಾಯ್ತನವನ್ನು ಹುಡುಕುತ್ತ ಹಲವು ಆಸ್ಪತ್ರೆಗಳ ಬಾಗಿಲು ತಟ್ಟಿದ್ದಳು. ಆದರೆ ಅವಳು ಹಲವು ವರ್ಷಗಳ ಹಿಂದೆ ಬಸ್ ನಿಲ್ದಾಣದಲ್ಲಿ ಬಿತ್ತಿದ್ದ ಮಮತೆಯೇ, ಮಿಹಿಕಾಳ ಪುಟ್ಟ ಕೈ ಹಿಡಿದು ಅವಳನ್ನು ಹುಡುಕುತ್ತ ಬಂದಿತ್ತು.
ಆ ರಾತ್ರಿ ಮಳೆ ನಿಧಾನವಾಗಿ ನಿಂತಿತು. ಮರದ ಎಲೆಗಳಿಂದ ಒಂದೊಂದೇ ಹನಿ ಜಾರುತ್ತಿತ್ತು. ವೈದೇಹಿ ಮನೆಯ ಬಾಗಿಲು ಮುಚ್ಚಲು ಎದ್ದಾಗ ಮಿಹಿಕಾ ಓಡಿ ಬಂದು ಅವಳ ಕೈ ಹಿಡಿದಳು. ಆದಿತ್ಯ ಮತ್ತೊಂದು ಬದಿಯಲ್ಲಿ ನಿಂತ.
ಮೂವರೂ ಒಳಗೆ ನಡೆಯುವಾಗ ಆಕಾಶದ ಮೋಡದ ನಡುವೆ ಒಂದು ನಕ್ಷತ್ರ ಕಾಣಿಸಿತು. ಮಿಹಿಕಾ ಅದನ್ನು ತೋರಿಸಿ, “ಅದು ನನ್ನ ಮೊದಲ ಅಮ್ಮನಾ?” ಎಂದು ಕೇಳಿದಳು.
ವೈದೇಹಿ ಆಕಾಶವನ್ನು ನೋಡಿ ನಗಿದಳು. “ಬಹುಶಃ ಅವಳೂ ಇರಬಹುದು. ಇನ್ನೂ ನಮ್ಮನ್ನು ದೂರದಿಂದ ಪ್ರೀತಿಸುವ ಎಲ್ಲರೂ ಇರಬಹುದು.”
“ಆಗ ನಾವು ಅವರಿಗೆ ಏನು ಹೇಳಬೇಕು?”
ವೈದೇಹಿ ಮಗಳ ಕೈಯನ್ನು ಗಟ್ಟಿಯಾಗಿ ಹಿಡಿದಳು.
“ನೀವು ಕೊಟ್ಟ ಬೆಳಕು ನಮ್ಮವರೆಗೆ ತಲುಪಿದೆ ಎಂದು ಹೇಳೋಣ.”
ಮಿಹಿಕಾ ಆಕಾಶದತ್ತ ಕೈ ಬೀಸಿದಳು. ಮನೆಯೊಳಗೆ ಹೋಗುವ ಮುನ್ನ ವೈದೇಹಿ ಮತ್ತೊಮ್ಮೆ ಹಿಂದಿರುಗಿ ನೋಡಿದಳು. ಮಳೆಯಿಂದ ತೊಳೆದ ಅಂಗಳದಲ್ಲಿ ಬೀದಿದೀಪದ ಬೆಳಕು ಬೆಳ್ಳಿಯ ದಾರಿಯಂತೆ ಹರಡಿತ್ತು. ಆ ದಾರಿ ಎಲ್ಲಿಂದ ಆರಂಭವಾಗಿ ಎಲ್ಲಿಗೆ ಹೋಗುತ್ತದೆ ಎಂಬುದು ಕಾಣುತ್ತಿರಲಿಲ್ಲ. ಆದರೆ ಅದು ಅವರ ಮೂವರ ಹೆಜ್ಜೆಗಳನ್ನು ಒಂದೇ ಬೆಳಕಿನಲ್ಲಿ ಜೋಡಿಸಿತ್ತು.
ಕೆಲವು ಕಥೆಗಳಿಗೆ ಅಂತ್ಯವಿರುವುದಿಲ್ಲ. ಅವು ಒಬ್ಬರ ನೋವಿನಿಂದ ಮತ್ತೊಬ್ಬರ ಕರುಣೆಗೆ, ಒಂದು ತಲೆಮಾರಿನ ಕಣ್ಣೀರಿನಿಂದ ಮುಂದಿನ ತಲೆಮಾರಿನ ನಗುವಿಗೆ ಸಾಗುತ್ತಲೇ ಇರುತ್ತವೆ.
ವೈದೇಹಿಯ ಕಥೆಯೂ ಮುಗಿಯಲಿಲ್ಲ.
ಅದು ಮಿಹಿಕಾಳ ಕೈಯಲ್ಲಿ ಹೊಸ ಪುಟ ತೆರೆದಿತ್ತು.
***

