Friday, February 28, 2014

ಆಶಯಗಳು ಈಡೇರದಾಗ...

ಮುಕ್ತಿಯನರಸುತ ಹೊರಟಿದೆ ಜೀವ
ಈ ಲೋಕವು ತುಳುಕುವ ಪಾಪದ ಕೂಪ...
ಅಜ್ಞಾನ ಅಂಧಕಾರಗಳ ದುರ್ಭಾವ
ಅಂಟಿದಂತಿದೆ ಪ್ರತಿ ಜೀವಿಗಳಿಗಿದು ಶಾಪ...

ಅಹಂಕಾರ ದರ್ಪಗಳು ಶಿಖರದಿ ಮೆರೆದಿದೆ
ಪರೋಪಕಾರಿಗಳಿಗೆ ಬೆಲೆಯಿರದು ಇಲ್ಲಿ...
ಸದ್ವಿಚಾರಗಳ ತುಳಿದು ತುಂಡರಿಸಿ
ಮೆರೆಸುವರು ದುರ್ಭಾವದ ಜಾಲಗಳನಿಲ್ಲಿ...

ಸದ್ಚಿಂತನೆಯ ಮನವನು ಹೊಸೆದು
ನಿರ್ಜೀವ ಮಾಡಿ ಕುಣಿದಾಡುವರಿವರು
ಪರರಿಗೆ ಕೇಡ ಬಯಸದ ಹೃದಯವ
ಒಡೆದು ತುಳಿದು, ಉಗಿದು ಆಹುತಿಗೈವರಿವರು...

ಯಾಕೆ ಮಾನವೀಯತೆಯ ಮರೆತಿಹರು?
ಯಾಕೆ ಹೃದಯಹೀನರಂತಾಗಿಹರು???
ಇದಕೆಲ್ಲ ಕೊನೆ ಎನಿತೋ ನಾ ಕಾಣೆ..
ಜಗವ ಕಾಯುವಂತೆ ಶಿವನ ಆಟವೇನೋ ಅರಿಯಲಾರೆ...

Thursday, February 27, 2014

ಜೀವನ ಜಟಕಾಬಂಡಿ

ಸಾಗುತ್ತಲಿದೆ ಜಟಕಾಬಂಡಿ, ಮುದಿತನವೆಂಬ ಏಕಾಂತ ಮಾರ್ಗದಿ
ಬೆನ್ನೆಲುಬಾಗಿ ಯಾರೂ ಇಲ್ಲ ನೋಡಿ, ಶಕ್ತಿಯಿಲ್ಲದ ಇಂಥಾ ಸಮಯದಿ
ಬಂಡಿಗಾದರೂ ಮುಂದೋಡಲು ಬೇಕು, ಇತರ ಜೀವಿಗಳ ಸಹಾಯ
ಎನ್ನ ಈ ಮುದಿಜೀವಕೆ ಸಾಕು, ಒಬ್ಬ ಮನುಜನ ಆಧಾರ.

ಬಂಡಿ ಸಾಗಲು ಮುಂದೆ ಮುಂದೆ, ಸೇರುವುದೊಂದು ದೂರ ತೀರ
ಜೀವ ಸಾಗಲು ಮುಂದೆ ಮುಂದೆ, ಸೇರುವುದು ಸಾವಿನ ತೀರ
ತೀರ ಸೇರುವ ಮುನ್ನ ಬಂಡಿಯು, ಮುರಿಯುವುದು ಹಲವಾರು ಸಲ
ಮುಕ್ತಿ ಪಡೆಯುವ ಮುನ್ನ ಜೀವವು, ಅನುಭವಿಸುವುದು ಕೆಟ್ಟ ಕಾಲ

ಬಂಡಿಯನೋಡಿಸಲು ಸರಿದಾರಿಯಲಿ, ಬೇಕು ಚಾಲಕನ ಸಹಾಯ
ಅಂತೆಯೇ ನಮ್ಮ ಜೀವನವ ಸಾಗಿಸಲು, ಬೇಕು ಭಗವಂತನ ಅಭಯ
ಭಗವಂತನೊಬ್ಬನೇ ಆಗಿರುವನು, ನಮ್ಮೀ ಜೀವನದ ನಾವಿಕ
ದೇವನ ಅಭಯ ಹಸ್ತದಿಂದಲೇ, ಕಳೆಯುವುದು ನಮ್ಮ ಎಲ್ಲಾ ಭಯ

ಜೀವನವೊಂದು ದೊಡ್ಡ ಪಯಣ, ಜನನ ಮರಣದ ನಡುವಣ
ಸಾಗುವುಡದು ದೃಶ್ಯ ನೋಡುತ, ಕಷ್ಟ ಸುಖಗಳ ಮಿಶ್ರಣ
ಜೀವನದ ಬಂಡಿಯು ಸಾಗಲು ಮಾರ್ಗದಿ, ಮುದಿತನದನುಭವ ಪಡೆದು
ಸಹಾಯ ಬಯಸುತ ತಮ್ಮ ಮಕ್ಕಳಲಿ, ಕೊನೆಗೊಮ್ಮೆ ಆಗುವುದು ನಿರಾಧಾರ

ಜೀವನ ಬಂಡಿಗೆ ಬಂದಾಗ ಕೊನೆಗಾಲ, ಸಹಕರಿಸುವರೆಲ್ಲರೂ ಆ ಜೀವಕೆ
ಹೊಗಳುತ ಹೊಗಳುತ ದುಃಖಿತರಾಗುವರು, ಕೊನೆಗೊಂಡಾಗ ಆ ಜೀವದ ಕಾಲ.
ಜೀವನವೆಂಬ ಮಹಾಮಾರ್ಗದಿ ಸಿಗುವುದು, ಜನನ - ಜೀವನ - ಮರಣದ ಅನುಭವ
ನಡುವೆ ಎಲ್ಲರಿಗೂ ದೊರೆವುದು, ಸುಖ ದುಃಖಗಳ ಮಿಶ್ರಿತ ಕಾಲ

ಆದ್ದರಿಂದ ನಾವಿಂದು ಮಾಡಬೇಕು, ಸತ್ಕರ್ಮ - ಪರೋಪಕಾರ
ಮುದಿಜೀವಕೆ ನಾವು ಎಂದೆಂದಿಗೂ, ಆಗಿರಬೇಕೊಂದು ಆಧಾರ
ಇದರಿಂದ ಮಾತ್ರವೇ ದೊರೆಯುವುದು, ನಮಗೂ ಪರರ ಸಹಕಾರ
ನಮ್ಮ ಜೀವನದ ಬಂಡಿ ಸೇರಿದಾಗ, ಮುದಿತನವೆಂಬ ತೀರವ.

ಎಂತಹ ತಪ್ಪು

ಯಾವಾಗಲೂ ಪ್ರೀತಿಸುವವರು ಇಂದೇಕೆ ಬೈದರು?
ನನ್ನಿಂದಲೇ ಏನಾದರೂ ತಪ್ಪಾಗಿರಬಹುದೇ?
ತಪ್ಪು ಏನನ್ನೂ ಮಾಡಿಲ್ಲವೆಂದು ನಾನಂದುಕೊಂಡೆ
ಅವರು ಬೈದದ್ದೇ ತಪ್ಪೆಂದು ತಪ್ಪಾಗಿ ಗ್ರಹಿಸಿದೆ

ಸುಮ್ಮಸುಮ್ಮನೆ ಬೈದರೆಂದು ತಪ್ಪಾಗಿ ಊಹಿಸಿದೆ
ಅವರನ್ನೇ ತಪ್ಪಿತಸ್ಥರೆಂದು ತಪ್ಪಾಗಿ ಗ್ರಹಿಸಿದೆ
ಕ್ಷಣಕಾಲ ಚಿಂತಿಸಿದರೆ ತಿಳಿಯಿತು ತಪ್ಪೇನೆಂದು
ಅವರನ್ನು ತಪ್ಪಾಗಿ ತಿಳಿದುಕೊಂಡದ್ದೇ ತಪ್ಪು

ನಿಜವನ್ನು ಪರಿಶೀಲಿಸಿದರೆ ತಪ್ಪು ನನ್ನಿಂದಾಗಿರಬಹುದು
ನನ್ನ ತಪ್ಪಿನ ಬಗ್ಗೆ ನಾ ಚಿಂತಿಸಲಿಲ್ಲ
ಪರಾಂಬರಿಸಿ ನೋಡಿದಾಗ ನನ್ನದೇ ತಪ್ಪು
ಹಿರಿಯರ ಮಾತನ್ನು ಕೇಳದಿದ್ದುದೇ ತಪ್ಪು

ನನ್ನ ತಪ್ಪಿನಿಂದಾಗಿ ಕಳೆಯಿತು ಬಾಂಧವ್ಯವು
ತಳೆಯಿತು ಹೊಸ ರೋಷವು ತಾನೇ ತಾನಾಗಿ
ಇದನು ಕೊನೆಗಾಣಿಸಲು ಒಪ್ಪಿಕೊಳ್ಳಬೇಕಾಯಿತು ನನ್ನ ತಪ್ಪ
ಒಮ್ಮೆ ಆತ್ಮಗೌರವ ಕುಂದಿದರೂ ಹಿಂದಿರುಗಿತು ಪ್ರೀತಿ...ನನಗಾಗಿ

Wednesday, February 26, 2014

ಬಂಜೆಯ ಮಾಯವಾದ ದುಃಖ

ನಾನಿಂದು ನೋಡಿದೆ ನಿನ್ನ, ಸುಂದರವಾದ ದೇಹವ
ಮನಸೋತೆ ನಾ ನಿನಗೆ, ತಣಿಸಿದೆ ನೀ ನನ್ನ ದಾಹವ
ಪರಿತಪಿಸುತ್ತಿದ್ದೆ ನಿನಗಾಗಿ,  ಹಗಲಿರುಳೂ  ಮನದಲ್ಲಿ
ನಿನ್ನ ಬರುವಿಕೆಗಾಗಿ ನಾನು,  ಕಾತರಿಸುತ್ತಿದ್ದೆ ಕ್ಷಣ ಕ್ಷಣದಲ್ಲಿ

ಇಂದಿನವರೆಗೆ ನಾನಿದ್ದೆ ಅಪೂರ್ಣ,  ಬರಿದಾಗಿತ್ತು ನನ್ನ ಈ ಒಂಟಿಮನ
ನಿನ್ನ ಆಗಮನದಿಂದಲೇ ಇಂದು, ಆದೆ ನಾನು ಪರಿಪೂರ್ಣ
ಹಿಂದಿನ ದಿನಗಳಲ್ಲಿ ನೀನು, ಕ್ಷಣಕ್ಷಣವೂ ಕಾಡುತ್ತಿದ್ದೆ ನನ್ನ
ಬರದೇ ಹೋದಾಗ ನೀನು,  ಕೆಡಿಸಿದರು ನನ್ನ ಮನವನ್ನ

ನೀನಿರದೇ ಹೋಗುವಾಗ ಜನರು, ನೀಡುತ್ತಿದ್ದರು ಚಿತ್ರಹಿಂಸೆಯ
ಪರೋಕ್ಷವಾಗಿ ಮಾನವ ಚುಚ್ಚಿ, ಮಾಡಿದರು ನನ್ನ ಒಬ್ಬಂಟಿ
ದೇಹದಲ್ಲೆಲ್ಲಾ  ಆವರಿಸಿದ ದುಃಖ, ಅಳಲಾರದೆ ಮನದಿ ಕುದಿಯಿತು
ಹಬ್ಬದಂದು ದೊರೆತರೂ ಕ್ಷಣಿಕ ಸಂತೋಷ, ಮನದ ದುಃಖ ಮಾಯವಾಗದಾಯಿತು

ನಿನಗಾಗಿ ಪಟ್ಟ ಪಾಡೆಷ್ಟು?, ಎಷ್ಟಾದರೂ ನೀ ಬರಲೊಪ್ಪದೆ
ನೀಡಿದೆ ನನಗೆ ಬೇಸರವ, ಹುಟ್ಟಿತು ಜಿಗುಪ್ಸೆ ಮನದಾಳದಿ
ಆಗ ನಿನಗಾಯಿತೇ ಜ್ಞಾನೋದಯ?, ನೀ ಹುಟ್ಟಿಸಿದೆ ಎಲ್ಲರ ಮನದಿ
ಆನಂದ, ಅಭಿಮಾನ, ಆಶ್ಚರ್ಯ, ನೀ ಬಂದು ಸೇರಿದೆ ನನ್ನ 'ಗರ್ಭದಿ'.

ನಾನಾದೆ ತುಂಬು "ಗರ್ಭಿಣಿ", ನೀ ಹುಟ್ಟಿದೆ ನನ್ನ ಒಡಲಲಿ
ನಿನ್ನಿಂದಾಗಿ ಮರುಕಳಿಸಿತು, ಸಂತೋಷ ನನ್ನ ಜೀವನದಿ
ಮುಂದೆ ನಾನು 'ಬಂಜೆ' ಎನಿಸದೆ, ಪಡೆದೆ ಎಲ್ಲರ ಪ್ರೇಮ ಪ್ರೀತಿಯ
ನಿನ್ನನು ನಾ ಮನದಿ ಆರಾಧಿಸಿದೆ, ನನ್ನ ಮನದ ದುಃಖವಾಯಿತು ಮಾಯ .

ಜನರಿಗೆ ಇಂದು ಅರಿವಾಯಿತು, ನನ್ನ ಮನದಲ್ಲಿದ್ದ "ಮಮತೆ"
ನಿನ್ನ ಆಗಮನದಿಂದ ತಿಳಿಯಿತು, ನನ್ನ ಮನದಾಳದ ಆಸೆ.
ನೀನಾದೆ ನನ್ನ ಸರ್ವಸ್ವ, ನಿನ್ನಿಂದಾಗಿ ಉಳಿಯಿತು ನನ್ನ ಪ್ರಾಣ
ನಿನಗಾಗಿಯೆ ಈ ನನ್ನ ಜೀವನ, ಮೊಟ್ಟ ಮೊದಲಿಗೆ ನಾನಾದೆ "ಅಮ್ಮ"

ಮರುಕಳಿಸಿತು ನನ್ನ ಹಿಂದಿನ ಜೀವನ, ಮತ್ತೆ ಬಂದಿತು ಎಲ್ಲರ ಮನದಲ್ಲೂ
ನನ್ನ ಮೇಲೆ ಪ್ರೀತು, ಅಭಿಮಾನ, ಆಗಿದ್ದರಿಂದ ನಾನೂ ಒಂದು "ಅಮ್ಮ".

ನಾಲಿಗೆ

ನಾಲಿಗೆಯು ಮೃದುವಾಗಿದೆಯಾದರೂ
ಕತ್ತರಿಯಂತೆ ಮೊನಚಾಗಿದೆ
ಖಡ್ಗದಂತೆ ಹರಿತವಾಗಿದೆ
ಬೆತ್ತದಂತೆ ಬಲವಾಗಿದೆ...

ಒಂದು ನುಡಿಯನದು ನುಡಿದು
ನೀಡುವುದು ವೇದನೆಯ ಮನಕೆ
ಹೃದಯವ ಕೊರೆದು ಕೊರೆದು
ಖಿನ್ನ ಮನದಲಿ ವಿಷಭಾವದ ಮೊಳಕೆ
ಕಂಗಳಲಿ ದುಃಖದ ಹೊಳೆ
ರಕ್ತಕಣದಲಿ ವೈಷಮ್ಯದ ಮಳೆ

ಇನ್ನೊಂದು ನುಡಿಯದು ನುಡಿದು
ಬೆಳಕಾಯಿತು ಕಗ್ಗತ್ತಲ ಹಾದಿಗೆ
ಹುರುಪಾಯಿತು ಆಶಯಗಳ ಕೊಂಡಿಗೆ
ಹೊಳಪಾಗಿ ಬಾಡಿದ ಕಂಗಳಿಗೆ
ಆಧಾರ ನೀಡಿತು ನಿರಾಧಾರ ಬಾಳಿಗೆ
ನವಚಿತನ್ಯದಲಿ ಸ್ನೇಹದ ಏಳಿಗೆ

Sunday, February 23, 2014

ಪುರುಷ ಪ್ರಧಾನ

ಪುರುಷ ಪ್ರಧಾನ ಸಮಾಜದಿ
ಸ್ತ್ರೀಯರಿಗೆ ಸ್ಥಳವುಂಟೇ?
ಅಧಿಕಾರವಿದ್ದರೂ ಅವಳಿಗದನು
ಚಲಾಯಿಸುವ ಹಕ್ಕುಂಟೇ ???

ಕೆಟ್ಟ ಮನದವರು ಹಲವರು
ಉಪಯೋಗಿಸಿ ಸ್ತ್ರೀಯರನು
ಒಗೆವರು ಹಳೆ ಬಟ್ಟೆಗಳಂತೆ
ಒಡೆವರವರ ಹೃದಯವನು

ಸ್ತ್ರೀಯರ ಬೆಂಬಲದಿಂದ
ಗಳಿಸುವರು ಜನಪ್ರಿಯತೆ
ಆದರೂ ಆ ಸ್ತ್ರೀಯರ ಪಾಲಿಗೆ
ಬರಿ ಕಷ್ಟ ಕಾರ್ಪಣ್ಯತೆ

ಸ್ತ್ರೀಯರ ಲತಿಕಾ ದೇಹದಿಂದಾಗಿ
ಪ್ರಚಾರಿಸುವರು ತಮ್ಮ ಉದ್ಯಮವನು
ಸ್ತ್ರೀಯರ ಭಾವನೆಗಳಿಗೆಂದೂ
ನೀಡರು ಅವರು ಪ್ರಾಶಸ್ತ್ಯವನು

ಸ್ತ್ರೀಯರಿಗೆಂದು ದೊರೆವುದು
ಮನಃಶಾಂತಿ ಆನಂದ ?
ಎಂದು ದೊರೆವುದು ಅವಳಿಗೆ
ಪುರುಷರ ಸೋದರ ಸಂಬಂಧ?

ಎಂದು ಕೊನೆಯಾಗುವುದು ಈ
ಕೆಟ್ಟ ನೋಟ ಸ್ತ್ರೀಯರೆಡೆಗೆ
ಎಂದು ಕೊನಗಾಣಿಸುವರು
ಬಯಕೆ ಸುಖ ಸಂಪತ್ತಿನೆಡೆಗೆ

ಗಂಡನಾದವನಿಗೆ ಬೇಕು
ಬರಿ "ವರದಕ್ಷಿಣೆ" ಹೆಣ್ಣಿಂದ
ಅದಕೆಂದೂ ಹಿಂಜರಿಯದೆ
ನೀಡುವ "ಹಿಂಸೆ" ಭರದಿಂದ

ಎಂದು ದೊರೆವುದು ಹಕ್ಕು
ಸ್ತ್ರೀ- ಪುರುಷರಿಗೆ ಸಮಾನ?
ಯಾವತ್ತಿಗೂ ಇರಬೇಕೇ
ಸ್ತ್ರೀ ಅವನ ಅಧೀನ??
 

ನಗೆ

ಬಾಳೆಂಬ ನೀರಿನಲ್ಲಿ
ಅರಳಿತು... ನಗುವೆಂಬ ಕೆಂದಾವರೆ .

ರಸಿಕರಿಗಂತೂ ನೀಡಿತು
ಮಹದೋಲ್ಲಾಸವ .
ದುಃಖವನ್ನು ಮರೆಸುವ
ಹರಿದ್ವಾರವ ತೆರೆಯಿತು.

ಹಲವರಲ್ಲಿ ಮೂಡಿತು
ಮಾತ್ಸರ್ಯವು
ತಮಗಿಲ್ಲದ್ದು ಅವರಲ್ಲಿದೆ
ಎಂಬ ಬೇಸರವು.
ಉರಿಯಾಗಿ ಸುಟ್ಟಿತು
ಅವರ ಮನವ
ವಿಷವಾಗಿ ಬೆಳೆಯಿತು
ಅವರಲ್ಲಿ ರೋಶವು.

ಮತ್ತಿತರರ ಮನವನ್ನು
ತಣಿಸಿತು
ಅವರ ದುಃಖವ ಕಳೆದು
ಆನಂದಾತಿರೇಕವ
ಮೂಡಿಸಿತು.
ಇತರರ ನಗೆಯಿಂ
ಹಲವರ ಮನವು
ನಕ್ಕು ನಲಿದಾಡಿತು. 

ಓ ಪ್ರಕೃತಿಯೇ...!!!

ಆಕಾಶದಿಂದ ಬೀಳುತ್ತಿರಲು
ಹನಿಮುತ್ತುಗಳ ವರ್ಷವು
ನೀ ಧರಿಸಿದೆ ಹಸಿ ವರ್ಣದ ಸೀರೆಯನು!
ಅದರಲ್ಲಾಗ ಮೂಡುತ್ತಿರಲು
ಮುತ್ತಹನಿಗಳ ಚಿತ್ತಾರ
ಬೆರಗಾದೆ ನೋಡುತ ನಿನ್ನ ಸೌಂದರ್ಯವನು!!

ತಂಪು ಗಾಳಿಯು ಬೀಸುತಿರಲು
ನಿನ ಹಸಿರು ಸೆರಗು ಹಾರುತಿರಲು
ಹನಿಮುತ್ತುಗಳು ಸೋಕಿದವು ನಿನ್ನ ತ್ವಚೆಯನು!
ನಿನ್ನ ದೇಹ ತಂಪಾಗುತಿರಲು
ಹಸಿರು ವರ್ಣವು ಹೆಚ್ಚುತಿರಲು
ಶುದ್ಧ ಮಾಡಿತು ನಿನ್ನ ಸುತ್ತಲ ಗಾಳಿಯನು!!

ಶುದ್ಧ ಗಾಳಿಯು ಸೇರುತಿರಲು
ಜನಮನಗಳ ಆಳವನು
ಹೊರಹೊಮ್ಮಿತು ಶುಭ್ರಕಾಂತಿ ಜನಸಂಕುಲದಿ!
ಶುಭ್ರ ಸ್ಥಿತಿಯಿಂದಾಗಿ
ಪರಿಶುದ್ಧಗೊಂಡಾಗ
ಜನಮನಗಳು ಬೆರೆತವು ಒಂದೇ ಸಮನಾಗಿ!!!

ಆದರಾದಾಗ ಜಗದಲಿ
ಗುಡುಗು ಮಿಂಚಿನ ಆರ್ಭಟ
ಅಲ್ಲಲ್ಲಿ ಮೊಳಗಿದವು ದುಃಖಭೇರಿ!
ಇಳೆಯೆಲ್ಲ ತಂಪಾದರೂ
ಪ್ರಕೃತಿಮಾತೆಯೇ ನಿನ್ನ
ಶೋಷಣೆಯು ಕೊನೆಗೊಳ್ಳುವುದೆಂದೋ ನಾನರಿಯೆ!!
 

ಜೀವನ ಈ ದಿನ

ಏನು ಜೀವನ ಎಂಥಾ ಸಂಭ್ರಮ
ಜೀವನದ ಭಾವ ನೂತನ.
ಗೆಲುವು ಅನುದಿನ ಸೋಲು ಈ ದಿನ
ಮನಕೆ ಹಿಂಸೆಯ ಔತಣ.

ವೀಣೆಯಲಿ ಅಪಸ್ವರದ ಸಿಂಚನ
ಗಾಳಿಯಲಿ ವಿಷದ ಸಂಗಮ
ಅಗ್ನಿಯೊಳು ಮೃದು ಹೂವು ಬೇಯುತ
ನರಳು ನರಳುತ ಅರ್ಪಣ.

ಹಕ್ಕಿಗಳ ಇಂಚರದಿ ಕಳವಳ
ಹರಿದಾಡೋ ನದಿಯದು ಅಚರ
ವಜ್ರ ವೈಡೂರ್ಯ ತುಂಬಿದ ಮನೆಯೊಳ
ಭಾಗದಿ ಸೇರಿಕೊಂಡಿದೆ ನಾಗರ.

ಏನು ಜೀವನ ಎಂಥಾ ಸಂಭ್ರಮ
ಸೋಲು ಗೆಲುವಿನ ಮಿಶ್ರಣ
ಮನದಿ ಕೊರಗದೆ ನಗುತ ಬಾಳಲು
ಸಂತಸವೇ ನಮಗನುದಿನ...

ಮುಂಜಾವಿನ ಹನಿ

ಗರಿಕೆಗಳ  ರಾಶಿಯ ತುದಿಗಳಲಿ
ಹೊಳೆವ ಮುತ್ತುಗಳಂತೆ ನೀನು
ಓ ಮುಂಜಾವಿನ ಹನಿಯೇ ...
ನಿನ್ನ ಹೊಳಪಿಗೆ ಮಾರು ಹೋದೆ ನಾನು.

ಹೊಳೆದೆ ನೀ ವಜ್ರದ ತುಣುಕಿನಂತೆ
ಭಾಸ್ಕರನ ಪ್ರಥಮ ಕಿರಣಕ್ಕೆ
ರೊಮಾಂಚಿತವಾಯಿತು ನನ್ನ ಮನವು
ಸ್ಪರ್ಶಿಸಲು ನೀ ನನ್ನ ಚರಣಕ್ಕೆ.

ನಿನ್ನ ಜೀವನ ಕಿರಿದಾಗಿದ್ದರೂ
ನೀಡುವೆ ಆನಂದವ ಎಲ್ಲ ಮನಕೆ
"ಪರರ ಸುಖದಿಂದಲೇ ನನ್ನ ಸುಖವು"
ಎಂದು ತಿಳಿಸುವೆ ಎಲ್ಲ ಜನಕೆ.

ಇದರಿಂದಾಗಿ ಓ ಜನಗಳೇ,
ನಾಲ್ಕು ದಿನದ ಈ ಜೀವನದಲಿ
ಸುಖ ಸಂತೋಷಗಳ ಹಂಚಿಕೊಂಡಿರಿ
"ಕೂಡಿ ಬಾಳಿದರೆ ಸ್ವರ್ಗ" ಎಂಬುದ
ಹನಿಯ ಜೀವನದಿಂದ ತಿಳಿಯಿರಿ

ಒಂದಾಗುವ

ಕೂಡಿ ಹಾಡಿ ನಲಿಯುವ
ಸೋದರತೆಯ ಸಾರುವ
ಸ್ನೇಹ ಸೌರಭ ಕಟ್ಟುವ
ಜಗವೇ ಒಂದು ಎನ್ನುವ

ಜಾತಿಮತಗಳ ಭೇದವಿಲ್ಲದೆ
ದೇಶ ದೇಶದ ಬಿರುಕು ಇಲ್ಲದೆ
ವರ್ಣ- ವರ್ಗದ ಭೇದವಿಲ್ಲದೆ
"ಮನುಜ" ಜಾತಿಯನೆ ಸಾರುವ
"ಒಂದೇ" ಎಂಬ ಭಾವ ಪಡೆಯುವ.

ಮನದ ಸ್ವಾರ್ಥವ ತೊಡೆದು ಹಾಕುತ
ಕನಸುಗಳೆಲ್ಲವ ನನಸು ಮಾಡುತ
ಜೀವಿಗಳಿಗೆಲ್ಲ ಅವಕಾಶ ನೀಡುತ
ಜೀವಿಸಲಿರುವ ಹಕ್ಕನು ಕಸಿಯದೆ
ಒಂದಾಗಿ ಬಾಳಲು ಕಲಿಯುವ

ಬನ್ನಿರೆಲ್ಲರೂ... ಒಂದಾಗುವ...

ಅನುಗ್ರಹ ಬೇಕೇ?

ನಮ್ಮಲ್ಲಿದ್ದರೂ ಜ್ಞಾನ , ಪ್ರಾಣ , ಧ್ಯಾನಗಳೆಲ್ಲ
ಅನುಭವಿಸಬೇಕೆಂದರೆ ಅನುಗ್ರಹವೇ ಬೇಕಲ್ಲ?!!!

ಗುರುಹಿರಿಯರ ಅನುಗ್ರಹವಿಲ್ಲದಿರೆ...
ಪಡೆದ ವಿದ್ಯೆಗೂ ಬೆಲೆಯಿಲ್ಲ
ಧನ ಧಾನ್ಯ ಸಂಪತ್ತಿಗೂ ಬೆಲೆಯಿಲ್ಲ
ಅಷ್ಟೇ ಏಕೆ, ಅಧಿಕಾರದ ದರ್ಪಕ್ಕೋ ಬೆಲೆಯಿಲ್ಲ ... 

ಹೆತ್ತವರ ಅನುಗ್ರಹವಿಲ್ಲದಿರೆ...
ಸಮಾಜದಿ ಸ್ಥಾನ ಪಡೆದರೂ
ಆ ಸ್ಥಾನದಿ ಗೌರವ ಪಡೆಯಲು ಸಾಧ್ಯವಿಲ್ಲ
ಸಮಾಜದ ಕಣ್ಣಿನಲ್ಲಿ ನಿನಗೆ ಬೆಲೆಯಿಲ್ಲ...

ದೇವರ ಅನುಗ್ರಹವಿಲ್ಲದಿರೆ...
ಆತ್ಮನ ಸಂತೋಷ ಸಾಧ್ಯವಿಲ್ಲ
ಆಧ್ಯಾತ್ಮಿಕ ಲೋಕದಲ್ಲಿ ಬೆಲೆಯಿಲ್ಲ
ದೈವಾತ್ಮವಾಗುವುದಂತೂ ಸಾಧ್ಯವೇ ಇಲ್ಲ...

 ಅನುಗ್ರಹವೇ ಅತಿ ಮುಖ್ಯ
ಇಹಲೋಕದ ಆನಂದ, ಆಧ್ಯಾತ್ಮಿಕ ಆನಂದ
ಪ್ರತಿಯೊಂದೂ  ಸಾಧ್ಯ ಅನುಗ್ರಹದಿಂದ
ಅನುಗ್ರಹವೇ ಅತಿ ಮುಖ್ಯ...

Saturday, February 22, 2014

ಕಂಪನ ಜೀವನ

ಮಾನವ ಜೀವನ
ಕೇವಲ ನಾಲ್ಕು ದಿನ
ಅದರಲೂ ಏಕೆ ಮೌನ?
ತಪ್ಪು ಅಭಿಪ್ರಾಯಗಳ ಕದನ?

ತೊರೆಯಿರಿ ನಿಮ್ಮಯ ಅಹಂಕಾರವ
ಕೂಡಿಸಿ ಮೆರೆಯಿರಿ ಸೋದರತ್ವವ
ಸಾರಿರಿ ಎಲ್ಲರಲೂ ಮಾನವೀಯತೆಯ
ಪಡೆಯಿರಿ ಜೀವನ ಸಾರ್ಥಕತೆಯ


ತೊಡೆಯಿರಿ ಜಾತಿ ಭೇದ ಶತ್ರುತ್ವವ
ಬೆಸೆಯಿರಿ ಬಾಂಧವ್ಯದ ಮಿತೃತ್ವವ
ಎಲ್ಲರಲೂ ಪ್ರೀತಿಯನೇ ಹಂಚಿಕೊಳ್ಳುತ
ಖುಷಿಗಳ ಪಡೆಯಿರಿ ಸುಚಿತ್ತಗೊಳ್ಳುತ

ನಾಲ್ಕು ದಿನಗಳ ಈ ನಿಮ್ಮ ಜೀವನವ
ಕೆಡಿಸದಿರಿ ಮೆರೆಸುತ ಅಹಂಕಾರವ
ತೊಡೆಯಿರಿ ಮೌನದ ದುಷ್ಟ ದ್ವಾರವ
ಹಂಚಿರಿ ಪ್ರೀತಿಯ ಮಹಾಪೂರವ...


ಸ್ವಾರ್ಥ... ಸಂಬಂಧ... ಜೇವನ...

ನಂಬಿ ಕೆಡಬೇಡ ಓ ಬಂಧುವೇ
ಈ ಜಗದಿ ಸ್ವಾರ್ಥವೇ ಮುಂದಿಹುದು

ಗೆಳೆತನವೆಂಬ ನಾಮದಿ ದ್ರೋಹವ ಬಗೆವರು
ತಮ್ಮ ತಪ್ಪನು ಮುಚ್ಚಲು ಪರರ ಧೂಷಿಸುವರು
ಗೌಪ್ಯವಾಗಿಡಲೆಂದು ಹೇಳಿದ ಮಾತುಗಳನು
ತಮ್ಮ ಸ್ವಾರ್ಥಕಾಗಿಯೆ ಬಳಸಿ ನಮ್ಮ ಹೀಯಾಳಿಸುವರು

ಸಂಬಂಧವೆಂಬ ನಾಮದಿ ಹಕ್ಕು ಸ್ಥಾಪಿಸುವರು
ತಾವು ಹೇಗೇ ಇದ್ದರೂ ಪರರ ಕೀಳಾಗಿಸುವರು
ಪರರ ಜೀವನ ಕೊಂಚವೂ ಗೌರವಿಸದೆ
ತಾವು ಸುಖವಾಗಿರಲು ನಮ್ಮ ಭಾವನೆಯ ಹಿಂಸಿಸುವರು

ಯಾರಿಗೆ ಬೇಕು ಇಂಥಾ ಲೋಕ
ಭಗವಂತ ನೀಡಿದ ಜೀವನದಿ ಯಾಕಿಂಥಾ ದುರ್ಭಾವ ?
ಭಗವಂತನ ಸೃಷ್ಟಿಯಿದು... ನಾವೆಲ್ಲಾ ಒಂದೇ...
ಹೀಗಿರಲು ಯಾಕೆ ಬೇಕು ವ್ಯತ್ಯಾಸಗಳು?

ಮರೆಯೋಣ  ಸ್ವಾರ್ಥವ ... ಮರೆಯೋಣ ಎಲ್ಲವ ...
ನಾವೆಲ್ಲಾ ದೇವರ ಸೃಷ್ಟಿ... ನಾವೆಲ್ಲಾ ಒಂದು...
ಇಂಥ ಭಾವದಿ ಬೆರೆಯೋಣ, ಸಂತಸವ ಹಂಚೋಣ...
ಇರುವ ಸಣ್ಣ ಜೀವನದಿ ಖುಷಿಯಾಗಿರೋಣ....
 

ಸರ್ವರ ಬಂಧು ಮಾಮರ

ನಾನಾಗಬೇಕು ಮಾಮರ
ವಿಶಾಲ ಕೊಂಬೆಗಳುಳ್ಳ ಮಾಮರ
ಹಚ್ಚ ಹಸುರಾಗಿರುವ ಮಾಮರ
ಫಲಪುಷ್ಪಗಳುಳ್ಳ ಮಾಮರ

ಬಿಸಿಲ ಬೇಗೆಯಲಿ ಸುಟ್ಟವರಿಗೆ
ದಣಿವಾರಿಸಲದು ಆಶ್ರಯ
ಮನನೊಂದು ದುಃಖಿಸುವರಿಗೆ
ಖುಷಿಯಾಗಲಿಲ್ಲಿದೆ ವಿಷಯ

ಕಳಚಲಾರದೆ ಬೇರೂರಿದೆ ಇಲ್ಲಿ
ವ್ಯಕ್ತಿತ್ವ, ಗುಣ ನಡತೆಗಳು
ಪರರಿಗಾಗಿ ಬದಲಾಗದು ಇಲ್ಲಿ
ಸ್ವಾಭಿಮಾನ, ಮನೋವಿಚಾರಗಳು

ಹಸಿದ ಹೊಟ್ಟೆಗೆ ತಂಪೆರಚುವುದು
ಇಲ್ಲಿನ ಫಲಪುಷ್ಪಗಳು
ಎಲ್ಲರಿಗೂ ಸಮಾನ ಗೌರವ ಸಿಗುವುದು
ಆಶ್ರಯ ನೀಡುವುದೀ ಮರಗಳು

ಮಾಮರದಂತೆ ನಾವಾಗಬೇಕು
ಪರೋಪಕಾರಿ ಕಲ್ಪವೃಕ್ಷದಂತೆ...

ಕಾಪಾಡು ಗಜಾನನ

ಆದಿವಂದಿತ ಗಜಾನನ
ಮೊರೆಯಿಡುತಿರುವೆ ನಿನಗಿಂದು
ಕಣ್ಣೀರ ಈ ವೇದನೆಗೆ
ಅಭಯ ನೀಡು ನೀ ನನಗಿಂದು

ನಿನ್ನ ಕೈಯೊಳಿರುವ ಪಾಶದಿಂ
ತೊಡೆ ನನ್ನೀ ಜೀವನದ ವಿಘ್ನಗಳ
ನೀ ಹಿಡಿದಿರುವ ಅಂಕುಶದಿಂ
ಜೊತೆ ಸೇರಿಸು ಪ್ರೀತಿಸುವ ಮನಗಳ

ನಿನ್ನ ಅಭಯ ಹಸ್ತದಿಂದ
ನೀಡೆಮಗೆ ಪರಿಹಾರದ ದೀಕ್ಷೆಯ
ನಿನ್ನ ಮೋದಕ ಹಸ್ತದಿಂದ
ಸ್ವೀಕರಿಸು ನಮ್ಮಯ ಪ್ರೀತಿ-ಭಕ್ತಿಯ

ಜಗದಾಧಿಪತಿಯೇ ನೀನು
ಕಾಪಾಡು ಈ ನಿನ್ನ ಭಕ್ತರ
ವಿಘ್ನರಾಜನೇ  ನೀನು
ನಯವಾಗಿಸು ನನ್ನೀ ಬಾಳ ದಾರಿಯ ...

Friday, February 21, 2014

ನವ ಚೈತನ್ಯದ ಹುರುಪು


 ಹರಡಿರುವ ಕಾರ್ಮೋಡದ ಛಾಯೆಯಲೂ
ಕಾಣುತಿದೆ ಹೊಸದೊಂದು ಹುರುಪು
ಮುಸುಕಿರುವ ಪ್ರೇಮದ ಮಾಯೆಯಲೂ
ಬೆಳಗುವುದೆಂತು ವಿಜಯದ ಹೊಳಪು?

ಭಯವೆಂಬ ಕಟೋರ ಬೇಲಿಯೊಳಗೂ
ಬೆಳಗುತ್ತಿದೆ ಆಶಯದ ದೀವಿಗೆ
ಪ್ರೀತಿಯ ಅಧ್ಬುತವಾದ ಕೀಲಿಯೊಳಗೂ
ತುಳುಕುತಿದೆ ಭಾವನೆಗಳ ತಂಬಿಗೆ'

ಕೊನೆಯಾಗದ ಆಸೆಗಳ ರಾಶಿಯಲೂ
ತಾರಕಕ್ಕೇರಿಹುದು ಮೋಹದ ದನಿ
ಸ್ವಾರ್ಥಿಗಳ ಅಟ್ಟಹಾಸದ ಮಾರುತದಲಿ
ಹರಿಯದಿರಲಿ ಎಂದಿಗೂ ನೋವ ಕಂಬನಿ ...

Thursday, February 20, 2014

ದುಃಖ ತಾಂಡವ

ಆತ್ಮ ದೇಹದೊಳಿದ್ದರೂ
ಈ ಜೀವ ನಿರ್ಜೀವ ಶವದಂತಿದೆ..

ಮಾತುಗಳಿಲ್ಲ...ಮೌನ ಆರ್ಭಟಿಸುತ್ತಿದೆ...

ದುಃಖದ ರವಿಯು ನೆತ್ತಿಗೇರಿ
ಜ್ವಾಲೆಯ ಸಿಡಿಸುತ್ತಿದೆ...

ಮನದಿ ಹಿಂಸೆಯು ತಾಂಡವವಾಡಿ
ಕೋಲಾಹಲವ ರಚಿಸುತ್ತಿದೆ...

ಹೃದಯದಿ ಅಗ್ನಿಯು ಭುಗಿಲೆದ್ದು
ಧಗಧಗನೆ ಉರಿಯುತ್ತಿದೆ...

ಮನದಲಿ ಮನೆಮಾಡಿದ್ದ ಪ್ರೀತಿಗೆ
ಹಾಲಾಹಲವ ಎರಚಿ ಕೊಲ್ಲುತ್ತಿದೆ....

Wednesday, February 19, 2014

ಪ್ರೀತಿ

ಪ್ರೀತಿ ಕ್ಷಣದಲ್ಲಿ ಮೂಡಿದರೂ
ಹುಟ್ಟಿನಿಂದ ಬಂದರೂ
ಮನದಾಳದಿಂದ ಹುಟ್ಟಿದರೆ
ಬೆಲೆ ಕಟ್ಟಲಸಾಧ್ಯವಾದುದು....
ಇದು ಪ್ರೀತಿಸುವ ಎರಡು ಮನಸ್ಸುಗಳಿಗೆ
ಮಾತ್ರ ಅರಿವಾಗುವುದು....
ನೋಡುಗರಿಗೆ ಇದು
ಕ್ಷುಲ್ಲಕ ಎನಿಸುವುದು....

Tuesday, February 18, 2014

ಯಕ್ಷ ಚಿತ್ತ ಚೋರ

ಹೇ... ನನ್ನ ಚಿತ್ತಚೋರ...
ನಿನ್ನೊಲವೇ ನನ್ನ ಜೀವನಸಾರ
ನಿನ್ನ ನೋಡದಿರೆ ನನ್ನೀ ಮನ ಭಾರ
ನಿನ್ನಲ್ಲಿ ನನಗಿರುವುದು ಪ್ರೇಮ ಅಪಾರ...

ನನ್ನ ಮನದೊಡೆಯನೆ ನೀನು
ಸುರಿದಿರುವೆ ಹೃದಯದಿ ಪ್ರೀತಿಯ ಜೇನು
ಮನದಾಳದಿ ನುಡಿಸಿರುವೆ ಇಂಪಾದ ನಾದವೇನು
ಆ ನಾದದ ಹೆಸರೇ 'ಪ್ರೀತಿ'ಯೇನು???

ನನ್ನುಸಿರಿಗೆ ಉಸಿರಾಗಿಹೆ ನೀನು
ಕಡಲ ಸೇರುವ ನದಿಯಂತೆ ನಾನು
ನನ್ನೊಡಲಿಗೆ ಜೀವದ ಸಿರಿ ನೀನು
ನೀನೇ ಈ ಹೃದಯ ಮೀಟಿದ ವೈಣಿಕನೇನು?

ನೀನೇ ನನ್ನ ಬಾಳಿನ ನಂದಾದೀಪ
ಕಂಗಳಲಿ ಹೃದಯದಲಿ ಕೇವಲ ನಿನ್ನದೇ ರೂಪ
ನಿನ್ನ ಹೆಜ್ಜೆಯು ಈ ಮನದಲಿ ಅಳಿಯದ ಛಾಪ
ಬರಲಾರದೆಂದೂ ನಮ್ಮೀ ಪ್ರೇಮದಲಿ ಲೋಪ...

Monday, February 17, 2014

ಅಮ್ಮ

ಅಮ್ಮಾ, ನಿನ್ನ ಮಡಿಲಲಿ
ಹಾಯಾಗಿ ನಾನಿರಲು
ಬೇರಾವ ಭಯವೂ ನನ್ನ ಕಾಡಿಸಲು ಬರದು

ಕಂದಾ ನಿನ್ನ ಅಪ್ಪುತಲಿ
ನನ್ನೇ ನಾ ಮರೆತಿರಲು
ಬೇರಾವ ಚಿಂತೆಯೂ ನನ್ನ ಮನವ ಸೇರದು

ಅಮ್ಮಾ ನಿನ್ನ ತೋಳಲಿ
ಬೆಚ್ಚಗೆ ನಾ ಮಲಗಿರಲು
ಸುರಕ್ಷಿತವು ಎಂದೆಂದೂ ನನ್ನ ಈ ಬಾಳು

ಕಂದಾ ನಿನ್ನ ಕಾಯುತಲಿ
ಈ ಹೃದಯ ಮಿಡಿಯುತಿರಲು
ನನ್ನ ಜೀವನವೇ ಮುಡಿಪು ನಿನಗಾಗಿ ಕೇಳು..

ಕೋಪ

ನಿನ್ನ ಕೋಪವನು ನೀ
ಸಾರ್ಥಕತೆಯತ್ತ ಸಾಗಿಸಯ್ಯ
ಸುಮ್ಮನೆ ಮನ ಕಳಂಕಿಸಿ
ಜ್ಞಾನಕ್ಕೆ ಕುಂದು ತರಬೇಡಯ್ಯ

ಬಂದಾಗ ನಿನಗೆ ಕೋಪ
ಮಾಡೊಂದು ಅಪೂರ್ವ ಕೆಲಸ
ಹಾಕಬೇಡ ಯಾರಿಗೂ ಶಾಪ
ಆಗ ದೊರೆಯುವುದು ಸಂತಸ.

ಕೋಪದ ಉದ್ವೇಗದಿ ನೀನು
ಅಗೆದುಬಿದು ಭೂಮಿಯ
ಮುಂದಿನ ದಿನ ಅದರಲಿ
ನೆಟ್ಟುಬಿಡು ಗಿಡವ

ಆವೇಶಗೊಂಡಾಗ ನೀನು 
ತಂದುಕೊಳ್ಳಯ್ಯ ತಾಳ್ಮೆಯ
ರೋಷದಿ ಆರ್ಭಟಿಸಿದಾಗ ನೀನು
ಕೆಡಿಸುವೆ ನಿನ್ನ ಮನಃಶಾಂತಿಯ

ಕೊಪಗೊಂಡಾಗ  ನೀನು
ಮಾಡಬೇಡ ಪ್ರತಿವಾದ
ಹಾಕು ನಿನಗೆ ನೀನೇ ಸವಾಲು
ನಿನ್ನಯ ಗುರಿಸಾಧನೆ ಮಾಡಲು

ಕೋಪ ಬಂದಾಗ ನಿನಗೆ
ಮಾಡು ಸಹಾಯವ ಪರರಿಗೆ
ವ್ಯರ್ಥ ಮಾಡಬೇಡ ನಿನ್ನ ಸಮಯವ
ಮಾಡು ನಿನ್ನಯ ನಿತ್ಯಕಾರ್ಯವ

ಕೋಪ ಬಂದಾಗ ನೀನು
ಹಿರಿಯರ ಮಾತನ್ನು ಕೇಳಯ್ಯ
ಅವರು ನುಡಿದಂತೆ ನಡೆಯಯ್ಯ
ಆಗ ಸಾಧಿಸುವೆ ನಿನ್ನ ಗುರಿಯ

ಕೊಪಗೊಂಡಾಗ  ನೀನು
ಮಾಡು ದೇವರ ಪ್ರಾರ್ಥನೆಯ
ನಿನ್ನ ತಾಳ್ಮೆಯ ವೃದ್ಧಿಸಯ್ಯ
ಪಡೆಯಲು ಮನಃಶಾಂತಿಯ...

ಮಳೆಯಿಂದ ಇಳೆ

ಏನಿದು? ಮಳೆ ಎಂದರೆ???
ಹೆರವರ ದುಡಿಮೆಯ ಬೆವರೇ?
ಬಡವರ ದುಃಖದ ಕಣ್ಣೀರೇ??
ಮಕ್ಕಳ ಆನಂದದ ಪನ್ನೀರೇ??

ಬಂದರೆ ಸಾಕು ಈ ಮಳೆ
ಮಕ್ಕಳ ಮೊಗದಿ ಆನಂದದ ಕಳೆ
ಹಚ್ಚ ಹಸುರಾಯಿತು ಈ ಇಳೆ
ಮಾಸಿತು ಈ ಜಗತ್ತಿನ ಕೊಳೆ

ನಲಿದಾಡಿತು ಅಂದದಿ ನವಿಲು
ಮಳೆಯ ಹನಿ ಹನಿ ಬೀಳಲು
ನಿಂತಿತು ಜನರೆಲ್ಲರ ಅಳಲು
ಸಂತಸದಿ ಮೀಟಿತು ಕೊಳಲು

ಬಂದಿತು ಹೂದೋಟದ ಕಂಪು
ಬೀಸಲು ತಂಗಾಳಿಯ ತಂಪು
ಕೋಗಿಲೆಯ ನಾದವದು ಇಂಪು
ನೀಡಿತು ನಮ್ಮ ಮನಸ್ಸಿಗೆ ತಂಪು...

Sunday, February 16, 2014

ಮಹಾನ್ ಹೆತ್ತವರು

ಕಣ್ಣಿಗೆ ಕಾಣುವ ದೇವರ ರೂಪ ತಾಯಿ-ತಂದೆ
ಅವರನು ಎಂದಿಗೂ ಮಾಡಬೇಡಿ ನೀವು  ನಿಂದೆ
ಅವರ ಅಸ್ತಿತ್ವದ ಕಾರಣದಿಂದಲೇ ನೀನು ಬಂದೆ
ದೂರ ಮಾಡಿದರೆ ಅವರನು ಮೆಚ್ಚಳು ಭಾರತಾಂಬೆ

ಮಾತನಾಡಲು ಆಗುತಿತ್ತು ನಮಗೆ ಸೋಲು
ಆಗ ನೀಡಿದಳು ತಾಯಿ ತನ್ನ ಮೊಲೆವಾಲು
ಬೇಡಿರಿ ಅವಳಿಗಾಗಿ ಎಂದಿಗೂ ದೀರ್ಘ ಬಾಳು
ಮಾಡದಿರಿ ಅವಳ ಜೀವನವ ನೀವು ಹಾಳು

ಅತ್ತಾಗ ನಾವು ಕಂಡದ್ದನ್ನು ಬೇಕು ಎಂದು
ಕೈಗೆ ತಂದು ಕೊಟ್ಟರು ತಂದೆಯು ಬಂದು
ಬೇಕಿದ್ದನ್ನು ಕೊಡಲು ನೋಡಲಿಲ್ಲ ಹಿಂದು
ನೂರ್ಕಾಲ ಬಾಳಲಿ ಆ ಮಹಾತ್ಮ ತಂದೆ ಬಂಧು

ತಾಯಿ-ತಂದೆ ನಮ್ಮಯ ಬಾಳಿಗೆ ದೇವರ ರೂಪ
ಅವರಿಲ್ಲದ ಬಾಳೇ ನಮಗೊಂದು ಶಾಪ
ಅವರಲ್ಲೆಂದಿಗೂ ಮಾಡಬೇಡಿ ನೀವು ಕೋಪ
ಆಗಿರಿ ಅವರ ಬಾಳಿಗೆ ನೀವು ನಂದಾದೀಪ...

ರಾಜಕೀಯದ ಪರಿಣಾಮ ಏನು?

ತುಂಬಿತಿಂದು ನಾಡಿನಲ್ಲಿ ರಾಜಕೀಯ
ಮರೆತರಿವರು ಗುಣಗಳನ್ನು ಮಾನವೀಯ

ನರಳಿದರು ಜನರೆಲ್ಲಾ ಅನ್ಯಾಯದಿಂದ
ಕಳಚಿದರು ಬಾಂಧವ್ಯ ಪ್ರೀತಿ-ಅನುಬಂಧ

ಬೀಡು ಬಿಟ್ಟಿತು ನಾಡಿನಲ್ಲಿ ವೈಜ್ಞಾನಿಕತೆ
ತುಂಬಿತು ಜನರಲ್ಲಿ ಸಕಲ ಸಂಪನ್ನತೆ

ಬಂದಿತು ರಾಜಕಿಯದಿಂದಲೇ ಭ್ರಷ್ಟಾಚಾರ
ಎಸಗಿದರು ಪುಟಾಣಿಗಳೊಂದಿಗೂ ಅತ್ಯಾಚಾರ

ಛೆ! ಏನಿದು ರಾಜಕೀಯದ ದುಷ್ಪರಿಣಾಮ
ಇದರಿಂದಾಗುವುದು ಈ ದೇಶದ ಅವಸಾನ

ಬೇಡವೇ ಬೇಡ ನಮಗೆ ಈ ರಾಜಕೀಯ
ನಾವೆಲ್ಲರೂ ಎಂದಿಗೂ ಒಂದೇ - "ಭಾರತೀಯ"...

ಹನಿಗವನ

ಬೀರು ತೆಗೆದು ನೋಡಿದಾಗ
ಅಲ್ಲಿದ್ದ ಪರ್ಸು "ಖಾಲಿ"
ಹೊರಗೆ ಬಂದು ನೋಡಿದಾಗ
ಅಲ್ಲಿ ಕಂಡೆ ದೊಡ್ಡ "ಜೋಕಾಲಿ"

ಚುಟುಕು

ಜನರು ಮಾಡುವರು ಶಿಷ್ಟಾಚಾರ
ಪ್ರಾಣಿಗಳು ಮಾಡುವವು ಇಷ್ಟಾಚಾರ
ಆದರೆ ಜಗತ್ತಿನಲ್ಲೊಂದೇ ಹುಳಿ- ಖಾರ 
ಅದೇ ರಾಜಕೀಯದಲ್ಲಿನ ಭ್ರಷ್ಟಾಚಾರ

ದುಂಬಿಗಳ ಸಂದೇಶ

ನಾನಂದು ನೋಡಿದೆ ಜೋಡಿ ದುಂಬಿಗಳ
ಅವುಗಳ ಪ್ರೀತಿಯ ಅಂತರಾಳ
ಒಂದನ್ನೊಂದು ಬಿಟ್ಟಿರಲಾರೆವು
ಎಂಬುದನ್ನವು ಹೇಳಲಾರವು...

ಆದರೆ ಅವು ತಿಳಿಸುವವೊಂದು ಸಂದೇಶವ
ಜೀವನೋಪಯುಕ್ತ ಉಪದೇಶವ
"ಜನಗಳೇ, ನೀವು ಒಂದಾಗಿ ಸೇರಿ
ಕಾಯಕವ ಮಾಡಿ ಪರೋಪಕಾರಿ..."

ಒಟ್ಟಾಗಿ ಮಾಡಿ ಉತ್ತಮಕಾರ್ಯವ
ಉಳಿಸಿರಿ ಜೀವನದ ಸೌಂದರ್ಯವ...
ಈ ಸಂದೇಶವ ಸಾರುವ ದುಂಬಿಗಳ ಮನ
ಇದೋ ಸ್ವೀಕರಿಸಿ ನಮ್ಮ ನಮನ...

ಕೆಲ ನುಡಿಮುತ್ತುಗಳು ನನ್ನಂತರಾಳದಿಂದ

ನಾಲಿಗೆಯು ಬೇಕಾದಂತೆ ತಿರುಗುವುದೆಂದು ಪರರ ದುಃಖಕ್ಕೆ ಬುನಾದಿಯಾಗುವುದೆಂತು ಸರಿ???

ಮಾತು ಬರದಿದ್ದರೂ 'ಅಮ್ಮ' ಎನ್ನಬಹುದು...
ಮೌನ ಮಾತಾದರೂ ಮಮತೆ ಎಂದೂ ಬಾಡದು....


ಪರರ ಜೀವನಕ್ಕೆ ಕಲ್ಲೆರಚುವ ಖದೀಮರಿಗೂ ಸಮಾಜದಿ ಬೆಲೆ ಅಪಾರ....


ಕಷ್ಟದಲಿದ್ದಾಗ ಕಣ್ಣೆತ್ತಿ ನೋಡದ ಜನರು ಕಟ್ಟಿಗೆಯ ಚಟ್ಟದಲಿದ್ದಾಗ ಕಣ್ಣೀರಿಡುವರು... 





ಸಾಕು ಮಾಡಿ ಜಗಳ

ಜನರ ಸ್ವಾರ್ಥದಿಂದ ಬಳಲಿ
ನಿದ್ದೆ ಮಾಡುತ್ತಿರುವಳು ಭಾರತಾಂಬೆ
ವಿಶ್ವವಿಡೀ ಶಾಂತಿ ತುಂಬಿಕೊಳಲಿ
ಎಂದು ಬೇಸತ್ತು ಬೇಡಿಕೊಂಬೆ

ಪ್ರಪಂಚದಾದ್ಯಂತ ಉಪಯುಕ್ತವಾದ ನೀರು
ಅದನು ಪಡೆಯಲೇಕೆ  ಕಣ್ಣೀರು?
ನೀರು ಕುಡಿಯಲು ಹೊರಾಡುವವರಾರು?
ಅವರೆಡೆಗೆ ದಾರುಣ ನೋಟ ಬೀರು...

ಅಣ್ಣಾ ... ಏಕೆ ನೀರಿಗಾಗಿ ಪರಸ್ಪರ ಜಗಳ
ಅದರಿಂದ ನೋಯುವುದು ಸಾವಿರಾರು ಹೃದಯ
ಅದರ ಬದಲಿಗೆ ಪ್ರೀತಿಸು ಪ್ರತಿ ಜನಗಳ
ಜಗಳಗಳಿಗೆ- ದ್ವೇಷಕ್ಕೆ ಹೇಳು ವಿದಾಯ...

ಬೀಜದ ಮೊಳಕೆ

ಒಂದು ಬೀಜದ ಹೃದಯದೊಳಗೆ
ಆಳ... ತುಂಬಾ ಆಳದೊಳಗೆ
ಒಂದು ಸಣ್ಣ ಗಿಡವು
ನಿದ್ದೆ ಮಾಡುತ್ತಲಿದೆ ...

"ಏಳು ", ಎಂದಿತು ಸೂರ್ಯನ ಹೊಂಗಿರಣ..
"ಎದ್ದು ಬೆಳಕಿಗೆ ಬಾ ಗಿಡವೇ...
"ಏಳು" ಎಂದಿತು ಒಂದು ಸ್ವರ
ಅದುವೇ ಮಳೆಯ ಇಬ್ಬನಿ...

ಸಣ್ಣ ಗಿಡಕ್ಕೆ ಕೇಳಿಸಿತು ಧ್ವನಿ ,
ಅದು ಮೆಲ್ಲನೆದ್ದು ಬಂದಿತು
ನೋಡಲು ಹೇಗಿದೆಯೆಂದು
ಜಗತ್ತು ಹೊರಗಿನದು...

ಮಾತನಾಡುವ ಚಿಟ್ಟೆ

"ಚಿಟ್ಟೆ, ಚಿಟ್ಟೆ, ಚಿನ್ನದ ರನ್ನದ ಚಿಟ್ಟೆ
ಎಲ್ಲಿಗೆಲ್ಲ ನೀ ಹಾರಿ ಬಂದುಬಿಟ್ಟೆ???"
"ಅಕ್ಕ, ನನ್ನಕ್ಕ, ನಾನು ಹಾರಿದೆ ಗುಡ್ಡ ಬೆಟ್ಟ
ದಾಟಿದೆ ನದಿ ಸಮುದ್ರ, ಸೇರಿದೆ ನಾ ಹೂದೋಟ ."

"ಚಿಟ್ಟೆ, ಚಿಟ್ಟೆ, ಚಿನ್ನದ ರನ್ನದ ಚಿಟ್ಟೆ
ಅಲ್ಲಿಗೆಲ್ಲ ಹಾರಿ ನೀನೇನು ಮಾಡಿಬಿಟ್ಟೆ???"
"ಅಕ್ಕ, ನನ್ನಕ್ಕ, ನಾನಲ್ಲಿಗೆಲ್ಲ ಹಾರಿ ಬಂದುಬಿಟ್ಟೆ
ನೀರು ಕುಡಿದು ಹೂವ ಚುಂಬಿಸಿ ಜೇನು ಹೀರಿ ಬಿಟ್ಟೆ."

"ಚಿಟ್ಟೆ, ಚಿಟ್ಟೆ, ಚಿನ್ನದ ರನ್ನದ ಚಿಟ್ಟೆ
ಅಲ್ಲಿ ನೀನು ಯಾರನೆಲ್ಲ ಮಾತನಾಡಿಸಿ ಬಿಟ್ಟೆ???"
 "ಅಕ್ಕ, ನನ್ನಕ್ಕ, ನಾ ನೋಡಿದೆ ಹಲ ಪ್ರಾಣಿ ಪಕ್ಕಿ
ಮತ್ತು ಅನೇಕ ಗೂಡು ಕಟ್ಟುತ್ತಿರುವ ಹಕ್ಕಿ."

"ಚಿಟ್ಟೆ, ಚಿಟ್ಟೆ, ಚಿನ್ನದ ರನ್ನದ ಚಿಟ್ಟೆ
ನನ್ನ ಜೊತೆ ಮಾತನಾಡುತ್ತ ಇಲ್ಲೇ ಇರಲಾರೆಯಾ??"
"ಅಕ್ಕ, ನನ್ನಕ್ಕ, ಇಲ್ಲೇ ಇದ್ದರೆ  ನನಗೆ ಜೀವನವಿಲ್ಲ
ದಯವಿಟ್ಟು ನನ್ನ ಹೋಗಲು ಬಿಡಲಾರೆಯಾ???"

ಪ್ರಕೃತಿ ಮಾತೆ

ಓ ನನ್ನೊಲವಿನ ಮಾತೆ
ನೀನೇ ಪ್ರಕೃತಿ ಮಾತೆ
ನೀನೇ  ಅನ್ನದಾತೆ
ನಮ್ಮ  ಜೀವನದ ಜೀವದಾತೆ...

ರೈತರ ಗದ್ದೆಗೆ ಮಳೆಯನು ನೀಡಿ
ನಿನ್ನಯ ಮರಗಳ ಎಲೆಗಳ ಬಾಡಿಸಿ
ರೈತರ ಬೆಳೆಗೆ ಗೊಬ್ಬರ ನೀಡಿ
ಇಡೀ ವಿಶ್ವವ ಬೆಳೆಸುವ ತಾಯೇ...

ನಿನ್ನ ಸೌಂದರ್ಯವ ಹಾಳು  ಮಾಡಿ
ಹಣ ಕಸಿಯುವ ಮನುಜರ ನೋಡಿ
ಕ್ಷಮಿಸಿಹೆ ಅವರಿಗೆ ಸಹಾಯ ನೀಡಿ
ಸ್ವಾರ್ಥವಿಲ್ಲದ ಮಹನೀಯ ಮಾತೆ

ಮರವನ್ನು ಕಡಿದು ಭೂಮಿಯ ಬರಡು ಮಾಡಿ
ಪ್ರಕೃತಿ ಮಾತೆಗೆ ದುಃಖವ ನೀಡಿ
ತಿಂದುಂಡು ಜೀವನವ ಹಾಳು ಮಾಡೋ
ಮನುಜಗೂ ಸಹಾಯ ನೀಡುವ ಮಾತೆ...

ಪ್ರೀತಿಯಲಿ ಲೀನ

ಮಾತುಗಳು ಸಾಲದು
ನಿನ್ನ ಪ್ರೀತಿಯ ಬಣ್ಣಿಸಲು
ಅಕ್ಷರಗಳು ಸಾಲದು
ನಿನ್ನ ಮಮತೆಯ ಉಲ್ಲೇಖಿಸಲು
ಭಾವನೆಗಳು ಸಾಲದು
ನಿನ್ನ ಪ್ರೇಮವ ಆಸ್ವಾದಿಸಲು...

ದೃಷ್ಟಿಯು ಸಾಲದು
ನಿನ್ನ ಸುಂದರತೆಯ ಆನಂದಿಸಲು
ನನ್ನುಸಿರು ಸಾಲದು
ನಿನ್ನ ಈ ಸುಗಂಧವ ಆಸ್ವಾದಿಸಲು
ಸ್ಪರ್ಶಜ್ಞಾನ ಸಾಲದು
ನಿನ್ನಪ್ಪುಗೆಯು ನನ್ನ ಮೈಸೋಕಲು...

ಶ್ರವಣಜ್ಞಾನವೇ ಸಾಲದು
ನಿನ್ನ ಸುಂದರ ನುಡಿಗಳ ಕೇಳಲು
ಓಡುತಿರುವ ಸಮಯ ಸಾಲದು
ನಿನ್ನ ಜೊತೆಯನು ಆನಂದಿಸಲು
ಈ ಜೀವನವೇ ಸಾಲದು
ನಿನ್ನ ಪ್ರೀತಿಯಲಿ ತಲ್ಲೀನಳಾಗಲು...

Saturday, February 15, 2014

ನನ್ನವನು

ನನ್ನವನು ಸವಿಹೃದಯಿ...
ನನ್ನ ಬಾಳ ಬೆಳಗುವ ರವಿ...

ಪರರಿಗೆ ಕೇಡು ಬಯಸದ
ಕ್ಷಮೆಯ ಮಹಾಪೂರ - ಸಹನಾಮಯಿ..
ದುಃಖಗಳ ಹೃದಯದಿ ಬಚ್ಚಿಟ್ಟು
ನಗುಮೊಗದಿ ರಂಜಿಸುವ - ಶಾಂತಹೃದಯಿ..

ಅಪವಾದಗಳ ಸುರಿಮಳೆ ಬಿದ್ದರೂ
ನೋವು ನುಂಗುವ - ಸಹೃದಯಿ
ಕಟುಹೃದಯಿಗಳು ಕೇಡೆರಚಿದರೂ
ಅವರೆಡೆ ಮಂದಹಾಸ ಬೀರುವ - ಸ್ನೇಹಜೀವಿ..

ಪ್ರೀತಿಯ ಮಹಾಪೂರ ಇವನು
ಇವನಿಂದಾಗಿ ಈ ಪ್ರೇಮ ಅಮರ
ಜೊತೆಗಿರಲು ಇವನು ನನ್ನೊಡನೆ
ಭಯವಿಲ್ಲದೆ ಗೆಲ್ಲುವೆವು ಸಮರ...

ಎಲ್ಲರನೂ ಗೌರವಿಸುವ ಇವನು
ನನ್ನ ಮನದ ಅರಸ..
ಇವನ ಜೊತೆಯಿಂದಲೇ ತಾನೇ
ಕೊನೆ ನನ್ನ ಬಾಳ ವಿರಸ...

Friday, February 14, 2014

ಶರೀರದ ನೀತಿ

ಸತ್ತ ಮೇಲೆ ಆಗುವುದು ನಶ್ವರ
ಹೊಳೆಯುತ್ತಿರುವ ಈ ಶರೀರ
ಅದಕ್ಯಾಕೆ ಬೇಕೀಗ ಶೃಂಗಾರ?
ಪಡಲು ಹೆರವರು ಮತ್ಸರ...

ಸತ್ಯ ಅಹಿಂಸೆಯೆ ಆಹಾರ
ನ್ಯಾಯ ನೀತಿಯೆ ವ್ಯವಹಾರ
ವಿದ್ಯಾದಾನವೇ ಸದ್ವಿಚಾರ
ಷಡ್ವೈರಿಗಳೇ ಅನಾಚಾರ...

ಸ್ನೇಹವೇ ನಮಗೆ ವೈಭೋಗ
ಸಹಾಯದಲ್ಲಿದೆ ಅನುರಾಗ
ಹಿಂಸೆಯೊಂದೇ ಮಹಾರೋಗ
ಹರಿಸ್ಮರಣೆಯೇ ನಮಗೆ ನಗ...

ಬಿಟ್ಟುಬಿಡಿ ನಿಮ್ಮಯ ಸ್ವಾರ್ಥ
ಜೀವನಕೆ ಕೊಡಿ ಹೂಸ ಅರ್ಥ...
ಯಾರೂಂದಿಗೂ ಮಾಡದಿರಿ ಅನರ್ಥ
ಅದುವೇ ಜೀವನದ ನಿಜ ಅರ್ಥ...

Monday, February 10, 2014

ಜೀವನ ವಸಂತಗಾನ...

ಏಕೆ ಬಾಡುತಿದೆ ಮನ
ಹೃದಯದಿ ಕಣ್ಣೀರ ಕಂಪನ
ಎನಿತು ತಾಳೆನೋ ನಾ ಕಾಣೆ
ಈ ಜೀವನದ ಲಘುಪಯಣ...

ಕೊರೆಯುತಿದೆ ಚಳಿಗೆ ಈ ಜೀವನ
ಕಾಯುತಿದೆ ವಸಂತನಾಗಮನ
ಬಿಸಿಲ ಬೇಗೆಗೆ ಬೇಯುತಿದೆ ಮನ
ತಂಪೆರೆಯಲು ಬಾ "ವರ್ಷಾ" ಈ ದಿನ...

ಕಾಲ ಕೂಡಿಬರದೆ ಎಂದೂ ನಡೆಯದು
ನಾವು ಮನದಲಿ ಅಂದುಕೊಂಡದ್ದು..
"ಕಾಲಾಯ ತಸ್ಮೈ ನಮಃ" ಎಂದು
ಶರಣಾಗಬೇಕು ಭಗವಂತನಿಗೆ ಎಂದೂ...

ಬಾಡದಿರಲಿ ಎಂದಿಗೂ ಈ ಮನ
ಈಡೇರಲಿ ಎನ್ನ ಬಯಕೆಗಳ ಕಲ್ಪನ
ತಂಪೆರೆಯಲಿ ಯಶೋಲ್ಲಾಸದ ಆಗಮನ
ಸಂತಸದ ಗುಡಿಯಾಗಲಿ ಈ ಜೀವನ...

Sunday, February 9, 2014

ಬೇಡಿಕೆ

ಬೇಡುತಿದೆ ಮನವು  ಭಗವಂತನಲಿ
ಈ ಹೃದಯದ ಬಯಕೆ ಹುಸಿಯಾಗದಿರಲಿ...
ಮನದಾಕಾಂಕ್ಷೆಗಳು ನನಸಾಗುತಿರಲಿ...
ಈ ಜೀವನದ ಕಾರಣಕೆ ಸಾವಾಗದಿರಲಿ...

ಪ್ರೇಮದ ಅಂಕುರಕೆ ನೋವಾಗದಿರಲಿ..
ಆಸೆಗಳ ಸಾಗರವೆಂದೂ ಬರಡಾಗದಿರಲಿ...
ಕಾತರಿಸುವ ಕಂಗಳಲಿ ಚೈತನ್ಯ ಜನಿಸಲಿ...
ನಗು ಮರೆತ ಅಧರಗಳು ಅರಳಿ ನಗುತಿರಲಿ...

ಸಂತಸ ಮರೆತ ಮನವು ನಳನಳಿಸುತಿರಲಿ...
ಭಯವೇ ಮನೆಮಾಡಿದ ಹೃದಯ ಪ್ರಶಾಂತವಾಗಲಿ...
ನಿದ್ರೆ ಮರೆತ ಕಂಗಳಲಿ ಶಾಂತಿ ವಿಶ್ರಮಿಸಲಿ...
ಕೋಪ ತಾಪಗಳು ಕರಗಿ ಮನಕೆ ತಂಪೆರಚಲಿ...

ಅನ್ಯಾಯವೆಸಗದ ಪ್ರೇಮ ಜಯಭೇರಿ ನುಡಿಸಲಿ...
ಕಪಟವಿಲ್ಲದ ಪ್ರೀತಿಗೆ ಪ್ರೋತ್ಸಾಹ ದೊರೆಯಲಿ...
ಮನದಾಳದ ಭಾವದ ಪ್ರತಿಬಿಂಬ ತೋರಲಿ...
ಸಮಾಜದಿ ನಿಜಪ್ರೀತಿಗೆ ಮಾನ್ಯತೆ ದೊರೆಯಲಿ...

Friday, February 7, 2014

ಸರಿಯಲ್ಲವೇ???

ರಾತ್ರಿಯ ಈ ಏಕಾಂತದಲಿ
ಕಾಡುತಿದೆ ಮಾತೊಂದು ಅಪೂರ್ಣ...
ಮನದಲಿ... ಅಂತರಾಳದಲಿ...
ಕೇಳುತಿದೆ ಸ್ವರವೊಂದು ಸ್ಮರಣ...

ಕಣ್'ಪಟಿಯಲಿ ಸುಳಿದಾಡುತಿದೆ
ಜೀವನ ಕಥಾನಕ ಚಲನಚಿತ್ರದಂತೆ
ಸಿಹಿಕಹಿಗಳ ಮಿಶ್ರಣ ನೆನಪಿಸುತಿದೆ
ಮನದಲಿ ಕದನ ಕುರುಕ್ಷೇತ್ರದಂತೆ...

ಮರೆಯಲಾಗದಂತೆ ಅಚ್ಚು ಹಿಡಿದ ಪಾಠ
ಕಹಿಮಿಶ್ರಿತ ಅನುಭವಗಳದು
ಜೊತೆ ಸೇರಲು ಸಂಭ್ರಮಗಳ ಆಟ
ಸಿಹಿಯಾದ ಅನುಭವೋಲ್ಲಾಸಗಳು...

ಜೀವನದ ರಂಗಸ್ಥಳದಲಿ
ಸಿಹಿಕಹಿಗಳ ಮಿಶ್ರಣ ಅನಿರ್ಧಾರಿತ
ನಡೆನುಡಿಗಳು ನಮ್ಮ ವ್ಯಕ್ತಿತ್ವದಲಿ
ಜೀವನದ ಕಥಾನಕವನಾಧಾರಿತ...

Wednesday, February 5, 2014

ಸ್ವಾರ್ಥಿ ಜನರಿವರು

ಸ್ವಾರ್ಥವೇ ಮಿಗಿಲು ಇವರೆಲ್ಲರಿಗೂ
ಬಾಯ್ಬಿಡುವರು ಜುಜುಬಿ ಚಿಲ್ಲರೆಗೂ...

ತಪ್ಪುಗಳ ತಾವು ಎಷ್ಟೇ ಮಾಡಿದ್ದರೂ
ಪರರ ನಿಷ್ಠೆಗಳನ್ನು ಹೀನಾಯವಾಗಿ ದೂರುವರು...

ಕಷ್ಟದಲಿ ಇದ್ದಾಗ ಕಣ್ಣೆತ್ತಿ ನೋಡದವರು
ಕಾಷ್ಠವನೇರಿದಾಗ ನಕ್ರ ಕಣ್ಣೀರ ಸುರಿಸುವರು...

ತಮ್ಮ ಮನದಲ್ಲಿ ಹುಳುಕೆಷ್ಟೇ ತುಂಬಿರಲಿ
ಧೂಷಣೆಯ ನುಡಿಯನ್ನು ಖುಷಿಗೊಂಡು ಬಿತ್ತುವರು..

ಮುನ್ನಡೆಯ ಹಾದಿಯಲಿ ನಡೆಯದಿದ್ದರೂ ತಾವು
ಪರರ ಖ್ಯಾತಿಯನು ಕಡೆಗಣಿಸಿ ಆಡುವರು...

ತಮ್ಮ ಜೀವನ ನರಕದಂತೆ ರೂಪಿಸಿದ್ದರೂ
ಪರರ ಔಚ್ಚ ಜೀವನಕೆ ಬೆಂಕಿಯ ಹಚ್ಚುವರು...

ಸ್ವಾರ್ಥವ ರಕ್ತ ಕಣಕಣದಲೂ ತುಂಬಿಕೊಂಡಿಹರಿವರು
ಪರರ ಜೀವನಕೆ ಕೆಸರಂತೆ ಹಾಯುವರು....

Monday, February 3, 2014

ಬೆಳಕು

ಜೀವನದ ತಡೆಭರಿತ ಹಾದಿಯಲಿ
ಕಾರ್ಗತ್ತಲು ಕವಿದಾಗ
ಬೆಳಕು ತಾ ಆಗಮಿಸಿ
ದಾರಿಯ ತೋರಿಸದು...

ಮನಸಿನ ಕದವ ನೀ ತೆರೆದು
ಸೇರು ಅಂತಃಕರಣವ
ದಾರಿ ತೋರಿಸುವುದದು
ದೀಪ ತಾ ಆರಿದಾಗ...

ಬಲಗೊಳಿಸು ನಿನ್ನ ಮನೋಬಲವ
ಶಾಂತಿಯೇ ಅದಕಾಹಾರ
ಪ್ರಶಾಂತವಾಗಿರು ಎಂದೂ
ಮನವು ತಾ ಕೆಡುವಾಗ...

ಸಂದರ್ಶಿಸು ನೀ ಮನದ ಜೊತೆಗೆ
ಸಮಾಧಾನ ತಾಳ್ಮೆಗಳಿರೆ
ಕತ್ತಲಿನ ಕುರುಡತ್ವದಲೂ
ಬೆಳಕು ತಾ ತೋರುವುದು...

Sunday, February 2, 2014

ನಮ್ಮ ಭಾರತ

ಆಕಾಶದಿ ಮಿನುಗುತಿದೆ ಅಂದದ ತಾರೆ
ಭೂಗರ್ಭದಿ ಮೆರೆಯುತಿದೆ ಜಲಧಾರೆ
ಇರುವಳು ಭೂತಾಯಿಯ ಹೃದಯದಿ
ಶಾಂತಿಪ್ರಿಯಳಾದ ತಾಯಿ "ಭಾರತಿ"

ಮೂರು ದಿಕ್ಕುಗಳಿಗೂ ಕಾವಲಿದೆ ಸಾಗರ
ಆ ತ್ರಿವೇಣಿಗಳ ಸಂಗಮ ಅಮರ
ಕಿರೀಟದಂತೆ ಹೊಳೆಯುತಿದೆ ಹಿಮಗಿರಿ
ಮಂದಸ್ಮಿತ ಹೊಂದಿರುವ ಅಮ್ಮ "ಭಾರತಿ"

ನಿನಗೆ ಸಹಸ್ರಾರು ಪುತ್ರ ಪುತ್ರಿಯರು
ಇಲ್ಲಿದೆ ಶುದ್ಧ ಸಂಸ್ಕೃತಿಗಳು ಹಲವಾರು
ಧಾರ್ಮಿಕತೆಗೆ ನೆಲೆಬೀಡು ಈ ನಾಡು
ಸಕಲ ಕಲಾಧರಿತ್ರಿ ಈ ನಮ್ಮ "ಭಾರತಿ"

ಶ್ರವಣಕ್ಕೆ ಕೇಳುವುದು ಭಾಷೆಗಳು ನೂರಾರು
ಹೃದಯಕ್ಕೆ ಸ್ಪರ್ಶಿಸುವ ಸ್ಪಂದನೆಯೇ ಈ ತವರು
ಮನದಲ್ಲಿ ಗೌರವದ ಅಲೆಗಳು ಸಹಸ್ರಾರು
ಶಾಂತಿಯ ನೆಲೆಬೀಡಾಗಲಿ ಎಂದೆಂದಿಗೂ ಈ "ಭಾರತಿ"