Poetry ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Poetry ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಜನವರಿ 18, 2025

ಸ್ಮರಣೆಯ ಸಡಿಲ ಸ್ಪಂದನೆ

ನಿನ್ನ ಹೆಸರ ನೆನೆದ ಆ ಕ್ಷಣ
ನನ್ನ ಉಸಿರ ಲಯದಲ್ಲಿ ತಲ್ಲಣ
ನಿನ್ನ ನೋಡಬಯಸಿದೆ ಈ ಮನ 
ಕ್ಷಣ ಕ್ಷಣ ಎಣಿಸಿದೆ ಈ ದಿನ 
 
ಸುಮ್ಮನೆ ಕುಳಿತರೆ ಏನೋ ಬಯಕೆ 
ಕೆಲಸದಿ ಮನಸಿರೆ  ಏನೋ ಹರಕೆ 
ಕಾತರ ಮನದಲಿ ನಿನ್ನ ಸನಿಹಕೆ 
ಆಸೆ ಪಡುತಿದೆ ಪ್ರೀತಿ ಸ್ನೇಹಕೆ. 

ಹೃದಯದ ನಿದ್ರೆಗೂ ನಿನ್ನ ರೂಪವೋ
ಕಣ್ಣು ತೆರೆದರೆ ಹೊಂಗಿರಣದ ರೂಪವೋ
ಮೌನದ ನಡುವೆ ನಿನ್ನ ಸವಿನುಡಿಗಳೋ
ಮನದ ಮರಳಿನಲಿ ನಿನ್ನ ಪಾದಚಿಹ್ನೆಗಳೋ...

ನಗೆಯಲಿ ನನ್ನದೊಂದು ನಿಶಬ್ದ ಪ್ರಾರ್ಥನೆ
ನಿನ್ನ ನೆನೆಪೊಂದೇ ಈ ಮನದಾಶ್ವಾಸನೆ
ಅಂತರಾಳದ ತಾಣದಿ ಮೆಟ್ಟಿದ ನಿನ್ನ ಕನಸು
ಕಣ್ಣು ತೆರೆಯುವಾಗ ನಿನ್ನ ಜೊತೆಗಿರೆ ಮನಸು...

ಅಡಗಿರುವ ಚಿತ್ತದಲ್ಲಿ ನಿನ್ನ ಚಿತ್ರವೊಂದು
ರೇಖೆಯಾಗಿಹ ಭಾವದ ವೃತ್ತವೊಂದು
ಹಲವು ಪದಗಳಿಲ್ಲದ ಭಾವವೊಂದು
ಆ ಭಾವನೆಯ ನುಡಿಯಲಿ ನೀನು ಮುಂದು…

ಮುಂದೇನು ಹೇಳಲಿ ತಿಳಿಯದಂತೆ ಮನವು
ನಿನ್ನ ನೆನೆಪಲ್ಲಿ ಯಾತ್ರೆ ನನ್ನೀ ಜೀವನವು
ಕನಸಿನಲಿ ಬಂದ ನಿನ್ನ ಸನಿಹದ ಭಾವ 
ಬದಲಿಸಿದೆ ನೀ ನನ್ನ ಹೃದಯದ ತಾಳವ...

ಬೀದಿಯ ಪಥದಲಿ ನಿನ್ನ ಹೆಜ್ಜೆಯ ಜಾಡು  
ಹಸಿರು ಇಳೆಯಲಿ ಆಸೆಗಳ ಮೊಳಕೆಯ ಹಾಡು  
ಮುಂದೊಂದು ದಿನ ಮತ್ತೆ ನಿನ್ನ ಸನಿಹದಲಿ
ಮನದ ಸಾಗರವೇ ತಲುಪಲಿ ನೆನಪಿನಂಗಳದಲಿ...

ಎದೆಯ ಹಾಳೆಯಲಿ ಅರಳಿದ ನಿನ್ನ ಚಿತ್ರವೊಂದು  
ಮರೆತುಹೋಗದ ನೆನಪಾಗಲಿ ಪ್ರತಿದಿನದಂದು  
ನನ್ನ ಪ್ರತಿ ಉಸಿರಲ್ಲಿ ನಿನ್ನ ಒಲವು ನಲಿದಿದೆ
ಹಗಲು ರಾತ್ರಿ ನೀ ಚಿರವಾಗಿ ನನ್ನಲ್ಲೇ ನೆಲೆಸಿದೆ…
 
✍🏻 ದೀಪಲಕ್ಷ್ಮಿ ಭಟ್ 

ಭಾನುವಾರ, ಫೆಬ್ರವರಿ 25, 2024

ಮಮತೆಯ ಮಡಿಲು

ಹಳಿದರವಳನು ಬಂಜೆ ಎಂದು
ಅರಿಯದಾದರವಳ ತಾಯಿ ಹೃದಯವನು
ಕೇಳದಾದರವಳ ನೋವ ತುಡಿತವನು
ಸಾಯಿ ನೀನೆಂದು ಹಳಿದರವಳನು.

ಕಂಗಳಲಿ ಕಾಣದಾದರವಳ ವೇದನೆಯನು
ಆ ವೇದನೆಯಲಿರುವವಳ ಸಂಕಟವನು
ಹಿಂದಿನಿಂದ ಹೀಯಾಳಿಸಿದರವಳನು
ಎದುರಿನಲೇ ಧೂಷಿಸಿದರವಳನು.

ಕೇಳಿದ್ದರೆ ಅವಳ ಮನದ ಬೇಗುದಿಯನು
ತೆರೆದಿಡುತಿದ್ದಳು ಅವಳ ಹೃದಯಕದವನು
ಭಾವಕೆ ಸ್ಪಂದಿಸುವ ತಾಯಂತರಾಳವನು
ತಿಳಿದಿರುತಿದ್ದೀರವಳ ಅಂತರಾಳದ ನೋವನು.

ಒಬ್ಬಂಟಿಯಾಗಿ ಸಾಯುತಿರುವವಳ  ಚೇತನವನು
ಹಳಿದು ನೋಯಿಸಬೇಡ ನೀನವಳ ಹೃದಯವನು
ಖುಷಿಯಲಿರಲಿ ಬಿಡು ನೋಡುತ ಪರ ಮಕ್ಕಳನು
ತಂಪಿಸಲಿ ಅವಳ ಮಮತೆಯ ಭಂಡಾರವನು.

ಭಾನುವಾರ, ಜೂನ್ 5, 2022

ಒದ್ದಾಟದ ಸಮಯ


ನೋಡುನೋಡುತ್ತಿದ್ದಂತೆಯೇ 

ಸಮಯ ಕಳೆದು ಹೋದಂತಿದೆ 

ಮನದಾಸೆಗಳಿದ್ದಂತೆಯೇ 

ಹೂತು ಮರೆಯಾದಂತೆನಿಸುತಿದೆ 


ಪೂರೈಸುವ ತವಕವಿದ್ದರೂ 

ಸಮಯದ ಅಂತರವಿದ್ದಂತಿದೆ. 

ಮುನ್ನಡೆಯುವ ಛಲವಿದ್ದರೂ 

ಅನುಗ್ರಹದ ಕೊರತೆಯಿದ್ದಂತಿದೆ 


ಬಲ್ಲೆ ನಾ ಇದು ಏನೆಂಬುದ 

ಆ ದೇವರ ಚೆಲ್ಲಾಟವೋ?

ಮುನ್ನುಗ್ಗುವ ಸಮಯದಾಟವೋ?

ಅಲ್ಲ ನನ್ನದೇ ಮನದೊದ್ದಾಟವೋ??

 

ಸಮಯವಿದ್ದರೂ ಸಮಯವಿರದಂತೆ 

ಮನಸ್ಸಿದ್ದರೂ ಮಾರ್ಗವೇ ಇರದಂತೆ 

ಛಲವಿದ್ದರೂ ಹಂಬಲವಿರದಂತೆ 

ಯಾವ ಕಾರ್ಯವೂ ಕೈಗೂಡದಂತೆ 

ಆಟವಾಡುತಿದೆ ನನ್ನೀ "ಸಮಯ"

ಸೋಮವಾರ, ಜೂನ್ 8, 2020

ಚಿಂತೆಯ ಬಿಡು

ನೆನೆಯುತ ಆ ಕ್ಷಣಗಳ ತುಡಿತವ
ಬಯಸಿದೆ ನಿದಿರೆಯ ಆಲಿಂಗನವ
ಕೆಡಿಸಿತು ಮನಸಿನ ಶಾಂತಭಾವವ
ಚಿಂತೆಯ ಅಲೆಗಳ ಅಬ್ಬರವು.

ಅರ್ಥವ ಪಡೆಯದ ಚಿಂತೆಗೆ ಕಾಣದು
ಅಂತ್ಯವ ಹಾಡುವ ಬೆಳ್ಚುಕ್ಕೆಯು
ಚಿಂತಿಸಿ ಅರ್ಥವು ಅನರ್ಥವಾಗುವುದು
ಚಿಂತಿಸುವುದರಿಂದ ಫಲವೇನು?

ಚಿಂತೆಯ ಮರೆತು ನಿರಾಳವಾಗಿರಲು
ಚಿಂತೆಗೆ ದೊರೆವುದು ಸದುತ್ತರವು
ಆಲೋಚಿಸುವ ಬುದ್ಧಿಯು ದೊರೆಯದು
ಬಲಿನೀಡಿದರೆ ಚಿಂತೆಗೆ ಮನಸ್ಸನ್ನು

ಪ್ರಶಾಂತಗೊಳಿಸು ಮನಸನು ಎಂದಿಗೂ
ನಿದಿರೆಯೂ ಬರುವಳು ಪ್ರೀತಿ ಉದುರುತ
ನಿಶ್ಚಿಂತೆಯ ನಿದಿರೆಯ ಪಡೆದರೆ
ಚಿಂತೆಗೆ ದೊರೆವುದು ದೊಡ್ಡ ಅಂತ್ಯ.

ಚಿಂತೆಯ ಬಿಡು. ನಿದಿರೆಯ ಆಲಂಗಿಸು...

ಮಂಗಳವಾರ, ಆಗಸ್ಟ್ 7, 2018

ಸಮಯಕೊಂದು ಪ್ರಶ್ನೆ

ಓ ಸಮಯವೇ, ನೀನೇನು ಕ್ರೂರಿಯೇ?
ನನ್ನ ಸಂಯಮವ ಪರೀಕ್ಷಿಸುತ್ತಿರುವೆಯೇ?
ತಿಳಿ ನೀನಿಂದು, ಅಸಾಧ್ಯವು  ನಿನ್ನಿಂದ
ಸಹನೆಯ ಕೀಳಲು ನನ್ನಾತ್ಮಬಲದಿಂದ...

ಮಿತಿಯಿಹುದು ಒಂದು ಆತ್ಮದ ತಾಳಿಕೆಗೂ
ಮರ್ಯಾದೆಯಿಹುದು ಎಲ್ಲರ ಬಾಳ್ವಿಕೆಗೂ
ಅಗೌರವ ನೀಡದಿರು ನೀ ಒಂದು ಜೀವಕೆ
ಆ ಜೀವವೇ ಮುಂದೊಮ್ಮೆ ಆಸರೆ ಕೊಡಬಹುದು...

ಜೊತೆಗಿರುವವನ ಕೀಳಾಗಿ ತ್ಯಜಿಸಿದರೆ
ದೂರವಾದವನ ನಿರಂತರ ನೆನೆದತ್ತರೆ
ಬೆಲೆಕೊಡುವ ಆ ನಿನ್ನ ಜೊತೆಗಿರುವವನು
ನಿನಗಿತ್ತ ಗೌರವಕೆ ಬೆಲೆಯಿರದಂತಾಯ್ತೇ!

ಓ ಸಮಯವೇ, ನೀಡು ನೀ ಉತ್ತರವ
ನಿನಗೆ ಬಲಿಯಾಗಿ ದುಡುಕಿ ಪ್ರತಿಕ್ರಿಯಿಸಲೇ?
ನಿನ್ನ ಜೊತೆಗೋಡಿ ನಾ ನನ್ನ ಮೌಲ್ಯ ಕಡಿಯಲೇ?
ಮೂಕನಾಗಿದ್ದು ನಾ ಸ್ವತಃ ಅಗೌರವ ಪಡೆಯಲೇ?

ನೀನೇ  ಹೇಳು. ನಾನೇನು ಮಾಡಲಿ?

ಪ್ರೀತಿಯ ಪ್ರೀತಿ

ಪ್ರೀತಿಯ ಈ ಪ್ರೀತಿಯ ಪ್ರತಿಕ್ಷಣದಲೂ
ನಿನ್ನ ಆ ಮೃದು ಸ್ಪರ್ಶದ ಭಾವವು
ನನ್ನ ಈ ಸ್ವಪ್ನಸೀಮೆಯ ಮೀರುತ
ತುಂಬಿತು ಮನದಲಿ ಹಿತಕಂಪಿನಂತೆ.

ಮೋಹಮಾಯೆಯ ಮ್ರೃದುಭಾವಗಳು
ಲೀನವಾಯಿತು ಈ ನನ್ನ ಕಂಗಳಲಿ
ಕಂಗಳಾನಂದ ಕೊಡಗಳು ತುಂಬುತ
ಉಕ್ಕಿ ಹರಿಯಿತು ತಂಪು ನದಿಯಂತೆ.

ಈ ಜೀವದ ರಕ್ತ ಕಣಕಣಗಳು ಜಿನುಗಿ
ಕುಣಿದಾಡಿತು ಖುಷಿಯ ತೋರಣದಲಿ
ನಿನ್ನಪ್ಪುಗೆಯ ಬೆಸುಗೆ ತಾಗಿ ಬೆಸೆಯುತ
ತಲ್ಲಣಿಸಿ ಕುಣಿದವು ಮಳೆಗೆ ಗಿಡಗಳಂತೆ.

ಪ್ರೀತಿಯಾನಂದವೇ ಹೀಗೆ..ಪ್ರತಿಘಳಿಗೆಗೂ
ನೀಡುವುದು ಕನಸಿಗೆ ಮರುಜೀವವ..
ಪ್ರೀತಿಯನು ಪ್ರೀತಿಯಿಂದ ಪಡೆದರೆ
ಭೂಮಿ-ಆಗಸಕೆ ದೊರೆವ ಸೇತುವಂತೆ...

"ಪ್ರೀತಿಯೇ ಅಮರ...ಪ್ರೀತಿಯೇ ಮಧುರ.."

ಶನಿವಾರ, ಏಪ್ರಿಲ್ 28, 2018

ನನ್ನ ಬೆಲೆಯಿಷ್ಟೇ ಏನು!??

ಮಬ್ಬುಗತ್ತಲಲಿ ನಿನ್ನ ಮೊಗವ ಕಂಡು
ಖುಷಿಯಾಗಿ ಸಮೀಪಿಸಿದೆ ನಾನು
ನನ್ನ ಶತ್ರುವಿಗೂ ಕೀಳಾಗಿ ನೆನೆದು
ಝಾಡಿಸಿದೆಯಲ್ಲವೋ ನೀನು...

ಮನದಲ್ಲೆದ್ದ ನೂರೆಂಟು ಪ್ರಶ್ನೆಗಳು 
ಸಮಾಧಾನ ಸಿಗದೇ ಸೋತು 
ಕಂಗಳಲಿ ನದಿಯಂತೆ ಹರಿದು 
ನಿದ್ರೆಯಲಿ ಕರಗಿತಲ್ಲವೇ ನೋಡು... 

ಆ ನಿದಿರೆಯ ಮಡಿಲಲೂ ನಿನ್ನ
ಅಸಮಾಧಾನದ ಚರ್ಯೆಯು
ಬೆಂಬಿಡದಂತೆ ಕಾಡಿತಲ್ಲವೇ ನೋಡು
ಆ ನೋವಿಗೊಮ್ಮೆ ನೀ ಸ್ಪಂದಿಸಿ ನೋಡು...

ಮನದಾಳದಲಿ ಬರಿದೆ ನಿನ್ನ
ಮನಸಾರೆ ಬಯಸುತಿರೆ
ನಿನ್ನೆದೆಯಂಗಳದಿ ನನಗೆ
ಬೆಲೆಯೆಷ್ಟಿರುವುದ ತಿಳಿಸು....
"ಸಮಯ ಮೀರುವ ಮೊದಲು"....

ಸೋಮವಾರ, ಮಾರ್ಚ್ 26, 2018

ಯಾಕೆ ದೂರಾದೆ "ನೀನು"

ಬೆಳಕ ಮರೆಯಲಿ ನೋಡುನೋಡುತ
ಮರೆಯಾಗಿ ಹೋದೆ ನೀನೆಲ್ಲಿ
ಇಂದೆಲ್ಲ ಮನಕೆ ತಂಪೆರಚುತ
ತಂದೆಯಾ ದುಃಖವ ಈ ನನ್ನ ಕಂಗಳಲಿ...

ಇಂದಿಗೂ ನಾ ನೋಡುತಿಹೆ ತವಕದಿ
ನೀ ಮರೆಯಾದ ಬೆಳಕಿನ ಹಾದಿಯೆಡೆಗೆ
ಮತ್ತೊಮ್ಮೆ ನಿನ್ನ ನೋಡುವ ಹಂಬಲದಿ
ಬೆಳಕು ಬರುವ ಮೂಲದೆಡೆಗೆ...

ಸಂದರ್ಭದ ಸುಳಿಯೊಳಗೆ ಸಿಲುಕಿ
ಹಿಂತೆಗೆದೆ ಮುಂದಿಟ್ಟ ದಿಟ್ಟನಡೆಯ
ಸ್ವಾತಂತ್ರ್ಯದ ಅರ್ಥವನೇ ಮರೆಯುತ
ಚೂರಾದೆ ಹಗೆಯ ಚುಚ್ಚಿರಿತಕೆ...

ನಿನ್ನ ನೋಡಿದರೆ ಸಾಕು ಈ ಮನಕೆ
ಉರಿಬಿಸಿಲಲಿ ತಂಗಾಳಿ ಬೀಸಿದಂತೆ
ಮರಳಿ ಬಾ ನೀನು ನಾನಿರುವ ಕಡೆಗೆ
ನನ್ನ ಹೃದಯದಂಗಳಕೆ ಸ್ಮಿತವಾಗಿ ಬಾ...

ಕಾಯುತಿರುವೆ ನಿನ್ನುತ್ತರಕೆ...


ಸೊಗಸಾದ ಆ ನನ್ನ ಕನಸೊಡೆದು ಚೂರಾದಾಗ
ಹೊಸದೊಂದು ಕನಸ ಕಲ್ಪಿಸಿದೆ ನಾನು
ಕನಸಿನ ಆ ಕಲ್ಪವೃಕ್ಷವನು ಕಡಿದು
ಆಹುತಿಗೊಳಿಸುವ ಪ್ರಯತ್ನವೇಕೆ ನಿನಗೆ?

ಭಾವನೆಗಳ ಹೂದೋಟದಲಿ ಬೆಳೆದ
ಬಾಡಬಯಸದ ಕುಸುಮವೇ ಆ ಕನಸು
ಕಂಬನಿಯ ತಾಪಕೆ ಧಗಧಗನೆ ಸುಟ್ಟು
ಭಸ್ಮವಾಗಿಸುವ ತೀವ್ರತೆಯದೇಕೆ ನಿನಗೆ?

ಹೃದಯದಿ ಕಾರಂಜಿಯಂತೆ ಚಿಮುಕಿದ
ಪವಿತ್ರ ಅನುರಾಗದ ಬಂಧವೇ ಆ ಕನಸು
ಆ ಕಾರಂಜಿಯ ಬುಡವನ್ನೇ ಅಹಂಭಾವದಿ
ಕಿತ್ತೊಗೆಯುವ ಸೊಕ್ಕಿನ ಭರವೇಕೆ ನಿನಗೆ?

ಚಿಗುರಿದ ಆ ಕಣ್ಮರೆಯಾದ ಕನಸಿಗೆ
ಅವಶ್ಯಕವು  ಪವಿತ್ರ ಪ್ರೀತಿಯ ಪೋಷಣೆ
ಬೆಳೆಯದದು ದುಃಖದ ಕಂಬನಿ ಎರೆದಾಗ
ತಿಳಿಯಲಾರದಂಥ ಅವಿವೇಕಿಯೇ ನೀನು???

ಕಾಯುತಿರುವೆ ನಿನ್ನುತ್ತರಕೆ...

ಗುರುವಾರ, ಅಕ್ಟೋಬರ್ 12, 2017

ಮನದ ದೌರ್ಬಲ್ಯತೆ

ಮನದ ಚಂಚಲತೆಗೆ ಬಲಿಯಾಗಿ
ದಿನದ ಸಮಚಿತ್ತವ ಕಳೆದು
ಪ್ರಶ್ನೆಗಳ ಲೋಕದಲಿ ಅಲೆದು
ಕಂಗೆಟ್ಟಿದೆ ಚಾತುರ್ಯತೆಯು ಇಂದು

ಕಳೆದುಕೊಂಡ ಸ್ಥಿಮಿತವ ನೆನೆದು
ದುಃಖಿತ ಕಂಗಳಲಿಳಿಯದೆ ಕಣ್ಣೀರು
ಭಾರವಾಗಿಸಿದೆ ಹೃದಯದ ಕವಲು
ತಡೆಯಲಾರದೆ ನೋವನಿಂದು

ಕಾಣದ ಹಾದಿಯಲಿ ನಡೆದು
ತಿಳಿಯದ ಗುರಿಯನು ಬಯಸಿ
ಆಕಾಂಕ್ಷೆಗಳ ಹುರಿದುಂಬಿಸುತ
ಚಡಪಡಿಸುತಿದೆ ಮನವು ಇಂದು

ಯಾಕೆ ಹೀಗಾಗುತಿದೆ ಎಂಬುದನು
ಅರಿತು ತೋರು ಸರಿದಾರಿಯನು
ಮಾರ್ಗದರ್ಶಿಯಾಗು ನೀ ಮನಕೆ
ಮಂಕಾಗಿ ಧ್ರೃತಿಗೆಡಬೇಡ ನೀನಿಂದು...

ಶುಕ್ರವಾರ, ಜೂನ್ 23, 2017

ಕೊಲೆಯಾದ ಪ್ರೀತಿ

ಕೈಯಲಿ ಘಮಘಮಿಸುವ ಸುಮಗಳು
ಬೆಸುಗೆಯ ದಾಹವ ವರ್ಧಿಸುವ ಹಿಮಗಳು
ನಿನ್ನ ನೋಡಬಯಸುವ ಈ ನನ್ನ ಕಂಗಳು
ನೋವನುಂಡು ನಿರ್ಜೀವ ಈ ಮನದ ಭಾವಗಳು..‌

ನಿನ್ನೆದೆಯ ಅಂಚಿನಲಿ ಕಿವಿಯಿಟ್ಟ ಆ ಕ್ಷಣ
ಅರಿತೆ ನನ್ನ ನಿನ್ನ ಮನದ ಪ್ರೀತಿಬಂಧನ
ನಿನಗಾಗಿ ನೋಡೀ ಹೃದಯದಿ ತಲ್ಲಣ
ನಿನ್ನ ನೋಟವೊಂದೇ ಈ ಮನಕೆ ನಿರಂಜನ...

ಭಾವುಕವು ಈ ಹೃದಯ ನಿನ್ನ ನೆನಪಿಂದ
ಉಸಿರಾಟದಿ ಕಂಪಿಸುತಿದೆ ನಿನ್ನದೇ ಗಂಧ
ಅನುಭವದಿ ಪಡೆಯಲು ಅಂದ ಆನಂದ
ನಿನ್ನ ನೆನಪೊಂದೇ ಇಂದುಳಿದ ಅನುಬಂಧ...

ಭಾವನಾ ಲೋಕದಲಿ ನನ್ನೀ ಸುಖಪಯಣ
ಆ ನೆನಪುಗಳೇ ಈ ಮನ ನಗುವ ಕಾರಣ...
ಸಂತಸದ ಕ್ಷಣಭರಿತ ಈ ಹೃದಯಾಂಗಣ
ನಗುವ ನಿಮಿಷಗಳ ನೆನಪುಗಳೆ ಇದರಂಕಣ...

ಬುಧವಾರ, ಮೇ 17, 2017

ಒಂದು ಮಾತು

ನಿನ್ನ ಕರುಳ ಕುಡಿ ನಿನ್ನ ತುಳಿದೋಡಿದರೆ
ನಿನ್ನ ನಷ್ಟವೆಂದು ನೀ ಕೊರಗದಿರು...
ಹೆತ್ತ ದೈವದ ಪ್ರೀತಿಗೆ ಕತ್ತರಿಯಲಿರಿದರೆ
ಹಾನಿ ನಿನದಲ್ಲ ಎಂದು ಖುಷಿಯಿಂದಿರು.

ಅರಿಯದೆ ನಿನ್ನ ದುಃಖದ ಯಾತನೆಯ
ನಿನ್ನ ಕಂಬನಿಗೆ ಕ್ಷಣಕ್ಕೂ ಸ್ಪಂದಿಸದೆ...
ತಾನೇ ಸರಿಯೆಂಬ ದರ್ಪದ ನಡತೆಯ
ಆ ಯೋಗ್ಯತೆಯ ಲಕ್ಷಣವ ನೀ ತಿಳಿದಿರು.

ಅಹಂಕಾರದ ಹೆಬ್ಬಂಡೆಯಡಿ ಬಲಿಯಂತೆ
ಹುತಿಯಾಗದಿರು ನೀ ಕರಗಿ ಕೊರಗಿ..
ಸಂಬಂಧಕೆ ಬೆಲೆಯಿರದಾಗ ನಿನಗೇಕೆ ಚಿಂತೆ
ನಿನಗಿರುವ ಸುಖಗಳಲೇ ಸಂತೃಪ್ತಿ ಹೊಂದಿರು.

ಕಳೆದದ್ದು ನಿನದಲ್ಲ, ಈಗಿರುವುದು ನಿನದು
ನಿನದಲ್ಲದರ ಚಿಂತೆಯ ನೀ ಚಿರವಾಗಿ ಬಿಟ್ಟುಬಿಡು.
ಕಷ್ಟದಲಿ ಕೈ ಹಿಡಿದವನ ನೆನಪಲಿಡು
ಕಣ್ಣೀರಿಳಿಸಿ ನಿನ್ನ ಪ್ರೀತಿಸುವರ ನೋಯಿಸದಿರು‌.

ಶನಿವಾರ, ಮಾರ್ಚ್ 4, 2017

ಬಾಧ್ಯನಲ್ಲದ ಸುತ

ಹರಿಸುತಿಹೆ ನೀ ನೋವ ಕಣ್ಣೀರಧಾರೆಯ
ನೊಂದ ಹೃದಯದಲಿ ಮಮತೆಯ ತಾರೆಯ
ಕೋಮಲ ಹಸ್ತದಿ ನಿನ್ನ ಸಲುಹಿದ ನೀರೆಯ
ದುಃಖದ ಬವಣೆಯ ನೀ ಅರಿಯಲಾರೆಯ?

ನಿನ್ನ ಸುಖಕೆಂದು ತಾನು ಸಹಿಸಿದಳು ನೋವನಂದು
ನಿನ್ನೋನ್ನತಿಗಾಗಿ ಕಷ್ಟನಷ್ಟದಿಂ ದುಡಿದಳಂದು..
ಇಷ್ಟವಿಲ್ಲದ ಮನದಲೂ ತನ್ನಿಷ್ಟವೆಲ್ಲವ ತೊರೆದಂದು
ನಿನಗಾಗಿ ಸುಖದರಮನೆಯನೇ ನಿರ್ಮಿಸಿಹಳಿಂದು..

ಕೆಡವುತಿಹೆ ಬೆಳೆದಿಹ ಪ್ರೀತಿಯೆಂಬ ಭವ್ಯಮಂದಿರವ
ಹೆಜ್ಜೆ ಹೆಜ್ಜೆಗೂ ವರವೆಂಬಂತೆ ಹರಸಿದ ಮಹದಾತ್ಮವ
ಕಣ್ಣೀರಿಳಿದರೂ ತಿಳಿಯದಂತೆ ನೋವನುಂಡ ಜೀವವ
"ಅಪ್ಪಾ" ಎಂದು ಏನು ಕೋರಿದರೂ ಸಾರಿದರವರು ನಿಸ್ವಾರ್ಥವ

ನೀ ಏನು ಮಾಡಿದರೂ ಸಹಿಸಿ ನಿಂತರು ಬೆಂಬಲದಂತೆ
ತಮ್ಮಾದಾಯವನೇ ಸುರಿದರು ನಿನಗೆಂದು ಜಲದಂತೆ
ಆಶಿಸಿದರು ನೀನಾಗುವೆನೆಂದು ಮುಪ್ಪಿನಾಸರೆಯಂತೆ
ಧ್ವಂಸಗೊಳಿಸಿದೆಯಲ್ಲ ನೀನು ಅವರಾಸೆಯನು ಗಾಜಿನಂತೆ.

ಶುಕ್ರವಾರ, ಫೆಬ್ರವರಿ 10, 2017

ನಾನು

ಕನಸುಗಳ ಒಡೆದೋಡಿತು "ನಾನು"
ಮನಸುಗಳ ಮುದುಡಿಸಿತೀ "ನಾನು"
ಸತ್ಯಾಸತ್ಯಗಳ ಅಂಧತೆಯೇ ಏನು!
ವಿಷದಂತೆ ವಧಿಸುವ ಈ "ನಾನು"

ದರ್ಪದ ಪರಾಕಾಷ್ಠೆಯಲಿ ನೀನು
ನಿನ್ನುಗಮವ ಮರೆತೆಯೇನು?
ಬುಡದ ಮಹಿಮೆಯಿಂದಲೇ ನೀನು
ಪಡೆದಿರುವೆ ಈ ಸುಖಭೋಗವನು.

ಎಷ್ಟು ಮೇಲೇರಿದರೂ ಇಂದು ನೀನು
ಅಹಂವಶದಿ ಇತ್ತರೆ ಬುದ್ಧಿಯನು
ಆಮಂತ್ರಿಸಿದಂತೆ ನೀನೇ ಕೇಡನು
ಮಣ್ಣಲಿ ಮಣ್ಣಾಗುವ ಕಾಲವನು.

"ನಾನೇ" "ನನ್ನಿಂದಲೇ" ಎಂಬ ಭಾವವನು
ತೊರೆದು ಆಲಂಗಿಸು ಸೌಮ್ಯತೆಯನು
ನಿನ್ನ ವಿನಯತೆಯಿಂದಾರ್ಜಿಸು ನೀನು
ಬದುಕಿನ ನಿಜವಾದ ಅರ್ಥವನು...

ಸೋಮವಾರ, ಡಿಸೆಂಬರ್ 14, 2015

ಸಂಕಟಭರಿತ ಭಾವನೆ

ನಿಜಮಾತನಾಡುವುದೇನೋ ಅರಿಯುತಿಲ್ಲ..
ಉಲಿದ ಮಾತುಗಳಿಗಿಲ್ಲಿ ಬೆಲೆಯಿಲ್ಲ...
ನಾನಿರುವುದಕೆ ಯಾರ ಖುಷಿಯೂ ಇಲ್ಲ...
ನಾನು ಎಂಬ ಜೀವಿಗಿಲ್ಲಿ ಅಸ್ತಿತ್ವವೇ ಇಲ್ಲ...

ನನ್ನ ಇರುವಿಕೆಗೆ ಮುಳ್ಳಪೊದೆಗಳ ಪರದೆ..
ಹೆಸರಿಲ್ಲಿ ಮಾಸಿದೆ ತುಂಡು ಬೆಲೆಯೂ ಇರದೆ..
ಜಿಗುಪ್ಸೆಯು ಬಾನೇರಿದೆ ಹಿಂಸೆ ತಾಳಲಾರದೆ...
ತಂಪಾಗದು ಇಲ್ಲಿ ಉರಿವ ಈ ಬೆಂಕಿಯಾರದೆ...

ಆತ್ಮವು ಪರಿತಪಿಸುತಿದೆ ಉತ್ತರವಿರದ ಕಲ್ಪನೆಗೆ..
ಚಂಚಲವಾಗಿ ಬೇಯುತಿದೆ ನಕಾರಾತ್ಮಕ ಭಾವನೆಗೆ...
ಅರಿಯದೆಯೆ ಜಾರುತಿದೆ ಬೆಂಕಿಜ್ವಾಲೆಯ ಸುಧೆಗೆ...
ಯಾಕಿಲ್ಲಿ ಸಸಾರ ನನ್ನ ಇರುವಿಕೆಯ ವಾಸ್ತವಿಕತೆಗೆ‌..

ದುಃಖದಿ ಮನ ಕುಂದಿದೆ ಏನೂ ಅರಿಯಲಾರದೆ...
ಯಾರೂ ಇರದ ಕೊನೆಗಾಲಕೆ ಹಾತೊರೆಯುವಂತಾಗಿದೆ...
ಕೊನೆಯ ಆಮಂತ್ರಿಸಲೇ ಎಂದೂ ಈ ಮನ ಪರಿತಪಿಸುತಿದೆ...
ತಡೆಯಲಾರದ ಸಂಕಟ ಮನವ ಜಡವಾಗಿಸುತಿದೆ...

ಶನಿವಾರ, ನವೆಂಬರ್ 14, 2015

ಜೀವನದ ಪಾಠ

ಪರಜಾತಿಯ ಕೀಟವಾದರೂ
ವಿಶ್ವಾ‌ಸಕೆ ಅರ್ಹವಾಗಿತ್ತು‌..
ಸ್ವಜಾತಿಯ ಹುಳವಾಗಿದ್ದರೂ
ನಂಬಿಕೆಗೆ ಅರ್ಥವಿರದಂತೆ ನಡೆಯಿತು...

ವಿಷವನ್ನು ವಿಷದ ಹೊರತು
ಫಲರಸದಿಂದ ತಡೆಯಲಾರದು...
ಮುಳ್ಳನ್ನು ಮುಳ್ಳ ಹೊರತು
ಪುಷ್ಪದ ಮೃದುತ್ವದಿಂದ ಕಳೆಯಲಾಗದು...

ಸಹನೆಗೆ ಬೆಲೆಯಿರದ ಈ ಜಗದಿ
ಸಹಿಷ್ಣುಗಳಿಗೆ ಜಗಹವಿಲ್ಲ...
ಮೃದು ಹೃದಯದ ಪಾಪಿಗಳಿಗೆ
ಆಶಯಗಳ ಆಗ್ರಹವಿಲ್ಲ...

ಪರರಿಗೆ ಕೇಡು ಬಯಸದಿದ್ದರೂ
ಸತ್ಕರ್ಮಿಗಿಲ್ಲ ಈ ಜಗದಿ ಬೆಲೆ...
ಕಠಿಣ ಕ್ಷಣಗಳಲಿ ಮೃದುವಾದರೆ
ನಿನ್ನ ಕೊನೆಯನೇ ನೀ ಆಮಂತ್ರಿಸಿದಂತೆ...

ಇದೇ ಜಗದ ನೀತಿ....

ಶನಿವಾರ, ಮೇ 16, 2015

ಸರಿ-ತಪ್ಪು

ಜೀವನದ ಪ್ರತಿ ಕ್ಷಣದ ಆಗುಹಕೂ
ಇರುವುದು ವಿಶ್ಲೇಷಣೆ ವಿಭಿನ್ನ
ಏಕ ಪಾರ್ಶ್ವದ ದೃಷ್ಟಿಕೋನದಿ
ಕೊಳ್ಳಬೇಡ ಯಾವುದೇ ತೀರ್ಮಾನ

ಒಂದು ನೋಟದಿ ಸರಿಯೆಂದಾದರೂ
ಮಹದಾದ ತಪ್ಪು ಅದಾಗಿರಬಹುದು
ಅನ್ಯಾಯದ ಪರಮಾವಧಿ ಎನಿಸಿದರೂ
ಲೋಕವೇ ಸರಿಯೆಂದೊಪ್ಪಬಹುದು

ಸರಿ- ತಪ್ಪುಗಳ ವೀಕ್ಷಣೆಯಲಿ
ವ್ಯತ್ಯಾಸಗಳನೇಕ ಈ ಜಗದಲಿ
ನಿನ್ನ ನಿರ್ಣಯದ ವಿಚಕ್ಷಣೆಯಲಿ
ಹೃದಯದ ಅನಿಸಿಕೆಯೇ  ಇರಲಿ

ಮಾಡು ನೀ ಹೃದಯ ಬಯಸಿದ್ದುದನು
ಚಿಂತಿಸು ಹೃತ್ಪೂರ್ವಕ ಮನದಲೇ 
ಸರಿ-ತಪ್ಪುಗಳ ಸರಿಯಾದ ತೀರ್ಪನು
ಪಡೆಯುವಿ ನೀ ನಿನ್ನ ಹೃದಯದಲೇ

ಶುಕ್ರವಾರ, ಮೇ 15, 2015

ಪ್ರೀತಿ

ಎರಡಕ್ಷರದ ಭಾವನೆಯಿದು
ಕಥಾನಕಗೊಳಿಸಿರುವುದು ಜೀವನವನು ...
"ಪ್ರೀತಿ" ಎನ್ನುವ ದೈವವಿದು
ಹರಡಿಸಿರುವುದು ಸಂತಸದ ಗಾಳಿಯನು...

ಮಧುರ ಜೇನಿನಂಥ ಭಾವವಿದು
 ಪುಳಕಿತಗೊಳಿಸುವುದು ಮನವನು
ಈ ಭಾವ ಭಾವನೆಯ ಶಿಖರವೇರಲು
ತಂಪಾಗಿಸುವುದು ಈ ನಿನ್ನ ತನುವನು ...

ಚಿಗುರುಮನಸಿನ ಆಸೆಯಿದು
ಅನುಭವಿಸಲು ಪ್ರೀತಿಯ ಧಾರೆಯನು...
ಚಂಚಲಮನಸುಗಳ ತ್ರಾಸವಿದು
ಪಡೆಯಲು ಪ್ರೇಮದ ಆಸರೆಯನು...

ಪ್ರೇಮದ ಹಿರಿಮೆಯೇ  ಅಂದವಾದುದು
ಸಕ್ರಿಯಗೊಳಿಸುವುದು ಜಾಣ್ಮೆಯನು
ಎದೆಬಡಿತವು ವರ್ಧಿಸಿ ಸುಖ ದೊರೆವುದು
ಹೇಳಲಾರದು ಪ್ರೀತಿಯ ಮಹಿಮೆಯನು...

ವಿರಹ

ವಿರಹ ಸಮಾಧಿಯಾಗಿಸಿ ಮನವ
ಬಂಧಿಸಿತು ವಿಚಾರಧಾರೆಯ ...
ಉದುಗಿಸಿತು ರಕ್ತ ಕಣಕಣವ
ಹೊರೆಯಾಗಿಸಿತು ದಿನದಿನದ ಚಹರೆಯ...

ವಿರಹದ ಇರಿತವು ಪ್ರಾಣಘಾತಕ
ಅದರನುಭವ ಮಾರಣಾಂತಿಕ ...
ಮನದಭಿವೃದ್ಧಿಗದು ಹಾನಿಕಾರಕ
ವೈರಾಗ್ಯದುಃಖ ಭಾವನಾತ್ಮಕ ...

ವಿರಹದಲಿರುವುದೇನೋ ಪುಳಕ
ವಿರಹದ ಬೇಗೆಯದು ಕಷ್ಟ ...
ವಿರಹದಿ ವೈರಾಗ್ಯ ಸೇರದಿರೆ
ಆಗದು ಮನಶಾಂತಿಗೆ ನಷ್ಟ...

ತಡೆಯಲಾರದ ವಿರಹದ ನಾಟ್ಯ
ಉರುಳಿಸಿತು ಸಂಭ್ರಮದ ಪರಿಯ...
ಎಂದು ಬರುವುದೋ ಈ ವಿರಹಕೆ ಅಂತ್ಯ
ನೀ ಬಂದರೆ ನನ್ನ ಮನದ ಸನಿಹ ...

ಆಶಯ

ಯಾಕಾಗಿ ಈ ನೋವು ಕಾಡುತಿದೆ ಮನವನು?
ಹಿಂಡಿ  ಕಾವೇರಿಸುತಿದೆ ನನ್ನ ರಕ್ತ ಕಣಕಣವನು
ಮರೆತರೂ ಮರೆಯಲಾಗದೆ ಸುರಿಸುತಿದೆ ಕಣ್ಣೀರನು
ದುಃಖದ ಕೊಳಲನಾದವು ತಲುಪುತಿದೆ ಮನದಾಳವನು.

ಕ್ರೋಧದ ಅಗ್ನಿಜ್ವಾಲೆಯು ಜಲಿಸುತಿದೆ ಈ ಎದೆಯನು
ಕಣ್ಣೀರ ನೆನಪುಗಳು ತಿವಿದು ಬರಡಾಗಿಸಿದೆ ಕನಸ ಕಂಗಳನು
ನಿರಾಸೆಯ ಅಟ್ಟಹಾಸಗಳು ಮೌನಗೊಳಿಸಿದೆ ಮನದಾಸೆಯನು
ನೋವ ಛಡಿಯೇಟುಗಳು ತುಳಿದು ಕೊಂದಿದೆ ಬಯಕೆಯನು


ಹೆಣಗುತಿದೆ ಹೃದಯವಿದು ಕಾಣಲು ನಂಬಿಕೆಯ ಜ್ಯೋತಿಯನು
ಉತ್ಸಾಹದ ಛಾಯೆ ಹರಡುತಿದೆ ನೋಡಲು ಸುದಿನಗಳನು
ಸತ್ಯವ ಅರಗಿಸಲಾರದೆ ಚಡಪಡಿಸುತಿದೆ ಸಹಿಸುತ ಅನ್ಯಾಯವನು
ಎದುರಿಸಲಾರದೆ ಸೋತಿದೆ ಈ ಮನ ದುರ್ಜನರಟ್ಟಹಾಸವನು

ಬರಲಿ ಹುರುಪ ಪನ್ನೀರು ಆವಿಗೊಳಿಸಲಿ ದುಃಖಗಳೆಲ್ಲವನು
ಹರಡಲಿ ನೆಮ್ಮದಿಯ ಸುಗಂಧ ಕೊಳ್ಳಲಿ ನಿರಾಸೆಗಳ ಗಾಳಿಯನು
ಜಯದ ಮಳೆಯದು ಬೀರಲಿ ಆರಿಸಲಿ ಭಯದ ಬೆಂಕಿಯನು
ಖುಷಿಯ ಜೇನದು ದೊರೆತು ಸವಿಗೊಳಿಸಲಿ ನೋವ ಉರಿಯನು...