ನಿನ್ನ ಕರುಳ ಕುಡಿ ನಿನ್ನ ತುಳಿದೋಡಿದರೆ
ನಿನ್ನ ನಷ್ಟವೆಂದು ನೀ ಕೊರಗದಿರು...
ಹೆತ್ತ ದೈವದ ಪ್ರೀತಿಗೆ ಕತ್ತರಿಯಲಿರಿದರೆ
ಹಾನಿ ನಿನದಲ್ಲ ಎಂದು ಖುಷಿಯಿಂದಿರು.
ಅರಿಯದೆ ನಿನ್ನ ದುಃಖದ ಯಾತನೆಯ
ನಿನ್ನ ಕಂಬನಿಗೆ ಕ್ಷಣಕ್ಕೂ ಸ್ಪಂದಿಸದೆ...
ತಾನೇ ಸರಿಯೆಂಬ ದರ್ಪದ ನಡತೆಯ
ಆ ಯೋಗ್ಯತೆಯ ಲಕ್ಷಣವ ನೀ ತಿಳಿದಿರು.
ಅಹಂಕಾರದ ಹೆಬ್ಬಂಡೆಯಡಿ ಬಲಿಯಂತೆ
ಹುತಿಯಾಗದಿರು ನೀ ಕರಗಿ ಕೊರಗಿ..
ಸಂಬಂಧಕೆ ಬೆಲೆಯಿರದಾಗ ನಿನಗೇಕೆ ಚಿಂತೆ
ನಿನಗಿರುವ ಸುಖಗಳಲೇ ಸಂತೃಪ್ತಿ ಹೊಂದಿರು.
ಕಳೆದದ್ದು ನಿನದಲ್ಲ, ಈಗಿರುವುದು ನಿನದು
ನಿನದಲ್ಲದರ ಚಿಂತೆಯ ನೀ ಚಿರವಾಗಿ ಬಿಟ್ಟುಬಿಡು.
ಕಷ್ಟದಲಿ ಕೈ ಹಿಡಿದವನ ನೆನಪಲಿಡು
ಕಣ್ಣೀರಿಳಿಸಿ ನಿನ್ನ ಪ್ರೀತಿಸುವರ ನೋಯಿಸದಿರು.
No comments:
Post a Comment