Saturday, January 18, 2025

ಸ್ಮರಣೆಯ ಸಡಿಲ ಸ್ಪಂದನೆ

ನಿನ್ನ ಹೆಸರ ನೆನೆದ ಆ ಕ್ಷಣ
ನನ್ನ ಉಸಿರ ಲಯದಲ್ಲಿ ತಲ್ಲಣ
ನಿನ್ನ ನೋಡಬಯಸಿದೆ ಈ ಮನ 
ಕ್ಷಣ ಕ್ಷಣ ಎಣಿಸಿದೆ ಈ ದಿನ 
 
ಸುಮ್ಮನೆ ಕುಳಿತರೆ ಏನೋ ಬಯಕೆ 
ಕೆಲಸದಿ ಮನಸಿರೆ  ಏನೋ ಹರಕೆ 
ಕಾತರ ಮನದಲಿ ನಿನ್ನ ಸನಿಹಕೆ 
ಆಸೆ ಪಡುತಿದೆ ಪ್ರೀತಿ ಸ್ನೇಹಕೆ. 

ಹೃದಯದ ನಿದ್ರೆಗೂ ನಿನ್ನ ರೂಪವೋ
ಕಣ್ಣು ತೆರೆದರೆ ಹೊಂಗಿರಣದ ರೂಪವೋ
ಮೌನದ ನಡುವೆ ನಿನ್ನ ಸವಿನುಡಿಗಳೋ
ಮನದ ಮರಳಿನಲಿ ನಿನ್ನ ಪಾದಚಿಹ್ನೆಗಳೋ...

ನಗೆಯಲಿ ನನ್ನದೊಂದು ನಿಶಬ್ದ ಪ್ರಾರ್ಥನೆ
ನಿನ್ನ ನೆನೆಪೊಂದೇ ಈ ಮನದಾಶ್ವಾಸನೆ
ಅಂತರಾಳದ ತಾಣದಿ ಮೆಟ್ಟಿದ ನಿನ್ನ ಕನಸು
ಕಣ್ಣು ತೆರೆಯುವಾಗ ನಿನ್ನ ಜೊತೆಗಿರೆ ಮನಸು...

ಅಡಗಿರುವ ಚಿತ್ತದಲ್ಲಿ ನಿನ್ನ ಚಿತ್ರವೊಂದು
ರೇಖೆಯಾಗಿಹ ಭಾವದ ವೃತ್ತವೊಂದು
ಹಲವು ಪದಗಳಿಲ್ಲದ ಭಾವವೊಂದು
ಆ ಭಾವನೆಯ ನುಡಿಯಲಿ ನೀನು ಮುಂದು…

ಮುಂದೇನು ಹೇಳಲಿ ತಿಳಿಯದಂತೆ ಮನವು
ನಿನ್ನ ನೆನೆಪಲ್ಲಿ ಯಾತ್ರೆ ನನ್ನೀ ಜೀವನವು
ಕನಸಿನಲಿ ಬಂದ ನಿನ್ನ ಸನಿಹದ ಭಾವ 
ಬದಲಿಸಿದೆ ನೀ ನನ್ನ ಹೃದಯದ ತಾಳವ...

ಬೀದಿಯ ಪಥದಲಿ ನಿನ್ನ ಹೆಜ್ಜೆಯ ಜಾಡು  
ಹಸಿರು ಇಳೆಯಲಿ ಆಸೆಗಳ ಮೊಳಕೆಯ ಹಾಡು  
ಮುಂದೊಂದು ದಿನ ಮತ್ತೆ ನಿನ್ನ ಸನಿಹದಲಿ
ಮನದ ಸಾಗರವೇ ತಲುಪಲಿ ನೆನಪಿನಂಗಳದಲಿ...

ಎದೆಯ ಹಾಳೆಯಲಿ ಅರಳಿದ ನಿನ್ನ ಚಿತ್ರವೊಂದು  
ಮರೆತುಹೋಗದ ನೆನಪಾಗಲಿ ಪ್ರತಿದಿನದಂದು  
ನನ್ನ ಪ್ರತಿ ಉಸಿರಲ್ಲಿ ನಿನ್ನ ಒಲವು ನಲಿದಿದೆ
ಹಗಲು ರಾತ್ರಿ ನೀ ಚಿರವಾಗಿ ನನ್ನಲ್ಲೇ ನೆಲೆಸಿದೆ…
 
✍🏻 ದೀಪಲಕ್ಷ್ಮಿ ಭಟ್ 

No comments:

Post a Comment