✍🏻ದೀಪಲಕ್ಷ್ಮಿ ಭಟ್, ಮಂಗಳೂರು
ಚಿನ್ನೂರು ಎಂಬ ಪುಟ್ಟ ಊರು. ಹೆಸರಿಗೆ ಪುಟ್ಟದಾದರೂ, ಅಲ್ಲಿನ ಜನರ ಹೃದಯಗಳು ಮಾತ್ರ ಆಕಾಶದಷ್ಟು ವಿಶಾಲವಾಗಿದ್ದವು. ಊರಿನ ಮಧ್ಯೆ ಪುರಾತನ ಮಾರಮ್ಮನ ದೇವಸ್ಥಾನವಿತ್ತು. ಆ ದೇವಿಯ ಮಹಿಮೆ ಅದೆಷ್ಟಿತ್ತೆಂದರೆ, ದೂರದೂರದ ಊರುಗಳಿಂದಲೂ ಭಕ್ತರು ಹರಕೆ ಹೊತ್ತು ಬರುತ್ತಿದ್ದರು. ಅಲ್ಲಿ ಪ್ರತಿ ವರ್ಷ ಅದ್ಧೂರಿಯಾಗಿ ಮಾರಮ್ಮನ ಜಾತ್ರೆ ನಡೆಯುತ್ತಿತ್ತು. ವರ್ಷಕ್ಕೊಮ್ಮೆ ನಡೆಯುವ ಮಾರಮ್ಮನ ಆ ಜಾತ್ರೆ ಎಂದರೆ ಇಡೀ ಊರಿನ ಪಾಲಿಗೆ ಹಬ್ಬಗಳ ಹಬ್ಬ. ಜಾತ್ರೆಗೆ ತಿಂಗಳ ಮೊದಲೇ ಸಿದ್ಧತೆ ಆರಂಭವಾಗುತ್ತಿತ್ತು. ಮನೆಮನೆಗಳ ಮುಂದೆ ರಂಗೋಲಿ, ಬಾಗಿಲಿಗೆ ಮಾವಿನ ತೋರಣ, ಬೀದಿಗಳೆಲ್ಲ ಬಣ್ಣ ಬಣ್ಣದ ಧ್ವಜಗಳಿಂದ ಕಂಗೊಳಿಸುತ್ತಿದ್ದವು. ರಾತ್ರಿ ಹೊತ್ತಿಗೆ ವಿದ್ಯುತ್ ದೀಪಗಳ ಅಲಂಕಾರದಿಂದ ಚಿನ್ನೂರೇ ನಕ್ಷತ್ರಗಳ ಹೊದಿಕೆ ಹೊದ್ದಂತೆ ಕಾಣಿಸುತ್ತಿತ್ತು.
ಜಾತ್ರೆಯ ದಿನ ಬೆಳಗ್ಗಿನಿಂದಲೇ ದೇವಾಲಯದ ಗಂಟೆಗಳು ಮೊಳಗುತ್ತಿದ್ದವು. ನಾದಸ್ವರದ ಮಂಗಳಧ್ವನಿ ಗಾಳಿಯಲ್ಲಿ ತೇಲುತ್ತಿತ್ತು. ತಮಟೆ, ಡೊಳ್ಳು, ಚಂಡೆಯ ಸದ್ದಿಗೆ ಇಡೀ ಊರು ಎಚ್ಚರಗೊಳ್ಳುತ್ತಿತ್ತು. ಸಕ್ಕರೆ ಗೊಂಬೆಗಳು, ಬಣ್ಣ ಬಣ್ಣದ ಬಲೂನುಗಳು, ಮಣ್ಣಿನ ಆಟಿಕೆಗಳು, ಗಾಜಿನ ಬಳೆಗಳು, ಬೆಲ್ಲದ ಜಿಲೇಬಿ, ಮೈಸೂರು ಪಾಕ್, ಬಿಸಿ ಬಿಸಿ ಬಜ್ಜಿ... ಎಲ್ಲೆಡೆ ಹಬ್ಬದ ಸಂಭ್ರಮವೇ ಮನೆ ಮಾಡಿತ್ತು. ಮಕ್ಕಳು ಜಾಯಿಂಟ್ ವೀಲ್ ಏರಲು ಸಾಲಿನಲ್ಲಿ ನಿಂತಿದ್ದರೆ, ಹೆಂಗಸರು ದೇವಿಗೆ ಅರ್ಪಿಸಲು ಹೂಮಾಲೆಗಳನ್ನು ಕೊಂಡುಕೊಳ್ಳುತ್ತಿದ್ದರು. ವೃದ್ಧರು ಹಳೆಯ ಗೆಳೆಯರನ್ನು ಕಂಡು ಮಾತನಾಡುತ್ತಿದ್ದರು. "ಜಾತ್ರೆ ಅಂದರೆ ಚಿನ್ನೂರು... ಚಿನ್ನೂರು ಅಂದರೆ ಜಾತ್ರೆ..." ಎನ್ನುವಷ್ಟು ಹೆಸರು ಪಡೆದಿತ್ತು ಆ ಊರು. ಆ ದಿನ ಯಾರ ಮುಖದಲ್ಲೂ ದುಃಖ ಇರಲಿಲ್ಲ. ಎಲ್ಲರ ಮನೆಯಲ್ಲಿ ಹಬ್ಬದ ಸಂಭ್ರಮ. ದೇವಿಯ ಕೃಪೆಯಿಂದ ಈ ವರ್ಷವೂ ಸುಖ-ಸಮೃದ್ಧಿ ದೊರೆಯಲಿ ಎನ್ನುವ ಪ್ರಾರ್ಥನೆ. ಆದರೆ ವಿಧಿ ಮಾತ್ರ ಆ ಸಾವಿರಾರು ಜನರ ಮಧ್ಯೆ ಒಂದು ಪುಟ್ಟ ಕುಟುಂಬಕ್ಕಾಗಿ ಬೇರೆಯದೇ ಕಥೆಯನ್ನು ಬರೆಯುತ್ತಿತ್ತು. ಒಂದು ಕುಟುಂಬದ ಬದುಕನ್ನೇ ಶಾಶ್ವತವಾಗಿ ಬದಲಿಸಿಬಿಟ್ಟಿತ್ತು.
***
ಸುಮಾರು ಹನ್ನೆರಡು ವರ್ಷಗಳ ಹಿಂದೆ...
ಆ ವರ್ಷವೂ ಮಾರಮ್ಮನ ಜಾತ್ರೆ ಎಂದಿನಂತೆ ಅದ್ಧೂರಿಯಾಗಿ ನಡೆಯುತ್ತಿತ್ತು. ಖ್ಯಾತ ಗಾಯಕ ಮಧುರ್ ಹಾಗೂ ಅವರ ಪತ್ನಿ ಮೀರಾ ತಮ್ಮ ಆರು ತಿಂಗಳ ಮುದ್ದು ಹೆಣ್ಣು ಮಗುವಿನೊಂದಿಗೆ ದೇವಿಯ ದರ್ಶನಕ್ಕೆ ಬಂದಿದ್ದರು. ದೇವಿಯ ಹರಕೆಯಿಂದಲೇ ಆ ಮಗು ಹುಟ್ಟಿದ್ದು, ದೇವಿಯ ಒಂದು ಅಂಶದಂತೆಯೇ ತೇಜಸ್ಸು ಆ ಮಗುವಿನಲ್ಲಿತ್ತು.
"ಮೀರಾ... ಮಗುವನ್ನು ಗಟ್ಟಿಯಾಗಿ ಹಿಡಿದುಕೋ. ಜನ ತುಂಬಾ ಇದ್ದಾರೆ," ಎಂದು ಮಧುರ್ ಎಚ್ಚರಿಸಿದ. "ಚಿಂತೆ ಬೇಡ ಮಧು. ನಮ್ಮ ಮಗಳಿಗೆ ಮಾರಮ್ಮನ ಆಶೀರ್ವಾದ ಸಿಗಲಿ ಅಂತ ಬಂದಿದ್ದೀವಲ್ಲ...ಆಕೆ ಖಂಡಿತ ಕಾಪಾಡಿಕೊಳ್ತಾಳೆ." ಎಂದು ಮೀರಾ ಮಗುವಿನ ಕೆನ್ನೆಗೆ ಮುತ್ತಿಟ್ಟಳು. ಮಗುವಿನ ಕುತ್ತಿಗೆಯಲ್ಲಿ ಚಿಕ್ಕ ಬೆಳ್ಳಿಯ ಸರ. ಅದಕ್ಕೆ ಕಟ್ಟಿದ್ದ ಮಾರಮ್ಮನ ತಾಯಿತ. ಬಲ ಭುಜದ ಮೇಲೆ ಅರ್ಧಚಂದ್ರದ ಆಕಾರದ ಜನ್ಮಮಚ್ಚೆ. ರಥೋತ್ಸವ ಆರಂಭವಾಗುತ್ತಿದ್ದಂತೆ ಸಾವಿರಾರು ಜನರು ದೇವಿಯ ರಥದ ಹಿಂದೆ ಸಾಗತೊಡಗಿದರು. "ಜೈ ಮಾರಮ್ಮ... ಜೈ ಮಾರಮ್ಮ..." ಎಂಬ ಜಯಘೋಷದಿಂದ ಇಡೀ ಊರು ಮೊಳಗುತ್ತಿತ್ತು. ಅಷ್ಟರಲ್ಲಿ...ಹಠಾತ್ತನೆ ಜನರ ನಡುವೆ ನೂಕುನುಗ್ಗಲು ಹೆಚ್ಚಾಯಿತು. ತಳ್ಳಾಟ, ಓಡಾಟ ಹೆಚ್ಚಾಯಿತು. ಯಾರೋ ಕೆಲವರನ್ನು ತಳ್ಳಿದರು. ಕೆಲವರು ರಥದ ಕಡೆ ಓಡಿದರು. ಕೆಲವರು ನೂಕು ನುಗ್ಗಲಿನಲ್ಲಿ ಬಿದ್ದರು. ನೂಕುನುಗ್ಗಲಿನಲ್ಲಿ ಮೀರಾಳ ಸಮತೋಲನ ತಪ್ಪಿತು. ಯಾರೋ ಅವಳ ಕೈಗೆ ಬಲವಾಗಿ ತಾಗಿದಾಗ, ಮಗುವನ್ನು ಹಿಡಿದಿದ್ದ ಕೈ ಸಡಿಲವಾಯಿತು. ಕ್ಷಣಮಾತ್ರದಲ್ಲಿ ಪುಟ್ಟ ಕಂದಮ್ಮ ಜನರ ಕಾಲುಗಳ ನಡುವಿನಿಂದ ಬದಿಗೆ ಸರಿದು, ಯಾರದೋ ಬಟ್ಟೆಯ ರಾಶಿಯ ಮೇಲೆ ಬಿದ್ದಿತು. "ನನ್ನ ಮಗು...!" ಎಂದು ಮೀರಾ ಹೃದಯ ಕಿತ್ತುಕೊಂಡಂತೆ ಕಿರುಚಿದಳು. ಆದರೆ ಅವಳ ಧ್ವನಿ ಡೋಲಿನ ಸದ್ದು, ಪಟಾಕಿಗಳ ಗದ್ದಲ ಮತ್ತು ಜನರ ಕೂಗಾಟದಲ್ಲಿ ಕಳೆದುಹೋಯಿತು. ಮಧುರ್ ಜನರನ್ನು ತಳ್ಳಿ ಹುಡುಕತೊಡಗಿದ. ಮೀರಾ ನೆಲದ ಮೇಲೆ ಕುಳಿತು ಅಳತೊಡಗಿದಳು. ಘೋಷಣೆಗಳನ್ನು ಮಾಡಿಸಲಾಯಿತು. ಪೊಲೀಸರು ಕೂಡ ಹುಡುಕಿದರು. ಸ್ವಯಂಸೇವಕರು ಎಲ್ಲೆಡೆ ಓಡಾಡಿ ಮಗುವಿನ ಸುಳಿವಿಗಾಗಿ ಹುಡುಕಾಡಿದರು. ಎಷ್ಟು ಹುಡುಕಿದರೂ ಆ ಪುಟ್ಟ ಕಂದಮ್ಮ ಮಾತ್ರ ಎಲ್ಲಿಯೂ ಕಾಣಸಿಗಲಿಲ್ಲ. ಆ ರಾತ್ರಿ ಮಧುರ್ ಮತ್ತು ಮೀರಾ ಜಾತ್ರೆ ಮೈದಾನದಲ್ಲೇ ಕಂಬನಿ ಸುರಿಸುತ್ತಾ ಬೆಳಗಾಗಿಸಿದರು. ಅವರಿಗೆ ಗೊತ್ತಿರಲಿಲ್ಲ...ಅದೇ ಸಮಯದಲ್ಲಿ ದೇವಿಯ ದೇವಸ್ಥಾನದ ಹಿಂಬದಿಯಲ್ಲಿ ಮತ್ತೊಂದು ಕಥೆ ಆರಂಭವಾಗಿತ್ತು.
ಆ ದಿನ ಮಂಕಾದ ಮೀರಾ, ಇಂದಿಗೂ ಮೊದಲಿನಂತಾಗಲಿಲ್ಲ. ಹಿಂದೆ ಸುಂದರವಾಗಿ ನೃತ್ಯ ಮಾಡುತ್ತಿದ್ದ ಮೀರಾ, ಆ ಆಘಾತದಿಂದ ತೀವ್ರ ಖಿನ್ನತೆಗೆ ಒಳಗಾದಳು. ಊಟ–ನಿದ್ರೆ ಕಳೆದುಕೊಂಡು, ದಿನದ ಬಹುಭಾಗವನ್ನು ಹಾಸಿಗೆಯಲ್ಲೇ ಕಳೆಯತೊಡಗಿದಳು. ಹಿಂದೆ ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದ ಅವಳ ಕಾಲುಗಳು, ಈಗ ಮಗಳ ನೆನಪಿನ ಭಾರದಿಂದ ಕೋಣೆಯಾಚೆಗೂ ಸಾಗಲಾರದೆ ನಿಂತವು. ಮಧುರ್ ಮನಸ್ಸಿಗೂ ಆ ನೋವನ್ನು ತಡೆಯಲಾಗಲಿಲ್ಲ. ಭಾವಗೀತೆಗಳಿಗೆ ಹೆಸರುವಾಸಿಯಾಗಿದ್ದ ಅವನ ಹಾಡುಗಳೆಲ್ಲದರಲ್ಲೂ ನೋವಿನ ರಾಗವೇ ಹೆಚ್ಚಾಗಿ ಕೇಳಿಸತೊಡಗಿತು. ಅಂದಿನಿಂದ, ಅವನ ಪ್ರತಿಯೊಂದು ಸಂಗೀತ ಕಾರ್ಯಕ್ರಮವೂ ತನ್ನ ಮಗಳನ್ನು ಹುಡುಕುವ ಪ್ರಾರ್ಥನೆಯಾಗಿತ್ತು.
***
ದೇವಾಲಯದ ಹಿಂಭಾಗದಲ್ಲಿ ಕಸದ ಮಧ್ಯೆ ಬಿದ್ದಿದ್ದ ಬಾಟಲಿಗಳು, ಪ್ಲಾಸ್ಟಿಕ್, ಹೂವುಗಳು, ತೆಂಗಿನ ಚಿಪ್ಪುಗಳನ್ನು ಹೆಕ್ಕುತ್ತಿದ್ದ ಒಬ್ಬ ವೃದ್ಧ ತಾತನಿದ್ದ. ಊರಿನವರು ಅವನನ್ನು "ತಾತಯ್ಯ" ಎಂದೇ ಕರೆಯುತ್ತಿದ್ದರು.ಅವನ ನಿಜವಾದ ಹೆಸರನ್ನು ಕೇಳುವವರೇ ಇರಲಿಲ್ಲ. ಒಂದು ಕಾಲದಲ್ಲಿ ಅವನಿಗೂ ಒಂದು ಸುಂದರ ಕುಟುಂಬವಿತ್ತು. ಹೆಂಡತಿ, ಒಬ್ಬ ಮಗ ಹಾಗೂ ಸೊಸೆ. ಆದರೆ ವಿಧಿ ಒಂದೊಂದಾಗಿ ಎಲ್ಲರನ್ನೂ ಕಿತ್ತುಕೊಂಡಿತ್ತು. ಮೊದಲು ಹೆಂಡತಿ ಅನಾರೋಗ್ಯದಿಂದ ತೀರಿಕೊಂಡಳು. ಕೆಲ ವರ್ಷಗಳ ಬಳಿಕ ಮಗ ಅಪಘಾತದಲ್ಲಿ ಮೃತಪಟ್ಟ. ಆ ದುಃಖ ತಡೆಯಲಾಗದೆ ಸೊಸೆಯೂ ಹೆಚ್ಚು ದಿನ ಬದುಕಲಿಲ್ಲ. ಅಂದಿನಿಂದ ತಾತಯ್ಯನ ಬದುಕು ಒಂಟಿತನದ ಬಾಳಾಗಿತ್ತು. ದೇವಾಲಯದ ಸುತ್ತಮುತ್ತ ಬಿದ್ದ ವಸ್ತುಗಳನ್ನು ಸಂಗ್ರಹಿಸಿ ಮಾರುವುದು, ಜನ ಕೊಟ್ಟ ಹಳೆಯ ಬಟ್ಟೆ ಧರಿಸುವುದು, ದೇವರ ಪ್ರಸಾದವೇ ಊಟ - ಇದೇ ಅವನ ಬದುಕು.
ಆ ರಾತ್ರಿ ದೇವಸ್ಥಾನದ ಹಿಂಭಾಗಕ್ಕೆ ಬಂದಾಗ, ಪುಟ್ಟ ಮಗುವಿನ ಅಳುವ ಧ್ವನಿ ತಾತನಿಗೆ ಕೇಳಿಸಿತು. "ಏನಪ್ಪಾ ಇದು?" ಎಂದುಕೊಂಡು ತಾತ ಧ್ವನಿ ಕೇಳಿದ ಕಡೆ ಓಡಿ ಹೋದ. ಮಣ್ಣಿನ ಮೇಲೆ ಪುಟ್ಟ ಕಂದಮ್ಮ.ಹೊರಳಾಡುತ್ತಿತ್ತು. ಹಸಿವಿನಿಂದ ಅತ್ತು ಅತ್ತು ಅದರ ಮುಖ ಕೆಂಪಾಗಿತ್ತು. ಕಣ್ಣೀರು ಒಣಗಿ ಮತ್ತೆ ಹರಿಯುತ್ತಿತ್ತು. ತಾತಯ್ಯನ ಎದೆ ಒಡೆದುಹೋಯಿತು. "ಅಯ್ಯೋ... ಯಾರಪ್ಪಾ ನಿನ್ನನ್ನು ಹೀಗೆ ಬಿಟ್ಟು ಹೋಗಿದ್ದಾರೆ?" ಎಂದು ಮಗುವನ್ನು ಎತ್ತಿಕೊಂಡ. ತನ್ನ ಜೋಳಿಗೆಯಲ್ಲಿದ್ದ ಹಾಲನ್ನು ಸ್ವಲ್ಪಸ್ವಲ್ಪವಾಗಿ ಕುಡಿಸಿದ. ಮಗು ಅಳುವುದನ್ನು ನಿಲ್ಲಿಸಿತು. ಅವನ ಎದೆಯ ಮೇಲೆ ತಲೆ ಇಟ್ಟು ಮಲಗಿತು. ಆ ಕ್ಷಣ...ತಾತಯ್ಯನಿಗೆ ವರ್ಷಗಳಿಂದ ಖಾಲಿಯಾಗಿದ್ದ ಅವನ ಹೃದಯದಲ್ಲಿ ಮತ್ತೆ ಜೀವ ಮೊಳಕೆಯೊಡೆದಂತಾಯಿತು.
ಮರುದಿನ ಬೆಳಗ್ಗೆಯವರೆಗೂ ತಾತಯ್ಯ ಮಗುವಿನ ಹೆತ್ತವರಿಗಾಗಿ ಅಲ್ಲೇ ಕಾದ. ಅದರ ಹೆತ್ತವರ ಜೊತೆ ಅದನ್ನು ಸೇರಿಸಲೆಂದು, ಜಾತ್ರೆ ನಡೆದ ಸ್ಥಳದ ಸುತ್ತಮುತ್ತಲೂ ಮಗು ಕಳೆದುಕೊಂಡ ಹೆತ್ತವರನ್ನು ಹುಡುಕಿದ. ಮಗುವನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ದಿದ್ದ. ಆದರೆ ಜಾತ್ರೆಯ ಗೊಂದಲದಲ್ಲಿ ದಾಖಲೆ ಮಾಡಿಸಿಕೊಳ್ಳಲು ಯಾರೂ ಸರಿಯಾಗಿ ಸ್ಪಂದಿಸಿರಲಿಲ್ಲ. "ಮಗುವನ್ನು ಅನಾಥಾಶ್ರಮಕ್ಕೆ ಕಳುಹಿಸಿ ಬಿಡಿ. ಯಾರಾದರೂ ಬಂದರೆ ನೋಡೋಣ..." ಎಂಬ ನಿರ್ಲಕ್ಷ್ಯದ ಉತ್ತರ ಸಿಕ್ಕಿತು. ತಾತಯ್ಯನ ಮನಸ್ಸು ಒಪ್ಪಲಿಲ್ಲ. "ಇಷ್ಟು ಪುಟ್ಟ ಮಗುವನ್ನು ಅಪರಿಚಿತರ ಕೈಗೆ ಹೇಗೆ ಕೊಡಲಿ?" ಎಂದು ಆತಂಕಗೊಂಡ. ಆದರೂ ಹಲವು ವಾರಗಳ ಕಾಲ ಜಾತ್ರೆಯ ಸುತ್ತಮುತ್ತಲಿನ ಊರುಗಳಲ್ಲಿ ಮಗುವಿನ ಹೆತ್ತವರಿಗಾಗಿ ಹುಡುಕಾಡಿದ್ದ. ದೇವಾಲಯದ ಅರ್ಚಕರನ್ನು ಕೇಳಿದ. ಹಳ್ಳಿಗಳಲ್ಲಿ ವಿಚಾರಿಸಿದ. ಜಾತ್ರೆಯಲ್ಲಿ ಮಗು ಕಳೆದುಕೊಂಡವರ ಬಗ್ಗೆ ಹುಡುಕಿದ. ಯಾವ ಸುಳಿವೂ ಸಿಗದಾಗ ಮಾತ್ರ ಅವಳನ್ನು ತನ್ನ ಮೊಮ್ಮಗಳಂತೆ ಸಾಕಲು ನಿರ್ಧರಿಸಿದ್ದ. ಅದೇ ದೇವಸ್ಥಾನಕ್ಕೆ ಬಂದು ದೇವಿಯ ಮುಂದೆ ಕೈಮುಗಿದು ಹೇಳಿದ - "ಅಮ್ಮಾ... ಇದು ನಿನ್ನ ಇಚ್ಛೆಯಾದರೆ, ಇವಳನ್ನು ನನ್ನ ಮೊಮ್ಮಗಳಂತೆ ಸಾಕುತ್ತೇನೆ." ಆ ಮಗುವಿಗೆ ಮೈಥಿಲಿ ಎಂದು ಹೆಸರಿಟ್ಟು ಕರೆದ. ಆ ದಿನದಿಂದ ಆ ಪುಟ್ಟ ಮಗು ಅವನ ಬದುಕಿನ ಬೆಳಕಾಯಿತು. ಅವನ ಬದುಕಿಗೆ ಹೊಸದಾದ ಒಂದು ಹುರುಪಾಯಿತು.
***
"ತಾ...ತಾ..." ಎಂಬುದು ಮೈಥಿಲಿ ಕಲಿತ ಮೊದಲ ಮಾತು. ಆ ಒಂದು ಪದ ಕೇಳಿದ ಕ್ಷಣ ತಾತಯ್ಯ ಅತ್ತಿದ್ದ. "ನನಗೆ ಮತ್ತೆ ಬದುಕೋ ಕಾರಣ ಸಿಕ್ಕಿತು ಕಂದಾ..." ಎಂದು ಅವಳನ್ನು ಎದೆಯೊತ್ತಿಕೊಂಡಿದ್ದ. ಮೈಥಿಲಿ ಬೆಳೆದಂತೆ ತಾತಯ್ಯನ ಗುಡಿಸಲು ನಗುವಿನಿಂದ ತುಂಬಿತು. ಬೆಳಿಗ್ಗೆ ಇಬ್ಬರೂ ದೇವಾಲಯಕ್ಕೆ ಹೋಗುತ್ತಿದ್ದರು. ದೇವರಿಗೆ ನಮಸ್ಕರಿಸಿ ಪ್ರಸಾದ ತಂದು ತಿನ್ನುತ್ತಿದ್ದರು. ಸಂಜೆ ತಾತಯ್ಯ ಅವಳಿಗೆ ಕಥೆ ಹೇಳುತ್ತಿದ್ದ. ರಾಮಾಯಣ, ಮಹಾಭಾರತ, ಸತ್ಯ ಹರಿಶ್ಚಂದ್ರ, ದಾನಶೂರ ಕರ್ಣ, ಭಕ್ತ ಪ್ರಹ್ಲಾದ - ಹೀಗೆ ಬೇರೆ ಬೇರೆ ಕಥೆಗಳನ್ನು ಕೇಳುತ್ತ ಮೈಥಿಲಿ ನಿದ್ದೆಗೆ ಜಾರುತ್ತಿದ್ದಳು.
ಎರಡು ವರ್ಷ ತುಂಬಿದಾಗ ಒಂದು ದಿನ ದೇವಾಲಯದ ಮೆಟ್ಟಿಲಲ್ಲಿ ಕುಳಿತಿದ್ದ ಮೈಥಿಲಿ ಹಠಾತ್ತನೆ ಒಂದು ಭಕ್ತಿಗೀತೆ ಗುನುಗತೊಡಗಿದಳು. ಸ್ವರ ಇನ್ನೂ ಸ್ಪಷ್ಟವಾಗಿರಲಿಲ್ಲ. ಆದರೆ ಅದರಲ್ಲಿ ಏನೋ ವಿಚಿತ್ರವಾದ ಮಧುರತೆ ಅವಳ ಹಾಡಿನಲ್ಲಿತ್ತು. ಅಲ್ಲಿ ನೆರೆದಿದ್ದ ಜನರೆಲ್ಲರೂ ಬೆರಗಾಗಿ ಆ ಮಗುವನ್ನೇ ನೋಡಿದರು. ಅಲ್ಲಿದ್ದ ಅರ್ಚಕರು ತಾತಯ್ಯನ ಜೊತೆ, "ಈ ಮಗಳಿಗೆ ದೇವರು ಅಪರೂಪದ ಕಂಠ ಕೊಟ್ಟಿದ್ದಾನೆ." ಅಂದರು. ತಾತಯ್ಯ ನಕ್ಕು, "ನಮ್ಮ ದೇವಿಯ ಪ್ರಸಾದ ಅದು." ಅಂದ. ಅಂದಿನಿಂದ ಮೈಥಿಲಿ ಕೇಳಿದ ಪ್ರತಿಯೊಂದು ಹಾಡನ್ನೂ ನೆನಪಿಟ್ಟುಕೊಳ್ಳತೊಡಗಿದಳು. ರೇಡಿಯೋದಲ್ಲಿ ಕೇಳಿದ ಹಾಡು, ದೇವಾಲಯದಲ್ಲಿ ಕೇಳಿದ ಭಜನೆ, ಶಾಲೆಯ ಪ್ರಾರ್ಥನೆ - ಎಲ್ಲವನ್ನೂ ಒಮ್ಮೆ ಕೇಳಿದರೆ ಸಾಕು, ಅವಳ ಕಂಠದಲ್ಲಿ ಅದು ಮತ್ತೆ ಜೀವ ಪಡೆಯುತ್ತಿತ್ತು - ಮೂಲ ಗಾಯನಕ್ಕಿಂತಲೂ ಸುಮಧುರವಾಗಿ ಹೇಳುತ್ತಿದ್ದಳು ಮೈಥಿಲಿ. ಅವಳ ಹಾಡು ಎಷ್ಟು ಮಧುರವಾಗಿತ್ತೆಂದರೆ, ನೆರೆಹೊರೆಯ ಜನರು ಅವಳ ಹಾಡು ಕೇಳಲೆಂದೇ ಬರುತ್ತಿದ್ದರು. ಆ ಪುಟ್ಟ ಹುಡುಗಿಯ ಹಾಡಿಗೆ ಮನಸೋತು, ಜನರು ತಮ್ಮ ಕೈಲಾದಷ್ಟು ಹಣವನ್ನು ನೀಡುತ್ತಿದ್ದರು. ಕೆಲವೊಮ್ಮೆ ನೂರು ಇನ್ನೂರು, ಇನ್ನೂ ಕೆಲವೊಮ್ಮೆ ಸಾವಿರದಷ್ಟು ರೂಪಾಯಿಯವರೆಗೂ ಹಣ ಹೊಂದಿಕೆ ಆಗುತ್ತಿತ್ತು. ಮೈಥಿಲಿಯ ಹಾಡಿನಿಂದ ಸಿಗುತ್ತಿದ್ದ ಅಲ್ಪ ಆದಾಯ ಅವರಿಬ್ಬರ ಹಸಿವನ್ನು ನೀಗಿಸುತ್ತಿತ್ತು. ಆದರೂ ಬಂದ ಹಣದಲ್ಲಿ ಮೊದಲು ಅವಳ ಶಾಲಾ ಪುಸ್ತಕ, ಬಟ್ಟೆ ಮತ್ತು ಅಗತ್ಯಗಳನ್ನು ಪೂರೈಸುವುದೇ ತಾತನ ನಿಯಮವಾಗಿತ್ತು. ಮುಂದೆ ಅವಳ ಈ ಸುಮಧುರ ಕಂಠವೇ ಅವಳ ಜೀವನವನ್ನು ಬದಲಾಯಿಸಲಿದೆ ಎಂಬುದು ಆಗ ಯಾರಿಗೂ ಗೊತ್ತಿರಲಿಲ್ಲ...
***
ಕಾಲ ಎಂಬುದು ಯಾರಿಗಾಗಿಯೂ ನಿಲ್ಲುವುದಿಲ್ಲ. ಸಂತೋಷಕ್ಕೂ, ದುಃಖಕ್ಕೂ ಕಾಲ ಒಂದೇ ವೇಗದಲ್ಲಿ ಮುಂದೆ ಸಾಗುತ್ತದೆ. ಹನ್ನೆರಡು ವರ್ಷಗಳು ಕಳೆದುಹೋಗಿದ್ದವು. ಮೈಥಿಲಿ ಈಗ ಹನ್ನೆರಡು ವರ್ಷದ ಚುರುಕು ಹುಡುಗಿ. ತನ್ನನ್ನು ತಾನು ಅನಾಥೆ ಅಂದುಕೊಂಡಿದ್ದಳು. ಅವಳನ್ನು ಸಾಕಿದ್ದ ತಾತನೇ ತನ್ನ ಸರ್ವಸ್ವ ಅನ್ನುವಷ್ಟು ಮಟ್ಟಕ್ಕೆ ಪ್ರೀತಿ ಬೆಳೆಸಿ ಕೊಂಡಿದ್ದಳು. ತಾತನೂ ಹಾಗೆ, ಮೈಥಿಲಿಗೆ ಓದಿನ ಬರವಾಗಬಾರದೆಂದು ಶಾಲೆಗೆ ಸೇರಿಸಿದ್ದ. ಓದಿನಲ್ಲಿ ಮುಂದಿದ್ದಳು. ಹಾಡಿನಲ್ಲಿ ಇನ್ನೂ ಮುಂದೆ ಇದ್ದಳು. ಮನೆಯ ಬಡತನದ ನಡುವೆಯೂ ಮೈಥಿಲಿಯ ಪ್ರತಿಭೆಯನ್ನು ಪ್ರೋತ್ಸಾಹಿಸಿದ ತಾತ, ಅವಳನ್ನು ಬೀದಿ ಬದಿಯಲ್ಲಿ ಹಾಡಿಸುತ್ತಿದ್ದ. ಜನರು ಪ್ರೀತಿಯಿಂದ ನೀಡುತ್ತಿದ್ದ ಹಣದಿಂದ ಮೈಥಿಲಿಯ ಓದು, ಅವರಿಬ್ಬರ ದಿನದ ಬದುಕು ಸಾಗುತ್ತಿತ್ತು. ಬೆಳಿಗ್ಗೆ ಶಾಲೆ, ಸಂಜೆ ತಾತನ ಜೊತೆ ಬೀದಿ ಬದಿಯಲ್ಲಿ ಹಾಡು, ರಾತ್ರಿ ಓದು. ಇದೇ ಮೈಥಿಲಿಯ ದಿನಚರಿಯಾಗಿತ್ತು. ಆದರೆ ಆ ಪುಟ್ಟ ಹುಡುಗಿಯ ಮುಖದಲ್ಲಿ ಯಾವತ್ತೂ ಬೇಸರ ಕಾಣಿಸುತ್ತಿರಲಿಲ್ಲ. ಬಡತನವನ್ನು ಅವಳು ಎಂದೂ ಶಾಪವೆಂದು ಭಾವಿಸಿರಲಿಲ್ಲ. ತಾತನ ಪ್ರೀತಿಯೇ ಅವಳ ಪಾಲಿಗೆ ದೊಡ್ಡ ಸಂಪತ್ತು. ಪ್ರತಿ ಬೆಳಿಗ್ಗೆಯೂ ಅವಳು ಎದ್ದ ಕೂಡಲೇ ತಾತನ ಕಾಲಿಗೆ ನಮಸ್ಕರಿಸುತ್ತಿದ್ದಳು. "ದೇವರು ನಿನ್ನನ್ನು ಯಾವಾಗಲೂ ಹೀಗೆ ನಗಿಸುತ್ತಿರಲಿ ಕಂದಾ..." ಎಂದು ತಾತ ಆಶೀರ್ವದಿಸುತ್ತಿದ್ದ.
ಒಂದು ದಿನ ಮೈಥಿಲಿ ಕಲಿಯುತ್ತಿದ್ದ ಶಾಲೆಯಲ್ಲಿ ವಾರ್ಷಿಕೋತ್ಸವ ನಡೆಯುತ್ತಿತ್ತು. ಮುಖ್ಯ ಅತಿಥಿಯಾಗಿ ಜಿಲ್ಲೆಯ ಖ್ಯಾತ ಸಂಗೀತ ಶಿಕ್ಷಕರೊಬ್ಬರು ಬಂದಿದ್ದರು. ಹಾಡಿನ ಸ್ಪರ್ಧೆಯಲ್ಲಿ ಮೈಥಿಲಿ ವೇದಿಕೆಯ ಮೇಲೆ ನಿಂತಳು. ಅವಳು ಹಾಡು ಪ್ರಾರಂಭಿಸಿದ ಕ್ಷಣವೇ ಸಭಾಂಗಣದಲ್ಲಿ ಮೌನ ಆವರಿಸಿತು. ಅವಳ ಕಂಠದಲ್ಲಿ ವಿಚಿತ್ರವಾದ ಮಧುರತೆ ಇತ್ತು. ಹಾಡು ಮುಗಿದ ತಕ್ಷಣ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಮುಖ್ಯ ಅತಿಥಿ ಅವಳನ್ನು ಕರೆದು ಕೇಳಿದರು, "ನಿನಗೆ ಸಂಗೀತ ಯಾರು ಕಲಿಸಿದ್ದಾರೆ?". ಮೈಥಿಲಿ ನಗುತ್ತಾ ತಾತನತ್ತ ಬೆರಳು ತೋರಿಸಿದಳು - "ನನ್ನ ತಾತ." ತಾತಯ್ಯ ಗಾಬರಿಯಿಂದ ಕೈ ಬೀಸಿದ. "ನನಗೆ ಹಾಡು ಗೊತ್ತಿಲ್ಲ ಸಾರ್... ಅವಳು ಕೇಳಿದ ಹಾಡನ್ನೇ ಮತ್ತೆ ಹಾಡ್ತಾಳೆ. ಒಮ್ಮೆ ಕೇಳಿದರೆ ಸಾಕು, ಹಾಡನ್ನು ಹೇಗಿದೆಯೋ ಹಾಗೆ ಹಾಡುತ್ತಾಳೆ." ಅಂದ. ಅತಿಥಿ ಆಶ್ಚರ್ಯದಿಂದ ಮೈಥಿಲಿಯನ್ನು ನೋಡಿದರು. "ಇಂತಹ ಕಂಠ ಅಪರೂಪ. ಸರಿಯಾದ ಗುರು ಸಿಕ್ಕರೆ ಈ ಹುಡುಗಿ ದೇಶವೇ ಗುರುತಿಸುವ ಗಾಯಕಿಯಾಗುತ್ತಾಳೆ." ಆ ಮಾತು ಕೇಳಿ ತಾತನ ಕಣ್ಣುಗಳು ಹೊಳೆಯತೊಡಗಿದವು. ಆ ದಿನದಿಂದ ಅವನ ಮನಸ್ಸಿನಲ್ಲಿ ಹೊಸದಾದ ಒಂದು ಕನಸು ಹುಟ್ಟಿತು - "ನನ್ನ ಮೊಮ್ಮಗಳು ಒಂದು ದಿನ ದೊಡ್ಡ ಗಾಯಕಿಯಾಗಬೇಕು."
ಕನಸು ಕಾಣುವುದೇನೋ ಸುಲಭ. ಆದರೆ, ಆ ಕನಸನ್ನು ನನಸಾಗಿಸುವುದು ತುಂಬಾ ಕಷ್ಟ. ಸಂಗೀತ ಕಲಿಸಲು ಹಣ ಬೇಕು. ತಾತನ ಬಳಿ ಅಷ್ಟು ಹಣ ಇರಲಿಲ್ಲ. ಆದರೂ ಅವನು ಕೈಚೆಲ್ಲಲಿಲ್ಲ. ದೇವಾಲಯದ ಎದುರು, ಬಸ್ ನಿಲ್ದಾಣದಲ್ಲಿ, ವಾರದ ಸಂತೆಗಳಲ್ಲಿ ಮೈಥಿಲಿಯನ್ನು ಹಾಡಿಸುತ್ತಿದ್ದ. ಯಾರಾದರೂ ಐವತ್ತು ರೂಪಾಯಿ ಕೊಟ್ಟರೆ ತಾತನ ಮುಖ ಅರಳುತ್ತಿತ್ತು.
"ಇದು ನಿನ್ನ ವಿದ್ಯೆಗೆ." ಎಂದು ಅವನು ಹಳೆಯ ಕಬ್ಬಿಣದ ಡಬ್ಬಿಯಲ್ಲಿ ಹಣ ಹಾಕುತ್ತಿದ್ದ. ಆ ಡಬ್ಬಿಯ ಮೇಲೆ ದೊಡ್ಡ ಅಕ್ಷರಗಳಲ್ಲಿ ಬರೆದಿದ್ದ - “ಮೈಥಿಲಿಯ ಸಂಗೀತ ಶಿಕ್ಷಣಕ್ಕಾಗಿ”.
ಮೈಥಿಲಿ ಒಂದು ದಿನ ಅದನ್ನು ನೋಡಿ ಕೇಳಿದಳು. "ತಾತಾ... ಇದು ಏನು?"
"ನಿನ್ನ ಕನಸಿನ ಡಬ್ಬಿ."
"ನನ್ನ ಕನಸಾ?"
"ಹೌದು...ಒಂದು ದಿನ ನೀನು ದೊಡ್ಡ ವೇದಿಕೆಯಲ್ಲಿ ಹಾಡಬೇಕು. ಅಲ್ಲಿ ಸಾವಿರಾರು ಜನ ನಿನ್ನ ಹಾಡು ಕೇಳಬೇಕು."
ಮೈಥಿಲಿ ನಗುತ್ತಾ ಹೇಳಿದಳು - "ನಾನು ದೊಡ್ಡವಳಾದ ಮೇಲೆ ಮೊದಲು ನಿನಗೆ ಒಂದು ಹೊಸ ಮನೆ ಕಟ್ಟಿಸ್ತೀನಿ."
ತಾತ ನಕ್ಕ. "ನನಗೆ ಮನೆ ಬೇಡ ಕಂದಾ...ನಿನ್ನ ಯಶಸ್ಸೇ ನನ್ನ ಅರಮನೆ."
***
ಅದೇ ಸಮಯದಲ್ಲಿ...
ಬೆಂಗಳೂರು. ಖ್ಯಾತ ಗಾಯಕ ಮಧುರ್ ಅವರ ಮನೆಯಲ್ಲಿ ಮೌನವೇ ಮೌನ. ಹಾಡುಗಳಲ್ಲಿ ಸಾವಿರಾರು ಜನರನ್ನು ಕಣ್ಣೀರಿಡಿಸುತ್ತಿದ್ದ ಮಧುರ್, ತನ್ನ ಮನೆಯಲ್ಲಿ ಮಾತ್ರ ನಗುವುದನ್ನೇ ಮರೆತಿದ್ದ. ಪ್ರತಿ ವರ್ಷದಂತೆ ಆ ವರ್ಷವೂ ಮಗಳ ಹುಟ್ಟುಹಬ್ಬದ ದಿನ ಬಂತು. ಮೀರಾ ಹಳೆಯ ಕಪಾಟು ತೆರೆದಳು. ಅದರೊಳಗೆ ಹನ್ನೆರಡು ವರ್ಷಗಳಿಂದ ಜೋಪಾನವಾಗಿ ಇಟ್ಟಿದ್ದ ಚಿಕ್ಕ ಫ್ರಾಕ್. ಪುಟ್ಟ ಬೂಟು. ಆಟದ ಗೊಂಬೆ. ಬೆಳ್ಳಿಯ ಬಳೆ. ಹಾಲು ಕುಡಿಸುವ ಬಾಟಲಿ. ಅವಳು ಅವನ್ನೆಲ್ಲ ಎದೆಗೆ ಹಚ್ಚಿಕೊಂಡು ಬಿಕ್ಕಿ ಬಿಕ್ಕಿ ಅತ್ತಳು.
ಮಧುರ್ ಅವಳ ಬಳಿ ಬಂದ. "ಮೀರಾ..."
ಅವಳು ಕಣ್ಣೀರಿನ ನಡುವೆಯೇ ಕೇಳಿದಳು - "ಇವತ್ತು ನಮ್ಮ ಮಗಳಿಗೆ ಹನ್ನೆರಡು ವರ್ಷ ಆಗುತ್ತಿತ್ತು ಅಲ್ವಾ?"
ಮಧುರ್ ಉತ್ತರ ಕೊಡಲಿಲ್ಲ. ಅವನ ಗಂಟಲು ಕಟ್ಟಿಕೊಂಡಿತ್ತು. ಪ್ರತಿ ವರ್ಷ ಇದೇ ದಿನ ಅವರು ಅನಾಥಾಶ್ರಮಗಳಿಗೆ ಹೋಗಿ ಮಕ್ಕಳಿಗೆ ಊಟ ಹಾಕಿಸುತ್ತಿದ್ದರು. "ಎಲ್ಲೋ ಒಂದು ಕಡೆ ನಮ್ಮ ಮಗಳೂ ಊಟ ಮಾಡ್ತಿರಬಹುದು..." ಎಂಬ ಭರವಸೆ ಅವರಿಬ್ಬರ ಬದುಕನ್ನು ಇನ್ನೂ ಹಿಡಿದು ನಿಲ್ಲಿಸಿತ್ತು.
ಆ ವರ್ಷ ಮತ್ತೊಂದು ವಿಶೇಷ ಸುದ್ದಿ ಇತ್ತು. ಚಿನ್ನೂರಿನ ಮಾರಮ್ಮನ ಜಾತ್ರೆಯ ಶತಮಾನೋತ್ಸವ. ದೊಡ್ಡ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯ ಗಾಯಕರಾಗಿ ಆಹ್ವಾನಿತರಾಗಿದ್ದವರು ಬೇರೆ ಯಾರೂ ಅಲ್ಲ - "ಮಧುರ್". ಆಮಂತ್ರಣ ಪತ್ರಿಕೆ ಕೈಗೆ ಬಂದಾಗ ಮಧುರ್ ಬಹಳ ಹೊತ್ತು ಅದನ್ನೇ ನೋಡುತ್ತಿದ್ದ.
ಮೀರಾ ನಿಧಾನವಾಗಿ ಕೇಳಿದಳು, "ಹೋಗೋಣವಾ?"
ಮಧುರ್ ಕಿಟಕಿಯಾಚೆ ನೋಡಿದ. "ಹೋಗೋಣ...ಒಂದು ವೇಳೆ...ಈ ಸಲ ದೇವಿ ನಮ್ಮ ಪ್ರಾರ್ಥನೆ ಕೇಳಿದರೆ?"
ಮೀರಾ ಏನೂ ಮಾತನಾಡಲಿಲ್ಲ. ಅವಳ ಕಣ್ಣುಗಳು ಮಾತ್ರ ಮತ್ತೆ ನೆನೆಯತೊಡಗಿದವು.
***
ಜಾತ್ರೆಯ ದಿನ. ಹನ್ನೆರಡು ವರ್ಷಗಳ ಹಿಂದಿನಂತೆಯೇ ಊರು ಸಂಭ್ರಮದಲ್ಲಿ ತೇಲುತ್ತಿತ್ತು. ಆದರೆ ಈ ಬಾರಿ ಜಾತ್ರೆಯ ಒಂದು ಮೂಲೆಯಲ್ಲಿ ಇಂಪಾದ ಸಂಗೀತ ಕೇಳಿಸುತ್ತಿತ್ತು. ಮೈಥಿಲಿ ತನ್ನ ತಾತನ ಜೊತೆ ಬೀದಿ ಬದಿಯಲ್ಲಿ ಕುಳಿತು ಹಾಡುತ್ತಿದ್ದಳು. ಅವಳ ಎದುರು ಒಂದು ಚಿಕ್ಕ ಹಿತ್ತಾಳೆ ತಟ್ಟೆ. ಅದರಲ್ಲಿ ಜನರು ಹಾಕುತ್ತಿದ್ದ ನೋಟುಗಳು. ಮಧುರ್ ಅವರ ಹಾಡು ಎಂದರೆ ಮೈಥಿಲಿಗೂ ಅಚ್ಚು ಮೆಚ್ಚು.
ಆ ದಿನ ಅವಳು ಹಾಡುತ್ತಿದ್ದ ಹಾಡು ಮಧುರ್ ಅವರದ್ದೇ ಪ್ರಸಿದ್ಧ ಭಾವಗೀತೆ.
“ದೂರವಾದ ಹೆಜ್ಜೆಯು ಮರಳಿ ಬರದಿದ್ದರೂ,
ಹೃದಯದ ನೆನಪಿನ ರಾಗ ಮೌನವಾಗದು...”"
ಹಾಡಿನ ಪ್ರತಿಯೊಂದು ಪದದಲ್ಲೂ ಭಾವನೆಯ ಜೀವವಿತ್ತು. ಅಲ್ಲೇ ಕಾರಿನಿಂದ ಇಳಿದ ಮಧುರ್ ಹೆಜ್ಜೆ ನಿಲ್ಲಿಸಿದ. ಆ ಕಂಠ...ಅವನ ಹೃದಯವನ್ನು ನೇರವಾಗಿ ತಾಕಿತು. ಆ ಹಾಡು ಮುಗಿಯುವವರೆಗೂ ಮಧುರ್ ಅಲ್ಲೇ ನಿಂತ. ಜನರೆಲ್ಲ ಚಪ್ಪಾಳೆ ತಟ್ಟಿದರು. ಮಧುರ್ ಮಾತ್ರ ಮೈಥಿಲಿಯನ್ನೇ ನೋಡುತ್ತಿದ್ದ. ಏನೋ ವಿಚಿತ್ರವಾದ ಆಕರ್ಷಣೆ. ಏನೋ ಪರಿಚಿತ ಭಾವನೆ.
"ಏಕೆ ಈ ಹುಡುಗಿಯನ್ನು ನೋಡುತ್ತಿದ್ದಂತೆ ನನ್ನ ಮನಸ್ಸು ಹೀಗೆ ತಡಕಾಡುತ್ತಿದೆ?" ಎಂದು ಅವನು ತನ್ನೊಳಗೇ ಪ್ರಶ್ನಿಸಿಕೊಂಡ.
ಮಧುರ್ ಗೆ ಹನ್ನೆರಡು ವರ್ಷಗಳ ಹಿಂದೆ ತಾನು ಜಾತ್ರೆಯಲ್ಲಿ
ಕಳೆದುಕೊಂಡ ತನ್ನ ಮಗುವಿನ ನೆನಪಾಗುತ್ತದೆ. ಅಷ್ಟರಲ್ಲಿ ಅವನ ಕಣ್ಣು ಅವಳ ಕುತ್ತಿಗೆಯತ್ತ ಹೋಯಿತು. ಒಂದು ಚಿಕ್ಕ ಬೆಳ್ಳಿಯ ಸರ. ಅದಕ್ಕೆ ಕಟ್ಟಿದ್ದ...ಮಾರಮ್ಮನ ತಾಯಿತ. ಅದೇ ವಿನ್ಯಾಸ. ಅದೇ ಆಕಾರ. ಅದೇ ತಾಯಿತ...ಹನ್ನೆರಡು ವರ್ಷಗಳ ಹಿಂದೆ ತನ್ನ ಮಗಳಿಗೆ ಹಾಕಿಸಿದ್ದದ್ದು. ಮಧುರ್‌ನ ಉಸಿರು ಬಿಗಿಯಿತು.
"ಇಲ್ಲ...ಇದು ಕಾಕತಾಳೀಯವೂ ಆಗಿರಬಹುದು..." ಎಂದು ತನ್ನನ್ನು ತಾನೇ ಸಮಾಧಾನಪಡಿಸಿಕೊಂಡ.
ಆದರೂ ಅವನ ಮನಸ್ಸು ಒಪ್ಪಲಿಲ್ಲ. ಅವನು ನಿಧಾನವಾಗಿ ಮೈಥಿಲಿಯ ಹತ್ತಿರ ಬಂದ. "ಮಗೂ... ನಿನ್ನ ಹೆಸರೇನು?"
"ಮೈಥಿಲಿ."
"ಈ ತಾಯಿತ ನಿನಗೆ ಯಾರು ಹಾಕಿದ್ದು?"
"ನನ್ನ ತಾತ."
"ತಾತ ಎಲ್ಲಿ ಇದ್ದಾರೆ?"
ಅಷ್ಟರಲ್ಲಿ ಪಕ್ಕದಲ್ಲೇ ಕುಳಿತಿದ್ದ ತಾತಯ್ಯ ಎದ್ದು ನಿಂತ. ಮಧುರ್ ಅವರಿಬ್ಬರನ್ನೂ ನೋಡುತ್ತಿದ್ದ. ಅವನ ದೃಷ್ಟಿ ಮತ್ತೆ ಮೈಥಿಲಿಯ ಭುಜದ ಮೇಲೆ ಬಿತ್ತು. ಅಲ್ಲೇ...ಅರ್ಧಚಂದ್ರದ ಆಕಾರದ ಚಿಕ್ಕ ಜನ್ಮಮಚ್ಚೆ. ಅವನ ಕೈಗಳು ನಡುಗಿದವು. ಹೃದಯ ಬಡಿತ ಹೆಚ್ಚಾಯಿತು. ಅವನು ಜೇಬಿನಿಂದ ಹಳೆಯದಾದ ಒಂದು ಪುಟ್ಟ ಫೋಟೋ ತೆಗೆದ. ಫೋಟೋದಲ್ಲಿದ್ದ ಮಗುವಿನ ಭುಜದ ಮೇಲೂ ಅದೇ ಜನ್ಮಮಚ್ಚೆ. ಮಧುರ್ ಕಂಬನಿ ತಡೆಯಲಾಗಲಿಲ್ಲ.
"ಇಲ್ಲ ಮಗೂ...ನಿನ್ನ ಹೆಸರು ಮೈಥಿಲಿ ಅಲ್ಲ..."
ಮೈಥಿಲಿಯ ಕೈಯಲ್ಲಿದ್ದ ತಾಳ ನೆಲಕ್ಕೆ ಬಿತ್ತು. ಸುತ್ತಲಿದ್ದ ಜನರು ಬೆರಗಾಗಿ ನೋಡತೊಡಗಿದರು. ತಾತನ ಮುಖ ಬಿಳಿಚಿತು.
"ನೀನು..." ಎಂದು ಮಧುರ್ ಮಾತು ಆರಂಭಿಸಿದ. "ನೀನು...ನನ್ನ ಮಗಳು."
ಅಷ್ಟರಲ್ಲಿ ಮೀರಾ ಕೂಡ ಅಲ್ಲಿಗೆ ಬಂದಳು. ಆ ಮಾತು ಕೇಳಿದ ಕ್ಷಣ...ಮೈಥಿಲಿಯ ಬದುಕು ಮಾತ್ರವಲ್ಲ...ಆ ನಾಲ್ಕೂ ಜನರ ಬದುಕೂ ಮತ್ತೊಮ್ಮೆ ಬದಲಾಗತೊಡಗಿತ್ತು...
***
ಆ ಒಂದು ಮಾತು..."ನೀನು ನನ್ನ ಮಗಳು..." ಮೈಥಿಲಿಯ ಕಿವಿಯಲ್ಲಿ ಮತ್ತೆ ಮತ್ತೆ ಪ್ರತಿಧ್ವನಿಸುತ್ತಿತ್ತು. ಅವಳು ಯಾರ ಮುಖವನ್ನೂ ನೋಡಲಾಗಲಿಲ್ಲ. ಮಧುರ್ ಮೀರಾ ಇಬ್ಬರೂ ಅಳುತ್ತಿದ್ದರು. ಮೀರಾ ಮಾತೇ ಬರದೆ ಮೈಥಿಲಿಯನ್ನೇ ನೋಡುತ್ತಿದ್ದಳು. ತಾತ ಮಾತ್ರ ತಲೆ ತಗ್ಗಿಸಿ ನಿಂತಿದ್ದರು. ಜನರು ಕುಸುಮುಸು ಮಾತನಾಡತೊಡಗಿದರು.
"ಅಯ್ಯೋ... ಇಷ್ಟು ವರ್ಷಗಳ ನಂತರ ಮಗಳು ಸಿಕ್ಕಿದ್ದಾಳಂತೆ..."
"ಹಾಗಾದ್ರೆ ಈ ತಾತ ಮಗುವನ್ನು ಯಾಕೆ ಇಟ್ಟುಕೊಂಡ?"
"ಪೊಲೀಸರಿಗೆ ಕೊಡಬೇಕಿತ್ತಲ್ಲ..."
ಆ ಮಾತುಗಳು ತಾತನ ಕಿವಿಗೂ ಬಿದ್ದವು.
ಗಾಬರಿಯಲ್ಲಿದ್ದ ಮೈಥಿಲಿ "ತಾತಾ... ಇವರು ಏನು ಹೇಳ್ತಿದ್ದಾರೆ?"ಎಂದು ಅವಳು ತನ್ನನ್ನು ಸಾಕಿದ ತಾತನತ್ತ ತಿರುಗಿ ನೋಡಿದಳು." ನಿನ್ನ ಭುಜದ ಮೇಲೆ ಇದೇ ಮಚ್ಚೆ ಇದೆಯಾ?"
ತಾತಯ್ಯ ಒಂದು ಮಾತನ್ನೂ ಆಡದೆ ಮೈಥಿಲಿಯ ಕೈ ಹಿಡಿದು ಅಲ್ಲಿಂದ ಹೊರಟರು.
ಆ ರಾತ್ರಿ ಗುಡಿಸಲಿನಲ್ಲಿ ಎಂದಿನಂತೆ ದೀಪ ಉರಿಯುತ್ತಿತ್ತು. ಆದರೆ ಆ ಮನೆಯೊಳಗೆ ಮಾತ್ರ ಕತ್ತಲು ತುಂಬಿತ್ತು. ಮೈಥಿಲಿಗೆ ಊಟ ಸೇರಲಿಲ್ಲ. ತಾತ ಕೂಡ ಅನ್ನದ ತಟ್ಟೆಯನ್ನು ಮುಟ್ಟಲಿಲ್ಲ. ಬಹಳ ಹೊತ್ತು ಇಬ್ಬರೂ ಮೌನವಾಗಿಯೇ ಕುಳಿತಿದ್ದರು.
ಕೊನೆಗೆ ಮೈಥಿಲಿಯೇ ಮೌನ ಮುರಿದಳು - "ತಾತ..."
"ಹೂಂ..."
"ನಾನು ನಿಜವಾಗಿಯೂ ಅವರ ಮಗಳಾ?"
ತಾತನ ಎದೆ ನಡುಗಿತು. ಸ್ವಲ್ಪ ಹೊತ್ತು ಕಣ್ಣು ಮುಚ್ಚಿಕೊಂಡರು. ನಂತರ ನಿಧಾನವಾಗಿ ತಲೆಯಾಡಿಸಿದರು. "ಹೌದು ಕಂದಾ..."
ಆ ಒಂದು ಉತ್ತರ ಕೇಳಿದ ಕ್ಷಣ ಮೈಥಿಲಿಯ ಕಣ್ಣೀರು ಧಾರೆಯಾಗಿ ಹರಿಯತೊಡಗಿತು. "ಅಂದ್ರೆ ಇಷ್ಟು ವರ್ಷ ನೀನು ನನಗೆ ಸುಳ್ಳು ಹೇಳಿದ್ದೀಯಾ?"
ತಾತನ ತುಟಿಗಳು ನಡುಗಿದವು. "ನಾನು ಸುಳ್ಳು ಹೇಳಿಲ್ಲ ಕಂದಾ ಸತ್ಯ ಹೇಳೋ ಧೈರ್ಯ ಮಾಡಲಿಲ್ಲ."
"ಯಾಕೆ?"
"ಯಾಕಂದ್ರೆ, ಒಂದು ದಿನ ನೀನು ನನ್ನನ್ನು ಬಿಟ್ಟು ಹೋಗ್ತೀಯಾ ಅನ್ನೋ ಭಯ."
ಮೈಥಿಲಿ ಎದ್ದು ತಾತನ ಹತ್ತಿರ ಕುಳಿತಳು - "ನನಗೆ ಎಲ್ಲ ಸತ್ಯ ಹೇಳು."
ತಾತ ದೀರ್ಘ ನಿಟ್ಟುಸಿರು ಬಿಟ್ಟರು. "ಆ ದಿನ ದೇವಸ್ಥಾನದ ಹಿಂದೆ ನಿನ್ನನ್ನು ಎತ್ತಿಕೊಂಡಾಗ, ನಿನ್ನ ಅಳುವಿಗಿಂತ ನನ್ನ ಒಂಟಿತನ ಜಾಸ್ತಿ ಅಳುತ್ತಿತ್ತು."
"ನಾನು ಪೊಲೀಸ್ ಠಾಣೆಗೆ ಹೋದೆ. ಆದರೆ ಅವರು ಜಾತ್ರೆಯ ಗಡಿಬಿಡಿಯಲ್ಲಿ ಸರಿಯಾಗಿ ಸ್ಪಂದಿಸದೆ, ನಿನ್ನನ್ನು ಅನಾಥಾಶ್ರಮಕ್ಕೆ ಕಳುಹಿಸ್ತೀವಿ ಅಂದ್ರು. ಅಲ್ಲಿ ನಿನ್ನನ್ನು ಬಿಡಲು ಮನಸ್ಸಾಗದೆ ನಾನು ಹಿಂದಿರುಗಿದೆ. ಮುಂದಿನ ಮೂರು ವಾರ...ಪ್ರತಿದಿನ ನಿನ್ನನ್ನು ಕರೆದುಕೊಂಡು ಬೇರೆ ಬೇರೆ ಊರುಗಳಿಗೆ ಹೋದೆ. 'ಯಾರಾದ್ರೂ ಮಗು ಕಳೆದುಕೊಂಡಿದ್ದೀರಾ?' ಅಂತ ಕೇಳುತ್ತಾ ತಿರುಗಿದೆ. ದೇವಾಲಯಗಳಲ್ಲಿ ಪ್ರಕಟಣೆ ಮಾಡಿಸಿದೆ. ಬಸ್ ನಿಲ್ದಾಣಗಳಲ್ಲಿ ವಿಚಾರಿಸಿದೆ. ಯಾರೂ ಸಿಗಲಿಲ್ಲ."
ತಾತನ ಧ್ವನಿ ಭಾರವಾಯಿತು. "ಆಮೇಲೆ... ಒಂದು ದಿನ ನೀನು ಜ್ವರದಿಂದ ಬಳಲುತ್ತಿದ್ದೆ. ರಾತ್ರಿ ಪೂರ್ತಿ ನಿನ್ನನ್ನು ಎದೆಗೆ ಹಚ್ಚಿಕೊಂಡು ಕುಳಿತಿದ್ದೆ. ಬೆಳಗ್ಗೆ ಜ್ವರ ಇಳಿದಾಗ ನೀನು ಮೊದಲ ಸಲ ನನ್ನ ಮುಖ ನೋಡಿ ನಕ್ಕೆ. ಆ ನಗು ನನ್ನ ಸತ್ತ ಬದುಕಿಗೆ ಮತ್ತೆ ಉಸಿರು ಕೊಟ್ಟಿತು."
ಮೈಥಿಲಿಯ ಕಣ್ಣೀರು ನಿಲ್ಲಲಿಲ್ಲ.
"ನಾನು ನಿನ್ನನ್ನು ಕದಿಯಲಿಲ್ಲ ಕಂದಾ. ಆದರೆ ನಿನ್ನನ್ನು ಕಳೆದುಕೊಳ್ಳುವ ಧೈರ್ಯ ನನಗಿರಲಿಲ್ಲ." ಅಷ್ಟೇ ಹೇಳಿ ತಾತ ಮುಖ ಮುಚ್ಚಿಕೊಂಡು ಅತ್ತರು.
ಮೊದಲ ಬಾರಿಗೆ ಮೈಥಿಲಿ ತನ್ನ ತಾತ ಮಗುವಿನಂತೆ ಅಳುವುದನ್ನು ನೋಡಿದಳು. ಅವಳು ಓಡಿ ಹೋಗಿ ಅವರನ್ನು ತಬ್ಬಿಕೊಂಡಳು. "ನೀನು ನನ್ನ ತಾತನೇ...ಯಾರೇ ಏನು ಹೇಳಲಿ."
ತಾತ ಅವಳನ್ನು ಬಿಗಿಯಾಗಿ ಅಪ್ಪಿಕೊಂಡು ಇನ್ನಷ್ಟು ಅತ್ತರು.
ಅದೇ ಹೊತ್ತಿಗೆ ಮಧುರ್ ಮತ್ತು ಮೀರಾ ತಾತಯ್ಯನ ಗುಡಿಸಲಿಗೆ ಬಂದರು. ಇಬ್ಬರಿಗೂ ತಾತಯ್ಯನ ಮೇಲೆ ಕೋಪ ಇರಲಿಲ್ಲ.
ಮಧುರ್ ತಾತನ ಎದುರು ಕೈಮುಗಿದು ನಿಂತ. "ನಿಮ್ಮ ಮೇಲೆ ನಮಗೆ ಯಾವ ದ್ವೇಷವೂ ಇಲ್ಲ."
ತಾತ ಆಶ್ಚರ್ಯದಿಂದ ನೋಡಿದರು.
“ನೀವು ನನ್ನ ಮಗಳನ್ನು ನಮ್ಮಿಂದ ಕಸಿದುಕೊಳ್ಳಲಿಲ್ಲ. ಅವಳು ಅನಾಥಳಾಗದಂತೆ ಕಾಪಾಡಿ, ಬದುಕು ಕೊಟ್ಟಿದ್ದೀರಿ.”
ಮೀರಾ ಕಣ್ಣೀರನ್ನು ಒರೆಸಿಕೊಂಡಳು. "ಆದರೆ, ಒಬ್ಬ ತಾಯಿಯಾಗಿ ನನಗೂ ನನ್ನ ಮಗಳು ಬೇಕು."
ಆ ಮಾತು ಕೇಳಿ ತಾತ ಮೌನವಾದರು. ಮೈಥಿಲಿ ಮಾತ್ರ ಮೂವರನ್ನೂ ನೋಡುತ್ತಾ ನಿಂತಳು. ಅವಳ ಮನಸ್ಸು ಎರಡು ದಿಕ್ಕಿನಲ್ಲಿ ಎಳೆಯಲ್ಪಡುತ್ತಿತ್ತು.
ಒಂದೆಡೆ ಜನ್ಮ ನೀಡಿದ ತಂದೆ-ತಾಯಿ. ಮತ್ತೊಂದೆಡೆ ಬದುಕನ್ನೇ ಕೊಟ್ಟ ತಾತ.
ಮೈಥಿಲಿಯ ಪಾಲಕತ್ವದ ವಿಚಾರದಲ್ಲಿ ಕಾನೂನುಬದ್ಧ ತೀರ್ಮಾನ ಅಗತ್ಯವಾಗಿದ್ದರಿಂದ, ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ಕೆಲ ದಿನಗಳ ನಂತರ ಕಾನೂನು ಪ್ರಕ್ರಿಯೆ ಆರಂಭವಾಯಿತು. ಜನ್ಮಮಚ್ಚೆ, ಬೆಳ್ಳಿಯ ಸರ, ದೇವಿಯ ತಾಯಿತ - ಎಲ್ಲವೂ ಮೈಥಿಲಿ ಮಧುರ್ ಮತ್ತು ಮೀರಾಳ ಮಗಳೇ ಅಂತ ದೃಢಪಡಿಸುತ್ತಿದ್ದವು. ಆದರೂ ನ್ಯಾಯಾಲಯ ಖಚಿತ ಸಾಕ್ಷಿ ಬಯಸಿತು. DNA ಪರೀಕ್ಷೆಗೆ ಆದೇಶ ನೀಡಲಾಯಿತು. ಮೈಥಿಲಿ ಮೊದಲ ಬಾರಿಗೆ ದೊಡ್ಡ ಆಸ್ಪತ್ರೆಗೆ ಹೋದಳು. ರಕ್ತದ ಮಾದರಿ ತೆಗೆದುಕೊಳ್ಳುವಾಗ ಅವಳು ಹೆದರಿದಳು. ತಾತ ಅವಳ ಕೈ ಹಿಡಿದು ಹೇಳಿದರು. "ಭಯ ಬೇಡ ಕಂದಾ, ಸತ್ಯ ಯಾವಾಗಲೂ ಗೆಲ್ಲುತ್ತೆ."
ಕೆಲ ದಿನಗಳ ನಿರೀಕ್ಷೆ. ಆ ದಿನ ವರದಿ ಬಂತು. ವರದಿ ಕೈಗೆತ್ತಿಕೊಂಡ ವೈದ್ಯರು ನಗುತ್ತಾ ಹೇಳಿದರು. "ಯಾವ ಅನುಮಾನವೂ ಇಲ್ಲ, ಮೈಥಿಲಿಯೇ ಮಧುರ್ ಮತ್ತು ಮೀರಾ ಅವರ ಜೈವಿಕ ಮಗಳು."
ಆಸ್ಪತ್ರೆಯ ಆ ಕೊಠಡಿಯಲ್ಲಿ ಕೆಲ ಕ್ಷಣ ಮೌನ. ಮಧುರ್ ಕಣ್ಣಲ್ಲಿ ಕಣ್ಣೇರು ತುಂಬಿ ಬಂತು. ಮೀರಾ ಕಣ್ಣುಮುಚ್ಚಿ ದೇವರಿಗೆ ಕೈ ಮುಗಿದಳು. ತಾತ ಮಾತ್ರ ಹೊರಗಿನ ಆಕಾಶವನ್ನು ನೋಡುತ್ತಾ ನಿಂತರು. "ದೇವರೇ...ನಾನು ಹೆದರುತ್ತಿದ್ದ ದಿನ ಬಂದೇ ಬಿಟ್ಟಿತು..." ಎಂದು ಮನಸ್ಸಿನಲ್ಲೇ ಹೇಳಿದರು.
ಕೊನೆಗೂ ವಿಚಾರಣೆ ದಿನ ಬಂತು. ನ್ಯಾಯಾಲಯ ಜನರಿಂದ ತುಂಬಿತ್ತು.ಈ ಪ್ರಕರಣ ರಾಜ್ಯದಾದ್ಯಂತ ಸುದ್ದಿಯಾಗಿತ್ತು.
ಒಬ್ಬ ವಕೀಲ ಎದ್ದು ನಿಂತ. "ಮಾನ್ಯ ನ್ಯಾಯಾಧೀಶರೇ, ಮೈಥಿಲಿಯ ಜೈವಿಕ ತಂದೆ–ತಾಯಿ ಯಾರೆಂಬುದು DNA ಪರೀಕ್ಷೆಯಿಂದ ದೃಢಪಟ್ಟಿದೆ. ಆಕೆಯ ಪಾಲನೆ, ಶಿಕ್ಷಣ ಮತ್ತು ಭವಿಷ್ಯದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಅವರು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಆದ್ದರಿಂದ, ಮಗುವಿನ ಹಿತದೃಷ್ಟಿಯಿಂದ ಆಕೆಯ ಕಾನೂನುಬದ್ಧ ಪಾಲಕತ್ವವನ್ನು ಅವರಿಗೇ ನೀಡಬೇಕೆಂದು ವಿನಂತಿಸುತ್ತೇನೆ"
ಇನ್ನೊಬ್ಬ ವಕೀಲ ಎದ್ದ. "ಆದರೆ...ಈ ಮಗುವಿನ ಬದುಕನ್ನು ಇಷ್ಟರವರೆಗೆ ಯಾವುದೇ ಕೊರತೆ ಇಲ್ಲದಂತೆ ಕಟ್ಟಿಕೊಟ್ಟವರು ಈ ವೃದ್ಧರು.ಅವರ ಪ್ರೀತಿಯನ್ನೂ ನ್ಯಾಯಾಲಯ ಮರೆಯಬಾರದು."
ಎರಡೂ ಕಡೆಯ ವಾದ ಮುಗಿಯಿತು.
ನ್ಯಾಯಾಧೀಶರು ತಾತನನ್ನು ಕೇಳಿದರು. "ನಿಮಗೆ ಏನಾದರೂ ಹೇಳಬೇಕೆ?"
ತಾತ ನಿಧಾನವಾಗಿ ಎದ್ದರು. ಕೈಗಳು ನಡುಗುತ್ತಿದ್ದವು. "ನನಗೆ ಒಂದೇ ಒಂದು ಮಾತು ಹೇಳಬೇಕಿದೆ." ಇಡೀ ನ್ಯಾಯಾಲಯ ಮೌನವಾಯಿತು."ಮೈಥಿಲಿ - ನನ್ನ ಬದುಕಿನ ಬೆಳಕು. ಆದರೆ, ಅವಳ ಸಂತೋಷಕ್ಕಿಂತ ನನ್ನ ಸಂತೋಷ ದೊಡ್ಡದಲ್ಲ. ಅವಳು ತನ್ನ ಅಪ್ಪ-ಅಮ್ಮ ಜೊತೆ ಹೋದರೆ, ನಾನು ಅಳಬಹುದು. ಆದರೆ, ಅವಳ ಭವಿಷ್ಯಕ್ಕಾಗಿ ಆ ಕಣ್ಣೀರನ್ನೂ ಸಂತೋಷದಿಂದ ಒರೆಸಿಕೊಳ್ಳುತ್ತೇನೆ."
ಅಲ್ಲಿ ನೆರೆದಿದ್ದವರ ಕಣ್ಣುಗಳು ತೇವಗೊಂಡವು. ಮಧುರ್ ತಲೆ ತಗ್ಗಿಸಿದ. ಮೀರಾ ಕಂಬನಿ ಒರೆಸಿಕೊಂಡಳು.
ಕೊನೆಯದಾಗಿ ನ್ಯಾಯಾಧೀಶರು ಮೈಥಿಲಿಯತ್ತ ನೋಡಿದರು. "ಮಗೂ, ನಿನ್ನ ಅಭಿಪ್ರಾಯ ಏನು?" ಇಡೀ ನ್ಯಾಯಾಲಯ ಮೌನವಾಗಿತ್ತು.
ಮೈಥಿಲಿ ನಿಧಾನವಾಗಿ ಎದ್ದಳು. ಮೊದಲು ಮಧುರ್ ಮತ್ತು ಮೀರಾ ಬಳಿ ಹೋದಳು. ಅವರ ಕೈ ಹಿಡಿದಳು. ತಾತನ ಎದೆ ಝಲ್ ಎಂದಿತು. ನಂತರ ಮೈಥಿಲಿ ತಾತನ ಬಳಿ ಹೋಗಿ ಅವರ ಕೈಯನ್ನೂ ಹಿಡಿದಳು. ಮೂರು ಕೈಗಳು ಒಂದಾದವು. ಅವಳು ಕಣ್ಣೀರಿನ ಧ್ವನಿಯಲ್ಲಿ ಹೇಳಿದಳು - "ನಾನು ಯಾರನ್ನೂ ಬಿಡೋದಿಲ್ಲ. ಇವರು ನನಗೆ ಜನ್ಮ ಕೊಟ್ಟವರು. ಇವರು ನನಗೆ ಬದುಕು ಕೊಟ್ಟವರು. ಜನ್ಮವಿಲ್ಲದಿದ್ದರೆ ನಾನು ಈ ಜಗತ್ತಿನಲ್ಲಿ ಇರ್ತಿರಲಿಲ್ಲ. ಆದರೆ, ತಾತ ಇಲ್ಲದಿದ್ದರೆ ನಾನು ಇವತ್ತು ಈ ಜಗತ್ತಿನಲ್ಲಿ ಬದುಕೇ ಇರ್ತಿರಲಿಲ್ಲ. ಒಬ್ಬರನ್ನು ಆಯ್ಕೆ ಮಾಡು ಅಂದ್ರೆ, ನನ್ನ ಹೃದಯವನ್ನೇ ಎರಡು ಭಾಗ ಮಾಡು ಅಂತ ಹೇಳಿದ ಹಾಗೆ."
ಮೈಥಿಲಿಯ ಉತ್ತರ ಕೇಳಿದ ನ್ಯಾಯಾಲಯದಲ್ಲಿ ಕೆಲವು ಕ್ಷಣ ಗಾಢ ಮೌನ ಆವರಿಸಿತು.
ನ್ಯಾಯಾಧೀಶರ ಕಣ್ಣುಗಳಲ್ಲೂ ಮೃದುತ್ವ ಮೂಡಿತು. ಹಿಂಬದಿ ಕುಳಿತಿದ್ದ ಕೆಲವರು ತಮ್ಮ ಕಂಬನಿ ಒರೆಸಿಕೊಂಡರು. ನ್ಯಾಯಾಲಯದೊಳಗೆ ಯಾರೂ ಮಾತನಾಡಲಿಲ್ಲ. ತೇವಗೊಂಡ ಕಣ್ಣುಗಳೇ ಅವರ ಮನದ ಭಾವನೆಗೆ ಸಾಕ್ಷಿಯಾಗಿದ್ದವು. ನ್ಯಾಯಾಧೀಶರ ಗಂಭೀರ ಮುಖದಲ್ಲೂ ಮೃದು ಭಾವವೊಂದು ಮೂಡಿತು. ನಂತರ ಮೈಥಿಲಿಯ ಜೈವಿಕ ತಂದೆ–ತಾಯಿಗೆ ಕಾನೂನುಬದ್ಧ ಪಾಲಕತ್ವ ನೀಡಿ, ಅವಳ ಭಾವನಾತ್ಮಕ ಹಿತದೃಷ್ಟಿಯಿಂದ ತಾತನೊಂದಿಗೆ ನಿರ್ಬಂಧರಹಿತ ಸಂಪರ್ಕ ಮತ್ತು ಸಹವಾಸ ಮುಂದುವರಿಯುವಂತೆ ನ್ಯಾಯಾಲಯ ಆದೇಶಿಸಿತು.
ನ್ಯಾಯಾಲಯದಿಂದ ಹೊರಗೆ ಬಂದೊಡನೆ ಮಧುರ್ ತಾತನ ಕಾಲಿಗೆ ಶರಣಾಗಿ ಬಿದ್ದ. "ತಾತಾ, ಯಾವ ಜನ್ಮದಲ್ಲಿ ನೀವು ನನ್ನ ತಂದೆಯಾಗಿದ್ರೋ ನನಗೆ ತಿಳಿಯದು. ನನ್ನ ಮಗಳನ್ನು ನೀವು ಉಳಿಸಿದ್ದೀರಿ. ನಾನು ಕಳೆದುಕೊಂಡಿದ್ದ ನನ್ನ ಜೀವನವನ್ನೇ ನೀವು ನನಗೆ ಮರಳಿ ಕೊಟ್ಟಿದ್ದೀರಿ." ಅಂತ ಕಣ್ಣೀರಿಟ್ಟ.
ತಾತ ಅವನನ್ನು ಎಬ್ಬಿಸಿ, " ನಾನು ಏನೂ ಮಾಡಲಿಲ್ಲ. ನಾನು ನಿಮಿತ್ತ ಮಾತ್ರ. ದೇವರು ಕೊಟ್ಟ ಜವಾಬ್ದಾರಿಯನ್ನು ಕೆಲವು ವರ್ಷಗಳ ಮಟ್ಟಿಗೆ ನಾನು ಹೊತ್ತಿದ್ದೆ ಅಷ್ಟೇ" ಅಂತ ಮಂದಹಾಸ ಬೀರುತ್ತಾ ಹೇಳಿದ.
ಆ ಕೂಡಲೇ ಮಧುರ್ ಬಹುದೊಡ್ಡ ನಿರ್ಧಾರ ಒಂದನ್ನು ಮಾಡಿದ. ಮೈಥಿಲಿಯನ್ನು ತನ್ನ ಜೊತೆ ಕರೆದುಕೊಂಡು ಹೋಗುವ ಬದಲಿಗೆ, ತಾತನನ್ನೇ ತನ್ನ ಜೊತೆ ತನ್ನ ಮನೆಗೆ ಕರೆದುಕೊಂಡು ಹೋದ. "ಇನ್ನು ಮುಂದೆ, ಮೈಥಿಲಿ ನಿಮ್ಮ ಮೊಮ್ಮಗಳಲ್ಲ, ನಮ್ಮ ಮಗಳು. ಮತ್ತೆ ನೀವು.... ನನ್ನ ಅಪ್ಪ." ಅಂದ ಮಧುರ್.
ಇದನ್ನು ಕೇಳಿದ ತಾತನಿಗೆ ಕಣ್ಣು ತುಂಬಿ ಬಂದು ಬೆರಗಾಗಿ ಅವರನ್ನು ನೋಡಿದರು. ಮೀರಾ ಮುಂದೆ ಬಂದು ತಾತನ ಕಾಲಿಗೆ ನಮಸ್ಕರಿಸಿದಳು. "ನಮ್ಮ ಮಗಳನ್ನು ಉಳಿಸಿದ ನಿಮ್ಮ ಋಣ ನಾವು ಎಂದಿಗೂ ತೀರಿಸಲಾರೆವು."
ತಾತನ ತುಟಿಗಳ ಮೇಲೆ ನಗು ಮೂಡಿತು. ಅದು ಗೆಲುವಿನ ನಗುವಲ್ಲ, ಒಬ್ಬ ತಾತ ತನ್ನ ಮೊಮ್ಮಗಳನ್ನು ಮತ್ತೆ ಕಳೆದುಕೊಳ್ಳದ ನಿಟ್ಟುಸಿರಿನ ನಗು. ಮಧುರ್ ಮಾತನ್ನು ಒಪ್ಪಿಕೊಂಡು ಅವರ ಜೊತೆ ಮೈಥಿಲಿ ಮತ್ತು ತಾತ ಇಬ್ಬರೂ ಮಧುರ್ ನ ಮನೆಗೆ ಹೋದರು.
***
ನ್ಯಾಯಾಲಯದ ತೀರ್ಪಿನ ನಂತರ ಮೈಥಿಲಿಯ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಯಿತು. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ.
ಇದುವರೆಗೆ ಗುಡಿಸಲಿನ ನಾಲ್ಕು ಗೋಡೆಗಳ ನಡುವೆ ಬದುಕಿದ್ದ ಹುಡುಗಿಗೆ, ಬೆಂಗಳೂರಿನ ವಿಶಾಲ ಬಂಗಲೆ ಹೊಸ ಪ್ರಪಂಚದಂತಿತ್ತು. ಮನೆಯ ಮುಂದೆ ಸುಂದರ ತೋಟ, ಒಳಗೆ ಹೊಳೆಯುವ ನೆಲ, ದೊಡ್ಡ ದೊಡ್ಡ ಕೊಠಡಿಗಳು, ಪುಸ್ತಕಗಳಿಂದ ತುಂಬಿದ ಗ್ರಂಥಾಲಯ, ಸಂಗೀತ ಸಾಧನಗಳಿಂದ ಕಂಗೊಳಿಸುತ್ತಿದ್ದ ವಿಶೇಷ ಕೊಠಡಿ... ಎಲ್ಲವೂ ಮೈಥಿಲಿಗೆ ಹೊಸ ಅನುಭವ.
ಆದರೆ ಆ ಐಷಾರಾಮಿನ ಮಧ್ಯೆಯೂ ಅವಳ ಕಣ್ಣುಗಳು ಹುಡುಕುತ್ತಿದ್ದದ್ದು ಒಂದೇ ಮುಖ...ತಾತ.
ಮೊದಲ ದಿನ ರಾತ್ರಿ ಮೃದುವಾದ ಹಾಸಿಗೆಯ ಮೇಲೆ ಮಲಗಿದರೂ ಅವಳಿಗೆ ನಿದ್ದೆ ಬರಲಿಲ್ಲ. "ತಾತಾ..." ಎಂದು ಕೂಗುತ್ತಲೇ ಎದ್ದು ಕುಳಿತಳು.
ಅಷ್ಟರಲ್ಲಿ ಪಕ್ಕದ ಕೊಠಡಿಯಿಂದ ತಾತ ಓಡಿಬಂದರು. "ಏನಾಯ್ತು ಕಂದಾ?"
ಮೈಥಿಲಿ ಓಡಿ ಬಂದು ತಾತನನ್ನು ಅಪ್ಪಿಕೊಂಡಳು. "ನೀನು ಇಲ್ಲದಿದ್ದರೆ ನನಗೆ ನಿದ್ರೆ ಬರಲ್ಲ..."
ತಾತನ ಕಣ್ಣು ಮತ್ತೆ ನೆನೆಯಿತು.
ಮಧುರ್ ಮತ್ತು ಮೀರಾ ದೂರದಿಂದ ಆ ದೃಶ್ಯ ನೋಡುತ್ತಿದ್ದರು. ಮಧುರ್ ನಿಧಾನವಾಗಿ ಮೀರಾಳ ಕಡೆ ತಿರುಗಿ ಹೇಳಿದರು - "ನಾವು ಇವಳಿಗೆ ಜನ್ಮ ಕೊಟ್ಟಿದ್ದೇವೆ...ಆದರೆ ಅಪ್ಪನೆಂದರೆ ಯಾರು ಅನ್ನೋದನ್ನು ಈ ತಾತ ಕಲಿಸಿದ್ದಾರೆ."
ಕೆಲವೇ ದಿನಗಳಲ್ಲಿ ಮಧುರ್ ಒಂದು ವಿಶೇಷ ಕೆಲಸ ಮಾಡಿದ. ಮನೆಯ ಹಾಲ್‌ನಲ್ಲಿ ಮೂರು ದೊಡ್ಡ ಫೋಟೋಗಳನ್ನು ಹಾಕಿಸಿದ. ಒಂದರಲ್ಲಿ ಮಾರಮ್ಮ ದೇವಿಯ ಚಿತ್ರ. ಎರಡನೆಯದರಲ್ಲಿ ಮೈಥಿಲಿಯ ಬಾಲ್ಯದ ಚಿತ್ರ. ಮೂರನೆಯದು, ತಾತ ಮೈಥಿಲಿಯನ್ನು ಹೆಗಲ ಮೇಲೆ ಕೂರಿಸಿಕೊಂಡಿದ್ದ ಹಳೆಯ ಫೋಟೋ.
ಅದನ್ನು ನೋಡಿ ತಾತ ಕೇಳಿದರು "ಇದೇಕೆ?"
ಮಧುರ್ ನಕ್ಕು, "ಈ ಮನೆ ಕಟ್ಟಿದ್ದು ನಾನು. ಆದರೆ ಈ ಮನೆಯ ನಿಜವಾದ ಆಧಾರ ನೀವು."
ಮೀರಾಳ ಜೀವನವೂ ನಿಧಾನವಾಗಿ ಬದಲಾಗತೊಡಗಿತು. ಹನ್ನೆರಡು ವರ್ಷಗಳಿಂದ ಮುಚ್ಚಿಟ್ಟಿದ್ದ ಮಗುವಿನ ಬಟ್ಟೆಗಳನ್ನು ಒಂದು ದಿನ ಹೊರತೆಗೆದಳು. ಅವುಗಳನ್ನು ಮೈಥಿಲಿಗೆ ತೋರಿಸಿದಳು. "ನೋಡು ಮಗಳೇ...ಇವೆಲ್ಲ ನಿನ್ನದು."
ಮೈಥಿಲಿ ಒಂದೊಂದನ್ನೂ ಕೈಯಲ್ಲಿ ಹಿಡಿದು ನೋಡುತ್ತಿದ್ದಳು. ಚಿಕ್ಕ ಫ್ರಾಕ್, ಚಿಕ್ಕ ಆಟಿಕೆ, ಚಿಕ್ಕ ಕಾಲುಚೀಲ, ಚಿಕ್ಕ ಹಾಲಿನ ಬಾಟಲಿ.
ಹಠಾತ್ತನೆ ಅವಳು ಮೀರಾಳ ಕೈ ಹಿಡಿದಳು. "ಅಮ್ಮ..."
ಆ ಒಂದು ಮಾತಿಗಾಗಿ ಹನ್ನೆರಡು ವರ್ಷಗಳಿಂದ ಕಾಯುತ್ತಿದ್ದ ಮೀರಾ ಜೋರಾಗಿ ಅತ್ತುಬಿಟ್ಟಳು. ಮೈಥಿಲಿಯನ್ನು ಎದೆಗೆ ಹಚ್ಚಿಕೊಂಡಳು.
ತಾತ ದೂರದಲ್ಲಿ ನಿಂತು ಕಂಬನಿ ಒರೆಸಿಕೊಂಡರು. "ಮಾರಮ್ಮ...ನನ್ನ ಮೊಮ್ಮಗಳಿಗೆ ನೀನಲ್ಲದೆ ಮತ್ತೊಂದು ಅಮ್ಮ ಸಿಕ್ಕಳು..." ಎಂದು ದೇವರಿಗೆ ಮನಸ್ಸಿನಲ್ಲೇ ಧನ್ಯವಾದ ಹೇಳಿದರು.
ದಿನಗಳು ಸಾಗಿದವು. ಮಧುರ್ ಸ್ವತಃ ಮೈಥಿಲಿಗೆ ಸಂಗೀತ ಕಲಿಸಲು ಆರಂಭಿಸಿದರು. ಮೊದಲ ದಿನ ತಂಬೂರಿಯನ್ನು ಅವಳ ಕೈಗೆ ಕೊಟ್ಟು ಹೇಳಿದರು "ಹಾಡುವುದು ಕಂಠದಿಂದ ಅಲ್ಲ ಕಂದಾ...ಹೃದಯದಿಂದ." ಮೈಥಿಲಿ ಗಮನದಿಂದ ಕೇಳುತ್ತಿದ್ದಳು. ಬೆಳಿಗ್ಗೆ ಮೂರು ಗಂಟೆಗಳ ಅಭ್ಯಾಸ. ಸಂಜೆ ಎರಡು ಗಂಟೆಗಳ ಅಭ್ಯಾಸ. ಸ್ವರ, ಲಯ, ಭಾವ - ಪ್ರತಿ ದಿನ ಅವಳು ಹೊಸದನ್ನು ಕಲಿಯುತ್ತಿದ್ದಳು.
ಕೆಲವೊಮ್ಮೆ ತಪ್ಪು ಮಾಡಿದರೆ ಮಧುರ್ ನಗುತ್ತಿದ್ದರು. "ತಪ್ಪು ಮಾಡದ ಗಾಯಕ ಯಾರೂ ಇಲ್ಲ. ಆದರೆ ಅದೇ ತಪ್ಪನ್ನು ಮತ್ತೆ ಮಾಡದವನೇ ಕಲಾವಿದ." ಮೈಥಿಲಿ ತಲೆಬಾಗುತ್ತಾ ಮತ್ತೆ ಅಭ್ಯಾಸ ಮಾಡುತ್ತಿದ್ದಳು.
ತಾತ ಪ್ರತಿದಿನ ಬಾಗಿಲಿನ ಹಿಂದೆ ಕುಳಿತು ಅವಳ ಹಾಡು ಕೇಳುತ್ತಿದ್ದರು. ಅವರಿಗೆ ಸಂಗೀತದ ವ್ಯಾಕರಣ ಗೊತ್ತಿರಲಿಲ್ಲ. ಆದರೆ ಮೈಥಿಲಿಯ ಪ್ರತಿಯೊಂದು ಸ್ವರವೂ ಅವರ ಹೃದಯವನ್ನು ತಲುಪುತ್ತಿತ್ತು.
ಮೈಥಿಲಿ ಬೆಂಗಳೂರಿನ ಹೆಸರುವಾಸಿಯಾದ ಶಾಲೆಯೊಂದರಲ್ಲಿ ಶಿಕ್ಷಣ ಪಡೆಯುತ್ತಿದ್ದಳು. ಒಂದು ದಿನ ಬೆಂಗಳೂರಿನಲ್ಲೇ ಒಂದು ದೊಡ್ಡ ಸಂಗೀತ ಸ್ಪರ್ಧೆ ನಡೆಯುತ್ತಿತ್ತು. ದೇಶದ ಮೂಲೆ ಮೂಲೆಗಳಿಂದ ಬಂದ ಪ್ರತಿಭಾವಂತ ಮಕ್ಕಳು ಭಾಗವಹಿಸಿದ್ದರು. ಮೈಥಿಲಿಗೂ ಅವಳ ಶಾಲೆಯಿಂದ ಅವಕಾಶ ಸಿಕ್ಕಿತ್ತು. ವೇದಿಕೆಯ ಮೇಲೆ ನಿಂತಾಗ ಸಾವಿರಾರು ಜನ ಎದುರಿಗಿದ್ದರು. ಮೊದಲ ಬಾರಿಗೆ ಅಷ್ಟು ದೊಡ್ಡ ವೇದಿಕೆಯಲ್ಲಿ ಭಾಗವಹಿಸುತ್ತಿದ್ದರಿಂದ ಅವಳ ಕೈಗಳು ನಡುಗಿದವು.
ಪ್ರೇಕ್ಷಕರ ಮಧ್ಯೆ ತಾತ ಕುಳಿತಿದ್ದರು. ಅವರು ದೂರದಿಂದ ಕೈ ಎತ್ತಿ ತೋರಿಸಿದರು. "ಭಯ ಬೇಡ..." ಅನ್ನೋ ರೀತಿಯಲ್ಲಿ ಸನ್ನೆ ಮಾಡಿದರು. ಅಷ್ಟೇ ಸಾಕಾಯಿತು.
ಮೈಥಿಲಿ ಕಣ್ಣು ಮುಚ್ಚಿ ಹಾಡಲು ಆರಂಭಿಸಿದಳು. ಮೊದಲ ಸ್ವರ ಕೇಳುತ್ತಿದ್ದಂತೆ ಸಭಾಂಗಣ ಭ್ರಮಾಲೋಕಕ್ಕೆ ಹೋದಂತಾಯಿತು. ಹಾಡು ಮುಗಿದಾಗ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಅವಳು ಮೊದಲ ಬಹುಮಾನ ಗೆದ್ದಳು.
ಬಹುಮಾನ ಸ್ವೀಕರಿಸಿದ ತಕ್ಷಣ ಓಡಿ ಹೋಗಿ ತಾತನ ಕೈಗೆ ಟ್ರೋಫಿ ಕೊಟ್ಟಳು. "ಇದು ನನ್ನದಲ್ಲ ತಾತ...ನಿನ್ನದು."
ತಾತ ನಗುತ್ತಾ ಹೇಳಿದರು - "ಇದು ನಮ್ಮದು ಕಂದಾ..."
ವರ್ಷಗಳು ಕಳೆದುಹೋದವು. ಮಧುರ್ ಮಾರ್ಗದರ್ಶನದೊಂದಿಗೆ ಮೈಥಿಲಿ ದೇಶದಲ್ಲೇ ಅತ್ಯುತ್ತಮ ಗಾಯಕಿಯಾಗಿ ಗುರುತಿಸಲ್ಪಟ್ಟಳು. ಅವಳ ಪ್ರತಿಯೊಂದು ಹಾಡಿನಲ್ಲೂ ಭಾವನೆ ಇತ್ತು. ಜನರು ಹೇಳುತ್ತಿದ್ದರು - "ಅವಳ ಧ್ವನಿ ನೇರವಾಗಿ ಹೃದಯ ಮುಟ್ಟುತ್ತದೆ." ಅವರಿಗೆ ಗೊತ್ತಿರಲಿಲ್ಲ - ಆ ಧ್ವನಿಯಲ್ಲಿ ಒಬ್ಬ ತಾಯಿಯ ನೋವಿತ್ತು, ಒಬ್ಬ ತಂದೆಯ ನಿರೀಕ್ಷೆಯಿತ್ತು, ಒಬ್ಬ ತಾತನ ಮಮತೆಯಿತ್ತು.
ಕೊನೆಗೂ ಆ ದಿನ ಬಂತು. ದೇಶದ ಅತ್ಯುನ್ನತ ಯುವ ಗಾಯಕಿ ಪ್ರಶಸ್ತಿ. ಸಾವಿರಾರು ಜನರು ಸೇರಿದ್ದ ಭವ್ಯ ಸಭಾಂಗಣ. ಕಾರ್ಯಕ್ರಮ ನಿರೂಪಕರು ಘೋಷಿಸಿದರು - "ಈ ವರ್ಷದ ಅತ್ಯುತ್ತಮ ಯುವ ಗಾಯಕಿ...ಕುಮಾರಿ ಮೈಥಿಲಿ ಮಧುರ್!"
ಇಡೀ ಸಭಾಂಗಣ ಕರತಾಡನದಿಂದ ಮೊಳಗಿತು. ಮೈಥಿಲಿ ವೇದಿಕೆಯ ಮೇಲೆ ಬಂದಳು. ಬೆಳಕುಗಳಿಂದ ಕಂಗೊಳಿಸುತ್ತಿದ್ದ
ವೇದಿಕೆ. ಅದೇ ವೇದಿಕೆಯಲ್ಲಿ ಅವಳ ಮೊದಲ ಸಂಗೀತ ಕಛೇರಿ. ವೇದಿಕೆಯ ಮೇಲೆ ಮೂರು ಕುರ್ಚಿಗಳಿದ್ದವು. ಒಂದರಲ್ಲಿ ಮಧುರ್. ಇನ್ನೊಂದರಲ್ಲಿ
ಮೀರಾ. ಮೂರನೆಯದರಲ್ಲಿ...ಅವಳಿಗೆ ಪುಟ್ಟ ಮಗುವಾಗಿದ್ದಾಗಲೇ ಹಾಡಲು ಕಲಿಸಿ, ಹಾಡಿನ ಮೇಲೆ
ಇದ್ದ ಅವಳ ಆಸಕ್ತಿಗೆ ಸುಂದರವಾದ ರೂಪ ಕೊಟ್ಟ ಆ ವೃದ್ಧ ತಾತ. ಮೈಥಿಲಿ ಪ್ರಶಸ್ತಿ ಸ್ವೀಕರಿಸಿ ತನ್ನ ಕಚೇರಿ ನಡೆಸಿದಳು. ಕಚೇರಿ ಮುಗಿದ ಮೇಲೆ ಕೆಲ ಕ್ಷಣ ಮಾತನಾಡಲಿಲ್ಲ. ನಂತರ ಕಣ್ಣೀರನ್ನು ಒರೆಸಿಕೊಂಡು ಸಾವಿರಾರು ಜನರಿದ್ದ ಆ ವೇದಿಕೆಯಲ್ಲಿ ಮೈಥಿಲಿ ಮಾತನಾಡಿದಳು:
"ಇಂದು ಈ ಪ್ರಶಸ್ತಿ ನನ್ನ ಕೈಯಲ್ಲಿರಬಹುದು, ಆದರೆ ಇದನ್ನು ಗೆದ್ದವಳು ನಾನಲ್ಲ." ಸಭಾಂಗಣ ಮೌನವಾಯಿತು. ಅವಳು ಮುಂದುವರಿಸಿದಳು - "ನನಗೆ ಜನ್ಮ ಕೊಟ್ಟವರು ನನ್ನ ಅಪ್ಪ–ಅಮ್ಮ. ನನ್ನನ್ನು ಎದೆಗಪ್ಪಿಕೊಂಡು ಬದುಕು ಕೊಟ್ಟವರು ನನ್ನ ತಾತ. ಅಮ್ಮ ನನ್ನನ್ನು ತನ್ನ ಗರ್ಭದಲ್ಲಿ ಹೊತ್ತಳು; ತಾತ ಅಮ್ಮನ ಮಮತೆಯನ್ನೂ ಅಪ್ಪನ ಆಸರೆಯನ್ನೂ ನೀಡಿ ಬೆಳೆಸಿದರು; ಅಪ್ಪ ನನ್ನ ಕಂಠಕ್ಕೆ ಸಂಗೀತದ ಶಿಸ್ತು ಮತ್ತು ದಿಕ್ಕು ನೀಡಿದರು. ಇಂದು ನಾನು ಹಾಡುತ್ತಿರುವುದು ನನ್ನೊಬ್ಬಳ ಧ್ವನಿಯಿಂದಲ್ಲ - ಈ ಮೂರು ಅಪರಂಜಿಗಳ ಪ್ರೀತಿಯಿಂದ."
ಇಡೀ ಸಭಾಂಗಣವೇ ಎದ್ದು ನಿಂತು ಚಪ್ಪಾಳೆ ತಟ್ಟಿತು. ಕರತಾಡನ ನಿಲ್ಲಲೇ ಇಲ್ಲ.
ತಾತನ ಕಣ್ಣುಗಳು ಸಂತೋಷಗೊಂಡು ತುಂಬಿದವು. ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಬಂದು, ತುಟಿಗಳಲ್ಲಿ ಮಂದಹಾಸ ಮೂಡಿತು. ಅವನ ಜೀವನದ ಕೊನೆಯ ಆಸೆ ಈಡೇರಿತ್ತು. ಅವನು ಸಾಕಿದ ಆ ಪುಟ್ಟ ಹುಡುಗಿ...ಇಂದು ಲಕ್ಷಾಂತರ ಹೃದಯಗಳ ಮುದ್ದು ಮಗಳು ಆಗಿದ್ದಳು.
ಆ ರಾತ್ರಿ ಮನೆಗೆ ಹಿಂದಿರುಗಿದ ನಂತರ ತಾತ ಬಹಳ ಹೊತ್ತು ಮೌನವಾಗಿ ಕುಳಿತಿದ್ದರು. ಮೈಥಿಲಿ ಅವರ ಬಳಿಗೆ ಬಂದು ತಲೆ ಅವರ ಮಡಿಲಲ್ಲಿ ಇಟ್ಟಳು. "ತಾತಾ..."
"ಹೂಂ..."
"ಸಂತೋಷ ಆಯ್ತಾ?"
ತಾತ ಅವಳ ತಲೆಯ ಮೇಲೆ ಕೈ ಇಟ್ಟರು. "ನನಗೆ ಇನ್ನೇನು ಬೇಕಮ್ಮ, ನಾನು ಸಾಯುವ ಮುಂಚೆ ದೇವರು ಸ್ವರ್ಗವನ್ನೇ ತೋರಿಸಿದ."
ಮೈಥಿಲಿ ತಕ್ಷಣ ಅವರ ಬಾಯಿಗೆ ಕೈ ಇಟ್ಟಳು."ಹಾಗೆ ಮಾತಾಡಬೇಡ."
ತಾತ ನಗುತ್ತಾ ಹೇಳಿದರು - "ನಾನು ಹೋದರೂ, ನಿನ್ನ ಪ್ರತಿಯೊಂದು ಹಾಡಿನಲ್ಲೂ ಬದುಕಿರುತ್ತೇನೆ."
***
ಇತ್ತೀಚೆಗೆ ತಾತನ ಉಸಿರಾಟ ಸ್ವಲ್ಪ ಕಷ್ಟವಾಗುತ್ತಿದ್ದರೂ, ಮೈಥಿಲಿಯ ಸಂತೋಷಕ್ಕೆ ನೆರಳು ಬೀಳಬಾರದೆಂದು ಅವರು ಯಾರಿಗೂ ಹೇಳಿರಲಿಲ್ಲ. ಕೆಲ ತಿಂಗಳ ನಂತರ, ಒಂದು ಬೆಳಿಗ್ಗೆ ತಾತ ಎಂದಿನಂತೆ ಎಚ್ಚರವಾಗಲಿಲ್ಲ. ಮುಖದಲ್ಲಿ ಅದೇ ಮಂದಹಾಸ. ತಲೆಯ ಹತ್ತಿರ ಮೈಥಿಲಿಯ ಮೊದಲ ಬಹುಮಾನ. ಎದೆಯ ಮೇಲೆ ಮಾರಮ್ಮನ ಪ್ರಸಾದ. ಶಾಂತವಾಗಿ, ಯಾರಿಗೂ ತೊಂದರೆ ಕೊಡದೆ ಅವರು ಶಾಶ್ವತ ನಿದ್ರೆಗೆ ಜಾರಿದ್ದರು. ಮೈಥಿಲಿ ಮಗುವಿನಂತೆ ಅತ್ತುಬಿಟ್ಟಳು.
ಮಧುರ್ ಅವಳ ಭುಜದ ಮೇಲೆ ಕೈ ಇಟ್ಟು ಹೇಳಿದ - "ಅವರು ಎಲ್ಲಿಗೂ ಹೋಗಿಲ್ಲ ಕಂದಾ, ನೀನು ಹಾಡುವ ಪ್ರತಿಯೊಂದು ಸ್ವರದಲ್ಲೂ ಅವರು ಬದುಕುತ್ತಾರೆ."
ಮಧುರ್ ಸ್ವತಃ ತನ್ನ ತಂದೆಗೆ ಮಾಡುವಂತೆಯೇ ತಾತಯ್ಯನ ಅಂತ್ಯಕ್ರಿಯೆಯನ್ನು ಚಿನ್ನೂರಿನಲ್ಲೇ ನಡೆಸಿದ.
ಪ್ರತಿವರ್ಷ ಮಾರಮ್ಮನ ಜಾತ್ರೆಯ ಮೊದಲ ದಿನ, ಮೈಥಿಲಿ ಚಿನ್ನೂರಿಗೆ ಬರುತ್ತಾಳೆ. ಮೊದಲು ದೇವಿಗೆ ನಮಸ್ಕರಿಸುತ್ತಾಳೆ. ನಂತರ ತಾತನ ಸಮಾಧಿಗೆ ಒಂದು ಮಲ್ಲಿಗೆ ಹಾರ ಅರ್ಪಿಸುತ್ತಾಳೆ. ಆಮೇಲೆ ಅದೇ ದೇವಸ್ಥಾನದ ಎದುರು ಒಮ್ಮೆ ತಾನು ಬೀದಿ ಬದಿಯಲ್ಲಿ ಹಾಡುತ್ತಿದ್ದ ಸ್ಥಳದಲ್ಲೇ ಕುಳಿತು ಒಂದು ಹಾಡು ಹಾಡುತ್ತಾಳೆ. ಆ ದಿನ ತಟ್ಟೆಯಲ್ಲಿ ಸೇರುವ ಹಣವನ್ನು ಮೈಥಿಲಿ ಎಂದಿಗೂ ತನ್ನದಾಗಿಸಿಕೊಳ್ಳುತ್ತಿರಲಿಲ್ಲ. ತಾತನ ಸ್ಮರಣಾರ್ಥ ಸ್ಥಾಪಿಸಿದ “ಮಮತೆಯ ನಿಧಿ”ಗೆ ಅದನ್ನು ಸಮರ್ಪಿಸುತ್ತಿದ್ದಳು. ಆ ನಿಧಿಯಿಂದ ಅನಾಥ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸಂಗೀತ ಶಿಕ್ಷಣ, ವಾದ್ಯೋಪಕರಣ ಮತ್ತು ವಿದ್ಯಾರ್ಥಿವೇತನಗಳನ್ನು ನೀಡಲಾಗುತ್ತಿತ್ತು.ಕಾರಣ, ಒಂದು ಕಾಲದಲ್ಲಿ ಅವಳ ಬದುಕನ್ನೂ ಒಬ್ಬ ಅಪರಿಚಿತನ ಮಮತೆಯೇ ಬೆಳಗಿಸಿತ್ತು.
ಮೈಥಿಲಿಯ ಬದುಕಿಗೆ ಜನ್ಮದ ಸ್ವರವೊಂದು, ಮಮತೆಯ ಸ್ವರವೊಂದು ಸೇರಿತ್ತು. ಆ ಎರಡು ಸ್ವರಗಳಿಗೆ ಪ್ರೀತಿಯ ಲಯ ಬೆರೆತಾಗಲೇ ಅವಳ ಬದುಕು ಸಂಪೂರ್ಣ ರಾಗವಾಯಿತು.
ಜನ್ಮ ನೀಡುವುದು ಪ್ರಕೃತಿಯ ವರ; ಬದುಕನ್ನು ರೂಪಿಸುವುದು ಮನುಷ್ಯತ್ವದ ಮಹತ್ತರ ಸಾಧನೆ. ರಕ್ತಸಂಬಂಧಗಳು ನಮ್ಮ ಅಸ್ತಿತ್ವಕ್ಕೆ ಪರಿಚಯ ನೀಡುತ್ತವೆ; ಹೃದಯದ ಸಂಬಂಧಗಳು ನಮ್ಮ ಬದುಕಿಗೆ ಅರ್ಥ ನೀಡುತ್ತವೆ.
ಕೆಲವರು ನಮ್ಮ ಬದುಕಿಗೆ ರಕ್ತದ ಮೂಲಕ ಬರುವುದಿಲ್ಲ - ಪ್ರೀತಿಯ ಮೂಲಕ ಬರುತ್ತಾರೆ. ಅಂತಹ ಸಂಬಂಧಗಳ ಸ್ವರ ಎಂದಿಗೂ ಮೌನವಾಗುವುದಿಲ್ಲ; ಕಾಲವನ್ನು ಮೀರಿ ತಲೆಮಾರುಗಳ ಹೃದಯಗಳಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತದೆ.
