ಬುಧವಾರ, ಅಕ್ಟೋಬರ್ 14, 2026

ನಗುವಿನ ಹಿಂದೆ ಉಳಿದವಳು (ಒಂದು ಕಾಲ್ಪನಿಕ ಭಾವಕಥೆ)

✍🏻 ದೀಪಲಕ್ಷ್ಮಿ ಭಟ್, ಮಂಗಳೂರು

 “ಕ್ಷಮಿಸಿ ವೈದೇಹಿಯವರೇ… ಈ ಬಾರಿಯೂ ಮಗುವಿನ ಬೆಳವಣಿಗೆ ಹಿಂದಿನಂತೆಯೇ ನಿಂತಿದೆ.”
ವೈದ್ಯರ ತುಟಿಗಳು ಇನ್ನೂ ಏನನ್ನೋ ಹೇಳುತ್ತಿದ್ದವು. ಆದರೆ ಆ ಮಾತಿನ ನಂತರದ ಯಾವ ಶಬ್ದವೂ ವೈದೇಹಿಯ ಕಿವಿಗೆ ತಲುಪಲಿಲ್ಲ. ಎದುರಿನ ಪರದೆಯ ಮೇಲೆ ಕಾಣುತ್ತಿದ್ದ ಪುಟ್ಟ ಕಪ್ಪು ವೃತ್ತವನ್ನು ಅವಳು ಕಣ್ಣು ಮಿಟುಕಿಸದೆ ನೋಡುತ್ತಿದ್ದಳು. 
ಹದಿನೈದು ದಿನಗಳ ಹಿಂದೆ ಅದೇ ಪರದೆಯ ಮುಂದೆ ಕುಳಿತು, “ಇದು ನಿಮ್ಮ ಮಗುವಿನ ಚೀಲ… ಮುಂದಿನ ಪರೀಕ್ಷೆಯಲ್ಲಿ ಹೃದಯಬಡಿತ ಕಾಣಬಹುದು,” ಎಂದು ವೈದ್ಯರು ಹೇಳಿದಾಗ ಅವಳೊಳಗೆ ಸಾವಿರ ದೀಪಗಳು ಹೊತ್ತಿಕೊಂಡಿದ್ದವು. ಇಂದು ಅದೇ ಪರದೆ ಬೆಳಗುತ್ತಿದ್ದರೂ ಅವಳಿಗೆ ಎಲ್ಲವೂ ಕತ್ತಲಾಗಿ ಕಾಣುತ್ತಿತ್ತು.
“ಮತ್ತೊಮ್ಮೆ ಪರೀಕ್ಷಿಸಿ ಡಾಕ್ಟರ್… ಬಹುಶಃ ದಿನದ ಲೆಕ್ಕ ತಪ್ಪಿರಬಹುದು,” ಎಂದು ಪಕ್ಕದಲ್ಲಿದ್ದ ಆದಿತ್ಯ ಕೇಳಿದ. ಅವನ ಧ್ವನಿಯಲ್ಲಿ ಭರವಸೆ ಇರಲಿಲ್ಲ; ಇದ್ದದ್ದು, ಕೈಜಾರುತ್ತಿದ್ದ ಭರವಸೆಯನ್ನು ಕೊನೆಯವರೆಗೂ ಹಿಡಿದುಕೊಳ್ಳಬೇಕೆಂಬ ಹತಾಶ ಪ್ರಯತ್ನ ಮಾತ್ರ.
ವೈದ್ಯರು ಮೌನವಾಗಿ ತಲೆ ಆಡಿಸಿದರು. “ನಾವು ಮತ್ತೊಮ್ಮೆ ಪರಿಶೀಲಿಸಿದ್ದೇವೆ. ಬೆಳವಣಿಗೆ ಆರು ವಾರ ಎರಡು ದಿನಗಳಲ್ಲೇ ನಿಂತಿದೆ. ಹೃದಯಬಡಿತ ಕಾಣುತ್ತಿಲ್ಲ.”
ವೈದೇಹಿ ತನ್ನ ಹೊಟ್ಟೆಯ ಮೇಲೆ ಕೈ ಇಟ್ಟುಕೊಂಡಳು. ಅಲ್ಲಿ ನೋವಿರಲಿಲ್ಲ. ರಕ್ತಸ್ರಾವವೂ ಇರಲಿಲ್ಲ. ಬೆಳಿಗ್ಗೆಯವರೆಗೂ ಗರ್ಭಧಾರಣೆಯ ಲಕ್ಷಣಗಳಿದ್ದವು. ಇಷ್ಟೆಲ್ಲ ಇದ್ದೂ ತನ್ನೊಳಗಿನ ಪುಟ್ಟ ಜೀವ ಮೌನವಾಗಿ ಹೊರಟುಹೋಗಿದೆ ಎನ್ನುವುದನ್ನು ಅವಳ ಮನಸ್ಸು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ.
“ಅಂದರೆ… ಈ ಸಲವೂ ಹಿಂದಿನ ಬಾರಿಯಂತೆಯೇ ಆಯಿತಾ, ಡಾಕ್ಟರ್??” ವೈದ್ಯರು ಅವಳತ್ತ ಸಹಾನುಭೂತಿಯಿಂದ ನೋಡಿದರು. ಅಂದು ಬೆಳಿಗ್ಗೆ ತಾನೇ ಬಿದ್ದ ಕನಸಿನಿಂದ ವಿಚಲಿತಳಾಗಿದ್ದ ವೈದೇಹಿ, ಭಯದಿಂದಲೇ ವೈದ್ಯರ ಕೊಠಡಿಯಲ್ಲಿ ಪರೀಕ್ಷೆಗೆ ಕುಳಿತಿದ್ದಳು. ಆ ಕನಸಿನಂತೆಯೇ ಇಲ್ಲಿ ನಡೆದಾಗೆ, ಅವಳ ಜೀವವೇ ಕೈ ಬಿಟ್ಟಂತಾಗಿತ್ತು. 

 

 

 

ಆಸ್ಪತ್ರೆಯಿಂದ ಹೊರಬಂದಾಗ ಜೋರಾಗಿ  ಮಳೆ ಸುರಿಯುತ್ತಿತ್ತು. ಜನರು ಛತ್ರಿ ಹಿಡಿದು ಓಡುತ್ತಿದ್ದರು. ವಾಹನಗಳ ಬೆಳಕು ನೀರಿನ ಮೇಲೆ ಮುರಿದು ಬಣ್ಣಬಣ್ಣವಾಗಿ ಹರಡುತ್ತಿತ್ತು. ಆದಿತ್ಯ ಕಾರನ್ನು ತರಲು ಹೋದ. ವೈದೇಹಿ ಆಸ್ಪತ್ರೆಯ ಮೆಟ್ಟಿಲ ಮೇಲೆ ಒಬ್ಬಳೇ ನಿಂತಳು. ಅವಳ ಕಣ್ಣೀರು ಮಳೆಯೊಂದಿಗೆ ಬೆರೆತದ್ದರಿಂದ ಯಾರಿಗೂ ಕಾಣಿಸಲಿಲ್ಲ. 
ಅಷ್ಟರಲ್ಲಿ ಎಲ್ಲಿಂದಲೋ ಪರಿಚಿತವಾದ ಒಂದು ಧ್ವನಿ ಅವಳಿಗೆ ಕೇಳಿಸಿತು.
“ವೈದೇಹಿ… ಇದು ನಿನ್ನ ಕಥೆಯ ಕೊನೆಯ ಪುಟವಲ್ಲ. ಈ ಸಮಯವೂ ಕಳೆದುಹೋಗುತ್ತದೆ. ನೀನು ಒಬ್ಬಳೇ ಅಲ್ಲ.”
ಅವಳು ಬೆಚ್ಚಿ ಹಿಂದೆ ತಿರುಗಿದಳು. ಯಾರೂ ಇರಲಿಲ್ಲ. ಹಳದಿ ಬೀದಿದೀಪದ ಕೆಳಗೆ ಮಳೆ ನಿರಂತರವಾಗಿ ಸುರಿಯುತ್ತಿತ್ತು. ಆ ಮಾತು ಅವಳಿಗೆ ಹೊಸದಲ್ಲ. ಜೀವನದಲ್ಲಿ ತುಂಬಾ ಒಂಟಿಯಾಗಿದ್ದ ಕೆಲವು ಕ್ಷಣಗಳಲ್ಲಿ, ಎಲ್ಲರ ಮುಂದೆ ನಗುತ್ತಾ ಒಳಗಿನಿಂದ ಕುಸಿದ ಕೆಲವು ದಿನಗಳಲ್ಲಿ, ಅದೇ ಮಾತು ಅವಳ ಮನಸ್ಸಿನಲ್ಲಿ ಮೂಡುತ್ತಿತ್ತು. ಅದು ಯಾರೋ ಹಿಂದೆ ಹೇಳಿದ್ದ ಮಾತೋ, ತನ್ನದೇ ಮನಸ್ಸು ತನಗೆ ನೀಡುತ್ತಿದ್ದ ಸಾಂತ್ವನವೋ ಎಂಬುದನ್ನು ಅವಳು ಎಂದಿಗೂ ಗಂಭೀರವಾಗಿ ಯೋಚಿಸಿರಲಿಲ್ಲ. ಆದರೆ ಆ ಕ್ಷಣದಲ್ಲಿ ಅದೊಂದೇ ಮಾತು ಅವಳನ್ನು ನಿಂತಲ್ಲೇ ಕುಸಿದುಬೀಳದಂತೆ ಹಿಡಿದಿತ್ತು.

ಕಾರಿನಲ್ಲಿ ಮನೆಗೆ ಮರಳುವಾಗ ಆದಿತ್ಯ ಎರಡು ಬಾರಿ ಮಾತು ಆರಂಭಿಸಿ ನಿಲ್ಲಿಸಿದ. ಕೊನೆಗೆ, “ಮುಂದೇನು ಮಾಡಬೇಕು ಎಂದು ವೈದ್ಯರು ಹೇಳಿದ್ದನ್ನು ಕೇಳಿಸಿಕೊಂಡಿದ್ದೀಯಾ?” ಎಂದ.
“ಕೇಳಿಸಿಕೊಂಡಿದ್ದೇನೆ.”
“ನಾಳೆ ಔಷಧಿ ತೆಗೆದುಕೊಳ್ಳಬೇಕಂತೆ.”
“ಗೊತ್ತು.”
“ನೀನು ಅಳಬೇಕಿದ್ದರೆ ಅಳು ವೈದೇಹಿ. ಹೀಗೆ ಕಿಟಕಿಯಿಂದ ಹೊರಗೆ ನೋಡುತ್ತಾ ಕುಳಿತುಕೊಳ್ಳಬೇಡ.”
ಅವಳು ನಿಧಾನವಾಗಿ ಅವನತ್ತ ತಿರುಗಿದಳು. “ಅಳುವುದಕ್ಕೂ ಶಕ್ತಿ ಬೇಕು ಆದಿತ್ಯ. ಈಗ ನನ್ನಲ್ಲಿ ಅಷ್ಟು ಶಕ್ತಿಯೂ ಇಲ್ಲ.”
ಆದಿತ್ಯ ಸ್ಟೀರಿಂಗ್ ಮೇಲೆ ಬೆರಳು ಬಿಗಿಗೊಳಿಸಿದ. ಅವನು ಕೆಟ್ಟವನಲ್ಲ. ಆದರೆ ದುಃಖದ ಎದುರು ಯಾವ ಮಾತು ಬಳಸಬೇಕು ಎಂದು ತಿಳಿಯದವನು. ಮುರಿದ ಕುರ್ಚಿಯನ್ನು ಸರಿಪಡಿಸಬಲ್ಲ, ವ್ಯವಹಾರದ ನಷ್ಟಕ್ಕೆ ಲೆಕ್ಕ ಹಾಕಬಲ್ಲ, ಕಚೇರಿಯ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಬಲ್ಲ. ಆದರೆ ಹೆಂಡತಿಯ ಮನಸ್ಸು ಮುರಿದಾಗ ಯಾವ ಸಾಧನ ಬಳಸಬೇಕು ಎನ್ನುವುದನ್ನು ಯಾವ ಪುಸ್ತಕವೂ ಅವನಿಗೆ ಕಲಿಸಿರಲಿಲ್ಲ.

ಆ ರಾತ್ರಿ ವೈದೇಹಿಗೆ ನಿದ್ರೆ ಬರಲಿಲ್ಲ. ಕಿಟಕಿಯ ಮೇಲೆ ಮಳೆ ಬೆರಳುಗಳಿಂದ ತಟ್ಟಿದಂತೆ ಸದ್ದು ಮಾಡುತ್ತಿತ್ತು. ಆ ಸದ್ದಿನೊಳಗೆ ಅವಳ ಬಾಲ್ಯ ನಿಧಾನವಾಗಿ ಬಾಗಿಲು ತೆರೆದಿತ್ತು.

*** 

ಮಲೆನಾಡಿನ ಅಂಚಿನಲ್ಲಿದ್ದ ಪುಟ್ಟ ಊರು ಮಲ್ಲಿಗೆಪುರ. ಹೆಸರಿನಲ್ಲಿ ಮಲ್ಲಿಗೆಯಿದ್ದರೂ ಅವರ ಮನೆಯ ಹಿತ್ತಲಲ್ಲಿ ಬೆಳೆದದ್ದು ಎರಡು ಮೆಣಸಿನ ಗಿಡ ಮತ್ತು ಸದಾ ಒಣಗಲು ಹೊರಟ ತುಳಸಿ ಮಾತ್ರ. ವೈದೇಹಿಯ ತಂದೆ ಶ್ರೀಧರ ಸಹಕಾರಿ ಬ್ಯಾಂಕಿನಲ್ಲಿ ತಾತ್ಕಾಲಿಕ ನೌಕರ. ತಿಂಗಳ ಕೊನೆಯಲ್ಲಿ ಸಂಬಳ ಸಿಗುತ್ತದೆಯೋ ಇಲ್ಲವೋ ಎಂಬುದಕ್ಕಿಂತ, ಸಿಕ್ಕ ಸಂಬಳ ತಿಂಗಳ ಮಧ್ಯದವರೆಗೆ ಬರುತ್ತದೆಯೋ ಇಲ್ಲವೋ ಎಂಬುದೇ ಮನೆಯ ದೊಡ್ಡ ಚಿಂತೆ. ತಾಯಿ ಕಮಲಾ ಸೀರೆಗಳಿಗೆ ಫಾಲ್ ಹೊಲಿದು, ನೆರೆಮನೆಯ ಮಕ್ಕಳಿಗೆ ಪಾಠ ಹೇಳಿ ಮನೆಯ ಖರ್ಚಿಗೆ ಕೈಜೋಡಿಸುತ್ತಿದ್ದಳು. 
ವೈದೇಹಿ ಮನೆಯ ಹಿರಿಯ ಮಗಳು. ಅವಳ ನಂತರ ತಮ್ಮ ವಿನಯ. ಬಾಲ್ಯದಿಂದಲೇ ಅವಳಿಗೆ ಎರಡು ವಿಚಿತ್ರ ಅಭ್ಯಾಸಗಳಿದ್ದವು. ಒಂದನೆಯದು—ಏನೇ ನೋವಾದರೂ ಮೊದಲು ನಗುವುದು. ಎರಡನೆಯದು—ಹಳೆಯ ಪುಸ್ತಕಗಳ ಖಾಲಿ ಪುಟಗಳಲ್ಲಿ ತನ್ನದೇ ಶಾಲೆಗಳನ್ನು ಚಿತ್ರಿಸುವುದು. ಅವಳ ಚಿತ್ರದಲ್ಲಿದ್ದ ಶಾಲೆಗೆ ದೊಡ್ಡ ಗೇಟು ಇರಲಿಲ್ಲ. ಶುಲ್ಕ ಕಟ್ಟದ ಮಕ್ಕಳನ್ನು ಹೊರಗೆ ನಿಲ್ಲಿಸುವ ಶಿಕ್ಷಕರಿರಲಿಲ್ಲ. ಒಂದು ಕೊಠಡಿಯಲ್ಲಿ ಗಣಿತ, ಇನ್ನೊಂದರಲ್ಲಿ ಸಂಗೀತ, ಮೂರನೆಯದರಲ್ಲಿ ಚಿತ್ರಕಲೆ. ಮಧ್ಯದಲ್ಲಿ ದೊಡ್ಡ ಮರವೊಂದು; ಅದರ ಕೆಳಗೆ ದುಃಖವಾದಾಗ ಕುಳಿತುಕೊಳ್ಳಲು ಜಾಗ.
“ಇದು ಯಾವ ಶಾಲೆ?” ಎಂದು ವಿನಯ ಕೇಳುತ್ತಿದ್ದ.
“ನನ್ನ ಶಾಲೆ.”
“ನೀನೇ ಟೀಚರಾ?”
“ನಾನೇ ಟೀಚರ್, ನಾನೇ ಪ್ರಿನ್ಸಿಪಾಲ್, ನಾನೇ ಶುಲ್ಕ ಕೇಳದ ಕ್ಯಾಶಿಯರ್.”
“ಹಾಗಾದರೆ ನಾನೇನು?”
“ನೀನು ಪ್ರತಿದಿನ ತಡವಾಗಿ ಬರುವ ವಿದ್ಯಾರ್ಥಿ.” ಎಂದು ಅವನ ಕಾಲೆಳೆಯುತ್ತಿದ್ದಳು.
ವಿನಯ ಮುಖ ಉಬ್ಬಿಸಿಕೊಂಡರೆ ಅವಳು ತನ್ನ ಪೆನ್ಸಿಲ್ ಅವನಿಗೆ ಕೊಟ್ಟು ಸಮಾಧಾನ ಮಾಡುತ್ತಿದ್ದಳು.

ಓದಿನಲ್ಲಿ ವೈದೇಹಿ ಸದಾ ಮುಂದು. ಆದರೆ ಅವಳ ಬುದ್ಧಿವಂತಿಕೆಗೆ ಮನೆಯಲ್ಲಿ ವಿಶೇಷ ಮೇಜು ಸಿಗಲಿಲ್ಲ. ಅಡುಗೆಮನೆಯ ಹೊಗೆ ಕಡಿಮೆಯಾದ ನಂತರದ ನೆಲವೇ ಅವಳ ಓದುವ ಜಾಗ. ವಿದ್ಯುತ್ ಹೋದ ರಾತ್ರಿಗಳಲ್ಲಿ ಸೀಮೆಎಣ್ಣೆಯ ದೀಪದ ಬಳಿ ಕುಳಿತು ಓದುತ್ತಿದ್ದಳು. ಕಮಲಾ ಕೆಲವೊಮ್ಮೆ, “ಕಣ್ಣು ಹಾಳಾಗುತ್ತದೆ ಮಗಳೇ, ಮಲಗು,” ಎಂದರೆ, “ಕಣ್ಣು ಮುಚ್ಚಿದರೆ ಕನಸು ಕಾಣುತ್ತದೆ ಅಮ್ಮಾ. ತೆರೆದಿಟ್ಟರೆ ಅದನ್ನು ನನಸು ಮಾಡಬಹುದು,” ಎಂದು ನಗುತ್ತಿದ್ದಳು. 

*** 

ಪದವಿಪೂರ್ವ ಶಿಕ್ಷಣಕ್ಕೆ ಪಕ್ಕದ ಪಟ್ಟಣಕ್ಕೆ ಹೋಗಬೇಕಾಯಿತು. ಪ್ರತಿದಿನ ಎರಡು ಬಸ್ಸು ಬದಲಾಯಿಸಬೇಕಿತ್ತು. ಮೊದಲ ಬಸ್ಸಿನಲ್ಲಿ ಕಿಟಕಿಯ ಬಳಿ ಕುಳಿತು ಬೆಟ್ಟಗಳ ಮೇಲೆ ಇಳಿಯುತ್ತಿದ್ದ ಮಂಜನ್ನು ನೋಡುವುದು ಅವಳಿಗೆ ಇಷ್ಟ. ಆ ದಿನಗಳಲ್ಲಿ ಅವಳ ಮನಸ್ಸಿನಲ್ಲಿ ಮೊದಲ ಬಾರಿಗೆ ಅಸ್ಪಷ್ಟವಾದ ಒಂದು ಸ್ನೇಹದ ನೆರಳು ಮೂಡಿತ್ತು. ಅದಕ್ಕೆ ಹೆಸರು ಕೊಡುವಷ್ಟು ಧೈರ್ಯವೂ ಇರಲಿಲ್ಲ; ಮರೆತುಬಿಡುವಷ್ಟು ಸಾಮಾನ್ಯವೂ ಇರಲಿಲ್ಲ. ಗ್ರಂಥಾಲಯದ ಕಿಟಕಿಯ ಬಳಿ ಬಿದ್ದ ಮಳೆಯ ಹನಿಗಳು, ಹಳೆಯ ಹಾಡಿನ ಎರಡು ಸಾಲುಗಳು, ಪುಸ್ತಕದ ನಡುವೆ ಸಿಕ್ಕ ನೀಲಿ ಹೂವು—ಇಷ್ಟೇ ಅದರ ಗುರುತುಗಳು.
ಆ ಭಾವನೆ ಯಾವ ಸಂಬಂಧವಾಗಿಯೂ ಬೆಳೆಯಲಿಲ್ಲ. ಸಮಯವು ಅವರಿಬ್ಬರ ದಾರಿಗಳನ್ನು ಬೇರೆಬೇರೆ ಕಡೆಗೆ ಕರೆದೊಯ್ದಿತು. ಆದರೆ ಆ ವಯಸ್ಸಿನಲ್ಲಿ ಅನುಭವಿಸಿದ್ದ ಮುಗ್ಧತೆ, ಯಾರನ್ನಾದರೂ ಸಂಪೂರ್ಣವಾಗಿ ನಂಬಬಹುದೆಂಬ ಭರವಸೆ, ಅವಳೊಳಗೆ ಎಲ್ಲೋ ಉಳಿಯಿತು. ವರ್ಷಗಳು ಕಳೆದಂತೆ ಆ ನೆನಪು ವ್ಯಕ್ತಿಯೊಬ್ಬನಿಗಿಂತ ಹೆಚ್ಚಾಗಿ, ಬದುಕಿನ ಕಷ್ಟಗಳ ನಡುವೆ ಅವಳು ಮರಳಬಹುದಾದ ಮನಸ್ಸಿನ ಪುಟ್ಟ ಆಶ್ರಯವಾಯಿತು.

ಪದವಿ ಮುಗಿದ ನಂತರ ವೈದೇಹಿ ನಗರಕ್ಕೆ ಬಂದು ಬ್ಯಾಂಕೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಳು. ಮೊದಲ ಸಂಬಳ ಬಂದ ದಿನ ತಂದೆಗೆ ಹೊಸ ಚಪ್ಪಲಿ, ತಾಯಿಗೆ ಹಸಿರು ಸೀರೆ ಮತ್ತು ವಿನಯನಿಗೆ ಕೈಗಡಿಯಾರ ತಂದಳು. ತನಗಾಗಿ ಕೊಂಡದ್ದು ಇಪ್ಪತ್ತು ರೂಪಾಯಿಯ ಕಪ್ಪು ಪೆನ್ ಮಾತ್ರ.
“ನಿನಗೆ ಏನೂ ತೆಗೆದುಕೊಳ್ಳಲಿಲ್ಲವೇ?” ಎಂದು ಕಮಲಾ ಕೇಳಿದಳು.
“ತೆಗೆದುಕೊಂಡಿದ್ದೇನೆ ಅಮ್ಮಾ. ಇನ್ನು ಮುಂದೆ ತಿಂಗಳ ಕೊನೆಯಲ್ಲಿ ಅಪ್ಪನ ಮುಖದಲ್ಲಿ ಕಾಣುವ ಭಯ ಸ್ವಲ್ಪ ಕಡಿಮೆಯಾಗುತ್ತದೆ. ಅದಕ್ಕಿಂತ ದೊಡ್ಡ ವಸ್ತು ಯಾವ ಅಂಗಡಿಯಲ್ಲಿ ಸಿಗುತ್ತದೆ?”

ಕೆಲಸದಲ್ಲಿ ಅವಳು ಬೇಗ ಹೆಸರು ಗಳಿಸಿದಳು. ಲೆಕ್ಕದಲ್ಲಿ ತಪ್ಪಿಲ್ಲ, ಗ್ರಾಹಕರೊಂದಿಗೆ ಮಾತಿನಲ್ಲಿ ಅಹಂಕಾರವಿಲ್ಲ. ಆದರೆ ಅವಳೊಳಗಿನ ಶಾಲೆಯ ಕನಸು ಮೌನವಾಗಲಿಲ್ಲ. ಕಚೇರಿಯಿಂದ ಬಂದ ನಂತರ ಬಡಾವಣೆಯ ಮಕ್ಕಳಿಗೆ ಉಚಿತವಾಗಿ ಪಾಠ ಹೇಳುತ್ತಿದ್ದಳು. ಭಾನುವಾರಗಳಲ್ಲಿ ಮಹಿಳೆಯರಿಗೆ ಬ್ಯಾಂಕ್ ಖಾತೆ, ಉಳಿತಾಯ ಮತ್ತು ಸಾಲದ ಬಗ್ಗೆ ತಿಳಿಸುತ್ತಿದ್ದಳು.

*** 

ಆದಿತ್ಯನನ್ನು ಅವಳು ನೋಡಿದ್ದು ಒಂದು ಉದ್ಯಮ ತರಬೇತಿ ಕಾರ್ಯಕ್ರಮದಲ್ಲಿ. ಎತ್ತರದ ಧ್ವನಿಯಲ್ಲಿ ಮಾತನಾಡದ, ಆದರೆ ಹೇಳಬೇಕಾದದ್ದನ್ನು ನೇರವಾಗಿ ಹೇಳುವ ಸ್ವಭಾವ. ಅವನಿಗೆ ಯಂತ್ರಗಳು, ಕ್ಯಾಮೆರಾಗಳು, ತಂತಿಗಳು ಮತ್ತು ವ್ಯಾಪಾರದ ಯೋಜನೆಗಳ ಮೇಲೆ ಪ್ರೀತಿ. ವೈದೇಹಿಗೆ ಪುಸ್ತಕಗಳು, ಮಕ್ಕಳು, ಬಣ್ಣಗಳು ಮತ್ತು ಪದಗಳ ಮೇಲೆ ಪ್ರೀತಿ. ಇಬ್ಬರ ಪ್ರಪಂಚ ಬೇರೆ ಇದ್ದರೂ, ಬದುಕನ್ನು ಸ್ವಂತ ಕೈಯಿಂದ ಕಟ್ಟಿಕೊಳ್ಳಬೇಕು ಎಂಬ ಹಠ ಒಂದೇ ಆಗಿತ್ತು.
ಮದುವೆಯ ಮಾತು ಬಂದಾಗ ಆದಿತ್ಯ ಮೊದಲ ಭೇಟಿಯಲ್ಲೇ, “ನಾನು ಕವಿತೆ ಹೇಳುವ ಗಂಡನಾಗಲಾರೆ. ಆದರೆ ಸಂಕಷ್ಟ ಬಂದರೆ ಓಡಿ ಹೋಗುವುದಿಲ್ಲ,” ಎಂದಿದ್ದ.
ವೈದೇಹಿ ನಕ್ಕು, “ನನಗೆ ಪ್ರತಿದಿನ ಕವಿತೆ ಬೇಡ. ಆದರೆ ನಾನು ಮೌನವಾಗಿದ್ದಾಗಲೂ ಏನೋ ಹೇಳುತ್ತಿದ್ದೇನೆ ಎಂಬುದು ಅರ್ಥವಾದರೆ ಸಾಕು,” ಎಂದಳು.
“ಮೌನವನ್ನು ಅರ್ಥಮಾಡಿಕೊಳ್ಳಲು ತರಬೇತಿ ಇದೆಯಾ?”
“ಇಲ್ಲ. ಅದಕ್ಕೇ ಮದುವೆ ಬಹುಶಃ ಜೀವಮಾನಪೂರ್ತಿ ನಡೆಯುವ ತರಬೇತಿ.”
ಇಬ್ಬರೂ ನಕ್ಕಿದ್ದರು. ಆ ನಗುವಿನೊಳಗೆ ಭವಿಷ್ಯದ ಎಷ್ಟು ಕಠಿಣ ಪಾಠಗಳಿವೆ ಎಂಬುದು ಆಗ ಯಾರಿಗೂ ಗೊತ್ತಿರಲಿಲ್ಲ.

ಮದುವೆಯ ಮೊದಲ ವರ್ಷಗಳು ಓಡುತ್ತಿರುವ ರೈಲಿನಂತೆ ಕಳೆದವು. ಆದಿತ್ಯ ತನ್ನ ಭದ್ರತಾ ಉಪಕರಣಗಳ ವ್ಯವಹಾರವನ್ನು ಬೆಳೆಸುತ್ತಿದ್ದ. ವೈದೇಹಿ ಕೆಲಸ ಮತ್ತು ಮನೆಯನ್ನು ಸಮತೋಲನಗೊಳಿಸುತ್ತಿದ್ದಳು. ಹಣ ಹೆಚ್ಚಾಗಿರಲಿಲ್ಲ; ಕನಸುಗಳು ಮಾತ್ರ ದೊಡ್ಡವು. ಕೆಲ ತಿಂಗಳು ಕಚೇರಿಯ ಬಾಡಿಗೆ ಕಟ್ಟಿದರೆ ಮನೆಯ ಖರ್ಚು ಕಡಿಮೆಯಾಗುತ್ತಿತ್ತು. ಕೆಲ ತಿಂಗಳು ಗ್ರಾಹಕರ ಹಣ ತಡವಾದರೆ ವೈದೇಹಿಯ ಆಭರಣ ಅಡವಿಟ್ಟು ನೌಕರರ ಸಂಬಳ ಕೊಡಬೇಕಾಗುತ್ತಿತ್ತು.
ಒಮ್ಮೆ ವ್ಯಾಪಾರದಲ್ಲಿ ದೊಡ್ಡ ನಷ್ಟವಾಯಿತು. ರಾತ್ರಿ ಎರಡು ಗಂಟೆಯವರೆಗೆ ಲೆಕ್ಕಪತ್ರ ನೋಡಿ ಕುಳಿತಿದ್ದ ಆದಿತ್ಯ, “ಇದನ್ನು ಮುಚ್ಚಿಬಿಡೋಣ. ಸಾಕಾಯಿತು,” ಎಂದ.
ವೈದೇಹಿ ಅಡುಗೆಮನೆಯಿಂದ ಎರಡು ಗ್ಲಾಸ್ ಚಹಾ ತಂದು ಅವನ ಮುಂದೆ ಇಟ್ಟಳು. “ಮುಚ್ಚಬೇಕಾದರೆ ಮುಚ್ಚೋಣ. ಆದರೆ ಸೋತಿದ್ದೇವೆ ಎಂಬ ಕಾರಣಕ್ಕೆ ಅಲ್ಲ; ಬೇರೆ ದಾರಿ ಉತ್ತಮವೆಂದು ಕಂಡರೆ ಮಾತ್ರ.”
“ನಿನಗೆ ಭಯವಾಗುವುದಿಲ್ಲವಾ?”
“ತುಂಬಾ ಆಗುತ್ತದೆ.”
“ಹಾಗಿದ್ದರೂ ಇಷ್ಟು ಸಮಾಧಾನವಾಗಿ ಹೇಗೆ ಮಾತನಾಡುತ್ತೀಯ?”
“ಮನೆಯಲ್ಲಿ ಇಬ್ಬರೂ ಒಂದೇ ಸಮಯದಲ್ಲಿ ಹೆದರಿದರೆ ಬಾಗಿಲು ಯಾರು ಮುಚ್ಚುತ್ತಾರೆ?”
ಆದಿತ್ಯ ಮೊದಲ ಬಾರಿ ಅವಳ ಕೈ ಹಿಡಿದು, “ನೀನು ವಿಚಿತ್ರ ಹೆಂಗಸು,” ಎಂದ.
“ಅದನ್ನು ಮದುವೆಗೂ ಮುಂಚೆ ಗಮನಿಸಬೇಕಿತ್ತು.”

ನಷ್ಟದಿಂದ ಅವರು ನಿಧಾನವಾಗಿ ಹೊರಬಂದರು. ಆದರೆ ಜೀವನದ ಪ್ರತಿಯೊಂದು ಪರೀಕ್ಷೆಯೂ ಲೆಕ್ಕಪತ್ರದಂತೆ ಪರಿಹಾರವಾಗಲಿಲ್ಲ. ಮದುವೆಯಾಗಿ ವರ್ಷಗಳು ಕಳೆದರೂ ಮಗು ಆಗಲಿಲ್ಲ. ಮೊದಲಿಗೆ ಸಂಬಂಧಿಕರು ಮೃದುವಾಗಿ ಕೇಳಿದರು. ನಂತರ ಸಲಹೆ ನೀಡಿದರು. ಕೊನೆಗೆ ತೀರ್ಪು ಹೇಳತೊಡಗಿದರು. 
“ತುಂಬಾ ಕೆಲಸ ಮಾಡಬೇಡ.”
“ಆ ಶಾಲೆ, ಸಂಸ್ಥೆ ಎಲ್ಲ ನಂತರವೂ ಮಾಡಬಹುದು.”
“ಮೊದಲು ನಿಮ್ಮದೇ ಮಗು ಮುಖ್ಯ.”
ಪ್ರತಿಯೊಂದು ಮಾತಿನಲ್ಲೂ ‘ನಿಮ್ಮದೇ’ ಎಂಬ ಪದ ವೈದೇಹಿಗೆ ಚುಚ್ಚುತ್ತಿತ್ತು. ತಾಯಿಯಾಗುವ ಆಸೆ ಅವಳಿಗಿರಲಿಲ್ಲವೆಂದಲ್ಲ. ತಿಂಗಳು ತಡವಾದಾಗ ಮೌನವಾಗಿ ದಿನ ಎಣಿಸುತ್ತಿದ್ದಳು. ಪರೀಕ್ಷೆಯಲ್ಲಿ ಒಂದೇ ಗೆರೆ ಬಂದಾಗ ಯಾರಿಗೂ ತಿಳಿಯದಂತೆ ಕಸದ ಬುಟ್ಟಿಯ ತಳದಲ್ಲಿ ಅದನ್ನು ಮುಚ್ಚಿಡುತ್ತಿದ್ದಳು. ಆದರೆ ತನ್ನ ಗರ್ಭ ಖಾಲಿಯಿರುವುದರಿಂದ ತನ್ನ ಸಂಪೂರ್ಣ ಬದುಕೂ ಖಾಲಿ ಎನ್ನುವಂತೆ ಜನರು ಮಾತನಾಡುವುದನ್ನು ಅವಳು ಸಹಿಸಲಾರದೆ ಹೋಗುತ್ತಿದ್ದಳು. 

*** 

ಅದೇ ಸಮಯದಲ್ಲಿ ಬ್ಯಾಂಕಿನ ಕೆಲಸ ಬಿಟ್ಟು ಶಿಕ್ಷಣ ಕ್ಷೇತ್ರಕ್ಕೆ ಬರಲು ಅವಳು ನಿರ್ಧರಿಸಿದಳು. ಎಲ್ಲರೂ ವಿರೋಧಿಸಿದರು. 
“ಸ್ಥಿರವಾದ ಕೆಲಸ ಬಿಟ್ಟು ಮಕ್ಕಳಿಗೆ ಪಾಠ ಹೇಳುವ ಕೇಂದ್ರವೇ?” ಎಂದು ಶ್ರೀಧರ ಕೇಳಿದರು.
“ಅಪ್ಪಾ, ಸ್ಥಿರತೆ ಸಂಬಳದಲ್ಲಿ ಮಾತ್ರ ಇರುವುದಿಲ್ಲ. ಬೆಳಿಗ್ಗೆ ಎದ್ದಾಗ ಇಂದು ಮಾಡಬೇಕಾದ ಕೆಲಸಕ್ಕೆ ಅರ್ಥವಿದೆ ಎನ್ನಿಸುವುದೂ ಒಂದು ಸ್ಥಿರತೆ.”
ಆದಿತ್ಯ ಲೆಕ್ಕ ಹಾಕಿ ನೋಡಿದ. “ಮೊದಲ ಆರು ತಿಂಗಳು ಆದಾಯ ಇರದಿರಬಹುದು.”
“ನಾನು ಸಿದ್ಧ.”
“ನಷ್ಟವಾದರೆ?”
“ಮತ್ತೆ ಆರಂಭಿಸುತ್ತೇನೆ.”
“ಜನ ಬರದಿದ್ದರೆ?”
“ಮೊದಲಿಗೆ ಒಬ್ಬ ಮಗು ಬಂದರೂ ಸಾಕು.”
“ನೀನು ಯಾವ ಪ್ರಶ್ನೆಗೂ ಹೆದರುವುದಿಲ್ಲವೇ?”
“ಹೆದರುತ್ತೇನೆ. ಆದರೆ ಭಯಕ್ಕೆ ಉತ್ತರ ಕೊಡುತ್ತಾ ಕುಳಿತರೆ ಕನಸಿಗೆ ಸಮಯ ಸಿಗುವುದಿಲ್ಲ.”

ನಗರದ ಹೊರವಲಯದ ನೀಲಗಿರಿ ಬಡಾವಣೆಯಲ್ಲಿ ಎರಡು ಕೊಠಡಿಯ ಹಳೆಯ ಕಟ್ಟಡವನ್ನು ಬಾಡಿಗೆಗೆ ತೆಗೆದುಕೊಂಡಳು. ಗೋಡೆಯ ಬಣ್ಣ ಕಿತ್ತುಹೋಗಿತ್ತು. ಮಳೆ ಬಂದರೆ ಒಂದು ಮೂಲೆಯಲ್ಲಿ ನೀರು ಸುರಿಯುತ್ತಿತ್ತು. ಮೂರು ಮೇಜು, ಹನ್ನೆರಡು ಕುರ್ಚಿ, ಒಂದು ಬಿಳಿಹಲಗೆ—ಅಷ್ಟೇ ಆಸ್ತಿಯೊಂದಿಗೆ “ಸಹಜ ಶಿಕ್ಷಣ ಕೇಂದ್ರ” ಆರಂಭವಾಯಿತು.
ಮೊದಲ ದಿನ ಬಂದದ್ದು ಒಬ್ಬನೇ ವಿದ್ಯಾರ್ಥಿ—ಮೂರನೇ ತರಗತಿಯ ರೋಹನ್. ಅವನ ತಾಯಿ, “ಇವನಿಗೆ ಓದುವುದೇ ಇಷ್ಟವಿಲ್ಲ. ಎರಡು ಟ್ಯೂಷನ್‌ನಿಂದ ಹೊರಹಾಕಿದ್ದಾರೆ,” ಎಂದಳು. 
ವೈದೇಹಿ ಅವನಿಗೆ ಪುಸ್ತಕ ತೆಗೆಯಲು ಹೇಳಲಿಲ್ಲ. ಬಣ್ಣದ ಕಾಗದ ಕೊಟ್ಟು, “ನಿನಗೆ ಇಷ್ಟವಾದ ಮನೆ ಬಿಡಿಸು,” ಎಂದಳು. ಅವನು ಮನೆ ಬಿಡಿಸಲಿಲ್ಲ; ಬಾಗಿಲೇ ಇಲ್ಲದ ದೊಡ್ಡ ಬಸ್ ಬಿಡಿಸಿದ.
“ಇದಕ್ಕೆ ಬಾಗಿಲಿಲ್ಲವಲ್ಲ?”
“ಬಾಗಿಲಿದ್ದರೆ ಶಾಲೆಯವರು ಒಳಗೆ ಹತ್ತುತ್ತಾರೆ,” ಎಂದ.
ಆ ಒಂದೇ ವಾಕ್ಯದಿಂದ ಮಗುವಿಗೆ ಓದಿನ ಮೇಲೆ ದ್ವೇಷವಿಲ್ಲ, ಶಾಲೆಯಲ್ಲಿ ಅವನಿಗಾಗುತ್ತಿದ್ದ ಅವಮಾನದ ವಿಷಯವಾಗಿ  ಭಯವಿದೆ ಎಂಬುದು ಅವಳಿಗೆ ಅರ್ಥವಾಯಿತು. ಮೂರು ತಿಂಗಳಲ್ಲಿ ರೋಹನ್ ಸರಾಗವಾಗಿ ಓದಲು ಆರಂಭಿಸಿದ. ಅವನ ತಾಯಿ ಇನ್ನಿಬ್ಬರನ್ನು ಕಳುಹಿಸಿದಳು. ಹನ್ನೆರಡು ಕುರ್ಚಿಗಳು ತುಂಬಿದವು. ನಂತರ ಪಕ್ಕದ ಕೊಠಡಿಯನ್ನೂ ತೆಗೆದುಕೊಳ್ಳಬೇಕಾಯಿತು.
ವೈದೇಹಿ ಪ್ರತಿಯೊಂದು ಮಗುವನ್ನೂ ಒಂದೇ ವಿಧಾನದಲ್ಲಿ ಓದಿಸಲಿಲ್ಲ. ಯಾರಿಗಾದರೂ ಚಿತ್ರದಿಂದ, ಯಾರಿಗಾದರೂ ಹಾಡಿನಿಂದ, ಇನ್ನೊಬ್ಬರಿಗೆ ಆಟದಿಂದ ಪಾಠ ಹೇಳುತ್ತಿದ್ದಳು. “ಮಗು ನಿಧಾನವಾಗಿರಬಹುದು; ಅದರ ಮನಸ್ಸು ನಿಂತಿರುವುದಿಲ್ಲ,” ಎಂಬುದು ಅವಳ ನಂಬಿಕೆ. ವಾರಾಂತ್ಯದಲ್ಲಿ ಸಂಗೀತ, ನೃತ್ಯ, ಚಿತ್ರಕಲೆ ಮತ್ತು ಕಂಪ್ಯೂಟರ್ ತರಗತಿಗಳನ್ನು ಆರಂಭಿಸಿದಳು. ಹಲವು ವರ್ಷಗಳ ಹಿಂದೆ ಹಳೆಯ ಪುಸ್ತಕದಲ್ಲಿ ಬಿಡಿಸಿದ್ದ ಶಾಲೆಯ ಚಿತ್ರ ನಿಧಾನವಾಗಿ ಗೋಡೆ, ಬಾಗಿಲು ಮತ್ತು ಮಕ್ಕಳ ನಗು - ಇವುಗಳು ಜೀವ ಪಡೆದುಕೊಳ್ಳುತ್ತಿತ್ತು.

ಕೇಂದ್ರ ಬೆಳೆಯುತ್ತಿದ್ದಂತೆ ಹೊಸ ಸಹಾಯಕರ ಅಗತ್ಯವೂ ಎದುರಾಯಿತು. ಆದರೆ ದೊಡ್ಡ ಸಂಬಳ ಕೊಡುವಷ್ಟು ಆದಾಯ ಇನ್ನೂ ಇರಲಿಲ್ಲ. ಕಲಿಯುವ ಆಸೆಯಿರುವವರಿಗೆ ಕೆಲಸದ ಜೊತೆಗೆ ತರಬೇತಿ ನೀಡುವುದು ಅವಳ ಉದ್ದೇಶವಾಗಿತ್ತು. 
ಒಂದು ಸಂಜೆ ಸಿಬ್ಬಂದಿಯೊಂದಿಗೆ ಮಾತನಾಡುವಾಗ ವೈದೇಹಿ ತನ್ನ ಹಳೆಯ ಪುಸ್ತಕವೊಂದನ್ನು ತೋರಿಸಿದ್ದಳು. ಅದರ ಪುಟದಲ್ಲಿ ಮೂರು ಕೊಠಡಿಗಳು ಮತ್ತು ಮಧ್ಯದಲ್ಲಿ ದೊಡ್ಡ ಮರವಿರುವ ಶಾಲೆಯ ಚಿತ್ರವಿತ್ತು. 
“ಒಂದು ದಿನ ಇಂಥ ಶಾಲೆ ಕಟ್ಟಬೇಕು,” ಎಂದಳು.
“ದೊಡ್ಡ ಕಟ್ಟಡವಲ್ಲ. ಯಾವ ಮಗುವೂ ಹೆದರಿ ಒಳಗೆ ಬರಬೇಕಾಗದ ಜಾಗ.” - ಅಂದು ಅವಳ ಮಾತು ಕೇಳುತ್ತಿದ್ದವರಲ್ಲಿ ಯಾರೋ ಒಬ್ಬರು ಆ ಚಿತ್ರವನ್ನು ಬಹಳ ಹೊತ್ತು ನೋಡಿದ್ದರು. ಆದರೆ ವರ್ಷಗಳ ನಂತರ ಆ ನೆನಪು ತನ್ನ ಬದುಕಿನಲ್ಲಿ ಎಷ್ಟು ಮಹತ್ವ ಪಡೆಯುತ್ತದೆ ಎಂಬುದು ವೈದೇಹಿಗೆ ತಿಳಿದಿರಲಿಲ್ಲ.

ಕೇಂದ್ರ ಬೆಳೆಯುತ್ತಿದ್ದಂತೆ ವೈದೇಹಿಯ ಹೊಣೆಗಾರಿಕೆ ಹೆಚ್ಚಿತು. ಬೆಳಿಗ್ಗೆ ಪ್ರವೇಶ ವಿಚಾರಣೆ, ಮಧ್ಯಾಹ್ನ ಸಿಬ್ಬಂದಿ, ಸಂಜೆ ಮಕ್ಕಳು, ರಾತ್ರಿ ಲೆಕ್ಕ ಮತ್ತು ಮುಂದಿನ ದಿನದ ಯೋಜನೆ. 
ಒಂದು ದಿನ ಶಿಕ್ಷಕಿ ನಂದಿತಾ ಕೇಳಿದಳು, “ಮೇಡಂ, ನಿಮಗೆ ಯಾವಾಗಲೂ ಇಷ್ಟು ಶಕ್ತಿ ಹೇಗೆ ಬರುತ್ತದೆ?”
ವೈದೇಹಿ ನಗುತ್ತ, “ಮನೆಯಿಂದ ಎರಡು ಡಬ್ಬಿಯಲ್ಲಿ ತರುತ್ತೇನೆ. ಒಂದು ಊಟದ ಡಬ್ಬಿ, ಇನ್ನೊಂದು ನಟನೆಯ ಡಬ್ಬಿ,” ಎಂದಳು.
ಎಲ್ಲರೂ ನಕ್ಕರು. 
ಆದರೆ ಆ ರಾತ್ರಿ ಮನೆಗೆ ಹೋದ ಮೇಲೆ ಅವಳು ಸ್ನಾನಗೃಹದ ಬಾಗಿಲು ಹಾಕಿಕೊಂಡು ಅತ್ತಳು. ವೈದ್ಯರಿಂದ ಬಂದ ವರದಿ ಮೇಜಿನ ಮೇಲಿತ್ತು. ಗರ್ಭಧಾರಣೆಗೆ ವೈದ್ಯಕೀಯ ನೆರವು ಬೇಕಾಗಬಹುದು ಎಂದು ಅದರಲ್ಲಿ ತಿಳಿಸಲಾಗಿತ್ತು.
ಚಿಕಿತ್ಸೆಯ ಪಯಣ ಹೊರಗಿನಿಂದ ನೋಡಿದವರಿಗೆ ಆಸ್ಪತ್ರೆ ಭೇಟಿಗಳ ಸರಣಿ ಮಾತ್ರ. ವೈದೇಹಿಗೆ ಅದು ದೇಹ, ಹಣ, ಸಮಯ ಮತ್ತು ಭರವಸೆಯನ್ನು ಪ್ರತಿದಿನ ಪರೀಕ್ಷೆಗೆ ಇಡುವ ಯುದ್ಧವಾಗಿತ್ತು. ಬೆಳಿಗ್ಗೆ ಚುಚ್ಚುಮದ್ದು ತೆಗೆದುಕೊಂಡು ಸಂಜೆ ಮಕ್ಕಳ ಮುಂದೆ ನಗಬೇಕು. ಹೊಟ್ಟೆ ನೋವಿದ್ದರೂ ವಾರ್ಷಿಕ ಕಾರ್ಯಕ್ರಮದ ಅಭ್ಯಾಸ ನೋಡಬೇಕು. ರಕ್ತಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಾ ಪೋಷಕರಿಗೆ ಅವರ ಮಗುವಿನ ಪರೀಕ್ಷೆಯ ಬಗ್ಗೆ ಧೈರ್ಯ ಹೇಳಬೇಕು.
ಮೊದಲ ಪ್ರಯತ್ನದಲ್ಲಿ ಭರವಸೆ ಮೂಡಿತು. ಎರಡು ಗೆರೆ ಕಂಡ ಬೆಳಿಗ್ಗೆ ವೈದೇಹಿ ಪರೀಕ್ಷಾ ಪಟ್ಟಿಯನ್ನು ಎದೆಗೆ ಒತ್ತಿಕೊಂಡು ನಿಂತಳು. ಆದಿತ್ಯ ಅದನ್ನು ಮೂರು ಬಾರಿ ನೋಡಿ, “ಇದು ನಿಜವಾ?” ಎಂದು ಕೇಳಿದ.
“ಎರಡನೇ ಗೆರೆ ಸ್ವಲ್ಪ ಮಸುಕಾಗಿದೆ.”
“ಮಸುಕಾದರೂ ಗೆರೆ ಗೆರೆಯೇ.”
ಆ ದಿನ ಅವರು ದೊಡ್ಡ ಸಂಭ್ರಮ ಮಾಡಲಿಲ್ಲ. ಭಯ ಸಂತೋಷದ ಪಕ್ಕದಲ್ಲೇ ಕುಳಿತಿತ್ತು. ಆದರೂ ವೈದೇಹಿ ತನ್ನೊಳಗಿನ ಮಗುವಿಗೆ ಹೆಸರಿಲ್ಲದ ಪತ್ರಗಳನ್ನು ಬರೆಯತೊಡಗಿದಳು. - ‘ನೀನು ಬಂದರೆ ನಿನಗಾಗಿ ಪ್ರತ್ಯೇಕ ಆಕಾಶ ಕೊಡಲಾಗುವುದಿಲ್ಲ. ಆದರೆ ಮೋಡ ಬಂದಾಗ ಹೆದರದಂತೆ ಕಲಿಸುತ್ತೇನೆ. ನೀನು ಮೊದಲ ಸ್ಥಾನ ಪಡೆಯಲೇಬೇಕಿಲ್ಲ. ಸೋತಾಗಲೂ ಮನೆಗೆ ಬರಲು ಭಯವಾಗದಂತೆ ನೋಡಿಕೊಳ್ಳುತ್ತೇನೆ.’
ಮೊದಲ ಸ್ಕ್ಯಾನಿನಲ್ಲಿ ಪುಟ್ಟ ಹೃದಯಬಡಿತ ಕಾಣಿಸಿತು. ಆ ಶಬ್ದ ಅವಳಿಗೆ ದೇವಾಲಯದ ಗಂಟೆಗಿಂತ ಪವಿತ್ರವಾಗಿತ್ತು. ಆದರೆ ಕೆಲವು ವಾರಗಳ ನಂತರ ಅದೇ ಹೃದಯ ಮೌನವಾಯಿತು. ಬೆಳವಣಿಗೆ ನಿಂತಿತ್ತು.
ಆಸ್ಪತ್ರೆಯಿಂದ ಹಿಂದಿರುಗಿದ ನಂತರ ಮನೆಯವರು, ಸ್ನೇಹಿತರು, ಸಂಬಂಧಿಕರು ಸಾಂತ್ವನ ಹೇಳಿದರು. “ಮತ್ತೆ ಪ್ರಯತ್ನಿಸಬಹುದು,” ಎಂಬ ಮಾತು ಎಲ್ಲರಲ್ಲೂ ಇತ್ತು. ಆದರೆ ಕಳೆದುಹೋದ ಜೀವವನ್ನು ಮುಂದಿನ ಪ್ರಯತ್ನದ ಭರವಸೆಯಿಂದ ಬದಲಾಯಿಸಲಾಗುವುದಿಲ್ಲ ಎಂಬುದು ವೈದೇಹಿಗೆ ಮಾತ್ರ ಗೊತ್ತಿತ್ತು.
ಕೆಲ ದಿನಗಳ ನಂತರ ಅವಳು ಮತ್ತೆ ಕೇಂದ್ರಕ್ಕೆ ಹೋದಳು. ಮಕ್ಕಳು ಓಡಿ ಬಂದು ಅಪ್ಪಿಕೊಂಡರು. ರೋಹನ್ ಮಾಡಿದ್ದ ಕಾಗದದ ಹೂವನ್ನು ಕೊಟ್ಟು, “ಮೇಡಂ, ನೀವು ಆಸ್ಪತ್ರೆಯಿಂದ ಬಂದಿದ್ದೀರಂತೆ. ಈಗ ಚೆನ್ನಾಗಿದ್ದೀರಾ?” ಎಂದು ಕೇಳಿದ.
“ಚೆನ್ನಾಗಿದ್ದೇನೆ,” ಎಂದು ಅವಳು ನಕ್ಕಳು.
ಮಗು ಹೋದ ಮೇಲೆ ನಂದಿತಾ ಮೃದುವಾಗಿ ಕೇಳಿದಳು, “ನಿಜವಾಗಿಯೂ ಚೆನ್ನಾಗಿದ್ದೀರಾ?”
“ಇಲ್ಲ. ಆದರೆ ಮಕ್ಕಳಿಗೆ ಹೇಳಿದ ಸುಳ್ಳು ಕೆಲವೊಮ್ಮೆ ನಾಳೆಯ ಸತ್ಯವಾಗಬಹುದು. ಅದಕ್ಕಾಗಿ ಹೇಳಿದೆ.”
ಕಾಲ ಕಳೆದಿತು. ನೋವು ಮಾಯವಾಗಲಿಲ್ಲ; ಅದರ ಸುತ್ತ ಬದುಕು ಬೆಳೆಯಿತು. ಕೇಂದ್ರಕ್ಕೆ ಕಲಿಕೆಯಲ್ಲಿ ವಿಶೇಷ ನೆರವು ಬೇಕಾದ ಮಕ್ಕಳು ಹೆಚ್ಚಾಗಿ ಬರತೊಡಗಿದರು. ಅವರಿಗಾಗಿ ಮನೋವಿಜ್ಞಾನ ಮತ್ತು ವಿಶೇಷ ಶಿಕ್ಷಣದ ಅಧ್ಯಯನ ಆರಂಭಿಸಿದಳು. ಮಗು ಯಾಕೆ ಮೌನವಾಗುತ್ತದೆ, ಯಾಕೆ ಕೋಪಗೊಳ್ಳುತ್ತದೆ, ಯಾಕೆ ಒಂದೇ ವಿಷಯವನ್ನು ಮರುಮರು ಮಾಡುತ್ತದೆ—ಇವುಗಳ ಹಿಂದೆ ಇರುವ ಕಾರಣಗಳನ್ನು ತಿಳಿಯಲು ಪ್ರಯತ್ನಿಸಿದಳು.

***

ಎರಡನೇ ಚಿಕಿತ್ಸೆಗೆ ಹಣ ಹೊಂದಿಸುವುದೇ ದೊಡ್ಡ ಸಮಸ್ಯೆಯಾಯಿತು. ಮೊದಲ ಪ್ರಯತ್ನದ ಸಾಲ ಇನ್ನೂ ಮುಗಿದಿರಲಿಲ್ಲ. ಆದಿತ್ಯ ವ್ಯವಹಾರದ ಒಂದು ಯೋಜನೆಯನ್ನು ಮುಂದೂಡಿದ. ವೈದೇಹಿ ತನ್ನ ಉಳಿತಾಯ ತೆರೆದಳು. ಇಬ್ಬರೂ ಲೆಕ್ಕ ಹಾಕುತ್ತಾ ಕುಳಿತಾಗ ಅಂಕಿಗಳ ನಡುವೆ ಅವರ ಆಸೆಯ ಬೆಲೆ ಕಾಣುತ್ತಿತ್ತು. 
“ಇಷ್ಟೆಲ್ಲ ಖರ್ಚು ಮಾಡಿ ಮತ್ತೆ…” ಆದಿತ್ಯ ಮಾತು ನಿಲ್ಲಿಸಿದ.
“ಮತ್ತೆ ಸೋತರೆ ಎಂದು ಕೇಳಬೇಕಾ?”
“ಹೌದು.”
“ಆಗ ನೋವು ಇರುತ್ತದೆ. ಸಾಲವೂ ಇರುತ್ತದೆ. ಆದರೆ ಪ್ರಯತ್ನಿಸಲೇ ಇಲ್ಲ ಎಂಬ ಪ್ರಶ್ನೆ ಇರದು.”
“ನಿನಗೆ ಬೇಕಾದ್ದು ಮಗುನಾ ಅಥವಾ ಗರ್ಭಧಾರಣೆಯ ಅನುಭವನಾ?”
ವೈದೇಹಿ ಅವನತ್ತ ದೀರ್ಘವಾಗಿ ನೋಡಿದಳು. “ಈ ಪ್ರಶ್ನೆಯನ್ನು ನಾನೇ ನನಗೆ ಕೇಳಿಕೊಳ್ಳಲು ಹೆದರುತ್ತಿದ್ದೆ.”
ಆದಿತ್ಯ ಮೌನವಾದ. ಆ ಪ್ರಶ್ನೆಯ ಉತ್ತರ ಆಗ ಅವರಿಬ್ಬರಲ್ಲೂ ಇರಲಿಲ್ಲ.

ಎರಡನೇ ಪ್ರಯತ್ನ ಆರಂಭವಾಯಿತು. ಈ ಬಾರಿ ವೈದೇಹಿ ಭರವಸೆಯನ್ನು ಜೋರಾಗಿ ಮಾತನಾಡಲು ಬಿಡಲಿಲ್ಲ. ಔಷಧಿಯ ಸಮಯ, ಪರೀಕ್ಷೆ, ಆಹಾರ—ಎಲ್ಲವನ್ನೂ ಕಟ್ಟುನಿಟ್ಟಾಗಿ ಪಾಲಿಸಿದಳು. ಮತ್ತೆ ಎರಡು ಗೆರೆ ಮೂಡಿದವು. ಮತ್ತೆ ರಕ್ತಪರೀಕ್ಷೆಯ ಸಂಖ್ಯೆಗಳು ಏರಿದವು. ಮತ್ತೆ ಸ್ಕ್ಯಾನಿನಲ್ಲಿ ಪುಟ್ಟ ಚೀಲ ಕಾಣಿಸಿತು.
ಆದರೆ ಅವಳು ಮಗುವಿಗೆ ಪತ್ರ ಬರೆಯಲಿಲ್ಲ. ಬಟ್ಟೆ ಖರೀದಿಸಲಿಲ್ಲ. ಸಂತೋಷಪಟ್ಟರೆ ವಿಧಿಗೆ ತಿಳಿದುಹೋಗಬಹುದು ಎಂಬಂತೆ ಅದನ್ನು ಮನಸ್ಸಿನ ಒಳಕೋಣೆಯಲ್ಲಿ ಬೀಗ ಹಾಕಿಟ್ಟಳು.
ಒಂದು ರಾತ್ರಿ ಕಿಟಕಿಯ ಹೊರಗೆ ಮಳೆ ಬರುತ್ತಿತ್ತು. ವೈದೇಹಿ ಹೊಟ್ಟೆಯ ಮೇಲೆ ಕೈ ಇಟ್ಟು ಮೌನವಾಗಿ ಕುಳಿತಿದ್ದಳು. ಅದೇ ಪರಿಚಿತ ಧ್ವನಿ ಕೇಳಿಸಿತು.
“ಭಯದಿಂದ ಪ್ರೀತಿಯನ್ನು ತಡೆಬೇಡ ವೈದೇಹಿ. ಉಳಿಯುವುದಕ್ಕೆ ಮಾತ್ರ ಪ್ರೀತಿಸಬೇಕೆಂದಿಲ್ಲ.”
ಅವಳ ಕಣ್ಣು ತುಂಬಿ ಬಂದು ಮನಸ್ಸಿನೊಳಗೆ ಮಾತೊಂದು ಮೂಡಿತು - “ಹಾಗಾದರೆ ಹೋಗುವುದನ್ನು ಹೇಗೆ ಸಹಿಸಲಿ?” ಎಂದು ಅವಳು ಕತ್ತಲಿಗೆ ಕೇಳಿದಳು. ಉತ್ತರ ಸಿಗಲಿಲ್ಲ.
ಆದರೂ ಮರುದಿನ ಅವಳು ತನ್ನ ಹುಟ್ಟದ ಮಗುವಿಗೆ ಮೊದಲ ಪತ್ರ ಬರೆದಳು. - ‘ನೀನು ಎಷ್ಟು ದಿನ ನನ್ನೊಳಗೆ ಇರುವೆಯೋ ನನಗೆ ಗೊತ್ತಿಲ್ಲ. ಆದರೆ ನೀನು ಇರುವ ಪ್ರತಿದಿನವೂ ನಾನು ನಿನ್ನ ತಾಯಿ. ಭಯದಿಂದ ನಿನ್ನನ್ನು ಕಡಿಮೆ ಪ್ರೀತಿಸುವುದಿಲ್ಲ.’
ಕೆಲವೇ ದಿನಗಳಲ್ಲಿ ವೈದ್ಯರು ಎರಡನೇ ಬಾರಿಯೂ ಅದೇ ಸುದ್ದಿ ಹೇಳಿದರು.
ಆಸ್ಪತ್ರೆಯ ಮೆಟ್ಟಿಲ ಮೇಲೆ ಮಳೆಯಲ್ಲಿ ನಿಂತಿದ್ದ ಕ್ಷಣದಿಂದ  ಅವಳ ಬದುಕು ಮತ್ತೊಂದು ದಿಕ್ಕಿಗೆ ತಿರುಗತೊಡಗಿತು.
ಔಷಧಿಯ ನಂತರದ ದಿನಗಳು ದೇಹಕ್ಕೂ ಮನಸ್ಸಿಗೂ ಕಠಿಣವಾಗಿದ್ದವು. ವೈದೇಹಿ ಹಾಸಿಗೆಯಲ್ಲಿ ಮಲಗಿದ್ದಾಗ ಆದಿತ್ಯ ಅಡುಗೆಮನೆಯಲ್ಲಿ ಸಾರು ಮಾಡಲು ಹೋಗಿ ಉಪ್ಪಿನ ಬದಲು ಸಕ್ಕರೆ ಹಾಕಿದ. ಒಂದು ತುತ್ತು ಬಾಯಿಗೆ ಹಾಕಿದ ವೈದೇಹಿ ಅವನತ್ತ ನೋಡಿದಳು.
“ಹೇಗಿದೆ?” ಎಂದು ಅವನು ಆತಂಕದಿಂದ ಕೇಳಿದ.
“ನಮ್ಮ ಜೀವನದಂತೆ ಇದೆ.”
“ಅಂದರೆ?”
“ಸಾರು ಎಂದುಕೊಂಡರೆ ಸಿಹಿ. ಸಿಹಿ ಎಂದುಕೊಂಡರೆ ಖಾರ.”
ಬಹಳ ದಿನಗಳ ನಂತರ ಇಬ್ಬರೂ ನಕ್ಕರು. ನಗುತ್ತಲೇ ವೈದೇಹಿಯ ಕಣ್ಣೀರು ಬಂತು. ಆದಿತ್ಯ ಈ ಬಾರಿ ಅವಳಿಗೆ ‘ಅಳಬೇಡ’ ಎನ್ನಲಿಲ್ಲ. ಪಾತ್ರೆಯನ್ನು ಪಕ್ಕಕ್ಕೆ ಇಟ್ಟು ಅವಳ ಬಳಿ ಕುಳಿತ. ಅವಳು ಅವನ ಭುಜದ ಮೇಲೆ ತಲೆ ಇಟ್ಟಳು.
“ನಾನು ಮತ್ತೆ ಇದಕ್ಕೆ ಸಿದ್ಧಳಿಲ್ಲ ಆದಿತ್ಯ,” ಎಂದಳು.
“ನಾನೂ ಇಲ್ಲ.”
“ನಮ್ಮ ಬಳಿ ಇನ್ನೊಂದು ಪ್ರಯತ್ನಕ್ಕೆ ಬೇಕಾದಷ್ಟು ಹಣವೂ ಇಲ್ಲ.”
“ಹಣ ಬಂದರೂ?”
ವೈದೇಹಿ ಬಹಳ ಹೊತ್ತು ಉತ್ತರಿಸಲಿಲ್ಲ. “ನನ್ನ ದೇಹವನ್ನು ಮತ್ತೆ ಭರವಸೆಯ ಪರೀಕ್ಷಾ ಕೊಠಡಿಗೆ ಕಳುಹಿಸಲು ಮನಸ್ಸಿಲ್ಲ.”
“ಹಾಗಾದರೆ ಕಳುಹಿಸಬೇಡ.”
“ನಿನಗೆ ಮಗು ಬೇಕಲ್ಲವಾ?”
ಆದಿತ್ಯ ಕಿಟಕಿಯ ಹೊರಗೆ ನೋಡಿದ. “ನನಗೆ ನಿನ್ನೊಂದಿಗೆ ಬದುಕು ಬೇಕು. ಅದರಲ್ಲಿ ಮಗು ಬಂದರೆ ಸಂತೋಷ. ಆದರೆ ಮಗು ಪಡೆಯಲು ಹೋಗಿ ನಿನ್ನನ್ನೇ ಕಳೆದುಕೊಳ್ಳುವುದು ಬೇಡ.”
ಆ ಮಾತು ವೈದೇಹಿಯೊಳಗೆ ಬಹುಕಾಲ ಮುಚ್ಚಿದ್ದ ಬಾಗಿಲೊಂದನ್ನು ತೆರೆದಿತು. ಆದರೂ ದತ್ತು ಎಂಬ ಪದವನ್ನು ಉಚ್ಚರಿಸಲು ಅವಳಿಗೆ ಇನ್ನೂ ಕೆಲವು ವಾರ ಬೇಕಾಯಿತು. 

 ***

ಒಂದು ಸಂಜೆ ಕೇಂದ್ರದ ಮಕ್ಕಳು ತೆರಳಿದ ನಂತರ, ಆರು ವರ್ಷದ ಅನನ್ಯಾ ತನ್ನ ತಾಯಿ ಬರದೇ ಇರುವುದರಿಂದ ಕುರ್ಚಿಯಲ್ಲಿ ಮಲಗಿಬಿಟ್ಟಿದ್ದಳು. ವೈದೇಹಿ ಅವಳ ತಲೆಯ ಕೆಳಗೆ ಚೀಲ ಇಟ್ಟು, ಕೂದಲು ಸರಿಪಡಿಸಿದಳು. ನಿದ್ರೆಯಲ್ಲಿದ್ದ ಮಗು ಅವಳ ಬೆರಳನ್ನು ಹಿಡಿದು “ಅಮ್ಮಾ…” ಎಂದಿತು. ಕ್ಷಣಕಾಲ ವೈದೇಹಿಯ ಉಸಿರು ನಿಂತಿತು. ತಕ್ಷಣ ಮಗು ಎಚ್ಚರಗೊಂಡು ಕೈ ಬಿಟ್ಟು, “ಸಾರಿ ಮೇಡಂ, ಅಮ್ಮ ಅಂತ ಅಂದುಕೊಂಡೆ,” ಎಂದಿತು.
“ಸಾರಿ ಯಾಕೆ? ಅಮ್ಮ ಎಂದು ಕರೆದರೆ ಶುಲ್ಕ ಹೆಚ್ಚಾಗುವುದಿಲ್ಲ,” ಎಂದು ವೈದೇಹಿ ನಕ್ಕಳು.
ಆದರೆ ಆ ರಾತ್ರಿ ಮನೆಗೆ ಬಂದು ಆದಿತ್ಯನ ಮುಂದೆ ಕುಳಿತು, “ನಾವು ಒಂದು ಮಗುವನ್ನು ದತ್ತು ತೆಗೆದುಕೊಳ್ಳೋಣವಾ?” ಎಂದು ಕೇಳಿದಳು.
ಆದಿತ್ಯ ತಕ್ಷಣ ಉತ್ತರಿಸಲಿಲ್ಲ. “ಇದು ಇಂದಿನ ನೋವಿನಿಂದ ಬಂದ ನಿರ್ಧಾರವಾ?”
“ಇಲ್ಲ. ನನ್ನೊಳಗೆ ಬಹಳ ವರ್ಷಗಳಿಂದ ಕುಳಿತಿದ್ದ ಪ್ರಶ್ನೆಗೆ ಇಂದು ಧ್ವನಿ ಬಂದಿದೆ.”
“ನಿನಗೆ ಮತ್ತೊಬ್ಬರ ಮಗುವನ್ನು…”
ವೈದೇಹಿ ಅವನ ಮಾತನ್ನು ತಡೆದಳು. “ದತ್ತು ಪಡೆದ ಕ್ಷಣದಿಂದ ಅದು ಮತ್ತೊಬ್ಬರ ಮಗು ಆಗಿರುವುದಿಲ್ಲ. ಆದರೆ ನಾವು ನಮ್ಮ ಖಾಲಿತನ ತುಂಬಿಕೊಳ್ಳಲು ಮಗುವನ್ನು ತರಬಾರದು. ಮಗುವಿನ ನೋವು, ನೆನಪು, ಭಯ—ಎಲ್ಲದರ ಜೊತೆಗೆ ಬದುಕಲು ಸಿದ್ಧರಾಗಿದ್ದರೆ ಮಾತ್ರ ತರಬೇಕು.”
ಆದಿತ್ಯ ನಿಧಾನವಾಗಿ ತಲೆ ಆಡಿಸಿದ. “ನನಗೆ ಯೋಚಿಸಲು ಸ್ವಲ್ಪ ಸಮಯ ಕೊಡು.”
ವೈದೇಹಿ ಒಪ್ಪಿಕೊಂಡಳು. ಅವಳು ಅವನ ಮೇಲೆ ಒತ್ತಡ ಹಾಕಲಿಲ್ಲ. ತಾಯಿಯಾಗುವ ನಿರ್ಧಾರ ತನ್ನದೊಬ್ಬಳದೇ ಅಲ್ಲ; ತಂದೆಯಾಗುವ ಜವಾಬ್ದಾರಿಯನ್ನು ಅವನೂ ಮನಃಪೂರ್ವಕವಾಗಿ ಸ್ವೀಕರಿಸಬೇಕು ಎಂದು ತಿಳಿದಿದ್ದಳು.
ಕೆಲ ದಿನಗಳ ನಂತರ ಆದಿತ್ಯ ಅವಳನ್ನು ನಗರದ ಹೊರವಲಯಕ್ಕೆ ಕರೆದುಕೊಂಡು ಹೋದ. ಅಲ್ಲಿ ಹಳೆಯ ಮಾವಿನ ಮರದ ಕೆಳಗೆ ಒಂದು ಖಾಲಿ ಜಾಗವಿತ್ತು.
“ಇಲ್ಲಿಗೆ ಯಾಕೆ?”
ಅವನು ಜೇಬಿನಿಂದ ಮಡಚಿದ ಕಾಗದ ತೆಗೆದ. ಅದರಲ್ಲಿ ಮಕ್ಕಳ ಕೊಠಡಿಯ ಸರಳ ನಕ್ಷೆ ಇತ್ತು. “ನಮ್ಮ ಮನೆಗೆ ಇನ್ನೊಂದು ಕೊಠಡಿ ಸೇರಿಸಲು ಎಂಜಿನಿಯರ್ ಜೊತೆ ಮಾತನಾಡಿದ್ದೇನೆ. ಮಗು ಬಂದರೆ ಅದಕ್ಕೆ ಜಾಗ ಬೇಕಲ್ಲ.”
ವೈದೇಹಿ ಕಾಗದ ನೋಡುತ್ತ ನಿಂತಳು.
“ಆದರೆ ಗೋಡೆಗೆ ಗುಲಾಬಿ ಅಥವಾ ನೀಲಿ ಬಣ್ಣವನ್ನು ಈಗಲೇ ಆರಿಸಬೇಡ,” ಎಂದ ಆದಿತ್ಯ. “ಮಗುವಿಗೇ ಕೇಳೋಣ.”
ಅವಳು ನಗುತ್ತ ಅವನ ಕೈ ಹಿಡಿದಳು. ಜೀವನಪೂರ್ತಿ ನಡೆಯುವ ತರಬೇತಿಯಲ್ಲಿ ಆದಿತ್ಯ ಆ ದಿನ ಮೌನದ ಒಂದು ಪಾಠವನ್ನು ಸರಿಯಾಗಿ ಕಲಿತಿದ್ದ.

ದತ್ತು ಪ್ರಕ್ರಿಯೆ ಅವರು ಊಹಿಸಿದಷ್ಟು ಸರಳವಾಗಿರಲಿಲ್ಲ. ದಾಖಲೆಗಳು, ಪರಿಶೀಲನೆಗಳು, ಸಲಹಾ ಸಭೆಗಳು, ಕಾಯುವಿಕೆ. ಕೆಲವರು ಬೆಂಬಲಿಸಿದರು. ಕೆಲವರು ಪ್ರಶ್ನಿಸಿದರು.
“ಯಾವ ಕುಟುಂಬದ ಮಗು ಗೊತ್ತಿಲ್ಲ.”
“ಮುಂದೆ ಸ್ವಭಾವ ಹೇಗಿರುತ್ತದೆ?”
“ಸ್ವಂತ ಮಗು ಆಗುವ ಸಾಧ್ಯತೆ ಇನ್ನೂ ಇದೆ, ಸ್ವಲ್ಪ ಕಾಯಿರಿ.”
ವೈದೇಹಿ ಒಂದು ದಿನ ಬೇಸರದಿಂದ, “ಸ್ವಂತ ಮಗು ಎಂದರೆ ಏನು? ಅದರ ಕಣ್ಣಿನ ಬಣ್ಣ ನಮ್ಮಂತಿರಬೇಕಾ? ಅಥವಾ ಅದು ಅತ್ತಾಗ ನಮ್ಮ ನಿದ್ರೆ ಹಾಳಾಗಬೇಕಾ?” ಎಂದು ಕೇಳಿದಳು. ಆಮೇಲೆ ಸಂಬಂಧಿಕರು ಅವಳ ಮುಂದೆ ಸಲಹೆ ನೀಡುವುದನ್ನು ಕಡಿಮೆ ಮಾಡಿದರು.

 ***

ಒಂಬತ್ತು ತಿಂಗಳಷ್ಟು ಕಾಯುವಿಕೆಯ ನಂತರ ಅವರಿಗೆ “ಅರುಣೋದಯ ಬಾಲನಿಲಯ”ದಿಂದ ಕರೆ ಬಂತು. ಏಳು ವರ್ಷದ ಹುಡುಗಿಯೊಬ್ಬಳ ವಿವರ ಹೊಂದಿಕೆಯಾಗಬಹುದು ಎಂದರು. ವಯಸ್ಸಿನಲ್ಲಿ ದೊಡ್ಡ ಮಕ್ಕಳನ್ನು ದತ್ತು ಪಡೆಯಲು ಹಲವರು ಹಿಂಜರಿಯುತ್ತಾರೆ. ಆ ಮಗುವಿನ ತಾಯಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದಳು; ತಂದೆಯ ವಿವರ ಇರಲಿಲ್ಲ. ಮಗು ಹೆಚ್ಚು ಮಾತನಾಡುವುದಿಲ್ಲ, ಮಳೆ ಬಂದಾಗ ಹೆದರುತ್ತದೆ, ಪದೇಪದೇ ಒಂದೇ ಚಿತ್ರ ಬಿಡಿಸುತ್ತದೆ ಎಂದು ಸಮಾಜಕಾರ್ಯಕರ್ತೆ ತಿಳಿಸಿದಳು.
ಬಾಲನಿಲಯಕ್ಕೆ ಹೋದ ದಿನ ಆಕಾಶ ಮೋಡದಿಂದ ತುಂಬಿತ್ತು. ವೈದೇಹಿಯ ಕೈ ಬೆವರುತ್ತಿತ್ತು. ಆದಿತ್ಯ ಹೊರಗೆ ಸಮಾಧಾನವಾಗಿ ಕಂಡರೂ ಕಾರಿನ ಕೀಲಿಯನ್ನು ಮೂರನೇ ಬಾರಿ ಕೆಳಗೆ ಬಿಟ್ಟ.
“ನೀನು ಹೆದರಿದ್ದೀಯಾ?” ಎಂದು ವೈದೇಹಿ ಕೇಳಿದಳು.
“ಇಲ್ಲ.”
“ಕೀಲಿಗೂ ಹಾಗೇ ಅನಿಸಿರಬೇಕು.” 
ಒಳಗೆ ಹತ್ತು ಮಕ್ಕಳು ಆಟವಾಡುತ್ತಿದ್ದರು. ಒಂದು ಮೂಲೆಯಲ್ಲಿ ಕಿಟಕಿಗೆ ಬೆನ್ನು ಮಾಡಿ ಕುಳಿತಿದ್ದ ಪುಟ್ಟ ಹುಡುಗಿ ಬಿಳಿ ಕಾಗದದ ಮೇಲೆ ನೀಲಿ ಬಣ್ಣದಿಂದ ಏನನ್ನೋ ಬಿಡಿಸುತ್ತಿದ್ದಳು. ಅವಳ ಕೂದಲು ಭುಜದವರೆಗೆ ಅಸಮವಾಗಿ ಕತ್ತರಿಸಲಾಗಿತ್ತು. ಉಳಿದ ಮಕ್ಕಳು ಹೊಸ ಜನರನ್ನು ಕುತೂಹಲದಿಂದ ನೋಡಿದರೂ, ಅವಳು ತಿರುಗಲಿಲ್ಲ.
“ಮಿಹಿಕಾ,” ಎಂದು ಸಮಾಜಕಾರ್ಯಕರ್ತೆ ಕರೆದಳು. “ನಿನ್ನನ್ನು ನೋಡಲು ಅತಿಥಿಗಳು ಬಂದಿದ್ದಾರೆ.”
ಹುಡುಗಿ ನಿಧಾನವಾಗಿ ತಿರುಗಿದಳು. ಅವಳ ಕಣ್ಣುಗಳಲ್ಲಿ ಮಕ್ಕಳಿಗಿಂತ ದೊಡ್ಡ ಮೌನವಿತ್ತು. ಮೊದಲು ಆದಿತ್ಯನನ್ನು ನೋಡಿ, ನಂತರ ವೈದೇಹಿಯ ಮುಖದ ಮೇಲೆ ದೃಷ್ಟಿ ನಿಲ್ಲಿಸಿದಳು. ಅವಳ ಕೈಯಲ್ಲಿದ್ದ ನೀಲಿ ಪೆನ್ಸಿಲ್ ನೆಲಕ್ಕೆ ಬಿತ್ತು.
“ನೀವು ಟೀಚರಾ?” ಎಂದು ಕೇಳಿದಳು.
ವೈದೇಹಿ ನಕ್ಕಳು. “ಹೌದು. ಆದರೆ ಇಂದು ನಿನಗೆ ಪಾಠ ಹೇಳಲು ಬಂದಿಲ್ಲ.”
“ಹಾಗಾದರೆ?”
“ನಿನ್ನ ಜೊತೆ ಸ್ವಲ್ಪ ಹೊತ್ತು ಕುಳಿತುಕೊಳ್ಳಲು ಬಂದಿದ್ದೇನೆ. ನಿನಗೆ ಇಷ್ಟವಿದ್ದರೆ.”
ಮಿಹಿಕಾ ಏನೂ ಹೇಳಲಿಲ್ಲ. ಆದರೆ ತನ್ನ ಪಕ್ಕದಲ್ಲಿದ್ದ ಖಾಲಿ ಕುರ್ಚಿಯನ್ನು ಸ್ವಲ್ಪ ಮುಂದೆ ಸರಿಸಿದಳು. 
ವೈದೇಹಿ ಕುಳಿತಳು. ಮಗು ಬಿಡಿಸುತ್ತಿದ್ದ ಚಿತ್ರವನ್ನು ನೋಡಿದಳು. ಅದರಲ್ಲಿ ದೊಡ್ಡ ಮರ, ಅದರ ಕೆಳಗೆ ಮುಖವಿಲ್ಲದ ಮಹಿಳೆ, ದೂರದಲ್ಲಿ ಮೂರು ಕೊಠಡಿಗಳಿರುವ ಶಾಲೆ. ಒಂದು ಕಡೆ ಸಂಗೀತದ ಗುರುತು, ಇನ್ನೊಂದು ಕಡೆ ಕಂಪ್ಯೂಟರ್. 
ವೈದೇಹಿ ಕ್ಷಣಕಾಲ ಆಶ್ಚರ್ಯಗೊಂಡಳು. ತನ್ನ ಬಾಲ್ಯದ ಚಿತ್ರಕ್ಕೂ ಇದಕ್ಕೂ ವಿಚಿತ್ರ ಹೋಲಿಕೆಯಿತ್ತು. 
“ಇದು ಯಾವ ಶಾಲೆ?” ಎಂದು ಕೇಳಿದಳು. 
“ಅಮ್ಮ ಹೇಳುತ್ತಿದ್ದ ಶಾಲೆ.” 
“ನಿನ್ನ ಅಮ್ಮ ಅಲ್ಲಿಗೆ ಹೋಗಿದ್ದರಾ?”
ಮಿಹಿಕಾ ಭುಜ ಎತ್ತಿದಳು. “ಗೊತ್ತಿಲ್ಲ. ಆದರೆ ಅಲ್ಲಿ ಯಾರೂ ಮಕ್ಕಳಿಗೆ ಬೈಯುವುದಿಲ್ಲ ಅಂತ ಹೇಳುತ್ತಿದ್ದರು.”
ವೈದೇಹಿ ಮತ್ತೇನೂ ಕೇಳಲಿಲ್ಲ. ಮೊದಲ ಭೇಟಿ ಹೆಚ್ಚು ಹೊತ್ತು ನಡೆಯಲಿಲ್ಲ. ಮಿಹಿಕಾ ಪ್ರಶ್ನೆಗಳಿಗೆ ಒಂದೆರಡು ಪದಗಳಲ್ಲಿ ಉತ್ತರಿಸಿದಳು. ಆದರೆ ವೈದೇಹಿ ಹೊರಡುವಾಗ ಅವಳ ಸೀರೆಯ ಅಂಚನ್ನು ಹಿಡಿದು, “ಮತ್ತೆ ಬರುತ್ತೀರಾ?” ಎಂದು ಕೇಳಿದಳು.
ವೈದೇಹಿ ಮಂಡಿಯೂರಿ ಅವಳ ಕಣ್ಣಿನ ಮಟ್ಟಕ್ಕೆ ಬಂದಳು. “ನಾವು ಮತ್ತೆ ಬರಬೇಕೆಂದು ನಿನಗೆ ಇಷ್ಟವಾ?”
ಮಿಹಿಕಾ ಹೌದೆಂಬಂತೆ ತಲೆಯಾಡಿಸಿದಳು. “ಆದರೆ ಮಳೆ ಬಂದರೆ?”
“ಮಳೆ ಬಂದರೂ ಬರಬಹುದು.”
“ಮಳೆ ಬಂದಾಗ ಕೆಲವರು ಹೋಗಿಬಿಡುತ್ತಾರೆ.”
ವೈದೇಹಿಯ ಎದೆ ಬಿಗಿಯಿತು.

 ***

ಮುಂದಿನ ಕೆಲವು ವಾರಗಳಲ್ಲಿ ಭೇಟಿಗಳು ಹೆಚ್ಚಿದವು. ಆದಿತ್ಯ ಮೊದಲ ದಿನ ಏನು ಮಾತನಾಡಬೇಕು ಎಂದು ತಿಳಿಯದೆ ಮಿಹಿಕಾಗೆ ದೊಡ್ಡ ಗೊಂಬೆ ತಂದಿದ್ದ. ಅವಳು ಅದನ್ನು ಪಕ್ಕಕ್ಕೆ ಇಟ್ಟು ಅವನ ಕೈಯಲ್ಲಿದ್ದ ಚಿಕ್ಕ ಸ್ಕ್ರೂಡ್ರೈವರ್ ನೋಡಿದಳು.
“ಅದು ಬೇಕಾ?” ಎಂದು ಅವನು ಕೇಳಿದ. ಅವಳು ತಲೆ ಆಡಿಸಿದಳು. 
ಇಬ್ಬರೂ ಸೇರಿ ಹಾಳಾದ ಆಟದ ಕಾರನ್ನು ಬಿಚ್ಚಿದರು. ಅರ್ಧ ಗಂಟೆಯಲ್ಲಿ ಮಿಹಿಕಾ ಮೊದಲ ಬಾರಿ ಮನಸಾರೆ ನಕ್ಕಳು.
“ಮಕ್ಕಳ ಜೊತೆ ಮಾತಾಡಲು ನನಗೆ ಬರುವುದಿಲ್ಲ ಎಂದುಕೊಂಡಿದ್ದೆ,” ಎಂದು ವಾಪಸ್ಸಾಗುವಾಗ ಆದಿತ್ಯ ಹೇಳಿದ.
“ನೀವು ಇಬ್ಬರೂ ಮಾತಾಡಲೇ ಇಲ್ಲ.”
“ಆದ್ದರಿಂದಲೇ ಚೆನ್ನಾಗಿ ಆಯಿತು.”
ವೈದೇಹಿ ನಕ್ಕಳು. ಆದಿತ್ಯ ಮತ್ತು ಮಿಹಿಕಾಳ ನಡುವಿನ ಸ್ನೇಹ ಪದಗಳಿಗಿಂತ ಕೆಲಸದ ಮೂಲಕ ಬೆಳೆಯುತ್ತಿತ್ತು.

ಒಂದು ದಿನ ಬಾಲನಿಲಯಕ್ಕೆ ಹೋದಾಗ ಮಳೆ ಆರಂಭವಾಯಿತು. ಮಿಹಿಕಾ ಕಿಟಕಿಯಿಂದ ಹೊರಗೆ ನೋಡುತ್ತ ಕುಳಿತಿದ್ದಳು. ಸಿಡಿಲು ಹೊಡೆದ ತಕ್ಷಣ ಅವಳು ಕಿವಿಗಳನ್ನು ಮುಚ್ಚಿಕೊಂಡಳು. ವೈದೇಹಿ ಅವಳ ಪಕ್ಕದಲ್ಲಿ ಕುಳಿತಳು.
“ಮಳೆ ಅಂದ್ರೆ ಭಯವಾ?”
ಮಿಹಿಕಾ ತಲೆಯಾಡಿಸಿದಳು.
“ಅಮ್ಮ ಆಸ್ಪತ್ರೆಯಲ್ಲಿ ಇದ್ದಾಗ ತುಂಬಾ ಮಳೆ ಬಂದಿತ್ತು,” ಎಂದಳು.
ವೈದೇಹಿ ಅವಳ ಕೈಯನ್ನು ಮೃದುವಾಗಿ ಹಿಡಿದಳು. “ನಿನ್ನ ಅಮ್ಮ ಏನು ಹೇಳುತ್ತಿದ್ದರು?”
ಮಿಹಿಕಾ ಸ್ವಲ್ಪ ಹೊತ್ತು ಯೋಚಿಸಿದಳು. “ಈ ಸಮಯವೂ ಕಳೆದುಹೋಗುತ್ತದೆ ಅಂತ.” 
ವೈದೇಹಿ ಆಶ್ಚರ್ಯದಿಂದ ಮಗುವಿನತ್ತ ನೋಡಿದಳು. ಅದೇ ಮಾತು. ತನ್ನ ಮನಸ್ಸು ಕಷ್ಟದ ಸಮಯದಲ್ಲಿ ತನಗೆ ಹೇಳಿಕೊಳ್ಳುತ್ತಿದ್ದ ಮಾತು. ಆದರೆ ಅದು ಸಾಮಾನ್ಯವಾಗಿ ಅನೇಕರು ಬಳಸುವ ಸಾಂತ್ವನದ ಮಾತೂ ಆಗಿತ್ತು. ಅವಳು ಅದಕ್ಕೆ ಹೆಚ್ಚಿನ ಅರ್ಥ ಕೊಡಲಿಲ್ಲ. - “ನಿನ್ನ ಅಮ್ಮ ಒಳ್ಳೆಯ ಮಾತು ಹೇಳುತ್ತಿದ್ದರು,” ಎಂದಳು.
ಮಿಹಿಕಾ ನಿಧಾನವಾಗಿ ಉತ್ತರಿಸಿದಳು. “ಆದರೆ ಅಮ್ಮ ಹೇಳಿದ ಸಮಯ ಕಳೆದುಹೋಯಿತು. ಅಮ್ಮ ಮಾತ್ರ ವಾಪಸ್ ಬರಲಿಲ್ಲ.”
ಆ ಮಾತಿಗೆ ವೈದೇಹಿಯ ಬಳಿ ಉತ್ತರ ಇರಲಿಲ್ಲ. ಅವಳು ಮಗುವಿನ ಕೈಯನ್ನು ಇನ್ನಷ್ಟು ಮೃದುವಾಗಿ ಹಿಡಿದುಕೊಂಡಳು. ಕೆಲವು ನೋವುಗಳ ಮುಂದೆ ದೊಡ್ಡವರ ಜ್ಞಾನವೂ ಮಕ್ಕಳ ಮೌನದಷ್ಟೇ ಚಿಕ್ಕದಾಗಿಬಿಡುತ್ತದೆ.

ಸಮಾಜಕಾರ್ಯಕರ್ತೆ ಮೂಲಕ ಮಗುವಿನ ತಾಯಿ ಕುರಿತು ಲಭ್ಯವಿದ್ದ ವಿವರಗಳನ್ನು ತಿಳಿದುಕೊಂಡಳು. ಹೆಸರು—ಸಾನ್ವಿ. ವೃತ್ತಿ—ತಾತ್ಕಾಲಿಕ ಶಿಕ್ಷಕಿ. ಮರಣದ ಕಾರಣ—ತೀವ್ರ ಅನಾರೋಗ್ಯ. 
‘ಸಾನ್ವಿ’ ಎಂಬ ಹೆಸರು ಎಲ್ಲೋ ಕೇಳಿದಂತೆ ಅನಿಸಿತು. ವೈದೇಹಿ ತನ್ನ ಕೇಂದ್ರದಲ್ಲಿ ಕೆಲಸ ಮಾಡಿದ್ದವರನ್ನೂ, ಹಿಂದೆ ಭೇಟಿಯಾದ ವಿದ್ಯಾರ್ಥಿನಿಯರನ್ನೂ ನೆನಪಿಸಿಕೊಳ್ಳಲು ಪ್ರಯತ್ನಿಸಿದಳು. ವರ್ಷಗಳ ಹಿಂದೆ ಕೆಲವೇ ತಿಂಗಳು ಕೆಲಸ ಮಾಡಿ ಬೇರೆ ಊರಿಗೆ ಹೋದ ಯುವತಿಯೊಬ್ಬಳ ಅಸ್ಪಷ್ಟ ನೆನಪು ಮೂಡಿತು. ಆದರೆ ಹೆಸರು, ಮುಖ, ಕಾಲ—ಯಾವುದೂ ಸರಿಯಾಗಿ ಹೊಂದಿಕೆಯಾಗಲಿಲ್ಲ. ಅವಳು ಆ ಯೋಚನೆಯನ್ನು ಅಲ್ಲಿಗೇ ಬಿಟ್ಟಳು. 
ಮಿಹಿಕಾಳ ವೈಯಕ್ತಿಕ ವಸ್ತುಗಳೊಂದಿಗೆ ಒಂದು ಟಿನ್ ಪೆಟ್ಟಿಗೆಯೂ ಸುರಕ್ಷಿತವಾಗಿ ಇತ್ತು. ಸಂಬಂಧಿತ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಅದನ್ನು ಮಗುವಿಗೆ ಹಸ್ತಾಂತರಿಸಬಹುದೆಂದು ತಿಳಿಸಿದರು. ವೈದೇಹಿ ಅದನ್ನು ನೆನಪಿನಲ್ಲಿಟ್ಟುಕೊಂಡಳು. ಆದರೆ ಅವಳಿಗೆ ಮುಖ್ಯವಾಗಿದ್ದದ್ದು ಪೆಟ್ಟಿಗೆಯೊಳಗಿನ ರಹಸ್ಯವಲ್ಲ. ತನ್ನ ಎದುರು ಕುಳಿತಿದ್ದ, ಯಾರನ್ನೂ ಸುಲಭವಾಗಿ ನಂಬದ ಆ ಪುಟ್ಟ ಮಗು. 

 ***

ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಮಿಹಿಕಾ ಅವರ ಮನೆಗೆ ಬಂದಳು. ಅವಳಿಗಾಗಿ ಸಿದ್ಧಪಡಿಸಿದ್ದ ಕೊಠಡಿಯ ಗೋಡೆಯ ಬಣ್ಣ ಕೇಳಿದಾಗ, “ಮಳೆಯ ನಂತರದ ಆಕಾಶದ ಬಣ್ಣ,” ಎಂದಳು. ಆದಿತ್ಯ ಮೂರು ಬಣ್ಣದ ಡಬ್ಬಿ ತಂದು ಕೊನೆಗೆ ಯಾವುದು ಸರಿಯೆಂದು ಅವಳಿಂದಲೇ ಆರಿಸಿಕೊಂಡ. 
ಮೊದಲ ರಾತ್ರಿ ಮಿಹಿಕಾ ಹಾಸಿಗೆಯಲ್ಲಿ ಮಲಗಲಿಲ್ಲ. ಬಾಗಿಲ ಬಳಿ ಚಾಪೆ ಹಾಸಿಕೊಂಡಳು.
“ಇಲ್ಲಿ ಯಾಕೆ?” ಎಂದು ವೈದೇಹಿ ಕೇಳಿದಳು.
“ಬಾಗಿಲು ಮುಚ್ಚಿದರೆ ಬೆಳಿಗ್ಗೆ ನೀವು ಇರದಿದ್ದರೆ?”
ವೈದೇಹಿಯ ಎದೆ ಬಿಗಿಯಿತು. ಅವಳು ಕೂಡ ಚಾಪೆಯ ಮೇಲೆ ಪಕ್ಕದಲ್ಲಿ ಮಲಗಿದಳು. “ನೀನು ಎದ್ದಾಗ ನಾನು ಇಲ್ಲದಿದ್ದರೆ ಅಡುಗೆಮನೆಯಲ್ಲಿ ಇರಬಹುದು, ಕೇಂದ್ರಕ್ಕೆ ಹೋಗಿರಬಹುದು ಅಥವಾ ಸ್ನಾನಗೃಹದಲ್ಲಿ ಇರಬಹುದು. ಎಲ್ಲಿಗೆ ಹೋಗುತ್ತಿದ್ದೇನೆ ಎಂದು ನಿನಗೆ ತಿಳಿಸುತ್ತೇನೆ. ಆದರೆ ನಿನ್ನನ್ನು ಬಿಟ್ಟು ಹೋಗಿರುವುದಿಲ್ಲ. ”
“ಎಲ್ಲ ಅಮ್ಮಂದಿರೂ ಹೋಗುವುದಿಲ್ಲವಾ?”
ವೈದೇಹಿ ಉತ್ತರ ಹುಡುಕಲಿಲ್ಲ. “ಕೆಲವರು ನಮ್ಮ ಜೊತೆ ಹೆಚ್ಚು ಕಾಲ ಇರಲಾಗುವುದಿಲ್ಲ ಮಿಹಿಕಾ. ಆದರೆ ಅವರು ಕೊಟ್ಟ ಪ್ರೀತಿ ಕಳೆದುಹೋಗುವುದಿಲ್ಲ.”
“ನನ್ನ ಅಮ್ಮನ ಪ್ರೀತಿ ಎಲ್ಲಿದೆ?”
“ಬಹುಶಃ ನಿನ್ನೊಳಗೆ. ಸ್ವಲ್ಪ ನಿನ್ನ ಚಿತ್ರಗಳಲ್ಲಿ. ಸ್ವಲ್ಪ ನೀನು ಹೇಳುವ ಮಾತುಗಳಲ್ಲಿ.”
ಮಿಹಿಕಾ ಅವಳ ಕೈ ಹಿಡಿದು ಮಲಗಿದಳು. ‘ಅಮ್ಮ’ ಎಂದು ಕರೆಯಲು ಅವಳಿಗೆ ಇನ್ನೂ ಎರಡು ತಿಂಗಳು ಬೇಕಾಯಿತು. ವೈದೇಹಿ ಅದಕ್ಕಾಗಿ ಕಾಯಲಿಲ್ಲ. ಸಂಬಂಧಕ್ಕೆ ಹೆಸರು ಬರುವ ಮುನ್ನವೇ ಅದರ ಹೊಣೆಗಾರಿಕೆ ಆರಂಭವಾಗುತ್ತದೆ ಎಂಬುದು ಅವಳಿಗೆ ತಿಳಿದಿತ್ತು.

ಮಿಹಿಕಾ ಕೇಂದ್ರಕ್ಕೆ ಬರತೊಡಗಿದಳು. ಮೊದಲಿಗೆ ಇತರ ಮಕ್ಕಳೊಂದಿಗೆ ಬೆರೆಯಲಿಲ್ಲ. ಮಳೆ ಬಂದಾಗ ಮೇಜಿನ ಕೆಳಗೆ ಅಡಗುತ್ತಿದ್ದಳು. ವೈದೇಹಿ ಅವಳನ್ನು ಎಳೆದು ಹೊರಗೆ ತರಲಿಲ್ಲ. ತಾನೂ ಪಕ್ಕದಲ್ಲಿ ಕುಳಿತು ಮಳೆಯ ಸದ್ದು ಎಣಿಸುತ್ತಿದ್ದಳು.
“ಒಂದು… ಎರಡು… ಮೂರು…”
“ಮಳೆ ಎಷ್ಟು ಹೊತ್ತು ಇರುತ್ತದೆ?”
“ಅದು ನಿಲ್ಲುವವರೆಗೆ.”
“ನೋವು?”
ವೈದೇಹಿ ಕ್ಷಣಕಾಲ ಮೌನವಾದಳು. “ಕೆಲವು ನೋವುಗಳು ಬೇಗ ಹೋಗುವುದಿಲ್ಲ. ಆದರೆ ಒಂದು ದಿನ ಅವುಗಳ ಸದ್ದು ಕಡಿಮೆಯಾಗಬಹುದು.”
ಮಿಹಿಕಾ ನಿಧಾನವಾಗಿ ಅವಳ ಭುಜಕ್ಕೆ ಒರಗಿದಳು.

ದಿನಗಳು ಕಳೆದಂತೆ ಮನೆಯೊಳಗೆ ಹೊಸ ಅಭ್ಯಾಸಗಳು ಹುಟ್ಟಿಕೊಂಡವು. ಆದಿತ್ಯ ಕಚೇರಿಯಿಂದ ಬಂದ ತಕ್ಷಣ ಮಿಹಿಕಾ ಅವನ ಜೇಬು ಪರಿಶೀಲಿಸುತ್ತಿದ್ದಳು.
“ಇವತ್ತು ಏನು ತಂದಿದ್ದೀರಿ?”
“ಬಿಲ್.”
“ಅದು ಆಟಕ್ಕೆ ಆಗುವುದಿಲ್ಲ.”
“ನನಗೂ ಹಾಗೇ ಅನಿಸುತ್ತದೆ.”
ಕೆಲವೊಮ್ಮೆ ಇಬ್ಬರೂ ಸೇರಿ ಹಾಳಾದ ಉಪಕರಣಗಳನ್ನು ಬಿಚ್ಚಿ ಮತ್ತೆ ಜೋಡಿಸುತ್ತಿದ್ದರು.
ವೈದೇಹಿ ಅಡುಗೆಮನೆಯಿಂದ, “ಇಬ್ಬರೂ ಮನೆ ಬಿಚ್ಚಲು ಆರಂಭಿಸಬೇಡಿ!” ಎಂದು ಕೂಗುತ್ತಿದ್ದಳು.
ಆದಿತ್ಯ, “ಇವಳು ಇಂಜಿನಿಯರ್ ಆಗುತ್ತಾಳೆ,” ಎಂದರೆ,
ಮಿಹಿಕಾ ತಕ್ಷಣ, “ಇಲ್ಲ. ನಾನು ಚಿತ್ರ ಬಿಡಿಸುವ ಇಂಜಿನಿಯರ್,” ಎನ್ನುತ್ತಿದ್ದಳು.
ಮನೆಯ ಗೋಡೆಗಳ ಮೇಲೆ ಮಕ್ಕಳ ನಗು ನಿಧಾನವಾಗಿ ನೆಲೆಯಾಗತೊಡಗಿತು. ಆದರೂ ಮಿಹಿಕಾಳ ಮನಸ್ಸಿನಲ್ಲಿ ಸಾನ್ವಿಗೆ ಸೇರಿದ ಜಾಗ ಹಾಗೆಯೇ ಉಳಿದಿತ್ತು. ವೈದೇಹಿ ಅದನ್ನು ತುಂಬಲು ಪ್ರಯತ್ನಿಸಲಿಲ್ಲ. ಅದರ ಪಕ್ಕದಲ್ಲಿ ತನ್ನ ಜಾಗವನ್ನು ಕಟ್ಟಿಕೊಂಡಳು.
ಮಿಹಿಕಾ ಮನೆಗೆ ಬಂದ ಕೆಲವೇ ವಾರಗಳಲ್ಲಿ ಟಿನ್ ಪೆಟ್ಟಿಗೆಯೂ ಅವರಿಗೆ ಹಸ್ತಾಂತರವಾಯಿತು. ವೈದೇಹಿ ಅದನ್ನು ಮಗುವಿನ ಕೊಠಡಿಯ ಕಪಾಟಿನಲ್ಲಿ ಸುರಕ್ಷಿತವಾಗಿ ಇಟ್ಟಳು. “ಇದು ನಿನ್ನ ಅಮ್ಮನ ವಸ್ತುಗಳು. ನಿನಗೆ ಯಾವಾಗ ನೋಡಬೇಕೆನಿಸುತ್ತದೆಯೋ ಆಗ ನೋಡೋಣ,” ಎಂದಳು.
ಮಿಹಿಕಾ ಪ್ರತಿದಿನ ಆ ಪೆಟ್ಟಿಗೆಯನ್ನು ನೋಡುತ್ತಿದ್ದಳು. ಆದರೆ ಮುಟ್ಟುತ್ತಿರಲಿಲ್ಲ. ಒಮ್ಮೆ ಮಾತ್ರ ಕೇಳಿದಳು. “ತೆರೆದರೆ ಅಮ್ಮನ ವಾಸನೆ ಹೊರಗೆ ಹೋಗಿಬಿಡುತ್ತದಾ?”
ವೈದೇಹಿ ಅವಳನ್ನು ಅಪ್ಪಿಕೊಂಡಳು. “ವಾಸನೆ ಬದಲಾಗಬಹುದು ಕಣೇ. ಆದರೆ ನೆನಪುಗಳು ಪೆಟ್ಟಿಗೆಯೊಳಗೆ ಮಾತ್ರ ಇರುವುದಿಲ್ಲ.”
ಮಿಹಿಕಾ ಆ ದಿನವೂ ಪೆಟ್ಟಿಗೆ ತೆರೆಯಲಿಲ್ಲ. ಕಾಲ ಕಳೆಯಿತು.

 ***

ಒಂದು ವರ್ಷದೊಳಗೆ ಮಿಹಿಕಾ ಮನೆಯಲ್ಲಿ ಬೆರೆತಳು. ಕಮಲಾಳನ್ನು “ದೊಡ್ಡಮ್ಮ”, ಶ್ರೀಧರರನ್ನು “ಕಥೆತಾತ” ಎಂದು ಕರೆಯುತ್ತಿದ್ದಳು. ವಿನಯನಿಗೆ ಪ್ರತಿದಿನ ವಿಚಿತ್ರ ಪ್ರಶ್ನೆ ಕೇಳಿ ಕಾಡುತ್ತಿದ್ದಳು. ಆದಿತ್ಯನ ಕಚೇರಿಯಲ್ಲಿ ಹಾಳಾದ ಉಪಕರಣಗಳನ್ನು ತೆರೆದು ನೋಡುವುದು ಅವಳ ಹವ್ಯಾಸ. ವೈದೇಹಿಯ ಕೇಂದ್ರದಲ್ಲಿ ಚಿತ್ರಕಲೆಯ ತರಗತಿ ಅವಳ ಪ್ರಿಯ ಜಾಗವಾಯಿತು.
ಒಂದು ಸಂಜೆ ಅವಳು ಹಳೆಯ ಚಿತ್ರವನ್ನು ಮತ್ತೆ ಬಿಡಿಸುತ್ತಿದ್ದಳು. ಮಧ್ಯದಲ್ಲಿ ಮರ. ಪಕ್ಕದಲ್ಲಿ ಮೂರು ಕೊಠಡಿಗಳು. ಮರದ ಕೆಳಗೆ ಮುಖವಿಲ್ಲದ ಮಹಿಳೆ. 
“ಈ ಮಹಿಳೆಗೆ ಮುಖ ಯಾಕಿಲ್ಲ ಮಿಹಿಕಾ?” ಎಂದು ವೈದೇಹಿ ಕೇಳಿದಳು. 
“ಅಮ್ಮ ಬಿಡಿಸುತ್ತಿದ್ದಾಗಲೂ ಮುಖ ಇರಲಿಲ್ಲ.” 
“ಯಾಕೆ?”
“ಯಾರಾದರೂ ಆಗಬಹುದು ಅಂತ ಹೇಳುತ್ತಿದ್ದರು.” 
ವೈದೇಹಿ ಆ ಚಿತ್ರವನ್ನು ಬಹಳ ಹೊತ್ತು ನೋಡಿದಳು.

ಆ ರಾತ್ರಿ ಮಿಹಿಕಾ ತನ್ನ ಕಪಾಟಿನ ಬಳಿಗೆ ಹೋಗಿ ಟಿನ್ ಪೆಟ್ಟಿಗೆಯನ್ನು ಹೊರತೆಗೆದಳು. “ಅಮ್ಮಾ…” 
ವೈದೇಹಿ ತಿರುಗಿದಳು.
“ನನಗೆ ಈಗ ಇದನ್ನು ತೆರೆಯಬೇಕು.”
ವೈದೇಹಿ ಆದಿತ್ಯನನ್ನು ಕರೆದಳು. ಮೂವರೂ ನೆಲದ ಮೇಲೆ ಕುಳಿತರು. 
ಪೆಟ್ಟಿಗೆಯಲ್ಲಿ ಎರಡು ಸೀರೆಗಳು, ಕೆಲವು ಚಿತ್ರಗಳು, ಹಳೆಯ ಮೊಬೈಲ್, ಒಂದು ಡೈರಿ ಮತ್ತು ಬಟ್ಟೆಯಲ್ಲಿ ಸುತ್ತಿದ ನೀಲಿ ಹೂವಿತ್ತು. ಆ ಹೂವು ಒಣಗಿ ಬಣ್ಣ ಕಳೆದುಕೊಂಡಿದ್ದರೂ, ವೈದೇಹಿಯ ಹೃದಯ ಜೋರಾಗಿ ಬಡಿತವಾಯಿತು. ತನ್ನ ಕಾಲೇಜಿನ ದಿನಗಳಲ್ಲಿ ಪುಸ್ತಕದ ನಡುವೆ ಇಟ್ಟುಕೊಂಡಿದ್ದ ಹೂವಿನಂತೆಯೇ ಅದು ಕಾಣುತ್ತಿತ್ತು. ಆದರೆ ಹಳೆಯ ಹೂವುಗಳು ಎಷ್ಟೋ ನೆನಪುಗಳಿಗೆ ಹೋಲುತ್ತವೆ. ಅವಳು ಅದನ್ನು ಜಾಗ್ರತೆಯಿಂದ ಬಟ್ಟೆಯೊಳಗೆ ಮರಳಿ ಇಟ್ಟಳು.
ಮಿಹಿಕಾ ತಾಯಿಯ ಸೀರೆಯೊಂದನ್ನು ಮುಖದ ಬಳಿ ಹಿಡಿದುಕೊಂಡಳು. “ಸ್ವಲ್ಪ ಅಮ್ಮನ ಹಾಗೆ ವಾಸನೆ ಬರುತ್ತಿದೆ,” ಎಂದಳು.
ವೈದೇಹಿ ಅವಳನ್ನು ಅಪ್ಪಿಕೊಂಡಳು. 
ಪೆಟ್ಟಿಗೆಯೊಳಗಿನ ಡೈರಿಯ ಮೊದಲ ಪುಟದಲ್ಲಿ ಬರೆಯಲಾಗಿತ್ತು: ‘ಮಿಹಿಕಾಳಿಗೆ—ನೀನು ದೊಡ್ಡವಳಾದಾಗ ಓದಲು.’
ಮಿಹಿಕಾ ಡೈರಿಯನ್ನು ಮುಚ್ಚಿದಳು. “ನಾನು ಇನ್ನೂ ದೊಡ್ಡವಳಾಗಿಲ್ಲ.”
“ಹಾಗಾದರೆ ಇದನ್ನು ಜೋಪಾನವಾಗಿ ಇಡೋಣ,” ಎಂದ ವೈದೇಹಿ.

 ***

ಹಳೆಯ ಮೊಬೈಲ್ ಮಾತ್ರ ಮಿಹಿಕಾಳ ಕುತೂಹಲ ಕೆರಳಿಸಿತು. “ಇದರಲ್ಲಿ ಅಮ್ಮನ ಧ್ವನಿ ಇರಬಹುದಾ?”
ಆದಿತ್ಯ ಅದನ್ನು ಪರೀಕ್ಷಿಸಿದ. ಹಳೆಯ ಮೊಬೈಲ್ ಚಾಲನೆಯಾಗಲಿಲ್ಲ.ಆದರೆ ಅದರಲ್ಲಿದ್ದ ಸಂಗ್ರಹವನ್ನು ತಜ್ಞರ ನೆರವಿನಿಂದ ಪಡೆಯಲು ಸಾಧ್ಯವಾಯಿತು. ಅದರಲ್ಲಿ ಮಿಹಿಕಾಳ ಬಾಲ್ಯದ ನಗು, ಹಾಡು, ಸಾನ್ವಿ ಹೇಳಿದ ಪುಟ್ಟ ಕಥೆಗಳ ಧ್ವನಿಮುದ್ರಣಗಳಿದ್ದವು. ಮಿಹಿಕಾ ಅವನ್ನು ಮತ್ತೆ ಮತ್ತೆ ಕೇಳುತ್ತಿದ್ದಳು.
ಒಂದು ಸಂಜೆ ಕಡತಗಳನ್ನು ನೋಡುತ್ತಿದ್ದ ಆದಿತ್ಯನಿಗೆ ವಿಚಿತ್ರ ಹೆಸರೊಂದು ಕಾಣಿಸಿತು. ಕೊನೆಯ ಕಡತದ ಹೆಸರು—“ದೇಹೀಗೆ”.
“ವೈದೇಹಿ, ಇದು ನಿನಗೆ ಸಂಬಂಧಿಸಿದ ಹೆಸರಿನಂತಿದೆ,” ಎಂದ.
ವೈದೇಹಿ ಅವನ ಬಳಿಗೆ ಬಂದಳು. ‘ದೇಹೀ.’ ಅದು ಅವಳ ಬಾಲ್ಯದ ಆತ್ಮೀಯರು ಕೆಲವೊಮ್ಮೆ ಕರೆಯುತ್ತಿದ್ದ ಹೆಸರು. ಬಹಳ ವರ್ಷಗಳಿಂದ ಯಾರೂ ಹಾಗೆ ಕರೆಯುತ್ತಿರಲಿಲ್ಲ. “ಬಹುಶಃ ಬೇರೆಯವರಿಗಿರಬಹುದು,” ಎಂದಳು. 
ಆದರೆ ಅವಳ ಧ್ವನಿಯಲ್ಲಿ ನಿಶ್ಚಿತತೆ ಇರಲಿಲ್ಲ. ವೈದೇಹಿಯ ಬೆರಳು ನಡುಗಿತು. ಮಿಹಿಕಾ ಅವಳ ಪಕ್ಕದಲ್ಲಿ ಕುಳಿತಳು. ಆದಿತ್ಯ ಧ್ವನಿಯನ್ನು ಚಾಲನೆ ಮಾಡಿದ. ಮೊದಲು ಕೆಲವು ಕ್ಷಣ ಮೌನ. ನಂತರ ಮೃದುವಾದ ಮಹಿಳಾ ಧ್ವನಿ ಕೇಳಿಸಿತು.
“ದೇಹೀ…"
ವೈದೇಹಿಯ ಹೃದಯ ಒಮ್ಮೆ ಬಲವಾಗಿ ಬಡಿದಂತಾಯಿತು.
"ಈ ಧ್ವನಿ ಯಾವಾಗಲಾದರೂ ನಿನ್ನವರೆಗೆ ತಲುಪುತ್ತದೆಯೋ ಗೊತ್ತಿಲ್ಲ. ಬಹುಶಃ ನನ್ನನ್ನು ನೆನಪಿಸಿಕೊಳ್ಳಲು ನಿನಗೆ ಸ್ವಲ್ಪ ಸಮಯ ಬೇಕಾಗಬಹುದು."
ಧ್ವನಿಯಲ್ಲಿದ್ದ ಆಯಾಸದ ನಡುವೆಯೂ ಏನೋ ಪರಿಚಿತತೆ ಇತ್ತು.
"ಹನ್ನೊಂದು ವರ್ಷಗಳ ಹಿಂದೆ ಮಳೆ ಬರುತ್ತಿದ್ದ ಒಂದು ಸಂಜೆ, ನಗರದ ಬಸ್ ನಿಲ್ದಾಣದಲ್ಲಿ ನಾನು ಅಳುತ್ತಾ ಕುಳಿತಿದ್ದೆ. ಶಿಕ್ಷಕ ತರಬೇತಿಯ ಶುಲ್ಕ ಕಟ್ಟಲಾಗದೆ ಊರಿಗೆ ಹಿಂದಿರುಗಲು ಹೊರಟಿದ್ದೆ. ಬದುಕಿನಲ್ಲಿ ನನಗಾಗಿ ಯಾವ ದಾರಿಯೂ ಇಲ್ಲ ಎಂದುಕೊಂಡಿದ್ದೆ.
“ನೀನು ನನ್ನ ಪಕ್ಕದಲ್ಲಿ ಕುಳಿತು ಕಾರಣ ಕೇಳಿದ್ದೆ. ನಾವು ಅಪರಿಚಿತರು. ಆದರೂ ನನ್ನ ಕಥೆಯನ್ನು ಸಂಪೂರ್ಣ ಕೇಳಿದ್ದೆ. ನಿನ್ನ ಬ್ಯಾಗಿನಲ್ಲಿದ್ದ ಹಣವನ್ನು ಕೊಡಲು ಬಂದಾಗ ನಾನು ನಿರಾಕರಿಸಿದ್ದೆ. ಆಗ ನೀನು ನಿನ್ನ ಶಿಕ್ಷಣ ಕೇಂದ್ರಕ್ಕೆ ಸಹಾಯಕಿಯಾಗಿ ಬರಲು ಹೇಳಿದ್ದೆ. ‘ಸಹಾಯ ಬೇಡ, ಕೆಲಸ ಮಾಡು; ನಿನ್ನ ಕಾಲಿನ ಮೇಲೆ ನಿಂತಾಗ ಮತ್ತೊಬ್ಬರಿಗೆ ಜಾಗ ಮಾಡು,’ ಎಂದಿದ್ದೆ.
ವೈದೇಹಿ ಬೆಚ್ಚಿದಳು. ಅವಳ ಮನಸ್ಸಿನಲ್ಲಿ ಹಳೆಯ ದೃಶ್ಯವೊಂದು ಸ್ಪಷ್ಟವಾಗತೊಡಗಿತು. ಮಳೆ ಬರುತ್ತಿದ್ದ ಬಸ್ ನಿಲ್ದಾಣ. ಕೈಯಲ್ಲಿ ಹಳೆಯ ಚೀಲ ಹಿಡಿದು ಅಳುತ್ತಿದ್ದ ಯುವತಿ. ಮರುದಿನ ಸಹಜ ಶಿಕ್ಷಣ ಕೇಂದ್ರಕ್ಕೆ ಬಂದಿದ್ದ ಅದೇ ಹುಡುಗಿ. ಆರು ತಿಂಗಳು ಮಕ್ಕಳ ಪುಸ್ತಕಗಳನ್ನು ಜೋಡಿಸುತ್ತಾ, ತರಗತಿಗಳಿಗೆ ನೆರವಾಗುತ್ತಾ, ಮಧ್ಯಾಹ್ನದ ಬಿಡುವಿನಲ್ಲಿ ತನ್ನ ಶಿಕ್ಷಕ ತರಬೇತಿಯ ಪಾಠಗಳನ್ನು ಓದುತ್ತಿದ್ದಳು. ಅವಳ ಹೆಸರು…
“ಸಾನ್ವಿ…” ಎಂದು ವೈದೇಹಿ ಪಿಸುಗುಟ್ಟಿದಳು.
ಧ್ವನಿಮುದ್ರಣ ಮುಂದುವರಿಯಿತು. - “ನಾನು ಅಲ್ಲಿ ಆರು ತಿಂಗಳು ಕೆಲಸ ಮಾಡಿದೆ. ನೀನು ನನಗೆ ಕೇವಲ ಸಂಬಳ ಕೊಡಲಿಲ್ಲ. ನಾನು ಕೆಲಸಕ್ಕೆ ಅರ್ಹಳು ಎಂಬ ನಂಬಿಕೆಯನ್ನು ಕೊಟ್ಟೆ. ನಂತರ ದೂರದ ಊರಿನಲ್ಲಿ ಶಿಕ್ಷಕಿಯ ಕೆಲಸ ಸಿಕ್ಕಿತು. ಹೊರಡುವ ದಿನ ನಿನಗೆ ಸರಿಯಾಗಿ ಧನ್ಯವಾದ ಹೇಳಲಿಲ್ಲ. ಬೇಗನೆ ಹಿಂದಿರುಗಿ ಬರುತ್ತೇನೆಂದುಕೊಂಡೆ. ಆದರೆ ಜೀವನ ಯಾವಾಗಲೂ ನಾವು ಬರೆದ ವೇಳಾಪಟ್ಟಿಯನ್ನು ಪಾಲಿಸುವುದಿಲ್ಲ. ಹೊಸ ಊರು, ಹೊಸ ಕೆಲಸ, ಮದುವೆ, ನಂತರ ಮಿಹಿಕಾ…
“ಮಿಹಿಕಾ ಹುಟ್ಟಿದ ನಂತರ ಅವಳ ತಂದೆ ನಮ್ಮನ್ನು ಬಿಟ್ಟುಹೋದ. ಆಮೇಲೆ ಬದುಕಿನ ಪ್ರತಿಯೊಂದು ದಿನವೂ ನನಗೆ ಮತ್ತೊಂದು ಪರೀಕ್ಷೆಯಾಯಿತು. ಅನಾರೋಗ್ಯ ಆರಂಭವಾದಾಗ ನಿನ್ನನ್ನು ಮತ್ತೆ ಹುಡುಕಬೇಕೆನಿಸಿತು. ನಿನ್ನ ಕೇಂದ್ರ ದೊಡ್ಡದಾಗಿತ್ತು. ನಿನ್ನ ಚಿತ್ರ ಪತ್ರಿಕೆಯಲ್ಲಿ ಬಂದಿತ್ತು. ನೀನು ಮಕ್ಕಳ ನಡುವೆ ನಗುತ್ತಾ ನಿಂತಿದ್ದೆ. ಒಮ್ಮೆ ನಿನ್ನನ್ನು ಭೇಟಿಯಾಗಲು ಹೊರಟಿದ್ದೆ ಕೂಡ. ಆದರೆ ಮಧ್ಯದಲ್ಲೇ ಹಿಂದಿರುಗಿದೆ. ನಿನ್ನ ಬದುಕಿಗೆ ನನ್ನ ಸಮಸ್ಯೆಯನ್ನು ಮತ್ತೆ ತೆಗೆದುಕೊಂಡು ಹೋಗಬಾರದೆಂದುಕೊಂಡೆ. ಈಗ ಯೋಚಿಸಿದರೆ, ಬಹುಶಃ ನಾನು ತಪ್ಪು ಮಾಡಿದೆನೋ ಅನಿಸುತ್ತದೆ. ಸಹಾಯ ಕೇಳುವುದು ದುರ್ಬಲತೆ ಅಲ್ಲವೆಂದು ನನಗೆ ಕಲಿಸಿದವಳ ಬಳಿಯೇ ಸಹಾಯ ಕೇಳಲು ನಾನು ಹೆದರಿದೆ.”
ವೈದೇಹಿಯ ಕಣ್ಣು ತುಂಬಿತು. ಸಾನ್ವಿಯ ಮುಖ ಈಗ ಸ್ಪಷ್ಟವಾಗಿ ನೆನಪಾಗುತ್ತಿತ್ತು. ಕೇಂದ್ರದ ಮೊದಲ ದಿನಗಳಲ್ಲಿ ಮೌನವಾಗಿ ಕೆಲಸ ಮಾಡುತ್ತಿದ್ದ ಆ ಯುವತಿ. ಪುಸ್ತಕಗಳನ್ನು ಎಷ್ಟು ಅಚ್ಚುಕಟ್ಟಾಗಿ ಜೋಡಿಸುತ್ತಿದ್ದಳೆಂದರೆ, ವೈದೇಹಿ ತಮಾಷೆಗೆ ಅವಳನ್ನು ‘ನಮ್ಮ ಗ್ರಂಥಾಲಯದ ರಾಣಿ’ ಎಂದು ಕರೆಯುತ್ತಿದ್ದಳು. ಒಂದು ದಿನ ಸಾನ್ವಿ ಕೇಳಿದ್ದಳು, “ಮೇಡಂ, ನೀವು ಎಲ್ಲರಿಗೂ ಇಷ್ಟು ಧೈರ್ಯ ಹೇಗೆ ಹೇಳುತ್ತೀರಿ?”
ಅದಕ್ಕೆ ವೈದೇಹಿ ನಗುತ್ತ, “ನನಗೂ ಯಾರಾದರೂ ಹೇಳಬೇಕಾದ ದಿನಗಳು ಇರುತ್ತವೆ ಕಣೇ,” ಎಂದಿದ್ದಳು. ಆ ನೆನಪು ಅವಳೊಳಗೆ ಮಿಂಚಿನಂತೆ ಹಾದುಹೋಯಿತು.
ಧ್ವನಿಮುದ್ರಣದಲ್ಲಿ ಸಾನ್ವಿ ಮತ್ತೆ ಮಾತನಾಡತೊಡಗಿದಳು
“ಮಿಹಿಕಾ ಮಳೆ ಬಂದಾಗ ಹೆದರುತ್ತಾಳೆ. ನಾನು ಆಸ್ಪತ್ರೆಗೆ ಹೋಗಬೇಕಾದ ದಿನವೂ ಮಳೆ ಬರುತ್ತಿತ್ತು. ಅವಳು ನನ್ನನ್ನು ಬಿಗಿಯಾಗಿ ಹಿಡಿದುಕೊಂಡು ಬಿಡಲಿಲ್ಲ. ಆಗ ನಾನು ಅವಳಿಗೆ ನೀನು ನನಗೆ ಹೇಳಿದ್ದ ಮಾತನ್ನೇ ಹೇಳಿದ್ದೆ —‘ಈ ಸಮಯವೂ ಕಳೆದುಹೋಗುತ್ತದೆ. ನೀನು ಒಬ್ಬಳೇ ಅಲ್ಲ.’ ಅವಳಿಗೆ ಶಾಲೆ ಬಿಡಿಸಲು ಹೇಳಿದಾಗ, ನೀನು ಬಾಲ್ಯದಲ್ಲಿ ಬಿಡಿಸಿದ್ದ ಶಾಲೆಯ ಚಿತ್ರವನ್ನು ನೆನಪಿನಿಂದ ಬಿಡಿಸಿ ತೋರಿಸಿದೆ. ಆ ಚಿತ್ರವನ್ನು ನೀನು ಒಮ್ಮೆ ಸಹಾಯಕಿಯರ ಸಭೆಯಲ್ಲಿ ತೋರಿಸಿ, ‘ಯಾವ ಮಗುವಿಗೂ ಹೆದರಿಕೆ ಇಲ್ಲದ ಶಾಲೆ ಕಟ್ಟಬೇಕು’ ಎಂದಿದ್ದೆ. “ಆ ಮಾತು ನನಗೆ ಎಷ್ಟು ಇಷ್ಟವಾಗಿತ್ತೆಂದರೆ, ನನ್ನ ಮಗಳಿಗೂ ಆ ಶಾಲೆಯ ಕಥೆ ಹೇಳುತ್ತಿದ್ದೆ. ಅವಳು ಅದನ್ನೇ ಮತ್ತೆ ಮತ್ತೆ ಬಿಡಿಸುತ್ತಾಳೆ.
“ಆ ಮರದ ಕೆಳಗೆ ಮುಖವಿಲ್ಲದ ಮಹಿಳೆಯನ್ನು ಯಾಕೆ ಬಿಡಿಸುತ್ತೇನೆ ಎಂದು ಅವಳು ಕೇಳಿದಾಗ, ‘ಅಲ್ಲಿ ಯಾರಾದರೂ ಇರಬಹುದು. ಯಾರಿಗಾದರೂ ಆಶ್ರಯ ಬೇಕಾದರೆ ಆ ಮರದ ಕೆಳಗೆ ಜಾಗವಿದೆ,’ ಎಂದು ಹೇಳುತ್ತಿದ್ದೆ.”
ಮಿಹಿಕಾ ವೈದೇಹಿಯತ್ತ ನೋಡಿದಳು. "ಅಮ್ಮ ಹೇಳುತ್ತಿದ್ದ ಶಾಲೆ ನಿಮ್ಮದೇನಾ?”
ವೈದೇಹಿ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ.
ಧ್ವನಿಮುದ್ರಣದ ಕೊನೆಯ ಭಾಗ ಆರಂಭವಾಯಿತು.
“ದೇಹೀ…ನನ್ನ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಮಿಹಿಕಾಳ ಮುಂದಿನ ಬದುಕಿನ ಬಗ್ಗೆ ನನಗೆ ತುಂಬಾ ಭಯವಿದೆ. ಅವಳಿಗೆ ಯಾರಾದರೂ ಒಳ್ಳೆಯವರು ಸಿಗಲಿ ಎಂದು ಪ್ರತಿದಿನ ಪ್ರಾರ್ಥಿಸುತ್ತೇನೆ. ನಿನಗೆ ನನ್ನ ಮಗಳ ಜವಾಬ್ದಾರಿಯನ್ನು ವಹಿಸಬೇಕೆಂದು ಕೇಳುವ ಹಕ್ಕು ನನಗಿಲ್ಲ. ತಾಯ್ತನವನ್ನು ಯಾರ ಮೇಲೂ ಹೇರಲಾಗುವುದಿಲ್ಲ. ಅವಳು ಎಲ್ಲೇ ಬೆಳೆದರೂ ಸುರಕ್ಷಿತವಾಗಿರಲಿ. ಅವಳನ್ನು ಪ್ರೀತಿಸುವವರು ಅವಳಿಗೆ ಸಿಗಲಿ. ಆದರೆ ಒಂದು ದಿನ ಅವಳ ದಾರಿಯಲ್ಲಿ ನೀನು ಬಂದರೆ…ನೀನು ಒಮ್ಮೆ ನನಗೆ ಕೊಟ್ಟ ಧೈರ್ಯವನ್ನು ಅವಳಿಗೂ ಕೊಡುವೆಯೆಂಬ ನಂಬಿಕೆ ನನಗಿದೆ. ನನ್ನನ್ನು ಜನ್ಮಕೊಟ್ಟವರು ಈ ಜಗತ್ತಿಗೆ ತಂದರು. ಆದರೆ ನಾನು ಬದುಕನ್ನು ಮತ್ತೆ ಆರಂಭಿಸಲು ಸಾಧ್ಯವೆಂದು ನಂಬುವಂತೆ ಮಾಡಿದವಳು ನೀನು.  ದೇಹೀ, ನಿನ್ನ ನಗುವಿನ ಹಿಂದೆ ಎಷ್ಟು ಆಯಾಸವಿದೆ ಎಂದು ಆರು ತಿಂಗಳಲ್ಲಿ ನಾನು ನೋಡಿದ್ದೆ. ಒಂದು ದಿನ ನಿನಗೂ ‘ನೀನು ಒಬ್ಬಳೇ ಅಲ್ಲ’ ಎಂದು ಹೇಳಬೇಕಾಗಬಹುದು. ಆ ದಿನ ಈ ಮಾತು ನಿನ್ನ ಬಳಿಗೆ ತಲುಪಲಿ…ನೀನು ಒಮ್ಮೆ ನನಗೆ ಹೇಳಿದ್ದ ಮಾತು ನೆನಪಿದೆಯಾ? ಒಳ್ಳೆಯತನಕ್ಕೆ ಪ್ರತಿಫಲ ಕೇಳಬೇಡ. ಆದರೆ ಅದನ್ನು ಮುಂದಿನವರಿಗೆ ತಲುಪಿಸು ಎಂದು. ನಾನು ನನ್ನ ಮಗಳಿಗೆ ಅದನ್ನೇ ಕಲಿಸಲು ಪ್ರಯತ್ನಿಸಿದ್ದೇನೆ. ದೇಹೀ… ಈ ಸಮಯವೂ ಕಳೆದುಹೋಗುತ್ತದೆ. ನೀನು ಒಬ್ಬಳೇ ಅಲ್ಲ.”
ಧ್ವನಿ ನಿಂತಿತು.

ಕೋಣೆಯಲ್ಲಿ ಮಳೆಯ ಸದ್ದು ಮಾತ್ರ ಉಳಿಯಿತು. ವೈದೇಹಿ ವೈದೇಹಿ ಬಹಳ ಹೊತ್ತು ಮಾತಾಡಲಿಲ್ಲ. ನಂತರ ಅವಳೊಳಗೆ ವರ್ಷಗಳಿಂದ ಕೇಳಿಸುತ್ತಿದ್ದ ಧ್ವನಿಯ ರಹಸ್ಯ ನಿಧಾನವಾಗಿ ತೆರೆದುಕೊಂಡಿತು.
ಆ ಬಸ್ ನಿಲ್ದಾಣ. ಸಾನ್ವಿಯ ಕಣ್ಣೀರು. ಕೇಂದ್ರದಲ್ಲಿ ಕೆಲಸ ಮಾಡಿದ ಆರು ತಿಂಗಳು. ವಿದಾಯ ಹೇಳುವಾಗ ಸಾನ್ವಿ ನೀಡಿದ್ದ ನೀಲಿ ಹೂವು. 
“ಮೇಡಂ, ಇದನ್ನು ನಿಮ್ಮ ಪುಸ್ತಕದಲ್ಲಿ ಇಡಿ. ನನ್ನನ್ನು ಮರೆಯಬೇಡಿ,” ಎಂದಿದ್ದಳು.
ವೈದೇಹಿ ಆ ಹೂವನ್ನು ಕೆಲವು ದಿನ ಪುಸ್ತಕದಲ್ಲಿ ಇಟ್ಟುಕೊಂಡಿದ್ದಳು. ನಂತರ ಮನೆ ಬದಲಿಸುವಾಗ ಅದು ಎಲ್ಲೋ ಕಳೆದುಹೋಗಿತ್ತು.
ಆದರೆ ಸಾನ್ವಿ ತನ್ನ ಬಳಿಯೂ ಅಂಥದ್ದೇ ಹೂವೊಂದನ್ನು ಉಳಿಸಿಕೊಂಡಿದ್ದಳು. ವೈದೇಹಿ ಪೆಟ್ಟಿಗೆಯೊಳಗಿನ ಒಣಗಿದ ನೀಲಿ ಹೂವನ್ನು ಕೈಗೆತ್ತಿಕೊಂಡಳು. ಅದು ಈಗ ಕೇವಲ ಹೂವಾಗಿರಲಿಲ್ಲ. ಹನ್ನೊಂದು ವರ್ಷಗಳ ಹಿಂದೆ ಆರಂಭವಾದ ಪರಿಚಯದ ಮೌನ ಸಾಕ್ಷಿಯಾಗಿತ್ತು. ಅವಳೊಳಗೆ ವರ್ಷಗಳಿಂದ ಮೂಡುತ್ತಿದ್ದ ಸಾಂತ್ವನದ ಮಾತಿನ ಅರ್ಥವೂ ಆ ಕ್ಷಣದಲ್ಲಿ ಹೊಸದಾಯಿತು. ಕೆಲವೊಮ್ಮೆ ಆ ಮಾತು ತನ್ನ ಹಳೆಯ ದಿನಗಳ ಮುಗ್ಧ ಭರವಸೆಯಿಂದ ಬಂದಿರಬಹುದು ಎಂದುಕೊಂಡಿದ್ದಳು. ಕೆಲವೊಮ್ಮೆ ದೇವರು ತನಗೆ ಧೈರ್ಯ ಹೇಳುತ್ತಿದ್ದಾನೆಂದು ಭಾವಿಸಿದ್ದಳು. ಆದರೆ ಈಗ ತನ್ನದೇ ಮಾತು ಮತ್ತೊಬ್ಬರ ಬದುಕಿನಲ್ಲಿ ಎಷ್ಟು ಆಳವಾಗಿ ಬೇರುಬಿಟ್ಟಿತ್ತು ಎಂಬುದು ಅವಳಿಗೆ ತಿಳಿಯಿತು.
ತಾನು ಒಮ್ಮೆ ಸಾನ್ವಿಗೆ ಹೇಳಿದ್ದ ಮಾತು, ಸಾನ್ವಿಯ ಬದುಕಿನಲ್ಲಿ ಆಶ್ರಯ ಪಡೆದು, ಮಿಹಿಕಾಳ ಬಾಲ್ಯದಲ್ಲಿ ಬೆಳೆದು, ಈಗ ಮತ್ತೆ ತನ್ನ ಬಳಿಗೆ ಬಂದಿತ್ತು. 

“ಅಮ್ಮಾ…” ಮಿಹಿಕಾ ಅವಳ ಕೈ ಮುಟ್ಟಿದಳು. “ನೀವು ಯಾಕೆ ಅಳುತ್ತಿಲ್ಲ?” 
ವೈದೇಹಿ ಅವಳನ್ನು ಬಿಗಿಯಾಗಿ ಅಪ್ಪಿಕೊಂಡಳು. ಆಗ ಕಣ್ಣೀರು ಒಡೆದುಬಂತು. ““ನಾನು ಇಷ್ಟು ವರ್ಷ ನನಗೆ ಯಾರೋ ಧೈರ್ಯ ಹೇಳುತ್ತಿದ್ದಾರೆಂದುಕೊಂಡಿದ್ದೆ ಮಿಹಿಕಾ. ಆದರೆ ನಿನ್ನ ಅಮ್ಮ ನನ್ನದೇ ಮಾತನ್ನು ಜೋಪಾನವಾಗಿ ಇಟ್ಟು, ಮತ್ತೆ ನನಗೆ ಕಳುಹಿಸಿದ್ದಾಳೆ.”
“ಅಮ್ಮಗೆ ನೀವು ಗೊತ್ತಿತ್ತಾ?”
“ಹೌದು. ನಿನ್ನ ಅಮ್ಮ ನನಗೆ ಗೊತ್ತಿದ್ದಳು. ಆದರೆ ಅವಳು ಎಷ್ಟು ಧೈರ್ಯವಂತೆ ಎಂದು ನನಗೆ ಈಗ ಇನ್ನಷ್ಟು ಚೆನ್ನಾಗಿ ಅರ್ಥವಾಗುತ್ತಿದೆ.”
“ಹಾಗಾದರೆ ನನಗೆ ಇಬ್ಬರು ಅಮ್ಮಂದಿರಾ?”
ವೈದೇಹಿ ಅವಳ ಮುಖವನ್ನು ಕೈಗಳಲ್ಲಿ ಹಿಡಿದಳು. “ಹೌದು ಮಿಹಿಕಾ. ನಿಂಗೆ ಜನ್ಮಕೊಟ್ಟ ಅಮ್ಮ ನಿನ್ನ ಬದುಕಿನ ಮೊದಲ ಭಾಗದಲ್ಲಿದ್ದಾಳೆ. ನಿನ್ನ ಜೊತೆ ಮುಂದಿನ ದಾರಿಯಲ್ಲಿ ನಡೆಯಲು ನಾನು ಇದ್ದೇನೆ. ನೀನು ನಮ್ಮಿಬ್ಬರನ್ನೂ ಪ್ರೀತಿಸಬಹುದು.”
“ಒಬ್ಬರನ್ನು ಹೆಚ್ಚು ಪ್ರೀತಿಸಿದರೆ ಇನ್ನೊಬ್ಬರಿಗೆ ಬೇಸರವಾಗುವುದಿಲ್ಲವಾ?”
“ಪ್ರೀತಿಯನ್ನು ಭಾಗಿಸಿದರೆ ಕಡಿಮೆಯಾಗುವುದಿಲ್ಲ ಕಣೇ. ಅದು ಇನ್ನಷ್ಟು ದೊಡ್ಡದಾಗುತ್ತದೆ.”
ಮಿಹಿಕಾ ವೈದೇಹಿಯ ಕಣ್ಣೀರು ಒರೆಸಿದಳು. “ಆಗ ನೀವು ಮತ್ತೆ ದುಃಖವಾದರೆ ನಾನು ಅಮ್ಮ ಹೇಳಿದ ಮಾತು ಹೇಳುತ್ತೇನೆ.”
“ಏನು ಹೇಳುತ್ತೀಯ?”
ಮಗು ಅವಳ ಕಿವಿಯ ಬಳಿ ಬಂದು ಪಿಸುಗುಟ್ಟಿತು. “ದೇಹೀ… ಈ ಸಮಯವೂ ಕಳೆದುಹೋಗುತ್ತದೆ. ನಾನು ಇಲ್ಲೇ ಇದ್ದೇನೆ.”
ಆದಿತ್ಯ ಮುಖ ತಿರುಗಿಸಿ ಕಣ್ಣೀರು ಮರೆಮಾಡಲು ಪ್ರಯತ್ನಿಸಿದ. ಮಿಹಿಕಾ ಅವನನ್ನು ನೋಡಿ, “ಅಪ್ಪಾ, ನಿಮ್ಮ ಕಣ್ಣಿಗೆ ಮಳೆ ಬಂತಾ?” ಎಂದು ಕೇಳಿದಳು.
“ಹೌದು. ನಮ್ಮ ಮನೆಯೊಳಗೂ ಮಳೆ ಬರುತ್ತದೆ ಅನ್ನಿಸುತ್ತದೆ,” ಎಂದ.
“ಛತ್ರಿ ತರಲಾ?”
ಮೂರೂ ಜನ ನಗುತ್ತಲೇ ಅತ್ತರು.

 ***

ಮುಂದಿನ ವರ್ಷ ಸಹಜ ಶಿಕ್ಷಣ ಕೇಂದ್ರದ ಹೊಸ ಕಟ್ಟಡ ಉದ್ಘಾಟನೆಯಾಯಿತು. ವೈದೇಹಿ ಬಾಲ್ಯದಲ್ಲಿ ಬಿಡಿಸಿದ್ದ ಚಿತ್ರದಂತೆಯೇ ಮಧ್ಯದಲ್ಲಿ ದೊಡ್ಡ ಮರವಿತ್ತು. ಒಂದು ಕಡೆ ಪಾಠದ ಕೊಠಡಿಗಳು, ಇನ್ನೊಂದು ಕಡೆ ಸಂಗೀತ ಮತ್ತು ಕಲಾ ವಿಭಾಗ, ಮೂರನೆಯ ಕಡೆ ಡಿಜಿಟಲ್ ಕಲಿಕಾ ಕೇಂದ್ರ. ಮರದ ಕೆಳಗೆ ಕಲ್ಲಿನ ವೃತ್ತಾಕಾರದ ಆಸನ ಮಾಡಿಸಲಾಗಿತ್ತು. ಅದರ ಮೇಲೆ ಒಂದು ಸಾಲು ಕೆತ್ತಲಾಗಿತ್ತು:
‘ಇಲ್ಲಿ ಯಾರೂ ಅಪೂರ್ಣರಲ್ಲ; ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಅರಳುತ್ತಿರುವವರು.’
ವೈದೇಹಿ ಕೇಂದ್ರದ ಒಂದು ವಿಭಾಗಕ್ಕೆ “ಸಾನ್ವಿ ಆಶ್ರಯ” ಎಂದು ಹೆಸರಿಟ್ಟಳು. ಆರ್ಥಿಕ ಸಮಸ್ಯೆಯಿಂದ ಓದು ನಿಲ್ಲಿಸುವ ಹೆಣ್ಣುಮಕ್ಕಳಿಗೆ ತರಬೇತಿ ಮತ್ತು ಕೆಲಸದ ಅವಕಾಶ ನೀಡುವುದು ಅದರ ಉದ್ದೇಶವಾಗಿತ್ತು. ಸಹಾಯ ಪಡೆಯುವವರು ನಾಚಿಕೆಪಡಬಾರದು ಎಂಬ ಕಾರಣಕ್ಕೆ ಅದನ್ನು ದಾನವೆಂದು ಕರೆಯಲಿಲ್ಲ; ‘ಮುಂದಿನ ಕೈ’ ಯೋಜನೆ ಎಂದು ಹೆಸರಿಟ್ಟಳು. ನೆರವು ಪಡೆದವರು ತಮ್ಮ ಕಾಲಿನ ಮೇಲೆ ನಿಂತ ನಂತರ ಮತ್ತೊಬ್ಬರಿಗೆ ಸಾಧ್ಯವಾದಷ್ಟು ನೆರವಾಗಬೇಕು—ಅಷ್ಟೇ ಅದರ ಆಶಯ.
ಉದ್ಘಾಟನೆಯ ದಿನ ಮಳೆ ಬಂತು. ಅತಿಥಿಗಳು ಮರದ ಕೆಳಗಿಂದ ಸಭಾಂಗಣಕ್ಕೆ ಓಡಿದರು. ಮಿಹಿಕಾ ಮಾತ್ರ ಮಳೆಯಲ್ಲಿ ನಿಂತು ಕೈ ಚಾಚಿದಳು.
“ಹೆದರಿಕೆಯಾಗುವುದಿಲ್ಲವಾ?” ಎಂದು ಆದಿತ್ಯ ಕೇಳಿದ.
ಮಿಹಿಕಾ ಆಕಾಶದತ್ತ ನೋಡಿದಳು.“ಸ್ವಲ್ಪ ಆಗುತ್ತದೆ. ಆದರೆ ಈಗ ಮಳೆ ಬಂದಾಗ ನಾನು ಒಬ್ಬಳೇ ಇರುವುದಿಲ್ಲ.”
ವೈದೇಹಿ ಅವಳ ಬಳಿ ಹೋಗಿ ನಿಂತಳು. ಮಳೆ ಅವರಿಬ್ಬರನ್ನೂ ನೆನೆಸಿತು.
ಹಲವು ವರ್ಷಗಳ ಹಿಂದೆ ಆಸ್ಪತ್ರೆಯ ಮೆಟ್ಟಿಲ ಮೇಲೆ ತನ್ನ ಕಣ್ಣೀರನ್ನು ಮರೆಮಾಡಿದ್ದ ಅದೇ ಮಳೆ, ಇಂದು ಅವಳ ಮಗಳ ಮುಖದಲ್ಲಿ ನಗುವನ್ನು ಅರಳಿಸುತ್ತಿತ್ತು.

ಆ ರಾತ್ರಿ ಕಾರ್ಯಕ್ರಮ ಮುಗಿದ ನಂತರ ವೈದೇಹಿ ಒಬ್ಬಳೇ ಮರದ ಕೆಳಗೆ ಕುಳಿತಳು. ಅವಳ ಕೈಯಲ್ಲಿ ಹುಟ್ಟದ ಮಕ್ಕಳಿಗೆ ಬರೆದಿದ್ದ ಎರಡು ಪತ್ರಗಳಿದ್ದವು. ಅವುಗಳನ್ನು ಸುಡಬೇಕೆಂದು ಒಮ್ಮೆ ಯೋಚಿಸಿದ್ದಳು. ನಂತರ ಹರಿಯುವ ನೀರಿಗೆ ಬಿಡಬೇಕೆಂದಿದ್ದಳು. ಈಗ ಅವನ್ನು ಮಿಹಿಕಾಳ ತಾಯಿಯ ಡೈರಿಯ ಪಕ್ಕದಲ್ಲಿ ಜೋಪಾನವಾಗಿ ಇಡಲು ನಿರ್ಧರಿಸಿದಳು.
ಆದಿತ್ಯ ಬಂದು ಪಕ್ಕದಲ್ಲಿ ಕುಳಿತ. “ಇನ್ನೂ ಅವರ ಬಗ್ಗೆ ಯೋಚಿಸುತ್ತೀಯಾ?”
“ಪ್ರತಿದಿನ ಅಲ್ಲ. ಆದರೆ ಕೆಲವು ದಿನ.”
“ಮಿಹಿಕಾ ಬಂದ ಮೇಲೆ ನೋವು ಹೋಗಿದೆಯಾ?”
ವೈದೇಹಿ ತಲೆ ಆಡಿಸಿದಳು. “ನೋವಿನ ರೂಪ ಬದಲಾಗಿದೆ ಆದಿತ್ಯ. ಆದರೆ ಒಂದು ಮಗು ಮತ್ತೊಂದು ಮಗುವಿನ ಸ್ಥಾನ ತುಂಬುವುದಿಲ್ಲ. ಮಿಹಿಕಾ ನನ್ನ ನಷ್ಟಕ್ಕೆ ಪರಿಹಾರವಲ್ಲ. ಅವಳು ತನ್ನದೇ ಸಂಪೂರ್ಣ ಕಥೆಯೊಂದಿಗೆ ಬಂದವಳು. ನನ್ನೊಳಗೆ ಬಂದಿದ್ದ ಆ ಎರಡು ಜೀವಗಳು ಉಳಿಯಲಿಲ್ಲ; ಅವುಗಳ ನೆನಪು ಬೇರೆ. ಮಿಹಿಕಾಳ ಮೇಲಿನ ಪ್ರೀತಿ ಬೇರೆ. ಎಲ್ಲವೂ ಒಂದೇ ಹೃದಯದಲ್ಲಿ ಇರಬಹುದು.”
“ಹೃದಯಕ್ಕೆ ಅಷ್ಟು ಜಾಗ ಹೇಗೆ ಸಿಗುತ್ತದೆ?”
ವೈದೇಹಿ ಅವನತ್ತ ನೋಡಿದಳು. “ನೋವು ಬಂದಾಗ ಅದು ಒಡೆಯುತ್ತದೆ ಅಲ್ವಾ? ಒಡೆದ ಬಿರುಕುಗಳ ನಡುವೆ ಹೊಸ ಜಾಗ ಸಿಗಬಹುದು.”
ಆದಿತ್ಯ ಅವಳ ಕೈ ಹಿಡಿದ. “ನಾನು ನಿನ್ನ ಮೌನ ಅರ್ಥಮಾಡಿಕೊಳ್ಳುವ ತರಬೇತಿಯಲ್ಲಿ ಈಗ ಎಷ್ಟು ಅಂಕ ಪಡೆದಿದ್ದೇನೆ?”
“ಪಾಸ್ ಆಗಿದ್ದೀಯ. ಆದರೆ ಜೀವಮಾನಪೂರ್ತಿ ಮರುಪರೀಕ್ಷೆ ಇದೆ.”
“ಅದು ಅನ್ಯಾಯ.”
“ಮದುವೆಯ ನಿಯಮಾವಳಿಯನ್ನು ಓದದೆ ಸಹಿ ಮಾಡಿದ್ದು ನಿಮ್ಮ ತಪ್ಪು.”
ಇಬ್ಬರೂ ನಕ್ಕರು.

ದೂರದಲ್ಲಿ ಮಿಹಿಕಾ ಕಿಟಕಿಯ ಬಳಿ ನಿಂತು ಅವರನ್ನು ನೋಡುತ್ತಿದ್ದಳು. ಅವಳು ಹೊಸ ಚಿತ್ರವೊಂದನ್ನು ಬಿಡಿಸಿದ್ದಳು. ದೊಡ್ಡ ಮರದ ಕೆಳಗೆ ಈ ಬಾರಿ ಮುಖವಿಲ್ಲದ ಒಬ್ಬಳೇ ಮಹಿಳೆ ಇರಲಿಲ್ಲ. ಮೂವರು ಕೈ ಹಿಡಿದು ನಿಂತಿದ್ದರು. ಮೇಲಿನ ಮೋಡದ ಅಂಚಿನಲ್ಲಿ ಇನ್ನೊಬ್ಬ ಮಹಿಳೆಯ ಮುಖ ಮೃದುವಾಗಿ ಮೂಡಿತ್ತು. ಚಿತ್ರದ ಕೆಳಗೆ ಮಿಹಿಕಾ ತನ್ನ ಅಕ್ಷರಗಳಲ್ಲಿ ಬರೆದಿದ್ದಳು:
‘ಹೋದವರು ಆಕಾಶವಾಗುತ್ತಾರೆ. ಉಳಿದವರು ಒಬ್ಬರಿಗೊಬ್ಬರು ಛತ್ರಿಯಾಗುತ್ತಾರೆ.’
ವೈದೇಹಿ ಆ ಚಿತ್ರವನ್ನು ನೋಡಿದಾಗ ಅವಳ ಕಣ್ಣು ಮತ್ತೆ ತುಂಬಿತು. ಈ ಬಾರಿ ಅವಳು ಕಣ್ಣೀರನ್ನು ಮರೆಮಾಡಲಿಲ್ಲ.

 ***

ಕೆಲವು ತಿಂಗಳುಗಳ ನಂತರ ‘ಮುಂದಿನ ಕೈ’ ಯೋಜನೆಯಿಂದ ತರಬೇತಿ ಪಡೆದಿದ್ದ ರೇವತಿ ಎಂಬ ಯುವತಿ ವೈದೇಹಿಯ ಕೊಠಡಿಗೆ ಬಂದಳು.  ಅವಳ ಕೈಯಲ್ಲಿ ಮೊದಲ ಸಂಬಳದ ಲಕೋಟೆಯಿತ್ತು. “ಮೇಡಂ, ನೀವು ಕೊಟ್ಟ ಸಹಾಯದ ಹಣವನ್ನು ಮರಳಿಸಲು ಬಂದಿದ್ದೇನೆ,” ಎಂದಳು.
ವೈದೇಹಿ ಲಕೋಟೆಯನ್ನು ಹಿಂದಕ್ಕೆ ತಳ್ಳಿದಳು. “ನನಗೆ ಮರಳಿಸಬೇಡ. ನಿನಗೆ ಸಾಧ್ಯವಾದ ದಿನ ಇನ್ನೊಬ್ಬಳಿಗೆ ಒಂದು ಅವಕಾಶ ಕೊಡು.”
ರೇವತಿ ಕ್ಷಣಕಾಲ ಮೌನವಾಗಿದ್ದಳು. ನಂತರ ಹೊರಗೆ ಕಾಯುತ್ತಿದ್ದ ಹದಿನಾರರ ಹರೆಯದ ಹುಡುಗಿಯನ್ನು ಒಳಗೆ ಕರೆತಂದಳು. “ಇವಳು ಕಾವ್ಯಾ. ತಂದೆ ಇಲ್ಲ. ಮನೆಯವರು ಓದು ನಿಲ್ಲಿಸಿ ಕೆಲಸಕ್ಕೆ ಕಳುಹಿಸಲು ಹೊರಟಿದ್ದಾರೆ. ನನ್ನ ಮೊದಲ ಸಂಬಳದಿಂದ ಇವಳ ಪುಸ್ತಕದ ಖರ್ಚು ನೋಡಿಕೊಳ್ಳುತ್ತೇನೆ. ನೀವು ಇವಳಿಗೆ ಇಲ್ಲಿ ಕಲಿಯಲು ಜಾಗ ಕೊಡುತ್ತೀರಾ?” ಎಂದು ಕೇಳಿದಳು.
ವೈದೇಹಿ ಉತ್ತರಿಸುವ ಮುನ್ನವೇ ಮಿಹಿಕಾ, “ಜಾಗ ಯಾಕಿಲ್ಲ? ನಮ್ಮ ಮರದ ಕೆಳಗೆ ಇನ್ನೂ ತುಂಬಾ ನೆರಳಿದೆ!” ಎಂದಳು.
ಕೊಠಡಿಯಲ್ಲಿದ್ದವರೆಲ್ಲ ನಕ್ಕರು.
ವೈದೇಹಿ ಮಾತ್ರ ಕ್ಷಣಕಾಲ ಕಣ್ಣು ಮುಚ್ಚಿದಳು.
ಹನ್ನೊಂದು ವರ್ಷಗಳ ಹಿಂದೆ ಬಸ್ ನಿಲ್ದಾಣದಲ್ಲಿ ತಾನು ಸಾನ್ವಿಗೆ ಚಾಚಿದ್ದ ಕೈ, ಇಂದು ರೇವತಿಯಿಂದ ಕಾವ್ಯಾಳ ಕಡೆಗೆ ಸಾಗುತ್ತಿತ್ತು. ಅವಳು ರೇವತಿಯತ್ತ ನೋಡಿದಳು. “ನೀನು ಇಂದು ನನಗೆ ಕೊಟ್ಟದ್ದು ಹಣಕ್ಕಿಂತ ದೊಡ್ಡದು.”
“ಏನು ಮೇಡಂ?”
“ನಾನು ಆರಂಭಿಸಿದ ಕೆಲಸವನ್ನು ನೀನು ಮುಂದುವರಿಸುತ್ತಿದ್ದೀಯಲ್ಲ… ಅದೇ.”
ರೇವತಿ ನಕ್ಕಳು.
ಮಿಹಿಕಾ ಕಾವ್ಯಾಳ ಕೈ ಹಿಡಿದು ಹೊರಗೆ ಕರೆದೊಯ್ದಳು. “ಬಾ, ಮೊದಲು ನಮ್ಮ ಮರ ತೋರಿಸುತ್ತೇನೆ. ಅಲ್ಲಿ ಕುಳಿತುಕೊಂಡರೆ ಯಾರೂ ನಿನ್ನನ್ನು ಓಡಿಸುವುದಿಲ್ಲ.”
ವೈದೇಹಿ ಕಿಟಕಿಯ ಬಳಿ ನಿಂತು ನೋಡಿದಳು. ಮರದ ಕೆಳಗೆ ಇಬ್ಬರು ಹುಡುಗಿಯರು ಕುಳಿತಿದ್ದರು. ಒಬ್ಬಳು ತನ್ನ ಕಥೆಯನ್ನು ಹೇಳುತ್ತಿದ್ದಳು. ಇನ್ನೊಬ್ಬಳು ಕೇಳುತ್ತಿದ್ದಳು. ವೈದೇಹಿಗೆ ಹಳೆಯ ಬಸ್ ನಿಲ್ದಾಣ ನೆನಪಾಯಿತು. ಅಂದೂ ಹಾಗೆಯೇ ಆಗಿತ್ತು. ಒಬ್ಬಳು ಅಳುತ್ತಿದ್ದಳು. ಇನ್ನೊಬ್ಬಳು ಪಕ್ಕದಲ್ಲಿ ಕುಳಿತು ಕೇಳಿದ್ದಳು. ಕೆಲವು ಕಥೆಗಳು ಬಹುಶಃ ದೊಡ್ಡ ಘಟನೆಗಳಿಂದ ಆರಂಭವಾಗುವುದಿಲ್ಲ. ಯಾರೋ ಒಬ್ಬರು ನಮ್ಮ ಪಕ್ಕದಲ್ಲಿ ಕುಳಿತು, “ಏನಾಯಿತು?” ಎಂದು ಕೇಳುವುದರಿಂದ ಆರಂಭವಾಗುತ್ತವೆ.

 ***

ಆ ರಾತ್ರಿ ಮಳೆ ನಿಧಾನವಾಗಿ ನಿಂತಿತು. ಮರದ ಎಲೆಗಳಿಂದ ಒಂದೊಂದೇ ಹನಿ ಜಾರುತ್ತಿತ್ತು. ವೈದೇಹಿ ಮನೆಯ ಬಾಗಿಲು ಮುಚ್ಚಲು ಎದ್ದಾಗ ಮಿಹಿಕಾ ಓಡಿ ಬಂದು ಅವಳ ಕೈ ಹಿಡಿದಳು. ಆದಿತ್ಯ ಮತ್ತೊಂದು ಬದಿಯಲ್ಲಿ ನಿಂತ. ಮೂವರೂ ಒಳಗೆ ನಡೆಯುವಾಗ ಆಕಾಶದ ಮೋಡದ ನಡುವೆ ಒಂದು ನಕ್ಷತ್ರ ಕಾಣಿಸಿತು. 
ಮಿಹಿಕಾ ಅದನ್ನು ತೋರಿಸಿ, “ಅದು ನನ್ನ ಮೊದಲ ಅಮ್ಮನಾ?” ಎಂದು ಕೇಳಿದಳು.
ವೈದೇಹಿ ಆಕಾಶವನ್ನು ನೋಡಿ ನಗಿದಳು. “ಬಹುಶಃ ಅವಳೂ ಇರಬಹುದು. ಇನ್ನೂ ನಮ್ಮನ್ನು ದೂರದಿಂದ ಪ್ರೀತಿಸುವ ಎಲ್ಲರೂ ಇರಬಹುದು.”
“ಆಗ ನಾವು ಅವರಿಗೆ ಏನು ಹೇಳಬೇಕು?”
ವೈದೇಹಿ ಮಗಳ ಕೈಯನ್ನು ಗಟ್ಟಿಯಾಗಿ ಹಿಡಿದಳು. “ನೀವು ಕೊಟ್ಟ ಬೆಳಕು ನಮ್ಮವರೆಗೆ ತಲುಪಿದೆ ಎಂದು ಹೇಳೋಣ.”
ಮಿಹಿಕಾ ಆಕಾಶದತ್ತ ಕೈ ಬೀಸಿದಳು. ನಂತರ ಇದ್ದಕ್ಕಿದ್ದಂತೆ ವೈದೇಹಿಯತ್ತ ತಿರುಗಿದಳು. “ಅಮ್ಮಾ, ನಾಳೆ ಮಳೆ ಬಂದರೆ?”
“ಏನಾಯಿತು?”
“ನಾವು ಛತ್ರಿ ಹಿಡಿದು ಶಾಲೆಗೆ ಹೋಗೋಣವಾ?”
“ಹೋಗೋಣ.”
“ಕಾವ್ಯಾಳಿಗೂ ಒಂದು ಛತ್ರಿ ಬೇಕು.”
ಆದಿತ್ಯ ನಕ್ಕ. “ನಾಳೆ ಅವಳಿಗೂ ತರುತ್ತೇನೆ.”
ಮಿಹಿಕಾ ಸಂತೋಷದಿಂದ ಮನೆಯೊಳಗೆ ಓಡಿದಳು. 
ವೈದೇಹಿ ಮಾತ್ರ ಬಾಗಿಲ ಬಳಿ ಕ್ಷಣಕಾಲ ನಿಂತಳು.ಮಳೆಯಿಂದ ತೊಳೆದ ಅಂಗಳದಲ್ಲಿ ಬೀದಿದೀಪದ ಬೆಳಕು ಬೆಳ್ಳಿಯ ದಾರಿಯಂತೆ ಹರಡಿತ್ತು. ಅವಳಿಗೆ ತನ್ನ ಬಾಲ್ಯದ ಸೀಮೆಎಣ್ಣೆಯ ದೀಪ ನೆನಪಾಯಿತು. ಆ ದೀಪದ ಕೆಳಗೆ ಕುಳಿತು ಕನಸು ಕಂಡ ಪುಟ್ಟ ಹುಡುಗಿ. ತಂದೆಯ ಆಯಾಸವನ್ನು ಕಡಿಮೆ ಮಾಡಲು ಮೊದಲ ಸಂಬಳ ಖರ್ಚು ಮಾಡಿದ ಮಗಳು. ಗಂಡನ ಸೋಲಿನ ದಿನಗಳಲ್ಲಿ ಅವನ ಪಕ್ಕದಲ್ಲಿ ನಿಂತ ಹೆಂಡತಿ. ಮಕ್ಕಳಿಗಾಗಿ ಶಾಲೆ ಕಟ್ಟಿದ ಶಿಕ್ಷಕಿ. ತನ್ನೊಳಗೆ ಮೂಡಿದ ಎರಡು ಪುಟ್ಟ ಜೀವಗಳನ್ನು ಕಳೆದುಕೊಂಡ ತಾಯಿ. ಮತ್ತೊಬ್ಬ ತಾಯಿಯ ನೆನಪುಗಳನ್ನು ಹೊತ್ತು ಬಂದ ಮಗುವಿಗೆ ತನ್ನ ಮನೆಯಲ್ಲಿ ಜಾಗಕೊಟ್ಟ ಮಹಿಳೆ. ಅವಳ ಬದುಕಿನ ಯಾವ ಭಾಗವೂ ಅಳಿದುಹೋಗಿರಲಿಲ್ಲ. ಅವೆಲ್ಲವೂ ಸೇರಿ ಇಂದಿನ ವೈದೇಹಿಯನ್ನು ರೂಪಿಸಿದ್ದವು.
ಒಂದು ಕಾಲದಲ್ಲಿ ಅವಳ ನಗು ತನ್ನ ನೋವನ್ನು ಮರೆಮಾಡುವ ಪರದೆಯಾಗಿತ್ತು. ಈಗಲೂ ಅವಳ ಬದುಕಿನಲ್ಲಿ ನೋವಿತ್ತು. ಆದರೆ ಅದನ್ನು ಮರೆಮಾಡಲು ನಗಬೇಕಾದ ಅನಿವಾರ್ಯತೆ ಇರಲಿಲ್ಲ. ನಗುವಿನ ಜೊತೆಗೆ ಅಳುವುದಕ್ಕೂ, ದುಃಖದ ಜೊತೆಗೆ ಸಂತೋಷಪಡುವುದಕ್ಕೂ ಅವಳು ತನ್ನ ಮನಸ್ಸಿನಲ್ಲಿ ಜಾಗ ಮಾಡಿಕೊಂಡಿದ್ದಳು. 
ಒಳಗಿನಿಂದ ಮಿಹಿಕಾಳ ಧ್ವನಿ ಕೇಳಿಸಿತು. “ಅಮ್ಮಾ… ಬೇಗ ಬನ್ನಿ! ಅಪ್ಪ ಮತ್ತೆ ಸಕ್ಕರೆ ಹಾಕಿ ಸಾರು ಮಾಡುತ್ತಿದ್ದಾರೆ!”
ವೈದೇಹಿ ಜೋರಾಗಿ ನಕ್ಕಳು. “ಆದಿತ್ಯ! ಈ ಸಲ ಉಪ್ಪಿನ ಡಬ್ಬಿ ಎಲ್ಲಿದೆ ಎಂದು ಮೊದಲು ನೋಡಿ!”
“ನನಗೆ ಗೊತ್ತಿದೆ!” ಎಂದು ಒಳಗಿನಿಂದ ಆದಿತ್ಯನ ಉತ್ತರ ಬಂತು. 
“ಅದಕ್ಕೇ ಭಯವಾಗುತ್ತಿದೆ!” ಎಂದಳು ವೈದೇಹಿ. 
ಮನೆಯೊಳಗೆ ನಗು ಹರಡಿತು. ಅವಳು ಬಾಗಿಲು ಮುಚ್ಚಿ ಒಳಗೆ ನಡೆದಳು. ಹೊರಗೆ ಮಳೆ ನಿಂತಿತ್ತು. ಆದರೆ ಮರದ ಎಲೆಗಳ ಮೇಲೆ ಉಳಿದಿದ್ದ ಹನಿಗಳು ಇನ್ನೂ ನಿಧಾನವಾಗಿ ನೆಲಕ್ಕೆ ಬೀಳುತ್ತಿದ್ದವು. ಒಂದು ಹನಿ ಬಿದ್ದ ಜಾಗದಲ್ಲಿ ಮತ್ತೊಂದು ಹನಿ ಬೀಳುತ್ತಿತ್ತು. ಒಂದು ಕೈ ಚಾಚಿದ ಜಾಗದಲ್ಲಿ ಮತ್ತೊಂದು ಕೈ ಚಾಚಿಕೊಳ್ಳುವಂತೆ. ವೈದೇಹಿಯ ಕಥೆ ಅಲ್ಲಿ ಮುಗಿಯಲಿಲ್ಲ. ಅದು ಮಿಹಿಕಾಳ ಕೈಯಲ್ಲಿ ಹೊಸ ಪುಟ ತೆರೆದಿತ್ತು.

***

  

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ