ಮಂಗಳವಾರ, ನವೆಂಬರ್ 17, 2026

ವಿಘ್ನಗಳೇ ಮೆಟ್ಟಿಲಾದಾಗ

✍🏻 ದೀಪಲಕ್ಷ್ಮಿ ಭಟ್, ಮಂಗಳೂರು 

“ಅಮ್ಮಾ, ಗಣಪತಿ ನಿಜವಾಗಿಯೂ ಎಲ್ಲ ವಿಘ್ನಗಳನ್ನೂ ತೆಗೆದುಹಾಕುತ್ತಾನಾ?” - ಎಂಟು ವರ್ಷದ ಕಾಮಿನಿ ಕೇಳಿದ ಪ್ರಶ್ನೆಗೆ ಅವಳ ತಾಯಿ ಲಕ್ಷ್ಮಿ ತಕ್ಷಣ ಉತ್ತರಿಸಲಿಲ್ಲ. ಒಲೆಯ ಮೇಲಿದ್ದ ಗಂಜಿಯನ್ನು ಸೌಟಿನಿಂದ ತಿರುಗಿಸುತ್ತಲೇ ಮಗಳ ಮುಖವನ್ನು ನೋಡಿದಳು. ಮನೆಯ ಒಂದು ಮೂಲೆಯಲ್ಲಿ ಪುಟ್ಟ ಮಣ್ಣಿನ ಗಣಪತಿಯ ಮೂರ್ತಿಯಿತ್ತು. ಹಿಂದಿನ ವರ್ಷದ ಗಣೇಶ ಚತುರ್ಥಿಯಿಂದ ಉಳಿಸಿಕೊಂಡಿದ್ದ ಆ ಮೂರ್ತಿಯ ಒಂದು ಕಿವಿ ಸ್ವಲ್ಪ ಮುರಿದಿತ್ತು. ಸೊಂಡಿಲಿನ ಬಣ್ಣ ಮಾಸಿತ್ತು. ಆದರೂ ಕಾಮಿನಿಗೆ ಆ ಗಣಪತಿ ಬಹಳ ಪ್ರಿಯವಾದ ಮೂರ್ತಿ.
"ತೆಗೆದುಹಾಕುತ್ತಾನೆ,” ಎಂದಳು ಲಕ್ಷ್ಮಿ. 
“ಹಾಗಾದರೆ ನಮ್ಮ ಮನೆಯ ಕಷ್ಟಗಳನ್ನೆಲ್ಲ ಇನ್ನೂ ಯಾಕೆ ತೆಗೆದುಹಾಕಿಲ್ಲ?” - ಮಗಳ ಮುಗ್ಧ ಪ್ರಶ್ನೆ ಲಕ್ಷ್ಮಿಯ ಎದೆಯನ್ನು ಚುಚ್ಚಿತು.
ಸೋರಿದ ಹೆಂಚಿನ ಮನೆ, ತೀರದ ಸಾಲ, ದಿನಗೂಲಿ ಕೆಲಸಕ್ಕೆ ಹೋಗಿ ಬರಿಗೈಯಲ್ಲಿ ಹಿಂದಿರುಗುವ ಗಂಡ, ಮಕ್ಕಳಿಗೆ ಹೊಟ್ಟೆತುಂಬ ಊಟ ಕೊಡಲಾಗದ ಅಸಹಾಯಕತೆ—ಆ ಮನೆಯೊಳಗೆ ವಿಘ್ನಗಳಿಗೆ ಕೊರತೆಯಿರಲಿಲ್ಲ.
ಲಕ್ಷ್ಮಿ ಮಗಳನ್ನು ತನ್ನ ಹತ್ತಿರಕ್ಕೆ ಕರೆದುಕೊಂಡಳು. - “ಗಣಪತಿ ಎಂದರೆ ನಮ್ಮ ದಾರಿಯಲ್ಲಿರುವ ಕಲ್ಲುಗಳನ್ನೆಲ್ಲ ಎತ್ತಿ ಎಸೆಯುವವನು ಮಾತ್ರ ಅಲ್ಲ, ಕಾಮಿ. ಯಾವ ಕಲ್ಲನ್ನು ಸರಿಸಬೇಕು, ಯಾವುದನ್ನು ದಾಟಬೇಕು, ಯಾವುದನ್ನು ನಾವು ಎತ್ತರಕ್ಕೆ ಹೋಗಲು ಮೆಟ್ಟಿಲು ಮಾಡಿಕೊಳ್ಳಬೇಕು ಎಂದು ತಿಳಿಸುವ ಬುದ್ಧಿಯೂ ಅವನೇ.”
ಕಾಮಿನಿಗೆ ಅಮ್ಮನ ಮಾತಿನ ಅರ್ಥ ಸಂಪೂರ್ಣವಾಗಿ ಆಗಲಿಲ್ಲ. ಆದರೆ ಆ ವಾಕ್ಯವನ್ನು ಮನಸ್ಸಿನೊಳಗೆ ಜೋಪಾನವಾಗಿ ಇಟ್ಟುಕೊಂಡಳು.


 

 

ಕಾಮಿನಿ ಹುಟ್ಟಿದ್ದು ಊರಿನ ಕೊನೆಯಲ್ಲಿದ್ದ ಚಿಕ್ಕ ಹೆಂಚಿನ ಮನೆಯಲ್ಲಿ. ತಂದೆ ಗೋಪಾಲ ಕಟ್ಟಡ ಕಾರ್ಮಿಕ. ಕೆಲಸ ಸಿಕ್ಕ ದಿನ ಮನೆಯಲ್ಲಿ ಅನ್ನ ಬೇಯುತ್ತಿತ್ತು; ಕೆಲಸ ಸಿಗದ ದಿನ ಗಂಜಿಯೇ ಊಟವಾಗುತ್ತಿತ್ತು. ತಾಯಿ ಲಕ್ಷ್ಮಿ ನಾಲ್ಕು ಮನೆಗಳಲ್ಲಿ ಕೆಲಸ ಮಾಡಿ ಕುಟುಂಬವನ್ನು ನಡೆಸುತ್ತಿದ್ದಳು. ಕಾಮಿನಿಯ ನಂತರ ಇಬ್ಬರು ತಮ್ಮಂದಿರು. ಅವರ ಊಟ, ಓದು, ಬಟ್ಟೆ ಮತ್ತು ಆರೋಗ್ಯ—ಎಲ್ಲದರ ಹೊಣೆಗಾರಿಕೆಯಲ್ಲೂ ಕಾಮಿನಿ ಬಾಲ್ಯದಿಂದಲೇ ತಾಯಿಯೊಂದಿಗೆ ಕೈಜೋಡಿಸಬೇಕಾಯಿತು.
ಬಡತನ ಅವಳ ಮನೆಯ ಬಾಗಿಲಿಗೆ ಆಗಾಗ ಬಂದುಹೋಗುವ ಅತಿಥಿಯಾಗಿರಲಿಲ್ಲ. ಮನೆಯವರಲ್ಲಿ ಒಬ್ಬನಾಗಿಯೇ ನೆಲೆಸಿತ್ತು.
ಆದರೂ ಕಾಮಿನಿಗೆ ಶಾಲೆಯೆಂದರೆ ಪ್ರಾಣ. ಹೊಸ ಪುಸ್ತಕಗಳ ವಾಸನೆ, ಶಿಕ್ಷಕರು ಕಪ್ಪುಹಲಗೆಯ ಮೇಲೆ ಬರೆಯುವ ಅಕ್ಷರಗಳು, ಪಾಠ ಮುಗಿದ ನಂತರ ಸಿಗುವ ಮೆಚ್ಚುಗೆಯ ಮಾತು—ಇವೆಲ್ಲ ಅವಳ ಬದುಕಿನ ಪುಟ್ಟ ಸಂಭ್ರಮಗಳಾಗಿದ್ದವು.

*** 

ಒಂದು ದಿನ ಅವಳ ಶಾಲೆಯ ಶಿಕ್ಷಕಿ ಎಲ್ಲ ಮಕ್ಕಳಿಗೂ ಹೊಸ ನೋಟುಪುಸ್ತಕ ತರಲು ಹೇಳಿದರು. ತರಗತಿಯ ಎಲ್ಲ ಮಕ್ಕಳ ಮೇಜಿನ ಮೇಲೂ ಬಣ್ಣಬಣ್ಣದ ಪುಸ್ತಕಗಳಿದ್ದವು. ಕಾಮಿನಿಯ ಕೈಯಲ್ಲಿ ಮಾತ್ರ ಹಿಂದಿನ ವರ್ಷದ ಪುಸ್ತಕಗಳಿಂದ ಕಿತ್ತುಕೊಂಡ ಕೆಲವು ಖಾಲಿ ಹಾಳೆಗಳನ್ನು ಒಟ್ಟು ಸೇರಿಸಿ ಸುಮಾರಾಗಿ ಹೊಲಿದ ಪುಸ್ತಕ.
“ನಿನ್ನ ಹೊಸ ಪುಸ್ತಕ ಎಲ್ಲಿ?” ಶಿಕ್ಷಕಿ ಕೇಳಿದರು.
ಕಾಮಿನಿ ತಲೆತಗ್ಗಿಸಿದಳು. “ಅಮ್ಮ ಮುಂದಿನ ವಾರ ಕೊಡಿಸುತ್ತಾರೆ.”
ಹಿಂದಿನ ಸಾಲಿನಲ್ಲಿ ಕುಳಿತಿದ್ದ ಇಬ್ಬರು ಹುಡುಗಿಯರು ಅವಳ ಹಾಳೆಗಳ ಅಟ್ಟಿಯನ್ನು ನೋಡಿ ನಕ್ಕರು.
“ಇದು ಪುಸ್ತಕವಾ? ಕಸದ ಹಾಳೆಗಳ ಗಂಟಾ?”
ಕಾಮಿನಿಯ ಕಣ್ಣು ತುಂಬಿಕೊಂಡಿತು. ಮನೆಗೆ ಬಂದ ಕೂಡಲೇ ಆ ಹಾಳೆಗಳನ್ನು ಮೂಲೆಗೆ ಎಸೆದಳು. “ನಾನು ಇನ್ನು ಶಾಲೆಗೆ ಹೋಗುವುದಿಲ್ಲ.”
ಲಕ್ಷ್ಮಿ ಕಾರಣ ಕೇಳಿದಾಗ ಕಾಮಿನಿ ಅಳುತ್ತ ಎಲ್ಲವನ್ನೂ ಹೇಳಿದಳು.

ಲಕ್ಷ್ಮಿ ನೆಲಕ್ಕೆ ಬಿದ್ದಿದ್ದ ಹಾಳೆಗಳನ್ನು ಒಂದೊಂದಾಗಿ ಎತ್ತಿಕೊಂಡಳು. ಅವುಗಳ ಅಂಚನ್ನು ಸರಿಯಾಗಿ ಕತ್ತರಿಸಿ, ಹಳೆಯ ದಿನಪತ್ರಿಕೆಯ ದಪ್ಪ ಹಾಳೆಯನ್ನು ಹೊದಿಕೆಯಾಗಿ ಇಟ್ಟಳು. ಸೂಜಿ-ದಾರದಿಂದ ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸಿ ಸುಂದರವಾದ ಪುಸ್ತಕ ಮಾಡಿದಳು. “ಪಾರ್ವತಿದೇವಿ ಗಣೇಶನನ್ನು ಹೇಗೆ ಸೃಷ್ಟಿಸಿದಳು ಗೊತ್ತಾ?” ಎಂದು ಕೇಳಿದಳು.
ಕಾಮಿನಿ ಕಣ್ಣೀರು ಒರೆಸುತ್ತ ಇಲ್ಲವೆಂಬಂತೆ ತಲೆ ಅಲ್ಲಾಡಿಸಿದಳು.
“ತನ್ನ ಬಳಿ ಇದ್ದ ಅರಿಶಿನದಿಂದಲೇ ಒಂದು ಮುದ್ದಾದ ಬಾಲಕನನ್ನು ರೂಪಿಸಿದಳು. ಸೃಷ್ಟಿ ಮಾಡಲು ಅವಳು ಹೊರಗಿನಿಂದ ಏನನ್ನೂ ತರಲಿಲ್ಲ. ತನ್ನಲ್ಲಿದ್ದುದಕ್ಕೇ ರೂಪ ಕೊಟ್ಟಳು. ನಮ್ಮ ಬಳಿ ಏನಿಲ್ಲ ಎಂದು ಯೋಚಿಸುತ್ತ ಕುಳಿತರೆ ಏನೂ ಹುಟ್ಟುವುದಿಲ್ಲ. ಇರುವುದರಿಂದ ಏನು ಸೃಷ್ಟಿಸಬಹುದು ಎಂದು ಯೋಚಿಸಿದರೆ ಹೊಸ ದಾರಿ ಹುಟ್ಟುತ್ತದೆ.” ಎನ್ನುತ್ತಾ ತಾಯಿ ಹೊಲಿದ ಪುಸ್ತಕವನ್ನು ಕಾಮಿನಿಯ ಕೈಗಿಟ್ಟಳು.
“ಹೊಸ ಪುಸ್ತಕ ಕೊಡಿಸಲು ನನ್ನಿಂದ ಆಗಲಿಲ್ಲ. ಆದರೆ ನಿನ್ನ ಓದು ನಿಲ್ಲಬಾರದು.”

ಮರುದಿನ ಕಾಮಿನಿ ಅದೇ ಪುಸ್ತಕವನ್ನು ಶಾಲೆಗೆ ಕೊಂಡೊಯ್ದಳು. ಮಕ್ಕಳು ಮತ್ತೆ ನಕ್ಕರು. ಆದರೆ ಶಿಕ್ಷಕಿ ಅದನ್ನು ಕೈಗೆತ್ತಿಕೊಂಡು ಪ್ರತಿಯೊಂದು ಪುಟವನ್ನೂ ನೋಡಿದರು.
“ಇದು ಅಂಗಡಿಯಲ್ಲಿ ಹಣಕೊಟ್ಟು ತಂದ ಪುಸ್ತಕಕ್ಕಿಂತ ಅಮೂಲ್ಯವಾದದ್ದು. ಇದರಲ್ಲಿ ನಿನ್ನ ತಾಯಿಯ ಶ್ರಮವಿದೆ; ನಿನ್ನ ಓದಿನ ಆಸೆಯಿದೆ.”
ಆ ದಿನ ಕಾಮಿನಿ ತನ್ನ ಮೊದಲ ಜೀವನಪಾಠ ಕಲಿತಳು — 
ಜೀವನದಲ್ಲೇನಾದರೂ ಕೊರತೆ ಇದೆ ಎಂದರೆ ಅದು ಜೀವನದ ಅಂತ್ಯವಲ್ಲ. ಸೃಜನಶೀಲತೆಯ, ಹೊಸತನದ ಆರಂಭವೂ ಆಗಬಹುದು.
ಅಂದಿನಿಂದ ಬಳಸಿದ ಕಾಗದದ ಖಾಲಿ ಭಾಗಗಳನ್ನು ಸಂಗ್ರಹಿಸುತ್ತಿದ್ದಳು. ಹಳೆಯ ಪುಸ್ತಕಗಳನ್ನು ಹಿರಿಯ ವಿದ್ಯಾರ್ಥಿಗಳಿಂದ ಪಡೆದುಕೊಳ್ಳುತ್ತಿದ್ದಳು. ಶಾಲೆಯ ಗ್ರಂಥಾಲಯವೇ ಅವಳ ಜ್ಞಾನದ ಭಂಡಾರವಾಯಿತು. ಅವಳ ಬಳಿ ಸೌಲಭ್ಯಗಳಿರಲಿಲ್ಲ. ಆದರೆ ಕಲಿಯಬೇಕೆಂಬ ಹಸಿವು ಇತ್ತು.

***

ಕಾಮಿನಿ ಏಳನೇ ತರಗತಿಯಲ್ಲಿದ್ದಾಗ ತಂದೆ ಕೆಲಸದ ಸ್ಥಳದಲ್ಲಿ ಕೆಳಗೆ ಬಿದ್ದು ಕಾಲಿಗೆ ಗಂಭೀರ ಗಾಯ ಮಾಡಿಕೊಂಡರು. ಹಲವು ತಿಂಗಳು ಕೆಲಸ ಮಾಡಬಾರದೆಂದು ವೈದ್ಯರು ಹೇಳಿದರು. 
ಆ ರಾತ್ರಿ ಮನೆಯಲ್ಲಿ ಅನ್ನಕ್ಕಿಂತ ಮೌನವೇ ಹೆಚ್ಚಿತ್ತು.
“ಮುಂದಿನ ತಿಂಗಳಿಂದ ಕಾಮಿನಿಯನ್ನು ಶಾಲೆಗೆ ಕಳುಹಿಸುವುದು ಬೇಡ,” ತಂದೆ ನಿಧಾನವಾಗಿ ಹೇಳಿದರು. “ಲಕ್ಷ್ಮಿಯ ಜೊತೆ ಕೆಲಸಕ್ಕೆ ಹೋಗಲಿ. ಇಬ್ಬರು ಹುಡುಗರನ್ನಾದರೂ ಓದಿಸಬೇಕು.”
ಮನೆಯ ಹೆಣ್ಣುಮಗುವಿನ ಓದನ್ನು ನಿಲ್ಲಿಸುವುದು ಎಲ್ಲರಿಗೂ ಸಹಜ ಪರಿಹಾರದಂತೆ ಕಂಡಿತು.
ಕಾಮಿನಿ ಏನೂ ಮಾತನಾಡಲಿಲ್ಲ. ಒಳಗೆ ಹೋಗಿ ತನ್ನ ಪುಸ್ತಕಗಳ ಮೇಲೆ ಕೈಯಾಡಿಸಿದಳು. ನಾಳೆಯಿಂದ ಅವು ತನ್ನದಲ್ಲ ಎಂಬ ಭಾವನೆ ಬಂದಾಗ ಎದೆ ಬಿಗಿಯಿತು.
ಅಂದು ರಾತ್ರಿ ಅವಳು ಗಣಪತಿಯ ಮುಂದೆ ಕುಳಿತಳು.“ನನ್ನನ್ನು ಶಾಲೆಯಿಂದ ಬಿಡಿಸಬೇಡ,” ಎಂದು ಬೇಡಿಕೊಂಡಳು.
ಮರುದಿನ ಬೆಳಿಗ್ಗೆ ಲಕ್ಷ್ಮಿ ಅವಳನ್ನು ಹತ್ತಿರದ ಹೊಲಿಗೆ ಅಂಗಡಿಗೆ ಕರೆದುಕೊಂಡು ಹೋದಳು.
“ಸಂಜೆ ಶಾಲೆ ಮುಗಿದ ನಂತರ ಇಲ್ಲಿ ಬಂದು ಗುಂಡಿ ಹೊಲಿಯುವುದು, ಬಟ್ಟೆ ಮಡಚುವುದು ಮಾಡು. ಬೆಳಗ್ಗೆ ನಾನು ಇನ್ನೊಂದು ಮನೆಗೆ ಕೆಲಸಕ್ಕೆ ಹೋಗುತ್ತೇನೆ. ನಿನ್ನ ಓದು ನಿಲ್ಲಿಸುವುದು ಬೇಡ,” ಎಂದಳು.
“ಆದರೆ ನೀನು ಯಾವಾಗ ವಿಶ್ರಾಂತಿ ತೆಗೆದುಕೊಳ್ಳುತ್ತೀಯಮ್ಮ?”
ಲಕ್ಷ್ಮಿ ನಗಲು ಪ್ರಯತ್ನಿಸಿದಳು. “ಕೆಲವು ಕನಸುಗಳಿಗೆ ಮನೆಯವರೆಲ್ಲರೂ ಸ್ವಲ್ಪಸ್ವಲ್ಪ ಬೆಲೆ ಕೊಡಬೇಕು.”

ಆ ಸಂಜೆ ಹೊಲಿಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಕಾಮಿನಿಗೆ ತಾಯಿ ಹೇಳಿದ್ದ ಮತ್ತೊಂದು ಕಥೆ ನೆನಪಾಯಿತು.
ವ್ಯಾಸಮಹರ್ಷಿಗಳು ಮಹಾಭಾರತವನ್ನು ಹೇಳುತ್ತ ಹೋಗಲು ಗಣೇಶನು ಅದನ್ನು ಬರೆಯಲು ಒಪ್ಪಿಕೊಂಡಿದ್ದ. ಬರವಣಿಗೆಯ ಮಧ್ಯದಲ್ಲಿ ಲೇಖನಿ ಮುರಿದಾಗ ಕಥೆ ನಿಲ್ಲಬಾರದೆಂದು ಗಣೇಶ ತನ್ನ ಒಂದು ದಂತವನ್ನೇ ಮುರಿದು ಲೇಖನಿಯನ್ನಾಗಿ ಮಾಡಿಕೊಂಡಿದ್ದ. 
ಬಾಲ್ಯದಲ್ಲಿ ಆ ಕಥೆಯನ್ನು ಕೇಳಿದ ಕಾಮಿನಿ, “ದಂತ ಮುರಿದಾಗ ಅವನಿಗೆ ನೋವಾಗಲಿಲ್ಲವೇ?” ಎಂದು ಕೇಳಿದ್ದಳು.
“ನೋವಾಗಿರಬಹುದು,” ಎಂದಿದ್ದಳು ತಾಯಿ. “ತ್ಯಾಗವೆಂದರೆ ನೋವೇ ಆಗದಿರುವುದಲ್ಲ. ನೋವಿಗಿಂತ ಗುರಿ ದೊಡ್ಡದಾಗಿರುವುದು.”
ಆ ಮಾತು ಈಗ ಅವಳಿಗೆ ಅರ್ಥವಾಯಿತು.

ಪ್ರತಿದಿನ ಬೆಳಿಗ್ಗೆ ಶಾಲೆ, ಸಂಜೆ ಹೊಲಿಗೆ ಅಂಗಡಿ, ರಾತ್ರಿ ಮನೆಗೆಲಸ, ನಂತರ ಓದು—ಅವಳ ಬದುಕು ಬಿಡುವಿಲ್ಲದ ಓಟವಾಯಿತು. ಶಾಲಾ ಪ್ರವಾಸಕ್ಕೆ ಹೋಗಲಿಲ್ಲ. ಹಬ್ಬಕ್ಕೆ ಹೊಸ ಬಟ್ಟೆ ಕೇಳಲಿಲ್ಲ. ಸ್ನೇಹಿತೆಯರ ಜೊತೆ ಆಟವಾಡುವ ಸಮಯವನ್ನೂ ಬಿಟ್ಟಳು.
ಆದರೆ ಅವಳ ಪ್ರತಿಯೊಂದು ಸಣ್ಣ ತ್ಯಾಗವೂ ಅವಳ ಭವಿಷ್ಯವನ್ನು ಬರೆಯುವ ಲೇಖನಿಯಾಯಿತು.

ಹತ್ತನೇ ತರಗತಿಯಲ್ಲಿ ಕಾಮಿನಿ ಶಾಲೆಗೆ ಪ್ರಥಮ ಸ್ಥಾನ ಪಡೆದಳು. ಫಲಿತಾಂಶದ ದಿನ ತಂದೆ ಅವಳ ಅಂಕಪಟ್ಟಿಯನ್ನು ಬಹಳ ಹೊತ್ತು ನೋಡುತ್ತ ಕುಳಿತರು. 
“ನಿನ್ನ ಓದು ನಿಲ್ಲಿಸಬೇಕೆಂದು ಹೇಳಿದ್ದೆನಲ್ಲ…” ಅವರ ಧ್ವನಿ ನಡುಗಿತು.
ಕಾಮಿನಿ ಅವರ ಕೈ ಹಿಡಿದಳು. “ನೀವು ಆ ಪರಿಸ್ಥಿತಿಯಲ್ಲಿ ಹೇಳಿದ್ದು ಅಪ್ಪ. ಈಗ ಅದನ್ನು ನೆನಪಿಸಿಕೊಂಡು ಬೇಸರ ಮಾಡಿಕೊಳ್ಳಬೇಡಿ.”
ತಂದೆಯ ಕಣ್ಣುಗಳಲ್ಲಿ ನೀರು ತುಂಬಿತು.
ಆ ಕ್ಷಣದಲ್ಲಿ ಅವಳು ಅರಿತುಕೊಂಡಳು—
ನಮ್ಮ ಬದುಕಿನ ಕೆಲವು ಗಾಯಗಳು ಅವಮಾನಗಳಲ್ಲ; ಗುರಿ ತಲುಪುವುದಕ್ಕಾಗಿ ನಾವು ಕೊಟ್ಟ ಬೆಲೆಯ ಗುರುತುಗಳು.

***

ಪದವಿಪೂರ್ವ ಶಿಕ್ಷಣಕ್ಕೆ ಸೇರಬೇಕೆಂಬುದು ಕಾಮಿನಿಯ ಮುಂದಿನ ಕನಸಾಗಿತ್ತು. ಆದರೆ ಪಟ್ಟಣದ ಕಾಲೇಜಿನ ಶುಲ್ಕ, ಪ್ರಯಾಣ ಮತ್ತು ಪುಸ್ತಕಗಳ ಖರ್ಚು ಕುಟುಂಬದ ಸಾಮರ್ಥ್ಯಕ್ಕೆ ಮೀರಿತ್ತು. ಅದೇ ಸಮಯದಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಘೋಷಿಸಲಾಯಿತು. ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಬಂಧ, ಸಾಮಾನ್ಯ ಜ್ಞಾನ ಪರೀಕ್ಷೆ ಮತ್ತು ಸಂದರ್ಶನವಿತ್ತು. 
ಕಾಮಿನಿ ಅರ್ಜಿ ಸಲ್ಲಿಸಿದಳು. ಸಂದರ್ಶನದ ದಿನ ಕಾಲೇಜಿನ ಆವರಣಕ್ಕೆ ಹೋದಾಗ ಅವಳ ಆತ್ಮವಿಶ್ವಾಸ ಕುಗ್ಗಿತು. ಉಳಿದ ವಿದ್ಯಾರ್ಥಿಗಳು ಉತ್ತಮ ಉಡುಪಿನಲ್ಲಿ ಬಂದಿದ್ದರು. ಕೆಲವರು ಆಂಗ್ಲಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ತರಬೇತಿ ಕೇಂದ್ರಗಳಲ್ಲಿ ವಿಶೇಷ ಸಿದ್ಧತೆ ಮಾಡಿಕೊಂಡಿದ್ದರು. 
ಕಾಮಿನಿಯ ಕೈಯಲ್ಲಿ ಹಳೆಯ ಕಡತ ಮತ್ತು ಬಸ್ಸಿಗೆ ಹೋಗಿಬರಲು ಸಾಕಾಗುವಷ್ಟು ಹಣ ಮಾತ್ರವಿತ್ತು. “ನಾನು ಇವರ ಜೊತೆ ಹೇಗೆ ಸ್ಪರ್ಧಿಸಲಿ?” ಎಂದುಕೊಂಡಳು.
ಅಷ್ಟರಲ್ಲಿ ಕಾಲೇಜಿನ ಪ್ರವೇಶದ್ವಾರದ ಬಳಿ ಶಿವ–ಪಾರ್ವತಿಯರ ಸುತ್ತ ಪ್ರದಕ್ಷಿಣೆ ಹಾಕುತ್ತಿರುವ ಪುಟ್ಟ ಗಣಪತಿಯ ಚಿತ್ರ ಕಾಣಿಸಿತು. ಅವಳಿಗೆ ಬಾಲ್ಯದ ಕಥೆ ನೆನಪಾಯಿತು.

ಒಮ್ಮೆ ಶಿವ–ಪಾರ್ವತಿಯರು ಗಣೇಶ ಮತ್ತು ಕಾರ್ತಿಕೇಯರಿಗೆ, “ಯಾರು ಮೊದಲು ಜಗತ್ತನ್ನು ಸುತ್ತಿ ಬರುತ್ತಾರೋ ಅವರಿಗೆ ಜ್ಞಾನಫಲ” ಎಂದರು. ವೇಗದ ನವಿಲೇರಿದ ಕಾರ್ತಿಕೇಯ ತಕ್ಷಣ ಹೊರಟ. ನಿಧಾನವಾಗಿ ಸಾಗುವ ಇಲಿಯನ್ನು ವಾಹನವಾಗಿಸಿಕೊಂಡ ಗಣೇಶ ಮಾತ್ರ ತನ್ನ ತಂದೆ-ತಾಯಿಯ ಸುತ್ತ ಮೂರು ಪ್ರದಕ್ಷಿಣೆ ಹಾಕಿದ.
“ನನಗೆ ನನ್ನ ತಂದೆ-ತಾಯಿಯರೇ ಜಗತ್ತು,” ಎಂದನು.
ಅದು ವೇಗದ ವಿರುದ್ಧ ಸೋಮಾರಿತನದ ಗೆಲುವಾಗಿರಲಿಲ್ಲ. ಪ್ರಶ್ನೆಯ ಆಂತರಿಕ ಅರ್ಥವನ್ನು ಗ್ರಹಿಸಿದ ವಿವೇಕದ ಗೆಲುವಾಗಿತ್ತು.
ಕಾಮಿನಿ ತನ್ನನ್ನು ತಾನು ಸಮಾಧಾನಪಡಿಸಿಕೊಂಡಳು. 
ಅವರ ಬಳಿ ಇರುವುದನ್ನು ನೋಡಿ ಹೆದರಬೇಡ. ನಿನ್ನ ಬಳಿ ಇರುವುದನ್ನು ಸರಿಯಾಗಿ ಬಳಸು.  

ಆಯ್ಕೆ ಪ್ರಕ್ರಿಯೆ ಪ್ರಾರಂಭವಾಯಿತು. ಎಲ್ಲ ಮಕ್ಕಳೂ ತಮ್ಮ ತಮ್ಮ ಪರೀಕ್ಷಾ ಕೊಠಡಿಗೆ ಹೋದರು.
ಪ್ರಬಂಧದ ವಿಷಯ—
“ಶಿಕ್ಷಣದಿಂದ ಬದಲಾಗಬಹುದಾದ ಒಂದು ಬದುಕು.”
ಇತರರು ಅಂಕಿಅಂಶಗಳು ಮತ್ತು ಪ್ರಸಿದ್ಧ ವ್ಯಕ್ತಿಗಳ ಉದಾಹರಣೆಗಳನ್ನು ಬರೆದರು. ಕಾಮಿನಿ ತನ್ನ ತಾಯಿಯ ಬದುಕಿನ ಬಗ್ಗೆ ಬರೆದಳು. ಅಕ್ಷರಜ್ಞಾನ ಕಡಿಮೆಯಿದ್ದರೂ ಮಕ್ಕಳ ಓದಿಗಾಗಿ ಪ್ರತಿದಿನ ಬೆವರು ಸುರಿಸುವ ತಾಯಿಯ ಬಗ್ಗೆ, ಒಂದು ಹೆಣ್ಣುಮಗು ಓದಿದಾಗ ಒಂದು ಕುಟುಂಬದ ಚಿಂತನೆಯೇ ಹೇಗೆ ಬದಲಾಗುತ್ತದೆ ಎಂಬುದರ ಬಗ್ಗೆ ಬರೆದಳು.

ಸಂದರ್ಶನದಲ್ಲಿ ಅವಳನ್ನು ಕೇಳಿದರು: “ವಿದ್ಯಾರ್ಥಿವೇತನ ನಿನಗೇ ಯಾಕೆ ನೀಡಬೇಕು?”
ಕಾಮಿನಿ ಕ್ಷಣಕಾಲ ಯೋಚಿಸಿ ಉತ್ತರಿಸಿದಳು. “ನನ್ನ ಬಡತನಕ್ಕಾಗಿ ಕೊಡಬೇಡಿ. ಕೊಟ್ಟ ಅವಕಾಶವನ್ನು ವ್ಯರ್ಥಮಾಡುವುದಿಲ್ಲ ಎಂಬ ನಂಬಿಕೆ ಬಂದರೆ ಕೊಡಿ. ನನ್ನ ಶಿಕ್ಷಣ ನನ್ನೊಬ್ಬಳ ಬದುಕನ್ನು ಮಾತ್ರ ಬದಲಾಯಿಸಬಾರದು. ಇನ್ನಷ್ಟು ಮಕ್ಕಳಿಗೆ ದಾರಿಯಾಗಬೇಕು ಎಂಬುದು ನನ್ನ ಆಶಯ.”

ಕಾಮಿನಿಗೆ ವಿದ್ಯಾರ್ಥಿವೇತನ ದೊರೆಯಿತು. ಅಂದು ಅವಳು ಮತ್ತೊಂದು ಪಾಠ ಕಲಿತಳು—
ಜೀವನದಲ್ಲಿ ವೇಗವಾಗಿ ಓಡುವವರೆಲ್ಲ ಮೊದಲು ತಲುಪುವುದಿಲ್ಲ. ಪ್ರಶ್ನೆಯ ನಿಜವಾದ ಅರ್ಥವನ್ನು ಅರಿತವರು ಸರಿಯಾದ ಗುರಿ ತಲುಪುತ್ತಾರೆ.

*** 

ಕಾಲೇಜಿನ ದಿನಗಳು ಕಾಮಿನಿಯ ಬದುಕಿಗೆ ಹೊಸ ಜಗತ್ತನ್ನು ತೆರೆದವು. ಆದರೆ ಮನೆಯ ಹೊಣೆಗಾರಿಕೆಗಳು ಕಡಿಮೆಯಾಗಲಿಲ್ಲ. 
ತಂದೆಯ ಕಾಲು ಸಂಪೂರ್ಣವಾಗಿ ಗುಣವಾಗಿರಲಿಲ್ಲ. ತಾಯಿಯ ಆರೋಗ್ಯವೂ ಹದಗೆಡತೊಡಗಿತ್ತು. ತಮ್ಮಂದಿರ ಶುಲ್ಕ, ಔಷಧಿಯ ವೆಚ್ಚ, ಮನೆಯ ಖರ್ಚು—ಎಲ್ಲವನ್ನೂ ನಿಭಾಯಿಸಲು ಕಾಮಿನಿ ಬೆಳಗ್ಗೆ ಮಕ್ಕಳಿಗೆ ಪಾಠ ಹೇಳಿ, ಸಂಜೆ ಅಂಗಡಿಯಲ್ಲಿ ಲೆಕ್ಕ ಬರೆಯುತ್ತಿದ್ದಳು.
ಒಂದೇ ದಿನದಲ್ಲಿ ಹತ್ತು ಕೆಲಸಗಳನ್ನು ಮಾಡಲು ಹೋಗಿ ಹಲವು ಬಾರಿ ತಪ್ಪು ಮಾಡುತ್ತಿದ್ದಳು. ಒಮ್ಮೆ ತಮ್ಮನ ಶುಲ್ಕ ಕಟ್ಟುವ ಕೊನೆಯ ದಿನಾಂಕವನ್ನೇ ಮರೆತಳು. ಇನ್ನೊಂದು ದಿನ ತಾಯಿಗೆ ಕೊಡಬೇಕಾದ ಔಷಧಿಯ ಬದಲು ಬೇರೆ ಮಾತ್ರೆಯನ್ನು ಕೈಗೆತ್ತಿಕೊಂಡಳು. ಅದೃಷ್ಟವಶಾತ್ ಸಮಯಕ್ಕೆ ಗಮನಕ್ಕೆ ಬಂತು.
“ನನ್ನಿಂದ ಯಾವುದನ್ನೂ ಸರಿಯಾಗಿ ನಿಭಾಯಿಸಲು ಆಗುತ್ತಿಲ್ಲ,” ಎಂದು ಅಳುತ್ತ ಗಣಪತಿಯ ಮುಂದೆ ಕುಳಿತಳು.

ಆ ದಿನ ಅವಳ ಕಣ್ಣು ಗಣಪತಿಯ ರೂಪದ ಮೇಲೆ ನೆಟ್ಟಿತು.
ದೊಡ್ಡ ತಲೆ.

ಸಣ್ಣ ಕಣ್ಣುಗಳು.
ಅಗಲವಾದ ಕಿವಿಗಳು.
ಚಿಕ್ಕ ಬಾಯಿ.
ಉದ್ದವಾದ ಸೊಂಡಿಲು.

ಬಾಲ್ಯದಲ್ಲಿ ತಾಯಿ ಹೇಳಿದ್ದಳು: “ಗಣಪತಿಯ ಪ್ರತಿಯೊಂದು ಅಂಗವೂ ಒಂದು ಪಾಠ. ದೊಡ್ಡ ತಲೆ ದೊಡ್ಡದಾಗಿ ಯೋಚಿಸು ಎನ್ನುತ್ತದೆ. ಸಣ್ಣ ಕಣ್ಣು ಕೆಲಸದ ಮೇಲೆ ಏಕಾಗ್ರತೆ ಇಡು ಎನ್ನುತ್ತದೆ. ದೊಡ್ಡ ಕಿವಿ ಹೆಚ್ಚು ಕೇಳು ಎನ್ನುತ್ತದೆ. ಚಿಕ್ಕ ಬಾಯಿ ಅಗತ್ಯವಿದ್ದಷ್ಟೇ ಮಾತನಾಡು ಎನ್ನುತ್ತದೆ. ಸೊಂಡಿಲು ದೊಡ್ಡ ಮರವನ್ನು ಎತ್ತಬಲ್ಲದು; ನೆಲದ ಮೇಲಿನ ಪುಟ್ಟ ಸೂಜಿಯನ್ನೂ ಹಿಡಿಯಬಲ್ಲದು. ಸಂದರ್ಭಕ್ಕೆ ತಕ್ಕಂತೆ ಬಲವನ್ನೂ ಮೃದುತ್ವವನ್ನೂ ಬಳಸಲು ಕಲಿಯಬೇಕು.”

ಮರುದಿನದಿಂದ ಕಾಮಿನಿ ತನ್ನ ಎಲ್ಲ ಜವಾಬ್ದಾರಿಗಳನ್ನೂ ಒಂದು ಪುಸ್ತಕದಲ್ಲಿ ಬರೆಯಲು ಶುರು ಮಾಡಿದಳು. ತುರ್ತಾದದ್ದು ಯಾವುದು, ಕಾಯಬಹುದಾದದ್ದು ಯಾವುದು ಎಂದು ವಿಂಗಡಿಸಿದಳು. ತಮ್ಮಂದಿರಿಗೂ ಸಣ್ಣ ಕೆಲಸಗಳನ್ನು ಹಂಚಿದಳು. ತಂದೆಯ ಔಷಧಿಯ ಸಮಯವನ್ನು ಗೋಡೆಯ ಮೇಲೆ ಬರೆದಳು. ಎಲ್ಲವನ್ನೂ ತಾನೊಬ್ಬಳೇ ಮಾಡಬೇಕು ಎನ್ನುವ ಹಠವನ್ನು ಬಿಟ್ಟಳು.

ಅವಳಿಗೆ ಅರ್ಥವಾಯಿತು— 
ಜವಾಬ್ದಾರಿ ಎಂದರೆ ಎಲ್ಲ ಭಾರವನ್ನೂ ಒಬ್ಬಳೇ ಹೊರುವುದಲ್ಲ; ಯಾವ ಭಾರವನ್ನು ಯಾವಾಗ, ಹೇಗೆ ಮತ್ತು ಯಾರೊಂದಿಗೆ ಹೊರುವುದೆಂದು ತಿಳಿಯುವುದು.

***

ಕಾಲೇಜಿನ ವಾರ್ಷಿಕೋತ್ಸವದಲ್ಲಿ ಕಾಮಿನಿಗೆ ಅತ್ಯುತ್ತಮ ವಿದ್ಯಾರ್ಥಿನಿ ಪ್ರಶಸ್ತಿ ಘೋಷಿಸಲಾಯಿತು. ಎಲ್ಲರೂ ಸಂಭ್ರಮಿಸುತ್ತಿದ್ದಾಗ ಕೆಲವು ವಿದ್ಯಾರ್ಥಿನಿಯರು ಅವಳ ಹಳೆಯ ಸೀರೆ ಮತ್ತು ಸರಳ ಚಪ್ಪಲಿಯನ್ನು ನೋಡಿ ನಗುತ್ತಿದ್ದರು. 
“ಪ್ರಶಸ್ತಿ ಪಡೆಯಲು ವೇದಿಕೆಗೆ ಹೋಗುವಾಗಲಾದರೂ ಒಳ್ಳೆಯ ಬಟ್ಟೆ ಹಾಕಿಕೊಳ್ಳಬಹುದಿತ್ತು.”
ಆ ಮಾತು ಕಾಮಿನಿಯ ಕಿವಿಗೆ ಬಿತ್ತು. ವೇದಿಕೆಯತ್ತ ನಡೆಯುತ್ತಿದ್ದ ಅವಳ ಹೆಜ್ಜೆಗಳು ಕ್ಷಣಕಾಲ ನಿಧಾನವಾದವು. ಅವಳಿಗೆ ತನ್ನ ಬಡತನ ಎಲ್ಲರ ಮುಂದೆ ಬಯಲಾಗುತ್ತಿರುವಂತೆ ಅನಿಸಿತು. ಪ್ರಶಸ್ತಿಗಿಂತ ತನ್ನ ಸರಳ ಉಡುಪೇ ಎಲ್ಲರ ಗಮನ ಸೆಳೆಯಬಹುದೆಂದು ಸಂಕೋಚವಾಯಿತು.

ಆ ಕ್ಷಣದಲ್ಲಿ ಗಣೇಶನನ್ನು ನೋಡಿ ನಕ್ಕ ಚಂದ್ರನ ಕಥೆ ನೆನಪಾಯಿತು. 
ತನ್ನ ರೂಪದ ಬಗ್ಗೆ ಚಂದ್ರ ಮಾಡಿದ ಅಪಹಾಸ್ಯಕ್ಕೆ ಗಣೇಶ ಪಾಠ ಕಲಿಸಿದ್ದ. ಮತ್ತೊಬ್ಬರ ಬಾಹ್ಯರೂಪವನ್ನು ನೋಡಿ ನಗುವವನ ದೃಷ್ಟಿಯೇ ದೋಷಪೂರ್ಣ; ನಗಿಸಿಕೊಂಡವನ ಮೌಲ್ಯವಲ್ಲ ಎಂಬುದನ್ನು ಆ ಕಥೆ ಹೇಳುತ್ತಿತ್ತು.
ಕಾಮಿನಿ ತಲೆಯೆತ್ತಿ ವೇದಿಕೆಯತ್ತ ನಡೆದಳು.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಲು ಅವಕಾಶ ಸಿಕ್ಕಾಗ ಅವಳು ಹೇಳಿದಳು: - “ಇಂದು ನಾನು ಧರಿಸಿರುವ ಸೀರೆಯನ್ನು ನನ್ನ ತಾಯಿ ಹಲವು ವರ್ಷಗಳಿಂದ ಜೋಪಾನವಾಗಿ ಇಟ್ಟುಕೊಂಡಿದ್ದರು. ನಾನು ದೊಡ್ಡ ವೇದಿಕೆಗೆ ಹೋಗುವ ದಿನ ಇದನ್ನು ಧರಿಸಬೇಕೆಂದು ಹೇಳಿದ್ದರು. ಇದರ ಬೆಲೆ ಕಡಿಮೆ ಇರಬಹುದು. ಆದರೆ ಇದರಲ್ಲಿ ನನ್ನ ತಾಯಿಯ ಕನಸುಗಳಿವೆ. ನನಗೆ ಇದಕ್ಕಿಂತ ದುಬಾರಿ ಉಡುಪು ಬೇರೆ ಇಲ್ಲ.” 
ಸಭಾಂಗಣ ಚಪ್ಪಾಳೆಯಿಂದ ತುಂಬಿತು. ಹಿಂದೆ ನಕ್ಕವರು ತಲೆತಗ್ಗಿಸಿದರು.

ಅಂದು ಕಾಮಿನಿ ಕಲಿತಳು—
ನಮ್ಮ ಸರಳತೆಯನ್ನು ನೋಡಿ ನಗುವವರಿಗಾಗಿ ನಾವು ಸಂಕೋಚಪಡಬೇಕಿಲ್ಲ. ನಮ್ಮ ಮೌಲ್ಯವನ್ನು ಉಡುಪು ನಿರ್ಧರಿಸುವುದಿಲ್ಲ; ನಾವು ನಡೆದು ಬಂದ ದಾರಿ ನಿರ್ಧರಿಸುತ್ತದೆ. 

***

ಶಿಕ್ಷಣ ಮುಗಿದ ನಂತರ ಕಾಮಿನಿ ಶಿಕ್ಷಕಿಯಾಗಬೇಕೆಂದು ನಿರ್ಧರಿಸಿದಳು. ತನ್ನ ಬಾಲ್ಯದಲ್ಲಿ ಒಬ್ಬ ಶಿಕ್ಷಕಿಯ ಮೆಚ್ಚುಗೆಯ ಮಾತು ತನಗೆ ಹೇಗೆ ಆತ್ಮವಿಶ್ವಾಸ ನೀಡಿತ್ತೋ, ಅದೇ ರೀತಿ ಮತ್ತಷ್ಟು ಮಕ್ಕಳ ಬದುಕಿಗೆ ಬೆಳಕಾಗಬೇಕೆಂಬುದು ಅವಳ ಕನಸು. ಮೊದಲಿಗೆ ಒಂದು ಖಾಸಗಿ ಶಾಲೆಯಲ್ಲಿ ತಾತ್ಕಾಲಿಕ ಶಿಕ್ಷಕಿಯಾಗಿ ಕೆಲಸ ದೊರೆಯಿತು. ಸಂಬಳ ಕಡಿಮೆಯಿದ್ದರೂ ಕಾಮಿನಿ ಪ್ರೀತಿಯಿಂದ ಪಾಠ ಮಾಡುತ್ತಿದ್ದಳು. ಪಠ್ಯಪುಸ್ತಕದೊಳಗಿನ ಉತ್ತರಗಳನ್ನು ಹೇಳಿಕೊಡುವುದಕ್ಕಿಂತ, ಮಕ್ಕಳು ಯೋಚಿಸುವಂತೆ ಮಾಡುತ್ತಿದ್ದಳು.
ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಶಾಲೆಯ ನಂತರ ಉಚಿತವಾಗಿ ಹೆಚ್ಚುವರಿ ತರಗತಿ ನಡೆಸುತ್ತಿದ್ದಳು. ಪುಸ್ತಕ ಖರೀದಿಸಲು ಸಾಧ್ಯವಾಗದ ಮಕ್ಕಳಿಗಾಗಿ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ಪುಟ್ಟ ಗ್ರಂಥಾಲಯವನ್ನೂ ನಿರ್ಮಿಸಿದಳು. ಮಕ್ಕಳಿಗೆ ಅವಳು ಬಹಳ ಇಷ್ಟವಾಗಿದ್ದಳು.

ಆದರೆ ಅದೇ ಶಾಲೆಯಲ್ಲಿ ಅವಳ ಬದುಕಿನ ಮತ್ತೊಂದು ಪರೀಕ್ಷೆ ಆರಂಭವಾಯಿತು. ಶಾಲೆಯ ಆಡಳಿತ ಮಂಡಳಿ ಕಾಯಂ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಿತು. ಸೇವಾನುಭವ, ಫಲಿತಾಂಶ ಮತ್ತು ಪೋಷಕರ ಅಭಿಪ್ರಾಯದ ಆಧಾರದ ಮೇಲೆ ನೋಡಿದರೆ ಕಾಮಿನಿಯೇ ಮೊದಲ ಆಯ್ಕೆಯಾಗಬೇಕಿತ್ತು. ಮುಖ್ಯಶಿಕ್ಷಕರೂ ಅವಳಿಗೆ ಭರವಸೆ ನೀಡಿದ್ದರು. “ನಿಮ್ಮ ಪರಿಶ್ರಮಕ್ಕೆ ಈ ಬಾರಿ ಖಂಡಿತ ನ್ಯಾಯ ಸಿಗುತ್ತದೆ.”
ಆದರೆ ನೇಮಕಾತಿಯ ದಿನ ಹುದ್ದೆ ಆಡಳಿತ ಮಂಡಳಿಯ ಸದಸ್ಯರ ಸಂಬಂಧಿಗೆ ಸಿಕ್ಕಿತು. ಬೋಧನಾ ಅನುಭವವೇ ಇಲ್ಲದ ವ್ಯಕ್ತಿಯನ್ನು ಕಾಯಂ ಶಿಕ್ಷಕಿಯನ್ನಾಗಿ ನೇಮಿಸಿದರು. ಕಾಮಿನಿಯನ್ನು ಮುಂದಿನ ವರ್ಷವೂ ತಾತ್ಕಾಲಿಕವಾಗಿಯೇ ಮುಂದುವರಿಯುವಂತೆ ಹೇಳಿದರು. “ನಿಮ್ಮ ಕೆಲಸ ಚೆನ್ನಾಗಿದೆ. ಸ್ವಲ್ಪ ಹೊಂದಿಕೊಂಡು ಹೋಗಿ,” ಎಂದರು ಮುಖ್ಯಶಿಕ್ಷಕರು.
“ಅರ್ಹತೆಗಿಂತ ಪರಿಚಯ ದೊಡ್ಡದಾದರೆ, ನಾನು ಎಷ್ಟು ವರ್ಷ ಹೊಂದಿಕೊಳ್ಳಬೇಕು?” ಎಂದು ಕಾಮಿನಿ ಕೇಳಿದಳು.
ಅವರಿಗೆ ಉತ್ತರ ಇರಲಿಲ್ಲ.

ಆ ದಿನ ಶಾಲೆಯ ಖಾಲಿ ತರಗತಿಯಲ್ಲಿ ಒಬ್ಬಳೇ ಕುಳಿತ ಕಾಮಿನಿಗೆ ತನ್ನ ಹಲವು ವರ್ಷಗಳ ಪರಿಶ್ರಮಕ್ಕೆ ಬೆಲೆಯೇ ಇಲ್ಲವೆನಿಸಿತು. ಗೋಡೆಯ ಮೇಲೆ ಮಕ್ಕಳು ಬಿಡಿಸಿದ್ದ ಗಣಪತಿಯ ಚಿತ್ರವಿತ್ತು. ಆದರೆ ಆ ದಿನ ಅದರತ್ತ ನೋಡಲೂ ಅವಳಿಗೆ ಮನಸ್ಸಾಗಲಿಲ್ಲ. “ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಕ್ಕೆ ಸಿಕ್ಕ ಫಲ ಇದೇನಾ?” ಎಂದುಕೊಂಡಳು. 
ಆ ಅವಮಾನವನ್ನು ನುಂಗಿಕೊಂಡು ಮತ್ತೊಂದು ವರ್ಷ ಕೆಲಸ ಮುಂದುವರಿಸಿದಳು. ಆದರೆ ಕೆಲವೇ ತಿಂಗಳಲ್ಲಿ ಹೊಸದಾಗಿ ನೇಮಕಗೊಂಡ ಶಿಕ್ಷಕಿಯ ತಪ್ಪುಗಳನ್ನು ಮುಚ್ಚಿಹಾಕಲು ಕಾಮಿನಿಯ ಮೇಲೆಯೇ ಹೆಚ್ಚುವರಿ ಕೆಲಸ ಹೇರಲಾಯಿತು. ಫಲಿತಾಂಶ ಕೆಟ್ಟಾಗಲೂ ಹೊಣೆಯನ್ನು ಕಾಮಿನಿಯ ಮೇಲೆ ಹಾಕಲು ಪ್ರಯತ್ನಿಸಿದರು.
ಕೊನೆಗೆ ಅವಳು ಆ ಶಾಲೆಯ ಕೆಲಸಕ್ಕೆ ರಾಜೀನಾಮೆ ನೀಡಿದಳು. ಜನರು ಅವಳ ನಿರ್ಧಾರವನ್ನು ಟೀಕಿಸಿದರು.
“ಇಂದಿನ ಕಾಲದಲ್ಲಿ ಕೆಲಸ ಸಿಗುವುದೇ ಕಷ್ಟ. ಸ್ವಲ್ಪ ಅವಮಾನ ಸಹಿಸಿಕೊಂಡಿದ್ದರೆ ಏನಾಗುತ್ತಿತ್ತು?”
“ಆದರ್ಶಗಳಿಂದ ಹೊಟ್ಟೆ ತುಂಬುವುದಿಲ್ಲ.”
“ಬಡತನದಿಂದ ಬಂದವರಿಗೆ ಅಷ್ಟು ಸ್ವಾಭಿಮಾನ ಒಳ್ಳೆಯದಲ್ಲ.”
ಕಾಮಿನಿ ಹೊರಗೆ ಏನೂ ಹೇಳಲಿಲ್ಲ. ಆದರೆ ಒಳಗೆ ಸಂಪೂರ್ಣವಾಗಿ ಕುಸಿದಿದ್ದಳು.

ಅದೇ ಸಮಯದಲ್ಲಿ ಕಾಮಿನಿಯ ಮದುವೆ ಮಾಧವನೊಂದಿಗೆ ನಡೆಯಿತು. ಅವನು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಕಾಮಿನಿಯ ವಿದ್ಯಾಭ್ಯಾಸ ಮತ್ತು ಪರಿಶ್ರಮವನ್ನು ಮೆಚ್ಚಿಕೊಂಡಿದ್ದರಿಂದ ಮದುವೆಗೆ ಒಪ್ಪಿದ್ದ.
ಆರಂಭದ ದಿನಗಳಲ್ಲಿ ಅವರ ಬದುಕು ಚೆನ್ನಾಗಿತ್ತು. ಆದರೆ ಕ್ರಮೇಣ ಮನೆಯ ನಿರೀಕ್ಷೆಗಳು ಬದಲಾಗತೊಡಗಿದವು.
ಕಾಮಿನಿ ಮತ್ತೆ ಶಿಕ್ಷಕಿಯ ಕೆಲಸ ಹುಡುಕುತ್ತಿದ್ದಳು. ಹಲವು ಶಾಲೆಗಳಲ್ಲಿ ಸಂದರ್ಶನ ನೀಡಿದರೂ, ಹಿಂದಿನ ಕೆಲಸವನ್ನು ಯಾಕೆ ಬಿಟ್ಟಳು ಎಂಬ ಪ್ರಶ್ನೆಗೆ ಉತ್ತರಿಸಿದಾಗ ಕೆಲವರು ಅವಳನ್ನು “ಹೊಂದಾಣಿಕೆ ಮಾಡಿಕೊಳ್ಳಲಾಗದವಳು” ಎಂದುಕೊಂಡರು.
ಮನೆಯವರು ಅವಳ ಪ್ರಯತ್ನವನ್ನು ಅರ್ಥಮಾಡಿಕೊಳ್ಳಲಿಲ್ಲ.
“ನಿನಗೆ ಈಗ ಕೆಲಸದ ಅಗತ್ಯವೇನು? ಮನೆ ನೋಡಿಕೊಂಡರೆ ಸಾಕಲ್ಲವೇ?” ಎಂದು ಅತ್ತೆ ಹೇಳುತ್ತಿದ್ದರು.
“ಇಷ್ಟು ಓದಿ ಮನೆಯಲ್ಲಿ ಕುಳಿತುಕೊಳ್ಳುವುದಕ್ಕಾಗಿ ನಾನು ಹೋರಾಡಲಿಲ್ಲ,” ಎಂದು ಕಾಮಿನಿ ಹೇಳಿದರೆ, “ಮದುವೆಯಾದ ಮೇಲೆ ಆದ್ಯತೆಗಳು ಬದಲಾಗಬೇಕು,” ಎಂಬ ಉತ್ತರ ಬರುತ್ತಿತ್ತು.

ತನ್ನ ತವರಿನವರಿಗೆ ಸಹಾಯ ಮಾಡಿದಾಗಲೂ ಮನೆಯಲ್ಲಿ ಅಸಮಾಧಾನ ಹುಟ್ಟುತ್ತಿತ್ತು. “ಮದುವೆಯಾದ ಮೇಲೆ ನಿನ್ನ ಮೊದಲ ಜವಾಬ್ದಾರಿ ಈ ಮನೆ,” ಎಂದರು ಅತ್ತೆ.
“ಈ ಮನೆಯ ಜವಾಬ್ದಾರಿಯಿಂದ ನಾನು ಹಿಂದೆ ಸರಿದಿಲ್ಲ. ಆದರೆ ನನ್ನನ್ನು ಓದಿಸಲು ಬದುಕನ್ನೇ ಸವೆಸಿದ ತಂದೆ-ತಾಯಿಯನ್ನು ಹೇಗೆ ಮರೆತುಬಿಡಲಿ?” ಎಂದು ಕಾಮಿನಿ ಕೇಳುತ್ತಿದ್ದಳು. 
ಮಾಧವ ಮಧ್ಯೆ ಮಾತನಾಡುವುದನ್ನು ತಪ್ಪಿಸುತ್ತಿದ್ದ. “ಸಣ್ಣ ವಿಷಯವನ್ನು ದೊಡ್ಡದು ಮಾಡಬೇಡ. ಸ್ವಲ್ಪ ಹೊಂದಿಕೊಂಡು ಹೋಗು,” ಎನ್ನುತ್ತಿದ್ದ.
ಕಾಮಿನಿ ಹೊಂದಿಕೊಳ್ಳುತ್ತಲೇ ಹೋದಳು. ಪ್ರತಿಬಾರಿ ಮೌನವಾಗಿದ್ದಾಗ ಮನೆಯ ಶಾಂತಿಯನ್ನು ಉಳಿಸುತ್ತಿದ್ದೇನೆ ಎಂದುಕೊಂಡಳು. ಆದರೆ ಆ ಮೌನ ನಿಧಾನವಾಗಿ ಅವಳ ಆತ್ಮಗೌರವವನ್ನು ಕಸಿದುಕೊಳ್ಳತೊಡಗಿತು.
ಒಂದು ದಿನ ತಾಯಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕಾಮಿನಿ ಅವರ ಬಳಿ ಎರಡು ದಿನ ಇರಬೇಕೆಂದು ಕೇಳಿದಳು.
“ನಾಳೆ ನಮ್ಮ ಮನೆಗೆ ನೆಂಟರು ಬರುತ್ತಾರೆ. ಈಗ ನೀನು ಹೋದರೆ ಇಲ್ಲಿ ಯಾರು ನೋಡಿಕೊಳ್ಳುತ್ತಾರೆ?” ಎಂದು ಅತ್ತೆ ಪ್ರಶ್ನಿಸಿದರು.
“ಆದರೆ ನನ್ನ ಅಮ್ಮ ಆಸ್ಪತ್ರೆಯಲ್ಲಿದ್ದಾರೆ.”
“ನಿನ್ನ ತಮ್ಮಂದಿರು ಇದ್ದಾರಲ್ಲ.”
ಕಾಮಿನಿ ಮಾಧವನತ್ತ ನೋಡಿದಳು. ಅವನು ಕಣ್ಣು ತಪ್ಪಿಸಿದ.

ಆ ರಾತ್ರಿ ಅವಳು ಗಣಪತಿಯ ಮುಂದೆ ಕುಳಿತಾಗ ಅವನ ಕೈಗಳಲ್ಲಿದ್ದ ಪಾಶ ಮತ್ತು ಅಂಕುಶ ಕಣ್ಣಿಗೆ ಬಿದ್ದವು.

ಪಾಶ—ಜೋಡಿಸುವ ಪ್ರೀತಿ.
ಅಂಕುಶ—ತಪ್ಪು ದಿಕ್ಕಿಗೆ ಸಾಗುವುದನ್ನು ತಡೆಯುವ ನಿಯಂತ್ರಣ.  

ಅವಳಿಗೆ ಇದ್ದಕ್ಕಿದ್ದಂತೆ ಸ್ಪಷ್ಟವಾಯಿತು. ಸಂಬಂಧವನ್ನು ಉಳಿಸುವುದು ಎಂದರೆ ಎಲ್ಲ ಅನ್ಯಾಯವನ್ನೂ ಮೌನವಾಗಿ ಸಹಿಸಿಕೊಳ್ಳುವುದಲ್ಲ. ಪ್ರೀತಿ ಜೋಡಿಸಬೇಕು; ಆದರೆ ಅದೇ ಪ್ರೀತಿ ನಮ್ಮನ್ನು ಸಂಪೂರ್ಣವಾಗಿ ಬಂಧಿಸಬಾರದು. ಅಗತ್ಯವಿರುವಲ್ಲಿ ಗಡಿ ಎಳೆಯುವ ದೃಢತೆಯೂ ಬೇಕು.

ಮರುದಿನ ಕಾಮಿನಿ ಮಾಧವನೊಂದಿಗೆ ಶಾಂತವಾಗಿ ಮಾತನಾಡಿದಳು. “ನಾನು ಈ ಮನೆಯ ಸೊಸೆ ಎಂಬ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದೇನೆ. ಆದರೆ ಅದಕ್ಕಾಗಿ ಮಗಳಾಗಿರುವುದನ್ನು ಮರೆತು ಬಿಡಬೇಕೆಂದಿಲ್ಲ ಆಲ್ವಾ? ನನ್ನ ತಾಯಿ ಆಸ್ಪತ್ರೆಯಲ್ಲಿರುವಾಗ ಅವರ ಬಳಿ ಹೋಗುವುದು ನನ್ನ ಹಕ್ಕಷ್ಟೇ ಅಲ್ಲ, ಕರ್ತವ್ಯವೂ ಹೌದು.”
“ಅಮ್ಮನಿಗೆ ಬೇಸರವಾಗುತ್ತದೆ,” ಎಂದ ಮಾಧವ.
“ಎಲ್ಲರ ಬೇಸರ ತಪ್ಪಿಸಲು ಹೋಗಿ ನನ್ನ ಮನಸ್ಸನ್ನೇ ಕೊಲ್ಲಲು ಸಾಧ್ಯವಿಲ್ಲ. ಸಂಬಂಧ ಉಳಿಯಬೇಕಾದರೆ ಗೌರವ ಎರಡೂ ಕಡೆ ಇರಬೇಕು.” ಅವಳ ಮಾತಿನಲ್ಲಿ ಜಗಳವಿರಲಿಲ್ಲ. ಆದರೆ ಹಿಂದೆಂದೂ ಕಾಣದ ದೃಢತೆ ಇತ್ತು.
ಮಾಧವ ಮೊದಲ ಬಾರಿಗೆ ಅವಳ ಮೌನದ ಹಿಂದೆ ಎಷ್ಟು ನೋವಿದೆ ಎಂಬುದನ್ನು ಅರಿಯಲು ಪ್ರಯತ್ನಿಸಿದ. ಅವರ ಸಂಬಂಧ ಒಂದೇ ದಿನದಲ್ಲಿ ಬದಲಾಗಲಿಲ್ಲ. ವಾದಗಳಾದವು. ತಪ್ಪುಗ್ರಹಿಕೆಗಳು ಮೂಡಿದವು. ಆದರೂ ಕಾಮಿನಿ ತನ್ನ ಮನಸ್ಸನ್ನು ಹೇಳಲು ಕಲಿತಳು. ಮಾಧವ ಕೇಳಲು ಕಲಿತ. ಅವರಿಬ್ಬರ ನಡುವೆ ನಿಧಾನವಾಗಿ ಹೊಸ ಸಮತೋಲನ ಹುಟ್ಟಿತು.

ಕಾಮಿನಿಗೆ ತಿಳಿಯಿತು— ಪ್ರೀತಿಗೆ ಪಾಶದ ಮೃದುತ್ವ ಬೇಕು; ಆತ್ಮಗೌರವವನ್ನು ಕಾಪಾಡಲು ಅಂಕುಶದ ದೃಢತೆಯೂ ಬೇಕು.

***

ಕೆಲವು ತಿಂಗಳ ನಂತರ ದೂರದ ಹಳ್ಳಿಯೊಂದರ ಸರ್ಕಾರಿ ಅನುದಾನಿತ ಶಾಲೆಯಲ್ಲಿ ತಾತ್ಕಾಲಿಕ ಶಿಕ್ಷಕಿಯ ಹುದ್ದೆ ಖಾಲಿಯಿದೆ ಎಂಬ ಮಾಹಿತಿ ಕಾಮಿನಿಗೆ ಸಿಕ್ಕಿತು. ಶಾಲೆ ಊರಿನಿಂದ ಬಹಳ ದೂರವಿತ್ತು. ಸಂಬಳ ಹಿಂದಿನ ಕೆಲಸಕ್ಕಿಂತ ಕಡಿಮೆ. ಕಟ್ಟಡ ಶಿಥಿಲವಾಗಿತ್ತು. ಮಕ್ಕಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿತ್ತು. 
“ಇಂತಹ ಶಾಲೆಗೆ ಹೋಗಿ ನಿನ್ನ ಭವಿಷ್ಯ ಹಾಳುಮಾಡಿಕೊಳ್ಳಬೇಡ,” ಎಂದು ಪರಿಚಿತರು ಹೇಳಿದರು. ಮಾಧವನಿಗೂ ಆರಂಭದಲ್ಲಿ ಒಪ್ಪಿಗೆ ಇರಲಿಲ್ಲ.
“ಪಟ್ಟಣದಲ್ಲಿ ಇನ್ನೊಂದು ಒಳ್ಳೆಯ ಅವಕಾಶ ಸಿಗುವವರೆಗೆ ಕಾಯಬಹುದಲ್ಲವೇ?”
“ನಾನು ಕಾಯುತ್ತಲೇ ಇದ್ದರೆ, ನನ್ನ ಆತ್ಮವಿಶ್ವಾಸವೇ ಮೊದಲು ಸಾಯಬಹುದು,” ಎಂದಳು ಕಾಮಿನಿ. “ಅಲ್ಲಿ ನನಗೆ ದೊಡ್ಡ ಹುದ್ದೆ ಸಿಗದಿರಬಹುದು. ಆದರೆ ಪಾಠ ಕೇಳಲು ಕಾಯುತ್ತಿರುವ ಮಕ್ಕಳು ಇದ್ದಾರೆ.” ಎಂದು ಹೇಳುತ್ತಾ ಅವಳು ಆ ಶಾಲೆಗೆ ಸೇರಿದಳು.

ಮೊದಲ ದಿನ ತರಗತಿಗೆ ಹೋದಾಗ ಹದಿನೈದು ಮಕ್ಕಳಲ್ಲಿ ಏಳು ಮಂದಿ ಮಾತ್ರ ಬಂದಿದ್ದರು. ಕೆಲವರಿಗೆ ಪುಸ್ತಕ ಇರಲಿಲ್ಲ. ಹಲವರಿಗೆ ಸರಿಯಾಗಿ ಓದಲು ಬರುತ್ತಿರಲಿಲ್ಲ. ಮಳೆ ಬಂದರೆ ಮೇಲ್ಛಾವಣಿ ಸೋರುತ್ತಿತ್ತು. ಗ್ರಂಥಾಲಯವೆಂಬ ಕೊಠಡಿಯಲ್ಲಿ ಮುರಿದ ಕುರ್ಚಿಗಳು ಮತ್ತು ಹಾಳಾದ ಕಡತಗಳಷ್ಟೇ ಇದ್ದವು.
ಕಾಮಿನಿ ತನ್ನ ವೃತ್ತಿಜೀವನ ಇನ್ನಷ್ಟು ಕೆಳಗೆ ಇಳಿದಿದೆ ಎಂದು ಒಂದು ಕ್ಷಣ ಭಾವಿಸಿದಳು.
ಪ್ರತಿಷ್ಠಿತ ಶಾಲೆಯಲ್ಲಿ ಕೆಲಸ ಮಾಡಿದ್ದವಳು ಈಗ ಯಾರೂ ಬರಲು ಇಚ್ಛಿಸದ ಶಾಲೆಗೆ ಬಂದಿದ್ದಳು.

ಅದೇ ಸಂಜೆ ಊರಿನ ದೇವಸ್ಥಾನದಲ್ಲಿ ಕುಬೇರನ ಕಥೆಯ ಪ್ರವಚನ ನಡೆಯುತ್ತಿತ್ತು.
ಅಪಾರ ಸಂಪತ್ತಿನ ಒಡೆಯನಾದ ಕುಬೇರ ತನ್ನ ವೈಭವವನ್ನು ಪ್ರದರ್ಶಿಸಲು ಶಿವನನ್ನು ಭೋಜನಕ್ಕೆ ಆಹ್ವಾನಿಸಿದ. ಶಿವ ತನ್ನ ಬದಲು ಬಾಲಗಣೇಶನನ್ನು ಕಳುಹಿಸಿದ. ಕುಬೇರನ ಅರಮನೆಯ ಆಹಾರವೆಲ್ಲ ಮುಗಿದರೂ ಗಣೇಶನ ಹಸಿವು ತೀರಲಿಲ್ಲ. ಕೊನೆಗೆ ತನ್ನ ಅಹಂಕಾರವನ್ನು ಬಿಟ್ಟು ಭಕ್ತಿಯಿಂದ ಅರ್ಪಿಸಿದ ಸರಳವಾದ ಒಂದು ಹಿಡಿ ಅನ್ನವೇ ಗಣೇಶನ ಹಸಿವನ್ನು ತಣಿಸಿತು.

ಮನೆಗೆ ಹಿಂದಿರುಗುವಾಗ ಕಾಮಿನಿ ಯೋಚಿಸಿದಳು. ತಾನು ಶಿಕ್ಷಕಿಯಾಗಲು ಬಯಸಿದ್ದು ದೊಡ್ಡ ಶಾಲೆಯ ಗುರುತಿಗಾಗಿಯೇ? ಕಾಯಂ ಹುದ್ದೆ ಮತ್ತು ಉತ್ತಮ ಸಂಬಳ ಸಿಗದಿದ್ದರೆ ತನ್ನ ಬೋಧನೆಗೆ ಮೌಲ್ಯವೇ ಇಲ್ಲವೇ?
ಸೌಲಭ್ಯವಿರುವ ಮಕ್ಕಳಿಗೆ ಪಾಠ ಹೇಳುವುದು ಮಾತ್ರ ಸಾಧನೆಯಲ್ಲ. ಯಾರೂ ಗಮನಿಸದ ಮಕ್ಕಳೊಳಗೆ ಕಲಿಕೆಯ ಹಸಿವು ಹುಟ್ಟಿಸುವುದು ಇನ್ನೂ ದೊಡ್ಡ ಸಾಧನೆಯಾಗಬಹುದು.
ಮರುದಿನದಿಂದ ಅವಳು ಶಾಲೆಯನ್ನು ಬೇರೆ ದೃಷ್ಟಿಯಿಂದ ನೋಡತೊಡಗಿದಳು. “ಇಲ್ಲಿ ಏನೂ ಇಲ್ಲ” ಎಂಬ ಯೋಚನೆಯ ಬದಲು, “ಇಲ್ಲಿ ಅತ್ಯಂತ ಅಗತ್ಯವಾದದ್ದು ಏನು?” ಎಂದು ಪ್ರಶ್ನಿಸಿದಳು.

ಅವಳ ಉತ್ತರ—ನಂಬಿಕೆ.
ಮೊದಲು ಮಕ್ಕಳು ತಮ್ಮಿಂದ ಕಲಿಯಲು ಸಾಧ್ಯವೆಂದು ನಂಬಬೇಕು. ನಂತರ ಪೋಷಕರು ಶಾಲೆಯಿಂದ ಮಕ್ಕಳ ಭವಿಷ್ಯ ಬದಲಾಗಬಹುದು ಎಂದು ನಂಬಬೇಕು. ಶಿಕ್ಷಕರು ತಮ್ಮ ಪ್ರಯತ್ನ ವ್ಯರ್ಥವಲ್ಲ ಎಂದು ನಂಬಬೇಕು.

ಅಂದು ಕಾಮಿನಿ ಅರಿತುಕೊಂಡಳು—
ಹುದ್ದೆಯ ವೈಭವಕ್ಕಿಂತ ಕೆಲಸದ ಉದ್ದೇಶ ದೊಡ್ಡದು. ಗೌರವ ಪಡೆಯುವ ಸ್ಥಳದಲ್ಲಿರುವುದಕ್ಕಿಂತ ನಮ್ಮ ಅಗತ್ಯವಿರುವ ಸ್ಥಳದಲ್ಲಿರುವುದು ಕೆಲವೊಮ್ಮೆ ಹೆಚ್ಚು ಅರ್ಥಪೂರ್ಣ.

***

ಶಾಲೆಯಲ್ಲಿ ಸೌಲಭ್ಯಗಳ ಕೊರತೆ ದೊಡ್ಡ ಸಮಸ್ಯೆಯಾಗಿತ್ತು. ಹೊಸ ಪುಸ್ತಕ, ಪ್ರಯೋಗಾಲಯ, ಗಣಕಯಂತ್ರ—ಯಾವುದಕ್ಕೂ ಹಣವಿರಲಿಲ್ಲ. ಆದರೆ ಕಾಮಿನಿಗೆ ಗಣೇಶನ ಪುಟ್ಟ ವಾಹನವಾದ ಮೂಷಕ ನೆನಪಾಯಿತು. 

ಬಾಲ್ಯದಲ್ಲಿ ಅವಳು ತಾಯಿಯನ್ನು ಕೇಳಿದ್ದಳು: “ಅಷ್ಟು ದೊಡ್ಡ ಗಣಪತಿಗೆ ಅಷ್ಟು ಪುಟ್ಟ ಇಲಿ ಹೇಗೆ ವಾಹನವಾಗುತ್ತದೆ?”
ಲಕ್ಷ್ಮಿ ಹೇಳಿದ್ದಳು: “ಸಣ್ಣದು ಎಂದರೆ ದುರ್ಬಲ ಎಂದು ಅರ್ಥವಲ್ಲ. ಸರಿಯಾಗಿ ಬಳಸಿದರೆ ಪುಟ್ಟ ಸಾಧನವೂ ದೊಡ್ಡ ಗುರಿಯನ್ನು ಹೊತ್ತು ಸಾಗಬಹುದು. ಇಲಿಯಂತೆ ಚಂಚಲವಾಗಿರುವ ಮನಸ್ಸನ್ನು ನಿಯಂತ್ರಿಸಿದರೆ ಅದೇ ನಮ್ಮನ್ನು ಗುರಿಯತ್ತ ಕೊಂಡೊಯ್ಯುತ್ತದೆ.”

ಕಾಮಿನಿ ತನ್ನಲ್ಲಿದ್ದ ಸಣ್ಣ ಅವಕಾಶಗಳನ್ನು ಬಳಸತೊಡಗಿದಳು. ಹಳೆಯ ದಿನಪತ್ರಿಕೆಗಳಿಂದ ಮಕ್ಕಳಿಗೆ ಅಕ್ಷರಪಟ್ಟಿ ಮಾಡಿದಳು. ಕಲ್ಲು ಮತ್ತು ಹುಣಸೆಬೀಜಗಳಿಂದ ಗಣಿತ ಕಲಿಸಿದಳು. ಖಾಲಿ ಬಾಟಲಿಗಳಿಂದ ವಿಜ್ಞಾನ ಮಾದರಿಗಳನ್ನು ತಯಾರಿಸಿದಳು. ಊರಿನ ನಿವೃತ್ತ ಶಿಕ್ಷಕರಿಂದ ವಾರಕ್ಕೊಮ್ಮೆ ವಿಶೇಷ ತರಗತಿ ನಡೆಸಿದಳು. ಪಟ್ಟಣದ ಪರಿಚಿತರಿಂದ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ಗ್ರಂಥಾಲಯ ಕಟ್ಟಿದಳು.

ಮಕ್ಕಳು ಶಾಲೆಗೆ ಬರಲು ಆರಂಭಿಸಿದರು. ಆರಂಭದಲ್ಲಿ ಅಕ್ಷರ ಓದಲು ಹೆದರುತ್ತಿದ್ದ ಸಾವಿತ್ರಿ, ಕೆಲವು ತಿಂಗಳಲ್ಲಿ ತರಗತಿಯ ಮುಂದೆ ನಿಂತು ಕಥೆ ಓದಿದಳು. ಗಣಿತವೆಂದರೆ ಓಡಿಹೋಗುತ್ತಿದ್ದ ರವಿ ಜಿಲ್ಲಾ ಮಟ್ಟದ ಗಣಿತ ಸ್ಪರ್ಧೆಗೆ ಆಯ್ಕೆಯಾದ. ಶಾಲೆ ಬಿಡಬೇಕೆಂದಿದ್ದ ನಂದಿನಿ ಮತ್ತೆ ಓದು ಮುಂದುವರಿಸಿದಳು.

ಶಾಲೆಯ ಬಣ್ಣ ಮಾಸಿದ ಗೋಡೆಗಳ ಮೇಲೆ ಮಕ್ಕಳ ಕನಸುಗಳು ಚಿತ್ರಗಳಾಗಿ ಅರಳಿದವು.
ದೊಡ್ಡ ಬದಲಾವಣೆಗೆ ಯಾವಾಗಲೂ ದೊಡ್ಡ ಸಾಧನಗಳೇ ಬೇಕಾಗುವುದಿಲ್ಲ. ಇರುವ ಸಣ್ಣ ಅವಕಾಶವನ್ನು ಸರಿಯಾದ ದಿಕ್ಕಿನಲ್ಲಿ ಬಳಸುವ ಬುದ್ಧಿ ಸಾಕಾಗಬಹುದು.

***

ಮೂರು ವರ್ಷಗಳಲ್ಲಿ ಶಾಲೆಯ ಚಿತ್ರಣವೇ ಬದಲಾಯಿತು. ಮಕ್ಕಳ ಹಾಜರಾತಿ ಹೆಚ್ಚಿತು. ಫಲಿತಾಂಶ ಸುಧಾರಿಸಿತು. ಜಿಲ್ಲಾಮಟ್ಟದಲ್ಲಿ ಶಾಲೆಯ ಕೆಲಸ ಮೆಚ್ಚುಗೆ ಪಡೆಯಿತು. ಕಾಯಂ ಶಿಕ್ಷಕರ ನೇಮಕಾತಿಗೆ ಮತ್ತೆ ಅರ್ಜಿ ಆಹ್ವಾನಿಸಲಾಯಿತು.
ಈ ಬಾರಿ ಕಾಮಿನಿಗೆ ತನ್ನ ಸೇವೆ ಮತ್ತು ಸಾಧನೆಯ ಆಧಾರದ ಮೇಲೆ ಅವಕಾಶ ಸಿಗುತ್ತದೆ ಎಂಬ ನಂಬಿಕೆಯಿತ್ತು. ಮಕ್ಕಳು, ಪೋಷಕರು ಮತ್ತು ಮುಖ್ಯಶಿಕ್ಷಕರು ಅವಳ ಪರವಾಗಿ ಶಿಫಾರಸು ಮಾಡಿದರು. 
ಆದರೆ ದಾಖಲೆ ಪರಿಶೀಲನೆಯ ವೇಳೆ ಅವಳ ಹಿಂದಿನ ಸಂಸ್ಥೆ ನೀಡಿದ ಅನುಭವ ಪ್ರಮಾಣಪತ್ರದಲ್ಲಿ ಒಂದು ದಿನಾಂಕದ ದೋಷವಿತ್ತು. ಅದನ್ನೇ ಕಾರಣವನ್ನಾಗಿ ಮಾಡಿ ಅವಳ ಅರ್ಜಿಯನ್ನು ತಿರಸ್ಕರಿಸಲಾಯಿತು. ಅವಳು ಹಲವು ವರ್ಷಗಳಿಂದ ಮಾಡಿದ ನೈಜ ಸೇವೆಗಿಂತ ಒಂದು ಕಾಗದದ ತಪ್ಪೇ ದೊಡ್ಡದಾಯಿತು.

ಕಾಮಿನಿ ಸಂಬಂಧಪಟ್ಟ ಕಚೇರಿಗಳಿಗೆ ಅಲೆದಳು. ಅರ್ಜಿ ಕೊಟ್ಟಳು. ದಾಖಲೆ ತಿದ್ದುಪಡಿ ಮಾಡಿಸಿದಳು. ಆದರೆ ಆಯ್ಕೆ ಪ್ರಕ್ರಿಯೆ ಮುಗಿದುಹೋಯಿತು. ಹುದ್ದೆ ಮತ್ತೆ ಅವಳ ಕೈತಪ್ಪಿತು. ಅದೇ ಸಮಯದಲ್ಲಿ ಶಾಲೆಯ ಆಡಳಿತದ ವಿರುದ್ಧ ಬಂದ ದೂರಿನ ತನಿಖೆಯಲ್ಲಿ, ಸಂಬಂಧವಿಲ್ಲದಿದ್ದರೂ ಕಾಮಿನಿಯ ಹೆಸರನ್ನೂ ಎಳೆದುತರಲಾಯಿತು. ಕೆಲವರು ಅವಳ ಜನಪ್ರಿಯತೆಯನ್ನು ಸಹಿಸಲಾರದೆ ಸುಳ್ಳು ಮಾತುಗಳನ್ನು ಹರಡಿದರು.
“ಮಕ್ಕಳ ಫಲಿತಾಂಶದ ಹೆಸರಿನಲ್ಲಿ ತನ್ನ ಪ್ರಚಾರ ಮಾಡಿಕೊಳ್ಳುತ್ತಾಳೆ.”
“ಪ್ರಶಸ್ತಿಗಾಗಿ ಎಲ್ಲವನ್ನೂ ಮಾಡುತ್ತಿದ್ದಾಳೆ.”
“ಶಾಲೆಯ ಹಣವನ್ನು ಹೇಗೆ ಬಳಸಿದ್ದಾಳೋ ಯಾರಿಗೆ ಗೊತ್ತು?”
ತಾನು ನಿರ್ಮಿಸಿದ ವಿಶ್ವಾಸವೇ ತನ್ನ ವಿರುದ್ಧ ಅನುಮಾನವಾಗಿ ತಿರುಗುತ್ತಿರುವುದನ್ನು ಕಂಡು ಕಾಮಿನಿ ಕುಸಿದಳು. ಅವಳು ಶಾಲೆಗೆ ಹೋಗುವುದನ್ನು ಮುಂದುವರಿಸಿದರೂ ಹಿಂದಿನ ಉತ್ಸಾಹ ಇರಲಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ. ಬೆಳಿಗ್ಗೆ ಹಾಸಿಗೆಯಿಂದ ಏಳುವುದೇ ಕಷ್ಟವಾಗುತ್ತಿತ್ತು. 
ಇಷ್ಟೆಲ್ಲ ಪ್ರಾಮಾಣಿಕವಾಗಿ ಕೆಲಸ ಮಾಡಿ ಏನು ಸಿಕ್ಕಿತು?
ಪ್ರತಿಯೊಂದು ಬಾರಿ ಗುರಿಯ ಹತ್ತಿರ ಬಂದಾಗ ಬದುಕು ನನ್ನನ್ನು ಹಿಂದಕ್ಕೆ ತಳ್ಳುತ್ತದೆ.
ನನ್ನಿಂದ ಏನನ್ನೂ ಬದಲಾಯಿಸಲು ಸಾಧ್ಯವಿಲ್ಲ. ಇನ್ನು ಯಾಕೆ ಪ್ರಯತ್ನಿಸಬೇಕು?

ಮೊದಲ ಬಾರಿಗೆ ಸಮಸ್ಯೆಯನ್ನು ಎದುರಿಸುವ ಶಕ್ತಿಯೇ ತನ್ನಲ್ಲಿ ಉಳಿದಿಲ್ಲವೆಂದು ಅವಳಿಗೆ ಅನಿಸಿತು. ಅದೇ ಸಮಯದಲ್ಲಿ ತಾಯಿ ಲಕ್ಷ್ಮಿ ತೀರಿಕೊಂಡರು.
ಕಾಮಿನಿಯ ಬದುಕಿನ ಮೊದಲ ಗುರು, ಗಣೇಶನ ಪ್ರತಿಯೊಂದು ಕಥೆಯ ಮೂಲಕ ಜೀವನವನ್ನು ಅರ್ಥಮಾಡಿಸಿದ ತಾಯಿ—ಇನ್ನು ಅವಳೊಂದಿಗಿರಲಿಲ್ಲ.

ತಾಯಿಯ ವಸ್ತುಗಳನ್ನು ಜೋಡಿಸುತ್ತಿದ್ದಾಗ ಹಳೆಯ ಮರದ ಪೆಟ್ಟಿಗೆಯೊಂದರಲ್ಲಿ ಮಸುಕಾದ ಪುಸ್ತಕ ಸಿಕ್ಕಿತು. ಅದರ ಮೊದಲ ಪುಟದಲ್ಲಿ ಲಕ್ಷ್ಮಿಯ ಕೈಬರಹವಿತ್ತು: “ಕಾಮಿನಿಗಾಗಿ—ಬದುಕಿನಲ್ಲಿ ದಾರಿ ಕಾಣದ ದಿನ ಓದಲು.” ಪುಸ್ತಕದಲ್ಲಿ ಗಣೇಶನ ಕಥೆಗಳು, ಸ್ತೋತ್ರಗಳು ಮತ್ತು ಅವುಗಳಿಂದ ಲಕ್ಷ್ಮಿ ಕಂಡುಕೊಂಡ ಜೀವನಾರ್ಥಗಳಿದ್ದವು. ಕೊನೆಯ ಪುಟಗಳಲ್ಲಿ ಲಲಿತಾ ಸಹಸ್ರನಾಮಕ್ಕೆ ಸಂಬಂಧಿಸಿದ ಒಂದು ಪ್ರಸಂಗವನ್ನು ಬರೆದಿಟ್ಟಿದ್ದಳು. 

ಭಂಡಾಸುರನ ಸೈನಿಕರು ಯುದ್ಧದಲ್ಲಿ ಸಾವಿಗೀಡಾಗತೊಡಗಿದಾಗ, ಶಕ್ತಿಸೇನೆಯನ್ನು ತಡೆಯಲು ಅವನು ವಿಘ್ನಯಂತ್ರವನ್ನು ಪ್ರಯೋಗಿಸಿದ. ಅದು ಸಾಮಾನ್ಯ ಆಯುಧವಾಗಿರಲಿಲ್ಲ. ಅದು ಸೈನಿಕರ ದೇಹವನ್ನು ಗಾಯಗೊಳಿಸಲಿಲ್ಲ; ಅವರ ಮನಸ್ಸನ್ನೇ ಆಕ್ರಮಿಸಿತು. 
ಸೇನೆಯಲ್ಲಿ ಜಡತ್ವ ಹರಡಿತು. 
ಉತ್ಸಾಹ ನಂದಿತು. ಗೊಂದಲ ಮೂಡಿತು. ಕರ್ತವ್ಯದ ಮೇಲಿನ ಆಸಕ್ತಿ ಕಳೆದುಹೋಯಿತು. ಹೋರಾಡುವ ಸಂಕಲ್ಪವೇ ದುರ್ಬಲವಾಯಿತು.
‘ಈ ಯುದ್ಧದಿಂದ ಏನು ಪ್ರಯೋಜನ?’
‘ನಮ್ಮಿಂದ ಗೆಲ್ಲಲು ಸಾಧ್ಯವಿಲ್ಲ.’
‘ಇನ್ನು ಯಾಕೆ ಹೋರಾಡಬೇಕು?’
ಕಾಮಿನಿಯ ಕೈಗಳು ನಡುಗಿದವು. ತನ್ನ ಮನಸ್ಸಿನೊಳಗೆ ಹಲವು ದಿನಗಳಿಂದ ಕೇಳುತ್ತಿದ್ದವು ಇದೇ ಮಾತುಗಳು. ಮುಂದೆ ತಾಯಿ ಬರೆದಿದ್ದರು:
ವಿಘ್ನಯಂತ್ರವನ್ನು ನಾಶಮಾಡಲು ಇಂದ್ರಿಯಗಳು, ಪ್ರಾಣಗಳು, ಪಂಚಭೂತಗಳು, ಆಸೆ, ಕ್ರಿಯೆ, ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ ಮತ್ತು ಅವಿದ್ಯೆಯಂತಹ ಆಂತರಿಕ ಶಕ್ತಿಗಳ ಮೇಲೆ ಪ್ರಭುತ್ವ ಹೊಂದಿದ ಮಹಾಶಕ್ತಿ ಬೇಕಾಯಿತು.
ಆಗ ದೇವಿ ಕಾಮೇಶ್ವರನ ಮುಖವನ್ನು ನೋಡಿದಳು. ಯಾವ ದೊಡ್ಡ ಯಾಗವೂ ನಡೆಯಲಿಲ್ಲ. ಯಾವ ಸುದೀರ್ಘ ಆಚರಣೆಯೂ ಬೇಕಾಗಲಿಲ್ಲ. ಶಿವ–ಶಕ್ತಿಯ ಆ ಒಂದು ದಿವ್ಯ ನೋಟದಿಂದ ಮಹಾಗಣಪತಿ ಉದಯಿಸಿದ. ಶಿವ ಮತ್ತು ಶಕ್ತಿ ಎರಡು ಸ್ವತಂತ್ರ ಸತ್ಯಗಳಲ್ಲ. ಶಿವ ಶುದ್ಧ ಚೈತನ್ಯವಾದರೆ, ಶಕ್ತಿ ಆ ಚೈತನ್ಯದ ಅರಿವು, ಇಚ್ಛೆ ಮತ್ತು ಅಭಿವ್ಯಕ್ತಿಯ ಸಾಮರ್ಥ್ಯ. ಚೈತನ್ಯವು ತನ್ನೊಳಗಿನ ಶಕ್ತಿಯನ್ನು ಗುರುತಿಸಿದಾಗ, ವಿಘ್ನವನ್ನು ಭೇದಿಸುವ ಬುದ್ಧಿ ಉದಯಿಸುತ್ತದೆ.
ಮಹಾಗಣಪತಿ ವಿಘ್ನಯಂತ್ರವನ್ನು ಒಡೆದಾಗ ಶಕ್ತಿಸೇನೆಗೆ ಮತ್ತೆ ಉತ್ಸಾಹ ಬಂತು. ಅವರು ಹೊರಗಿನ ಶತ್ರುವನ್ನು ಎದುರಿಸುವ ಮೊದಲು ತಮ್ಮೊಳಗಿನ ಜಡತ್ವವನ್ನು ಗೆದ್ದರು.

ಕೊನೆಯಲ್ಲಿ ಲಕ್ಷ್ಮಿ ಬರೆದಿದ್ದಳು: “ಕಾಮಿ, ಬದುಕಿನ ದೊಡ್ಡ ವಿಘ್ನ ಯಾವಾಗಲೂ ಹೊರಗಿನಿಂದ ಬರುವುದಿಲ್ಲ. ಕೆಲವೊಮ್ಮೆ ಅದು ‘ನನ್ನಿಂದ ಸಾಧ್ಯವಿಲ್ಲ’, ‘ಮುಂದುವರಿದು ಪ್ರಯೋಜನವಿಲ್ಲ’ ಎನ್ನುವ ಧ್ವನಿಯಾಗಿ ನಮ್ಮೊಳಗೇ ಹುಟ್ಟುತ್ತದೆ. ಆ ಧ್ವನಿಯನ್ನು ನಿನ್ನ ಸತ್ಯವೆಂದು ನಂಬಬೇಡ. ಅದನ್ನು ಗುರುತಿಸುವ ವಿವೇಕವೇ ಗಣಪತಿ. ನಿನ್ನೊಳಗಿನ ಚೈತನ್ಯ ತನ್ನ ಶಕ್ತಿಯನ್ನು ನೆನಪಿಸಿಕೊಂಡಾಗ ಮಹಾಗಣಪತಿ ಮತ್ತೆ ಉದಯಿಸುತ್ತಾನೆ.”

ಕಾಮಿನಿ ಪುಸ್ತಕವನ್ನು ಎದೆಗಪ್ಪಿಕೊಂಡು ಬಹಳ ಹೊತ್ತು ಅತ್ತಳು. ತಾಯಿ ಇಲ್ಲ ಎಂಬ ನೋವು ಕಡಿಮೆಯಾಗಲಿಲ್ಲ. ಉದ್ಯೋಗದ ಅನ್ಯಾಯವೂ ಸರಿಯಾಗಲಿಲ್ಲ. ತನಿಖೆ ಮುಗಿಯಲಿಲ್ಲ. ಅವಮಾನಿಸಿದವರು ಕ್ಷಮೆಯನ್ನೂ ಕೇಳಲಿಲ್ಲ. ಆದರೆ ತನ್ನ ನಿಜವಾದ ವಿಘ್ನ ಯಾವುದೆಂಬುದು ಅವಳಿಗೆ ಸ್ಪಷ್ಟವಾಯಿತು. ಅದು ಕಾಯಂ ಹುದ್ದೆ ಸಿಗದಿರುವುದಷ್ಟೇ ಅಲ್ಲ. ಮತ್ತೊಬ್ಬರು ತನ್ನ ಅರ್ಹತೆಯನ್ನು ಒಪ್ಪಿಕೊಳ್ಳದ ಕಾರಣ, ತಾನೇ ತನ್ನ ಸಾಮರ್ಥ್ಯವನ್ನು ಅನುಮಾನಿಸಲು ಆರಂಭಿಸಿದ್ದು ನಿಜವಾದ ವಿಘ್ನವಾಗಿತ್ತು.

***

ಮರುದಿನ ಹಲವು ದಿನಗಳ ನಂತರ ಕಾಮಿನಿ ಬೇಗನೆ ಶಾಲೆಗೆ ಹೋದಳು. ತರಗತಿಯ ಕಿಟಕಿಗಳನ್ನು ತೆರೆದಳು. ಕಪ್ಪುಹಲಗೆಯ ಮೇಲಿನ ಹಳೆಯ ಬರಹವನ್ನು ಅಳಿಸಿದಳು. 
ಗಣಪತಿಯ ಚಿತ್ರದ ಮುಂದೆ ನಿಂತು ಕೈಮುಗಿದಳು. “ನನ್ನ ದಾರಿಯಲ್ಲಿರುವ ಎಲ್ಲ ವಿಘ್ನಗಳನ್ನೂ ತೆಗೆದುಹಾಕು ಎಂದು ಕೇಳುವುದಿಲ್ಲ. ಯಾವುದು ನಿಜವಾದ ವಿಘ್ನ, ಯಾವುದು ನನ್ನ ಭಯ ಸೃಷ್ಟಿಸಿದ ನೆರಳು ಎಂದು ಗುರುತಿಸುವ ಬುದ್ಧಿ ಕೊಡು.”
ಅವಳು ತನ್ನ ವಿರುದ್ಧದ ಆರೋಪಗಳಿಗೆ ದಾಖಲೆಗಳ ಮೂಲಕ ಉತ್ತರಿಸಿದಳು. ಶಾಲೆಗೆ ಬಂದ ಪುಸ್ತಕಗಳು, ದೇಣಿಗೆಗಳು ಮತ್ತು ಅವುಗಳ ಬಳಕೆಯ ಸಂಪೂರ್ಣ ವಿವರವನ್ನು ಪೋಷಕರ ಮುಂದಿಟ್ಟಳು. ತಪ್ಪು ದಿನಾಂಕವಿದ್ದ ಅನುಭವ ಪ್ರಮಾಣಪತ್ರವನ್ನು ಕಾನೂನುಬದ್ಧವಾಗಿ ತಿದ್ದಿಸಿಕೊಂಡಳು. ತನ್ನ ಅರ್ಜಿ ತಿರಸ್ಕೃತವಾದ ಬಗ್ಗೆ ಮೇಲ್ಮನವಿ ಸಲ್ಲಿಸಿದಳು. ಆದರೆ ಅದಕ್ಕಿಂತ ಮುಖ್ಯವಾಗಿ, ಮಕ್ಕಳಿಗೆ ಪಾಠ ಮಾಡುವುದನ್ನು ನಿಲ್ಲಿಸಲಿಲ್ಲ. 
“ನಿಮಗೆ ಇಷ್ಟು ಅನ್ಯಾಯವಾಗಿರುವಾಗಲೂ ಹೇಗೆ ಪಾಠ ಮಾಡುತ್ತೀರಿ?” ಎಂದು ಸಹೋದ್ಯೋಗಿಯೊಬ್ಬರು ಕೇಳಿದರು. 
ಕಾಮಿನಿ ನಕ್ಕಳು. “ನನಗೆ ಕಾಯಂ ಹುದ್ದೆ ಸಿಗದಿರುವುದು ನನ್ನ ನೋವು. ಆದರೆ ಅದಕ್ಕಾಗಿ ಮಕ್ಕಳ ಕಲಿಕೆಯನ್ನು ನಿಲ್ಲಿಸಿದರೆ, ನನ್ನ ನೋವಿನ ಶಿಕ್ಷೆಯನ್ನು ಅವರಿಗೆ ಕೊಟ್ಟಂತಾಗುತ್ತದೆ.”

ತನಿಖೆಯಲ್ಲಿ ಕಾಮಿನಿಯ ವಿರುದ್ಧದ ಆರೋಪಗಳು ಸುಳ್ಳು ಎಂಬುದು ಸಾಬೀತಾಯಿತು. ಅವಳ ಪಾರದರ್ಶಕ ಕೆಲಸವನ್ನು ತನಿಖಾಧಿಕಾರಿಗಳು ವರದಿಯಲ್ಲಿ ವಿಶೇಷವಾಗಿ ಉಲ್ಲೇಖಿಸಿದರು. ಆದರೂ ಆ ವರ್ಷ ಕಾಯಂ ಹುದ್ದೆ ಅವಳಿಗೆ ಸಿಗಲಿಲ್ಲ. 
ಮೊದಲಿನ ಕಾಮಿನಿಯಾಗಿದ್ದರೆ ಅದನ್ನೇ ಅಂತಿಮ ಸೋಲು ಎಂದುಕೊಳ್ಳುತ್ತಿದ್ದಳು. ಆದರೆ ಈಗ ಯಶಸ್ಸನ್ನು ಒಂದೇ ನೇಮಕಾತಿ ಪತ್ರದಲ್ಲಿ ಅಳೆಯುತ್ತಿರಲಿಲ್ಲ.
ಅವಳು ಶಿಕ್ಷಕರ ಅರ್ಹತಾ ಪರೀಕ್ಷೆಗೆ ಮತ್ತೆ ಸಿದ್ಧತೆ ಆರಂಭಿಸಿದಳು. ಮನೆಯ ಜವಾಬ್ದಾರಿ, ಶಾಲೆಯ ಕೆಲಸ ಮತ್ತು ಪ್ರಯಾಣದ ನಡುವೆಯೇ ರಾತ್ರಿ ಓದುತ್ತಿದ್ದಳು. ಹಲವು ವರ್ಷಗಳ ನಂತರ ಮತ್ತೆ ವಿದ್ಯಾರ್ಥಿನಿಯಾಗಿದ್ದಳು. ಮೊದಲ ಪ್ರಯತ್ನದಲ್ಲಿ ಕೆಲವೇ ಅಂಕಗಳಿಂದ ವಿಫಲವಾದಳು. ಫಲಿತಾಂಶ ನೋಡಿದಾಗ ಕಣ್ಣೀರು ಬಂತು. ಆದರೆ ಈ ಬಾರಿ ಅವಳು ತನ್ನನ್ನು ತಾನು ಕೇಳಿಕೊಂಡಳು: 
ಈ ಸೋಲು ನನ್ನ ಬಗ್ಗೆ ಏನು ಹೇಳುತ್ತದೆ?
ಉತ್ತರ ಸ್ಪಷ್ಟವಾಗಿತ್ತು — ನಾನು ಇನ್ನೂ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂಬುದಷ್ಟೇ. ನಾನು ಅಸಮರ್ಥಳು ಎಂಬುದಲ್ಲ.

ಮುಂದಿನ ವರ್ಷ ಮತ್ತೆ ಪರೀಕ್ಷೆ ಬರೆದಳು. ಈ ಬಾರಿ ಅವಳು ತೇರ್ಗಡೆಯಾದಳು. ಜಿಲ್ಲೆಯ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ನೇಮಕಾತಿ ಪತ್ರ ಬಂದ ದಿನ ಅದನ್ನು ಮೊದಲು ಗಣಪತಿಯ ಮುಂದೆ ಇಟ್ಟಳು. ನಂತರ ತಾಯಿಯ ಹಳೆಯ ಪುಸ್ತಕದೊಳಗೆ ಜೋಪಾನವಾಗಿ ಇರಿಸಿದಳು.

***

ವರ್ಷಗಳು ಕಳೆದವು. ಕಾಮಿನಿ ಶಿಕ್ಷಕಿಯಾಗಿ ಮಾತ್ರ ಉಳಿಯಲಿಲ್ಲ. ಶಾಲೆ ಬಿಡುವ ಹಂತದಲ್ಲಿದ್ದ ಮಕ್ಕಳನ್ನು ಮತ್ತೆ ಶಿಕ್ಷಣದತ್ತ ಕರೆತರುವ ವಿಶೇಷ ಯೋಜನೆಯನ್ನು ರೂಪಿಸಿದಳು. ಆರ್ಥಿಕ ಸಂಕಷ್ಟದಲ್ಲಿದ್ದ ವಿದ್ಯಾರ್ಥಿಗಳಿಗೆ ಪುಸ್ತಕ ಸಂಗ್ರಹ ಅಭಿಯಾನ ನಡೆಸಿದಳು. ಓದಿನಲ್ಲಿ ಹಿಂದುಳಿದ ಮಕ್ಕಳಿಗಾಗಿ ವಿಭಿನ್ನ ಕಲಿಕಾ ವಿಧಾನಗಳನ್ನು ಅಳವಡಿಸಿದಳು. ಒಮ್ಮೆ ತಾನೇ ಹಳೆಯ ಹಾಳೆಗಳನ್ನು ಹೊಲಿದು ಪುಸ್ತಕ ಮಾಡಿಕೊಂಡಿದ್ದ ಕಾಮಿನಿ, ಈಗ ಸಾವಿರಾರು ಮಕ್ಕಳ ಕೈಗೆ ಪುಸ್ತಕ ತಲುಪಿಸುವ ಶಿಕ್ಷಕಿಯಾಗಿದ್ದಳು. ಅವಳ ಕೆಲಸಕ್ಕೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಘೋಷಿಸಲಾಯಿತು. 
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಲು ನಿಂತಾಗ ಮುಂದಿನ ಸಾಲಿನಲ್ಲಿ ತಂದೆ, ಮಾಧವ ಮತ್ತು ಅವಳ ಹಳೆಯ ವಿದ್ಯಾರ್ಥಿಗಳು ಕುಳಿತಿದ್ದರು. ತಾಯಿ ಮಾತ್ರ ಇರಲಿಲ್ಲ. ಆದರೆ ಕಾಮಿನಿಯ ಕೈಯಲ್ಲಿ ತಾಯಿ ಬರೆದಿದ್ದ ಹಳೆಯ ಪುಸ್ತಕವಿತ್ತು.
“ನನ್ನನ್ನು ಇಂದು ವಿಘ್ನಗಳನ್ನು ಗೆದ್ದ ಮಹಿಳೆ ಎಂದು ಪರಿಚಯಿಸಿದ್ದಾರೆ,” ಎಂದು ಅವಳು ಮಾತು ಆರಂಭಿಸಿದಳು. “ಆದರೆ ನನ್ನ ಬದುಕಿನಲ್ಲಿ ಯಾವ ವಿಘ್ನವೂ ಸುಲಭವಾಗಿ ಮಾಯವಾಗಲಿಲ್ಲ.”
ಸಭಾಂಗಣ ಮೌನಗೊಂಡಿತು.

“ಗಣಪತಿ ನನ್ನ ಬಡತನವನ್ನು ತಕ್ಷಣ ತೆಗೆದುಹಾಕಲಿಲ್ಲ; ಅದರೊಳಗೆ ಸೃಷ್ಟಿಸುವ ಬುದ್ಧಿ ಕೊಟ್ಟ. ತ್ಯಾಗದ ನೋವನ್ನು ತಪ್ಪಿಸಲಿಲ್ಲ; ಅದರಿಂದ ಭವಿಷ್ಯ ಬರೆಯುವ ಸಂಕಲ್ಪ ಕೊಟ್ಟ. ಸ್ಪರ್ಧೆಯಿಂದ ದೂರವಿಡಲಿಲ್ಲ; ವೇಗಕ್ಕಿಂತ ವಿವೇಕ ಮುಖ್ಯವೆಂದು ಕಲಿಸಿದ. ಹೊಣೆಗಾರಿಕೆಗಳನ್ನು ಕಡಿಮೆ ಮಾಡಲಿಲ್ಲ; ಅವುಗಳನ್ನು ಕ್ರಮಬದ್ಧವಾಗಿ ನಿಭಾಯಿಸುವ ಜ್ಞಾನ ಕೊಟ್ಟ. ಅವಮಾನವನ್ನು ತಡೆಯಲಿಲ್ಲ; ನನ್ನ ಮೌಲ್ಯವನ್ನು ನಾನೇ ಅರಿಯುವ ಆತ್ಮಗೌರವ ಕೊಟ್ಟ. ವೈವಾಹಿಕ ಸಂಘರ್ಷವನ್ನು ಮಾಯಮಾಡಲಿಲ್ಲ; ಪ್ರೀತಿಯ ಪಾಶದ ಜೊತೆಗೆ ದೃಢತೆಯ ಅಂಕುಶ ಹಿಡಿಯಲು ಕಲಿಸಿದ. ವೃತ್ತಿಜೀವನದ ಅನ್ಯಾಯವನ್ನು ತಕ್ಷಣ ಸರಿಪಡಿಸಲಿಲ್ಲ; ಹುದ್ದೆಯ ವೈಭವಕ್ಕಿಂತ ಕೆಲಸದ ಉದ್ದೇಶ ದೊಡ್ಡದು ಎಂದು ತಿಳಿಸಿದ. ಸಂಪನ್ಮೂಲಗಳ ಕೊರತೆಯನ್ನು ತುಂಬಲಿಲ್ಲ; ಪುಟ್ಟ ಮೂಷಕವನ್ನೇ ವಾಹನ ಮಾಡಿಕೊಳ್ಳುವ ಚಾಕಚಕ್ಯತೆ ಕೊಟ್ಟ. ಕೊನೆಗೆ ನನ್ನೊಳಗೆ ವಿಘ್ನಯಂತ್ರ ಹುಟ್ಟಿದಾಗ, ಹೊರಗಿನಿಂದ ಬಂದು ಅದನ್ನು ಒಡೆಯಲಿಲ್ಲ. ನನ್ನೊಳಗಿನ ಚೈತನ್ಯ ಮತ್ತು ಶಕ್ತಿಯನ್ನು ಗುರುತಿಸುವ ಬುದ್ಧಿಯಾಗಿ ಉದಯಿಸಿದ.”
ಕಾಮಿನಿ ಕ್ಷಣಕಾಲ ಮಾತು ನಿಲ್ಲಿಸಿದಳು.
“ಬಾಲ್ಯದಲ್ಲಿ ನಾನು ನನ್ನ ತಾಯಿಯನ್ನು ಕೇಳಿದ್ದೆ—ಗಣಪತಿ ನಿಜವಾಗಿಯೂ ಎಲ್ಲ ವಿಘ್ನಗಳನ್ನೂ ತೆಗೆದುಹಾಕುತ್ತಾನೆಯೇ ಎಂದು. ಈಗ ನನಗೆ ಉತ್ತರ ಸಿಕ್ಕಿದೆ. ದೇವರು ನಮ್ಮ ಬದುಕಿನ ಎಲ್ಲ ಕಲ್ಲುಗಳನ್ನು ತೆಗೆದುಹಾಕಿದರೆ ನಾವು ನಡೆಯಬಹುದು. ಆದರೆ ಯಾವ ಕಲ್ಲನ್ನು ಸರಿಸಬೇಕು, ಯಾವುದನ್ನು ದಾಟಬೇಕು, ಯಾವುದನ್ನೇ ಮೆಟ್ಟಿಲು ಮಾಡಿಕೊಳ್ಳಬೇಕು ಎಂಬ ಬುದ್ಧಿಯನ್ನು ಕೊಟ್ಟರೆ—ನಾವು ಮತ್ತೊಬ್ಬರಿಗೂ ದಾರಿ ತೋರಿಸಬಹುದು.”
ಸಭಾಂಗಣ ಚಪ್ಪಾಳೆಯಿಂದ ತುಂಬಿತು. ಪ್ರಶಸ್ತಿ ಸ್ವೀಕರಿಸಿದ ನಂತರ ಹತ್ತು ವರ್ಷದ ಹುಡುಗಿಯೊಬ್ಬಳು ಕಾಮಿನಿಯ ಬಳಿ ಬಂದಳು. ಅವಳ ಉಡುಪು ಹಳೆಯದಾಗಿತ್ತು. ಕೈಯಲ್ಲಿ ಬೇರೆಬೇರೆ ಹಾಳೆಗಳನ್ನು ಸೇರಿಸಿ ಹೊಲಿದ ಪುಸ್ತಕವಿತ್ತು. “ನಾನು ನಿಮ್ಮಂತೆಯೇ ಶಿಕ್ಷಕಿಯಾಗಬೇಕು,” ಎಂದಳು. ಕಾಮಿನಿ ಆ ಪುಸ್ತಕವನ್ನು ಕೈಗೆತ್ತಿಕೊಂಡಳು.
ಕ್ಷಣಕಾಲ ಅವಳ ಮುಂದೆ ತನ್ನದೇ ಬಾಲ್ಯ ನಿಂತಂತಾಯಿತು—ಸೋರಿದ ಹೆಂಚಿನ ಮನೆ, ತಾಯಿ ಹೊಲಿದ ಪುಸ್ತಕ, ಮುರಿದ ಕಿವಿಯ ಗಣಪತಿ, ಹಸಿವಿನ ರಾತ್ರಿಗಳು, ಅವಮಾನ, ತ್ಯಾಗ, ಅನ್ಯಾಯ ಮತ್ತು ಸೋಲಿನ ಭಯ ಎಲ್ಲವೂ ನೆನಪಾದವು. ಅವಳು ಹುಡುಗಿಯ ಕೈ ಹಿಡಿದಳು.
“ಖಂಡಿತ ಆಗಬಹುದು. ಆದರೆ ಒಂದು ಮಾತು ನೆನಪಿಟ್ಟುಕೋ. ನಿನ್ನ ಬಳಿ ಏನಿಲ್ಲ ಎಂಬುದರಿಂದ ನಿನ್ನ ಭವಿಷ್ಯ ನಿರ್ಧಾರವಾಗುವುದಿಲ್ಲ. ಇರುವುದರಿಂದ ನೀನು ಏನು ಸೃಷ್ಟಿಸುತ್ತೀಯೋ ಅದರಿಂದ ನಿರ್ಧಾರವಾಗುತ್ತದೆ.” ಅಂದು ಮನೆಗೆ ಮರಳಿದ ನಂತರ ಕಾಮಿನಿ ಗಣಪತಿಯ ಮುಂದೆ ದೀಪ ಹಚ್ಚಿದಳು.
“ನನ್ನ ವಿಘ್ನಗಳನ್ನೆಲ್ಲ ನೀನು ಯಾಕೆ ತೆಗೆದುಹಾಕಲಿಲ್ಲ ಎಂದು ಬಾಲ್ಯದಲ್ಲಿ ಕೇಳಿದ್ದೆ,” ಎಂದು ಮನಸ್ಸಿನಲ್ಲೇ ಮಾತನಾಡಿದಳು. “ಈಗ ಅರ್ಥವಾಯಿತು. ಅವೆಲ್ಲವನ್ನೂ ನೀನೇ ತೆಗೆದುಹಾಕಿದ್ದರೆ, ನನ್ನೊಳಗಿರುವ ನಿನ್ನನ್ನು ನಾನು ಎಂದಿಗೂ ಕಂಡುಕೊಳ್ಳುತ್ತಿರಲಿಲ್ಲ.”
ಗಾಳಿಗೆ ದೀಪದ ಜ್ವಾಲೆ ಕ್ಷಣಕಾಲ ಅಲುಗಾಡಿತು.ಆದರೆ ನಂದಲಿಲ್ಲ.

ಕಾಮಿನಿಯ ಬದುಕಿನಲ್ಲಿ ಬಂದ ವಿಘ್ನಗಳು ಈಗ ಅಳಿಸಿಹಾಕಬೇಕಾದ ಕಪ್ಪು ಪುಟಗಳಾಗಿರಲಿಲ್ಲ. ಪ್ರತಿಯೊಂದು ವಿಘ್ನವೂ ಅವಳಿಗೆ ಒಂದು ಕಥೆ ಕಲಿಸಿತ್ತು. ಪ್ರತಿಯೊಂದು ಕಥೆಯೂ ಒಂದು ನೀತಿಯನ್ನು ಕೊಟ್ಟಿತ್ತು. ಪ್ರತಿಯೊಂದು ನೀತಿಯೂ ಅವಳನ್ನು ಮುಂದಿನ ಮೆಟ್ಟಿಲಿಗೆ ಕರೆದೊಯ್ದಿತ್ತು. ಬದುಕಿನಲ್ಲಿ ಅಡೆತಡೆಗಳು ಬಾರದಿರುವುದೇ ದೇವರ ಅನುಗ್ರಹವಲ್ಲ. ಅಡೆತಡೆ ಬಂದಾಗ ಬುದ್ಧಿ ಮಸುಕಾಗದಿರುವುದು ಅನುಗ್ರಹ. ಸೋತಾಗ ಮತ್ತೆ ಆರಂಭಿಸುವ ಸಂಕಲ್ಪ ಉಳಿಯುವುದು ಅನುಗ್ರಹ. ಅವಮಾನದಲ್ಲಿ ಆತ್ಮಗೌರವ ಕಳೆದುಕೊಳ್ಳದಿರುವುದು ಅನುಗ್ರಹ. ಕೊರತೆಯ ನಡುವೆಯೂ ಹೊಸದನ್ನು ಸೃಷ್ಟಿಸುವ ಚಾಕಚಕ್ಯತೆ ಅನುಗ್ರಹ. ತನ್ನ ನೋವಿನಿಂದ ಹೊರಬಂದ ನಂತರ ಮತ್ತೊಬ್ಬರ ಕೈ ಹಿಡಿಯುವಷ್ಟು ಹೃದಯ ವಿಶಾಲವಾಗುವುದು—ಅದೇ ಬಹುದೊಡ್ಡ ಅನುಗ್ರಹ.

ಗಣಪತಿ ವಿಘ್ನಗಳನ್ನು ನಿವಾರಿಸುವವನು ಮಾತ್ರವಲ್ಲ. ವಿಘ್ನಗಳ ನಡುವೆ ನಮ್ಮೊಳಗಿನ ವಿವೇಕವನ್ನು ಎಚ್ಚರಿಸುವವನು. ಆ ವಿವೇಕ ಎಚ್ಚರಗೊಂಡಾಗ ದಾರಿಯಲ್ಲಿದ್ದ ಕಲ್ಲುಗಳೆಲ್ಲ ಮಾಯವಾಗುವುದಿಲ್ಲ. ಆದರೆ ನಡೆಯುವವಳು ಬದಲಾಗುತ್ತಾಳೆ. ಆಗ ಕೆಲವು ಕಲ್ಲುಗಳು ಪಕ್ಕಕ್ಕೆ ಸರಿಯುತ್ತವೆ. ಕೆಲವನ್ನು ಅವಳು ದಾಟುತ್ತಾಳೆ. ಇನ್ನೂ ಕೆಲವನ್ನು ಒಂದರ ಮೇಲೊಂದು ಜೋಡಿಸಿ ಮೆಟ್ಟಿಲು ಮಾಡಿಕೊಳ್ಳುತ್ತಾಳೆ.

ಕಾಮಿನಿ ಹಾಗೆಯೇ ತನ್ನ ಬದುಕನ್ನು ಕಟ್ಟಿಕೊಂಡಳು— ವಿಘ್ನಗಳಿಲ್ಲದ ಸುಂದರ ಬದುಕಾಗಿ ಅಲ್ಲ; ಪ್ರತಿಯೊಂದು ವಿಘ್ನಕ್ಕೂ ಅರ್ಥ ನೀಡಿ, ಅದನ್ನೇ ಮೆಟ್ಟಿಲಾಗಿಸಿಕೊಂಡ ಸುಂದರ ಬದುಕಾಗಿ.

*** 

✍🏻 Deepalaxmi Bhat
Mangaluru