✍🏻ದೀಪಲಕ್ಷ್ಮಿ ಭಟ್, ಮಂಗಳೂರು
ಶ್ರೀ ರಾಮ ಶರ್ಮ ಎಂಬ ಹೆಸರು ಊರಿನ ಹಳೆಯ ಕಾಲದ ನೆನಪುಗಳಲ್ಲೊಂದಾಗಿತ್ತು. ಈಗಿನ ಪೀಳಿಗೆಗೆ ಅದು ಕೇವಲ ಒಂದು ಸಾಮಾನ್ಯ ಹೆಸರು ಮಾತ್ರ. ಆದರೆ ಆ ಹೆಸರಿನ ಹಿಂದೆ ಅಡಗಿದ್ದ ಕಥೆ, ಒಂದು ಊರಿನ ಬೆಳವಣಿಗೆಯ ಮೌನ ಸಾಕ್ಷಿಯಾಗಿತ್ತು.
ಶ್ರೀ ರಾಮ ಶರ್ಮಾ ಅವರ ಬದುಕು ಬಡತನದ ಮಣ್ಣಿನಲ್ಲಿ ಬೇರು ಬಿಟ್ಟಿತ್ತು. ದೊಡ್ಡ ಕೂಡು ಕುಟುಂಬ, ಹಸಿದ ಹೊಟ್ಟೆಗಳು, ಹೊಟ್ಟೆ ತುಂಬಿಸಿಕೊಳ್ಳಲು ಮಾಡುವ ಹೋರಾಟ, ಹಂಚಿಕೊಂಡ ಕನಸುಗಳು — ಇವೆಲ್ಲದರ ಮಧ್ಯೆ ವಿದ್ಯೆಯ ಕೈ ಬಿಡದೇ ಹಿಡಿದುಕೊಂಡು ಹೋಗಿದ್ದರು ಅವರು. ಅಣ್ಣಂದಿರ ಚಿಕ್ಕ ಕ್ಯಾಂಟೀನ್‌ನಲ್ಲಿ ಚಿಕ್ಕಪುಟ್ಟ ಕೆಲಸ, ಹಗಲು ಮರದ ಮಿಲ್ಲಿನಲ್ಲಿ ಅಟೆಂಡರ್ ಕೆಲಸ, ಸಂಜೆ ಕಾಲೇಜು — ಹೀಗೆ ಅವನ ದಿನಗಳು ಓಡುತ್ತಿದ್ದವು. ದುಡ್ಡಿಗಿಂತ ಜವಾಬ್ದಾರಿ ದೊಡ್ಡದಾಗಿದ್ದ ಕಾಲ ಅದು. ಕಾಲೇಜಿನ ಪುಸ್ತಕಗಳನ್ನು ಚೀಲದಲ್ಲಿ ಹಾಕಿಕೊಂಡು, ಕೈಯಲ್ಲಿ ತಟ್ಟೆ ತೊಳೆಯುವ ಚಿಂದಿ ಹಿಡಿದು, ಅವರು ಜೀವನದ ಪಾಠವನ್ನು ಕಲಿಯುತ್ತಿದ್ದರು. ಮಿಲ್ಲಿನಲ್ಲಿ ಆ ಮರದ ಸದ್ದು, ಧೂಳು, ಬೆವರು — ಇವೆಲ್ಲದರ ನಡುವೆ ಬದುಕು ಸಾಗುತ್ತಿತ್ತು. ಕಣ್ಣು ತುಂಬಾ ನಿದ್ದೆ, ಮನಸ್ಸು ತುಂಬಾ ಕನಸು. “ಒಂದು ದಿನ ಒಳ್ಳೆಯ ಕೆಲಸ ಸಿಗಬೇಕು” ಅನ್ನೋ ಕನಸು ಮಾತ್ರ ಅವರಿಗೆ ದಾರಿ ತೋರಿಸುತ್ತಿತ್ತು. ಆ ಕನಸು ದೇವರ ಕೃಪೆಯಿಂದ ಸಾಕಾರವಾಯಿತು. ಸರಕಾರಿ ಕೆಲಸ. ದೊಡ್ಡ ಹುದ್ದೆ ಅಲ್ಲ. ಆದರೆ ಸ್ಥಿರ ಸಂಬಳ, ಗೌರವ. ಮೊದಲ ತಿಂಗಳ ಸಂಬಳ ಬಂದ ದಿನ, ಮನೆಗೆ ಹೊಸ ತಟ್ಟೆ, ಮನೆಗೆ ಉಪಯೋಗವಾಗುವ ವಸ್ತುಗಳು, ತೋಟಕ್ಕೆ ಗಿಡಗಳು, ಅಮ್ಮನ ಕೈಗೆ ಒಂದು ಸೀರೆ —ಅದೇ ಅವರ ಸಂತೋಷ.
***
ಅದೇ ಸಮಯದಲ್ಲಿ ಬಂದ ಒಳ್ಳೆಯ ಸಂಬಂಧ, ಪಲ್ಲವಿ. ಸೌಮ್ಯ ಸ್ವಭಾವದ, ಹೊಂದಾಣಿಕೆಯ ಹೆಣ್ಣು. ಸರಕಾರಿ ಕೆಲಸ, ಸುಂದರವಾದ ಮುಖ, ಗಟ್ಟಿಮುಟ್ಟಾದ ಮೈಕಟ್ಟು, ಜವಾಬ್ದಾರಿಯುತ ನಡೆ ನುಡಿ, ಈ ಎಲ್ಲ ಗುಣಗಳಿಂದಾಗಿ ಎಲ್ಲರಿಗೂ ಶರ್ಮ ಅವರು ಇಷ್ಟವಾದರು. ಸಂಬಂಧ ಒಪ್ಪಿಗೆಯಾಗಿ, ಮದುವೆಯಾದ ಮೇಲೆ ಅವರ ಜೀವನ ನಿಧಾನವಾಗಿ ನೆಮ್ಮದಿಯ ಹಾದಿ ಹಿಡಿಯಿತು. ಪುಟ್ಟ ಮಗಳು ಹುಟ್ಟಿದಾಗ, ಶರ್ಮರ ಕಣ್ಣುಗಳಲ್ಲಿ ಮಿಂಚಿದ ಸಂತೋಷವನ್ನು ಯಾರೂ ಮರೆತಿರಲಿಲ್ಲ. ಮಗಳು ರಮ್ಯಾ ಪಲ್ಲವಿಯ ಪ್ರತಿಬಿಂಬದಂತೆ ಕಾಣುತ್ತಿದ್ದಳು. ಆ ವರ್ಷವೇ, ಕೂಡು ಕುಟುಂಬವಾಗಿದ್ದ ಅವರ ಕುಟುಂಬ ಬೇರೆಬೇರೆಯಾಯಿತು. ದೊಡ್ಡ ಅಣ್ಣ ಮನೆತನದ ಮನೆಯಲ್ಲಿದ್ದರೆ, ಚಿಕ್ಕ ಅಣ್ಣ ಇನ್ನೊಂದು ಮನೆ ಕಟ್ಟಿಸಿ, ಸ್ವಂತ ದಿನಸಿ ಅಂಗಡಿ ಒಂದನ್ನು ಇಟ್ಟು, ಸ್ವಂತ ಕುಟುಂಬ ರೂಪಿಸಿಕೊಂಡರು. ಹಾಗಿರುವಾಗ, ಒಲ್ಲದ ಮನಸ್ಸಿನಲ್ಲಿಯೇ, ಶರ್ಮರೂ ಕೂಡಾ ತಮ್ಮ ಸ್ವಂತ ದುಡ್ಡಿನಲ್ಲಿ ಮನೆಯೊಂದನ್ನು ಕಟ್ಟಿಸಿ, ಬೇರೆ ಕುಳಿತರು. ಕೂಡು ಕುಟುಂಬದಲ್ಲಿದ್ದ ಅವರು ಈಗ ಮೂರು ಜನರ ಪುಟ್ಟ ಕುಟುಂಬವಾಗಿ ಬದಲಾದರು. ಆದರೂ ತಮ್ಮ ಪುಟ್ಟದಾದ ಸಂಸಾರದಲ್ಲಿ ಸಂತೋಷದಿಂದ ಕಾಲ ಕಳೆಯುತ್ತಿದ್ದರು.
ಆದರೆ ಅವರ ಸಂತೋಷ ದೇವರಿಗೆ ಹೆಚ್ಚು ದಿನ ಇಷ್ಟವಾಗಲಿಲ್ಲವೇನೋ. ಮುಂದಿನ ವರ್ಷವೇ, ಎರಡನೇ ಹೆರಿಗೆಯ ಸಮಯದಲ್ಲಿ ಪಲ್ಲವಿ ಕಾಮಾಲೆ ರೋಗಕ್ಕೆ ತುತ್ತಾಗಿ ಜೀವ ಕಳೆದುಕೊಂಡಳು. ಶರ್ಮರಿಗೆ ಲೋಕವೇ ಕತ್ತಲಾಗಿತ್ತು. ಎರಡು ವರ್ಷದ ಆ ಪುಟ್ಟ ಮಗು ರಮ್ಯಾಳನ್ನು ಕೈಯಲ್ಲಿ ಹಿಡಿದುಕೊಂಡಾಗ, “ನಾನು ಇದಕ್ಕೆ ಅಪ್ಪ ಅಮ್ಮ - ಎರಡೂ ಆಗಬೇಕಾ?” ಅನ್ನೋ ಪ್ರಶ್ನೆ ಅವರನ್ನು ಕಾಡುತ್ತಿತ್ತು. ಎರಡು ವರ್ಷದ ಮಗಳು ರಮ್ಯಾಳನ್ನು ಎದೆಗೆ ಒತ್ತಿಕೊಂಡು ಶರ್ಮಾರು ಅತ್ತದ್ದು ಯಾರಿಗೂ ಕಾಣಲಿಲ್ಲ—ಅವರ ಕಣ್ಣೀರು ಒಳಗೇ ಹರಿಯಿತು.
***
ಆ ಸಮಯದಲ್ಲೇ ಒಂದು ವಿಚಿತ್ರ ಘಟನೆ ನಡೆಯಿತು. ರಮ್ಯಾ ತನ್ನ ಚಿಕ್ಕಮ್ಮ ಜಾನಕಿಯನ್ನು “ಅಮ್ಮ” ಎಂದು ಕರೆಯಲು ಶುರುಮಾಡಿದಳು. ಅದು ಒಮ್ಮೆ ಅಲ್ಲ, ಪ್ರತಿದಿನ. ಆ ಪದ ಜಾನಕಿಯ ಹೃದಯವನ್ನೇ ಬದಲಾಯಿಸಿತು. ಹಿರಿಯರ ಮಾತಿನಂತೆ, ಸಮಾಜದ ನಿರೀಕ್ಷೆಯಂತೆ, ಜಾನಕಿ ಶರ್ಮರ ಜೀವನಕ್ಕೆ ಕಾಲಿಟ್ಟಳು — ತನ್ನ ಬದುಕಿಗಿಂತ ಆ ಪುಟ್ಟ ಮಗುವಿನ ಬದುಕು ಮುಖ್ಯ ಎಂದುಕೊಂಡು. . ಆ ಮದುವೆ ಒಬ್ಬ ಹೆಣ್ಣಿನ ತ್ಯಾಗ ಮಾತ್ರವಲ್ಲ — ಒಬ್ಬ ಮಗುವಿನ ಬದುಕಿಗೆ ಹೊಸ ಉಸಿರು. ಜಾನಕಿ ಕಾಲಿಟ್ಟ ನಂತರ ಶರ್ಮಾರ ಮನೆಗೆ ಬೆಳಕು ಬಂತು.
ಜಾನಕಿ ಬಂದ ಮೇಲೆ ಶರ್ಮರ ಬದುಕು ಸುಗಮವಾಗಿ ಸಾಗಿತು. ಇಬ್ಬರಿಗೂ ಸರಕಾರಿ ಕೆಲಸ. ಶ್ರಮ, ಶಿಸ್ತು, ಪ್ರಾಮಾಣಿಕತೆ—ಇವುಗಳೇ ಅವರ ಮನೆತನದ ಅಡಿಪಾಯ. ಜಾನಕಿ ರಮ್ಯಾಳನ್ನು “ಮಲತಾಯಿ” ಎಂದಲ್ಲ, ತನ್ನ ಉಸಿರಿನ ಭಾಗವೆಂದು ನೋಡಿದಳು. ಆ ಪ್ರೀತಿ ನಂತರ ಹುಟ್ಟಿದ ಕೃಷ್ಣ, ಸೌಮ್ಯರಿಗೂ ಹಂಚಿತು. ಮೂರು ಮಕ್ಕಳು—ಒಂದೇ ತಾಯಿಯ ಮಕ್ಕಳೆಂಬಂತೆ ಬೆಳೆದರು.
ಊರಿನ ಜನರು ಹೇಳುತ್ತಿದ್ದರು: “ಇವರ ಮಕ್ಕಳನ್ನ ನೋಡಿ ಕಲಿಯಬೇಕು. ರಕ್ತ ಬೇರೆ ಆದ್ರೂ ಮನಸ್ಸು ಒಂದೇ.”
***
ಶರ್ಮಾ ಅವರು ತುಂಬಾ ದೂರದೃಷ್ಟಿತ್ವ ಹೊಂದಿದ ವ್ಯಕ್ತಿಯಾದ ಕಾರಣ ಅವರ ದೃಷ್ಟಿ ಅಷ್ಟಕ್ಕೆ ನಿಂತಿರಲಿಲ್ಲ. “ನಮ್ಮ ಊರಿನ ಮಕ್ಕಳು ದೂರದ ಆಂಗ್ಲ ಮಾಧ್ಯಮ ಶಾಲೆಗೆ ಹೋಗಬೇಕಾ?” ಅನ್ನೋ ಪ್ರಶ್ನೆ ಅವರನ್ನು ಕಾಡಿತು. ನಮ್ಮ ಊರಿನಲ್ಲಿಯೇ ಒಂದು ಆಂಗ್ಲ ಮಾಧ್ಯಮ ಶಾಲೆ ನಿರ್ಮಾಣವಾಗಬೇಕು ಎಂದುಕೊಂಡು, ತಮ್ಮ ಮನೆಯ ಒಂದು ಭಾಗದಲ್ಲೇ, ಎರಡು ಶಿಕ್ಷಕಿಯರ ಜೊತೆ ಸೇರಿ, ಶಾಲೆ ಆರಂಭಿಸಿದರು. ಮೊದಲ ವರ್ಷ ಕೇವಲ ಹತ್ತು ಮಕ್ಕಳು. ಎರಡನೇ ವರ್ಷ ಐವತ್ತು. ನಂತರ ನೂರು. ಹೀಗೆ ಶಾಲೆ ಬೆಳೆಯುತ್ತಿತ್ತು. ಶಾಲೆಯ ಹೆಸರೂ ಬೆಳೆಯಿತು. ಕ್ರಮೇಣ ಮಕ್ಕಳು ಜಾಸ್ತಿ ಆದಂತೆ, ಮನೆಯ ಆ ಪುಟ್ಟ ಜಾಗ ಸಾಲಲಿಲ್ಲ. ಪಿತ್ರಾರ್ಜಿತ ಆಸ್ತಿ ಹಂಚಿಕೆಯ ಸಮಯದಲ್ಲಿ, ದಾರಿ ಇಲ್ಲದ ಜಾಗ ಒಂದನ್ನು ಶರ್ಮರಿಗೆ ಕೊಟ್ಟಿದ್ದರು. ಆಗ ಅವರು ವಿರೋಧಿಸಿರಲಿಲ್ಲ. “ನನಗೆ ಕೆಲಸಕ್ಕೆ ಬರುತ್ತದೆ” ಎಂದು ಪಿತ್ರಾರ್ಜಿತವಾಗಿ ದೊರೆತ ದಾರಿ ಇಲ್ಲದ ಜಾಗವನ್ನು ಸಂಪೂರ್ಣ ಮನಸ್ಸಿನಿಂದ ತೆಗೆದುಕೊಂಡಿದ್ದರು. ಮಗಳು ರಮ್ಯಾಳಿಗೆ ಹದಿನೆಂಟು ತುಂಬಿದ ದಿನ ಆ ಜಾಗದ ಅರ್ಧದಷ್ಟನ್ನು ಶಾಲೆಗೆಂದು ದಾನ ಮಾಡಿದರು. ಆಗ ಶಾಲೆಯ ಕಾರಣದಿಂದ ಆ ಜಾಗಕ್ಕೆ ದಾರಿ ಬಂತು. ಶಾಲೆಗೂ ಊರಿಗೂ ದಾರಿ ತೆರೆದಿತು.
ವರ್ಷಗಳು ಉರುಳಿದವು.
ಶಾಲೆ ದೊಡ್ಡದಾಯಿತು. ಹೊಸ ಬೋರ್ಡ್, ಹೊಸ ಟ್ರಸ್ಟ್, ಹೊಸ ಮ್ಯಾನೇಜ್ಮೆಂಟ್. ಶರ್ಮರ ಹೆಸರು ನಿಧಾನವಾಗಿ ದಾಖಲೆಗಳ ಅಂಚಿಗೆ ಸರಿಯಿತು. ಹೊಸ ಮಕ್ಕಳು, ಹೊಸ ಶಿಕ್ಷಕರು—ಯಾರಿಗೂ “ಈ ಶಾಲೆ ಯಾರು ಶುರು ಮಾಡಿದ್ರು?” ಅನ್ನೋ ಪ್ರಶ್ನೆಯೇ ಇರಲಿಲ್ಲ. ಅದು ಅವರಿಗೆ ಗೊತ್ತಿರಬೇಕಾದದ್ದು ಅನ್ನೋ ವಿಷಯಾನೂ ಅವರಿಗೆ ಬೇಡವಾಗಿತ್ತು. ಶಾಲೆಯಲ್ಲಿ ಕಲಿಯುತ್ತಿರುವವರಿಗೆ, ಕಲಿಸುತ್ತಿರುವವರಿಗೆ, ಮ್ಯಾನೇಜ್ಮೆಂಟ್ ಗೆ ಎಲ್ಲರಿಗೂ ಆ ವಿಷಯ ಅಗತ್ಯವಾದದ್ದು ಎಂದು ಎನಿಸಲಿಲ್ಲವೋ ಏನೋ.
ಇಂದು ಶರ್ಮರು ವೃದ್ಧರಾಗಿದ್ದರು. ಜಾನಕಿ ಜೊತೆ ವಾಕಿಂಗ್ ಎಂದು ಹೊರಟು, ಶಾಲೆಯ ದಾರಿಯಲ್ಲಿ ನಿಂತು ಶಾಲೆ ಹೇಗೆ ನಡೆಯುತ್ತಿದೆ ಅಂಬುದನ್ನು ನೋಡುತ್ತಿದ್ದರು. ಸಂಜೆ ಸಮಯವಾದ ಕಾರಣ, ಶಾಲೆಯ ಮಕ್ಕಳೆಲ್ಲ ಆಟ ಆಡುತ್ತಿದ್ದರು. ಆಡುತ್ತಿದ್ದ ಮಕ್ಕಳು ಅವರನ್ನು “ಯಾರಪ್ಪಾ?” ಅನ್ನುವ ದೃಷ್ಟಿಯಿಂದ ನೋಡುತ್ತಾರೆ. ಯಾರಿಗೂ ಗೊತ್ತಿಲ್ಲ—ಅವರು ಕೊಟ್ಟಂಥ ಜಾಗವೇ ಒಮ್ಮೆ ಆ ಮಕ್ಕಳ ಶಾಲೆಯ ಮೊದಲ ತರಗತಿ ಆಗಿತ್ತು ಅನ್ನೋದು.
ಹಾಗೆ ದಿನ ಕಳೆದು ಒಂದು ದಿನ ಶಾಲೆಯ ವಾರ್ಷಿಕೋತ್ಸವ ದಿನ. ಮುಖ್ಯ ಅತಿಥಿಗಳು, ಭಾಷಣಗಳು. ಶರ್ಮರು ಜಾನಕಿ ಜೊತೆ ಬಂದು ಹಿಂಬದಿ ಸಾಲಿನಲ್ಲಿ ಮೌನವಾಗಿ ಕುಳಿತಿದ್ದರು. ಯಾರೂ ಕರೆಯಲಿಲ್ಲ. ಯಾರೂ ಗುರುತಿಸಲಿಲ್ಲ.
ಆದರೆ
ಶರ್ಮರು ಬೇಸರಪಡಲಿಲ್ಲ. "ಒಳ್ಳೆಯದು ಮಾಡಿದವರು ಹೆಸರು ಕಳೆದುಕೊಂಡರೆ, ಅದೇ ಅವರ ಸೋಲಾ?
ಅಥವಾ, ಹೆಸರು ಇಲ್ಲದೇ ಉಳಿದ ಒಳ್ಳೆಯದೇ ಅವರ ನಿಜವಾದ ಗೆಲುವಾ?"ಆದರೆ ಜಾನಕಿಗೆ ಮಾತ್ರ
ಬೇಸರವಾಗಿತ್ತು, ಆದರೂ ಅಷ್ಟೊಂದು ಮಕ್ಕಳನ್ನು ನೋಡುತ್ತಾ ಸಂತೋಷ ಪಡುತ್ತಿದ್ದರು.
ಶರ್ಮರು
ಜಾನಕಿಯ ಕೈ ಹಿಡಿದು ನಿಧಾನವಾಗಿ ಹೇಳಿದರು: “ನಾವು ಬೀಜ ಬಿತ್ತಿದ್ದೇವೆ. ಮರ
ಬೆಳೆದಿದೆ. ಹಣ್ಣು ಯಾರಿಗೆ ಸಿಗುತ್ತೋ ಅದು ಆ ಭಗವಂತನ ಇಚ್ಛೆ.” ಆ ಮಾತು ಜಾನಕಿಯ
ಕಣ್ಣಲ್ಲಿ ನೀರಾಗಿ ಹೊರಬಂತು.
***
ಆ ವಾರ್ಷಿಕೋತ್ಸವದ ದಿನ ಮುಗಿದ ಮೇಲೆ, ಶಾಲೆಯ ಆವರಣ ನಿಧಾನವಾಗಿ ಖಾಲಿಯಾಗುತ್ತಿತ್ತು. ಬಣ್ಣದ ಬ್ಯಾನರ್‌ಗಳು ಇನ್ನೂ ತೂಗಾಡುತ್ತಿದ್ದವು. ವೇದಿಕೆಯ ಮೇಲೆ ಹಾಕಿದ್ದ ಹೂವುಗಳು ಒಣಗತೊಡಗಿದ್ದವು. ಮೈಕ್‌ಗಳ ಶಬ್ದ ಮೌನವಾಯಿತು. ಶ್ರೀ ರಾಮ ಶರ್ಮರು ಮತ್ತು ಜಾನಕಿ ನಿಧಾನವಾಗಿ ಎದ್ದು ಹೊರಟರು.
ಅಷ್ಟರಲ್ಲಿ, ಶಾಲೆಯ ಹೊಸ ಪ್ರಾಂಶುಪಾಲರು ಒಬ್ಬ ಶಿಕ್ಷಕರಿಗೆ ಕೇಳಿದರು: “ಆ ಹಳೆಯ ದಂಪತಿ ಯಾರು? ದಿನವಿಡೀ ಹಿಂಬದಿ ಕುಳಿತು ನೋಡ್ತಿದ್ರಲ್ಲ?”
ಶಿಕ್ಷಕಿ ಕ್ಷಣ ಯೋಚಿಸಿ ಹೇಳಿದಳು: “ಗೊತ್ತಿಲ್ಲ ಮೇಡಂ… ಬಹುಶಃ ಹತ್ತಿರದ ಮನೆಗಳ ಯಾರೋ ಹಿರಿಯರು ಇರಬೇಕು.”
ಆ ಮಾತು ಕೇಳಿದ ಕ್ಷಣಕ್ಕೆ, ಜಾನಕಿಯ ಕೈ ಕಂಪಿಸಿತು. ಮನಸ್ಸು ಒಡೆಯಿತು. ಶರ್ಮರು ಒಂದು ಕ್ಷಣ ನಿಂತು ಹಿಂತಿರುಗಿ ನೋಡಿದರು. ವೇದಿಕೆ, ಶಾಲೆಯ ಕಟ್ಟಡ, ಮಕ್ಕಳ ನಗು— ಎಲ್ಲವೂ ಅವರದೇ ದೊರದೃಷ್ಟಿತ್ವದಿಂದ ಹುಟ್ಟಿದ ಕನಸಾಗಿತ್ತು. ಆದರೆ ಇಂದು ಆ ಕನಸುಗಾರನೇ ಅನಾಥನಾಗಿದ್ದ.
ಅವರು ಏನೂ ಹೇಳಲಿಲ್ಲ. ಹಾಗೆ ತಮ್ಮ ಮನೆಗೆ ಹಿಂದಿರುಗಿದರು.
***
ಮರುದಿನ ಬೆಳಿಗ್ಗೆ, ಶಾಲೆಯ ಆವರಣದಲ್ಲಿ ಗದ್ದಲ. ಪೇಪರ್‌ವಾಲಾ ಬಂದು, “ಇವತ್ತು ನಮ್ಮ ಶಾಲೆಯ ಬಗ್ಗೆ ನ್ಯೂಸ್ ಇದೆ” ಅಂದ. ಎಲ್ಲರೂ ಬೇಗನೆ ನ್ಯೂಸ್ ಪೇಪರ್ ಬಿಡಿಸಿ ನೋಡಿದರು. ಶಾಲೆಯ ಬಗ್ಗೆ ಮುಖ್ಯ ಸುದ್ದಿಯ ಶೀರ್ಷಿಕೆ ಹೀಗೆ ಇತ್ತು:
“ಶಾಲೆ ಸ್ಥಾಪಕನ ಹೆಸರೇ ಮರೆತುಹೋದ ಊರು – ಸಾಮಾಜಿಕ ನಿರ್ಲಕ್ಷ್ಯದ ಮತ್ತೊಂದು ಮುಖ”
ಒಬ್ಬ ಯುವ ಪತ್ರಕರ್ತ, ಊರಿನ ಹಳೆಯ ದಾಖಲೆಗಳನ್ನು ಹುಡುಕಿ, ಶರ್ಮರ ಕಥೆಯನ್ನು ಬರೆದಿದ್ದ. ಶಾಲೆ ಶುರು ಮಾಡಿದ ದಿನದಿಂದ, ಆಸ್ತಿ ದಾನ ಮಾಡಿದ ದಾಖಲೆಗಳವರೆಗೆ—ಎಲ್ಲವೂ ಅಕ್ಷರಗಳಲ್ಲಿ ನಿಂತಿದ್ದವು.
ಶಾಲೆಯ ಮಕ್ಕಳು ಮೊದಲ ಬಾರಿಗೆ ಕೇಳಿದರು: “ನಮ್ಮ ಶಾಲೆಯನ್ನು ಯಾರು ಶುರು ಮಾಡಿದ್ರು?”
ಶಿಕ್ಷಕರಿಗೆ ಉತ್ತರ ಇರಲಿಲ್ಲ.
ಆ ದಿನ ತಮ್ಮ ತಪ್ಪುಗಳ ಅರಿವಾಗಿ, ಶಾಲೆಯಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಿದರು. ಶರ್ಮರನ್ನು ವೇದಿಕೆಗೆ ಕರೆದು ಗೌರವಿಸಲಾಯಿತು. ಶಾಲೆಯ ಬ್ಯಾನರ್ ಮೇಲೆ ಹೊಸ ಸಾಲು ಸೇರಿತು:
“ಸ್ಥಾಪಕರು – ಶ್ರೀ ರಾಮ ಶರ್ಮ”
ಹಸ್ತಾಲಾಪದ ಸಡ್ಡು ಕೇಳಿದಾಗ ಶ್ರೀ ರಾಮ ಶರ್ಮರು ಸುಮ್ಮನೆ ನಕ್ಕರು. ಆದರೆ ಆ ನಗುವಿನಲ್ಲಿ ಗೆಲುವಿನ ಹೆಮ್ಮೆ ಇರಲಿಲ್ಲ. ಕೇವಲ ಒಂದು ಮೃದುವಾದ ನೋವು ಮಾತ್ರ.
ಅವರು ಮೈಕ್ ಹಿಡಿದು ಒಂದೇ ವಾಕ್ಯ ಹೇಳಿದರು: “ಗೌರವ ಬೇಕು ಅಂತ ನಾನು ಶಾಲೆ ಶುರು ಮಾಡಿಲ್ಲ. ಊರಿನ ಸಮಸ್ತ ಜನರ ಉಪಕಾರಕ್ಕೆಂದು ಈ ಶಾಲೆ ನಿರ್ಮಾಣವಾಯಿತು. ಇದು ಊರಿನ ಹಲವಾರು ಮಂದಿಯ ಕಷ್ಟದ ಪ್ರತಿಫಲ. ಬೆಳೆದು ದೊಡ್ಡದಾದ ಮರ ಅದರ ಬೇರನ್ನು ನೆನಪಿಟ್ಟುಕೊಳ್ಳೋದನ್ನು ಕಲಿಯಬೇಕು ಅಂತ ಮಾತ್ರ ನಾನು ಹೇಳಬಲ್ಲೆ.”
ಆ ಮಾತು ಮಕ್ಕಳ ಹೃದಯಕ್ಕೆ ಬಿತ್ತು. ಆದರೆ ಸಮಾಜಕ್ಕೆ?
ಆ ವಾರದ ನಂತರ, ಮತ್ತೆ ಹೊಸ ಸುದ್ದಿಗಳು, ಹೊಸ ವಿಷಯಗಳು. ಶರ್ಮರ ಹೆಸರು ಮತ್ತೆ ನಿಧಾನವಾಗಿ ಹಿನ್ನೋಟಕ್ಕೆ ಸರಿಯತೊಡಗಿತು. ಶರ್ಮರು ಅದನ್ನೂ ನೋಡಿದರು. ಮೌನವಾಗಿ ಒಪ್ಪಿಕೊಂಡರು. ಊರು ಬೆಳೆಯುತ್ತಲೇ ಇತ್ತು. ಶಾಲೆ ಮುಂದುವರಿಯುತ್ತಲೇ ಇತ್ತು. ಆದರೆ, ಒಂದು ಊರು ತನ್ನ ಬೇರುಗಳನ್ನು ನೆನಪಿಟ್ಟುಕೊಳ್ಳುವ ತನಕ, ಆ ಬೆಳವಣಿಗೆ ಕೇವಲ ಕಟ್ಟಡಗಳದ್ದೇ ಹೊರತು ಮೌಲ್ಯಗಳದ್ದಾಗುವುದಿಲ್ಲ ಎಂಬ ಸತ್ಯ ಮತ್ತೆ ಮಣ್ಣಿನಲ್ಲಿ ಮರೆತುಹೋಯಿತು.
ಇದು ಶರ್ಮರ ಕಥೆಯ ಅಂತ್ಯ ಅಲ್ಲ. ಇದು, ಒಳ್ಳೆಯತನವನ್ನು ಉಪಯೋಗಿಸಿ ನೆನಪುಗಳನ್ನು ಮರೆತ ಸಮಾಜದ ಕಥೆ. ಇತಿಹಾಸವನ್ನು ಬರೆಯದ ಸಮಾಜದಲ್ಲಿ, ಒಳ್ಳೆಯವರು ಸದಾ ಮೌನದೊಳಗೆ ಸಮಾಧಿಯಾಗುತ್ತಾರೆ ಸಮಾಜಕ್ಕೆ ನೆನಪಿಡಲು ಸುಲಭವಾಗಿರೋದು ಹೆಸರುಗಳು ಅಲ್ಲ. ಫಲವನ್ನು ಹಂಚಿಕೊಳ್ಳುವ ಸಮಾಜಕ್ಕೆ, ಬೇರುಗಳನ್ನು ನೆನಪಿಡುವ ಶಿಸ್ತು ಇಲ್ಲ. ಅದಕ್ಕೇ ಮೌಲ್ಯಗಳಿಲ್ಲದ ಕಟ್ಟಡಗಳು ಮಾತ್ರ ಬೆಳೆಯುತ್ತವೆ.
ಇಲ್ಲಿ, ಒಂದು ಪ್ರಶ್ನೆ ಮಾತ್ರ ಉಳಿಯುತ್ತದೆ— " ಒಂದು ಊರು ತನ್ನ ಬೇರುಗಳನ್ನು ಮರೆತರೆ, ಆ ಊರು ಬೆಳೆಯುತ್ತದಾ? ಅಥವಾ ನೆನಪುಗಳಿಲ್ಲದ ಮರವಾಗಿ ಒಣಗುತ್ತದಾ?"
***
✍🏻 Deepalaxmi Bhat
Mangaluru


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ