✍🏻ದೀಪಲಕ್ಷ್ಮಿ ಭಟ್, ಮಂಗಳೂರು
ಅಂದು ಜಡ ಹಿಡಿಸುವಂತೆ ಬೀಳುತ್ತಿದ್ದ ಮಳೆ. ಮಳೆ ಹನಿಗಳು ಕಿಟಕಿಯ ಗಾಜಿನ ಮೇಲೆ ಮುತ್ತಿನ ಹಾರ ಪೋಣಿಸಿದಂತೆ ಒಂದೊಂದಾಗಿ ಜಾರುತ್ತಿದ್ದವು. ಆ ಹೊತ್ತಿಗೆ, ಮೋಡ ಕವಿದ ಆ ಆಕಾಶವೇ ಯಾರೋ ಒಬ್ಬರ ಮನಸ್ಸಿನಲ್ಲಿದ್ದ ನೋವನ್ನು ಹೊತ್ತು ಅಳುತ್ತಿರುವಂತೆ ಕಾಣುತ್ತಿತ್ತು… ಆ ದಿನ, ಆದಿತ್ಯ ತನ್ನ ಮಗಳಾದ ಆರಾಧ್ಯಾಳ ಕೂದಲನ್ನು ಸವರಿಸುತ್ತಾ ಕಿಟಕಿಯ ಬಳಿ ನಿಂತಿದ್ದ. ಆರಾಧ್ಯಾಳ ಕಣ್ಣುಗಳಲ್ಲಿ ತನ್ನ ಹೆಂಡತಿ ಅಪೂರ್ವಳ ನಗು ಅವನಿಗೆ ಕಾಣಿಸುತ್ತಿತ್ತು…ಆ ನಗುವೇ ಅವನ ಹೃದಯವನ್ನು ಪ್ರತಿದಿನ ಚೂರು ಚೂರು ಮಾಡುತ್ತಿತ್ತು…
ಅಪೂರ್ವಳ ಮರಣದ ನಂತರ ಆ ಮನೆ, ಆದಿತ್ಯನ ಮನ ಎಲ್ಲವೂ ಬದಲಾಗಿತ್ತು. ಹಿಂದೆ ಒಮ್ಮೆ ನಗುವಿನಿಂದ ತುಂಬಿದ್ದ ಮನೆ, ಈಗ ಮೌನದ ದೇಗುಲದಂತಾಗಿತ್ತು. ಆದಿತ್ಯನ ಅಮ್ಮ ಅನುರಾಧ ದೇವರ ಕೋಣೆಯಲ್ಲಿ ಗಂಟೆಗಳ ಕಾಲ ದೀಪ ಹಚ್ಚಿ ಕಣ್ಣೇರಿಡುತ್ತಾ ಕುಳಿತುಕೊಳ್ಳುತ್ತಿದ್ದಳು. ಆದಿತ್ಯನ ಅಪ್ಪ ಚಂದ್ರಮೋಹನ ಪುಸ್ತಕ ಹಿಡಿದುಕೊಂಡಿದ್ದರೂ, ಓದುತ್ತಿರಲಿಲ್ಲ…ಪ್ರತಿ ಪುಟದಲ್ಲೂ ಅವನಿಗೆ ಸೊಸೆಯ ಮುಖವೇ ಕಾಣಿಸುತ್ತಿತ್ತು. ಆದಿತ್ಯ ಮಾತ್ರ ಜೀವಂತ ಶವದಂತೆ ಬದುಕುತ್ತಿದ್ದ.
ಪ್ರತಿ ರಾತ್ರಿ, ಅಪೂರ್ವಳ ಫೋಟೋ ಎದುರು ಕುಳಿತು ಮಾತನಾಡುತ್ತಿದ್ದ…“ಅಪೂರ್ವ… ನೀನು ಹೀಗೆ ಹೋಗ್ಬಾರ್ದಿತ್ತು…ನಮ್ಮ ಆರಾಧ್ಯಾ ಇನ್ನೂ ನಿನ್ನ ಮಡಿಲಿನ ಆಸರೆ ಹುಡುಕುತ್ತಾಳೆ…ನಾನು ಅವಳಿಗೆ ಅಪ್ಪ ಆಗಲೋ, ಅಮ್ಮ ಆಗಲೋ? ನನ್ನನ್ಯಾಕೆ ಹೀಗೆ ಒಬ್ಬಂಟಿಯಾಗಿ ಬಿಟ್ಟು ಹೋದೆ?”. ಅವನ ಮಾತುಗಳಿಗೆ ಉತ್ತರವಾಗಿ ಕಿಟಕಿಯ ಪರದೆ ಮಾತ್ರ ನಿಧಾನವಾಗಿ ಅಲುಗಾಡುತ್ತಿತ್ತು - ಬಹುಶಃ ಅಪೂರ್ವಳೇ ಅಲ್ಲಿ ನಿಂತು "ನಾನಿಲ್ಲೇ ಇದ್ದೇನೆ, ನಿನ್ನ ಸನಿಹ. ನಿನ್ನ ಆಸರೆಯಾಗಿ" ಎಂಬಂತೆ.
***
ಆ ಅಪಘಾತದ ದಿನ ಇನ್ನೂ ಆದಿತ್ಯನ ಮನಸ್ಸಿನಲ್ಲಿ ಜೀವಂತವಾಗಿತ್ತು…ಅದು ಅವರ ವಿವಾಹದ ಎರಡನೇ ವರ್ಷ ವಾರ್ಷಿಕೋತ್ಸವದ ಪ್ರವಾಸ. ಮಂಜಿನಿಂದ ಆವರಿಸಿದ್ದ ಬೆಟ್ಟಗಳು…ಕೈ ಕೈ ಹಿಡಿದು ನಡೆದ ದಾರಿಗಳು…ಮಳೆಯ ಹನಿಗಳ ಮಧ್ಯೆ ಅಪೂರ್ವಳ ನಗು…ಆಗತಾನೆ ೬ ತಿಂಗಳು ಹಿಡಿದ ಮಗು ಆರಾಧ್ಯಳ ಜೊತೆಗಿನ ಮೊದಲ ಪ್ರವಾಸ. ಪ್ರವಾಸದ ಎಲ್ಲ ಖುಷಿಯ ಕ್ಷಣಗಳು ಕಳೆದು ಮನೆಗೆ ಹಿಂದಿರುಗುವ ಪ್ರಯಾಣ. “ಆದಿ… ಜೀವನ ಹೀಗೆನೇ ನಿಂತುಬಿಟ್ಟರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ?” ಎಂದು ಅವಳು ಕಾರಿನ ಕಿಟಕಿಯಿಂದ ಹೊರಗೆ ನೋಡುತ್ತಾ ಕೇಳಿದ್ದಳು. ಆ ಮಾತಿಗೆ ಆದಿತ್ಯ ನಗುತ್ತಾ—“ನಿನ್ನ ಜೊತೆ ಇದ್ದರೆ ಯಾವ ಜನ್ಮವೂ ಚಿಕ್ಕದಾಗಿಬಿಡುತ್ತೆ ಅಪೂರ್ವ…” ಎಂದಿದ್ದ.
ಆದರೆ ವಿಧಿ ಅವರ ಮಾತುಗಳನ್ನು ಕೇಳಿ ಕ್ರೂರವಾಗಿ ನಕ್ಕಿತೇನೋ…ಹಿಂತಿರುಗುವಾಗ ರಾತ್ರಿ ಕತ್ತಲೆ ಗಾಢವಾಗಿತ್ತು. ಮಳೆ ಹೆಚ್ಚಾಗಿತ್ತು. ರಸ್ತೆಯ ಮೇಲೆ ಮಂಜು ಇಳಿದಿತ್ತು. ಆರಾಧ್ಯಾ ಹಿಂದಿನ ಸೀಟಿನಲ್ಲಿ ಮಲಗಿದ್ದಳು. ಅಪೂರ್ವ ಆದಿತ್ಯನ ಭುಜದ ಮೇಲೆ ತಲೆ ಇಟ್ಟುಕೊಂಡಿದ್ದಳು. ಅಷ್ಟರಲ್ಲಿ…ಎದುರಿನಿಂದ ನಿಯಂತ್ರಣ ತಪ್ಪಿದ ಒಂದು ಲಾರಿ ಅವರ ಕಾರಿನ ಕಡೆ ಅಬ್ಬರಿಸಿ ಬಂದಿತು. “ಆದಿ…!” ಎಂದು ಅಪೂರ್ವ ಕಿರುಚಿದ ಧ್ವನಿ…ಅದರ ನಂತರ ಒಂದು ಭೀಕರ ಶಬ್ದ…ಕಾರು ಗಾಳಿಯಲ್ಲಿ ತಿರುಗಿದಂತೆ ಅನುಭವ…ಗಾಜಿನ ಚೂರುಗಳು…ರಕ್ತ…ಮಳೆಯ ನೀರಿನಲ್ಲಿ ಬೆರೆತ ಜೀವಗಳ ಹೋರಾಟ…
ಆದಿತ್ಯನಿಗೆ ಎಚ್ಚರವಾದಾಗ ಆಸ್ಪತ್ರೆಯ ಬಿಳಿ ಗೋಡೆಗಳು ಕಾಣಿಸಿದ್ದವು. ತಲೆಗೆ ಬ್ಯಾಂಡೇಜ್. ಕೈಗಳಿಗೆ ಗಾಯ. ಆದರೆ ಅವನ ಮೊದಲ ಪ್ರಶ್ನೆ ಒಂದೇ— “ಅಪೂರ್ವ…? ನನ್ನ ಹೆಂಡತಿ ಎಲ್ಲಿದ್ದಾಳೆ …?” ಡಾಕ್ಟರ್ ಮುಖ ತಗ್ಗಿಸಿದ್ದರು.“ ಅವರಿಗೆ ತುಂಬಾ ಗಂಭೀರ ಗಾಯಗಳಾಗಿವೆ…ಕೋಮಾ ಪರಿಸ್ಥಿತಿಯಲ್ಲಿದ್ದಾರೆ. ಅಪಘಾತ ನಡೆದು ಮೂರು ದಿನಗಳೇ ಆಗಿವೆ. ನೀವು ಈಗ ತಾನೇ ಚೇತರಿಸಿಕೊಂಡಿದ್ದೀರಾ. ಸ್ವಲ್ಪ ರೆಸ್ಟ್ ಮಾಡಿ.” ಆದರೆ, ಡಾಕ್ಟರ್ ನ ಮಾತುಗಳು ಅವನಿಗೆ ಕೇಳಿಸಲೇ ಇಲ್ಲ. ಕೋಮಾ ಎಂಬ ಶಬ್ದ ಕೇಳುತ್ತಲೇ, ಆದಿತ್ಯ ಹಾಸಿಗೆಯಿಂದ ಎದ್ದು ಓಡಿದ್ದ. ಐಸಿಯುವಿನ ಗಾಜಿನ ಆಚೆ ಅಪೂರ್ವ ಮಲಗಿದ್ದಳು. ದೇಹದ ತುಂಬ ಯಂತ್ರಗಳು… ಉಸಿರಾಟಕ್ಕೆ ವೆಂಟಿಲೇಟರ್… ಮುಖದ ಮೇಲೆ ಗಾಯಗಳ ಗುರುತು… ಆ ದೃಶ್ಯ ನೋಡಿ ಆದಿತ್ಯ ಕುಸಿದುಬಿದ್ದ.
“ಇದು ನನ್ನ ಅಪೂರ್ವ ಅಲ್ಲ…ನನ್ನ ಜೊತೆ ನಗ್ತಿದ್ದ ಅಪೂರ್ವ ಹೀಗೆ ಮಲಗಿರೋಕೆ ಸಾಧ್ಯವಿಲ್ಲ…” ಎಂದು ಅತ್ತ. ಮಗು ಅಪೂರ್ವ ಮಾತ್ರ ವಿಚಿತ್ರವಾಗಿ ಪಾರಾಗಿದ್ದಳು. ಆ ದಿನದಿಂದ ಆದಿತ್ಯನ ಜೀವನವೇ ಆಸ್ಪತ್ರೆಯ ಗೋಡೆಗಳೊಳಗೆ ಸಿಕ್ಕಿಹಾಕಿಕೊಂಡಿತು. ಬೆಳಿಗ್ಗೆ ಎದ್ದು ಮೊದಲ ಕೆಲಸ — ಅಪೂರ್ವಳ ಕೈ ಹಿಡಿದು ಮಾತನಾಡುವುದು. “ಅಪೂರ್ವ… ನೋಡು ನಾನು ಬಂದಿದ್ದೀನಿ…ನೀನು ಕಣ್ಣು ತೆರೆಯಬೇಕು…ನಿನ್ನ ಆದಿ ಕರೀತಿದ್ದಾನೆ…” . ಆದರೆ ಅವಳು ಮಾತ್ರ ಮೌನ.
ಆದಿತ್ಯ ದೇಶದ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಕರೆದೊಯ್ದ. ಬೆಂಗಳೂರು… ಚೆನ್ನೈ… ಮುಂಬೈ…ವಿದೇಶದ ಚಿಕಿತ್ಸೆಯ ವಿಚಾರವನ್ನೂ ನೋಡಿದ. ತನ್ನ ಸಂಗ್ರಹಿಸಿದ ಹಣವನ್ನೆಲ್ಲ ಖರ್ಚು ಮಾಡಿದ. ಅನುರಾಧ ತನ್ನ ಆಭರಣಗಳನ್ನೇ ಮಾರಿದಳು. ಚಂದ್ರಮೋಹನ ನಿವೃತ್ತಿ ಹಣವನ್ನೂ ಬಳಸಿದರು. ಆದರೆ ಅಪೂರ್ವಳ ಕಣ್ಣು ಮಾತ್ರ ತೆರೆಯಲಿಲ್ಲ…
ಒಂದು ರಾತ್ರಿ ಆಸ್ಪತ್ರೆಯಲ್ಲಿ ಎಲ್ಲರೂ ಮಲಗಿದ್ದಾಗ, ಆದಿತ್ಯ ಅವಳ ಕೈ ಹಿಡಿದು ಅತ್ತಿದ್ದ. “ನೀನು ಹೀಗೆ ಮೌನದಲ್ಲಿರಬೇಡ ಅಪೂರ್ವ…ಒಮ್ಮೆ ನನಗೆ ಬೈದುಬಿಡು… ಒಮ್ಮೆ ನಗು… ಆದ್ರೆ ಹೀಗೆ ನನ್ನ ಒಂಟಿಯಾಗಿ ಬಿಡಬೇಡ …” ಅಷ್ಟರಲ್ಲಿ…ಅಪೂರ್ವಳ ಬೆರಳುಗಳು ನಿಧಾನವಾಗಿ ಕದಲಿದವು. ಆದಿತ್ಯನ ಮಾತುಗಳಿಗೆ ನಿಧಾನವಾಗಿ ಸ್ಪಂದಿಸಲು ಪ್ರಯತ್ನಿಸಿದಂತೆ ಭಾಸವಾಯಿತು. ಆದಿತ್ಯನ ಕಣ್ಣುಗಳಲ್ಲಿ ಆಶೆಯದ ಬೆಳಕು ಹೊಮ್ಮಿತು.“ಡಾಕ್ಟರ್! ಡಾಕ್ಟರ್!” ಎಂದು ಓಡಿದ್ದ. ಆದರೆ ಡಾಕ್ಟರ್ ಹೇಳಿದ್ದು— “ಇದು ಸಾಮಾನ್ಯವಾದ ನರ ಪ್ರತಿಕ್ರಿಯೆ…” ಆ ಕ್ಷಣ ಆದಿತ್ಯನ ಆಶೆಯೇ ಚೂರುಚೂರಾಯಿತು.ಆ ವಿಧಿಗೆ ಅವರ ಮೇಲೆ ಏನು ದ್ವೇಷವೋ? ತಿಂಗಳುಗಳು ಕಳೆಯುತ್ತಾ ಹೋದವು. ಆರಾಧ್ಯಾ ದಿನವೂ ಆಸ್ಪತ್ರೆ ಬಂದು— “ಅಮ್ಮಾ… ಎದ್ದು ಬಾ…” ಎಂದು ಗಲ್ಲಕ್ಕೆ ಮುತ್ತಿಡುತ್ತಿದ್ದಳು.
ಒಂದು ದಿನ ಪುಟ್ಟ ಕೈಯಿಂದ ಅಪೂರ್ವಳ ಕೂದಲು ಸವರಿಸುತ್ತಾ— “ಅಮ್ಮಾ… ನಾನು ಒಳ್ಳೆ ಹುಡುಗಿಯಾಗ್ತೀನಿ… ನೀನು ಮನೆಗೆ ಬಾ…” ಎಂದಳು. ಆಗ ಅಲ್ಲಿದ್ದ ನರ್ಸ್‌ಗಳಿಗೂ ಕಣ್ಣೀರು ಬಂದಿತ್ತು.
ಕೊನೆಗೆ…ಒಂದು ಮಳೆಯ ರಾತ್ರಿ…ಆಸ್ಪತ್ರೆಯ ಮಾನಿಟರ್ ಶಬ್ದ ಏಕಾಏಕಿ ಬದಲಾಗಿತ್ತು. ಡಾಕ್ಟರ್‌ಗಳು ಓಡಿದರು. ಆದಿತ್ಯ ಬೆಚ್ಚಿಬಿದ್ದು ಅವಳ ಕೈ ಹಿಡಿದ. “ಅಪೂರ್ವ! ಕಣ್ಣು ತೆರೆ… ನನ್ನ ನೋಡ್ಬಿಡು ಒಮ್ಮೆ…ನಾನು ಇಲ್ಲೇ ಇದ್ದೀನಿ…” ಆ ಕ್ಷಣ…ತುಂಬಾ ತಿಂಗಳುಗಳ ನಂತರ… ಅಪೂರ್ವಳ ಕಣ್ಣಂಚಿನಲ್ಲಿ ಒಂದು ಸಣ್ಣ ಕಣ್ಣೀರು ಜಾರಿತು. ಅವಳ ತುಟಿಗಳು ಅಲುಗಾಡಿದವು. “ಆ…ದಿ…” - ಅದೇ ಅವಳ ಕೊನೆಯ ಶಬ್ದ. ಮಾನಿಟರ್‌ನಲ್ಲಿ ನೇರ ರೇಖೆ ಮೂಡಿತು. ಆದಿತ್ಯನ ಪ್ರಪಂಚವೇ ಅಲ್ಲೇ ನಿಂತುಹೋಯಿತು… ಮಳೆ ಮಾತ್ರ ಆಸ್ಪತ್ರೆಯ ಕಿಟಕಿಯ ಮೇಲೆ ಇನ್ನೂ ಅಳುತ್ತಲೇ ಇತ್ತು…
***
ಒಂದು ದಿನ, ಅನುರಾಧ ಮನೆ ಸ್ವಚ್ಛಗೊಳಿಸುತ್ತಿದ್ದಾಗ, ಹಳೆಯ ಮರದ ಪೆಟ್ಟಿಗೆಯೊಂದು ಸಿಕ್ಕಿತು. ಅದು ಚಂದ್ರಮೋಹನನ ತಾತನ ಕಾಲದ ಪೆಟ್ಟಿಗೆ. ಅದರೊಳಗೆ ಹಳೆಯ ಜಾತಕಗಳು, ಕೆಲವು ಮಂತ್ರಪತ್ರಗಳು, ಮತ್ತು ಒಂದು ವಿಚಿತ್ರ ದಿನಚರಿ ಇತ್ತು. ಆ ದಿನಚರಿಯಲ್ಲಿ ಒಂದು ಸಾಲು ಕೆಂಪು ಮಸಿಯಲ್ಲಿ ಬರೆಯಲಾಗಿತ್ತು— “ಈ ವಂಶದಲ್ಲಿ ಜನಿಸುವ ಒಬ್ಬ ದಂಪತಿಗಳು, ಹಿಂದಿನ ಜನ್ಮದ ಅಪೂರ್ಣ ಪ್ರೇಮದ ಶಾಪವನ್ನು ಅನುಭವಿಸುವರು…” ಆ ಮಾತು ಓದಿದ ಕ್ಷಣ ಅನುರಾಧಳ ಕೈ ನಡುಗಿತು. ಕೂಡಲೇ, ಚಂದ್ರಮೋಹನನನ್ನು ಕರೆದು, "ರೀ, ನಮ್ಮಮಗನ ಸಂಸಾರ ಹೀಗೆ ಆಗಲು, ಇದೇ ಕಾರಣ ಇರಬಹುದೇ?" ಎಂದು ದುಃಖದಿಂದ ಪ್ರಶ್ನಿಸಿದಳು. ಚಂದ್ರಮೋಹನ ಅದನ್ನು ಓದಿದವನೇ, ಕ್ಷಣಕಾಲ ಭೀತನಾದನು. ಅವನಿಗೆ ಇದರ ವಿಚಾರವಾಗಿ ಎಳ್ಳಷ್ಟೂ ಗೊತ್ತಿರಲಿಲ್ಲ. ಅವನ ಪೂರ್ವಜರು ಇದರ ಬಗ್ಗೆ ಏನೂ ಹೇಳಿರಲಿಲ್ಲ. ಆ ಕೂಡಲೇ, ಅವರು ಆದಿತ್ಯನನ್ನೂ ಕರೆದುಕೊಂಡು ಊರಿನ ಹೊರಗಿದ್ದ ವಯಸ್ಸಾದ ಜ್ಯೋತಿಷಿ “ವೇದಬ್ರಹ್ಮ ಶಿವಾನಂದ ಶಾಸ್ತ್ರಿ” ಅವರನ್ನು ಭೇಟಿ ಮಾಡಿದರು.
ಶಾಸ್ತ್ರಿಗಳು ತುಂಬಾ ಹಿರಿಯರು ಹಾಗೂ ಜ್ಯೋತಿಷ್ಯದಲ್ಲಿ ತುಂಬಾ ಪರಿಣಿತರು. ಊರಿಗೆ ಊರೇ ಅವರನ್ನು ಗೌರವಿಸುತ್ತಿತ್ತು. ಅನುರಾಧ ನೀಡಿದ ಆದಿತ್ಯ ಹಾಗೂ ಅಪೂರ್ವಳ ಜಾತಕಗಳನ್ನು ನೋಡಿ ಶಾಸ್ತ್ರಿಗಳು ಕ್ಷಣಕಾಲ ಕಣ್ಣು ಮುಚ್ಚಿದರು… “ಅಪೂರ್ವ ಮತ್ತು ಆದಿತ್ಯ… ಸಾಮಾನ್ಯ ದಂಪತಿಗಳಲ್ಲ…“ಹಿಂದಿನ ಜನ್ಮದಲ್ಲಿ ಅವರು ಪ್ರೇಮಿಗಳು…
ಆದರೆ ಅವರ ಪ್ರೇಮದ ಕಾರಣದಿಂದ ಅನೇಕ ಜೀವಗಳು ನಾಶವಾದವು…ಒಬ್ಬ ತಾಯಿಯ ಶಾಪ ಅವರಿಗೆ ಬಿದ್ದಿತ್ತು…”
ಆದಿತ್ಯ ಬೆಚ್ಚಿಬಿದ್ದ. “ಯಾವ ಶಾಪ…?”
ಶಾಸ್ತ್ರಿಗಳು ನಿಧಾನವಾಗಿ ಹೇಳಿದರು — “ನೀವು ಹಿಂದಿನ ಜನ್ಮದಲ್ಲಿ ಒಬ್ಬ ರಾಜಕುಮಾರ…ಅಪೂರ್ವ ಒಬ್ಬ ನೃತ್ಯಾಂಗಿ…ನಿಮ್ಮಿಬ್ಬರ ಪ್ರೇಮಕ್ಕಾಗಿ ನಡೆದ ಯುದ್ಧದಲ್ಲಿ ನೂರಾರು ಜನ ಸತ್ತರು…ಒಬ್ಬ ತಾಯಿ ತನ್ನ ಮಗನ ಶವ ಹಿಡಿದು ಶಪಿಸಿದ್ದಳು — ‘ನಿಮ್ಮ ಪ್ರೇಮ ಯಾವ ಜನ್ಮದಲ್ಲೂ ಪೂರ್ಣವಾಗಬಾರದು'…”
ಈ ವಿಚಾರ ಕೇಳಿದಂತೆ, ಆದಿತ್ಯನ ಮನ ನೊಂದಿತು. ಮನೆ ತುಂಬ ಮೌನ ಆವರಿಸಿತು…ಆ ದಿನದಿಂದ ವಿಚಿತ್ರ ಘಟನೆಗಳು ಆರಂಭವಾದವು. ಆರಾಧ್ಯಾ ಕೆಲವೊಮ್ಮೆ ಖಾಲಿ ಕೋಣೆಯ ಕಡೆ ನೋಡಿ ನಗುತ್ತಿದ್ದಳು… “ಅಮ್ಮ ಬಂದಿದ್ದಾರೆ…” ಎಂದು ಹೇಳುತ್ತಿದ್ದಳು.
ಒಂದು ರಾತ್ರಿ, ಆದಿತ್ಯಗೆ ಕನಸು ಬಂತು: ಬಿಳಿ ವಸ್ತ್ರದಲ್ಲಿ ಅಪೂರ್ವ ನಿಂತಿದ್ದಳು…ಅವಳ ಕಣ್ಣುಗಳಲ್ಲಿ ನೋವಿತ್ತು… ಆದರೆ ಮುಖದಲ್ಲಿ ದಿವ್ಯ ಶಾಂತಿ. “ಆದಿ… ನಾನು ಹೋಗಿಲ್ಲ…ನಿನ್ನ ಪ್ರೀತಿಯೊಳಗೆ ನಾನು ಇನ್ನೂ ಜೀವಂತ…ಆದರೆ ನಮ್ಮ ಶಾಪ ಈ ಜನ್ಮಕ್ಕೆ ಕೊನೆಯಾಗಬೇಕು…”
“ಹೇಗೆ…?” ಎಂದು ಅತ್ತ ಆದಿತ್ಯ. ಉತ್ತರವಾಗಿ ಅಪೂರ್ವ - “ಒಬ್ಬರನ್ನೊಬ್ಬರು ಹಿಡಿದುಕೊಳ್ಳುವ ಪ್ರೇಮಕ್ಕಿಂತ, ಬಿಡುವ ಪ್ರೇಮ ದೊಡ್ಡದು…” ಎಂದು ನಿಧಾನವಾಗಿ ಗಾಳಿಯಲ್ಲಿ ಸೇರಿಕೊಂಡಳು. ಆ ಕೂಡಲೇ ಎಚ್ಚರವಾದ ಆದಿತ್ಯ, ಬೆವತು ಹೋಗಿದ್ದ. ಅಪೂರ್ವ ಹೇಳಿದ ಮಾತನ್ನು ನೆನೆದು ಕಣ್ಣೀರಿಟ್ಟ. ಅಲ್ಲೇ ಶಾಂತವಾಗಿ ಮಲಗಿದ್ದ ಮಗಳು ಆರಾಧ್ಯಳನ್ನು ಗಟ್ಟಿಯಾಗಿ ತಬ್ಬಿಕೊಂಡು ಮನಸೋ ಇಚ್ಛೆ ಅತ್ತು ತನ್ನ ದುಃಖವನ್ನು ಇಳಿಸಿದ.
***
ಮರುದಿನ ಮತ್ತೆ ಶಾಸ್ತ್ರಿಗಳತ್ತ ಹೋಗಿ ಆದಿತ್ಯ ತನ್ನ ಕನಸಿನ ಬಗ್ಗೆ ಹೇಳಿಕೊಂಡ. ಶಾಸ್ತ್ರಿಗಳು ಒಂದು ದೇವಾಲಯದ ಬಗ್ಗೆ ಹೇಳಿದರು. ಅದು ಕಾಡಿನ ಮಧ್ಯೆ ಇದ್ದ ಪುರಾತನ ದೇವಿಯ ದೇವಸ್ಥಾನ. ಅಲ್ಲಿ ಅಪಮೃತ್ಯು ಪಡೆದ ಆತ್ಮಗಳಿಗೆ, ಅವರು ಸತ್ತ ತಿಥಿಯ ತಿಂಗಳಿನ ಪಿತೃ ಪಕ್ಷದ ಅಮಾವಾಸ್ಯೆ ದಿನ “ಅಪೂರ್ಣ ಆತ್ಮಗಳ ದೀಪ” ಹಚ್ಚಿದರೆ ಮಾತ್ರ ಶಾಪ ಮುಕ್ತವಾಗುತ್ತದೆ ಎಂದು ನಂಬಿಕೆ. ಹಲವಾರು ವಿಷಯಗಳನ್ನು ಕೇಳಿ ತಿಳಿದುಕೊಂಡ ಆದಿತ್ಯ ಮನೆಗೆ ಬಂದು ಶಾಸ್ತ್ರಿಗಳು ಹೇಳಿದಂತ ಎಲ್ಲ ವಿಚಾರಗಳನ್ನೂ ಹೇಳಿದ.
ಅದೇ ತಿಂಗಳು ಅಪೂರ್ವ ಸತ್ತು ಒಂದು ವರ್ಷ ಪೂರ್ಣವಾಗುತ್ತಿತ್ತು. ಅಂದು ಪಿತೃ ಪಕ್ಷದ ಅಮಾವಾಸ್ಯೆ ದಿನ. ಆದಿತ್ಯ, ಅನುರಾಧ, ಚಂದ್ರಮೋಹನ ಮತ್ತು ಪುಟ್ಟ ಆರಾಧ್ಯಾ ಎಲ್ಲರೂ ಅಲ್ಲಿ ಹೋದರು.
ಆ ದೇವಾಲಯವೇ ಒಂದು ಥರಾ ವಿಚಿತ್ರವಾಗಿತ್ತು… ಗಂಟೆ ಶಬ್ದಗಳೇ ಗಾಳಿಯಲ್ಲಿ ತೇಲುತ್ತಿದ್ದಂತ ಭಾಸವಾಗುತ್ತಿತ್ತು.
ಆ ದೇವಸ್ಥಾನದ ಒಳಗೆ ಕಾಲಿಡುತ್ತಿದ್ದಂತೆ, ಏನೋ ಒಂದು ವಿಚಿತ್ರವಾದ ಅನುಭವ. ಶಾಸ್ತ್ರಿಗಳು ತಿಳಿಸಿದಂತೆ, "ಅಪೂರ್ಣ ಆತ್ಮಗಳ ದೀಪ" ಹಚ್ಚುವಾಗ, ಆರಾಧ್ಯಾ ಏಕಾಏಕಿ ಹೇಳಿದಳು— “ಅಪ್ಪಾ, ಅಲ್ಲಿ ನೋಡು... ಅಮ್ಮ ಈಗ ನನ್ನ ಕಡೆ ನೋಡುತ್ತಾ ಖುಷಿಯಿಂದ ನಗ್ತಿದ್ದಾರೆ…”
ಆ ಕ್ಷಣ, ದೇವಾಲಯದೊಳಗಿನ ದೀಪಗಳು ಗಾಳಿಯಿಲ್ಲದೇ ತೇಲಿದಂತೆ ಕಂಪಿಸಿದವು…ಆದಿತ್ಯ ಕಣ್ಣುಮುಚ್ಚಿ ಅತ್ತ…“ಅಪೂರ್ವ… ನಿನ್ನನ್ನು ಬಂಧಿಸಿಕೊಳ್ಳಲು ನಾನು ಇನ್ನು ಬಯಸಲ್ಲ… ನೀನು ಶಾಂತಿಯಿಂದ ಹೋಗು…” ಆ ಮಾತಿನ ನಂತರ, ಅವನ ಹೃದಯದೊಳಗಿನ ಭಾರ ಏಕಾಏಕಿ ಕಡಿಮೆಯಾಯಿತು. ಅವನ ಕಣ್ಣಿಂದ ಕಣ್ಣೀರು ಜಲಪಾತದಂತೆ ಹರಿಯುತ್ತಿತ್ತು. ಅವನು ಅಳುವುದನ್ನು ನೋಡಿ ಆರಾಧ್ಯ ಗಲಿಬಿಲಿಯಾದರೂ ಅವನನ್ನು ಗಟ್ಟಿಯಾಗಿ ಅಪ್ಪಿಕೊಂಡಳು. ಮಗಳ ಅಪ್ಪುಗೆಯಲ್ಲಿ ತನ್ನ ನೋವನ್ನು ಮರೆತು ಆದಿತ್ಯ ಚೇತರಿಸಿಕೊಂಡ. ಅದಾದಮೇಲೆ, ಎಲ್ಲರೂ ಮನೆಗೆ ಹಿಂದಿರುಗಿದರು.
ಅದರ ನಂತರ ಅವರ ಜೀವನ ನಿಧಾನವಾಗಿ ಬದಲಾಗತೊಡಗಿತು. ಆರಾಧ್ಯಾ ದೊಡ್ಡವಳಾಗುತ್ತಾ ಅಪೂರ್ವಳಂತೆಯೇ ಸಂಗೀತ ಮತ್ತು ಚಿತ್ರಕಲೆಯಲ್ಲಿ ಅದ್ಭುತ ಪ್ರತಿಭೆ ತೋರಿಸಿದಳು. ಆದಿತ್ಯ ತನ್ನ ಹೆಂಡತಿಯ ನೆನಪಿಗಾಗಿ ಒಂದು ಟ್ರಸ್ಟ್ ಆರಂಭಿಸಿದ— “ಅಪೂರ್ವ ಫೌಂಡೇಶನ್”
ಅದು ಅಪಘಾತದಲ್ಲಿ ಕುಟುಂಬವನ್ನು ಕಳೆದುಕೊಂಡ ಮಕ್ಕಳಿಗೆ ಸಹಾಯ ಮಾಡುವ ಸಂಸ್ಥೆಯಾಯಿತು. ಅನುರಾಧ ಮತ್ತೆ ತನ್ನ ಉದ್ಯಮ ಆರಂಭಿಸಿದಳು. ಚಂದ್ರಮೋಹನ ಜೀವನದ ಕುರಿತು ಪುಸ್ತಕ ಬರೆಯಲು ಶುರುಮಾಡಿದರು.
***
ವರ್ಷಗಳ ನಂತರ…ಒಂದು ಸಂಜೆ, ಜಡಿಯಾಗಿ ಮಳೆ ಬೀಳುತ್ತಿತ್ತು…ಆರಾಧ್ಯಾ ವೀಣೆ ನುಡಿಸುತ್ತಿದ್ದಳು… ಆದಿತ್ಯನಿಗೆ ಆ ವೀಣೆಯ ನಾದ, ಸ್ವರದಲ್ಲಿ ಅಪೂರ್ವಳ ಆತ್ಮವೇ ಹರಿಯುತ್ತಿದ್ದಂತೆ ಅನಿಸಿತು… ಅಪೂರ್ವಳನ್ನು ನೆನೆಯುತ್ತಾ ಆದಿತ್ಯ ಕಣ್ಣು ಮುಚ್ಚಿ ಮಂದಹಾಸ ಬೀರಿದ.
ಅವನಿಗೆ ಗಾಳಿಯೊಳಗೆ ಒಂದು ಧ್ವನಿ ಕೇಳಿಸಿತು— “ಆದಿ…ಈ ಜನ್ಮದಲ್ಲಿ ಅಲ್ಲದಿದ್ದರೂ…ಪ್ರತಿ ಜನ್ಮದಲ್ಲೂ ನಾನು ನಿನ್ನನ್ನು ಹುಡುಕುತ್ತೇನೆ…”
ಕಿಟಕಿಯ ಬಳಿಯ ದೀಪ ನಿಧಾನವಾಗಿ ತೇಲಿತು…ಆಕಾಶದಲ್ಲಿ ಮಿಂಚು ಹೊಳೆಯಿತು…
ಆದರೆ ಆ ಮನೆಯಲ್ಲಿ ಮೊದಲ ಬಾರಿಗೆ, ನೋವಿನ ಮಧ್ಯೆ ಶಾಂತಿ ಹುಟ್ಟಿತ್ತು…
ಯಾಕೆಂದರೆ ಕೆಲವು ಪ್ರೇಮಗಳು…ಒಟ್ಟಿಗೆ ಬದುಕುವುದಕ್ಕಲ್ಲ…ಆತ್ಮವಾಗಿ ಶಾಶ್ವತವಾಗುವುದಕ್ಕೇ ಹುಟ್ಟುತ್ತವೆ…
❤️
✍🏻 Deepalaxmi Bhat
Mangaluru

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ