Sunday, January 26, 2014

ಸಮಾಧಾನ.....

ಎಲ್ಲಿದೆ ಸಮಾಧಾನದ ಮಾತುಗಳು?
ಬೇಸತ್ತಿದೆ ಹುಡುಕುತ ಈ ಕಂಗಳು.
ನಿಲ್ಲದೆ ಓಡುತ್ತಿದೆ ಎಲ್ಲರ ದಿನಗಳು
ತಾಳ್ಮೆಗೆ ಅವಕಾಶವಿಲ್ಲದ ಪರಿಗಳು.

ಎಲ್ಲೆಲ್ಲಿಯೂ ಅಹಂಕಾರಗಳ ಕಟ್ಟಿರುಳು
ಸ್ವಾಭಿಮಾನಕೆ ಇಲ್ಲ ಎಲ್ಲಿಯೂ ನೆರಳು.
ರೋಷ ತಾಪಗಳ ನಿರಂತರವಾದ ಕದನಗಳು
ತುಂಡರಿಸಿತು ಶಾಂತಿ ಸಮಾಧಾನಗಳ ಬೆರಳು.

ನ್ಯಾಯ-ಅನ್ಯಾಯಗಳ ಕಾದಾಟ ಹಗಲಿರುಳು
ಸದ್ಚಿಂತನೆಗಳಿಗೆ ನೆಲೆಯಾಯಿತು ಮರಳು.
ಪ್ರಾಮಾಣಿಕತೆಗಳಿಗೆ ಆಧಾರ ಸಿಗದಿರಲು
ಮುಗಿಲೇರುತಿಹುದು ಮೋಸ ವಂಚನೆಗಳು.

ವಿನಯ ವಿಧೇಯತೆಗಳಿಗೆ ಕಾರ್ಮೋಡ ಕವಿದಿರಲು
ಮಾನವೀಯತೆ ಗುಣಗಳಿಗೆ ಬೆಲೆಯೊಂದು ಸಿಗದಿರಲು
ಕೊನೆಯಾಗದೆಂದೂ ಸತ್ಯಾಸತ್ಯದ ಹುಡುಕಾಟಗಳು
ಕಾಣದೆಲ್ಲಿಯೂ ನಮಗೆ ಸಮಾಧಾನದ ಮಾತುಗಳು.

No comments:

Post a Comment