ಗುರುವಾರ, ನವೆಂಬರ್ 20, 2025

ಮಾಯಾಕನ್ನಡಿಯ ಬಿಂಬಗಳು

✍🏻ದೀಪಲಕ್ಷ್ಮಿ ಭಟ್, ಮಂಗಳೂರು

ಈ ಕಥೆ ಇಬ್ಬರು ಅವಳಿ ಜವಳಿ ಮಕ್ಕಳದ್ದು. ಅವರ ಹೆಸರು ಸೃಷ್ಟಿ ಹಾಗೂ ದೃಷ್ಟಿ. ಹೆಸರೇ ಹೇಳುವಂತೆ ಅವರದ್ದು ದೃಷ್ಠಿ ಆಗುವಂಥ ಸೃಷ್ಟಿ - ಅಂದರೆ, ಬೆಣ್ಣೆಯಂಥ ಮೃದುವಾದ ಚರ್ಮ. ಅಪರಿಮಿತ ಸೌಂದರ್ಯ, ಅವರಿಬ್ಬರನ್ನೂ ಮುಟ್ಟಬೇಕೆಂದರೆ, ಕೈಯನ್ನು ಹತ್ತು ಸಲ ತೊಳೆದುಕೊಂಡು ಮುಟ್ಟಬೇಕು ಅನ್ನುವಷ್ಟು ಬೆಳ್ಳಗಿನ ಬಣ್ಣ. ಹೆತ್ತ ತಾಯಿಗೂ ಇಬ್ಬರಲ್ಲಿ ಯಾರು ಸೃಷ್ಟಿ ಯಾರು ದೃಷ್ಟಿ ಅನ್ನೋದು ತಿಳಿಯದಷ್ಟು ಹೋಲಿಕೆ.

ಅಂದು ಮಧ್ಯರಾತ್ರಿಯ ಸಮಯ. ಸೂಜಿ ಬಿದ್ದರೂ ಕೇಳಿಸುವಂಥ ನಿಶ್ಯಬ್ದ ವಾತಾವರಣ. ಅಮಾವಾಸ್ಯೆ ಬೇರೆ. ಬೆಳ್ಳಗಿನ ತಿಳಿಯಾದ ಸುಗಂಧಭರಿತ ಹೊಗೆ ಕೆರೆಯ ಮೆಟ್ಟಿಲಲ್ಲಿ ಹೊನಲಿಡುತ್ತಿತ್ತು. ಊರಿನ ಹೊರವಲಯದಲ್ಲಿದ್ದ ಆ ಕೆರೆಯ ದಡದಲ್ಲಿ ಪುರಾತನವಾದ ಒಂದು ದೇವಾಲಯ. ದೇವಾಲಯದ ಹೆಬ್ಬಾಗಿಲಿನಲ್ಲಿ ಎರಡು ದೊಡ್ಡ ಗಜಸ್ತಂಭ. ದೀಪದಿಂದ ಅಲಂಕರಿಸಿದ ಮಹಾದ್ವಾರ. ಒಳಗಿನಿಂದ "ಟಂಗ್... ಟಂಗ್ ... " ಎಂಬ ಗಂಟೆಯ ನಾದ. ಶಂಖನಾದದ ಧ್ವನಿ ಎಲ್ಲೆಡೆ ಮೊಳಗುತ್ತಿದೆ. ಅಷ್ಟರಲ್ಲಿ "ಅಮ್ಮಾ, ಇಲ್ಲಿ ನೋಡು..." ಅಂತ ದೃಷ್ಟಿ ಜೋರಾಗಿ ಕಿರುಚಿದಳು - " ಇಲ್ಲಿ ನೋಡು. ಆಕಾಶದಲ್ಲಿ ಒಂದೇ ಚಂದ್ರ, ಆದರೆ ಇಲ್ಲಿ ಎರಡು... ಅಲ್ಲ ಮೂರು ಮೂರು ಚಂದ್ರನ ಬಿಂಬ ಕಾಣಿಸುತ್ತಿದೆ..."ಅಂತ ಬೆರಗಾಗಿ ಹೇಳಿದಳು. ನೀರಿನ ತರಂಗಗಳು ಹೋದ ಹಾಗೆ, ಆ ಬಿಂಬಗಳು ಬೆಳೆದು ಕರಗಿದಂತೆ ಕಾಣುತ್ತಿದ್ದವು. ಅಷ್ಟರಲ್ಲಿ ಸೃಷ್ಟಿ, "ಅಮ್ಮಾ, ನೀನು ಈ ಚೀಲ ಹಿಡಿ. ನಾನು ನೀರಿನ ಅಂಚಿಗೆ ಹೋಗಿ ನೋಡುತ್ತೇನೆ." ಅಂತ ಅಂದಳು. ಸೃಷ್ಟಿ ಮೊದಲಿನಿಂದಲೂ ತುಂಟತನ ಹೆಚ್ಚಾಗಿ ಮಾಡುತ್ತಿದ್ದವಳು. ದೃಷ್ಟಿ ತುಂಬಾ ಶಾಂತ ಮನಸ್ಥಿತಿ ಇದ್ದವಳು. ಇಬ್ಬರೂ ವಯಸ್ಸಿಗೆ ಮೀರಿ ಬುದ್ದಿವಂತಿಕೆ ಇದ್ದವರಾದರೂ ಸೃಷ್ಟಿ ಧೈರ್ಯಶಾಲಿ, ದೃಷ್ಟಿ ಏಕಾಂತ ಬಯಸುತ್ತಿದ್ದವಳು. "ಬೇಡ ಸೃಷ್ಟಿ, ಆ ಕಡೆ ಹೋಗಬೇಡ." ಅಂತ ತಾಯಿ ಸುಮಂಗಲ ಸೃಷ್ಟಿಗೆ ಎಚ್ಚರಿಕೆ ನೀಡಿದಳು. ಆದರೆ ಸೃಷ್ಟಿ ಕೇಳಬೇಕಲ್ಲಾ. ನೀರಿನ ಕಡೆಗೆ ಹೋಗಿ, ಆ ಬಿಂಬದ ಮೇಲೆ ಕೈ ಇರಿಸಿದಳು. ಅಷ್ಟರಲ್ಲಿ, ಅವಳ ಪಾದದಡಿ ಇದ್ದ ಮಣ್ಣು ಸರಿದು ನೀರಿನ ಪ್ರವಾಹಕ್ಕೆ ಸಿಲುಕಿದಳು. "ಅಯ್ಯೋ ಸೃಷ್ಟಿ..." ಅಂತ ಸುಮಂಗಲ ಬೊಬ್ಬೆ ಹಾಕಿದ ಕ್ಷಣದಲ್ಲೇ, ದೃಷ್ಟಿಯ ಕೈ ಹಿಡಿದು, ಅವಳನ್ನೂ ಎಳೆದುಕೊಂಡು ಪ್ರವಾಹದಲ್ಲಿ ಇಬ್ಬರೂ ಲೀನವಾದರು. ಸುಮಂಗಲನ ಕೂಗು ಕೇಳಿ ಊರವರೆಲ್ಲರೂ ಓಡಿ ಬಂದು, ಮಕ್ಕಳನ್ನು ಕಾಪಾಡುವ ಪ್ರಯತ್ನ ಶುರುಮಾಡಿದರು.

ಇತ್ತ ಪ್ರವಾಹಕ್ಕೆ ಸಿಲುಕಿದ ಸೃಷ್ಟಿ ಹಾಗೂ ದೃಷ್ಟಿ, ಮಾಯಾಕನ್ನಡಿಯ ಒಳಗೆ ಪ್ರವೇಶಿಸಿದ್ದರು. ಅಲ್ಲಿ ಚಂದ್ರನ ಮೂರು ಪ್ರತಿಬಿಂಬ ಕಂಡ ಹಾಗೆ, ಸೃಷ್ಟಿ ಹಾಗೂ ದೃಷ್ಟಿಯ ಮೂರು ಪ್ರತಿಬಿಂಬಗಳು ಕಾಣಿಸುತ್ತಿದ್ದವು. ಸೃಷ್ಟಿ ಹಾಗೂ ದೃಷ್ಟಿ, ಸೇರಿ ಒಟ್ಟು ಎಂಟು ಹುಡುಗಿಯರಿದ್ದಂತೆ ಭಾಸವಾಗುತ್ತಿತ್ತು. ಅಷ್ಟರಲ್ಲಿ ಆ ಬಿಂಬಗಳು ಮಾತನಾಡಲು ತೊಡಗಿದವು. ನಾನು ಸೃಷ್ಟಿ, ನಾನು ದೃಷ್ಟಿ ಅಂತ ಮೂರೂ ಬಿಂಬಗಳೂ ಹೇಳತೊಡಗಿದವು. ಆ ಮಾಯೆಗೆ ದೃಷ್ಟಿ ಬಲಿ ಆಗುವಂತಿದ್ದರೂ, ಸೃಷ್ಟಿ ಧೈರ್ಯವಂತೆ ಅಲ್ಲಿ ಕಂಡ ಕಬ್ಬಿಣದ ಒಂದು ಕೋಲನ್ನು ತೆಗೆದುಕೊಂಡು ಬೀಸಿದಳು. ಆ ಬಿಂಬಗಳು ಅವರ ಹತ್ತಿರ ಬರದಂತೆ ತಡೆದಳು. ಅಲ್ಲೇ ಇದ್ದ ಒಂದು ಗಿಡದ ಬಿಂಬಗಳು ಕಾಣಿಸಿತು. ಸೃಷ್ಟಿ ದೃಷ್ಟಿಯನ್ನು ಎಚ್ಚರಿಸಿ, ಗಿಡದ ನಿಜ ರೂಪ ಯಾವುದು, ಬಿಂಬ ಯಾವುದು ಎಂಬುದನ್ನು ಗುರುತಿಸಲು ಸೂಚಿಸಿದಳು. ಒಂದು ಕೋನದಲ್ಲಿ ಅದನ್ನು ಗುರುತಿಸಿದ ದೃಷ್ಟಿ, ಬಿಂಬಗಳು ಯಾವುವು ಎಂಬುದನ್ನು ಸೃಷ್ಟಿಗೆ ತಿಳಿಸಿದಳು. ಆಗ ಸೃಷ್ಟಿ ತನ್ನ ಕೈಯಲ್ಲಿದ್ದ ಕೋಲನ್ನು ಬೀಸಿ, ಆ ಮಾಯಾಕನ್ನಡಿಯನ್ನು ಒಡೆದು ಚೂರು ಚೂರು ಮಾಡಿದಳು. ಪುಡಿಪುಡಿಯಾದ ಮಾಯಾಕನ್ನಡಿಯಿಂದ ಆ ಬಿಂಬಗಳು ಮರೆಯಾದವು. ಅಷ್ಟರಲ್ಲಿ ಊರಿನ ಜನರಿಗೆ ಸೃಷ್ಟಿ ಹಾಗೂ ದೃಷ್ಟಿ ಕಂಡುಬಂದರು. ಅವರಿಬ್ಬರನ್ನೂ ಪ್ರವಾಹದಿಂದ ರಕ್ಷಿಸಿ, ದಡಕ್ಕೆ ಕರೆತಂದರು. ಇಬ್ಬರೂ ಪ್ರಜ್ಞೆ ಕಳೆದುಕೊಂಡಿದ್ದರು. ಒಬ್ಬ ಡಾಕ್ಟರ್ ಅಲ್ಲೇ ಇದ್ದ ಕಾರಣ, ಅವರಿಗೆ ಅಗತ್ಯವಾದ ಪ್ರಥಮ ಚಿಕಿತ್ಸೆ ನೀಡಿ ಪ್ರಜ್ಞೆ ಬರುವ ಹಾಗೆ ಮಾಡಿದರು. ಸುಮಂಗಲಾಳಿಗೆ ಹೋದ ಜೀವ ಹಿಂದೆ ಬಂದಂತಾಯಿತು. ಜೋರಾಗಿ ಅಳುತ್ತಾ ತನ್ನ ಇಬ್ಬರೂ ಮಕ್ಕಳನ್ನು ಅಪ್ಪಿ ಹಿಡಿದು, ಮುದ್ದಾಡಿದಳು. ಸುತ್ತಲೂ ನೋಡುತ್ತಿದ್ದ ಊರಿನ ಜನರು ಮಾತ್ರ ಸೃಷ್ಟಿ ಹಾಗೂ ದೃಷ್ಟಿಯ ಅಭಿನ್ನವಾದ ರೂಪ ಕಂಡು ಬೆರಗಾಗಿದ್ದರು.

ಪ್ರಜ್ಞೆ ಬಂದ ಮಕ್ಕಳು ತಮ್ಮ ಕೈಯಲ್ಲಿ ಏನೋ ಭಾರವಾದ ವಸ್ತು ಇದ್ದಂತೆ ಭಾಸವಾಗಿ, ನೋಡಿದರೆ, ಸೃಷ್ಟಿ ಕೈಯಲ್ಲಿ ಹಿತ್ತಾಳೆ ಬಣ್ಣದ ಲೋಹದ ಬಳೆ , ದೃಷ್ಟಿ ಕೈಯಲ್ಲಿ ನೀಲಮಣಿಯಿಂದ ಅಲಂಕರಿಸಿದ ಚಿಕ್ಕದೊಂದು ಕನ್ನಡಿ ಇತ್ತು. ಮತ್ತೆ ದೇಗುಲದಿಂದ ಶಂಖನಾದ ಮೊಳಗಿತು. ಗಂಟೆಗಳೆಲ್ಲ ತಾನಾಗಿಯೇ ಬಡಿಯತೊಡಗಿತು. ದೇಗುಲದ ಗರ್ಭಗುಡಿಯಿಂದ ಸುಂದರವಾದ ಶ್ವೇತವಸ್ತ್ರಧಾರಿ ತಾಯಿ ಗೆಜ್ಜೆನಾದ ಕೂಡಿದ ಹೆಜ್ಜೆಗಳನ್ನಿಡುತ್ತಾ ಕೆರೆಯ ಕಡೆ ಬಂದಳು. ಆ ಮಕ್ಕಳನ್ನು ನೋಡಿ - "ಅಮೃತ-ಮಾಯಾ, ಕನಸು ಹಾಗೂ ನಿಜ - ಇವೆರಡರ ಸಮತೋಲನಕ್ಕೆಂದೇ, ಈ ಮಕ್ಕಳ ಜನ್ಮ ಸೃಷ್ಟಿ ಆಗಿದೆ. "ಇಬ್ಬರಲ್ಲಿ ಒಬ್ಬಳು 'ಕನಸಿನ ರಾಜ್ಯಕ್ಕೆ' ಸೇತುವೆ, ಇನ್ನೊಬ್ಬಳು 'ನಿಜಗಳ ಲೋಕಕ್ಕೆ' ಕನ್ನಡಿ. ನೀರಿನ ರಹಸ್ಯ ನಿಮ್ಮದೇ. ಉಳಿದದ್ದು ಕಾಲ ಹೇಳುತ್ತದೆ," ಎಂದು ಹೇಳುತ್ತಿದ್ದಂತೆ ಆ ತಾಯಿ ರೂಪ ವಸ್ತ್ರದೊಳಗೆ ಕರಗಿ ಮರಳಿನಂತೆ ಮಾಯವಾಯಿತು. ಇದು ಕೇವಲ ಮಕ್ಕಳಿಗೆ ಹಾಗೂ ಮಕ್ಕಳ ತಾಯಿ ಸುಮಂಗಲ, ತಂದೆ ಶಶಿಧರ - ಇವರಿಗೆ ಮಾತ್ರ ಕಂಡು ಕೇಳಿಸಿತ್ತು. "ಇದು ಏನಪ್ಪಾ?" ಎಂದು ಶಶಿಧರ ಬೆರಗಾದ ಬಾಯಿ ತೆರೆದು ನುಡಿದ. ಸುಮಂಗಲ ತಲೆಬಾಗಿ ದೇಗುಲದ ದಿಕ್ಕಿಗೆ ನಮಸ್ಕರಿಸಿದಳು.

ಇಷ್ಟಾದರೂ ಊರಿನ ಜನರು ಮಾತ್ರ , ಮಕ್ಕಳ ಅಭಿನ್ನ ರೂಪ ಕಂಡು ಬೆರಗಾದ ಸ್ಥಿತಿಯಲ್ಲೇ ಇದ್ದರು. "ಇವಳು ಅವಳೋ? ಅವಳು ಇವಳೋ? ಅಂತ ಯೋಚನೆ ಮಾಡುತ್ತಲೇ, ಅಲ್ಲಿಂದ ಎಲ್ಲರೂ ಹಿಂದಿರುಗಿದರು.

 


***

ಅಂದು ಬೆಳಗ್ಗಿನ ಜಾವ ಹಕ್ಕಿಗಳ ಚಿಲಿಪಿಲಿ ನಾದ ಕೇಳಿ ಈದ ದೃಷ್ಟಿ, ಸೃಷ್ಟಿಯನ್ನೂ ಎಬ್ಬಿಸಿ ಸ್ನಾನಕ್ಕೆ ಹೋದಳು. ಅವಳು ಸ್ನಾನ ಮುಗಿಸಿ ಬರುವಷ್ಟರಲ್ಲಿ ಸೃಷ್ಟಿ ಇಬ್ಬರಿಗೂ ಆ ದಿನದ ಕಾಲೇಜು ಬ್ಯಾಗ್ ತಯಾರು ಮಾಡಿಟ್ಟು, ಸ್ನಾನಕ್ಕೆ ಹೋದಳು. ಸೃಷ್ಟಿ ಹೊರಬರುವಷ್ಟರಲ್ಲಿ, ದೃಷ್ಟಿ ತನ್ನ ಹಾಗೂ ಸೃಷ್ಟಿಯ ಬಟ್ಟೆಗಳನ್ನೂ ಇಸ್ತ್ರಿ ಮಾಡಿ ತಯಾರಿಸಿದ್ದಳು. ಹೀಗೆ ಇಬ್ಬರೂ ಒಬ್ಬರಿಗೊಬ್ಬರು ಜೊತೆಗೂಡಿ ಲವಲವಿಕೆಯಿಂದ ಇದ್ದರು. ಇವರ ಒಗ್ಗಟ್ಟಿಗೆ, ಶಶಿಧರ ಹಾಗೂ ಸುಮಂಗಲ ಇಬ್ಬರೂ ಖುಷಿಗೊಂಡಿದ್ದರು.

" ಸೃಷ್ಟಿ - ದೃಷ್ಠಿ , ತಿಂಡಿ ರೆಡಿ ಆಗಿದೆ. ಬೇಗ ಬನ್ನಿ... ಕಾಲೇಜು ಹೋಗೋ ಟೈಮ್ ಆಯ್ತು." ಅಂತ ಸುಮಂಗಲ ಕರೆದಾಗ ಇಬ್ಬರೂ ಬಂದು ತಿಂಡಿ ತಿಂದು ಹೊರಡಲು ತಯಾರಾದರು. "ಇವತ್ತು ಫಸ್ಟ್ ಡೇ. ಬೇಗ ಹೊರಡೋಣ... ಮಿಸ್ ಆಗ್ಬಾರ್ದು" ಅಂತ ಹೇಳ್ತಾ, ಸೃಷ್ಟಿ ಆಕ್ಟಿವಾ ಸ್ಟಾರ್ಟ್ ಮಾಡಿದಳು. "ಬರ್ತೀನಮ್ಮಾ.... ಇವತ್ತು ಕಾಲೇಜಿನಲ್ಲಿ ಕಾವ್ಯ ಸಂಧ್ಯಾ ಇದೆ. ನಾನು ನಿನ್ನೆ ಬರೆದ ಕವನ - "ಮೋಡದ ನೆರಳಿನಲ್ಲಿ ಮಲ್ಲಿಗೆ" ಇದನ್ನು ಹೇಳ್ತೇನೆ" ಅಂತ ಕೂಗಿ ಆಕ್ಟಿವಾದಲ್ಲಿ ಕೂತಳು. ಅದಿಕ್ಕೆ ಉತ್ತರವಾಗಿ ಸುಮಂಗಲ - "ಮಲ್ಲಿಗೆ ಕವನ ಹೇಳು. ಹಾಗೆ ಇವತ್ತು ಸಂಜೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಇದೆ. ಮಲ್ಲಿಗೆ ಹೂವಿನ ಮಾಲೆ ಕಟ್ಟಿ ಬನ್ನಿ" ಅಂದಳು. ಸರಿ ಅನ್ನುತ್ತಾ ಕಾಲೇಜೋಗೆ ಹೋದರು. 

ಅದೇ ಹಿಂದಿನ ವರ್ಷ, ಕಾಲೇಜ್ ಡೇ ಗೆ "ಅವಳೋ ಇವಳೋ?" ಎನ್ನುವ ಒಂದು ನಾಟಕವನ್ನು ಗೌಡ ಸರ್ ಮಾಡಿಸಿದ್ರು. ಎಲ್ಲದರಲ್ಲೂ ಒಂದೇ ನಾಯಕಿ ಇದ್ರೆ, ಈ ನಾಟಕದಲ್ಲಿ ದೃಷಿ ಸೃಷ್ಟಿ ಇಬ್ಬರೂ ನಾಯಕಿಯರಾಗಿದ್ದರು. ಯಾಕಂದ್ರೆ, ಇದು ಡುಯಲ್ ಪರ್ಸನಾಲಿಟಿ ವಿಷಯದ ಕಥೆ ಆಗಿತ್ತು. ಇಬ್ಬರೂ ಒಂದೇ ರೀತಿ ಆದ ಕಾರಣ ಇಬ್ಬರನ್ನೂ ಉಪಯೋಗಿಸಿ ನಾಟಕ ಮಾಡಿಸಿದ್ದರು. ಇದು ತುಂಬಾ ಹೆಸರುವಾಸಿಯಾಗಿ, ಕಾಲೇಜಿಗೂ, ಇವರಿಬ್ಬರಿಗೂ ಹೆಸರು ತಂದಿತ್ತು. 

ಹಾಗೆ ಕಾಲೇಜು ಗೇಟ್ ಮುಟ್ಟಿದ ಕೂಡಲೇ, ಆಕ್ಟಿವಾ ಪಾರ್ಕ್ ಮಾಡಿ ಓರಿಯೆಂಟೇಷನ್ ಪ್ರೋಗ್ರಾಮ್ ಗೆ ಆಡಿಟೋರಿಯಂ ಕಡೆ ನಡೆದರು ದೃಷ್ಟಿ ಹಾಗೂ ಸೃಷ್ಟಿ. ಅಷ್ಟರಲ್ಲಿ ಅವರ ಎದುರಿಗೆ, ಮಾಧವ ಮಂಡಿಯೂರಿ ಕುಳಿತು, "ಸೃಷ್ಟಿ ಅಥವಾ ದೃಷ್ಟಿ ನಿಮ್ಮಿಬ್ಬರಲ್ಲಿ ಯಾರಾದರೂ ಒಬ್ಬರು ನನ್ನ ಪ್ರೀತಿಯನ್ನು ಸ್ವೀಕರಿಸುವಿರಾ..? ನಿಮ್ಮನ್ನು ಕಂಡರೆ ನನಗೆ ತುಂಬಾ ಇಷ್ಟ. ನನ್ನ ಕೊಳಲಿಗೆ ಸ್ವರವಾಗಿ ಯಾರು ಕೈ ಹಿಡಿಯುವಿರಿ?" ಅಂತ ಕೇಳಿದ. ಮಾಧವ ಕಾಲೇಜಿನಲ್ಲಿ ಅವರಿಗಿಂತ ಸೀನಿಯರ್. ಕೊಳಲು ವಾದನದಲ್ಲಿ ಹೆಸರು ಮಾಡಿದ ಹುಡುಗ. "ಪ್ರೀತಿ ಗೀತಿ ಎಲ್ಲ ಕಲಿಕೆ ಮುಗಿದ ಮೇಲೆ. ನಿನ್ನ ಕಲಿಕೆಗೆ ಗಮನ ಕೊಡು" ಅಂತ ಹೇಳಿ ಇಬ್ಬರೂ ಅಲ್ಲಿಂದ ಓಡಿದರು. 

ಕಾಲೇಜಿನ ಎಲ್ಲ ಮಕ್ಕಳಿಗೂ, ಇವರೆಂದರೆ ಪ್ರೀತಿ. ಎಲ್ಲರ ಜೊತೆ ಲವಲವಿಕೆಯಿಂದ ಬೆರೆತು, ನಗುವನ್ನೇ ತಮ್ಮ ಆಭರಣವಾಗಿಸಿದ್ದರು ಸೃಷ್ಟಿ ದೃಷ್ಟಿ. ಎಲ್ಲರಿಗೂ ಅವರಲ್ಲಿ ಏನು ವ್ಯತ್ಯಾಸ ಇದೆ ಅಂತ ಲೆಕ್ಕ ಹಾಕೋದೇ ಕೆಲಸ ಆಗಿತ್ತು. 

ಅವತ್ತಿನ ಕ್ಲಾಸ್ ಮುಗಿದ ತಕ್ಷಣ, ದೇವಸ್ಥಾನದ ಕಡೆ ಹೋದರು. ಅಲ್ಲಿ ಮಲ್ಲಿಗೆಯ ಮಾಲೆಯನ್ನು ಕಟ್ಟಿ, ಪೂಜೆ ಮುಗಿಯುವವರೆಗೂ ನಿಂತು, ಇನ್ನೇನು ಹೊರಡೋದು ಅನ್ನುವಷ್ಟರಲ್ಲಿ, ಕೆರೆಯ ದಡದಲ್ಲಿ ಯಾರೋ ನಿಂತು ಇವರಿಬ್ಬರನ್ನೂ ಕರೆದ  ಹಾಗೆ ಅನ್ನಿಸಿತು. ಸೃಷ್ಟಿ ಕೂಡಲೇ ಅಲ್ಲಿಗೆ ಹೋದಳು.  ದೃಷ್ಟಿ ಮನಸ್ಸಿಲ್ಲದಿದ್ದರೂ, ಸೃಷ್ಟಿ ಜೊತೆಗೆ ಹೋದಳು. ಕೇಸರಿ ವಸ್ತ್ರಧಾರಿಯಾಗಿದ್ದ ಆ ವೃದ್ಧ, ಕೈಯಲ್ಲಿ ಕಮಂಡಲ ಹಾಗೂ ಜಪಮಾಲೆಯನ್ನು ಹಿಡಿದುಕೊಂಡಿದ್ದ. ಇಬ್ಬರಿಗೂ, "ಕನಸು ಹಾಗೂ ಸತ್ಯದ ನಡುವಿನ ಸಮತೋಲನ ಸರಿಪಡಿಸುವ ಸಮಯ ಬಂದಿದೆ" ಅಂತ ಹೇಳಿ, ನೀರಿನೆಡೆಗೆ ಹೋದರು. ಅಷ್ಟರಲ್ಲಿ ಹಿರಿದಾದ ಬೆಳಕೊಂದು ದೃಷ್ಟಿ ಸೃಷ್ಟಿಯ ಕಣ್ಣಿಗೆ ಪರದೆಯಂತಾಗಿ, ಬೆಳಕು ಸರಿದ ಮೇಲೆ ಆ ವ್ಯಕ್ತಿ ಕಾಣಸಿಗದೇ ಹೋದರು. 

ಮನೆಗೆ ಮರಳಿದ ಸೃಷ್ಟಿ ಹಾಗೂ ದೃಷ್ಟಿ, ಅಮ್ಮನ ಜೊತೆ ದೇವಸ್ಥಾನದಲ್ಲಿ ನಡೆದ ವಿಷಯ ತಿಳಿಸಿದರು. ಸುಮಂಗಲಳಿಗೆ ದೇವಿಯ ಆ ದಿನದ ನುಡಿ ನೆನಪಾಗಿ, "ರಹಸ್ಯಗಳು ಬಯಲಾಗುವ ದಿನ ಬಂತೇನೋ" ಅಂತ ಎದೆ ಝಲ್ ಎಂದಿತು. ಹಾಗೆ ಮಕ್ಕಳ ಕ್ಷೇಮ ವಿಚಾರಿಸಿ, ಮಲಗಲು ಅಣಿಯಾದಳು. 

ಇತ್ತ, ಸೃಷ್ಟಿ ಹಾಗೂ ದೃಷ್ಟಿ ಕಾಲೇಜಿನ ಹೋಂ ವರ್ಕ್ ಎಲ್ಲ ಮುಗಿಸಿ, ಮಲಗಲು ತಯಾರಿ ಮಾಡುತ್ತಿದ್ದರು. ಅಷ್ಟರಲ್ಲಿ, ಹೊರಗಡೆ ಹಿರಿದಾದ ಬೆಳಕೊಂದು ಕಾಣಿಸತೊಡಗಿತು. ಎಂದಿನಂತೆ ಸೃಷ್ಟಿ ಕುತೂಹಲದಿಂದ ಅದರೆಡೆಗೆ ಹೋಗಲು ತಯಾರಾದಳು. ದೃಷ್ಟಿ ಬೇಡ ಅನ್ನುತ್ತಿದಂತೆಯೇ, ದೃಷ್ಟಿಯ ಕೈ ಹಿಡಿದೆಳೆದು, ಸೃಷ್ಟಿ ಹೊರ ಹೋದಳು.  ಆ ಬೆಳಕಿನ ದಾರಿಯುದ್ದಕ್ಕೂ, ಏನೋ ಸ್ವರಗಳು, ಅಂದು ದೇವಿ ಹೇಳಿದ ದೃಷ್ಟಿ ಸೃಷ್ಟಿಯ ಆ ಹೆಸರು, ಅಮೃತಾ - ಮಾಯಾ ಎಂಬ ಕೂಗು ಕೇಳಿಸಿತ್ತಿತ್ತು. ಹಿಂದಿನ ಕೆರೆಯ ಸಾಹಸದ ನಂತರ, ಸೃಷ್ಟಿಯ ಕೈಯಲ್ಲಿದ್ದ ಹಿತ್ತಾಳೆ ಬಳೆ ಹಾಗೂ ದೃಷ್ಟಿಯ ಜೇಬಿನ ನೀಲಿ ಕನ್ನಡಿ — ಇಬ್ಬರಿಗೂ ‘ಸಾಧಾರಣ’ ವಸ್ತುಗಳಾಗಿರಲಿಲ್ಲ. ಪ್ರತಿಕ್ಷಣ ಕೈಯಲ್ಲೇ ಹಿಡಿದುಕೊಂಡು ಹೋಗುತ್ತಿದ್ದರು. ಇಂದು ಅಮಾವಾಸ್ಯೆ ನಂತರದ ಮೊದಲ ಪೌರ್ಣಮಿಯ ರಾತ್ರಿ. ಮಳೆಗಾಲದ ಗಾಳಿ ಇಬ್ಬರ ಮೈಗೂ ಸೋಕುತ್ತಿದ್ದಾಗ, ಚಳಿ ಜೊತೆಗೆ ಆ ಬೆಳಕಿನ ಬಿಸಿ ಅವರಿಬ್ಬರಿಗೂ ಭಾಸವಾಗುತ್ತಿತ್ತು. ಆ ಶಬ್ದಗಳ ನಾದಮಯ ಪರಿಸರದೊಂದಿಗೆ, ವಿಚಿತ್ರ ಸಂಗತಿ ಒಂದಾಯಿತು — ಬಳೆ ತಾನಾಗಿಯೇ ಝೇಂಕರಿಸಿತು. ದೃಷ್ಟಿ ಒದ್ದೆಯಾದ ತನ್ನ ಕೂದಲು ಒರೆಸುತ್ತ ಕನ್ನಡಿಯನ್ನು ನೋಡಿವಷ್ಟರಲ್ಲಿ — ಕನ್ನಡಿ ಮೇಲಿನ ನೀಲಿ ಮಣಿಗಳಿಂದ ಬೆಳಕಿನ ರೇಖೆಯೊಂದು ಹರಿದು, ಸುತ್ತಲೂ ನೀಲವರ್ಣದ ಅಲಂಕಾರ ಕಾಣತೊಡಗಿತು.  “ಸೃಷ್ಟಿ, ನೋಡು!” ಅಂತ ಸೃಷ್ಟಿಯ ಭುಜವನ್ನು ತಟ್ಟಿದಳು ದೃಷ್ಟಿ. ನೋಡುನೋಡುತ್ತಿದ್ದಂತೆಯೇ, ಸೃಷ್ಟಿಯ ಬಳೆಯ ಮೇಲಿನ ಕೆತ್ತನೆಯಲ್ಲಿದ್ದ ಎರಡು ಹಂಸಗಳು ಮುಖಾಮುಖಿಯಾಗಿ, ಆ ನೀಲಿ ಬಣ್ಣದ ರೇಖೆಯನ್ನು ಚುಂಬಿಸಿದಂತೆ ಭಾಸವಾಯಿತು. ಕನ್ನಡಿ ಹಾಗೂ ಬಳೆ ಒಂದಕ್ಕೆ ಒಂದು ಎದುರಾಕ್ಷಿಯಾಗಿ ಬಂದಾಗ, ಮಧ್ಯೆ ಪಾರದರ್ಶಕ ತೆರೆ ತೆರೆದು — “ಕನಸಿನ ಪಯಣದ ಕಮಾನು” ಮಿಡಿಯಿತು.  ದೃಷ್ಟಿ ಸದ್ದೇ ಇಲ್ಲದೆ ಕೈ ಚಾಚಿದಳು; ಸೃಷ್ಟಿ ಆಕೆಯ ಕೈ ಹಿಡಿದಳು. ಒಟ್ಟಿಗೆ ಕಮಾನಿನ ದ್ವಾರದ ಒಳಗೆ ಕಾಲಿಟ್ಟರು. 

***

ಆ ಕ್ಷಣ — ಅವರು ಕಾಲಿಟ್ಟ ನೆಲದ ಮೇಲೆಲ್ಲಾ ಮಲ್ಲಿಗೆ ಹೂವಿನ ಚಾಪೆ, ಬೀಸುತ್ತಿದ್ದ ಆ ತಂಗಾಳಿಯಲ್ಲಿ ಗಂಧದ ಸುವಾಸನೆ, ಮಧ್ಯಾಹ್ನದಂಥ ಸೂರ್ಯನ ಬೆಳಕಿನಲ್ಲಿ ಅವರ ದಾರಿಯುದ್ದಕ್ಕೂ ಹಸಿರು ತೋರಣದ ನೆರಳು. “ರಾಜಕುಮಾರಿಯರೇ, ಬನ್ನಿ.” ಎಂಬ ಸ್ವಾಗತದ ನುಡಿ ಕೇಳಿದೆಡೆ ಸೃಷ್ಟಿ ಹಾಗೂ ದೃಷ್ಟಿ ನೋಡಿದರು. ವಾಸ್ತವ್ಯದ ಲೋಕದಲ್ಲಿ ಕನಸಿನ ಅರಮನೆಯ ಒಳಗೆ ಕಾಲಿಟ್ಟ ಸೃಷ್ಟಿ ಹಾಗೂ ದೃಷ್ಟಿ ಒಂದು ಕ್ಷಣ ಬೆರಗಾದರು. ಒಳಗೆ ಕಾಲಿಟ್ಟವರಿಗೆ ತಿಳಿಯಿತು, ಅದು ಮಲ್ಲಿಗೆ ಹೂವಿನ ಚಾಪೆಯಲ್ಲ, ನಿಜವಾದ ಮಲ್ಲಿಗೆಯ ಬಳ್ಳಿಯೇ, ಚಾಪೆಯಂತೆ ದಾರಿಯುದ್ದಕ್ಕೂ ಹರಡಿ, ಅರಳಿದ ಮಲ್ಲಿಗೆ ಹೂವಿನ ಮೃದುತ್ವ ಕಾಲಿಗೆ ಸೋಕುತ್ತಿತ್ತು. ಮಲ್ಲಿಗೆಯಾ ಸುಗಂಧ ಆಹ್ವಾನಿಸುವಂತಿತ್ತು. ದಾರಿಯುದ್ದಕ್ಕೂ ಸಾಲು ದೀಪಗಳಂತೆ, ನಕ್ಸತ್ರಗಳ ಸಾಲು ಬೆಳಕು ಬೀರಿ ಸ್ವಾಗತ ಕೋರುತ್ತಿತ್ತು. ಗಂಟೆಗಳ ಮೃದುವಾದ ಟಣ್ ಟಣ್ ಲಯಭರಿತ ಸಂಗೀತದಂತ ನಾದ ಎಲ್ಲೆಲ್ಲೂ ಮೊಳಗುತ್ತಿತ್ತು. ಸುತ್ತಲೂ ಶಾಂತಿಯುತ ವಾತಾವರಣವಿದ್ದು, ಆ ಶಾಂತಿಯಲ್ಲಿ ಪ್ರಶಾಂತತೆಯ ತಂಗಾಳಿ ಮೈ ಮನಸ್ಸಿಗೆ ತಂಪೆರೆಯುತ್ತಿತ್ತು. 

ಸೃಷ್ಟಿ  ಕಣ್ತುಂಬಾ ಆ ಕನಸಿನ ಲೋಕವನ್ನು ನೋಡಿ ಆನಂದಿಸುತ್ತಾ, "ದೃಷ್ಟಿ, ಇದು ಕನಸಿನ ಲೋಕವಾದರೂ ಎಷ್ಟೊಂದು ಸ್ವಚ್ಛವಾಗಿ, ಸುಗಂಧಭರಿತ ಗಾಳಿ ಮೈಗೆ ಸೋಕುತ್ತಿದೆ. ಅಲ್ಲವೇ?" ಅಂತ ದೃಷ್ಟಿಯ ಕೈ ಹಿಡಿಯುತ್ತಾ ಹೇಳಿದಳು. "ಹೌದು, ನಮ್ಮ ಲೋಕದಲ್ಲಿ ಫೈವ್ ಸ್ಟಾರ್ ಹೋಟೆಲ್'ಗಳೂ ಇಷ್ಟೊಂದು ಸ್ವಚ್ಛವಾಗಿರೋದಿಲ್ಲ - ಇರು. ಸರಿಯಾಗಿ ಕಿವಿಗೊಟ್ಟು ಕೇಳಿಸಿಕೋ, ಇಲ್ಲಿನ ಗಾಳಿಯಲ್ಲೂ ಏನೋ ಮಾತುಗಳು ಕೇಳಿಸುತ್ತಿವೆ. ಅಮೃತಾ, ಮಾಯಾ ಅಂತ ಕರೆದಂತೆ ಕೇಳಿಸುತ್ತಿದೆ...." ಅಂದಳು. ಅಷ್ಟರಲ್ಲಿ ಬಲಗಡೆಯ ಗೋಡೆ ಆವಿಯಾದಂತೆ, ಒಂದು ಕನ್ನಡಿ ಗೋಚರಿಸಿತು. ಆ ಕನ್ನಡಿಯು ಚಿನ್ನದಲ್ಲಿ ಕಟ್ಟಿದ ನೀಲಿ ಕಲ್ಲುಗಳ ಚೌಕಟ್ಟಿನಿಂದ ಅಲಂಕೃತವಾಗಿ ತುಂಬಾ ಸುಂದರವಾಗಿತ್ತು. ಅವರ ಬಿಂಬ ಅದರಲ್ಲಿ ಕಾಣುತ್ತಿದ್ದಂತೆ, ಆ ಬಿಂಬಗಳು ಗುಣಿಕರಿಸಿ ಒಟ್ಟಾಗಿ ಎಂಟು ಬಿಂಬಗಳು ಕಾಣಿಸತೊಡಗಿತು. "ಅಯ್ಯಯ್ಯೋ ಇಲ್ಲಿಯಾದರೂ ನಮಗೆ ಈ ವಿಷಯದಿಂದ ರಜೆ ಬೇಕಪ್ಪಾ!" ಅಂತ ಹೇಳಿ ಸೃಷ್ಟಿ ಮುಂದೆ ಹೋಗಲು ಪ್ರಯತ್ನಿಸಿದಳು. ಆಗ ಅಲ್ಲಿ ಇದ್ದ ಮಲ್ಲಿಗೆ ಬಳ್ಳಿ ಅವಳ ಕಾಲಿಗೆ ಸಂಕೋಲೆಯಾಗಿ ಬಿಗಿದು ಅಲ್ಲಿಂದ ಮುಂದೆ ಹೋಗದಂತೆ ಮಾಡಿತು. "ದೃಷ್ಟಿ..." ಅಂತ ಹೇಳುತ್ತಿದ್ದಂತೆ ಗೆಜ್ಜೆಯ ನಾದ ಝೇಂಕರಿಸಿತು. ನೋಡುತ್ತಿದ್ದಂತೆಯೇ, ಆ ಕನ್ನಡಿಯ ಪಕ್ಕದಲ್ಲಿ ಗರ್ಭಗುಡಿಯಲ್ಲಿ ಕಂಡಿದ್ದ ಶ್ವೇತವಸ್ತ್ರಧಾರಿ ತಾಯಿ ಸ್ವರೂಪ ನಿಂತಿದ್ದಳು. ಈಗ ತುಂಬ ಸ್ಪಷ್ಟವಾಗಿ ಆ ಸುಂದರವಾದ ದೇವಿ ರೂಪ ಸೃಷ್ಟಿ ಹಾಗೂ ದೃಷ್ಟಿಗೆ ಗೋಚರಿಸಿತು. "ಅಮೃತ - ಮಾಯಾ, ನೀವಿಬ್ಬರೂ ಒಂದೇ ಆತ್ಮ, ಎರಡು ಜೀವ. ಆತ್ಮಾವಲೋಕನಕ್ಕಿರುವ ಎರಡು ದಾರಿಗಳು. ಇಂದು ನೀವು ಈ ಕನಸಿನ ಲೋಕದ ಕದ ತೆರೆಯದಿದ್ದರೆ, ಈ ಕೆರೆಯ ಲೋಕ ಇಂದಿಗೆ ಕೊನೆಯಾಗುತ್ತಿತ್ತು. ಜನರೆಲ್ಲರೂ ಮಾಯೆಯ ಒಳಗೆ ಸಿಲುಕಿ ವಾಸ್ತವ್ಯದ ಅರಿವಿಲ್ಲದವರಾಗುತ್ತಿದ್ದರು." ದೇವಿ ಹೇಳುತ್ತಿದ್ದಂತೆಯೇ, ದೃಷ್ಟಿ ಕೈಯಲ್ಲಿದ್ದ ನೀಲಿ ಕನ್ನಡಿ ಬಿಸಿಯಾಗತೊಡಗಿತು. ಸೃಷ್ಟಿ ಕೈಯ ಬಳೆ  ಝೇಂಕರಿಸಿತು. ದೇವಿ ಮುಂದುವರಿಸುತ್ತಾ, "ಕನಸಿಗೂ, ವಾಸ್ತವ್ಯಕ್ಕೂ ಸಮತೋಲನವಿರಬೇಕು. ನೀವಿಬ್ಬರೂ ನಿಮ್ಮೊಳಗಿನ ಸತ್ಯವನ್ನು ಬೇರ್ಪಡಿಸಿ ನೋಡಬೇಕು. ಯಾವುದು ಕನಸು, ಯಾವುದು ನಿಜ—ಇದು ನಿಮ್ಮಿಬ್ಬರಿಗೂ ಗೊತ್ತಿದ್ದರೂ, ನಿಮ್ಮ ಮೇಲೆ ಲೋಕಕ್ಕೆ ಸಂಶಯವಾಗುತ್ತದೆ. ಅದನ್ನು ನೀವೇ ಪರಿಹರಿಸಬೇಕು." ಹೀಗೆ ಹೇಳಿದ ದೇವಿ ಮಾಯವಾದೊಡನೆ, ಮಂಜಿನ ಒಳಗಿಂದ ಹತ್ತಾರು ಪ್ರತಿಬಿಂಬಗಳು ಹೊರಬಂದವು. "ನಾನೇ ಸೃಷ್ಟಿ, ನಾನೇ ದೃಷ್ಟಿ..." ಎನ್ನುತ್ತಾ ಮತ್ತೆ ಗೊಂದಲ ಸೃಷ್ಟಿ ಮಾಡಹೊರಟವು. ಸೃಷ್ಟಿ ಧ್ರೀತಿಗೆಡದೆ, ನೀಲಿ ಕನ್ನಡಿಯಿಂದ ನೀಲವರ್ಣದ ಬೆಳಕಿಂದ ಬಳ್ಳಿ ಚಂದ್ರನ ಬೆಳಕನ್ನು ಪ್ರತಿಬಿಂಬಿಸುತ್ತಾ, ಆ ಪ್ರತಿಬಿಂಬಗಳ ಸುತ್ತ ಹಗ್ಗದಂತೆ ಸುತ್ತಿಕೊಂಡಿತು. ಬೆಳಕು ಬೀಳುತ್ತಲೇ ಆ ಪ್ರತಿಬಿಂಬಗಳು ಮಾಯವಾದವು. ಗೊಂದಲ ಕಳೆಯಿತು. ಕನಸಿನ ಲೋಕದ ಬಾಗಿಲು ತೆರೆಯಿತು. 

ವಾಸ್ತವ್ಯಕ್ಕೆ ಕಾಲಿಡುತ್ತಲೇ, ಸೃಷ್ಟಿ ಹಾಗೂ ದೃಷ್ಟಿ ಕೈ ಕೈ ಹಿಡಿದು ಓಡಿದರು. ಪೌರ್ಣಮಿಯ ಬೆಳಕು, ಮಳೆಗಾಲದ ಗಾಳಿ—ಮನೆ ಹಿಂದೆ ಇರುವ ಹಿತ್ತಿಲು. ಆದರೆ ಮನೆಯಲ್ಲಿ ಶಾಂತಿ ಇರಲಿಲ್ಲ.

*** 

ಸುಮಂಗಲ ಅಳುತ್ತಾ, ಶಶಿಧರ ಕೋಪದಿಂದ ಮನೆಬಾಗಿಲ ಬಳಿ ನಿಂತಿದ್ದರು. ಪಕ್ಕದ ಮನೆಯವರು, ಪೊಲೀಸರೊಬ್ಬರು, ಊರಿನ ಜನ—ಎಲ್ಲ ಸೇರಿದ್ದರು. ಮನೆ ಒಳಗೆ ಕಾಲಿಡುತ್ತಿದ್ದಂತೆ, ಎಲ್ಲರೂ "ಇವರೇ ಇವರೇ... ಹಿಡಿಯಿರಿ ಅವರನ್ನು" ಎಂದರು. ಸೃಷ್ಟಿ ಗಲಿಬಿಲಿಯಿಂದ "ಏನಾಯ್ತು" ಎಂದು ಕೇಳಿದಾಗ, ಪೊಲೀಸರು "ಕಾಲೇಜಿನಲ್ಲಿ ಹಾಗೂ ದೇವಸ್ಥಾನದಲ್ಲಿ ಕಳ್ಳತನ ಆಗಿದೆ. ಸಿಸಿಟಿವಿ ನೋಡಿದರೆ, ಎರಡೂ ಕಡೆ ನೀವೇ ಕಾಣುತ್ತಿದ್ದಿರಿ, ನಿಜ ಹೇಳಿ ಈ ರಾತ್ರಿ ಕಳ್ಳತನ ಮಾಡಿದ ವಸ್ತುಗಳೆಲ್ಲಿ?" ಎಂದರು. ಅಷ್ಟರಲ್ಲಿ ದೃಷ್ಟಿ ಮುಂದೆ ಬಂದು, ಧೈರ್ಯ ತುಂಬಿಕೊಂಡು, “ನಾವು ಮನೆಯಲ್ಲಿರಲಿಲ್ಲ. ಆದರೆ ತಪ್ಪು ಮಾಡಿಲ್ಲ.” ಅಂದಳು.  ಸೃಷ್ಟಿ ಎಂದಿನಂತೆ ಧೈರ್ಯವಾಗಿ, “ನಮ್ಮ ಮುಖ ತೊಟ್ಟು ಯಾರೋ ಆಟ ಆಡ್ತಿದ್ದಾರೆ. ನಾವು ಅದನ್ನು ಹಿಡಿದು ತೋರಿಸ್ತೀವಿ.”  ಪೊಲೀಸ್ ವ್ಯಂಗ್ಯವಾಗಿ: “ಸಿಸಿಟಿವಿ ಯಲ್ಲಿ ಅಷ್ಟು ಚೆನ್ನಾಗಿ ಕಂಡಿದೆ. ಕಳ್ಳತನ ಮಾಡಿದ್ದಲ್ಲದೆ, ಸುಳ್ಳು ವಾದ ಬೇರೆ. ನೀವು ಹೇಳಿದಂತೆ ನೀವು ಅಲ್ಲವಾದಲ್ಲಿ ಯಾರು ಅವರನ್ನು  ಹಿಡಿದು ತೋರಿಸಿ. ಇಲ್ಲ ಅಂದ್ರೆ… ನಿಮ್ಮಿಬ್ಬರನ್ನೂ ಸ್ಟೇಶನ್ ಗೆ ಕರೆದುಕೊಂಡು ಹೋಗ್ತೀವಿ.” ಅಂದ.

ಸೃಷ್ಟಿ ತಕ್ಷಣ ದೃಷ್ಟಿಯ ಕೈ ಹಿಡಿದು, “ನಮ್ಮ ಪುರಾವೆ ನಮ್ಮ ಕೈಯಲ್ಲೇ ಇದೆ.” ಎಂದು ಬಳೆಯನ್ನು ಎತ್ತಿ ತೋರಿಸಿದಳು. “ಬಳೆ? ಬಳೆಯಿಂದ  ಏನು ಸಾಬೀತು ಮಾಡುವಿರಿ?” ಎಂದ ಪೊಲೀಸ್. “ಹೌದು. ಇದು ಕೇವಲ ಬಳೆ ಅಲ್ಲ. ಇದು ಸತ್ಯಕ್ಕೆ ಗಂಟೆ.” ಅಷ್ಟರಲ್ಲಿ ದೃಷ್ಟಿ ತನ್ನ ನೀಲಿ ಕನ್ನಡಿಯನ್ನು ತೆಗೆದು, “ಇದು ನಿಜಕ್ಕೆ ಕನ್ನಡಿ. ಬನ್ನಿ ನಮ್ಮ ಜೊತೆ” ಅಂತ ಹೇಳಿ ಹೊರಗಡೆ ಚಂದ್ರನ ಬಿಂಬದೆಡೆ ಕರೆದುಕೊಂಡು ಹೋದರು. ದೃಷ್ಟಿ ತನ್ನ ಕನ್ನಡಿಯಿಂದ ಚಂದ್ರನ ಬೆಳಕಿನ ಬಿಂಬವನ್ನು ಸೃಷ್ಟಿಯ ಬಳೆಯೆಡೆ ಬೀರಿದಳು. ಅಷ್ಟರಲ್ಲಿ ಬಳೆ ಜೋರಾಗಿ ಝೇಂಕರಿಸಿತು. ಬಳೆಯ ಮಧ್ಯದಿಂದ ಬೆಳಕು ಹರಿದು ಮನೆಯ ಗೋಡೆಯ ಮೇಲೆ ದೊಡ್ಡ ದೃಶ್ಯ ಪ್ರೊಜೆಕ್ಟರ್ ಮೂಲಕ ಕಾಣೋ ರೀತಿಯಲ್ಲಿ ಕಾಣಿಸತೊಡಗಿತು. ಆ ದೃಶ್ಯದಲ್ಲಿ — ದೇವಸ್ಥಾನದ ಹುಂಡಿಯ ಬಳಿ ನಿಂತಿದ್ದ ಹುಡುಗಿ. ಅವಳ  ಮುಖ ಸೃಷ್ಟಿಯಂತೇ. ಕಣ್ಣು ದೃಷ್ಟಿಯಂತೇ. ಆದರೆ ಕಣ್ಣ ಮಣಿಯಲ್ಲಿ—ಹಳದಿ ಕಿರಣ. ದೃಷ್ಟಿ ನಿಧಾನವಾಗಿ: “ಇವಳು… ನಾವಲ್ಲ . ನಮ್ಮಂತೆಯೇ ಕಾಣುವ ನಮ್ಮ ಬಿಂಬ. ಕನಸಿನ ರಾಜ್ಯದಿಂದ ತಪ್ಪಿಸಿಕೊಂಡ ನಮ್ಮ ಪ್ರತಿಬಿಂಬ.” ಸೃಷ್ಟಿ ಕೋಪದಿಂದ, “ಈಗ ಆ ಬಿಂಬವನ್ನೇ ಹಿಡಿಯಬೇಕು!”. ಅಷ್ಟರಲ್ಲಿ ಆ ಹುಡುಗಿ ದೇವಸ್ಥಾನದ ಕೆರೆಯ ಕಡೆಗೆ ಹೋದಳು. ಆ ಕ್ಷಣಕ್ಕೆ, ಊರಿನ ಹೊರವಲಯದ ಕೆರೆ ಕಡೆಗೆ ಗಾಳಿ ಹರಿದಂತೆ. ಹಿತ್ತಿಲಿನಲ್ಲಿದ್ದ ಮಲ್ಲಿಗೆ ಹೂಗಳು ಒಮ್ಮೆಲೆ ತಿರುಗಿ ಕೆರೆ ದಿಕ್ಕಿಗೆ ನುಗ್ಗಿದವು. ಸೃಷ್ಟಿ, “ಎಲ್ಲರೂ ನಮ್ಮ ಜೊತೆ ಬನ್ನಿ.” ಅಂದಳು. ಪೊಲೀಸ್ ಕೂಡಲೇ: “ಎಲ್ಲಿಗೆ?”ಎಂದಾಗ, “ನಮ್ಮ ಸತ್ಯವನ್ನು ನಿಮಗೆ ತೋರಿಸೋದಿಕ್ಕೆ.” ಎಂದಳು ಸೃಷ್ಟಿ.

 ***

ಕೆರೆ ದಡಕ್ಕೆ ಬಂದಾಗ, ದೇಗುಲದ ಗಂಟೆಗಳು ತಾನಾಗಿಯೇ ಬಡಿದವು. “ಟಂಗ್… ಟಂಗ್…” ಹಿಂದಿನಂತೆ ಕೆರೆಯ ನೀರಿನಲ್ಲಿ ಮೂರು ಚಂದ್ರಬಿಂಬ ಕಾಣಿಸಿತು. ಆ ಬಿಂಬಗಳ ಮಧ್ಯೆ, ಬಿಳಿ ಹೊಗೆ ಉಬ್ಬಿ, ಆ ‘ಬಿಂಬ ಹುಡುಗಿ’ ನೀರಿನ ಮೇಲೆ ನಿಂತಂತೆ ಕಾಣಿಸಿತು. ಅವಳ ತುಟಿಯಲ್ಲಿ ನಗು: “ನಿಮ್ಮ ಜೀವನ ನಾನು. ನಿಮ್ಮ ಹೆಸರು ನಾನು. ನನ್ನನ್ನು ನಶಿಸಲು ಸಾಧ್ಯವೇ ಇಲ್ಲ” ಎಂದು ನಕ್ಕಳು. ಸೃಷ್ಟಿ: “ನೀನು ಯಾರು?” ಎಂದು ಕೇಳಿದರೆ, ಮತ್ತೆ ಜೋರಾಗಿ ನಕ್ಕು, “ನಾನು ನಿಮ್ಮ ‘ಬಿಂಬ’. ಜನರು ಸದಾ ಗೊಂದಲದಲ್ಲೇ ಇರಬೇಕು. ಇವಳು ಅವಳೋ? ಅವಳು ಇವಳೋ?—ಈ ಪ್ರಶ್ನೆಯಲ್ಲೇ ನನ್ನ ಬದುಕು.” ದೃಷ್ಟಿ ಮೃದುವಾಗಿ: “ನೀನು ಗೊಂದಲ. ಆದರೆ ನಾವು ಸಮತೋಲನ.” ಎಂದು ಹೇಳಿ, ಸೃಷ್ಟಿಯ ಕೈ ಹಿಡಿದಳು. ಸೃಷ್ಟಿ ಕೂಡಲೇ ಬಳೆಯನ್ನು ಎತ್ತಿ, “ಟಂಗ್!” ಎಂದು ಒಮ್ಮೆಲೆ ನೆಲಕ್ಕೆ ಬಡಿದಳು. ಬಾಳೆಯ ಝೇಂಕಾರ ಜೋರಾಗಿ ಗುಡುಗಿತು. ಬಿಂಬ ಹುಡುಗಿ ನಕ್ಕಳು. “ನನಗೆ ನಿಮ್ಮ ಗಂಟೆಯ ಭಯ ಇಲ್ಲ.” ಎಂದಂತೆಯೇ, ದೃಷ್ಟಿ ಕನ್ನಡಿಯನ್ನು ಎತ್ತಿ, ಬಿಂಬ ಹುಡುಗಿಯ ಮುಖಕ್ಕೆ ತೋರಿಸಿದಳು.

ಕನ್ನಡಿಯೊಳಗೆ ಬಿಂಬ ಹುಡುಗಿಯ ಪ್ರತಿಬಿಂಬ ಬಂತು…ಮಂಜಿನೊಳಗಿನ ಕಣ್ಣಿಲ್ಲದ, ಲೋಭದ ನೆರಳು. ಪೊಲೀಸರೂ, ಊರಿನವರೂ ದಿಗ್ಬ್ರಮೆ. “ಇವಳು… ಇವಳು ನಿಜವಾಗಿಯೂ ಕೇವಲ ಬಿಂಬ. ಮನುಷ್ಯೆ  ಅಲ್ಲ!” ಎಂಬ ಕೂಗು.

ಬಿಂಬ ಹುಡುಗಿ ಹಿಂತಿರುಗಿ ಕನ್ನಡಿಯಿಂದ ದೂರ ಓಡಲು ಯತ್ನಿಸಿದಳು. ನೀರಿನೊಳಗೆ ಲೀನವಾಗಲು. ಸೃಷ್ಟಿ ತಕ್ಷಣ ತನ್ನ ಬಳೆಯನ್ನು ಚಲಾಯಿಸಿ—ನೀರಿನ ಮೇಲ್ಮೈಯನ್ನು ಹೊಡೆದಳು. “ಟಂಗ್!” ನೀರಿನ ಏರಿಳಿತಕ್ಕೆ ಬೆಳಕಿನ ಬಿರುಕು ಬಂದು  ಬಿಂಬ ಹುಡುಗಿ ಆ ಬಿರುಕಿನೊಳಗೆ ಸಿಕ್ಕಿಕೊಂಡಳು. ದೃಷ್ಟಿ ತನ್ನ ಕನ್ನಡಿಯನ್ನು ನಿಧಾನವಾಗಿ ನೀರಿನ ಕಡೆ ತಗ್ಗಿಸಿ, ಮೃದುವಾಗಿ ಹೇಳಿದಳು: “ನೀನು ಗೊಂದಲವಾಗಿಯೇ ಉಳಿದರೆ ಲೋಕಕ್ಕೆ ನರಕ. ನೀನು ಕರಗಬೇಕು.” ಕನ್ನಡಿಯ ನೀಲಿ ಬೆಳಕು ಒಂದು ನುಣುಪಾದ ರೇಖೆಯಾಗಿ ಬಿಂಬ ಹುಡುಗಿಯನ್ನು ಹಸಿರು ಬಳ್ಳಿಯಂತೆ  ಸುತ್ತಿಕೊಂಡಿತು. ಬಿಂಬ ಹುಡುಗಿ ಅಳಲು ಪ್ರಾರಂಭಿಸಿದಳು. “ನಾನು ಕೂಡ ಬದುಕಬೇಕು…” ಅಂದಳು. ಆಗ ಸೃಷ್ಟಿ ಮೊದಲ ಬಾರಿಗೆ ಮೃದುವಾಗಿ: “ನೀನು ಬದುಕಬಹುದು. ಆದರೆ ನಿಜವಾಗಿ ಅಲ್ಲ. ಕೇವಲ ಬಿಂಬವಾಗಿ.”

ಅಷ್ಟರಲ್ಲಿ ದೇಗುಲದ ಶ್ವೇತವಸ್ತ್ರ ತಾಯಿ ರೂಪ ಮತ್ತೆ ಕಾಣಿಸಿಕೊಂಡಳು. “ಸೃಷ್ಟಿ, ದೃಷ್ಟಿ, ನೀವು ಸರಿಯಾಗಿ ಬಿಂಬವನ್ನು ಬಂಧಿಸಿದಿರಿ. ಬಿಂಬವನ್ನು ನಾಶಮಾಡೋದು ಸುಲಭ. ಅದಕ್ಕೆ ಜೀವನದಲ್ಲಿ ‘ಸ್ಥಳ’ ಕೊಡೋದು ಕಷ್ಟ. ಮನುಷ್ಯರ ಮನಸ್ಸಿನ ಗೊಂದಲದಿಂದ ಪ್ರತಿಬಿಂಬಗಳು ಹುಟ್ಟುವವು. ಅದನ್ನು ನಾಶ ಮಾಡದೆ, ನಮಗೆ ದಾರಿದೀಪವಾಗುವಂತೆ ಇರಿಸಿದರೆ, ಕನಸಿನ ಲೋಕಕ್ಕೆ ರೆಕ್ಕೆ ಸಿಕ್ಕಿ, ವಾಸ್ತವ್ಯ ಉಜ್ವಲವಾಗುವುದು.” ಎಂದು ತನ್ನ ಕೈ ಚಾಚಿದಳು. ನೀರಿನೊಳಗಿನ ಬಿಂಬ ಹುಡುಗಿ ನಿಧಾನವಾಗಿ ಒಂದು ಸಣ್ಣ ದೀಪವಾಗಿಬಿಟ್ಟಳು—ಮಲ್ಲಿಗೆ ಹೂವಿನಂತೆ ಮೃದುವಾಗಿ ಹೊಳೆಯುವ ದೀಪ. “ಇದು ಇಂದಿನಿಂದ ಕೆರೆಯ ದೀಪ. ಯಾರ ಮನಸ್ಸಿನಲ್ಲಿ ಗೊಂದಲ ಹೆಚ್ಚಾದರೂ, ಈ ದೀಪ ನೆನಪಿಸಲಿದೆ — ಸತ್ಯ ಒಂದು. ರೂಪ ಎರಡು - ಕನಸನ್ನು ಕಳೆದು ವಾಸ್ತವ್ಯವನ್ನು ಬೆಳಗಿಸುವುದೇ ಈ ದೀಪದ ಕರ್ತವ್ಯ.” ಎಂದಳು.

ಅಲ್ಲಿ ನೆರೆದಿದ್ದ ಅಷ್ಟೂ ಜನರಿಗೆ ಸತ್ಯದ ಅರಿವಾಯಿತು. ದೇವಿಗೆ ನಮಸ್ಕರಿಸಿ, ಆ ನಂದಾದೀಪವನ್ನು ಕೆರೆಯ ಬದಿಯಲ್ಲಿ ಸ್ಥಾಪಿಸಿ, ಅದಕ್ಕೆ ನಮಸ್ಕರಿಸಿದರು. ದೇಗುಲಕ್ಕೆ ಹೋದಾಗ ಕಳುವಾಗಿದೆ ಎಂದಿದ್ದ ವಸ್ತುಗಳು ಅದರ ಜಾಗದಲ್ಲೇ ಇದ್ದವು. ಕಾಲೇಜಿನಲ್ಲೂ ಅದೇ ನಡೆದಿತ್ತು. ಎಲ್ಲವೂ ಬಿಂಬದ ಕೆಲಸ ಎನ್ನುವುದು ಸ್ಪಷ್ಟವಾಗಿ ಬಿಟ್ಟಿತು. 

*** 

ಮನೆಗೆ ಮರಳಿದಾಗ, ಊರಿನ ಜನರು ಕಣ್ಣು ತಗ್ಗಿಸಿದರು. ಪೊಲೀಸರು ಸತ್ಯ ದಾಖಲಿಸಿದರು. “ನಿಮ್ಮಿಬ್ಬರದ್ದು ತಪ್ಪಿಲ್ಲ. ನಮ್ಮ ಊರಿನ ಜನರ ಗೊಂದಲವೇ ತಪ್ಪು.” ಎಂದು ಪಿಎಸ್ಐ ಹೇಳಿದ. 

ಸುಮಂಗಲ ಇಬ್ಬರನ್ನೂ ಬಿಗಿಯಾಗಿ ಅಪ್ಪಿಕೊಂಡು, “ನಿಮ್ಮನ್ನು ನಾನು ಹುಟ್ಟಿಸಿದೆ. ಆದರೆ ನಿಮ್ಮೊಳಗಿನ ಶಕ್ತಿ ದೇವಿಯದು.” ಎಂದು ಕಣ್ಣೀರಿಟ್ಟಳು. ಶಶಿಧರ ಹತ್ತಿರ ಬಂದು, ಮೊದಲ ಬಾರಿಗೆ ಮೌನವಾಗಿ ಇಬ್ಬರ ತಲೆಗೆ ಕೈ ಇಟ್ಟು ಆಶೀರ್ವದಿಸಿದ.

ಮಾಧವ ದೂರದಿಂದಲೇ ನೋಡುತ್ತಿದ್ದ. ಅವನ ಕೊಳಲು ಕೈಯಲ್ಲಿತ್ತು. ಸೃಷ್ಟಿ ಕಣ್ಣು ಹೊಡೆದು: “ಪ್ರೀತಿ ಗೀತಿ ಕಲಿಕೆ ನಂತರ ಅಂತ ಹೇಳಿದ್ದೀನಲ್ಲ!”
ದೃಷ್ಟಿ ನಗುತ್ತಾ: “ಆದರೆ ಕೊಳಲಿನ ಸ್ವರಕ್ಕೆ ಮನಸ್ಸು ಒಮ್ಮೆ ಕೇಳಿಸಿಕೊಳ್ಳಬಹುದು.”
ಮಾಧವ ಗಾಬರಿಯಾಗಿ: “ನಾನು… ನಾನು ಯಾರನ್ನೂ ಆಯ್ಕೆ ಮಾಡಿಲ್ಲ. ನಿಮ್ಮಿಬ್ಬರನ್ನೂ ಗೌರವಿಸುತ್ತೇನೆ.”
ಸೃಷ್ಟಿ: “ಅದೇ ಸಾಕು. ಆಯ್ಕೆ ಮಾಡೋದು ನಮ್ಮ ‘ಬಿಂಬ’ ಅಲ್ಲ. ನಮ್ಮ ‘ಬುದ್ಧಿ’.” 

ಸೃಷ್ಟಿಯ ಮಾತಿಗೆ ಎಲ್ಲರೂ ನಕ್ಕರು. ಆ ನಗೆ ಊರಿಗೆ ಹೊಸ ಬೆಳಕು ಕೊಟ್ಟಂತೆ ಆಯ್ತು.

ಆ ರಾತ್ರಿ, ಸೃಷ್ಟಿ ಮತ್ತು ದೃಷ್ಟಿ ತಮ್ಮ ಕೋಣೆಯಲ್ಲಿ ಮಲಗುವ ಮುನ್ನ ಕನ್ನಡಿಯಲ್ಲಿ ನೋಡಿಕೊಂಡರು.
ಕನ್ನಡಿಯೊಳಗೆ ಇಬ್ಬರೂ ಒಂದೇ ಮುಖ—ಆದರೂ ಕಣ್ಣಲ್ಲಿ ಬೇರೆ ಬೇರೆ ಹೊಳಪು.
ಸೃಷ್ಟಿ: “ಇವಳು ಅವಳೋ?”
ದೃಷ್ಟಿ: “ಅವಳು ಇವಳೋ?”
ಎರಡೂ ಸೇರಿ ಒಂದೇ ಉತ್ತರ:
“ನಾವು… ನಾವು.”

ಹೊರಗಡೆ ಕೆರೆಯ ದೀಪ ಮಲ್ಲಿಗೆ ಬಣ್ಣದಲ್ಲಿ ಮಿನುಗುತ್ತಿತ್ತು. ಯಾರಾದರೂ ಕಿವಿಗೊಟ್ಟರೆ, ಅದರೊಳಗೆ ಒಂದು ಸಣ್ಣ ಗಂಟೆಯ ನಾದ ಕೇಳಿಸುತ್ತಿತ್ತು—
“ಟಂಗ್… ಟಂಗ್…”
ಹೀಗೇ ಹೇಳುವಂತೆ:
ಗೊಂದಲ ಪ್ರಶ್ನೆ ಆಗಿರಬಹುದು… ಆದರೆ ಉತ್ತರ ಎಂದಿಗೂ—ಸತ್ಯವೇ.

***

 ✍🏻 Deepalaxmi Bhat
Mangaluru  

ಶನಿವಾರ, ಆಗಸ್ಟ್ 16, 2025

ಪುನರ್ಜನ್ಮ ???

✍🏻ದೀಪಲಕ್ಷ್ಮಿ ಭಟ್, ಮಂಗಳೂರು  

ಸುಮಾರು ಮೂರು ತಿಂಗಳ ಚರ್ಚೆಯ ನಂತರ ಇವತ್ತು ರಜನಿ ಮನೆಯವರೆಲ್ಲರೂ ಜೊತೆ ಸೇರಿ ಕಾಂಬೋಡಿಯಾ ದೇಶಕ್ಕೆ ಪ್ರಯಾಣ ಹೋಗುವ ನಿರ್ಧಾರಕ್ಕೆ ಬಂದಿದ್ದರು. ಮಕ್ಕಳ ಶಾಲೆಗೆ ರಜೆ ಇದ್ದ ಕಾರಣ, ಆಫೀಸಿನಿಂದ ಹತ್ತು ದಿನಗಳ ರಜೆ ತೆಗೆದುಕೊಂಡು, ಮುಂದಿನ ವಾರವೇ ಹೊರಡುವುದೆಂದು ಬೇಕಾದ ಎಲ್ಲ ವ್ಯವಸ್ಥೆಗಳನ್ನು ರಜನಿ - ಕರ್ಣ ದಂಪತಿಗಳು ಮಾಡಿಕೊಂಡರು. ಮಕ್ಕಳಾದ ರಾಖಿ ಮತ್ತು ರಾಣ - ನಾಲ್ಕೂ ಜನ ಟೂರ್ ಹೋಗುವ ನಿರ್ಧಾರ ಮಾಡಿದರು. ಮಕ್ಕಳೋ, ಹೊರದೇಶಕ್ಕೆ ಹೋಗುವ ಉತ್ಸಾಹದಲ್ಲಿ ಹಾರಾಡುತ್ತಿದ್ದರು. ರಜನಿ ಹಾಗೂ ಕರ್ಣ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡುವುದರಲ್ಲಿ ದಿನ ಇಡೀ ಓಡಾಡುತ್ತಿದ್ದರು. ಕರ್ಣ ತನ್ನ ಹೆಂಡತಿ ರಜನಿ ಹಾಗೂ ಮಕ್ಕಳಿಗೆ ಅಲ್ಲಿ ದಿನ ಕಳೆಯಲು ಅಗತ್ಯವಾದ ವಸ್ತುಗಳೇನೆಂಬುದನ್ನು ಲೆಕ್ಕ ಹಾಕಿ  ಲಿಸ್ಟ್‌ ಮಾಡಿ,  ಪಾಸ್ಪೋರ್ಟ್, ಇನ್ಶೂರೆನ್ಸ್, ಡಾಲರ್ ಎಲ್ಲವೂ ಚೆಕ್ ಮಾಡುತ್ತಿದ್ದ. ರಜನಿ ಹೋಟೆಲ್ ವ್ಯವಸ್ಥೆ, ಭಾರತೀಯ ಊಟ ಸಿಗುವ ಜಾಗ, ವೈಫೈ ಸಿಗುವ ಜಾಗ — ಎಲ್ಲವೂ ನೋಟ್ಸ್‌ನಲ್ಲಿ ಬರೆದುಕೊಂಡು ಟಿಕ್ ಮಾಡುತ್ತಾ ಇದ್ದಳು. 

ಆದರೆ, ಕಾಂಬೋಡಿಯಾ ಹೋಗುವ ನಿರ್ಧಾರ ಮಾಡಿದಾಗಿನಿಂದ ರಜನಿಗೆ ಮಾತ್ರ ಒಂದು ರೀತಿಯ ಅಸ್ಪಷ್ಟ ಭಾವನೆ - "ನಾನು ಈ ದೇಶಕ್ಕೆ ಮೊದಲೇ ಹೋಗಿದ್ದೇನೆ" ಅನ್ನುವ ಅನಿಸಿಕೆ. ಟಿಕೆಟ್ ನಲ್ಲಿ ಅಂಕೊರ್ ವಾಟ್ ದೇವಸ್ಥಾನದ ಚಿತ್ರ ನೋಡಿದ ಕ್ಷಣವೇ ಮನಸ್ಸಲ್ಲಿ ಏನೋ ಒಂದು ರೀತಿಯ ವಿಚಿತ್ರ ಅನುಭವಗಳು.  ಕಣ್ಣಲ್ಲಿ ನೀರು ತುಂಬಿ ಬಂದು ಮನಸ್ಸಿಗೆ ಏನೋ ಒಂದು ರೀತಿಯ ದುಃಖದ ಅನುಭವ. ಕಾರಣ  ತಿಳಿಯದೆ, ಮನಸ್ಸಿನಲ್ಲಿಯೇ ಭಾವನೆಗಳನ್ನು ಮುಚ್ಚಿಟ್ಟಳು. ಮಕ್ಕಳನ್ನು ಮಲಗಿಸಲು ಯತ್ನಿಸುವಾಗಲೂ, ಏನೋ ಒಂದು ರೀತಿಯ ವಿಚಿತ್ರ ದುಗುಡ ಮನಸ್ಸಿಗೆ. "ಅಲ್ಲಿ ಯಾರೋ ನನಗಾಗಿ ಕಾಯುತ್ತಿದ್ದಾರೆ!" ಎಂಬ ಭಾವನೆ. ಬೇಸರವಾಗುವಂಥದ್ದಲ್ಲವಾದರೂ, ಒಂದು ರೀತಿಯ ವಿಶೇಷವಾದ, ಮನಸ್ಸಿಗೆ ಹಿತಕರವಾದ ಭಾವನೆ. ಅಂಕೊರ್ ವಾಟ್ ದೇವಸ್ಥಾನದ ಕಪ್ಪು ಕಲ್ಲಿನ ಗೋಪುರ, ಕೆತ್ತನೆಗಳು, ತನ್ನ ನೆನಪುಗಳ ಮಡಿಲಿನಂತಿರುವ ಆ ಮೆಟ್ಟಿಲುಗಳು, ಆ ಕೆರೆಗಳಲ್ಲಿ ಅರಳಿದ ಕುಸುಮಗಳನ್ನು ಕಂಡಾಗ, ರಜನಿ ಕಣ್ಣಂಚಿನಲ್ಲಿ ನೀರು ತುಂಬಿತು. ಏಕೆ ಎನ್ನುವುದು ಇನ್ನೂ ನಿಗೂಢ!

ಅಷ್ಟರಲ್ಲೇ ಅಲ್ಲಿ ಬಂದ  ಕರ್ಣ - "ಏನಾಯ್ತು ರಜನಿ, ಕಣ್ಣಲ್ಲಿ ನೀರು ತುಂಬಿಕೊಂಡಿದ್ದೀಯಾ? ಟೂರ್ ಹೋಗಲು ಮನಸ್ಸಿಲ್ಲವೇ?" ಎಂದು ಕೇಳಿದ. "ಹಾಗೇನೂ ಇಲ್ಲ. ಕಾಂಬೋಡಿಯಾ ದೇಶದ ಚಿತ್ರ ನೋಡಿದೆನಲ್ಲ. ಏನೋ ಒಂದು ರೀತಿಯ ವಿಚಿತ್ರ ಅನುಭವ ಬರುತ್ತಿದೆ. ನಾನು ಮೊದಲೇ ಅಲ್ಲಿಗೆ ಹೋಗಿರುವ ಹಾಗೆ..." ಅಂತ ರಜನಿ ಅಂದಳು. ಅದಕ್ಕೆ  ಕರ್ಣ ಗೊಳ್ಳನೆ ನಕ್ಕು, "ಶುರು ಆಯ್ತು ನಿನ್ನ ಭ್ರಮಾಲೋಕದ ಮಹಿಮೆ" ಅಂದು ತಮಾಷೆ ಮಾಡಿದ. "ಸರಿ ಆಯ್ತು ಮಲಗೋಣ" ಅಂದಳು ರಜನಿ ಅವಳ ಭಾವನೆಗೆ ಕರ್ಣನ ಮನಸ್ಸಿನಲ್ಲಿ ಜಾಗವಿಲ್ಲ ಅಂತ ಗೊತ್ತಾಗಿ. 

***

ಫ್ನೋಮ್ ಪೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ವಿಮಾನ ತಲುಪುತ್ತಲೇ, ಅಲ್ಲಿನ ಹನಿಮಳೆ ರಜನಿ ಮನಸ್ಸಿಗೆ ಒಂದು ರೀತಿಯ ಖುಷಿ ಹಾಗೂ ತಂಪು ನೀಡಿತು. ಹೊಸ ದೇಶ ಆದರೂ ರಜನಿ ಮನಸ್ಸಿಗೆ ಒಂದು ರೀತಿಯ ಪರಿಚಿತ ಭಾವನೆ, ಸಂರಕ್ಷಿತ ಮನೋಭಾವ. "ನನ್ನ ಜನ, ನನ್ನ ಊರು" ಅನ್ನುವಷ್ಟು ಸಂತೋಷ. ಹೃದಯಕ್ಕೆ ಪರಿಚಿತವಾದ ಒಡನಾಟ. ಲಗೇಜ್ ತೆಗೆದು, ಪ್ರೀಪೇಯ್ಡ್ ಟ್ಯಾಕ್ಸಿಯಲ್ಲಿ ಸಿಯೇಮ್ ರೀಪ್ ಕಡೆ ರಜನಿ, ಕರ್ಣ ಹಾಗೂ ಮಕ್ಕಳು ಹೊರಟರು. ಮಕ್ಕಳಿಗಂತೂ ತಡೆಯಲಾಗದಷ್ಟು ಸಂತೋಷ. ಸಾಹಸದ ಮನೋಭಾವ. ಕರ್ಣ ನಮ್ಮ ಸುರಕ್ಷತೆ ಹಾಗೂ ಹೋಟೆಲ್ ಗೆ ಸೇರುವ ಜವಾಬ್ದಾರಿಯಲ್ಲಿ ತೊಡಗಿದ್ದ. ರಜನಿಗೆ, ಒಂದು ರೀತಿಯಲ್ಲಿ ತನ್ನ ಹುಟ್ಟೂರಿಗೆ ಹಿಂದಿರುಗಿದ ಹಾಗೆ ಮನಸ್ಥಿತಿ. ಹೋಟೆಲ್ ಇದ್ದ ಪ್ರದೇಶ ತಲುಪುತ್ತಲೇ, ಕೆಳಗಿಳಿದ ರಜನಿಗೆ ರಸ್ತೆಬದಿಯಲ್ಲಿ ಹೂ ಮಾರುತ್ತಿದ್ದ ಹುಡುಗಿಯ ಮೇಲೆ ಕಣ್ಣು ಹಾಯಿತು. ಪರಿಚಿತಳೆಂಬಂತೆ ಮಂದಹಾಸ ಬೀರಿದ ಆ ಹುಡುಗಿ, "ಸ್ವಾಕೋಮ್ ಕಾರ್ ತ್ರಾಲ್ಭ್ಮೊಕ್ವಿನ್ಚ್" ಅಂತ ಹೇಳಿದಳು. ಆ ಶಬ್ದ ಕೇಳುತ್ತಲೇ, ರಜನಿಗೆ ಆ ಭಾಷೆ ತನಗೆ ತಿಳಿದಿದೆ ಅನ್ನುವ ಹಾಗೆ ಭಾಸವಾಯಿತು. ಯಾಕೆ ಆ ಹುಡುಗಿ "ಮರಳಿ ಸ್ವಾಗತ" ಅಂದಳು ಅಂತ ಗೊತಾಗಲಿಲ್ಲ. "ಏನೋ ಇದೆ. ತನ್ನ ಅನುಭವಕ್ಕೆ ಬರುತ್ತಿದ್ದ ಭಾವನೆಗಳಿಗೆ ಏನೋ ಒಂದು ಅರ್ಥ ಇದೆ" ಅಂತ ರಜನಿಗೆ  ಮನದಟ್ಟಾಯಿತು. ಆದರೆ ಅದೇನು ಅಂತ ಮಾತ್ರ ತಿಳಿಯಲಿಲ್ಲ.

ಹೋಟೆಲ್‌ ಬಾಲ್ಕನಿಯಲ್ಲಿ ರಾತ್ರಿ ನಿಂತಿರುವಾಗ ದೂರದಲ್ಲಿ ಒಂದು ಘಂಟೆಯ “ಟಂಗ್… ಟಂಗ್…” ಶಬ್ದ ಕೇಳುತ್ತಿತ್ತು. ಆ ಶಬ್ದ ರಜನಿ ಕಿವಿಗೆ ಕಾಲದ ಮಿಡಿತ ಎಂಬಂತೆ ಎನಿಸಿತು. ಸ್ವಲ್ಪ ಹೊತ್ತು  ಕಣ್ಣು ಮುಚ್ಚಿ ನಿಂತಳು. ತಕ್ಷಣ, ಮೆರವಣಿಗೆಯೊಂದು ಅವಳ ಕಣ್ಣೆದುರಲ್ಲಿ - ಸುಂದರವಾದ ದೀಪಗಳ ಸಾಲು, ಸುಗಂಧಿತವಾದ ಕುಸುಮಗಳ ಇಂಪಾದ ಗಾಳಿ, ಹಳದಿ–ಕೆಂಪು–ಹಸಿರು ಬಾವುಟಗಳು… ಯಾರೋ ಅವಳ ಕೈ ಹಿಡಿದು “ಮಹಾರಾಣಿ…” ಎಂದು ಕರೆಯುತ್ತಿರುವ ಶಬ್ದ.. ಆ ಕೂಡಲೇ ಬೆಚ್ಚಿ ಬಿದ್ದಂತೆ ಕಣ್ಣು ತೆರೆದಳು. “ವಿಚಿತ್ರವಲ್ಲವೇ?” ಎಂದು ತನ್ನ ಮನಸ್ಸಿನಲ್ಲಿಯೇ ಹೇಳಿಕೊಂಡು ಕರ್ಣ ಹೇಳಿದಂತೆ ತನಗೆ ಭ್ರಮೆ ಇರಬಹುದು ಎಂದುಕೊಂಡು ನಗು ಬೀರಿದಳು.  

***

 

ಮರುದಿನ ಬೆಳಿಗ್ಗೆ ಬೇಗನೆ ಎದ್ದು ಹೊರತು ನಿಂತಾಗ ರಜನಿಗೆ  ತಿಳಿಯದ ಏನೋ ಒಂದು ಉತ್ಸಾಹ. ಹೋಟೆಲ್ ನಿಂದ ಅಂಕೊರ್ ವಾಟ್ ಕಡೆಗೆ ಕ್ಯಾಬ್ ಹೊರಟಿದೆ. ದಾರಿಯುದ್ದಕ್ಕೂ ಹಸಿರಿನ ತೋರಣ ಕಟ್ಟಿರುವಂತೆ ಕಾಣುತ್ತಿದ್ದ ಮರಗಿಡಗಳ ಸಾಲು ರಜನಿಯನ್ನು ಸ್ವಾಗತಿಸುತ್ತಿರುವಂತೆ ಕಾಣುತ್ತಿತ್ತು. ಅಂಕೊರ್ ವಾಟ್ ದೇವಸ್ಥಾನದ ಮುಖ್ಯ ಗೋಪುರ ತಲುಪುತ್ತಲೇ, ರಜನಿಗೆ ದಾರಿಯ ಎರಡೂ ಬದಿಯಲ್ಲಿದ್ದ ಕಲ್ಲಿನ ವಿಗ್ರಹಗಳಿಗೆ ಜೀವ ಬಂದು ಅವಳ ಕಡೆ ನೋಡುತ್ತಾ ಮಂದಹಾಸ ಬೀರಿ ತಲೆಬಾಗಿಸುತ್ತಿರುವಂತೆ ಭಾಸವಾಯಿತು. ದಾರಿಯುದ್ದಕ್ಕೂ ಬಿದ್ದಿದ್ದ ತರಗೆಲೆಗಳು, ಹೂವಿನ ಹಾದಿಯಂತೆ ಕಾಣಿಸಿತು. ಅಂಕೊರ್ ವಾಟ್ ದೇವಸ್ಥಾನದ ಬೃಹತ್ ಗೋಪುರಗಳ ನೆರಳಿನಲ್ಲಿ ಪ್ರವೇಶದ ಸೇತುವೆ, ತಿಳಿಯಾದ ನೀರಿನ ಮೇಲೆ ಮೇಘಗಳ ಪ್ರತಿಬಿಂಬ ಕಣ್ತುಂಬುವ ಸೌಂದರ್ಯ ಬಿಂಬಿಸುತ್ತಿತ್ತು. ನಮ್ಮ ಗೈಡ್ - "ಇದು ಖ್ಮೇರ್ ಸಾಮ್ರಾಜ್ಯದ ತೇಜಸ್ಸು. ಇಲ್ಲಿನ ಗೋಡೆಗಳಲ್ಲಿ  ಭಸ್ಮ, ಗಂಧಕ, ನೀಲಿ ಕಲ್ಲಿನಿಂದ ಮಾಡಿದ ಹಿಂದೂ ಸಂಪ್ರದಾಯದ ಪುರಾಣ ಇತಿಹಾಸ ತಿಳಿಸುವ ಅನೇಕ ಚಿತ್ರಗಳಿವೆ." ಎಂದು ಹೇಳುತ್ತಾ ನಮ್ಮನ್ನು ಒಳಗೆ ಕರೆದುಕೊಂಡು ಹೋದ. ನನಗೆ ಈ ಎಲ್ಲ ವಿಷಯಗಳು ಮೊದಲೇ ತಿಳಿದ ಹಾಗೆ, ನಾನು ವರ್ಷಾನುವರ್ಷಗಳ ಕಾಲ ಈ ಜಾಗದಲ್ಲೆಲ್ಲ ತಿರುಗಾಡಿದ್ದವಳ ಹಾಗೆ ಅನ್ನಿಸುತಿತ್ತು. ರಜನಿ ಕರ್ಣನಲ್ಲಿ "ನನಗೆ ಈ ದಾರಿ ಇಲ್ಲಿನ ಇತಿಹಾಸ ಎಲ್ಲ ತಿಳಿದ ಹಾಗೆ ಅನ್ನಿಸುತ್ತಿದೆ" ಅಂದಳು. ಮತ್ತೆ ಕರ್ಣ ನಕ್ಕು, ಸುಮ್ಮನೆ ಗೈಡ್ ಹೇಳುತ್ತಿರುವುದನ್ನು ಕೇಳಿಸಿಕೋ.." ಅಂತ ಮಾತು ಹಾರಿಸಿದ. 

ಅಂಕೊರ್ ಥಾಮ್ ಬಳಿ ಬಂದಾಗ, ಅಲ್ಲಿನ ಪ್ರವೇಶ ದ್ವಾರದ ಬಲಬದಿಯ ಕಲ್ಲಿನ ಕೆತ್ತನೆ ನೋಡಿದ ಕೂಡಲೇ "ಇದು ಸಮುದ್ರ ಮಥನದ ದೃಶ್ಯ. ಇಲ್ಲಿ ನಮ್ಮವರು ಕಷ್ಟ ಕಾಲದಲ್ಲಿ ಗೋಧಿ ಸಂಗ್ರಹಿಸುತ್ತಿದ್ದರು." ಅಂತ ಖ್ಮೇರ್-ಕನ್ನಡ ಮಿಶ್ರಿತ ಭಾಷೆಯಲ್ಲಿ ಯಾರೋ ಪಿಸುಗುಟ್ಟಿದಂತೆ ರಜನಿಗೆ ಅನಿಸಿತು. ರಜನಿ ಅದನ್ನು ಕರ್ಣನಿಗೆ ಹೇಳಿದಳು. ಗೈಡ್ ಅದು ನಿಜ ಎಂದು ಹೇಳಿದಾಗ ಕರ್ಣನಿಗೆ ಅಚ್ಚರಿ ಆಯಿತು. ಮಂಟಪದೊಳಗೆ ಪ್ರವೇಶಿಸಿದಂತೆ, ತಂಪಾಗಿದ್ದ ಗಾಳಿ ಬಿಸಿಯಾಗತೊಡಗಿತು. ರಜನಿ ಮೂಗಿಗೆ ಶ್ರೀಗಂಧದ ಸುಗಂಧ, ಪಾರಿಜಾತ, ತಾವರೆ ಪುಷ್ಪಗಳ ಪರಿಮಳ ಬರತೊಡಗಿತು. ಸಮುದ್ರ ಮಥನದ ದೃಶ್ಯ, ಅಸುರ-ದೇವರುಗಳ ಜಗ್ಗಾಟ, ಇತ್ಯಾದಿಗಳ ಕೆತ್ತನೆಗಳನ್ನು ಸ್ಪರ್ಶಿಸಿದಾಗ, ಒಂದು ರೀತಿಯ ವಿದ್ಯುತ್ ಹರಿದಂತಾಯಿತು. ರಜನಿಯ ನಡುಗೆ ನಿಧಾನಿಸಿತು. ರಜನಿ ಕಿವಿಗೆ "ಮ್ಹಕ್ಸಅತ್ರೇಯಿ, ಎಉಂಗ್ ಟೀಅಂಗೊಲಾಸಕ್ನೆಯಾ ಕಂಪೌಂಗ್ ಎಂಗ್ಚಾಮ್ ಅನಕ್ (ಮಹಾರಾಣಿ, ನಾವೆಲ್ಲರೂ ನಿಮಗಾಗಿ ಕಾಯುತ್ತಿದ್ದೇವೆ.)" ಅಂತ ಕೂಗಿದ ಹಾಗೆ ಕೇಳಿಸಿತು. ರಜನಿ ದೇಹವೆಲ್ಲ ಹಗುರ ಆದ ಹಾಗೆ ಆಗಿ, ಅಲ್ಲೇ ಕುಸಿದು ಕುಳಿತಳು. "ಮೇಡಂ, ಆರ್ ಯು ಓಕೆ?" ಅಂತ ಗೈಡ್ ನೀರಿನ ಬಾಟಲಿಯನ್ನು ರಜನಿ ಕೈಗಿತ್ತ. ಮಕ್ಕಳು ಸೆಲ್ಫೀ ತೆಗೆದುಕೊಳ್ಳುವಲ್ಲಿ ತೊಡಗಿಸಿಕೊಂಡಿದ್ದರು. "ಕೋಮ್ ಕ್ಲ್ಯಾಚ್, ಖಾಣ್ಹೋಮ್ ತ್ರಾಲ್ಬ್ ಮೊಕ್ವಿನ್ಚ್ ಹಎಯ್" ಅಂತ ರಜನಿ ಗ್ರಾಮೀಣ ಖ್ಮೇರ್ ಭಾಷೆಯಲ್ಲಿ ಉಲಿದಳು. "ಹೆದರಬೇಡ. ನಾನು ಹಿಂದಿರುಗಿ ಬಂದಿದ್ದೇನೆ" ಅಂತ ಅದರರ್ಥ. ಅದನ್ನು ಅವಳ ಬಾಯಿಂದ ಕೇಳಿದ ಗೈಡ್ ಗೆ ಅಚ್ಚರಿಯಾಗಿ ಗಾಬರಿಗೊಂಡ. "ರಜನಿ, ಸ್ಟಾಪ್ ಇಟ್. ಸುಮ್ಮನೆ ಭಯ ಹುಟ್ಟಿಸಬೇಡ." ಅಂತ ಕರ್ಣ ಹೇಳಿದ.

ಅಷ್ಟರಲ್ಲಿ ಸೆಲ್ಫೀ ತೆಗೆದುಕೊಂಡ ಮಕ್ಕಳು ರಜನಿ ಕಡೆ ಓದಿ ಬಂದು, "ಅಮ್ಮಾ, ಇಲ್ಲಿ ನೋಡು ವಿಷ್ಣು ದೇವರ ವಿಗ್ರಹ" ಅಂದರು.  ಅಲ್ಲೇ ಪಕ್ಕದಲ್ಲಿ, ರಾಣಿ ಇಂದ್ರಾದೇವಿಯ ವಿಗ್ರಹವನ್ನು ಗೈಡ್ ತೋರಿಸಿದ. ಮಕ್ಕಳು ಆ ವಿಗ್ರಹ ನೋಡುತ್ತಲೇ, "ಈ ವಿಗ್ರಹದ ಮುಖ ಕಣ್ಣು ನೋಡು ಅಮ್ಮನ ಹಾಗೆ ಇದೆ" ಅಂದರು. ಇಂದ್ರಾದೇವಿ ಬುದ್ಧಿವಂತಿಕೆ, ಕೃಷಿ ಮತ್ತು ರಾಜ್ಯ ವ್ಯವಹಾರಗಳ ಮೇಲಿನ ಪ್ರಭಾವಕ್ಕೆ ಹೆಸರುವಾಸಿಯಾಗಿದ್ದಳು. ಸಾಹಿತ್ಯದಲ್ಲಿ ಆಸಕ್ತಿ ಇದ್ದ ಅವಳು ಹಲವಾರು ಕವಿತೆಗಳನ್ನು ರಚಿಸಿದ್ದಳೆಂದೂ ಅವಳನ್ನು "ಕಾಂಬೋಡಿಯಾದಲ್ಲಿ ಅತ್ಯಂತ ಹಳೆಯ ಮಹಿಳಾ ಕವಿ" ಎಂದು ಪರಿಗಣಿಸಲಾಗಿದೆ. ಹಾಗೆ ಮುಂದೆ ನಡೆದಾಗ, ಪಶ್ಚಿಮ ದ್ವಾರದ ಬಳಿ ಸಣ್ಣದೊಂದು ಮಂಟಪದ ಒಳಗೆ ಕಾಲಿಟ್ಟಾಗ, ಅಲ್ಲೇ ಬಿದ್ದಿರುವ ಒಂದು ಒಣಗಿದ ರೀತಿಯ ಹೂವು ರಜನಿ ಕಣ್ಣಿಗೆ ಬಿತ್ತು. ಅದನ್ನು ಎತ್ತಿಕೊಂಡು, "ಇದು ನಮ್ಮ ಮನೆ ದೇವರಿಗೆ ಅರ್ಪಿಸುತ್ತಿದ್ದ ಹೂವಲ್ಲವೇ?" ಅಂತ ಕೇಳಿದಳು. ಆಗ ಅವಳೆದುರಿಗೆ ನಿಂತಿದ್ದ ಸ್ಥಳೀಯ ವೃದ್ಧನೊಬ್ಬ - "ನೀವು ಇಲ್ಲಿನವರೇನಾ? ಈ ಹೂವು ಇಲ್ಲಿ ಬಿಟ್ಟರೆ ಬೇರೆ ಯಾವ ಕಡೆಯೂ ಆಗುವುದಿಲ್ಲ. ಇದು ಇಲ್ಲಿಯ ವಿಶೇಷ ಹೂವು" ಅಂತ ಖ್ಮೇರ್ ಭಾಷೆಯಲ್ಲಿಯೇ ಹೇಳಿದ್ದನ್ನು ಗೈಡ್ ಆಂಗ್ಲ ಭಾಷೆಗೆ ಅನುವಾದಿಸಿದ. ಅವರ ಭಾಷೆಯಲ್ಲೇ ಹೇಳಿದ್ದು ರಜನಿಗೆ  ಅರ್ಥವಾಗಿದ್ದು ಸೋಜಿಗ. ರಜನಿ ಉತ್ತರ ಕೊಡದೆ, ಆ ಒಣಗಿದ ಹೂವನ್ನು ಕೈಯಲ್ಲೇ ಹಿಡಿದುಕೊಂಡು ಕಣ್ಣು ಮುಚ್ಚಿದಳು. ಅವಳ ಮನಸ್ಸಿನಲ್ಲೇ, ಅಜ್ಞಾತ ಭಾಷೆಯ ಪದ್ಯವೊಂದು ತುಟಿಗಳಲ್ಲಿ ಮಿಡಿಯಿತು. ಅದನ್ನು ಕೇಳಿದ ವೃದ್ಧ, "ಇದು ನಿಮಗೆ ಹೇಗೆ ಗೊತ್ತು. ಇದು ರಾಣಿ ಇಂದ್ರಾದೇವಿ ರಚಿಸಿದ್ದ ಕವಿತೆ" ಅಂತ ಹೇಳಿದ. ಅವನ ಮಾತುಗಳನ್ನು ಅನುವಾದಿಸಿದ ಗೈಡ್ ಗೂ, ಕರ್ಣ ಹಾಗೂ ಮಕ್ಕಳಿಗೂ ಆಶ್ಚರ್ಯವಾಯಿತು. ರಜನಿ ಏನೂ ಹೇಳದೆ, ಮುಂದೆ ನಡೆದಳು. ಈಗ ಅವಳಿಗೆ ಭಯವೂ ಇರಲಿಲ್ಲ, ಮುಜುಗರವೂ ಆಗಲಿಲ್ಲ. ತನ್ನ ಹಿಂದಿನ ಜನ್ಮದ ಅರಿವು ಮೂಡಿದಂತೆ, ಆತ್ಮವಿಶ್ವಾಸದಿಂದ ಮುನ್ನಡೆದಳು. 

***

ಅಲ್ಲಿಂದ ಅವರೆಲ್ಲರೂ ತಾ ಫ್ರೋಮ್ ಗೆ ಹೋದರು. ಅಲ್ಲಿನ ಗೋಡೆಗಳನ್ನು ಚುಂಬಿಸಿ ಬಿಗಿಯಾಗಿ ಅಪ್ಪಿಕೊಂಡಂತಿದ್ದ ಮರಗಳ ಬೇರುಗಳು, ಸುಂದರವಾಗಿ ಆವರಿಸಿಕೊಂಡ ಮರಗಳ ನಡುವೆ ಇದ್ದ ಮಂಟಪಗಳನ್ನು ನೋಡಿ ಕಣ್ತುಂಬಿಸಿಕೊಳ್ಳುತ್ತಿರುವಾಗ, ರಜನಿ ಮನಸ್ಸಲ್ಲಿ ಮತ್ತೆ ಅದೇ ಭಾವನೆಗಳ ಚೆಲ್ಲಾಟ. ಹಸಿರು ಬಳ್ಳಿ ಸುತ್ತುವರಿದಿದ್ದ ಆ ಮಂಟಪಗಳ ಸೌಂದರ್ಯ ಮನಸ್ಸಿಗೆ ಹಿತ ನೀಡುವಂತಿತ್ತು. ಅಷ್ಟರಲ್ಲಿ ಸ್ಥಳೀಯ ಹೆಂಗಸೊಬ್ಬಳು, ಕಬ್ಬಿಣ ಹಾಗೂ ಸ್ಥಳದ ಲೋಹಗಳಿಂದ ತಯಾರಿಸಿದ ಉಂಗುರಗಳ ಬುಟ್ಟಿಯೊಂದನ್ನು ಹಿಡಿದುಕೊಂಡು ಬಂದು, ರಜನಿಯನ್ನು ನೋಡುತ್ತಲೇ, "ಮ್ಹಕ್ಸಅತ್ರೇಯಿ, ಮ್ಹಕ್ಸಅತ್ರೇಯಿ (ಮಹಾರಾಣಿ, ಮಹಾರಾಣಿ)" ಅಂತ ಕೂಗಿಕೊಂಡು ಓಡಿ ಓಡಿ  ಬಂದಳು. ಅಲ್ಲಿನ ರಾಜ ಚಿಹ್ನೆಗಳನ್ನೊಳಗೊಂಡ ಉಂಗುರವೊಂದನ್ನು ಆರಿಸಿ, ಹಸಿರು, ಕೆಂಪು ನೀಲಿ ಬಣ್ಣಗಳ ದಾರದಿಂದ ತಯಾರಿಸಿದ ಮಣಿಕಟ್ಟಿನ ಪಟ್ಟಿಯೊಂದನ್ನು ತೆಗೆದು, ತನ್ನ ಎರಡೂ ಕಣ್ಣುಗಳಿಗೆ ಒತ್ತಿ, ರಜನಿ ಹೃದಯ ಭಾಗದಲ್ಲಿರಿಸಿ, "ನೀನ್ಯಾರೆಂದು ಜ್ಞಾಪಿಸಿಕೋ" ಎಂಬಂತೆ ಕಣ್ಸನ್ನೆ ಮಾಡಿ ಅವಳ ಕೈಗೆ ಆ ದಾರವನ್ನು ಕಟ್ಟಿದಳು. ಉಂಗುರವನ್ನೂ ತೊಡಿಸಿದಳು. "ಈಗ ನೋಡು ದುಡ್ಡು ಕೇಳ್ತಾಳೆ" ಅಂತ ಕರ್ಣ ಹೇಳಿದ. ಆದರೆ ಆ ಹೆಂಗಸು ದುಡ್ಡು ಕೇಳದೆ, "ಇನ್ನೆಷ್ಟು ದಿನ ಇದ್ದಿರಮ್ಮ" ಅಂತ ಖ್ಮೇರ್ ಭಾಷೆಯಲ್ಲಿ ಕೇಳಿದಳು. ರಜನಿ "ಎರಡು ದಿನ" ಎಂಬಂತೆ ಕೈ ಸನ್ನೆ ಮಾಡಿದಳು. "ಬಾಂತೇಯ್ ಸ್ರೀ" ಅಂತ ಒಂದು ಜಾಗದ ಹೆಸರು ಹೇಳಿ ಆ ಹೆಂಗಸು ಅಲ್ಲಿಂದ ಹೊರಟು ಹೋದಳು. 

ಹೋಟೆಲ್‌ಗೆ ಹಿಂದಿರುಗುವಾಗ ಲಾಬಿಯಲ್ಲಿ ನುಡಿಸುತ್ತಿದ್ದ ಪಿಯಾನೋ ಧ್ವನಿ ಪ್ರತಿಧ್ವನಿಸುತ್ತಿತ್ತು. ಮೈ ಮರೆತು ನಿಂತಿದ್ದ ರಜನಿ ಕಂಡು ಕರ್ಣ ಕೇಳಿದ: “ಯಾಕೋ ನೀನು ಇವತ್ತು… ನೀನಾಗಿಲ್ಲ. ಏನೋ ಬೇರೆ ರೀತಿ ವರ್ತಿಸುತ್ತಿದ್ದಿ.” ಉತ್ತರವಾಗಿ ರಜನಿ, “ನಾನು ಯಾರೋ…” ಎಂದು ನಕ್ಕಳು. “ಬನ್ನಿ. ನಾಳೆ ಬಾಂತೇಯ್ ಸ್ರೀಗೆ ಹೋಗೋಣ.”. ಅಂದಿನ ತಿರುಗಾಟದಿಂದ ಸುಸ್ತಾಗಿ ಎಲ್ಲರೂ ಬೇಗನೆ ನಿದ್ದೆಗೆ ಜಾರಿದರು. 

***

ಬಾಂತೇಯ್ ಸ್ರೀ  - ಗುಲಾಬಿ ಗೋಲ್ಡನ್ ಬಣ್ಣದ ಮರಳುಗಲ್ಲಿನಿಂದ ಕಟ್ಟಿಸಿದ ದೇವಾಲಯ. ಸಣ್ಣ ದೇವಾಲಯವಾದರೂ ಸುಂದರವಾದ ಕವಿತೆಯಲ್ಲಿ ವರ್ಣಿಸಲು ಹೇಳಿ ಮಾಡಿದ ದೇವಾಲಯ. ನಡೆದುಕೊಂಡು ಹೋಗುವ ದಾರಿಯುದ್ದಕ್ಕೂ, ಪ್ರಕೃತಿ ಸಹಜವಾಗಿ ನಿರ್ಮಿತವಾದ ಹೂಗಳ ತೋರಣ, ರಜನಿ ನಡೆಯುವ ದಾರಿಯುದ್ದಕ್ಕೂ ಪುಷ್ಪವೃಷ್ಟಿ ಮಾಡಿ ಬರಮಾಡಿಕೊಂಡಂತೆ ಭಾಸವಾಗುತ್ತಿತ್ತು. ದೇವಾಲಯದೊಳಗೆ ಸೂರ್ಯನ ಕಿರಣ ಚಿನ್ನದ ಮುಕುಟದಲ್ಲಿ ಅಲಂಕರಿಸಿದಂತೆ ಕಾಣಿಸುತ್ತಿತ್ತು. ರಾಣಾ ಆಟವಾಡುತ್ತ ಒಂದೆಡೆ ಕುಳಿತುಕೊಳ್ಳಲು ಹೋದಾಗ ರಜನಿ, ಅಲ್ಲೆಲ್ಲ ಕುಳಿತುಕೊಳ್ಳಬಾರದು. ಜೋಕೆ" ಅಂದಳು. ಗೈಡ್ ಅಲ್ಲೇ ನೋಡುತ್ತಿದ್ದವನು, "ಹೌದು ಮೇಡಂ, ಆ ಜಾಗದಲ್ಲಿ ಕುಳಿತುಕೊಳ್ಳುವುದು ಅಮಾನ್ಯವಾಗಿದೆ. ಹಿಂದಿನ ಯುಗದಲ್ಲಿ, ಆ ಜಾಗದಲ್ಲಿ, ದೇವರನ್ನು ಇರಿಸಿ ಪೂಜಿಸಲಾಗುತ್ತಿತ್ತು." ಅಂದನು. ರಾಣಾ, ರಾಖಿ ಹಾಗೂ ಕರ್ಣ ಆಶ್ಚರ್ಯಗೊಂಡು ರಜನಿಯನ್ನೊಮ್ಮೆ ಪ್ರಶ್ನಾರ್ಥಕವಾಗಿ ನೋಡಿದರು. "ಅಮ್ಮಾ, ನಿಂಗೆ ಇದೆಲ್ಲ ಹೇಗೆ ಗೊತ್ತು?" ಅಂತ ರಾಖಿ ಪ್ರಶ್ನಿಸಿದಳು. ಅಷ್ಟು ಹೊತ್ತಿಗೆ ರಜನಿ ಕಣ್ಣು, ಮುಖ್ಯದ್ವಾರದ ಕಂಬಗಳ ನಡುವೆ ಇದ್ದ ಅಕ್ಷರಗಳ ಕಡೆ ಹೋಯಿತು. ಭಾಷೆ ಬೇರೆ ಆದರೂ, ರಜನಿ ಅದನ್ನು ಓದಿದಳು. "ಮಲ್ಲಿಕಾ" ಅಂತ ಹೇಳುತ್ತಾ ಕುಸಿದಳು. 

ಅವಳ ಕಣ್ಣೆದುರಿಗೆ ದೃಶ್ಯ ಬಂತು - ಬಿಳಿ ಬಣ್ಣದ ಮಹಾರಾಣಿಯರು ಹಾಕುವಂಥ ಬಟ್ಟೆ ಧರಿಸಿಕೊಂಡು ತಾನು ಮಂಟಪದಲ್ಲಿ ಕುಳಿತಿದ್ದಳು. ಅವಳ ಎದುರಿಗೆ ಒಂದು ಪುಟ್ಟ ಹುಡುಗಿ ಆಟವಾಡುತ್ತಿದ್ದಳು. "ಮಲ್ಲಿಕಾ, ಇಲ್ಲಿ ಬಾ" ಅಂತ ಆ ರಾಣಿ ಕೂಗಿದಳು. ಪ್ರೀತಿಯಿಂದ ಅಪ್ಪಿಕೊಂಡು ಅವಳಿಗೆಂದು ತಾನೇ ಕೈಯಾರೆ ತಯಾರಿಸಿದ ಕೆಂಪು ಮಣಿಗಳ ಹಾರ, ಕೆಂಪು ಹೂಗಳ ಮಾಲೆಯಿಂದ ಅವಳ ಕೇಶವನ್ನು ಅಲಂಕರಿಸಿದಳು. ಅಷ್ಟರಲ್ಲಿ ಹೊರಗೆ ಆಕ್ರೋಶದಿಂದ ಮುಗಿಬಿದ್ದ ಜನಜಂಗುಳಿ, ಕತ್ತಿಯಿಂದ ಎದುರಿದ್ದ ಎಲ್ಲರನ್ನೂ ಇರಿಯಲು ಪ್ರಾರಂಭಿಸಿದರು. 

ಅಷ್ಟರಲ್ಲಿ ಕರ್ಣ ಬಂದು, ಅವಳ ಕೈ ಹಿಡಿದು, "ಬಾ ಹೊರಗೆ. ಇಲ್ಲಿ ಕುಳಿತುಕೋ." ಅಂದ. ಗೈಡ್ ನೀರು ಕೊಟ್ಟು, "ಆರ್ ಯು ಫೈನ್?" ಅಂತ ಪ್ರಶ್ನಿಸಿದ. ರಜನಿ - "ಯಸ್. ನಾನು ಹುಷಾರಾಗಿದ್ದೇನೆ. ನನಗೆ ಏನೋ ಎಲ್ಲ ನೆನಪಾಗತಿದೆ" ಅಂತ ಹೇಳಿ ಕಣ್ಣೀರಿಳಿಸಿದಳು. ಅದಕ್ಕೆ ಗೈಡ್ ಗಾಬರಿಗೊಂಡು, "ಇಲ್ಲಿನ ರಾಣಿ ಇಂದ್ರಾದೇವಿಗೆ ಮಕ್ಕಳಿರಲಿಲ್ಲ. ಹಾಗಾಗಿ ಅವಳು ಅನೇಕ ಹುಡುಗಿಯರನ್ನು ತನ್ನ ಮಕ್ಕಳಂತೆ ಸಾಕಿದ್ದಳು. ಅದರಲ್ಲಿ ಅವಳಿಗೆ ಅತಿ ಪ್ರಿಯಳಾದವಳು ಮಲ್ಲಿಕಾ." ಅಂದಾಗ ಕರ್ಣನ ಕಣ್ಣು ಆಶ್ಚರ್ಯದಿಂದ ಅರಳಿತು.  

“ಇಲ್ಲಿ ಯಾರಾದರೂ… ಈ ದೇವಾಲಯದ ಹಿಂದಿನ ಕಥೆ… ರಾಜಕುಮಾರಿ ಮಲ್ಲಿಕಾಳ ಬಗ್ಗೆ ಹೇಳ್ತೀರಾ?” ಎಂದು ರಜನಿ ಅಂಗಲಾಚಿದಳು. ಆಗ ಅಲ್ಲೇ ಇದ್ದ ಉಂಗುರ ನೀಡಿದ್ದ ಹೆಂಗಸು ಓಡಿ ಬಂದಳು. ಅವಳಿಗೆ ತಿಳಿದ ಖ್ಮೇರ್ ಮಿಶ್ರಿತ ಇಂಗ್ಲಿಷ್ ಭಾಷೆಯಲ್ಲಿ ಕಥೆ ಹೇಳಿದಳು. "ಆ ದಿನ ರಾಣಿ ತನ್ನ ಪ್ರೀತಿಯ ರಾಜಕುಮಾರಿ ಮಲ್ಲಿಕಾಳ ಜೊತೆ ಇದೇ  ಜಾಗದಲ್ಲಿದ್ದಾಗ, ಹಲವಾರು ರೊಚ್ಚಿಗೆದ್ದ ಜನರ ದಾಳಿ ನಡೆಯಿತು. ರಾಣಿ ತನ್ನ ಶಕ್ತಿ ಎಲ್ಲವನ್ನೂ ಉಪಯೋಗಿಸಿ ಯುದ್ಧ ಮಾಡಿದರೂ, ಮಲ್ಲಿಕಾಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯುದ್ಧ ನಿಂತುಹೋದರೂ, ಮಲ್ಲಿಕಾಳ ದೇಹ ಮಾತ್ರ ಯಾರಿಗೂ ಸಿಗಲಿಲ್ಲ. ಆ ಕೊರಗಿನಲ್ಲಿ ರಾಣಿ ತನ್ನ ಜೀವಮಾನ ಇಡೀ ಕಳೆದಿದ್ದಳು." ಈಗ ರಜನಿಗೆ ತನ್ನ ಮನಸ್ಸಿನೊಳಗೆ ಆಗುತ್ತಿದ್ದ ದುಗುಡ, ಭಾವನೆಗಳಿಗೆ ಅರ್ಥ ದೊರೆತಂತಾಯಿತು. 

***

ಟೋನ್‌ಲೆ ಸಾಪ್ ಕೆರೆಯ ತೀರದಲ್ಲಿ ಸಂಜೆ ಎಲ್ಲರೂ ಕುಳಿತಿದ್ದರು. ತಾಮ್ರದ ಬಣ್ಣದಲ್ಲಿ ಹೊಳೆಯುತ್ತಿದ್ದ ಸೂರ್ಯನ ಕಿರಣಗಳು, ನೀರಿನ ಅಲೆಗಳಲ್ಲಿ ಬೆಳ್ಳಿಯ ಬಣ್ಣದ ಬಳೆಗಳನ್ನು ಸೃಷ್ಟಿಸುವಂತೆ ಕಾಣುತ್ತಿತ್ತು. ಸೂರ್ಯಾಸ್ತವಾದ ಬಾಳಿಕೆ ಬೋಟ್ ಮೂಲಕ  ಹೋಟೆಲಿಗೆ ಹಿಂದಿರುಗುತ್ತಿದ್ದ ವೇಳೆಗೆ, ಕರ್ಣ ರಜನಿಯ ಗೊಂದಲಗಳಿಗೆ ಉಪ್ಪು ಸುರಿಯುವಂತೆ, "ನೀನು ಯಾಕೆ ಮಲ್ಲಿಕಾಳನ್ನು ಸಾಯಲು ಬಿಟ್ಟೆ?" ಅಂತ ಪ್ರಶ್ನಿಸಿದ. ಅಲ್ಲೇ ಇದ್ದ ರಾಖಿ ಮಾತ್ರ, "ಅಮ್ಮಾ, ನೀನು ನಿಜಕ್ಕೂ ಗ್ರೇಟ್. ಈ ಲವ್ ಯು ಅಮ್ಮಾ.." ಅಂತ ರಜನಿಯನ್ನು ಅಪ್ಪಿ ಹಿಡಿದಳು. 

ಆ ದಿನ ರಾತ್ರಿ ರಜನಿಗೆ ನಿದ್ದೆ ಬೀಳಲಿಲ್ಲ.  ಹಾಗೆಯೇ ಹೋಟೆಲ್ನಿಂದ ಹೊರಗೆ ಬಂದು ಹೋಟೆಲ್ ಗೇಟ್ ನ ಪಕ್ಕದಲ್ಲಿದ್ದ ಸಣ್ಣ ಪಗೋಡ ನೋಡಿದಳು. ಅಲ್ಲಿ ಮಲ್ಲಿಗೆ ಕಂಪು, ಕರ್ಪೂರದ ಬೆಳಕಿನ ಮಿಶ್ರಣ. ಅದರೊಳಗೆ ಒಬ್ಬ ವೃದ್ಧ ಭಿಕ್ಷುಕಿ ಹರಿದ ಕೊಳೆಯಾದ ಬಟ್ಟೆ, ಚಿಕ್ಕ ಮಣ್ಣಾದ ಚೀಲ ಹಿಡಿದುಕೊಂಡು "ಖ್ಮೇರ್?" ಅಂತ ಕೇಳಿದಳು. ರಜನಿ ಇಲ್ಲ ಎಂಬಂತೆ ತಲೆ ಅಲ್ಲಾಡಿಸಿದಳು. ಕೈ ತೋರಿಸುವಂತೆ ಸೂಚಿಸಲು, ರಜನಿ ತನ್ನ ಬಲಗೈಯನ್ನು ಅವಳೆಡೆಗೆ ಚಾಚಿದಳು. ತನ್ನ ಚೀಲದೊಳಗಿಂದ ಒಂದು ಮಂತ್ರದಂಡವನ್ನು ತೆಗೆದು ರಜನಿ ಕೈಯಲ್ಲಿ ಆಡಿಸಿ, "ಜನ್ಮ ಮೂಲಕ್ಕೆ ಯಾವತ್ತೂ ದಾರಿ ಇರುತ್ತದೆ" ಅಂತ ಖ್ಮೇರ್ ಭಾಷೆಯಲ್ಲಿ ಹೇಳಿದಳು. ರಜನಿಗೆ  ಅದು ಕನ್ನಡಾನುವಾದವಾದಂತೆ ಮನಸ್ಸಿಗೆ ಕೇಳಿಸಿತು. ರಜನಿ ಕಣ್ಣು ಹಾಗೆ ಮುಚ್ಚಿಕೊಂಡಿತು. "ನಾನು ಯಾರು?" ಎಂಬ ಪ್ರಶ್ನೆ ಬಂದಾಗ - "ಅದು ನಿನಗೆ ಗೊತ್ತಿದೆ" ಅಂತ ಆ ಭಿಕ್ಷುಕಿ ಹೇಳಿ ಅಲ್ಲಿಂದ ಹೊರಟು ಹೋದಳು. 

ಹೋಟೆಲ್ ರೂಮಿಗೆ ಹಿಂದಿರುಗಿದ ರಜನಿಗೆ,  ರಾತ್ರಿ ಕನಸಿನಲ್ಲಿ ಸ್ಪಷ್ಟವಾಗಿ ಚಿತ್ರಣ ಬಂದಿತ್ತು. ಪಾರಿಜಾತ, ಮಲ್ಲಿಗೆಯ ಪರಿಮಳಗಳ ನಡುವೆ, ಮಲ್ಲಿಕಾಳ ಜೊತೆ ತಾನಿದ್ದಾಗ, ಅಚಾನಕ್ ಆಗಿ ಮುಗಿಬಿದ್ದ ರೊಚ್ಚಿಗೆದ್ದ ಗುಂಪು. ಅವಳೆಷ್ಟೇ ಯುದ್ಧ ಮಾಡಿದರೂ, ಮಲ್ಲಿಕಾಳನ್ನು ಅವಳಿಂದ ದೂರ ಕಿತ್ತುಕೊಂಡು ಹೋಗಿ, ಏನು ಮಾಡಿದರು ಎಂಬುದು ಅವಳಿಗೆ ತಿಳಿಯಲಿಲ್ಲ. ಬೀಸಿದ ಕತ್ತಿಯಿಂದ ಅವಳ ಕೈ ಹಾಗೂ ಸೊಂಟಕ್ಕೆ ಪೆಟ್ಟು ಬಿದ್ದು, ಚರ್ಮ ಒಡೆದು ಹರಿಯುತ್ತಿರುವ ರಕ್ತದ ಬಿಸಿಯಷ್ಟೇ ಭಾಸವಾಗುತ್ತಿದೆ. ತಾನೆಲ್ಲಿದ್ದೇನೆ ಅನ್ನುವ ಅರಿವು ಅವಳಿಗಿರಲಿಲ್ಲ. 

"ರಜನಿ.. ರಜನಿ..." ಅನ್ನುವ ಕೂಗು ಕೇಳಿಸಿ ಎಚ್ಚರವಾಯಿತು. ಮೈಯೆಲ್ಲಾ ಬೆವರಿ ದೊಡ್ಡದಾಗಿ ಶ್ವಾಸ ಬಿಡುತ್ತಿದ್ದ ರಜನಿಗೆ ಇದು ಕೇವಲ ಕನಸು ಎಂದು ಅರಿವಾಯಿತು. ಗಡಿಯಾರ ನೋಡಿದರೆ, ಗಂಟೆ ಮೂರು. ಎದ್ದು ತನ್ನ ಡೈರಿಯಲ್ಲಿ ತನಗನ್ನಿಸುತ್ತಿದ್ದುದನ್ನು ಬರೆದಳು.  

***

ಮರುದಿನ ಬೆಳಿಗ್ಗೆ, ಕಾಂಬೋಡಿಯಾ ದೇಶದಲ್ಲಿನ ಕೊನೆ ದಿನ. ಶಾಪಿಂಗ್ ಮಾಡಲೆಂದು ಮೀಸಲಿದ್ದ ಆ ದಿನ, ಅಂಗಡಿಗಳ ಸಾಲಿನಲ್ಲಿ  ರಜನಿ ಕಣ್ಣಿಗೆ ಒಂದು ಹಳೆಯ ಕಾಲದ ಆಭರಣಗಳನ್ನು ಪಾಲಿಶ್ ಮಾಡಿ ಮಾರುತ್ತಿದ್ದ ಕೌಂಟರ್ ಕಂಡಿತು. ಅಲ್ಲಿ ಒಂದು ಸುಂದರವಾದ ಕೈಬಳೆ ಕಣ್ಣಿಗೆ ಬಿತ್ತು. ಅದರ ಒಳಭಾಗದಲ್ಲಿ ಖ್ಮೇರ್ ಭಾಷೆಯಲ್ಲಿನ ಸಣ್ಣ ಸಣ್ಣ ಅಕ್ಷರಗಳು. ಅಂಗಡಿಯವಳು, "ಇದು ಹಳೆಯ ಕಾಲದ್ದು. ಪಾಲಿಶ್ ಮಾಡಿ ಇರಿಸಿದ್ದು" ಅಂದಳು. ಕರ್ಣ "ಸುಮ್ಮನೆ ಮೋಸ ಮಾಡ್ತಾರೆ. ಹಳೆ ಕಾಲದ ವಸ್ತು ಹೀಗೆ ಸಿಗುತ್ತವೆಯೇ?" ಅಂದ. ರಜನಿಗೆ ಅದನ್ನು ನೋಡಿದಾಕ್ಷಣ ಏನೋ ಒಂದು ಬಾಂಧವ್ಯದ ಅನಿಸಿಕೆ. ಅದೇ ಬೇಕು ಅಂತ ಹಠ ಮಾಡಿ ತೆಗೆದುಕೊಂಡಳು. ಗೂಗಲ್ ನಲ್ಲಿ ಹುಡುಕಿದಾಗ, ಅದು ರಾಣಿ ಇಂದ್ರಾದೇವಿ ಹಾಕಿಕೊಂಡಿದ್ದ ಬಳೆಗಳಲ್ಲಿ ಒಂದು ಎಂದು ತಿಳಿಯಿತು. ಖ್ಮೇರ್ ಲಿಪಿಯಲ್ಲಿ ಆ ಬಳೆಯ ಹಿಂಬದಿಯಲ್ಲಿ ರಾಜವಂಶದ ಹೆಸರಿತ್ತು. ಒರಿಜಿನಲ್ ಆಗಿರದೆ ಇರಬಹುದು. ಆದರೆ, ಅದನ್ನು ಹಾಕಿಕೊಂಡು ನೋಡಿದರೆ, ರಜನಿ ಕೈಗೆಂದೇ ಮಾಡಿಸಿದ ರೀತಿ ಅಳತೆಗೆ ಸರಿಯಾಗಿತ್ತು.  ರಜನಿ ಮನಸ್ಸಿಗೆ ಏನೋ ಒಂದು ರೀತಿಯ ತೃಪ್ತಿ.  "ಕರ್ಣ, ನನ್ನನ್ನು ಕ್ಷಮಿಸು. ನನ್ನೊಳಗಿನ ಕಲ್ಪನೆಗಳು, ನೆನಪುಗಳು, ಕಥೆಗಳು ನಿನಗೆ ಅಮಾನ್ಯ ಅನಿಸಬಹುದು. ಆದರೆ, ಇದು ಸತ್ಯ. ಹಿಂದೆ ನನ್ನ ಯಾವುದೋ ಪೂರ್ವಜನ್ಮದಲ್ಲಿ ನಡೆದಿರುವ ಕಹಿ ಅನುಭವ. ಈ ಬಳೆಗಳು ನನ್ನ ಕೈಗೆ ಸರಿಯಾಗಿ ಹೊಂದುವಂತಿರುವಾಗ, ನನ್ನ ಮನಸ್ಸಿನಲ್ಲಿ ಭ್ರಮೆ ಅಂತ ನಿಮಗನ್ನಿಸಿದ್ದರೂ ನನಗೆ ಅನುಭವವಾದ ಎಲ್ಲ ರೀತಿಯ ಅನುಭವಗಳು ಹಿಂದಿನ ಕಥೆಯನ್ನೇ ಜ್ಞಾಪಿಸಿದಂತಿತ್ತು. ಈ ದೇಶದೊಂದಿಗೆ, ಈ ದೇವಾಲಯದೊಂದಿಗೆ, ಆ ಮಲ್ಲಿಕಾ ಎಂಬ ಹುಡುಗಿಯೊಂದಿಗೆ ಏನೋ ಒಂದು ಹೇಳಲಾರದ ಬಾಂಧವ್ಯ ನನಗಿದೆ ಎನ್ನುವುದು ಅಷ್ಟೇ ಸತ್ಯ." ಅಂತ ರಜನಿ ಕರ್ಣನಿಗೆ ಮನದಟ್ಟು ಮಾಡಿದಳು. ಕರ್ಣನಿಗೂ ಅವಳು ಹೇಳುತ್ತಿರುವ ವಿಷಯದಲ್ಲಿ ಏನೋ ಒಂದು ರೀತಿಯ ಸತ್ಯ ಇದೆ ಅಂತನಿಸಿತು. ಆದರೂ ಅವನು ನಂಬುವವನಲ್ಲ.  

ನೋಡುನೋಡುತ್ತಲೇ, ವಾಪಾಸ್ ಭಾರತಕ್ಕೆ ಹೊರಡುವ ಸಮಯ ಬಂದೇ ಬಿಟ್ಟಿತು. ವಿಮಾನ ನಿಲ್ದಾಣ. ಚೆಕ್–ಇನ್ ಸಾಲಿನಲ್ಲಿ  ರಜನಿ ಹಾಗೂ ಕರ್ಣ ನಿಂತಿದ್ದರು. ರಾಖಿ ರಾಣಾ "ಅಮ್ಮಾ,, ಕ್ಯಾಂಡಿ ಕೊಡಿಸು" ಅಂತ ಏರ್ಪೋರ್ಟ್ ನ ಶಾಪ್ ಒಂದರ ಎದುರಿಗೆ ಕರ್ಕೊಂಡು ಹೋದರು. ಕರ್ಣ ಚೆಕ್ ಇನ್ ಕಾರ್ಯಗಳ ಬಗ್ಗೆ ಗಮನ ಕೊಡುತ್ತಿದ್ದ. ರಜನಿ ಹಾಗೆ ಸುತ್ತಲೂ ಕಣ್ಣು ಹಾಯಿಸಿದಳು. ಅಲ್ಲೇ ಕುಳಿತಿದ್ದ ವೃದ್ಧ ಹೆಂಗಸೊಬ್ಬಳು, ರಜನಿಯನ್ನು ಕೈಬೀಸಿ ಕರೆದಳು. ಅವಳು ಹತ್ತಿರ ಹೋದೊಡನೆ, ಅವಳ ಕೈಯನ್ನು ಹಿಡಿದು, ಅದಕ್ಕೆ ಮುತ್ತೊಂದನ್ನಿಟ್ಟು, "ಪೂರ್ವ ಕರ್ಮದ ಆಶೀರ್ವಾದ ನಿನಗಿದೆ ಮಹಾರಾಣಿ" ಅಂತ ಹೇಳಿದಳು. ಹಾಗೆ ತಲೆಬಾಗಿ ನಮಸ್ಕರಿಸಿ ಹೊರಟುಹೋದಳು. "ಏನು ಹೇಳಿದಳು" ಅಂತ ಕೇಳುತ್ತಲೇ ಕರ್ಣ ರಜನಿ ಪಕ್ಕ ಬಂದು ನಿಂತ. "ನಾನು ಮಹಾರಾಣಿ ಅಂತೆ" ಅಂತ ಹೇಳಿ ರಜನಿ ಸುಮ್ಮನೆ ಹಾಸ್ಯದಂತೆ ನಗು ಬೀರಿದಳು. ಆದರೆ ಅವಳ ಅಂತರಾತ್ಮಕ್ಕೆ ತಿಳಿದಿತ್ತು, ಇದು ತಮಾಷೆ ಅಲ್ಲ, ಸತ್ಯ ಎನ್ನುವುದು. 

ವಿಮಾನ ಹೊರಟಿತು. ಕಿಟಕಿ ಬದಿ  ಹೊರಗಿನ ನೋಟ ನೋಡಿ ಕಣ್ತುಂಬಿಕೊಳ್ಳುತ್ತಿದ್ದಳು. ಅಷ್ಟರಲ್ಲಿ ಕರ್ಣ "ರಜನಿ, ನೀನು  ಈ ಸೆಂಟಿಮೆಂಟ್ ಗಳನ್ನು ಹೇಗೆ ಮ್ಯಾನೇಜ್ ಮಾಡಿದೆ?" ಎಂದು ಗೊಳ್ಳನೆ ನಕ್ಕ. "ಕರ್ಣ, ನಿನಗಿದು ತಮಾಷೆ - ನನ್ನ ಭ್ರಮೆ ಅಂತ ಅನ್ನಿಸಬಹುದು, ಬಟ್..." ಅನ್ನುವಷ್ಟರಲ್ಲಿ, "ಸರಿ ಆಯ್ತು. ವೈಜ್ಞಾನಿಕ ರೀತಿಯಲ್ಲಿ ನೋಡಿದರೆ, ಇದು ಜಸ್ಟ್ ದೇಜಾ-ವು, ಅಥವಾ ಮ್ಯಾಚಿಂಗ್ ನುರಾನ್ಸ್ ಅನ್ನಬಹುದೇನೋ." ಅಂದ. ಆಗ ರಜನಿ, "ಹಾಗಾದರೆ, ನನಗೆ ಅಲ್ಲಿ ಕಂಡ ದೃಶ್ಯಗಳು? ಹೂಗಳ ಪರಿಮಳದ ಅನುಭವಗಳು? ವೃದ್ಧ ಭಿಕ್ಷುಕಿ, ಉಂಗುರ ಮಾರುತ್ತಿದ್ದ ಹೆಂಗಸು, ಗೈಡ್ ಅವರೆಲ್ಲ ಹೇಳಿದ ಕಥೆಗಳು? ಇವೆಲ್ಲ ಏನು?" ಅಂತ ಕೇಳಿದಳು. ಅದಕ್ಕುತ್ತರವಾಗಿ ಕರ್ಣ -"ಅದೆಲ್ಲ ಬರಿಯ ಕಂಫಾರ್ಮೇಷನ್ ಬಯಾಸ್. ಅಷ್ಟೇ" ಅಂದು ಮತ್ತೆ ಗೊಳ್ಳನೆ ನಕ್ಕ. 

ರಜನಿ ಮುಂದೇನೂ ಮಾತಾಡದೆ, ಮೌನವಾಗಿ ಕಿಟಕಿಗೆ ತಲೆ ಇಟ್ಟು  ಕಣ್ಮುಚ್ಚಿದಳು. ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿತ್ತು. ಅಲ್ಲಿನ ಪ್ರತಿಯೊಂದು ಕಲ್ಲೂ ಶಬ್ದ ಮಾಡುವಂತಿರಬಹುದು. ಪ್ರತಿಯೊಂದು ಮನಸ್ಸೂ  ತನ್ನೊಳಗೆ ಕಥೆಯೊಂದನ್ನು ಬಚ್ಚಿಟ್ಟಿರಬಹುದು. ಯಾವುದು ಎಲ್ಲಿ ಯಾವುದಕ್ಕೆ ಕರೆ ನೀಡುತ್ತದೆ ಎಂಬುದು ಯಾರಿಗೂ ತಿಳಿಯದ ವಿಷಯ.  "ಪೂರ್ವ ಕರ್ಮದ ಆಶೀರ್ವಾದ" ಇರಲೇಬೇಕು ಎಂಬುದು ರಜನಿಗೆ ಮನದಟ್ಟಾಗಿತ್ತು. 

***

ಅಲ್ಲಿಂದ ಹಿಂದಿರುಗಿ ಎರಡು ವಾರಗಳು ಕಳೆದಿದ್ದವು. ಅಂದು ಪಕ್ಕದ ದೇವಸ್ಥಾನದಲ್ಲಿ ಪೂಜಗೆ ಎಂದು  ಮಲ್ಲಿಗೆ ತೆಗೆದುಕೊಂಡು ಹೋಗಿದ್ದರು ರಜನಿ ಹಾಗೂ ಕರ್ಣ.  ಅದನ್ನು ದೇವರಿಗೆ ಸಮರ್ಪಿಸುವಾಗ, ರಜನಿ ಕಿವಿ ಹತ್ತಿರದಲ್ಲೇ ಯಾರೋ "ಮಹಾರಾಣಿ" ಅಂತ ಪಿಸುಗುಟ್ಟಿದಂತಾಯಿತು. ತಿರುಗಿ ನೋಡಿದರೆ ಯಾರೂ ಇರಲಿಲ್ಲ. ಕರ್ಣ "ಆರ್ ಯು ಓಕೆ?" ಅಂದ. ಚೇತರಿಸಿಕೊಂಡ ರಜನಿ "ಓಕೆ" ಅಂದು ಪೂಜೆ ನೋಡಲು ಸಿದ್ಧಳಾದಳು. ಆ ಬಳೆಗಳು ಇನ್ನೂ ರಜನಿ ಕೈಯಲ್ಲಿ ಹೊಳೆಯುತ್ತಿದೆ. ಇದು ಪುನರ್ಜನ್ಮದ ಸತ್ಯ ಕಥೆಯೋ? ಅಥವಾ ಕಲ್ಪನೆಯೋ??? ಉತ್ತರವೇನಿದೆ???

*** 

✍🏻 Deepalaxmi Bhat
Mangaluru 

ಮಂಗಳವಾರ, ಮೇ 27, 2025

ಕನಸು - ಜೀವನ

✍🏻ದೀಪಲಕ್ಷ್ಮಿ ಭಟ್, ಮಂಗಳೂರು 

ದೂರದಲ್ಲಿ ಯಾರೋ ಮಾತಾಡುತ್ತಿರುವ ಹಾಗೆ ಕೇಳಿಸುತ್ತಿದೆ. ಅದೇನೋ ನನ್ನನು ಹಿಡಿದುಕೊಳ್ಳಿ, ನೀರು ತನ್ನಿ ಅಂತೆಲ್ಲ ಕೇಳಿಸುತ್ತಿತ್ತು. ಎಲ್ಲರೂ ತುಂಬಾ ಗಲಿಬಿಲಿ ಆದ ಹಾಗೆ, ಹೆದರಿದ ಹಾಗೆ ಭಾಸವಾಗುತ್ತಿತ್ತು. ಹಾಗೆ ನಿಧಾನಕ್ಕೆ ನನ್ನ ಕಣ್ಣುಗಳನ್ನು ತೆರೆಯುವ ಪ್ರಯತ್ನ ಮಾಡಿದೆ. ಆದರೆ ಏನೂ ನಿರುತ್ಸಾಹ, ಏನೋ ಬಲಹೀನತೆ. ಕೈಕಾಲು ಎಲ್ಲಿದೆ ಅಂತ ತಿಳಿಯುತ್ತಿಲ್ಲ. ಕಣ್ಣುಗಳು ತೆರೆಯುವ ಮನಸ್ಸು ಮಾಡುತ್ತಿಲ್ಲ. ಹಾಗೆಯೇ ನಿಟ್ಟುಸಿರು ಬಿಟ್ಟು ನಿದ್ದೆಗೆ ಜಾರಿದೆ....

***

ನನ್ನ ಕಿವಿಗಳಿಗೆ ಹತ್ತಿರದಲ್ಲಿಯೇ ನರ್ಸುಗಳ ಇಂಜೆಕ್ಷನ್ ಸೂಜಿ, ಮಾತ್ರೆಗಳು, ನರ್ಸು ಟ್ರೇಗಳ ಸದ್ದು  ಕೇಳಿಸುತ್ತಿತ್ತು. ನಿಧಾನವಾಗಿ ಕಣ್ತೆರೆದು ನೋಡಿದರೆ, ಸುತ್ತಲೂ ಬಿಳಿ ಬಟ್ಟೆ, ಬಿಳಿ ಪೈಂಟು ಮಾಡಿದ ಗೋಡೆಗಳು, ಬಿಳಿ ಫ್ಯಾನು. ನೋಡಿದಾಗಲೇ ಗೊತ್ತಾಯಿತು. ನಾನು ಆಸ್ಪತ್ರೆಯಲ್ಲಿದ್ದೇನೆ ಅಂತ. ನನ್ನವರು ಅಂತ ಯಾರೂ ಕಾಣಿಸ್ಲಿಲ್ಲ. ಹಾಗೆ ಸ್ವಲ್ಪ ಹೊತ್ತು ಕಣ್ತೆರೆದು ನೋಡುತ್ತಿದ್ದೆ. ನರ್ಸಮ್ಮನಿಗೆ ನಾನು ಕಣ್ತೆರೆದದ್ದು ಕಂಡಿತು. ಆ ಕೂಡಲೇ ನನ್ನನ್ನು ಕೂರಿಸಿ ಬೇಕಾದ ಟೆಸ್ಟುಗಳನ್ನು ಮಾಡಿದಳು. "ಹೇಗಿದ್ದೀರಾ ಈವಾಗ? ಡಾಕ್ಟ್ರನ್ನು ಕರೆದಿದ್ದೇನೆ, ಬಂದು ನೋಡಿಬಿಟ್ಟು ಮಾತಾಡಿಸ್ತಾರೆ." ಅಂತ ಹೇಳಿದ್ಲು. ನಿಧಾನಕ್ಕೆ ಮಾತಾಡಲು ಪ್ರಯತ್ನಿಸಿ, "ನಂಗೆ ಏನಾಗಿದೆ?" ಅಂತ ಕೇಳಿ ಸುತ್ತಮುತ್ತ ನನ್ನವರಿಗಾಗಿ ಹುಡುಕಾಡಿದೆ. "ನೀವು ಇಲ್ಲಿ ಬಂದು 5 ದಿನಗಳೇ ಆಗಿದೆ. ಡಾಕ್ಟ್ರು ಬಂದು ನಿಮ್ಮತ್ರ ಮಾತಾಡ್ತಾರೆ." ಅಂತ ಹೇಳಿ ನರ್ಸಮ್ಮ ಹೊರಗಡೆ ಹೋದಳು. ನನ್ನವರು ಅಂತ ಯಾರೂ ಕಾಣದೆ ಇರುವಾಗ, ಕಿಟಕಿಯಿಂದ ಹೊರಗೆ ನೋಡಿದೆ. ಹೊರಗೆ ಮರದಲ್ಲಿ ಒಂದು ಪಕ್ಷಿ ತನ್ನ ಮರಿಗಳಿಗೆ ಆಹಾರ ಉಣಿಸುತ್ತಿತ್ತು. ಇದನ್ನು ನೋಡಿ, ನಾನು ನನ್ನ ಹೆತ್ತವರ ನೆನಪಾಗಿ, ನೆನಪಿನ ಲೋಕಕ್ಕೆ ನಿಧಾನವಾಗಿ ಜಾರಿದೆ. 

***

75 ವರ್ಷದ ಹಿರಿಯನಾದ ನಾನು ನನ್ನ ಜೀವನದಲ್ಲಿ ತುಂಬಾ ಅನುಭವ ಪಡೆದಿದ್ದೇನೆ. 27 ಜನರಿರುವ ಮನೆತನದಲ್ಲಿ ಹುಟ್ಟಿದ ನಾನು ಮನೆಗೆ ಮೂರನೆಯ ಸಂತಾನವಾಗಿ ಹುಟ್ಟಿದವನು. ಸಂಖ್ಯೆ ಹೇಳುವಂತೆ ಮನೆಯವರಿಗೆ ನಾನು ಹದಿಹರೆಯಕ್ಕೆ ಬರುವ ತನಕ ಬೇಕಾಗಿದ್ದವನಾಗಿದ್ದರೂ, ನನ್ನ ಅಣ್ಣನವರಿಗೆ ಮದುವೆ  ಅಂತ ಆದ ಬಳಿಕ ನಾನು ಬೇಡವಾದವನಾದೆ. ನನ್ನ ಹೆತ್ತವರು ತುಂಬಾ ಅಪರೂಪದ ಜೋಡಿ. ಇಬ್ಬರ ಮಧ್ಯೆ ವಯಸ್ಸಿನಲ್ಲಿ ತುಂಬಾ ಅಂತರವಿದ್ದರೂ, ಜೀವನ ನಡೆಸುವ ಕಲೆ, ಅನ್ಯೋನ್ಯತೆ ಅವರನ್ನು ನೋಡಿ ಕಲಿಯಬೇಕಾದದ್ದು. 12 ಮಕ್ಕಳನ್ನು ಹೆತ್ತು ಸಾಕಿ ಸಲುಹಿ, ಎಲ್ಲರಿಗೂ ಒಳ್ಳೆಯ ವಿದ್ಯೆ, ಭವಿಷ್ಯತ್ತು ನೀಡಿ, ಹೆಣ್ಣು ಮಕ್ಕಳು ಅಂದರೆ ನನ್ನ ತಂಗಿಯಂದಿರಿಗೆ ಒಳ್ಳೆಯ ಮನೆತನದವರಿಗೆ ಮದುವೆ  ಮಾಡಿ ಕೊಟ್ಟು, ಒಳ್ಳೆಯ ರೀತಿಯಲ್ಲಿ ಜವಾಬ್ದಾರಿ ನಿಭಾಯಿಸಿದವರು ನನ್ನ ಹೆತ್ತವರು.  ವಿದ್ಯೆಗಾಗಿ ಖರ್ಚು ಮಾಡಲು ದುಡ್ಡಿನ ಕೊರತೆಯಿದ್ದ ಕಾರಣ ನನ್ನ ಅಣ್ಣಂದಿರು ಚಿಕ್ಕ ಪ್ರಾಯದಲ್ಲೇ ಹೋಟೆಲ್ ವ್ಯವಹಾರ ಪ್ರಾರಂಭಿಸಿದರು. ನಾನು ದಿನದ ಸಮಯದಲ್ಲಿ ಊರಿನ ಫ್ಯಾಕ್ಟರಿ ಒಂದರಲ್ಲಿ ಅಟೆಂಡರ್ ಕೆಲಸ ಮಾಡಿಕೊಂಡು, ಸಂಜೆ ಕಾಲೇಜಿನಲ್ಲಿ ಓದು ಮುಂದುವರೆಸಿದೆ. ಹಾಗೆ ಓದು ಮುಗಿಸಿ, ಸರಕಾರಿ ನೌಕರಿ ಪಡೆದುಕೊಂಡೆ. ಅಣ್ಣಂದಿರ ಮದುವೆ  ಆದ ಮೇಲೆ, ನನಗೆ ಮನೆಯಲ್ಲಿ ಬೆಲೆ ಕಡಿಮೆಯಾಗತೊಡಗಿತು. ಹಾಗೆ ನಂಗೆ ಮದುವೆ  ಆದ ಮೇಲೆ, ಹಿರಿಯ ಮನೆಯಲ್ಲಿ ಹಿರಿಯಣ್ಣ ನಿಂತು ನಾವೊಬ್ಬರೂ ತಮ್ಮಂದಿರು ಬೇರೆಬೇರೆ ಮನೆ ಮಾಡಿಕೊಂಡು ಕುಟುಂಬದ ಪೂಜಾಕಾರ್ಯಗಳ ಸಮಯದಲ್ಲಿ ಮಾತ್ರ ಭೇಟಿ ಆಗತೊಡಗಿದೆವು. ಹೀಗೆ ಜೀವನ ಕಳೆದು, ನಮ್ಮೆಲ್ಲರಿಗೂ ಮಕ್ಕಳು ಮರಿಗಳಾಗಿ, ಅವರ ಮದುವೆಯೂ ನಡೆದು, ಇಂದು ಎಲ್ಲ ಮನೆಗಳಲ್ಲಿ ಹಿರಿಯ ಜೀವಗಳು ಮಾತ್ರ ಇದ್ದೆವು. ಇಂದಿನ ಮಕ್ಕಳಿಗೆ ಮನೆತನದ ಮೇಲೆ ಪ್ರೀತಿ ಕಡಿಮೆ. ತಮ್ಮ ಜೀವನ, ತಮ್ಮ ಕೆರಿಯರ್ ಅಂದುಕೊಂಡು ಊರು ಬಿಟ್ಟು ಹೋಗಿದ್ದಾರೆ. ಇರಲಿ. ಅವರವರ ಆಸೆಗೆ ತಕ್ಕ ಹಾಗೆ ಜೀವನ ನಡೆಸಲಿ ಎಂದು ನಾವೂ ಏನೂ ಅನ್ನಲಿಲ್ಲ. ನೋಡುನೋಡುತ್ತಾ ನನ್ನ ಅಣ್ಣಂದಿರು, ಅತ್ತಿಗೆಯರು ಕೊನೆಯುಸಿರೆಳೆದರು. ನನ್ನ ಹೆಂಡತಿ ನೀಲಾ ಕೂಡಾ ಮಕ್ಕಳು ದೂರ ಆಗಿದ್ದನ್ನು ನೆನೆದು ಕೊರಗಿ ಕೊರಗಿ ನನ್ನಿಂದ ದೂರ ಆಗಿದ್ದಾಳೆ. ಈಗ ನಾನೊಬ್ಬನೇ ಮನೆಯಲ್ಲಿ. 

ಹೀಗೆ ನೆನಪಿನ ಮಹಾಸಾಗರದಲ್ಲಿ ತೇಲುತ್ತಿದ್ದಂತೆ, ನೀಲಾ ಹೇಳಿದ ಮಾತುಗಳು ಕಿವಿಗೆ ಅಪ್ಪಳಿಸಿದವು - "ನೋಡಿ ರೀ, ನೀವು ಮಕ್ಕಳಿಗೆ ಅಂತ ಎಲ್ಲವನ್ನೂ ಮಾಡಿ ಇಟ್ಟಿದ್ದೀರಿ. ಆದರೆ, ಇವತ್ತು ಆ ಮಕ್ಕಳು, ನಮ್ಮನ್ನು ಒಂಟಿಯಾಗಿ ಬಿಟ್ಟು ದೂರ ಹೋಗಿದ್ದಾರೆ. ನಮ್ಮನ್ನು ಮರೆಯುವಂತಿದ್ದಾರೆ. ಈವಾಗಲೂ ಕಾಲ ಮಿಂಚಿಲ್ಲ. ಅವರನ್ನು ಬರಲು ಹೇಳೋಣ."

ಅಂದ ಹಾಗೆ, ನನಗೆ ಇಬ್ಬರು ಮಕ್ಕಳು. ದೊಡ್ಡವಳು ನನ್ನ ಪ್ರೀತಿಯ ನೀಲಿಮಾ. ನನ್ನ ಹೆಂಡತಿ ಹೆಸರು "ನೀಲಾ" ದಿಂದ ನೀಲಿ ಹಾಗೂ ನನ್ನ ಹೆಸರು "ರಾಮಾ"ದಿಂದ "ಮಾ" ಸೇರಿಸಿ ನೀಲಿಮಾ ಅಂತ ನಮ್ಮ ಪ್ರೀತಿಯ ಸಂಕೇತವಾಗಿ ಹೆಸರಿಟ್ಟಿದ್ದೆವು. ಚಿಕ್ಕವನು ನೀಲೇಶ. ಇಬ್ಬರನ್ನೂ ತುಂಬಾ ಪ್ರೀತಿಯಿಂದ ಸಾಕಿ, ಒಳ್ಳೆಯ ವಿದ್ಯೆ  ದೊರಕಿಸಿ ಕೊಟ್ಟೆವು. ನೀಲಿಮಾ ಡಾಕ್ಟರಾಗಿ, ಅವಳ ಜೊತೆ ಕಲಿತ ಸಂದೇಶನನ್ನು ಪ್ರೀತಿಸಿ ನಮಗೆ ಗೊತ್ಹಿಲ್ಲದ ಹಾಗೆ ಮದುವೆಯಾದಳು. ಆ ನಂತರ, ನಮ್ಮ ಮನೆಗೆ ಬರುವುದನ್ನೇ ನಿಲ್ಲಿಸಿದಳು. ನನ್ನ ಮಗ ನೀಲೇಶ, ನಾವು ನೋಡಿದ ಹೆಣ್ಣನ್ನೇ ಮದುವೆಯಾದರೂ ಕೂಡಾ, ಮದುವೆಯಾದ ಮರುಕ್ಷಣ ನಮ್ಮನ್ನು ದೂರ ಮಾಡಿದ. ಈಗ ಸುಮಾರು 10 ವರ್ಷಗಳಿಂದ ನಾವು ಒಂಟಿಯಾಗೇ ಬದುಕುತ್ತಿದ್ದೆವು. ಕಳೆದ ವರ್ಷ, ಮಕ್ಕಳು ಬಾರದ ಕೊರಗಿನಿಂದ ನೀಲಾ ಕೊನೆಯುಸಿರೆಳೆದಳು. 

ಇಷ್ಟು ನೆನಪಾಗುತ್ತಲೇ, ನರ್ಸಮ್ಮ ಬಂದು ಏನೋ ಒಂದು ಇಂಜೆಕ್ಷನ್ ಚುಚ್ಚಿದಳು. ನನ್ನ ಕಣ್ಣು ಮಂಜಾಗಿ, ನಿಧಾನಕ್ಕೆ ನಿದ್ದೆಗೆ ಜಾರಿದೆ. 

***

ನನ್ನ ಸುತ್ತಲೂ ದಟ್ಟವಾದ ಕಾಡು.  ಕತ್ತಲು ಕವಿದಿದೆ. ಒಂದಷ್ಟು ದೂರದಲ್ಲಿ ನಿಖರವಾದ ಬೆಳಕೊಂದು ಬೀರುತ್ತಿದೆ.  ಆ ಬೆಳಕು ಎಲ್ಲಿಗೆ ಬೀಳುತ್ತಿದೆ ಎಂದು ನೋಡಿದರೆ ಅಲ್ಲೇನೋ ಹೊಳೆಯುವಂತೆ ಕಾಣುತ್ತಿದೆ. ನಾನು ನಿಧಾನವಾಗಿ ಅದರ ಸಮೀಪಕ್ಕೆ ಹೋಗುತ್ತಿದ್ದೇನೆ. ಅಷ್ಟರಲ್ಲಿ ಹಿಂದಿನಿಂದ ನನ್ನನ್ನು ಯಾರೋ ತಟ್ಟಿದಂತಾಯಿತು. ಹಿಂತಿರುಗಿ ನೋಡಿದರೆ, ನೀಲಾ. "ರೀ, ಬನ್ನಿ ನನ್ನ ಜೊತೆ. ಒಂಟಿಯಾಗಿದ್ದು ಬೇಸರವಾಗುತ್ತಿದೆ." ಅಂತ ಹೇಳಿದಳು. ಅಷ್ಟರಲ್ಲಿ ಈಚೆಯಿಂದ "ಡಾಕ್ಟರ್, ಡಾಕ್ಟರ್, ಎಮರ್ಜೆನ್ಸಿ" ಅನ್ನುವ ಸಡ್ಡು ದೂರದಿಂದ ಕೇಳಿಸುತ್ತಿದೆ. ನನ್ನನ್ನು ನೀಲಾ ಹಿಡಿದು ಎಳೆದಂತಾಯಿತು.... ಎಲ್ಲವೂ ಮೌನವಾಯಿತು. ಬೆಳಕೂ ದೂರ ಆಯ್ತು. ಮತ್ತೆ ನಿಶ್ಶಬ್ಧ ಆವರಿಸಿತು... 

ಕಣ್ತೆರೆದಾಗ ಸುತ್ತಲೂ ಬೆಳಕು ಕಾಣಿಸುತ್ತಿತ್ತು. ಕಿವಿಗೆ ನನ್ನ ಎದೆಬಡಿತ ಪರಿಶೀಲಿಸುವ ಮಷೀನಿನ ಬೀಪ್ ಸದ್ದು  ಕೇಳಿಸುತ್ತಿತ್ತು. ಐಸಿಯುನಲ್ಲಿದ್ದೇನೆ ಎಂಬುದು ಖಚಿತವಾಯಿತು. ಸ್ವಲ್ಪ ಹೊತ್ತಿನಲ್ಲಿ ನರ್ಸಮ್ಮ ಬಂದು, ಡಾಕ್ಟರನ್ನು ಕರೆ ತಂದಳು. ಹಾಗೆ ಚೆಕ್ ಮಾಡಿದ ಡಾಕ್ಟ್ರು, ನನ್ನನ್ನು ವಾರ್ಡಿಗೆ ಶಿಫ್ಟ್ ಮಾಡಲು ತಿಳಿಸಿದರು. ಮಾತನಾಡಲು ಪ್ರಯತ್ನಿಸಿದೆ. ಆದರೆ ನಿಶ್ಶಕ್ತಿಯಿಂದಾಗಿ ಮಾತು ಗಂಟಲಲ್ಲೇ ಉಳಿಯಿತು. ಹೇಗೋ ವಾರ್ಡಿಗೆ ಕರೆದೊಯ್ದರು. ಇನ್ನೂ ನನ್ನ ಮನೆಯವರ ಸುದ್ದಿ ಇರಲಿಲ್ಲ. ಸ್ವಲ್ಪ ಶಕ್ತಿ ಬಂದಮೇಲೆ, ನರ್ಸಮ್ಮನಲ್ಲಿ ಕೇಳಿದೆ: "ನನಗೆ ಏನಾಗಿದೆ? ಯಾರು ನನ್ನನ್ನು ಆಸ್ಪತ್ರೆಗೆ ಕರೆತಂದರು?". "ತಾತ, ನಿಮಗೆ ಹಾರ್ಟ್ ಅಟ್ಯಾಕ್ ಆಗಿತ್ತು. ಜೊತೆಗೆ, ರಕ್ತ ಕಡಿಮೆ ಆಗಿ, ಪ್ರಜ್ಞಾಹೀನರಾಗಿದ್ರಿ. ಇಲ್ಲಿಗೆ ಕರೆತಂದಾಗ ನಿಮಗೆ ಪ್ರಜ್ಞೆ ಇರಲಿಲ್ಲ. ನಿಮ್ಮನ್ನು ಇಲ್ಲಿಗೆ ಹರೀಶ ಅನ್ನುವವರು ಕರೆತಂದರು" ಅಂತ ಹೇಳಿದಳು. ಹರೀಶ ಅನ್ನುತ್ತಲೇ ನನ್ನ ನೆನಪುಗಳು 10 ವರ್ಷಗಳ ಹಿಂದೆಗೆ ಜಾರಿತು.

***

ಮನೆ ತುಂಬಾ ಸಡಗರ ಸಂಭ್ರಮ. ಯಾಕೆ ಅಂತೀರಾ? ಆ ದಿನ ನನ್ನ ಮಗ ನೀಲೇಶನ ಮದುವೆ ಸಮಾರಂಭ. ನೀಲಿಮಾ ಬಿಟ್ಟು ದೂರ ಉಳಿದಿದ್ದರೂ, ತಮ್ಮನ ಮದುವೆ  ಅಂತ ಮನೆಗೆ ಬಂದಿದ್ದಳು. ತನ್ನ ಪುಟ್ಟ ಮಗಳನ್ನೂ ಕರೆದುಕೊಂಡು ಬಂದಿದ್ದಳು. ಬೇಸರವೆಷ್ಟೇ  ಇದ್ದರೂ, ಪುಟ್ಟ ಮಗುವನ್ನು ನೋಡಿದಾಗ ಏನೋ ಒಂದು ಪ್ರೀತಿ ಹುಟ್ಟಿ, ಅವಳನ್ನು ಕ್ಷಮಿಸಿದೆವು. ಮದುವೆ ಮನೆ ತುಂಬಾ ಸಂಭ್ರಮದಿಂದ ಓಡಾಡಿ, ಇನ್ನು ನಮ್ಮ ಜವಾಬ್ದಾರಿಗಳೆಲ್ಲ ಕಳೆಯಿತು ಅಂತ ನೆಮ್ಮದಿಯಿಂದ ಕೂತಿದ್ರೆ, ಮಗಳು ನೀಲಿಮಾ ಬಂದು, " ಅಪ್ಪಾ, ಈಗ ನೀಲೇಶನ ಮದುವೆಯೂ ಮುಗಿಯಿತು. ಇನ್ನು ನನಗೆ ನನ್ನ ಜೀವನ ಕಟ್ಟಿಕೊಳ್ಳಲು ನಿಮ್ಮ ಆಸ್ತಿ ಪಾಲು ಬೇಕು. ನಾಳೆ ದಿನ ನಾನೂ ನೀಲೇಶನೂ ಜಗಳ ಆದಿ ದೂರ ಆಗಬಾರದೆಂದರೆ, ಈವಾಗಲೇ, ಆಸ್ತಿ ಪಾಲು ಮಾಡಿ ನನ್ನ ಪಾಲು ನನಗೆ ಕೊಟ್ಟು ಬಿಡಿ." ಅಂದಳು. ತುಂಬಿದ ಕುಟುಂಬದಲ್ಲಿ ಬೆಳೆದಿದ್ದ ನಾನು, ನನ್ನ ಅಪ್ಪ ಅಮ್ಮ ಬದುಕಿದ್ದ ತನಕ ಆಸ್ತಿ ಪಾಲು ಅಂತ ಮಾತನಾಡಿಯೇ ಇರಲಿಲ್ಲ. ಈಗಿನ ಮಕ್ಕಳ ಚಿಂತನೆ ನೋಡಿ ಅಲ್ಲೇ ಎದೆಗೆ ಚೂರಿ ಇರಿದಂತಾಯಿತು. ಸತಿ ಆಯ್ತು ಅಂದುಕೊಂಡು, ಮಕ್ಕಳಿಗೆ ಪಾಲು ಮಾಡಿ ನನ್ನ, ನೀಲಾಳ ಹೆಸರಲ್ಲಿ ನಮ್ಮ ಮನೆ ಅಡಿ ಜಾಗ ಮಾತ್ರ ಇರಿಸಿ, ಉಳಿದದ್ದೆಲ್ಲವನ್ನೂ ಮಕ್ಕ ಹೆಸರಿಗೆ ಮಾಡಿ ಕೈ ತೊಳೆದುಕೊಂಡೆ. ಆಸ್ತಿ ಪಾಲು ದೊರೆತದ್ದೇ  ತಡ, ಮಕ್ಕಳಿಬ್ಬರೂ ನಮ್ಮನ್ನು ಒಂಟಿಯಾಗಿ ಬಿಟ್ಟು, ದೂರ ಸಾರಿದರು. ದಿನಕ್ಕೊಮ್ಮೆ ಮಾತನಾಡುತ್ತಿದ್ದ ಮಕ್ಕಳು ವಾರಕ್ಕೊಮ್ಮೆ ಅಂತ ಆಗಿ, ಈಗ ವರ್ಷಕ್ಕೊಮ್ಮೆ ಮಾತನಾಡುವುದೂ ಕಡಿಮೆ ಆಯ್ತು. ಹಾಗೆ ಒಂಬತ್ತು ವರ್ಷಗಳೇ ಕಳೆದು, ಮಕ್ಕಳು ದೂರ ಆದ ಕೊರಗಿನಲ್ಲಿ ಅತ್ತು ಅತ್ತು, ನನ್ನ ನೀಲಾ ಕೊನೆಯುಸಿರೆಳೆದಳು. ಈ ಸಂದರ್ಭಗಳು ನೆನಪಾಗುತ್ತಲೇ ನನ್ನ ಕಣ್ಣ ಅಂಚಿಂದ ಹನಿ ನೀರು ಹರಿಯಿತು. 

ಆಗ ಅವಳ ಅಂತ್ಯ ಸಂಸ್ಕಾರ ಮಾಡಲೂ ನನ್ನ ಮಕ್ಕಳು ಬರಲಿಲ್ಲ. ನಾನು, ನನ್ನ ಕುಟುಂಬದವರೆಲ್ಲರೂ ಕರೆದರೂ, ಅವರಿಬ್ಬರೂ ಸಂಬಂಧವೇ ಇಲ್ಲದಂತೆ ನಡೆದುಕೊಂಡರು. ಈ ಬೇಸರದ ನಡುವೆ, ಮಗನಂತೆ ನನ್ನ ನೀಲಾಳ ಅಂತ್ಯ ಸಂಸ್ಕಾರ ಮಾಡಿದ್ದು, ನನ್ನ ಅಣ್ಣನ ಮಗ ಹರೀಶ. ಅಂದಿನಿಂದ ನನ್ನ ಪ್ರತಿದಿನ ಬಂದು ಮಾತಾಡಿಸಿಕೊಂಡು ಹೋಗುತ್ತಿದ್ದವನು ಹರೀಶನೇ. ತುಂಬಾ ಪ್ರೀತಿ ತುಂಬಿದ ಮನಸ್ಸು ಅವನದ್ದು. ಚಿಕ್ಕಪ್ಪ ಅಂದರೆ ಅಪ್ಪನಷ್ಟೇ ಗೌರವ ಪ್ರೀತಿ ಇಟ್ಟುಕೊಂಡು, ನನ್ನ ಆರೋಗ್ಯಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಸಮಯಕ್ಕೆ ಸರಿಯಾಗಿ, ಯಾವುದೇ ಉದಾಸೀನ ಅಥವಾ ಬೇಸರವಿಲ್ಲದೆ ಮಾಡಿಕೊಡುತ್ತಿದ್ದ. ಅವನ ಪ್ರೀತಿ ಕಂಡು ನಾನೇ ಬೆರಗಾಗಿದ್ದೆ. ಸ್ವಂತ ಮಕ್ಕಳೇ ತೋರಿಸದ ಪ್ರೀತಿಯನ್ನು ಅವನು ನನಗೆ ತೋರಿಸುತ್ತಿದ್ದ. ಅದೂ ಯಾವುದೇ ಸ್ವಾರ್ಥ ಮನಸ್ಸಲ್ಲಿ ಇಲ್ಲದೆ. ಅವನು ಬಂದು ಹೋಗಿ ಮಾಡುತ್ತಿದ್ದರಿಂದ ಇವತ್ತು ಸಮಯಕ್ಕೆ ಸರಿಯಾಗಿ ನನ್ನನ್ನು ಆಸ್ಪತ್ರೆಗೆ ಸೇರಿಸಿ ನನ್ನ ಪ್ರಾಣ ಉಳಿಸುವ ಪ್ರಯತ್ನ ಮಾಡುತ್ತಿದ್ದಾನೆ. ಹೀಗೆ ಯೋಚನೆ ಮಾಡುತ್ತಾ ಹಾಗೆಯೇ ನಿದ್ದೆಗೆ ಜಾರಿದೆ. 

***

Generated image 

 

ಆವಾಗಲೇ ಕೈ ಹಿಡಿದು ಎಳೆದ ನೀಲಾ ನನ್ನನ್ನು ಬೆಳಕಿನ ಕಡೆಗೆ ಕರೆದೊಯ್ಯುತ್ತಿದ್ದಾಳೆ. ಆ ಬೆಳಕಿನಲ್ಲಿ ಏನೋ ಸಂಭ್ರಮ, ಏನೋ ಪ್ರಶಾಂತತೆ. ಅಲ್ಲೇ ಇರೋಣ ಎನ್ನುವ ಭಾವನೆ. ದೂರದಲ್ಲಿ "ಡಾಕ್ಟರ್, ಎಮರ್ಜೆನ್ಸಿ" ಅನ್ನುವ ಧ್ವನಿ. ಆದರೆ ಆ ಧ್ವನಿ ಕಡಿಮೆ ಆಗುತ್ತಾ, ನನ್ನನ್ನು ಬೆಳಕಿನೆಡೆಗೆ ನೀಲಾ ಕರೆದೊಯ್ಯುತ್ತಿದ್ದಾಳೆ . ಆ ಬೆಳಕು "ರಾಮಾ, ಬಾ. ನನ್ನ ಜೊತೆ ಸೇರು." ಅಂತ ಕರೆಯುತ್ತಿತ್ತು. ನೀಲಿಮಾ ಆ ಬೆಳಕಿನ ನಡುವೆ ನಿಂತು ನನ್ನ ಕಡೆ ಮಂದಹಾಸ ಬೀರುತ್ತಿದ್ದಾಳೆ. ಹತ್ತಿರ ಹೋಗುತ್ತಿದ್ದಂತೆ, ನನ್ನ ಅಣ್ಣಂದಿರು, ಅತ್ತಿಗೆಯರು ಎಲ್ಲರೂ ಕಂಡರೂ. ಎಲ್ಲರೂ ನನ್ನನ್ನು ಕರೆಯುತ್ತಿರುವಂತೆ ಭಾಸವಾಯಿತು. ಎಲ್ಲರೂ ನನ್ನ ಕಡೆ ಮಂದಹಾಸ ಬೀರಿ ಬಾ ಎಂಬಂತೆ ಕೈ ಚಾಚಿ ಕರೆಯುತ್ತಿದ್ದಾರೆ. ಮುಂದೆ ಮುಂದೆ ಹೋಗುತ್ತಿದ್ದ ಹಾಗೆ ಬೆಳಕು ನನ್ನನ್ನು ಆವರಿಸತೊಡಗಿತು. ಆ ಬೆಳಕಿನಲ್ಲಿ ಒಂದಾದ ನಾನು ಏನೋ ಒಂದು ರೀತಿ ಸಂತೋಷ, ಶಾಂತಿಯನ್ನು ಅನುಭವಿಸುತ್ತಿದ್ದೆ. ಯಾವುದೇ ರೀತಿಯ ಆಲೋಚನೆ ನನಗೆ ಬರಲಿಲ್ಲ. ಹಾಗೆ ಸಂತೋಷದಿಂದ ಮಂದಹಾಸ ತಾನಾಗಿಯೇ ನನ್ನ ಮುಖದಲ್ಲಿ ಮನೆಮಾಡಿತು. 

ಈ ಅವಧಿಯಲ್ಲಿ ಒಂದು ನಿಶ್ಯಬ್ದ ಪಾತಾಳದಂತೆ ಒಡಲೊಳಗಿನ ಪ್ರಜ್ಞೆ ಸಂಪೂರ್ಣವಾಗಿ ಬೆಳಕಿನಿಂದ ತುಂಬಿತ್ತು. ಆ ಬೆಳಕು ದೈವತ್ವದಂತೆ ಭಾಸವಾಗುತ್ತಿತ್ತು. ಈಗ ನನಗೆ ಭಯವೂ ಇಲ್ಲ, ತೊಂದರೆಗೊಳಗಾದ ಆತ್ಮವೂ ಅಲ್ಲ. ಈ ಲೋಕದ ಗೊಂದಲ, ಮಕ್ಕಳ ನಿರ್ಲಕ್ಷ್ಯ, ನೋವು, ನಿರಾಸೆ ಇವೆಲ್ಲವೂ ದೂರವಾಗಿತ್ತು. ಅಲ್ಲಿಂದ ಹಿಂದೆ ತಿರುಗಿ ನೋಡಿದಾಗ – ನೋವುಗಳು ಎಷ್ಟು ದೂರವಿತ್ತು! ಕೇವಲ ಒಂದು ನಗು, ನೆನಪು, ಪ್ರೀತಿ ಮಾತ್ರ ಉಳಿದಿದ್ದವು.

ನನ್ನ ತಾಳ್ಮೆ, ನನ್ನ ಪ್ರೀತಿ, ನನ್ನ ಕಣ್ಣೀರು - ಇವೆಲ್ಲವೂ ಕಾಣದಂತೆ ಮಾಯವಾಗಿದ್ದವು. ನೋಡು ನೋಡುತ್ತಿದ್ದಂತೆಯೇ, ನಾನು ಮತ್ತೊಂದು ಮನೆ ಸೇರುತ್ತಿದ್ದೆ. ಇಲ್ಲಿ ನನ್ನ ನೀಲಾ, ನನ್ನ ಅಣ್ಣಂದಿರು, ಎಲ್ಲರೂ ನೆಮ್ಮದಿಯಿಂದ, ಸಂತೋಷದಿಂದ  ನನ್ನನ್ನು ಸ್ವಾಗತಿಸುತ್ತಿದ್ದಾರೆ. ಇದೊಂದು ಕನಸು ಇರಬಹುದು. ಇಲ್ಲವಾದರೂ, ಇದು ನನಗೆ ಜೀವನ. ನನ್ನ “ಕನಸು - ಜೀವನ”.

***

 

✍🏻 Deepalaxmi Bhat
Mangaluru 

ಭಾನುವಾರ, ಏಪ್ರಿಲ್ 27, 2025

ಹುಣಸೆ ಮರದ ನೆರಳಿನಲ್ಲಿ - ಒಂದು ಸತ್ಯಗಾಥೆ

✍🏻*ದೀಪಲಕ್ಷ್ಮಿ ಭಟ್*, ಮಂಗಳೂರು

 

ತುಂಬಾ ವರ್ಷಗಳ ಮೇಲಾಯ್ತು ನಾನು ಇಲ್ಲಿಗೆ ಬಂದು. ಇದು ನನ್ನ ಊರು. ನಾನು ಹುಟ್ಟಿ ಬೆಳೆದ ನನ್ನ ಸವಣೂರು. ನಾವು ಊರು ಬಿಟ್ಟು ಬೆಂಗಳೂರಿಗೆ ಹೋಗಿ ಹಲವಾರು ವರ್ಷಗಳೇ ಕಳೆದಿವೆ. ನಮ್ಮ ಊರಿನಲ್ಲಿ ಓದು ಬರಹಕ್ಕೆ ಪ್ರಾಶಸ್ತ್ಯ ಕಮ್ಮಿ. ಹಾಗಾಗಿ ನಾನು ಮೇಲ್ದರ್ಜೆಯ ಕಲಿಕೆಗಾಗಿ ಬೆಂಗಳೂರಿಗೆ ಬಂದವ, ಓದು ಮುಗಿಸಿ ಅಲ್ಲೇ ಕೆಲಸ ಗಿಟ್ಟಿಸಿಕೊಂಡು, ಹಾಯಾಗಿ ಅಲ್ಲೇ ಸಂಸಾರ ಹೂಡಿದೆ. ನನಗೋ, ಊರಿನಲ್ಲಿ ಹಿಂದೆ ಮುಂದೆ ಯಾರೂ ಇಲ್ಲದ ಕಾರಣ, ಊರಿಗೆ ಬರುವ ಗೋಜೇ ಇರಲಿಲ್ಲ. ಹಳೆಯ ಕಾಲದ ಬೀದಿ ದಾರಿಗಳಲ್ಲಿ ನನ್ನ ಹೆಜ್ಜೆಗಳು ಹೊಸದಾಗಿ ಅಟ್ಟಿಹಾಕಿದ ಧೂಳಿನ ಮೇಲೆ ಹೆಜ್ಜೆ ಗುರುತು ಬಿಟ್ಟವು. ನನ್ನ ಬಾಲ್ಯದ ನೆನಪುಗಳು ಪ್ರತಿಯೊಂದು ಕೂಡ ಈ  ಬೀದಿಗಳಲ್ಲಿ ಇನ್ನೂ ಜೀವಂತವಾಗಿಯೇ ಇವೆ. 

https://images.nativeplanet.com/webp/kn/img/2016/10/sbt-1-07-1475841725.jpg



ನನ್ನ ಹೆಸರು ರಾಜ. ನಾನು ಪದವಿ ಗಳಿಸಲೆಂದು ಬೆಂಗಳೂರಿಗೆ ಹೋದವ. ಅಲ್ಲೇ ಒಳ್ಳೆಯ ಕಂಪೆನಿಲಿ ಕೆಲಸ ಸಿಕ್ಕಿ ಅಲ್ಲೇ ಜೀವನದ ಬೇರೂರಿದ್ದರೂ, ನನ್ನ ಬಾಲ್ಯದ ನೆನಪುಗಳು ನನ್ನನ್ನು ಸದಾ ಸೆಳೆಯುತ್ತಿದ್ದವು. ಈ ಸಲ, ನಾನು ಊರಿಗೆ ಬಂದದ್ದು ಕೇವಲ ನೆನಪುಗಳಿಗಾಗಿ ಅಲ್ಲ, ಒಂದು ತೀವ್ರ ಆಕರ್ಷಣೆ, ಒಂದು ರಹಸ್ಯ ಪರಿಹರಿಸುವ ಸಂಕಲ್ಪ. ನನ್ನ ಕಾಲುಗಳು ಸವಣೂರಿನ ಹಳೆಯ ದಾರಿಗಳ ಮೇಲೆ ಸಾಗಿದಂತೆ, ನಾನು ನನ್ನ ಬಾಲ್ಯದ ನೆನಪುಗಳನ್ನು ಹಚ್ಚಿಹಾಕುತ್ತಿದ್ದೆ. ನಾನು ಎಲ್ಲಿದ್ದರೂ ನನ್ನ ಮನಸ್ಸು ಹಳೆಯ ದಾರಿಗಳತ್ತ, ದೊಡ್ಡ ಹುಣಸೆ ಮರದ ಕಡೆಗೆ, ನನ್ನ ಬಾಲ್ಯದ ನೆಲೆಮೂಡಿದ ಜಾಗಕ್ಕೆ ಹಿಂತಿರುಗುತ್ತಿತ್ತು.

ಆ ಮಂಗಳವಾರದ ಸಂಜೆ,ದೊಡ್ಡ ಹುಣಸೆ ಮರದ ಬಳಿ ನಾನು ನಿಂತಿದ್ದೆ. ಅದು ಕೇವಲ ಮರವಲ್ಲ; ನಮ್ಮ ಊರಿನ ಇತಿಹಾಸವನ್ನು ಹಂಚುವ ಜೀವಂತ ಸಾಕ್ಷಿ. ನಾನು ಹುಣಸೆ ಮರದ ಕೆಳಗೆ ನಿಂತು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾಗ, “ಇಲ್ಲಿ ಬಂದು ಏನನ್ನು ಹುಡುಕುತ್ತಿದ್ದೀನೋ?” ಎಂದು ನನ್ನನ್ನು ನಾನೇ ಪ್ರಶ್ನೆ ಕೇಳಿಕೊಂಡೆ. ನನ್ನ ಅಂತರಾಳದಲ್ಲಿ ಅರಳಿದ ಈ ಪ್ರಶ್ನೆಗೆ ಉತ್ತರವಿರಲಿಲ್ಲ. ಅಷ್ಟರಲ್ಲೇ, ಹೇಮಂತನ ಹೆಜ್ಜೆಗಳ ಧ್ವನಿ ಕೇಳಿಸಿತು. ಹೇಮಂತ ನನ್ನ ಬಾಲ್ಯದ ಗೆಳೆಯ. ನನ್ನ ಹಳೆಮನೆಯ ನೆರೆಮನೆಯ ರೈತ ಶಿವಣ್ಣನ ಮಗ. ಅವನು ನನ್ನನ್ನು ನೋಡಿ ಕ್ಷಣಕಾಲ ನಿಂತು, “ರಾಜ, ನೀನು ಊರಿಗೆ ಹಿಂದಿರುಗಿದ್ದೀಯ ಅಂತ ನನಗೆ ಗೊತ್ತಾಗಿತ್ತು. ಆದರೆ ನೀನು ಈ ಮರದ ಬಳಿ ನಿಂತಿದ್ದೀಯ ಅನ್ನೋದು ಅಷ್ಟೇ ಕಾಕತಾಳೀಯ!” ಎಂದು ನಗುತ್ತಲೇ ಹೇಳಿದ.

ನಾನು ಹುಣಸೆ ಮರದ ತಳದಲ್ಲಿ ಕುಳಿತುಕೊಂಡು ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಿದ್ದೆ. “ಈ ಮರದಲ್ಲಿ ಅದೆಷ್ಟೋ ದಿನ ನಾವು ಆಟವಾಡಿದ್ದು, ನಮ್ಮ ಬೇಸರ ಎಲ್ಲವೂ ಅಡಗಿ ಹೋಗಿ ಬದುಕು ಸುಂದರವಾಗಿ ಕಾಣಿಸುತ್ತಿತ್ತು. ಆದರೆ ಈಗ, ಹೇಮಂತ, ನೀನು ಹೇಳೋದು ಏನು? ಊರಿನಲ್ಲಿ ವಿಚಿತ್ರ ನಡೆಯುತ್ತಿದೆಯಾ? ಏನದು ಸ್ವಲ್ಪ ಬಿಡಿಸಿ ಹೇಳು.” ಎಂದು ಕೇಳಿದೆ.

ಹೇಮಂತ ತಕ್ಷಣ ಗಂಭೀರನಾದ. “ ನಮ್ಮ ಊರಿನ ಜಮೀನುಗಳ ದೊಡ್ಡ ಭಾಗ ಈಗ ಕಳ್ಳರ ಗುಂಪು ಮತ್ತು ರಾಜಕಾರಣಿಗಳ ಹಾವಳಿಗೆ ಸಿಲುಕಿದೆ. ಅಲ್ಲಿ ನಾನಾ ರೀತಿಯ ಗೋಪ್ಯ ಕ್ರಿಯೆಗಳು ನಡೆಯುತ್ತಿವೆ. ಇತ್ತೀಚಿಗೆ, ಗೋವುಗಳನ್ನು ಭಕ್ಷಿಸುವ ಜನರೂ ಹುಟ್ಟಿಕೊಂಡಿದ್ದಾರೆ. ಊರಿನ ಜನರು ಭಯದಿಂದ ದಿಕ್ಕು ತೋಚದೆ ಬದುಕುತ್ತಿದ್ದಾರೆ. ನಾವು ಏನು ಮಾಡಬೇಕು ಎಂಬುದು ಯಾರಿಗೂ ಗೊತ್ತಿಲ್ಲ. ಹಾಗೇ, ಈ ಮರದ ಪಕ್ಕದಲ್ಲಿದ್ದ ಗುಹೆಯ ಒಳಗೆ ನಾವು ಕೆಲವರು ಹೀಗೆ ಒಂದು ರಜೆಯ ಸಂಜೆ ಹೋಗಿದ್ದೆವು. ಆದರೆ ಈ ಬಗ್ಗೆ ಹೇಳಲು ಯಾರಿಗೂ ಧೈರ್ಯವಿಲ್ಲ. ಆ ಗುಹೆಯ ಒಳಗಿನ ಪಠ್ಯಗಳು, ಶಿಲ್ಪಗಳು, ಮತ್ತು ಬೆಳಕಿಲ್ಲದ ಒಂದು ಪ್ರಪಂಚ, ಅವುಗಳಿಗೆ ಅರ್ಥ ಕಲ್ಪಿಸಲು ನಮಗೆಲ್ಲ ಸಾಧ್ಯವೇ ಇಲ್ಲ,” ಎಂದು ಹೇಳಿದ. ಹೇಮಂತನ ಮಾತು ಕೇಳಿ, ನನ್ನ ಕುತೂಹಲ ತೀವ್ರವಾಯಿತು. ನಾವು ಆ ದಿನವೇ ಆ ಗುಹೆಯತ್ತ ಹೋಗುವ ತೀರ್ಮಾನ ಕೈಗೊಂಡೆವು. ದೊಡ್ಡ ಹುಣಸೆ ಮರದಿಂದ ಸ್ವಲ್ಪ ದೂರದಲ್ಲಿದ್ದ ಆ ಗುಹೆಯ ಸುತ್ತಮುತ್ತ ಗಾಢವಾದ ಶಾಂತತೆಯಿತ್ತು. ಅದರೊಳಗೆ ಪ್ರವೇಶಿಸುವಾಗ, ನನ್ನ ಮೊದಲ ಅನುಭವ ಬಹಳ ವಿಚಿತ್ರ. ತಂಪಾದ ಗಾಳಿ ನಮ್ಮ ಮೇಲೆ ಬೀಸುತ್ತಿದ್ದಂತೆ, ತುಂಬಾ ಹಳೆಯ ಕಾಲದ ವಾತಾವರಣದಂತೆ ಭಾಸವಾಯಿತು. ತಳದಲ್ಲಿ ಕಾಣಿಸಿಕೊಂಡ ಬ್ರಹ್ಮ ಲಿಪಿ ನನ್ನನ್ನು ನಿಖರವಾಗಿ ಸೆಳೆದಿತ್ತು. ಹೇಮಂತ, ಈ ಲಿಪಿಯನ್ನು ಓದುತ್ತಿದ್ದಂತೆ, ಪಠ್ಯವು ಬರೆದಿದ್ದ ಮಾತು ನನ್ನ ಬದುಕಿನ ದಿಕ್ಕು ತೋರಿಸಿತು:
"ನೀನು ನಿನ್ನ ಮನಸ್ಸಿನ ಶ್ರದ್ಧೆಯಿಂದ ನಿನ್ನ ಗತಿಯನ್ನು ಅರಿಯಬೇಕು. ಅನ್ಯಾಯವನ್ನು ಸೋಲಿಸಲು ದಾರಿ ಇದು."

ಆ ಶಿಲಾ ಲಿಪಿ ನಮ್ಮ ಮನಸ್ಸಿಗೆ ಗೊಂದಲ ಉಂಟುಮಾಡಿದರೂ, ನನಗೆ ಕೆಲವು ವಿಷಯಗಳು ಇನ್ನೂ ಅರ್ಥವಾಗಬೇಕಿತ್ತು. ಅಲ್ಲಿನ ವಾತಾವರಣಕ್ಕೂ ನಮ್ಮ ಅಂತರಾಳಕ್ಕೂ ಒಂದು ವಿಚಿತ್ರ ಸಂಬಂಧವಿರಬೇಕು ಎನಿಸಿತು. ಮುಂದೆ ಹೋಗುತ್ತಿದ್ದಂತೆ, ಗುಹೆಯ ಒಳಗಿನ ಶಿಲೆಗಳಲ್ಲಿ ಉಚ್ಚರಿಸಲಾಗದ ಪ್ರಾಚೀನ ಲಿಪಿಗಳು ಗೋಚರವಾಗುತ್ತಿದ್ದವು. ನನ್ನ ದೃಷ್ಟಿಗೆ ಬಿದ್ದದ್ದು ಮಾತ್ರ ಒಂದು ಬೃಹತ್ ಪೆಟ್ಟಿಗೆ. ಕಂಚಿನಲ್ಲಿ ಮಾಡಲಾಗಿದ್ದ ಆ ಸುಂದರವಾದ ಪೆಟ್ಟಿಗೆಯ  ಮೇಲೆ ಬ್ರಹ್ಮ ಲಿಪಿಯಲ್ಲಿ ಬರೆಯಲಾಗಿತ್ತು:
"ನೀನು ಈ ಪ್ರಪಂಚದ ಕತ್ತಲೆಯನ್ನು ಸೋಲಿಸಬೇಕಾದವನು."

ಆ ಪೆಟ್ಟಿಗೆಯನ್ನು ತೆರೆಯಲು ಪ್ರಯತ್ನಿಸಿದೆವು. ಹೇಮಂತನಿಗೆ ಸಾಧ್ಯವೇ ಆಗದ ಕೆಲಸ ನನ್ನ ಕೈಯಿಂದ ಸಾಧ್ಯವಾಯಿತು. ವಿಚಿತ್ರ ಎನಿಸಿ ರೋಮಾಂಚನವಾಯಿತು. ತೆರೆದ ಆ ಪೆಟ್ಟಿಗೆಯ ಒಳಗೆ ಒಂದು ಹೊಳೆಯುವ ಖಡ್ಗ ಮತ್ತು ಗ್ರಂಥ ನನ್ನ ಜೀವನದ ದಿಕ್ಕು ಬದಲಾಯಿಸುವುದಾಗಿತ್ತು. ಈ ಸಾಧನಗಳು ನನ್ನ ಬದುಕಿನಲ್ಲಿ ಏನನ್ನು ಬದಲಾಯಿಸುತ್ತವೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಆ ಖಡ್ಗ, ಸೂರ್ಯನ ಬೆಳಕಿನಂತೆ ಹೊಳೆಯುತ್ತಿತ್ತು. ಮತ್ತು ಆ ಗ್ರಂಥದ ಮೊದಲ ಪುಟದಲ್ಲಿ ಹೀಗೆ  ಬರೆಯಲಾಗಿತ್ತು:
"ನೀನು ಈ ಜ್ಞಾನವನ್ನು ಪಡೆದು, ಅನ್ಯಾಯವನ್ನು ಸೋಲಿಸಬೇಕು. ಇಲ್ಲವೇ ನಿನ್ನ ಪ್ರೀತಿಯ ಈ  ಊರಿನಿಂದ ತಲೆಮರೆಸಬೇಕು."

ನನ್ನೊಳಗಿನ ಹೆದರುವ ಜ್ವಾಲೆಗೂ, ಈ ಗ್ರಂಥದ ಸತ್ವಶಕ್ತಿಗೂ ನಡುವೆ ಒಂದು ಘರ್ಷಣೆ. ಆದರೂ, ನಾನು ಈ ಚಿನ್ನದ ಖಡ್ಗಯನ್ನು ಹಿಡಿಯಬೇಕೆಂದು ತೀರ್ಮಾನಿಸಿದೆ. ನನ್ನ ಬೆನ್ನುಹುರಿಯಲ್ಲಿ ಇರುವ ಶಕ್ತಿ ತುಂಬಿ, ನಾನು ಪೆಟ್ಟಿಗೆಯಿಂದ ಖಡ್ಗಯನ್ನು ಹೊರತೆಗೆದೆ. ಹೊಸ ಆತ್ಮಶಕ್ತಿಯೊಂದಿಗೆ ಹೊರಬಂದೆ. ಖಡ್ಗದ ಮೂಲಕ ನನಗೆ ಒಂದು ವಿಶೇಷ ಶಕ್ತಿ ದೊರೆತಂತಾಗಿ ನನಗೆ ಊರಿನ ಭವಿಷ್ಯದ ದೃಷ್ಟಾಂತವು ತೋರಿಸಿತು. ನಮ್ಮ ಊರಿನ ಜನರು ಅನ್ಯಾಯದಿಂದ ಪೀಡಿತರಾಗಿದ್ದರು. ನಾನು ಹೇಮಂತ ಮತ್ತು ಊರಿನ ಇನ್ನೂ ಕೆಲವು ಮಾನ್ಯರನ್ನು ಸೇರಿಸಿಕೊಂಡು, ನಾವು ಕಳ್ಳರು, ರಾಜಕಾರಣಿಗಳು ಹಾಗೂ ಗೋಭಕ್ಷಕರನ್ನು ಎದುರಿಸಲು ತಯಾರಾದೆವು. ಮೊದಲು ಊರಿನ ಜನರ ಭಯವನ್ನು ತೊಡೆದು ಹಾಕಲು ಸಾಧ್ಯವಿಲ್ಲ ಎಂದು ನನಗೆ ಅರ್ಥವಾಗಿತ್ತು. ಹೀಗಾಗಿ ನಾನು ಅವರ ಮಧ್ಯೆ ನಿಂತು - "ನಮ್ಮ ಊರಿನಲ್ಲಿ ಮೊದಲು ನೀವೆಲ್ಲರೂ ನಿಮ್ಮ ಭಯವನ್ನು ತೊಡೆದು ಹಾಕಬೇಕು," ಎಂದೆ. "ನಿಮ್ಮಲ್ಲಿರುವ ಅಪಾರ ಶಕ್ತಿಯನ್ನು ಮರೆತುಬಿಡಬೇಡಿ. ಇದು ನಮ್ಮ ನಾಡು, ನಮ್ಮ ಹಕ್ಕು, ಮತ್ತು ಅದನ್ನು ಉಳಿಸುವ ಜವಾಬ್ದಾರಿ ನಮ್ಮದು." ಧೈರ್ಯ ಪಡೆದುಕೊಂಡ ಜನರು ನನ್ನ ಬೆಂಬಲದಲ್ಲಿ ಬಲವಾಗಿರಲು ನಿರ್ಧರಿಸಿದರು.

ಮರುದಿನವೇ, ನಾವೆಲ್ಲರೂ ಜೊತೆ ಸೇರಿ, ಕಳ್ಳರ ಗುಂಪಿನ ನಾಯಕನಿಗೆ ಸವಾಲು ಹಾಕಿ, "ನೀನು ಈ ಊರಿನ ನೈಸರ್ಗಿಕ ಸಂಪತ್ತನ್ನು ಹಾಲು ಮಾಡಿದೆ ಅಲ್ಲವೇ? ಈಗ ನೀನು ನಮ್ಮ  ಸತ್ಯದ ಮುಂದೆ ಶರಣಾಗು," ಎಂದೆ. ನಾನು ಹಿಡಿದಿದ್ದ ಖಡ್ಗದ ಬೆಳಕು ನನ್ನ ನಂಬಿಕೆಯನ್ನು ಪ್ರತಿನಿಧಿಸುತ್ತಿತ್ತು. ಅನೇಕ ಗಂಟೆಗಳ ಸಂವಾದ, ಸವಾಲು, ಮತ್ತು ಖಡ್ಗದ ಶಕ್ತಿಯಿಂದ ಉಂಟಾದ ಪರಿಣಾಮದಿಂದ, ಕಳ್ಳರು ನಮ್ಮ ಗ್ರಾಮವನ್ನು ಬಿಟ್ಟು ಹೋದರು. ರಾಜಕಾರಣಿಗಳ ಸಹಾಯದಿಂದ ನೈಸರ್ಗಿಕ ಸಂಪತ್ತನ್ನು ಪುನಃ ನವೀಕರಿಸಲಾಯಿತು. ಗೋಭಕ್ಷಕರು ಭಯದಿಂದ ನಡುಗಿ, ಸಸ್ಯಾಹಾರಿಗಳಾಗಿ ಪರಿವರ್ತನೆಯಾದರು. ಊರಿನ ಜನರಲ್ಲಿ ನಂಬಿಕೆ ಮತ್ತು ಬಲ ಮತ್ತೆ ಮೂಡಿತು.

ಇಂದು, ದೊಡ್ಡ ಹುಣಸೆ ಮರ ಕೇವಲ ನಮ್ಮ ಬಾಲ್ಯದ ನೆನಪುಗಳೇ ಅಲ್ಲ, ಅದು ಈಗ ನಮ್ಮ ಹೋರಾಟದ ಸಂಕೇತವಾಗಿದೆ. ಈ ಅವಸಾನ ನಮ್ಮೊಳಗಿನ ಅನ್ಯಾಯದ ವಿರುದ್ಧ ಹೋರಾಡುವ ಶಕ್ತಿ ಉಳಿಸಿದೆ. ನಾನು ಊರಿನಿಂದ ಹೊರಡುವ ಮುನ್ನ ಮತ್ತೆ ಮರದ ಮುಂದೆ ನಿಂತು ತಲೆ ಎತ್ತಿ ನೋಡಿದೆ. ಅದು ಅಂದಿನಂತೆ ಶಕ್ತಿಯ ಚಿಹ್ನೆಯಾಗಿ ನಳನಳಿಸುತ್ತಿತ್ತು. ಶಾಂತಿಯ ಸಂಕೇತವಾಗಿ ನೆಮ್ಮದಿಯ ಗಾಳಿ ಬೀಸುತ್ತಿತ್ತು. ಸವಣೂರು ಈಗ ಶಾಂತ, ಸಶಕ್ತ, ಮತ್ತು ಹೊಸ ಆಕರ್ಷಣೆಗಳಿಗೆ ಮನೆಮಾಡಿದೆ. ಈಗ ನಾನು ಎಲ್ಲಿಯೇ ಹೋಗಿ ನೆಲೆಯಾದರೂ, ಈ ಮರದ ನೆರಳಿನಲ್ಲಿ ನನ್ನ ಹೃದಯವನ್ನು ಉಳಿಸಿರುತ್ತೇನೆ.

 

✍🏻 *Deepalaxmi Bhat*

Mangaluru




ಸೋಮವಾರ, ಮಾರ್ಚ್ 17, 2025

ಎರಡು ಪ್ರಪಂಚಗಳ ನಡುವೆ

✍🏻*ದೀಪಲಕ್ಷ್ಮಿ ಭಟ್*, ಮಂಗಳೂರು

 


 *ಎರಡು ಪ್ರಪಂಚಗಳ ನಡುವೆ*

ಸೂರ್ಯನಗರಿ ಎಂಬ ಸಣ್ಣ ಪಟ್ಟಣ. ಆ ಪಟ್ಟಣದ ನಾಲ್ಕೂ ದಿಕ್ಕುಗಳಲ್ಲಿ ಹಚ್ಚ ಹಸಿರಿನ ಕಾಡು ಮತ್ತು ಸರೋವರದ ಪ್ರಶಾಂತ ವಾತಾವರಣ. ಜನರೆಲ್ಲರೂ ಸುಂದರವಾದ ರೀತಿಯಲ್ಲಿ ತಮ್ಮ ಜೀವನ ನಡೆಸುತ್ತಿದ್ದರು. ಒಗ್ಗಟ್ಟು, ಸಹಾಯಕ ಮನೋಭಾವ, ಗುರುಹಿರಿಯರ ಮೇಲೆ ಕಟ್ಟುನಿಟ್ಟಿನ ಗೌರವ, ಎಲ್ಲಕ್ಕಿಂತಲೂ ಹೆಚ್ಚಾಗಿ ಅಲ್ಲಿನ ಹೆಣ್ಣುಮಕ್ಕಳು ಆರಾಮಾಗಿ ಯಾರ ಭಯವೂ ಇಲ್ಲದೆ ಓಡಾಡಬಹುದಾದ ಸಂಸ್ಕೃತಿ ಇದ್ದ ಊರು. ಆದರೂ, ಆ ಪಟ್ಟಣದಲ್ಲಿ  ಜೀವಿತ ಪ್ರಪಂಚದ ಆಚೆಗಿನ ಒಂದು ಹಿರಿದಾದ ರಹಸ್ಯ ನೆಲೆಮಾಡಿತ್ತು. 

ಆ ಪಟ್ಟಣದ ಹೊರವಲಯದಲ್ಲಿ ಮಂಜು ಮತ್ತು ಮಿತಿಮೀರಿ ಬೆಳೆದ ಮರಗಳಿಂದ ಮರೆಮಾಡಲ್ಪಟ್ಟ ಒಂದು ಪ್ರಾಚೀನ ಚಿಕಿತ್ಸಾಲಯ ಇತ್ತು. ಅದು ಮಾಮೂಲಿ ಆಸ್ಪತ್ರೆಗಳಿಂದ ವಿಭಿನ್ನವಾಗಿತ್ತು. ಒಂದು ಜೀವಿಯ ಮರಣಾನಂತರ ಅದರ ಆತ್ಮವು ತನ್ನ ಪರಲೋಕದ ಪ್ರಯಾಣ ಶುರು ಆಗುವ ಮೊದಲು ಈ ಚಿಕಿತ್ಸಾಲಯಕ್ಕೆ ಬರುತ್ತದೆ ಎಂಬುದು ನಂಬಿಕೆ. ತಮ ತಮ್ಮ ಆತ್ಮಗಳ ತೊಂದರೆಗಳಿಗೆ ಚಿಕಿತ್ಸೆ ನೀಡಲು ಬಯಸುವ ಮಾನವರು, ಪ್ರಾಣಿಗಳು ಮತ್ತು ಸಮುದ್ರದ ಜೀವಿಗಳ ಆತ್ಮಗಳಿಗೆ ಇದು ಒಂದು ಅಭಯಾರಣ್ಯವಾಗಿತ್ತು. ಈ ಚಿಕಿತ್ಸಾಲಯವನ್ನು ಪಂಡಿತರ ಹಾಗೂ ಉತ್ತಮೋತ್ತಮ ವೈದ್ಯರ ಆತ್ಮಗಳ ಗುಂಪು ನಡೆಸುತ್ತಿತ್ತು. ೧೨ನೇ ಶತಮಾನದಲ್ಲಿ  ಅದೇ ಪಟ್ಟಣದಲ್ಲಿ ಪಂಡಿತರೆನಿಸಿಕೊಂಡ ಧನ್ವಂತರಿಮಹರ್ಷಿ ಅನ್ನುವವರ ನೇತೃತ್ವದಲ್ಲಿ ಈ ಚಿಕಿತ್ಸಾಲಯ ಕಾರ್ಯ ನಿರ್ವಹಿಸುತ್ತಿತ್ತು. ಒಂದು ಕಾಲದಲ್ಲಿ ತಮ್ಮ ಜೀವಿತಾವಧಿಯಲ್ಲಿ ಅದ್ಭುತ ವೈದ್ಯರಾಗಿದ್ದ ಅವರು ನಿಗೂಢ ವ್ಯಕ್ತಿಯಾಗಿದ್ದರು. ಅವರ ಸಹಾಯಕರಲ್ಲಿ ಸಮುದ್ರ ಜೀವಿಗಳಿಗೆ ಚಿಕಿತ್ಸೆ ನೀಡುವ ವೈದ್ಯೆಯಾಗಿ ಮೀನಾಕುಮಾರಿ ಮತ್ತು ಭೂಮಿಯ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಭೂಪತಿ ಅವರು ಸೇರಿದ್ದಾರೆ.  

ಆ ಊರಿನ ಎಂಟು ವರ್ಷದ ಬಾಲಕಿ ಛಾಯ, ಆತ್ಮಗಳೊಂದಿಗೆ ಸಂವಹನ ನಡೆಸುವ ಅಸಾಧಾರಣ ಶಕ್ತಿಯನ್ನು ಹೊಂದಿರುವ ಹುಡುಗಿ. ಅವಳಿಗೆ ಹಾಗೂ ಆ ಪಟ್ಟಣದಲ್ಲಿ ವಾಸಿಸುತ್ತಿದ್ದ ಇನ್ನಿತರ ಕೆಲವು ವಿಶೇಷ ವ್ಯಕ್ತಿಗಳಿಗೆ ಮಾತ್ರ ಆ ಚಿಕಿತ್ಸಾಲಯದ ಅಸ್ತಿತ್ವ ತಿಳಿದಿತ್ತು. ಛಾಯ ಪ್ರತಿದಿನ ಕ್ಲಿನಿಕ್‌ಗೆ ಭೇಟಿ ನೀಡುತ್ತಿದ್ದಳು, ಅವಳ ನಗು ಆತ್ಮಗಳಿಗೆ ಸಂತೋಷವನ್ನು ತರುತ್ತಿತ್ತು ಮತ್ತು ಅವಳ ಸೌಮ್ಯ ವರ್ತನೆ ಅವರಿಗೆ ಸಾಂತ್ವನ ನೀಡುತ್ತಿತ್ತು. 

ಆ ದಿನ ಛಾಯಾಳ ಪಕ್ಕದ ಮನೆಯ ಅಮರನಿಗೆ ಮದುವೆ. ಮದುವೆಗೆ ಹೋದ ಛಾಯಾಳಿಗೆ ಅಮರನಿಗೆ ಹೆಂಡತಿಯಾಗಿ  ಬರುತ್ತಿರುವ ಹುಡುಗಿ ಸ್ನೇಹಾಳನ್ನು ನೋಡುತ್ತಲೇ ಅವಳಿಗೂ ತನ್ನಂತೆ ಅಸಾಮಾನ್ಯ ಶಕ್ತಿ ಇದೆ ಎಂದು ಸೂಚಿಸುವ ಪ್ರಭಾವಳಿಯನ್ನು ಛಾಯ ಸ್ನೇಹಾಳಲ್ಲಿ ಕಂಡಳು.  ಈ ನವವಿವಾಹಿತೆ ಪಕ್ಕದ ಮನೆಗೆ ಬಂದಾಗ ಛಾಯಾಳ ಜೀವನವು ಆಕರ್ಷಕ ತಿರುವು ಪಡೆದುಕೊಂಡಿತು.  
 
ಒಂದು ಬಿಸಿಲಿನ ಬೆಳಿಗ್ಗೆ ಛಾಯ ತನ್ನ ತೋಟದಲ್ಲಿ ಆಡುತ್ತಿದ್ದಂತೆ, ಸ್ನೇಹ ಸೌಮ್ಯವಾದ ನಗುವಿನೊಂದಿಗೆ ಛಾಯಾಳ ಹತ್ತಿರ ಬಂದಳು. "ಹಾಯ್ ಮಗೂ! ನಾನು ಸ್ನೇಹಾ. ನಾನು ಈಗಷ್ಟೇ ಇಲ್ಲಿಗೆ ಅಮರ್ ನ ಮದುವೆಯಾಗಿ ಬಂದಿದ್ದೇನೆ." ಅಂತ  ಹೇಳಿದಳು, ಅವಳ ಕಣ್ಣುಗಳು ಪ್ರೀತಿಯಿಂದ ಕೂಡಿದ್ದರೂ ಕುತೂಹಲದಿಂದ ಛಾಯ ಮಂದಹಾಸ ಬೀರಿ ಅಂದಳು - "ನಾನು ಛಾಯಾ. ನೀವು ... ಅಸಾಮಾನ್ಯ ಸ್ಥಳಗಳ ಬಗೆಗಿನ ಕಥೆಗಳನ್ನು ಇಷ್ಟಪಡುತ್ತೀರಾ?".  ಸ್ನೇಹಾ ಆಶ್ಚರ್ಯಚಕಿತಳಾದಂತೆ ಹುಬ್ಬೇರಿಸಿ ಹೌದು ಎಂಬಂತೆ ತಲೆಯಾಡಿಸಿದಳು. ಛಾಯಾ ತನ್ನ ರಹಸ್ಯಗಳನ್ನೂ ಹಂಚಿಕೊಳ್ಳಲು ನಿರ್ಧರಿಸಿದಳು. ಆ ಸಂಜೆ, ಆಕಾಶದಲ್ಲಿ ತಂಪಾದ ಗಾಳಿಯೊಂದಿಗೆ ಬೆಳದಿಂಗಳ ಬೆಳಕಿನಲ್ಲಿ, ಪಾರಿಜಾತದ ಪರಿಮಳದ ಆನಂದವನ್ನು ಆಸ್ವಾದಿಸುತ್ತಾ, ಅವಳು ಸ್ನೇಹಾಳನ್ನು ಮಂಜಿನ ಮೂಲಕ ಚಿಕಿತ್ಸಾಲಯಕ್ಕೆ ಕರೆದೊಯ್ದಳು. ವರ್ಣಪಟಲದ ಕಟ್ಟಡವು ನೆರಳುಗಳಿಂದ ಹೊರಹೊಮ್ಮುತ್ತಿದ್ದಂತೆ ಸ್ನೇಹಾ ಆಶ್ಚರ್ಯಚಕಿತಳಾಗಿ ಹೊಳೆಯುವ ಕಂಗಳನ್ನು ಒಂದು ಕ್ಷಣಕ್ಕೂ ಮುಚ್ಚದೆ ಸುತ್ತಲೂ ಏನೇನಿದೆ ಅನ್ನುವುದನ್ನು ನೋಡಿದಳು. 

ಒಳಗೆ, ಎಲ್ಲಾ ರೀತಿಯ ಆತ್ಮಗಳು ಅಲೆದಾಡುತ್ತಿದ್ದವು. ಹಲವಾರು ಆತ್ಮಗಳು ನೋವಿನಿಂದ ನರಳುತ್ತಿದ್ದರೆ, ಇನ್ನೂ ಹಲವು ಆತ್ಮಗಳು ಚಿಕಿತ್ಸೆ ಪಡೆದು ಮುಕ್ತಿ ಹೊಂದುವ ಕ್ಷಣಗಣನೆ ಮಾಡುತ್ತಿದ್ದವು. ಒಂದು ಕಡೆ ಪುಟ್ಟದೊಂದು ಹುಲಿಮರಿಯ ಆತ್ಮ ಸಮುದ್ರದಲ್ಲಿ ಮುಳುಗಿದ ನಾವಿಕನೊಂದಿಗೆ ಮಾತುಕತೆ ನಡೆಸುವುದನ್ನು ನೋಡಿದಾಗ ಸ್ನೇಹಾಳ ಹೃದಯವು ವಿಸ್ಮಯದಿಂದ ಉಬ್ಬಿತು. ಧನ್ವಂತರಿಮಹರ್ಷಿಗಳು  ಸ್ನೇಹಾಳ ಶಕ್ತಿಯನ್ನು ಗುರುತಿಸಿ ಒಳಗೆ ಸ್ವಾಗತಿಸಿದರು. "ನೀವು ಒಂದು ವಿಶೇಷ ಕಾರಣಕ್ಕಾಗಿ ಇಲ್ಲಿಗೆ ನಿಮ್ಮ ದಾರಿಯನ್ನು ಕಂಡುಕೊಂಡಿದ್ದೀರಿ" ಎಂದು ಅವರು ಹೇಳಿದರು. "ಈ ಸ್ಥಳವು ನಿಮ್ಮಿಬ್ಬರನ್ನೂ ಖಂಡಿತವಾಗಿಯೂ ಒಂದು ಉತ್ತಮ ಉದ್ದೇಶದಿಂದ ಬರಮಾಡಿಕೊಂಡಿದೆ." 

ಇದಾದ ಬಳಿಕ ಹವಾಮಾನ ಏರಿಳಿತದ ಪರಿಣಾಮ ತಿಂಗಳುಗಳ ಕಾಲ, ಸ್ನೇಹಾ ಹಾಗೂ ಛಾಯಾ ಪ್ರತಿದಿನ ಭೇಟಿ ನೀಡುತ್ತಾ, ಆತ್ಮಗಳ ಲೋಕದಲ್ಲಿ  ಕಾರ್ಯನಿರ್ವಹಿಸುತ್ತಿದ್ದ  ವೈದ್ಯರಿಗೆ ಸಹಾಯ ಮಾಡುತ್ತಾ ಮತ್ತು ಆತ್ಮಗಳೊಂದಿಗೆ ಸ್ನೇಹ ಬೆಳೆಸುತ್ತಿದ್ದರು. ಒಂದು ದಿನ, ಚಿಕಿತ್ಸಾಲಯದ ಹೊಸ ವಿಭಾಗ ಒಂದನ್ನು ಅನ್ವೇಷಿಸುವಾಗ, ಈ ಆತ್ಮಗಳ ಲೋಕವನ್ನು ಜೀವಿತರ ಲೋಕದಿಂದ ಬೇರ್ಪಡಿಸುವ ಹರಿಯುವ ನೀರಿನ ಸುರಂಗವನ್ನು ಅವರು ಕಂಡುಹಿಡಿದರು. ಸುರಂಗವು ಅಲೌಕಿಕ ಬೆಳಕಿನಿಂದ ಮಿನುಗುತ್ತಿತ್ತು. ಅದರ ನೀರು ಎರಡು ಲೋಕಗಳ ನಡುವಿನ ಸೂಕ್ಷ್ಮ ಸಮತೋಲನವನ್ನು ಕಾಯ್ದುಕೊಳ್ಳುವ ಶಕ್ತಿಯಿಂದ ಕೂಡಿತ್ತು. ಈ ನೀರಿನ ಮೂಲವನ್ನು ದಾಟುತ್ತಿದ್ದ ಆತ್ಮಗಳು ಇಹಲೋಕದ ನೋವು, ನರಳಾಟಗಳನ್ನು ತೊಡೆದು ಶುದ್ದೀಕರಣಗೊಳ್ಳುತ್ತಿದ್ದವು. ಆ ದಿನ, ಛಾಯ ಹಾಗೂ ಸ್ನೇಹಾ ನೋಡುತ್ತಿದ್ದಂತೆಯೇ, ಕೆಲವೊಂದು  ದುರ್ಬಲ ಆತ್ಮಗಳು, ಶುದ್ದೀಕರಣಗೊಳ್ಳದೆ, ಕೆಟ್ಟ ಮನಸ್ಥಿತಿ ಹಿಡಿದು ಮೂಳೆ ಮಾಂಸ  ಪಡೆದು ವಿಕಾರ ಜೀವಿಗಳಾಗಿ ಪಟ್ಟಣದ ಕಡೆ ಹೋಗುತ್ತಿದ್ದವು. ಇದನ್ನು ನೋಡಿ ಬೆಚ್ಚಿಬಿದ್ದ ಛಾಯಾ ಮತ್ತು ಸ್ನೇಹಾ ಸುರಂಗಕ್ಕೆ ಧಾವಿಸಿದರು. ಮೀನು, ಪಕ್ಷಿಗಳು ಮತ್ತು ಇತರ ಜೀವಿಗಳ ಆತ್ಮಗಳು ನೀರಿನಲ್ಲಿ ಬೀಳುತ್ತಿದ್ದವು. ಆತ್ಮಗಳು ಶುದ್ದೀಕರಣಗೊಳ್ಳದೆ, ಮಾಂಸ ಮತ್ತು ಮೂಳೆಯಾಗುತ್ತಿದ್ದಂತೆ ಪುನರುಜ್ಜೀವನಗೊಂಡ ವಿಕಾರ ಜೀವಿಗಳು ಕಾಡು ಮತ್ತು ಜೀವಿತರ ಲೋಕಕ್ಕೆ ಹಾರಿದವು. ವೈದ್ಯರು ಭಯಭೀತರಾಗಿ ಒಟ್ಟುಗೂಡಿದರು. "ಸಮತೋಲನ ಮುರಿಯುತ್ತಿದೆ,"ಎಂದು ಧನ್ವಂತರಿಮಹರ್ಷಿಗಳು ಹೇಳಿದರು. "ಇದು ಹೀಗೆಯೇ ಮುಂದುವರಿದರೆ, ಅವ್ಯವಸ್ಥೆ ಜೀವಿತರ ಲೋಕಕ್ಕೆ ಹರಡುತ್ತದೆ." ಒಂದು ಕಾಲದಲ್ಲಿ ಸ್ನೇಹಪರವಾಗಿದ್ದ ಆತ್ಮಗಳು ಈಗ ಮೂಳೆ ಮಾಂಸಗಳ ದೇಹ ಪಡೆದು ಆಕ್ರಮಣಕಾರಿಯಾಗಿ ಸುತ್ತಾಡುತ್ತಾ, ಎರಡೂ ಲೋಕಗಳ ಸಮತೋಲನಕ್ಕೆ ಅಪಾಯವನ್ನುಂಟುಮಾಡುತ್ತಿರುವುದನ್ನು ಛಾಯಾ ಮತ್ತು ಸ್ನೇಹಾ ಗಾಬರಿಯಿಂದ ನೋಡಿದರು. ವೈದ್ಯರುಗಳ ಸಹಾಯ ಪಡೆದು, ಜೀವಿತರ ಲೋಕವನ್ನು ಕಾಪಾಡುವುದು ಈಗ ಅವರ ಜವಾಬ್ದಾರಿಯಾಗಿತ್ತು.

ವಿನಾಶ ಮಾಡುವ ಉದ್ದೇಶ ಹೊಂದಿದ ಹಲವಾರು ವಿಕಾರ ಜೀವಿಗಳ ಆಕ್ರಮಣದಿಂದ ಛಾಯಾ ಮತ್ತು ಸ್ನೇಹಾ ತಪ್ಪಿಸಿಕೊಳ್ಳಲೆಂದು ಓಡಿದರು. ಶುದ್ದೀಕರಣಗೊಳ್ಳದೆ ಜೀವಂತವಾಗಿ ಬಂದ ಆ ಒಂದು ಗೂಳಿಯು ಅವರಿಬ್ಬರನ್ನೂ ಅಟ್ಟಿಸಿಕೊಂಡು ಬರುತ್ತಿತ್ತು. ಅದರ ಆಕ್ರಮಣದಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡರು.  ಒಂದು ಸುರಕ್ಷಿತ ಸ್ತಳವನ್ನು ತಲುಪಿದ ಅವರು, ಸಮಸ್ಯೆಯ ತೀವ್ರತೆಯನ್ನು  ಅರಿತುಕೊಂಡರು. ಅವರು ಆ ಚಿಕಿತ್ಸಾಲಯವನ್ನಾಗಲಿ, ಜೀವಿತರ ಜಗತ್ತನ್ನಾಗಲಿ  ಇಂತಹ ಅವ್ಯವಸ್ಥೆಗೆ ಬಿಟ್ಟುಕೊಡಲು ಅವರ ಮನಸೊಪ್ಪಲಿಲ್ಲ. ದೃಢನಿಶ್ಚಯ ಮಾಡಿಕೊಂಡು, ಅವರು ಹಿಂತಿರುಗಿ ಪರಿಹಾರವನ್ನು ಕಂಡುಕೊಳ್ಳಲು ನಿರ್ಧರಿಸಿದರು. 

ಚಿಕಿತ್ಸಾಲಯಕ್ಕೆ ಹಿಂತಿರುಗಿದ ಛಾಯ ಹಾಗೂ ಸ್ನೇಹಾಳಿಗೆ ಧನ್ವಂತರಿಮಹರ್ಷಿಗಳು ಈ ಅವ್ಯವಸ್ಥೆಯ  ಕಾರಣವನ್ನು ಬಹಿರಂಗಪಡಿಸಿದರು: ಸುರಂಗವನ್ನು ಬೇರ್ಪಡಿಸಿದ ಪ್ರಾಚೀನ ಕಾಲದ ರಕ್ಷಾಕವಚವು ವರ್ಷಗಳ ನಿರ್ಲಕ್ಷ್ಯದಿಂದ ದುರ್ಬಲಗೊಂಡಿತ್ತು. ಎರಡೂ ಪ್ರಪಂಚಗಳೊಂದಿಗೆ ಆಳವಾದ ಸಂಪರ್ಕ ಹೊಂದಿರುವ ಯಾರಾದರೂ ಮಾತ್ರ ಅದನ್ನು ಸರಿಪಡಿಸಬಹುದು. "ಆದರೆ ಈ ರಕ್ಷಾಕವಚವನ್ನು ಸರಿಪಡಿಸಲು ಅಪಾರ ಧೈರ್ಯ ಮತ್ತು ನಂಬಿಕೆಯ ಅಗತ್ಯವಿದೆ" ಎಂದು ಮೀನಾಕುಮಾರಿ ಎಚ್ಚರಿಸಿದರು. "ನೀರು ನಿಮ್ಮ ಸಾರವನ್ನು ಪರೀಕ್ಷಿಸುತ್ತದೆ." ಛಾಯಾ ಮತ್ತು ಸ್ನೇಹಾ ಮನಸ್ಸಿನಲ್ಲಿ ಧೈರ್ಯ ತುಂಬಿಕೊಂಡು ಈ ಕೆಲಸಕ್ಕೆ ಸಿದ್ಧರಾದರು. ವೈದ್ಯರ ಮಾರ್ಗದರ್ಶನದಲ್ಲಿ, ಅವರು ಸುರಂಗವನ್ನು ಪ್ರವೇಶಿಸಿದರು. ನೀರಿನ ಶಕ್ತಿಯು ಅವರ ಮೂಲಕ ಹಾದುಹೋಯಿತು. ಅವರ ಆಳವಾದ ಭಯಗಳನ್ನು ಮತ್ತು ಅತೀವ ಸಂತೋಷಗಳ ಕ್ಷಣಗಳನ್ನು ದರ್ಶಿಸಿತು. ಛಾಯಾ ತಾನು ಒಬ್ಬಂಟಿಯಾಗಿರುವ ಜಗತ್ತನ್ನು ಕಂಡರೆ ಸ್ನೇಹಾ ತನ್ನ ಪತಿ ಅಮರ್ ತನ್ನನ್ನು ಮರೆಯುವುದನ್ನು ದರ್ಶಿಸಿದಳು. ಛಾಯ ಹಾಗೂ ಸ್ನೇಹಾ ಇಬ್ಬರೂ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ಅವರವರ ದರ್ಶನಗಳನ್ನು ಒಟ್ಟಿಗೆ ಎದುರಿಸಿದರು. ನೋವಾದರೂ ಧೈರ್ಯದಿಂದ ಎದುರಿಸಿ ಮುಂದೆ ಸಾಗಿದರು. ಅವರ ಈ ಸಂಯೋಜಿತ ಶಕ್ತಿಯು ಸುರಂಗದ ಆ ರಕ್ಷಾಕವಚವನ್ನು ಪುನಃಸ್ಥಾಪಿಸಿತು. ಆತ್ಮಗಳು ಮತ್ತೆ ಶುದ್ಧೀಕರಣಗೊಳ್ಳಲು ಶುರುವಾದವು.

ರಕ್ಷಾಕವಚ ಸುಧಾರಿಸಿದಂತೆ, ಆವಾಗಲೇ ಮೂಳೆ ಮಾಂಸ ಪಡೆದ ವಿಕಾರ ಜೀವಿಗಳು ಶಾಂತವಾಗಿ ಆತ್ಮಗಳ ಲೋಕಕ್ಕೆ ಮರಳಿದವು. ಚಿಕಿತ್ಸಾಲಯ ಮತ್ತೆ ಸ್ಥಿರವಾಯಿತು. ಆ ಲೋಕದ ಹೊಳಪು ಎಂದಿಗಿಂತಲೂ ಪ್ರಕಾಶಮಾನವಾಗಿ ಕಾಣಿಸಿತು. ಜೀವಿತರ ಲೋಕವೂ ಅಲ್ಪಕಾಲದ ಭಯಾನಕ ಅನುಭವಗಳಿಂದ ಪಾರಾಗಿ ಮೊದಲಿನಂತೆ ಶಾಂತವಾಯಿತು. ಧನ್ವಂತರಿಮಹರ್ಷಿಗಳು ಛಾಯ ಹಾಗೂ ಸ್ನೇಹಾಳಿಗೆ  ಧನ್ಯವಾದ ಅರ್ಪಿಸುತ್ತಾ ಅವರನ್ನು ಚಿಕಿತ್ಸಾಲಯದ "ರಕ್ಷಕರು" ಎಂದು ಕರೆದರು. ಇದಾದ ಬಳಿಕ, ಛಾಯಾ ಮತ್ತು ಸ್ನೇಹಾ ತಮ್ಮ ಜೀವಿತರ ಲೋಕಕ್ಕೆ ಮರಳಿದರು. ಇದಾದ ಮೇಲೆ  ಅವರು ಚಿಕಿತ್ಸಾಲಯಕ್ಕೆ ಭೇಟಿ ನೀಡುವುದನ್ನು ಕಡಿಮೆಗೊಳಿಸಿದರೂ, ಆತ್ಮಲೋಕದ ವೈದ್ಯರು ಮತ್ತು ಆತ್ಮಗಳೊಂದಿಗಿನ ಅವರ ಬಾಂಧವ್ಯವು ಮುರಿಯಲಾಗದ ಅನುಬಂಧವಾಗಿ ಪರಿವರ್ತಿಸಿತ್ತು. ಛಾಯ ಹಾಗೂ ಸ್ನೇಹಾ ಈ ಎರಡು ಲೋಕಗಳ ನಡುವಿನ ಪ್ರಪಂಚದ ಜವಾಬ್ದಾರಿಯನ್ನು ತಮ್ಮ ತಲೆಯ ಮೇಲೆ ತೆಗೆದುಕೊಂಡು, ಜೀವಿತ ಕಾಲದಲ್ಲಿ ಅಗತ್ಯ ಇರುವಾಗಲೆಲ್ಲ ಆ ಲೋಕಕ್ಕೆ ತಮ್ಮ ಸೇವೆಯನ್ನು ಮುಡಿಪಾಗಿಟ್ಟರು.  ಈ ಎರಡು ಪ್ರಪಂಚಗಳ ನಡುವಿನ ಏರಿಳಿತವು ಸೂಕ್ಷ್ಮವಾಗಿದೆ, ಆದರೆ ರಕ್ಷಿಸಲು ಸಾಧ್ಯವಿರುವಂತಹುದಾಗಿದೆ ಎಂದು ಅವರಿಗೆ ತಿಳಿದಿತ್ತು. ವರ್ಷಗಳ ನಂತರ, ಛಾಯಾ ಮತ್ತು ಸ್ನೇಹಾ ಆ ಲೋಕ ಪ್ರವೇಶಿಸಿದಾಗ, ಸ್ನೇಹಾಳ ಕೈಯಲ್ಲಿ ಅವಳ ಪುಟ್ಟದಾದ ಮಗು ಇತ್ತು. ಆ ಮಗುವಿಗೂ ಈ  ಶಕ್ತಿ ಅನುವಂಶಿಕವಾಗಿ ದೊರೆತಿತ್ತು. ಅವರು ಅಲ್ಲಿ ಬಂದಾಗ ಆತ್ಮಗಳೆಲ್ಲವೂ ಅವರನ್ನು ಸ್ವಾಗತಿಸಲು ಮುಂದೆ ಬಂದರು. ಆಗ, ಆ ಮಗುವಿನ ಅಗಲವಾದ ಕಣ್ಣುಗಳು ಆಶ್ಚರ್ಯದಿಂದ ತುಂಬಿದ್ದವು. ಧನ್ವಂತರಿಮಹರ್ಷಿಗಳು ನಗುತ್ತಾ, "ರಕ್ಷಕತ್ವದ ಚಕ್ರವು ಮುಂದುವರಿಯುತ್ತದೆ" ಎಂದು ಹೇಳಿ, "ಜೀವಿತರ ಮತ್ತು ಆತ್ಮಗಳ ನಡುವಿನ ಸಮತೋಲನವು ತೊಂದರೆಗೊಳಗಾಗದೆ ಉಳಿಯುತ್ತದೆ" ಎಂಬುದನ್ನು ಖಚಿತಪಡಿಸಿದರು.


✍🏻 *Deepalaxmi Bhat*

Mangaluru



ಮಂಗಳವಾರ, ಫೆಬ್ರವರಿ 4, 2025

ರಕ್ತಸಂಬಂಧ

✍🏻*ದೀಪಲಕ್ಷ್ಮಿ ಭಟ್*, ಮಂಗಳೂರು


*ರಕ್ತಸಂಬಂಧ*



ಚರಪರನೆ ಸುರಿಯುತ್ತಿದ್ದ ಆ ಮಳೆಯ ನಾದವನ್ನಾಲಿಸುತ್ತಾ, ನನ್ನ ಇಷ್ಟವಾದ ಆ ಕುರ್ಚಿಯಲ್ಲಿ ಕುಳಿತು ನನ್ನ ಹೆಂಡತಿ ಮಾಡಿ ಕೊಟ್ಟ ಕಾಫಿಯನ್ನು ಆಸ್ವಾದಿಸುತ್ತಾ, ಇಂದಿನ ದಿನಪತ್ರಿಕೆಯ ಮೇಲೆ ಹಾಗೆ ಕಣ್ಣಾಡಿಸುತ್ತಿದ್ದೆ. ನನ್ನ ಪಕ್ಕದಲ್ಲಿ ನನ್ನ ಹೆಂಡತಿ ಒಣಗಿದ್ದ ಬಟ್ಟೆಗಳನ್ನೆಲ್ಲ ಮಡಚಿ ಅಟ್ಟಿ ಹಾಕುತ್ತಿದ್ದಳು. ಜೊತೆಗೆ ಮಧ್ಯಾಹ್ನಕ್ಕೆ ಯಾವ ಪದಾರ್ಥ ಮಾಡಲಿ ಎನ್ನುವುದನ್ನು ಲೆಕ್ಕ ಹಾಕುತ್ತಿದ್ದಳು. ಮೊದಲಿಗೆ ನಿಮಗೆ ನನ್ನ ಕಿರು ಪರಿಚಿಯ ಕೊಡುತ್ತೇನೆ. ನಾನು ಹರಿ ಶಾಸ್ತ್ರಿ. ವೃತ್ತಿಯಲ್ಲಿ ಊರಿನ ಶಾಲೆಯ ಮುಖ್ಯೋಪಾಧ್ಯಾಯನಾಗಿ 36 ವರ್ಷಗಳ ದೀರ್ಘ ಸೇವೆ ಮಾಡಿ, ಈಗ ನಿವೃತ್ತನಾಗಿ ವೃದ್ಧಾಪ್ಯವನ್ನು ಸ್ವಲ್ಪ ಆರಾಮವಾಗಿ ಕಳೆಯುತ್ತಿದೇನೆ. ಸಮಯ ಹಾಗೂ ಆರೋಗ್ಯ ಅನುಮತಿ ನೀಡಿದರೆ ಒಂದೊಂದು ಪೌರೋಹಿತ್ಯ ಕಾರ್ಯಗಳನ್ನು ಮಾಡುತ್ತೇನೆ. ಏನು ಮಾಡುವುದು, ಬ್ರಾಹ್ಮಣನಾಗಿ ಹುಟ್ಟಿದ ಮೇಲೆ ನಮ್ಮ ಪೌರೋಹಿತ್ಯದ ಪ್ರವೃತ್ತಿಯನ್ನು ಬಿಡಲು ಸಾಧ್ಯವಿಲ್ಲದ ಮಾತಲ್ಲವೇ? ಹೇಗೆ ವೈದ್ಯರಿಗೆ ರೋಗಿಗಳ ಕರೆ ಮುಖ್ಯವಾಗಿರುತ್ತದೋ ಹಾಗೆಯೇ ವೈದಿಕರಿಗೆ ದೇವರ ಹಾಗೂ ಜನಸಾಮಾನ್ಯರ ನಡುವೆ ಸೇತುವೆಯಂತೆ ಪೌರೋಹಿತ್ಯ ಕರ್ಮಗಳನ್ನು ಮಾಡುವುದು ಕರ್ತವ್ಯ ಎಂಬ ಭಾವನೆ. ನನ್ನ ಧರ್ಮಪತ್ನಿ ಜಲಜ. ಚಿಕ್ಕ ಪ್ರಾಯದಲ್ಲಿಯೇ ನನ್ನನ್ನು ವರಿಸಿ, ಮದುವೆಯಾದ ಮೂರು ವರ್ಷಗಳಲ್ಲಿ ರಾಮ ಹಾಗೂ ಕೃಷ್ಣ ಎಂಬ ಇಬ್ಬರು ಸುಂದರ ಜಾಣ ಮಗಂದಿರಿಗೆ ಜನ್ಮ ನೀಡಿ ಮಕ್ಕಳನ್ನು ಬೆಳೆಸುವುದರಲ್ಲಿಯೇ ತನ್ನ ಸುಖ ಸಂತೋಷವನ್ನು ಕಂಡವಳು.


ಇವತ್ತಿಗೆ ನಾವು ಮದುವೆಯ ಬಂಧದಲ್ಲಿ ಬೆಸೆದು ಸರಿಯಾಗಿ 50 ವರ್ಷಗಳಾಗಿವೆ. ಎಲ್ಲರ ಮನೆಯ ದೋಸೇನೂ ತೂತು ಎಂಬಂತೆ ನಮ್ಮ ಮನೆಯ ಮಕ್ಕಳು ಇಬ್ಬರಿಗೂ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟ ಮೇಲೆ, ಊರವರ ದೃಷ್ಟಿಯೋ, ನಮ್ಮ ದುರಾದೃಷ್ಟವೋ ತಿಳಿಯದು, ನಮ್ಮನ್ನು ಆಗಲಿ ಮಕ್ಕಳಿಬ್ಬರೂ ತಮ್ಮ ತಮ್ಮ ನೆಲೆಯನ್ನು ತಾವೇ ನೋಡಿಕೊಂಡರು. ರಾಮ ತನ್ನ ಹೆಂಡತಿ ಮಕ್ಕಳೊಂದಿಗೆ ಪರ ದೇಶದಲ್ಲಿ ನೆಲೆಯಾಗಿ ನಮ್ಮ ಕಡೆ ತಲೆಯನ್ನೂ ಹಾಕುತ್ತಿಲ್ಲ. ಕೃಷ್ಣ ತನ್ನ ಹೆಂಡತಿ ಹಾಗೂ ಎರಡು ಮುದ್ದಾದ ಮಕ್ಕಳೊಂದಿಗೆ ಇಲ್ಲೇ ನಮ್ಮ ಮನೆಯ ಹಿಂದುಗಡೆಯಲ್ಲೇ ಮನೆ ಮಾಡಿ ಕೂತಿದ್ದರೂ, ನಮ್ಮ ಮನೆ ಕಡೆ ತಿರುಗಿಯೂ ನೋಡುತ್ತಿಲ್ಲ. ಇದು ನಮ್ಮ ಪ್ರಾರಬ್ದವೋ, ದೇವರು ಕೊಟ್ಟ ಶಿಕ್ಷೆಯೋ ತಿಳಿಯದು. ಏನೋ ದಿನ ಚೆನ್ನಾಗಿ ಹೋದರೆ ಸಾಕು ಎಂಬಂತಾಗಿದೆ ನಮ್ಮಿಬ್ಬರ ಮನಸ್ಥಿತಿ. ಇನ್ನು ನಮ್ಮ ಕುಟುಂಬಸ್ಥರೋ, ವರ್ಷಕ್ಕೊಮ್ಮೆ ಯಾವುದಾದರೂ ಪೂಜೆ ಇಟ್ಟುಕೊಂಡಿದ್ದರೆ ಬಂದು ಹೇಳಿಕೆ ನೀಡಿ ಹೋಗುತ್ತಾರೆ. ಅದು ಬಿಟ್ಟರೆ ನಾವು ಬದುಕಿದ್ದೆವೋ, ಸತ್ತಿದ್ದೇವೋ ಅನ್ನುವುದನ್ನು ಸಹ ಕೇಳುವವರು ಯಾರೂ ಇಲ್ಲ. ಇದಿಷ್ಟು ನಮ್ಮ ಪರಿಚಯ.


ಹೀಗೆ ಬೆಳಗಿನ ಜಾವ ಕೂತಿರಬೇಕಾದರೆ, ಜಲಜಳಿಗೆ ಇದ್ದಕ್ಕಿದ್ದಂತೆ ಬೆವರಲು ಶುರುವಾಗಿ, ಬಲ ಇಲ್ಲದಂತಾಯಿತು. ನನಗೋ ಕೈಕಾಲು ನಡುಗಲು ಶುರು ಆಯಿತು. "ಜಲಜ, ಜಲಜಾ.. ಏನಾಗುತ್ತಿದೆ?? ನೀರು ಕುಡಿ ತೆಗೆದುಕೋ..." ಅಂತ ನೀರನ್ನು ಅವಳ ಬಾಯಿಗೆ ತಂದೆ.... ದೇವರ ದಯೆಯೋ ಎಂಬಂತೆ, ಅದೇ ಹೊತ್ತಿಗೆ ನಮ್ಮ ಮನೆಗೆ ನನ್ನ ಗೆಳೆಯ ಗಣೇಶನ ಮಗಳು ರಾಧಾ ಹಾಗೂ ಅಳಿಯ ವಾಸು ನಮ್ಮ ಮನೆಗೆ ಬಂದರು. ವಾಸು ವೃತ್ತಿಯಲ್ಲಿ ವೈದ್ಯನಾದ ಕಾರಣ ಜಲಜಾಳ ಸ್ಥಿತಿ ಕಂಡ ಕೂಡಲೇ ತುರ್ತು ಸ್ಥಿತಿಯ ಅರಿವಾಗಿ ಕೂಡಲೇ ಆಂಬುಲೆನ್ಸ್ ಗೆ ಕರೆ ನೀಡಿದ. ನನಗೆ ಎದೆ ಝಲ್ ಎನ್ನಲು ಶುರುವಾಯಿತು. ಜಲಜಾಳಿಗೆ ಹೃದಯಾಘಾತದ ಲಕ್ಷಣಗಳು ಕಂಡು ಬಂದಿತ್ತು. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿ, ಆಂಜಿಯೋಪ್ಲಾಸ್ಟಿ ಸರ್ಜರಿ ಮಾಡಿದ ಕಾರಣ ನನ್ನ ಜಲಜ ನನ್ನ ಜೊತೆ ಉಳಿದಳು. ಹೀಗೆ ಆಸ್ಪತ್ರೆಯಲ್ಲಿರಬೇಕಾದರೆ, ಮಗಂದಿರಿಬ್ಬರಿಗೂ ಜಲಜಾಳ ಪರಿಸ್ಥಿತಿಯ ಬಗ್ಗೆ ವಾಸು ಹೇಳಿದ. ಆದರೆ ಆ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ದೊರೆಯಲಿಲ್ಲ. ನನಗೆ ಎಷ್ಟು ಬೇಸರವಾಯಿತೆಂದರೆ, ಯಾಕಾದರೂ ಇಂಥ ಮಕ್ಕಳು ಹುಟ್ಟಿದರೋ ಎಂದು ಮರುಗುವಂತಾಯಿತು.


ಆಸ್ಪತ್ರೆಯಿಂದ ಮನೆಗೆ ಬಂದಾಯಿತು. ಈಗ ಜಲಜಾಳಿಗೆ ಜಾಸ್ತಿ ಸುಸ್ತು ಬರಿಸುವ ಕೆಲಸ ಮಾಡ್ಲಿಕ್ಕೆ ಆಗದ ಕಾರಣ ನಾನೇ ಅಡುಗೆ ಕೆಲಸ ಮಾಡುತ್ತಿದ್ದೆ. ಜಲಜ ನಮ್ಮ ಮನೆಯ ಹೊರಾಂಗಣದ ಜಗಲಿಯಲ್ಲಿ ಕುಳಿತು ನಿಸರ್ಗದ ದೃಶ್ಯಗಳನ್ನು ಆಸ್ವಾದಿಸುತ್ತಿದ್ದಳು. ಆಗ ಮಕ್ಕಳಿಗೆ ರಜೆಯ ದಿನಗಳು. ಹಾಗೆ ನಮ್ಮ ಮೊಮ್ಮಕ್ಕಳು ಆಟವಾಡುತ್ತಾ ನಮ್ಮ ಮನೆಯ ಮುಂದೆ ಬಂದಿದ್ದರು. ರಕ್ತ ಸಂಬಂಧ ಹೇಗೆ ಸೆಳೆಯುತ್ತದೆ ನೋಡಿ. ಇಂದಿನವರೆಗೆ ಆ ಮಕ್ಕಳು ನಮ್ಮನ್ನು ನೋಡಿರಲಿಲ್ಲ. ಆದರೂ ಜಲಜಾಳನ್ನು ಕಂಡು ನಗು ಮುಖದಲ್ಲಿ ಹತ್ತಿರ ಬಂದವು. ಜಲಜಾಳಿಗೋ, ಮೊಮ್ಮಕ್ಕಳನ್ನು ಕಂಡು ತುಂಬ ಖುಷಿಯಾಗಿ, ಬರಸೆಳೆದು ಅಪ್ಪುಗೆ ಕೊಟ್ಟಳು. "ಏನಪ್ಪಾ ನಿಮ್ಮಿಬ್ಬರ ಹೆಸರು" ಅಂದಳು. ಮುದ್ದಾಗಿ ತಮ್ಮ ಹೆಸರು ಆಧ್ಯ ಅರ್ಪಣ್ ಅಂತ ಹೇಳಿದ್ರು. ತುಂಬಾ ಮುದ್ದಾಗಿ ಮಾತಾಡಿಸಿದ್ರು. ಮಕ್ಕಳಿಗೆ ನಾವು ಅವರ ಸ್ವಂತ ಅಜ್ಜಿ ತಾತ ಅಂತ ತಿಳಿದಿರಲಿಲ್ಲ. ನಾವೂ ಹೇಳಲಿಲ್ಲ.


ಹೀಗೆ, ದಿನ ದಿನ ಆ ಮಕ್ಕಳು ನಮ್ಮಲ್ಲಿಗೆ ಬಂದು, ಏನಾದರೂ ತಿಂಡಿ ತಿಂದು ಹೋಗುತ್ತಿದ್ದವು. ಈ ವಿಚಾರ ಕೃಷ್ಣ ಹಾಗೂ ಅವನ ಹೆಂಡತಿಗೆ ತಿಳಿದಿರಲಿಲ್ಲವೋ ಏನೋ. ಒಂದು ದಿನ ಆ ಮಕ್ಕಳು ಹಠ ಹಿಡಿದು ಕೃಷ್ಣ ಹಾಗೂ ಅವನ ಹೆಂಡತಿ ಆರಾಧ್ಯಳನ್ನು ಕರೆದುಕೊಂಡು ಬಂದರು. ಅವರು ಬಂದಿದ್ದು ನೋಡಿ ನನ್ನ ಜಲಜಾಳ ಕಣ್ಣು ಮುಖ ತಾವರೆಯಂತೆ ಅರಳಿತು ಇದನ್ನು ನೋಡಿ ನನ್ನ ಅಸಹನೆ ಮರೆಯಾಗಿ ಕೃಷ್ಣನನ್ನು ಚೆನ್ನಾಗಿಯೇ ಮಾತನಾಡಿಸುವಂತಾಯಿತು. ಎಷ್ಟಾದರೂ ನನ್ನ ಕರುಳ ಕುಡಿಯಲ್ಲವೇ. ಅಂದು ನಮ್ಮ ಮನೆಗೆ ಕೃಷ್ಣ ಹೆಂಡತಿ ಮಕ್ಕಳ ಜೊತೆ ಬಂದವನು ಎಲ್ಲ ದ್ವೇಷವನ್ನೂ ಮರೆತು, ಒಂದಾಗುವ ಮಾತನ್ನಾಡಿದರು. ಎಷ್ಟಾದರೂ ಸ್ವಂತ ಮಕ್ಕಳಾಗುವಾಗ, ಹೆತ್ತವರ ನೋವು ಏನೆಂಬುದು ಅರ್ಥವಾಗುವ ಹಾಗೆ, ಇವರೂ ಬದಲಾಗಿ ನಮ್ಮ ಬಗ್ಗೆ ಕಾಳಜಿ ತೋರಿಸಲು ಶುರು ಮಾಡಿದರು.


ರಾಮ ಮತ್ತು ಕೃಷ್ಣನ ಪುನಃಮಿಲನ, ಮತ್ತು ಮೊಮ್ಮಕ್ಕಳ ನಗು ಮುಖಗಳು ನಮ್ಮ ಮನೆಗೆ ಹಬ್ಬದ ವಾತಾವರಣ ಸೃಷ್ಟಿಸಿತು. ನಮ್ಮ ಮನೆ ಈಗ ಚಿಗುರಿದ ಗಿಡದಂತೆನಗಲು ತೊಡಗಿತು. ಒಂದು ಸುಂದರ ಬೆಳಗಿನ ಜಾವ, ನಾವು ಎಲ್ಲರೂ ಒಟ್ಟಾಗಿ ನಮ್ಮ ಬಾಗಿಲಲ್ಲಿ ಕುಳಿತು ಚಹಾ ಕುಡಿಯುತ್ತಿದ್ದುದು ನೆನಪಿಗೆ ಬಂತು. ಮೊಮ್ಮಕ್ಕಳು ಆಟವಾಡುತ್ತಾ, "ಅಜ್ಜಾ, ಇದು ನಮ್ಮ ಮನೆ ಅಲ್ವಾ?" ಎಂದು ಕೇಳಿದಾಗ ಜಲಜಾ ತಕ್ಷಣವೇ, "ಹೌದು ಮಗುವೇ, ನಮ್ಮ ಮನೆ — ನೀವು ಎಲ್ಲರೂ ಸೇರಿ ನಿರ್ಮಿಸಿದ ಬಂಗಾರ ಮನೆ," ಎಂದಳು.


ಅಂದು ಸಂಜೆ, ಮನೆಯ ಹತ್ತಿರವೇ ಇದ್ದ ಹಸಿರಿನ ಹೊಲದಲ್ಲಿ ನಾವು ತಣ್ಣನೆ ಬೀಸುತ್ತಿದ್ದ ಗಾಳಿಯೊಂದಿಗೆ ಹೆಜ್ಜೆ ಹಾಕುತ್ತ ಇದ್ದಾಗ ಜಲಜಾ ನನ್ನ ಕೈ ಹಿಡಿದು, "ರೀ, ಜೀವನದಲ್ಲಿ ಇಷ್ಟು ದುಃಖ ಇದ್ದರೂ, ಇಂದು ನಮ್ಮ ಬಾಳು ಸಂತೋಷದಿಂದ ತುಂಬಿದ ಕನ್ನಡಿ ಹಾಗಾಗಿದೆ" ಎಂದಳು. ನಾನು ನಗುತ್ತಾ, "ಜಲಜಾ, ಈ ನೆಮ್ಮದಿಯ ಕ್ಷಣಗಳ ಮೌಲ್ಯ ನಾವು ಅರ್ಥ ಮಾಡಿಕೊಂಡು ಬಾಳಿದ್ದೇವೆ. ಬದುಕು ನಿಂತು ಹೋಗುವುದಿಲ್ಲ, ಆದರೆ ಹೊಸ ವಸಂತದ ಪಾರಿವಾಳಗಳು ನಮ್ಮ ಜೀವನಕ್ಕೆ ಪುನಃ ಹಾರಾಟವನ್ನು ತರುತ್ತವೆ," ಎಂದೆ.


ಆ ದಿನದ ರಾತ್ರಿ, ಮನೆ ಎಲ್ಲೆಲ್ಲೂ ಹಾಸ್ಯದ ಮಾತುಗಳು, ನಗುವಿನ ಧ್ವನಿ ತುಂಬಿತ್ತು. ಮಕ್ಕಳು ಮಾತನಾಡುತ್ತಿದ್ದರೆ, ಮೊಮ್ಮಕ್ಕಳು ನಮ್ಮ ಸುತ್ತಲೂ ಓಡಾಡುತ್ತಿದ್ದರು. ಕೃಷ್ಣನ ಹೆಂಡತಿ ಆರಾಧ್ಯ ಮತ್ತು ರಾಮನ ಹೆಂಡತಿ ನಿವೇದಿತಾ ಅಡುಗೆ ಕೋಣೆಯಲ್ಲಿ ಜಲಜಾಳ ಜೊತೆ ಪಟ್ಟಾಂಗ ಹೊಡೆಯುತ್ತ ಅಡುಗೆ ಕೆಲಸಕ್ಕೆ ಸಹಾಯ ಮಾಡುತ್ತಿದ್ದರು. ಆಧ್ಯ ಮತ್ತು ಅರ್ಪಣ್ ಅಂದಿನ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಅನುಭವವನ್ನು ಹಂಚಿಕೊಳ್ಳುತ್ತಿದ್ದಂತೆ, ನಾವೆಲ್ಲರೂ ನಕ್ಕು ಆನಂದಿಸಿದೆವು.


ಜೀವನ ಈಗ ಸಂಪೂರ್ಣ ಅನ್ನಿಸುತ್ತಿದೆ. ನಮ್ಮ ಮನೆ ಈಗ ಕೇವಲ ಕಲ್ಲು ಮಣ್ಣಿನಿಂದ ಕಟ್ಟಿದ ಮನೆ ಆಗಿರಲಿಲ್ಲ; ಅದು ಪ್ರೀತಿ, ಭರವಸೆ, ಹಾಗೂ ಮತ್ತೆ ಒಂದಾದ ಸಂತೋಷದಿಂದ ತುಂಬಿದ ಸಜೀವ ಗೃಹವಾಗಿದೆ.


ಜಲಜಾ ನನ್ನ ಕಡೆ ತಿರುಗಿ, "ಜೀವನ ಅಂತ್ಯವಾಗುವಷ್ಟರಲ್ಲಿ ನಾವು ಏನಾದರೂ ಒಳ್ಳೆಯ ಕೆಲಸ ಮಾಡಿದ್ದೇವೆ ಎಂದು ನನ್ನ ಮನಸ್ಸು ಸಂತುಷ್ಟವಾಗಿದೆ. ಇನ್ನು ನನ್ನ ಜೀವನ ಮುತ್ತೈದೆ ಸಾವಿನ ಭಾಗ್ಯ ಸಿಕ್ಕಿದರೂ ಸಂತೂಷಟವಾಗಿ ದೇವರ ಪಾದ ಸೇರುತ್ತೇನೆ." ಎಂದಳು. ನಾನು ಕಣ್ಣುಮುಚ್ಚಿ ದೇವರಿಗೆ ಧನ್ಯವಾದ ಸಲ್ಲಿಸುತ್ತಾ, "ಹೌದು, ಈ ಸಂಬಂಧಗಳ ಬೆಸುಗೆ ನಮ್ಮ ಜೀವನದ ಅರ್ಥವನ್ನು ಪುನಃ ತೋರಿಸಿತು. ಜೀವನಕ್ಕೆ ಪುನಃ ಚೈತನ್ಯ ನೀಡಿತು." ಎಂದೆ.


ಮುಸ್ಸಂಜೆಯ ಸೂರ್ಯನ ಕಿರಣಗಳು ನಮ್ಮ ಮನೆಗೆ ಬಂಗಾರದ ಬೆಳಕನ್ನು ಚೆಲ್ಲುತ್ತಾ, ತಂಪಾದ ಗಾಳಿ ನಮ್ಮೆಲ್ಲರ ಸಂತೋಷಕ್ಕೆ ಇನ್ನಷ್ಟು ಇಂಪನ್ನು ನೀಡಲು ಶುರುವಾಗಿದ್ದಂತೆ, ನನ್ನ ಮನಸ್ಸು ಒಬ್ಬರು ಒಬ್ಬರನ್ನು ಕೈ ಹಿಡಿದು ಮುನ್ನಡೆಸಿದ ಸಂತೋಷವನ್ನು ಪುನಃ ಅರಿತುಕೊಂಡಿತು. ರಕ್ತಸಂಬಂಧ ಎನ್ನುವುದು ಎಲ್ಲರ ಜೀವನದಲ್ಲೂ ಮುಖ್ಯವಾದ ಸಂಬಂಧವೇ ಅಲ್ಲವೇ??


✍🏻 *Deepalaxmi Bhat*

Mangaluru

ಶನಿವಾರ, ಜನವರಿ 18, 2025

ಸ್ಮರಣೆಯ ಸಡಿಲ ಸ್ಪಂದನೆ

ನಿನ್ನ ಹೆಸರ ನೆನೆದ ಆ ಕ್ಷಣ
ನನ್ನ ಉಸಿರ ಲಯದಲ್ಲಿ ತಲ್ಲಣ
ನಿನ್ನ ನೋಡಬಯಸಿದೆ ಈ ಮನ 
ಕ್ಷಣ ಕ್ಷಣ ಎಣಿಸಿದೆ ಈ ದಿನ 
 
ಸುಮ್ಮನೆ ಕುಳಿತರೆ ಏನೋ ಬಯಕೆ 
ಕೆಲಸದಿ ಮನಸಿರೆ  ಏನೋ ಹರಕೆ 
ಕಾತರ ಮನದಲಿ ನಿನ್ನ ಸನಿಹಕೆ 
ಆಸೆ ಪಡುತಿದೆ ಪ್ರೀತಿ ಸ್ನೇಹಕೆ. 

ಹೃದಯದ ನಿದ್ರೆಗೂ ನಿನ್ನ ರೂಪವೋ
ಕಣ್ಣು ತೆರೆದರೆ ಹೊಂಗಿರಣದ ರೂಪವೋ
ಮೌನದ ನಡುವೆ ನಿನ್ನ ಸವಿನುಡಿಗಳೋ
ಮನದ ಮರಳಿನಲಿ ನಿನ್ನ ಪಾದಚಿಹ್ನೆಗಳೋ...

ನಗೆಯಲಿ ನನ್ನದೊಂದು ನಿಶಬ್ದ ಪ್ರಾರ್ಥನೆ
ನಿನ್ನ ನೆನೆಪೊಂದೇ ಈ ಮನದಾಶ್ವಾಸನೆ
ಅಂತರಾಳದ ತಾಣದಿ ಮೆಟ್ಟಿದ ನಿನ್ನ ಕನಸು
ಕಣ್ಣು ತೆರೆಯುವಾಗ ನಿನ್ನ ಜೊತೆಗಿರೆ ಮನಸು...

ಅಡಗಿರುವ ಚಿತ್ತದಲ್ಲಿ ನಿನ್ನ ಚಿತ್ರವೊಂದು
ರೇಖೆಯಾಗಿಹ ಭಾವದ ವೃತ್ತವೊಂದು
ಹಲವು ಪದಗಳಿಲ್ಲದ ಭಾವವೊಂದು
ಆ ಭಾವನೆಯ ನುಡಿಯಲಿ ನೀನು ಮುಂದು…

ಮುಂದೇನು ಹೇಳಲಿ ತಿಳಿಯದಂತೆ ಮನವು
ನಿನ್ನ ನೆನೆಪಲ್ಲಿ ಯಾತ್ರೆ ನನ್ನೀ ಜೀವನವು
ಕನಸಿನಲಿ ಬಂದ ನಿನ್ನ ಸನಿಹದ ಭಾವ 
ಬದಲಿಸಿದೆ ನೀ ನನ್ನ ಹೃದಯದ ತಾಳವ...

ಬೀದಿಯ ಪಥದಲಿ ನಿನ್ನ ಹೆಜ್ಜೆಯ ಜಾಡು  
ಹಸಿರು ಇಳೆಯಲಿ ಆಸೆಗಳ ಮೊಳಕೆಯ ಹಾಡು  
ಮುಂದೊಂದು ದಿನ ಮತ್ತೆ ನಿನ್ನ ಸನಿಹದಲಿ
ಮನದ ಸಾಗರವೇ ತಲುಪಲಿ ನೆನಪಿನಂಗಳದಲಿ...

ಎದೆಯ ಹಾಳೆಯಲಿ ಅರಳಿದ ನಿನ್ನ ಚಿತ್ರವೊಂದು  
ಮರೆತುಹೋಗದ ನೆನಪಾಗಲಿ ಪ್ರತಿದಿನದಂದು  
ನನ್ನ ಪ್ರತಿ ಉಸಿರಲ್ಲಿ ನಿನ್ನ ಒಲವು ನಲಿದಿದೆ
ಹಗಲು ರಾತ್ರಿ ನೀ ಚಿರವಾಗಿ ನನ್ನಲ್ಲೇ ನೆಲೆಸಿದೆ…
 
✍🏻 ದೀಪಲಕ್ಷ್ಮಿ ಭಟ್