✍🏻ದೀಪಲಕ್ಷ್ಮಿ ಭಟ್, ಮಂಗಳೂರು
ಈ ಕಥೆ ಇಬ್ಬರು ಅವಳಿ ಜವಳಿ ಮಕ್ಕಳದ್ದು. ಅವರ ಹೆಸರು ಸೃಷ್ಟಿ ಹಾಗೂ ದೃಷ್ಟಿ. ಹೆಸರೇ ಹೇಳುವಂತೆ ಅವರದ್ದು ದೃಷ್ಠಿ ಆಗುವಂಥ ಸೃಷ್ಟಿ - ಅಂದರೆ, ಬೆಣ್ಣೆಯಂಥ ಮೃದುವಾದ ಚರ್ಮ. ಅಪರಿಮಿತ ಸೌಂದರ್ಯ, ಅವರಿಬ್ಬರನ್ನೂ ಮುಟ್ಟಬೇಕೆಂದರೆ, ಕೈಯನ್ನು ಹತ್ತು ಸಲ ತೊಳೆದುಕೊಂಡು ಮುಟ್ಟಬೇಕು ಅನ್ನುವಷ್ಟು ಬೆಳ್ಳಗಿನ ಬಣ್ಣ. ಹೆತ್ತ ತಾಯಿಗೂ ಇಬ್ಬರಲ್ಲಿ ಯಾರು ಸೃಷ್ಟಿ ಯಾರು ದೃಷ್ಟಿ ಅನ್ನೋದು ತಿಳಿಯದಷ್ಟು ಹೋಲಿಕೆ.
ಅಂದು ಮಧ್ಯರಾತ್ರಿಯ ಸಮಯ. ಸೂಜಿ ಬಿದ್ದರೂ ಕೇಳಿಸುವಂಥ ನಿಶ್ಯಬ್ದ ವಾತಾವರಣ. ಅಮಾವಾಸ್ಯೆ ಬೇರೆ. ಬೆಳ್ಳಗಿನ ತಿಳಿಯಾದ ಸುಗಂಧಭರಿತ ಹೊಗೆ ಕೆರೆಯ ಮೆಟ್ಟಿಲಲ್ಲಿ ಹೊನಲಿಡುತ್ತಿತ್ತು. ಊರಿನ ಹೊರವಲಯದಲ್ಲಿದ್ದ ಆ ಕೆರೆಯ ದಡದಲ್ಲಿ ಪುರಾತನವಾದ ಒಂದು ದೇವಾಲಯ. ದೇವಾಲಯದ ಹೆಬ್ಬಾಗಿಲಿನಲ್ಲಿ ಎರಡು ದೊಡ್ಡ ಗಜಸ್ತಂಭ. ದೀಪದಿಂದ ಅಲಂಕರಿಸಿದ ಮಹಾದ್ವಾರ. ಒಳಗಿನಿಂದ "ಟಂಗ್... ಟಂಗ್ ... " ಎಂಬ ಗಂಟೆಯ ನಾದ. ಶಂಖನಾದದ ಧ್ವನಿ ಎಲ್ಲೆಡೆ ಮೊಳಗುತ್ತಿದೆ. ಅಷ್ಟರಲ್ಲಿ "ಅಮ್ಮಾ, ಇಲ್ಲಿ ನೋಡು..." ಅಂತ ದೃಷ್ಟಿ ಜೋರಾಗಿ ಕಿರುಚಿದಳು - " ಇಲ್ಲಿ ನೋಡು. ಆಕಾಶದಲ್ಲಿ ಒಂದೇ ಚಂದ್ರ, ಆದರೆ ಇಲ್ಲಿ ಎರಡು... ಅಲ್ಲ ಮೂರು ಮೂರು ಚಂದ್ರನ ಬಿಂಬ ಕಾಣಿಸುತ್ತಿದೆ..."ಅಂತ ಬೆರಗಾಗಿ ಹೇಳಿದಳು. ನೀರಿನ ತರಂಗಗಳು ಹೋದ ಹಾಗೆ, ಆ ಬಿಂಬಗಳು ಬೆಳೆದು ಕರಗಿದಂತೆ ಕಾಣುತ್ತಿದ್ದವು. ಅಷ್ಟರಲ್ಲಿ ಸೃಷ್ಟಿ, "ಅಮ್ಮಾ, ನೀನು ಈ ಚೀಲ ಹಿಡಿ. ನಾನು ನೀರಿನ ಅಂಚಿಗೆ ಹೋಗಿ ನೋಡುತ್ತೇನೆ." ಅಂತ ಅಂದಳು. ಸೃಷ್ಟಿ ಮೊದಲಿನಿಂದಲೂ ತುಂಟತನ ಹೆಚ್ಚಾಗಿ ಮಾಡುತ್ತಿದ್ದವಳು. ದೃಷ್ಟಿ ತುಂಬಾ ಶಾಂತ ಮನಸ್ಥಿತಿ ಇದ್ದವಳು. ಇಬ್ಬರೂ ವಯಸ್ಸಿಗೆ ಮೀರಿ ಬುದ್ದಿವಂತಿಕೆ ಇದ್ದವರಾದರೂ ಸೃಷ್ಟಿ ಧೈರ್ಯಶಾಲಿ, ದೃಷ್ಟಿ ಏಕಾಂತ ಬಯಸುತ್ತಿದ್ದವಳು. "ಬೇಡ ಸೃಷ್ಟಿ, ಆ ಕಡೆ ಹೋಗಬೇಡ." ಅಂತ ತಾಯಿ ಸುಮಂಗಲ ಸೃಷ್ಟಿಗೆ ಎಚ್ಚರಿಕೆ ನೀಡಿದಳು. ಆದರೆ ಸೃಷ್ಟಿ ಕೇಳಬೇಕಲ್ಲಾ. ನೀರಿನ ಕಡೆಗೆ ಹೋಗಿ, ಆ ಬಿಂಬದ ಮೇಲೆ ಕೈ ಇರಿಸಿದಳು. ಅಷ್ಟರಲ್ಲಿ, ಅವಳ ಪಾದದಡಿ ಇದ್ದ ಮಣ್ಣು ಸರಿದು ನೀರಿನ ಪ್ರವಾಹಕ್ಕೆ ಸಿಲುಕಿದಳು. "ಅಯ್ಯೋ ಸೃಷ್ಟಿ..." ಅಂತ ಸುಮಂಗಲ ಬೊಬ್ಬೆ ಹಾಕಿದ ಕ್ಷಣದಲ್ಲೇ, ದೃಷ್ಟಿಯ ಕೈ ಹಿಡಿದು, ಅವಳನ್ನೂ ಎಳೆದುಕೊಂಡು ಪ್ರವಾಹದಲ್ಲಿ ಇಬ್ಬರೂ ಲೀನವಾದರು. ಸುಮಂಗಲನ ಕೂಗು ಕೇಳಿ ಊರವರೆಲ್ಲರೂ ಓಡಿ ಬಂದು, ಮಕ್ಕಳನ್ನು ಕಾಪಾಡುವ ಪ್ರಯತ್ನ ಶುರುಮಾಡಿದರು.
ಇತ್ತ ಪ್ರವಾಹಕ್ಕೆ ಸಿಲುಕಿದ ಸೃಷ್ಟಿ ಹಾಗೂ ದೃಷ್ಟಿ, ಮಾಯಾಕನ್ನಡಿಯ ಒಳಗೆ ಪ್ರವೇಶಿಸಿದ್ದರು. ಅಲ್ಲಿ ಚಂದ್ರನ ಮೂರು ಪ್ರತಿಬಿಂಬ ಕಂಡ ಹಾಗೆ, ಸೃಷ್ಟಿ ಹಾಗೂ ದೃಷ್ಟಿಯ ಮೂರು ಪ್ರತಿಬಿಂಬಗಳು ಕಾಣಿಸುತ್ತಿದ್ದವು. ಸೃಷ್ಟಿ ಹಾಗೂ ದೃಷ್ಟಿ, ಸೇರಿ ಒಟ್ಟು ಎಂಟು ಹುಡುಗಿಯರಿದ್ದಂತೆ ಭಾಸವಾಗುತ್ತಿತ್ತು. ಅಷ್ಟರಲ್ಲಿ ಆ ಬಿಂಬಗಳು ಮಾತನಾಡಲು ತೊಡಗಿದವು. ನಾನು ಸೃಷ್ಟಿ, ನಾನು ದೃಷ್ಟಿ ಅಂತ ಮೂರೂ ಬಿಂಬಗಳೂ ಹೇಳತೊಡಗಿದವು. ಆ ಮಾಯೆಗೆ ದೃಷ್ಟಿ ಬಲಿ ಆಗುವಂತಿದ್ದರೂ, ಸೃಷ್ಟಿ ಧೈರ್ಯವಂತೆ ಅಲ್ಲಿ ಕಂಡ ಕಬ್ಬಿಣದ ಒಂದು ಕೋಲನ್ನು ತೆಗೆದುಕೊಂಡು ಬೀಸಿದಳು. ಆ ಬಿಂಬಗಳು ಅವರ ಹತ್ತಿರ ಬರದಂತೆ ತಡೆದಳು. ಅಲ್ಲೇ ಇದ್ದ ಒಂದು ಗಿಡದ ಬಿಂಬಗಳು ಕಾಣಿಸಿತು. ಸೃಷ್ಟಿ ದೃಷ್ಟಿಯನ್ನು ಎಚ್ಚರಿಸಿ, ಗಿಡದ ನಿಜ ರೂಪ ಯಾವುದು, ಬಿಂಬ ಯಾವುದು ಎಂಬುದನ್ನು ಗುರುತಿಸಲು ಸೂಚಿಸಿದಳು. ಒಂದು ಕೋನದಲ್ಲಿ ಅದನ್ನು ಗುರುತಿಸಿದ ದೃಷ್ಟಿ, ಬಿಂಬಗಳು ಯಾವುವು ಎಂಬುದನ್ನು ಸೃಷ್ಟಿಗೆ ತಿಳಿಸಿದಳು. ಆಗ ಸೃಷ್ಟಿ ತನ್ನ ಕೈಯಲ್ಲಿದ್ದ ಕೋಲನ್ನು ಬೀಸಿ, ಆ ಮಾಯಾಕನ್ನಡಿಯನ್ನು ಒಡೆದು ಚೂರು ಚೂರು ಮಾಡಿದಳು. ಪುಡಿಪುಡಿಯಾದ ಮಾಯಾಕನ್ನಡಿಯಿಂದ ಆ ಬಿಂಬಗಳು ಮರೆಯಾದವು. ಅಷ್ಟರಲ್ಲಿ ಊರಿನ ಜನರಿಗೆ ಸೃಷ್ಟಿ ಹಾಗೂ ದೃಷ್ಟಿ ಕಂಡುಬಂದರು. ಅವರಿಬ್ಬರನ್ನೂ ಪ್ರವಾಹದಿಂದ ರಕ್ಷಿಸಿ, ದಡಕ್ಕೆ ಕರೆತಂದರು. ಇಬ್ಬರೂ ಪ್ರಜ್ಞೆ ಕಳೆದುಕೊಂಡಿದ್ದರು. ಒಬ್ಬ ಡಾಕ್ಟರ್ ಅಲ್ಲೇ ಇದ್ದ ಕಾರಣ, ಅವರಿಗೆ ಅಗತ್ಯವಾದ ಪ್ರಥಮ ಚಿಕಿತ್ಸೆ ನೀಡಿ ಪ್ರಜ್ಞೆ ಬರುವ ಹಾಗೆ ಮಾಡಿದರು. ಸುಮಂಗಲಾಳಿಗೆ ಹೋದ ಜೀವ ಹಿಂದೆ ಬಂದಂತಾಯಿತು. ಜೋರಾಗಿ ಅಳುತ್ತಾ ತನ್ನ ಇಬ್ಬರೂ ಮಕ್ಕಳನ್ನು ಅಪ್ಪಿ ಹಿಡಿದು, ಮುದ್ದಾಡಿದಳು. ಸುತ್ತಲೂ ನೋಡುತ್ತಿದ್ದ ಊರಿನ ಜನರು ಮಾತ್ರ ಸೃಷ್ಟಿ ಹಾಗೂ ದೃಷ್ಟಿಯ ಅಭಿನ್ನವಾದ ರೂಪ ಕಂಡು ಬೆರಗಾಗಿದ್ದರು.
ಪ್ರಜ್ಞೆ ಬಂದ ಮಕ್ಕಳು ತಮ್ಮ ಕೈಯಲ್ಲಿ ಏನೋ ಭಾರವಾದ ವಸ್ತು ಇದ್ದಂತೆ ಭಾಸವಾಗಿ, ನೋಡಿದರೆ, ಸೃಷ್ಟಿ ಕೈಯಲ್ಲಿ ಹಿತ್ತಾಳೆ ಬಣ್ಣದ ಲೋಹದ ಬಳೆ , ದೃಷ್ಟಿ ಕೈಯಲ್ಲಿ ನೀಲಮಣಿಯಿಂದ ಅಲಂಕರಿಸಿದ ಚಿಕ್ಕದೊಂದು ಕನ್ನಡಿ ಇತ್ತು. ಮತ್ತೆ ದೇಗುಲದಿಂದ ಶಂಖನಾದ ಮೊಳಗಿತು. ಗಂಟೆಗಳೆಲ್ಲ ತಾನಾಗಿಯೇ ಬಡಿಯತೊಡಗಿತು. ದೇಗುಲದ ಗರ್ಭಗುಡಿಯಿಂದ ಸುಂದರವಾದ ಶ್ವೇತವಸ್ತ್ರಧಾರಿ ತಾಯಿ ಗೆಜ್ಜೆನಾದ ಕೂಡಿದ ಹೆಜ್ಜೆಗಳನ್ನಿಡುತ್ತಾ ಕೆರೆಯ ಕಡೆ ಬಂದಳು. ಆ ಮಕ್ಕಳನ್ನು ನೋಡಿ - "ಅಮೃತ-ಮಾಯಾ, ಕನಸು ಹಾಗೂ ನಿಜ - ಇವೆರಡರ ಸಮತೋಲನಕ್ಕೆಂದೇ, ಈ ಮಕ್ಕಳ ಜನ್ಮ ಸೃಷ್ಟಿ ಆಗಿದೆ. "ಇಬ್ಬರಲ್ಲಿ ಒಬ್ಬಳು 'ಕನಸಿನ ರಾಜ್ಯಕ್ಕೆ' ಸೇತುವೆ, ಇನ್ನೊಬ್ಬಳು 'ನಿಜಗಳ ಲೋಕಕ್ಕೆ' ಕನ್ನಡಿ. ನೀರಿನ ರಹಸ್ಯ ನಿಮ್ಮದೇ. ಉಳಿದದ್ದು ಕಾಲ ಹೇಳುತ್ತದೆ," ಎಂದು ಹೇಳುತ್ತಿದ್ದಂತೆ ಆ ತಾಯಿ ರೂಪ ವಸ್ತ್ರದೊಳಗೆ ಕರಗಿ ಮರಳಿನಂತೆ ಮಾಯವಾಯಿತು. ಇದು ಕೇವಲ ಮಕ್ಕಳಿಗೆ ಹಾಗೂ ಮಕ್ಕಳ ತಾಯಿ ಸುಮಂಗಲ, ತಂದೆ ಶಶಿಧರ - ಇವರಿಗೆ ಮಾತ್ರ ಕಂಡು ಕೇಳಿಸಿತ್ತು. "ಇದು ಏನಪ್ಪಾ?" ಎಂದು ಶಶಿಧರ ಬೆರಗಾದ ಬಾಯಿ ತೆರೆದು ನುಡಿದ. ಸುಮಂಗಲ ತಲೆಬಾಗಿ ದೇಗುಲದ ದಿಕ್ಕಿಗೆ ನಮಸ್ಕರಿಸಿದಳು.
ಇಷ್ಟಾದರೂ ಊರಿನ ಜನರು ಮಾತ್ರ , ಮಕ್ಕಳ ಅಭಿನ್ನ ರೂಪ ಕಂಡು ಬೆರಗಾದ ಸ್ಥಿತಿಯಲ್ಲೇ ಇದ್ದರು. "ಇವಳು ಅವಳೋ? ಅವಳು ಇವಳೋ? ಅಂತ ಯೋಚನೆ ಮಾಡುತ್ತಲೇ, ಅಲ್ಲಿಂದ ಎಲ್ಲರೂ ಹಿಂದಿರುಗಿದರು.
***
ಅಂದು ಬೆಳಗ್ಗಿನ ಜಾವ ಹಕ್ಕಿಗಳ ಚಿಲಿಪಿಲಿ ನಾದ ಕೇಳಿ ಈದ ದೃಷ್ಟಿ, ಸೃಷ್ಟಿಯನ್ನೂ ಎಬ್ಬಿಸಿ ಸ್ನಾನಕ್ಕೆ ಹೋದಳು. ಅವಳು ಸ್ನಾನ ಮುಗಿಸಿ ಬರುವಷ್ಟರಲ್ಲಿ ಸೃಷ್ಟಿ ಇಬ್ಬರಿಗೂ ಆ ದಿನದ ಕಾಲೇಜು ಬ್ಯಾಗ್ ತಯಾರು ಮಾಡಿಟ್ಟು, ಸ್ನಾನಕ್ಕೆ ಹೋದಳು. ಸೃಷ್ಟಿ ಹೊರಬರುವಷ್ಟರಲ್ಲಿ, ದೃಷ್ಟಿ ತನ್ನ ಹಾಗೂ ಸೃಷ್ಟಿಯ ಬಟ್ಟೆಗಳನ್ನೂ ಇಸ್ತ್ರಿ ಮಾಡಿ ತಯಾರಿಸಿದ್ದಳು. ಹೀಗೆ ಇಬ್ಬರೂ ಒಬ್ಬರಿಗೊಬ್ಬರು ಜೊತೆಗೂಡಿ ಲವಲವಿಕೆಯಿಂದ ಇದ್ದರು. ಇವರ ಒಗ್ಗಟ್ಟಿಗೆ, ಶಶಿಧರ ಹಾಗೂ ಸುಮಂಗಲ ಇಬ್ಬರೂ ಖುಷಿಗೊಡಿದ್ದರು.
" ಸೃಷ್ಟಿ - ದೃಷ್ಠಿ , ತಿಂಡಿ ರೆಡಿ ಆಗಿದೆ. ಬೇಗ ಬನ್ನಿ... ಕಾಲೇಜು ಹೋಗೋ ಟೈಮ್ ಆಯ್ತು." ಅಂತ ಸುಮಂಗಲ ಕರೆದಾಗ ಇಬ್ಬರೂ ಬಂದು ತಿಂಡಿ ತಿಂದು ಹೊರಡಲು ತಯಾರಾದರು. "ಇವತ್ತು ಫಸ್ಟ್ ಡೇ. ಬೇಗ ಹೊರಡೋಣ... ಮಿಸ್ ಆಗ್ಬಾರ್ದು" ಅಂತ ಹೇಳ್ತಾ, ಸೃಷ್ಟಿ ಆಕ್ಟಿವಾ ಸ್ಟಾರ್ಟ್ ಮಾಡಿದಳು. "ಬರ್ತೀನಮ್ಮಾ.... ಇವತ್ತು ಕಾಲೇಜಿನಲ್ಲಿ ಕಾವ್ಯ ಸಂಧ್ಯಾ ಇದೆ. ನಾನು ನಿನ್ನೆ ಬರೆದ ಕವನ - "ಮೋಡದ ನೆರಳಿನಲ್ಲಿ ಮಲ್ಲಿಗೆ" ಇದನ್ನು ಹೇಳ್ತೇನೆ" ಅಂತ ಕೂಗಿ ಆಕ್ಟಿವಾದಲ್ಲಿ ಕೂತಳು. ಅದಿಕ್ಕೆ ಉತ್ತರವಾಗಿ ಸುಮಂಗಲ - "ಮಲ್ಲಿಗೆ ಕವನ ಹೇಳು. ಹಾಗೆ ಇವತ್ತು ಸಂಜೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಇದೆ. ಮಲ್ಲಿಗೆ ಹೂವಿನ ಮಾಲೆ ಕಟ್ಟಿ ಬನ್ನಿ" ಅಂದಳು. ಸರಿ ಅನ್ನುತ್ತಾ ಕಾಲೇಜೋಗೆ ಹೋದರು.
ಅದೇ ಹಿಂದಿನ ವರ್ಷ, ಕಾಲೇಜ್ ಡೇ ಗೆ "ಅವಳೋ ಇವಳೋ?" ಎನ್ನುವ ಒಂದು ನಾಟಕವನ್ನು ಗೌಡ ಸರ್ ಮಾಡಿಸಿದ್ರು. ಎಲ್ಲದರಲ್ಲೂ ಒಂದೇ ನಾಯಕಿ ಇದ್ರೆ, ಈ ನಾಟಕದಲ್ಲಿ ದೃಷಿ ಸೃಷ್ಟಿ ಇಬ್ಬರೂ ನಾಯಕಿಯರಾಗಿದ್ದರು. ಯಾಕಂದ್ರೆ, ಇದು ಡುಯಲ್ ಪರ್ಸನಾಲಿಟಿ ವಿಷಯದ ಕಥೆ ಆಗಿತ್ತು. ಇಬ್ಬರೂ ಒಂದೇ ರೀತಿ ಆದ ಕಾರಣ ಇಬ್ಬರನ್ನೂ ಉಪಯೋಗಿಸಿ ನಾಟಕ ಮಾಡಿಸಿದ್ದರು. ಇದು ತುಂಬಾ ಹೆಸರುವಾಸಿಯಾಗಿ, ಕಾಲೇಜಿಗೂ, ಇವರಿಬ್ಬರಿಗೂ ಹೆಸರು ತಂದಿತ್ತು.
ಹಾಗೆ ಕಾಲೇಜು ಗೇಟ್ ಮುಟ್ಟಿದ ಕೂಡಲೇ, ಆಕ್ಟಿವಾ ಪಾರ್ಕ್ ಮಾಡಿ ಓರಿಯೆಂಟೇಷನ್ ಪ್ರೋಗ್ರಾಮ್ ಗೆ ಆಡಿಟೋರಿಯಂ ಕಡೆ ನಡೆದರು ದೃಷ್ಟಿ ಹಾಗೂ ಸೃಷ್ಟಿ. ಅಷ್ಟರಲ್ಲಿ ಅವರ ಎದುರಿಗೆ, ಮಾಧವ ಮಂಡಿಯೂರಿ ಕುಳಿತು, "ಸೃಷ್ಟಿ ಅಥವಾ ದೃಷ್ಟಿ ನಿಮ್ಮಿಬ್ಬರಲ್ಲಿ ಯಾರಾದರೂ ಒಬ್ಬರು ನನ್ನ ಪ್ರೀತಿಯನ್ನು ಸ್ವೀಕರಿಸುವಿರಾ..? ನಿಮ್ಮನ್ನು ಕಂಡರೆ ನನಗೆ ತುಂಬಾ ಇಷ್ಟ. ನನ್ನ ಕೊಳಲಿಗೆ ಸ್ವರವಾಗಿ ಯಾರು ಕೈ ಹಿಡಿಯುವಿರಿ?" ಅಂತ ಕೇಳಿದ. ಮಾಧವ ಕಾಲೇಜಿನಲ್ಲಿ ಅವರಿಗಿಂತ ಸೀನಿಯರ್. ಕೊಳಲು ವಾದನದಲ್ಲಿ ಹೆಸರು ಮಾಡಿದ ಹುಡುಗ. "ಪ್ರೀತಿ ಗೀತಿ ಎಲ್ಲ ಕಲಿಕೆ ಮುಗಿದ ಮೇಲೆ. ನಿನ್ನ ಕಲಿಕೆಗೆ ಗಮನ ಕೊಡು" ಅಂತ ಹೇಳಿ ಇಬ್ಬರೂ ಅಲ್ಲಿಂದ ಓಡಿದರು.
ಕಾಲೇಜಿನ ಎಲ್ಲ ಮಕ್ಕಳಿಗೂ, ಇವರೆಂದರೆ ಪ್ರೀತಿ. ಎಲ್ಲರ ಜೊತೆ ಲವಲವಿಕೆಯಿಂದ ಬೆರೆತು, ನಗುವನ್ನೇ ತಮ್ಮ ಆಭರಣವಾಗಿಸಿದ್ದರು ಸೃಷ್ಟಿ ದೃಷ್ಟಿ. ಎಲ್ಲರಿಗೂ ಅವರಲ್ಲಿ ಏನು ವ್ಯತ್ಯಾಸ ಇದೆ ಅಂತ ಲೆಕ್ಕ ಹಾಕೋದೇ ಕೆಲಸ ಆಗಿತ್ತು.
ಅವತ್ತಿನ ಕ್ಲಾಸ್ ಮುಗಿದ ತಕ್ಷಣ, ದೇವಸ್ಥಾನದ ಕಡೆ ಹೋದರು. ಅಲ್ಲಿ ಮಲ್ಲಿಗೆಯ ಮಾಲೆಯನ್ನು ಕಟ್ಟಿ, ಪೂಜೆ ಮುಗಿಯುವವರೆಗೂ ನಿಂತು, ಇನ್ನೇನು ಹೊರಡೋದು ಅನ್ನುವಷ್ಟರಲ್ಲಿ, ಕೆರೆಯ ದಡದಲ್ಲಿ ಯಾರೋ ನಿಂತು ಇವರಿಬ್ಬರನ್ನೂ ಕರೆದ ಹಾಗೆ ಅನ್ನಿಸಿತು. ಸೃಷ್ಟಿ ಕೂಡಲೇ ಅಲ್ಲಿಗೆ ಹೋದಳು. ದೃಷ್ಟಿ ಮನಸ್ಸಿಲ್ಲದಿದ್ದರೂ, ಸೃಷ್ಟಿ ಜೊತೆಗೆ ಹೋದಳು. ಕೇಸರಿ ವಸ್ತ್ರಧಾರಿಯಾಗಿದ್ದ ಆ ವೃದ್ಧ, ಕೈಯಲ್ಲಿ ಕಮಂಡಲ ಹಾಗೂ ಜಪಮಾಲೆಯನ್ನು ಹಿಡಿದುಕೊಂಡಿದ್ದ. ಇಬ್ಬರಿಗೂ, "ಕನಸು ಹಾಗೂ ಸತ್ಯದ ನಡುವಿನ ಸಮತೋಲನ ಸರಿಪಡಿಸುವ ಸಮಯ ಬಂದಿದೆ" ಅಂತ ಹೇಳಿ, ನೀರಿನೆಡೆಗೆ ಹೋದರು. ಅಷ್ಟರಲ್ಲಿ ಹಿರಿದಾದ ಬೆಳಕೊಂದು ದೃಷ್ಟಿ ಸೃಷ್ಟಿಯ ಕಣ್ಣಿಗೆ ಪರದೆಯಂತಾಗಿ, ಬೆಳಕು ಸರಿದ ಮೇಲೆ ಆ ವ್ಯಕ್ತಿ ಕಾಣಸಿಗದೇ ಹೋದರು.
ಮನೆಗೆ ಮರಳಿದ ಸೃಷ್ಟಿ ಹಾಗೂ ದೃಷ್ಟಿ, ಅಮ್ಮನ ಜೊತೆ ದೇವಸ್ಥಾನದಲ್ಲಿ ನಡೆದ ವಿಷಯ ತಿಳಿಸಿದರು. ಸುಮಂಗಲಳಿಗೆ ದೇವಿಯ ಆ ದಿನದ ನುಡಿ ನೆನಪಾಗಿ, "ರಹಸ್ಯಗಳು ಬಯಲಾಗುವ ದಿನ ಬಂತೇನೋ" ಅಂತ ಎದೆ ಝಲ್ ಎಂದಿತು. ಹಾಗೆ ಮಕ್ಕಳ ಕ್ಷೇಮ ವಿಚಾರಿಸಿ, ಮಲಗಲು ಅಣಿಯಾದಳು.
ಇತ್ತ, ಸೃಷ್ಟಿ ಹಾಗೂ ದೃಷ್ಟಿ ಕಾಲೇಜಿನ ಹೋಂ ವರ್ಕ್ ಎಲ್ಲ ಮುಗಿಸಿ, ಮಲಗಲು ತಯಾರಿ ಮಾಡುತ್ತಿದ್ದರು. ಅಷ್ಟರಲ್ಲಿ, ಹೊರಗಡೆ ಹಿರಿದಾದ ಬೆಳಕೊಂದು ಕಾಣಿಸತೊಡಗಿತು. ಎಂದಿನಂತೆ ಸೃಷ್ಟಿ ಕುತೂಹಲದಿಂದ ಅದರೆಡೆಗೆ ಹೋಗಲು ತಯಾರಾದಳು. ದೃಷ್ಟಿ ಬೇಡ ಅನ್ನುತ್ತಿದಂತೆಯೇ, ದೃಷ್ಟಿಯ ಕೈ ಹಿಡಿದೆಳೆದು, ಸೃಷ್ಟಿ ಹೊರ ಹೋದಳು. ಆ ಬೆಳಕಿನ ದಾರಿಯುದ್ದಕ್ಕೂ, ಏನೋ ಸ್ವರಗಳು, ಅಂದು ದೇವಿ ಹೇಳಿದ ದೃಷ್ಟಿ ಸೃಷ್ಟಿಯ ಆ ಹೆಸರು, ಅಮೃತಾ - ಮಾಯಾ ಎಂಬ ಕೂಗು ಕೇಳಿಸಿತ್ತಿತ್ತು. ಹಿಂದಿನ ಕೆರೆಯ ಸಾಹಸದ ನಂತರ, ಸೃಷ್ಟಿಯ ಕೈಯಲ್ಲಿದ್ದ ಹಿತ್ತಾಳೆ ಬಳೆ ಹಾಗೂ ದೃಷ್ಟಿಯ ಜೇಬಿನ ನೀಲಿ ಕನ್ನಡಿ — ಇಬ್ಬರಿಗೂ ‘ಸಾಧಾರಣ’ ವಸ್ತುಗಳಾಗಿರಲಿಲ್ಲ. ಪ್ರತಿಕ್ಷಣ ಕೈಯಲ್ಲೇ ಹಿಡಿದುಕೊಂಡು ಹೋಗುತ್ತಿದ್ದರು. ಇಂದು ಅಮಾವಾಸ್ಯೆ ನಂತರದ ಮೊದಲ ಪೌರ್ಣಮಿಯ ರಾತ್ರಿ. ಮಳೆಗಾಲದ ಗಾಳಿ ಇಬ್ಬರ ಮೈಗೂ ಸೋಕುತ್ತಿದ್ದಾಗ, ಚಳಿ ಜೊತೆಗೆ ಆ ಬೆಳಕಿನ ಬಿಸಿ ಅವರಿಬ್ಬರಿಗೂ ಭಾಸವಾಗುತ್ತಿತ್ತು. ಆ ಶಬ್ದಗಳ ನಾದಮಯ ಪರಿಸರದೊಂದಿಗೆ, ವಿಚಿತ್ರ ಸಂಗತಿ ಒಂದಾಯಿತು — ಬಳೆ ತಾನಾಗಿಯೇ ಝೇಂಕರಿಸಿತು. ದೃಷ್ಟಿ ಒದ್ದೆಯಾದ ತನ್ನ ಕೂದಲು ಒರೆಸುತ್ತ ಕನ್ನಡಿಯನ್ನು ನೋಡಿವಷ್ಟರಲ್ಲಿ — ಕನ್ನಡಿ ಮೇಲಿನ ನೀಲಿ ಮಣಿಗಳಿಂದ ಬೆಳಕಿನ ರೇಖೆಯೊಂದು ಹರಿದು, ಸುತ್ತಲೂ ನೀಲವರ್ಣದ ಅಲಂಕಾರ ಕಾಣತೊಡಗಿತು. “ಸೃಷ್ಟಿ, ನೋಡು!” ಅಂತ ಸೃಷ್ಟಿಯ ಭುಜವನ್ನು ತಟ್ಟಿದಳು ದೃಷ್ಟಿ. ನೋಡುನೋಡುತ್ತಿದ್ದಂತೆಯೇ, ಸೃಷ್ಟಿಯ ಬಳೆಯ ಮೇಲಿನ ಕೆತ್ತನೆಯಲ್ಲಿದ್ದ ಎರಡು ಹಂಸಗಳು ಮುಖಾಮುಖಿಯಾಗಿ, ಆ ನೀಲಿ ಬಣ್ಣದ ರೇಖೆಯನ್ನು ಚುಂಬಿಸಿದಂತೆ ಭಾಸವಾಯಿತು. ಕನ್ನಡಿ ಹಾಗೂ ಬಳೆ ಒಂದಕ್ಕೆ ಒಂದು ಎದುರಾಕ್ಷಿಯಾಗಿ ಬಂದಾಗ, ಮಧ್ಯೆ ಪಾರದರ್ಶಕ ತೆರೆ ತೆರೆದು — “ಕನಸಿನ ಪಯಣದ ಕಮಾನು” ಮಿಡಿಯಿತು. ದೃಷ್ಟಿ ಸದ್ದೇ ಇಲ್ಲದೆ ಕೈ ಚಾಚಿದಳು; ಸೃಷ್ಟಿ ಆಕೆಯ ಕೈ ಹಿಡಿದಳು. ಒಟ್ಟಿಗೆ ಕಮಾನಿನ ದ್ವಾರದ ಒಳಗೆ ಕಾಲಿಟ್ಟರು.
***
ಆ ಕ್ಷಣ — ಅವರು ಕಾಲಿಟ್ಟ ನೆಲದ ಮೇಲೆಲ್ಲಾ ಮಲ್ಲಿಗೆ ಹೂವಿನ ಚಾಪೆ, ಬೀಸುತ್ತಿದ್ದ ಆ ತಂಗಾಳಿಯಲ್ಲಿ ಗಂಧದ ಸುವಾಸನೆ, ಮಧ್ಯಾಹ್ನದಂಥ ಸೂರ್ಯನ ಬೆಳಕಿನಲ್ಲಿ ಅವರ ದಾರಿಯುದ್ದಕ್ಕೂ ಹಸಿರು ತೋರಣದ ನೆರಳು. “ರಾಜಕುಮಾರಿಯರೇ, ಬನ್ನಿ.” ಎಂಬ ಸ್ವಾಗತದ ನುಡಿ ಕೇಳಿದೆಡೆ ಸೃಷ್ಟಿ ಹಾಗೂ ದೃಷ್ಟಿ ನೋಡಿದರು. ವಾಸ್ತವ್ಯದ ಲೋಕದಲ್ಲಿ ಕನಸಿನ ಅರಮನೆಯ ಒಳಗೆ ಕಾಲಿಟ್ಟ ಸೃಷ್ಟಿ ಹಾಗೂ ದೃಷ್ಟಿ ಒಂದು ಕ್ಷಣ ಬೆರಗಾದರು. ಒಳಗೆ ಕಾಲಿಟ್ಟವರಿಗೆ ತಿಳಿಯಿತು, ಅದು ಮಲ್ಲಿಗೆ ಹೂವಿನ ಚಾಪೆಯಲ್ಲ, ನಿಜವಾದ ಮಲ್ಲಿಗೆಯ ಬಳ್ಳಿಯೇ, ಚಾಪೆಯಂತೆ ದಾರಿಯುದ್ದಕ್ಕೂ ಹರಡಿ, ಅರಳಿದ ಮಲ್ಲಿಗೆ ಹೂವಿನ ಮೃದುತ್ವ ಕಾಲಿಗೆ ಸೋಕುತ್ತಿತ್ತು. ಮಲ್ಲಿಗೆಯಾ ಸುಗಂಧ ಆಹ್ವಾನಿಸುವಂತಿತ್ತು. ದಾರಿಯುದ್ದಕ್ಕೂ ಸಾಲು ದೀಪಗಳಂತೆ, ನಕ್ಸತ್ರಗಳ ಸಾಲು ಬೆಳಕು ಬೀರಿ ಸ್ವಾಗತ ಕೋರುತ್ತಿತ್ತು. ಗಂಟೆಗಳ ಮೃದುವಾದ ಟಣ್ ಟಣ್ ಲಯಭರಿತ ಸಂಗೀತದಂತ ನಾದ ಎಲ್ಲೆಲ್ಲೂ ಮೊಳಗುತ್ತಿತ್ತು. ಸುತ್ತಲೂ ಶಾಂತಿಯುತ ವಾತಾವರಣವಿದ್ದು, ಆ ಶಾಂತಿಯಲ್ಲಿ ಪ್ರಶಾಂತತೆಯ ತಂಗಾಳಿ ಮೈ ಮನಸ್ಸಿಗೆ ತಂಪೆರೆಯುತ್ತಿತ್ತು.
ಸೃಷ್ಟಿ ಕಣ್ತುಂಬಾ ಆ ಕನಸಿನ ಲೋಕವನ್ನು ನೋಡಿ ಆನಂದಿಸುತ್ತಾ, "ದೃಷ್ಟಿ, ಇದು ಕನಸಿನ ಲೋಕವಾದರೂ ಎಷ್ಟೊಂದು ಸ್ವಚ್ಛವಾಗಿ, ಸುಗಂಧಭರಿತ ಗಾಳಿ ಮೈಗೆ ಸೋಕುತ್ತಿದೆ. ಅಲ್ಲವೇ?" ಅಂತ ದೃಷ್ಟಿಯ ಕೈ ಹಿಡಿಯುತ್ತಾ ಹೇಳಿದಳು. "ಹೌದು, ನಮ್ಮ ಲೋಕದಲ್ಲಿ ಫೈವ್ ಸ್ಟಾರ್ ಹೋಟೆಲ್'ಗಳೂ ಇಷ್ಟೊಂದು ಸ್ವಚ್ಛವಾಗಿರೋದಿಲ್ಲ - ಇರು. ಸರಿಯಾಗಿ ಕಿವಿಗೊಟ್ಟು ಕೇಳಿಸಿಕೋ, ಇಲ್ಲಿನ ಗಾಳಿಯಲ್ಲೂ ಏನೋ ಮಾತುಗಳು ಕೇಳಿಸುತ್ತಿವೆ. ಅಮೃತಾ, ಮಾಯಾ ಅಂತ ಕರೆದಂತೆ ಕೇಳಿಸುತ್ತಿದೆ...." ಅಂದಳು. ಅಷ್ಟರಲ್ಲಿ ಬಲಗಡೆಯ ಗೋಡೆ ಆವಿಯಾದಂತೆ, ಒಂದು ಕನ್ನಡಿ ಗೋಚರಿಸಿತು. ಆ ಕನ್ನಡಿಯು ಚಿನ್ನದಲ್ಲಿ ಕಟ್ಟಿದ ನೀಲಿ ಕಲ್ಲುಗಳ ಚೌಕಟ್ಟಿನಿಂದ ಅಲಂಕೃತವಾಗಿ ತುಂಬಾ ಸುಂದರವಾಗಿತ್ತು. ಅವರ ಬಿಂಬ ಅದರಲ್ಲಿ ಕಾಣುತ್ತಿದ್ದಂತೆ, ಆ ಬಿಂಬಗಳು ಗುಣಿಕರಿಸಿ ಒಟ್ಟಾಗಿ ಎಂಟು ಬಿಂಬಗಳು ಕಾಣಿಸತೊಡಗಿತು. "ಅಯ್ಯಯ್ಯೋ ಇಲ್ಲಿಯಾದರೂ ನಮಗೆ ಈ ವಿಷಯದಿಂದ ರಜೆ ಬೇಕಪ್ಪಾ!" ಅಂತ ಹೇಳಿ ಸೃಷ್ಟಿ ಮುಂದೆ ಹೋಗಲು ಪ್ರಯತ್ನಿಸಿದಳು. ಆಗ ಅಲ್ಲಿ ಇದ್ದ ಮಲ್ಲಿಗೆ ಬಳ್ಳಿ ಅವಳ ಕಾಲಿಗೆ ಸಂಕೋಲೆಯಾಗಿ ಬಿಗಿದು ಅಲ್ಲಿಂದ ಮುಂದೆ ಹೋಗದಂತೆ ಮಾಡಿತು. "ದೃಷ್ಟಿ..." ಅಂತ ಹೇಳುತ್ತಿದ್ದಂತೆ ಗೆಜ್ಜೆಯ ನಾದ ಝೇಂಕರಿಸಿತು. ನೋಡುತ್ತಿದ್ದಂತೆಯೇ, ಆ ಕನ್ನಡಿಯ ಪಕ್ಕದಲ್ಲಿ ಗರ್ಭಗುಡಿಯಲ್ಲಿ ಕಂಡಿದ್ದ ಶ್ವೇತವಸ್ತ್ರಧಾರಿ ತಾಯಿ ಸ್ವರೂಪ ನಿಂತಿದ್ದಳು. ಈಗ ತುಂಬ ಸ್ಪಷ್ಟವಾಗಿ ಆ ಸುಂದರವಾದ ದೇವಿ ರೂಪ ಸೃಷ್ಟಿ ಹಾಗೂ ದೃಷ್ಟಿಗೆ ಗೋಚರಿಸಿತು. "ಅಮೃತ - ಮಾಯಾ, ನೀವಿಬ್ಬರೂ ಒಂದೇ ಆತ್ಮ, ಎರಡು ಜೀವ. ಆತ್ಮಾವಲೋಕನಕ್ಕಿರುವ ಎರಡು ದಾರಿಗಳು. ಇಂದು ನೀವು ಈ ಕನಸಿನ ಲೋಕದ ಕದ ತೆರೆಯದಿದ್ದರೆ, ಈ ಕೆರೆಯ ಲೋಕ ಇಂದಿಗೆ ಕೊನೆಯಾಗುತ್ತಿತ್ತು. ಜನರೆಲ್ಲರೂ ಮಾಯೆಯ ಒಳಗೆ ಸಿಲುಕಿ ವಾಸ್ತವ್ಯದ ಅರಿವಿಲ್ಲದವರಾಗುತ್ತಿದ್ದರು." ದೇವಿ ಹೇಳುತ್ತಿದ್ದಂತೆಯೇ, ದೃಷ್ಟಿ ಕೈಯಲ್ಲಿದ್ದ ನೀಲಿ ಕನ್ನಡಿ ಬಿಸಿಯಾಗತೊಡಗಿತು. ಸೃಷ್ಟಿ ಕೈಯ ಬಳೆ ಝೇಂಕರಿಸಿತು. ದೇವಿ ಮುಂದುವರಿಸುತ್ತಾ, "ಕನಸಿಗೂ, ವಾಸ್ತವ್ಯಕ್ಕೂ ಸಮತೋಲನವಿರಬೇಕು. ನೀವಿಬ್ಬರೂ ನಿಮ್ಮೊಳಗಿನ ಸತ್ಯವನ್ನು ಬೇರ್ಪಡಿಸಿ ನೋಡಬೇಕು. ಯಾವುದು ಕನಸು, ಯಾವುದು ನಿಜ—ಇದು ನಿಮ್ಮಿಬ್ಬರಿಗೂ ಗೊತ್ತಿದ್ದರೂ, ನಿಮ್ಮ ಮೇಲೆ ಲೋಕಕ್ಕೆ ಸಂಶಯವಾಗುತ್ತದೆ. ಅದನ್ನು ನೀವೇ ಪರಿಹರಿಸಬೇಕು." ಹೀಗೆ ಹೇಳಿದ ದೇವಿ ಮಾಯವಾದೊಡನೆ, ಮಂಜಿನ ಒಳಗಿಂದ ಹತ್ತಾರು ಪ್ರತಿಬಿಂಬಗಳು ಹೊರಬಂದವು. "ನಾನೇ ಸೃಷ್ಟಿ, ನಾನೇ ದೃಷ್ಟಿ..." ಎನ್ನುತ್ತಾ ಮತ್ತೆ ಗೊಂದಲ ಸೃಷ್ಟಿ ಮಾಡಹೊರಟವು. ಸೃಷ್ಟಿ ಧ್ರೀತಿಗೆಡದೆ, ನೀಲಿ ಕನ್ನಡಿಯಿಂದ ನೀಲವರ್ಣದ ಬೆಳಕಿಂದ ಬಳ್ಳಿ ಚಂದ್ರನ ಬೆಳಕನ್ನು ಪ್ರತಿಬಿಂಬಿಸುತ್ತಾ, ಆ ಪ್ರತಿಬಿಂಬಗಳ ಸುತ್ತ ಹಗ್ಗದಂತೆ ಸುತ್ತಿಕೊಂಡಿತು. ಬೆಳಕು ಬೀಳುತ್ತಲೇ ಆ ಪ್ರತಿಬಿಂಬಗಳು ಮಾಯವಾದವು. ಗೊಂದಲ ಕಳೆಯಿತು. ಕನಸಿನ ಲೋಕದ ಬಾಗಿಲು ತೆರೆಯಿತು.
ವಾಸ್ತವ್ಯಕ್ಕೆ ಕಾಲಿಡುತ್ತಲೇ, ಸೃಷ್ಟಿ ಹಾಗೂ ದೃಷ್ಟಿ ಕೈ ಕೈ ಹಿಡಿದು ಓಡಿದರು. ಪೌರ್ಣಮಿಯ ಬೆಳಕು, ಮಳೆಗಾಲದ ಗಾಳಿ—ಮನೆ ಹಿಂದೆ ಇರುವ ಹಿತ್ತಿಲು. ಆದರೆ ಮನೆಯಲ್ಲಿ ಶಾಂತಿ ಇರಲಿಲ್ಲ.
***
ಸುಮಂಗಲ ಅಳುತ್ತಾ, ಶಶಿಧರ ಕೋಪದಿಂದ ಮನೆಬಾಗಿಲ ಬಳಿ ನಿಂತಿದ್ದರು. ಪಕ್ಕದ ಮನೆಯವರು, ಪೊಲೀಸರೊಬ್ಬರು, ಊರಿನ ಜನ—ಎಲ್ಲ ಸೇರಿದ್ದರು. ಮನೆ ಒಳಗೆ ಕಾಲಿಡುತ್ತಿದ್ದಂತೆ, ಎಲ್ಲರೂ "ಇವರೇ ಇವರೇ... ಹಿಡಿಯಿರಿ ಅವರನ್ನು" ಎಂದರು. ಸೃಷ್ಟಿ ಗಲಿಬಿಲಿಯಿಂದ "ಏನಾಯ್ತು" ಎಂದು ಕೇಳಿದಾಗ, ಪೊಲೀಸರು "ಕಾಲೇಜಿನಲ್ಲಿ ಹಾಗೂ ದೇವಸ್ಥಾನದಲ್ಲಿ ಕಳ್ಳತನ ಆಗಿದೆ. ಸಿಸಿಟಿವಿ ನೋಡಿದರೆ, ಎರಡೂ ಕಡೆ ನೀವೇ ಕಾಣುತ್ತಿದ್ದಿರಿ, ನಿಜ ಹೇಳಿ ಈ ರಾತ್ರಿ ಕಳ್ಳತನ ಮಾಡಿದ ವಸ್ತುಗಳೆಲ್ಲಿ?" ಎಂದರು. ಅಷ್ಟರಲ್ಲಿ ದೃಷ್ಟಿ ಮುಂದೆ ಬಂದು, ಧೈರ್ಯ ತುಂಬಿಕೊಂಡು, “ನಾವು ಮನೆಯಲ್ಲಿರಲಿಲ್ಲ. ಆದರೆ ತಪ್ಪು ಮಾಡಿಲ್ಲ.” ಅಂದಳು. ಸೃಷ್ಟಿ ಎಂದಿನಂತೆ ಧೈರ್ಯವಾಗಿ, “ನಮ್ಮ ಮುಖ ತೊಟ್ಟು ಯಾರೋ ಆಟ ಆಡ್ತಿದ್ದಾರೆ. ನಾವು ಅದನ್ನು ಹಿಡಿದು ತೋರಿಸ್ತೀವಿ.” ಪೊಲೀಸ್ ವ್ಯಂಗ್ಯವಾಗಿ: “ಸಿಸಿಟಿವಿ ಯಲ್ಲಿ ಅಷ್ಟು ಚೆನ್ನಾಗಿ ಕಂಡಿದೆ. ಕಳ್ಳತನ ಮಾಡಿದ್ದಲ್ಲದೆ, ಸುಳ್ಳು ವಾದ ಬೇರೆ. ನೀವು ಹೇಳಿದಂತೆ ನೀವು ಅಲ್ಲವಾದಲ್ಲಿ ಯಾರು ಅವರನ್ನು ಹಿಡಿದು ತೋರಿಸಿ. ಇಲ್ಲ ಅಂದ್ರೆ… ನಿಮ್ಮಿಬ್ಬರನ್ನೂ ಸ್ಟೇಶನ್ ಗೆ ಕರೆದುಕೊಂಡು ಹೋಗ್ತೀವಿ.” ಅಂದ.
ಸೃಷ್ಟಿ ತಕ್ಷಣ ದೃಷ್ಟಿಯ ಕೈ ಹಿಡಿದು, “ನಮ್ಮ ಪುರಾವೆ ನಮ್ಮ ಕೈಯಲ್ಲೇ ಇದೆ.” ಎಂದು ಬಳೆಯನ್ನು ಎತ್ತಿ ತೋರಿಸಿದಳು. “ಬಳೆ? ಬಳೆಯಿಂದ ಏನು ಸಾಬೀತು ಮಾಡುವಿರಿ?” ಎಂದ ಪೊಲೀಸ್. “ಹೌದು. ಇದು ಕೇವಲ ಬಳೆ ಅಲ್ಲ. ಇದು ಸತ್ಯಕ್ಕೆ ಗಂಟೆ.” ಅಷ್ಟರಲ್ಲಿ ದೃಷ್ಟಿ ತನ್ನ ನೀಲಿ ಕನ್ನಡಿಯನ್ನು ತೆಗೆದು, “ಇದು ನಿಜಕ್ಕೆ ಕನ್ನಡಿ. ಬನ್ನಿ ನಮ್ಮ ಜೊತೆ” ಅಂತ ಹೇಳಿ ಹೊರಗಡೆ ಚಂದ್ರನ ಬಿಂಬದೆಡೆ ಕರೆದುಕೊಂಡು ಹೋದರು. ದೃಷ್ಟಿ ತನ್ನ ಕನ್ನಡಿಯಿಂದ ಚಂದ್ರನ ಬೆಳಕಿನ ಬಿಂಬವನ್ನು ಸೃಷ್ಟಿಯ ಬಳೆಯೆಡೆ ಬೀರಿದಳು. ಅಷ್ಟರಲ್ಲಿ ಬಲೇ ಜೋರಾಗಿ ಝೇಂಕರಿಸಿತು. ಬಾಳೆಯ ಮಧ್ಯದಿಂದ ಬೆಳಕು ಹರಿದು ಮನೆಯ ಗೋಡೆಯ ಮೇಲೆ ದೊಡ್ಡ ದೃಶ್ಯ ಪ್ರೊಜೆಕ್ಟರ್ ಮೂಲಕ ಕಾಣೋ ರೀತಿಯಲ್ಲಿ ಕಾಣಿಸತೊಡಗಿತು. ಆ ದೃಶ್ಯದಲ್ಲಿ — ದೇವಸ್ಥಾನದ ಹುಂಡಿಯ ಬಳಿ ನಿಂತಿದ್ದ ಹುಡುಗಿ. ಅವಳ ಮುಖ ಸೃಷ್ಟಿಯಂತೇ. ಕಣ್ಣು ದೃಷ್ಟಿಯಂತೇ. ಆದರೆ ಕಣ್ಣ ಮಣಿಯಲ್ಲಿ—ಹಳದಿ ಕಿರಣ. ದೃಷ್ಟಿ ನಿಧಾನವಾಗಿ: “ಇವಳು… ನಾವಲ್ಲ . ನಮ್ಮಂತೆಯೇ ಕಾಣುವ ನಮ್ಮ ಬಿಂಬ. ಕನಸಿನ ರಾಜ್ಯದಿಂದ ತಪ್ಪಿಸಿಕೊಂಡ ನಮ್ಮ ಪ್ರತಿಬಿಂಬ.” ಸೃಷ್ಟಿ ಕೋಪದಿಂದ, “ಈಗ ಆ ಬಿಂಬವನ್ನೇ ಹಿಡಿಯಬೇಕು!”. ಅಷ್ಟರಲ್ಲಿ ಆ ಹುಡುಗಿ ದೇವಸ್ಥಾನದ ಕೆರೆಯ ಕಡೆಗೆ ಹೋದಳು. ಆ ಕ್ಷಣಕ್ಕೆ, ಊರಿನ ಹೊರವಲಯದ ಕೆರೆ ಕಡೆಗೆ ಗಾಳಿ ಹರಿದಂತೆ. ಹಿತ್ತಿಲಿನಲ್ಲಿದ್ದ ಮಲ್ಲಿಗೆ ಹೂಗಳು ಒಮ್ಮೆಲೆ ತಿರುಗಿ ಕೆರೆ ದಿಕ್ಕಿಗೆ ನೆಗ್ಗಿದವು. ಸೃಷ್ಟಿ, “ಎಲ್ಲರೂ ನಮ್ಮ ಜೊತೆ ಬನ್ನಿ.” ಅಂದಳು. ಪೊಲೀಸ್ ಕೂಡಲೇ: “ಎಲ್ಲಿಗೆ?”ಎಂದಾಗ, “ನಮ್ಮ ಸತ್ಯವನ್ನು ನಿಮಗೆ ತೋರಿಸೋದಿಕ್ಕೆ.” ಎಂದಳು ಸೃಷ್ಟಿ.
***
ಕೆರೆ ದಡಕ್ಕೆ ಬಂದಾಗ, ದೇಗುಲದ ಗಂಟೆಗಳು ತಾನಾಗಿಯೇ ಬಡಿದವು. “ಟಂಗ್… ಟಂಗ್…” ಹಿಂದಿನಂತೆ ಕೆರೆಯ ನೀರಿನಲ್ಲಿ ಮೂರು ಚಂದ್ರಬಿಂಬ ಕಾಣಿಸಿತು. ಆ ಬಿಂಬಗಳ ಮಧ್ಯೆ, ಬಿಳಿ ಹೊಗೆ ಉಬ್ಬಿ, ಆ ‘ಬಿಂಬ ಹುಡುಗಿ’ ನೀರಿನ ಮೇಲೆ ನಿಂತಂತೆ ಕಾಣಿಸಿತು. ಅವಳ ತುಟಿಯಲ್ಲಿ ನಗು: “ನಿಮ್ಮ ಜೀವನ ನಾನು. ನಿಮ್ಮ ಹೆಸರು ನಾನು. ನನ್ನನ್ನು ನಶಿಸಲು ಸಾಧ್ಯವೇ ಇಲ್ಲ” ಎಂದು ನಕ್ಕಳು. ಸೃಷ್ಟಿ: “ನೀನು ಯಾರು?” ಎಂದು ಕೇಳಿದರೆ, ಮತ್ತೆ ಜೋರಾಗಿ ನಕ್ಕು, “ನಾನು ನಿಮ್ಮ ‘ಬಿಂಬ’. ಜನರು ಸದಾ ಗೊಂದಲದಲ್ಲೇ ಇರಬೇಕು. ಇವಳು ಅವಳೋ? ಅವಳು ಇವಳೋ?—ಈ ಪ್ರಶ್ನೆಯಲ್ಲೇ ನನ್ನ ಬದುಕು.” ದೃಷ್ಟಿ ಮೃದುವಾಗಿ: “ನೀನು ಗೊಂದಲ. ಆದರೆ ನಾವು ಸಮತೋಲನ.” ಎಂದು ಹೇಳಿ, ಸೃಷ್ಟಿಯ ಕೈ ಹಿಡಿದಳು. ಸೃಷ್ಟಿ ಕೂಡಲೇ ಬಳೆಯನ್ನು ಎತ್ತಿ, “ಟಂಗ್!” ಎಂದು ಒಮ್ಮೆಲೆ ನೆಲಕ್ಕೆ ಬಡಿದಳು. ಬಾಳೆಯ ಝೇಂಕಾರ ಜೋರಾಗಿ ಗುಡುಗಿತು. ಬಿಂಬ ಹುಡುಗಿ ನಕ್ಕಳು. “ನನಗೆ ನಿಮ್ಮ ಗಂಟೆಯ ಭಯ ಇಲ್ಲ.” ಎಂದಂತೆಯೇ, ದೃಷ್ಟಿ ಕನ್ನಡಿಯನ್ನು ಎತ್ತಿ, ಬಿಂಬ ಹುಡುಗಿಯ ಮುಖಕ್ಕೆ ತೋರಿಸಿದಳು.
ಕನ್ನಡಿಯೊಳಗೆ ಬಿಂಬ ಹುಡುಗಿಯ ಪ್ರತಿಬಿಂಬ ಬಂತು…ಮಂಜಿನೊಳಗಿನ ಕಣ್ಣಿಲ್ಲದ, ಲೋಭದ ನೆರಳು. ಪೊಲೀಸರೂ, ಊರಿನವರೂ ದಿಗ್ಬ್ರಮೆ. “ಇವಳು… ಇವಳು ನಿಜವಾಗಿಯೂ ಕೇವಲ ಬಿಂಬ. ಮನುಷ್ಯೆ ಅಲ್ಲ!” ಎಂಬ ಕೂಗು.
ಬಿಂಬ ಹುಡುಗಿ ಹಿಂತಿರುಗಿ ಕನ್ನಡಿಯಿಂದ ದೂರ ಓಡಲು ಯತ್ನಿಸಿದಳು. ನೀರಿನೊಳಗೆ ಲೀನವಾಗಲು. ಸೃಷ್ಟಿ ತಕ್ಷಣ ತನ್ನ ಬಳೆಯನ್ನು ಚಲಾಯಿಸಿ—ನೀರಿನ ಮೇಲ್ಮೈಯನ್ನು ಹೊಡೆದಳು. “ಟಂಗ್!” ನೀರಿನ ಏರಿಳಿತಕ್ಕೆ ಬೆಳಕಿನ ಬಿರುಕು ಬಂದು ಬಿಂಬ ಹುಡುಗಿ ಆ ಬಿರುಕಿನೊಳಗೆ ಸಿಕ್ಕಿಕೊಂಡಳು. ದೃಷ್ಟಿ ತನ್ನ ಕನ್ನಡಿಯನ್ನು ನಿಧಾನವಾಗಿ ನೀರಿನ ಕಡೆ ತಗ್ಗಿಸಿ, ಮೃದುವಾಗಿ ಹೇಳಿದಳು: “ನೀನು ಗೊಂದಲವಾಗಿಯೇ ಉಳಿದರೆ ಲೋಕಕ್ಕೆ ನರಕ. ನೀನು ಕರಗಬೇಕು.” ಕನ್ನಡಿಯ ನೀಲಿ ಬೆಳಕು ಒಂದು ನುಣುಪಾದ ರೇಖೆಯಾಗಿ ಬಿಂಬ ಹುಡುಗಿಯನ್ನು ಹಸಿರು ಬಳ್ಳಿಯಂತೆ ಸುತ್ತಿಕೊಂಡಿತು. ಬಿಂಬ ಹುಡುಗಿ ಅಳಲು ಪ್ರಾರಂಭಿಸಿದಳು. “ನಾನು ಕೂಡ ಬದುಕಬೇಕು…” ಅಂದಳು. ಆಗ ಸೃಷ್ಟಿ ಮೊದಲ ಬಾರಿಗೆ ಮೃದುವಾಗಿ: “ನೀನು ಬದುಕಬಹುದು. ಆದರೆ ನಿಜವಾಗಿ ಅಲ್ಲ. ಕೇವಲ ಬಿಂಬವಾಗಿ.”
ಅಷ್ಟರಲ್ಲಿ ದೇಗುಲದ ಶ್ವೇತವಸ್ತ್ರ ತಾಯಿ ರೂಪ ಮತ್ತೆ ಕಾಣಿಸಿಕೊಂಡಳು. “ಸೃಷ್ಟಿ, ದೃಷ್ಟಿ, ನೀವು ಸರಿಯಾಗಿ ಬಿಂಬವನ್ನು ಬಂಧಿಸಿದಿರಿ. ಬಿಂಬವನ್ನು ನಾಶಮಾಡೋದು ಸುಲಭ. ಅದಕ್ಕೆ ಜೀವನದಲ್ಲಿ ‘ಸ್ಥಳ’ ಕೊಡೋದು ಕಷ್ಟ. ಮನುಷ್ಯರ ಮನಸ್ಸಿನ ಗೊಂದಲದಿಂದ ಪ್ರತಿಬಿಂಬಗಳು ಹುಟ್ಟುವವು. ಅದನ್ನು ನಾಶ ಮಾಡದೆ, ನಮಗೆ ದಾರಿದೀಪವಾಗುವಂತೆ ಇರಿಸಿದರೆ, ಕನಸಿನ ಲೋಕಕ್ಕೆ ರೆಕ್ಕೆ ಸಿಕ್ಕಿ, ವಾಸ್ತವ್ಯ ಉಜ್ವಲವಾಗುವುದು.” ಎಂದು ತನ್ನ ಕೈ ಚಾಚಿದಳು. ನೀರಿನೊಳಗಿನ ಬಿಂಬ ಹುಡುಗಿ ನಿಧಾನವಾಗಿ ಒಂದು ಸಣ್ಣ ದೀಪವಾಗಿಬಿಟ್ಟಳು—ಮಲ್ಲಿಗೆ ಹೂವಿನಂತೆ ಮೃದುವಾಗಿ ಹೊಳೆಯುವ ದೀಪ. “ಇದು ಇಂದಿನಿಂದ ಕೆರೆಯ ದೀಪ. ಯಾರ ಮನಸ್ಸಿನಲ್ಲಿ ಗೊಂದಲ ಹೆಚ್ಚಾದರೂ, ಈ ದೀಪ ನೆನಪಿಸಲಿದೆ — ಸತ್ಯ ಒಂದು. ರೂಪ ಎರಡು - ಕನಸನ್ನು ಕಳೆದು ವಾಸ್ತವ್ಯವನ್ನು ಬೆಳಗಿಸುವುದೇ ಈ ದೀಪದ ಕರ್ತವ್ಯ.” ಎಂದಳು.
ಅಲ್ಲಿ ನೆರೆದಿದ್ದ ಅಷ್ಟೂ ಜನರಿಗೆ ಸತ್ಯದ ಅರಿವಾಯಿತು. ದೇವಿಗೆ ನಮಸ್ಕರಿಸಿ, ಆ ನಂದಾದೀಪವನ್ನು ಕೆರೆಯ ಬದಿಯಲ್ಲಿ ಸ್ಥಾಪಿಸಿ, ಅದಕ್ಕೆ ನಮಸ್ಕರಿಸಿದರು. ದೇಗುಲಕ್ಕೆ ಹೋದಾಗ ಕಳುವಾಗಿದೆ ಎಂದಿದ್ದ ವಸ್ತುಗಳು ಅದರ ಜಾಗದಲ್ಲೇ ಇದ್ದವು. ಕಾಲೇಜಿನಲ್ಲೂ ಅದೇ ನಡೆದಿತ್ತು. ಎಲ್ಲವೂ ಬಿಂಬದ ಕೆಲಸ ಎನ್ನುವುದು ಸ್ಪಷ್ಟವಾಗಿ ಬಿಟ್ಟಿತು.
***
ಮನೆಗೆ ಮರಳಿದಾಗ, ಊರಿನ ಜನರು ಕಣ್ಣು ತಗ್ಗಿಸಿದರು. ಪೊಲೀಸರು ಸತ್ಯ ದಾಖಲಿಸಿದರು. “ನಿಮ್ಮಿಬ್ಬರದ್ದು ತಪ್ಪಿಲ್ಲ. ನಮ್ಮ ಊರಿನ ಜನರ ಗೊಂದಲವೇ ತಪ್ಪು.” ಎಂದು ಪಿಎಸ್ಐ ಹೇಳಿದ.
ಸುಮಂಗಲ ಇಬ್ಬರನ್ನೂ ಬಿಗಿಯಾಗಿ ಅಪ್ಪಿಕೊಂಡು, “ನಿಮ್ಮನ್ನು ನಾನು ಹುಟ್ಟಿಸಿದೆ. ಆದರೆ ನಿಮ್ಮೊಳಗಿನ ಶಕ್ತಿ ದೇವಿಯದು.” ಎಂದು ಕಣ್ಣೀರಿಟ್ಟಳು. ಶಶಿಧರ ಹತ್ತಿರ ಬಂದು, ಮೊದಲ ಬಾರಿಗೆ ಮೌನವಾಗಿ ಇಬ್ಬರ ತಲೆಗೆ ಕೈ ಇಟ್ಟು ಆಶೀರ್ವದಿಸಿದ.
ಮಾಧವ ದೂರದಿಂದಲೇ ನೋಡುತ್ತಿದ್ದ. ಅವನ ಕೊಳಲು ಕೈಯಲ್ಲಿತ್ತು. ಸೃಷ್ಟಿ ಕಣ್ಣು ಹೊಡೆದು: “ಪ್ರೀತಿ ಗೀತಿ ಕಲಿಕೆ ನಂತರ ಅಂತ ಹೇಳಿದ್ದೀನಲ್ಲ!”
ದೃಷ್ಟಿ ನಗುತ್ತಾ: “ಆದರೆ ಕೊಳಲಿನ ಸ್ವರಕ್ಕೆ ಮನಸ್ಸು ಒಮ್ಮೆ ಕೇಳಿಸಿಕೊಳ್ಳಬಹುದು.”
ಮಾಧವ ಗಾಬರಿಯಾಗಿ: “ನಾನು… ನಾನು ಯಾರನ್ನೂ ಆಯ್ಕೆ ಮಾಡಿಲ್ಲ. ನಿಮ್ಮಿಬ್ಬರನ್ನೂ ಗೌರವಿಸುತ್ತೇನೆ.”
ಸೃಷ್ಟಿ: “ಅದೇ ಸಾಕು. ಆಯ್ಕೆ ಮಾಡೋದು ನಮ್ಮ ‘ಬಿಂಬ’ ಅಲ್ಲ. ನಮ್ಮ ‘ಬುದ್ಧಿ’.”
ಸೃಷ್ಟಿಯ ಮಾತಿಗೆ ಎಲ್ಲರೂ ನಕ್ಕರು. ಆ ನಗೆ ಊರಿಗೆ ಹೊಸ ಬೆಳಕು ಕೊಟ್ಟಂತೆ ಆಯ್ತು.
ಆ ರಾತ್ರಿ, ಸೃಷ್ಟಿ ಮತ್ತು ದೃಷ್ಟಿ ತಮ್ಮ ಕೋಣೆಯಲ್ಲಿ ಮಲಗುವ ಮುನ್ನ ಕನ್ನಡಿಯಲ್ಲಿ ನೋಡಿಕೊಂಡರು.
ಕನ್ನಡಿಯೊಳಗೆ ಇಬ್ಬರೂ ಒಂದೇ ಮುಖ—ಆದರೂ ಕಣ್ಣಲ್ಲಿ ಬೇರೆ ಬೇರೆ ಹೊಳಪು.
ಸೃಷ್ಟಿ: “ಇವಳು ಅವಳೋ?”
ದೃಷ್ಟಿ: “ಅವಳು ಇವಳೋ?”
ಎರಡೂ ಸೇರಿ ಒಂದೇ ಉತ್ತರ:
“ನಾವು… ನಾವು.”
ಹೊರಗಡೆ ಕೆರೆಯ ದೀಪ ಮಲ್ಲಿಗೆ ಬಣ್ಣದಲ್ಲಿ ಮಿನುಗುತ್ತಿತ್ತು. ಯಾರಾದರೂ ಕಿವಿಗೊಟ್ಟರೆ, ಅದರೊಳಗೆ ಒಂದು ಸಣ್ಣ ಗಂಟೆಯ ನಾದ ಕೇಳಿಸುತ್ತಿತ್ತು—
“ಟಂಗ್… ಟಂಗ್…”
ಹೀಗೇ ಹೇಳುವಂತೆ:
ಗೊಂದಲ ಪ್ರಶ್ನೆ ಆಗಿರಬಹುದು… ಆದರೆ ಉತ್ತರ ಎಂದಿಗೂ—ಸತ್ಯವೇ.
***
✍🏻 Deepalaxmi Bhat
Mangaluru


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ