✍🏻*ದೀಪಲಕ್ಷ್ಮಿ ಭಟ್*, ಮಂಗಳೂರು
*ಎರಡು ಪ್ರಪಂಚಗಳ ನಡುವೆ*
ಸೂರ್ಯನಗರಿ ಎಂಬ ಸಣ್ಣ ಪಟ್ಟಣ. ಆ ಪಟ್ಟಣದ ನಾಲ್ಕೂ ದಿಕ್ಕುಗಳಲ್ಲಿ ಹಚ್ಚ ಹಸಿರಿನ ಕಾಡು ಮತ್ತು ಸರೋವರದ ಪ್ರಶಾಂತ ವಾತಾವರಣ. ಜನರೆಲ್ಲರೂ ಸುಂದರವಾದ ರೀತಿಯಲ್ಲಿ ತಮ್ಮ ಜೀವನ ನಡೆಸುತ್ತಿದ್ದರು. ಒಗ್ಗಟ್ಟು, ಸಹಾಯಕ ಮನೋಭಾವ, ಗುರುಹಿರಿಯರ ಮೇಲೆ ಕಟ್ಟುನಿಟ್ಟಿನ ಗೌರವ, ಎಲ್ಲಕ್ಕಿಂತಲೂ ಹೆಚ್ಚಾಗಿ ಅಲ್ಲಿನ ಹೆಣ್ಣುಮಕ್ಕಳು ಆರಾಮಾಗಿ ಯಾರ ಭಯವೂ ಇಲ್ಲದೆ ಓಡಾಡಬಹುದಾದ ಸಂಸ್ಕೃತಿ ಇದ್ದ ಊರು. ಆದರೂ, ಆ ಪಟ್ಟಣದಲ್ಲಿ ಜೀವಿತ ಪ್ರಪಂಚದ ಆಚೆಗಿನ ಒಂದು ಹಿರಿದಾದ ರಹಸ್ಯ ನೆಲೆಮಾಡಿತ್ತು.
ಆ ಪಟ್ಟಣದ ಹೊರವಲಯದಲ್ಲಿ ಮಂಜು ಮತ್ತು ಮಿತಿಮೀರಿ ಬೆಳೆದ ಮರಗಳಿಂದ ಮರೆಮಾಡಲ್ಪಟ್ಟ ಒಂದು ಪ್ರಾಚೀನ ಚಿಕಿತ್ಸಾಲಯ ಇತ್ತು. ಅದು ಮಾಮೂಲಿ ಆಸ್ಪತ್ರೆಗಳಿಂದ ವಿಭಿನ್ನವಾಗಿತ್ತು. ಒಂದು ಜೀವಿಯ ಮರಣಾನಂತರ ಅದರ ಆತ್ಮವು ತನ್ನ ಪರಲೋಕದ ಪ್ರಯಾಣ ಶುರು ಆಗುವ ಮೊದಲು ಈ ಚಿಕಿತ್ಸಾಲಯಕ್ಕೆ ಬರುತ್ತದೆ ಎಂಬುದು ನಂಬಿಕೆ. ತಮ ತಮ್ಮ ಆತ್ಮಗಳ ತೊಂದರೆಗಳಿಗೆ ಚಿಕಿತ್ಸೆ ನೀಡಲು ಬಯಸುವ ಮಾನವರು, ಪ್ರಾಣಿಗಳು ಮತ್ತು ಸಮುದ್ರದ ಜೀವಿಗಳ ಆತ್ಮಗಳಿಗೆ ಇದು ಒಂದು ಅಭಯಾರಣ್ಯವಾಗಿತ್ತು. ಈ ಚಿಕಿತ್ಸಾಲಯವನ್ನು ಪಂಡಿತರ ಹಾಗೂ ಉತ್ತಮೋತ್ತಮ ವೈದ್ಯರ ಆತ್ಮಗಳ ಗುಂಪು ನಡೆಸುತ್ತಿತ್ತು. ೧೨ನೇ ಶತಮಾನದಲ್ಲಿ ಅದೇ ಪಟ್ಟಣದಲ್ಲಿ ಪಂಡಿತರೆನಿಸಿಕೊಂಡ ಧನ್ವಂತರಿಮಹರ್ಷಿ ಅನ್ನುವವರ ನೇತೃತ್ವದಲ್ಲಿ ಈ ಚಿಕಿತ್ಸಾಲಯ ಕಾರ್ಯ ನಿರ್ವಹಿಸುತ್ತಿತ್ತು. ಒಂದು ಕಾಲದಲ್ಲಿ ತಮ್ಮ ಜೀವಿತಾವಧಿಯಲ್ಲಿ ಅದ್ಭುತ ವೈದ್ಯರಾಗಿದ್ದ ಅವರು ನಿಗೂಢ ವ್ಯಕ್ತಿಯಾಗಿದ್ದರು. ಅವರ ಸಹಾಯಕರಲ್ಲಿ ಸಮುದ್ರ ಜೀವಿಗಳಿಗೆ ಚಿಕಿತ್ಸೆ ನೀಡುವ ವೈದ್ಯೆಯಾಗಿ ಮೀನಾಕುಮಾರಿ ಮತ್ತು ಭೂಮಿಯ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಭೂಪತಿ ಅವರು ಸೇರಿದ್ದಾರೆ.
ಆ ಊರಿನ ಎಂಟು ವರ್ಷದ ಬಾಲಕಿ ಛಾಯ, ಆತ್ಮಗಳೊಂದಿಗೆ ಸಂವಹನ ನಡೆಸುವ ಅಸಾಧಾರಣ ಶಕ್ತಿಯನ್ನು ಹೊಂದಿರುವ ಹುಡುಗಿ. ಅವಳಿಗೆ ಹಾಗೂ ಆ ಪಟ್ಟಣದಲ್ಲಿ ವಾಸಿಸುತ್ತಿದ್ದ ಇನ್ನಿತರ ಕೆಲವು ವಿಶೇಷ ವ್ಯಕ್ತಿಗಳಿಗೆ ಮಾತ್ರ ಆ ಚಿಕಿತ್ಸಾಲಯದ ಅಸ್ತಿತ್ವ ತಿಳಿದಿತ್ತು. ಛಾಯ ಪ್ರತಿದಿನ ಕ್ಲಿನಿಕ್‌ಗೆ ಭೇಟಿ ನೀಡುತ್ತಿದ್ದಳು, ಅವಳ ನಗು ಆತ್ಮಗಳಿಗೆ ಸಂತೋಷವನ್ನು ತರುತ್ತಿತ್ತು ಮತ್ತು ಅವಳ ಸೌಮ್ಯ ವರ್ತನೆ ಅವರಿಗೆ ಸಾಂತ್ವನ ನೀಡುತ್ತಿತ್ತು.
ಆ ದಿನ ಛಾಯಾಳ ಪಕ್ಕದ ಮನೆಯ ಅಮರನಿಗೆ ಮದುವೆ. ಮದುವೆಗೆ ಹೋದ ಛಾಯಾಳಿಗೆ ಅಮರನಿಗೆ ಹೆಂಡತಿಯಾಗಿ ಬರುತ್ತಿರುವ ಹುಡುಗಿ ಸ್ನೇಹಾಳನ್ನು ನೋಡುತ್ತಲೇ ಅವಳಿಗೂ ತನ್ನಂತೆ ಅಸಾಮಾನ್ಯ ಶಕ್ತಿ ಇದೆ ಎಂದು ಸೂಚಿಸುವ ಪ್ರಭಾವಳಿಯನ್ನು ಛಾಯ ಸ್ನೇಹಾಳಲ್ಲಿ ಕಂಡಳು. ಈ ನವವಿವಾಹಿತೆ ಪಕ್ಕದ ಮನೆಗೆ ಬಂದಾಗ ಛಾಯಾಳ ಜೀವನವು ಆಕರ್ಷಕ ತಿರುವು ಪಡೆದುಕೊಂಡಿತು.
ಒಂದು ಬಿಸಿಲಿನ ಬೆಳಿಗ್ಗೆ ಛಾಯ ತನ್ನ ತೋಟದಲ್ಲಿ ಆಡುತ್ತಿದ್ದಂತೆ, ಸ್ನೇಹ ಸೌಮ್ಯವಾದ ನಗುವಿನೊಂದಿಗೆ ಛಾಯಾಳ ಹತ್ತಿರ ಬಂದಳು. "ಹಾಯ್ ಮಗೂ! ನಾನು ಸ್ನೇಹಾ. ನಾನು ಈಗಷ್ಟೇ ಇಲ್ಲಿಗೆ ಅಮರ್ ನ ಮದುವೆಯಾಗಿ ಬಂದಿದ್ದೇನೆ." ಅಂತ ಹೇಳಿದಳು, ಅವಳ ಕಣ್ಣುಗಳು ಪ್ರೀತಿಯಿಂದ ಕೂಡಿದ್ದರೂ ಕುತೂಹಲದಿಂದ ಛಾಯ ಮಂದಹಾಸ ಬೀರಿ ಅಂದಳು - "ನಾನು ಛಾಯಾ. ನೀವು ... ಅಸಾಮಾನ್ಯ ಸ್ಥಳಗಳ ಬಗೆಗಿನ ಕಥೆಗಳನ್ನು ಇಷ್ಟಪಡುತ್ತೀರಾ?". ಸ್ನೇಹಾ ಆಶ್ಚರ್ಯಚಕಿತಳಾದಂತೆ ಹುಬ್ಬೇರಿಸಿ ಹೌದು ಎಂಬಂತೆ ತಲೆಯಾಡಿಸಿದಳು. ಛಾಯಾ ತನ್ನ ರಹಸ್ಯಗಳನ್ನೂ ಹಂಚಿಕೊಳ್ಳಲು ನಿರ್ಧರಿಸಿದಳು. ಆ ಸಂಜೆ, ಆಕಾಶದಲ್ಲಿ ತಂಪಾದ ಗಾಳಿಯೊಂದಿಗೆ ಬೆಳದಿಂಗಳ ಬೆಳಕಿನಲ್ಲಿ, ಪಾರಿಜಾತದ ಪರಿಮಳದ ಆನಂದವನ್ನು ಆಸ್ವಾದಿಸುತ್ತಾ, ಅವಳು ಸ್ನೇಹಾಳನ್ನು ಮಂಜಿನ ಮೂಲಕ ಚಿಕಿತ್ಸಾಲಯಕ್ಕೆ ಕರೆದೊಯ್ದಳು. ವರ್ಣಪಟಲದ ಕಟ್ಟಡವು ನೆರಳುಗಳಿಂದ ಹೊರಹೊಮ್ಮುತ್ತಿದ್ದಂತೆ ಸ್ನೇಹಾ ಆಶ್ಚರ್ಯಚಕಿತಳಾಗಿ ಹೊಳೆಯುವ ಕಂಗಳನ್ನು ಒಂದು ಕ್ಷಣಕ್ಕೂ ಮುಚ್ಚದೆ ಸುತ್ತಲೂ ಏನೇನಿದೆ ಅನ್ನುವುದನ್ನು ನೋಡಿದಳು.
ಒಳಗೆ, ಎಲ್ಲಾ ರೀತಿಯ ಆತ್ಮಗಳು ಅಲೆದಾಡುತ್ತಿದ್ದವು. ಹಲವಾರು ಆತ್ಮಗಳು ನೋವಿನಿಂದ ನರಳುತ್ತಿದ್ದರೆ, ಇನ್ನೂ ಹಲವು ಆತ್ಮಗಳು ಚಿಕಿತ್ಸೆ ಪಡೆದು ಮುಕ್ತಿ ಹೊಂದುವ ಕ್ಷಣಗಣನೆ ಮಾಡುತ್ತಿದ್ದವು. ಒಂದು ಕಡೆ ಪುಟ್ಟದೊಂದು ಹುಲಿಮರಿಯ ಆತ್ಮ ಸಮುದ್ರದಲ್ಲಿ ಮುಳುಗಿದ ನಾವಿಕನೊಂದಿಗೆ ಮಾತುಕತೆ ನಡೆಸುವುದನ್ನು ನೋಡಿದಾಗ ಸ್ನೇಹಾಳ ಹೃದಯವು ವಿಸ್ಮಯದಿಂದ ಉಬ್ಬಿತು. ಧನ್ವಂತರಿಮಹರ್ಷಿಗಳು ಸ್ನೇಹಾಳ ಶಕ್ತಿಯನ್ನು ಗುರುತಿಸಿ ಒಳಗೆ ಸ್ವಾಗತಿಸಿದರು. "ನೀವು ಒಂದು ವಿಶೇಷ ಕಾರಣಕ್ಕಾಗಿ ಇಲ್ಲಿಗೆ ನಿಮ್ಮ ದಾರಿಯನ್ನು ಕಂಡುಕೊಂಡಿದ್ದೀರಿ" ಎಂದು ಅವರು ಹೇಳಿದರು. "ಈ ಸ್ಥಳವು ನಿಮ್ಮಿಬ್ಬರನ್ನೂ ಖಂಡಿತವಾಗಿಯೂ ಒಂದು ಉತ್ತಮ ಉದ್ದೇಶದಿಂದ ಬರಮಾಡಿಕೊಂಡಿದೆ."
ಇದಾದ ಬಳಿಕ ಹವಾಮಾನ ಏರಿಳಿತದ ಪರಿಣಾಮ ತಿಂಗಳುಗಳ ಕಾಲ, ಸ್ನೇಹಾ ಹಾಗೂ ಛಾಯಾ ಪ್ರತಿದಿನ ಭೇಟಿ ನೀಡುತ್ತಾ, ಆತ್ಮಗಳ ಲೋಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರಿಗೆ ಸಹಾಯ ಮಾಡುತ್ತಾ ಮತ್ತು ಆತ್ಮಗಳೊಂದಿಗೆ ಸ್ನೇಹ ಬೆಳೆಸುತ್ತಿದ್ದರು. ಒಂದು ದಿನ, ಚಿಕಿತ್ಸಾಲಯದ ಹೊಸ ವಿಭಾಗ ಒಂದನ್ನು ಅನ್ವೇಷಿಸುವಾಗ, ಈ ಆತ್ಮಗಳ ಲೋಕವನ್ನು ಜೀವಿತರ ಲೋಕದಿಂದ ಬೇರ್ಪಡಿಸುವ ಹರಿಯುವ ನೀರಿನ ಸುರಂಗವನ್ನು ಅವರು ಕಂಡುಹಿಡಿದರು. ಸುರಂಗವು ಅಲೌಕಿಕ ಬೆಳಕಿನಿಂದ ಮಿನುಗುತ್ತಿತ್ತು. ಅದರ ನೀರು ಎರಡು ಲೋಕಗಳ ನಡುವಿನ ಸೂಕ್ಷ್ಮ ಸಮತೋಲನವನ್ನು ಕಾಯ್ದುಕೊಳ್ಳುವ ಶಕ್ತಿಯಿಂದ ಕೂಡಿತ್ತು. ಈ ನೀರಿನ ಮೂಲವನ್ನು ದಾಟುತ್ತಿದ್ದ ಆತ್ಮಗಳು ಇಹಲೋಕದ ನೋವು, ನರಳಾಟಗಳನ್ನು ತೊಡೆದು ಶುದ್ದೀಕರಣಗೊಳ್ಳುತ್ತಿದ್ದವು. ಆ ದಿನ, ಛಾಯ ಹಾಗೂ ಸ್ನೇಹಾ ನೋಡುತ್ತಿದ್ದಂತೆಯೇ, ಕೆಲವೊಂದು ದುರ್ಬಲ ಆತ್ಮಗಳು, ಶುದ್ದೀಕರಣಗೊಳ್ಳದೆ, ಕೆಟ್ಟ ಮನಸ್ಥಿತಿ ಹಿಡಿದು ಮೂಳೆ ಮಾಂಸ ಪಡೆದು ವಿಕಾರ ಜೀವಿಗಳಾಗಿ ಪಟ್ಟಣದ ಕಡೆ ಹೋಗುತ್ತಿದ್ದವು. ಇದನ್ನು ನೋಡಿ ಬೆಚ್ಚಿಬಿದ್ದ ಛಾಯಾ ಮತ್ತು ಸ್ನೇಹಾ ಸುರಂಗಕ್ಕೆ ಧಾವಿಸಿದರು. ಮೀನು, ಪಕ್ಷಿಗಳು ಮತ್ತು ಇತರ ಜೀವಿಗಳ ಆತ್ಮಗಳು ನೀರಿನಲ್ಲಿ ಬೀಳುತ್ತಿದ್ದವು. ಆತ್ಮಗಳು ಶುದ್ದೀಕರಣಗೊಳ್ಳದೆ, ಮಾಂಸ ಮತ್ತು ಮೂಳೆಯಾಗುತ್ತಿದ್ದಂತೆ ಪುನರುಜ್ಜೀವನಗೊಂಡ ವಿಕಾರ ಜೀವಿಗಳು ಕಾಡು ಮತ್ತು ಜೀವಿತರ ಲೋಕಕ್ಕೆ ಹಾರಿದವು. ವೈದ್ಯರು ಭಯಭೀತರಾಗಿ ಒಟ್ಟುಗೂಡಿದರು. "ಸಮತೋಲನ ಮುರಿಯುತ್ತಿದೆ,"ಎಂದು ಧನ್ವಂತರಿಮಹರ್ಷಿಗಳು ಹೇಳಿದರು. "ಇದು ಹೀಗೆಯೇ ಮುಂದುವರಿದರೆ, ಅವ್ಯವಸ್ಥೆ ಜೀವಿತರ ಲೋಕಕ್ಕೆ ಹರಡುತ್ತದೆ." ಒಂದು ಕಾಲದಲ್ಲಿ ಸ್ನೇಹಪರವಾಗಿದ್ದ ಆತ್ಮಗಳು ಈಗ ಮೂಳೆ ಮಾಂಸಗಳ ದೇಹ ಪಡೆದು ಆಕ್ರಮಣಕಾರಿಯಾಗಿ ಸುತ್ತಾಡುತ್ತಾ, ಎರಡೂ ಲೋಕಗಳ ಸಮತೋಲನಕ್ಕೆ ಅಪಾಯವನ್ನುಂಟುಮಾಡುತ್ತಿರುವುದನ್ನು ಛಾಯಾ ಮತ್ತು ಸ್ನೇಹಾ ಗಾಬರಿಯಿಂದ ನೋಡಿದರು. ವೈದ್ಯರುಗಳ ಸಹಾಯ ಪಡೆದು, ಜೀವಿತರ ಲೋಕವನ್ನು ಕಾಪಾಡುವುದು ಈಗ ಅವರ ಜವಾಬ್ದಾರಿಯಾಗಿತ್ತು.
ವಿನಾಶ ಮಾಡುವ ಉದ್ದೇಶ ಹೊಂದಿದ ಹಲವಾರು ವಿಕಾರ ಜೀವಿಗಳ ಆಕ್ರಮಣದಿಂದ ಛಾಯಾ ಮತ್ತು ಸ್ನೇಹಾ ತಪ್ಪಿಸಿಕೊಳ್ಳಲೆಂದು ಓಡಿದರು. ಶುದ್ದೀಕರಣಗೊಳ್ಳದೆ ಜೀವಂತವಾಗಿ ಬಂದ ಆ ಒಂದು ಗೂಳಿಯು ಅವರಿಬ್ಬರನ್ನೂ ಅಟ್ಟಿಸಿಕೊಂಡು ಬರುತ್ತಿತ್ತು. ಅದರ ಆಕ್ರಮಣದಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡರು. ಒಂದು ಸುರಕ್ಷಿತ ಸ್ತಳವನ್ನು ತಲುಪಿದ ಅವರು, ಸಮಸ್ಯೆಯ ತೀವ್ರತೆಯನ್ನು ಅರಿತುಕೊಂಡರು. ಅವರು ಆ ಚಿಕಿತ್ಸಾಲಯವನ್ನಾಗಲಿ, ಜೀವಿತರ ಜಗತ್ತನ್ನಾಗಲಿ ಇಂತಹ ಅವ್ಯವಸ್ಥೆಗೆ ಬಿಟ್ಟುಕೊಡಲು ಅವರ ಮನಸೊಪ್ಪಲಿಲ್ಲ. ದೃಢನಿಶ್ಚಯ ಮಾಡಿಕೊಂಡು, ಅವರು ಹಿಂತಿರುಗಿ ಪರಿಹಾರವನ್ನು ಕಂಡುಕೊಳ್ಳಲು ನಿರ್ಧರಿಸಿದರು.
ಚಿಕಿತ್ಸಾಲಯಕ್ಕೆ ಹಿಂತಿರುಗಿದ ಛಾಯ ಹಾಗೂ ಸ್ನೇಹಾಳಿಗೆ ಧನ್ವಂತರಿಮಹರ್ಷಿಗಳು ಈ ಅವ್ಯವಸ್ಥೆಯ ಕಾರಣವನ್ನು ಬಹಿರಂಗಪಡಿಸಿದರು: ಸುರಂಗವನ್ನು ಬೇರ್ಪಡಿಸಿದ ಪ್ರಾಚೀನ ಕಾಲದ ರಕ್ಷಾಕವಚವು ವರ್ಷಗಳ ನಿರ್ಲಕ್ಷ್ಯದಿಂದ ದುರ್ಬಲಗೊಂಡಿತ್ತು. ಎರಡೂ ಪ್ರಪಂಚಗಳೊಂದಿಗೆ ಆಳವಾದ ಸಂಪರ್ಕ ಹೊಂದಿರುವ ಯಾರಾದರೂ ಮಾತ್ರ ಅದನ್ನು ಸರಿಪಡಿಸಬಹುದು. "ಆದರೆ ಈ ರಕ್ಷಾಕವಚವನ್ನು ಸರಿಪಡಿಸಲು ಅಪಾರ ಧೈರ್ಯ ಮತ್ತು ನಂಬಿಕೆಯ ಅಗತ್ಯವಿದೆ" ಎಂದು ಮೀನಾಕುಮಾರಿ ಎಚ್ಚರಿಸಿದರು. "ನೀರು ನಿಮ್ಮ ಸಾರವನ್ನು ಪರೀಕ್ಷಿಸುತ್ತದೆ." ಛಾಯಾ ಮತ್ತು ಸ್ನೇಹಾ ಮನಸ್ಸಿನಲ್ಲಿ ಧೈರ್ಯ ತುಂಬಿಕೊಂಡು ಈ ಕೆಲಸಕ್ಕೆ ಸಿದ್ಧರಾದರು. ವೈದ್ಯರ ಮಾರ್ಗದರ್ಶನದಲ್ಲಿ, ಅವರು ಸುರಂಗವನ್ನು ಪ್ರವೇಶಿಸಿದರು. ನೀರಿನ ಶಕ್ತಿಯು ಅವರ ಮೂಲಕ ಹಾದುಹೋಯಿತು. ಅವರ ಆಳವಾದ ಭಯಗಳನ್ನು ಮತ್ತು ಅತೀವ ಸಂತೋಷಗಳ ಕ್ಷಣಗಳನ್ನು ದರ್ಶಿಸಿತು. ಛಾಯಾ ತಾನು ಒಬ್ಬಂಟಿಯಾಗಿರುವ ಜಗತ್ತನ್ನು ಕಂಡರೆ ಸ್ನೇಹಾ ತನ್ನ ಪತಿ ಅಮರ್ ತನ್ನನ್ನು ಮರೆಯುವುದನ್ನು ದರ್ಶಿಸಿದಳು. ಛಾಯ ಹಾಗೂ ಸ್ನೇಹಾ ಇಬ್ಬರೂ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ಅವರವರ ದರ್ಶನಗಳನ್ನು ಒಟ್ಟಿಗೆ ಎದುರಿಸಿದರು. ನೋವಾದರೂ ಧೈರ್ಯದಿಂದ ಎದುರಿಸಿ ಮುಂದೆ ಸಾಗಿದರು. ಅವರ ಈ ಸಂಯೋಜಿತ ಶಕ್ತಿಯು ಸುರಂಗದ ಆ ರಕ್ಷಾಕವಚವನ್ನು ಪುನಃಸ್ಥಾಪಿಸಿತು. ಆತ್ಮಗಳು ಮತ್ತೆ ಶುದ್ಧೀಕರಣಗೊಳ್ಳಲು ಶುರುವಾದವು.
ರಕ್ಷಾಕವಚ ಸುಧಾರಿಸಿದಂತೆ, ಆವಾಗಲೇ ಮೂಳೆ ಮಾಂಸ ಪಡೆದ ವಿಕಾರ ಜೀವಿಗಳು ಶಾಂತವಾಗಿ ಆತ್ಮಗಳ ಲೋಕಕ್ಕೆ ಮರಳಿದವು. ಚಿಕಿತ್ಸಾಲಯ ಮತ್ತೆ ಸ್ಥಿರವಾಯಿತು. ಆ ಲೋಕದ ಹೊಳಪು ಎಂದಿಗಿಂತಲೂ ಪ್ರಕಾಶಮಾನವಾಗಿ ಕಾಣಿಸಿತು. ಜೀವಿತರ ಲೋಕವೂ ಅಲ್ಪಕಾಲದ ಭಯಾನಕ ಅನುಭವಗಳಿಂದ ಪಾರಾಗಿ ಮೊದಲಿನಂತೆ ಶಾಂತವಾಯಿತು. ಧನ್ವಂತರಿಮಹರ್ಷಿಗಳು ಛಾಯ ಹಾಗೂ ಸ್ನೇಹಾಳಿಗೆ ಧನ್ಯವಾದ ಅರ್ಪಿಸುತ್ತಾ ಅವರನ್ನು ಚಿಕಿತ್ಸಾಲಯದ "ರಕ್ಷಕರು" ಎಂದು ಕರೆದರು. ಇದಾದ ಬಳಿಕ, ಛಾಯಾ ಮತ್ತು ಸ್ನೇಹಾ ತಮ್ಮ ಜೀವಿತರ ಲೋಕಕ್ಕೆ ಮರಳಿದರು. ಇದಾದ ಮೇಲೆ ಅವರು ಚಿಕಿತ್ಸಾಲಯಕ್ಕೆ ಭೇಟಿ ನೀಡುವುದನ್ನು ಕಡಿಮೆಗೊಳಿಸಿದರೂ, ಆತ್ಮಲೋಕದ ವೈದ್ಯರು ಮತ್ತು ಆತ್ಮಗಳೊಂದಿಗಿನ ಅವರ ಬಾಂಧವ್ಯವು ಮುರಿಯಲಾಗದ ಅನುಬಂಧವಾಗಿ ಪರಿವರ್ತಿಸಿತ್ತು. ಛಾಯ ಹಾಗೂ ಸ್ನೇಹಾ ಈ ಎರಡು ಲೋಕಗಳ ನಡುವಿನ ಪ್ರಪಂಚದ ಜವಾಬ್ದಾರಿಯನ್ನು ತಮ್ಮ ತಲೆಯ ಮೇಲೆ ತೆಗೆದುಕೊಂಡು, ಜೀವಿತ ಕಾಲದಲ್ಲಿ ಅಗತ್ಯ ಇರುವಾಗಲೆಲ್ಲ ಆ ಲೋಕಕ್ಕೆ ತಮ್ಮ ಸೇವೆಯನ್ನು ಮುಡಿಪಾಗಿಟ್ಟರು. ಈ ಎರಡು ಪ್ರಪಂಚಗಳ ನಡುವಿನ ಏರಿಳಿತವು ಸೂಕ್ಷ್ಮವಾಗಿದೆ, ಆದರೆ ರಕ್ಷಿಸಲು ಸಾಧ್ಯವಿರುವಂತಹುದಾಗಿದೆ ಎಂದು ಅವರಿಗೆ ತಿಳಿದಿತ್ತು. ವರ್ಷಗಳ ನಂತರ, ಛಾಯಾ ಮತ್ತು ಸ್ನೇಹಾ ಆ ಲೋಕ ಪ್ರವೇಶಿಸಿದಾಗ, ಸ್ನೇಹಾಳ ಕೈಯಲ್ಲಿ ಅವಳ ಪುಟ್ಟದಾದ ಮಗು ಇತ್ತು. ಆ ಮಗುವಿಗೂ ಈ ಶಕ್ತಿ ಅನುವಂಶಿಕವಾಗಿ ದೊರೆತಿತ್ತು. ಅವರು ಅಲ್ಲಿ ಬಂದಾಗ ಆತ್ಮಗಳೆಲ್ಲವೂ ಅವರನ್ನು ಸ್ವಾಗತಿಸಲು ಮುಂದೆ ಬಂದರು. ಆಗ, ಆ ಮಗುವಿನ ಅಗಲವಾದ ಕಣ್ಣುಗಳು ಆಶ್ಚರ್ಯದಿಂದ ತುಂಬಿದ್ದವು. ಧನ್ವಂತರಿಮಹರ್ಷಿಗಳು ನಗುತ್ತಾ, "ರಕ್ಷಕತ್ವದ ಚಕ್ರವು ಮುಂದುವರಿಯುತ್ತದೆ" ಎಂದು ಹೇಳಿ, "ಜೀವಿತರ ಮತ್ತು ಆತ್ಮಗಳ ನಡುವಿನ ಸಮತೋಲನವು ತೊಂದರೆಗೊಳಗಾಗದೆ ಉಳಿಯುತ್ತದೆ" ಎಂಬುದನ್ನು ಖಚಿತಪಡಿಸಿದರು.
✍🏻 *Deepalaxmi Bhat*
Mangaluru
No comments:
Post a Comment