ಗುರುವಾರ, ಮಾರ್ಚ್ 6, 2014

ಭಾವನೆಗಳ ಉತ್ಸವ

ಮನದಲ್ಲಿ ನೂರಾರು ಆಸೆಗಳು
ಅರಳುತಿವೆ ಹೂಗಳಂತೆ
ಹೃದಯದಿ ನೂರಾರು ಬಯಕೆಗಳು
ಚಿಗುರುತಿವೆ ತಳಿರೆಲೆಗಳಂತೆ...
ಆ ಆಸೆ-ಬಯಕೆಗಳಿಗೆ ಇಂದು
ಮೂಡಿವೆ ರೆಕ್ಕೆ-ಪುಕ್ಕಗಳು
ಭಾವನೆಗಳ ಕಡಲಲ್ಲಿ ಮಿಂದು
ಹೊಳೆಯುತಿವೆ ಮನದ ಕಣ್ಣುಗಳು.
ಸಂಭ್ರಮದ ಸಿಹಿ ತಂಗಾಳಿಯಲಿ
ಬಾಡಿದ ಸುಗಂಧಿತ ಹೂಗಳಂತೆ
ಹಾರಾಡುತಿವೆ ಬಣ್ಣದ ಸ್ವಪ್ನಗಳು
ಕಡಲಿನ ಅಳಿಯದ ಅಲೆಗಳಂತೆ...
ಮನಸಿಗೆ ಹಿತವನು ನೀಡಿ
ಹೃದಯಕೆ ಸಿಹಿಯನು ಉಣಿಸಿ
ಹುತಿಯಾದಾವು ಭಾವನೆಗಳು ಬಾಡಿ
ನಿಜ ಜೀವನಕೆ ಹಿಂಬರುವುದೇ ವಾಸಿ...


(೦೫-೦೩-೨೦೧೪)

ಸೋಮವಾರ, ಮಾರ್ಚ್ 3, 2014

ಪ್ರಯತ್ನ

ಮಾಡುವ ಕೆಲಸದಿ ಯಶಸ್ಸು ಸಿಗದಿರೆ
ಧೃತಿಗೆಡಬೇಡ ಓ ಮನವೇ...
ಸಫಲತೆ ದೊರೆವೆಡೆತನಕ ನೀನು
ಪ್ರಯತ್ನವ ಕೈಬಿಡದಿರು ಕೇಳು...

ಬಲೆಯನು ನೇಯುವ ಜೇಡನು ತಾನು
ನೇಯ್ದ ಬಲೆಯನು ಕೆಡಿಸಿದರೂ
ಪ್ರಯತ್ನವ ಬಿಡದೆ ವಿಶ್ರಾಂತಿ ಪಡೆಯದೆ
ನೇಯುವುದು ಮತ್ತೆ ಬಲೆಯನು..

ವರ್ಷಋತುವಿಗಾಗಿ ಇರುವೆಯು ತಾನು
ಶೇಖರಿಸುವುದು ಆಹಾರವನು...
ಅಡೆತಡೆಗಳೆಷ್ಟೇ ಇರಲಿ ಬಿಡದೆ ಪ್ರಯತ್ನಿಸಿ
ಕೂಡಿಡುವುದೆಲ್ಲವನು ತನ್ನ ಗೂಡಲಿ...

ಪ್ರಕೃತಿಯೇ ನೀಡಲು ಹಲವು ಸಂದೇಶಗಳ
ಅರ್ಥೈಸಿಕೋ ನೀ ಓ ಮನವೇ...
ಬಾಳ ತುಂಬಾ ದೊರೆವುದು ಪಾಠಗಳನೇಕ
ಅದನರಿತು ಬಾಳ ನಡೆಸು ನೀ ಕೇಳು....

(೦೩-೦೩-೨೦೧೪)

ಭಾನುವಾರ, ಮಾರ್ಚ್ 2, 2014

"ಗುರು"ವಿನ ನಿಜವಾದ ಅರ್ಥ ಇಂದೆಲ್ಲಿ?

ಯಾಂತ್ರಿಕ ಜಗದಿ ಈಗ
ಅರಿತಿಹರು ಯಾರು
"ಗುರು"ವೆಂಬ ಪದದ ನಿಜಾರ್ಥ!
ನಂದುತಿರಲು ಇದೀಗ
ಸಂಸ್ಕೃತಿಯೆಂಬ ಸೊಡರು
ಮೆರೆಯುತಿರಲು ಮನದಿ ಸ್ವಾರ್ಥ!!

ಜೀವನವೇ ಆಗಿರಲು ಇಂದು
ವ್ಯಾವಹಾರಿಕ ರೀತಿಯದು
ನಶಿಸುತಿರಲಂದಿನ ಜೀವನ ವೈಖರಿ!
ಕಾಣಲಾರದು ಇನ್ನೆಂದಿಗೂ
ಶ್ರೇಷ್ಠವಾದ ಗುರುಕುಲವದು
ನಾಶವಾಗಿಹುದೆಂಬುದೊಂದು ಖಾತರಿ!!

ವಿದ್ಯಾ ಬುದ್ಧಿಯ ದಾನ ನೀಡಿದ
ಶ್ರೇಷ್ಠ ಪರಂಪರೆಯ ತಿಳಿಸಿದ
ಗುರುವೇ ನಿಮಗೆ ಕೋಟಿ ನಮನ!
ಅತ್ಯುತ್ತಮ ಸಂಸ್ಕಾರ ಹೊಂದಿದ
ಅಂದಿನ ಗುರುಕುಲ ಕಾಲದ
ಶ್ರೇಷ್ಠತೆಗೆ ಇಂದೆಲ್ಲಿದೆ  ಗಮನ??

ಬ್ರಹ್ಮ ವಿಷ್ಣು ಮಹೇಶ್ವರರ
ಶ್ರೇಷ್ಠತೆಗಿಂತಲೂ ಮಿಗಿಲಾದ
ಸ್ಥಾನವದು ಸೇರಿತ್ತಂದು ಗುರುವಿಗೆ!
ಸಂಬಂಧವದು ಗುರುಶಿಷ್ಯರ
ಸಕಲ ಲೋಕಕೂ ಪ್ರಿಯವಾದ
ಗೌರವವು ಸೇರಿತ್ತು ಪ್ರತಿಯೊಬ್ಬ ಗುರುವಿಗೆ!!

ಸ್ವಾರ್ಥವನ್ನು ತೊರೆದಿದ್ದು
ಷಡ್ವೈರಿಗಳ ನಶಿಸಿದ್ದು
ಸ್ಥಿರಚಿತ್ತರಾಗಿದ್ದರು ಗುರುಗಳಂದು!
ಸಂಪಾದನೆಯೊಂದೇ ಗುರಿಯಾಗಿದ್ದು
ವಿದ್ಯಾದಾನವ ಮರೆತಿದ್ದು
ಹೆಚ್ಚುತ್ತಿರುವರು ಸ್ವಾರ್ಥ ಚಿತ್ತರಿಂದು!!

ಹೀಗಿರಲು ಶ್ರೇಷ್ಠರಾರೆಂದು
ಹುಡುಕುವುದೆಂತು ನಾನರಿಯೆ
ಉತ್ತಮ ಗುರುವೇ ಕಡಿಮೆ ಏಕಿಂದು??
ಗುರುಗಳಲಿ ಗೌರವವೆಂದು
ಯಾವ ಶಿಷ್ಯರಲೂ ಕಾಣದಿರೆ
ಶಿಷ್ಯರಿಗೇಕೆ ಬೇಕು ಗುರುಗಳಿಂದು???

ನೀಡಬೇಕು ಪ್ರತಿಯೊಬ್ಬರೂ
ಗುರುವಿಗೊಂದು ಗೌರವ
ಆಗ ತಾನೇ ಫಲಿಸುವುದು ಕಲಿತ ವಿದ್ಯೆ!
ಶಿಷ್ಯರೇಕಿಂದು ಮರೆತಿರುವರು
ಶಿಷ್ಯರಿಗಿರಬೇಕಾದ ಗುಣವ
ಅಗತ್ಯವಾಗಿರುವ ವಿನಯ ವಿಧೇಯತೆ!!

ಗುರುಗಳೆಂತಹವರಾದರೂ
ಶಿಷ್ಯರಿಗಿರಬೇಕು ಅವರಲಿ
ಗೌರವ, ವಿನಯ, ವಿಧೇಯತೆ, ಭಕ್ತಿ!
ನೀಡುತಿರುವ ವಿದ್ಯೆಗಳನು
ಗುರುವಿನ ಆಶೀರ್ವಾದದಿಂದಲಿ
ಆರ್ಜಿಸಿ ನಾವಾಗಬೇಕು ಜಗ ಬೆಳಗುವ ಶಕ್ತಿ!!

ಆಗ ನೀಡಬೇಕಿಲ್ಲ ನಾವು
ಹಿಂದಿನವರು ನೀಡುತ್ತಿದ್ದಂತೆ
ಗುರುಗಳಿಗೆಂದು ಇಂದು "ಗುರುದಕ್ಷಿಣೆ"!
ಗುರುಗಳ ಶಿಕ್ಷಣದಿಂದಲಿ ನಾವು
ಜಗವ ಬೆಳಗುತ್ತಿದ್ದಂತೆ
ಪಡೆದಂತಾಗುವುದು ಗುರುವಿಗೆ ಆ "ದಕ್ಷಿಣೆ"!!

ಹಾಗಾಗಿ ಇಂದು ಶಿಷ್ಯರೆಲ್ಲರೂ
ನೀಡಬೇಕು ಗುರುವಿಗೆ ಗೌರವ
ಶ್ರದ್ಧೆ,  ಭಕ್ತಿ,  ವಿನಯ ಭಾವದಲ್ಲಿ!
ಆಗ ಮಾತ್ರ ನೀಡಿದಂತಾಗುವುದು
"ಗುರು"ವೆಂಬ ಪದಕ್ಕೆ ಅರ್ಥವ
ಇಂದಿನ ವ್ಯಾವಹಾರಿಕ ಜೀವನದಲ್ಲಿ!!

ಎಂಥ ಮಹಾತ್ಮ ನಮ್ಮ ಬಾಪೂಜಿ

ಮಕ್ಕಳ ನೆಚ್ಚಿನ ಬಾಪೂಜಿ
ನಗುಮುಖ ಅರಳಿದ ಗಾಂಧೀಜಿ
ತುಂಡು ಪಂಚೆಯು ಸೊಂಟದಿ
ಕನ್ನಡಕವೊಂದಾ ನಯನದಿ
ಆಧಾರಗೋಲದು ಕೈಯಲಿ
ತ್ಯಾಗಭಾವನೆಯೇ ಮನದಲಿ

ಸಾಧನೆಯದನೇಕ ಮಾಡಿಹರು
ಸಾಮಾನ್ಯರಂತೆ ತೋರಿದರೂ
ಹೊಂದಲು "ಬ್ಯಾರಿಸ್ಟರ್" ಇಂಗ್ಲೆಂಡಲಿ
ವಕೀಲರಾದರೂ ದಕ್ಷಿಣ ಆಫ್ರಿಕಾದಲಿ
ನಡೆಸಿದರಲ್ಲಿ ಕರಿಜನರಿಗಾಗಿ
ಹೋರಾಟ ನಾಗರಿಕ ಹಕ್ಕುಗಳಿಗಾಗಿ

ಮರಳಲು ಪಡೆದರು ಸ್ವದೇಶದಿ
ನಾಯಕತ್ವವ ತಿಲಕರ ನಂತರದಿ
ಬ್ರಿಟಿಷರು ನಡೆಸಿದ ಶೋಷಣೆಗಳಿಂದ
ಭಾರತವು ನರಳಿತು ಬಡತನದಿಂದ
ತೊಲಗಿಸಲದನು ಪ್ರಚಾರಿಸಿದರವರು
ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳನು

ಹೋರಾಡಿದರು ಸ್ವದೇಶದ ಸ್ವಾತಂತ್ರ್ಯಕಾಗಿ
ದೇಶಾದ್ಯಂತ ಜನಜಾಗೃತಿಯ ನಿರ್ಮಿಸಲಿಕಾಗಿ
ನಾಯಕರ ಒಗ್ಗಟ್ಟಿಗಾಗಿ ಪ್ರೇರೇಪಿಸಿದರು
"ಏನೇ ಬರಲಿ ಒಗ್ಗಟ್ಟಿರಲಿ" ಎಂದು ಘೋಷಿಸಿದರು
"ಅಹಿಂಸಾ ಪರಮೋಧರ್ಮ" ಎಂದು ಸಾರಿದರು
"ರಾಮರಾಜ್ಯ" ಸ್ಥಾಪನೆಯ ಕನಸನು ಕಂಡರು

ನಿಯಮನಿಷ್ಠೆ - ಶಿಸ್ತು - ಸಂಯಮ ಹೊಂದಿ
ದೇವರ ಭಕ್ತಿ ಭಜನೆಗಳ ಮಹತ್ವ ಸಾರಿ
ನಡೆಸಿ ಪತ್ರಿಕೋದ್ಯಮ, ಪ್ರಕೃತಿಚಿಕಿತ್ಸೆ, ಗ್ರಾಮೋದ್ಯೋಗ
ಸ್ವದೇಶೀ ಶಿಕ್ಷಣ - ಯೋಜನೆಗಳ ಪ್ರಯೋಗ
ಭಾರತವ ಸ್ವತಂತ್ರಗೊಳಿಸಿದ ಬಾಪೂ
ನಿಮಗಿದೋ ಶತಕೋಟಿ ನಮನ...

ಕಷ್ಟ ಬಂದಾಗ ಇಂದು

ಜೀವನವೆಂಬೋ ಮಹಾಮಾರ್ಗದಿ, ಇರುವುದೇ ಅಲ್ಲವೇ ಏರು-ತಗ್ಗು
ಎರಬೇಕಾದಾಗ ನೋಡಿ ಈ ಜಗದಿ, ಜೀವನದ ಉನ್ನತ ಶಿಖರವನ್ನು
ಖುರಾನ್- ಗೀತೆ- ಬೈಬಲ್'ಗಳಲಿ, ಇರುವುದೊಂದೇ ತಾನೇ ಸಾರ
ಯಾವ ಕಷ್ಟ ನಷ್ಟ ಅನುಭವಿಸಿದರೂ, ನಡೆಯಬೇಕು ಸನ್ಮಾರ್ಗದಲಿ

ಒಬ್ಬನ ಮನದ ಸಂಕಷ್ಟಗಳನು, ಅರಿಯುವವರಾರೂ ಇಲ್ಲ ಈ ಜಗದಿ
ಬಡಿದಿರಲು ಜನರೆಲ್ಲರ ಆತ್ಮಕ್ಕೂ, "ಸ್ವಾರ್ಥ- ಅಹಂಕಾರ"ಗಳೆಂಬ ಪೆಡಂಭೂತ
ಬಂದೊದಗಿದರೆ ಒಬ್ಬನಿಗೆ ಕಷ್ಟ, ನಕ್ಕು ನಲಿದಾದುವವರೇ ಜಾಸ್ತಿ
ನೆರವಾದರೆ ಅವರಿಗದೆನು ನಷ್ಟ, ಕುಂಠಿತಗೊಂಡಾಗ ಸಂತೋಷದ ಆಸ್ತಿ

ಇಂದಿನ ಈ ಕಲಿಯುಗದಲಿ, ತಪ್ಪಿಲ್ಲದವನಿಗೂ ದೊರೆವುದು ಶಿಕ್ಷೆ
ಬೈಗಳು- ಅಪವಾದಗಳ ಸುರಿಮಳೆ, ಇರಲಾರದೇ ಆತನಿಗೆ ರಕ್ಷೆ?
ಬಂದಾಗ ಕಷ್ಟಗಳ ಸುರುಳಿ, ನಡೆಯಬೇಕು ಮುಂದೆ ಎದೆಗುಂದದೆ
ಯಾರ ಸಹಾಯಕ್ಕೂ ಕೈಯೊಡ್ದದೆ, ಸಾಗಬೇಕು ಮುಂದೆ ಮುಂದೆ

ಹಾಗಾದರೆ ಮಾತ್ರವೇ ಸಾಧ್ಯ, ದೊರೆಯಲು ಜೀವನದಿ ಸಿದ್ಧಿ
ವಿಚಾರ ಮಾಡದೆ ಮನನೊಂದರೆ, ದೊರೆಯಲಾರದು ಎಂದಿಗೂ ಬುದ್ಧಿ
ಆದುದರಿಂದಲೇ ದೇವರಲಿ ಹೇಳಿ, ನಿಮ್ಮಯ ಸಂಕಷ್ಟಗಳನು
ಹಗುರವಾದಾಗ ಮನದ ನೋವು, ಪಡೆಯುವಿರಿ ಸುಖ ಕ್ಷಣಗಳನು

ಕಷ್ಟಗಳಿಗೆ ಪರಿಹಾರ ನೀಡಲು, ಸಾಧ್ಯ ಕೇವಲ ಭಗವಂತನಿಗೆ
ಜೀವನ ನೀಡಿದ ಆ ಶಕ್ತಿಯು ಮಾತ್ರ, ಮರುಕಳಿಸಬಲ್ಲದು ಸಂತೋಷವ
ಒಬ್ಬನ ಮನದ ವಿಚಾರಗಳನು, ಅರ್ಥೈಸುವವರಾರೂ ಇಲ್ಲ
ವಿಚಾರ ನೀಡಿದ ಆ ಶಕ್ತಿಗೆ ಮಾತ್ರ, ಅರ್ಥವಾಗುವುದು ಆ ಚಿಂತನ

ಹಾಗಾಗಿ ನಿಮ್ಮೆಲ್ಲರ ಕಷ್ಟಗಳನು, ಮನದೊಳಗಿಟ್ಟು ಕೊರಗದಿರಿ
ದೇವರ ಮುಂದೆ ನಮ್ರತೆಯಿಂದಿಟ್ಟು , ಸಫಲರಾಗಿರಿ ನಿಮ್ಮ ಜೀವನದಿ.

ಶುಕ್ರವಾರ, ಫೆಬ್ರವರಿ 28, 2014

ಆಶಯಗಳು ಈಡೇರದಾಗ...

ಮುಕ್ತಿಯನರಸುತ ಹೊರಟಿದೆ ಜೀವ
ಈ ಲೋಕವು ತುಳುಕುವ ಪಾಪದ ಕೂಪ...
ಅಜ್ಞಾನ ಅಂಧಕಾರಗಳ ದುರ್ಭಾವ
ಅಂಟಿದಂತಿದೆ ಪ್ರತಿ ಜೀವಿಗಳಿಗಿದು ಶಾಪ...

ಅಹಂಕಾರ ದರ್ಪಗಳು ಶಿಖರದಿ ಮೆರೆದಿದೆ
ಪರೋಪಕಾರಿಗಳಿಗೆ ಬೆಲೆಯಿರದು ಇಲ್ಲಿ...
ಸದ್ವಿಚಾರಗಳ ತುಳಿದು ತುಂಡರಿಸಿ
ಮೆರೆಸುವರು ದುರ್ಭಾವದ ಜಾಲಗಳನಿಲ್ಲಿ...

ಸದ್ಚಿಂತನೆಯ ಮನವನು ಹೊಸೆದು
ನಿರ್ಜೀವ ಮಾಡಿ ಕುಣಿದಾಡುವರಿವರು
ಪರರಿಗೆ ಕೇಡ ಬಯಸದ ಹೃದಯವ
ಒಡೆದು ತುಳಿದು, ಉಗಿದು ಆಹುತಿಗೈವರಿವರು...

ಯಾಕೆ ಮಾನವೀಯತೆಯ ಮರೆತಿಹರು?
ಯಾಕೆ ಹೃದಯಹೀನರಂತಾಗಿಹರು???
ಇದಕೆಲ್ಲ ಕೊನೆ ಎನಿತೋ ನಾ ಕಾಣೆ..
ಜಗವ ಕಾಯುವಂತೆ ಶಿವನ ಆಟವೇನೋ ಅರಿಯಲಾರೆ...

ಗುರುವಾರ, ಫೆಬ್ರವರಿ 27, 2014

ಜೀವನ ಜಟಕಾಬಂಡಿ

ಸಾಗುತ್ತಲಿದೆ ಜಟಕಾಬಂಡಿ, ಮುದಿತನವೆಂಬ ಏಕಾಂತ ಮಾರ್ಗದಿ
ಬೆನ್ನೆಲುಬಾಗಿ ಯಾರೂ ಇಲ್ಲ ನೋಡಿ, ಶಕ್ತಿಯಿಲ್ಲದ ಇಂಥಾ ಸಮಯದಿ
ಬಂಡಿಗಾದರೂ ಮುಂದೋಡಲು ಬೇಕು, ಇತರ ಜೀವಿಗಳ ಸಹಾಯ
ಎನ್ನ ಈ ಮುದಿಜೀವಕೆ ಸಾಕು, ಒಬ್ಬ ಮನುಜನ ಆಧಾರ.

ಬಂಡಿ ಸಾಗಲು ಮುಂದೆ ಮುಂದೆ, ಸೇರುವುದೊಂದು ದೂರ ತೀರ
ಜೀವ ಸಾಗಲು ಮುಂದೆ ಮುಂದೆ, ಸೇರುವುದು ಸಾವಿನ ತೀರ
ತೀರ ಸೇರುವ ಮುನ್ನ ಬಂಡಿಯು, ಮುರಿಯುವುದು ಹಲವಾರು ಸಲ
ಮುಕ್ತಿ ಪಡೆಯುವ ಮುನ್ನ ಜೀವವು, ಅನುಭವಿಸುವುದು ಕೆಟ್ಟ ಕಾಲ

ಬಂಡಿಯನೋಡಿಸಲು ಸರಿದಾರಿಯಲಿ, ಬೇಕು ಚಾಲಕನ ಸಹಾಯ
ಅಂತೆಯೇ ನಮ್ಮ ಜೀವನವ ಸಾಗಿಸಲು, ಬೇಕು ಭಗವಂತನ ಅಭಯ
ಭಗವಂತನೊಬ್ಬನೇ ಆಗಿರುವನು, ನಮ್ಮೀ ಜೀವನದ ನಾವಿಕ
ದೇವನ ಅಭಯ ಹಸ್ತದಿಂದಲೇ, ಕಳೆಯುವುದು ನಮ್ಮ ಎಲ್ಲಾ ಭಯ

ಜೀವನವೊಂದು ದೊಡ್ಡ ಪಯಣ, ಜನನ ಮರಣದ ನಡುವಣ
ಸಾಗುವುಡದು ದೃಶ್ಯ ನೋಡುತ, ಕಷ್ಟ ಸುಖಗಳ ಮಿಶ್ರಣ
ಜೀವನದ ಬಂಡಿಯು ಸಾಗಲು ಮಾರ್ಗದಿ, ಮುದಿತನದನುಭವ ಪಡೆದು
ಸಹಾಯ ಬಯಸುತ ತಮ್ಮ ಮಕ್ಕಳಲಿ, ಕೊನೆಗೊಮ್ಮೆ ಆಗುವುದು ನಿರಾಧಾರ

ಜೀವನ ಬಂಡಿಗೆ ಬಂದಾಗ ಕೊನೆಗಾಲ, ಸಹಕರಿಸುವರೆಲ್ಲರೂ ಆ ಜೀವಕೆ
ಹೊಗಳುತ ಹೊಗಳುತ ದುಃಖಿತರಾಗುವರು, ಕೊನೆಗೊಂಡಾಗ ಆ ಜೀವದ ಕಾಲ.
ಜೀವನವೆಂಬ ಮಹಾಮಾರ್ಗದಿ ಸಿಗುವುದು, ಜನನ - ಜೀವನ - ಮರಣದ ಅನುಭವ
ನಡುವೆ ಎಲ್ಲರಿಗೂ ದೊರೆವುದು, ಸುಖ ದುಃಖಗಳ ಮಿಶ್ರಿತ ಕಾಲ

ಆದ್ದರಿಂದ ನಾವಿಂದು ಮಾಡಬೇಕು, ಸತ್ಕರ್ಮ - ಪರೋಪಕಾರ
ಮುದಿಜೀವಕೆ ನಾವು ಎಂದೆಂದಿಗೂ, ಆಗಿರಬೇಕೊಂದು ಆಧಾರ
ಇದರಿಂದ ಮಾತ್ರವೇ ದೊರೆಯುವುದು, ನಮಗೂ ಪರರ ಸಹಕಾರ
ನಮ್ಮ ಜೀವನದ ಬಂಡಿ ಸೇರಿದಾಗ, ಮುದಿತನವೆಂಬ ತೀರವ.