ಶುಕ್ರವಾರ, ಫೆಬ್ರವರಿ 10, 2017

ನಾನು

ಕನಸುಗಳ ಒಡೆದೋಡಿತು "ನಾನು"
ಮನಸುಗಳ ಮುದುಡಿಸಿತೀ "ನಾನು"
ಸತ್ಯಾಸತ್ಯಗಳ ಅಂಧತೆಯೇ ಏನು!
ವಿಷದಂತೆ ವಧಿಸುವ ಈ "ನಾನು"

ದರ್ಪದ ಪರಾಕಾಷ್ಠೆಯಲಿ ನೀನು
ನಿನ್ನುಗಮವ ಮರೆತೆಯೇನು?
ಬುಡದ ಮಹಿಮೆಯಿಂದಲೇ ನೀನು
ಪಡೆದಿರುವೆ ಈ ಸುಖಭೋಗವನು.

ಎಷ್ಟು ಮೇಲೇರಿದರೂ ಇಂದು ನೀನು
ಅಹಂವಶದಿ ಇತ್ತರೆ ಬುದ್ಧಿಯನು
ಆಮಂತ್ರಿಸಿದಂತೆ ನೀನೇ ಕೇಡನು
ಮಣ್ಣಲಿ ಮಣ್ಣಾಗುವ ಕಾಲವನು.

"ನಾನೇ" "ನನ್ನಿಂದಲೇ" ಎಂಬ ಭಾವವನು
ತೊರೆದು ಆಲಂಗಿಸು ಸೌಮ್ಯತೆಯನು
ನಿನ್ನ ವಿನಯತೆಯಿಂದಾರ್ಜಿಸು ನೀನು
ಬದುಕಿನ ನಿಜವಾದ ಅರ್ಥವನು...

ಸೋಮವಾರ, ಡಿಸೆಂಬರ್ 14, 2015

ಸಂಕಟಭರಿತ ಭಾವನೆ

ನಿಜಮಾತನಾಡುವುದೇನೋ ಅರಿಯುತಿಲ್ಲ..
ಉಲಿದ ಮಾತುಗಳಿಗಿಲ್ಲಿ ಬೆಲೆಯಿಲ್ಲ...
ನಾನಿರುವುದಕೆ ಯಾರ ಖುಷಿಯೂ ಇಲ್ಲ...
ನಾನು ಎಂಬ ಜೀವಿಗಿಲ್ಲಿ ಅಸ್ತಿತ್ವವೇ ಇಲ್ಲ...

ನನ್ನ ಇರುವಿಕೆಗೆ ಮುಳ್ಳಪೊದೆಗಳ ಪರದೆ..
ಹೆಸರಿಲ್ಲಿ ಮಾಸಿದೆ ತುಂಡು ಬೆಲೆಯೂ ಇರದೆ..
ಜಿಗುಪ್ಸೆಯು ಬಾನೇರಿದೆ ಹಿಂಸೆ ತಾಳಲಾರದೆ...
ತಂಪಾಗದು ಇಲ್ಲಿ ಉರಿವ ಈ ಬೆಂಕಿಯಾರದೆ...

ಆತ್ಮವು ಪರಿತಪಿಸುತಿದೆ ಉತ್ತರವಿರದ ಕಲ್ಪನೆಗೆ..
ಚಂಚಲವಾಗಿ ಬೇಯುತಿದೆ ನಕಾರಾತ್ಮಕ ಭಾವನೆಗೆ...
ಅರಿಯದೆಯೆ ಜಾರುತಿದೆ ಬೆಂಕಿಜ್ವಾಲೆಯ ಸುಧೆಗೆ...
ಯಾಕಿಲ್ಲಿ ಸಸಾರ ನನ್ನ ಇರುವಿಕೆಯ ವಾಸ್ತವಿಕತೆಗೆ‌..

ದುಃಖದಿ ಮನ ಕುಂದಿದೆ ಏನೂ ಅರಿಯಲಾರದೆ...
ಯಾರೂ ಇರದ ಕೊನೆಗಾಲಕೆ ಹಾತೊರೆಯುವಂತಾಗಿದೆ...
ಕೊನೆಯ ಆಮಂತ್ರಿಸಲೇ ಎಂದೂ ಈ ಮನ ಪರಿತಪಿಸುತಿದೆ...
ತಡೆಯಲಾರದ ಸಂಕಟ ಮನವ ಜಡವಾಗಿಸುತಿದೆ...

ಶನಿವಾರ, ನವೆಂಬರ್ 14, 2015

ಜೀವನದ ಪಾಠ

ಪರಜಾತಿಯ ಕೀಟವಾದರೂ
ವಿಶ್ವಾ‌ಸಕೆ ಅರ್ಹವಾಗಿತ್ತು‌..
ಸ್ವಜಾತಿಯ ಹುಳವಾಗಿದ್ದರೂ
ನಂಬಿಕೆಗೆ ಅರ್ಥವಿರದಂತೆ ನಡೆಯಿತು...

ವಿಷವನ್ನು ವಿಷದ ಹೊರತು
ಫಲರಸದಿಂದ ತಡೆಯಲಾರದು...
ಮುಳ್ಳನ್ನು ಮುಳ್ಳ ಹೊರತು
ಪುಷ್ಪದ ಮೃದುತ್ವದಿಂದ ಕಳೆಯಲಾಗದು...

ಸಹನೆಗೆ ಬೆಲೆಯಿರದ ಈ ಜಗದಿ
ಸಹಿಷ್ಣುಗಳಿಗೆ ಜಗಹವಿಲ್ಲ...
ಮೃದು ಹೃದಯದ ಪಾಪಿಗಳಿಗೆ
ಆಶಯಗಳ ಆಗ್ರಹವಿಲ್ಲ...

ಪರರಿಗೆ ಕೇಡು ಬಯಸದಿದ್ದರೂ
ಸತ್ಕರ್ಮಿಗಿಲ್ಲ ಈ ಜಗದಿ ಬೆಲೆ...
ಕಠಿಣ ಕ್ಷಣಗಳಲಿ ಮೃದುವಾದರೆ
ನಿನ್ನ ಕೊನೆಯನೇ ನೀ ಆಮಂತ್ರಿಸಿದಂತೆ...

ಇದೇ ಜಗದ ನೀತಿ....

ಶನಿವಾರ, ಮೇ 16, 2015

ಸರಿ-ತಪ್ಪು

ಜೀವನದ ಪ್ರತಿ ಕ್ಷಣದ ಆಗುಹಕೂ
ಇರುವುದು ವಿಶ್ಲೇಷಣೆ ವಿಭಿನ್ನ
ಏಕ ಪಾರ್ಶ್ವದ ದೃಷ್ಟಿಕೋನದಿ
ಕೊಳ್ಳಬೇಡ ಯಾವುದೇ ತೀರ್ಮಾನ

ಒಂದು ನೋಟದಿ ಸರಿಯೆಂದಾದರೂ
ಮಹದಾದ ತಪ್ಪು ಅದಾಗಿರಬಹುದು
ಅನ್ಯಾಯದ ಪರಮಾವಧಿ ಎನಿಸಿದರೂ
ಲೋಕವೇ ಸರಿಯೆಂದೊಪ್ಪಬಹುದು

ಸರಿ- ತಪ್ಪುಗಳ ವೀಕ್ಷಣೆಯಲಿ
ವ್ಯತ್ಯಾಸಗಳನೇಕ ಈ ಜಗದಲಿ
ನಿನ್ನ ನಿರ್ಣಯದ ವಿಚಕ್ಷಣೆಯಲಿ
ಹೃದಯದ ಅನಿಸಿಕೆಯೇ  ಇರಲಿ

ಮಾಡು ನೀ ಹೃದಯ ಬಯಸಿದ್ದುದನು
ಚಿಂತಿಸು ಹೃತ್ಪೂರ್ವಕ ಮನದಲೇ 
ಸರಿ-ತಪ್ಪುಗಳ ಸರಿಯಾದ ತೀರ್ಪನು
ಪಡೆಯುವಿ ನೀ ನಿನ್ನ ಹೃದಯದಲೇ

ಶುಕ್ರವಾರ, ಮೇ 15, 2015

ಪ್ರೀತಿ

ಎರಡಕ್ಷರದ ಭಾವನೆಯಿದು
ಕಥಾನಕಗೊಳಿಸಿರುವುದು ಜೀವನವನು ...
"ಪ್ರೀತಿ" ಎನ್ನುವ ದೈವವಿದು
ಹರಡಿಸಿರುವುದು ಸಂತಸದ ಗಾಳಿಯನು...

ಮಧುರ ಜೇನಿನಂಥ ಭಾವವಿದು
 ಪುಳಕಿತಗೊಳಿಸುವುದು ಮನವನು
ಈ ಭಾವ ಭಾವನೆಯ ಶಿಖರವೇರಲು
ತಂಪಾಗಿಸುವುದು ಈ ನಿನ್ನ ತನುವನು ...

ಚಿಗುರುಮನಸಿನ ಆಸೆಯಿದು
ಅನುಭವಿಸಲು ಪ್ರೀತಿಯ ಧಾರೆಯನು...
ಚಂಚಲಮನಸುಗಳ ತ್ರಾಸವಿದು
ಪಡೆಯಲು ಪ್ರೇಮದ ಆಸರೆಯನು...

ಪ್ರೇಮದ ಹಿರಿಮೆಯೇ  ಅಂದವಾದುದು
ಸಕ್ರಿಯಗೊಳಿಸುವುದು ಜಾಣ್ಮೆಯನು
ಎದೆಬಡಿತವು ವರ್ಧಿಸಿ ಸುಖ ದೊರೆವುದು
ಹೇಳಲಾರದು ಪ್ರೀತಿಯ ಮಹಿಮೆಯನು...

ವಿರಹ

ವಿರಹ ಸಮಾಧಿಯಾಗಿಸಿ ಮನವ
ಬಂಧಿಸಿತು ವಿಚಾರಧಾರೆಯ ...
ಉದುಗಿಸಿತು ರಕ್ತ ಕಣಕಣವ
ಹೊರೆಯಾಗಿಸಿತು ದಿನದಿನದ ಚಹರೆಯ...

ವಿರಹದ ಇರಿತವು ಪ್ರಾಣಘಾತಕ
ಅದರನುಭವ ಮಾರಣಾಂತಿಕ ...
ಮನದಭಿವೃದ್ಧಿಗದು ಹಾನಿಕಾರಕ
ವೈರಾಗ್ಯದುಃಖ ಭಾವನಾತ್ಮಕ ...

ವಿರಹದಲಿರುವುದೇನೋ ಪುಳಕ
ವಿರಹದ ಬೇಗೆಯದು ಕಷ್ಟ ...
ವಿರಹದಿ ವೈರಾಗ್ಯ ಸೇರದಿರೆ
ಆಗದು ಮನಶಾಂತಿಗೆ ನಷ್ಟ...

ತಡೆಯಲಾರದ ವಿರಹದ ನಾಟ್ಯ
ಉರುಳಿಸಿತು ಸಂಭ್ರಮದ ಪರಿಯ...
ಎಂದು ಬರುವುದೋ ಈ ವಿರಹಕೆ ಅಂತ್ಯ
ನೀ ಬಂದರೆ ನನ್ನ ಮನದ ಸನಿಹ ...

ಆಶಯ

ಯಾಕಾಗಿ ಈ ನೋವು ಕಾಡುತಿದೆ ಮನವನು?
ಹಿಂಡಿ  ಕಾವೇರಿಸುತಿದೆ ನನ್ನ ರಕ್ತ ಕಣಕಣವನು
ಮರೆತರೂ ಮರೆಯಲಾಗದೆ ಸುರಿಸುತಿದೆ ಕಣ್ಣೀರನು
ದುಃಖದ ಕೊಳಲನಾದವು ತಲುಪುತಿದೆ ಮನದಾಳವನು.

ಕ್ರೋಧದ ಅಗ್ನಿಜ್ವಾಲೆಯು ಜಲಿಸುತಿದೆ ಈ ಎದೆಯನು
ಕಣ್ಣೀರ ನೆನಪುಗಳು ತಿವಿದು ಬರಡಾಗಿಸಿದೆ ಕನಸ ಕಂಗಳನು
ನಿರಾಸೆಯ ಅಟ್ಟಹಾಸಗಳು ಮೌನಗೊಳಿಸಿದೆ ಮನದಾಸೆಯನು
ನೋವ ಛಡಿಯೇಟುಗಳು ತುಳಿದು ಕೊಂದಿದೆ ಬಯಕೆಯನು


ಹೆಣಗುತಿದೆ ಹೃದಯವಿದು ಕಾಣಲು ನಂಬಿಕೆಯ ಜ್ಯೋತಿಯನು
ಉತ್ಸಾಹದ ಛಾಯೆ ಹರಡುತಿದೆ ನೋಡಲು ಸುದಿನಗಳನು
ಸತ್ಯವ ಅರಗಿಸಲಾರದೆ ಚಡಪಡಿಸುತಿದೆ ಸಹಿಸುತ ಅನ್ಯಾಯವನು
ಎದುರಿಸಲಾರದೆ ಸೋತಿದೆ ಈ ಮನ ದುರ್ಜನರಟ್ಟಹಾಸವನು

ಬರಲಿ ಹುರುಪ ಪನ್ನೀರು ಆವಿಗೊಳಿಸಲಿ ದುಃಖಗಳೆಲ್ಲವನು
ಹರಡಲಿ ನೆಮ್ಮದಿಯ ಸುಗಂಧ ಕೊಳ್ಳಲಿ ನಿರಾಸೆಗಳ ಗಾಳಿಯನು
ಜಯದ ಮಳೆಯದು ಬೀರಲಿ ಆರಿಸಲಿ ಭಯದ ಬೆಂಕಿಯನು
ಖುಷಿಯ ಜೇನದು ದೊರೆತು ಸವಿಗೊಳಿಸಲಿ ನೋವ ಉರಿಯನು...