ಬುಧವಾರ, ಮೇ 6, 2015

ಸಮಯ - ಕರ್ತವ್ಯ

ಮೈದಣಿಸಿ  ದುಡಿವನಿಗೆ
ತಿಳಿದಿಹುದು ಪ್ರತಿನಿಮಿಷದ ಬೆಲೆ
ಮೈದಣಿಸಲಾರದವನಿಗೆ
ಇರುವುದು ಬರೆ ಆಮಿಷದ ಸೆಲೆ...

ಕರ್ತವ್ಯವೇ ಕೈಲಾಸವೆಂದಿಗೂ
ಪ್ರತಿ ಘಳಿಗೆಗೂ ಕರ್ತವ್ಯದಾಸರೆ
ಕರ್ತವ್ಯದಿಂ ಆಲಸ್ಯವೆಂದಿಗೂ
ಬಾಳ ದಾರಿಗದು ಬರಿ ಕೆಸರೇ...

ಕರ್ತವ್ಯವೇ ಭಗವಂತನಾಗಿರಲು
ಪ್ರತಿಯೊಂದು ಕ್ಷಣವೂ ಸ್ವರ್ಗದಂತೆ
ಕರ್ತವ್ಯಕೆ ಭಂಗವಾಗಿರಲು
ಬಾಳೇ ಬಂಧನದ ದುರ್ಯೋಗದಂತೆ ...

ಪ್ರತಿದಿನದ ಸಮಯ ಕಳೆಯಲು
ಸಾಕು ಕರ್ತವ್ಯನಿರತ ಕ್ಷಣಗಳು
ನಿಷ್ಠೆಗೆ ಭಂಗ ಸೆಳೆಯಲು
ಮನದಿ ಸಂಕಷ್ಟದ ಸುರಿಮಳೆಗಳು...

ಕೆಟ್ಟು ಹೋಗಿದೆ ಮನ

ಈ ಹೃದಯದ ನೋವ ಜ್ವಾಲೆಯನು
ಅರ್ಥೈಸದೆ ಊದುತಿಹರು ಬರಿದೆ ನೋವ ಕಹಳೆಯ
ಹರಿಸಿ ಅಪವಾದಗಳ ಸರಮಾಲೆಯನು
ಕೆಡಿಸಿಹರು ಮನದ ಸಂತೋಷದ ಕಳೆಯ...

ಕಲ್ಲೆರಚುತಿಹರು ನಿಜವಾದ ಪ್ರೀತಿಗೆ
ಅದ ತಿಳಿದಿದ್ದರೂ ಬಸವಲಿದೆ ಏನೂ ಮಾಡಲಾಗದೆ
ಆಪ್ತರ ಕ್ರೌರತಾಂಡವದ ಭೀತಿಗೆ
ಸೋತೆ, ನನ್ನ ಮನವನೇ ತಿವಿದು ನೋವ ಹೇರಿದೆ...

ಅನ್ಯಾಯ ಅಪವಾದಗಳ ರೌದ್ರತಾಂಡವಕೆ
ಭೀತಗೊಂಡು ಚಿವುಟಿ ಚಿತ್ರಾನ್ನವಾಗಿದೆ ಈ ಹೃದಯ
ಮನದ ಸಮತೋಲನ  ಕಳೆವುದಕೆ
ನಾಂದಿ ಹಾಕಿದೆ ಈ ಕೆಟ್ಟ ಘಳಿಗೆಯ ಉದಯ...

ಕಣ್ಣಂಚಿಗೆ ಬಂದಿದ್ದರೂ ಈ ಕಣ್ಣೀರು
ಕೆಳಗಿಳಿಯದೆ ಕರಗಿ ಹೋಗುವಂತಿದೆ ಹೃದಯದಲೆ
ಮನದಲಿ ನೋವಿನ ಕಹಳೆಯ ತೇರು
ಕಾಣದಂತಾಗಿದೆ ಎಲ್ಲಿಯೂ ಅಭಿಲಾಷೆಯ ಸ್ವಾತಂತ್ರ್ಯದ ನೆಲೆ...

ಭೀತಿಯ ಅಲೆ

ಜೀವನದ ಮರಳ ದಾರಿಯಲಿ
ಕಾಣುತಿದೆ ಬರಿ ಕತ್ತಲು...
ಕಲ್ಲು ಮುಳ್ಳುಗಳ ಮಾರಿ ಸುರಿದಿದೆ
ನಡೆವ ಕಾಲ್ಗಳ ಸುತ್ತಲೂ ...

ತತ್ತರಿಸುತ ಈ ಹೃದಯ ಅಳುತಿದೆ
ನೋವಿನಲಿ ರಕ್ತ ಕಣ್ಣೀರು ...
ನಿನ್ನ ಕಾಣದೆ ನನ್ನ ಮನ ನರಳುತಿದೆ
ಸಿಗಲಾರದೆ ಖುಷಿಯ ಪನ್ನೀರು ???

 ನಿರ್ಜೀವ ಒಣಗಿದೆಲೆಗಳ ರಾಶಿಯಲಿ
ಕಾಣದಾಗಿದೆ ಎಲ್ಲಿಯೂ ಹಸಿರು ...
ನಿನ್ನ ಪ್ರೀತಿಯ ಪಡೆವ ತವಕದಿ
ಕಟ್ಟಿದಂತಾಗಿದೆ ಈ ನನ್ನ ಉಸಿರು...

ಮೋಸದಿ ಗೃಹಬಂಧನ ಕೊಡಿಸಿ
ಅಟ್ಟಹಾಸದಿ ನಗುತಿಹರಿಲ್ಲಿ ...
ಹೃದಯ ಸುಡುವ ಪ್ರಶ್ನೆಗೆಲ್ಲಕೂ
ಮೌನವೇ ನನ್ನುತ್ತರವಿಲ್ಲಿ...

ಶನಿವಾರ, ಮೇ 2, 2015

ನನ್ನ ಮನದ ನೋವು

ಕ್ಷಣವು  ನಿನ್ನ ನೆನೆದು ನೆನೆದು
ಬಾಡಿ ಹೋಗಿದೆ ಮನ...
ನೀ ಹೇಗಿರುವೆಯೋ ಏನೋ ಎಂಬುದ
ತಿಳಿಯುವ ತವಕ ದಿನಾ...

ಒಂದು ಕ್ಷಣವೂ ನಿನ್ನ ಮರೆತು
ಇರಲಸಾಧ್ಯ  ನನಗೆ...
ನಿನ್ನ ಚಿಂತೆಯೇ ಕಾಡಿ ನನ್ನನು
ಮಾಸಿ ಹೋಗಿದೆ ನಗೆ...

ಮನಸಾರೆ ನಿನ್ನ ಪ್ರೀತಿಸಿದಕೆ
ಪರರ ಧೂಷಣೆ ನನಗೆ...
ಶಿಕ್ಷೆ ನೀಡಿ ಮನಸ ಹಿಂಸಿಸಿ
ತೀರಿಸಿದರು ತಮ್ಮ ಹಗೆ...

ನೀ ಚೆನ್ನಾಗಿ ಬಾಳಿದರೆ ಸಾಕು
ಎಂಬುದೇ ನನ್ನ ಬಯಕೆ
ನಿನಗಾವ ಕೇಡೂ ಬರದಿರಲಿ
ಎಂಬುದೊಂದೇ ನನ್ನ ಹಾರೈಕೆ...

ಎಲ್ಲವೂ ಶೂನ್ಯ

ದಿನದಿನ ಕಂಗೊಳಿಸುತ್ತಿದ್ದ ಆಗಸ
ಇಂದೇಕೋ ನೀರಸವಾಗಿದೆ
ತಂಪಾಗಿ ಬೀಸುತ್ತಿದ್ದ ಪವನ
ಇಂದೇಕೋ ಅಚಲಿತವಾಗಿದೆ...

ಮೊಗದಿ ಅರಳಿದಂತಿದ್ದ ಮಂದಹಾಸವು
ದುಃಖದಿ ಮರೆಮಾಚಿ ಅಡಗಿದೆ...
ತಾವರೆಯಂತೆ ಅರಳಿದ್ದ ಹಣೆಯು
ಮುದುಡಿದ ಹೂವಂತೆ ಬಾಡಿದೆ...

ಖುಷಿಯಲಿ ಉಬ್ಬಿದ್ದ ಹೃದಯವ
ಯಾರೋ ಚಿವುಟಿದಂತೆ ನೋವಾಗಿದೆ
ಸವಿಯಾದ ಚಿಂತನೆಗಳು ತುಂಬಿದ ಮನಸ್ಸನ್ನು
ಗಾಯಗೊಳಿಸಿ ರಕ್ತವನು ಸುರಿಯುತಿದೆ...

ಜೀವನದಿ ಇದ್ದ ಒಂದೇ ಕನಸನು
ಪರರು ಒಂದೇ ಕ್ಷಣಕೆ ಒಡೆದಿಹರು
ಕನಸ್ಸಿಲ್ಲದ ಮನಸ್ಸಿನ ಭಾವನೆಗಳನು
ಹಿಡಿದಿಡಲು ಸಾಧ್ಯವಾಗದಂತೆ ಕೆಡಿಸಿಹರು...

ನೋವಿನ ಬಡಿತ

ನನ್ನಿನಿಯನೇ... ನೀ ಹೇಗಿರುವೆ?
ತಿಳಿಯಲು ತವಕದಿ ಕಾದಿರುವೆ...
ನಿನಗಾವ ತೊಂದರೆಯೂ ಕಾಡದಿರಲಿ
ಎಂದು ಹೃದಯದಿ ಬಯಸಿರುವೆ...

ಜೀವನದಿ ನಮ್ಮ ಜಂಟಿಪಯಣ
ಪರರಿಂದ ಕೊನೆಯಾಗುವುದೇನೋ ನಾನರಿಯೆ...
ನಮ್ಮಿಬ್ಬರ ನಡುವಣ ಪ್ರೀತಿಯ ಸಾಗರ
ಬತ್ತಿ ಹೋಗಲಾರದು ಎಂಬುದ ನಾ ಬಲ್ಲೆ...

ಮುಂದೊಂದು ದಿನ ಖಂಡಿತ ದೊರೆವುದು
ನಮ್ಮಿಬ್ಬರ ಪ್ರೇಮಕೆ ಜಯ...
ಕುಂಠಿತ ಮನಸಿನ ಎದೆಬಡಿತದಲಿ
ಇರುವುದೊಂದೇ ಇದು ಆಶಯ...

ಈ ಮನದ ಇಂಗಿತಗಳನು
ಅರಿಯಲು ನನಗಾರೂ ಇಲ್ಲ...
ನನ್ನ ನೋವಿಗೆ ಸಾಂತ್ವನ ನೀಡಲು
ನನ್ನವರು ನನಗಾರೂ ಇಲ್ಲ...

ಶುಕ್ರವಾರ, ಮೇ 1, 2015

ಬರಡು ದಿನಗಳು

ಮುಳುಗುತ್ತಿರುವ ಸೂರ್ಯ...
ನಿಶ್ಚಲವಾದ ಕಡಲು...
ಬಾಡಿ ಸ್ಥಿರವಾಗಿ ನಿಂತಿರುವ ಮರಗಳು...
ಹೆಪ್ಪು ಮೊರೆ ಹಾಕಿ ಸಪ್ಪೆಯಾಗಿ ನಿಂತಿರುವ ಹೂಗಳು...

ಮನಸ್ಸಿರದೆ ಮೋಡದ ಮರೆಯಲ್ಲಿ ಅವಿತಿರುವ ಚಂದಿರ...
ಕಾಣುವಂತಿದ್ದರೂ ಕಾಣದೆ ಮಿಚುತಿರುವ ನಕ್ಷತ್ರಗಳು...
ಕಣ್ಣೀರ ಧಾರೆಯಂತೆ ಇಳಿಯುತ್ತಿವೆ ಮಳೆಹನಿಗಳು...
ಅಳುವ ಮಾರ್ದನಿಯಂತೆ ಕೇಳುವ ಹಕ್ಕಿಗಳಿಂಚರಗಳು....

ಮನದಲಿ ಹೊಗೆಯಾಡುತಿವೆ ಉರಿಯುವ ಬೆಂಕಿಯುಂಡೆಗಳು...
ಒಡೆದು ಚೂರಾಗಿವೆ ಮನದ ನೂರೆಂಟು ಕನಸುಗಳು...
ಕಣ್ಣೀರ ಹೊಳೆಯಲಿ ಮುಳುಗಿ ಹೋಗಿವೆ ಈ ನಯನಗಳು...
ದುಃಖದ ಸಾಗರದಲಿ ಕರಗಿ ಹೋಗಿವೆ ಮಾತುಗಳು...

ಮುಂದೋಡದೆ ಸ್ಥಿರವಾಗಿ ನಿಂತಿದೆ ಮನದ ಚಿಂತನೆಗಳು...
ಮೂಡಿದೆ ಹೊಸದಾಗಿ ಈ ಮನದಲಿ ಕಾಡುವ ಚಿಂತೆಗಳು...
ಹೀಗೇ ಕೊನೆಯಾಗಬಾರದೇಕೆ ಒಮ್ಮೆ ಈ ಜೀವನ ಕ್ಷಣಗಳು...
ತವಕಿಸುತಿದೆ ಮನವು ನಿಶ್ಚಿಂತೆಯ ಕಡಲಲಿ ಚಿರವಾಗಿ ಮಲಗಲು...

(೧೧--೦೩-೨೦೧೪)