ಗುರುವಾರ, ಅಕ್ಟೋಬರ್ 12, 2017

ಮನದ ದೌರ್ಬಲ್ಯತೆ

ಮನದ ಚಂಚಲತೆಗೆ ಬಲಿಯಾಗಿ
ದಿನದ ಸಮಚಿತ್ತವ ಕಳೆದು
ಪ್ರಶ್ನೆಗಳ ಲೋಕದಲಿ ಅಲೆದು
ಕಂಗೆಟ್ಟಿದೆ ಚಾತುರ್ಯತೆಯು ಇಂದು

ಕಳೆದುಕೊಂಡ ಸ್ಥಿಮಿತವ ನೆನೆದು
ದುಃಖಿತ ಕಂಗಳಲಿಳಿಯದೆ ಕಣ್ಣೀರು
ಭಾರವಾಗಿಸಿದೆ ಹೃದಯದ ಕವಲು
ತಡೆಯಲಾರದೆ ನೋವನಿಂದು

ಕಾಣದ ಹಾದಿಯಲಿ ನಡೆದು
ತಿಳಿಯದ ಗುರಿಯನು ಬಯಸಿ
ಆಕಾಂಕ್ಷೆಗಳ ಹುರಿದುಂಬಿಸುತ
ಚಡಪಡಿಸುತಿದೆ ಮನವು ಇಂದು

ಯಾಕೆ ಹೀಗಾಗುತಿದೆ ಎಂಬುದನು
ಅರಿತು ತೋರು ಸರಿದಾರಿಯನು
ಮಾರ್ಗದರ್ಶಿಯಾಗು ನೀ ಮನಕೆ
ಮಂಕಾಗಿ ಧ್ರೃತಿಗೆಡಬೇಡ ನೀನಿಂದು...

ಶುಕ್ರವಾರ, ಜೂನ್ 23, 2017

ಕೊಲೆಯಾದ ಪ್ರೀತಿ

ಕೈಯಲಿ ಘಮಘಮಿಸುವ ಸುಮಗಳು
ಬೆಸುಗೆಯ ದಾಹವ ವರ್ಧಿಸುವ ಹಿಮಗಳು
ನಿನ್ನ ನೋಡಬಯಸುವ ಈ ನನ್ನ ಕಂಗಳು
ನೋವನುಂಡು ನಿರ್ಜೀವ ಈ ಮನದ ಭಾವಗಳು..‌

ನಿನ್ನೆದೆಯ ಅಂಚಿನಲಿ ಕಿವಿಯಿಟ್ಟ ಆ ಕ್ಷಣ
ಅರಿತೆ ನನ್ನ ನಿನ್ನ ಮನದ ಪ್ರೀತಿಬಂಧನ
ನಿನಗಾಗಿ ನೋಡೀ ಹೃದಯದಿ ತಲ್ಲಣ
ನಿನ್ನ ನೋಟವೊಂದೇ ಈ ಮನಕೆ ನಿರಂಜನ...

ಭಾವುಕವು ಈ ಹೃದಯ ನಿನ್ನ ನೆನಪಿಂದ
ಉಸಿರಾಟದಿ ಕಂಪಿಸುತಿದೆ ನಿನ್ನದೇ ಗಂಧ
ಅನುಭವದಿ ಪಡೆಯಲು ಅಂದ ಆನಂದ
ನಿನ್ನ ನೆನಪೊಂದೇ ಇಂದುಳಿದ ಅನುಬಂಧ...

ಭಾವನಾ ಲೋಕದಲಿ ನನ್ನೀ ಸುಖಪಯಣ
ಆ ನೆನಪುಗಳೇ ಈ ಮನ ನಗುವ ಕಾರಣ...
ಸಂತಸದ ಕ್ಷಣಭರಿತ ಈ ಹೃದಯಾಂಗಣ
ನಗುವ ನಿಮಿಷಗಳ ನೆನಪುಗಳೆ ಇದರಂಕಣ...

ಬುಧವಾರ, ಮೇ 17, 2017

ಒಂದು ಮಾತು

ನಿನ್ನ ಕರುಳ ಕುಡಿ ನಿನ್ನ ತುಳಿದೋಡಿದರೆ
ನಿನ್ನ ನಷ್ಟವೆಂದು ನೀ ಕೊರಗದಿರು...
ಹೆತ್ತ ದೈವದ ಪ್ರೀತಿಗೆ ಕತ್ತರಿಯಲಿರಿದರೆ
ಹಾನಿ ನಿನದಲ್ಲ ಎಂದು ಖುಷಿಯಿಂದಿರು.

ಅರಿಯದೆ ನಿನ್ನ ದುಃಖದ ಯಾತನೆಯ
ನಿನ್ನ ಕಂಬನಿಗೆ ಕ್ಷಣಕ್ಕೂ ಸ್ಪಂದಿಸದೆ...
ತಾನೇ ಸರಿಯೆಂಬ ದರ್ಪದ ನಡತೆಯ
ಆ ಯೋಗ್ಯತೆಯ ಲಕ್ಷಣವ ನೀ ತಿಳಿದಿರು.

ಅಹಂಕಾರದ ಹೆಬ್ಬಂಡೆಯಡಿ ಬಲಿಯಂತೆ
ಹುತಿಯಾಗದಿರು ನೀ ಕರಗಿ ಕೊರಗಿ..
ಸಂಬಂಧಕೆ ಬೆಲೆಯಿರದಾಗ ನಿನಗೇಕೆ ಚಿಂತೆ
ನಿನಗಿರುವ ಸುಖಗಳಲೇ ಸಂತೃಪ್ತಿ ಹೊಂದಿರು.

ಕಳೆದದ್ದು ನಿನದಲ್ಲ, ಈಗಿರುವುದು ನಿನದು
ನಿನದಲ್ಲದರ ಚಿಂತೆಯ ನೀ ಚಿರವಾಗಿ ಬಿಟ್ಟುಬಿಡು.
ಕಷ್ಟದಲಿ ಕೈ ಹಿಡಿದವನ ನೆನಪಲಿಡು
ಕಣ್ಣೀರಿಳಿಸಿ ನಿನ್ನ ಪ್ರೀತಿಸುವರ ನೋಯಿಸದಿರು‌.

ಶನಿವಾರ, ಮಾರ್ಚ್ 4, 2017

ಬಾಧ್ಯನಲ್ಲದ ಸುತ

ಹರಿಸುತಿಹೆ ನೀ ನೋವ ಕಣ್ಣೀರಧಾರೆಯ
ನೊಂದ ಹೃದಯದಲಿ ಮಮತೆಯ ತಾರೆಯ
ಕೋಮಲ ಹಸ್ತದಿ ನಿನ್ನ ಸಲುಹಿದ ನೀರೆಯ
ದುಃಖದ ಬವಣೆಯ ನೀ ಅರಿಯಲಾರೆಯ?

ನಿನ್ನ ಸುಖಕೆಂದು ತಾನು ಸಹಿಸಿದಳು ನೋವನಂದು
ನಿನ್ನೋನ್ನತಿಗಾಗಿ ಕಷ್ಟನಷ್ಟದಿಂ ದುಡಿದಳಂದು..
ಇಷ್ಟವಿಲ್ಲದ ಮನದಲೂ ತನ್ನಿಷ್ಟವೆಲ್ಲವ ತೊರೆದಂದು
ನಿನಗಾಗಿ ಸುಖದರಮನೆಯನೇ ನಿರ್ಮಿಸಿಹಳಿಂದು..

ಕೆಡವುತಿಹೆ ಬೆಳೆದಿಹ ಪ್ರೀತಿಯೆಂಬ ಭವ್ಯಮಂದಿರವ
ಹೆಜ್ಜೆ ಹೆಜ್ಜೆಗೂ ವರವೆಂಬಂತೆ ಹರಸಿದ ಮಹದಾತ್ಮವ
ಕಣ್ಣೀರಿಳಿದರೂ ತಿಳಿಯದಂತೆ ನೋವನುಂಡ ಜೀವವ
"ಅಪ್ಪಾ" ಎಂದು ಏನು ಕೋರಿದರೂ ಸಾರಿದರವರು ನಿಸ್ವಾರ್ಥವ

ನೀ ಏನು ಮಾಡಿದರೂ ಸಹಿಸಿ ನಿಂತರು ಬೆಂಬಲದಂತೆ
ತಮ್ಮಾದಾಯವನೇ ಸುರಿದರು ನಿನಗೆಂದು ಜಲದಂತೆ
ಆಶಿಸಿದರು ನೀನಾಗುವೆನೆಂದು ಮುಪ್ಪಿನಾಸರೆಯಂತೆ
ಧ್ವಂಸಗೊಳಿಸಿದೆಯಲ್ಲ ನೀನು ಅವರಾಸೆಯನು ಗಾಜಿನಂತೆ.

ಶುಕ್ರವಾರ, ಫೆಬ್ರವರಿ 10, 2017

ನಾನು

ಕನಸುಗಳ ಒಡೆದೋಡಿತು "ನಾನು"
ಮನಸುಗಳ ಮುದುಡಿಸಿತೀ "ನಾನು"
ಸತ್ಯಾಸತ್ಯಗಳ ಅಂಧತೆಯೇ ಏನು!
ವಿಷದಂತೆ ವಧಿಸುವ ಈ "ನಾನು"

ದರ್ಪದ ಪರಾಕಾಷ್ಠೆಯಲಿ ನೀನು
ನಿನ್ನುಗಮವ ಮರೆತೆಯೇನು?
ಬುಡದ ಮಹಿಮೆಯಿಂದಲೇ ನೀನು
ಪಡೆದಿರುವೆ ಈ ಸುಖಭೋಗವನು.

ಎಷ್ಟು ಮೇಲೇರಿದರೂ ಇಂದು ನೀನು
ಅಹಂವಶದಿ ಇತ್ತರೆ ಬುದ್ಧಿಯನು
ಆಮಂತ್ರಿಸಿದಂತೆ ನೀನೇ ಕೇಡನು
ಮಣ್ಣಲಿ ಮಣ್ಣಾಗುವ ಕಾಲವನು.

"ನಾನೇ" "ನನ್ನಿಂದಲೇ" ಎಂಬ ಭಾವವನು
ತೊರೆದು ಆಲಂಗಿಸು ಸೌಮ್ಯತೆಯನು
ನಿನ್ನ ವಿನಯತೆಯಿಂದಾರ್ಜಿಸು ನೀನು
ಬದುಕಿನ ನಿಜವಾದ ಅರ್ಥವನು...