ಶುಕ್ರವಾರ, ಫೆಬ್ರವರಿ 14, 2014

ಶರೀರದ ನೀತಿ

ಸತ್ತ ಮೇಲೆ ಆಗುವುದು ನಶ್ವರ
ಹೊಳೆಯುತ್ತಿರುವ ಈ ಶರೀರ
ಅದಕ್ಯಾಕೆ ಬೇಕೀಗ ಶೃಂಗಾರ?
ಪಡಲು ಹೆರವರು ಮತ್ಸರ...

ಸತ್ಯ ಅಹಿಂಸೆಯೆ ಆಹಾರ
ನ್ಯಾಯ ನೀತಿಯೆ ವ್ಯವಹಾರ
ವಿದ್ಯಾದಾನವೇ ಸದ್ವಿಚಾರ
ಷಡ್ವೈರಿಗಳೇ ಅನಾಚಾರ...

ಸ್ನೇಹವೇ ನಮಗೆ ವೈಭೋಗ
ಸಹಾಯದಲ್ಲಿದೆ ಅನುರಾಗ
ಹಿಂಸೆಯೊಂದೇ ಮಹಾರೋಗ
ಹರಿಸ್ಮರಣೆಯೇ ನಮಗೆ ನಗ...

ಬಿಟ್ಟುಬಿಡಿ ನಿಮ್ಮಯ ಸ್ವಾರ್ಥ
ಜೀವನಕೆ ಕೊಡಿ ಹೂಸ ಅರ್ಥ...
ಯಾರೂಂದಿಗೂ ಮಾಡದಿರಿ ಅನರ್ಥ
ಅದುವೇ ಜೀವನದ ನಿಜ ಅರ್ಥ...

ಸೋಮವಾರ, ಫೆಬ್ರವರಿ 10, 2014

ಜೀವನ ವಸಂತಗಾನ...

ಏಕೆ ಬಾಡುತಿದೆ ಮನ
ಹೃದಯದಿ ಕಣ್ಣೀರ ಕಂಪನ
ಎನಿತು ತಾಳೆನೋ ನಾ ಕಾಣೆ
ಈ ಜೀವನದ ಲಘುಪಯಣ...

ಕೊರೆಯುತಿದೆ ಚಳಿಗೆ ಈ ಜೀವನ
ಕಾಯುತಿದೆ ವಸಂತನಾಗಮನ
ಬಿಸಿಲ ಬೇಗೆಗೆ ಬೇಯುತಿದೆ ಮನ
ತಂಪೆರೆಯಲು ಬಾ "ವರ್ಷಾ" ಈ ದಿನ...

ಕಾಲ ಕೂಡಿಬರದೆ ಎಂದೂ ನಡೆಯದು
ನಾವು ಮನದಲಿ ಅಂದುಕೊಂಡದ್ದು..
"ಕಾಲಾಯ ತಸ್ಮೈ ನಮಃ" ಎಂದು
ಶರಣಾಗಬೇಕು ಭಗವಂತನಿಗೆ ಎಂದೂ...

ಬಾಡದಿರಲಿ ಎಂದಿಗೂ ಈ ಮನ
ಈಡೇರಲಿ ಎನ್ನ ಬಯಕೆಗಳ ಕಲ್ಪನ
ತಂಪೆರೆಯಲಿ ಯಶೋಲ್ಲಾಸದ ಆಗಮನ
ಸಂತಸದ ಗುಡಿಯಾಗಲಿ ಈ ಜೀವನ...

ಭಾನುವಾರ, ಫೆಬ್ರವರಿ 9, 2014

ಬೇಡಿಕೆ

ಬೇಡುತಿದೆ ಮನವು  ಭಗವಂತನಲಿ
ಈ ಹೃದಯದ ಬಯಕೆ ಹುಸಿಯಾಗದಿರಲಿ...
ಮನದಾಕಾಂಕ್ಷೆಗಳು ನನಸಾಗುತಿರಲಿ...
ಈ ಜೀವನದ ಕಾರಣಕೆ ಸಾವಾಗದಿರಲಿ...

ಪ್ರೇಮದ ಅಂಕುರಕೆ ನೋವಾಗದಿರಲಿ..
ಆಸೆಗಳ ಸಾಗರವೆಂದೂ ಬರಡಾಗದಿರಲಿ...
ಕಾತರಿಸುವ ಕಂಗಳಲಿ ಚೈತನ್ಯ ಜನಿಸಲಿ...
ನಗು ಮರೆತ ಅಧರಗಳು ಅರಳಿ ನಗುತಿರಲಿ...

ಸಂತಸ ಮರೆತ ಮನವು ನಳನಳಿಸುತಿರಲಿ...
ಭಯವೇ ಮನೆಮಾಡಿದ ಹೃದಯ ಪ್ರಶಾಂತವಾಗಲಿ...
ನಿದ್ರೆ ಮರೆತ ಕಂಗಳಲಿ ಶಾಂತಿ ವಿಶ್ರಮಿಸಲಿ...
ಕೋಪ ತಾಪಗಳು ಕರಗಿ ಮನಕೆ ತಂಪೆರಚಲಿ...

ಅನ್ಯಾಯವೆಸಗದ ಪ್ರೇಮ ಜಯಭೇರಿ ನುಡಿಸಲಿ...
ಕಪಟವಿಲ್ಲದ ಪ್ರೀತಿಗೆ ಪ್ರೋತ್ಸಾಹ ದೊರೆಯಲಿ...
ಮನದಾಳದ ಭಾವದ ಪ್ರತಿಬಿಂಬ ತೋರಲಿ...
ಸಮಾಜದಿ ನಿಜಪ್ರೀತಿಗೆ ಮಾನ್ಯತೆ ದೊರೆಯಲಿ...

ಶುಕ್ರವಾರ, ಫೆಬ್ರವರಿ 7, 2014

ಸರಿಯಲ್ಲವೇ???

ರಾತ್ರಿಯ ಈ ಏಕಾಂತದಲಿ
ಕಾಡುತಿದೆ ಮಾತೊಂದು ಅಪೂರ್ಣ...
ಮನದಲಿ... ಅಂತರಾಳದಲಿ...
ಕೇಳುತಿದೆ ಸ್ವರವೊಂದು ಸ್ಮರಣ...

ಕಣ್'ಪಟಿಯಲಿ ಸುಳಿದಾಡುತಿದೆ
ಜೀವನ ಕಥಾನಕ ಚಲನಚಿತ್ರದಂತೆ
ಸಿಹಿಕಹಿಗಳ ಮಿಶ್ರಣ ನೆನಪಿಸುತಿದೆ
ಮನದಲಿ ಕದನ ಕುರುಕ್ಷೇತ್ರದಂತೆ...

ಮರೆಯಲಾಗದಂತೆ ಅಚ್ಚು ಹಿಡಿದ ಪಾಠ
ಕಹಿಮಿಶ್ರಿತ ಅನುಭವಗಳದು
ಜೊತೆ ಸೇರಲು ಸಂಭ್ರಮಗಳ ಆಟ
ಸಿಹಿಯಾದ ಅನುಭವೋಲ್ಲಾಸಗಳು...

ಜೀವನದ ರಂಗಸ್ಥಳದಲಿ
ಸಿಹಿಕಹಿಗಳ ಮಿಶ್ರಣ ಅನಿರ್ಧಾರಿತ
ನಡೆನುಡಿಗಳು ನಮ್ಮ ವ್ಯಕ್ತಿತ್ವದಲಿ
ಜೀವನದ ಕಥಾನಕವನಾಧಾರಿತ...

ಬುಧವಾರ, ಫೆಬ್ರವರಿ 5, 2014

ಸ್ವಾರ್ಥಿ ಜನರಿವರು

ಸ್ವಾರ್ಥವೇ ಮಿಗಿಲು ಇವರೆಲ್ಲರಿಗೂ
ಬಾಯ್ಬಿಡುವರು ಜುಜುಬಿ ಚಿಲ್ಲರೆಗೂ...

ತಪ್ಪುಗಳ ತಾವು ಎಷ್ಟೇ ಮಾಡಿದ್ದರೂ
ಪರರ ನಿಷ್ಠೆಗಳನ್ನು ಹೀನಾಯವಾಗಿ ದೂರುವರು...

ಕಷ್ಟದಲಿ ಇದ್ದಾಗ ಕಣ್ಣೆತ್ತಿ ನೋಡದವರು
ಕಾಷ್ಠವನೇರಿದಾಗ ನಕ್ರ ಕಣ್ಣೀರ ಸುರಿಸುವರು...

ತಮ್ಮ ಮನದಲ್ಲಿ ಹುಳುಕೆಷ್ಟೇ ತುಂಬಿರಲಿ
ಧೂಷಣೆಯ ನುಡಿಯನ್ನು ಖುಷಿಗೊಂಡು ಬಿತ್ತುವರು..

ಮುನ್ನಡೆಯ ಹಾದಿಯಲಿ ನಡೆಯದಿದ್ದರೂ ತಾವು
ಪರರ ಖ್ಯಾತಿಯನು ಕಡೆಗಣಿಸಿ ಆಡುವರು...

ತಮ್ಮ ಜೀವನ ನರಕದಂತೆ ರೂಪಿಸಿದ್ದರೂ
ಪರರ ಔಚ್ಚ ಜೀವನಕೆ ಬೆಂಕಿಯ ಹಚ್ಚುವರು...

ಸ್ವಾರ್ಥವ ರಕ್ತ ಕಣಕಣದಲೂ ತುಂಬಿಕೊಂಡಿಹರಿವರು
ಪರರ ಜೀವನಕೆ ಕೆಸರಂತೆ ಹಾಯುವರು....

ಸೋಮವಾರ, ಫೆಬ್ರವರಿ 3, 2014

ಬೆಳಕು

ಜೀವನದ ತಡೆಭರಿತ ಹಾದಿಯಲಿ
ಕಾರ್ಗತ್ತಲು ಕವಿದಾಗ
ಬೆಳಕು ತಾ ಆಗಮಿಸಿ
ದಾರಿಯ ತೋರಿಸದು...

ಮನಸಿನ ಕದವ ನೀ ತೆರೆದು
ಸೇರು ಅಂತಃಕರಣವ
ದಾರಿ ತೋರಿಸುವುದದು
ದೀಪ ತಾ ಆರಿದಾಗ...

ಬಲಗೊಳಿಸು ನಿನ್ನ ಮನೋಬಲವ
ಶಾಂತಿಯೇ ಅದಕಾಹಾರ
ಪ್ರಶಾಂತವಾಗಿರು ಎಂದೂ
ಮನವು ತಾ ಕೆಡುವಾಗ...

ಸಂದರ್ಶಿಸು ನೀ ಮನದ ಜೊತೆಗೆ
ಸಮಾಧಾನ ತಾಳ್ಮೆಗಳಿರೆ
ಕತ್ತಲಿನ ಕುರುಡತ್ವದಲೂ
ಬೆಳಕು ತಾ ತೋರುವುದು...

ಭಾನುವಾರ, ಫೆಬ್ರವರಿ 2, 2014

ನಮ್ಮ ಭಾರತ

ಆಕಾಶದಿ ಮಿನುಗುತಿದೆ ಅಂದದ ತಾರೆ
ಭೂಗರ್ಭದಿ ಮೆರೆಯುತಿದೆ ಜಲಧಾರೆ
ಇರುವಳು ಭೂತಾಯಿಯ ಹೃದಯದಿ
ಶಾಂತಿಪ್ರಿಯಳಾದ ತಾಯಿ "ಭಾರತಿ"

ಮೂರು ದಿಕ್ಕುಗಳಿಗೂ ಕಾವಲಿದೆ ಸಾಗರ
ಆ ತ್ರಿವೇಣಿಗಳ ಸಂಗಮ ಅಮರ
ಕಿರೀಟದಂತೆ ಹೊಳೆಯುತಿದೆ ಹಿಮಗಿರಿ
ಮಂದಸ್ಮಿತ ಹೊಂದಿರುವ ಅಮ್ಮ "ಭಾರತಿ"

ನಿನಗೆ ಸಹಸ್ರಾರು ಪುತ್ರ ಪುತ್ರಿಯರು
ಇಲ್ಲಿದೆ ಶುದ್ಧ ಸಂಸ್ಕೃತಿಗಳು ಹಲವಾರು
ಧಾರ್ಮಿಕತೆಗೆ ನೆಲೆಬೀಡು ಈ ನಾಡು
ಸಕಲ ಕಲಾಧರಿತ್ರಿ ಈ ನಮ್ಮ "ಭಾರತಿ"

ಶ್ರವಣಕ್ಕೆ ಕೇಳುವುದು ಭಾಷೆಗಳು ನೂರಾರು
ಹೃದಯಕ್ಕೆ ಸ್ಪರ್ಶಿಸುವ ಸ್ಪಂದನೆಯೇ ಈ ತವರು
ಮನದಲ್ಲಿ ಗೌರವದ ಅಲೆಗಳು ಸಹಸ್ರಾರು
ಶಾಂತಿಯ ನೆಲೆಬೀಡಾಗಲಿ ಎಂದೆಂದಿಗೂ ಈ "ಭಾರತಿ"