ಶನಿವಾರ, ಜನವರಿ 18, 2014

ಸ್ನೇಹದ ಒಡೆದ ಕನ್ನಡಿ

ವೈರಾಗ್ಯದಿ ಇರುವಾಗ ನೀ ಬಂದೆ
ನನ್ನ ಬದುಕ ನಿನ್ನಲ್ಲಿ ಕಂಡೆ
ನೀನೇ ನನ್ನ "ಸರ್ವಸ್ವ" ಎಂದೆ...
ಒಡೆದು ಚೂರಾದೆ ನೀನೆಂದಾಗ-
"ನೀ ದೂರ ಹೋಗು ನನ್ನಿಂದೆ..."

"ನೀನಲ್ಲ ನನ್ನ ಸ್ನೇಹಿತೆ"ಎಂದೆ..
ನನ್ನೆದುರಿಗೇ ಇನ್ನೊಬ್ಬಳ ಜೊತೆ ನಿಂದೆ..
ನನ್ನ ಮನವು ಒಡೆದು ಚೂರಾಯ್ತು ಅಂದೇ
ನನಗಾರೂ ಇಲ್ಲವೆಂದೆ ಮತ್ತೆ ವೈರಾಗ್ಯದಿಂದೆ...

ನನ್ನ ಬಾಳಿನಲಿ ನೀ ಬಂದ ದಿನ - ಅತಿ ಮಧುರ
ಆದರೆ ನೀ ನನ್ನ ಬಿಟ್ಟ ಕ್ಷಣ ನನ್ನ ಅಂತರಾತ್ಮದ ಅಂತ್ಯ
ನನ್ನ ಸೃಜನಶೀಲತೆಯ ಕೊನೆ
ನನ್ನ ಅಸ್ತಿತ್ವದ ಕೊನೆ...

ನನಗೆ ಬೇಕಿತ್ತು ನಿನ್ನ ಸ್ನೇಹ...
ನೀ ತೊರೆದೆ ನನ್ನ...
ಕೊನೆಯಾದೆ "ನಾನು"..
ಇನ್ನು ನಾನಿದ್ದರೂ ಇರದಂತೆ!!!
ಉತ್ತರಿಸುವ ತನಕ ನೀನು...

ಶುಕ್ರವಾರ, ಜನವರಿ 17, 2014

ಸದ್ಚಿಂತನೆ

ಹೇ ಮುಗ್ಧ ಮನಸೇ..
ನೀನೆಂದೂ ಬಾಡದಿರು.
ನಿನ್ನ ಭಾವನೆಗಳ ಗುಡಿಯನು
ಕೆಡಹಲು ನೀ ಬಿಡದಿರು...

ನೀ ತಾಳಿದ ತಾಳ್ಮೆಯನು
ಯಾರೂ ಅರಿಯಲಾರರು.
ನಿಂದನೆಯ ಕಹಿನುಡಿಗಳನು
ಪಸರಿಸಲು ನೀ ಬಿಡದಿರು...

ಪ್ರೀತಿಯ ಬೆಳದಿಂಗಳನು
ವಿಷದಂತೆ ಕಾಣದಿರು.
ನೋವಿರದ ಭಾವವನು
ಸಾವಿಗೆಡಹಲು ನೀ ಬಿಡದಿರು...

ಜೀವನದ ಸೌಂದರ್ಯವನು
ಆನಂದದಿ ಸವಿಯುತಿರು.
ಸಿಹಿಕ್ಷಣಗಳು ಮೆರೆವುದನು
ಮನಸಾರೆ ನೀ ಬೇಡುತಿರು...

ಗುರುವಾರ, ಜನವರಿ 16, 2014

ಕಂಪನ ಕ್ಷಣಗಳು

ಪ್ರೇಮದ ಸೆರಗಿನ ಅಂಚಿನಲಿ
ಘನತೆಯ ಗಂಟು ಕಳಚಲಾರದೆ
ಪ್ರೀತಿಯ ಆಸರೆ ಬೇಡುತಲಿ
ಈ ಹೃದಯ ತೊಳಲಾಡುತಿದೆ....

ಸಾವಿರಾರು ಪ್ರಶ್ನೆಗಳ ಸುಳಿಯಲಿ
ವಿಶ್ವಾಸದ ಬೇರು ಕೀಳಲಾರದೆ
ವಿಜಯದಶಮಿ ಹಾದಿ ಕಾಯುತಲಿ
ಈ ಮನವು ತಳಮಳಿಸುತಿದೆ...

ಭಯವೆಂಬ ಕಾರ್ಮೋಡದಲಿ
ನಿಜದಾರಿ ಕಾಣಲಾರದೆ
ಅಭಯಹಸ್ತದ ನಿರೀಕ್ಷೆಯಲಿ
ಈ ಜೀವ ಬರಡಾಗುತಿದೆ...

ಪ್ರೀತಿಯ ಅಂಕುಷದಾಸರೆಯಲಿ
ಮನದಾಶಯವ ತೊರೆಯಲಾರದೆ
ಸುಂದರ ಕ್ಷಣಗಳ ಪ್ರತೀಕ್ಷೆಯಲಿ
ಈ ಭಾವ ಬಾನೇರುತಿದೆ...

ಬುಧವಾರ, ಜನವರಿ 15, 2014

ಪ್ರತಿಬಿಂಬ

ನನ್ನಂತೆಯೇ ನೀನು...
ನನ್ನ ಮನದಿ ಸಂತಸವಿರೆ
ನಿನ್ನ ಮೊಗದಿ ಕಾಣುವೆ ಮಂದಸ್ಮಿತವ...
ನನ್ನ ಮನದಿ ದುಗುಡವಿರೆ
ನಿನ್ನ ನೋಟದಿ ಕಾಣುವೆ ಖಿನ್ನಭಾವ...
ನನ್ನ ಮನದಿ ಉಲ್ಲಾಸವಿರೆ
ನಿನ್ನಲಿ ಕಾಣುವೆ ಲವಲವಿಕೆಯ ಹೂವ...
ನನ್ನ ಮನದಿ ಏಕಾಂತವಿರೆ
ನಿನ್ನ ಕಣ್ಣಲಿ ತೋರುವೆ ವೈರಾಗ್ಯವ...
ನನ್ನ ಮನದಿ ಸಂಭ್ರಮವಿರೆ
ನಿನ್ನ ಅಸ್ತಿತ್ವದಲಿ ಕಾಣುವೆ ಸೌಂದರ್ಯವ...
ನನ್ನ ಮನದಿ ಸಂತಾಪವಿರೆ
ನಿನ್ನ ಕಾಣುವ ಹಂಬಲ ನಾ ತೋರಲಾರೆ..
ಏಕೆಂದರೆ, ಆ ಸಂದರ್ಭದಿ
ನಿನ್ನ ಮೊಗದಲಿ ಕಾಣುವೆ ನಾ ಕಣ್ಣೀರಧಾರೆ...

ಸ್ನೇಹ

ನೀನಿಲ್ಲದೆ...
ನಾನು ನಾನಲ್ಲ...
ನನಗೇನೂ ಬೇಕಿಲ್ಲ...
ಸ್ನೇಹಿತೆಯಾಗಿರು ನೀ ನನಗೆ...
ಎಂದೆಂದಿಗೂ ಈ ಬದುಕಿಗೆ...
ನಿನ್ನ ಬಿಟ್ಟು ನಾನು
ನನ್ನ ಬಿಟ್ಟು ನೀನು
ಅರ್ಥವೇ ಇಲ್ಲದ ಸಾಹಿತ್ಯದಂತೆ...

ಶುಕ್ರವಾರ, ಜನವರಿ 3, 2014

ಒಲವಿನ ಆಸೆ...

ನನ್ನೊಲವೇ....

ನಿನ್ನ ಚೆಂದುಟಿಯ ಚುಂಬಿಸುವಾಸೆ...
ನಿನ್ನ ಕಂಗಳಲಿ ನೋಟ ಬೆರೆಸುವಾಸೆ...
ನಿನ್ನ ಎದೆಬಡಿತಕೆ ಧ್ವನಿ ಸೇರಿಸುವಾಸೆ...
ನಿನ್ನುಸಿರಿಗೆ ಮೈ ಸೋಕಿಸುವಾಸೆ...

ಕ್ಷಣ ಕ್ಷಣ ಎಣಿಸದೆ ಮೈಮರೆಯುವ ಆಸೆ...
ಪ್ರಶಾಂತವಾದ ಸಾಗರದಿ ತೇಲಾಡುವ ಆಸೆ...
ತಂಪಾದ ಇಬ್ಬನಿಯಲಿ ನಲಿದಾಡುವ ಆಸೆ...
ಇಂಪಾದ ನಿಶೆಯ ಆ ನಾದದಿ ತಲ್ಲಣಿಸುವ ಆಸೆ...

ಚಂದಿರನ ಆ ಮಂದ ಬೆಳಕಲಿ ನಿನ್ನ ನೋಡುವಾಸೆ...
ನಿನ್ನ ಪ್ರೀತಿಯ ಮಂದಹಾಸದಿ ಸಂಭ್ರಮಿಸುವಾಸೆ...
ನಿನ್ನ ನೆನಪಿನ ತಂಪಿನಲಿ ನವಿರೇಳುವ ಆಸೆ...
ನನ್ನ ಮನದ ಸ್ವಪ್ನಲೋಕದಿ ನಲಿದಾಡುವಾಸೆ...

ನಿನ್ನ ಮನದ ತಾಳಕ್ಕೆ ಹೆಜ್ಜೆಯಾಗುವ ಆಸೆ...
ನಿನ್ನ ಆತ್ಮದ ಸೌಂದರ್ಯಕೆ ಪ್ರಭೆಯಾಗುವ ಆಸೆ...
ನಿನ್ನ ಹೃದಯದ ಸಂಭ್ರಮಕೆ ಬೇರಾಗುವ ಆಸೆ...
ನಿನ್ನ ಇರುವಿಕೆಗೆ ಮೂಲವಾದ ಒಲವಾಗುವ ಆಸೆ....

ದುಃಖಿತ ಮನಸ್ಸಿನ ಹಾದಿ

ಬೆಣ್ಣೆಯಂಥ ಮೃದುವಾದ ಮನಸು
ಸಿಡಿದು ಕಲ್ಲಾಗಿ ಹೋಯಿತೇ?
ಮನದಲ್ಲಿ ಅರಳಿದ ಕನಸು
ಒಡೆದು ಚೂರಾಗಿ ಹೋಯಿತೇ?

ಛೀಕಾರ ನಕಾರಗಳಿಗೆ ಕದಡಿ
ಬಾಡಿ ಬರಡಾಗಿ ಹೋಯಿತೇ?
ದುಃಖದ ತಾಪದಲಿ ಬೆಂದು
ವೈರಾಗ್ಯದತ್ತ ತೆರಳಿತೇ?

ಸ್ವಾರ್ಥದ ಅಟ್ಟಹಾಸಗಳಿಗೆ ಸೋತು
ಖಿನ್ನತೆಯ ಅಪ್ಪಿಕೊಂಡಿತೇ?
ಸಂಶಯಗಳ ಕೊಂಡಿ ಬಿಡಿಸಲಾರದೆ
ಸಾವೇ ದಾರಿಯೇನೋ ಎಂದಿತೇ?

ಸ್ಪಂದಿಸುವ ಆಧಾರಸ್ಥಂಭವಿಲ್ಲದೆ
ಮುನ್ನಡೆಯಲಸಾಧ್ಯವಾಯಿತೇ?
ಸ್ವಾಭಿಮಾನಕೆ ಜ್ವಾಲೆಯ ಉರಿ ತಾಗಿ
ಸಾವಿಗೆ ಶರಣಾಗಿ ಹೋಯಿತೇ?