Tuesday, May 24, 2022

ಮಾನವ ಸಂಪನ್ಮೂಲ ನಿರ್ವಹಣೆ - ಕೊರೋನಾ ಭಯದ ಎಡೆಯಲ್ಲಿ ಹೇಗೆ?


ಅತಿಯಾದ ಮಳೆಯಿಂದ ಭೂಮಿಯೇ ಕೊಚ್ಚಿ ಹೋಗುವಂತೆ, ಅತಿಯಾದ ಅನಾಚಾರಗಳಿಂದ ಬೇಸತ್ತ ಆ ಭಗವಂತನೇ ಜಗತ್ತಿಗೆ ಬುದ್ಧಿ ಕಲಿಸಲು ಮುಂದಾದ ಹಾಗೆ ಚೀನಾ ಮೂಲದ ಕೋವಿಡ್-19 ಎಂಬ ವಿಷಾಣು ಪ್ರತಿಯೊಬ್ಬರೂ ಭಯದಿಂದ ನಲುಗುವಂತೆ ಮಾಡಿದೆ. ಈ ಕೋವಿಡ್-19 ಎಂಬ ಮಹಾಮಾರಿ ವಿಶ್ವದೆಲ್ಲೆಡೆ ತಾಂಡವವಾಡುತ್ತಿದ್ದಂತೆ, ಅಲ್ಲಿ ಕೆಲವರು ತಮ್ಮ ಮನೆಯಲ್ಲಿಯೇ ತಮ್ಮ ಲ್ಯಾಪ್ ಟಾಪನ್ನು ಆನ್ ಮಾಡಿ ತಾವು ಕೆಲಸ ಮಾಡುತ್ತಿರುವ ಕಚೇರಿಯ ಸಿಬ್ಬಂದಿಗಳೊಡನೆ ಚರ್ಚೆ, ಸಭೆ ನಡೆಸಲು ತಯಾರಿ ಮಾಡುತ್ತಿದ್ದಾರೆ. ಇನ್ನು ಕೆಲವರು ತಮಗಿದ್ದ ಕೆಲಸವನ್ನು ಕಳೆದುಕೊಂಡು ಹೊಸ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮತ್ತೆ ಕೆಲವರು ಕೆಲಸವಿಲ್ಲದೇ, ಮನೆಯಲ್ಲಿಯೇ ಕುಳಿತು ಮುಂದೇನು ಮಾಡಬಹುದು ಎನ್ನುವುದನ್ನು ಆಲೋಚಿಸುತ್ತಿದ್ದಾರೆ. ಈ ಕೋವಿಡ್-19 ಮಹಾಮಾರಿಯು ಎಲ್ಲರ ಜೀವನವನ್ನು ಅಸ್ತವ್ಯಸ್ತಗೊಳಿಸಿರುವುದಂತೂ ಕಟುಸತ್ಯ. ಸಣ್ಣ, ಮಧ್ಯಮದಿಂದ ಹಿಡಿದು ದೊಡ್ಡ ಉದ್ಯಮಗಳಿಗೂ ತಮ್ಮ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಗಳನ್ನು ಹೇಗೆ ನಿಭಾಯಿಸುವುದು ಎನ್ನುವುದು ಉತ್ತರ ಸಿಗದ ಪ್ರಶ್ನೆಯಂತೆ ಕಾಡುತ್ತಿದೆ. 

ಅನೇಕ ಉದ್ಯಮಗಳಿಗೆ ಮಾಮೂಲಿನಂತೆ ಕಾರ್ಯನಿರ್ವಹಿಸುವುದು ಕಷ್ಟಕರವೆನಿಸಿದೆ. ಲಾಕ್ ಡೌನ್, ಸಾರ್ವಜನಿಕರಿಗೆ ಹೇರಿದ ನಿರ್ಬಂಧನೆಗಳು ಇತ್ಯಾದಿಗಳಿಂದ ಅನೇಕ ಉದ್ಯಮಗಳು ಕಚೇರಿಗಳಲ್ಲಿ ಕಾರ್ಯನಿರ್ವಹಿಸದೇ, ತಮ್ಮ ಸಿಬ್ಬಂದಿವರ್ಗದವರನ್ನು ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಆದೇಶಿಸಿರುವುದು ಗೊತ್ತಿರುವ ಸಂಗತಿಯೇ. ಹಾಗೆ ಮಾಡದೆ ಬೇರೆ ಉಪಾಯವೂ ಇಲ್ಲವೆನ್ನುವುದು ಅರಗಿಸಲಾಗದ ಸತ್ಯ. ಹೀಗೆ ಕಾರ್ಯನಿರ್ವಹಣೆ ಮಾಡುವುದು ಬಹುತೇಕ ಕಚೇರಿಗಳಿಗೆ ಅಸಾಧ್ಯ, ಯಾಕೆಂದರೆ ಅವರ ಕಾರ್ಯನಿರ್ವಹಣೆಯ ಸ್ವರೂಪ ಅಂತಹುದು. ಮಾತ್ರವಲ್ಲದೆ, ಹಲವಾರು ಉದ್ಯಮಗಳಲ್ಲಿ ಸಿಬ್ಬಂದಿ ವರ್ಗಗಳಿಗೆ ದೂರಸ್ಥ ಕೆಲಸ ನಿರ್ವಹಿಸಲು ಬೇಕಾದ ಕೌಶಲ್ಯತೆಯ ಕೊರತೆ ಇರುತ್ತದೆ. ಇನ್ನು ಕೆಲವು ಉದ್ಯಮಗಳಲ್ಲಿ ಕೆಲಸಗಳನ್ನು ಪರೋಕ್ಷವಾದ ರೀತಿಯಲ್ಲಿ ನಿರ್ವಹಿಸುವುದು ಅಸಾಧ್ಯ ಮಾತು. ಹಾಗೆಂದು ಕೇವಲ ಕೆಲವು ತಿಂಗಳುಗಳ ಸಮಸ್ಯೆಗೆ ಈಗಿರುವ ಸಿಬ್ಬಂದಿಗಳನ್ನು ಕೆಲಸದಿಂದ ತೆರವುಗೊಳಿಸುವುದು ಕೂಡಾ ಸರಿಯಲ್ಲ. 

ಇಂಥ ಸಮಯದಲ್ಲಿ ಸಿಬ್ಬಂದಿ ವರ್ಗದ ಕಾರ್ಯಕ್ಷಮತೆಯನ್ನು ಹೇಗೆ ವಿಶ್ಲೇಷಿಸಿ ಬೆಲೆ ಕಟ್ಟುವುದು? ಹಲವಾರು ಕಚೇರಿಗಳಲ್ಲಿ ಇಂಥ ಸಮಯದಲ್ಲಿ ಸಿಬ್ಬಂದಿವರ್ಗದವರೊಡನೆ ನಿಯತಕಾಲಿಕ ಸಂಪರ್ಕ ನಡೆಸಲೂ ಅವಕಾಶಗಳು ಕಡಿಮೆ. ಸಣ್ಣ ಉದ್ಯಮಗಳಿಂದ ಹಿಡಿದು ದೊಡ್ಡ ದೊಡ್ಡ ಸಂಸ್ಥೆಗಳಿಗೂ ಮಾನವ ಸಂಪನ್ಮೂಲ ನಿರ್ವಹಣೆ ಈ ಸಮಯದಲ್ಲ ಕಷ್ಟ ಅನ್ನಿಸುತ್ತದೆ. ಈಗ ಪ್ರತಿಯೊಬ್ಬರಿಗೂ ಅನೇಕ ರೀತಿಯಲ್ಲಿ ಕಷ್ಟಗಳು ಬಂದೊದಗಿರುವ ಕಾರಣ ಪರಿಸ್ಥಿತಿಯ ಅನಾನುಕೂಲಗಳನ್ನು ಅರ್ಥೈಸಿಕೊಂಡು ಉದ್ಯಮ ಸಂಸ್ಥೆಗಳು ತಮ್ಮ ನಿರ್ಧಾರಗಳನ್ನು ಮಂಡಿಸಬೇಕು. ಇಲ್ಲವಾದಲ್ಲಿ ಉದ್ಯಮಗಳು ವ್ಯವಹಾರದಲ್ಲಿ ಕುಸಿತ ಕಾಣುವುದು ಖಂಡಿತ. 

ಅಂತರರಾಷ್ಟ್ರೀಯ ಕಾರ್ಮಿಕರ ಸಂಸ್ಥೆಯ ಪ್ರಕಾರ ಈ ಕೋವಿಡ್-19 ಪ್ರಭಾವದಿಂದಾಗಿ ಹಲವಾರು ಸಂಸ್ಥೆಗಳಲ್ಲಿ ಕೆಲಸದ ಕಾರ್ಯಾವಧಿಯು ಸುಮಾರು ೭ ಪ್ರತಿಶತದಷ್ಟು ಕಡಿಮೆಯಾಗುವ ಸಂಭವವಿದೆ. ಜೊತೆಗೆ ಹಲವಾರು ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿ ಉದ್ಯೋಗ ನಷ್ಟವಾಗುವ ಸಂಭವವೂ ಇದೆ ಹಾಗೂ ಹಲವಾರು ಉದ್ಯೋಗಿಗಳಿಗೆ ಕಡಿಮೆ ಸಂಬಳ, ತಾತ್ಕಾಲಿಕವಾಗಿ ನಿವೃತ್ತಿ ಹೊಂದಲು ಬಲವಂತ ಪಡಿಸುವುದು ಮುಂತಾದ ತೊಂದರೆಗಳು ಎದುರಿಸಬೇಕಾಗಿ ಬರಬಹುದು. ಹೀಗಿರುವಾಗ, ಪ್ರತಿಯೊಂದು ಉದ್ಯಮಗಳ ಮಾನವ ಸಂಪನ್ಮೂಲ ಅಧಿಕಾರಿಗಳು, ಸಮಯದ ರಿಕ್ತತೆಯನ್ನು ಅರಿತು ಉದ್ಯಮದ ಕಾರ್ಯಾಚರಣೆಗೆ ಅತ್ಯಂತ ಅಗತ್ಯವಿರುವ ಸಿಬ್ಬಂದಿಗಳ ಪಟ್ಟಿಯನ್ನು ಮಾಡುವುದು ಅನಿವಾರ್ಯ. ಮಾತ್ರವಲ್ಲದೆ, ಪ್ರತಿಯೊಬ್ಬ ಸಿಬ್ಬಂದಿಯ ಕೌಶಲ್ಯತೆ, ಸಂಸ್ಥೆಯ ಉಳಿಗಾಲಕ್ಕೆ ಹಾಗೂ ಕಾರ್ಯಾಚರಣೆಗೆ ಅವರ ವೃತ್ತಿಪರ ಬೆಂಬಲದ ಅಗತ್ಯತೆ, ಹಾಗೂ ಅವರನ್ನು ಇಂದಿನ ಕೆಲಸದ ಶೈಲಿಗೆ ಅನುಗುಣವಾಗಿ ತಯಾರಿಸಲು ಬೇಕಾದ ತರಬೇತಿಯ ಅಗತ್ಯತೆಯನ್ನು ಪರಿಶೀಲಿಸಿ ಅದಕ್ಕೆ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. 


ಉದ್ಯೋಗ ನೀತಿಯಲ್ಲಿ ಅಗತ್ಯವಾದ ಬದಲಾವಣೆಗಳು:

ಕೋವಿಡ್-19 ಮಹಾಮಾರಿಯ ಪರಿಣಾಮಗಳಿಂದಾಗಿ ಹಲವಾರು ಉದ್ಯಮಗಳಲ್ಲಿ  ಕಾರ್ಯಾವಧಿ ಕಡಿಮೆಗೊಳಿಸಿ, ಕೇವಲ ಕೆಲವೇ ಸಿಬ್ಬಂದಿಗಳ ಉಪಯೋಗದಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ. ಹೀಗಿರುವಾಗ ಉದ್ಯೋಗ ನೀತಿಯಲ್ಲಿ ಹಲವಾರು ಬದಲಾವಣೆಗಳನ್ನು ಮಂಡಿಸುವುದು ಅತಿ ಅಗತ್ಯ. ಕಾರ್ಯನಿಮಿತ್ತ ಚಟುವಟಿಕೆಗಳಲ್ಲಿ ಕೊರೋನಾ ಸೋಂಕಿಗೆ ತುತ್ತಾಗಬಹುದಾದ ಅಪಾಯ ಜಾಸ್ತಿ ಇರುವಂಥ ಸಿಬ್ಬಂದಿಗಳಿಗೆ ಒಂದು ರೀತಿಯ ನಿಯಮಗಳನ್ನು ಅಳವಡಿಸಿದರೆ, ಉಳಿದ ಸಿಬ್ಬಂದಿಗಳಿಗೆ ಇನ್ನೊಂದು ರೀತಿಯ ನಿಯಮಗಳನ್ನು ನಿರ್ಣಯಿಸಬೇಕಾಗಿದೆ. ಸಿಬ್ಬಂದಿಗಳ ಕಡೆಗೆ ಅನುಭೂತಿಯ ದೃಷ್ಟಿಯಿಂದ ಹಾಗೂ ಹೊಸ ಸಾಮಾನ್ಯತೆಗೆ ಅನುಗುಣವಾಗಿ ನಿಯಮಗಳನ್ನು ಮಂಡಿಸಿದಲ್ಲಿ ಉದ್ಯಮಕ್ಕೂ, ಸಿಬ್ಬಂದಿ ವರ್ಗಕ್ಕೂ ಸರಿಸಮಾನವಾಗಿ ಉಪಕಾರವಾದಂತೆ. 

 

ಸಿಬ್ಬಂದಿಗಳ ಕಾರ್ಯಕ್ಷಮತೆ ಹಾಗೂ ಪ್ರತಿಫಲ:

ಸೋಂಕು ಹರಡುವ ವೇಗವನ್ನು ನೋಡುವಾಗ, ಎಲ್ಲಾ ಉದ್ಯಮಗಳ ಸಿಬ್ಬಂದಿಗಳ ಕಾರ್ಯಕ್ಷಮತೆಯಲ್ಲಿ ಪ್ರತಿಕೂಲ ಪರಿಣಾಮ ಬೀರಿಯೇ ಇರುತ್ತದೆ. ಹಲವಾರು ಉದ್ಯೋಗಿಗಳಿಗೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವುದಕ್ಕೂ, ಮನೆಯಿಂದ ಕಾರ್ಯ ನಿರ್ವಹಿಸುವುದಕ್ಕೂ ಬಹಳ ವ್ಯತ್ಯಾಸ ಅನ್ನಿಸುತ್ತದೆ. ಕಚೇರಿಯಲ್ಲಿ ಕೆಲಸ  ಕ್ಷಮ್ಯತೆ ಮನೆಯಿಂದ ಕೆಲಸ ನಿರ್ವಹಿಸುವಾಗ ಇರುವುದಿಲ್ಲ. ಇನ್ನು ಕೆಲವರಿಗೆ ಮನೆಯಿಂದ ಕೆಲಸ ಮಾಡುವಾಗ ಮನ ಶಾಂತಿಯಿಂದಿರುತ್ತದೆ ಹಾಗೂ ಕಾರ್ಯದಲ್ಲಿ ಕ್ಷಮ್ಯತೆ ಹೆಚ್ಚಾಗಿರುತ್ತದೆ. ಇದೆಲ್ಲವನ್ನೂ ಈ ಲಾಕ್ ಡೌನ್ ಸಮಯದಲ್ಲಿ ಪರಿಶೀಲಿಸಲು ಸಾಧ್ಯವಾಗಿದೆ. ಮನೆಯಿಂದಲೇ ಕಾರ್ಯ ನಿರ್ವಹಿಸಿ ತಮ್ಮ ಕೆಲಸದ ಗುರಿಯನ್ನು ತಲುಪುವಂತಹ ಸಿಬ್ಬಂದಿಗಳಿಗೆ ಅವರ ಕಾರ್ಯಕ್ಷಮತೆಯನ್ನು ಗುರುತಿಸಿ ಸರಿಯಾದ ಬಹುಮಾನ, ಪ್ರತಿಫಲ ಹಾಗೂ ವೇತನ ಹೆಚ್ಚಳ ನೀಡಿದರೆ ಅವರ ಕಾರ್ಯಕ್ಷಮತೆ ಇನ್ನೂ ಹೆಚ್ಚಾಗುವುದು ಖಂಡಿತ. ಜೊತೆಗೆ, ಪ್ರತಿಯೊಬ್ಬ ಸಿಬ್ಬಂದಿಗೂ ಅಗತ್ಯವಿರುವ ತರಬೇತಿಗಳನ್ನು ಕಾಲಕಾಲಕ್ಕೆ ನೀಡಿದರೆ ಉತ್ತಮ. ಕೊರೋನಾ ಕಾರಣದಿಂದಾಗಿ ವಹಿವಾಟುಗಳು ಕುಸಿತವಾಗಿರುವ ಕಾರಣ ಕೆಲಸಗಳು ಕಡಿಮೆ ಇರುವುದು ಒಪ್ಪಲೇಬೇಕಾದ ಸಂಗತಿ. ಈ ಸಮಯವನ್ನು ವ್ಯರ್ಥ ಮಾಡದೆ, ಸಿಬ್ಬಂದಿಗಳಿಗೆ ಅವಶ್ಯಕವಾದ ತರಬೇತಿ ನೀಡಿ ಸ್ವಯಂಪ್ರೇರಿತ ಕಲಿಕೆಗೆ ಪ್ರೋತ್ಸಾಹಿಸಬೇಕು. ಇದರಿಂದ ಸಿಬ್ಬಂದಿಗಳು ಸಮರ್ಥವಾಗಿ ಕೆಲಸ ಮಾಡಿ ಉದ್ಯಮದ ಲಾಭದಾಯಕತೆಯನ್ನು ವೃದ್ಧಿಸುವಲ್ಲಿ ಸಹಕಾರವಾಗುವುದು. 

 

ಉದ್ಯಮಗಳ ಕೆಲಸ ಮಾಡುವ ಶೈಲಿ:

ಈ ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಆದಷ್ಟು ಈ ಮೂರು ವಿಚಾರಗಳನ್ನು ಪರಿಗಣಿಸಿ ಕಾರ್ಯ ನಿರ್ವಹಿಸುವ ಶೈಲಿಯಲ್ಲಿ ಸೂಕ್ತ ಬದಲಾವಣೆ ತರುವುದು ಉತ್ತಮಸಿಬ್ಬಂದಿಗಳ ಪ್ರತಿಭೆಯ ವರ್ಗ, ಯಾಂತ್ರೀಕೃತ ಕಾರ್ಯ ಪದ್ಧತಿ ಹಾಗೂ ಸಾಮಾಜಿಕ ಅಂತರದ  ಅವಶ್ಯಕತೆ.ಪ್ರತಿಯೊಬ್ಬ ಸಿಬ್ಬಂದಿಗಳಿಗೂ ಅವರದೇ ಆದ ಪ್ರತಿಭೆ, ದಕ್ಷತೆ ಹಾಗೂ ಅನನ್ಯತೆ ಇದೆ. ಅದನ್ನು ಗುರುತಿಸಿ ತಮ್ಮ ಉದ್ಯಮ ಸಂಸ್ಥೆಗೆ ಯಾವ ಸಿಬ್ಬಂದಿಯ ಅವಶ್ಯಕತೆ ಈ ಸಮಯದಲ್ಲಿ ಹೆಚ್ಚಿದೆ?, ಹೊಸ ಕಾರ್ಯಶೈಲಿಗಳನ್ನು ಬಹು ಬೇಗನೆ ಅರ್ಥೈಸಿಕೊಂಡು ದಕ್ಷತೆಯಿಂದ ಯಾವ ಸಿಬ್ಬಂದಿ ಕಾರ್ಯನಿರ್ವಹಣೆ ಮಾಡಬಹುದು?, ಇದ್ದ ಸಿಬ್ಬಂದಿಗಳಿಂದ ಯಾವ ರೀತಿಯಲ್ಲಿ ಕೆಲಸವನ್ನು ಮಾಡಿಸಿಕೊಳ್ಳಬಹುದು? ಕೆಲಸಗಳನ್ನು ಸ್ವ-ಉದ್ಯೋಗಿಗಳಿಗೆ ನೀಡಿದರೆ ನಿಯಮಿತ ಉದ್ಯೋಗಿಗಳಂತೆಯೇ ಜವಾಬ್ದಾರಿಯುತವಾಗಿ ನಿಭಾಯಿಸಲು ಸಾಧ್ಯವೇ?, ಯಾವ ಯಾವ ಕೆಲಸಗಳನ್ನು ಯಾಂತ್ರಿಕ ರೀತಿಯಿಂದ ನಿಭಾಯಿಸಲು ಸಾಧ್ಯ? ಅದಕ್ಕೆ ಉಂಟಾಗುವ ವೆಚ್ಚ ಎಷ್ಟಾಗಬಹುದು ಹಾಗೂ ಅದು ಉಪಯುಕ್ತ ವೆಚ್ಚ ಹೌದೇ ಅಲ್ಲವೇ?, ಸಾಮಾಜಿಕ ಅಂತರವನ್ನು ಕಾರ್ಯಕ್ಷೇತ್ರದಲ್ಲಿ ಹೇಗೆ ನಿಭಾಯಿಸಬಹುದು? ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. 

 

ಉದ್ಯಮದ ಬೆಳವಣಿಗೆಗೆ ಸಿಬ್ಬಂದಿಗಳ ಕೊಡುಗೆ:

ಯಾವುದೇ ಉದ್ಯಮವು ಬೆಳೆಯಬೇಕೆಂದರೆ ಅದರ ಸಿಬ್ಬಂದಿಗಳ ಪರ ಉದ್ಯಮ ಎಷ್ಟು ಜವಾಬ್ದಾರಿ ಮೆರೆಯುತ್ತದೆಯೋ ಅಷ್ಟೇ ಜವಾಬ್ದಾರಿಯುತವಾಗಿ ಸಿಬ್ಬಂದಿಗಳೂ ಕಾರ್ಯನಿರ್ವಹಿಸುವುದು ಅತ್ಯಗತ್ಯ. ಉದ್ಯಮ ಸಂಸ್ಥೆಯ ಏಳಿಗೆ ಬೀಳುವಿಕೆಗೆ ಉದ್ಯಮದ ಮಾಲೀಕರು ಎಷ್ಟು ಕಾರಣವೋ ಅಷ್ಟೇ ಕಾರಣ ಉದ್ಯಮದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳೂ ಆಗಿರುತ್ತಾರೆ. ಹೀಗಿರುವಾಗ, ಎಲ್ಲ ಸಿಬ್ಬಂದಿಗಳೂ ಜವಾದ್ದಾರಿಯುತವಾಗಿ ನಿರಂತರವಾಗಿ ಉದ್ಯಮದ ಪರವಾಗಿ ಕಾರ್ಯನಿರ್ವಹಿಸಿ ತಮ್ಮ ಪ್ರತಿಭೆಗಳನ್ನು ವೃದ್ಧಿಸಿ, ಉದ್ಯಮದ ಏಳಿಗೆಗಾಗಿ ಶ್ರಮಿಸುವುದು ತುಂಬಾ ಮುಖ್ಯ. ಉದ್ಯಮ ಸಂಸ್ಥೆ ಬೆಳೆದಾಗ ಮಾತ್ರವೇ ಅದರಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೂ ತಮ್ಮ ವೃತ್ತಿಜೀವನದಲ್ಲಿ ಏಳಿಗೆ ಸಿಗುವುದು. ಹೀಗಾಗಿ ಜವಾಬ್ದಾರಿ ಮೆರೆದು ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಸಿಬ್ಬಂದಿಯೂ ತಮ್ಮ ವೃತ್ತಿಜೀವನದಲ್ಲಿ ವೇಗವಾಗಿ ಎತ್ತರಕ್ಕೆ ಬೆಳೆಯುತ್ತಾರೆ. 

ದೂರಸ್ಥ ಕೆಲಸದಿಂದಾಗಿ ವೃತ್ತಿಗಳು ಚರವಾಗಿ, ಸಿಬ್ಬಂದಿಗಳು ಸ್ಥಿರವೆನಿಸುತ್ತದೆ. ಇದರಿಂದ ಯಾವುದೇ ನಿರ್ಬಂಧವಿಲ್ಲದಂತೆ ಎಲ್ಲ ಕೆಲಸಕಾರ್ಯಗಳೂ ಜಗತ್ತಿನ ಯಾವ ಮೂಲೆಯಿಂದಲೂ ಕಾರ್ಯನಿರ್ವಹಿಸುವುದು ಸಾಧ್ಯವಾಗಿದೆ. ಹಲವಾರು ಉದ್ಯಮಗಳು ಇದರಿಂದ ಲಾಭ ಪಡೆಯುತ್ತಿವೆ. ಅನೇಕ ರೀತಿಯ ಹೊಸ ಉದ್ಯೋಗಗಳಿಗೆ ಅವಕಾಶಗಳು ದೊರೆತಂತಿದೆ. ಹೊಸ ಹೊಸ ರೀತಿಯ ಉದ್ಯೋಗಗಳು ಜನ್ಮ ತಳೆದು, ಹೊಸ ರೀತಿಯ ವೃತ್ತಿ  ಸೃಷ್ಟಿಯಾಗಿದೆ. ಉದ್ಯೋಗಿಗಳ ಕೆಲಸ ಮಾಡುವ ಶೈಲಿ, ಉದ್ಯೋಗ ಸ್ವಭಾವಗಳು ಎಲ್ಲವೂ ಬದಲಾಗಿದೆ. ಆದ್ದರಿಂದ, ಅನೇಕ ರೀತಿಯ ಬದಲಾವಣೆಗಳು ಮಾನವ ಸಂಪನ್ಮೂಲ ನಿರ್ವಹಣೆಗೆ ಅತ್ಯಗತ್ಯ. ಉದ್ಯಮಗಳು ಯೋಚಿಸಿ, ಉಪಯುಕ್ತ ಬದಲಾವಣೆ ತರಲು ಇದೇ ಸೂಕ್ತ ಸಮಯ. ಅನೇಕ ರೀತಿಯ ವೆಚ್ಚಗಳನ್ನು ಕಡಿಮೆಗೊಳಿಸಿ ಮೊದಲಿನ ಪ್ರಮಾಣಕ್ಕಿಂತಲೂ ಹೆಚ್ಚಿನ ಸಾಮರ್ಥ್ಯದಿಂದ ಕೆಲಸವನ್ನು ಮಾಡಿಸಿಕೊಳ್ಳಲು ಇದು ಉತ್ತಮ ಅವಕಾಶ. ಧೃತಿಗೆಡದೆ, ಸರಿಯಾದ ನಿರ್ಧಾರ ತೆಗೆದುಕೊಂಡರೆ, ಉದ್ಯಮಗಳಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ ಒಂದು ಸುಲಭವಾದ ಕೆಲಸ ಅನ್ನಿಸುವುದರಲ್ಲಿ ಸಂದೇಹವೇ ಇಲ್ಲ.

No comments:

Post a Comment