Tuesday, May 24, 2022

*ಗುರುಸ್ಥಾನ*

 

https://media.newstrack.in/uploads/national-news//Aug/06/big_thumb/td_5f2b8ca7c8adc.jpg

ಗುರು ಎಂದರೆ ಯಾರು??? ಗುರು ಎಂದರೆ ಮಾರ್ಗದರ್ಶಕ. ಗುರು ಎಂದರೆ ಬೆಳವಣಿಗೆಯ ದಾರಿಯನ್ನು ತೋರುವವ. ಗುರು ಸ್ಥಾನದಲ್ಲಿರುವವನು ನಿಷ್ಕಲ್ಮಶ ಹೃದಯಿ ಆಗಿರಬೇಕು. ಯಾವುದೇ ಭೇದ ಭಾವ ಇಲ್ಲದೆ, ತನ್ನ ಸ್ಥಾನಕ್ಕೆ ನಿಜವಾದ ಅರ್ಥ ನೀಡುವಂಥವನಾಗಿರಬೇಕು. ಅದು ಬಿಟ್ಟು, ದ್ವೇಷ ಅಹಂಕಾರವನ್ನೊಳಗೊಂಡು  ಕಟು ಹೃದಯಿ ಆಗಿದ್ದರೆ, ಅವನು ಆ ಗುರು ಸ್ಥಾನಕ್ಕೆ ಸರಿಹೊಂದುವವನೇ ಅಲ್ಲ. ಅಂಥವನು ಯಾವುದೇ ರೀತಿಯ ಗೌರವಕ್ಕೆ ಅರ್ಹನಲ್ಲ. 

ಗುರುಸ್ಥಾನದಲ್ಲಿ "ನನ್ನದೇನಿದೆ" ಎಂಬುದಲ್ಲ, ಆದರೆ ನನ್ನಿಂದ ಎಷ್ಟು ಜನರಿಗೆ ಒಳಿತಾಗುತ್ತದೆ ಎಂಬುದನ್ನು ನೋಡುವಂಥವರಾಗಬೇಕು. ಮಹಾನುಭಾವರ ಲಕ್ಷಣ ಏನೆಂದರೆ ಕ್ಷಮಾಗುಣ. ಗುರುಸ್ಥಾನದಲ್ಲಿರುವವರು ಕ್ಷಮಾಗುಣವನ್ನು ಮೈಗೂಡಿಸಿಕೊಂಡಿರಬೇಕು. ಜ್ನಾನಾರ್ಥಿಗಳು ತಪ್ಪು ಮಾಡುವುದು ಸಹಜ. ಗುರುಸ್ಥಾನದಲ್ಲಿರುವವರು ಅದು ತಪ್ಪು ಎಂದು ತಿಳಿದಾಗ, ಅವರನ್ನು ತಿದ್ದುವುದು ಗುರುವಿನ ಮುಖ್ಯ ಕರ್ತವ್ಯ, ಆದರೆ, ಆ ತಪ್ಪನ್ನು ಅಪರಾಧವೆನ್ನುವಂತೆ ವರ್ಗೀಕರಿಸಿ, ದ್ವೇಷದ ಭಾವನೆ ಮನಸ್ಸಲ್ಲಿಟ್ಟುಕೊಂಡಾಗ ಅವನ ಗುರುಸ್ಥಾನ ಅಲ್ಲಿಗೆ ಕೊನೆಯಾಗುತ್ತದೆ. ಯಾವುದೇ ರೀತಿಯಲ್ಲಿ ಅವನು ಗುರು ಎಂಬ ಪದಕ್ಕೆ ಅರ್ಹನಾಗಿರುವುದಿಲ್ಲ.  ಅಧಮರು, ಪಕ್ಷಪಾತಿಗಳು, ಧನಪಿಶಾಚಿಗಳು ಗುರುಸ್ಥಾನವನ್ನು ಅಲಂಕರಿಸಲು ಯೋಗ್ಯರು ಅಲ್ಲವೇ ಅಲ್ಲ. "ಹರ ಮುನಿದರೆ ಗುರು ಕಾಯ್ವನು" ಎಂಬ ಉಕ್ತಿಯೇ ಇದೆ. ಹೀಗೆ, ಗುರು ಎಂದರೆ ಸಾಕಾರ ಸಿದ್ಧಿಯನ್ನು ಕೊಡುವಂತವನು, ಸಾಕಾರ ರೂಪವನ್ನು ಕೊಡುವಂತವನು. ವಿಷ್ಣು ಸ್ವರೂಪಿ ಅವನು. ಅಯೋಗ್ಯರನ್ನು ಗುರು ಎಂದು ಕರೆಯುವುದು ಅಸಾಧ್ಯದ ಮಾತು.

ಇಂದಿನ ಯುಗದಲ್ಲಿ, ಗುರು ಎಂಬ ಪದ ತುಂಬಾ ವ್ಯಾಪಾರಿಕವಾಗಿದೆ. ಕೇವಲ ದುಡ್ಡಿನ ಮುಖ ನೋಡಿ ಗುರುಸ್ಥಾನ ಸೃಷ್ಟಿಸಿಕೊಳ್ಳುವವರು ತುಂಬಾ ಜನ ಇದ್ದಾರೆ. ಯಾರೋ ಮಹಾತ್ಮರು ಮಾಡಿದ ಕೆಲಸಗಳನ್ನು ತಾವು ಮಾಡಿದವರೆಂಬಂತೆ ಬಿಂಬಿಸಿಕೊಂಡು ತಮ್ಮನ್ನು ತಾವೇ ದೇವರಿಗಿಂತಲೂ ಮಿಗಿಲಾದವರೆಂಬಂತೆ ಬಿಂಬಿಸಿಕೊಳ್ಳುತ್ತಾರೆ. ಗುರುಸ್ಥಾನದ ಮಹಿಮೆ ಯಾರು ತಿಳಿದುಕೊಂಡಿರುತ್ತಾರೋ, ಅವರು ಯಾವುದೇ ದ್ವೇಷದ ಭಾವನೆ ಹೊಂದಿಕೊಂಡಿರುವುದಿಲ್ಲ, ಬದಲಾಗಿ ಅಜ್ಞಾನವಿದ್ದಲ್ಲಿ ಜ್ಞಾನವನ್ನೂ, ಕತ್ತಲಿದ್ದಲ್ಲಿ ಬೆಳಕನ್ನೂ, ವಿಷವಿದ್ದಲ್ಲಿ ಅಮೃತವನ್ನೂ ಬೀರುವ ಪ್ರಯತ್ನ ಮಾಡುತ್ತಾರೆ. ತನ್ನ ಅನುಯಾಯಿಗಳ ಒಳಿತನ್ನು ಬಯಸುತ್ತಾರೆ. 

ಹೀಗೆ, ಗುರುಸ್ಥಾನದಲ್ಲಿರುವವನೂ ಕೂಡಾ ತನ್ನ ಸ್ಥಾನದ  ಮಹತ್ವವನ್ನು ಮೈಗೂಡಿಸಿಕೊಂಡವನಾಗಿರಬೇಕು. ಹಾಗೂ ಪ್ರತಿಯೊಬ್ಬರೂ ಕೂಡ ಗುರುಸ್ಥಾನದಲ್ಲಿ ಯಾರನ್ನಿಡುತ್ತಾರೋ, ಅವರು ಯೋಗ್ಯರಾಗಿದ್ದರೆ ಮಾತ್ರ ಆ ಸ್ಥಾನ ನೀಡಿ ಗೌರವಿಸಿ. ಯೋಗ್ಯರಿಗೆ ಗೌರವ ನೀಡಿದಷ್ಟು ಪುಣ್ಯ ನಿಮ್ಮದಾಗುತ್ತದೆ.





No comments:

Post a Comment