*೨೦೦೩-೦೪ ನೇ ಸಾಲಿನಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ದೊರೆತ ಪ್ರಬಂಧ*
ದಿನಾಂಕ: ೦೭-೦೭-೨೦೦೩
"ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್।
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ।।"
-ಎಂದು ಶ್ರೀ ಕೃಷ್ಣಪರಮಾತ್ಮನು ಮಹಾಭಾರತ ಯುದ್ಧದ ಸಮಯದಲ್ಲಿ ಹೇಳಿರುವನು. ಈ ಮಾತನ್ನು ಭಗವದ್ ವಾಣಿ ಎಂದೇ ಪರಿಗಣಿಸಲಾಗಿದೆ. "ಸಜ್ಜನರನ್ನು ಕಾಪಾಡುವುದಕ್ಕಾಗಿಯೂ, ಪಾಪಿಗಳಾದವರ ವಿನಾಶಕ್ಕಾಗಿಯೂ, ಧರ್ಮವನ್ನು ನೆಲೆಗೊಳಿಸುವುದಕ್ಕಾಗಿಯೂ ನಾನು ಯುಗಯುಗಗಳಲ್ಲಿಯೂ ಅವತರಿಸುತ್ತೇನೆ." ಎಂದು ಶ್ರೀ ಕೃಷ್ಣಪರಮಾತ್ಮನು ಜಗತ್ತಿನಲ್ಲಿ ಶಾಂತಿ ನೆಲೆಯೂರಿಸುವ ಸಲುವಾಗಿ ನುಡಿದಿದ್ದಾನೆ. ಭಗವದ್ಗೀತೆಯನ್ನು ಅರ್ಜುನನಿಗೆ ಬೋಧಿಸುತ್ತಿದ್ದ ಸಂದರ್ಭದಲ್ಲಿ ಶ್ರೀ ಕೃಷ್ಣಪರಮಾತ್ಮನು ನುಡಿದ ವಾಕ್ಯ ಸುಳ್ಳು ಎಂದು ಹೇಳಲು ಸಾಧ್ಯವಿಕ್ಕ. ಇಂದಿಗೂ ಜಗತ್ತಿನ ಮೂಲೆಮೂಲೆಗಳಲ್ಲಿ ಅಂತಹ ಘಟನೆಗಳು ನಡೆಯುತ್ತಲೇ ಇವೆ. ಯುದ್ಧ ನಡೆದು ಕೆಲವು ಕಾರಣಾಂತರಗಳಿಂದಾಗಿ ನಿಂತು ವಿಶ್ವದಲ್ಲಿ ಶಾಂತಿ ಸೆಳೆಸುತದೆ. ಮತ್ತೆ ಯುದ್ಧವು ಪ್ರಾರಂಭವಾಗಿ ಸ್ವಲ್ಪ ದಿನಗಳವರೆಗೆ ಇರುತ್ತದೆ. ಕೊನೆಗೆ ಶಾಂತಿಯೇ ನಮ್ಮ ಉಸಿರಾಗಿರುತ್ತದೆ. ಹೀಗೆ ಯುದ್ಧ ಮತ್ತು ಶಾಂತಿ ಒಂದೇ ನಾಣ್ಯದ ಎರಡು ಮುಖಗಳಿದ್ದ ಹಾಗೆ. ಯಾವುದು ಯಾವತ್ತು ಬರುತ್ತದೆಂಬುದು ತಿಳಿಯದು. ಯುದ್ಧದ ನಂತರ ಶಾಂತಿ, ಪುನಃ ಯುದ್ಧ - ಹೀಗೆ ಭೂಮಿ ಇರುವ ತನಕ ನಡೆಯುತ್ತಲೇ ಇರುತ್ತದೆ. ಈ ಯುದ್ಧಗಳು ಪ್ರಾರಂಭವಾಗಲು ತಳಹದಿಯಾದ ಕಾರಣಗಳೇನು?...
ಅತಿಯಾಸೆ, ದುರಾಸೆ, ಮತ್ಸರ, ಅಸ್ತ್ರ ಶಾಸ್ತ್ರಗಳ ಪ್ರದರ್ಶನ ಹಾಗೂ ಪುರುಷರಿಗರುವ ಭುಜಬಲ, ಅಧಿಕಾರಬಾಳ ಇತ್ಯಾದಿಗಳು ಯುದ್ಧಕ್ಕೆ ಮುಖ್ಯವಾದ ಕಾರಣಗಳು. ಪ್ರಪ್ರಥಮವಾಗಿ ಯುದ್ಧಕ್ಕೆ ಕಾರಣ ಸ್ವಾರ್ಥ. ಮನುಷ್ಯನಾದವನಿಗೆ ಸ್ವಾರ್ಥವಿರುವುದು ಸಹಜ. ಆದರೆ ಈ ಸ್ವಾರ್ಥವನ್ನು ಸಾಧ್ಯವಾದಷ್ಟು ಮಟ್ಟಿಗೆ ನಮ್ಮ ಹಿಡಿತದಲ್ಲಿಟ್ಟುಕೊಳ್ಳುವುದು ನಮ್ಮ ಧರ್ಮ. ಮಾತ್ರವಲ್ಲ, ಅದರಲ್ಲಿಯೇ ಜಗತ್ತಿನ ಭವಿಷ್ಯ ಅಡಗಿದೆ; ಜಗತ್ತಿನ ಶಾಂತಿ ಅಡಗಿದೆ. ಮನುಷ್ಯಮಾತ್ರನಿಗೆ "ತಾನು" "ತನ್ನದು" ಎಂಬ ಸ್ವಾರ್ಥ ಮತ್ತು ಅಹಂಕಾರದಿಂದ ಕೂಡಿದ ಭಾವನೆಯಿದೆ. ಇದು ಅನೇಕ ಯುದ್ಧಗಳಿಗೆ ಕಾರಣವಾಗಿದೆ. ೨೦೦೩ನೆಯ ಮಾರ್ಚ್ ತಿಂಗಳ ಕೊನೆಯಲ್ಲಿ ಪ್ರಾರಂಭವಾಗಿದ್ದ ಅಮೇರಿಕಾ- ಇರಾಕ್ ನಡುವಣ ಯುದ್ಧ ನಡೆಯಲು ಕಾರಣ ಅಮೇರಿಕಾದ ಸ್ವಾರ್ಥವೂ ಒಂದಾಗಿದೆ. ಸೂಕ್ಷ್ಮವಾಗಿ ಪರಾಂಬರಿಸಿ ನೋಡಿದರೆ, ಇರಾಕಿಗೆ ಮೋಸಮಾಡಿದ ಅಮೆರಿಕಾವು ತನ್ನ ಸ್ವಾರ್ಥವನ್ನು ಪ್ರದರ್ಶಿಸುತ್ತದೆ. ಬ್ರಿಟನ್ ದೇಶವು ಅಮೆರಿಕಾಗೆ ಸಹಾಯ ಮಾಡಿದ್ದೂ ಒಂದು ರೀತಿಯಲ್ಲಿ ತನ್ನ ಸ್ವಾರ್ಥದಿಂದಲೇ. ಪಾಕಿಸ್ತಾನವು ಕಾಶ್ಮೀರದಂಥ ಸುಂದರ ಮತ್ತು ಪ್ರಕೃತಿ ಸಿರಿವಂತ ಪ್ರದೇಶವನ್ನು ಪಡೆಯುವ ಸ್ವಾರ್ಥದಿಂದ ಭಾರತದ ಮೇಲೆ ಯುದ್ಧ ನಡೆಸಲು ಹೊಂಚು ಹಾಕುತ್ತಿದೆ.
ಎರಡನೆಯದಾಗಿ, ಯುದ್ಧವು ರಾಜಕಾರಣದ ಪರಿಣಾಮವಾಗಿರುತ್ತದೆ. ರಾಜಕೀಯ ವಿಚಾರಗಳಿಂದಾಗಿ ಅನೇಕ ಬಾರಿ ಯುದ್ಧ ನಡೆಯುತ್ತದೆ. ಭಾರತವು ಪಾಕಿಸ್ತಾನಕ್ಕೆ ಹಾಗೂ ಪಾಕಿಸ್ತಾನವು ಭಾರತಕ್ಕೆ ಬಂದು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಮಾತನ್ನು ಆಡುತ್ತಿರುತ್ತಾರೆ. ಇದು ಆಗುವುದೂ ರಾಜಕೀಯದಲ್ಲೇ. ರಾಜಕಾರಣಿಗಳು ಇದಕ್ಕೆ ಮುಖ್ಯ ಆಟಗಾರರು. ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಭಾರತ - ಪಾಕಿಸ್ತಾನ ನಡುವೆ ಇರುವ ವಾಗ್ವಾದ ಕೂಡ ರಾಜಕೀಯ ಕಾರಣಗಳಿಂದಲೇ ಇರಬಹುದು. ರಾಜಕಾರಣ ಧರ್ಮಕ್ಕೆ ತುಳುಕು ಹಾಕಿಕೊಂಡು ಮತೀಯ ಗಲಭೆಗಳು ಹೆಚ್ಚಿ, ದೇಶವನ್ನೂ ವಿಶ್ವವನ್ನೂ ಅವನತಿಗೆ ಸಾಗಿಸುತ್ತಿದೆ.
ಯುದ್ಧವು ವೈಜ್ಞಾನಿಕತೆಯ ಕಾರಣದಿಂದಲೂ ನಡೆಯುತ್ತದೆ. ಅತ್ಯಂತ ಮುಂದುವರೆದ ವೈಜ್ಞಾನಿಕತೆಯು ಅನೇಕ ಘೋರವಾದ ವಿಶ್ವನಾಶಕ ವಸ್ತುಗಳನ್ನು ನಿರ್ಮಿಸುತ್ತದೆ. ಲೋಕಶಾಂತಿಗೆ ಅಗತ್ಯವಾದ ಅಹಿಂಸೆಯನ್ನು ಅಧ್ಯಾತ್ಮ ವಿಜ್ಞಾನ ಶೋಧಿಸಿದರೆ, ಭೌತ ವಿಜ್ಞಾನವು ಲೋಕ ಭಯಂಕರವಾದ ವಿಶ್ವನಾಶಕವಾದ ಹಿಂಸಾಮಯವಾದ "ಪರಮಾಣು ಬಾಂಬ್"ಗಳನ್ನೂ ನಿರ್ಮಿಸಿದ್ದು ನಿಜಕ್ಕೂ ಕಳವಳಕಾರಿಯಾಗಿದೆ. ದೇಹಬಲ, ಅಧಿಕಾರಬಲಗಳು ಭಯೋತ್ಪಾದನೆ, ಹಿಂಸೆ , ದಬ್ಬಾಳಿಕೆಗಳಿಗೆ ಬಳಸಲ್ಪಟ್ಟರೆ, ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ. ವಿವಿಧ ಬಳಗಳ ಬಳಕೆಯ ರೀತಿ ಶಾಂತಿಭರಿತವಾಗಿರಬೇಕು. ಇದರಲ್ಲಿಯೇ ಎಲ್ಲರ ಭವಿಷ್ಯ ಅಡಗಿದೆ. ವೈಜ್ಞಾನಿಕತೆಯಿಂದ ಲಾಭವೂ ಇದೆ. ಆದರೆ ನಾವು ವಿಶ್ವನಾಶಕ ವಸ್ತುಗಳನ್ನು ಸಂಶೋಧಿಸುವ ಬದಲಿಗೆ ವಿಷವೋಪಯುಕ್ತ ವಸ್ತುಗಳನ್ನು ಸಮಾಧಿಸಲು ಪ್ರಾರಂಭಿಸಬೇಕು, ಹೆಚ್ಚಿಸಬೇಕು. ಆಗ ಜಗತ್ತಿಗೆ ಉಳಿಗಾಲವಿರುತ್ತದೆ.
ಯುದ್ಧಕ್ಕೆ ಇನ್ನೊಂದು ಕರಣ "ಜಾತಿ-ಮತ ಭೇದ". ಒಂದು ಮತದವರಿಗೆ ಇನ್ನೊಂದು ಮತದವರೊಡನೆ ತಿಕ್ಕಾಟ ಪ್ರಾರಂಭವಾದಾಗ ಕೋಮು ಗಲಭೆಯುಂಟಾಗಿ ಕೊನೆಗೆ ಯುದ್ಧವಾಗಿ ಪರಿಣಮಿಸಬಹುದು. ತಾನು ನಂಬಿದ್ದಕ್ಕೂ ಇತರರು ನಂಬುವ ಶ್ರದ್ಧಾ ಸಂಬಂಧಿಯಾದ ಸಂಗತಿಗಳಿಗೂ ವ್ಯತ್ಯಾಸವಿದ್ದಾಗ ಯುಧ್ಧವುಂಟಾಗಬಹುದು.
"ಓಲೆ ಹತ್ತಿ ಉರಿದರೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದರೆ ನಿಲಬಾರದು
ಏರಿ ನೀರುಂಬೊಡೆ ಬೇಲಿ ಕೆೈಯ ಮೇವೊಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ? ಕೂಡಲಸಂಗಮದೇವಾ" - ಎಂಬ ಬಸವಣ್ಣನವರ ವಚನದ ಪ್ರಾಯರ ಜಾತಿ ಎಂಬ ಉರಿಯು ಭೂಮಿಯಲ್ಲೆಲ್ಲೆಡೆ ಹರಡಿರುವಾಗ ಮುಂದೊಂದು ದಿನ ನಾವು ಯಾರೂ ಜೀವಿಸಲು ಸಾಧ್ಯವಾಗುವುದಿಲ್ಲ. ಜಾತಿಯ ಉರಿಯು ಇಂದು ಮೈಯೆಲ್ಲಾ ನಾಲಗೆಯಾಗಿ ರಾಷ್ಟ್ರವನ್ನು ಸುಡುತ್ತಿದೆ. ಈ ಮಧ್ಯೆ ಕ್ಷುದ್ರ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ, ಪ್ರತಿಷ್ಠೆಗಾಗಿ ಧರ್ಮಕ್ಕೆ ಜಾತಿಯ ಸ್ವರೂಪ ಕೊಟ್ಟು, ಜನಾಂಗೀಯ ಭಾವನೆಗಳನ್ನು ಕೆರಳಿಸಿ ಯುದ್ಧ ಪ್ರಾರಂಭಿಸುತ್ತಾರೆ. ಗಲಭೆಗಳನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಚೋದಿಸುತ್ತಾರೆ.
ಯುದ್ಧಕ್ಕೆ ಬಾಹ್ಯ ಶಕ್ತಿಗಳ ಒತ್ತಡವೂ ಒಂದು ಕಾರಣವಾಗಿದೆ. "ತನ್ನ ಪ್ರದೇಶ ಮೇಲು ಇತರರ ಪ್ರದೇಶ ಕೀಳು. ಆದುದರಿಂದ ತಾನು ಅವರಲ್ಲಿ ಯುದ್ಧ ಮಾಡಿದರೆ ತಮಗೆ ಜಯ ಖಂಡಿತ" ಎಂಬ ಭಾವನೆಯಿನಾಗಿ ಅನೇಕ ಸಲ ಯುದ್ಧಗಳು ನಡೆಯುತ್ತವೆ. ಹೀಗೆ ಯುದ್ಧಕ್ಕೆ ಅನೇಕ ಕಾರಣಗಳಿವೆ.
ಪ್ರಥಮ ಜಾಗತಿಕ ಯುದ್ಧವು ನಡೆದಾಗ ಜಗತ್ತಿನ ಶಾಂತಿ ಕಾದಾಡಿತು. ಆಗ ಶಾಂತಿ ಸ್ಥಾಪನೆಗಾಗಿಯೇ "ಜನಾಂಗ ಸಂಘ"ವನ್ನು ೧೯೨೦ರಲ್ಲಿ ಸ್ಥಾಪಿಸಲಾಯಿತು. ಆದರೆ ಅದು ಎರಡನೇ ಮಹಾಯುದ್ಧ ನಡೆಯುವ ವೇಳೆಗೆ ತನ್ನ ಕರ್ತವ್ಯದಿಂದ ವಿಮುಖವಾಯಿತು. ಶಾಂತಿಸ್ಥಾಪನೆ ವಿಫಲವಾಯಿತು. ೧೯೪೫ರಲ್ಲಿ ಎರಡನೇ ಜಾಗತಿಕ ಯುದ್ಧ ಮುಗಿದಾಗ "ಸಂಯುಕ್ತ ರಾಷ್ಟ್ರ ಸಂಘ"ವನ್ನು ಸ್ಥಾಪಿಸಿದರು. ಆದರೆ ಅದು ಇಂದಿಗೆ ತನ್ನ ಕರ್ತವ್ಯದಿಂದ ವಿಮುಖವಾಗುತ್ತಿದೆ. ೨೦೦೩ನೇ ಮಾರ್ಚ್ ೨೧ಕ್ಕೆ ಇರಾಕ್-ಅಮೇರಿಕಾ ಯುದ್ಧ ನಡೆದಾಗ ತನ್ನ ಕರ್ತವ್ಯದಿಂದ ಸ್ವಲ್ಪ ಮಟ್ಟಿಗೆ ವಿಫಲವಾಯಿತು. ಆದಕಾರಣ ಶಾಂತಿ ಸ್ಥಾಪನೆ ತುಂಬಾ ಕಷ್ಟಕರವಾಗಿದೆ. ಯುದ್ಧಕ್ಕೆ ಆಯುಧವೇ "ಹಿಂಸೆ". ಹಿಂಸೆ ಮಾಡಿ ಜನರಿಗೆ ಹಾನಿಯುಂಟು ಮಾಡುವುದೇ ಯುದ್ಧದ ಪರಿಣಾಮ. ಅನೇಕ ಜನರಿಗೆ ಹಿಂಸೆ ನೀಡಿ ಅವರನ್ನು ದುಃಖಿಸುವ ಈ ಯುದ್ಧ ನಮಗೆ ಬೇಡ. ಯುದ್ಧ ಬೇಡವಾದಲ್ಲಿ ಅಹಿಂಸೆ ಬೆಳೆಯಬೇಕು. "ಅಹಿಂಸಾ ಪರಮೋಧರ್ಮ" ಎನ್ನುವಂತೆ ಅಹಿಂಸೆಯೇ ನಮ್ಮ ಮುಖ್ಯವಾದ ಕರ್ತವ್ಯವಾಗಬೇಕು. ಅಹಿಂಸೆಗೆ ಮೇಲಾದ ಧರ್ಮ ಬೇರೊಂದಿಲ್ಲ. ಮಹಾತ್ಮಾಗಾಂಧೀಜಿಯವರ ಕೈಯಲ್ಲಿ "ಅಹಿಂಸೆ" ಬ್ರಿಟಿಷ್ ಸಾಮ್ರಾಜ್ಯ ಶಾಹಿಯನ್ನು ಭಾರತದಿಂದೋಡಿಸುವ ಅಸ್ತ್ರವಾಯಿತು.
ಆದರೂ ಪಾಶ್ಚಾತ್ಯ ಸಂಸ್ಕೃತಿಯನ್ನು ಸಂಪೂರ್ಣವಾಗಿ ತ್ಯಜಿಸಲು ಸಾಧ್ಯವಾಗಿಲ್ಲ. ಪಾಶಾತ್ಯ ವಿಜ್ಞಾನ ಪ್ರಗತಿ, ಯಂತ್ರ ಸಾಧನಗಳು, ರಾಜಕೀಯ, ಸಾಮಾಜಿಕ ಪ್ರಗತಿಪರ ಧ್ಯೇಯಗಳು ಮತ್ತು ಅದರ ಸ್ವತಂತ್ರ ವೈಚಾರಿಕ ಪ್ರವೃತ್ತಿ - ಇವು ಅಗತ್ಯವಾಗಿಯೂ ನಾವು ಸ್ವೀಕರಿಸಬೇಕಾದ ಸಂಗತಿಗಳು. ಆದರೆ ಅಶಾಂತಿ ನೆಲೆಸುವ ಸಂಗತಿ, ಸಂಸ್ಕೃತಿಗಳನ್ನು ತಿರಸ್ಕರಿಸಲೇ ಬೇಕು.
ತನ್ನ ಮತವನ್ನು ಪ್ರೀತಿಸುವಂತೆಯೇ ಇತರ ಮತಗಳನ್ನು ಗೌರವಿಸುವುದು ತುಂಬಾ ಮುಖ್ಯ. ಸುಖ ಶಾಂತಿ ಇರುವುದು ವಿಜ್ಞಾನ ನೀಡುವ ವಸ್ತುಗಳಲ್ಲಲ್ಲ. ಅವನ್ನು ಅನುಭವಿಸುವ ಅಂತರಂಗದಲ್ಲಿ. ಅದಕ್ಕಾಗಿ ಅಂತರಂಗದ ಸಂಸ್ಕಾರ್ರ ಅನ್ವೇಷಣೆ ಮತ್ತು ಶಾಂತಿ ಇರಲೇಬೇಕು. ಇಲ್ಲವಾದಲ್ಲಿ ಯುದ್ಧವು ಪ್ರಾರಂಭವಾಗಿ ಶಾಂತಿ ನೆಲೆಸುವ ಸಲುವಾಗಿ ಹವಣಿಸುವ ಪರಿಸ್ಥಿತಿ ಬರಬಹುದು. ಯುದ್ಧ ನಡೆಯದಂತಹ ಕಾಲವೇ ಇಲ್ಲ. ಯುದ್ಧವನ್ನು ಮಾಡದೆ ಶಾಂತಿ ನೆಲೆಸುವ ಮಾತೇ ಇಲ್ಲ. ಆದರೆ ಒಮ್ಮೆ ಯುದ್ಧವಾಗಿ ಶಾಂತಿ ನೆಲೆಸಿದ ನಂತರ ಪುನಃ ಆ ಶಾಂತಿಯನ್ನು ಕೆಡಿಸಬಾರದು. ಅದನ್ನು ಉಳಿಸಿಕೊಳ್ಳಬೇಕು.
ಯುದ್ಧದಿಂದ ಅನೇಕ ಬಾರಿ ಒಳ್ಳೆಯ ಪಾಠ ದೊರೆತಿದೆ ಕೂಡಾ. ಉರುಕ್ಷೇತ್ರ ಯುದ್ಧ ನಡೆಯದಿರುತ್ತಿದ್ದರೆ ಪವಿತ್ರವಾದ ಭಗವದ್ಗೀತೆ ನಮಗೆ ದೊರೆಯುತ್ತಿರಲಿಲ್ಲ. ರಾಮ- ರಾವಣರ ನಡುವಿನ ಯುದ್ಧ ರಾಮಾಯಣದ ರೂಪ ತಾಳಿತು. ಯುದ್ಧದಿಂದ ಅನೇಕ ಪಾಠ ದೊರೆತರೂ ಕೂಡಾ ನಾವು ಅದರಿಂದ ಆದ ಜೀವಹಾನಿಗಳನ್ನು, ಕಷ್ಟ, ನಷ್ಟ, ದುಃಖ, ನೋವುಗಳನ್ನು ಮರೆಯಲಾಗದು. ಯುದ್ಧವು ನಡೆದ ಕಾರಣಕ್ಕೆ ಎಂದಾದರೂ ಪರಿಝಾರ ದೊರೆತಿದೆಯಾ? ಯುದ್ಧವು ಈ ಜಗದ ಅಂತ್ಯದವರೆಗೆ ನಡೆಯುತ್ತಲೇ ಇರುತ್ತದೆಯೋ ಅಥವಾ ಶಾಂತಿಯಿಂದ ಈ ಜಗತ್ತು ಇರುತ್ತದೆಯೋ? ಎಂಬುದಿನ್ನೂ ಉತ್ತರಿಸಲಾಗದ ಪ್ರಶ್ನೆ.