ಶನಿವಾರ, ಆಗಸ್ಟ್ 16, 2025

ಪುನರ್ಜನ್ಮ ???

✍🏻ದೀಪಲಕ್ಷ್ಮಿ ಭಟ್, ಮಂಗಳೂರು  

ಸುಮಾರು ಮೂರು ತಿಂಗಳ ಚರ್ಚೆಯ ನಂತರ ಇವತ್ತು ರಜನಿ ಮನೆಯವರೆಲ್ಲರೂ ಜೊತೆ ಸೇರಿ ಕಾಂಬೋಡಿಯಾ ದೇಶಕ್ಕೆ ಪ್ರಯಾಣ ಹೋಗುವ ನಿರ್ಧಾರಕ್ಕೆ ಬಂದಿದ್ದರು. ಮಕ್ಕಳ ಶಾಲೆಗೆ ರಜೆ ಇದ್ದ ಕಾರಣ, ಆಫೀಸಿನಿಂದ ಹತ್ತು ದಿನಗಳ ರಜೆ ತೆಗೆದುಕೊಂಡು, ಮುಂದಿನ ವಾರವೇ ಹೊರಡುವುದೆಂದು ಬೇಕಾದ ಎಲ್ಲ ವ್ಯವಸ್ಥೆಗಳನ್ನು ರಜನಿ - ಕರ್ಣ ದಂಪತಿಗಳು ಮಾಡಿಕೊಂಡರು. ಮಕ್ಕಳಾದ ರಾಖಿ ಮತ್ತು ರಾಣ - ನಾಲ್ಕೂ ಜನ ಟೂರ್ ಹೋಗುವ ನಿರ್ಧಾರ ಮಾಡಿದರು. ಮಕ್ಕಳೋ, ಹೊರದೇಶಕ್ಕೆ ಹೋಗುವ ಉತ್ಸಾಹದಲ್ಲಿ ಹಾರಾಡುತ್ತಿದ್ದರು. ರಜನಿ ಹಾಗೂ ಕರ್ಣ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡುವುದರಲ್ಲಿ ದಿನ ಇಡೀ ಓಡಾಡುತ್ತಿದ್ದರು. ಕರ್ಣ ತನ್ನ ಹೆಂಡತಿ ರಜನಿ ಹಾಗೂ ಮಕ್ಕಳಿಗೆ ಅಲ್ಲಿ ದಿನ ಕಳೆಯಲು ಅಗತ್ಯವಾದ ವಸ್ತುಗಳೇನೆಂಬುದನ್ನು ಲೆಕ್ಕ ಹಾಕಿ  ಲಿಸ್ಟ್‌ ಮಾಡಿ,  ಪಾಸ್ಪೋರ್ಟ್, ಇನ್ಶೂರೆನ್ಸ್, ಡಾಲರ್ ಎಲ್ಲವೂ ಚೆಕ್ ಮಾಡುತ್ತಿದ್ದ. ರಜನಿ ಹೋಟೆಲ್ ವ್ಯವಸ್ಥೆ, ಭಾರತೀಯ ಊಟ ಸಿಗುವ ಜಾಗ, ವೈಫೈ ಸಿಗುವ ಜಾಗ — ಎಲ್ಲವೂ ನೋಟ್ಸ್‌ನಲ್ಲಿ ಬರೆದುಕೊಂಡು ಟಿಕ್ ಮಾಡುತ್ತಾ ಇದ್ದಳು. 

ಆದರೆ, ಕಾಂಬೋಡಿಯಾ ಹೋಗುವ ನಿರ್ಧಾರ ಮಾಡಿದಾಗಿನಿಂದ ರಜನಿಗೆ ಮಾತ್ರ ಒಂದು ರೀತಿಯ ಅಸ್ಪಷ್ಟ ಭಾವನೆ - "ನಾನು ಈ ದೇಶಕ್ಕೆ ಮೊದಲೇ ಹೋಗಿದ್ದೇನೆ" ಅನ್ನುವ ಅನಿಸಿಕೆ. ಟಿಕೆಟ್ ನಲ್ಲಿ ಅಂಕೊರ್ ವಾಟ್ ದೇವಸ್ಥಾನದ ಚಿತ್ರ ನೋಡಿದ ಕ್ಷಣವೇ ಮನಸ್ಸಲ್ಲಿ ಏನೋ ಒಂದು ರೀತಿಯ ವಿಚಿತ್ರ ಅನುಭವಗಳು.  ಕಣ್ಣಲ್ಲಿ ನೀರು ತುಂಬಿ ಬಂದು ಮನಸ್ಸಿಗೆ ಏನೋ ಒಂದು ರೀತಿಯ ದುಃಖದ ಅನುಭವ. ಕಾರಣ  ತಿಳಿಯದೆ, ಮನಸ್ಸಿನಲ್ಲಿಯೇ ಭಾವನೆಗಳನ್ನು ಮುಚ್ಚಿಟ್ಟಳು. ಮಕ್ಕಳನ್ನು ಮಲಗಿಸಲು ಯತ್ನಿಸುವಾಗಲೂ, ಏನೋ ಒಂದು ರೀತಿಯ ವಿಚಿತ್ರ ದುಗುಡ ಮನಸ್ಸಿಗೆ. "ಅಲ್ಲಿ ಯಾರೋ ನನಗಾಗಿ ಕಾಯುತ್ತಿದ್ದಾರೆ!" ಎಂಬ ಭಾವನೆ. ಬೇಸರವಾಗುವಂಥದ್ದಲ್ಲವಾದರೂ, ಒಂದು ರೀತಿಯ ವಿಶೇಷವಾದ, ಮನಸ್ಸಿಗೆ ಹಿತಕರವಾದ ಭಾವನೆ. ಅಂಕೊರ್ ವಾಟ್ ದೇವಸ್ಥಾನದ ಕಪ್ಪು ಕಲ್ಲಿನ ಗೋಪುರ, ಕೆತ್ತನೆಗಳು, ತನ್ನ ನೆನಪುಗಳ ಮಡಿಲಿನಂತಿರುವ ಆ ಮೆಟ್ಟಿಲುಗಳು, ಆ ಕೆರೆಗಳಲ್ಲಿ ಅರಳಿದ ಕುಸುಮಗಳನ್ನು ಕಂಡಾಗ, ರಜನಿ ಕಣ್ಣಂಚಿನಲ್ಲಿ ನೀರು ತುಂಬಿತು. ಏಕೆ ಎನ್ನುವುದು ಇನ್ನೂ ನಿಗೂಢ!

ಅಷ್ಟರಲ್ಲೇ ಅಲ್ಲಿ ಬಂದ  ಕರ್ಣ - "ಏನಾಯ್ತು ರಜನಿ, ಕಣ್ಣಲ್ಲಿ ನೀರು ತುಂಬಿಕೊಂಡಿದ್ದೀಯಾ? ಟೂರ್ ಹೋಗಲು ಮನಸ್ಸಿಲ್ಲವೇ?" ಎಂದು ಕೇಳಿದ. "ಹಾಗೇನೂ ಇಲ್ಲ. ಕಾಂಬೋಡಿಯಾ ದೇಶದ ಚಿತ್ರ ನೋಡಿದೆನಲ್ಲ. ಏನೋ ಒಂದು ರೀತಿಯ ವಿಚಿತ್ರ ಅನುಭವ ಬರುತ್ತಿದೆ. ನಾನು ಮೊದಲೇ ಅಲ್ಲಿಗೆ ಹೋಗಿರುವ ಹಾಗೆ..." ಅಂತ ರಜನಿ ಅಂದಳು. ಅದಕ್ಕೆ  ಕರ್ಣ ಗೊಳ್ಳನೆ ನಕ್ಕು, "ಶುರು ಆಯ್ತು ನಿನ್ನ ಭ್ರಮಾಲೋಕದ ಮಹಿಮೆ" ಅಂದು ತಮಾಷೆ ಮಾಡಿದ. "ಸರಿ ಆಯ್ತು ಮಲಗೋಣ" ಅಂದಳು ರಜನಿ ಅವಳ ಭಾವನೆಗೆ ಕರ್ಣನ ಮನಸ್ಸಿನಲ್ಲಿ ಜಾಗವಿಲ್ಲ ಅಂತ ಗೊತ್ತಾಗಿ. 

***

ಫ್ನೋಮ್ ಪೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ವಿಮಾನ ತಲುಪುತ್ತಲೇ, ಅಲ್ಲಿನ ಹನಿಮಳೆ ರಜನಿ ಮನಸ್ಸಿಗೆ ಒಂದು ರೀತಿಯ ಖುಷಿ ಹಾಗೂ ತಂಪು ನೀಡಿತು. ಹೊಸ ದೇಶ ಆದರೂ ರಜನಿ ಮನಸ್ಸಿಗೆ ಒಂದು ರೀತಿಯ ಪರಿಚಿತ ಭಾವನೆ, ಸಂರಕ್ಷಿತ ಮನೋಭಾವ. "ನನ್ನ ಜನ, ನನ್ನ ಊರು" ಅನ್ನುವಷ್ಟು ಸಂತೋಷ. ಹೃದಯಕ್ಕೆ ಪರಿಚಿತವಾದ ಒಡನಾಟ. ಲಗೇಜ್ ತೆಗೆದು, ಪ್ರೀಪೇಯ್ಡ್ ಟ್ಯಾಕ್ಸಿಯಲ್ಲಿ ಸಿಯೇಮ್ ರೀಪ್ ಕಡೆ ರಜನಿ, ಕರ್ಣ ಹಾಗೂ ಮಕ್ಕಳು ಹೊರಟರು. ಮಕ್ಕಳಿಗಂತೂ ತಡೆಯಲಾಗದಷ್ಟು ಸಂತೋಷ. ಸಾಹಸದ ಮನೋಭಾವ. ಕರ್ಣ ನಮ್ಮ ಸುರಕ್ಷತೆ ಹಾಗೂ ಹೋಟೆಲ್ ಗೆ ಸೇರುವ ಜವಾಬ್ದಾರಿಯಲ್ಲಿ ತೊಡಗಿದ್ದ. ರಜನಿಗೆ, ಒಂದು ರೀತಿಯಲ್ಲಿ ತನ್ನ ಹುಟ್ಟೂರಿಗೆ ಹಿಂದಿರುಗಿದ ಹಾಗೆ ಮನಸ್ಥಿತಿ. ಹೋಟೆಲ್ ಇದ್ದ ಪ್ರದೇಶ ತಲುಪುತ್ತಲೇ, ಕೆಳಗಿಳಿದ ರಜನಿಗೆ ರಸ್ತೆಬದಿಯಲ್ಲಿ ಹೂ ಮಾರುತ್ತಿದ್ದ ಹುಡುಗಿಯ ಮೇಲೆ ಕಣ್ಣು ಹಾಯಿತು. ಪರಿಚಿತಳೆಂಬಂತೆ ಮಂದಹಾಸ ಬೀರಿದ ಆ ಹುಡುಗಿ, "ಸ್ವಾಕೋಮ್ ಕಾರ್ ತ್ರಾಲ್ಭ್ಮೊಕ್ವಿನ್ಚ್" ಅಂತ ಹೇಳಿದಳು. ಆ ಶಬ್ದ ಕೇಳುತ್ತಲೇ, ರಜನಿಗೆ ಆ ಭಾಷೆ ತನಗೆ ತಿಳಿದಿದೆ ಅನ್ನುವ ಹಾಗೆ ಭಾಸವಾಯಿತು. ಯಾಕೆ ಆ ಹುಡುಗಿ "ಮರಳಿ ಸ್ವಾಗತ" ಅಂದಳು ಅಂತ ಗೊತಾಗಲಿಲ್ಲ. "ಏನೋ ಇದೆ. ತನ್ನ ಅನುಭವಕ್ಕೆ ಬರುತ್ತಿದ್ದ ಭಾವನೆಗಳಿಗೆ ಏನೋ ಒಂದು ಅರ್ಥ ಇದೆ" ಅಂತ ರಜನಿಗೆ  ಮನದಟ್ಟಾಯಿತು. ಆದರೆ ಅದೇನು ಅಂತ ಮಾತ್ರ ತಿಳಿಯಲಿಲ್ಲ.

ಹೋಟೆಲ್‌ ಬಾಲ್ಕನಿಯಲ್ಲಿ ರಾತ್ರಿ ನಿಂತಿರುವಾಗ ದೂರದಲ್ಲಿ ಒಂದು ಘಂಟೆಯ “ಟಂಗ್… ಟಂಗ್…” ಶಬ್ದ ಕೇಳುತ್ತಿತ್ತು. ಆ ಶಬ್ದ ರಜನಿ ಕಿವಿಗೆ ಕಾಲದ ಮಿಡಿತ ಎಂಬಂತೆ ಎನಿಸಿತು. ಸ್ವಲ್ಪ ಹೊತ್ತು  ಕಣ್ಣು ಮುಚ್ಚಿ ನಿಂತಳು. ತಕ್ಷಣ, ಮೆರವಣಿಗೆಯೊಂದು ಅವಳ ಕಣ್ಣೆದುರಲ್ಲಿ - ಸುಂದರವಾದ ದೀಪಗಳ ಸಾಲು, ಸುಗಂಧಿತವಾದ ಕುಸುಮಗಳ ಇಂಪಾದ ಗಾಳಿ, ಹಳದಿ–ಕೆಂಪು–ಹಸಿರು ಬಾವುಟಗಳು… ಯಾರೋ ಅವಳ ಕೈ ಹಿಡಿದು “ಮಹಾರಾಣಿ…” ಎಂದು ಕರೆಯುತ್ತಿರುವ ಶಬ್ದ.. ಆ ಕೂಡಲೇ ಬೆಚ್ಚಿ ಬಿದ್ದಂತೆ ಕಣ್ಣು ತೆರೆದಳು. “ವಿಚಿತ್ರವಲ್ಲವೇ?” ಎಂದು ತನ್ನ ಮನಸ್ಸಿನಲ್ಲಿಯೇ ಹೇಳಿಕೊಂಡು ಕರ್ಣ ಹೇಳಿದಂತೆ ತನಗೆ ಭ್ರಮೆ ಇರಬಹುದು ಎಂದುಕೊಂಡು ನಗು ಬೀರಿದಳು.  

***

 

ಮರುದಿನ ಬೆಳಿಗ್ಗೆ ಬೇಗನೆ ಎದ್ದು ಹೊರತು ನಿಂತಾಗ ರಜನಿಗೆ  ತಿಳಿಯದ ಏನೋ ಒಂದು ಉತ್ಸಾಹ. ಹೋಟೆಲ್ ನಿಂದ ಅಂಕೊರ್ ವಾಟ್ ಕಡೆಗೆ ಕ್ಯಾಬ್ ಹೊರಟಿದೆ. ದಾರಿಯುದ್ದಕ್ಕೂ ಹಸಿರಿನ ತೋರಣ ಕಟ್ಟಿರುವಂತೆ ಕಾಣುತ್ತಿದ್ದ ಮರಗಿಡಗಳ ಸಾಲು ರಜನಿಯನ್ನು ಸ್ವಾಗತಿಸುತ್ತಿರುವಂತೆ ಕಾಣುತ್ತಿತ್ತು. ಅಂಕೊರ್ ವಾಟ್ ದೇವಸ್ಥಾನದ ಮುಖ್ಯ ಗೋಪುರ ತಲುಪುತ್ತಲೇ, ರಜನಿಗೆ ದಾರಿಯ ಎರಡೂ ಬದಿಯಲ್ಲಿದ್ದ ಕಲ್ಲಿನ ವಿಗ್ರಹಗಳಿಗೆ ಜೀವ ಬಂದು ಅವಳ ಕಡೆ ನೋಡುತ್ತಾ ಮಂದಹಾಸ ಬೀರಿ ತಲೆಬಾಗಿಸುತ್ತಿರುವಂತೆ ಭಾಸವಾಯಿತು. ದಾರಿಯುದ್ದಕ್ಕೂ ಬಿದ್ದಿದ್ದ ತರಗೆಲೆಗಳು, ಹೂವಿನ ಹಾದಿಯಂತೆ ಕಾಣಿಸಿತು. ಅಂಕೊರ್ ವಾಟ್ ದೇವಸ್ಥಾನದ ಬೃಹತ್ ಗೋಪುರಗಳ ನೆರಳಿನಲ್ಲಿ ಪ್ರವೇಶದ ಸೇತುವೆ, ತಿಳಿಯಾದ ನೀರಿನ ಮೇಲೆ ಮೇಘಗಳ ಪ್ರತಿಬಿಂಬ ಕಣ್ತುಂಬುವ ಸೌಂದರ್ಯ ಬಿಂಬಿಸುತ್ತಿತ್ತು. ನಮ್ಮ ಗೈಡ್ - "ಇದು ಖ್ಮೇರ್ ಸಾಮ್ರಾಜ್ಯದ ತೇಜಸ್ಸು. ಇಲ್ಲಿನ ಗೋಡೆಗಳಲ್ಲಿ  ಭಸ್ಮ, ಗಂಧಕ, ನೀಲಿ ಕಲ್ಲಿನಿಂದ ಮಾಡಿದ ಹಿಂದೂ ಸಂಪ್ರದಾಯದ ಪುರಾಣ ಇತಿಹಾಸ ತಿಳಿಸುವ ಅನೇಕ ಚಿತ್ರಗಳಿವೆ." ಎಂದು ಹೇಳುತ್ತಾ ನಮ್ಮನ್ನು ಒಳಗೆ ಕರೆದುಕೊಂಡು ಹೋದ. ನನಗೆ ಈ ಎಲ್ಲ ವಿಷಯಗಳು ಮೊದಲೇ ತಿಳಿದ ಹಾಗೆ, ನಾನು ವರ್ಷಾನುವರ್ಷಗಳ ಕಾಲ ಈ ಜಾಗದಲ್ಲೆಲ್ಲ ತಿರುಗಾಡಿದ್ದವಳ ಹಾಗೆ ಅನ್ನಿಸುತಿತ್ತು. ರಜನಿ ಕರ್ಣನಲ್ಲಿ "ನನಗೆ ಈ ದಾರಿ ಇಲ್ಲಿನ ಇತಿಹಾಸ ಎಲ್ಲ ತಿಳಿದ ಹಾಗೆ ಅನ್ನಿಸುತ್ತಿದೆ" ಅಂದಳು. ಮತ್ತೆ ಕರ್ಣ ನಕ್ಕು, ಸುಮ್ಮನೆ ಗೈಡ್ ಹೇಳುತ್ತಿರುವುದನ್ನು ಕೇಳಿಸಿಕೋ.." ಅಂತ ಮಾತು ಹಾರಿಸಿದ. 

ಅಂಕೊರ್ ಥಾಮ್ ಬಳಿ ಬಂದಾಗ, ಅಲ್ಲಿನ ಪ್ರವೇಶ ದ್ವಾರದ ಬಲಬದಿಯ ಕಲ್ಲಿನ ಕೆತ್ತನೆ ನೋಡಿದ ಕೂಡಲೇ "ಇದು ಸಮುದ್ರ ಮಥನದ ದೃಶ್ಯ. ಇಲ್ಲಿ ನಮ್ಮವರು ಕಷ್ಟ ಕಾಲದಲ್ಲಿ ಗೋಧಿ ಸಂಗ್ರಹಿಸುತ್ತಿದ್ದರು." ಅಂತ ಖ್ಮೇರ್-ಕನ್ನಡ ಮಿಶ್ರಿತ ಭಾಷೆಯಲ್ಲಿ ಯಾರೋ ಪಿಸುಗುಟ್ಟಿದಂತೆ ರಜನಿಗೆ ಅನಿಸಿತು. ರಜನಿ ಅದನ್ನು ಕರ್ಣನಿಗೆ ಹೇಳಿದಳು. ಗೈಡ್ ಅದು ನಿಜ ಎಂದು ಹೇಳಿದಾಗ ಕರ್ಣನಿಗೆ ಅಚ್ಚರಿ ಆಯಿತು. ಮಂಟಪದೊಳಗೆ ಪ್ರವೇಶಿಸಿದಂತೆ, ತಂಪಾಗಿದ್ದ ಗಾಳಿ ಬಿಸಿಯಾಗತೊಡಗಿತು. ರಜನಿ ಮೂಗಿಗೆ ಶ್ರೀಗಂಧದ ಸುಗಂಧ, ಪಾರಿಜಾತ, ತಾವರೆ ಪುಷ್ಪಗಳ ಪರಿಮಳ ಬರತೊಡಗಿತು. ಸಮುದ್ರ ಮಥನದ ದೃಶ್ಯ, ಅಸುರ-ದೇವರುಗಳ ಜಗ್ಗಾಟ, ಇತ್ಯಾದಿಗಳ ಕೆತ್ತನೆಗಳನ್ನು ಸ್ಪರ್ಶಿಸಿದಾಗ, ಒಂದು ರೀತಿಯ ವಿದ್ಯುತ್ ಹರಿದಂತಾಯಿತು. ರಜನಿಯ ನಡುಗೆ ನಿಧಾನಿಸಿತು. ರಜನಿ ಕಿವಿಗೆ "ಮ್ಹಕ್ಸಅತ್ರೇಯಿ, ಎಉಂಗ್ ಟೀಅಂಗೊಲಾಸಕ್ನೆಯಾ ಕಂಪೌಂಗ್ ಎಂಗ್ಚಾಮ್ ಅನಕ್ (ಮಹಾರಾಣಿ, ನಾವೆಲ್ಲರೂ ನಿಮಗಾಗಿ ಕಾಯುತ್ತಿದ್ದೇವೆ.)" ಅಂತ ಕೂಗಿದ ಹಾಗೆ ಕೇಳಿಸಿತು. ರಜನಿ ದೇಹವೆಲ್ಲ ಹಗುರ ಆದ ಹಾಗೆ ಆಗಿ, ಅಲ್ಲೇ ಕುಸಿದು ಕುಳಿತಳು. "ಮೇಡಂ, ಆರ್ ಯು ಓಕೆ?" ಅಂತ ಗೈಡ್ ನೀರಿನ ಬಾಟಲಿಯನ್ನು ರಜನಿ ಕೈಗಿತ್ತ. ಮಕ್ಕಳು ಸೆಲ್ಫೀ ತೆಗೆದುಕೊಳ್ಳುವಲ್ಲಿ ತೊಡಗಿಸಿಕೊಂಡಿದ್ದರು. "ಕೋಮ್ ಕ್ಲ್ಯಾಚ್, ಖಾಣ್ಹೋಮ್ ತ್ರಾಲ್ಬ್ ಮೊಕ್ವಿನ್ಚ್ ಹಎಯ್" ಅಂತ ರಜನಿ ಗ್ರಾಮೀಣ ಖ್ಮೇರ್ ಭಾಷೆಯಲ್ಲಿ ಉಲಿದಳು. "ಹೆದರಬೇಡ. ನಾನು ಹಿಂದಿರುಗಿ ಬಂದಿದ್ದೇನೆ" ಅಂತ ಅದರರ್ಥ. ಅದನ್ನು ಅವಳ ಬಾಯಿಂದ ಕೇಳಿದ ಗೈಡ್ ಗೆ ಅಚ್ಚರಿಯಾಗಿ ಗಾಬರಿಗೊಂಡ. "ರಜನಿ, ಸ್ಟಾಪ್ ಇಟ್. ಸುಮ್ಮನೆ ಭಯ ಹುಟ್ಟಿಸಬೇಡ." ಅಂತ ಕರ್ಣ ಹೇಳಿದ.

ಅಷ್ಟರಲ್ಲಿ ಸೆಲ್ಫೀ ತೆಗೆದುಕೊಂಡ ಮಕ್ಕಳು ರಜನಿ ಕಡೆ ಓದಿ ಬಂದು, "ಅಮ್ಮಾ, ಇಲ್ಲಿ ನೋಡು ವಿಷ್ಣು ದೇವರ ವಿಗ್ರಹ" ಅಂದರು.  ಅಲ್ಲೇ ಪಕ್ಕದಲ್ಲಿ, ರಾಣಿ ಇಂದ್ರಾದೇವಿಯ ವಿಗ್ರಹವನ್ನು ಗೈಡ್ ತೋರಿಸಿದ. ಮಕ್ಕಳು ಆ ವಿಗ್ರಹ ನೋಡುತ್ತಲೇ, "ಈ ವಿಗ್ರಹದ ಮುಖ ಕಣ್ಣು ನೋಡು ಅಮ್ಮನ ಹಾಗೆ ಇದೆ" ಅಂದರು. ಇಂದ್ರಾದೇವಿ ಬುದ್ಧಿವಂತಿಕೆ, ಕೃಷಿ ಮತ್ತು ರಾಜ್ಯ ವ್ಯವಹಾರಗಳ ಮೇಲಿನ ಪ್ರಭಾವಕ್ಕೆ ಹೆಸರುವಾಸಿಯಾಗಿದ್ದಳು. ಸಾಹಿತ್ಯದಲ್ಲಿ ಆಸಕ್ತಿ ಇದ್ದ ಅವಳು ಹಲವಾರು ಕವಿತೆಗಳನ್ನು ರಚಿಸಿದ್ದಳೆಂದೂ ಅವಳನ್ನು "ಕಾಂಬೋಡಿಯಾದಲ್ಲಿ ಅತ್ಯಂತ ಹಳೆಯ ಮಹಿಳಾ ಕವಿ" ಎಂದು ಪರಿಗಣಿಸಲಾಗಿದೆ. ಹಾಗೆ ಮುಂದೆ ನಡೆದಾಗ, ಪಶ್ಚಿಮ ದ್ವಾರದ ಬಳಿ ಸಣ್ಣದೊಂದು ಮಂಟಪದ ಒಳಗೆ ಕಾಲಿಟ್ಟಾಗ, ಅಲ್ಲೇ ಬಿದ್ದಿರುವ ಒಂದು ಒಣಗಿದ ರೀತಿಯ ಹೂವು ರಜನಿ ಕಣ್ಣಿಗೆ ಬಿತ್ತು. ಅದನ್ನು ಎತ್ತಿಕೊಂಡು, "ಇದು ನಮ್ಮ ಮನೆ ದೇವರಿಗೆ ಅರ್ಪಿಸುತ್ತಿದ್ದ ಹೂವಲ್ಲವೇ?" ಅಂತ ಕೇಳಿದಳು. ಆಗ ಅವಳೆದುರಿಗೆ ನಿಂತಿದ್ದ ಸ್ಥಳೀಯ ವೃದ್ಧನೊಬ್ಬ - "ನೀವು ಇಲ್ಲಿನವರೇನಾ? ಈ ಹೂವು ಇಲ್ಲಿ ಬಿಟ್ಟರೆ ಬೇರೆ ಯಾವ ಕಡೆಯೂ ಆಗುವುದಿಲ್ಲ. ಇದು ಇಲ್ಲಿಯ ವಿಶೇಷ ಹೂವು" ಅಂತ ಖ್ಮೇರ್ ಭಾಷೆಯಲ್ಲಿಯೇ ಹೇಳಿದ್ದನ್ನು ಗೈಡ್ ಆಂಗ್ಲ ಭಾಷೆಗೆ ಅನುವಾದಿಸಿದ. ಅವರ ಭಾಷೆಯಲ್ಲೇ ಹೇಳಿದ್ದು ರಜನಿಗೆ  ಅರ್ಥವಾಗಿದ್ದು ಸೋಜಿಗ. ರಜನಿ ಉತ್ತರ ಕೊಡದೆ, ಆ ಒಣಗಿದ ಹೂವನ್ನು ಕೈಯಲ್ಲೇ ಹಿಡಿದುಕೊಂಡು ಕಣ್ಣು ಮುಚ್ಚಿದಳು. ಅವಳ ಮನಸ್ಸಿನಲ್ಲೇ, ಅಜ್ಞಾತ ಭಾಷೆಯ ಪದ್ಯವೊಂದು ತುಟಿಗಳಲ್ಲಿ ಮಿಡಿಯಿತು. ಅದನ್ನು ಕೇಳಿದ ವೃದ್ಧ, "ಇದು ನಿಮಗೆ ಹೇಗೆ ಗೊತ್ತು. ಇದು ರಾಣಿ ಇಂದ್ರಾದೇವಿ ರಚಿಸಿದ್ದ ಕವಿತೆ" ಅಂತ ಹೇಳಿದ. ಅವನ ಮಾತುಗಳನ್ನು ಅನುವಾದಿಸಿದ ಗೈಡ್ ಗೂ, ಕರ್ಣ ಹಾಗೂ ಮಕ್ಕಳಿಗೂ ಆಶ್ಚರ್ಯವಾಯಿತು. ರಜನಿ ಏನೂ ಹೇಳದೆ, ಮುಂದೆ ನಡೆದಳು. ಈಗ ಅವಳಿಗೆ ಭಯವೂ ಇರಲಿಲ್ಲ, ಮುಜುಗರವೂ ಆಗಲಿಲ್ಲ. ತನ್ನ ಹಿಂದಿನ ಜನ್ಮದ ಅರಿವು ಮೂಡಿದಂತೆ, ಆತ್ಮವಿಶ್ವಾಸದಿಂದ ಮುನ್ನಡೆದಳು. 

***

ಅಲ್ಲಿಂದ ಅವರೆಲ್ಲರೂ ತಾ ಫ್ರೋಮ್ ಗೆ ಹೋದರು. ಅಲ್ಲಿನ ಗೋಡೆಗಳನ್ನು ಚುಂಬಿಸಿ ಬಿಗಿಯಾಗಿ ಅಪ್ಪಿಕೊಂಡಂತಿದ್ದ ಮರಗಳ ಬೇರುಗಳು, ಸುಂದರವಾಗಿ ಆವರಿಸಿಕೊಂಡ ಮರಗಳ ನಡುವೆ ಇದ್ದ ಮಂಟಪಗಳನ್ನು ನೋಡಿ ಕಣ್ತುಂಬಿಸಿಕೊಳ್ಳುತ್ತಿರುವಾಗ, ರಜನಿ ಮನಸ್ಸಲ್ಲಿ ಮತ್ತೆ ಅದೇ ಭಾವನೆಗಳ ಚೆಲ್ಲಾಟ. ಹಸಿರು ಬಳ್ಳಿ ಸುತ್ತುವರಿದಿದ್ದ ಆ ಮಂಟಪಗಳ ಸೌಂದರ್ಯ ಮನಸ್ಸಿಗೆ ಹಿತ ನೀಡುವಂತಿತ್ತು. ಅಷ್ಟರಲ್ಲಿ ಸ್ಥಳೀಯ ಹೆಂಗಸೊಬ್ಬಳು, ಕಬ್ಬಿಣ ಹಾಗೂ ಸ್ಥಳದ ಲೋಹಗಳಿಂದ ತಯಾರಿಸಿದ ಉಂಗುರಗಳ ಬುಟ್ಟಿಯೊಂದನ್ನು ಹಿಡಿದುಕೊಂಡು ಬಂದು, ರಜನಿಯನ್ನು ನೋಡುತ್ತಲೇ, "ಮ್ಹಕ್ಸಅತ್ರೇಯಿ, ಮ್ಹಕ್ಸಅತ್ರೇಯಿ (ಮಹಾರಾಣಿ, ಮಹಾರಾಣಿ)" ಅಂತ ಕೂಗಿಕೊಂಡು ಓಡಿ ಓಡಿ  ಬಂದಳು. ಅಲ್ಲಿನ ರಾಜ ಚಿಹ್ನೆಗಳನ್ನೊಳಗೊಂಡ ಉಂಗುರವೊಂದನ್ನು ಆರಿಸಿ, ಹಸಿರು, ಕೆಂಪು ನೀಲಿ ಬಣ್ಣಗಳ ದಾರದಿಂದ ತಯಾರಿಸಿದ ಮಣಿಕಟ್ಟಿನ ಪಟ್ಟಿಯೊಂದನ್ನು ತೆಗೆದು, ತನ್ನ ಎರಡೂ ಕಣ್ಣುಗಳಿಗೆ ಒತ್ತಿ, ರಜನಿ ಹೃದಯ ಭಾಗದಲ್ಲಿರಿಸಿ, "ನೀನ್ಯಾರೆಂದು ಜ್ಞಾಪಿಸಿಕೋ" ಎಂಬಂತೆ ಕಣ್ಸನ್ನೆ ಮಾಡಿ ಅವಳ ಕೈಗೆ ಆ ದಾರವನ್ನು ಕಟ್ಟಿದಳು. ಉಂಗುರವನ್ನೂ ತೊಡಿಸಿದಳು. "ಈಗ ನೋಡು ದುಡ್ಡು ಕೇಳ್ತಾಳೆ" ಅಂತ ಕರ್ಣ ಹೇಳಿದ. ಆದರೆ ಆ ಹೆಂಗಸು ದುಡ್ಡು ಕೇಳದೆ, "ಇನ್ನೆಷ್ಟು ದಿನ ಇದ್ದಿರಮ್ಮ" ಅಂತ ಖ್ಮೇರ್ ಭಾಷೆಯಲ್ಲಿ ಕೇಳಿದಳು. ರಜನಿ "ಎರಡು ದಿನ" ಎಂಬಂತೆ ಕೈ ಸನ್ನೆ ಮಾಡಿದಳು. "ಬಾಂತೇಯ್ ಸ್ರೀ" ಅಂತ ಒಂದು ಜಾಗದ ಹೆಸರು ಹೇಳಿ ಆ ಹೆಂಗಸು ಅಲ್ಲಿಂದ ಹೊರಟು ಹೋದಳು. 

ಹೋಟೆಲ್‌ಗೆ ಹಿಂದಿರುಗುವಾಗ ಲಾಬಿಯಲ್ಲಿ ನುಡಿಸುತ್ತಿದ್ದ ಪಿಯಾನೋ ಧ್ವನಿ ಪ್ರತಿಧ್ವನಿಸುತ್ತಿತ್ತು. ಮೈ ಮರೆತು ನಿಂತಿದ್ದ ರಜನಿ ಕಂಡು ಕರ್ಣ ಕೇಳಿದ: “ಯಾಕೋ ನೀನು ಇವತ್ತು… ನೀನಾಗಿಲ್ಲ. ಏನೋ ಬೇರೆ ರೀತಿ ವರ್ತಿಸುತ್ತಿದ್ದಿ.” ಉತ್ತರವಾಗಿ ರಜನಿ, “ನಾನು ಯಾರೋ…” ಎಂದು ನಕ್ಕಳು. “ಬನ್ನಿ. ನಾಳೆ ಬಾಂತೇಯ್ ಸ್ರೀಗೆ ಹೋಗೋಣ.”. ಅಂದಿನ ತಿರುಗಾಟದಿಂದ ಸುಸ್ತಾಗಿ ಎಲ್ಲರೂ ಬೇಗನೆ ನಿದ್ದೆಗೆ ಜಾರಿದರು. 

***

ಬಾಂತೇಯ್ ಸ್ರೀ  - ಗುಲಾಬಿ ಗೋಲ್ಡನ್ ಬಣ್ಣದ ಮರಳುಗಲ್ಲಿನಿಂದ ಕಟ್ಟಿಸಿದ ದೇವಾಲಯ. ಸಣ್ಣ ದೇವಾಲಯವಾದರೂ ಸುಂದರವಾದ ಕವಿತೆಯಲ್ಲಿ ವರ್ಣಿಸಲು ಹೇಳಿ ಮಾಡಿದ ದೇವಾಲಯ. ನಡೆದುಕೊಂಡು ಹೋಗುವ ದಾರಿಯುದ್ದಕ್ಕೂ, ಪ್ರಕೃತಿ ಸಹಜವಾಗಿ ನಿರ್ಮಿತವಾದ ಹೂಗಳ ತೋರಣ, ರಜನಿ ನಡೆಯುವ ದಾರಿಯುದ್ದಕ್ಕೂ ಪುಷ್ಪವೃಷ್ಟಿ ಮಾಡಿ ಬರಮಾಡಿಕೊಂಡಂತೆ ಭಾಸವಾಗುತ್ತಿತ್ತು. ದೇವಾಲಯದೊಳಗೆ ಸೂರ್ಯನ ಕಿರಣ ಚಿನ್ನದ ಮುಕುಟದಲ್ಲಿ ಅಲಂಕರಿಸಿದಂತೆ ಕಾಣಿಸುತ್ತಿತ್ತು. ರಾಣಾ ಆಟವಾಡುತ್ತ ಒಂದೆಡೆ ಕುಳಿತುಕೊಳ್ಳಲು ಹೋದಾಗ ರಜನಿ, ಅಲ್ಲೆಲ್ಲ ಕುಳಿತುಕೊಳ್ಳಬಾರದು. ಜೋಕೆ" ಅಂದಳು. ಗೈಡ್ ಅಲ್ಲೇ ನೋಡುತ್ತಿದ್ದವನು, "ಹೌದು ಮೇಡಂ, ಆ ಜಾಗದಲ್ಲಿ ಕುಳಿತುಕೊಳ್ಳುವುದು ಅಮಾನ್ಯವಾಗಿದೆ. ಹಿಂದಿನ ಯುಗದಲ್ಲಿ, ಆ ಜಾಗದಲ್ಲಿ, ದೇವರನ್ನು ಇರಿಸಿ ಪೂಜಿಸಲಾಗುತ್ತಿತ್ತು." ಅಂದನು. ರಾಣಾ, ರಾಖಿ ಹಾಗೂ ಕರ್ಣ ಆಶ್ಚರ್ಯಗೊಂಡು ರಜನಿಯನ್ನೊಮ್ಮೆ ಪ್ರಶ್ನಾರ್ಥಕವಾಗಿ ನೋಡಿದರು. "ಅಮ್ಮಾ, ನಿಂಗೆ ಇದೆಲ್ಲ ಹೇಗೆ ಗೊತ್ತು?" ಅಂತ ರಾಖಿ ಪ್ರಶ್ನಿಸಿದಳು. ಅಷ್ಟು ಹೊತ್ತಿಗೆ ರಜನಿ ಕಣ್ಣು, ಮುಖ್ಯದ್ವಾರದ ಕಂಬಗಳ ನಡುವೆ ಇದ್ದ ಅಕ್ಷರಗಳ ಕಡೆ ಹೋಯಿತು. ಭಾಷೆ ಬೇರೆ ಆದರೂ, ರಜನಿ ಅದನ್ನು ಓದಿದಳು. "ಮಲ್ಲಿಕಾ" ಅಂತ ಹೇಳುತ್ತಾ ಕುಸಿದಳು. 

ಅವಳ ಕಣ್ಣೆದುರಿಗೆ ದೃಶ್ಯ ಬಂತು - ಬಿಳಿ ಬಣ್ಣದ ಮಹಾರಾಣಿಯರು ಹಾಕುವಂಥ ಬಟ್ಟೆ ಧರಿಸಿಕೊಂಡು ತಾನು ಮಂಟಪದಲ್ಲಿ ಕುಳಿತಿದ್ದಳು. ಅವಳ ಎದುರಿಗೆ ಒಂದು ಪುಟ್ಟ ಹುಡುಗಿ ಆಟವಾಡುತ್ತಿದ್ದಳು. "ಮಲ್ಲಿಕಾ, ಇಲ್ಲಿ ಬಾ" ಅಂತ ಆ ರಾಣಿ ಕೂಗಿದಳು. ಪ್ರೀತಿಯಿಂದ ಅಪ್ಪಿಕೊಂಡು ಅವಳಿಗೆಂದು ತಾನೇ ಕೈಯಾರೆ ತಯಾರಿಸಿದ ಕೆಂಪು ಮಣಿಗಳ ಹಾರ, ಕೆಂಪು ಹೂಗಳ ಮಾಲೆಯಿಂದ ಅವಳ ಕೇಶವನ್ನು ಅಲಂಕರಿಸಿದಳು. ಅಷ್ಟರಲ್ಲಿ ಹೊರಗೆ ಆಕ್ರೋಶದಿಂದ ಮುಗಿಬಿದ್ದ ಜನಜಂಗುಳಿ, ಕತ್ತಿಯಿಂದ ಎದುರಿದ್ದ ಎಲ್ಲರನ್ನೂ ಇರಿಯಲು ಪ್ರಾರಂಭಿಸಿದರು. 

ಅಷ್ಟರಲ್ಲಿ ಕರ್ಣ ಬಂದು, ಅವಳ ಕೈ ಹಿಡಿದು, "ಬಾ ಹೊರಗೆ. ಇಲ್ಲಿ ಕುಳಿತುಕೋ." ಅಂದ. ಗೈಡ್ ನೀರು ಕೊಟ್ಟು, "ಆರ್ ಯು ಫೈನ್?" ಅಂತ ಪ್ರಶ್ನಿಸಿದ. ರಜನಿ - "ಯಸ್. ನಾನು ಹುಷಾರಾಗಿದ್ದೇನೆ. ನನಗೆ ಏನೋ ಎಲ್ಲ ನೆನಪಾಗತಿದೆ" ಅಂತ ಹೇಳಿ ಕಣ್ಣೀರಿಳಿಸಿದಳು. ಅದಕ್ಕೆ ಗೈಡ್ ಗಾಬರಿಗೊಂಡು, "ಇಲ್ಲಿನ ರಾಣಿ ಇಂದ್ರಾದೇವಿಗೆ ಮಕ್ಕಳಿರಲಿಲ್ಲ. ಹಾಗಾಗಿ ಅವಳು ಅನೇಕ ಹುಡುಗಿಯರನ್ನು ತನ್ನ ಮಕ್ಕಳಂತೆ ಸಾಕಿದ್ದಳು. ಅದರಲ್ಲಿ ಅವಳಿಗೆ ಅತಿ ಪ್ರಿಯಳಾದವಳು ಮಲ್ಲಿಕಾ." ಅಂದಾಗ ಕರ್ಣನ ಕಣ್ಣು ಆಶ್ಚರ್ಯದಿಂದ ಅರಳಿತು.  

“ಇಲ್ಲಿ ಯಾರಾದರೂ… ಈ ದೇವಾಲಯದ ಹಿಂದಿನ ಕಥೆ… ರಾಜಕುಮಾರಿ ಮಲ್ಲಿಕಾಳ ಬಗ್ಗೆ ಹೇಳ್ತೀರಾ?” ಎಂದು ರಜನಿ ಅಂಗಲಾಚಿದಳು. ಆಗ ಅಲ್ಲೇ ಇದ್ದ ಉಂಗುರ ನೀಡಿದ್ದ ಹೆಂಗಸು ಓಡಿ ಬಂದಳು. ಅವಳಿಗೆ ತಿಳಿದ ಖ್ಮೇರ್ ಮಿಶ್ರಿತ ಇಂಗ್ಲಿಷ್ ಭಾಷೆಯಲ್ಲಿ ಕಥೆ ಹೇಳಿದಳು. "ಆ ದಿನ ರಾಣಿ ತನ್ನ ಪ್ರೀತಿಯ ರಾಜಕುಮಾರಿ ಮಲ್ಲಿಕಾಳ ಜೊತೆ ಇದೇ  ಜಾಗದಲ್ಲಿದ್ದಾಗ, ಹಲವಾರು ರೊಚ್ಚಿಗೆದ್ದ ಜನರ ದಾಳಿ ನಡೆಯಿತು. ರಾಣಿ ತನ್ನ ಶಕ್ತಿ ಎಲ್ಲವನ್ನೂ ಉಪಯೋಗಿಸಿ ಯುದ್ಧ ಮಾಡಿದರೂ, ಮಲ್ಲಿಕಾಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯುದ್ಧ ನಿಂತುಹೋದರೂ, ಮಲ್ಲಿಕಾಳ ದೇಹ ಮಾತ್ರ ಯಾರಿಗೂ ಸಿಗಲಿಲ್ಲ. ಆ ಕೊರಗಿನಲ್ಲಿ ರಾಣಿ ತನ್ನ ಜೀವಮಾನ ಇಡೀ ಕಳೆದಿದ್ದಳು." ಈಗ ರಜನಿಗೆ ತನ್ನ ಮನಸ್ಸಿನೊಳಗೆ ಆಗುತ್ತಿದ್ದ ದುಗುಡ, ಭಾವನೆಗಳಿಗೆ ಅರ್ಥ ದೊರೆತಂತಾಯಿತು. 

***

ಟೋನ್‌ಲೆ ಸಾಪ್ ಕೆರೆಯ ತೀರದಲ್ಲಿ ಸಂಜೆ ಎಲ್ಲರೂ ಕುಳಿತಿದ್ದರು. ತಾಮ್ರದ ಬಣ್ಣದಲ್ಲಿ ಹೊಳೆಯುತ್ತಿದ್ದ ಸೂರ್ಯನ ಕಿರಣಗಳು, ನೀರಿನ ಅಲೆಗಳಲ್ಲಿ ಬೆಳ್ಳಿಯ ಬಣ್ಣದ ಬಳೆಗಳನ್ನು ಸೃಷ್ಟಿಸುವಂತೆ ಕಾಣುತ್ತಿತ್ತು. ಸೂರ್ಯಾಸ್ತವಾದ ಬಾಳಿಕೆ ಬೋಟ್ ಮೂಲಕ  ಹೋಟೆಲಿಗೆ ಹಿಂದಿರುಗುತ್ತಿದ್ದ ವೇಳೆಗೆ, ಕರ್ಣ ರಜನಿಯ ಗೊಂದಲಗಳಿಗೆ ಉಪ್ಪು ಸುರಿಯುವಂತೆ, "ನೀನು ಯಾಕೆ ಮಲ್ಲಿಕಾಳನ್ನು ಸಾಯಲು ಬಿಟ್ಟೆ?" ಅಂತ ಪ್ರಶ್ನಿಸಿದ. ಅಲ್ಲೇ ಇದ್ದ ರಾಖಿ ಮಾತ್ರ, "ಅಮ್ಮಾ, ನೀನು ನಿಜಕ್ಕೂ ಗ್ರೇಟ್. ಈ ಲವ್ ಯು ಅಮ್ಮಾ.." ಅಂತ ರಜನಿಯನ್ನು ಅಪ್ಪಿ ಹಿಡಿದಳು. 

ಆ ದಿನ ರಾತ್ರಿ ರಜನಿಗೆ ನಿದ್ದೆ ಬೀಳಲಿಲ್ಲ.  ಹಾಗೆಯೇ ಹೋಟೆಲ್ನಿಂದ ಹೊರಗೆ ಬಂದು ಹೋಟೆಲ್ ಗೇಟ್ ನ ಪಕ್ಕದಲ್ಲಿದ್ದ ಸಣ್ಣ ಪಗೋಡ ನೋಡಿದಳು. ಅಲ್ಲಿ ಮಲ್ಲಿಗೆ ಕಂಪು, ಕರ್ಪೂರದ ಬೆಳಕಿನ ಮಿಶ್ರಣ. ಅದರೊಳಗೆ ಒಬ್ಬ ವೃದ್ಧ ಭಿಕ್ಷುಕಿ ಹರಿದ ಕೊಳೆಯಾದ ಬಟ್ಟೆ, ಚಿಕ್ಕ ಮಣ್ಣಾದ ಚೀಲ ಹಿಡಿದುಕೊಂಡು "ಖ್ಮೇರ್?" ಅಂತ ಕೇಳಿದಳು. ರಜನಿ ಇಲ್ಲ ಎಂಬಂತೆ ತಲೆ ಅಲ್ಲಾಡಿಸಿದಳು. ಕೈ ತೋರಿಸುವಂತೆ ಸೂಚಿಸಲು, ರಜನಿ ತನ್ನ ಬಲಗೈಯನ್ನು ಅವಳೆಡೆಗೆ ಚಾಚಿದಳು. ತನ್ನ ಚೀಲದೊಳಗಿಂದ ಒಂದು ಮಂತ್ರದಂಡವನ್ನು ತೆಗೆದು ರಜನಿ ಕೈಯಲ್ಲಿ ಆಡಿಸಿ, "ಜನ್ಮ ಮೂಲಕ್ಕೆ ಯಾವತ್ತೂ ದಾರಿ ಇರುತ್ತದೆ" ಅಂತ ಖ್ಮೇರ್ ಭಾಷೆಯಲ್ಲಿ ಹೇಳಿದಳು. ರಜನಿಗೆ  ಅದು ಕನ್ನಡಾನುವಾದವಾದಂತೆ ಮನಸ್ಸಿಗೆ ಕೇಳಿಸಿತು. ರಜನಿ ಕಣ್ಣು ಹಾಗೆ ಮುಚ್ಚಿಕೊಂಡಿತು. "ನಾನು ಯಾರು?" ಎಂಬ ಪ್ರಶ್ನೆ ಬಂದಾಗ - "ಅದು ನಿನಗೆ ಗೊತ್ತಿದೆ" ಅಂತ ಆ ಭಿಕ್ಷುಕಿ ಹೇಳಿ ಅಲ್ಲಿಂದ ಹೊರಟು ಹೋದಳು. 

ಹೋಟೆಲ್ ರೂಮಿಗೆ ಹಿಂದಿರುಗಿದ ರಜನಿಗೆ,  ರಾತ್ರಿ ಕನಸಿನಲ್ಲಿ ಸ್ಪಷ್ಟವಾಗಿ ಚಿತ್ರಣ ಬಂದಿತ್ತು. ಪಾರಿಜಾತ, ಮಲ್ಲಿಗೆಯ ಪರಿಮಳಗಳ ನಡುವೆ, ಮಲ್ಲಿಕಾಳ ಜೊತೆ ತಾನಿದ್ದಾಗ, ಅಚಾನಕ್ ಆಗಿ ಮುಗಿಬಿದ್ದ ರೊಚ್ಚಿಗೆದ್ದ ಗುಂಪು. ಅವಳೆಷ್ಟೇ ಯುದ್ಧ ಮಾಡಿದರೂ, ಮಲ್ಲಿಕಾಳನ್ನು ಅವಳಿಂದ ದೂರ ಕಿತ್ತುಕೊಂಡು ಹೋಗಿ, ಏನು ಮಾಡಿದರು ಎಂಬುದು ಅವಳಿಗೆ ತಿಳಿಯಲಿಲ್ಲ. ಬೀಸಿದ ಕತ್ತಿಯಿಂದ ಅವಳ ಕೈ ಹಾಗೂ ಸೊಂಟಕ್ಕೆ ಪೆಟ್ಟು ಬಿದ್ದು, ಚರ್ಮ ಒಡೆದು ಹರಿಯುತ್ತಿರುವ ರಕ್ತದ ಬಿಸಿಯಷ್ಟೇ ಭಾಸವಾಗುತ್ತಿದೆ. ತಾನೆಲ್ಲಿದ್ದೇನೆ ಅನ್ನುವ ಅರಿವು ಅವಳಿಗಿರಲಿಲ್ಲ. 

"ರಜನಿ.. ರಜನಿ..." ಅನ್ನುವ ಕೂಗು ಕೇಳಿಸಿ ಎಚ್ಚರವಾಯಿತು. ಮೈಯೆಲ್ಲಾ ಬೆವರಿ ದೊಡ್ಡದಾಗಿ ಶ್ವಾಸ ಬಿಡುತ್ತಿದ್ದ ರಜನಿಗೆ ಇದು ಕೇವಲ ಕನಸು ಎಂದು ಅರಿವಾಯಿತು. ಗಡಿಯಾರ ನೋಡಿದರೆ, ಗಂಟೆ ಮೂರು. ಎದ್ದು ತನ್ನ ಡೈರಿಯಲ್ಲಿ ತನಗನ್ನಿಸುತ್ತಿದ್ದುದನ್ನು ಬರೆದಳು.  

***

ಮರುದಿನ ಬೆಳಿಗ್ಗೆ, ಕಾಂಬೋಡಿಯಾ ದೇಶದಲ್ಲಿನ ಕೊನೆ ದಿನ. ಶಾಪಿಂಗ್ ಮಾಡಲೆಂದು ಮೀಸಲಿದ್ದ ಆ ದಿನ, ಅಂಗಡಿಗಳ ಸಾಲಿನಲ್ಲಿ  ರಜನಿ ಕಣ್ಣಿಗೆ ಒಂದು ಹಳೆಯ ಕಾಲದ ಆಭರಣಗಳನ್ನು ಪಾಲಿಶ್ ಮಾಡಿ ಮಾರುತ್ತಿದ್ದ ಕೌಂಟರ್ ಕಂಡಿತು. ಅಲ್ಲಿ ಒಂದು ಸುಂದರವಾದ ಕೈಬಳೆ ಕಣ್ಣಿಗೆ ಬಿತ್ತು. ಅದರ ಒಳಭಾಗದಲ್ಲಿ ಖ್ಮೇರ್ ಭಾಷೆಯಲ್ಲಿನ ಸಣ್ಣ ಸಣ್ಣ ಅಕ್ಷರಗಳು. ಅಂಗಡಿಯವಳು, "ಇದು ಹಳೆಯ ಕಾಲದ್ದು. ಪಾಲಿಶ್ ಮಾಡಿ ಇರಿಸಿದ್ದು" ಅಂದಳು. ಕರ್ಣ "ಸುಮ್ಮನೆ ಮೋಸ ಮಾಡ್ತಾರೆ. ಹಳೆ ಕಾಲದ ವಸ್ತು ಹೀಗೆ ಸಿಗುತ್ತವೆಯೇ?" ಅಂದ. ರಜನಿಗೆ ಅದನ್ನು ನೋಡಿದಾಕ್ಷಣ ಏನೋ ಒಂದು ಬಾಂಧವ್ಯದ ಅನಿಸಿಕೆ. ಅದೇ ಬೇಕು ಅಂತ ಹಠ ಮಾಡಿ ತೆಗೆದುಕೊಂಡಳು. ಗೂಗಲ್ ನಲ್ಲಿ ಹುಡುಕಿದಾಗ, ಅದು ರಾಣಿ ಇಂದ್ರಾದೇವಿ ಹಾಕಿಕೊಂಡಿದ್ದ ಬಳೆಗಳಲ್ಲಿ ಒಂದು ಎಂದು ತಿಳಿಯಿತು. ಖ್ಮೇರ್ ಲಿಪಿಯಲ್ಲಿ ಆ ಬಳೆಯ ಹಿಂಬದಿಯಲ್ಲಿ ರಾಜವಂಶದ ಹೆಸರಿತ್ತು. ಒರಿಜಿನಲ್ ಆಗಿರದೆ ಇರಬಹುದು. ಆದರೆ, ಅದನ್ನು ಹಾಕಿಕೊಂಡು ನೋಡಿದರೆ, ರಜನಿ ಕೈಗೆಂದೇ ಮಾಡಿಸಿದ ರೀತಿ ಅಳತೆಗೆ ಸರಿಯಾಗಿತ್ತು.  ರಜನಿ ಮನಸ್ಸಿಗೆ ಏನೋ ಒಂದು ರೀತಿಯ ತೃಪ್ತಿ.  "ಕರ್ಣ, ನನ್ನನ್ನು ಕ್ಷಮಿಸು. ನನ್ನೊಳಗಿನ ಕಲ್ಪನೆಗಳು, ನೆನಪುಗಳು, ಕಥೆಗಳು ನಿನಗೆ ಅಮಾನ್ಯ ಅನಿಸಬಹುದು. ಆದರೆ, ಇದು ಸತ್ಯ. ಹಿಂದೆ ನನ್ನ ಯಾವುದೋ ಪೂರ್ವಜನ್ಮದಲ್ಲಿ ನಡೆದಿರುವ ಕಹಿ ಅನುಭವ. ಈ ಬಳೆಗಳು ನನ್ನ ಕೈಗೆ ಸರಿಯಾಗಿ ಹೊಂದುವಂತಿರುವಾಗ, ನನ್ನ ಮನಸ್ಸಿನಲ್ಲಿ ಭ್ರಮೆ ಅಂತ ನಿಮಗನ್ನಿಸಿದ್ದರೂ ನನಗೆ ಅನುಭವವಾದ ಎಲ್ಲ ರೀತಿಯ ಅನುಭವಗಳು ಹಿಂದಿನ ಕಥೆಯನ್ನೇ ಜ್ಞಾಪಿಸಿದಂತಿತ್ತು. ಈ ದೇಶದೊಂದಿಗೆ, ಈ ದೇವಾಲಯದೊಂದಿಗೆ, ಆ ಮಲ್ಲಿಕಾ ಎಂಬ ಹುಡುಗಿಯೊಂದಿಗೆ ಏನೋ ಒಂದು ಹೇಳಲಾರದ ಬಾಂಧವ್ಯ ನನಗಿದೆ ಎನ್ನುವುದು ಅಷ್ಟೇ ಸತ್ಯ." ಅಂತ ರಜನಿ ಕರ್ಣನಿಗೆ ಮನದಟ್ಟು ಮಾಡಿದಳು. ಕರ್ಣನಿಗೂ ಅವಳು ಹೇಳುತ್ತಿರುವ ವಿಷಯದಲ್ಲಿ ಏನೋ ಒಂದು ರೀತಿಯ ಸತ್ಯ ಇದೆ ಅಂತನಿಸಿತು. ಆದರೂ ಅವನು ನಂಬುವವನಲ್ಲ.  

ನೋಡುನೋಡುತ್ತಲೇ, ವಾಪಾಸ್ ಭಾರತಕ್ಕೆ ಹೊರಡುವ ಸಮಯ ಬಂದೇ ಬಿಟ್ಟಿತು. ವಿಮಾನ ನಿಲ್ದಾಣ. ಚೆಕ್–ಇನ್ ಸಾಲಿನಲ್ಲಿ  ರಜನಿ ಹಾಗೂ ಕರ್ಣ ನಿಂತಿದ್ದರು. ರಾಖಿ ರಾಣಾ "ಅಮ್ಮಾ,, ಕ್ಯಾಂಡಿ ಕೊಡಿಸು" ಅಂತ ಏರ್ಪೋರ್ಟ್ ನ ಶಾಪ್ ಒಂದರ ಎದುರಿಗೆ ಕರ್ಕೊಂಡು ಹೋದರು. ಕರ್ಣ ಚೆಕ್ ಇನ್ ಕಾರ್ಯಗಳ ಬಗ್ಗೆ ಗಮನ ಕೊಡುತ್ತಿದ್ದ. ರಜನಿ ಹಾಗೆ ಸುತ್ತಲೂ ಕಣ್ಣು ಹಾಯಿಸಿದಳು. ಅಲ್ಲೇ ಕುಳಿತಿದ್ದ ವೃದ್ಧ ಹೆಂಗಸೊಬ್ಬಳು, ರಜನಿಯನ್ನು ಕೈಬೀಸಿ ಕರೆದಳು. ಅವಳು ಹತ್ತಿರ ಹೋದೊಡನೆ, ಅವಳ ಕೈಯನ್ನು ಹಿಡಿದು, ಅದಕ್ಕೆ ಮುತ್ತೊಂದನ್ನಿಟ್ಟು, "ಪೂರ್ವ ಕರ್ಮದ ಆಶೀರ್ವಾದ ನಿನಗಿದೆ ಮಹಾರಾಣಿ" ಅಂತ ಹೇಳಿದಳು. ಹಾಗೆ ತಲೆಬಾಗಿ ನಮಸ್ಕರಿಸಿ ಹೊರಟುಹೋದಳು. "ಏನು ಹೇಳಿದಳು" ಅಂತ ಕೇಳುತ್ತಲೇ ಕರ್ಣ ರಜನಿ ಪಕ್ಕ ಬಂದು ನಿಂತ. "ನಾನು ಮಹಾರಾಣಿ ಅಂತೆ" ಅಂತ ಹೇಳಿ ರಜನಿ ಸುಮ್ಮನೆ ಹಾಸ್ಯದಂತೆ ನಗು ಬೀರಿದಳು. ಆದರೆ ಅವಳ ಅಂತರಾತ್ಮಕ್ಕೆ ತಿಳಿದಿತ್ತು, ಇದು ತಮಾಷೆ ಅಲ್ಲ, ಸತ್ಯ ಎನ್ನುವುದು. 

ವಿಮಾನ ಹೊರಟಿತು. ಕಿಟಕಿ ಬದಿ  ಹೊರಗಿನ ನೋಟ ನೋಡಿ ಕಣ್ತುಂಬಿಕೊಳ್ಳುತ್ತಿದ್ದಳು. ಅಷ್ಟರಲ್ಲಿ ಕರ್ಣ "ರಜನಿ, ನೀನು  ಈ ಸೆಂಟಿಮೆಂಟ್ ಗಳನ್ನು ಹೇಗೆ ಮ್ಯಾನೇಜ್ ಮಾಡಿದೆ?" ಎಂದು ಗೊಳ್ಳನೆ ನಕ್ಕ. "ಕರ್ಣ, ನಿನಗಿದು ತಮಾಷೆ - ನನ್ನ ಭ್ರಮೆ ಅಂತ ಅನ್ನಿಸಬಹುದು, ಬಟ್..." ಅನ್ನುವಷ್ಟರಲ್ಲಿ, "ಸರಿ ಆಯ್ತು. ವೈಜ್ಞಾನಿಕ ರೀತಿಯಲ್ಲಿ ನೋಡಿದರೆ, ಇದು ಜಸ್ಟ್ ದೇಜಾ-ವು, ಅಥವಾ ಮ್ಯಾಚಿಂಗ್ ನುರಾನ್ಸ್ ಅನ್ನಬಹುದೇನೋ." ಅಂದ. ಆಗ ರಜನಿ, "ಹಾಗಾದರೆ, ನನಗೆ ಅಲ್ಲಿ ಕಂಡ ದೃಶ್ಯಗಳು? ಹೂಗಳ ಪರಿಮಳದ ಅನುಭವಗಳು? ವೃದ್ಧ ಭಿಕ್ಷುಕಿ, ಉಂಗುರ ಮಾರುತ್ತಿದ್ದ ಹೆಂಗಸು, ಗೈಡ್ ಅವರೆಲ್ಲ ಹೇಳಿದ ಕಥೆಗಳು? ಇವೆಲ್ಲ ಏನು?" ಅಂತ ಕೇಳಿದಳು. ಅದಕ್ಕುತ್ತರವಾಗಿ ಕರ್ಣ -"ಅದೆಲ್ಲ ಬರಿಯ ಕಂಫಾರ್ಮೇಷನ್ ಬಯಾಸ್. ಅಷ್ಟೇ" ಅಂದು ಮತ್ತೆ ಗೊಳ್ಳನೆ ನಕ್ಕ. 

ರಜನಿ ಮುಂದೇನೂ ಮಾತಾಡದೆ, ಮೌನವಾಗಿ ಕಿಟಕಿಗೆ ತಲೆ ಇಟ್ಟು  ಕಣ್ಮುಚ್ಚಿದಳು. ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿತ್ತು. ಅಲ್ಲಿನ ಪ್ರತಿಯೊಂದು ಕಲ್ಲೂ ಶಬ್ದ ಮಾಡುವಂತಿರಬಹುದು. ಪ್ರತಿಯೊಂದು ಮನಸ್ಸೂ  ತನ್ನೊಳಗೆ ಕಥೆಯೊಂದನ್ನು ಬಚ್ಚಿಟ್ಟಿರಬಹುದು. ಯಾವುದು ಎಲ್ಲಿ ಯಾವುದಕ್ಕೆ ಕರೆ ನೀಡುತ್ತದೆ ಎಂಬುದು ಯಾರಿಗೂ ತಿಳಿಯದ ವಿಷಯ.  "ಪೂರ್ವ ಕರ್ಮದ ಆಶೀರ್ವಾದ" ಇರಲೇಬೇಕು ಎಂಬುದು ರಜನಿಗೆ ಮನದಟ್ಟಾಗಿತ್ತು. 

***

ಅಲ್ಲಿಂದ ಹಿಂದಿರುಗಿ ಎರಡು ವಾರಗಳು ಕಳೆದಿದ್ದವು. ಅಂದು ಪಕ್ಕದ ದೇವಸ್ಥಾನದಲ್ಲಿ ಪೂಜಗೆ ಎಂದು  ಮಲ್ಲಿಗೆ ತೆಗೆದುಕೊಂಡು ಹೋಗಿದ್ದರು ರಜನಿ ಹಾಗೂ ಕರ್ಣ.  ಅದನ್ನು ದೇವರಿಗೆ ಸಮರ್ಪಿಸುವಾಗ, ರಜನಿ ಕಿವಿ ಹತ್ತಿರದಲ್ಲೇ ಯಾರೋ "ಮಹಾರಾಣಿ" ಅಂತ ಪಿಸುಗುಟ್ಟಿದಂತಾಯಿತು. ತಿರುಗಿ ನೋಡಿದರೆ ಯಾರೂ ಇರಲಿಲ್ಲ. ಕರ್ಣ "ಆರ್ ಯು ಓಕೆ?" ಅಂದ. ಚೇತರಿಸಿಕೊಂಡ ರಜನಿ "ಓಕೆ" ಅಂದು ಪೂಜೆ ನೋಡಲು ಸಿದ್ಧಳಾದಳು. ಆ ಬಳೆಗಳು ಇನ್ನೂ ರಜನಿ ಕೈಯಲ್ಲಿ ಹೊಳೆಯುತ್ತಿದೆ. ಇದು ಪುನರ್ಜನ್ಮದ ಸತ್ಯ ಕಥೆಯೋ? ಅಥವಾ ಕಲ್ಪನೆಯೋ??? ಉತ್ತರವೇನಿದೆ???

*** 

✍🏻 Deepalaxmi Bhat
Mangaluru