Friday, January 8, 2021

ಮತ್ತೆ ಒಂದಾದ ಬದುಕು


"ನಮಸ್ಕಾರ ರಾಂ ಭಟ್ರೇ... ಊಟ ಆಯ್ತೋ??" ಎನ್ನುತ್ತಾ ತಮ್ಮ ಡೊಳ್ಳು ಹೊಟ್ಟೆಯನ್ನು ಆಡಿಸುತ್ತಾ, ಇನ್ನೇನು ಊಟಕ್ಕೆ ಹೊರಡೋಣ ಎನ್ನುತ್ತಿರುವಾಗ ಬಂದೇ  ಬಿಟ್ರು ಶ್ರೀನಿವಾಸರಾಯರು. ಶ್ರೀನಿವಾಸ ರಾಯರು ನಮ್ಮ ಆಪ್ತರು. ಅನೇಕ ವರ್ಷಗಳಿಂದಲೂ ನೆನಪಾದಾಗೆಲ್ಲ ನಮ್ಮ ಮನೆಗೆ ಬಂದು ವಿಚಾರಿಸಿ ಹೋಗುವವರು. ಇತ್ತೀಚಿಗೆ ನಮ್ಮ ಮನೆಯಲ್ಲಿ ನಾನು ಹಾಗೂ ನನ್ನ ಧರ್ಮಪತ್ನಿ ಜಾನಕಿ ಇಬ್ಬರೇ ಮನೆಯಲ್ಲಿ ಇರುವುದು ಅಂತ ಗೊತ್ತಾದ ಮೇಲಂತೂ ಬಂದು ವಿಚಾರಿಸಿಕೊಂಡು ಹೋಗೋದು ತಮ್ಮ ಕರ್ತವ್ಯ ಎಂಬಂತೆ ಪಾಲಿಸುತ್ತಾರೆ. 

"ಬನ್ನಿ ಬನ್ನಿ ಶ್ರೀನಿವಾಸರಾಯರೇ.ಈಗಷ್ಟೇ ಊಟಕ್ಕೆ ಹೊರಡಲು  ಎದ್ದಾಗ ನೀವು ಬಂದ್ರಿ. ನಮ್ಮ ಇಷ್ಟರು ಅಂತ ಇದಕ್ಕೆ ಹೇಳೋದು.... ಬನ್ನಿ ಜೊತೆಗೆ ಊಟ ಮಾಡೋಣಂತೆ.." ಅಂತ  ಅಂದು ಅವರಿಗೂ ಒಂದು ಬಾಳೆ ಎಲೆ ಹಾಸಲು ಜಾನಕಿಗೆ ತಿಳಿಸಿದೆ. ಈ ಇಳಿವಯಸ್ಸಿನಲ್ಲೂ ಒಂಚೂರೂ ಅಸಹಿಷ್ಣುತೆ ತೋರಿಸದೆ, ನಾನು ಹೇಳಿದ ಎಲ್ಲಾ ಕೆಲಸಗಳನ್ನೂ ನಗುಮೊಗದಿಂದ ಆನಂದಿಸಿ ಮಾಡೋದು ನನ್ನ ಜಾನಕಿಯ ಗುಣ. ಅಂತೆಯೇ ಆವತ್ತೂ ಕೂಡಾ ನಗುಮುಖದಿಂದ ಶ್ರೀನಿವಾಸರಾಯರನ್ನು ಸ್ವಾಗತಿಸಿ ಊಟಕ್ಕೆ ಎಂದು ಬಾಳೆ ಎಲೆ ಹಾಸಿದಳು. ಅವಳ ಆ ಮುದ್ದಾದ ಮುಖದಲ್ಲಿ ಸೌಂದರ್ಯ ಇನ್ನೂ ಹಸಿ ಹಸಿಯಾಗೇ  ಇತ್ತು. ನಮಗೆ ಊಟ ಬಡಿಸಿ  ಆದಮೇಲೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಫ್ಯಾನ್ ಹಾಕಿ ತಾನು ಊಟ ಮಾಡಲೆಂದು ಹೋದಳು. 

" ಏನೇ ಹೇಳಿ ರಾಂ ಭಟ್ರೇ, ಜಾನಕಿ ಅಕ್ಕ ಮಾಡೋ ಅಡುಗೆ ರುಚಿಯನ್ನು ಮೆಚ್ಚದೆ ಇರೋದು ಸಾಧ್ಯನೇ ಇಲ್ಲ ಬಿಡಿ." ಅಂತ ಹೇಳಿ ಗಟ್ಟಿಯಾಗೊಮ್ಮೆ ತೇಗಿದರು. ಅದನ್ನು ಕೇಳಿದಾಕ್ಷಣ ನಮ್  ಜಾನಕಿ ಕಣ್ಣಂಚಲ್ಲಿ ಕಣ್ಣೇರು ಬಂದಿಳಿದದ್ದು ನಂಗೆ ಮಾತ್ರ ಗೋಚರವಾಯ್ತು. "ಶ್ರೀನಿವಾಸಣ್ಣಾ, ನೀವು ಹೊಗಳೋವಷ್ಟೇನು ಇಲ್ಲ ಬಿಡಿ. ಆದ್ರೂ, ನಂಗೆ ನಿಮ್ಮ  ಮಾತು ಕೇಳಿ ನನ್  ಮಗನ ನೆನಪೇ ಕಾಡುತ್ತದೆ. ಅದ್ಯಾವ ದುಷ್ಟಕರ್ಮದ ಫಲವೋ, ನಮ್  ಮಗ ಸಂತೋಷ ನಮ್ಮಿಂದ ದೂರ ಆಗಿ ಎರಡು ವರ್ಷ ಕಳೆಯಿತು ಅಂತ ಅನ್ನಿಸೋದೇ ಇಲ್ಲ. ಮೊನ್ನೆ ಮೊನ್ನೆ ನಮ್  ಜೊತೆ ಖುಷಿಖುಷಿಯಾಗಿದ್ದ. ಅದ್ಯಾವ ಘಳಿಗೆಯಲ್ಲಿ ಅವನಿಗೆ ಆ ಬೈಕು ತೆಗೆದು ಕೊಟ್ಟೆವೋ ಏನೋ. ಯಮಪಾಶಕ್ಕೆ ಸಿಲುಕಿಸಿದ ಹಾಗೆ ಆಯಿತು." ಅಂತ ಹೇಳಿ ಗೊಳೋ ಎಂದು ಅಳಲು ಶುರು ಮಾಡಿದಾಗ ನಾನಂತೂ ಮೂಗನಂತಾದೆ. 

ಅಂದು ಸಂತೋಷನ ೧೨ನೇ ತರಗತಿಯ ಫಲಿತಾಂಶ ಉನ್ನತ ಶ್ರೇಣಿಯಲ್ಲಿದ್ದ ಕಾರಣ ಖುಷಿಯಿಂದ ಅವನಿಗೆಂದು ಬೈಕು ತೆಗೆದು ಕೊಟ್ಟಿದ್ದೆ. ಆ ಬೈಕು ಅವನ ಪ್ರಾಣವನ್ನೇ ಕಿತ್ತುಕೊಂಡಿತು. ಇರುವ ಒಬ್ಬ  ಕಳೆದುಕೊಂಡು ಜೀವನವೇ ಜಿಗುಪ್ಸೆ ಆದ ಸಮಯದಲ್ಲಿ ನಮ್ಮ ಮನಸ್ಸಿಗೆ ಧೈರ್ಯ ತುಂಬಿದವರೇ ಈ ಶ್ರೀನಿವಾಸರಾಯರು. ಈ ಶ್ರೀನಿವಾಸರಾಯರು ತಮ್ಮ ಮಗ ರಮೇಶನ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿ ಆದ ಒಂದು ವಾರದಲ್ಲೇ ಮನೆಗೆ ಬಂದ  ಸೊಸೆಯು ಅತ್ತೆ ಮಾವನಿಗೆ ನಾನಾ ರೀತಿಯ ಕಿರುಕುಳ ನೀಡಲು ಶುರು ಮಾಡಿದಳು. ಮಗ ಆಫೀಸಿಗೆ ಹೋದ ಮರುಕ್ಷಣ ಶ್ರೀನಿವಾಸರಾಯರನ್ನು ಕೋಣೆಯೊಳಗೆ ಬಂಧಿಸಿ, ಅತ್ತೆಯನ್ನು ಕೆಲಸದ ಹೆಣ್ಣಿಗಿಂತ ಕೀಳಾಗಿ ನೋಡುತ್ತಿದ್ದಳು. ಇದೆಲ್ಲದರ ಪರಿಣಾಮ ಅತ್ತೆ  ಬೇಗನೆ ಇಹಲೋಕ ತ್ಯಜಿಸುವಂತಾಯಿತು. ಅದರ ನಂತರ ಶ್ರೀನಿವಾಸರಾಯರನ್ನು ಒಬ್ಬರನ್ನೇ ಬಿಟ್ಟು ಮಗ ಸೊಸೆ ಹೊರತು ಹೋದರು. ಹೀಗಾಗಿ ಅವರು ತಮ್ಮ ಜೀವನವನ್ನೇ  ಸಮಾಜಸೇವೆಗೆಂದು ಮೀಸಲಿಟ್ಟು ಮನೆಯನ್ನೇ ಸಣ್ಣ ಮಟ್ಟಿನ ಆಶ್ರಮದಂತೆ ನಡೆಸುತ್ತಿದ್ದಾರೆ. ಹಾಗೆಯೇ ರಾಂಭಟ್ರನ್ನು ತಮ್ಮ ಅಣ್ಣನ ಸ್ಥಾನದಲ್ಲಿಟ್ಟು ವಿಚಾರಿಸಿಕೊಂಡು ಹೋಗಲು ಅವಾಗವಾಗ ಬಂದು  ಹೋಗಿ ಮಾಡುತ್ತಾರೆ. 

ಇದ್ದಕ್ಕಿದ್ದಂತೆ ನಮ್ಮ ಮನೆಗೆ ರಮೇಶ ಬಂದ. ಅವನು ಶ್ರೀನಿವಾಸರಾಯರನ್ನು ತೊರೆದು  ವರ್ಷಗಳೇ ಕಳೆದಿದ್ದರಿಂದ ಗುರುತು ಹಿಡಿಯಲು ಸ್ವಲ್ಪ ಸಮಯ ಕಳೆಯಿತು. ಶ್ರೀನಿವಾಸರಾಯರಿಗಂತೂ ತಮ್ಮ ಮಗನನ್ನು ಕಂಡಾಗ ಖುಷಿಯಾದರೂ ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದಕ್ಕೆ ದುಃಖವೂ ಜೊತೆಯಾಗಿ ಮಾತುಗಳೇ ನಿಂತಂತಾಗಿತ್ತು. ನಾನು ಮುಂದೆ ಹೋಗಿ "ಬಾ ರಮೇಶ, ಕುಳಿತುಕೋ. ಏನು ಈ  ಕಡೆ ಬಂದಿದ್ದು?" ಎಂದೆ. 

ರಮೇಶ ಏನು ಹೇಳುತ್ತಾನೋ ಎಂದು ಕುತೂಹಲದಲ್ಲಿದ್ದಾಗ ಕಣ್ಣಲ್ಲಿ ನೀರು ತುಂಬಿಕೊಂಡು ತನ್ನ ತಂದೆಯ ಕಾಲಿಗೆ ಬಿದ್ದು ಕ್ಷಮೆ ಕೇಳಲು ಶುರು ಮಾಡಿದ. ಅಷ್ಟು ಹೊತ್ತು ಕೋಪದಿಂದ ಮುಖ ತಿರುಗಿಸಿ ನಿಂತಿದ್ದ ಶ್ರೀನಿವಾಸರಾಯರು ಮಗನ ಕಣ್ಣೀರು ನೋಡಿ ಒದ್ದಾಡಿದರು. "ಏಳು ಮಗನೇ ... ಏನಾಯಿತು? ಯಾಕೆ ಈ ರೀತಿ ಅಳುತ್ತಿದ್ದೀಯಾ ?" ಎಂದು ಅವನನ್ನು ಎಬ್ಬಿಸಿ ಕಣ್ಣೀರು ಒರಸಿದರು. ಎಷ್ಟೇ ಆದರೂ ಮಗ ಮಗಾನೇ ತಾನೇ? ಮಗನ ಕಣ್ಣೀರು ನೋಡಿದರೆ ಹೇಗೆ ಹೃದಯವನ್ನು ಕಲ್ಲು ಮಾಡಲು ಸಾಧ್ಯ??

"ನನ್ನನ್ನು ಕ್ಷಮಿಸಿ ಅಪ್ಪಾ... ಪ್ರಾಯದ ಅಹಂಕಾರದಲ್ಲಿ ನಿಮ್ಮ ಹಾಗೂ ಅಮ್ಮನ ಬೆಲೆಯನ್ನು  ನಾನು ಮರೆತೆ. ದೇವತೆಯಂಥ ಅಮ್ಮನನ್ನು ಕಳೆದುಕೊಂಡೆ. ದುಡ್ಡಿನ ಪಿಶಾಚಿಯಂತಿದ್ದ ಹೆಣ್ಣಿನ ಬಲೆಗೆ ಬಿದ್ದು ಈಗ ಎಲ್ಲ ಅನುಭವಕ್ಕೆ ಬಂತು. ಅಪ್ಪಾ, ನಾನು ಆಕೆಯನ್ನು ತೊರೆದು ಬಂದಿದ್ದೇನೆ. ನಿಮ್ಮಲ್ಲಿಗೆ ಬರಲು ಹಿಂಜರಿಕೆಯಾಗಿ ರಾಂಭಟ್ರ ಮನೆಗೆ ಬಂದು ಅವರಲ್ಲಿ ಆಶ್ರಯ ಕೇಳೋಣ ಎಂದುಕೊಂಡು ಬಂದೆ. ನೀವು ಇಲ್ಲೇ ಇದ್ದಾಗ ಮನಸ್ಸಿಗೆ ಹಿತವಾಯ್ತು. ನನ್ನನ್ನು ಕ್ಷಮಿಸಿ ಅಪ್ಪಾ. ನನ್ನನ್ನು ದಯವಿಟ್ಟು ಕ್ಷಮಿಸಿ. ಇನ್ನು ಮುಂದೆ ನನ್ನ ಜೀವನ ಪೂರ್ತಿ ನಿಮ್ಮ ಸೇವೆಗೆಂದೇ ಮುಡಿಪಾಗಿಡುತ್ತೇನೆ. ನನ್ನನ್ನು ನಿಮ್ಮ ಜೊತೆ ಇರಲು ಬಿಡಿ ಅಪ್ಪ..." ಎಂದು ಒಂದೇ ಉಸಿರಿನಲ್ಲಿ ಹೇಳಿದ. 

ಶ್ರೀನಿವಾಸರಾಯರು ಹೇಳುವ ಮುನ್ನ ನಾನೇ ಅಂದೇ - "ನೋಡು ರಮೇಶ. ನೀನು ಮಾಡಿರುವುದು ಅಪರಾಧವೇನೋ ನಿಜ. ಆದರೆ, ನಿನ್ನ ಅಪ್ಪನಿಗೆ ಯಾವತ್ತಿಗೂ ನೀನು ಮಗನೇ . ನನಗೆ ನೋಡು ಮಗನನ್ನೇ ಆ ಭಗವಂತ ಕಿತ್ತುಕೊಂಡ. ಆದರೆ ನೀನು ನಿನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಟ್ಟುಕೊಂಡು ಬಂದಿರುವೆ. ಹೀಗಿರುವಾಗ ನಿನಗೆ ಖಂಡಿತವಾಗಿಯೂ ಕ್ಷಮೆ ಇದೆ. ನಾಳೇನೇ ನಾವೆಲ್ಲರೂ ದೇವಸ್ಥಾನಕ್ಕೆ ಹೋಗಿ ದೇವರಿಗೆ ತಪ್ಪು ಕಾಣಿಕೆ ಹಾಕಿ ಬರೋಣ. ಇನ್ನು ಮುಂದೆ ನೀನು ಶ್ರೀನಿವಾಸರಾಯರನ್ನು ಚೆನ್ನಾಗಿ ನೋಡಿಕೋ. ಅವರ ಸೇವಾ ಮನೋಭಾವಕ್ಕೆ ಧಕ್ಕೆ ಬಾರದ ಹಾಗೆ ಆಶ್ರಮವನ್ನು ವಹಿಸಿಕೋ." 

" ಖಂಡಿತ ರಾಂಭಟ್ರೇ. ಅಪ್ಪ ತಮ್ಮ ಬಾಯಿಂದ ನನ್ನನ್ನು ಕ್ಷಮಿಸಿದ್ದೇನೆ ಅಂದರೆ ನನಗೂ ಸಂತೋಷವಾಗುತ್ತದೆ" ಅಂದ ರಮೇಶ. ಶ್ರೀನಿವಾಸರಾಯರು ಮೊದಲಿಗೆ ದೇವರಿಗೆ ವಂದಿಸಿ, ಅವನನ್ನು ಬಿಗಿದಪ್ಪಿ "ಮಗನೇ , ಈಗಲಾದರೂ ನಿನ್ನ ತಪ್ಪಿನ ಅರಿವಾಯಿತಲ್ಲವೇ ನಿನಗೆ. ನನಗೆ ನೀನು ನನ್ನ ಜೊತೆ ಇದ್ದರೆ  ಅಷ್ಟೇ ಸಾಕು." ಅಂದು ಅವನ ಹಣೆಗೆ ಮುತ್ತಿಕ್ಕಿದರು. 

ಅವರು ಒಂದಾದ ನೋಟ ನೋಡಿ ನಮ್ಮ ಜಾನಕಿಗೆ ಹಾಗೂ ನನಗೆ ನಮ್ಮ ಮಗನೇ  ಹಿಂದೆ ಬಂದಷ್ಟು ಸಂತೋಷವಾಯಿತು. ಅವರಿಬ್ಬರೂ ಹೀಗೆ ಚೆನ್ನಾಗಿ ಬಳಲಿ ಅಂತ ಹರಸಿ ಅವರಿಬ್ಬರನ್ನೂ ಬೀಳ್ಕೊಟ್ಟೆವು. 

ಜೀವನ ಅಂದರೆ ಇಷ್ಟೇ. ಇದ್ದಾಗ ಸಂತೋಷವನ್ನು ಹಂಚಿಕೊಂಡು ಸಂಬಂಧಗಳಿಗೆ ಅದರಲ್ಲೂ ಹೆತ್ತವರ ಬಂಧಕ್ಕೆ  ಬೆಲೆ ಕೊಟ್ಟು ಅವರನ್ನು ಚೆನ್ನಾಗಿ ನೋಡಿಕೊಳ್ಳುವುದೇ ಪರಮ ಧರ್ಮ . ಅಲ್ಲವೇ?







No comments:

Post a Comment