ಹರಿಸುತಿಹೆ ನೀ ನೋವ ಕಣ್ಣೀರಧಾರೆಯ
ನೊಂದ ಹೃದಯದಲಿ ಮಮತೆಯ ತಾರೆಯ
ಕೋಮಲ ಹಸ್ತದಿ ನಿನ್ನ ಸಲುಹಿದ ನೀರೆಯ
ದುಃಖದ ಬವಣೆಯ ನೀ ಅರಿಯಲಾರೆಯ?
ನಿನ್ನ ಸುಖಕೆಂದು ತಾನು ಸಹಿಸಿದಳು ನೋವನಂದು
ನಿನ್ನೋನ್ನತಿಗಾಗಿ ಕಷ್ಟನಷ್ಟದಿಂ ದುಡಿದಳಂದು..
ಇಷ್ಟವಿಲ್ಲದ ಮನದಲೂ ತನ್ನಿಷ್ಟವೆಲ್ಲವ ತೊರೆದಂದು
ನಿನಗಾಗಿ ಸುಖದರಮನೆಯನೇ ನಿರ್ಮಿಸಿಹಳಿಂದು..
ಕೆಡವುತಿಹೆ ಬೆಳೆದಿಹ ಪ್ರೀತಿಯೆಂಬ ಭವ್ಯಮಂದಿರವ
ಹೆಜ್ಜೆ ಹೆಜ್ಜೆಗೂ ವರವೆಂಬಂತೆ ಹರಸಿದ ಮಹದಾತ್ಮವ
ಕಣ್ಣೀರಿಳಿದರೂ ತಿಳಿಯದಂತೆ ನೋವನುಂಡ ಜೀವವ
"ಅಪ್ಪಾ" ಎಂದು ಏನು ಕೋರಿದರೂ ಸಾರಿದರವರು ನಿಸ್ವಾರ್ಥವ
ನೀ ಏನು ಮಾಡಿದರೂ ಸಹಿಸಿ ನಿಂತರು ಬೆಂಬಲದಂತೆ
ತಮ್ಮಾದಾಯವನೇ ಸುರಿದರು ನಿನಗೆಂದು ಜಲದಂತೆ
ಆಶಿಸಿದರು ನೀನಾಗುವೆನೆಂದು ಮುಪ್ಪಿನಾಸರೆಯಂತೆ
ಧ್ವಂಸಗೊಳಿಸಿದೆಯಲ್ಲ ನೀನು ಅವರಾಸೆಯನು ಗಾಜಿನಂತೆ.