✍🏻*ದೀಪಲಕ್ಷ್ಮಿ ಭಟ್*, ಮಂಗಳೂರು
*ರಕ್ತಸಂಬಂಧ*
ಚರಪರನೆ ಸುರಿಯುತ್ತಿದ್ದ ಆ ಮಳೆಯ ನಾದವನ್ನಾಲಿಸುತ್ತಾ, ನನ್ನ ಇಷ್ಟವಾದ ಆ ಕುರ್ಚಿಯಲ್ಲಿ ಕುಳಿತು ನನ್ನ ಹೆಂಡತಿ ಮಾಡಿ ಕೊಟ್ಟ ಕಾಫಿಯನ್ನು ಆಸ್ವಾದಿಸುತ್ತಾ, ಇಂದಿನ ದಿನಪತ್ರಿಕೆಯ ಮೇಲೆ ಹಾಗೆ ಕಣ್ಣಾಡಿಸುತ್ತಿದ್ದೆ. ನನ್ನ ಪಕ್ಕದಲ್ಲಿ ನನ್ನ ಹೆಂಡತಿ ಒಣಗಿದ್ದ ಬಟ್ಟೆಗಳನ್ನೆಲ್ಲ ಮಡಚಿ ಅಟ್ಟಿ ಹಾಕುತ್ತಿದ್ದಳು. ಜೊತೆಗೆ ಮಧ್ಯಾಹ್ನಕ್ಕೆ ಯಾವ ಪದಾರ್ಥ ಮಾಡಲಿ ಎನ್ನುವುದನ್ನು ಲೆಕ್ಕ ಹಾಕುತ್ತಿದ್ದಳು. ಮೊದಲಿಗೆ ನಿಮಗೆ ನನ್ನ ಕಿರು ಪರಿಚಿಯ ಕೊಡುತ್ತೇನೆ. ನಾನು ಹರಿ ಶಾಸ್ತ್ರಿ. ವೃತ್ತಿಯಲ್ಲಿ ಊರಿನ ಶಾಲೆಯ ಮುಖ್ಯೋಪಾಧ್ಯಾಯನಾಗಿ 36 ವರ್ಷಗಳ ದೀರ್ಘ ಸೇವೆ ಮಾಡಿ, ಈಗ ನಿವೃತ್ತನಾಗಿ ವೃದ್ಧಾಪ್ಯವನ್ನು ಸ್ವಲ್ಪ ಆರಾಮವಾಗಿ ಕಳೆಯುತ್ತಿದೇನೆ. ಸಮಯ ಹಾಗೂ ಆರೋಗ್ಯ ಅನುಮತಿ ನೀಡಿದರೆ ಒಂದೊಂದು ಪೌರೋಹಿತ್ಯ ಕಾರ್ಯಗಳನ್ನು ಮಾಡುತ್ತೇನೆ. ಏನು ಮಾಡುವುದು, ಬ್ರಾಹ್ಮಣನಾಗಿ ಹುಟ್ಟಿದ ಮೇಲೆ ನಮ್ಮ ಪೌರೋಹಿತ್ಯದ ಪ್ರವೃತ್ತಿಯನ್ನು ಬಿಡಲು ಸಾಧ್ಯವಿಲ್ಲದ ಮಾತಲ್ಲವೇ? ಹೇಗೆ ವೈದ್ಯರಿಗೆ ರೋಗಿಗಳ ಕರೆ ಮುಖ್ಯವಾಗಿರುತ್ತದೋ ಹಾಗೆಯೇ ವೈದಿಕರಿಗೆ ದೇವರ ಹಾಗೂ ಜನಸಾಮಾನ್ಯರ ನಡುವೆ ಸೇತುವೆಯಂತೆ ಪೌರೋಹಿತ್ಯ ಕರ್ಮಗಳನ್ನು ಮಾಡುವುದು ಕರ್ತವ್ಯ ಎಂಬ ಭಾವನೆ. ನನ್ನ ಧರ್ಮಪತ್ನಿ ಜಲಜ. ಚಿಕ್ಕ ಪ್ರಾಯದಲ್ಲಿಯೇ ನನ್ನನ್ನು ವರಿಸಿ, ಮದುವೆಯಾದ ಮೂರು ವರ್ಷಗಳಲ್ಲಿ ರಾಮ ಹಾಗೂ ಕೃಷ್ಣ ಎಂಬ ಇಬ್ಬರು ಸುಂದರ ಜಾಣ ಮಗಂದಿರಿಗೆ ಜನ್ಮ ನೀಡಿ ಮಕ್ಕಳನ್ನು ಬೆಳೆಸುವುದರಲ್ಲಿಯೇ ತನ್ನ ಸುಖ ಸಂತೋಷವನ್ನು ಕಂಡವಳು.
ಇವತ್ತಿಗೆ ನಾವು ಮದುವೆಯ ಬಂಧದಲ್ಲಿ ಬೆಸೆದು ಸರಿಯಾಗಿ 50 ವರ್ಷಗಳಾಗಿವೆ. ಎಲ್ಲರ ಮನೆಯ ದೋಸೇನೂ ತೂತು ಎಂಬಂತೆ ನಮ್ಮ ಮನೆಯ ಮಕ್ಕಳು ಇಬ್ಬರಿಗೂ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟ ಮೇಲೆ, ಊರವರ ದೃಷ್ಟಿಯೋ, ನಮ್ಮ ದುರಾದೃಷ್ಟವೋ ತಿಳಿಯದು, ನಮ್ಮನ್ನು ಆಗಲಿ ಮಕ್ಕಳಿಬ್ಬರೂ ತಮ್ಮ ತಮ್ಮ ನೆಲೆಯನ್ನು ತಾವೇ ನೋಡಿಕೊಂಡರು. ರಾಮ ತನ್ನ ಹೆಂಡತಿ ಮಕ್ಕಳೊಂದಿಗೆ ಪರ ದೇಶದಲ್ಲಿ ನೆಲೆಯಾಗಿ ನಮ್ಮ ಕಡೆ ತಲೆಯನ್ನೂ ಹಾಕುತ್ತಿಲ್ಲ. ಕೃಷ್ಣ ತನ್ನ ಹೆಂಡತಿ ಹಾಗೂ ಎರಡು ಮುದ್ದಾದ ಮಕ್ಕಳೊಂದಿಗೆ ಇಲ್ಲೇ ನಮ್ಮ ಮನೆಯ ಹಿಂದುಗಡೆಯಲ್ಲೇ ಮನೆ ಮಾಡಿ ಕೂತಿದ್ದರೂ, ನಮ್ಮ ಮನೆ ಕಡೆ ತಿರುಗಿಯೂ ನೋಡುತ್ತಿಲ್ಲ. ಇದು ನಮ್ಮ ಪ್ರಾರಬ್ದವೋ, ದೇವರು ಕೊಟ್ಟ ಶಿಕ್ಷೆಯೋ ತಿಳಿಯದು. ಏನೋ ದಿನ ಚೆನ್ನಾಗಿ ಹೋದರೆ ಸಾಕು ಎಂಬಂತಾಗಿದೆ ನಮ್ಮಿಬ್ಬರ ಮನಸ್ಥಿತಿ. ಇನ್ನು ನಮ್ಮ ಕುಟುಂಬಸ್ಥರೋ, ವರ್ಷಕ್ಕೊಮ್ಮೆ ಯಾವುದಾದರೂ ಪೂಜೆ ಇಟ್ಟುಕೊಂಡಿದ್ದರೆ ಬಂದು ಹೇಳಿಕೆ ನೀಡಿ ಹೋಗುತ್ತಾರೆ. ಅದು ಬಿಟ್ಟರೆ ನಾವು ಬದುಕಿದ್ದೆವೋ, ಸತ್ತಿದ್ದೇವೋ ಅನ್ನುವುದನ್ನು ಸಹ ಕೇಳುವವರು ಯಾರೂ ಇಲ್ಲ. ಇದಿಷ್ಟು ನಮ್ಮ ಪರಿಚಯ.
ಹೀಗೆ ಬೆಳಗಿನ ಜಾವ ಕೂತಿರಬೇಕಾದರೆ, ಜಲಜಳಿಗೆ ಇದ್ದಕ್ಕಿದ್ದಂತೆ ಬೆವರಲು ಶುರುವಾಗಿ, ಬಲ ಇಲ್ಲದಂತಾಯಿತು. ನನಗೋ ಕೈಕಾಲು ನಡುಗಲು ಶುರು ಆಯಿತು. "ಜಲಜ, ಜಲಜಾ.. ಏನಾಗುತ್ತಿದೆ?? ನೀರು ಕುಡಿ ತೆಗೆದುಕೋ..." ಅಂತ ನೀರನ್ನು ಅವಳ ಬಾಯಿಗೆ ತಂದೆ.... ದೇವರ ದಯೆಯೋ ಎಂಬಂತೆ, ಅದೇ ಹೊತ್ತಿಗೆ ನಮ್ಮ ಮನೆಗೆ ನನ್ನ ಗೆಳೆಯ ಗಣೇಶನ ಮಗಳು ರಾಧಾ ಹಾಗೂ ಅಳಿಯ ವಾಸು ನಮ್ಮ ಮನೆಗೆ ಬಂದರು. ವಾಸು ವೃತ್ತಿಯಲ್ಲಿ ವೈದ್ಯನಾದ ಕಾರಣ ಜಲಜಾಳ ಸ್ಥಿತಿ ಕಂಡ ಕೂಡಲೇ ತುರ್ತು ಸ್ಥಿತಿಯ ಅರಿವಾಗಿ ಕೂಡಲೇ ಆಂಬುಲೆನ್ಸ್ ಗೆ ಕರೆ ನೀಡಿದ. ನನಗೆ ಎದೆ ಝಲ್ ಎನ್ನಲು ಶುರುವಾಯಿತು. ಜಲಜಾಳಿಗೆ ಹೃದಯಾಘಾತದ ಲಕ್ಷಣಗಳು ಕಂಡು ಬಂದಿತ್ತು. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿ, ಆಂಜಿಯೋಪ್ಲಾಸ್ಟಿ ಸರ್ಜರಿ ಮಾಡಿದ ಕಾರಣ ನನ್ನ ಜಲಜ ನನ್ನ ಜೊತೆ ಉಳಿದಳು. ಹೀಗೆ ಆಸ್ಪತ್ರೆಯಲ್ಲಿರಬೇಕಾದರೆ, ಮಗಂದಿರಿಬ್ಬರಿಗೂ ಜಲಜಾಳ ಪರಿಸ್ಥಿತಿಯ ಬಗ್ಗೆ ವಾಸು ಹೇಳಿದ. ಆದರೆ ಆ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ದೊರೆಯಲಿಲ್ಲ. ನನಗೆ ಎಷ್ಟು ಬೇಸರವಾಯಿತೆಂದರೆ, ಯಾಕಾದರೂ ಇಂಥ ಮಕ್ಕಳು ಹುಟ್ಟಿದರೋ ಎಂದು ಮರುಗುವಂತಾಯಿತು.
ಆಸ್ಪತ್ರೆಯಿಂದ ಮನೆಗೆ ಬಂದಾಯಿತು. ಈಗ ಜಲಜಾಳಿಗೆ ಜಾಸ್ತಿ ಸುಸ್ತು ಬರಿಸುವ ಕೆಲಸ ಮಾಡ್ಲಿಕ್ಕೆ ಆಗದ ಕಾರಣ ನಾನೇ ಅಡುಗೆ ಕೆಲಸ ಮಾಡುತ್ತಿದ್ದೆ. ಜಲಜ ನಮ್ಮ ಮನೆಯ ಹೊರಾಂಗಣದ ಜಗಲಿಯಲ್ಲಿ ಕುಳಿತು ನಿಸರ್ಗದ ದೃಶ್ಯಗಳನ್ನು ಆಸ್ವಾದಿಸುತ್ತಿದ್ದಳು. ಆಗ ಮಕ್ಕಳಿಗೆ ರಜೆಯ ದಿನಗಳು. ಹಾಗೆ ನಮ್ಮ ಮೊಮ್ಮಕ್ಕಳು ಆಟವಾಡುತ್ತಾ ನಮ್ಮ ಮನೆಯ ಮುಂದೆ ಬಂದಿದ್ದರು. ರಕ್ತ ಸಂಬಂಧ ಹೇಗೆ ಸೆಳೆಯುತ್ತದೆ ನೋಡಿ. ಇಂದಿನವರೆಗೆ ಆ ಮಕ್ಕಳು ನಮ್ಮನ್ನು ನೋಡಿರಲಿಲ್ಲ. ಆದರೂ ಜಲಜಾಳನ್ನು ಕಂಡು ನಗು ಮುಖದಲ್ಲಿ ಹತ್ತಿರ ಬಂದವು. ಜಲಜಾಳಿಗೋ, ಮೊಮ್ಮಕ್ಕಳನ್ನು ಕಂಡು ತುಂಬ ಖುಷಿಯಾಗಿ, ಬರಸೆಳೆದು ಅಪ್ಪುಗೆ ಕೊಟ್ಟಳು. "ಏನಪ್ಪಾ ನಿಮ್ಮಿಬ್ಬರ ಹೆಸರು" ಅಂದಳು. ಮುದ್ದಾಗಿ ತಮ್ಮ ಹೆಸರು ಆಧ್ಯ ಅರ್ಪಣ್ ಅಂತ ಹೇಳಿದ್ರು. ತುಂಬಾ ಮುದ್ದಾಗಿ ಮಾತಾಡಿಸಿದ್ರು. ಮಕ್ಕಳಿಗೆ ನಾವು ಅವರ ಸ್ವಂತ ಅಜ್ಜಿ ತಾತ ಅಂತ ತಿಳಿದಿರಲಿಲ್ಲ. ನಾವೂ ಹೇಳಲಿಲ್ಲ.
ಹೀಗೆ, ದಿನ ದಿನ ಆ ಮಕ್ಕಳು ನಮ್ಮಲ್ಲಿಗೆ ಬಂದು, ಏನಾದರೂ ತಿಂಡಿ ತಿಂದು ಹೋಗುತ್ತಿದ್ದವು. ಈ ವಿಚಾರ ಕೃಷ್ಣ ಹಾಗೂ ಅವನ ಹೆಂಡತಿಗೆ ತಿಳಿದಿರಲಿಲ್ಲವೋ ಏನೋ. ಒಂದು ದಿನ ಆ ಮಕ್ಕಳು ಹಠ ಹಿಡಿದು ಕೃಷ್ಣ ಹಾಗೂ ಅವನ ಹೆಂಡತಿ ಆರಾಧ್ಯಳನ್ನು ಕರೆದುಕೊಂಡು ಬಂದರು. ಅವರು ಬಂದಿದ್ದು ನೋಡಿ ನನ್ನ ಜಲಜಾಳ ಕಣ್ಣು ಮುಖ ತಾವರೆಯಂತೆ ಅರಳಿತು ಇದನ್ನು ನೋಡಿ ನನ್ನ ಅಸಹನೆ ಮರೆಯಾಗಿ ಕೃಷ್ಣನನ್ನು ಚೆನ್ನಾಗಿಯೇ ಮಾತನಾಡಿಸುವಂತಾಯಿತು. ಎಷ್ಟಾದರೂ ನನ್ನ ಕರುಳ ಕುಡಿಯಲ್ಲವೇ. ಅಂದು ನಮ್ಮ ಮನೆಗೆ ಕೃಷ್ಣ ಹೆಂಡತಿ ಮಕ್ಕಳ ಜೊತೆ ಬಂದವನು ಎಲ್ಲ ದ್ವೇಷವನ್ನೂ ಮರೆತು, ಒಂದಾಗುವ ಮಾತನ್ನಾಡಿದರು. ಎಷ್ಟಾದರೂ ಸ್ವಂತ ಮಕ್ಕಳಾಗುವಾಗ, ಹೆತ್ತವರ ನೋವು ಏನೆಂಬುದು ಅರ್ಥವಾಗುವ ಹಾಗೆ, ಇವರೂ ಬದಲಾಗಿ ನಮ್ಮ ಬಗ್ಗೆ ಕಾಳಜಿ ತೋರಿಸಲು ಶುರು ಮಾಡಿದರು.
ರಾಮ ಮತ್ತು ಕೃಷ್ಣನ ಪುನಃಮಿಲನ, ಮತ್ತು ಮೊಮ್ಮಕ್ಕಳ ನಗು ಮುಖಗಳು ನಮ್ಮ ಮನೆಗೆ ಹಬ್ಬದ ವಾತಾವರಣ ಸೃಷ್ಟಿಸಿತು. ನಮ್ಮ ಮನೆ ಈಗ ಚಿಗುರಿದ ಗಿಡದಂತೆನಗಲು ತೊಡಗಿತು. ಒಂದು ಸುಂದರ ಬೆಳಗಿನ ಜಾವ, ನಾವು ಎಲ್ಲರೂ ಒಟ್ಟಾಗಿ ನಮ್ಮ ಬಾಗಿಲಲ್ಲಿ ಕುಳಿತು ಚಹಾ ಕುಡಿಯುತ್ತಿದ್ದುದು ನೆನಪಿಗೆ ಬಂತು. ಮೊಮ್ಮಕ್ಕಳು ಆಟವಾಡುತ್ತಾ, "ಅಜ್ಜಾ, ಇದು ನಮ್ಮ ಮನೆ ಅಲ್ವಾ?" ಎಂದು ಕೇಳಿದಾಗ ಜಲಜಾ ತಕ್ಷಣವೇ, "ಹೌದು ಮಗುವೇ, ನಮ್ಮ ಮನೆ — ನೀವು ಎಲ್ಲರೂ ಸೇರಿ ನಿರ್ಮಿಸಿದ ಬಂಗಾರ ಮನೆ," ಎಂದಳು.
ಅಂದು ಸಂಜೆ, ಮನೆಯ ಹತ್ತಿರವೇ ಇದ್ದ ಹಸಿರಿನ ಹೊಲದಲ್ಲಿ ನಾವು ತಣ್ಣನೆ ಬೀಸುತ್ತಿದ್ದ ಗಾಳಿಯೊಂದಿಗೆ ಹೆಜ್ಜೆ ಹಾಕುತ್ತ ಇದ್ದಾಗ ಜಲಜಾ ನನ್ನ ಕೈ ಹಿಡಿದು, "ರೀ, ಜೀವನದಲ್ಲಿ ಇಷ್ಟು ದುಃಖ ಇದ್ದರೂ, ಇಂದು ನಮ್ಮ ಬಾಳು ಸಂತೋಷದಿಂದ ತುಂಬಿದ ಕನ್ನಡಿ ಹಾಗಾಗಿದೆ" ಎಂದಳು. ನಾನು ನಗುತ್ತಾ, "ಜಲಜಾ, ಈ ನೆಮ್ಮದಿಯ ಕ್ಷಣಗಳ ಮೌಲ್ಯ ನಾವು ಅರ್ಥ ಮಾಡಿಕೊಂಡು ಬಾಳಿದ್ದೇವೆ. ಬದುಕು ನಿಂತು ಹೋಗುವುದಿಲ್ಲ, ಆದರೆ ಹೊಸ ವಸಂತದ ಪಾರಿವಾಳಗಳು ನಮ್ಮ ಜೀವನಕ್ಕೆ ಪುನಃ ಹಾರಾಟವನ್ನು ತರುತ್ತವೆ," ಎಂದೆ.
ಆ ದಿನದ ರಾತ್ರಿ, ಮನೆ ಎಲ್ಲೆಲ್ಲೂ ಹಾಸ್ಯದ ಮಾತುಗಳು, ನಗುವಿನ ಧ್ವನಿ ತುಂಬಿತ್ತು. ಮಕ್ಕಳು ಮಾತನಾಡುತ್ತಿದ್ದರೆ, ಮೊಮ್ಮಕ್ಕಳು ನಮ್ಮ ಸುತ್ತಲೂ ಓಡಾಡುತ್ತಿದ್ದರು. ಕೃಷ್ಣನ ಹೆಂಡತಿ ಆರಾಧ್ಯ ಮತ್ತು ರಾಮನ ಹೆಂಡತಿ ನಿವೇದಿತಾ ಅಡುಗೆ ಕೋಣೆಯಲ್ಲಿ ಜಲಜಾಳ ಜೊತೆ ಪಟ್ಟಾಂಗ ಹೊಡೆಯುತ್ತ ಅಡುಗೆ ಕೆಲಸಕ್ಕೆ ಸಹಾಯ ಮಾಡುತ್ತಿದ್ದರು. ಆಧ್ಯ ಮತ್ತು ಅರ್ಪಣ್ ಅಂದಿನ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಅನುಭವವನ್ನು ಹಂಚಿಕೊಳ್ಳುತ್ತಿದ್ದಂತೆ, ನಾವೆಲ್ಲರೂ ನಕ್ಕು ಆನಂದಿಸಿದೆವು.
ಜೀವನ ಈಗ ಸಂಪೂರ್ಣ ಅನ್ನಿಸುತ್ತಿದೆ. ನಮ್ಮ ಮನೆ ಈಗ ಕೇವಲ ಕಲ್ಲು ಮಣ್ಣಿನಿಂದ ಕಟ್ಟಿದ ಮನೆ ಆಗಿರಲಿಲ್ಲ; ಅದು ಪ್ರೀತಿ, ಭರವಸೆ, ಹಾಗೂ ಮತ್ತೆ ಒಂದಾದ ಸಂತೋಷದಿಂದ ತುಂಬಿದ ಸಜೀವ ಗೃಹವಾಗಿದೆ.
ಜಲಜಾ ನನ್ನ ಕಡೆ ತಿರುಗಿ, "ಜೀವನ ಅಂತ್ಯವಾಗುವಷ್ಟರಲ್ಲಿ ನಾವು ಏನಾದರೂ ಒಳ್ಳೆಯ ಕೆಲಸ ಮಾಡಿದ್ದೇವೆ ಎಂದು ನನ್ನ ಮನಸ್ಸು ಸಂತುಷ್ಟವಾಗಿದೆ. ಇನ್ನು ನನ್ನ ಜೀವನ ಮುತ್ತೈದೆ ಸಾವಿನ ಭಾಗ್ಯ ಸಿಕ್ಕಿದರೂ ಸಂತೂಷಟವಾಗಿ ದೇವರ ಪಾದ ಸೇರುತ್ತೇನೆ." ಎಂದಳು. ನಾನು ಕಣ್ಣುಮುಚ್ಚಿ ದೇವರಿಗೆ ಧನ್ಯವಾದ ಸಲ್ಲಿಸುತ್ತಾ, "ಹೌದು, ಈ ಸಂಬಂಧಗಳ ಬೆಸುಗೆ ನಮ್ಮ ಜೀವನದ ಅರ್ಥವನ್ನು ಪುನಃ ತೋರಿಸಿತು. ಜೀವನಕ್ಕೆ ಪುನಃ ಚೈತನ್ಯ ನೀಡಿತು." ಎಂದೆ.
ಮುಸ್ಸಂಜೆಯ ಸೂರ್ಯನ ಕಿರಣಗಳು ನಮ್ಮ ಮನೆಗೆ ಬಂಗಾರದ ಬೆಳಕನ್ನು ಚೆಲ್ಲುತ್ತಾ, ತಂಪಾದ ಗಾಳಿ ನಮ್ಮೆಲ್ಲರ ಸಂತೋಷಕ್ಕೆ ಇನ್ನಷ್ಟು ಇಂಪನ್ನು ನೀಡಲು ಶುರುವಾಗಿದ್ದಂತೆ, ನನ್ನ ಮನಸ್ಸು ಒಬ್ಬರು ಒಬ್ಬರನ್ನು ಕೈ ಹಿಡಿದು ಮುನ್ನಡೆಸಿದ ಸಂತೋಷವನ್ನು ಪುನಃ ಅರಿತುಕೊಂಡಿತು. ರಕ್ತಸಂಬಂಧ ಎನ್ನುವುದು ಎಲ್ಲರ ಜೀವನದಲ್ಲೂ ಮುಖ್ಯವಾದ ಸಂಬಂಧವೇ ಅಲ್ಲವೇ??
✍🏻 *Deepalaxmi Bhat*
Mangaluru