Wednesday, October 6, 2021

ನವರಾತ್ರಿ

ನವರಾತ್ರಿ ಎಂದರೆ ನವದುರ್ಗೆಯರನ್ನು ಪೂಜಿಸುವ ಹಬ್ಬ. ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಕ್ಷಿಸಲು ಶಕ್ತಿ ಸ್ವರೂಪಿಣಿಯಾದ ದುರ್ಗೆಯು ಒಂಭತ್ತು ಅವತಾರಗಳನ್ನು ತಾಳುತ್ತಾಳೆ.



*ನವರಾತ್ರಿಯ ಹಿನ್ನಲೆ*
ಪರಶಿವನ ಪತ್ನಿಯಾದ ದುರ್ಗಾಮಾತೆಯು ಅತ್ಯಂತ ಶಕ್ತಿಶಾಲಿಯಾದ ದೇವತೆಯಾಗಿದ್ದು, ಆದಿಶಕ್ತಿ ಎಂದು ಕರೆಯಲ್ಪಡುತ್ತಾಳೆ. ಆದಿ ಶಕ್ತಿಯನ್ನು ಕಾಳಿ, ಪಾರ್ವತಿ, ಗೌರಿ, ಸತಿ, ಮಹಾಮಾಯೆ ಹಾಗೂ ಮಹಿಷಾಸುರ ಮರ್ದಿನಿ ಮುಂತಾದ ವಿವಿಧ ರೂಪಗಳಲ್ಲಿ ಆರಾಧಿಸಲಾಗುತ್ತದೆ.

ಪುರಾಣಗಳಲ್ಲಿ ಹೇಳುವಂತೆ, ಮಹಿಷಾಸುರನೆಂಬ ಎಮ್ಮೆ ರೂಪದ ಅಸುರನು ತನ್ನ ಸೈನ್ಯದೊಂದಿಗೆ ದೇವಲೋಕಕ್ಕೆ ದಾಳಿ ಮಾಡಿ, ದೇವತೆಗಳನ್ನು ಹೊರಗೆ ಅಟ್ಟಿದನಂತೆ. ಆಗ ದೇವತೆಗಳೆಲ್ಲರೂ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಕಾಪಾಡುವಂತೆ ಕೇಳಿಕೊಂಡಾಗ, ಮೂರು ತ್ರಿಮೂರ್ತಿಗಳೂ ತಮ್ಮ ದೇಹದ ಶಕ್ತಿಯನ್ನೆಲ್ಲ ಸೇರಿಸಿ, ದೇವತೆಯನ್ನು ಸೃಷ್ಟಿಸಿದರು. ಎಲ್ಲಾ ದೇವರ ಶಕ್ತಿಯು ಸೇರಿ ದೇವಿಯು ದುರ್ಗೆಯ ಅವತಾರವೆತ್ತಿದಳು. ಶಕ್ತಿಗಳ ಸಂಗಮದಿಂದ ಆದ ದುರ್ಗಾ ದೇವಿಯ ಅವತಾರದಲ್ಲಿ ದೇವಿಯು 10 ಕೈಗಳನ್ನು ಹೊಂದಿರುವ ಸುಂದರವಾದ ಸ್ತ್ರೀಯಾಗಿ ಹುಟ್ಟಿದ ನಂತರ ದೇವತೆಗಳೆಲ್ಲ ಆಕೆಗೆ ಉಡುಗೊರೆಯನ್ನು ನೀಡಿದರು.

ಈಶ್ವರನು ತ್ರಿಶೂಲವನ್ನು, ವಿಷ್ಣುವು ಚಕ್ರವನ್ನು, ವರುಣ ದೇವನು ಪಾಶವನ್ನು, ಇಂದ್ರನು ವಜ್ರಾಯುಧವನ್ನು ಹಾಗೂ ವಾಯುವು ಬಾಣಗಳನ್ನು ದುರ್ಗೆಗೆ ನೀಡಿದರು. ವಸ್ತ್ರಗಳನ್ನು ಮತ್ತು ವಾಹನವಾದ ಸಿಂಹವನ್ನು ಪರ್ವತಗಳ ರಾಜ ಹಿಮವಂತನು ನೀಡಿದನು. ಎಲ್ಲಾ ಆಯುಧಗಳಿಂದ ಸನ್ನದ್ಧಳಾದ ದೇವಿಯು ಯುದ್ಧಕ್ಕೆ ಸಿದ್ಧಳಾಗಿ ಅಸುರ ಸೈನ್ಯದ ಮೇಲೆ ಆಕ್ರಮಣ ಮಾಡಿದಳು. ಒಂಭತ್ತು ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ಮಹಿಷಾಸುರನನ್ನು ದೇವಿಯು ತನ್ನ ಸಿಂಹ ಹಾಗೂ ಆಯುಧಗಳ ಸಹಾಯದಿಂದ ಸಂಹರಿಸಿದಳು. ದುರ್ಗೆಯು ಮಹಿಷಾಸುರನನ್ನು ವಧಿಸಿದ ದಿನವೇ ವಿಜಯ ದಶಮಿ.

*ದುರ್ಗೆಯ ಒಂಭತ್ತು ಅವತಾರಗಳು*
ದುಷ್ಟರ ಸಂಹಾರಕ್ಕಾಗಿ, ಶಿಷ್ಟರ ರಕ್ಷಣೆಗಾಗಿ ನವ ಅವತಾರಗಳನ್ನು ಎತ್ತಿ, ಅಸುರರನ್ನು ಸಂಹರಿಸಿದ ಶಕ್ತಿ ರೂಪಿಣಿಯೇ ದುರ್ಗಾದೇವಿ. ನವರಾತ್ರಿಯ ಒಂಭತ್ತೂ ದಿನಗಳಲ್ಲಿ ನವದುರ್ಗೆಯರನ್ನಿಟ್ಟು ಪೂಜಿಸಲಾಗುತ್ತದೆ.

*ಶೈಲ ಪುತ್ರಿ*
ನವರಾತ್ರಿಯ ಮೊದಲನೇ ದಿನವನ್ನು ಪ್ರತಿಪಾದ ಎಂದು ಕರೆಯುತ್ತಾರೆ.ಈ ದಿನ ಶೈಲಪುತ್ರಿಯ ರೂಪವನ್ನು ಪೂಜಿಸಲಾಗುತ್ತದೆ. ಶೈಲಪುತ್ರಿಯೆಂದರೆ ಪರ್ವತರಾಜನ ಮಗಳು ಎಂದರ್ಥ, ಈಶ್ವರನ ಪತ್ನಿಯಾಗಿಯೂ ಶೈಲ ಪುತ್ರಿಯನ್ನು ಆರಾಧಿಸಲಾಗುತ್ತದೆ. ಶೈಲಪುತ್ರಿಯನ್ನು ಸತಿ ದೇವಿಯ ಪುನರ್ಜನ್ಮವೆಂದು ಕರೆಯಲಾಗುತ್ತದೆ. ಪತಿಯಾದ ಶಿವನನ್ನು ತಂದೆಯು ಅವಮಾನ ಮಾಡಿದ್ದಕ್ಕಾಗಿ ಸತಿ ದೇವಿಯು ತನ್ನ ತಂದೆ ಯಜ್ಞ ಮಾಡುತ್ತಿದ್ದ ವೇಳೆ ಅಗ್ನಿಕುಂಡಕ್ಕೆ ಜಿಗಿದು ಪ್ರಾಣಾರ್ಪಣೆಗೈಯುತ್ತಾಳೆ. ಶಿವನನ್ನು ಮರಳಿ ಪಡೆಯಲು ಅವಳು ಪುನರ್ಜನ್ಮ ಪಡೆಯುತ್ತಾಳೆ. ಆದರೆ ಸತಿ ಸಾವಿನ ಬಳಿಕ ಶಿವನು ದೀರ್ಘವಾದ ಧ್ಯಾನದಲ್ಲಿ ಮುಳುಗಿ ಹೋದ. ದೇವಿ ಶೈಲ ಪುತ್ರಿಯು ಕಾಡಿಗೆ ಹೋಗಿ 16ವರ್ಷ ಕಠಿಣ ತಪಸ್ಸಿನಲ್ಲಿ ತೊಡಗಿ ನಂತರ ಶಿವನನ್ನು ಪಡೆದಳು. ದುರ್ಗೆಯ ಶುದ್ಧ ರೂಪವಾಗಿರುವ ಶೈಲಪುತ್ರಿ ನಿಸರ್ಗದ ಮಾತೆ ಎಂಬುದಾಗಿ ಪರಿಗಣಿತವಾಗಿದ್ದಾಳೆ. ಗೂಳಿಯ ಮೇಲೆ ಕುಳಿತಿರುವ ಮಾತೆ ತ್ರಿಶೂಲವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾಳೆ ಮತ್ತು ಕೈಗಳಲ್ಲಿ ತಾವರೆ ಇದೆ. ಸತಿ, ಭವಾನಿ, ಪಾರ್ವತಿ ಮತ್ತು ಹೇಮಾವತಿ ಎಂಬ ಹೆಸರೂ ಶೈಲಪುತ್ರಿಗಿದೆ.

*ಬ್ರಹ್ಮಚಾರಿಣಿ*
ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಪಾರ್ವತಿಯಾಗಿ ಹಿಮಾಲಯನ ಪುತ್ರಿಯಾಗಿ ಜನಿಸಿದ ದೇವಿಯು ಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ. ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದಾಗಿ ದೇವಿಗೆ ತಪಶ್ಚಾರಿಣೀ ಅರ್ಥಾತ್‌ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂತು. ದೈವಿಕ ಅಂಶವನ್ನು ತನ್ನಲ್ಲಿ ಮೈಗೂಡಿಸಕೊಂಡು ಶುದ್ಧಳಾಗಿರುವವಳು ಎಂಬುದಾಗಿ ಪರಿಗಣಿಸಲಾಗುತ್ತದೆ. ಬಲಕೈಯಲ್ಲಿ ಗುಲಾಬಿ ಹೂವು ಮತ್ತು ಎಡಕೈಯಲ್ಲಿ ನೀರು ಇರುವ ಕಮಂಡಲವನ್ನು ದೇವಿ ಹಿಡಿದುಕೊಂಡಿದ್ದಾಳೆ. ಮೋಕ್ಷಕ್ಕೆ ದಾರಿ ತೋರುವ ಮಾತೆಯಾಗಿದ್ದಾಳೆ ಬ್ರಹ್ಮಚಾರಿಣಿ. ಶಾಂತಿ, ಸಮೃದ್ಧಿ ಮತ್ತು ವೈವಾಹಿಕ ಸುಖವನ್ನು ಭಕ್ತರಿಗೆ ದೇವಿ ನೀಡುತ್ತಾಳೆ.

*ಚಂದ್ರ ಘಂಟ ದೇವಿ*
ನವರಾತ್ರಿಯ ಮೂರನೇ ದಿನ ಚಂದ್ರಘಂಟ ದೇವಿಯನ್ನು ಪೂಜಿಸಲಾಗುತ್ತದೆ. ದುರ್ಗಾಮಾತೆಯ ವೈವಾಹಿಕ ಅವತಾರವಾಗಿರುವ ಚಂದ್ರಘಂಟೆಯನ್ನು ದುರ್ಗಾ ಮಾತೆಯ ರೌದ್ರ ಸ್ವರೂಪವೆಂಬುದಾಗಿಯೂ ಕರೆಯಲಾಗುತ್ತದೆ. ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟ ರೂಪದಲ್ಲಿ ತೋರಿಸಿದ್ದಾರೆ. ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ. ತನ್ನ ಹಣೆಯಲ್ಲಿ ಗಂಟೆಯ ಆಕಾರದ ಚಂದ್ರನನ್ನು ಹೊಂದಿರುವವಳು ಎಂದಾಗಿದೆ. ಚಂದ್ರನನ್ನು ಹೊಂದಿರುವಂತೆ ಅವಳು ಶಾಂತಿಪ್ರಿಯಳಾಗಿದ್ದಾಳೆ. ಹತ್ತು ಕೈಗಳು ಮತ್ತು ಮೂರು ಕಣ್ಣುಗಳು ದೇವಿಗಿದೆ. ಅವರು ಎಲ್ಲವನ್ನೂ ನೋಡುತ್ತಿದ್ದಾಳೆ ಮತ್ತು ಕೆಟ್ಟದ್ದು ಯಾವ ಭಾಗದಿಂದ ಬಂದರೂ ಅವರು ಅದನ್ನು ನಾಶ ಮಾಡುತ್ತಾಳೆ ಎಂದಾಗಿದೆ.

*ಕೂಷ್ಮಾಂಡ ದೇವಿ*
ಚತುರ್ಥಿ ಅಥವಾ ನಾಲ್ಕನೇ ದಿನದಂದು ದೇವಿಯು ಕೂಷ್ಮಾಂಡಿನಿಯ ಅವತಾರವೆತ್ತುತ್ತಾಳೆ. ಕೂಷ್ಮಾಂಡಿನಿಯನ್ನು ಈ ಭೂಮಿಯ ಸೃಷ್ಟಿಕರ್ತೆ ಎಂದು ಹೇಳಲಾಗುತ್ತದೆ. ಎಂಟು ಭುಜಗಳಿರುವ ಕಾರಣ ಅಷ್ಟಭುಜಾದೇವಿ ಎಂದು ಕರೆಯಲಾಗುತ್ತದೆ. ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ ಎಲ್ಲೆಡೆ ಅಂಧಕಾರವೇ ಪಸರಿಸಿತ್ತು. ಆಗ ಇದೇ ದೇವಿಯು ತನ್ನ 'ಈಶತ್‌' ಹಾಸ್ಯದಿಂದ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾಳೆ. ಆದ್ದರಿಂದ ಇವಳೇ ಸೃಷ್ಟಿಯ ಆದಿ- ಸ್ವರೂಪ ಶಕ್ತಿಯಾಗಿದ್ದಾಳೆ. ಅವಳು ಅನೇಕ ಆಯುಧಗಳನ್ನು, ಗುಲಾಬಿ, ಕಮಾಂಡಲ ಮತ್ತು ಅವಳ ಕೈಯಲ್ಲಿ ಕೆಲವು ಮಿನುಗುವಿಕೆಗಳನ್ನು ಹೊಂದಿದ್ದಾರೆ. ಅವಳ ಕೈಯಿಂದ ಹೊರಬರುವ ಬೆಳಕು ಜಗತ್ತನ್ನು ಅಂಧಕಾರದಿಂದ ದೂರವಿರಿಸುತ್ತದೆ. ಅವಳ ಸಿಂಹ - ದೈಹಿಕ ಮತ್ತು ಭಾವನಾತ್ಮಕ ಶಕ್ತಿಯನ್ನು ಸಂಕೇತಿಸುತ್ತದೆ.

*ಸ್ಕಂದ ಮಾತೆ*
ನವರಾತ್ರಿಯ ಐದನೇ ದಿನದಂದು ದುರ್ಗೆಯ ಐದನೇ ಅವತಾರವಾಗಿರುವ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ. ಕಾರ್ತಿಕೇಯನನ್ನು ತನ್ನ ತೊಡೆಯ ಮೇಲೆ ಕೂರಿಸಿರುವ ರೂಪದಲ್ಲಿ ಈ ದೇವಿಯು ತಮ್ಮ ಬಲಗೈಯಲ್ಲಿ ಕಾರ್ತಿಕೇಯನನ್ನು ಎತ್ತಿಕೊಂಡಿದ್ದಾಳೆ. ಇನ್ನೊಂದು ಬಲಗೈಯಲ್ಲಿ ಭಕ್ತರನ್ನು ಹರಸುತ್ತಿದ್ದಾಳೆ ಮತ್ತು ಎಡಗೈಯಲ್ಲಿ ತಾವರೆಯನ್ನು ಹಿಡಿದುಕೊಂಡಿದ್ದಾಳೆ. ದೇವಿ ಸ್ಕಂದಮಾತೆಯು ನಾಲ್ಕು ಕೈಗಳು ಮತ್ತು ಮೂರು ಕಣ್ಣುಗಳನ್ನು ಹೊಂದಿದ್ದಾಳೆ.

*ಕಾತ್ಯಾಯಿನಿ*
ನವರಾತ್ರಿಯ ಆರನೇ ದಿನ ಕಾತ್ಯಾಯಿನಿಯನ್ನು ಆರಾಧಿಸಲಾಗುತ್ತದೆ. ಒಮ್ಮೆ ಕಾತ್ಯಾಯನ್‌ ಎನ್ನುವ ಋಷಿಯು ಪಾರ್ವತಿ ದೇವಿಯಂತಹ ಮಗಳನ್ನು ಪಡೆಯಬೇಕು ಎಂದು ಆಶಿಸಿ ಭಕ್ತಿಯಿಂದ ತಪಸ್ಸನ್ನು ಮಾಡುತ್ತಾನೆ. ಋಷಿಯ ಭಕ್ತಿಗೆ ಮೆಚ್ಚಿದ ದುರ್ಗಾ ಮಾತೆಯು ಆಶೀರ್ವಾದ ಮಾಡುತ್ತಾಳೆ. ಅಂತೆಯೇ ಮಗಳು ಹುಟ್ಟಿದ ಮೇಲೆ ಕಾತ್ಯಾಯಿನಿ ಎಂದು ಹೆಸರಿಟ್ಟರು. ಕಾತ್ಯಾಯಿನಿಯು ದೊಡ್ಡವಳಾದ ನಂತರ ತನ್ನ ಹತ್ತು ಕೈಗಳಲ್ಲಿ ಶಸ್ತ್ರಾಸ್ತ್ರ ಹಿಡಿದು ದುಷ್ಕೃತ್ಯ ಎಸಗುವ ರಾಕ್ಷಸರ ನಾಶ ಮಾಡಲು ಜಗತ್ತನ್ನು ಸುತ್ತಲು ಪ್ರಾರಂಭಿಸಿದಳು. ದುಷ್ಟ ರಾಕ್ಷಸರ ಸಂಹಾರಕ್ಕಾಗಿ ದುರ್ಗಾದೇವಿಯು ಅವತರಿಸಿ ಬಂದಳು ಎಂದು ಹೇಳಲಾಗುತ್ತದೆ. ಕಾತ್ಯಾಯಿನಿ ಉದ್ದನೆಯ ಕೂದಲನ್ನು ಮುಕ್ತವಾಗಿ ಬಿಟ್ಟಿದ್ದು ಮತ್ತು ತಮ್ಮ ಹದಿನೆಂಟು ಕೈಗಳಲ್ಲಿ ಒಂದೊಂದು ಆಯುಧವನ್ನು ಹೊಂದಿದ್ದಾಳೆ. ಕಾತ್ಯಾಯಿನಿ ರೂಪವು ಭಯವನ್ನುಂಟು ಮಾಡುವಂತಿದ್ದರೂ ಅವರು ತಾಳ್ಮೆ ಮತ್ತು ಶಾಂತಿಯನ್ನು ನೀಡುವವಳಾಗಿದ್ದಾಳೆ. ದೇವಿಯ ಮೈಯಿಂದ ಬಿಳಿ ಬಣ್ಣದ ಬೆಳಕೊಂದು ಬರುತ್ತಿದ್ದು ಇದು ಕತ್ತಲೆಯನ್ನು ದೂರಮಾಡುತ್ತದೆ ಮತ್ತು ಕೆಟ್ಟದ್ದನ್ನು ನಾಶ ಮಾಡುತ್ತದೆ.

*ಕಾಳ ರಾತ್ರಿ*
ನವರಾತ್ರಿಯ ಏಳನೇ ದಿನದಂದು ತಾಯಿ ಕಾಲರಾತ್ರಿಯನ್ನು ಪೂಜಿಸಲಾಗುವುದು. ಈ ರೂಪದಲ್ಲಿ ತಾಯಿಯು ತುಂಬಾ ರೌದ್ರಾವತಾರ ಮತ್ತು ಕಪ್ಪಾಗಿ ಕಾಣುತ್ತಾಳೆ. ಹೆಸರೇ ಹೇಳುವಂತೆ ಇದು ತಾಯಿಯ ಕರ್ಗತ್ತಲು ಮತ್ತು ಸಮಯದ ರೂಪವಾಗಿದೆ. ರೌದ್ರಾವತಾರ ಮತ್ತು ತುಂಬಾ ಉಗ್ರ ರೂಪದಲ್ಲಿರುವ ದುರ್ಗೆಯು ಕಾಲರಾತ್ರಿಯ ರೂಪ ಧಾರಣೆ ಮಾಡಿ, ತನ್ನ ಬಂಗಾರದ ಮೈಬಣ್ಣದ ಚರ್ಮವನ್ನು ಕಿತ್ತು ರಾಕ್ಷಸರ ವಿರುದ್ಧ ಹೋರಾಡಲು ಹೋಗುತ್ತಾಳೆ. ಕಾಳರಾತ್ರಿಯು ಎಲ್ಲಾ ರೀತಿಯ ದುಷ್ಟಶಕ್ತಿ, ದುಷ್ಟತೆ ಮತ್ತು ನಕಾರಾತ್ಮಕ ಶಕ್ತಿ ಹಾಗೂ ಭೀತಿ ದೂರ ಮಾಡುತ್ತಾಳೆ. ಕಾಲರಾತ್ರಿಯು ತನ್ನ ಭಕ್ತರಿಗೆ ಹೆಚ್ಚಿನ ಸಂತೋಷ ಹಾಗೂ ತೃಪ್ತಿ ಕರುಣಿಸುವುದರಿಂದಾಗಿ ಆಕೆಯನ್ನು ಶುಭಾಂಕರಿ ಅಥವಾ ಪವಿತ್ರವೆಂದು ಪರಿಗಣಿಸಲಾಗಿದೆ ಅವಳು ನಾಲ್ಕು ಕೈಗಳನ್ನು ಮತ್ತು ಮೂರು ಕಣ್ಣುಗಳನ್ನು ಹೊಂದಿರುತ್ತಾಳೆ. ಅವಳ ಎಡ ಕೈಗಳು ವಜ್ರವನ್ನು ಒಯ್ಯುತ್ತಿರುವಾಗ ಮತ್ತು ದುಷ್ಟ ಗುರಿಯನ್ನು ಕೆಟ್ಟದ್ದನ್ನು ಗುರಿಯಾಗಿಟ್ಟುಕೊಂಡು, ಬಲಗೈಗಳು ಭಕ್ತರನ್ನು ಆಶೀರ್ವದಿಸಿ ಮತ್ತು ಅವರಿಗೆ ರಕ್ಷಣೆ ನೀಡುತ್ತವೆ. ಅವಳು ದೇವತೆ ಮಹಾಕಾಳಿಯನ್ನು ಹೋಲುತ್ತಾಳೆ.

*ಮಹಾ ಗೌರಿ*
ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಮಹಾಗೌರಿಯು ತನ್ನ 16ನೇ ವಯಸ್ಸಿನ ಯೌವ್ವನೆಯಾಗಿ ಕಾಣಿಸಿಕೊಳ್ಳುತ್ತಾಳೆ. ಗೌರಿ ಎಂದರೆ ಆಕೆಯು ಗಿರಿ ಅಥವಾ ಪರ್ವತದ ಮಗಳೆಂದು ಹೇಳಲಾಗುತ್ತದೆ. ಗೂಳಿ ಮೇಲೆ ಪ್ರಯಾಣಿಸುವ ಗೌರಿ ತನ್ನ ಕೈಯಲ್ಲಿ ತ್ರಿಶೂಲದೊಂದಿಗೆ ಢಮರುವನ್ನು ಹಿಡಿಕೊಂಡಿರುತ್ತಾಳೆ. ತಾಯಿ ದುರ್ಗೆಯು ಭೂಮಿಯ ಮೇಲೆ ಜನ್ಮವನ್ನು ಪಡೆದು, ಮರಳಿ ದೇವಲೋಕಕ್ಕೆ ಹೋಗಿ ಶಿವನನ್ನು ಮದುವೆಯಾಗಲು ಬಯಸುತ್ತಾಳೆ. ನಾರದರ ಸಲಹೆಯಂತೆ ಶಿವನನ್ನು ಒಲಿಸಿಕೊಳ್ಳಲು ತಪಸ್ಸು ಮಾಡುತ್ತಾಳೆ. ಆಕೆ ಸಂಪೂರ್ಣವಾಗಿ ತಪಸ್ಸಿನಲ್ಲಿ ಮಗ್ನವಾಗಿ ಆಹಾರ, ನೀರನ್ನು ತ್ಯಜಿಸಿರುವ ಸಮಯದಲ್ಲಿ ಆಕೆಯ ದೇಹದಲ್ಲಿ ಧೂಳು, ಕೊಳೆ ತುಂಬಿಕೊಳ್ಳುತ್ತದೆ. ಬಿಸಿಲಿನಿಂದಾಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗುತ್ತದೆ. ಸಾಔಇರಾರು ವರ್ಷಗಳ ತಪಸ್ಸಿನ ನಂತರ ಶಿವನು ಆಕೆಯಿಂದ ಪ್ರಭಾವಿತನಾಗಿ ಆಕೆಯ ದೇಹವನ್ನು ಹೊಳೆಯುವಂತೆ ಮಾಡಲು ಗಂಗೆಯನ್ನು ಹರಿಯಲು ಬಿಡುತ್ತಾನೆ. ಇದರಿಂದಾಗಿ ಗೌರಿಯು ಕಾಂತಿಯುತವಾಗಿ, ಶ್ವೇತವರ್ಣದಲ್ಲಿ ಧ್ಯಾನಾಸಕ್ತಳಾಗಿ ಕಾಣುತ್ತಾಳೆ.

*ಸಿದ್ಧಿಧಾತ್ರಿ*
ನವಮಿಯಂದು ದುರ್ಗೆಯು ಒಂಭತ್ತನೇ ಅವತಾರವಾದ ಸಿದ್ಧಿಧಾತ್ರಿಯ ರೂಪದಲ್ಲಿರುತ್ತಾಳೆ. ಸಿದ್ಧಿಧಾತ್ರಿ ದೇವಿಯು ತ್ರಿಮೂರ್ತಿಗಳಾಗಿರುವ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಆಧ್ಯಾತ್ಮಿಕ ವೈಭವ ಹಾಗೂ ಪರಿಪೂರ್ಣತೆ ನೀಡುತ್ತಾಳೆ. ಅಷ್ಟ ಮಹಾಸಿದ್ಧಿಯನ್ನು ನಿರ್ಮಿಸಿ ಅದನ್ನು ತ್ರಿಮೂರ್ತಿಗಳಿಗೆ ನೀಡುತ್ತಾಳೆ. ತಾಯಿ ಸಿದ್ಧಿಧಾತ್ರಿಯು ಪರಿಪೂರ್ಣತೆ, ಎಲ್ಲಾ ರೀತಿಯ ಶಕ್ತಿ, ವೈಭವ ಮತ್ತು ಮಹಿಮೆಯ ಮೂಲ. ಅವರು ನಾಲ್ಕು ಕೈಗಳನ್ನು ಹೊಂದಿದ್ದು, ಅವಳು ತ್ರಿಶೂಲ, ಗದೆ, ಕಮಲ, ಶಂಖ ಮತ್ತು ಸುದರ್ಶನ ಚಕ್ರವನ್ನು ಹಿಡಿದುಕೊಂಡಿದ್ದಾರೆ. ಕಮಲದ ಮೇಲೆ ಕುಳಿತು, ಆಕೆಯು ಎಲ್ಲಾ ಭಕ್ತರ ಮೇಲೆ ಆಶೀರ್ವಾದವನ್ನು ನೀಡುತ್ತಿದ್ದಾಳೆ.

ಹೀಗೆ ನವರಾತ್ರಿಯ ಒಂಭತ್ತೂ ದಿನಗಳಲ್ಲಿ ನವದುರ್ಗೆಯರನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ ಎನ್ನಲಾಗುತ್ತದೆ..